ಎಷ್ಟು ಜನ್ಮದ ಪುಣ್ಯದ ಫಲವೋ
ನಾ ಈ ಜನ್ಮದಲಿ ಕನ್ನಡಿಗನಾಗಿರುವುದಕೆ|
ಹಿಂದಿನ ಜನ್ಮವ ಸ್ಥಿತಿಯ ನರಿಯೆ
ಮುಂದಿನಜನ್ಮದಲೇನೋ ಕಾಣೆ||
ಎಷ್ಟು ಜನ್ಮದ ಪುಣ್ಯದ ಫಲವೊ
ಈ ಕನ್ನಡ ನಾಡಲೇ ಜನಿಸಿದಕೆ|
ಈ ನಾಡ ಸಿರಿ ಸೌಂದರ್ಯವ ಕಾಣುವುದಕೆ
ಗಂಧ ಶ್ರೀಗಂಧ ಚೆಂದನದ ಲೇಪ
ಧೂಪಗಳ ಪರಿಮಳದಿ ಬೆಳೆದುದಕೆ||
ಎಷ್ಟು ಜನ್ಮದ ಪುಣ್ಯದ ಫಲವೊ
ಕಾವೇರಿ ತುಂಗೆ ಕಪಿಲ ಭದ್ರೆ ಕೃಷ್ಣೆಯಲಿ
ಮಿಂದು ಆನಂದದಿ ಹೊಳೆದುದಕೆ|
ಬಸವ ಅಲ್ಲಮ ಶರಣ ದಾಸರ
ಸಾಹಿತ್ಯದಲಿ ಕಲಿತು ವ್ಯವಹರಿಸಿದುದಕೆ||
ಎಷ್ಟು ಜನ್ಮದ ಪುಣ್ಯದ ಫಲವೊ
ಹಂಪೆ ಬೇಲೂರು ಹಳೇಬೀಡು|
ಬಾದಾಮಿ ಬನವಾಸಿ ಐಹೊಳೆ
ಶಿಲ್ಪಕಲೆಯ ಸೌಂದರ್ಯ ಕಂಡು
ಮನ ಸಂತಸದಿ ಹರ್ಷಿಸಿದಕೆ||
ಕದಂಬ ಚಾಲುಕ್ಯರ ರಾಷ್ಟ್ರಕೂಟರು
ಕಟ್ಟಿದ ನಾಡಲಿ ಜನಿಸಿರುವುದಕೆ|
ಬೇಂದ್ರೆ ಕುವೆಂಪು ಮಾಸ್ತಿ ಕಾರಂತರು
ಬೆಳೆಸಿದ ಕನ್ನಡನಾಡಲಿ ನಾನುದಿಯಿಸಿದಕೆ||
*****