ಒಂಟಿ ಬ್ಯಾರಿಯೂ ಅವಭೃತ ಉತ್ಸವವೂ

ಒಂಟಿ ಬ್ಯಾರಿಯೂ ಅವಭೃತ ಉತ್ಸವವೂ

ಬಿದಿರ ಮೆಳೆಗಳು ಹೂಬಿಟ್ಟು ಬಿದಿರಕ್ಕಿ ರಾಜಂದರಿಯನ್ನು ಕೊಡಲು ಶುರುಮಾಡಿದ್ದು ಮತ್ತು ಕಪಿಲಳ್ಳಿಯ ಇತಿಹಾಸದ ಪುಟಗಳಲ್ಲಿ ಏಕಮೇವಾದ್ವಿತೀಯನಾದ ಒಂಟಿ ಬ್ಯಾರಿಯ ಹೆಸರು ದಾಖಲಾದದ್ದು ಒಂದೇ ವರ್ಷದ ಅಪೂರ್ವ ಯೋಗಾಯೋಗವೆಂದು ಕಪಿಲಳ್ಳಿಯ ಜನರು ಹೇಳುತ್ತಿರುತ್ತಾರೆ. ಅರುವತ್ತು ವರ್ಷಗಳಿಗೊಮ್ಮೆ ಬಿದಿರ ಮೆಳೆಗಳು ಹೂಬಿಟ್ಟು ರಾಜಂದರಿ ಕೊಟ್ಟು ಒಣಗಿ ನಶಿಸಿಹೋಗುತ್ತವೆ. ಅದು ಅಪಶಕುನವಾದರೆ ಬೇಕೆಂದರೂ ಒಬ್ಬನೇ ಒಬ್ಬ ಇಸ್ಲಾಮು ಕಾಣಸಿಗದ ಕಪಿಲಳ್ಳಿಗೆ ಒಂಟಿ ಬ್ಯಾರಿಯ ಪ್ರವೇಶವಾದದ್ದು ಶುಭಶಕುನ. ಅಪಶಕುನಕ್ಕೆ ಪ್ರತಿಯಾಗಿ ಶುಭಶಕುನವಾದುದರಿಂದ ಅಲ್ಲಿಗಲ್ಲಿಗೆ ಆದು ಸರಿಯಾಗಿ ಊರಿಗೇನೂ ತೊಂದರೆ ಬಾರದಂತೆ ಆ ಕಪಿಲೇಶ್ವರ ನೋಡಿಕೊಂಡ ಎಂದು ಕಪಿಲಳ್ಳಿಯ ಜನ ಸಮಾಧಾನ ಪಟ್ಟುಕೊಂಡು ನೆಮ್ಮದಿಯಿಂದ ಭೋಜನ, ನಿದ್ರಾ, ಮೈಥುನಾದಿ ಕ್ರಿಯೆಗಳಲ್ಲಿ ಎಂದಿನಂತೆ ತಮ್ಮ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.

ವಾಸ್ತವವಾಗಿ ಕಪಿಲಳ್ಳಿಯ ಪರಿಸ್ಥಿತಿ ತೀರಾ ಹದಗೆಡತೊಡಗಿತ್ತು. ಕಪಿಲಳ್ಳಿಯನ್ನು ಸಮೃದ್ದಗೊಳಿಸುತ್ತಾ ಹರಿಯುವ ತೇಜಸ್ವಿನಿಯ ದಡದುದ್ದಕ್ಕೂ ಇದ್ದ ಭತ್ತದ ಗದ್ದೆಗಳನ್ನು ಅಡಿಕೆ ತೋಟಗಳನ್ನಾಗಿ ಮಾಡಿದ್ದೇ ಊರಲ್ಲಿ ಅಕ್ಕಿ ಸಾಕಷ್ಟು ಸಿಗದ ಪರಿಸ್ಥಿತಿ ಉಂಟಾಯಿತು. ಊಟಕ್ಕೆ ತತ್ವಾರವಾದಾಗ ಬಡ ಶೂದ್ರರು ಮತ್ತು ಆತಿಶೂದ್ರರು ಕಾಡು ನುಗ್ಗಿ ನೆರೆ, ಕುರ್ಡು ಮತ್ತು ಕಾಡಗೆಣಸುಗಳನ್ನು ಅಗೆದು ತಂದು ಬೇಯಿಸಿ ತಿನ್ನತೊಡಗಿದರು. ಅದನ್ನು ಮೂರು ಹೊತ್ತು ತಿಂದವರಿಗೆ ವಾಂತಿ, ಬೇಧಿ ಹತ್ತಿ ಫಜೀತಿಯಾಗಿತ್ತು. ಅದೇ ಕಾಲಕ್ಕೆ ಘನ ಸರಕಾರವು ಅಂತರ ಜಿಲ್ಲಾ ಆಹಾರ ಸಾಮಾನು ಸಾಗಾಟ ನಿರ್ಬಂಧ ಕಾಯಿದೆ ಜಾರಿ ಮಾಡಿ ಕಪಿಲಳ್ಳಿಯ ಗಾಯದ ಮೇಲೆ ಬರೆ ಎಳೆದುಬಿಟ್ಟಿತು. ಅದೇ ವರ್ಷ ಕಪಿಲಳ್ಳಿಯಲ್ಲಿ ಬಿದಿರ ಮೆಳೆಗಳು ಹೂಬಿಟ್ಟು ರಾಜಂದರಿ ಕೊಡತೊಡಗಿದ್ದು. ಆಗಲೇ ಒಂಟಿ ಬ್ಯಾರಿಯು ತನ್ನ ಏಕೈಕ ಮಡದಿ ಉಮ್ಮ ಮತ್ತು ಮೂವರು ಮಕ್ಕಳೊಡನೆ ಕಪಿಲಳ್ಳಿಗೆ ಬಂದು ಖಾಯಮ್ಮಾಗಿ ತಳವೂರಿ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡದ್ದು.

ಅವನದು ಕಪಿಲಳ್ಳಿಯ ಏಕೈಕ ಇಸ್ಲಾಮು ಕುಟು೦ಬವಾದುದರಿಂದ ಊರಿಗೊಂದೇ ಮದ್ದಿನ ಕೊಂಬಿನಂತಿರುವ ಕುಟುಂಬ ಮುಖ್ಯಸ್ಥನ ಶುಭನಾಮಧೇಯವೇನೆಂದು ಕೇಳದೆ ಜನರು ಅವನಿಗೆ ಒಂಟಿ ಬ್ಯಾರಿಯೆಂಬ ರೂಢನಾಮವನ್ನು ಯಾವ ತಕರಾರೂ ಇಲ್ಲದೆ ಅತ್ಯಂತ ಉದಾರತೆಯಿಂದ ದಯಪಾಲಿಸಿ ಬಿಟ್ಟಿದ್ದರು. ಇಸ್ಲಾಮು ಗಂಡಸರಲ್ಲಿ ಕಿವಿ ಚುಚ್ಚುವ ಕ್ರಮ ಇಲ್ಲದಿದ್ದರೂ ಈ ಬ್ಯಾರಿಯ ಎಡ ಕಿವಿಯಲ್ಲಿ ಚಿನ್ನದ ಟಿಕ್ಕಿಯೊಂದು ಕಪಿಲೇಶ್ವರನ ಜಟೆಯ ಮೇಲಣ ಅಷ್ಟಮಿ ಚಂದ್ರನಂತೆ ರಾರಾಜಿಸುತ್ತಿದ್ದುದು ಒಂಟಿ ಬ್ಯಾರಿಯೆಂಬ ಹೆಸರನ್ನು ಅನ್ವರ್ಥ ನಾಮವಾಗಿ ಪರಿವರ್ತಿಸಿಬಿಟ್ಟಿತು. ಒಂಟಿ ಬ್ಯಾರಿಯ ಸಂಕೋಚ ಸ್ವಭಾವದ ಮಡದಿ ಉಮ್ಮ ಅಡ್ಡ ಕಂಬಾಯಿ ಉಟ್ಟು, ಮುಕ್ಕಾಲು ಕೈಯ ರವಿಕೆ ತೊಟ್ಟು ತಲೆಗೊ೦ದು ಬಟ್ಟೆ ಕಟ್ಟಿ ನಗುನಗುತ್ತಾ ಮಾತಾಡಲು ತೊಡಗಿದ್ದೇ, ಕಪಿಲಳ್ಳಿಯ ನಾರೀಮಣಿಯರು ಒಂಟಿ ಬ್ಯಾರಿಯ ಮಡದಿ ಉಮ್ಮನ ಸ್ನೇಹ ಬೆಳೆಸಿಕೊಂಡು ಬಿಟ್ಟರು.

ಬಂದ ಹೊಸತರಲ್ಲಿ ಒಂಟಿ ಬ್ಯಾರಿಯು ಕಪಿಲಳ್ಳಿಯ ಏಕಮಾತ್ರ ಮುಖ್ಯರಸ್ತೆಯ ಬಳಿಯಲ್ಲೇ ಸರ್ಕಾರಿ ರೆವಿನ್ಯೂ ಹತ್ತು ಸೆಂಟ್ಸ್ ಜಾಗದಲ್ಲಿದ್ದ, ಕಪಿಲಳ್ಳಿ ಜಾತ್ರೆಯಲ್ಲಿ ಗರ್ನಾಲಿಗೆ ಬೆಂಕಿ ಹಚ್ಚಿ ಮೇಲೆಸೆದು ಢಾಂ ಸದ್ದಿನಿಂದ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡುತ್ತಿದ್ದ ಗರ್ನಾಲು ರಾಮಣ್ಣನ ಮನೆಯನ್ನು ನಗದು ಹಣ ಕೊಟ್ಟು ಕೊಂಡುಕೊಂಡನು. ಮನೆಯೆದುರು ಬಿದಿರ ಚಪ್ಪರ ಹಾಕಿ, ಅಲ್ಲಲ್ಲಿ ಬಿದಿರ ತಟ್ಟಿ ಅಡ್ಡ ಕಟ್ಟಿ, ಮುಂಭಾಗದ ಬಿದಿರ ಕಂಬವೊಂದಕ್ಕೆ “ಸ್ಟಾರು ಹೋಟೆಲು ಕಪಿಲಳ್ಳಿ” ಎಂಬ ದೊಡ್ಡ ಅಕ್ಷರದ ಬೋರ್ಡು ತಗಲಿಸಿ ಅದರಲ್ಲಿ ಕೆಳಗಡೆ, “ಇಲ್ಲಿ ಬಿಸಿ ಬಿಸಿ ಚಾ-ಕಾಫಿ, ಸೋಜಿ-ಕಲ್ತಪ್ಪ’ ದೊರೆಯುತ್ತದೆ ಎಂದು ಬರೆಸಿ ಹಾಕಿದ್ದನು. ಹೀಗೆ ಹೊಸದೊಂದು ಸಂಪ್ರದಾಯಕ್ಕೆ ಕಾರಣನಾದ ಒಂಟಿ ಬ್ಯಾರಿ ಬಗ್ಗೆ, ಈ ವರೆಗೆ ಬೋರ್ಡೇ ಹಾಕದೆ ವ್ಯವಹಾರ ನಡೆಸುತ್ತಿದ್ದ ಇನ್ನುಳಿದ ಎರಡು ಹೋಟೆಲುಗಳವರು “ಅಬ್ಬಾ ಈ ಒಂಟಿ ಬ್ಯಾರಿಯ ಧಿಮಾಕೇ? ನಾವೇನು ಥ೦ಡಿ ಕಲ್ತಪ್ಪ, ಚಾ-ಕಾಫಿ ಕೊಡುತ್ತಿದ್ದೇವೆಯೇ?” ಎಂದು ಮಾತಾಡುವಂತಾಗಿ ಬಿಟ್ಟಿತು.

ಕಪಿಲಳ್ಳಿ ಜನರಿಗೆ ಕಲ್ತಪ್ಪ ಹೊಸ ತಿಂಡಿಯೇನಲ್ಲ. ಅಕ್ಕಿಯನ್ನು ನೀರಲ್ಲಿ ನೆನೆಹಾಕಿ ಗಟ್ಟಿಯಾಗಿ ರುಬ್ಬಿ ದೊಡ್ಡ ಬಾಣಲೆಯಂತಹ ಚಟ್ಟೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ನೀರುಳ್ಳಿ, ಹಸಿಮೆಣಸುಗಳ ಹದವಾದ ಒಗ್ಗರಣೆಗೆ ಹಿಟ್ಟುಹಾಕಿ ಕೆಳಗಿನಿಂದ ಧಗಧಗನೆ ಬೆಂಕಿ ಉರಿಸಿ ಪಾತ್ರೆಯ ಮುಚ್ಚಳದ ಮೇಲೆ ನಿಗಿನಿಗಿ ಕೆಂಡ ಹಾಕಿ ಬೇಯಿಸಿದರೆ ಬಾಯಲ್ಲಿ ನೀರೂರುವ ಬಿಸಿ ಬಿಸಿ ಕಲ್ತಪ್ಪ ಸಿದ್ದಗೊಳ್ಳುತ್ತದೆ. ಸ್ಟಾರು ಹೋಟೆಲಲ್ಲಿ ಒಂಟಿ ಬ್ಯಾರಿಯ ಮಡದಿ ಉಮ್ಮ ಮಾಡುವ ಗಮಗಮಿಸುವ ಎಟ್ಟಿ, ಬಲ್ಯಾರು, ನಂಗು ಸಾರಿನೊಡನೆ ಕಲ್ತಪ್ಪ ತಿನ್ನುವುದನ್ನು ಕಪಿಲಳ್ಳಿಯ ಶೂದ್ರರು ಮತ್ತು ಶೂದ್ರಾತಿಶೂದ್ರರು ತಮ್ಮ ದಿನಚರಿಯ ಒಂದು ಅವಿಭಾಜ್ಯ ಅಂಗವನ್ನಾಗಿ ಮಾಡಿಕೊ೦ಡರು. ಗಂಡಂದಿರ ಕಣ್ಣ ತಪ್ಪಿಸಿ ಕೆಲಸದ ಹೆಂಗಸರು ಒಮ್ಮೊಮ್ಮೆ ಸ್ಟಾರು ಹೋಟೆಲಿಗೆ ಬಂದು ಕಲ್ತಪ್ಪ, ಸಾರು ತಿಂದು, ಬಿಸಿ ಬಿಸಿ ಸೋಜಿ ಕುಡಿದು ಉಮ್ಮನೊಡನೆ ಗಂಟೆಗಟ್ಟಲೆ ಮಾತಾಡುತ್ತಿದ್ದರು. ಒಂದು ಸಲ ಉಮ್ಮ ಹಾಗೆ ಬಂದವರನ್ನು ಒಳಗೆ ಕರೆದು ತನ್ನ ತವರುಮನೆಯವರು ಮದುವೆ ಕಾಲದಲ್ಲಿ ಕೊಟ್ಟ ಮೂನೇಟಿ, ಅಲಿಕತ್, ಕೊಂಬತಾಂಙ, ಚಪ್ಪಲೆ, ತಾಮರ, ತಿರ್ಪುಂಡೆ ಪೂ, ಕೋಯಕ್ಕ ಅರಞಣಂ, ಕೊತ್ತಂಬಳೆ ಉರ್ಕುಕಾಯಿ ಮೀನ್ ಸರಪ್ಪಳಿ, ಮಿಸಿರಿ ಮಾಲ, ಮುಡಿಪ್ಪಲೆ, ಕೊಪ್ಪು ಸರಪಳಿ ಎಂಬಿತ್ಯಾದಿ ಆಭರಣ ವೈವಿಧ್ಯಗಳನ್ನು ತೋರಿಸಿ ದಂಗುಬಡಿಸಿದ್ದಳು. ಅಲ್ಲಿಂದ ಹೋದ ಮೇಲೆ ಆಭರಣಗಳು ನೆನಪಾಗಿ ಕಾಡುವಾಗೆಲ್ಲ ಕೆಲಸದ ಹೆಂಗಸರು, “ಒಂಟಿ ಬ್ಯಾರಿ ನಿಜಕ್ಕೂ ಪುಣ್ಯಾತ್ಮ. ಇಷ್ಟೆಲ್ಲಾ ಬಂಗಾರ ಇರುವ ಉಮ್ಮ ಎಷ್ಟು ಚೆನ್ನಾಗಿ ಕಲ್ತಪ್ಪ – ಸಾರು ಮಾಡಿ ಹಾಕುತ್ತಾಳೆ? ಎಷ್ಟು ಚೆನ್ನಾಗಿ ಬಾಯಿ ತುಂಬಾ ನಗುತ್ತಾ ಮಾತಾಡುತ್ತಾಳೆ? ಉಮ್ಮನ ಮಾತು ಕೇಳುತ್ತಾ ನಿಂತರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ” ಎಂದು ಗುಣಗಾನಕ್ಕೆ ತೊಡಗಿಬಿಡುವುದುಂಟು.

ಆದರೆ ಕಪಿಲಳ್ಳಿಯ ಧರ್ಮಸಂರಕ್ಷಣಾ ಪರಿಷತ್ತು ಮಾತ್ರ ಒಂಟಿ ಬ್ಯಾರಿಯನ್ನು ಭಯೋತ್ಪಾದಕನೆಂದು ಪರಿಗಣಿಸಿ ಅವನ ವಿರುದ್ದ ಏಕಪಕ್ಷೀಯ ಶೀತಲ ಸಮರ ಸಾರಿಬಿಟ್ಟಿತು. ಕಡೆಕೊಡಿ ಒಂದೂ ತಿಳಿಯದ ಯಾವುದೋ ಊರಿನ ಮ್ಲೇಂಚ್ಛನೊಬ್ಬ ಹೀಗೆ ದಿಡೀರನೆ ಕಪಿಲಳ್ಳಿಯನ್ನು ಆಕ್ರಮಿಸಿ ಅದೇನೇನೋ ಮಾಡಿ ಹಾಕಿ ಕಪಿಲಳ್ಳಿಯ ಹೆಂಗಸರನ್ನು ಕೂಡಾ ಆಕರ್ಷಿಸುವುದೆಂದರೇನು? ನಾಳೆ ಇವನು ಸ್ವಾರು ಹೋಟೆಲಲ್ಲಿ ಕೋಣಂದೋ, ಎತ್ತಿದ್ದೋ ಮಾಂಸವನ್ನು ಮಾಡಿ ಹಾಕಿ ಇವರಿಗೆಲ್ಲಾ ತಿನ್ನಿಸುವುದಿಲ್ಲವೆಂದು ಏನು ಗ್ಯಾರಂಟಿ? ಇವನ ಕಲ್ತಪ್ಪ, ನಂಗು ಸಾರು, ಸೋಜಿಗ ಮನಸೋತು ಸಾಲ ಮಾಡಿ ತಿನ್ನುವವರು ನಾಳೆ ಸಾಲ ತೀರಿಸಲಾಗದೆ ಮ್ಲೇಂಚ್ಛರಾಗಿ ಬಿಟ್ಟರೇನು ಗತಿ? ಇದಕ್ಕೆಲ್ಲಾ ಕಾರಣ ಗರ್ನಾಲು ರಾಮಣ್ಣ ಇನ್ನೂ ರಿಕಾರ್ಡಾಗದ ತನ್ನ ಹತ್ತು ಸೆಂಟ್ಟು ಸರ್ಕಾರೀ ಜಾಗವನ್ನು ಮತ್ತು ಮನೆಯನ್ನು ಒಂಟಿ ಬ್ಯಾರಿಗೆ ಮಾರಾಟ ಮಾಡಿದ್ದು. ಊರಿನ ವಿಪ್ರರು, ಅತಿವಿಪ್ರರು, ಹಿರಿಯರು, ಪಟೇಲರು ಮತ್ತು ದೇವಸ್ಥಾನದ ಮೊಕ್ತೇಸರರನ್ನು ಒಂದು ಮಾತು ಕೇಳದೆ ಎಲ್ಲಿಯವನೋ ಒಬ್ಬ ಬ್ಯಾರಿಗೆ ಹೀಗೆ ಸರಕಾರೀ ಭೂಮಿ ಮಾರಾಟ ಮಾಡಿದ್ದು ತಪ್ಪಲ್ಲವೇ? ಧರ್ಮ ಸಂರಕ್ಷಣಾ ಪರಿಷತ್ತು ಗರ್ನಾಲು ರಾಮಣ್ಣನನ್ನು ದೇವಸ್ಥಾನಕ್ಕೆ ಕರೆಸಿ ವಿಚಾರಣೆ ನಡೆಸಿ ತಾರಾಮರಾ ಬೈದು ಅಲೆಕ್ಸಾಂಡರನು ಭಾರತವನ್ನು ಆಕ್ರಮಿಸಿದಾಗ ಅವನೊಡನೆ ಸೇರಿಕೊಂಡ ಅಂಬಿಗೆ ಗರ್ನಾಲು ರಾಮಣ್ಣನನ್ನು ಹೋಲಿಸಿ, ಅವನ ಕುಲಗೋತ್ರ ಜಾಲಾಡಿಸಿ ಬಿಟ್ಟದ್ದಲ್ಲದೆ ಒಂಟಿ ಬ್ಯಾರಿಯಿಂದ ಜಾಗ ವಾಪಾಸು ಪಡೆದುಕೊಳ್ಳದಿದ್ದರೆ ಕಪಿಲೇಶ್ವರನ ಜಾತ್ರೋತ್ಸವದಲ್ಲಿ ಗರ್ನಾಲು ಹೊಡಿಸುವ ಅವಕಾಶವನ್ನು ಬೇರೆಯವರಿಗೆ ನೀಡುವುದಾಗಿ ಭಯಾನಕ ಬೆದರಿಕೆ ಒಡ್ಡಿಬಿಟ್ಟಿತು. ಗರ್ನಾಲು ರಾಮಣ್ಣನು ತಾನು ದಿಲ್ ಪುಕಾರು ಬೀಡಿ ಸೇದಿ ಅದರ ಮೂತಿಗೆ ಗರ್ನಾಲಿನ ಬತ್ತಿಯನ್ನು ಇಟ್ಟು, ಅದು ಸುರ್ ಸುರ್ ಎಂದು ಹತ್ತಿಕೊಂದಾಗ ಆಕಾಶದೆತ್ತರಕ್ಕೆ ಹಾರಿಸಿ ಢಾಂ ಸದ್ದಿನಿಂದ ಎಲ್ಲರನೂ ಬೆಚ್ಚಿಬೀಳಿಸುವ ತನ್ನ ಸಾಹಸಕ್ಕೆ ಸಿಗುವ ಮೆಚ್ಚುಗೆಯ ನೋಟಗಳ ಪುಳಕದಿಂದ ವಂಚಿತನಾಗುವ ದೌರ್ಭಾಗ್ಯದಿಂದ ವಿಚಲಿತನಾದನು. ಕೊನೆಗೆ ಅವನು ತನಗೆ ಆಗಾಗ ಕಾಣಿಸಿಕೊಳ್ಳುವ ಮಲೇರಿಯಾ ವಾಸಿ ಮಾಡಲು ಮಾಡಿದ ಸಾಲದಿಂದಾಗಿ ತಲೆ ಎತ್ತಿ ನಡೆಯಲಾಗದೆ ದೀನಸ್ಥಿತಿ ತನ್ನನ್ನು ಜಾಗ ಮಾರಾಟ ಮಾಡುವಂತೆ ಮಾಡಿಸಿತೆಂದೂ, ಧರ್ಮ ಸಂರಕ್ಷಣಾ ಪರಿಷತ್ತು ಆ ಜಾಗ ಮತ್ತು ಮನೆಗೆ ಒಂಟಿ ಬ್ಯಾರಿ ಕೊಟ್ಟಿದ್ದಕ್ಕಿಂತ ಸ್ವಲ್ಪ ಹೆಚ್ಚು ಹಣ ಕೊಡುವುದಾದರೆ ಒಂಟಿ ಬ್ಯಾರಿಯನ್ನು ಜಾಗ ಮತ್ತು ಮನೆಯಿಂದ ಮಾತ್ರವಲ್ಲದೆ ಊರಿನಿಂದಲೇ ಬಿಡಿಸಿ ಓಡಿಸುತ್ತೇನೆಂದು ಖಡಾಖಂಡಿತವಾಗಿ ಹೇಳಿದಾಗ ಧರ್ಮ ಸಂರಕ್ಷಣಾ ಪರಿಷತ್ತು ಅನ್ಯ ದಾರಿ ಕಾಣದೆ “ನಿನ್ನ ಕರ್ಮ ಅನುಭವಿಸು” ಎಂದು ಹೇಳಿ ತಣ್ಣಗಾಗಿ ಬಿಟ್ಟಿತು.

ಗದ್ದೆಗಳನ್ನು ತೋಟ ಮಾಡಿದ್ದಕ್ಕೆ ಕಪಿಲಳ್ಳಿಯಲ್ಲಿ ಅಕ್ಕಿಯ ಬೆಲೆ ವಿಪರೀತ ಹೆಚ್ಚಾದಾಗ ಸಾಹಸಿಗಳು ಬಹಳ ಕಷ್ಟಪಟ್ಟು ಅಭೇಧ್ಯ ಮಲೆ ಹತ್ತಿ ಘಟ್ಟ ಸೇರಿ ಅಲ್ಲಿನ ಪೋಲಿಸರ ಕಣ್ತಪ್ಪಿಸಿ ಅಲ್ಲಿಂದ ತಲೆಹೊರೆಯಲ್ಲಿ ಹೇಗೋ ಆಕ್ಕಿ ತಂದು ಕಪಿಲಳ್ಳಿಯಲ್ಲಿ ಮಾರುವ ಕಾರ್ಯಕ್ಕೆ ಇಳಿದುಬಿಟ್ಟರು. ತಲೆ ಹೊರೆಯಲ್ಲಿ ಹದಿನೈದು ಮೈಲಿ ಬೆಟ್ಟ ಕಾಡು ಹತ್ತಿ ಇಳಿದು ಅಕ್ಕಿಯನ್ನು ಹೊತ್ತು ತರುವ ಹಾದಿಯುದ್ದಕ್ಕೂ ರಕ್ತಹೀರುವ ಸೊಳ್ಳೆ, ಕುರ್ಡ, ಜಿಗಣೆ, ಭಯಾನಕವಾದ ಕಾಟಿ, ಕಾಡಾನೆ, ಸಿಕ್ಕಿಬಿದ್ದರೆ ಬೆನ್ನ ಚರ್ಮ ಸುಲಿದು ಅಜೀವಪರ್ಯಂತ ಕಂಬಿ ಎಣಿಸುವಂತೆ ಮಾಡಬಹುದಾದ ಪೋಲಿಸರು, ಎಲ್ಲವನ್ನೂ ನಿಭಾಯಿಸಿ ಕಪಿಲಳ್ಳಿಗೆ ತಂದದ್ದನ್ನು ಮರಾಟ ಮಾಡಿದರೆ ಅಸಲಿಗೆ ಮೋಸವಿರಲಿಲ್ಲವಾದರೂ ಹೇಳಿಕೊಳ್ಳುವಂಥ ಲಾಭ ಸಿಗುತ್ತಿರಲಿಲ್ಲ”. ಒಮ್ಮೆ ಘಟ್ಟಕ್ಕೆ ಹೋಗಿ ಬಂದರೆ ಎಣ್ಣೆ ತಿಕ್ಕಿ, ಬಿಸಿ ನೀರ ಸೇಕ ಕೊಟ್ಟು ಕೈಕಾಲು, ಮೈ ಸರಿಪಡಿಸಲು ಒಂದು ವಾರವಾದರೂ ಬೇಕಾಗಿದ್ದುದರಿಂದ ಹಾಗೆ ಹೋಗಿ ಬಂದವರಿಗೆ ವಾರವಿಡೀ ಬೇರೆ ಗಳಿಕೆ ಏನೇನೂ ಇರಲಿಲ್ಲ.

ಇಂಥ ಪರಿಸ್ಥಿತಿಯಲ್ಲಿ ಒಂಟಿ ಬ್ಯಾರಿಯ ಮಡದಿ ಉಮ್ಮ ರಸ್ತೆಯ ಮೇಲ್ಗಡೆಯ ನಾಲ್ಕೈದು ಬಿದಿರ ಮಳೆಗಳ ಸುತ್ತಲಿನ ಒರಟು ನೆಲವನ್ನು ಕತ್ತಿ ಮನೆಯ೦ಗಳದಂತೆ ಸಾಪಾಟಾಗಿ ಮಾಡಿ ಸಗಣಿ ಸಾರಿಸಿ, ಹಗಲಿಡೀ ತನ್ನ ಮಕ್ಕಳನ್ನು ಅಲ್ಲಿ ಕಾವಲಿರಿಸಿ, ದಿನಾ ಬೆಳಗ್ಗೆ ರಾಜಂದರಿಯನ್ನು ಗುಡಿಸಿ ಒಟ್ಟುಮಾಡಿ ತಂದು, ಕಸ ತೆಗದು, ಒನಕೆಯಿಂದ ಕುಟ್ಟಿ, ಡಾಲ್ಡದ ಒಗ್ಗರಣೆ ಹಾಕಿ ಗಮಗಮಿಸುವ ಉಪ್ರಟ್ಟು, ದೋಸೆ ತಯಾರಿಸಿ ಸ್ಟಾರು ಹೋಟಲಲ್ಲಿ ಮಾರಾಟಕ್ಕಿಟ್ಟ ಸಾಹಸ ಮನೆ ಮನೆ ಮಾತಾಗಿ ಬಿಟ್ಟತು. ಈಗ ಕಪಿಲಳ್ಳಿಯ ಕೆಲಸದ ಹೆಂಗಸರು, ಗ೦ಡಸರು ಕಾಡಿಗೆ ನುಗ್ಗಿ ಬಿದಿರ ಮಳೆಗಳನ್ನು ತಮ್ಮೊಳಗೆ ಹ೦ಚಿಕೂಂಡು, ಕಾಡಿಗೆ ಕಾಡನ್ನೇ ಅಲ್ಲಲ್ಲಿ ಗುಡಿಸಿ, ಚೊಕ್ಕಟಮಾಡಿ, ಸಂಗ್ರಹವಾದ ರಾಜಂದರಿಯನ್ನು ಸ್ಟಾರು ಹೋಟೆಲಿಗೆ ಮಾರಿ, ಅದರಿಂದಲೇ ಮಾಡಿದ ಉಪ್ಪಿಟ್ಟು, ದೋಸೆ ಚಪ್ಪರಿಸಿ ಚಪ್ಪರಿಸಿ ತಿನ್ನತೊಡಗಿದರು. ಹೊಸದೊಂದು ಸಾಧ್ಯತೆಯೆನ್ನು ಕಪಿಲಳ್ಳಿಗೆ ತೋರಿಸಿಕೊಟ್ಟ ಒಂಟಿ ಬ್ಯಾರಿಯ ಹೆಂಡತಿ ಉಮ್ಮ ಈಗ ರಾಜಂದರಿ ಉಮ್ಮನಾಗಿ ಊರಲ್ಲಿ ಹೊಸ ಪ್ರಭಾವಳಿಯಿಂದ ಕಂಗೊಳಿಸತೊಡಗಿದಳು. ಕಪಿಲಳ್ಳಿಯ ಕಾಡುಗಳಿಂದ ತಿಂಗಳೂರಿಗೆ ಮರ ಸಾಗಿಸುವ ಲಾರಿಗಳ ಡ್ರೈವರು, ಕ್ಲೀನರು, ರೋಡಿನ ಕೆಲಸದವರು ಮತ್ತು ಮೇಸ್ತ್ರಿಗಳು ಒಂಟಿ ಬ್ಯಾರಿಯ ಸ್ಟಾರು ಹೋಟೆಲನ್ನು ತಮ್ಮ ಖಾಯಂ ತಂಗುದಾಣವನ್ನಾಗಿ ಮಾಡಿಕೊಂಡುದರಿಂದ ಖುಲಾಯಿಸಿದ ಅದೃಷ್ಟದಿಂದಾಗಿ ಒಂಟಿ ಬ್ಯಾರಿಯನ್ನು ಕಪಿಲಳ್ಳಿ ಜನ ಸಾವುಕಾರ್ರೇ; ಎಂದು ಎದುರಿಂದ ಮರ್ಯಾದೆ ಕೊಟ್ಟು ಕರೆಯತೊಡಗಿದರು.

ಎಲ್ಲವೂ ಹೀಗೆ ಸುಸೂತ್ರವಾಗಿ ಸಾಗಲಾಗಿ ಕಪಿಲೇಶ್ವರನ ಸಂಭ್ರಮದ ಏಳು ದಿನಗಳ ಜಾತ್ರೋತ್ಸವ ಆರಂಭವಾಗಿ ಬಿಟ್ಟಿತು. ಏಳು ದಿನವೂ ಮಧ್ಯಾಹ್ನ ಊರವರಿಗೆ ಪುಷ್ಕಳ ಭೋಜನದ ಸ್ವರ್ಗ ಸುಖ. ದೇವಸ್ಥಾನದ ಒಳಾಂಗಣದಲ್ಲಿ ವಿಪ್ರರಿಗೆ ಮತ್ತು ಅತಿವಿಪ್ರರಿಗೆ ಮೊದಲು ಎರಡು ಗಂಟೆಗಳ ಸಮಾರಾಧನೆ. ಅವರ “ಭೋಜನಕಾಲೇ ನಮಃ ಪಾರ್ವತೀ ಪತೇ ಹರಹರಾ ಮಹಾದೇವ” ಎಂಬ ಮುಗಿಲು ಮುಟ್ಟುವ ಸಂತೃಪ್ತ ಸಾಮೂಹಿಕ ಘೋಷಣೆ ಮುಗಿದು ಅವರೆದ್ದ ಮೇಲೆ, ಆ ವರೆಗೆ ಪಲ್ಯ, ಪಳದ್ಯ, ಕಾಯಿಹುಳಿ, ಪಾಯಸಗಳ ಸುವಾಸನೆಯನ್ನು ಹೀರುತ್ತಾ ಹಸಿದು ಕಂಗಾಲಾಗಿ ಕಾಯುತ್ತಿರುವ ಶೂದ್ರರಿಗೆ ದೇವಸ್ಥಾನದ ಹೊರಾ೦ಗಣದಲ್ಲಿ ಊಟವಾಗುವಾಗ ಸಂಜೆ ನಾಲ್ಕಾಗುತ್ತದೆ. ಎಲ್ಲರಿಗೂ ಊಟವಾದ ಮೇಲೆ ಉಳಿದದ್ದೆಲ್ಲವನ್ನೂ ಬುಟ್ಟಿ, ಹಂಡೆ ಸಮೇತ ಹೊರಾಂಗಣದಿಂದ ಸಾಕಷ್ಟು ದೂರದ ಮಜಲಿನಲ್ಲಿ ಅತಿಶೂದ್ರರಿಗೆ ತಂದು ಕೊಡುವದು ಆರ್ಷೇಯ ಸಂಪ್ರದಾಯ. ಆರನೆಯ ದಿನ ರಥೋತ್ಸವವಾಗಿ ಕಪಿಲೇಶ್ವರನ ಉತ್ಸವಮೂರ್ತಿ ಗರ್ಭಗುಡಿ ಸೇರಿದರೆ ಗುಡಿಯ ಬಾಗಿಲು ತರೆಯುವುದು ಮರುದಿನ ಬೆಳಗ್ಗೆ ಹತ್ತು ಗಂಟೆಗೆ. ಅಂದು ಸಂಜೆ ಆರು ಗಂಟೆಗೆ ಕಪಿಲೇಶ್ವರನ ಉತ್ಸವಮೂರ್ತಿ ಪಟ್ಟಣ ಸವಾರಿ ಹೊರಡುವ ಮುನ್ನ ದೇವಸ್ತಾನದ ಬಳಿಯಲ್ಲೆ ಹರಿಯುವ ತಪಸ್ವಿನಿಯ ಮಧ್ಯದಲ್ಲಿರುವ ಗೌರೀಶಿಲೆಗೆ ತೆಪ್ಪದಲ್ಲಿ ಉತ್ಸವಮೂರ್ತಿಯ ಪ್ರದಕ್ಷಿಣೆಯಾಗುತ್ತದೆ. ತೆಪ್ಪೋತ್ಸವ ಮುಗಿದ ಮೇಲೆ ಒಂದೂವರೆ ಮೈಲು ದೂರದ ಜಳಕದ ಗುಂಡಿಗೆ ದೇವರು ಅವಭೃತಕ್ಕೆ ತೆರಳುತ್ತಾರೆ. ಆಗ ಹಾದಿಯುದ್ದಕ್ಕೂ ಹೋಟೆಲು, ಆಂಗಡಿ, ಮನೆಗಳವರು ದೇವರಿಗೆ ಕಾಯಿ ಒಡೆದು ಆರತಿ ಎತ್ತಿ, ಪಂಚಜ್ಜಾಯ ಹಂಚಿ, ಪಾನಕ ನೀಡಿ ಶ್ರೀ ದೇವರ ಕೃಪಗೆ ಪಾತ್ರರಾಗುತ್ಪಾರೆ.

ಅವಭೃತಕ್ಕೆಂದು ಕಪಿಲೇಶ್ವರನ ಉತ್ಸವಮೂರ್ತಿ ಪಟ್ಟಣ ಸವಾರಿ ಆರಂಭಿಸುವಾಗ ಮೊದಲಿಗೆ ಸಿಗುವುದೇ ಒಂಟಿ ಬ್ಯಾರಿಯ ಸ್ಟಾರ್ ಹೋಟೆಲು. ಕಪಿಲಳ್ಳಿಯಲ್ಲಿ ನೆಲೆನಿಂತು ಎಂಟು ತಿಂಗಳುಗಳಾದರೂ ದೇವಸ್ಥಾನ ಎಲ್ಲಿದೆಯಂದು ತಿರುಗಿಯೂ ನೋಡದ ಒಂಟಿ ಬ್ಯಾರಿ, ಈಗ ತನ್ನ ಸ್ಟಾರು ಹೋಟಿಲಿನ ಎದುರಿನಿಂದಲೇ ಮೆರವಣಿಗೆ ಸಾಗುವಾಗ ಏನು ಮಾಡುತ್ತಾನೆ? ಊರಿನ ಎಲ್ಲಾ ಅಂಗಡಿ ಮನೆಗಳವರು ದೇವರಿಗೆ ಕಾಯಿ ಒಡೆದು ಆರತಿ ಎತ್ತಿ ಗೌರವಿಸುವಾಗ ಆರಂಭದಲ್ಲೇ ಸಿಗುವ ಒಂಟಿ ಬ್ಯಾರಿಯ ಸ್ಟಾರು ಹೋಟೆಲು ದೇವರಿಗೆ ಗೌರವ ತೋರಿಸದಿದ್ದರೆ ಮಂಗಳಕಾರ್ಯಕ್ಕೆ ಆರಂಭ ವಿಘ್ನ ಬಂದಂತಾಗುವುದಿಲ್ಲವೇ? ಆದರೆ ಕಪಿಲೇಶ್ವರನಿಗೆ ಕಾಯಿ ಒಡೆದು ಆರತಿ ಎತ್ತಬೇಕೆಂದು ಒಂಟಿ ಬ್ಯಾರಿಯಲ್ಲಿ ಕೇಳುವುದು ಸರಿಯೇ? ಒಂಟಿ ಬ್ಯಾರಿ ಕಾಯಿ ಒಡೆದು ಆರತಿ ಎತ್ತದಿದ್ದರೆ ಇಡೀ ಊರು ಒಂದು, ಬ್ಯಾರಿ ಮಾತ್ರ ಬೇರೆ ಎಂದಾಗುವುದಿಲ್ಲವೆ? ಒಂದು ವೇಳೆ ಒಂಟಿ ಬ್ಯಾರಿ ಆರತಿ ಎತ್ತಿ ಕಾಯಿ ಒಡೆದರೆ ಅದು ಕಪಿಲೇಶ್ವರನಿಗೆ ಮೆಚ್ಚುಗೆ ಯಾದೀತೇ? ದೇವತಾ ಕಾರ್ಯಗಳಲ್ಲಿ ಏನಾದರೂ ದೋಷ ಕಂಡುಬಂದರೇನು ಗತಿ? ಒಂಟಿ ಬ್ಯಾರಿಯ ಮನಸ್ಸೇನೆಂದು ತಿಳಿದುಕೊಳ್ಳಲು ಯಾರನ್ನು ಸಂಧಾನಕ್ಕೆ ಕಳಿಸುವುದು? ಹಾಳಾದ ಗರ್ನಾಲು ರಾಮಣ್ಣ ತನ್ನ ಸರ್ಕಾರೀ ಜಾಗವನ್ನು ರೆಕಾರ್ಡು ಆಗುವ ಮೊದಲೇ ಯಾರಿಗೂ ತಿಳಿಸದೆ ಮಾರಿದ್ದೇ ತಪ್ಪು. ಈಗ ಇಡೀ ಊರಿಗೆ ಊರೇ ಶಿಕ್ಷೆ ಆನುಭವಿಸುತ್ತಿದೆ. ಯೋಚಿಸಿ ಯೋಚಿಸಿ ದೇವಸ್ಯಂ ಟ್ರಸ್ಟು ಎಲ್ಲವನ್ನೂ ಕಪಿಲೇಶ್ವರನಿಗೆ ಬಿಟ್ಟುಬಿಡುವುದು ಎಂದು; ಅವನಿಗೆ ಬೇಕಾದಂತೆ ನಡೆಸಿಕೊಂಡು ಹೋಗಲಿ ಎಂದು ನಿರಾಳವಾಯಿತು. ಊರಿನವರು ಮಾತ್ರ ಅವಭೃತದ ದಿನ ಒಂಟಿ ಬ್ಯಾರಿ ಖಂಡಿತವಾಗಿ ಸ್ಟಾರು ಹೋಟೆಲು ಮುಚ್ಚಿ ಕುಟು೦ಬ ಸಮೇತ ಮಲೆಯಾಳ ದೇಶಕ್ಕೆ ಹೋಗಿ ಬಿಡುತ್ತಾನೆ ಎಂದುಕೊಂಡು ನೆಮ್ಮದಿಯಿಂದಿದ್ದರು.

ಕಾತರದಲ್ಲೇ ಆರಂಭವಾಯಿತು ಅವಭೃತದ ಮೆರವಣಿಗೆ. ಒಳಾಂಗಣದಿಂದ ಹೊರಟ ಕಪಿಲೇಶ್ವರನ ಉತ್ಸವಮೂರ್ತಿ ದೇವಸ್ತಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು ತಪಸ್ವಿನಿಗಿಳಿದು ಪಿಂಡಿ ಹತ್ತಿತು. ಪಿಂಡಿ ಗೌರಿಶಿಲೆಗೆ ಮೂರು ಬಾರಿ ಪ್ರದಕ್ಷಿಣೆ ಬಂದು ಹೊಳೆ ದಾಟಿತು. ಅಲ್ಲಿಂದ ಎರಡು ಫರ್ಲಾಂಗು ಗದ್ದೆಯ ಬದುವಿನಲ್ಲೇ ನಡೆದರೆ ಒಂಟಿ ಬ್ಯಾರಿಯ ಸ್ಟಾರು ಹೋಟೆಲು ಇರುವ ಮುಖ್ಯ ರಸ್ತೆ ಸಿಗುತ್ತದೆ. ಅಲ್ಲಿಗೆ ಮುಟ್ಟುತ್ತಿದ್ದಂತೆ ಮೆರವಣಿಗೆ ನಿಂತುಬಿಟ್ಟಿತು. ಒಂಟಿ ಬ್ಯಾರಿ ಸ್ಟೂಲೊಂದರಲ್ಲಿ ಕಾಯಿ – ಹಣ್ಣು, ಆರತಿ ತಟ್ಟೆ, ಎಣ್ಣೆ, ಬತ್ತಿ, ಕರ್ಪೂರ, ಆಗರಬತ್ತಿ ಇಟ್ಟು, ರಾಜಂದರಿ ಉಮ್ಮ ಮತ್ತು ಮೂವರು ಮಕ್ಕಳೊಡನೆ ಕಾಯುತ್ತಿದ್ದಾನೆ!

ಯಾರಿಗೆ ಏನು ಹೇಳಬೇಕೆಂದೇ ತೋಚದ ಸಂದಿಗ್ದತೆ. ಸೂಜಿ ಬಿದ್ದರೂ ಕೇಳಿಸು ವಂತಹ ನಿಶ್ಶಬ್ದ ಮುರಿದು ಒಂಟಿ ಬ್ಯಾರಿ ಕೈ ಜೋಡಿಸಿ ಹೇಳಿದ. “ಈ ದೇವರ ಮುಂದೆ ನಿಂತು ಸತ್ಯ ಹೇಳುತ್ತೇನೆ. ಜಾತ್ರೆ ಶುರುವಾದಂದಿನಿಂದ ನನ್ನ ಹೋಟೆಲಲ್ಲಿ ಕೋಳಿ, ಮೀನು ಮಾಡಿಲ್ಲ. ಇಂದು ಇಡೀ ಮನೆಗೆ, ಅಂಗಳಕ್ಕೆ ಸೆಗಣಿ ಸಾರಿಸಿ, ಬೆಳಗ್ಗೊಮ್ಮೆ, ಈಗೊಮ್ಮೆ ತಪಸ್ವಿನಿಯಲ್ಲಿ ಮಿಂದು ಶುಚಿಯಾಗಿದ್ದೇವೆ. ಈ ಊರು ನನಗೆ ಅನ್ನ ಕಂಡುಕೊಳ್ಳುವ ದಾರಿ ತೋರಿಸಿದೆ. ಅದಕ್ಕೆ ಕಪಿಲೇಶ್ವರನಿಗೆ ಇದು ನಮ್ಮ ಕೃತಜ್ಞತೆ. ಬೇರೆ ಮಾತಾಡದೆ ನಮ್ಮ ಕಾಣಿಕೆಯನ್ನು ದೇವರಿಗೆ ಒಪ್ಪಿಸಿಕೊಳ್ಳಬೇಕು.”

ಅರ್ಚಕರು ಮೊಕ್ತೇಸರರ ಮುಖ ನೋಡಿದರು. ಮೊಕ್ತೇಸರರು ಪಟೇಲರತ್ತ ದೃಷ್ಟಿ ಹಾಯಿಸಿದರು. ಪಟೇಲರತ್ತ ಮೆರವಣಿಗೆಯ ಮು೦ಭಾಗದಲ್ಲಿರುವವರ ಮುಖಗಳನ್ನು ಓದಿಕೊಂಡವರಂತೆ ಹೇಳಿದರು. “ಒಂಟಿ ಬ್ಯಾರಿಗಳು ಈಗ ನಮ್ಮ ಊರಿನವರು. ನಮ್ಮ ದೇವರನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ಅವರದ್ದು. ಅವರು ಕಪಿಲೇಶ್ವರ ಮೆಚ್ಚುವ ಕೆಲಸ ಮಾದಿದ್ದಾರೆ. ಕಪಿಲೇಶ್ವರ ಅವರ ಸೇವೆಯನ್ನು ಸ್ವೀಕರಿಸಲಿ. ಅರ್ಚಕರು ಕಾಯಿ ಒಡೆದು ಅದಕ್ಕೆ ಗಂಧ ಹಚ್ಚಿ ಸ್ಟೂಲಿನ ಮೇಲಿಟ್ಟರು. ಆರತಿ ತಟ್ಟೆಯನ್ನು ಕಾಲ್ದೀಪದಲ್ಲಿ ಬೆಳಗಿಸಿ ಮ೦ತ್ರ ಹೇಳುತ್ತಾ ಗಂಟೆಯಾಡಿಸಿಕೊಂಡು ಆರತಿ ಎತ್ತಿದರು. ಅದನ್ನು ಸ್ಟೂಲಲ್ಲಿಟ್ಟು ಬೊಗಸೆಯೊಡ್ಡಿ ನಿಂತಿದ್ದ ಒಂಟಿ ಬ್ಯಾರಿಗೆ ಗಂಧ ಪ್ರಸಾದ ಮತ್ತು ಹೂ ನೀಡಿದರು. ಪ್ರಸಾದ ಸ್ವೀಕರಿಸುವಾಗ ಒಂಟಿ ಬ್ಯಾರಿ ಹೇಳಿದ. ನಾನು ಯವುದೋ ಕಾಯಿಲೆಯಿಂದಾಗಿ ಸಾಯುವ ಸ್ಥಿತಿಯಲ್ಲಿದ್ದಾಗ ದೇವರಿಗೆ ನೇರ್ಚೆ ಹೇಳಿ ಕಿವಿಗೆ ಬಂಗಾರದ ಒಂಟಿ ಚುಚ್ಚಿದ್ದ ನನ್ನ ಹೆತ್ತುಮ್ಮ ಹಿಂದೆ ಮಾತು ಹೇಳಿದ್ದಳು. “ದೇವರೆಲ್ಲಾ ಒಂದೇ ಮೋನೇ. ನಮಗೊಂದು ದೇವರು, ಬೇರೆಯವರಿಗೆ ಇನ್ನೊಂದು ದೇವರು ಇರಲು ಸಾಧ್ಯವಿಲ್ಲ” ಎಂದು. ಕಪಿಲಳ್ಳಿಯಲ್ಲಿ ಬದುಕುವ ನನಗೆ ಕಪಿಲೇಶ್ವರನು ಅಲ್ಲಾಹು.”

ಯಕ್ಷಗಾನ ಪ್ರಿಯ ಪಟೇಲರ ಮುಖ ಬಿರಿಯಿತು. ಅವರೆಂದರು. “ಭಗವದ್ಗೀತೆಯಲ್ಲಿ ಕೃಷ್ಣ ಚಾತುವರ್ಣ್ಯಮಯಾಂ ಸೃಷ್ಟಂ ಗುಣ ಕರ್ಮ ವಿಭಾಗಶಃ ಎ೦ದಿದ್ದಾನೆ. ಅ೦ದರೆ ಅವರವರ ಗುಣ ಸ್ವಭಾವಕ್ಕನುಗುಣವಾಗಿ ಜಾತಿ ನಿರ್ಧಾರವಾಗುತ್ತದೆ, ಹುಟ್ಟಿನಿಂದಲ್ಲ. ಜಾತಿ ವರ್ಣಕ್ಕಿಂತ ಮನುಷ್ಯತ್ವ ಮುಖ್ಯ ಎನ್ನುವುದನ್ನು ಒಂಟಿ ಬ್ಯಾರಿಗಳು ತೋರಿಸಿಕೊಟ್ಟಿದ್ದಾರೆ. ಆವರಿಗೆ ಕಪಿಲೇಶ್ವರ ಒಳಿತನ್ನು ಉಂಟು ಮಾಡಲಿ.”

ಹೊಸ ಉತ್ಸಾಹದಿಂದ ರಾಮಣ್ಣ ಗರ್ನಾಲು ಸಿಡಿಸಿದ. ಮೆರವಣಿಗೆ ಮುಂದಕ್ಕೆ ಸಾಗಿತು.

*****

One thought on “0

  1. ಪ್ರಭಾಕರ ಶಿಶಿಲರವರೇ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರಪದ ಸರದಾರ
Next post ನಿಜವೇ ಇದು ನಿಜವೇ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…