ಆ ಸಮುದ್ರದಾಚೆಯಲ್ಲಿ
ಮುಗಿಲು ನೆಲವ ಕೂಡುವಲ್ಲಿ
ಹಿರಿಯಲೆಗಳ ಮಡಿಲಿನಲ್ಲಿ
ದೀಪವೊಂದಿದೆ
ನಿನ್ನ – ಜೀವವಲ್ಲಿದೆ !

ನೆಲವಾಗಸ ಸೇರುವಂತೆ
ನಮ್ಮಿಬ್ಬರ ಒಲವಿನ ಜತೆ
ಆ ಕೊನೆಯಲ್ಲಿ ಒಂದೆ ಅಂತೆ
ನನ್ನ ಕನಸದು
ಬರಿಯ – ಹೊನ್ನ ಕನಸದು

ಅಂತು ಅಂದು ನಿನ್ನ ಜೀವ
-ನನ್ನ ಹೃದಯದೊಂದು ಭಾವ-
ನೋವನಿತ್ತು ಜಗದ ಸಾವ
ಉಡಿಗೆ ಮರಳಿತು
ನನ್ನ – ಕನಸು ಉರುಳಿತು

ನಿನ್ನ ಕೂಡುವಾಸೆಯಿಂದೆ
ನನ್ನೆದೆ ಕಿರುದೋಣಿಯೊದೆಂದೆ
ಮುಂದೆ ಸಾಗೆ, ಮುಗಿಲು ಮುಂದೆ
ಮುಂದೆ ಸಾಗಿದೆ
ನಿನ್ನ ನೆಲೆಯ ತೋರದೆ!

ಇಂತಿರಲೆದೆಗೇನು ಗತಿ?
ಮುಂದೆ ಸಾಗಲೇನು ಪ್ರತಿ?
ಕಳೆವುದಿಲ್ಲ ಜಗದ ಮಿತಿ?
– ಹೃದಯ ಬಿರಿದಿದೆ
ನನ್ನ- ದೋಣಿ ಮುಳುಗಿದೆ !
*****