ಕ್ರಾಂತಿ ಕಂದ
ನಿನ್ನ ಅಂದ
ಕಾಣಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ

ನಗೆಗಡಲಲಿ ನಲಿದು ಬಾ
ಸುಳಿಯೊಡಲಲಿ ಸುಳಿದು ಬಾ
ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ ||

ಅಂಧಕಾರದಲ್ಲಿ ಬಂದು
ಮುಗಿಲಮಡಿಲಿನಲ್ಲಿ ನಿಂದು
ತಂಬೆಳಕನು ತಂದು ತಂದು
ಎಳೆಯೆಳೆಯಲಿ ಹರಡುವಂತೆ
ಬಾನಿನಲ್ಲಿ ಹೊಳೆವಸಂತೆ ಬಾ….

ಜೀವನದಿಂದುಕ್ಕಿ ಉಕ್ಕಿ
ಸಾವಕಡಲ ಎಣೆಯ ಮಿಕ್ಕಿ
ನೋವನೆಲ್ಲ ಸೆದೆಯನಿಕ್ಕಿ ಬಾ….

ಜೀವನದಲಿ ಸಾವಿನಲ್ಲಿ
ಕನಸಿನಲ್ಲಿ ನನಸಿನಲ್ಲಿ
ಸಪ್ತಜಗಗಳೊಡಲಿನಲ್ಲಿ
ಹರಿಯುತಿರುವ ಹೊನಲೆ ಬಾ
ಕಂದ ಕರೆಯುತಿರುವೆ ಬಾ….

ಗುಡುಗು ಗುಡುಗಿ ಸಿಡಿಲು ಸಿಡಿದು
ವಿಶ್ವಕರ್ಮನೆದೆಯನೊಡೆದು
ಭೂಗರ್ಭದ ಶಾಂತಿ ಕಡೆದು
ಜೀವತಂತಿ ಮಿಡಿದು ಮಿಡಿದು
ಹೊಸ ಜಗವನು ಸೃಜಿಸು ಬಾ
ಓ ಓಡಿಬಾ….

ಕಾವಿಲ್ಲದೆ ಜೀವವೆಲ್ಲಿ
ಕ್ರಾಂತಿ ಕಾವೆ ಬಾ
ನೋವಿಲ್ಲದೆ ಕಾವುದೆಲ್ಲಿ
ನೋವ ನುಡಿಯೆ ಬಾ
ಅಳಿವಿಲ್ಲದೆ ಉಳಿವು ಎಲ್ಲಿ
ಅಳಿವಿನುಳುಮೆ ಬಾ….

ಜೀವ ಸಂಗ್ರಾಮದಲ್ಲಿ
ಬಾಳಿನಿರುಳ ರಂಗದಲ್ಲಿ
ಸುಳಿಗಾಳಿಯ ಮಡುವಿನಲ್ಲಿ
ಸುಳಿಸುಳಿಯುತ ಬಾ
ಸುಖಸೃಜಿಸುವ ಬಾ….

ಬಾಳಬಯಲ ಬಳಸಿ ಸುತ್ತ
ಆಳುತಿರುವ ಗೋಳನತ್ತ
ಬೀಳುಗೊಳಿಸಿ ಅತ್ತ ಇತ್ತ
ನಗೆ ಹೊನಲನು ಹರುಡು ಬಾ

ಸುಖದ ಸುಗ್ಗಿ
ಬೆಳೆದು ಅಳೆದು
ಜೀವ ಹುಗ್ಗಿ
ಅಳೆದು ಅಳೆದು
ಎಲ್ಲ ಚೆಲ್ಲು ಬಾ
ಓ!

ಕ್ರಾಂತಿ ಕಂದ
ನಿನ್ನ ಅಂದ
ಕಾಣ ಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ
*****