ಅಣ್ಣ ಬಸವಣ್ಣ ಇದೆಲ್ಲ ಏನಣ್ಣ?
ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ?
ಜಾತಿ ಹೀನನಾ ಮನೆಯ ಜ್ಯೋತಿ ನೀ…
ಹೀನ ಜಾತಿಗಳ ಪೊರೆದ ದೊರೆ ನೀ…!
*

ಕಲ್ಯಾಣದ ಬೆಂಕಿ ನೀ
ಕೆಳ ಜಾತಿ, ಮತ, ವರ್ಗಗಳಿಗೆ, ಕಣ್ಣು ನೀ
‘ಹೌದು! ಮಾದಿಗರ ಮನೆ ಮಗ ನೀ…’
…ನೀ ಎನಂದರೂ ನಂಬದಾ ಜನಾ-ನಾವು!
*

ಎಲ್ಲರ ಅಣ್ಣ, ಬಸವಣ್ಣನಾಗಿರುವಾಗ,
ಯಾರಿಗೂ ಸಿಗದೇ, ಕ್ರಾಂತಿಯಲ್ಲಡಗಿರುವಾಗ,
‘ನೀ ನಮ್ಮವ! ನೀ ಯಾರವ? ಅವ ಬೇರವ…’
ಎಂಬುವವರ ಕೆರದಿಂದ ಹೊಡೆಯೆಂಬೆಯೇನು??
*

ಜಾತಿ, ಜಾತಿ, ನೀ ಹೋಗು, ಊರಾಚೆಂದರೂ…
ಬಿಡದು, ಅಣ್ಣ ಬಸವಣ್ಣನಿಗೂ… ದೇವನಿಗೂ…
ಈ ಜಾತಿ, ವಿಜಾತಿನ ಇನ್ನೆಂಥಾ ಅಂಟಿನಿಂದ,
ಮಾಡಿರುವರೆಂದು, ನೀನಾದರೂ ಹೇಳಣ್ಣ?!
*

ಅಣ್ಣ ನೀ, ಯಾರಾದರೇನು? ಮನುಶ್ಯನೆಂಬುದು ಖರೇ…
ನಿನ್ನ ವಚನ, ಕಾಯಕ, ನಮಗೆ ಸ್ಫೂರ್ತಿದಾಯಕ!
ಅಣ್ಣ ನೀ, ನಮ್ಮವನಾದರೇನು??
ನಮ್ಮ ಭವಣೆ, ಇನ್ನು ತೀರಿಲ್ಲವಲ್ಲ ಯಾಕೆ??
*****

ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)