ಎಂದಿನಂತೆ ನ್ಯಾಯಾಲಯದ ಆವರಣ ಜನರಿಂದ ಕಿಕ್ಕಿರಿದಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತಿದ್ದ ಕಿರಿಯ ವಕೀಲರುಗಳು ಕರಿಯ ಕೋಟಿನ ಒಳಗೆ ಬೆವೆಯುತ್ತಿದ್ದದ್ದು ಲೆಕ್ಕಕ್ಕಿರಲಿಲ್ಲ. ದಫ್ತರ ಹಿಡಿದ ಹಿರಿಯ ಲಾಯರುಗಳು ಮಾತನ್ನೇ ಬಂಡವಾಳ ಮಾಡಿಕೊಂಡು ಅಲ್ಲಲ್ಲಿ ಮುತ್ತಿದ ತಮ್ಮ ತಮ್ಮ ಕಕ್ಷಿದಾರರಿಗೆ ನಡವಳಿಕೆಯ ಮಾಹಿತಿ ನೀಡುತ್ತಿದ್ದರು.
ಕಾತರ ಹೊತ್ತ ಮುಖಗಳಲ್ಲಿ ನ್ಯಾಯಕ್ಕಾಗಿ ಕಾಯುತ್ತಾ ಕುಂತು ನಿಂತು ಮಾತು ಹಚ್ಚಿದವರು ತಡಬಡಿಸಿ ಸೆಟೆದು ನಿಲ್ಲುತ್ತಲೇ ನ್ಯಾಯಾಧೀಶರು ಬರುತ್ತಿರುವ ಸೂಚನೆ ಸಿಕ್ಕಿತು. ನ್ಯಾಯಾಧೀಶರು ಬಂದು ಪೀಠದಲ್ಲಿ ಆಸೀನಗೊಂಡರು. ಒಂದರೆಗಳಿಗೆ ಎಲ್ಲರ ಕದಡಿದ ಮನಗಳಿಗೆ ಪೂರ್‍ಣವಿರಾಮ ಸಿಕ್ಕು, ಕೋರ್‍ಟಿನ ಕಲಾಪಗಳು ಸೌಮ್ಯವಾಗಿ ಮುಂದುವರಿಯುವಂತಾಯಿತು.
ಇದಾವುದಕ್ಕೂ ತಲೆಕೆಡಿಸಿಕೊಳ್ಳದ ನಾನು ನನ್ನದೇ ಗುಂಗಿನಲ್ಲಿದ್ದೆ.
ವಿಶ್ವಾಸಕ್ಕೆ ಕೊಟ್ಟಿದ್ದ ಹಣದ ವಸೂಲಿಗಾಗಿ ತಿರುಗಾಡಿ ರೋಸಿಟ್ಟಾಗ ಗೋಜಲೆನಿಸಿತ್ತು. “ಇದೊಂದು ಸಲ ಸಾಲಾ ಉತಾರ ಮಾಡಿ ಕೊಡಿ ರಾಯರಽ ಮಗಳ ಮದುವೀ ಇಟಗೊಂಡೀನಿ, ನಾಕಾರು ತಿಂಗಳಾಗ ತೀರಿಸಿಬಿಡ್ತೀನಿ” ಎಂಬ ಗೋವಿಂದಪ್ಪನ ದೈನ್ಯದ ಮಾತಿಗೆ ಇಲ್ಲ ಎನ್ನಲಾಗಿರಲಿಲ್ಲ. ಹಳೆಯ ತಾರೀಖಿಗೆ ಬಡ್ಡಿ ಚುಕ್ತಾ ಮಾಡಿದ್ದನು. ಕೈಗಡ ಕೊಟ್ಟ ಐವತ್ತು ಸಾವಿರ ಅಸಲಿಗೆ ಹೊಸ ಪ್ರಾಮಿಸರಿ ನೋಟನ್ನು ಹದಿನೈದು ದಿನ ಮುಂಚಿತವಾಗಿ, ಮುಂದಿನ ದಿನಾಂಕ ಹಾಕಿ ಬರೆದುಕೊಟ್ಟು ಮತ್ತೊಂದು ಕಾಲಾವಧಿ ಪಡೆದುಕೊಂಡಿದ್ದ.
ಯಜಮಾನ ಗೋವಿಂದಪ್ಪ ಖಾತರೀ ಮನುಷ್ಯನಾಗಿದ್ದ. ಆತನಿಗೆ ಕೊಟ್ಟ ಹಣ ಎಲ್ಲಿಗೂ ಹೋಗಲ್ಲ ಎಂದುಕೊಂಡ ನಾನು ನನ್ನ ದೈನಂದಿನ ಉಸಾಬರಿ ನಡುವೆ ಆ ವಿಚಾರವನ್ನು ಮರೆತು ಬಿಟ್ಟಿದ್ದೆ. ಆದರೆ ಏಕಾಏಕಿ ಗೋವಿಂದಪ್ಪ ಆತ್ಮಹತ್ಯೆ ಮಾಡಿಕೊಂಡದ್ದು ನನ್ನ ತಲೆ ಕೆಡಿಸಿಬಿಟ್ಟಿತು. ಗೋವಿಂದಪ್ಪನಿಗೆ ಸಮಾಜದಲ್ಲಿ ಬದುಕುಳಿಯಲು ಅಸಾಧ್ಯವೆನಿಸಿದ ಸಾವಿಗೆ ಕಾರಣ ಏನಿತ್ತು ಅನ್ನೋದು ಇಂದಿಗೂ ಚಿದಂಬರ ರಹಸ್ಯ.
ಅಂತೂ ಕರ್‍ಮಾಂಗಗಳೆಲ್ಲ ಮುಗಿಯಿತು. ಆಸ್ತಿಗೆ ಉತ್ತರ ಹೊಂದಿದ ಆತನ ಇಬ್ಬರು ಗಂಡುಮಕ್ಕಳಾದ ರಾಮಪ್ಪ, ಲಕ್ಷ್ಮಪ್ಪರ ಹತ್ತಿರ ಕರಾರನ್ನು ಅನುಷ್ಠಾನಗೊಳಿಸಲು ಕೇಳಿಕೊಂಡೆ. ಯಾವುದೇ ಅಡ್ಡಿ ಹೇಳದೆ, ಇನ್ನೊಂದು ವರ್ಷದಲ್ಲಿ ‘ಹಣವನ್ನು ಪೂರ್‍ತಿ ಸಂದಾಯಮಾಡಿ ನಿಮ್ಮ ಚೆಲ್ಲಿನಿಂದ ವಾಪಾಸು ಪಡೆಯುತ್ತೇವೆ ಎಂದು ನಯವಾಗಿ ನನ್ನನ್ನು ಸಾಗಹಾಕಿದ್ದರು.
ಅನಂತರದಲ್ಲಿ ಅಣ್ಣ, ತಮ್ಮ ಎಣ್ಣೆ-ಸೀಗೆಕಾಯಿ ಆದರು. ಇಬ್ಬರೂ ರಾಜಕೀಯ ಹಿನ್ನೆಲೆ ಇರೋ ಕುಳಗಳು, ಅಪ್ಪನ ಸ್ವಯಾರ್‍ಜಿತ ಮನೆ ಹಿಸ್ಸೆ ಮಾಡಿಕೊಳ್ಳುವಲ್ಲಿ ತಕರಾರು ಎದ್ದಿತ್ತು. ದಿನ ಕಳೆದಂತೆಲ್ಲಾ ನನಗೆ ಬರಬೇಕಾದ ಬಾಕಿ ವಸೂಲಾತಿ ಕನಸಾಗುತ್ತ ಹೋಯಿತು. ಪರಸ್ಪರ ಒಡಂಬಡಿಕೆಯ ಮೇಲೆ ವ್ಯವಹಾರ ಮುಂದುವರಿಸುವ ಅಸಲು ಮಾತುಗಳೆಲ್ಲ ವಿಫಲ ಆದಂತೆ, ದುಡ್ಡನ್ನು ನುಂಗಿ ಹಾಕುವ ಅವರ ಹುನ್ನಾರ ನನ್ನ ವ್ಯಾಪಾರೀ ಮನಕ್ಕೆ ನಿಚ್ಚಳವಾಯಿತು. ಅಂದಾಗಲೇ ನ್ಯಾಯಾಲಯದ ಮೆಟ್ಟಿಲು ಹತ್ತುವ ಅನಿವಾರ್ಯತೆಯನ್ನು ಗುರುತಿಸಿಕೊಂಡೆನು.
ಯಾವ ದುರಂತದ ಕಾರಣಕ್ಕೆ ಗೋವಿಂದಪ್ಪ ಇಂದು ನಮ್ಮೊಂದಿಗಿಲ್ಲವೋ ಅದಕ್ಕಾಗಿ ನಾನು ಮರುಕಪಡಬಹುದು. ಇಲ್ಲಿ ಸತ್ತಿದ್ದಾನೆ ಎನ್ನುವ ಅನುಕಂಪದಲ್ಲಿ ಉದಾರತೆ ತೋರುವ ಮಾತಂತೂ ಇಲ್ಲವೇ ಇಲ್ಲ. ಯಾಕೆಂದರೆ ನನ್ನ ಈಗಿನ ವ್ಯಾಪಾರ ಕಾಲು ಮುರಿದುಕೊಂಡು ಬಿದ್ದಿದೆ. ನನ್ನನ್ನೇ ಆಧರಿಸುವವರು ಯಾರೂ ಇಲ್ಲದಾಗ ನಾನ್ಯಾರಿಗೆ ಸಹಕರಿಸಲಿ? ಹೆಚ್ಚೆಂದರೆ ಮೂಲಧನ ಪೂರ್‍ಣ ಪಾವತಿಸಿದ್ದರೆ ಬಡ್ಡಿ ಸೋಡಿ ಬಿಡಬಹುದಿತ್ತೇನೊ!
ಅಂದುಕೊಂಡಂತೆ ಲಾಯರು ನೋಟೀಸು ಕೊಟ್ಟರೆ ಇಬ್ಬರೂ ಕಾಟಾಚಾರಕ್ಕೆ ಉತ್ತರ ಕಳಿಸಿದ್ದರು. ಕಾಲಮಿತಿ ಕಾಯ್ದೆಯ ಅನ್ವಯ ಗಡುವು ತೀರುತ್ತಾ ಬಂದಿದ್ದರಿಂದ ಇನ್ನು ಕಾಯುವುದು ದಡ್ಡತನ ಆದೀತು ಎಂಬ ಅರಿವಿನಿಂದ ವಾಯಿದೆಯ ಕೊನೆಯ ದಿನ ಗೋವಿಂದಪ್ಪನ ಆಸ್ತಿಯ ವಾರಸುದಾರರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ-
ಪರಿಣತಿ ಹೊಂದಿದ ಲೀಡಿಂಗ ವಕೀಲ ವೆಂಕಟಾಚಲಂ ಅವರನ್ನು ನಿಯೋಜಿಸಿಕೊಂಡಿದ್ದೆ. ಅವರ ತಂದೆ ನಾಲ್ಕು ತೋಳಿನ ಲಾಯರಾಗಿದ್ದವರು. ಅಂಥವರ ಮಗನಾಗಿ ವೆಂಕಟಾಚಲಂ ಅರವತ್ತು ದಾಟಿದ, ಎತ್ತರದ ನಿಲುವಿನ ಗೌರವ ವರ್‍ಣ: ಅದಕ್ಕೊಪ್ಪುವ ಕರಿಕೋಟಿನಲ್ಲಿ ಎದ್ದು ಕಾಣುತ್ತಿದ್ದರು. ನೋಡಿದವರು ಬಗ್ಗಿ ನಮಸ್ಕರಿಸಬೇಕು ಎನ್ನುವ ವ್ಯಕ್ತಿತ್ವದಲ್ಲಿ ಕಾನೂನನ್ನೇ ಮೂಲವಾಗಿಟ್ಟುಕೊಂಡ ಪಂಡಿತರವರು. ವಾದಿ-ಪ್ರತಿವಾದಿ ಯಾರನ್ನೇ ವಹಿಸಿದರೂ ಶಿಫಾರಸು ಗೊತ್ತುಮಾಡಿಕೊಳ್ಳುವ ಮೊದಲು ಅವರು ಒದಗಿಸುವ ಎವಿಡೆನ್ಸ ಪರಿಶೀಲಿಸಿ ಕೇಸಿನ ನ್ಯಾಯ ನಿರ್ಣಯದ ಸಾಧ್ಯಾಸಾಧ್ಯತೆಯ ನಿಷ್ಕರ್ಷೆ ಅವರಿಗೆ ಪ್ರಮುಖವಾಗುತ್ತದೆ. ಹಾಗೆ ಸಾಕ್ಷಿ ಹೊಂದಿದ ನನ್ನ ಪ್ರಾಮಿಸರಿ ನೋಟನ್ನು ಪ್ರಮಾಣಿಸಿ ನೋಡಿ, ಇದು ‘ಪರಿಹಾರ ಯೋಗ್ಯ’ ಎಂಬುದನ್ನು ಮನದಟ್ಟು ಮಾಡಿಕೊಂಡು ದಾವೆಯನ್ನು ನ್ಯಾಯಾಲಯದಲ್ಲಿ ದಾಖಲುಗೊಳಿಸಿದ್ದರು.
ಸದರಿ ಖಟ್ಲೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ನಾನು ಈ ನ್ಯಾಯಾಲಯದಲ್ಲಿ ಹಾಜರಿರುವುದು.
ಕೆಲವೇ ದಿನಗಳಲ್ಲಿ ಅಣ್ಣ ತಮ್ಮಂದಿರಿಬ್ಬರಿಗೂ ಸಮನ್ಸ್ ಜಾರಿಯಾಗಿತ್ತು. ನಿಗದಿತ ತಾರೀಖಿಗೆ ಹಾಜರಾಗುವ ಮೊದಲು ರಾಮಪ್ಪ ನೇಮಿಸಿಕೊಂಡಿದ್ದ ಡಿಫೆನ್ಸ ಲಾಯರಿನ ಮಧ್ಯಸ್ಥಿಕೆಯಿಂದ ಲಕ್ಷ್ಮಪ್ಪನಿಗೂ ಅವರೇ ವಕಾಲತ್ತು ನಡೆಸುವಂತಾಗಿತ್ತು.
ಅಪ್ಪನ ಋಣ ಸಂದಾಯ ಮಾಡುವುದು ಒಂದು ಯೋಗಾನುಯೋಗ, ಅದು ಬಿಟ್ಟು ಈ ಜನಗಳು ಹೀಗೆ ಸಾಲವನ್ನು ಎತ್ತಿ ಹಾಕಲೋಸುಗ ಲಾಯರು ಇಡುವಷ್ಟು ಮುಂದುವರೀಲಿಕ್ಕಿಲ್ಲ ಅಂದುಕೊಂಡದ್ದು ಸುಳ್ಳಾಗಿ ಜಿಗುಪ್ಸೆ ಮೂಡಿಸಿತ್ತು. ಹೇಗೂ ಅಣ್ಣ ತಮ್ಮರ ಮಧ್ಯೆ ಮಾತುಕತೆಯಿಲ್ಲ. ಕೋರ್‍ಟಿನಲ್ಲಿ ನನಗೆ ಜಯ ಕಟ್ಟಿಟ್ಟದ್ದು ಎಂಬ ಹುಮ್ಮಸ್ಸಿನಲ್ಲಿ ಇದ್ದಾಗ ಒಬ್ಬರೇ ಲಾಯರನ್ನು ನೇಮಿಸಿಕೊಂಡದ್ದು ಇನ್ನಷ್ಟು ಕಸಿವಿಸಿಗೆ ಹೇತುವಾಗಿತ್ತು.
ವಿಚಾರಣೆಯ ಮೊದಲ ದಿನ, ಜಿಲ್ಲಾ ಕೇಂದ್ರದಲ್ಲಿ ಎಸೈಯೊಬ್ಬ ವಕೀಲನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದರ ನಿಮಿತ್ತ ವಕೀಲ ಸಂಘದ ಸದಸ್ಯರೆಲ್ಲ ನ್ಯಾಯ ಬೇಡಿ ನಿರಶನ ಹೂಡಿದ್ದರು. ಬಹಳಷ್ಟು ಕಕ್ಷಿಗಾರರು ವಕೀಲರುಗಳ ದಾಕ್ಷಿಣ್ಯಕ್ಕೆ ಒತ್ತಾಸೆಯಾಗಿ ನಿಂತುಕೊಂಡಿದ್ದು ಮೇಲುನೋಟಕ್ಕೆ ಕಾಣಿಸುತ್ತಿತ್ತು. ಅಂದು ಮತ್ತೆ ಕೋರ್‍ಟ ಕೂರುವಂತೆ ಕಾಣಲಿಲ್ಲ. ‘ಹತ್ತಿ ತೂಗುವಲ್ಲಿ ನೊಣಕ್ಕೇನು ಕೆಲಸ’ ಎಂದುಕೊಂಡ ನಾನು ಅಲ್ಲಿಂದ ಮೆತ್ತಗೆ ಕಾಲುಕಿತ್ತಿದ್ದೆ.
ಎರಡನೇ ವಿಚಾರಣೆ ಕರೆ ಬಂದಾಗ ನ್ಯಾಯಾಧೀಶರ ಸಮ್ಮುಖದಲ್ಲಿ ವಂದಿಸುತ್ತ ಸಾಕ್ಷಿ ಕಟಕಟೆಯಲ್ಲಿ ನಿಂತುಕೊಂಡಿದ್ದೆ. ತಲೆ ಬಗ್ಗಿಸಿ ಅವರಿಗೆ ಗೌರವ ನೀಡುತ್ತಾ ನನ್ನ ತಗಾದೆಯನ್ನು ಸಾಧ್ಯಂತ ಹೇಳಿದ್ದೆ. ಎಲ್ಲವನ್ನೂ ದಾಖಲಿಸಿಕೊಂಡ ನಂತರ ಆಲಿಕೆಯನ್ನು ಮುಂದೂಡಲಾಗಿತ್ತು.
ಅದರ ಮರುವಾರವೇ ಪ್ರತಿವಾದಿಗಳ ಅಹವಾಲು ಇತ್ತು. ಅವರಿಂದ ಏನು ಬಂದೀತು ಎಂಬ ಕುತೂಹಲದಿಂದ ನಾನೂ ಆ ಬೆಳಿಗ್ಗೆ ಹತ್ತಕ್ಕೆ ಹಾಜರಾಗಿದ್ದೆ.
ಕಕ್ಷಿದಾರನ ಅನುಕೂಲಕ್ಕೆ ತಕ್ಕಂತೆ ಕಾಲಕಾಲಕ್ಕೆ ಖಟ್ಲೆಯ ವಿಚಾರಣೆಯನ್ನು ಮುಂದೂಡುವುದು ಸಾಮಾನ್ಯ. ಆದರೆ ನನ್ನ ಪ್ರತಿವಾದಿ ಲಾಯರು ತಮ್ಮ ಅಹವಾಲು ಕೇಳಿಸುವ ಮೊದಲೇ ವಿಚಾರಣೆಯನ್ನು ವಿನಾಕಾರಣ ಮುಂದಕ್ಕೆ ಹಾಕಿಸಿದ್ದರು.
ಹೀಗೆ ನ್ಯಾಯ ವಿತರಣೆ ವಿಳಂಬವಾದಂತೆಲ್ಲ ಬ್ರಿಟಿಷ್ ಪರಂಪರೆಯ ಕಾನೂನು ಕಟ್ಟಳೆಗಳಿಂದ ನ್ಯಾಯದ ನಿರಾಕರಣೆ ಆಗವುದೇ ಹೆಚ್ಚು. ಸಾಕ್ಷಿಗಳು ಸತ್ತರಂತೂ ನ್ಯಾಯ ದಕ್ಕುವುದು ಮರೀಚಿಕೆಯಾಗಿಬಿಡುತ್ತದೆ. ಸಾಕ್ಷಿಯ ಮೇಲೆಯೇ ನಿಂತಂತಹ ದಾವೆಯಲ್ಲಿ ನ್ಯಾಯದ ತ್ವರಿತ ವಿಲೇವಾರಿಯು ಕಕ್ಷಿಗಳಿಗೂ, ವಕೀಲರಿಗೂ ಪ್ರಮುಖ ವಿಷಯವಾಗಬೇಕು. ಆದರೆ ಈಗೀಗ ಕೆಲವು ವಕೀಲರ ಕಾನೂನು ತಿಳುವಳಿಕೆಯಲ್ಲಿನ ಬೇಜವಾಬ್ದಾರಿತನದಿಂದ ಕೇಸನ್ನು ಮುಂದೂಡುತ್ತಾ ಕಂಡಾಗಲೆಲ್ಲಾ ಹಣಕೀಳುವ ಕ್ಷುಲ್ಲಕತನ ಮಾಮೂಲಾಗಿ ಹೋಗಿದೆ ಎಂದುಕೊಳ್ಳುತ್ತಾ ಆವರಣದಿಂದ ಹೊರನಡೆದಿದ್ದೆ.
ಮತ್ತೊಂದು ಕರೆ ಬಂದು ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಅವರು ಕಟ್ಟಿದ ಕತೆ ಬೇರೆಯೇ ಆಗಿತ್ತು. ಲಾಯರು ಹೇಳಿಕೊಟ್ಟ ಗಿಳಿಪಾಠ ಒಪ್ಪಿಸಿದ್ದರು.
ತಮ್ಮಪ್ಪ ಸಣ್ಣ ಫೈನಾನ್ಸ ಕಂಪನಿ ಮ್ಯಾನೇಜರ್ ಆಗಿದ್ದಾತ. ಅವಗೆ ಸಾಲದ ಹಣದ ಅವಶ್ಯಕತೆಯೇ ಇರಲಿಲ್ಲ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವೇಷ ಕಟ್ಟುತ್ತಿದ್ದಾರೆ. ಇದರಲ್ಲಿ ವಕೀಲರೂ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಬ್ಯಾಂಕಿನಲ್ಲಿ ಕ್ಯಾಶಿಯರ್ ಆಗಿದ್ದರೆ ಅವನು ಎಣಿಸುವ ಹಣವೆಲ್ಲ ಅವನದೇ ಎಂಬಂತಿತ್ತು, ಅವರ ಧೋರಣೆ. ಅದೂ ಅಲ್ಲದೇ ‘ಬಿಕ್ಕಲಂ’ ಇರೋಕಡೆ ಖುದ್ದು ಬರಹವೆಂದಿದ್ದರೂ ಅಪ್ಪ ಮಾಡಿದ ಸಹಿಯನ್ನು ಅಲ್ಲಗಳೆದದ್ದು ನನಗೆ ರೇಜಿಗೆ ಹುಟ್ಟಿಸಿಬಿಟ್ಟಿತ್ತು. ಇಬ್ಬರೂ ಸೇರಿ ಗೋವಿಂದಪ್ಪ ಅನ್ನೋನು ತಮ್ಮಪ್ಪನೇ ಅಲ್ಲ ಎಂಬ ಹಸೀ ಸುಳ್ಳನ್ನು ದಾಖಲಿಸಿದ್ದರೂ ನನಗಷ್ಟು ಕಿರಿಕಿರಿಯ ವಿಷಯ ಆಗುತ್ತಿರಲಿಲ್ಲವೇನೋ! ಯಾವುದೇ ಅಳುಕಿಲ್ಲದೆ, ಸಲ್ಲದ ಮಾತುಗಳನ್ನು ಕೋರ್ಟಿನಲ್ಲಿ ಟಾಂಟಾಂ ಹೊಡೆದದ್ದು ನಿಜಕ್ಕೂ ಸಾಮಾಜಿಕ ಮೌಲ್ಯಗಳು ಅಧೋಗತಿಗೆ ಇಳಿದಿವೆ ಎಂಬುದನ್ನು ಎತ್ತಿ ತೋರಿಸಿತ್ತು.
ಇಷ್ಟರ ನಡುವೆ ನನ್ನ ಕಡೆಯ ಸಾಕ್ಷಿ ನನ್ನ ಪರವಾಗಿ ಹೇಳಿಕೆ ನೀಡಿದ್ದು ಕೇಸಿಗೆ ಬಲವಾದ ರುಜುವಾತು ಸಿಕ್ಕಂತಾಗಿತ್ತು.
ಇಷ್ಟೆಲ್ಲಾ ಆಗಿ ವರುಷವೇ ಗತಿಸಿದ್ದರೂ, ನಾನು ಇತಿಹಾಸದ ವಿದ್ಯಾರ್ಥಿಯಾಗಿದ್ದುದರಿಂದಲೋ ಏನೋ ಹಳೆಯ ನೆನಪುಗಳೆಲ್ಲಾ ಇದ್ದಕ್ಕಿದ್ದಂತೆ ಆಕಾರ ಪಡೆದುಕೊಂಡು ಹೀಗೆ ನನ್ನನ್ನು ಆಗಾಗ ಕಾಡುವುದು ಇದೆ.
***
ಇಂದು ತೀರ್‍ಪು ಕೊಡುವವರಿದ್ದರು. ಬೆಳಗಿನಿಂದ ನ್ಯಾಯದೇವತೆಯ ಬಾಗಿಲಲ್ಲಿ ನ್ಯಾಯಕ್ಕಾಗಿ ಕಾದು ನಿಂತವರಲ್ಲಿ ನಾನೂ ಒಬ್ಬನಾಗಿದ್ದೆ.
ದಫೇದಾರನ ಪ್ರತಿ ಕರೆಗೂ ಕಕ್ಷಿದಾರರೊಮ್ಮೆ ಕಿವಿ ನಿಮಿರಿಸಿ, ತಮ್ಮದು ಯಾವಾಗ ಮುಗಿದೀತು ಎಂಬ ಆತಂಕದೊಡನೆ ಮತ್ತೆ ಮತ್ತೆ ಆಕಳಿಸುತ್ತಾ, ಅಬ್ಬೇಪಾರಿಗಳ ತರ ಮುಖ ಬಾಡಿಸಿಕೊಳ್ಳುತ್ತಿದ್ದರು. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಹಲವರು ಅವರಿಗರಿವಿಲ್ಲದೆಯೇ ನೆಳಲು ಸರಿದೆಡೆ ಸರಿದು ಬೇಕೋ ಬೇಡೋ ಎಂಬಂತೆ ಮಾತು ಹಚ್ಚಿದ್ದರು.
ಬ್ರಿಟಿಷ್ ನಿರ್‍ಮಾಣದ ಭದ್ರಗೋಡೆಯ ಹೊರ ಆವರಣದ ತುಂಬೆಲ್ಲಾ ಕಣ್ಕಪ್ಪಡಿಗಳ ಉಚ್ಚೆಯ ನಾತದ ನಡುವೆ ನನ್ನಲ್ಲಿನ ಮೌನದ ಮಾತುಗಳೇ ಈ ತನಕ ಚೌಕಟ್ಟಿನಲ್ಲಿ ನಿಲ್ಲಲು ಹವಣಿಸಿದ್ದು…
ಮಾತಿಗೆ ಸಿಗಬಹುದಾದವರನ್ನು ಲಕ್ಷಿಸುವಷ್ಟೂ ಇಲ್ಲದ ವ್ಯವಧಾನದ ಸಂದಿಯಲ್ಲಿ ಜಯ ನನ್ನದಾದೀತೆ ಎಂಬ ಶಂಕೆ ಯಾಕೆ ತೂರಿಕೊಂಡಿತು. ನನ್ನ ಮನಸ್ಸು ದೇಹಗಳೇಕೆ ಇಂದು ಇಷ್ಟೊಂದು ತಹತಹಿಸುತ್ತಿವೆ ಎಂದು ಕೇಳಿಕೊಂಡ ಪ್ರಶ್ನೆಗೆ ಉತ್ತರ ಸಿಗದಾದಾಗ ನನ್ನೊಳಗಿನ ಚಡಪಡಿಕೆ ಮಿತಿಮೀರಿತು. ಇಕ್ಕಟ್ಟಿನಲ್ಲಿ ನನ್ನ ಪರ ತೀರ್‍ಪು ಬೀಳಲಿ ಎಂದು ಎದೆ ಅನಗತ್ಯವಾಗಿ ಮೊರೆಯತೊಡಗಿತ್ತು.
ತಲೆ ಎತ್ತಿ ನ್ಯಾಯಾಧೀಶರತ್ತ ನೋಟ ಬೀರಿದೆ. ಅವರು ತೀರ್‍ಪು ಓದುವುದರಲ್ಲಿ ನಿರತರಾಗಿದ್ದರು. ಅವರ ಬಕ್ಕತಲೆಯ ಮರೆಯಿಂದಲೆಲ್ಲೋ ಅಕ್ಷರಗಳು ಮಾತಾಗುತ್ತಾ ಹೊರಟಿದ್ದವು. ಅವರು ಓದುತ್ತಾ ಹೋದಂತೆಲ್ಲಾ ನನ್ನ ಎಣಿಕೆ ತಲೆಕೆಳಗಾಗುತ್ತ ಹೋಯಿತು. ಅನಪೇಕ್ಷಿತ ಪದಗಳಿಗೆ ದಿಗಿಲುಬಿದ್ದ ಮನ ರಕ್ತದ ಒತ್ತಡವನ್ನು ಏರಿಸತೊಡಗಿತ್ತು. ನಿರೀಕ್ಷೆಯ ನೋಟವು ಆವೇಶಕ್ಕೆ ಒಳಗಾಗಿ ಒಮ್ಮೆಲೆ ಶೂನ್ಯಕೆ ತಿರುಗಿತು.
ತೀರ್‍ಪು ಅಷ್ಟಷ್ಟೇ ನನ್ನನ್ನು ಆಕ್ರಮಿಸುತ್ತಿರುವಂತೆ ಭಾಸವಾಯಿತು. ಭಾವ ಪರವಶದಲ್ಲಿ ಇದ್ದಬದ್ದ ಸೈರಣಿಯೆಲ್ಲಾ ಕದಡಿ ಅವಮಾನವಾದಂತೆನಿಸಿತು. ಜೊತೆಯಲ್ಲಿ ಹುಟ್ಟಿದ ಅಸಹನೆಗೆ ಮನಸ್ಸು ಮತ್ತೆ ಮತ್ತೆ ಕುದಿಯತೊಡಗಿತ್ತು.
ನನ್ನ ವಕೀಲರೂ ಮುಜುಗರದಿಂದ ಕನ್ನಡಕ ಸರಿಸುತ್ತಾ ತಲೆ ತಗ್ಗಿಸಿಕೊಂಡರು. ಅರೆಕ್ಷಣ ವಿಚಲಿತರಾದಂತೆ ಕಂಡುಬಂದರು.
ಅತ್ತ, ಪ್ರತಿವಾದಿಗಳ ಮುಖದಲ್ಲಿ ಗೆಲುವಿನ ನಗುಮೂಡಿತ್ತು. ಅದವರ ಹೃದಯ ಅರಳಿಸಿರಬೇಕು. ಮೆತ್ತಗೆ ನನ್ನತ್ತ ಹೊರಳಿದ ಅವರ ಕಂಗಳಲ್ಲಿ ವ್ಯಂಗ್ಯ ಮಿಳಿತಗೊಂಡಿದ್ದನ್ನು ಸ್ಪಷ್ಟವಾಗಿ ಗುರುತಿಸಿದೆ.
ಆ ಕ್ಷಣದ ಪರಿಮಿತಿಯಲ್ಲಿ ಮನದಲ್ಲಿ ಮೂಡಿದ ಹತಾಶೆಯನ್ನು ಮೂಡಿದಂತೆಯೇ ಹತೋಟಿಗೆ ತಂದುಕೊಂಡೆ. ಕಾನೂನಿನಡಿ ಸಹಜನ್ಯಾಯ ದಕ್ಕದಾದಾಗ ಅರೆಗಳಿಗೆ ಆ ಬಗೆಗೆ ಇದ್ದಂಥ ನನ್ನ ವೈಯಕ್ತಿಕ ಆಸ್ಥೆ ಕಮರಿಹೋಯಿತು. ಆದರೂ, ಆಸ್ಮಿಕವೆಂಬಂತೆ ಹೊರಬಂದ ತೀರ್‍ಪಿಗೆ ತಲೆಬಾಗಿಸಿದೆ.
ಅಲ್ಲಿ ಉದ್ಭವಿಸಿದ ಅಸಹಾಯಕತೆಯು ಅನಿವಾರ್‍ಯವಾಗಿ ಖಿನ್ನತೆಗೆ ದಾರಿಮಾಡಿಕೊಟ್ಟಿತು ಎಂದು ಅಲಾಯ್ದ ಹೇಳಬೇಕಾಗಿರಲಿಲ್ಲ. ನೆಲಕಚ್ಚಿದ ಮನಸ್ಸಿನಿಂದ ಆವರಣ ದಾಟಿ ಹೊರಗೆ ಬಂದೆ.
ಇಂತಹ ಪ್ರಕರಣಗಳನ್ನು ಹಿಂದೆ ಆಯಾ ಊರಿನ ಪಂಚರ ಸಮಕ್ಷಮ ಬಗೆಹರಿಸಿಕೊಳ್ಳುತ್ತಿದ್ದರು. ಸರಪಂಚರಿಗೆ ಎರಡೂ ಪಕ್ಷದವರು ಪರಿಚಿತರಿದ್ದು, ಬಂಧುಬಾಂಧವರ ಮಧ್ಯೆ ಸುಳ್ಳು ಹೇಳುವ ಆರೋಪಿಗೆ ತಪ್ಪಿನ ಪ್ರಜ್ಞೆಯು ಆಸ್ಪದ ಕೊಡುವುದಿಲ್ಲ. ಹೀಗಾಗಿ ಸತ್ಯ ಸಲೀಸಾಗಿ ಬಯಲಾಗಿ ಬಿಡುತ್ತಿತ್ತು. ನ್ಯಾಯ ಸಮ್ಮತ ತೀರ್‍ಮಾನ ಸಿಗುತ್ತಿತ್ತು.
ಆದರೆ ಈಗಿನ ವ್ಯವಸ್ಥೆಯೇ ಆಧ್ವಾನ ಆಗಿಬಿಟ್ಟಿದೆ. ನ್ಯಾಯ-ಅನ್ಯಾಯ ನೋಡದೇ ಕೆಲವರು ಕಾನೂನು ರೀತ್ಯ ಆರೋಪಿಯನ್ನು ಸಮರ್‍ಥಿಸುವುದು ವಕೀಲರಾದ ತಮ್ಮ ಕರ್ತವ್ಯ ಎನ್ನುತ್ತಾ ಫೀಸಿಗಾಗಿ ಹುರುಳಿಲ್ಲದಿದ್ದರೂ ಜೊಳ್ಳುವಾದ ಮಂಡಿಸುತ್ತಾರೆ. ಕಕ್ಷಿಗಾರ ವಾದ ಮಾಡಲು ಹಣ ನೀಡುತ್ತಾನೆ. ಅವನಿಗಾಗಿ ವಾದ ಮಾಡಲೇಬೇಕು ಎನ್ನುವಲ್ಲಿ ಗೆದ್ದರೆ ಸರಿಯೇ ಸರಿ; ಸೋತರೂ ಹಣ ಕೀಳಲು ಇದೊಂದು ವೃತ್ತಿಯ ತಂತ್ರಗಾರಿಕೆ. ಹಾಗೆಯೇ ಸನ್ನಿಯೂ ಹೌದು! ಬಡಾಯಿ ಕೊಚ್ಚುವವರೇ ಜಯ ಲಭಿಸುವಲ್ಲಿ ಕಾಲವೇ ಆ ಟೊಳ್ಳುತನವನ್ನು ಬಯಲಿಗೆಳೆದು ನ್ಯಾಯವನ್ನು ಗೆಲ್ಲಿಸಬೇಕಾಗುತ್ತದೆ. ಅಂತೆಯೇ ಕೇವಲ ಒದಗಿಸಿದ ಸಾಕ್ಷಿಯ ಆಧಾರದಿಂದಲೇ ಅಪರಾಧಿ-ನಿರಪರಾಧಿ ಎಂದು ನಿರ್‍ಣಯಿಸುವುದು ನಿಜಕ್ಕೂ ಶ್ರಮದ ಕೆಲಸ ಅನಿಸಿತು. ನನಗಂತೂ ಈ ವ್ಯವಸ್ಥೆ ಈವಾಗ್ಲೂ ಅರ್ಥ ಆಗಿಲ್ಲ. ಮುಂದಕೂ ಅರ್ಥ ಆಗೋದಲ್ಲ ಅನಿಸಿ ಕೈಕೈ ಹಿಚುಕಿಕೊಳ್ಳುವಂತಾಯಿತು.
ಕೆಂಡ ತುಳಿದಂತಹ ಚಡಪಡಿಕೆಗೆ ಸುಸ್ತಾಗಿ ಹೋಗಿತ್ತು. ಅದೇ ಆಗ ಉತ್ತರಾಯಣ ಪ್ರಾರಂಭವಾಗಿತ್ತಷ್ಟೇ. ಪಶ್ಚಿಮ ದಿಕ್ಕಿನಲ್ಲಿ ಉತ್ತರದ ಕಡೆ ವಾಲಿದ ಸೂರ್ಯ ಸದ್ದಿಲ್ಲದೇ ಮುಳುಗತೊಡಗಿದ್ದ. ನಾನು ಮನೆ ಸೇರುವಾಗ ಅಂದಿನ ಸಂಜೆ ಮುಗಿದಿತ್ತು. ಸೋಲಿನ ನೋವು ಮತ್ತೆ ಕಾಣಿಸಿಕೊಂಡಿತ್ತು.
* * *
ಇನ್ನೊಬ್ಬರ ಪರವಾಗಿ ವಾದಿಸುವ ವೆಂಕಟಾಚಲಂರಿಗೆ ನೂರೆಂಟು ಕೇಸುಗಳು. ಹಗಲಿಡೀ ನ್ಯಾಯಾಲಯದಲ್ಲಿ ಏಗುವುದು; ರಾತ್ರಿಯೆಲ್ಲಾ ಕಾನೂನು ಪುಸ್ತಕಗಳ ಮೇಲೆ ನಿಗಾ ಇಟ್ಟ ಬದುಕು. ಮಂದೀ ತಲೆನೋವನ್ನು ತಮ್ಮ ತಲೇಲಿ ತುಂಬಿಕೊಂಡು, ಕಟಾಕಟೀ ನಿಲ್ಲಲಾರದ ತಕ್ಕಡಿ ಮುಳ್ಳಿನ ಹಾಗೆ ನಿರಂತರ ಹೊಯ್ದಾಟ, ನುರಿತ ವಕೀಲರಾಗಿಯೂ ನನ್ನ ಮಟ್ಟಿಗೆ ಅಪ್ರಯೋಜಕರಾದರಲ್ಲ ಎಂಬುದು ಬೇಜಾನ್ ಬೇಸರ ಹುಟ್ಟಿಸಿತು.
ಎಷ್ಟೇ ಕೆಲಸದ ವಜನಿದ್ದರೂ ನ್ಯಾಯಾಧೀಶರ ಮನಸ್ಸಿಗೆ ನಾಟುವಂತೆ ಚಾಣಾಕ್ಷತನದಿಂದ ವಾದಿಸುವುದು ಮುಖ್ಯವಾಗುತ್ತದಲ್ಲವೇ?
ಹಾಗೊಮ್ಮೆ ಕೆದಕಿ ನೋಡಿದಾಗ ತೀರ್ಪಿನ ಸಂದರ್ಭವು ಅಸಹಜ ಅನಿಸುವುದಿಲ್ಲ. ಗೋವಿಂದಪ್ಪ ಬರೆದುಕೊಟ್ಟ ಠಸ್ಸೆಪತ್ರಕ್ಕೆ ಮುಂದಿನ ದಿನಾಂಕ ಹಚ್ಚಿದ್ದೇ ಪ್ರಮಾದವಾಗಿ, ಅಂದೇ ಗೋವಿಂದಪ್ಪನ ಮಗಳ ಮದುವೆ ನಡೆದಿದೆ. ಇದರಿಂದ ಪ್ರಾಥಮಿಕ ಸಾಕ್ಷಿಗಳು ನಿಸ್ಸಂಶಯವಾಗಿ ಅಪಾರ್ಥಕ್ಕೆ ಎಡೆಗೊಟ್ಟಿವೆ.
ಪ್ರತಿಪಕ್ಷದವರು ಲಗ್ನ ಪತ್ರಿಕೆ, ಮತ್ತು ಮದುವೆ ಫೋಟೋ ಸಾದರಪಡಿಸಿ ಸಾಕ್ಷೀಕರಿಸಿದ್ದರು. ‘ಮದುವೆ ನಡೆದದ್ದು ಇಲ್ಲಿಂದ ನೂರೈವತ್ತು ಕಿ.ಮೀ. ದೂರದ ಮೀಸಲಾಪುರದಲ್ಲಿ. ಮದುವೆ ಮುಗಿಸಿ ಮಿಡ್ನಾಪುರಕ್ಕೆ ವಾಪಾಸು ಬರುವಾಗ ಮಧ್ಯ ರಾತ್ರಿ ಕಳೆದಿತ್ತು. ಸಾಲಾ ತಗೊಂಡ ಆರೋಪದ ದಿನ ನಾವುಗಳು ಯಾರೂ ಈ ಊರಲ್ಲಿ ಇರದಿದ್ದ ಮೇಲೆ ಸಾಲಾ ತಗೊಳ್ಳೋ ಪ್ರಶ್ನೆ ಎಲ್ಲಿಂದ ಬರುತ್ತೆ ಹೇಳಿ’ ಎಂಬ ಪಾಟೀ-ಸವಾಲಿಗೆ ನಮ್ಮ ವಕೀಲರಲ್ಲಿ ಉತ್ತರವಿರಲಿಲ್ಲ.
ಅದಕ್ಕಿದ್ದೇ, ನ್ಯಾಯಾದಾನದಲ್ಲಿ ನಂಬಲಾಗದ ದ್ವಂದ್ವ ಅನೈಚ್ಛಿಕವಾಗಿ ಕಾಣಿಸಿಕೊಂಡಿದೆ. ಅಲ್ಲದೇ ಎದುರು ವಕಾಲತ್ತಿನಲ್ಲಿ ಯಾವುದೇ ಒತ್ತಡಗಳಿಲ್ಲದ ಮಾತಿನ ಮಂಟಪ ಕಟ್ಟುವಲ್ಲಿನ ಆತ್ಮ ವಿಶ್ವಾಸವನ್ನು ಗುರುತಿಸಿಯೇ ಜಜ್ ಬೆಕ್ಕಸ ಬೆರಗಾಗಿರಬೇಕು… ಎಂಬೆಲ್ಲಾ ಆವೇಶದ ವಿಚಾರಗಳು ಮನದ ಮೂಲೆಯಲ್ಲಿ ರಿಂಗಣಿಸತೊಡಗಿದವು.
ಇಷ್ಟೆಲ್ಲಾ ನಕಾರಾತ್ಮಕ ಅಂಶಗಳನ್ನು ಅಂದಾಜಿಸದೇ ನನ್ನನ್ನು ನಾನು ಹಳ್ಳಕ್ಕೆ ದೂಡಿಕೊಂಡಂತಾಯಿತೇ ಎಂದು ಪರಿತಪಿಸಿದೆ. ನಾನೇನು ಬಡ್ಡಿ ವೈವಾಟು ನಡೆಸುವ ಮಾರ್‍ವಾಡಿಯಲ್ಲ. ಅಪ್ಪಿತಪ್ಪಿ ಸಾಲಾಕೊಟ್ಟು ಕೋಡಂಗಿಯಾಗಿರುವ ಬವಣೆ ಇದೀಗ ಲೆಕ್ಕಕ್ಕೆ ಸಿಕ್ಕು ಹಾಗಾಗಿದೆ. ನಿರೀಕ್ಷಿಸಿದ್ದು ಹುಸಿಯಾದಾಗ ವೆಂಕಟಾಚಲಂ ಅವರ ಅವಜ್ಞೆಗೆ ಕೇಸು ಗುರಿಯಾಯಿತೇ ಎಂಬ ಸಂಶಯ ಮೂಡಿ, ಈ ವೈಫಲ್ಯದ ಸಂಪೂರ್‍ಣ ಹೊಣೆಗಾರಿಕೆಯನ್ನು ಅವರ ಮೇಲೆ ಹೊರಿಸಲು ನಿರ್‍ಧರಿಸಿದೆ.
***
ಅತ್ತ ಕೇಸು ನೆಗೆದು ಬಿತ್ತು. ಇತ್ತ ‘ಗಾಯದ ಮೇಲೆ ಬರೆ ಇಟ್ಟಂತೆ’ ಗಂಟೂ ಕರಗಿ ಹೋಯಿತು.
ಹಣವನ್ನು ಎತ್ತಿ ಹಾಕುವ ಸಂಚಿನಲ್ಲಿ ಅಪರಾಧಿಯಾಗಿರಬೇಕಾಗಿದ್ದ ರಾಮಪ್ಪ ಎದೆ ತಟ್ಟಿಕೊಂಡು ‘ರಾಯರನ್ನು ಸೋಲಿಸಿ ಬಿಟ್ಟೆ’ ಎಂದು ನನ್ನ ಮಾನ ಹರಾಜು ಹಾಕುತ್ತ ಊರಿಡೀ ತಿರುಗಾಡತೊಡಗಿದ್ದನು. ಇದರಿಂದ ಮಾನನಷ್ಟವಾಯಿತೆಂದು ಹಣೆಗೆ ಕೈ ಹಚ್ಚಿ ಕೂಡುವ ಸಮಯವಿದಾಗಿರಲಿಲ್ಲ. ಬೆನ್ನ ಹಿಂದಿನ ಮಾತುಗಳು ಮುಜುಗರ ತರುವುದರ ಜೊತೆಗೆ ನನ್ನನ್ನು ಹುರಿಗೊಳ್ಳುವಂತೆ ಮಾಡಿತ್ತು. ಈ ಅಪಾತ್ರರಿಗೆ ದಯೆ ಸಲ್ಲದು ಎಂಬ ನಿರ್‍ಧಾರದಿಂದ ಉಂಟಾದ ಉದ್ರೇಕಕ್ಕೆ ನನ್ನನ್ನು ದ್ವೇಷದ ನೆಳಲು ಆವರಿಸಿತು. ಎಂದೂ ಯಾರನ್ನೂ ಸೇಡಿನ ಭಾವನೆಯಿಂದ ನೋಡಿರದ ನನ್ನಲ್ಲಿ ಎಂದಿದ್ದರೂ ಸತ್ಯವನ್ನು ದಿಟಪಡಿಸಲೇಬೇಕೆಂಬ ಹಠ ಮೂಡಿತು. ಸೋಲನ್ನು ಅನಾಯಾಸ ಒಪ್ಪಲಾರದೇ ಅದನ್ನು ಛಾಲೆಂಜಾಗಿ ತೆಗೆದುಕೊಂಡೆನು. ನಿರ್‍ದೋಷಿ ಅನಿಸಿಕೊಳ್ಳಬೇಕೆಂಬುದಕ್ಕಿಂತ ಹೆಚ್ಚಿಗೆ ದೊಡ್ಡ ಮೊತ್ತದ ಅಸಲು ನನ್ನ ಖಾಲಿ ಕೈಗೆ ಆಸರೆಯಾದೀತು ಎಂಬುದು ಅದರ ಹಿಂದಿತ್ತು. ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಬೇರೆಲ್ಲಾ ಏರಿಳಿತಗಳನ್ನು ಬದಿಗಿಟ್ಟು, ಕೇವಲ ಹಣದ ತಗಾದೆಗಾಗಿ ಅನಿವಾರ್‍ಯವಾಗಿ ಮೇಲ್ಮನವಿಯ ವೇದಿಕೆಯನ್ನು ಬಳಸಲು ನಿರ್‍ಧರಿಸಿದೆ.
ಹಣಕ್ಕೆ ಬಡ್ಡಿ ತೆಗೆದುಕೊಳ್ಳುವುದೇ ಅನ್ಯಾಯ. ಅಂಥಾದ್ದರಲ್ಲಿ ‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ’ ಎಂಬಂತೆ ಆದೇಶದ ವಿಮರ್ಶೆಗೆ ಹೊರಟಿರುವುದು ತಪ್ಪಾಗಲಿಕ್ಕಿಲ್ಲವೇ? ಇಲ್ಲ ಇಲ್ಲ. ಆತ್ಮಸಾಕ್ಷಿಗೆ ಕೊಡಲಿ ಇಡಹೊರಟವರ ಪರ ಬಿದ್ದ ತೀರ್‍ಪಿನ ಭಾರದಲ್ಲಿ ಹೂತು ಹೋಗಿರುವುದನ್ನು ನಿವೇದಿಸಿಕೊಳ್ಳಬೇಕಾದರೆ ವಿಚಾರಣಾ ನ್ಯಾಯಾಲಯದ ತೀರ್‍ಪನ್ನು ಪ್ರಶ್ನಿಸಲೇ ಬೇಕಲ್ಲ! ಅದಕ್ಕೇ ಆಪೀಲೆನ್ನುವುದು ಎಂದು ನನ್ನೊಳಗೆ ಗುದ್ದಾಟ ನಡೆಸುತ್ತಲೇ ವೆಂಕಟಾಚಲಂ ಛೇಂಬರಿನೊಳಗೆ ಕಾಲಿಟ್ಟಿದ್ದೆ. ಅವರು ಯಾವುದೋ ಕಡತದ ಪರಿಶೀಲನೆಯಲ್ಲಿದ್ದರು.
ನಮಸ್ಕರಿಸುತ್ತಾ ಎದುರು ಕುರ್‍ಚಿಯಲ್ಲಿ ಹಿಡಿಯಾಗಿ ಕೂತುಕೊಂಡೆ. ಅವರು ಹುಬ್ಬುಗಂಟಿಕ್ಕುತ್ತಾ ಏನು ಎಂಬಂತೆ ಸನ್ನೆಯಲ್ಲೇ ಕೇಳಿದರು.
ಈ ಮೊದಲೇ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್‍ಥ ಪಡಿಸಲು ಕೇಳಿಕೊಂಡಿದ್ದೆ. ‘ಪ್ರತಿವಾದಿ ಈಗಲೂ ಅಸಲು ಸಂದಾಯ ಮಾಡಿದಲ್ಲಿ ರಾಜಿ ಆದೀತು’ ಎಂದು ಬಾಲಿಶವಾಗಿ ಹೇಳಿದೆ. ‘ಕೇಸು ವಜಾ ಆಗಿರುವುದರಿಂದ ಸಂಧಾನದ ಎಲ್ಲಾ ಬಾಗಿಲುಗಳು ಮುಚ್ಚಿದಂತೆಯೇ’ ಎಂದವರು ಒಂದೆಡೆಯ ಕೆನ್ನೆ ಮುರಿದು ತಲೆಯಾಡಿಸಿ ಹೇಳಿದರು.
‘ಯಾವುದೇ ದೇಶದ ನ್ಯಾಯಿಕ ವ್ಯವಸ್ಥೆ ಕುಸಿದಾಗ ಸತ್ಯವಂತನು ಕ್ರಾಂತಿಕಾರಿಯಾಗುತ್ತಾನಂತೆ. ಹಾಗೆಯೇ ಆರೋಪದ ಸತ್ಯಾಸತ್ಯತೆ ನಿರ್‍ಣಯವಾಗದಾದಾಗಲೂ ಆಸಕ್ತರು ಕಾನೂನನ್ನು ಕೈಗೆ ತೆಗೆದುಕೊಳ್ಳೋ ಸಾಧ್ಯತೆಗಳಿವೆ ಎಂಬ ವಿಚಾರ ಮನದಲ್ಲಿ ಹಾದುಹೋದಾಗ ನಾನು
‘ನೋಡಿ ಸಾರ್, ಈಗ ಪ್ರತಿಪಕ್ಷದವರು ರಾಜೀ ಸೂತ್ರಕ್ಕೆ ಬದ್ಧರಾಗದಿದ್ದರೆ ನಾನಂತೂ ಪ್ರತಿಕಾರದ ಸಾಕಾರಮೂರ್‍ತಿಯಾಗೋದು ಖರೆ. ಆಮೇಲೆ ನಾನೇನು ಮಾಡತೀನಿ ನಂಗೇ ಗೊತ್ತಿಲ್ಲ’ ಎಂದು ಖಾರವಾಗಿ ಹೇಳುವಾಗ ನನಗೇ ಗೊತ್ತಿಲ್ಲದಂತೆ ಧ್ವನಿ ಒರಟಾಗಿತ್ತು.
ಬಲಾತ್ಕಾರ ಬಳಸದಿದ್ದರೆ ಹಣದ ವಿಚಾರದಲ್ಲಿ ಕೈ ಚೆಲ್ಲಬೇಕಾದೀತು ಎಂಬ ಅಂಜಿಕೆಗೆ ಮಾತುಗಳಲ್ಲಿ ಗುರುತಿಸಲಾಗದ ಲಘು ಕಂಪನವೂ ಸೇರಿತ್ತು… ಅನಂತರದಲ್ಲಿ ರೌಡಿ ಎಲಿಮೆಂಟನ್ನು ಬಳಸುವುದಾಗಿ ಧಮಕಿ ಸೇರಿಸಿದ್ದು ಕೇವಲ ಕುತ್ತಿಗೆ ಮೇಲಿನ ಮಾತಂತ ವಕೀಲರು ಗಮನಿಸಿದರೋ ಇಲ್ಲೋ ತಿಳೀಲಿಲ್ಲ.
ವೆಂಕಟಾಚಲ ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ ಮಾತಾಡತೊಡಗಿದರು.
‘ನೋಡಪಾ, ಯಾವುದೇ ಕಾರ್‍ಯಪ್ರವೃತ್ತರಾಗುವ ಮೊದಲು ಮಾನಸಿಕ ತಯಾರಿ ಅತ್ಯಾವಶ್ಯಕ. ಆದಿಲ್ಲದೇ ಇರುವ ನಡವಳಿಕೆಗಳಿಂದ ಔಚಿತ್ಯಕ್ಕೆ ಭಂಗ ತಂದುಕೊಂಡಂತೆ ಆಗುತ್ತದೆ.’ ‘ನೀನು ಯಾವುದಕ್ಕೂ ದುಡುಕಬಾರದು’ ಎಂದು ಹೇಳುವಾಗ ತಂದೆಯ ಸ್ಥಾನದಲ್ಲಿ ನಿಂತು ಹೇಳಿದಂತೆನಿಸಿತು.
“ಕಾನೂನು ಒಂದು ಕತ್ತೆ ಇದ್ದಂತೆ” ಎಂದು ಬಲ್ಲವರು ಹೇಳುತ್ತಾರೆ. ನಿನ್ನ ಕೇಸಿನಲ್ಲಿ ಸಾಕ್ಷೀಕರಿಸಿದ ನೋಟಿನ ಜೊತೆಗೆ ಗೋವಿಂದಪ್ಪನ ಹಸ್ತಾಕ್ಷರದ ನಕಲನ್ನು ತಾಳೆ ನೋಡಿಯೂ ಕೇಸು ಸೋಲುವುದೆಂದರೆ ಇಲ್ಲಿ ನ್ಯಾಯ ಸೋತಂತೆಯೇ ಸರಿ. ಇದೊಂದು ರಾಜಕೀಯ ಪ್ರೇರಿತ ತೀರ್‍ಪು ಅನ್ನೋದು ಮೇಲುನೋಟಕ್ಕೆ ಕಾಣುತ್ತದೆ. ಆತನೂ ಉಪ್ಪು ಹುಳಿ ತಿಂದವನಲ್ಲವೇ? ಎಷ್ಟೆಂದರೂ ಇಂಥ ವಿಚಾರಗಳನ್ನು ಕೆದಕೋಕೆ ಹೋಗಬಾರದು. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮೇಲೆ ಕುಳಿತಿರುವುದನ್ನು ನೀನು ನೋಡಿದ್ದೀ? ಅವರು ಹಾಗೆ ಕುಳಿತಿರುವುದಕ್ಕೆ ಒಂದು ಪ್ರತೀತಿ ಇದೆ. ನ್ಯಾಯ ಬೇಡಿ ಬಂದವರು ಅಳುಕಿಲ್ಲದೇ ತಲೆ ಎತ್ತಿ ತನ್ನ ಅಹವಾಲು ಹೇಳಿಕೊಂಡು ನ್ಯಾಯ ಬೇಡಬೇಕು. ಹಾಗೆಯೇ ಅಪರಾಧಿಯು ತನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡಲ್ಲಿ ಸಾಮಾನ್ಯವಾಗಿ ಪಾಪಪ್ರಜ್ಞೆ ಕೆಣಕಿ ತಲೆತಗ್ಗಿಸಿಕೊಳ್ಳುತ್ತಾನೆ. ನ್ಯಾಯ ಬೇಡಿ ಬಂದ ನೀನು ಅವತ್ತು ನ್ಯಾಯಾಧೀಶರಿಗೆ ಗೌರವ ಕೊಟ್ಟು ತಲೆತಗ್ಗಿಸಿ ನಿಂತಿದ್ದೆ. ಅಲ್ಲೇ ತಪ್ಪಾಗಿದ್ದು, ‘ನ್ಯಾಯ ಕೇಳುವಾತ ಅಳುಕಿಲ್ಲದೇ ತಲೆ ಎತ್ತಿ ಕೇಳುತ್ತಾನೆ’ ಎಂಬ ಪೂರ್‍ವಾಗ್ರಹಕ್ಕೆ ಆತುಕೊಂಡ ನ್ಯಾಯಾಧಿಪತಿಯಿಂದ ಏರುಪೇರಾದ ನ್ಯಾಯದಾನ ಹೊರಬಿದ್ದಿತು. ಅವರ ಮನಸಿನ ಸತ್ಯಾಸತ್ಯತೆ ಏನೇ ಇರಲಿ, ಇಲ್ಲಿ ಮೂಲ ಆರೋಪದ ನೈಜತೆಯನ್ನು ಒರೆಗೆ ಹಚ್ಚದಿರುವುದು ಮೇಲುನೋಟಕ್ಕೆ ಕಾಣಬರುತ್ತದೆ. ಅಂದರೂ, ನ್ಯಾಯಾಧೀಶರು ವಸ್ತುನಿಷ್ಟವಾಗಿ ಅಭ್ಯಸಿಸಲು ಸಾಧ್ಯವಾಗುವಂತೆ ನೋಡಿಕೊಳ್ಳದಿರುವುದು ನಮ್ಮ ಕಡೆಯಿಂದ ಆದ ತಪ್ಪು. ಇವೆಲ್ಲವನ್ನೂ ಮೀರಿ ಇದವರ ಪ್ರಾರಂಭಿಕ ನ್ಯಾಯ ನಿರ್‍ಣಯ! ಇಲ್ಲಿಯೇ ದೋಷ ನುಸುಳಿರುವ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ” ಎಂದು ವಕೀಲರು ಪರಕಾಯ ಪ್ರವೇಶ ಮಾಡಿ ನ್ಯಾಯಾಧೀಶರ ಅಂತರ್ಗತವನ್ನು ನಿರರ್ಗಳವಾಗಿ ನನ್ನ ಮುಂದೆ ತೆರೆದಿಟ್ಟರು.
‘ನ್ಯಾಯಾಲಯ ಹಲವಾರು ಪ್ರಸಂಗಗಳಲ್ಲಿ ತನ್ನ ತೀರ್ಪನ್ನು ಮರುಪರಿಶೀಲಿಸಿದೆ. ನಾವೂ ಏಕೆ ಮರುಪರಿಶೀಲಿಸುವಂತೆ ಕೋರಿಕೊಳ್ಳಬಾರದು?’ ಎಂದು ನಡುವೆ ಬಾಯಿಹಾಕಿ ಕೇಳಿದೆ.
‘ಅದು ಬೇಡ, ನ್ಯಾಯ ತೀರ್ಮಾನದ ಜಾಡೇ ಅತಿ ವಿಲಕ್ಷಣ, ಇರಲಿ. ಮೇಲ್ಮನವಿಯೊಂದೇ ಈಗ ನಮಗಿರುವ ದಾರಿ’ ಎಂದು ಕಡ್ಡಿ ಮುರಿದಂತೆ ಹೇಳಿ ಕಡತದಲ್ಲಿ ಕಣ್ಣು ಹಾಯಿಸತೊಡಗಿದರು, ವೆಂಕಟಾಚಲಂ.
ನಾನು ಯೋಚಿಸಿದ ದಾರಿಗೆ ವಕೀಲರು ಬಂದದ್ದು ಖುಷಿ ಕೊಟ್ಟಿತು. ಹಿಂದೆಯೇ ಅಪೀಲಿಗೆ ಹೋದರೆ ನಷ್ಟಭರ್ತಿ ಮಾಡುವವರಾರು ಎನಿಸಿ, ಆರೆಗಳಿಗೆ ಗಲಿಬಿಲಿ ಮೂಡಿತು. ಮಾತಿಗಾಗಿ ತಡವರಿಸಿದೆ.
ನನ್ನನ್ನು ಗ್ರಹಿಸಿದ ವಕೀಲರು ‘ನಾನೇ ಫೀಸಿಲ್ಲದೇ ನೋಡಿಕೊಳ್ಳುವೆ. ಗೆಲ್ಲಿಸಿಕೊಡುವೆ’ ಎಂಬ ಪ್ರಲೋಭನೆ ಒಡ್ಡಿದರು.
ಆ ದನಿಯೊಳಗೆ ಇದ್ದ ಕಾಳಜಿಯನ್ನು ಗುರುತಿಸಿಯೂ ಸಂಭಾವ್ಯ ಬೆಳವಣಿಗೆ ಹುಡುಗಾಟಕ್ಕಿಟ್ಟುಕೊಂಡು ‘ಬೆಟ್ಟ ಅಗೆದು ಇಲಿ ಹುಡುಕಿದಂತಾಗಬಾರದು’ ಎಂಬ ಮೂಕ ನೆಲೆಯಲ್ಲಿ ಯಾವ ನಿರ್‍ಧಾರವೂ ಇಲ್ಲದೇ ಕೊಂಚ ಚಡಪಡಿಸಿದೆ…
ಈ ಹಂತದಲ್ಲಿಯೇ ನನಗಾದ ಸೋಲಿನ ಅವಮಾನ, ನೋವು ಪ್ರತಿಭಟನೆಗಳಿಗೆ ಮೇಲ್ಮನವಿಯನ್ನು ಬಳಸಿಕೊಳ್ಳುವುದು ಒಳ್ಳೆಯದೆಂಬ ದೃಢ ನಿರ್ಧಾರ ತಳೆದೆ. ಹಾಗೆಯೇ ನನ್ನ ಸೋಲು ಸ್ಥಿತ್ಯಂತರಗೊಳ್ಳದಿರಲಿ ಎಂದು ಆಶಿಸುತ್ತಾ ವಕಾಲತ್ತು ನಾಮೆಗೆ ಸಹಿ ಹಾಕಿದ್ದೆ.
….ನ್ಯಾಯಾಲಯದ ಬಗೆಗೆ ಗೌರವ ಇಲ್ಲವೆಂದಾದರೆ ಇಲ್ಲೀತನಕ ಬರುವ ತೆವಲು ನನಗಿರುತ್ತಿರಲಿಲ್ಲ. ಹೀಗೆ ಇಟ್ಟ ನಂಬಿಕೆಯಿಂದಲೇ ಮೇಲಿನ ಕೋರ್‍ಟಿಗೆ ಮೊರೆ ಹೋಗಿರುವುದು. ಇನ್ನು ಮುಂದೆ ನನ್ನ ಭ್ರಾಂತಿಗಳನ್ನೆಲ್ಲ ದೂರ ಇಡಬೇಕು. ಯಾರ ಮೇಲೂ ಗೂಬೆ ಕೂರಿಸಬಾರದು ಎಂದು ನಿಶ್ಚಯಿಸಿದೆ.
* * *
ವೆಂಕಟಾಚಲಂ ಅವರು ತಮ್ಮ ಅದ್ಭುತವಾದ ಕೌಶಲದಿಂದ ಕೇಸನ್ನು ಹೊಸದಾಗಿ ಅನಾವರಣ ಮಾಡುತ್ತಾ ಹೋದರು… ಏಕಾಏಕಿ ಕೊನೆ ಮುಟ್ಟಿದ ಪ್ರಕರಣದಿಂದ ಕಾನೂನನ್ನು ಗೌರವಿಸುವ ಸಭ್ಯರು ಸಮಾಧಾನಪಟ್ಟುಕೊಳ್ಳುವಂತಾಯಿತು…
ಮರುತೀರ್‍ಪು ಪ್ರತಿವಾದಿಗಳನ್ನು ಅವಕ್ಕಾಗಿಸಿತು. ಪುನಃ ಮೇಲ್ಮನವಿಗೆ ಅವಕಾಶ ಕೊಡದೇ, ಹಣವನ್ನು ಒಂದೇ ಕಂತಿನಲ್ಲಿ ಬಡ್ಡಿ ಸಮೇತ ಮರುಪಾವತಿ ಮಾಡಲು ಆದೇಶಿಸಿತ್ತು.
“….ಹಣದ ವಹಿವಾಟು ನಡೆಸಲು ಇಂಥದೇ ಸಮಯವೆಂಬುದಿರುವುದಿಲ್ಲ. ಪಕ್ಕಾ ವ್ಯವಹಾರಸ್ಥರು ಅವಶ್ಯಕತೆಗೆ ತಕ್ಕಂತೆ ಯಾವುದೇ ಸಮಯದಲ್ಲೂ, ಲೇವಾದೇವಿ ನಡೆಸುವ ಸಾಧ್ಯತೆಗಳಿವೆ..”
“..ಯಾವುದೇ ಖಾಲಿ ಪ್ರಾಮಿಸರಿ ನೋಟಿಗೆ ಬರೀ ಸಹಿ ಹಾಕಿಕೊಟ್ಟರೂ ಅದು ನ್ಯಾಯ ಸಮ್ಮತ…” ಎಂಬ ಅಂತಿಮ ತೀರ್‍ಮಾನವನ್ನು ನ್ಯಾಯಾಲಯ ನೀಡಿತ್ತು.
ನ್ಯಾಯ ದಕ್ಕಿಸಿಕೊಂಡ ಸಂತೃಪ್ತಿಯಲ್ಲಿ ನಾನಿದ್ದೆ.
ಪ್ರತಿವಾದಿಗಳು ತುಟಿ ಪಿಟಕ್ಕೆನ್ನದೇ ಹಣ ಎಣಿಸಿ ಲೆಕ್ಕ ಚುಕ್ತಾ ಮಾಡಿದರು. ಮೊದಲೇ ಎಣಿಸಿದ್ದರೆ ಬಡ್ಡಿ ಉಳಿಸಬಹುದಿತ್ತು. ಅದು ಪ್ರತಿವಾದಿಗಳ ನೈತಿಕ ಶಕ್ತಿಗೆ ಅವರ ವ್ಯಕ್ತಿತ್ವಕ್ಕೆ ಗಟ್ಟಿತನ ಒದಗಿಸುತ್ತಿತ್ತು. ಇಷ್ಟಲ್ಲದೇ ಕೋರ್‍ಟು ನನ್ನನ್ನು ನಿರ್‍ದೋಷಿ ಎಂದು ಎತ್ತಿ ಹಿಡಿದಿರುವುದರಿಂದ ಅವರು ತಮ್ಮನ್ನು ತಾವೇ ವಂಚಿಸಿಕೊಂಡಂತಾಗಿತ್ತು.
ಸಮಾಧಾನದ ನಿಟ್ಟುಸಿರಿನ ನಡುವೆ ‘ಇಷ್ಟು ದಿನ ನ್ಯಾಯದ ಬೆನ್ನು ಹತ್ತಿ ಹೋದವನಿಗೆ ನ್ಯಾಯದ ದಾರಿ ದೂರವಾಯಿತಾದರೂ ಅದು ಕುರುಡಲ್ಲ’ ಎಂಬುದು ಸ್ಪಷ್ಟವಾಯಿತು.
*****
(ಉತ್ಥಾನ ೨೦೦೩ರ ಕಥಾಸ್ಪರ್ಧೆ ಪುರಸ್ಕೃತ ನವೆಂಬರ್ ೨೦೦೪)
ಸಣ್ಣ ಕತೆ ಚೆನ್ನಾಗಿ ಮೂಡಿಬಂದಿದೆ.