John Osborne ಯ Look Back in Anger ಅತೃಪ್ತ ಮನಸ್ಸು ಮತ್ತು ಬದುಕಿನ ಚಿತ್ರಣ

John Osborne ಯ Look Back in Anger ಅತೃಪ್ತ ಮನಸ್ಸು ಮತ್ತು ಬದುಕಿನ ಚಿತ್ರಣ

ಅದು ವಸಂತ ಮಾಸದ ಒಂದು ಭಾನುವಾರ. ಆದರೂ ಸಣ್ಣಗೆ ಸುರಿವ ಮಳೆ. ಮೋಡ ಕವಿದ ವಾತಾವರಣ. ಜಿಮ್ಮಿ ಪೋರ್‍ಟರ್, ಮೆತ್ತಗಿನ ಸ್ವಭಾವದ ಆತನ ಪತ್ನಿ ಎಲಿಸನ್, ಮತ್ತು ಆಕೆಯ ಗೆಳೆಯ ನಂಬಿಗಸ್ಥ, ಸದ್ಗುಣಿ ಕ್ಲಿಫ್ ಮನೆಯಲ್ಲಿದ್ದಾರೆ. ಅವರೇನೂ ಶ್ರೀಮಂತರಲ್ಲ. ಅಲ್ಲಲ್ಲಿ ಚೆಲ್ಲಾಡಿದ ಬಟ್ಟೆಗಳು, ತುಂಡಾದ ಆಟಿಕೆಗಳು, ಪುಸ್ತಕಗಳು ಹರಡಿಕೊಂಡಿವೆ. ಅವರಿಗೆ ಬದುಕಿನ ಬಗ್ಗೆ ನಿರ್‍ದಿಷ್ಟ ಉದ್ದೇಶಗಳಿಲ್ಲ. ಆಶಯಗಳಿಲ್ಲ. ಬದಲಿಗೆ ಆ ಮನೆಯಲ್ಲಿ ತುಂಬಿ ತುಳುಕುತ್ತಿರುವುದು ಅಸಭ್ಯ ನುಡಿಗಳು, ನಡೆಗಳು. ತುಚ್ಛಕೆಲಸದ ಪುನರಾವರ್ತನೆಗಳು. ಇದಕ್ಕೆಲ್ಲಾ ಕಾರಣ ಜಿಮ್ಮಿ. ಆತನದೊಂದು ಅಧೋಮುಖ ವ್ಯಕ್ತಿತ್ವ. ಯಾವ ಕೆಲಸ ಕಾರ್ಯಗಳಿಲ್ಲದೇ ಇರುವುದರಿಂದ ಗಂಡಸರಿಬ್ಬರು ಸುದ್ದಿ ಪತ್ರಿಕೆಯ ಚರ್ಚೆಯಲ್ಲಿ ತೊಡಗಿದ್ದರೆ, ಆಕೆ ಮನೆಗೆಲಸದಲ್ಲಿ ತಲ್ಲಿನೆ. ಬಟ್ಟೆಗೆ ಇಸ್ತ್ರಿ ಹಾಕುತ್ತ ಇರುವಾಗಲೇ ಸ್ಪೋಟಗೊಂಡ ಜಿಮ್ಮಿಯ ಕೋಪ ಮನೆಯನ್ನೆ ನಡುಗಿಸುತ್ತದೆ. ಗಂಡಸರಿಬ್ಬರ ಮಾತಿನ ಕಿತ್ತಾಟ, ಗಂಡನ ಕೀಳು ಅಭಿರುಚಿಯ ಬೈಗುಳಗಳು ನೋವನ್ನು ನೀಡಿದ್ದು ಕಾರಣವೆಂಬಂತೆ ಎಲಿಸನ್ ಇಸ್ತ್ರಿಯಿಂದ ತೋಳನ್ನು ಸುಟ್ಟುಕೊಳ್ಳುತ್ತಾಳೆ. ಗರ್ಭಿಣಿಯಾದ ಆಕೆಯನ್ನು ಆತ ನಡೆಸಿಕೊಳ್ಳುವ ರೀತಿ ಮಾನಸಿಕ ದೌರ್ಜನ್ಯ ಎಲ್ಲವನ್ನೂ ಸಹಿಸುವ ಆಕೆ ಪಾಪದ ಹೆಣ್ಣು.

ಇದು “Look Back in Anger” ನಾಟಕದ ಮೊದಲ ದೃಶ್ಯ. ಪ್ರಧಾನ ಪಾತ್ರ ಜಿಮ್ಮಿ ನಾಯಕನಲ್ಲದ ನಾಯಕ. ಅಸಂತುಷ್ಟಿ, ಎಲ್ಲರ ಮೇಲೆ ಹರಿಹಾಯುವ ಗುಣದವನು. ಅಕಾರಣಗಳೂ ಆತನ ವಾಗ್ದಾಳಿಗೆ ಗುರಿಯಾಗಬಲ್ಲವು. ಪತ್ರಿಕೆಯ ಸುದ್ದಿಗಳು, ಲೇಖಕರು ಭಿನ್ನರಾದರೂ ಏಕವ್ಯಕ್ತಿ ಬರೆವ ಏಕತಾನತೆಯಿಂದ ಕೂಡಿದ ವಾರದ ಪುಸ್ತಕ ಪರಿಚಯಗಳು, ಅಷ್ಟೇ ಏಕೆ? ಚರ್ಚಿನ ಆಚರಣೆ, ಚರ್‍ಚಿಗೆ ಹೋಗುವವರು, ಆ ಜಮೀನುದಾರಿಣಿ ಹೀಗೆ ತನಗೆ ನೇರವಾಗಿ ಸಂಬಂಧಿಸದೇ ಇದ್ದವರೂ ಆತನ ಕೋಪದ ಕೂಗಾಟಕ್ಕೆ ಬಲಿಗಳು.

ಜಿಮ್ಮಿಯ ಈ ಮನೋವಿಕಾರದಂತೆ ಕಾಣುವ ಸ್ಥಿತಿಗೆ, ಆತನ ವಟಗುಡುವ ಪ್ರವೃತ್ತಿಗೆ ಕಾರಣ ಬಾಲ್ಯದ ಸಂಕಷ್ಟಗಳು. ಬದುಕಿನ ಭೀಷಣ ದುರಂತಗಳು. ಸ್ಪೇನ್ ಯುದ್ಧದ ಸಂದರ್ಭ. ಯಾರೂ ಇಲ್ಲದೇ ನರಳುತ್ತ ತಂದೆ ಮರಣಶಯ್ಯೆಯಲ್ಲಿದ್ದಾಗ ಆತನೊಂದಿಗೆ ಪುಟ್ಟ ಜಿಮ್ಮಿ ಉಂಡ ನೋವು. ನಿರಾಶೆ, ಅಸಹಾಯಕನಾಗಿ ತಂದೆಯನ್ನು ಕಳೆದುಕೊಂಡು ಬಸವಳಿದ ಪರಿ, ಅದೇ ಮೊತ್ತಮೊದಲ ಬಾರಿ ಆತನಲ್ಲಿ ಉದ್ಭವಿಸಿದ ಸಿಟ್ಟು ಸೆಡವು ಕಾಲಕ್ರಮೇಣ ಪರಿಪಾಠವಾಗಿ ಹೋಗುತ್ತದೆ. ತನ್ನ ವಿದ್ಯೆಗೆ ಸಿಕ್ಕ ನೌಕರಿಯನ್ನು ತ್ಯಜಿಸುವ ಆತ ಸಿಹಿತಿಂಡಿಗಳ ಅಂಗಡಿಯನ್ನು ನಡೆಸುತ್ತಿದ್ದಾನೆ. ಆತ ಶ್ರಮಿಕ ಕುಟುಂಬದಿಂದ ಬಂದವನು. ತನ್ನ ಸತತ ದುಡಿಮೆಯ ಮೂಲಕ ಮಧ್ಯಮವರ್ಗದ ಬದುಕು ಕಟ್ಟಿಕೊಳ್ಳುತ್ತಾನೆ.

ಜಿಮ್ಮಿ ಮತ್ತವನ ಪತ್ನಿ ಎಲಿಸನ್ ಸಂಪೂರ್‍ಣ ತದ್ವಿರುದ್ಧ ಸ್ವಭಾವ. ಆತನ ಪ್ರಕಾರ ಆಕೆ ಎಂದಿಗೂ ಹಸಿವು ಆಸೆಯ ತೀವ್ರತೆಯನ್ನು ಕಂಡವಳಲ್ಲ. ಹೀಗಾಗಿ ಆಕೆಯ ಮೈಮೇಲೆ ಬೆವರಿನ ಹನಿಗಳು ಮೂಡದೇ ಬೆವರಿನ ಬೆಲೆ ತಿಳಿಯದವಳು. ಆದರೆ ತನ್ನದು ಮೂರಾಬಟ್ಟೆ ಬದುಕು. ವಸ್ತುಶಃ ಬದುಕೇ ಸಾವು. ಕಂಡುಂಡ ಕಷ್ಟಗಳಿಗೆ ಮಿತಿಯಿಲ್ಲ. ಇವೆಲ್ಲದರ ಕಾರಣ ಆಕೆ ಮತ್ತಾಕೆಯ ರೀತಿ ನೀತಿಗಳು ಸದಾ ರೊಚ್ಚಿಗೆಬ್ಬಿಸುತ್ತವೆ. ಆಕೆ ಆತನ ಅರ್ಥಮಾಡಿಕೊಳ್ಳಲಾರಳು. ತಂದೆ ತಾಯಿಯನ್ನು ಬಿಡಲಾರಳು. ಹೀಗಾಗಿ ಸಂಸಾರದಲ್ಲಿ ಸದಾ ಕಿರಿಕಿರಿ, ಜಂಜಾಟ. ಆಕೆಯ ಮತ್ತವಳ ಗೆಳೆಯ ಕ್ಲೀಫ್‌ನ ಗೆಳೆತನ ಜಿಮ್ಮಿಗೆ ಖುಷಿಕೊಡುವುದಿಲ್ಲ. ಅದಾತನ ಇರುಸು ಮುರಿಸು. ಹಾಗಾಗಿ ಅವರಿಬ್ಬರೂ ಸದಾ ಆತನ ವಾಗ್ದಾಳಿಗೆ ಕುರಿಗಳು.
ಅದೊಂದು ದಿನ ಪತ್ನಿ ಎಲಿಸನಳ ಗೆಳತಿ ಹೆಲೆನಾ ಮನೆಗೆ ಬಂದಿದ್ದಾಳೆ. ಶ್ರೀಮಂತ ಕುಟುಂಬದ ಆಕೆಯ ವರ್ಚಸ್ಸು ಕುಲೀನ ನಡೆ ನುಡಿ ಆತನಲ್ಲಿ ದ್ವೇಷದ ಬುಗಿಲೆಬ್ಬಿಸುತ್ತದೆ. ಕಾರಣ ಆಕೆ ತನ್ನ ಸಾಮಾಜಿಕ ಆರ್ಥಿಕ ಸ್ಥಿತಿಗತಿಯ ಪ್ರತಿಸ್ಪರ್ಧಿಯಂತೆ ಆತನಿಗೆ ಕಾಣುತ್ತಾಳೆ. ಅತೃಪ್ತ ಮನಸ್ಸು ಮತ್ತೆ ಭುಗಿಲೆಳುತ್ತದೆ. ಹೆಲೆನಾ ಬಂದ ಕೂಡಲೇ ಮತ್ತೆ ಎಲಿಸನ್‌ಳನ್ನು ನಿಂದಿಸತೊಡಗುತ್ತಾನೆ. ಆಕೆಯೊಂದಿಗೆ ಎಲಿಸನ್ ಹೊರಗೆ ಹೋಗುವುದು, ಆತನ ಮಾತನ್ನು ಮೀರಿ ಚರ್‍ಚಿಗೆ ಹೋಗುವುದು ಎಲ್ಲವೂ ನೆಮ್ಮದಿಯನ್ನು ನಾಶಮಾಡಿ ಕುಟುಂಬದಲ್ಲಿ ದ್ವೇಷದ ಅಲೆಗಳು ಏಳುತ್ತವೆ.

ಈ ಎಲ್ಲ ಕಾರಣದಿಂದ ಗಂಡನಿಂದ ಸ್ವಲ್ಪಕಾಲ ದೂರವಾಗುತ್ತಾಳೆ. ಆ ಸಂದರ್ಭದಲ್ಲಿ ಆತ ತಿರಸ್ಕಾರದಿ ನೋಡುತ್ತಿದ್ದ ಹೆಲೆನಾ ಆತನಿಗೆ ಹತ್ತಿರವಾಗುತ್ತಾಳೆ. ಆದರೆ ಯಾವಾಗ ಎಲಿಸನ್ ಪುನಃ ಮರಳಿ ಗಂಡನ ಬಳಿಗೆ ಬರುತ್ತಾಳೋ ಆಗ ಹೆಲೆನಾ ತನ್ನ ಸ್ಥಾನವನ್ನು ಅರಿತುಕೊಂಡು ಹೊರಟುಹೋಗುತ್ತಾಳೆ. ಅಲ್ಲಿ ಸಂಬಂಧ ಸರಳಗೊಂಡು ಕುಟುಂಬವನ್ನು ಒಂದುಗೂಡಿಸುತ್ತದೆ. ಎಲಿಸನ್‌ಗೆ ಗೊತ್ತು ಆಕೆಯ ಸ್ಥಾನ ಏನಿದ್ದರೂ ಜಿಮ್ಮಿಯೊಂದಿಗೆ ಮಾತ್ರ ಎಂದು. ಆದರೂ ಜಿಮ್ಮಿ ಆಕೆಯನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳಲು ತಯಾರಿಲ್ಲ. ಆತನ ಬಹುದಿನದ ಆಸೆಯಂತೆ ಆಕೆ ನೆಲದಲ್ಲಿ ಹೊರಳಾಡಿ ಆತನಿಗೆ ಶರಣಾಗುತ್ತಾಳೆ. ಸೋತಾಗ ಆತನ ಮನ ತೃಪ್ತಗೊಳ್ಳುತ್ತದೆ. ಇದು ನಾಟಕದ ಕೊನೆಯ ಆಂಕ.

ಮೂರು ಅಂಕಗಳಲ್ಲಿ ಹೆಣೆಯಲ್ಪಟ್ಟ ನಾಟಕದ ಮುಖ್ಯ ತಿರುಳು ಕೋಪ ಮತ್ತದರ ಕಾರಣ. ಜಿಮ್ಮಿಯ ಅತೃಪ್ತ ಅತಿರೇಕದ ವ್ಯಕ್ತಿತ್ವ, ಆತನ ಆಶಾಭಂಗ, ಸಹಪಾತ್ರಗಳಾದ ಎಲಿಸನಳ ಸಹನೆ, ತಾಳ್ಮೆ ಗೆಳೆಯ ಕ್ಲಿಫ್ ನ ನಿಷ್ಠೆ. ಅವರ ತಾಳಮೇಳವಿಲ್ಲದ ಸಾಂಸಾರಿಕ ಬದುಕು, ಖಾಲಿತನದ ಭಾವ ಇವೇ ಪ್ರಮುಖ ಸಂಗತಿಗಳು. ನಾಟಕ ವಿಡಂಬನೆಯೂ ಅಲ್ಲ. ಹಾಸ್ಯ ನಾಟಕವೂ ಅಲ್ಲದ ಆದರೆ ಒಳ ಮೂಲದಲ್ಲಿ ದುರಂತವನ್ನು ಬಿಂಬಿಸುವ ಪರಿಯಿಂದ ಹೊಸ ಪ್ರಯತ್ನವೇ ಆಗಿದ್ದು, ೨೦ನೇ ಶತಮಾನದಲ್ಲಿ ನಾಟಕರಂಗ ಪುನಶ್ಚೇತನಗೊಂಡ ರೀತಿಗೆ ಉದಾಹರಣೆಯಾಗಿದೆ. ೧೯೫೦ ಸುಮಾರಿಗೆ ಆಸ್ಕರ ವೈಲ್ಡ್ ಮತ್ತು ಜಾರ್ಜ ಬರ್ನಾಡ ಶಾ ಅವರ ಯುಗ ಕಳೆದು ಯಾವಾಗ ನಾಟಕ ರಂಗದಲ್ಲಿ ಹೊಸ ಜಿಜ್ಞಾಸೆ ಶುರುವಾಯಿತು ಆಗಲೇ ಹುಟ್ಟಿಕೊಂಡವರು ಉದ್ರಿಕ್ತ ನಾಟಕಕಾರರು ಮತ್ತು ಕಾದಂಬರಿಕಾರರು. ಈ ಹಂತದಲ್ಲೆ ಈ ನಾಟಕ ಅತ್ಯಂತ ಪ್ರಭಾವಿ ಶಕ್ತಿಶಾಲಿ ನಾಟಕವಾಗಿ ಹೊರಹೊಮ್ಮಿತು.

“Forgive and forget does not come about quickly, ultimately reconciliation prevails” ಯಾವುದು ಸರಿ ಯಾವುದು ತಪ್ಪು, ಹಾಗೂ ಸರಿಪಡಿಸಲಾಗದ ಮಾನಸಿಕ ಉದ್ವೇಗಗಳ ನಡುವೆಯೂ ಸಹನೆ, ಕ್ಷಮೆಗಳು ಬದುಕಿನ ಸಾಂಕೇತಿಕ ಸತ್ಯಗಳಾಗಿ ನಿಲ್ಲುತ್ತವೆ. ಹೊಂದಾಣಿಕೆಯ ಭಿನ್ನ ನೆಲೆಯಲ್ಲಿ ಒಬ್ಬರನ್ನೊಬ್ಬರ ಅವಗುಣಗಳ ಒಪ್ಪಿಕೊಂಡು ಬದುಕನ್ನು ಅಪ್ಪಿಕೊಳ್ಳಬೇಕಾಗುತ್ತದೆ. ಇದೇ ನಾಟಕದ ತಿರುಳು.

ಬ್ರೀಟಿಷ ನಾಟಕಕಾರ ಸಿನೆಮಾ ನಿರ್‍ಮಾಪಕನೂ ಆದ John Osborne ೧೯೨೯ ಡಿಸೆಂಬರ ೧೨ರಂದು ಲಂಡನ ನಲ್ಲಿ ಜನಿಸಿದ. ಬ್ರಿಟಿಷ ನಾಟಕಜಗತ್ತಿನಲ್ಲಿ `Angry young men’ ಪಾತ್ರ ಸೃಷ್ಟಿಸಿದ ಕೀರ್ತಿಯೂ ಇತನಿಗೆ ಸಲ್ಲುತ್ತದೆ. ಆ ಕಾಲದಲ್ಲಿ ಪ್ರಚಲಿತವಿದ್ದ ಉಚ್ಛ ಬದುಕಿನ ಆದರ್‍ಶ ಶೈಲಿಯ ನಾಟಕಗಳಿಂದ ಭಿನ್ನ ಪಾತಳಿಯಲ್ಲಿ ಸಮಕಾಲೀನ ನೈಜತೆಯ ಚಿತ್ರಣದೊಂದಿಗೆ ಜನರಿಗೆ ತಲುಪಿಸುವಲ್ಲಿ ಈತನ ನಾಟಕಗಳು ಮಹತ್ವದ್ದಾದವು. ಹಾಗಾಗಿ ಜನಪ್ರಿಯವಾದವು. The Entertainer, Inadmissible Evidence, Luther ಇತ್ಯಾದಿ ಕೃತಿಗಳನ್ನು ಆಂಗ್ಲ ಸಾಹಿತ್ಯಕ್ಕೆ ನೀಡಿದ ಈತ ೧೯೯೪ರ ದಿಸೆಂಬರ ೨೪ರಂದು ತೀರಿಕೊಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಳಿ ಹುಣ್ಣಿವೆ
Next post ಆತ್ಮವಂಚನೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…