ಒಂದು ಹೂವು ಇನ್ನೊಂದು ಮುಳ್ಳು
ಒಂದು ಬಾನು ಇನ್ನೊಂದು ಭೂಮಿ
ಒಂದು ಹಾಲು ಇನ್ನೊಂದು ಹಾಲಾಹಲ
ಒಂದು ಹುಲ್ಲು ಇನ್ನೊಂದು ಕಲ್ಲು
ಒಂದು ಅಮರಗಾನ ಇನ್ನೊಂದು ಘೋಷಣ
ಒಂದು ರಸಜೇನು ಇನ್ನೊಂದು ಒಣಕಾನು
ಒಂದು ತಿಳಿನೀರು
ಇನ್ನೊಂದು ಗೊಡಗು ಕೆಸರು
ಒಂದು ಕೂಸು ಇನ್ನೊಂದು ರಕ್ಕಸ
ಒಂದು ಚೆಂದುಟಿ
ಇನ್ನೊಂದು ಕಡಿವ ಹಲ್ಲು
ಒಂದು ಗರ್ಭಮೂರ್ತಿ
ಇನ್ನೊಂದು ಉತ್ಸವಮೂರ್ತಿ
ಒಂದು ಧ್ಯಾನ ಇನ್ನೊಂದು ದಹನ
ಒಂದು ಮುಲಾಮು
ಇನ್ನೊಂದು ಬೇಗುದಿ
ಒಂದು ಹಣ್ಣಿಸುವ ಕಾಲ
ಇನ್ನೊಂದು ಹರವಿಕೆಯ ಜಾಲ….
ಹೀಗೆ ಇವರೆಡರ ನಡುವೆ
ಎಂದಿನಿಂದ ಬಂದಿದೆಯೋ ತಿಕ್ಕಾಟ!
ತಿಕ್ಕಾಟದಲ್ಲೇ ಜಗವುದಿಸಿ
ಸಾಗಿ ಅಳಿಯುವುದು
ಸಾಗರದೊಳಗೇ ಎದ್ದು ತೇಲಿ
ಮುಳುಗುವ ಗುಳ್ಳೆಗಳಂತೆ
*****