ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು ನೋಡತಕ್ಕದ್ದು, ನಿಮ್ಮೋನ್ನತಾಂಗಿಯಾದ ಆ ನಗರಲಕ್ಷ್ಮಿಯು ಪುಷ್ಪಹಾಸೆಯಾದ ವನದೇವತೆಯಿಂದ ಸಮೇತಳಾಗಿ ಅನೇಕ ಪ್ರಕಾರದ ಅಲಂಕಾರಗಳನ್ನು ಧರಿಸಿ ದಕ್ಷಿಣದ ರಾಣಿ ತಾನೆಂಬ ಬಿಂಕದಿಂದ ಮೆರೆಯುತ್ತಿದ್ದಳು. ಸಂಪಿಗೆ, ಬಕುಲ, ಪಾರಿಜಾತಾದಿ ಮಕರಂದಮಯವಾದ ವೃಕ್ಷಗಳಿಂದ ಮರ್ಯಾದಿತವಾದ ಸುಮನೋಹರವಾದ ಬೀದಿಗಳ ಎರಡೂ ಮಗ್ಗಲಿಗೂ, ಸೌಂದರ್ಯದಲ್ಲಿ ಪರಸ್ಪರರನ್ನು ಸ್ಪರ್ಧಿಸುತ್ತಿರುವ ಸುಶೋಭಿತವಾದ ಪ್ರಾಸಾದ ಹರ್ಮ್ಯ ಮಂದಿರಗಳು ಅವಲೋಕನಾರ್ಥಿಗಳ ವಿಡಂಬನೆಯನ್ನು ಮಾಡುವಂತೆ ಅವರ ದೃಷ್ಟಿಗಳನ್ನು ಸುತ್ತಿ ಮುತ್ತಿ ಹಿಡಿದೆಳೆಯುತ್ತಿದ್ದವು. ಮಹಾರಾಜರ ಪ್ರೇಮ ಕಟಾಕ್ಷದಿಂದ ಸಂವರ್ಧಿತಳಾದ ವನಶ್ರೀಯ ವಿಲಾಸವತಿಯರಾದ ತನುಜೆಯರು ಲಾಲಬಾಗ, ಕಬನಪಾರ್ಕ ಮುಂತಾದ ಉಪವನಗಳ ಮರ್ಯಾದೆಯಲ್ಲಿ ನಿಂತುಕೊಂಡು ಸ್ವೇಚ್ಛೆಯಿಂದ ಲೀಲಾವಿಲಾಸಗಳನ್ನು ವ್ಯಕ್ತಪಡಿಸಿ ನರ್ತಿಸುತ್ತಿದ್ದರು. ಚಮತ್ಕಾರವಾಗಿ ತೋರುವ ಈ ನಗರ ಶೋಭೆಯನ್ನು ಕಂಡು ತಡಾಗ ಸರಸಿಯರು ಬೆರಗಾಗಿ ಅಲ್ಲಲ್ಲಿ ತಟಸ್ಥರಾಗಿ ನಿಂತುಕೊಂಡಿದ್ದರು. ಸ್ವಾತಂತ್ರಾಧಿಕ್ಯದ ಜಂಬದಿಂದ ಮೆರೆಯುತ್ತಿರುವ ಶುಕ ಪಿಕ ಮಯೂರಾದಿ ವಿಹಂಗಮಗಳು ಬೆಂಗಳೂರಿನ ಸಿರಿದೇವಿಯ ವೈಭವವನ್ನು ಕಂಡು ಮನಸೋತು ಆ ನಗರಿಯ ಸ್ತುತಿಪಾಠವನ್ನು ಮಾಡುತ್ತೆ ಮತ್ತೆಲ್ಲಿಗೂ ಹೋಗಲರಿಯದೆ ಅಲ್ಲಿಯೇ ಉಳಿದವು.
ಅಭ್ಯಂಗಯುತವಾದ ತಿಲಸ್ನಾನವನ್ನು ಮಾಡಿ ಉತ್ತಮೋತ್ತಮವಾದ ವಸ್ತ್ರಾಲಂಕಾರಗಳನ್ನು ಧರಿಸಿ ದೇವತಾಗುರುವಂದನೆಗಳನ್ನು ಮಾಡಿಕೊಂಡು ಮುದಾನ್ನಿತರಾಗಿ ಆಪ್ತರಿಷ್ಟರನ್ನು ಕಾಣಿಸಿಕೊಳ್ಳಲು ಬೀದಿ ಬೀದಿಗಳಗುಂಟ ನಡೆದಿರುವ ನರನಾರಿಯರ ಮೇಳಗಳು ಬಹು ಶುಭಮಯವಾಗಿ ಕಂಡವು. ಸುಂದರಾಂಗಿಯರಾದ ಯುವತಿಯರು ಬಹು ಪರಿಷ್ಕಾರವಾದ ಉಡಿಗೆ ತೊಡಿಗೆಗಳನ್ನು ಮಾಡಿಕೊಂಡು, ಪರಿಮಳಯುತವಾದ ತಾಂಬೂಲ ರಾಗದಿಂದ ತಮ್ಮ ಬಿಂಬಾಧರಗಳನ್ನು ರಂಜಿಸಿ, ಎಳೆನಗೆಯಿಂದ ಕೂಡಿದ ಮಧುರಾಲಾಪಗಳನ್ನು ಮಾಡುತ್ತೆ, ಕೈಯಲ್ಲಿ ಎಳ್ಳು ಸಕ್ಕರೆ ಕಬ್ಬು ಹಣ್ಣು ಹಂಪಲಗಳಿಂದ ತುಂಬಿದ ತಟ್ಟೆಗಳನ್ನು ತೆಗೆದುಕೊಂಡು, ಮೆಲ್ಲಡಿಗಳನ್ನಿಕ್ಕುತ್ತೆ ವಿಸ್ತಾರವಾದ ರಾಜಮಾರ್ಗದಲ್ಲಿ ಬರುತ್ತಿರುವದನ್ನು ಕಂಡು, ಗಗನ ಮಾರ್ಗದಲ್ಲಿ ಮೆರೆಯುತ್ತಿರುವ ತಾರಾಸುಂದರಿಯರೇ ಇವರೆಂಬ ಭ್ರಮವಾಗುವಂತಿತ್ತು. ಈ ದಿವಸ ಎಲ್ಲರ ಮನೆಗಳಲ್ಲಿಯೂ ಸುಶೋಭೆ, ಎಲ್ಲರ ಮನಸ್ಸಿನಲ್ಲಿಯೂ ಆನಂದ, ಎಲ್ಲಿ ಹೋದಲ್ಲಿ ಉತ್ಸವ.
ತನ್ನ ತಂದೆಯ ಸ್ನೇಹಿತರೂ ದೂರಿನ ಆಪ್ತರೂ ಆದ ಮಾಧವರಾಯರ ಮನೆಗೆ ತರುಣನಾದ ಆನಂದರಾಯನು ಎಳ್ಳು ಸಕ್ಕರೆಗಳನ್ನು ಕೊಡುವ ನಿಮಿತ್ತವಾಗಿ ಸಂಕ್ರಾಂತಿಯ ದಿನ ಸಾಯಂಕಾಲಕ್ಕೆ ಹೋದನು. ಮನೆಯವರೆಲ್ಲರೂ ಆನಂದರಾಯನನ್ನು ಆದರದಿಂದ ಕರೆದೊಯ್ದು ಕುಶಲ ಪ್ರಶ್ನೆಗಳನ್ನು ಮಾಡಿ ಸತ್ಕರಿಸಿದರು. ಆನಂದರಾಯನು ಅತ್ತಿತ್ತ ನೋಡಿ “ವತ್ಸಲೆಯೆಲ್ಲಿ?” ಎಂದು ಅವಳ ಸೋದರತ್ತೆಯಾದ ತಾರಮ್ಮನನ್ನು ಕೇಳಿದನು. ಸಮೀಪದಲ್ಲಿ ಇರುವದೊಂದು ಕೋಣೆಯ ಕಡೆಗೆ ತಾರಮ್ಮನು ಕೈಮಾಡಿ ತೋರಿಸಿದಳು. ಪಿಯಾನೊ ಪೇಟಿಯ ಸ್ವರದೊಂದಿಗೆ ವತ್ಸಲೆಯು ಬಹು ಮಂಜುಲವಾಗಿ ಹಂಸಧ್ವನಿರಾಗದಲ್ಲಿ
ಮನಸು ಕರಗದೇಮಿ ಶ್ರೀ
ಮಾನಿನೀ ಮನೋಹರನೆ ||
ಎಂಬ ಪದವನ್ನು ಹಾಡುತ್ತಿದ್ದಳು. ಆನಂದರಾಯನು ಒಳಕ್ಕೆ ಪ್ರವೇಶ ಮಾಡಿದವನೇ ತಾಲ ಹಿಡಿದು “ಮನಸು ಕರಗದೇಮಿ ಶ್ರೀ” ಎಂದು ಹಾಡಿದನು. “ಆನಂದ! ಬಂದೆಯಾ? ಒಳ್ಳೇ ಸಮಯಕ್ಕೆ ಬಂದಿ. ಈ ಪದವನ್ನು ನೀನು ಸಂಪೂರ್ಣವಾಗಿ ಹಾಡಿತೋರಿಸಬಾರದೆ? ನನಗೆ ಮರೆತಂತಾಗಿದೆ.” ಎಂದು ವತ್ಸಲೆಯು ತನ್ನ ಕಮನೀಯವಾದ ಕರಾಂಗುಲಿಗಳನ್ನು ಪೇಟಿಯಿಂದ ತೆಗೆದು ಕೊಂಚ ಮಂದಹಾಸಗೈದು ಕೇಳಿದಳು.
“ಇಂದು ನನ್ನ ಕಂಠವು ಚನ್ನಾಗಿಲ್ಲ. ವತ್ಸಲಾ, ನೀನೇ ಹಾಡು ತಪ್ಪಿದಲ್ಲಿ ಹೇಳಿಕೊಡುವೆನಂತೆ.”
ವತ್ಸಲೆಯು ಹಾಡಲು ನಾಚಿಕೊಂಡವಳಾಗಿ ವಿಷಯಾಂತರವನ್ನು ಮಾಡಬೇಕೆಂದೆಣಿಸಿ, ಒಯ್ಯಾರದಿಂದೆದ್ದು ಮಾಡದೊಳಗಿನ ಬೆಳ್ಳಿಯ ಕರಡಿಗೆಯನ್ನು ತೆಗೆದು ಅದರೊಳಗಿಂದೆ ಸೆರೆ ಕುಸುರೆಳ್ಳು ತೆಗೆದುಕೊಂಡು ಬೆಳ್ಳಿಯ ಬಟ್ಟಲಿನಲ್ಲಿ ಹಾಕಿ ಅದನ್ನು ಆನಂದರಾಯನ ಮುಂದಿರಿಸಿ “ಆನಂದ, ಇಂದು ಸಂಕ್ರಮಣ. ಮೇಲೆ ಮಾಧುರ್ಯವುಳ್ಳದ್ದಾಗಿಯೂ ಒಳಗೆ ಸ್ನೇಹಯುತವಾಗಿಯೂ ಇರುವ ಈ ಎಳ್ಳು ಸಕ್ಕರೆಯನ್ನು ತಿಂದು ಒಳ್ಳೇ ಮಧುರವಾದ ಮಾತಾಡುವವನಾಗು” ಎಂದು ಹೇಳಿದಳು.
ಆ ಚಾರ್ವಂಗಿಯು ಆದರದಿಂದ ಕೊಟ್ಟ ಎಳ್ಳು ಸಕ್ಕರೆಯನ್ನು ಸಂತೋಷದಿಂದ ಸ್ವೀಕರಿಸಿ “ವತ್ಸಲೆ, ಇದನ್ನು ತಿನ್ನುವದರಿಂದ ಮಧುರವಾಗಿ ಮಾತಾಡಲು ಬರುತ್ತಿದ್ದರೆ, ಮಧುರಾಲಾಪೆಯಾದ ನೀನು ನಿತ್ಯದಲ್ಲಿಯೂ ಇದನ್ನೇ ಸೇವಿಸುತ್ತಿರುವೆಯಾಗಿ ತೋರುತ್ತದೆ.” ಎಂದು ಆನಂದ ರಾಯನು ನಗುನಗುತ್ತೆ ನುಡಿದು ಆ ಎಳ್ಳು ಸಕ್ಕರೆಯನ್ನು ಬಾಯಲ್ಲಿ ಹಾಕಿ ಕೊಂಡನು.
“ಅರ್ಥಕ್ಕೆ ಅನರ್ಥವೆ? ಆನಂದರಾವ, ನಾನೆಂದು ಮಧುರಭಾಷಿಣಿ ಯಾಗಿದ್ದೆನು? ನಾಳೆ ನಿನ್ನ ಅರ್ಧಾಂಗಿಯಾಗಿ ಬರುವಾಕೆ ಮಧುರವಾದ ನುಡಿಗಳನ್ನಾಡಿ ನಿನ್ನ ಮನವನ್ನು ರಂಜಿಸುವಳು” ಎಂದು ನುಡಿದು ವತ್ಸಲೆಯು ನಕ್ಕಳು.
“ಎಂಥವಳು ಬಂದರೂ ಈ ಜಾಣ್ಮೆಯನ್ನು ನಿನ್ನ ಬಳಿಯಲ್ಲಿಯೇ ಕಲಿತುಕೊಂಡು ಹೋಗಬೇಕಲ್ಲದೆ ಮತ್ತೊಂದು ಮಾರ್ಗವಿಲ್ಲ.”
ಈ ಸಂವಾದವನ್ನು ಬಾಗಿಲಲ್ಲಿ ನಿಂತು ಕೇಳುತ್ತಲಿದ್ದ ತಾರಮ್ಮನು ಒಳಕ್ಕೆ ಬಂದು ಆನಂದರಾಯನ ಭುಜದ ಮೇಲೆ ಕೈಯಿಟ್ಟು ವಿನೋದದಿಂದ “ಆನಂದ, ನಿನ್ನ ತಂದೆಯವರ ಪ್ರಮಾದಕ್ಕಾಗಿ ಈ ಮಧುರಭಾಷಿಣಿಯನ್ನು ನಿನ್ನ ಅರ್ಧಾಂಗಿಯನ್ನಾಗಿ ಮಾಡಿಕೊಳ್ಳುವ ಸಮಯವನ್ನು ಕಳಕೊಂಡು ಬಿಟ್ಟೆ. ಈ ರತಿದೇವಿಗೆ (ವತ್ಸಲೆಯ ಗದ್ದವನ್ನು ಹಿಡಿದು) ಏನಾಗಿತ್ತೆಂದು ನಿಮ್ಮ ತಂದೆಯವರು ನಿರಾಕರಿಸಿದರೋ ಕಾಣೆನು.” ಎಂದು ನುಡಿದಳು.
ತಾರಮ್ಮನ ಮಾತು ಕೇಳಿ ಆನಂದರಾಯನ ಎದೆಯಲ್ಲಿ ಒಮ್ಮೆಲೆ ಆಲ ಗಿಕ್ಕಿ ಹೊಡೆದಂತಾಯಿತು. ಚಮತ್ಕಾರವಾದ ಮನೋವಿಕಾರಕ್ಕಾಗಿ ಅವನು ಭ್ರಮಿಷ್ಟನಂತೆ ದೇಹವ್ಯಾಪಾರಗಳನ್ನು ಮರೆತು ಶೂನ್ಯದೃಷ್ಟಿಯಾಗಿ ಕುಳಿತು ಕೊಂಡನು. ತನ್ನ ಸೋದರತ್ತೆಯ ವಿಪರೀತವಾದ ವಿನೋದವನ್ನು ಕೇಳಿ ವತ್ಸಲೆಯು ಈಷನ್ಮಂದಸ್ಮಿತೆಯಾದರೂ ಕೂಡಲೆ ಬಲವತ್ತರವಾದ ಲಜ್ಜೆಯು ಅವಳ ನಗೆಯನ್ನೂ ಮುದವನ್ನೂ ಕೂಡಿಯೇ ತಗ್ಗಿಸಿಬಿಟ್ಟಿತು. ತಾರಮ್ಮನ ಮುಖವನ್ನಾಗಲಿ ಆನಂದರಾಯನ ಮುಖವನ್ನಾಗಲಿ ಕಣ್ಣೆತ್ತಿ ನೋಡಲು ಅವಳು ಅಸಮರ್ಥಳಾದಳು, ಆ ಸ್ಥಳದಲ್ಲಿ ಕುಳ್ಳಿರಲು ಕೂಡ ಧೈರ್ಯ ಸಾಲದೆ ವತ್ಸಲೆಯು ಮೆಲ್ಲನೆ ಹೊರಗೆ ನಡೆದಳು.
* * * *
ಆನಂದರಾಯನ ತಂದೆಯವರಾದ ರಘುನಾಥರಾಯರೂ ವತ್ಸಲೆಯ ತಂದೆಯವರಾದ ಮಾಧವರಾಯರೂ ಬಾಲ್ಯದ ಸ್ನೇಹಿತರು, ಇಬ್ಬರೂ ಒಂದೇ ಕಾಲೇಜದಲ್ಲಿ ವಿದ್ಯಾರ್ಜನವನ್ನು ಮಾಡಿ ಇಬ್ಬರೂ ಮೈಸೂರ ಸಂಸ್ಥಾನದಲ್ಲಿ ದೊಡ್ಡ ಅಧಿಕಾರಿಗಳಾದರು. ಪೂರ್ವ ಕಾಲದ ಕೆಲವೊಂದು ಶರೀರಸಂಬಂಧಕ್ಕಾಗಿಯ ಕಾಲೇಜದ ಸ್ನೇಹಕ್ಕಾಗಿಯೂ ರಘುನಾಥರಾಯರೂ ಮಾಧವ ರಾಯರೂ ಒಂದೇ ಮನೆಯವರಂತೆ ನಡಕೊಳ್ಳುತ್ತಿದ್ದರು. ಮಾಧವರಾಯರೂ ಅವರ ಮನೆಯವರೂ ವತ್ಸಲೆಯನ್ನು ಚಪಲನೂ ಸುಂದರನೂ ಆಗಿರುವ ಆನಂದರಾಯನಿಗೆ ಕೊಡುವ ವಿಚಾರವನ್ನು ಮಾಡಿದ್ದರು. ಆ ವಿಚಾರವು ರಘುನಾಥರಾಯರಿಗೂ ಸಮ್ಮತವಾಗಿತ್ತು. ಎಲ್ಲರೂ ವತ್ಸಲೆಗೆ ಆನಂದನ ಹೆಂಡತಿಯೆಂದು ಕರೆಯಲಾರಂಭಿಸಿದರು. ಅತೀವ ಸುಂದರಿಯಾಗಿದ್ದ ಆ ಮುದ್ದು ಮಗುವು ಈ ಮಾತು ಕೇಳಿ ನಕ್ಕು ಗಂಡನೆಂದರೆ ಯಾವ ಸಂಬಂಧಿಕನೆಂಬದನ್ನರಿಯದಿದ್ದರೂ ಆನಂದನನ್ನು ಕಂಡು ನಾಚಿ ಓಡಿ ಹೋಗಲಾರಂಭಿಸಿದಳು. ಆನಂದನಾದರೂ ವತ್ಸಲೆಯನ್ನು ಕಂಡು ಮಾತಾಡಿಸಲರಿಯದೆ ಅವಳಿಂದ ದೂರದಲ್ಲಿಯೇ ಇರುವನು. ಇದಕ್ಕೇನು ಕಾರಣ ? ಪ್ರೇಮವೆ ? ಛೇ! ಎಳೆಮಕ್ಕಳವರು. ಜನರು ತಮಗೆ ಗಂಡಹೆಂಡರೆಂದು ಕರೆಯುತ್ತಾರೆಂಬ ಸಂಗತಿಯೇ ಅವರ ಈ ಆಚರಣಕ್ಕೆ ಕಾರಣವಾಗಿತ್ತು.
ಬರಬರುತ್ತೆ ಸುಧಾರಕ ಸಮಾಜ, ಪ್ರಾರ್ಥನಾ ಸಮಾಜ, ಬ್ರಹ್ಮ ಸಮಾಜ ಮುಂತಾದ ಪಂಥಗಳು ದೇಶದಲ್ಲಿ ಮೆಲ್ಲಮೆಲ್ಲನೆ ಕಾಲಿಡಲಾರಂಭಿಸಿದವು. ಈ ಪಂಥದವರಿಗೂ ಕರ್ಮನಿಷ್ಠರಿಗೂ ಅಖಂಡವಾದ ವಾಗ್ವಾದ ನಡೆದು ಅಲ್ಲಲ್ಲಿ ಪಕ್ಷಪರ ಪಕ್ಷಗಳುಂಟಾಗಿ ಆಪ್ತರಿಷ್ಟರೂ ಬಂಧುಬಾಂಧವರೂ ಬೇರೆ ಬೇರೆ ಪಕ್ಷಗಳಿಗೆ ಸೇರಿ ಪರಸ್ಪರರೊಡನೆ ಹಗೆಗಳಂತೆ ನಡಕೊಂಡರು. ಮಾಧವರಾಯರು ಸುಧಾರಣಾ ಪಂಥಕ್ಕೆ ಸೇರಿದ್ದರಿಂದ ಅವರಿಗೂ ರಘು ನಾಥರಾಯರಿಗೂ ವೈಮನಸ್ಸು ಉಂಟಾದ್ದರಿಂದ ವತ್ಸಲಾ ಆನಂದರ ವಿವಾಹದ ವಿಚಾರವು ಮುರಿದುಹೋಯಿತು. ಆದರೆ ಅನಂದ ವತ್ಸಲೆಯರಿಗೆ ಅದರ ಚಿಂತೆಯೇನು ? ನಿಷ್ಕಾರಣವಾಗಿರುವ ನಿರ್ಬಂಧವು ಕಡಿದಂತಾಗಿ ಅವರು ಮತ್ತೆ ಸಂತೋಷದಿಂದ ಕೂಡಿ ಆಡಲಾರಂಭಿಸಿದರು.
ಆಗಿನ ಕಾಲದ ಸುಧಾರಣೆಯೆಂದರೆ ಬ್ರಾಹ್ಮಣರಲ್ಲಿರುವ ಮಡಿ ಮೈಲಿಗೆ, ಸ್ನಾನ ಸಂಧ್ಯೆ, ಭಸ್ಮ ಮುದ್ರಾಕ್ಷತೆಗಳನ್ನು ನಿಂದಿಸಿ ಸ್ವಚ್ಛೆಯಿಂದ ನಡೆಯುವದೂ ಪರಕೀಯರ ವೇಷಾಚರಣಗಳನ್ನು ಅನುಕರಿಸುವದೂ, ಬೇಕು ಬೇಕಾದವರಲ್ಲಿ ಉಂಡು ತಿಂದು ಬರುವದೂ ಇಷ್ಟೇ ಆಗಿತ್ತು. ಹೊರತಾಗಿ ಅನ್ವರ್ಥಕವಾದ ಸುಧಾರಣೆಯ ವಿಚಾರಗಳು ಆ ಜನರ ಮನಸ್ಸಿನಲ್ಲಿ ಸೇರಿರಲಿಲ್ಲ. ಇಲ್ಲವೆಂದರೆ ಬ್ರಾಹ್ಮಣಿಯರಾದ ವಿಧವೆಯರ ಪುನರ್ವಿವಾಹವೊಂದು ಅವರಿಗೆ ಅಗತ್ಯವಾದ ವಿಷಯವಾಗಿತ್ತು.
ಇಂಥ ಪರಿಸ್ಥಿತಿಯಲ್ಲಿ ಮಾಧವರಾಯನ ಮಗಳಿಗೆ ತಕ್ಕವನಾದ ವರನು ಸಿಕ್ಕದಾದನು. ಸುಧಾರಣಾ ಪಂಥದವರಲ್ಲಿ ಯೋಗ್ಯರಾದ ವರಗಳೇ ಇರಲಿಲ್ಲ. ಪ್ರಾಚೀನ ಸಾಂಪ್ರದಾಯದವರಂತೂ ಮಾಧವರಾಯನನ್ನು ತಮ್ಮ ನೆಳಲಿಗೆ ನಿಲ್ಲಗೊಡುತ್ತಿದ್ದಿಲ್ಲ. ವತ್ಸಲೆಯು ಲಾವಣ್ಯವತಿಯಾದ ತರುಣಿಯಾಗುತ್ತೆ ಬಂದಳು. ಅವಳಿಗೆ ತಕ್ಕಮಟ್ಟಿಗೆ ಶಿಕ್ಷಣವೂ ದೊರೆತಿತ್ತು. ಮದುವೆಯನ್ನು ಬಿಡುವದೆಂತು? ಮಾಡಬೇಕಾದರೆ ವರನೆಲ್ಲಿ? ಅನಿರ್ವಾಹಕ್ಕಾಗಿ ಸುಬ್ಬರಾಯನೆಂಬ ಸುರಾಭಕ್ತನಾದ ಸುಧಾರಕನ ಮಗನಾದ ಗೋವಿಂದನೆಂಬವನಿಗೆ ವತ್ಸಲೆಯನ್ನು ಕೊಡುವದು ಗೊತ್ತಾಯಿತು. ತಂದೆಯ ಗುಣಗಳೇ ಗೋವಿಂದನಲ್ಲಿ. ತನ್ನ ಹೆಂಡತಿಯಾದ ವತ್ಸಲೆಯು ಯುರೋಪಿಯನ್ನರ ಬೂಟು ಝಗೆಗಳನ್ನು ಹಾಕುವದಕ್ಕೂ ಕುಂಕುಮ ಬಳೆಗಳನ್ನು ತೆಗೆದೊಗೆಯಲಿಕ್ಕೂ ಒಪ್ಪಲಿಲ್ಲಾದ್ದರಿಂದ ಗಂಡ ಹೆಂಡಿರ ಸಮಾಗಮವಾಗುವದಕ್ಕೆ ಮುಂಚಿತವಾಗಿಯೇ ಗೋವಿಂದನು ಸಿಟ್ಟಾಗಿ ಎದ್ದು ಹೋಗಿ ಎಲ್ಲಿಯೋ ಒಂದು ಇಂಗ್ಲಿಶ್ ಹಾಟೆಲ್ಲಿನಲ್ಲಿ ಕಾರಕೂನನಾಗಿ ಇದ್ದು ಕೊಂಡನು.
ಈ ಸಂಗತಿಯಿಂದ ಮಾಧವರಾಯರ ಮನೆಗೆ ಒಂದು ವಿಪತ್ತೇ ಬಂದಂತಾಗಿತ್ತು, ಆದರೆ ಮಾಡುವದೇನು ? ವತ್ಸಲೆಯು ಇನ್ನೂ ಅಪ್ರಬುದ್ದೆಯಾದ ತರುಣಿಯು, ಮಾಧವರಾಯರು ಅವಳನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಿದ್ದರಿಂದ ಆ ಬಾಲೆಯು ತನಗುಂಟಾದ ಆಪತ್ತಿಗೆ ಈಡಾಗದೆ ಕಾವ್ಯ ನಾಟಕಗಳನ್ನು ಓದುವದರಲ್ಲಿಯೂ ಗಾನ-ವಾದನಗಳಲ್ಲಿ ಮನಸ್ಸು ಹಾಕುತ್ತಲೂ ದಕ್ಷತೆಯಿಂದ ಮನೆಕೆಲಸಗಳನ್ನು ಮಾಡುತ್ತಲೂ ಇದ್ದಳು.
ಆನಂದರಾಯನು ಕಾಲೇಜಿನಲ್ಲಿ ಆಸ್ಥೆಯಿಂದ ವಿದ್ಯಾರ್ಜನವನ್ನು ಮಾಡಿ ಬಿ. ಏ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದನು. ಮುಂದಿನ ವ್ಯಾಸಂಗಕ್ಕಾಗಿ ಮತ್ತೆ ಅವನು ಕಾಲೇಜಿಗೆ ಹೋಗತಕ್ಕವನು. ಬುದ್ಧಿವಂತನಾಗಿರುವ ತನ್ನ ಏಕಾಕಿಯಾಗಿರುವ ಮಗನ ಮದುವೆಯನ್ನು ಅವನ ಇಚ್ಛಾನುಸಾರವಾಗಿ ಮಾಡಬೇಕೆಂದು ರಘುನಾಥರಾಯರು ಆನಂದನ ಮದುವೆಯ ವಿಚಾರವನ್ನು ಸದ್ಯಕ್ಕೆ ಮಾಡದೆ ಇದ್ದರು.
ಇಂಥ ಸಮಯದಲ್ಲಿ ಒದಗಿದ ಸಂಕ್ರಾಂತಿಯ ದಿವಸದಲ್ಲಿ ಆನಂದ ರಾಯನು ವತ್ಸಲೆಯ ಮನೆಗೆ ಬಂದಿದ್ದನು.
ವತ್ಸಲೆಯ ಲಗ್ನವು ಗೋವಿಂದನೊಡನೆ ಆಗುವವರೆಗೆ, ಅವಳು ತನ್ನ ಹೆಂಡತಿಯಾದರೆ ಒಳಿತಾಗುವದೆಂದು ಆನಂದನ ಅಭಿಪ್ರಾಯವಾಗಿತ್ತು. ಪ್ರೌಢರಾದವರ ದುರ್ಧರವಾದ ಪ್ರೇಮನಿರ್ಭರವು ಅವನ ಮನಸ್ಸಿನಲ್ಲಿ ಹುಟ್ಟಿರದಿದ್ದರೂ ವತ್ಸಲೆಯ ಕಾಂತಿಮಯವಾದ ರೂಪವೂ ಅವಳ ಅಂಗಸೌಷ್ಟವವೂ ಅವಳ ಲಲಿತವಾದ ಮುಖಮುದ್ರೆಯೂ ಆನಂದರಾಯನ ಮನಸ್ಸಿನಲ್ಲಿ ಒಳಿತಾಗಿ ನೆಟ್ಟಿದ್ದವು. ಆದರೇನು ? ತನ್ನ ತಂದೆಗೂ ಮಾಧವರಾಯರಿಗೂ ಉಂಟಾದ ವಿರೋಧಕ್ಕಾಗಿ ತನ್ನ ಮನದೆಣಿಕೆಯು ಬಯಲಾಗುವದೆಂದು ನೆನಿಸಿ ಅವನು ವಿಷಾದವನ್ನು ತಳೆದಿದ್ದನು. ಕಡೆಗೆ ವತ್ಸಲೆಯು ಅನ್ಯರ ವಸ್ತುವೇ ಆಗಿಹೋದಳು. ಆನಂದರಾಯನು ದೈವಲೀಲೆಯ ವೈಚಿತ್ರವನ್ನು ವೇದಾಂತಿಯಂತೆ ವಿಮರ್ಶಿಸಿ ಕೈಮೀರಿ ಹೋದ ಮಾತಿಗೆ ದುಃಖಿಸದೆ ಸಮಾಧಾನವನ್ನು ತಳೆದುಕೊಂಡಿದ್ದನು. ಭದ್ರವಾಗಿ ಕಟ್ಟಿದ ಕೆರೆಯು ಅದೃಷ್ಟ ಪೂರ್ವವಾದ ಕಾರಣಕ್ಕಾಗಿಯೇ ಒಡೆಯಬೇಕಲ್ಲದೆ ಸಹಸಾ ಅದಕ್ಕೆ ಅಪಾಯವಿಲ್ಲವಷ್ಟೆಯೇ. ಅದರಂತೆಯೇ ಸುವಿಚಾರಗಳಿಂದ ಧೃತವಾದ ಆನಂದರಾಯನ ಮನೋವಿಕಾರವು ನಿರ್ಬಂಧದಲ್ಲಿಯೇ ಉಳಿದಿತ್ತು. ವತ್ಸಲೆಯ ಮನೆಗೆ ಅವನು ಆಗಾಗ್ಗೆ ಹೋಗುತ್ತಿದ್ದರೂ ನಿಶ್ಚಯಿಯಾದ ಆ ತರುಣನು ಸಮಾಹಿತ ಚಿತ್ತವುಳ್ಳವನಾಗಿ ಅವಳೊಡನೆ ನಿಷ್ಕಲಂಕವಾದ ಭಾವದಿಂದ ಮಾತುಕಥೆಗಳನ್ನಾಡುತ್ತಿದ್ದನು. ಆದರೆ ದಿನೇ ದಿನೇ ಅಧಿವೃದ್ಧಿಯನ್ನು ಹೊಂದುತ್ತಿರುವ ವತ್ಸಲೆಯ ಸೌಂದರ್ಯವು ಅವನ ದೃಷ್ಟಿಗೆ ಹೊಳೆಯದಿರುವದು ಹೇಗೆ ? ಇರಲಿ, ಆ ದಿವಸ ತಾರಮ್ಮನು ಆಡಿದ ಅವಿವೇಕವಾದ ವಿನೋದದ ನುಡಿಗಳನ್ನು ಕೇಳಿ ಆನಂದರಾಯನ ಮನಸ್ಸಿಗೆ ದುರ್ಧರವಾದ ಪೆಟ್ಟು ತಗಲಿತು. ತಾನು ವತ್ಸಲೆಯ ಪತಿಯಾಗಲಿಲ್ಲವೆಂಬ ವ್ಯಸನವು ಅವನ ಹೃದಯವನ್ನು ವ್ಯಾಪಿಸಿ ಸುಡಲಾರಂಭಿಸಿತು. ಆದರೆ ವಿದ್ವಾಂಸನೂ ಸುಶೀಲನೂ ಆದ ಆ ತರುಣನು ಮತಿ ಭ್ರಮವನ್ನು ಗೆದ್ದು ಬೇಗನೆ ಎಚ್ಚತ್ತವನಾಗಿ ಮಾಧವರಾಯನ ಮನೆಯಲ್ಲಿನ್ನು ಕಾಲಿಡ ಕೂಡದೆಂದು ನಿಶ್ಚಯಿಸಿ ಕೊಂಡು ಚಟ್ಟನೆ ಎದ್ದು ತನ್ನ ಮನೆಗೆ ಹೊರಟು ಹೋದನು.
ಪಾಪ! ಅಬಲೆಯೂ ದುರ್ಬಲವಾದ ಧೈರ್ಯವುಳ್ಳವಳೂ ಚಿಕ್ಕವಳೂ ಆದ ವತ್ಸಲೆಯ ಮನಸ್ಸಿನ ಸ್ಥಿತಿಯು ಏನಾಗಿರಬಹುದು ? ಬಾಲ್ಯದಲ್ಲಿ ವಿನೋದಕ್ಕಾಗಿ ಅವಳ ತಾಯಿತಂದೆಗಳೇ ಅವಳಿಗೆ ಆನಂದನ ಹೆಂಡತಿಯೆಂದು ಕರೆಯುತ್ತಿದ್ದರು. ತನ್ನ ತಂದೆಗೂ ರಘುನಾಥರಾಯರಿಗೂ ಉಂಟಾದ ವಿರೋಧದ ತರುವಾಯವಾದರೂ ವತ್ಸಲೆಯ ತಾಯಿಯು ಹೇಗಾದರೂ ಮಾಡಿ ತನ್ನ ಮಗಳನ್ನು ಆನಂದನಿಗೇ ಕೊಡುವೆನೆಂಬ ಮಾತುಗಳನ್ನು ಕೇಳಿ ಆ ಬಾಲಿಕೆಯ ಮನಸ್ಸಿನಲ್ಲಿ ಒಂದು ಪ್ರಕಾರದ ಕುತೂಹಲವು ಉಂಟಾಗಿತ್ತು. ವತ್ಸಲೆಯ ಖೇದಜನಕವಾದ ವಿವಾಹಾನಂತರವಾದರೂ ಮನೆಯವರೆಲ್ಲರೂ ಅವಳನ್ನು ಆನಂದರಾಯನಿಗೆ ಕೊಟ್ಟಿದ್ದರೆ ಒಳಿತಾಗುತ್ತಿತ್ತೆಂದು ನೆನಿಸಿ ಹಳ ಹಳಿಸುವದನ್ನು ಕಂಡು ಅವಳ ಮನೋವೃತ್ತಿಯಾದರೂ ಅವರಂತೆಯೇ ಆಗಿತೆಂದು ಹೇಳಿದರೆ ಶಿಷ್ಟರೆಂಬವರು ಈ ಲೇಖಕನನ್ನು ನಿಂದಿಸುವರೆಂದು ನಾವು ನಂಬುವದಿಲ್ಲ. ಮನುಷ್ಯ ಸ್ವಭಾವವಿದು. ಶಿಷ್ಟರು ಬೇಕಾದರೆ ತಮ್ಮ ಮನಸ್ಸುಗಳನ್ನೇ ಸಂಶೋಧಿಸಿ ನೋಡಿಕೊಳ್ಳಲಿ. ಕಮನೀಯವಾದ ವಸ್ತು ಗಳನ್ನು ಕಂಡರೆ ಮನಸ್ಸಿನಲ್ಲಿ ಆಕಾಂಕ್ಷೆಯುಂಟಾಗುವದು ಸಹಜವೇ. ಕೆಲವೊಂದು ಪರಿಸ್ಥಿತಿಯಲ್ಲಿ ಆಕಾಂಕ್ಷೆಯು ಪ್ರಶಂಸನೀಯವಾದದ್ದಾಗಿಯೂ ಬೇರೊಂದು ಪರಿಸ್ಥಿತಿಯಲ್ಲಿ ಅದು ಅಪ್ರಶಸ್ತವಾಗಿಯೂ ಇರುವದು. ಹೀಗೆ ಅವಶ್ಯವಾಗಿ ಉಂಟಾಗುವ ಪ್ರಶಸ್ತವಾದ ಆಕಾಂಕ್ಷೆಯನ್ನು ವಿವೇಕದಿಂದ ನಿಗ್ರಹಿಸುವದೇ ಮಹಾತ್ಮರ ಲಕ್ಷಣವು.
ತನ್ನ ಸೋದರತ್ತೆಯಾಡಿದ ಮಾತು ಕೇಳಿ ವತ್ಸಲೆಯು ಬಲವತ್ತರವಾಗಿ ಲಜ್ಜಿತಳಾದಳೆಂದು ನಾವು ಮೇಲೆ ಹೇಳಿದೆವಷ್ಟೆ? ಆ ನುಡಿ ಕೇಳಿ ಆನಂದರಾಯನ ಮನಸ್ಸಿನಲ್ಲುಂಟಾದ ಭಾವನೆಯಾದರೂ ಅವಳಿಗೆ ವಿದಿತವಾಗದೆ ಇರಲಿಲ್ಲ. ಲಜ್ಜೆ ಯಿಲ್ಲದೆ ಇನ್ನೂ ಅನೇಕವಾದ ವಿಕಾರಗಳು ಅವಳ ಮನಸ್ಸಿನಲ್ಲಿ ಉದ್ಭವಿಸಿದ್ದವು. ತಾನು ಕುಳಿತಿದ್ದ ಕೋಣೆಯಿಂದೆದ್ದು ಹೊರ ಬಿದ್ದು ಬಂದರೂ ಅವಳ ಚಿತ್ತಕ್ಕೆ ಸ್ವಾಸ್ಥ್ಯವಿರಲಿಲ್ಲ. ಅವಳು ಮನೆಯಲ್ಲಿ ಅತ್ತಿತ್ತ ಅಡ್ಡಾಡಿ ನೋಡಿದಳು. ಎಲ್ಲಿಯೂ ಶಾಂತಿ ದೊರಕಲಿಲ್ಲ. ಉದ್ವೇಗದಿಂದ ಅವಳ ಎದೆಯು ಉಬ್ಬಿಕೊಂಡಿತು. ಮೈಯೆಲ್ಲ ಕಾದುಹೋಗಿತ್ತು. ಕಣ್ಣುಗಳಲ್ಲಿ ವೈಚಿತ್ರವು ಕಂಡಿತು. ಅವಳ ಹೃದಯದಲ್ಲಿ ನೆಟ್ಟಿರುವ ಆವದೋ ಒಂದು ಪ್ರಕಾರದ ಶಲ್ಯವು ಆಗಾಗ್ಗೆ ಅಸಹ್ಯವಾದ ವೇದನೆಯನ್ನು ಉಂಟುಮಾಡುತ್ತಿತ್ತು. ತನಗುಂಟಾದ ಅವಸ್ತೆಯ ಕಾರಣವನ್ನು ವತ್ಸಲೆಯು ಅರಿತವಳಾಗಿದ್ದಳು. ಆದರೆ ಅಂಥ ವಿಕಾರಕ್ಕೆ ಆಸ್ಪದವನ್ನು ಕೊಡುವದು ಕೇವಲವಾದ ಪಾಪವೇ ಅಲ್ಲವೆ? ಆದರೆ ಅದನ್ನು ಮಟ್ಟ ಹಾಕುವದಕ್ಕೆ ಯೋಗಿಯಾದವನ ಬಲವು ಬೇಕಲ್ಲ! “ಆದಿ-ಶಕ್ತಿಯಾದ ಜಗದಂಬೆಯೇ ಇಂಥ ಬಲವನ್ನು ನನಗೆ ಕರುಣಿಸು ಕಂಡಿಯಾ!” ಎಂದು ವತ್ಸಲೆಯು ಕಣ್ಣೀರು ಸುರಿಸುತ್ತೆ ಬೇಡಿಕೊಂಡಳು.
“ಆನಂದ” ಎಂದು ರಘುನಾಥರಾಯರು ತಮ್ಮ ಮಗನನ್ನು ಕೂಗಿ ಕರೆದರು. ಆನಂದರಾಯನು ವಿನಯದಿಂದ ತಂದೆಯ ಸನ್ನಿಧಾನದಲ್ಲಿ ಬಂದು ನಿಂತುಕೊಂಡ ಮೇಲೆ ರಾಯರು ಮಗನನ್ನು ಕಂಡು ಸಂತೋಷದಿಂದ ನಕ್ಕು ಕೆಲವು ಪತ್ರಗಳನ್ನೂ ಕನ್ನೆಯರ ಫೋಟೋಗ್ರಾಫುಗಳನ್ನೂ ಅವನ ಸ್ವಾಧೀನ ಮಾಡಿ “ಇದು ನೋಡು, ಇಂತಿಷ್ಟು ಜನ ಮಹನೀಯರಾದ ನನ್ನ ಸ್ನೇಹಿತರು ನಮ್ಮೊಡನೆ ಶರೀರಸಂಬಂಧವನ್ನು ಬೆಳಿಸಲಿಚ್ಚಿಸುವರು, ಈ ಫೋಟೋಗ್ರಾಫಗಳನ್ನು ನೋಡಿಕೊಂಡು ನನಗೆ ತಿಳಿಸು” ಎಂದು ಹೇಳಿದರು. ಆನಂದರಾಯನು ಕಿಂಚಿತ್ ಲಜ್ಜಿತನಾಗಿ ನಿಂತು ಕೊಂಡನು.
“ಈ ಮಾತಿನಲ್ಲಿ ನಾಚುವದೇಕೆ ಆನಂದ? ಅವುಗಳನ್ನು ತೆಗೆದು ಕೊಂಡು ಚನ್ನಾಗಿ ಪರೀಕ್ಷಿಸು. ನಿನ್ನ ಮನಸ್ಸಿಗೆ ಬಂದ ಕನ್ನೆಯನ್ನು ಪ್ರತ್ಯಕ್ಷವಾಗಿ ನೋಡುವ ಅಪೇಕ್ಷೆಯುಂಟಾದಲ್ಲಿ ನೋಡಿಯೂ ಬರಬಹುದು, ಹೋಗು” ಎಂದು ರಘುನಾಥರಾಯರು ಮಗನಿಗೆ ಅಪ್ಪಣೆ ಕೊಟ್ಟು ಕಳಿಸಿದರು.
ಆನಂದರಾಯನು ತನ್ನ ಕೋಣೆಗೆ ಹೋಗಿ ಅನಾಸ್ಥೆಯಿಂದ ಆ ಚಿತ್ರಗಳನ್ನೆಲ್ಲ ನೋಡಿ ಇಟ್ಟು ಬಿಟ್ಟು ಸುಮ್ಮನೆ ಮುಗ್ಧನಂತೆ ಕುಳಿತುಕೊಂಡನು. ತನಗಿಷ್ಟಳಾದ ಹೆಂಡತಿಯು ಈ ಚಿತ್ರಗಳಲ್ಲಿ ರೇಖಿಸಿದ ಕನ್ನೆಯರಲ್ಲಿ ಯಾವಳೆಂದು ಅವನು ಮತ್ತೆ ಅವುಗಳನ್ನು ನಿರೀಕ್ಷಿಸಿ ನೋಡಲಾರಂಭಿಸಿದನು. ಆದರೇನು? ಚಿತ್ರವು ಕೈಯಲ್ಲಿ, ಕಣ್ಣು ಮುಂದೆ ವತ್ಸಲೆಯ ಲಜ್ಜಾಗ್ರಸ್ತವಾದ ಸುಂದರ ಮೂರುತಿಯು. ಯಾವ ಚಿತ್ರವನ್ನು ನೋಡಿದರೂ ವತ್ಸಲೆ ಆಡ್ಡಾಗಿ ಬಂದು ನಿಂತಳೇ. ಆನಂದನು ಆ ಚಿತ್ರಗಳನ್ನೆಲ್ಲ ಭರ್ರನೆ ಬೀಸಾಡಿ ತನ್ನ ಮಂಚದ ಮೇಲೆ ಬಿದ್ದು ಕೊಂಡನು.
ಕೆಲಹೊತ್ತಿನ ಮೇಲೆ ಆನಂದರಾಯನು ನಿಟ್ಟು ಸುರಿಟ್ಟು “ವತ್ಸಲೆ, ನೀನು ನನ್ನ ಪಾಲಿಗೆ ಸತ್ತಂತಾಗಿರುವಿ, ನಾನೇನು ಮಾಡಲಿ?” ಎಂದು ವ್ಯಸನದಿಂದ ಕೂಗಿಕೊಂಡನು.
ಎರಡು ಮೂರು ದಿವಸಗಳಾದರೂ ಆನಂದನು ತನ್ನ ಅಭಿಪ್ರಾಯವನ್ನು ತಿಳಿಸಲಿಲ್ಲೆಂದು ಕಂಡು ರಘುನಾಥರಾಯರು ಅವನನ್ನು ಕುರಿತು “ಯಾಕೆ ಆನಂದ, ಚಿತ್ರಗಳಲ್ಲೊಂದಾದರೂ ಮನಸ್ಸಿಗೆ ಬರಲಿಲ್ಲವೊ? ಕವಿನಿರ್ಮಿತಳಾದ ಸುಂದರಿಯು ಈ ಜಗತ್ತಿನಲ್ಲಿ ಸಿಕ್ಕುವದು ಕಷ್ಟವೆಂಬದನ್ನು ನೀನು ಮರೆಯಲಾಗದು. ಆದರೂ ಆ ಚಿತ್ರಗಳಲ್ಲಿ ಒಂದನ್ನು ನೀನು ಆರಿಸಿಕೊಳ್ಳಲೇ ಬೇಕೆಂದು ನಾನು ಆಗ್ರಹಪಡುವದಿಲ್ಲ. ಮತ್ತೆ ನೋಡೋಣಂತೆ” ಎಂದು ನಗೆಮುಖವನ್ನು ತಳೆದೇ ನುಡಿದರು.
ಆನಂದರಾಯನಿಗೆ ಬಿಟ್ಟರೆ ಸಾಕಾಗಿತ್ತು. ಅವನು ಪೋಷಾಕುಮಾಡಿಕೊಂಡು ತಿರುಗಾಡಲಿಕ್ಕೆ ಹೋದನು.
“ಎಲ್ಲಿಯ ಮದುವೆ, ಏನು ಕಥೆ! ವಿವಾಹಿತನಾಗಿ ಸಂಸಾರ ಸುಖವನ್ನು ಅನುಭವಿಸುವದನ್ನು ಬ್ರಹ್ಮದೇವರು ನನ್ನ ಹಣೆಯಲ್ಲಿಯೇ ಬರೆಯಲಿಲ್ಲ!” ಎಂದು ಉದ್ಗಾರವನ್ನು ತೆಗೆದು ರಾಜಮಾರ್ಗವನ್ನು ಹಿಡಿದು ನಡೆದಿರುವ ಆನಂದರಾಯನಿಗೆ ಜನಸಮ್ಮರ್ದಿತವಾದ ಆ ಮಾರ್ಗವು ನಿರ್ಜನವಾಗಿ ತೋರಿತು. ಪ್ರಬಲವಾದ ವಿಚಾರದಲ್ಲಿ ನಿಮಗ್ನನಾಗಿ ನಡೆದಿರುವ ಆ ವಿಮನಸ್ಕನಿಗೆ ಮಾರ್ಗದಲ್ಲಿ ಹೋಗಿ ಬರುವವರ ಅರಿಕೆಯೇ ಇರಲಿಲ್ಲ. ತಿರುಗಾಡುತ್ತೆ ತಿರುಗಾಡುತ್ತೆ ಅವನು ಅನೇಕವಾದ ಆಲೋಚನೆಗಳನ್ನು ಮಾಡಿಕೊಂಡು ಮನೆಗೆ ಬಂದನು.
* * * *
“ಅವಶ್ಯ ಹೋಗು, ಯಾರು ಬೇಡೆನ್ನುತ್ತಾರೆ? ನಿನ್ನಂಥ ಸುಶಿಕ್ಷಿತನಾದ ತರುಣನಿಗೆ ಪ್ರವಾಸದ ಅನುಭವವು ದೊರಕಿದರೆ ಬಂಗಾರವೇ ಆಗುವದು.” ಎಂದು ರಘುನಾಥರಾಯರು ಆನಂದರಾಯನ ವಿಜ್ಞಾಪನೆಯನ್ನು ಮನ್ನಿಸಿ ಹೇಳಿದರು.
“ಸಾವಕಾಶವಾಗಿ ಪ್ರಸಿದ್ಧವಾದ ಸ್ಥಳಗಳನ್ನು ನೋಡಿಕೊಳ್ಳುತ್ತ ಹೋದರೆ ನನಗೆ ನಾಲ್ಕಾರು ತಿಂಗಳು ಬೇಕು.”
“ಬೇಕೇ ಬೇಕು. ಹಾಗಿಲ್ಲದಿದ್ದರೆ ಪ್ರವಾಸದಿಂದಾಗುವ ಪ್ರಯೋಜನವೇನು? ನಿನಗೆ ಸಾಕಷ್ಟು ಹಣವನ್ನು ಕೊಡುತ್ತೇನೆ. ಯಥಾವಕಾಶವಾಗಿ ಪ್ರವಾಸ ಮಾಡಿ ನಿನ್ನ ಪ್ರವಾಸದ ಸಮಾಚಾರವನ್ನೆಲ್ಲ ಒಂದು ಪುಸ್ತಕ ರೂಪವಾಗಿ ಬರೆದಿಡುವ ಯತ್ನ ಮಾಡು” ಎಂದು ಪುತ್ರವತ್ಸಲರಾದ ರಾಯರು ಸಂತೋಷದಿಂದ ಹೇಳಿದರು.
* * * *
ತನ್ನ ಮನಸಿನಲ್ಲಿ ಉದ್ಭವಿಸಿದ ಮನೋವಿಕಾರಗಳನ್ನು ಎಲ್ಲ ಪ್ರಕಾರದಿಂದಲೂ ನಿಗ್ರಹಿಸಬೇಕೆಂದು ವತ್ಸಲೆಯು ನಿಶ್ಚಯಿಸಿಕೊಂಡಳು. ಗಾನ ವಾದನ ಚಿತ್ರಕಲೆ ಕಶೀದೆ ಮುಂತಾದ ಲಲಿತ ಕಲೆಗಳ ಹವ್ಯಾಸವನ್ನು ಅವಳು ನಿರಾಕರಿಸಿದಳು. ಏಕಾಂತದಲ್ಲಿ ಕುಳಿತು ವಿಚಾರಗಳಿಗೆ ಈಡಾಗದಂತೆ ಅಹರ್ನಿಶವಾಗಿ ಅವಳು ಮನೆಯ ಕೆಲಸಗಳನ್ನು ಮಾಡಲಾರಂಭಿಸಿದಳು. ದೇವರಿಗೆ ಹತ್ತಿ ಬತ್ತಿಗಳನ್ನೂ ಹೂ ತುಲಸಿಗಳ ಮಾಲೆಗಳನ್ನೂ ತಪ್ಪದೆ ಮಾಡುವಳು. ಆದರೆ ಇದನ್ನೆಲ್ಲ ತಾನೇಕೆ ಮಾಡುತ್ತಿರುವೆನೆಂಬ ವಿಚಾರವು ಅವಳಲ್ಲಿ ಉದ್ಭವಿಸಿದಾಕ್ಷಣವೇ ಅವಳ ಎದೆಯಲ್ಲಿ ಉಲಕುತ್ತಿರುವ ಶಲ್ಯವು ಬಹು ತೀಕ್ಷ್ಣವಾದ ವೇದನೆಯನ್ನು ಕೊಡುತ್ತಿತ್ತು. ಯಾವದಾದರೊಂದು ಸಂಗತಿಯನ್ನು ನಾವು ಪ್ರಯತ್ನ ಪೂರ್ವಕವಾಗಿ ಮರೆತುಬಿಡಬೇಕೆಂದರೆ ಆ ಸಂಗತಿಯು ನಮ್ಮ ಸ್ಮರಣದಲ್ಲಿ ವಜ್ರಲೇಪವಾಗಿಯೇ ಉಳಿಯುವದೇ ಹೊರತಾಗಿ ಅದು ನಮ್ಮಿಂದ ಸರ್ವಥಾ ಮರೆಯಾಗಲರಿಯದೆಂಬದು ಅನುಭವಸಿದ್ಧವಾದ ಮಾತು. ಇದಕ್ಕಾಗಿ ವತ್ಸಲೆಯು ತನ್ನ ಪತಿಯ ಬಳಿಗೆ ಹೋಗಿರಬೇಕೆಂದು ಚಿಂತಿಸಿ, ತನ್ನ ಅಪರಾಧಗಳನ್ನೆಲ್ಲ ಕ್ಷಮಿಸಿ ತನ್ನನ್ನು ಕರೆದುಕೊಂಡು ಹೋಗಬೇಕೆಂದು ಬಹು ಅನುನಯಯುತವಾದ ಪತ್ರವನ್ನು ಬರೆದು ಕೊಂಡಳು.
ಸಚ್ಛೀಲೆಯಾದ ತರುಣಿಯವಳು. ಪ್ರಬುದ್ಧೆಯಾದ ಬಳಿಕ ದಾಂಪತ್ಯ ಧರ್ಮವನ್ನರಿತವಳಾಗಿ ವತ್ಸಲೆಯು ಅಗ್ನಿ ಸಾಕ್ಷಿಯಾಗಿ ತನ್ನ ಕೈಯನ್ನು ಗೋವಿಂದನಿಗೆ ಕೊಟ್ಟಿದ್ದಳಲ್ಲೆ? ತನ್ನ ಆಪ್ತವರ್ಗದವರು ಗೋವಿಂದನನ್ನು ಅವನ ಗುಣಗೇಡಿತನಕ್ಕಾಗಿ ಹಳಿಯುತ್ತಿದ್ದರೂ ಪತಿಯ ಸಮೀಪದಲ್ಲಿರುವುದು ತನಗೆ ಸರ್ವಥಾ ಭೂಷಣವೂ ಇಷ್ಟವೂ ಆಗಿ ಅವಳಿಗೆ ತೋರಿತು. ಗೋವಿಂದನು ದುರ್ಮಾರ್ಗಿಯಾಗಿದ್ದರೆ ಅವನನ್ನು ತಾನೆಂತಾದರೂ ಮಾಡಿ ಸನ್ಮಾರ್ಗಕ್ಕೆ ತರುವೆನೆಂದೂ ಏಕಾಕಿ ಕಷ್ಟ ಪಡುತ್ತಿರುವ ತನ್ನ ಪತಿಗೆ ತಾನು ಅನುಕೂಲೆಯಾಗಿ ವರ್ತಿಸಿದರೆ ಅವನ ಪ್ರೇಮವು ತನ್ನ ಮೇಲೆ ಉಂಟಾಗದಿರದೆಂದೂ ಚಿಂತಿಸಿ ಅವಳು ತನ್ನ ಗಂಡನಿಗೆ ಪತ್ರವನ್ನು ಬರೆದಿದ್ದಳು. ಇಂದು ನಾಳೆ ತನ್ನ ಪತಿಯು ಉತ್ತರವನ್ನು ಬರೆಯುವನೆಂದು ಆ ದೀನೆಯಾದ ಸತಿಯು ಆಸ್ಥೆಯಿಂದ ಮಾರ್ಗಪ್ರತೀಕ್ಷೆ ಮಾಡಿದಳು. ಉತ್ತರವೇ ಇಲ್ಲ. ಮತ್ತೊಂದು ಬರೆದಳು, ಮತ್ತೂ ಉತ್ತರವಿಲ್ಲ. ತಂದೆಯ ಕಡೆಯಿಂದ ಬರೆಸಿ ನೋಡಿದಳು. ಅದರ ಗತಿಯಾದರೂ ಹಾಗೆಯೇ ಆಯಿತು ಕಡೆಗೆ ನೀವು ನನ್ನನ್ನು ಕರೆಯಿಸದಿದ್ದರೆ ನಾನೇ ತಮ್ಮ ಪಾದಸೇವೆಗಾಗಿ ಹೊರಟೆದ್ದು ಬರುವೆನು ” ಎಂದು ಆ ಸಾದ್ವಿಯು ಬರೆದುಕೊಂಡಳು. ಈ ಪತ್ರಕ್ಕೆ ಮಾತ್ರ ಉತ್ತರ ಬಂದಿತು. ವಿಳಾಸದಲ್ಲಿ ಗೋವಿಂದನ ಹಸ್ತಾಕ್ಷರದ ಗುರುತು ಹಿಡಿದು ವತ್ಸಲೆಯು ಆಸೆಯಿಂದ ಒಂದು ಆಣೆ ಅಂಚೇವೆಚ್ಚವನ್ನು ಕೊಟ್ಟು ಪತ್ರವನ್ನು ಬಿಚ್ಚಿ ಓದಲಾರಂಭಿಸಿದಳು. ಪತ್ರವನ್ನೊದುತ್ತಿರುವಾಗ ಆ ಕೋಮಲಾಂಗಿಯ ಸುವದನವು ವಿಷಾದ, ದುಃಖ, ಚಿಂತೆಗಳಿಂದ ಗ್ರಸ್ತವಾದಂತೆ ಕಂಡಿತು. ಕಡೆಗೆ ಸಂತಾಪದಿಂದವಳು ತನ್ನ ಕೆಂದುಟಿಯನ್ನು ಕಟ್ಟನೆ ಕಡಿದುಕೊಂಡು ಕಣ್ಣೀರು ಸುರಿದು ತನ್ನ ಮಂಚದ ಮೇಲೆ ಮಗ್ಗಲಾಗಿ ಬಿದ್ದು ಕೊಂಡಳು. ಆ ಪತ್ರವು ತನ್ನಿಂದ ತಾನೇ ಅಲ್ಲಿಯೇ ಕೆಳಗೆ ಬಿದ್ದಿತು. ವಾಚಕರಿಗಾಗಿ ನಾವು ಅದರ ಅವತರಣಿಕೆಯನ್ನು ಇಲ್ಲಿ ಕೊಡುತೇವೆ.
ಮುಂಬಯಿ, ಎಲ್‍ಫಿನ್‍ಸ್ಟನ್ ಹಾಟೆಲ್,
ತಾ. ೨೧-೧೨-೧೮
ಹೆಂಡತಿ,
ನೀನೂ ನಿನ್ನ ಮತಿಹೀನನಾದ ತಂದೆಯೂ ಬರೆದ ಪತ್ರಗಳು ಮುಟ್ಟಿದವು. ಗರ್ವಿಷ್ಠರಾದ ನಿಮ್ಮ ಮನೆಯವರು ನನ್ನ ಇಚ್ಛೆಗಳನ್ನು ತುಚ್ಛಿಸಿಯೂ ನನ್ನ ಮಾನಹಾನಿಯನ್ನ ಮಾಡಿಯೂ ಇರುವ ಸಂಗತಿಗಳನ್ನು ನಾನು ಮರೆಯುವುದೂ ಇಲ್ಲ. ಅದಕ್ಕಾಗಿ ನಾನು ನಿನ್ನನ್ನು ಕ್ಷಮಿಸುವದೂ ಇಲ್ಲ. ನನ್ನ ಆರೈಕೆಗಾಗಿ ನೀನು ಬರುವಿಯಾ? ಆರೈಕೆಗೆ ನನಗೇನು ಕಡಿಮೆ? ನೀನಿಲ್ಲದಿದ್ದರೂ ನಾನು ಸುಖವಾಗಿ ಹೋಟಲಿನಲ್ಲಿ ಉಣ್ಣುತ್ತೇನೆ. ನನ್ನ ಸೇವೆ ಮಾಡಲಿಕ್ಕೆ ಚತುರೆಯರಾದ ವಾರಾಂಗನೆಯರು ನಿತ್ಯದಲ್ಲಿಯೂ ಮೇಲಾಡುತ್ತಿರುವರು. ಮಾರಿಯಾದ ನಿನ್ನನ್ನು ಕಟ್ಟಿಕೊಂಡು ನಾನೇನು ಮಾಡಲಿ? ನೀನು ವಿಧವೆಯಾಗಿ ಅಮಂಗಲವಾದ ರೂಪವನ್ನು ಹೊಂದಿದ್ದು ನಾನು ಪ್ರತ್ಯಕ್ಷವಾಗಿ ನೋಡುವದು ಸಾಧ್ಯವಾದ ಸಂಗತಿಯಾಗಿರುವದಿಲ್ಲವೆಂದು ನೆನಿಸಿ ನನಗೆ ವಿಷಾದವಾಗುತ್ತದೆ. ಆದರೂ ಈ ಪ್ರಾಯಶ್ಚಿತ್ತವು ಬೇಗನೆ ನಿನ್ನ ಪಾಲಿಗೆ ಬರುವದು. ನನಗೀಗ ಉದರರೋಗದ ಭಾವನೆಯಾಗಿದೆ. ನನ್ನ ಮರಣದಿಂದ ನಿನ್ನ ತಂದೆಗೆ ದುಃಖವೊದಗಿದರೆ ನನಗೆ ಮರಣವೇ ಬರಲಿ!
ನಿನ್ನ ಕುಂಕುಮ ಮಂಗಲಸೂತ್ರಾಪಕರ್ಷಕನಾದ,
ಗೋವಿಂದ.
ಎಂಥ ಅಭದ್ರವಾದ ಪತ್ರವಿದು! ಅಶಿಕ್ಷಿತನೂ ತಿಳಿಗೇಡಿಯ ಮೇಲೆ ದುರ್ಮಾರ್ಗಿಯೂ ಆದ ಮೂರ್ಖನ ವಿಚಾರಗಳನ್ನು ಕಂಡಿರಾ? ಈ ಮೂಢನು ಬೇಡಿ ಬೇಡಿದಾಗ್ಗೆ ಮಾಧವರಾಯರು, ಮಗಳ ಮುಖವನ್ನು ನೋಡಿ ನೂರು ಇನ್ನೂರು ರೂಪಾಯಿಗಳನ್ನು ಕಳಿಸಿ ಕೊಟ್ಟೆಕೊಡುತ್ತಿದ್ದರು. ದರ್ಶನವನ್ನು ಕೊಟ್ಟು ಹೋಗಬೇಕೆಂದು ಕಾಲಕಾಲಕ್ಕೆ ಆದರ ದಿಂದ ಹೇಳಿಕೊಳ್ಳುತ್ತಿದ್ದರು. “ಅಳಿಯದೇವರು ತಮ್ಮ ಕೃತಜ್ಞತೆಯನ್ನು ಮೇಲ್ಕಂಡ ರೀತಿಯಾಗಿ ವ್ಯಕ್ತ ಪಡಿಸಿದರೆ?” ಎಂದು ಉದ್ಗಾರ ತೆಗೆದು ವತ್ಸಲೆಯು ನಿಟ್ಟುಸುರು ಬಿಟ್ಟು ತನ್ನ ದೈವವನ್ನು ನಿಂದಿಸಿಕೊಂಡು ಅತ್ತಳು. ಸಾಧ್ವಿಯವಳು! ಪತಿಯು ಉದರ ರೋಗದಿಂದ ಪೀಡಿತನಾಗಿರುವ ಸಂಗತಿಯನ್ನರಿತು ಅವಳ ಹೊಟ್ಟೆಯಲ್ಲಿ ಉರಿಬಿದ್ದಿತು. ಮರುದಿವಸವೇ ಅವಳು ತಂದೆಯನ್ನು ಕರಕೊಂಡು ಪತಿದರ್ಶನಾರ್ಥವಾಗಿ ಮುಂಬಯಿಗೆ ಹೊರಟು ಹೋದಳು.
ಆನಂದರಾಯನು ದೇಶಸಂಚಾರವನ್ನು ಮಾಡಿಕೊಂಡು ಊರಿಗೆ ಬರುವದರೊಳಗಾಗಿಯೇ ವತ್ಸಲೆಯು ವಿಧವೆಯಾಗಿ ಎರಡು ತಿಂಗಳಾಗಿದ್ದವು. ಈ ಸಂಗತಿಯನ್ನರಿತು ದಯಾದ್ರ ಭಾವದವನಾದ ಆನಂದರಾಯನ ಎದೆಯೊಡೆದು ನೀರಾಯಿತು, ವತ್ಸಲೆಯು ತನಗಲ್ಲದವಳಾಗಿ ತನ್ನ ಕಣ್ಮರೆಯಲ್ಲಿ ಸುಖದಿಂದಿದ್ದರೆ ತನ್ನ ಮನಸ್ತಾಪಕ್ಕೆ ಎಷ್ಟೋ ಸಮಾಧಾನವಾಗುವದೆಂದು ಅವನು ಆಶಿಸಿದ್ದನು. “ಸುಲಕ್ಷಣವಾದ ರೂಪದಿಂದ ಮಂಡಿತರಾದವರು ವಿಶೇಷವಾಗಿ ದುಃಖಭಾಗಿಗಳಾಗುವದಿಲ್ಲವೆಂದು ಕವಿಗಳೂ ಸಾಮುದ್ರಿಕ ಲಕ್ಷಣಗಳನ್ನರಿತವರೂ ಹೇಳುತ್ತಿರುವದು ಸುಳ್ಳಾಯಿತೆ? ಬ್ರಹ್ಮದೇವನೆ, ನೀನು ವತ್ಸಲೆಯಂಥ ಲಲಿತಾಂಗಿಯನ್ನು ಶ್ರಮಪಟ್ಟು ನಿರ್ಮಿಸಿದೇಕೆ? ಅವಿಚಾರದಿಂದ ಆ ಕುಸುಮಕೋಮಲೆಯನ್ನು ದುಃಖಾಗ್ನಿಯಲ್ಲಿ ಬಿಸುಟಿದೇಕೆ? ವತ್ಸಲೆ, ಆಲ್ಹಾದಜನಕವಾದ ನಿನ್ನ ಚಾರುಹಾಸವು ಅಡಗಿಹೋಯಿತೆ? ಪ್ರಫುಲ್ಲಿತವಾದ ನಿನ್ನ ಮುಖ ಕಮಲವು ಬೆಂದು ಬಾಡಿ ಹೋಯಿತೆ? ನಿನ್ನ ತಾರುಣ್ಯವು ವ್ಯರ್ಥವಾಯಿತೆ? ನಿನ್ನ ಜನ್ಮವು ಯಾತಕ್ಕೂ ಬೇಡಾಯಿತೆ? ನಿನಗೆಷ್ಟು ದುಃಖ, ನಿನ್ನನ್ನು ಹಡೆದವರಿಗೆಷ್ಟು ದುಃಖ!” ಎಂದು ಆನಂದ ರಾಯನು ವ್ಯಸನಾಕುಲನಾಗಿ ಮರುಗಿದನು.
ಮಾಧವರಾಯರು ದುಃಖದಲ್ಲಿರುವಾಗ ಅವರನ್ನು ಮಾತಾಡಿಸಿ ಬರುವದು ಶಿಷ್ಟಾಚಾರವೂ ಸ್ನೇಹಾನುಬಂಧಿಗಳ ಧರ್ಮವೂ ಆಗಿರುವದರಿಂದ ಆನಂದನಿಗೆ ಅವರನ್ನು ಕಂಡು ಬರುವದು ಅವಶ್ಯವಾಗಿತ್ತು. ಜಗತ್ತಿನ ಆನುಭವವುಳ್ಳವರೂ ವಿಚಾರಶೀಲರೂ ಆಗಿದ್ದ ಮಾಧವರಾಯರೊಡನೆ ನಾಲ್ಕು ವೇದಾಂತದ ಮಾತುಗಳನ್ನಾಡಿ ಬರುವದು ಆನಂದರಾಯನಿಗೆ ದುಃಷ್ಕರವಾಗಿದಿಲ್ಲ. ಆದರೆ-
“ವತ್ಸಲೆಯ ಮೊರೆಯನ್ನು ನಾನೆಂತು ನೋಡಲಿ? ಅವಳು ಭೋರಿಟ್ಟು ಅತ್ತರೆ ನಾನೇನು ಸಮಾಧಾನವನ್ನು ಹೇಳಲಿ?” ಎಂದು ಚಿಂತಿಸುತ್ತೆ ಅವನು ಹೇಗೋ ಆ ಹೃದಯವಿದಾರಕವಾದ ಶಿಷ್ಟಾಚಾರವನ್ನು ತೀರಿಸಿಕೊಂಡು ಮನೆಗೆ ಬಂದನು.
ವತ್ಸಲೆಯ ವಿಷಯವಾಗಿ ಅನೇಕ ಪ್ರಕಾರದ ವಿಚಾರಗಳು ಆನಂದನ ಮನಸ್ಸಿನಲ್ಲಿ ಹೊಯ್ದಾಡಿ ಅವನನ್ನು ಹಗಲಿರಳು ಬಹುಪರಿಯಾಗಿ ಪೀಡಿಸಿದವು. ಪರಸ್ಪರ ವಿರುದ್ಧವಾದ ಮನೋವಿಕಾರಗಳು ಒಂದಕ್ಕೊಂದು ಅಖಂಡವಾಗಿ ಹೋರಾಡಿ ಒಂದರ ಬಲೆವನ್ನೊಂದು ಕುಂದಿಸಿದವು. ಆದರೂ ಶೃಂಖಲಾಬದ್ದವಾಗಿದ್ದ ಪ್ರೇಮಭಾವವೇ ಪ್ರಸ್ತುತವಾದ ಯುದ್ದದಲ್ಲಿ ತುಸು ಹಿಂಜರಿಯಿತು. ಯುದ್ಧ ಮಾಡುವವರು ತಾವು ದಣುಕೊಳುವದೊತ್ತಟ್ಟಿಗಿರಲಿ, ಅವರು ರಣಭೂಮಿಯನ್ನು ಉದ್ದಾಮತನದಿಂದ ಉಧ್ವಸ್ತವಾಗಿ ಮಾಡಿ ಬಿಡುವಂತೆ, ಮೇಲ್ಕಂಡ ಮನೋವಿಕಾರಗಳ ಯುದ್ಧದಲ್ಲಿ ರಣಭೂಮಿಯಾಗಿದ್ದ ಆನಂದರಾಯನ ಹೃದಯವು ಹಣ್ಣು ಹಣ್ಣಾಗಿ ಹೋಯಿತು.
ಚಿಂತಾನಿಮಗ್ನನಾದ ಆನಂದರಾಯನ ಮುಖದ ವರ್ಚಸ್ವವು ದಿನೇ ದಿನೇ ಕುಂದಿತು. ರಘುನಾಥರಾಯರು ಅವನ ಲಗ್ನದ ಮಾತು ತೆಗೆದರೆ ಅವನಿಗೆ ತಲೆಬೇಸರಿಕೆ. ಈ ಮಾತಿನ ವಿಷಯವಾಗಿ ಆನಂದರಾಯನು ತಂದೆಯವರೊಡನೆ ಮನಬಿಚ್ಚಿ ಮಾತಾಡುವದಿಲ್ಲೆಂದು ಅರಿತು ಅವನ ಮಾತೆಯವರು ಅವನನ್ನು ಕುರಿತು,
“ಆನಂದ, ನೀನು ದೊಡ್ಡವನಾದಿ; ಇನ್ನೆಷ್ಟು ದಿವಸ ನೀನು ಮದುವೆಯಿಲ್ಲದೆ ಇರಬೇಕು? ಪ್ರಬುದ್ಧನಾದ ಮಗನಿಗೆ ನಾವು ಒಡೆದು ಹೇಳುವ ಮಾತು ಯಾವದೂ ಇಲ್ಲ. ನಾವಿನ್ನು ನಿನ್ನ ಮದುವೆಯನ್ನು ಸರ್ವಥಾ ಮುಂದಕ್ಕೆ ಹಾಕುವದಿಲ್ಲ. ಈ ವಿಷಯದಲ್ಲಿ ನೀನು ಉದಾಸೀನನಾಗಿರುವದು ಏಕೆ? ನಿನ್ನ ಮನಸ್ಸಿನಲ್ಲಿ ಏನಿದೆ ಸ್ಪಷ್ಟವಾಗಿ ಹೇಳಿಬಿಡು” ಎಂದು ಕೇಳಿದರು.
ಆನಂದನು ಮಾತೆಯ ಮಮತಾ ಪೂರ್ಣವಾದ ಮುಖವನ್ನು ನೋಡಿ ಸಂತೋಷದಿಂದ ಮುಗುಳುನಗೆದೋರಿ “ಆಮ್ಮಾ ನಾನು ನಿಮ್ಮ ಆಜ್ಞೆಯನ್ನು ಮೀರಿದವನಲ್ಲ. ನನ್ನ ಹಿತಕ್ಕಾಗಿಯೇ ನೀವಿಷ್ಟು ಚಿಂತಿಸುತ್ತಿರುವದನ್ನು ನಾನು ಅರಿಯೆನೆ? ಈಗೀಗಲೇಕೋ ಮನಸ್ಸು ಕೊಂಚ ಉದ್ವಿಗ್ನವಾಗಿರುವದು. ಸದ್ಯಕ್ಕೆ ಐದಾರು ತಿಂಗಳು ಹೋಗಲಿ, ಆ ಮೇಲೆ ನಾನು ನಿಮ್ಮ ಇಚ್ಛೆಗೆ ಪ್ರತಿಕೂಲನಾಗಿ ನಡಕೊಳ್ಳುವದಿಲ್ಲ. ನನ್ನ ಮನೋಗತವನ್ನು ನೀವು ತಂದೆಯವರಿಗೆ ತಿಳಿಸಿರಿ.” ಎಂದು ಹೇಳಿಕೊಂಡನು.
“ತಿಳಿದವನಿಗೆ ನಾವು ಹೆಚ್ಚಾಗಿ ಎಷ್ಟು ಹೇಳೋಣ? ಆದರೂ ಸಣ್ಣ ಮಾತಿಗಾಗಿ ನಾವು ನಿನ್ನ ಮನಸ್ಸು ಮುರಿಯುವದಿಲ್ಲ. ಆರೇ ತಿಂಗಳ ಮಾತು ಅಹುದಲ್ಲೊ? ಆಗಲಿ.”
* * * *
ದುಃಖಭರಾರ್ತೆಯಾದ ವತ್ಸಲೆಯು ದಿನಕ್ಕೊಂದು ರೀತಿಯಾಗಿ ನವೆಯಲಾರಂಭಿಸಿದಳು. ಅವಳು ತನ್ನ ಕೋಣೆಯನ್ನು ಬಿಟ್ಟು ಹೊರಗೆ ಬೀಳುತ್ತಲೇ ಇದ್ದಿಲ್ಲ. ಜಾಣೆಯೂ ರೂಪವತಿಯೂ ಆಗಿರುವ ತನ್ನ ಮಗಳಿಗೆ ಸಮಾಧಾನವೆಂತಾದೀತೆಂದು ಅವಳ ತಂದೆಯು ಹಗಲಿರಳು ಯೋಚನೆ ಗೈಯುತ್ತಲೇ ಇದ್ದನು. ಮಾಧವರಾಯರು ಸುಧಾರಕ ಪಂಥದವರು. ವಿದ್ಯಾವತಿಯಾದ ತಮ್ಮ ಮಗಳನ್ನು ಎಲ್ಲಿಯಾದರೂ ಒಂದು ಸ್ತ್ರೀ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕಳನ್ನಾಗಿ ಮಾಡಿದರೆ ಅವಳು ತನ್ನ ದುಃಖವನ್ನು ಮರೆದಿರುವಳೆಂದು ಯೋಚಿಸಿದರು. ಅದಕ್ಕೆ ಅವಳು ಒಪ್ಪಲಿಲ್ಲ.
ಒಂದು ದಿನ ಆನಂದರಾಯನು ಮಾಧವರಾಯರ ಮನೆಗೆ ಸಮಾಚಾರಕ್ಕಾಗಿ ಬಂದಿದ್ದನು. ಆಗ ಮಾತಿಗೆ ಮಾತು ಬಂದಾಗ ಮಾಧವರಾಯರು ಅಂದದ್ದು:
“ಆನಂದರಾವ, ಏನು ಮಾಡುವದು? ಉಪಾಯವಿಲ್ಲದ ಮಾತಾಗಿದೆ. ವತ್ಸಲೆಗೆ ನಾವೆಷ್ಟು ಸಮಾಧಾನದ ಮಾತು ಹೇಳಿ ನೋಡಿದರೂ ಅವಳ ಚಿತ್ತಕ್ಕೆ ಶಾಂತಿಯಿಲ್ಲ. ಮದುವೆಯಾದರೂ ಪತಿಯ ಮೋರೆಯನ್ನು ಕೂಡ ಅವಳು ಕಾಣಲಿಲ್ಲ; ಸಂಸಾರದ ಸುಖವು ಒತ್ತಟ್ಟಿಗಿರಲಿ.”
“ರಾಯರೆ, ಮನುಷ್ಯನ ಯತ್ನವಿಲ್ಲದ ಮಾತಿಗೆ ದುಃಖಿಸಿ ಫಲವೇನು?” ಎಂದು ಆನಂದರಾಯನು ಉತ್ತರವನ್ನಿತ್ತನು.
“ಮನುಷ್ಯನಿಗೆ ಮೀರಿದ್ದು ಯಾವದು? ವತ್ಸಲೆಯ ಪುನರ್ವಿವಾಹವನ್ನು ಮಾಡಿದರೆ ಒಳಿತಾಗುವದೆಂದು ನಾನು ನೆನಿಸುತ್ತೇನೆ. ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಹೊಂದಿ ಸುಸಂಸ್ಕೃತರಾದವರು ನೀವು. ನಿಮ್ಮಂಥವರು ದೀನೆಯರಾದ ಆಬಲಾಜನರ ಉದ್ಧಾರಣಾರ್ಥವಾಗಿ ಯತ್ನ ಮಾಡದಿದ್ದರೆ ಮುಂದೆ ನಮ್ಮ ಸಮಾಜವು ಕೆಟ್ಟು ಹೋಗುವದಲ್ಲವೆ?”
“ರಾಯರೆ, ನಾನೆಷ್ಟರವನು! ಇಂಥ ಮಹತ್ಕಾರ್ಯದಲ್ಲಿ ನನ್ನಿಂದ ಆಗುವ ಸಹಾಯವಾದರೂ ಎಂಥದು?” ಎಂದು ಆನಂದನು ಹೇಳಿದನು.
“ಕೆಲಸ ಮಾಡಲಿಚ್ಚಿಸುವವನಿಗೆ ಮಾರ್ಗವು ತನ್ನಿಂದ ತಾನೇ ತೋರುವದು.”
ಮಾಧವರಾಯರ ಅಭಿಪ್ರಾಯವನ್ನು ಕೇಳಿ ಆನಂದರಾಯನ ಎದೆಯ ಮೇಲೆ ಗದಾಪ್ರಹಾರವಾದಂತೆ ಭಾಸವಾಯಿತು. “ಈ ರಾಯರು ನನಗೆ ವತ್ಸಲೆಯನ್ನು ಮದುವೆಮಾಡಿಕೊಳ್ಳೆಂದು ಸೂಚಿಸಿದರೇನು?” ಎಂದವನು ಚಿಂತಿಸಿದನು. ಹಿಂದಕ್ಕೆ ತಾರಮ್ಮನಾಡಿದ ನುಡಿಯನ್ನು ಕೇಳಿ ಹುಟ್ಟಿದ ಮನೋವಿಕಾರಗಳಂಥವೇ ಈ ಸಮಯದಲ್ಲಿ ಆನಂದನ ಹೃದಯದಲ್ಲಿ ಉದ್ಭವಿಸಿದವು. ಮತ್ತವನು ತಲ್ಲಣಗೊಂಡು ದಿಂಗುಬಡಿದವನಂತೆ ಮಾತಾಡಲರಿಯದೆ ಸುಮ್ಮನೆ ಕುಳಿತುಕೊಂಡನು.
“ಯಾಕೆ ಆನಂದರಾವ, ಮಾತಾಡಲೊಲ್ಲಿರಿ?” ಎಂದು ಮಾಧವ ರಾಯರು ಕೇಳಿದರು.
“ರಾಯರೆ, ಮಹತ್ವವಾದ ವಿಷಯವಿದು, ಪೂರ್ವ ಪಕ್ಷ ಪರ ಪಕ್ಷವಾಗಿ ಇದನ್ನು ನಾನು ವಿಮರ್ಶಿಸಿಲ್ಲ. ನಾನೇನು ಹೇಳಲಿ?” ಎಂದು ಆನಂದನು ತೊಂದರೆಗೊಂಡು ಅನಿರ್ವಾಹಕ್ಕಾಗಿ ಉತ್ತರ ಕೊಟ್ಟನು.
“ಆಗಲಿ! ಈ ವಿಷಯವಾಗಿ ಸಾಧಕಬಾಧಕವಾದ ಅನೇಕ ಗ್ರಂಥಾಧಾರಗಳೂ ಲೇಖಗಳೂ ನಿಬಂಧಗಳೂ ನನ್ನಲ್ಲಿ ಇವೆ. ಅವುಗಳನ್ನು ತೆಗೆದು ಕೊಂಡು ಹೋಗಿ, ನಾಲ್ಕು ದಿವಸಗಳಲ್ಲಿ ನೀವು ಪಟ್ಟಿರುವ ಅಭಿಪ್ರಾಯವನ್ನು ನನಗೆ ತಿಳಿಸಿದರೆ ನಾನು ತುಂಬಾ ಉಪಕೃತನಾಗುವೆನು.” ಎಂದು ಹೇಳಿ ಮಾಧವರಾಯರು ಆನಂದರಾಯನನ್ನು ತಮ್ಮ ವಾಚನದ ಕೋಣೆಗೆ ಕರಕೊಂಡು ಹೋದರು.
ಅಲ್ಲಿ ವತ್ಸಲೆಯು ಏನೋ ಓದುತ್ತ ಕುಳಿತಿದ್ದಳು. ಆನಂದರಾಯನನ್ನು ಕಾಣುತ್ತಲೆ ವತ್ಸಲೆಯು ಆಶ್ಚರ್ಯಚಕಿತಳಾಗಿ ಎದ್ದು ನಿಂತಳು. ಲಜ್ಜಾವನತ ಮುಖಿಯಾದ ಆ ಅಬಲೆಯು ಮೆಲ್ಲನೆ ಉಸುರ್ಗರೆದಳು.
“ವತ್ಸಲಾ, ನಿನ್ನ ಕುರ್ಚಿಯ ಮೇಲೆ ಕುಳಿತುಕೊಳ್ಳು, ಆನಂದರಾಯನೇನು ನಮಗೆ ಪರಕೀಯನೆ?” ಎಂದು ಮಗಳಿಗೆ ಹೇಳಿ ಮಾಧವರಾಯರು ತಾವೊಂದು ಕುರ್ಚಿಯ ಮೇಲೆ ಕುಳಿತುಕೊಂಡು ಆನಂದರಾಯನಿಗೂ ಕುಳ್ಳಿರ ಹೇಳಿದರು.
ಬಳಿಕ ರಾಯರು ತಮ್ಮ ಪುಸ್ತಕದ ಕಪಾಟು ತೆರೆದು, ಆನಂದರಾವ, ಇದು ನೋಡಿರಿ, ದಿವಾನ್ ಬಹಾದ್ದೂರ ರಘುನಾಥರಾಯರು ಪುನರಿವಾಹದ ಸಮರ್ಥನಕ್ಕಾಗಿ ಬರೆದ ಲೇಖವು. ಇದು ರಾಜಾರಾಮ ಶಾಸ್ತ್ರಿಗಳ ನಿಬಂಧವು. ಇದು ಪುನರ್ವಿವಾಹದ ಖಂಡನಾರ್ಥವಾಗಿ ಬಾಗಲಕೋಟೆಯ ಆಚಾರ್ಯರು ಮಾಡಿದ ಉಪನ್ಯಾಸವು. ಇದು ಶ್ರೀ ಸತ್ಯ ವೀರಸ್ವಾಮಿಗಳವರು ಬರೆಸಿದ ಗ್ರಂಥವು. ಇವುಗಳನ್ನೆಲ್ಲಾ ಚನ್ನಾಗಿ ಪರಾಮರ್ಶಿಸಿ ನೀವು ನಿಮ್ಮ ನಿಜವಾದ ಅಭಿಪ್ರಾಯವನ್ನು ಕೊಡುವಿರೆಂದು ನಾನು ಆಶಿಸುತ್ತೇನೆ” ಎಂದು ಕೇಳಿಕೊಂಡರು.
“ಯಾತಕ್ಕಿಷ್ಟು ಪ್ರಯತ್ನ?” ಎಂದು ವತ್ಸಲೆಯು ಚಕಿತಳಾಗಿ ತನ್ನ ಮನದಲ್ಲಿಯೇ ಚಿಂಚಿಸಿ ಕುತೂಹಲದಿಂದ ಆನಂದನ ಮುಖವನ್ನು ನೋಡಿದಳು. ವತ್ಸಲೆಯು ವ್ಯಸನದಿಂದ ಕೃಶಳಾಗಿದ್ದರೂ ಅವಳ ಮನೋಹರವಾಗಿದ್ದ ನೇತ್ರಗಳಲ್ಲಿಯ ಪ್ರಭೆಯು ರವಷ್ಟಾದರೂ ಕಡಿಮೆಯಾಗಿದ್ದಿಲ್ಲ. ಅವಳು ಅವಿವಾಹಿತಳಾದ ತರುಣಿಯಾಗಿದ್ದರೆ ಅವಳ ದೃಷ್ಟಿಪಾತದಿಂದ ಆನಂದರಾಯನ ಎದೆಯು ಪಂಚಶರನ ಬಾಣದಿಂದ ಸೀಳಿ ಹೋಗಬಹುದಾಗಿತ್ತು. ಆದರೂ ಆ ದೃಷ್ಟಿಯ ಪರಿಣಾಮವು ಆನಂದನನ್ನು ಬಾಧಿಸದಿರಲಿಲ್ಲ.
“ನಾನೆಷ್ಟು ಪರಿಯಾಗಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಈ ಪ್ರಸಂಗವು ತಾನಾಗಿ ಬಂದೊದಗಿತೆ?” ಎಂದು ಆನಂದನು ತನ್ನೊಳಗೆ ತಾನು ಚಿಂತಿಸಿ, ದೂಡಿದರೂ ಮತ್ತೆ ಮತ್ತೆ ತನ್ನ ಹೃದಯದಲ್ಲಿ ಸೇರಿಕೊಳ್ಳುತ್ತಿರುವ ಮನೋವಿಕಾರವನ್ನು ಕಂಡು ತನ್ನ ಹೃದಯದೌರ್ಬಲ್ಯವನ್ನು ನಿಂದಿಸಿದನು. ಲೇಖಗಳೆಲ್ಲ ತನ್ನ ಸ್ವಾಧೀನವಾದ ಕೂಡಲೆ ಅವನು ಚಟ್ಟನೆ ಸ್ಥಾನವನ್ನು ಬಿಟ್ಟು ಹೊರಟು ತನ್ನ ಮನೆಯ ಮಾರ್ಗವನ್ನು ಹಿಡಿದನು. ಹೋಗುವಾಗ ವತ್ಸಲೆಯ ಮುಖವನ್ನು ಅವನು ಕಣ್ಣೆತ್ತಿ ನೋಡಲಿಲ್ಲ. ಅವಳು ಅವನ ಮುಖವನ್ನು ನೋಡುತ್ತಲಿದ್ದಳೋ ಇಲ್ಲವೋ ಅವನಿಗೆ ತಿಳಿಯ ಬರಲಿಲ್ಲ.
ಆನಂದರಾಯನು ಆ ಕಾಗದಗಳನ್ನೆಲ್ಲ ತನ್ನ ಮನೆಗೆ ತಂದು ಮೇಜಿನ ಮೇಲೆ ಚೆಲ್ಲಿಕೊಟ್ಟು ಆರಾಮ ಕುರ್ಚಿಯಲ್ಲಿ ಬಿದ್ದು ಕೊಂಡು ವಿಚಾರದಲ್ಲಿ ಮುಳುಗಿದನು.
“ಮಾಧವರಾಯರು ಈ ಕೆಲಸವನ್ನು ನನಗೇಕೆ ಹೇಳಿದರು? ವತ್ಸಲೆಯ ಪುನರ್ವಿವಾಹವನ್ನು ಮಾಡಬೇಕೆನ್ನುವರೋ? ಮಾಡಿದರೆ ಮಾಡಲಿ, ಅದಕ್ಕೆ ನನ್ನ ಅಭಿಪ್ರಾಯವೇಕೆ? ಸುಧಾರಕರ ಸಮಾಜದಲ್ಲಿ ವಿಧವೆಯರ ಪುನರ್ವಿವಾಹವನ್ನು ಮಾಡುವದು ಗೊತ್ತಾಗಿ ಹಳೆಮಾತಾಗಿದೆ. ನನ್ನ ಮೇಲೆ ಬಲೆಯನ್ನು ಒಗೆಯುವರೇನು? ಪುನರ್ವಿವಾಹದ ಪದ್ಧತಿಯು ಅಸಮಂಜಸವಾಗಿರುವದೆಂದು ನಾನು ಅನೇಕವರ್ತಿ ಸಭೆಗಳಲ್ಲಿ ಆಡಿ ತೋರಿಸಿದ್ದೇನೆ. ಇನ್ನು ನಾನು ಮತಾಂತರವನ್ನು ತಳೆಯುವದು ಹೇಗೆ?” ಎಂದವನು ಆಲೋಚಿಸಿ ಮಾಧವರಾಯರು ಕೊಟ್ಟ ಲೇಖಗಳನ್ನು ತೆಗೆದುಕೊಂಡು ಓದದೆ ಅವುಗಳನ್ನು ಸುಮ್ಮನೆ ತಿರುತಿರುವಿ ನೋಡಿದನು.
“ಇವುಗಳನ್ನು ನಾನು ಓದಿಯೇ ಇದ್ದೇನೆ. ಶಾಸ್ತ್ರಾರ್‍ಥಗಳನ್ನು ಜಗ್ಗಾಡಿ ಅರ್ಥಗಳನ್ನು ಮಾಡಿಕೊಳ್ಳದೆ ಇದ್ದರೆ ಉಭಯ ಪಕ್ಷದವರಿಗೂ ಅನುಕೂಲವಿಲ್ಲ. ಮಾಧವರಾಯರಿಗೆ ಉತ್ತರವನ್ನು ಹೇಗೆ ಹೇಳಬೇಕು? ನಾನು ಪ್ರತಿ ಕೂಲವಾದ ಅಭಿಪ್ರಾಯವನ್ನು ಹೇಳಿದರೆ ಅವರು ಒಪ್ಪಿಕೊಳ್ಳುವರೆ? ಅನುಕೂಲವಾದದನ್ನೇ ಹೇಳಿದರೆ ನನ್ನ ಗಂಟು ಹೋಗುವದಾದರೂ ಏನು?” ಎಂದು ಯೋಚಿಸಿ ಅವನು ತನ್ನ ಅಭಿಪ್ರಾಯವನ್ನು ಸಂಕ್ಷೇಪವಾಗಿ ಬರೆದು ಮಾಧವರಾಯರ ಮನೆಗೆ ಕಳಿಸಿದನು.
ಇಷ್ಟಾದಬಳಿಕ ಕೆಲವು ದಿವಸಗಳಮೇಲೆ ಮಾಧವರಾಯರು ವತ್ಸಲೆಯ ಕೂಡ ಪುನರ್ವಿವಾಹದ ಬಗ್ಗೆ ವಾಗ್ವಾದ ನಡೆಸಿದರು. ತಂದೆಯವರ ಆಗ್ರಹವು ಹೆಚ್ಚಾಗಿ ತೋರಿದ್ದರಿಂದ ಅವಳು ಮಾತು ಬೆಳಿಸಲೂ ಇಲ್ಲ, ತನ್ನ ಮನೋಗತವನ್ನೂ ತಿಳಿಸಲಿಲ್ಲ.
“ಏನು ಬಂತಿದು! ಆನಂದರಾಯನು ಪುನರ್ವಿವಾಹಕ್ಕೆ ಒಪ್ಪಿದನೆ? ಕರ್ಮನಿಷ್ಟರಾದ ರುಘುನಾಥರಾಯರ ಮಗನು ಮತಾಂತರವನ್ನು ಹೊಂದಿದ್ದು ಹೇಗೆ? ನನ್ನ ವಿಷಯವಾಗಿ ಅವನು ತಳೆದಿರುವ ಪ್ರೇಮವು ಈಗ ವೃದ್ಧಿಂಗತವಾಗಿ ಅವನು ತನ್ನ ಕುಲಶೀಲಗಳನ್ನು ಮರೆತನೆ? ಪ್ರೇಮವೆ, ನೀನೊಮ್ಮೆ ಉದ್ಭವಿಸಿದೆಂದರೆ ಎಷ್ಟು ಕಡಿಕಡಿದು ಹಾಕಿದರೂ ನಿನ್ನ ಬೇರುಗಳು ಇಲ್ಲದಂತಾಗುವದಿಲ್ಲವಲ್ಲ! ಆನಂದನು ತಾನಾಗಿ ನನ್ನ ಬಳಿಗೆ ಬಂದು ಪುನರ್ವಿವಾಹಕ್ಕೆ ನನ್ನ ಸಮ್ಮತಿಯನ್ನು ಕೇಳಿದರೆ ಏನೆಂದು ಹೇಳಲಿ? ಅವನು ಬಹು ಸರಿಯಾಗಿ ಕೇಳಿಕೊಂಡರೆ ಒಲ್ಲೆನೆಂದು ಹೇಳಲಿಕ್ಕೆ ನನ್ನ ಹೀನಸತ್ಯವಾದ ಹೃದಯವು ಸಮರ್ಥವಾಗುವದೆ? ಪುನರ್ವಿವಾಹವು ಪವಿತ್ರವಾದದ್ದೆಂದು, ನನ್ನ ಅಂತರಾತ್ಮವು ಒಪ್ಪುವದಿಲ್ಲ.”
ಇಂಥ ಪ್ರಕಾರದ ವಿಚಾರಗಳಿಗೆ ಈಡಾಗಿ ವತ್ಸಲೆಯು ಎರಡು ಮೂರು ದಿವಸ ಚಿಂತಾವಿಷಾದ ಆಶೆ- ನಿರಾಶೆಗಳೆಂಬ ವೇಗವುಳ್ಳ ಅಭ್ರಪಟಲಗಳ ಪುನರಾವರ್ತನದಿಂದ ಸಂಪೀಡಿತಳಾದಳು. ಮೂಡಭಾವ, ಸುಧಾರಣೆ, “ಯದ್ಯಪಿ ಶುದ್ಧಂ ಲೋಕವಿರುದ್ಧಂ,” ಧರ್ಮಶಾಸ್ತ್ರಗಳ ಯಥಾರ್ಥಭಾವ, ಭಿಕ್ಷುಗಳ ಆಗ್ರಹದ ಮತ ಮುಂತಾದ ದ್ವಂದ್ವಗಳನ್ನು ಸಮತೋಲವಾಗಿ ಹಿಡಿಯಲು ಅವಳು ಯತ್ನಿಸಿದಳು. ಆನಂದನಲ್ಲಿ ಅವಳ ಪ್ರೇಮವೂ, ಗೋವಿಂದನಲ್ಲಿ ಅವಳ ಹಸ್ತವೂ ಸಿಕ್ಕು ಹೋಗಿದ್ದವು. ಗೋವಿಂದನು ಮೃತನಾಗಿದ್ದರೂ ಪಾಣಿಗ್ರಹಣದ ದೃಢವಾದ ಹಿಡಿತವು ಬಿಟ್ಟಿರುವದೋ ಇಲ್ಲವೋ ಎಂಬ ಶಂಕೆ, ಆನಂದನಲ್ಲಿ ಸಿಕ್ಕಿದ ಪ್ರೇಮವು ಏನು ಕೊಟ್ಟರೂ ಸುರಳಿ ಬರಲೊಲ್ಲದು.
“ಇಂದು ಆನಂದನು ನನ್ನ ಬಳಿಗೆ ಅಭಿಪ್ರಯಕ್ಕಾಗಿ ಬರುವನಂತೆ. ಈಗಿನಿಂದಲೇ ನನ್ನ ನಿಶ್ಚಯವು ಶಿಥಿಲವಾಗುತ್ತಿರುವಂತೆ ಭಾಸವಾಗುತ್ತದೆ. ಆದರೂ ಈ ಸಮಯದಲ್ಲಿ ಆದಷ್ಟು ಧೈರ್ಯವನ್ನು ತಾಳಿ ಮನೋವಿಕಾರಗಳಿಗೆ ಈಡಾಗದೆ ಆನಂದನೊಡನೆ ಮಾತಾಡುವೆನು” ಎಂದು ಯೋಚಿಸಿ ವತ್ಸಲೆಯು ತನ್ನ ಕೋಣೆಯಲ್ಲಿ ಎಡೆಯಾಡುತ್ತೆ ಕೆಲಹೊತ್ತು ಕಳೆದಳು. ಆನಂದನು ಬರುವ ಸಮಯವಾಯಿತು. ಅವಳು ಕಾತರಳಾದಳು. ಎದೆಯು ಧಕ್ಕಧಕ್ಕೆಂದು ಹಾರಲಾರಂಭಿಸಿತು. ಅವಳು ಉಸಿರಾಡಿಸುವದು ಕೋಣೆಯ ಹೊರಗೆ ನಿಂತವರಿಗೆ ಕೂಡ ಕೇಳಬರುವಂತಿತ್ತು. ನೀರಡಿಸಿ ನೀರು ಕುಡಿಯುವನೆಂದು ಅವಳು ಚಂಬುವನ್ನು ತೆಗೆದುಕೊಳ್ಳಹೋದರೆ ಕೈಯು ಥರ ಥರನೆ ನಡುಗಿತು, “ಯಾರು ಬಂದರು?” ಆನಂದನಲ್ಲ, ತಾರಮ್ಮನು. “ಆತ್ಯಾ, ಏನು ಸಮಾಚಾರ?” ಎಂದು ವತ್ಸಲೆಯು ಕೇಳಿದಳು, “ಯಾತರ ಸಮಾಚಾರ?” ಎಂದು ಏನೂ ಅರಿಯದ ತಾರಮ್ಮನು ಕೇಳಿದಳು. ತಾರಮ್ಮನು ತನ್ನ ಕೆಲಸಕ್ಕೆ ಹೋದಳು. ಅವಳು ಹೋದ ಬಳಿಕ ಅಲ್ಪ ಕಾಲ ದಲ್ಲಿಯೇ ಆನಂದನು ಧಗ್ಗನೆ ವತ್ಸಲೆಯ ಕೋಣೆಯಲ್ಲಿ ಬಂದು ನಿಂತನು. ಆ ತರುಣಿಯ ಮುಖದಲ್ಲಿ ಮೃದುಹಾಸವು ತೋರಿತೆನ್ನುವಷ್ಟರಲ್ಲಿಯೇ ಬಿಗಿಯಾದ ಗಂಭೀರತೆಯು ಅವಳ ಸುಂದರವಾದ ಮುಖವನ್ನು ಸಮಗ್ರವಾಗಿ ವ್ಯಾಪಿಸಿಕೊಂಡಿತು. ಆದರೆ ಆನಂದನನ್ನು ಮಾತಾಡಿಸಲು ವತ್ಸಲೆಯ ಅಂತರಂಗದಲ್ಲಿ ಧೈರ್ಯವಿರಲಿಲ್ಲ. ಕಟೆದ ಬೊಂಬೆಯ ಹಾಗೆ ಅವಳು ಸ್ತಬ್ಬಳಾಗಿ ನಿಂತುಬಿಟ್ಟಳು.
ಆನಂದರಾಯನು ಬಂದವನೇ ನೆಟ್ಟನೊಂದು ಕುರ್ಚಿಯ ಮೇಲೆ ಕುಳಿತುಕೊಂಡು, ವತ್ಸಲೆಯ ವಿಲಕ್ಷಣವಾದ ಮುಖಮುದ್ರೆಯನ್ನು ಆಗಾಗ್ಗೆ ಕಣ್ಣೆತ್ತಿ ನೋಡತೊಡಗಿದನು. ಅವನಾದರೂ ಅವಳೊಡನೆ ಮಾತಾಡುವೆನೆಂದರೆ ಸಹಸಾ ಹೇಗೆ ಉಪಕ್ರಮಿಸಬೇಕೆಂಬುದನ್ನರಿಯದೆ ಮೇಜಿನ ಮೇಲಿದ್ದ “ಸ್ತ್ರೀಶಿಕ್ಷಣದ ಮಹತ್ವವು” ಎಂಬ ಪುಸ್ತಕವನ್ನು ಕೈಯಲ್ಲಿ ತೆಗೆದುಕೊಂಡು, ಪುಟಗಳನ್ನು ಹಿಂದೆ ಮುಂದೆ ಮಾಡುತ್ತೆ ‘ವತ್ಸಲಾ’ ಎಂದು ಮೆಲ್ಲನೆ ಸಂಬೋಧಿಸಿದನು.
ವತ್ಸಲೆಯು ದೀರ್ಘಶ್ವಾಸವನ್ನು ಬಿಟ್ಟು ತನ್ನ ಹೃತ್‍ಕ್ಷೋಭವನ್ನು ತುಸು ಸಡಲಿಸಿ “ಏನು?” ಎಂದಿಷ್ಟು ಕೇಳಿದಳು.
ಮುಂದೇನು? ಹತ್ತು ನಿಮಿಷಗಳಾದರೂ ಆನಂದನ ಮುಖದಿಂದ ಒಂದು ಮಾತು ಹೊರಡಲೊಲ್ಲದು. ವತ್ಸಲೆಯು ಕೆಳಗೆ ಚೆಲ್ಲಿದ ತನ್ನ ದೃಷ್ಟಿಯನ್ನು ಕುತೂಹಲದಿಂದ ಮೇಲಕ್ಕೆತ್ತಿ ಆನಂದನ ಮುಖವನ್ನು ನೋಡಿದಳು. ಅಷ್ಟೇ ಧೈರ್ಯದಿಂದ ಅವನು “ವತ್ಸಲೆ, ನಾನೇಕೆ ಬಂದಿರುವೆನೆಂಬದು ನಿನಗೆ ಗೊತ್ತಾಗಿರುವದೇನು?” ಎಂದು ಪ್ರಶ್ನೆ ಮಾಡಿದನು.
“ನಾನೇನು ಬಲ್ಲೆ?”
“ಮಾಧವರಾಯರು ನಿನ್ನ ಮುಂದೆ ಏನೂ ಹೇಳಲಿಲ್ಲವೆ?”
“ಅವರೇನೇನೋ ಹೇಳಿದರು. ಆಗ ನನ್ನ ಮನಸ್ಸು ಸ್ಥಿರವಾಗಿರಲಿಲ್ಲವಾದ್ದರಿಂದ ನನಗೇನೂ ತಿಳಿಯಲಿಲ್ಲ.” ಎಂದು ವತ್ಸಲೆಯು ಕಂಪಿತವಾದ ಧ್ವನಿಯಿಂದ ಉತ್ತರ ಕೊಟ್ಟಳು.
“ಆಂದರೆ? ಅವರು ಹೇಳಿದ್ದು ನಿನಗೆ ಸರಿಯಾಗಿ ತೋರಲಿಲ್ಲವೇನು?” ಎಂದು ಆನಂದನು ಶಂಕಿತನಾಗಿ ಕೇಳಿದನು.
ಬಹಳೊತ್ತು ಧ್ಯಾನಿಸಿ ವತ್ಸಲೆಯಂದದ್ದು : “ನಿಮಗೆ ಸರಿಯಾಗಿ ತೋರಿತೇನು?”
“ವತ್ಸಲೆ, ನನಗೆಂತೇ ತೋರಲಿ, ಕೇವಲ ನಿನ್ನ ಹಿತಕ್ಕಾಗಿ ನಾನು… ಮಾಧವರಾಯರ ಅಭಿಪ್ರಾಯಕ್ಕೆ ಒಳಪಟ್ಟೆನು.”
ಆನಂದರಾಯನು ಆಡಿದ್ದರ ಸತ್ಯತೆಯ ಬಗ್ಗೆ ಶಂಕೆ ತೆಗೆದುಕೊಳ್ಳಲು ಆಸ್ಪದವೇ ಇಲ್ಲೆಂಬದನ್ನು ವತ್ಸಲೆಯು ಸಂಪೂರ್ಣವಾಗಿ ಅರಿತವಳು. ವಿದ್ಯುತ್ ಪ್ರವಾಹದ ಸೆಳಕಿನಿಂದಲೋ ಎಂಬಂತೆ ವತ್ಸಲೆಯು ಆನಂದನ ನುಡಿ ಕೇಳಿ ತಟ್ಟನೆ ವಿಭ್ರಮಗೊಂಡಳು. ತೀವ್ರವಾದ ಶುಧಿರಾಭಿಸರಣದಿಂದ ಅವಳ ಮುಖವು ವಿಲಕ್ಷಣವಾದ ರಕ್ತಿಮೆಯನ್ನು ಹೊಂದಿತು. ಕುತ್ತಿಗೆ ಯುಬ್ಬಿ ಕಣ್ಣುಗಳೊಳಗಿಂದ ಅಶ್ರು ಬಿಂದುಗಳು ತಟತಟನೆ ನೆಲಕ್ಕುದುರಿದವು. “ಆನಂದರಾವ್……… ” ಎಂದಿಷ್ಟು ನುಡಿಯಬೇಕಾದರೆ ಅವಳಿಗೆ ಶ್ರಮವಾಯಿತು.
“ಹೇಳು ವತ್ಸಲಾ, ನಿಃಶಂಕವಾಗಿ ಮಾತಾಡು. ನಾನಿನ್ನೂ ಮುಂಚಿನ ಆನಂದನೇ ಎಂದು ತಿಳಿದು ಸಂಕೋಚಗೊಳ್ಳದೆ ಮಾತಾಡು. ”
“ಓರ್ವ ಹತಭಾಗ್ಯಳ ವಿಷಯವಾಗಿ ಕನಿಕರಪಡುವದು ತತ್ಕಾಲ ಮಾತ್ರವಾದದ್ದು. ನಾನು ದೀನಾವಸ್ಥೆ ಹೊಂದಿದೆನೆಂದು ಕಂಡು ನೀವು ಕನಿಕರ ಪಡುವದು ವಿಹಿತವೇ. ಆದರೆ ಆ ಕನಿಕರಕ್ಕಾಗಿ ನೀವು ನಿಮ್ಮ
ಸುಖಕ್ಕೆ ತಿಲಾಂಜಲಿಯನ್ನು ಕೊಟ್ಟು, ಬಳಿಕ ಆಮರಣ ಪಶ್ಚಾತ್ತಾಪಕ್ಕೆ ಈಡಾಗುವಿರೆಂಬದನ್ನು ನೀವು ವಿಚಾರಿಸಿರುವಿರೋ? ಯಃಕಶ್ಚಿತವಾದ ನನ್ನ ಹಾಳು ಜೀವಿತವೆತ್ತಣದು! ಅದಕ್ಕಾಗಿ ಈ ದೇಶಕ್ಕೆ ಅಲಂಕಾರರಾಗತಕ್ಕನರಾದ ನೀವು ನಿಮ್ಮ ಸುಕೀರ್ತಿಗೆ ಹಾನಿ ತರುವಂಥ ಉದ್ಯೋಗವನ್ನು ಮಾಡುವದೇನು!” ಎಂದು ವತ್ಸಲೆಯು ಆನಂದನ ಮುಖವನ್ನು ನೋಡುತ್ತೆ ನುಡಿದಳು.
“ವಿವೇಕಜ್ಞಳಾದ ನನ್ನ ವತ್ಸಲೆ, ಈ ವಿಷಯದಲ್ಲಿ ನಾನು ಪಶ್ಚಾತಾಪ ಹೊಂದುವ ಕಾರಣವೇ ಇಲ್ಲ. ನಿನ್ನಲ್ಲಿ ನನ್ನ ಪ್ರೇಮವು ಆಸಕ್ತವಾಗಿ ಬಹುಕಾಲವಾಗಿಹೋಯಿತು, ಇದುವರೆಗೂ ಅದು ನಿಶ್ಚಲವಾಗಿ ಉಳಿದಿರುವದು, ನಿರ್ಭರವಾದ ಪ್ರೇಮದಿಂದ ನಾನು ನಿನ್ನ ಪಾಣಿಗ್ರಹಣವನ್ನು ಮಾಡಿದರೆ ಪಶ್ಚಾತ್ತಾಪವೆಲ್ಲಿಂದ ಬರುವದು?” ಎಂದು ಆನಂದರಾಯನು ಗದ್ಗದ ಕಂಠವಾಗಿ ನುಡಿದು, ವತ್ಸಲೆಯ ಮನೋಹರವಾದ ಮುಖವನ್ನು ಏಕಾಗ್ರ ದೃಷ್ಟಿಯಿಂದ ನೋಡುತ್ತ ಕುಳಿತನು.
ಈ ಮಾತು ಕೇಳುತ್ತಲೆ, ವತ್ಸಲೆಯ ಹೃದಯವು ಕಂಪಿಸಿತು. ಚಿತ್ತಕ್ಕೆ ಭ್ರಮಬಂದಂತಾಗಿ ಆ ಮಂದಿರಕ್ಕೆ ಮಂದಿರವೇ ಆಂದೋಲನವನ್ನು ಹೊಂದುತ್ತಿರುವಂತೆ ಅವಳಿಗೆ ಭಾಸವಾಯಿತು. ಇಂಥ ಸ್ಥಿತಿಯಲ್ಲಿ ಅವಳೆಂತು ಮಾತಾಡಬಲ್ಲಳು? ಹತ್ತೆಂಟು ನಿಮಿಷಗಳಾದರೂ ವತ್ಸಲೆಯ ಮುಖದಿಂದ ಒಂದು ಅಕ್ಷರವಾದರೂ ಹೊರಡಲಿಲ್ಲ.
ಆನಂದನು “ವತ್ಸಲಾ!” ಎಂದು ಮೆಲ್ಲನೆ ಉಸುರಿದನು.
ವತ್ಸಲೆಯು ಸ್ವಪ್ನದಿಂದೆಚ್ಚಂತಾಗಿ “ಏನು?” ಎಂದು ಮೂಢೆಯಂತೆ ಕೇಳಿದಳು.
“ವತ್ಸಲೆ, ನಿನ್ನನ್ನು ನಾನು ವಂಚಿಸಬಂದಿಲ್ಲ. ನೀನು ನನ್ನನ್ನು ಪ್ರೀತಿಸುತ್ತಿದ್ದರೆ ಇದೆಲ್ಲ ಮಾತು. ಇಲ್ಲವಾದರೆ ಈ ಸಂವಾದವು ಇಲ್ಲಿಗೆ ಸಾಕು?”
“ನಿಷ್ಫಲವಾದ ಪ್ರೀತಿಯನ್ನು ವ್ಯಕ್ತಪಡಿಸಿ ಪ್ರಯೋಜನವೇನು?” ಎಂದು ನುಡಿದು ವತ್ಸಲೆಯು ಲಜ್ಜಿತಳಾಗಿ ತನ್ನ ಮುಖವನ್ನು ಎರಡೂ ಕೈಗಳಿಂದ ಮುಚ್ಚಿಕೊಂಡಳು.
ಆನಂದನ ಪರವಶನಾಗಿ ಎದ್ದು ವತ್ಸಲೆಯ ಕೈಹಿಡಿದು, “ಪ್ರಿಯೆ, ನೀನು ನನ್ನನ್ನು ಪ್ರೀತಿಸುತ್ತಿದ್ದರೆ ನಾವು ಮತ್ತೊಂದು ವಿಚಾರವನ್ನು ಮಾಡದೆ ಪುನರ್ವಿವಾಹದ ರೀತಿಯಿಂದ ದಂಪತಿಗಳಾಗಿ ಸುಖದಿಂದಿರಬಲ್ಲೆವಷ್ಟೆ?” ಎಂದು ಅವಳ ಕಣ್ಣಲ್ಲಿ ಕಣ್ಣಿಟ್ಟು ಮಂದಸ್ಮಿತನಾಗಿ ಕೇಳಿದನು.
ಆನಂದನು ತನ್ನ ಕೈ ಹಿಡಿದಿರಲು ಅಂಥ ಅನನುಭೂತವಾದ ಸುಖ ಸ್ಪರ್ಶದಿಂದ ಮೋಹಿತಳಾಗಿ ಕೈ ಬಿಡಿಸಿಕೊಳ್ಳುವದನ್ನು ಮರೆತು, ವತ್ಸಲೆಯು ಸುಮ್ಮನೆ ಕುಳಿತುಕೊಂಡಳು. ಅವಳು ಒತ್ತಾಯದಿಂದ ಸಂಗ್ರಹಿಸಿಕೊಂಡಿರುವ ನಿಶ್ಚಯವೆಲ್ಲ ಯಾವಾಗಲೋ ಜಾರಿಹೋಗಿತ್ತು. ಮಾತಾಡುವಷ್ಟು ಚಿತ್ತಸ್ವಾಸ್ಥವಾದ ಬಳಿಕ ಅವಳು “ಆನಂದರಾವ ಕೈ ಬಿಡಿರಿ! ನನ್ನನ್ನು ಮೋಹಕ್ಕೆ ಈಡುಮಾಡಬೇಡಿರಿ. ಪುನರ್ವಿವಾಹದ ವಿಚಾರವು ನನಗೆ ಚೆನ್ನಾಗಿ ತೋರಲೊಲ್ಲದು.” ಎಂದು ನುಡಿದಳು.
“ಯಾಕೆ?” ಎಂದು ಆನಂದನು ಚಕಿತನಾಗಿ ಕೇಳಿದನು.
“ಯಾಕೆಂದರೆ, ಪುನರ್ವಿವಾಹಿತರಾದ ನಮ್ಮನ್ನು ಸಮಾಜವು ಅಂಗೀಕರಿಸದು.”
“ಪ್ರಿಯೆ, ಸಮಾಜದ ಗೊಡವೆ ನಮಗೇಕೆ? ಸುಧಾರಣೆಯ ಪಂಥದವರು ನಮ್ಮನ್ನು ಆದರದಿಂದ ಸನ್ಮಾನಿಸುವರಲ್ಲೆ?”
“ಸುಧಾರಣೆಯ ಪಂಥವು ನಮ್ಮ ಸಮಾಜದ ತಿರಸ್ಕೃತವಾದ ಚಿಕದೊಂದು ಮೇಳೆಯು. ಪ್ರಾಚೀನ ಸಾಂಪ್ರದಾಯಾನುವರ್ತಿಗಳಲ್ಲಿ ಅನೇಕರು ನಮ್ಮ ಆಪ್ತರೂ ಸ್ನೇಹಿತರೂ ಇರುವರು. ಅವರಿಗೆಲ್ಲ ನಾವು ಬೇಡಾಗಿರುವದು ಬಾಳುವೆಯೆ?” ಎಂದು ವತ್ಸಲೆಯು ಚಿಂತಾಕುಲೆಯಾಗಿ ನುಡಿದಳು.
“ಕೊಂಚ ವಿಚಾರ ಮಾಡಿ ನೋಡಿದರೆ, ನಿನ್ನ ಸಂಶಯದ ಪರಿಹಾರವಾಗುವದು. ನಮ್ಮ ಸಮಾಜದವರು ಗುಣಗ್ರಾಹಿಗಳಲ್ಲ. ನಿಜವಾದ ಧರ್ಮಶಾಸ್ತ್ರವು ಹೇಳುತ್ತಿರುವದೇನು, ನಾವು ಆಚರಿಸುತ್ತಿರುವದೇನು ಎಂಬದರ ವಿವೇಕವು ಅವರಿಗಿಲ್ಲ. ರೂಢವಾದ ಮೂಢ ವಿಚಾರಗಳೇ ಶಿಷ್ಟಾಚಾರವಾಗಿವೆ. ಹೊಸ ಶೋಧ-ಸುಧಾರಣೆಗಳೆಲ್ಲ ಅವರ ಮತದಿಂದ ಅಧರ್ಮವಾಗಿವೆ. ಹೊಗೆಬಂಡಿಯಲ್ಲಿ ಪ್ರವಾಸ ಮಾಡುವದು ಮೊದಲು
ಮೊದಲು ಧರ್ಮಬಾಹ್ಯವಾಗಿತ್ತು. ನಿಲುವಂಗಿಯನ್ನು ಬಿಟ್ಟು ಯುರೋಪಿಯನ್ನರ ಮಾದರಿಯ ಕೋಟುಗಳನ್ನು ತೊಟ್ಟು ಕೊಂಡವನು ಹತ್ತು ಹದಿನೈದು ವರ್ಷಗಳಾಚೆಗೆ ಧರ್ಮಹೀನರಲ್ಲಿ ಗಣನೆಯನ್ನು ಹೊಂದುತ್ತಿದ್ದನು. ಯುರೋಪಿಯನ್ನರನ್ನು ಮುಟ್ಟಿ ಬಂದವನಿಗೆ ಹೊಲೆಮೈಲಿಗೆ, ಈಗ ಅದೇ ಸಮಾಜದವರು ಆಂಗ್ಲರನ್ನು ಮುಟ್ಟಿ ನಿಃಶಂಕವಾಗಿ ಮನೆಗೆ ಬರುತ್ತಾರೆ. ಕೋಟುಗಳೇ ಪ್ರಬಲವಾಗಿ ಮುಂಚಿನ ನಿಲುವಂಗಿಗಳು ಎಲ್ಲಿಯೋ ಅಡಗಿದವು. ಹೊಗೆಬಂಡಿಗಳಲ್ಲಿ ಪ್ರಯಾಣ ಮಾಡದೆ ಇದ್ದ ಆಚಾರ್ಯ ಪುರಾಣಿಕರಿಲ್ಲವೇ ಇಲ್ಲ. ಹೊಸ ಸಾಂಪ್ರದಾಯವನ್ನು ಜಾಣನೂ ಧೈರ್ಯಶಾಲಿಯೂ ಆದವನೊಬ್ಬನು ಸಮಾಜದಲ್ಲಿ ನೂಕಿದನೆಂದರೆ, ಆ ಸಾಂಪ್ರದಾಯವು ಪ್ರಾರಂಭದಲ್ಲಿ ಕೊಂಚ ಅನಾದರವನ್ನು ಹೊಂದಿದರೂ ಕಡೆಗೆ ಅದೇ ಸಾಂಪ್ರದಾಯವೇ ಪ್ರಶಸ್ತವಾಗಿ ಮೆರೆಯುವದು.
ಇದೇ ಮೇರಿಗೆ ಜನರು ಸಮಾಜದ ಭೀತಿಯಿಂದ ಪುನರ್ವಿವಾಹದ ಪದ್ಧತಿಯನ್ನು ಬಿಟ್ಟರೆ ಬಿಟ್ಟೇ ಹೋಗುತ್ತದೆ. ಪುರಸ್ಕರ್ತರು ಧೈರ್ಯದಿಂದ ಆ ಮಾರ್ಗವನ್ನು ಅವಲಂಬಿಸಿದರೆ ಮುಂದೆ ಅದೇ ಮೆಲ್ಲಮೆಲ್ಲನೆ ಪ್ರಚಾರದಲ್ಲಿ ಬಂದು ಜನರ ಆದರಕ್ಕೆ ಪಾತ್ರವಾಗುವದು.
ಈ ವತ್ಸಲೆಯು ಔತ್ಸುಕ್ಯದಿಂದ ಆನಂದರಾಯನ ಸುಂದರವಾದ ಮುಖವನ್ನು ನೋಡುತ್ತಲೇ ಇದ್ದಳು. ಅವನ ವಾದವು ಮುಗಿದ ಬಳಿಕ ಆ ಚತುರೆಯು ತಳೆದ ನಗೆಯಲ್ಲಿ ಸಂಶಯ ನಿವಾರಣದ ಪ್ರಸನ್ನತೆಯು ಕಂಡುಬರಲಿಲ್ಲ.
“ಸುಂದರಿ, ನಿನ್ನ ಶಂಕೆಯು ಇನ್ನೂ ದೂರಾಗಿಲ್ಲವೆಂದು ತೋರುತ್ತದೆ ಶಾಸ್ವಾರ್ಥವನ್ನು ಕುರಿತು ನಿನಗೆ ವಾದ ಮಾಡುವದಿದೆ ಏನು?”
“ಶಾಸ್ತ್ರಾರ್ಥವು ದೊಡ್ಡ ವಿಷಯವಲ್ಲ. ಉಭಯ ಪಕ್ಷದವರೂ ಆರೆವಾಸಿಯಾಗಿ ಸೋತಿದ್ದರೂ ದುರಾಗ್ರಹದಿಂದ ವಾದಿಸುತ್ತಿರುವರು. ಆದರೆ….” ಎಂದು ವತ್ಸಲೆಯು ಲೀಲೆಯಿಂದ ನುಡಿದು ನಕ್ಕು ಮುಂದೆ ಮಾತಾಡಲರಿಯದೆ ತಡೆದಳು.
“ತಡೆಯುವದೇಕೆ ಪ್ರಿಯೆ, ಸಾಗಲಿ.”
“ಇಂಥ (ಪ್ರಿಯಳೆಂಬ) ಸಂಬೋಧನವೇಕೆ?” ಎಂದು ವತ್ಸಲೆಯು ಕೊಂಚ ಕೋಪವನ್ನು ತಳೆದಂತೆ ನಟಿಸಿ ಕೇಳಿದಳು.
“ಈ ರೀತಿಯಾಗಿ ಇದೇ ಪ್ರಸಂಗದಲ್ಲಿ ನಾನು ಸಂಬೋಧಿಸಿ ಹತ್ತು ನಿಮಿಷಗಳಾಗಿಲ್ಲ. ಆಗೇಕೆ ಈ ಆಕ್ಷೇಪಣೆ ಬರಲಿಲ್ಲ?” ಎಂದು ಆನಂದನು ಮಂದಹಾಸದಿಂದ ನುಡಿದನು.
ವತ್ಸಲೆಯು ನಿರುತ್ತರಳಾದಳು. ಆಮೇಲೆ ಆನಂದನು “ಆದರೆ…. ಎಂದು ತಡೆದಿಯೇಕೆ? ನಿನ್ನ ಆಕ್ಷೇಪಣೆಯೇನು?”
“ನೀವು ಹೇಳಿದ್ದರಲ್ಲಿ ನಿಮಗೆಯೇ ನಂಬಿಗೆ ಇರುವದೇನು? ಪುನರ್ವಿವಾಹವು ಪವಿತ್ರವಾದದ್ದೆಂದು ನಿನ್ನ ನಿಜವಾದ ಮತವೊ?”
“ಹೇಗೆ ಹೇಳಲಿ ಮನೋರಮೆ? ಶಪಥಮಾಡಿ ಹೇಳಲಿಯಾ?”
“ಹೇಗೆ ಹೇಳಿದರೂ ನಂಬುವೆನು. ನಿಮ್ಮಲ್ಲಿ ನನಗೆ ಸಂಪೂರ್ಣವಾದ ನಂಬಿಗೆ” ಎಂದು ನುಡಿದು ವತ್ಸಲೆಯು ಪ್ರೇಮಪೂರಿತವಾದ ಸುಹಾಸವನ್ನು ತಳೆದಳು.
ಆಗ ಆನಂದರಾಯನು ವತ್ಸಲೆಯನ್ನು ತನ್ನ ಬಾಹುಪಾಶದಲ್ಲಿ ಪಿಡಿದು, ಅವಳ ಕೆಂದುಟಿಯನ್ನು ಚುಂಬಿಸಿ, “ಇದು ನನ್ನ ನಂಬಿಗೆ ನಿಶ್ಚಯಗಳ ಕುರುಹು” ಎಂದು ಸಂಭ್ರಮದಿಂದ ನುಡಿದನು.
ಮುಂದೆ ಎಂಟಾನೆಂಟು ದಿವಸ ಬೆಂಗಳೂರಲ್ಲೆಲ್ಲ ಪುನರ್ವಿವಾಹವನ್ನು ಕುರಿತು ಚರ್ಚೆ, ಶಾಸ್ತ್ರರ್ಥ, ವಾಗ್ವಾದ, ಕಲಹ, ಬೊಬ್ಬಾಟಗಳ ದೊಡ್ಡದೊಂದು ಸ್ತೋಮವೇ ಎದ್ದಿತು. ಶಾಸ್ತ್ರಾರ್ಥದ ನಿರ್ಣಯವಾದ ಮೇರೆಗೆ ನಡಕೊಳ್ಳೋಣ ಎಂದು ಹೇಳಿ ಸಮವೃತ್ತಿಗಳಾದ ಮಹಾತ್ಮರ ಸಂಖ್ಯೆಯು ತೀರ ಕಡಿಮೆ. “ಕಲಿಕಾಲ! ಸುಧಾರಕ ಮುಂಡೆ ಮಕ್ಕಳು ಧರ್ಮವನ್ನು ಕೆಡಿಸಿಬಿಡುತ್ತಾರೆ,” ಎಂದು ಹಸಿಬಿಸಿ ಪಂಡಿತನಾದ ಮಠಾಧಿಪತಿಯೋರ್ವನು ಅಧಿಕಾರದ ಉನ್ಮಾದದಿಂದ ಗೊಗ್ಗರ ಧ್ವನಿ ತೆಗೆದು ಕೂಗಿಕೊಳ್ಳುತ್ತಿದ್ದನು.
“ಬ್ರಾಹ್ಮಣರೇ ಸ್ವಕಪೋಲಕಲ್ಪಿತವಾದ ಕ್ಷೇಪಕ ಶ್ಲೋಕಗಳನ್ನು ಧರ್ಮಶಾಸ್ತ್ರ ಪುರಾಣಗಳಲ್ಲಿ ಸೇರಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವದಕ್ಕಾಗಿ, ಸಮಾಜಕ್ಕೆ ದುಃಸ್ಥಿತಿಯನ್ನು ಉಂಟುಮಾಡಿದರು. ನಾವು ಶಾಸ್ತ್ರಗಳನ್ನು ಲೆಕ್ಕಿಸದೆ ನಮಗೆ ಉಚಿತವಾಗಿ ತೋರಿದ್ದನ್ನೇ ಮಾಡುವೆವು.” ಎಂದು ವರ್ಣಸಂಕರ ಪ್ರಿಯರಾದ ಕೆಲಜನ ಉನ್ಮತ್ತರು ಬೊಬ್ಬಿರಿದರು. ಶಾಸ್ತ್ರ ವಿಚಾರಗಳ ಗಂಧರಹಿತರಾದ ಮೂಢರು, ಕೇವಲ ಬಾಯಿಪ್ರಸಾದಗಳನ್ನೇ ಮಾಡುತ್ತೆ ವೃಥಾ ವ್ಯಾಜ್ಯವನ್ನು ಮಾಡಿದರು.
ಪುನರ್ವಿವಾಹವನ್ನು ನಿಷೇಧಿಸಬೇಕೆಂದು ರಘುನಾಥರಾಯರು ಮಿತಿ ಮೀರಿ ಸಾಹಸಮಾಡಿದರು. ಆದರೆ ‘ಹಗ್ಗ ಹರಿಯಲಿಲ್ಲ, ಕೋಲು ಮುರಿಯಲಿಲ್ಲ’ವೆಂಬ ನಾಣ್ನುಡಿಯಂತೆ, ವಾದದಲ್ಲಿ ಏನೂ ನಿಷ್ಪನ್ನವಾಗಲಿಲ್ಲ. ಮಗನಾದ ಆನಂದನು ತನ್ನ ಆಗ್ರಹವನ್ನು ಬಿಡಲಿಲ್ಲ. ಕಡೆಗೆ ರಘುನಾಥರಾಯರು ಐಹಿಕ ವಿಚಾರಗಳನ್ನೆಲ್ಲ ಬಿಟ್ಟು ಕೊಟ್ಟು ಕಾಶೀವಾಸಕ್ಕಾಗಿ ಹೋಗುವವರಾಗಿದ್ದಾರೆ. ಅವರು ಕಾಶಿಗೆ ಹೋದ ಬಳಿಕ ಆನಂದ ವತ್ಸಲೆಯರ ಪುನರ್ವಿವಾಹದ ಸಮಾರಂಭವಾಗತಕ್ಕದ್ದೆಂದು ಗೊತ್ತಾಗಿದೆ.
*****