ಎಪ್ರಿಲ್ ಒಂದು

ಎಪ್ರಿಲ್ ಒಂದು

ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ ಬಿರುದನ್ನು ಬಹಳ ಸಂತೋಷದಿಂದ ಅರ್‍ಪಿಸಿದ್ದರು.

ಕಣ್ಣೆದುರಿಗೆ ಮೇಜಿನ ಮೇಲೆ ಬೆಟ್ಟದಂಥ ‘ಫೋಟೋ’ ಗಳು ಬಿದ್ದಿವೆ. ಇನ್ನೂ ಎಷ್ಟೋ ಕೆಲಸ ಹಾಗೆಯೇ ಇದೆ. ಒಂದು ‘ಫೈಲಿ’ನಲ್ಲಿ ಲೆಖ್ಖವನ್ನು ಬರೆಯುತ್ತಿದ್ದ. ಮದುವೆಯ ಬೃಂಗ ತಲೆಯೊಳಗೆ ಹೊಕ್ಕು ಗುಮ್ ಗುಟ್ಟಿದ ಕೂಡಲೇ ಅವನ ಉತ್ಸಾಹ ಮಿತಿಮೀರಿತು. ಗಂಟೆ ಬಾರಿಸಿದ.

ಪೇದೆ ಓಡಿಬಂದು ಅವನೆದುರು ನಿಂತ.

ಅವನು ಏನೂ ಮಾತಾಡಲಿಲ್ಲ.

ಕೆಲವು ಹೊತ್ತಿನ ಮೇಲೆ ಪೇದೆ ತಾನಾಗಿ ನುಡಿದ- ‘ರಾವ- ಸಾ- ಹೇಬ-’

‘ಯಾರು ಕರೆದರು ನಿನಗೆ ?’ ಎಂದು ರಭಸದಿಂದ ನುಡಿದ.
ಪೇದೆ ಪೆದ್ದನಾಗಿ ತಿರುಗಿ ಹೋದ!

ಅವನ ಸಮೀಪ ಕುಳಿತ – ಉಳಿದ ಕೆಲಸಗಾರರು ಇವನನ್ನು ನೋಡಿ ಗಾಬರಿಯಾದರು. “ಯಾಕ್ರೀ ಕೃಷ್ಣ ಮೂರ್ತಿ ರಾವ್, ಏನಾಗಿದೆ ಇವತ್ತು?” ಎಂದು ಕೇಳಿದ ಒಬ್ಬ.

“ರಾಧೆಯ ದರ್ಶನವಾಯಿತೇನು ಇವೊತ್ತು” ಎಂದು ಇನ್ನೊಬ್ಬ ನಗುತ್ತ ನುಡಿದ.

“ಮೂರ್ತಿಗಳಿಗೆ ಎಲ್ಲಿ ರಾಧೆಯರಿ?” ಎಂದು ಟೈಪ್ ಹೊಡೆಯುವುದನ್ನು ಬಿಟ್ಟು, ಮುಖವನ್ನು ಹೊರಳಿಸಿ ಇನ್ನೊಬ್ಬ ನುಡಿದ. “ಹನುಮಂತ ದೇವರು ಅವರ ತಲೆ ಮೇಲೆ ಹಸ್ತ ಇಟ್ಟಾರ”.

“ದಿನಾಲೂ ಬಜರಂಗಬಲಿಯ ಪೂಜೆ ಮಾಡತಾರ. ಸುಖಾಮೇವಾ ತಿನತಾರ. ಮೇಲೆ ಬ್ರಹ್ಮಚಾರಿ ಸಿನೆಮಾ ನೋಡತಾರ. ಎಲ್ಲಾ ನಮಗೆ ಗೊತ್ತದ ಬಿಡಿರಿ.” ಹೀಗೆನ್ನುತ್ತ ಸಮೀಪದಲ್ಲಿ ಕುಳಿತ ಗೋಪಿಯು ಮೂರ್ತಿಯ ಹೆಗಲ ಮೇಲೆ ಕೈ ಹಾಕಿದ.

ಗೋಪಿಯ ದೃಷ್ಟಿ ಮೇಜಿನ ಮೇಲಿದ್ದ ಒಂದು ಪತ್ರದ ಕಡೆಗೆ ಹೊರಳಿತು. ಬಹಳ ಸಲಿಗೆಯಿಂದ ಆ ಪತ್ರವನ್ನು ತೆಗೆದುಕೊಂಡ.

‘ಓಹೋ’ ಎನ್ನುವಷ್ಟರಲ್ಲಿ ಮೂರ್ತಿ ಅವನ ಕೈ ಯಿಂದ ಓಲೆಯನ್ನು ಕೊಸರಿಕೊಂಡ. ‘ಆಯಿತು. ತಿಳೀತು ಬಿಡ್ರಿ. ಇವೊತ್ತು ಚಹಾ ಆಗಲಿಕ್ಕೇಬೇಕು.

‘ಏನು ? ಎನು ?’ ಎಂದು ಅವನ ಸುತ್ತು ಇರುವೆಗಳಂತೆ ಮುಕುರಿದರು. ಗೋಪಿ ಅವರ ಕಿವಿಗಳಲ್ಲಿ ಪಿಸುಗುಟ್ಟಿದ.

‘ನಿಜವಾಗಿಯೂ ಹೆಣ್ಣಿನ ಅಕ್ಷರಗಳೇ!’

‘ಹೌದು.’

‘ಏನ್ರಿ ಮೂರ್ತಿರಾವ್, ಈವೊತ್ತು ಬರೇ ಚಹ ಏಕೆ? ಬಿಸಿ ಬಿಸಿ ಮಸಾಲೆ ದೋಸೆ, ಫೆಡೆ ಎಲ್ಲಾನೂ ಆಗಲೇ ಬೇಕು’ ಎಂದನೊಬ್ಬ.

ಆಯಿತು, ಮೂರ್ತಿ ಅವರ ಮಾತುಗಳ ತಿರುಗಣಿಯಲ್ಲಿ ಸಿಕ್ಕುಬೀಳಲು ಅವನ ಒಲವಿನ ಸೆಳವೂ ಗರ್ರನೆ ತಿರುಗಿಬಿಟ್ಟಿತು. ಮುಗುಳುನಗೆ ನಕ್ಕ. ಅವರೆದುರಿಗೆ ಏನು ಎಲ್ಲವನ್ನೂ ಹೇಳುವದು: “ಹೌದು, ಅಂದರಾಯಿತು. ‘ಕುಡಿಸುತ್ತೇನೆ ಮಹಾರಾಜರೇ, ಮೊದಲು ಈ ಹೊರೆ ಕೆಲಸಗಳನ್ನು ಮುಗಿಸೋಣ’ ಎಂದು ಒಪ್ಪಿಗೆ ಕೊಟ್ಟು ಮಾತನಾಡಿದ.

ಸರಿ. ಗಡಿಯಾರ ಆರು ಬಡಿಯುವುದೇ ತಡ. ಎಲ್ಲರೂ ಆಸನ ಕಂಪವನ್ನು ಅನುಭವಿಸಿದರು. ಪೇದೆಗಳಿಗೆ ಎಲ್ಲಕ್ಕೂ ಸಹಿ ಮಾಡಿಸಲು ಹೇಳಿ, ಮೇಜಿನ ಮೇಲೆ ಎಲ್ಲ ಫೈಲುಗಳನ್ನು ಒಗೆದು ಹೊರ ಹೊರಟರು.

ಅವರು ಹೋಗುವ ಮುಂದೆ ಬ್ಯಾಂಕಿನ ಬಾಗಿಲದಲ್ಲಿಯೇ ನಿಂತ ಪೆದ್ದ ಹಾಗೆ ತಿರುಗಿದ ಪೇದೆ, ನೂರಾಯೆಂಬತ್ತು ಆಂಶದ ಕೋನದವರೆಗೂ ತನ್ನ ಕಣ್ಣುಗಳನ್ನು ಹೊರಳಿಸಿ ಇವರನ್ನು ನೋಡಿದ ‘ಏನೋ ಇರಬೇಕೆಂಬ’ ಸಂಶಯವು ಅವನ ತಲೆಯಲ್ಲಿ ಸುಳಿಯದೇ ಇರಲಿಲ್ಲ.

-೨-

ಮಧ್ಯ ರಾತ್ರಿ, ಕಪ್ಪು ಬಸಿಗಳ ಇಂಪಾದ ನಿನಾದವೂ, ಸಿನಿಮಾ ಆಕಾಶವಾಣಿಗಳ ಮಧುರ ವಾಣಿಗಳೂ, ಗೆಳೆಯರ ಕೇಕೆಗಳೂ ಸ್ತಬ್ಧವಾಗಿವೆ. ತಂಗಾಳಿ ದಣಿದ ಜನರಿಗೆ ಜೋಗುಳ ಹೇಳುತ್ತಿದೆ, ಹೂಸಿ ಎರೆದುಕೊಂಡು ಶಾಂತವಾಗಿ ಮಲಗಿದಂತೆ ಇಳೆಯು ಶೋಭಿಸುತ್ತಿದ್ದಾಳೆ. ಕುಸುಮ ಕೋಮಲ ತಾರೆಗಳು ಸುಮಗಳಂತೆ ಕಂಗೊಳಿಸುತ್ತಿವೆ.

ಮೂರ್ತಿ ಈ ಸೌಂದರ್ಯವನೆಲ್ಲ ನೆನೆದ. ಅವನು ಕುಳಿತ ಕಿಟಕಿಯೊಳಗಿನಿಂದ ನಿಸರ್ಗವೆಲ್ಲವೂ ಕಾಣುತ್ತಿತ್ತು. ಇಂಥ ಸೊಬಗನ್ನು ಸವಿಯಲು ತಾನು ಏಕಾಕಿ. ಇಲ್ಲ-ಇದರ ಸಂಪೂರ್ಣ ಅನುಭವವಾಗಲು ತನ್ನಾಕೆ ಬೇಕೆಂದು ಅವನಿಗೆ ಬಲವತ್ತರವಾಗಿ ಅನಿಸಿತು.

ಈಗಾಗಲೇ ಅವನಿಗೆ ಮೂವತ್ತು ವರ್ಷಗಳಾಗಿದ್ದವು. ಇಂಥ ರಾತ್ರಿಯನ್ನು ಎಂದಿಗೂ ಅನುಭವಿಸಿರಲಿಲ್ಲ. ಅನೇಕ ಕನ್ಯೆಗಳು ಅವನ ಮನೆಯ ವರೆಗೆ ಬಿಜಯಂಗೈಯಿಸಿದ್ದವು. ಆ ಕನ್ಯಗಳ ಹಿತೈಷಿಗಳು ಇವನಿಗೆ ಚಹ ಪಾನ ಮಾಡಿಸಿ ಮದುವೆ ಮಾಡಿಕೊಳ್ಳಲು ಒತ್ತಾಯಪಡಿಸಿದ್ದರು. ಇವನ ತಂದೆಯಂತೂ ಸೊಸೆ ಮತ್ತು ಮೊಮ್ಮಗನನ್ನು ಕಾಣಲಿಲ್ಲವೆಂದು ಅವೇ ಶಬ್ದ ಗಳನ್ನುಚ್ಚರಿಸುತ್ತ ಪ್ರಾಣ ಬಿಟ್ಟಿದ್ದರು. ಆದರೂ ಮೂರ್ತಿಯ ಮನಸ್ಸು ಕರಗಿರಲಿಲ್ಲ.

ಇದಕ್ಕೆ ಕಾರಣಗಳೂ ಇದ್ದವು. ಅವನು ಕಾಲೇಜ ಶಿಕ್ಷಣವನ್ನು ಇಂಟರದಲ್ಲಿಯೇ ಬಿಟ್ಟಿದ್ದರೂ, ಅನೇಕ ಪಾಶ್ಚಿಮಾತ್ಯ ಗ್ರಂಥಗಳನ್ನೋದಿದ್ದ. ಅನೇಕ ಇಂಗ್ಲೀಷು ಚಿತ್ರಗಳನ್ನು ನೋಡಿದ್ದ. ಅದರಂತೆ ತಾನೂ ಇರಬೇಕೆಂಬ ಮಹತ್ವಾಕಾಂಕ್ಷೆ ಅವನಲ್ಲಿದ್ದಿತು. ಅವನಿಗೆ ಬರುವ ಕನೈಗಳೆಲ್ಲವೂ ಹಳ್ಳಿಯದಾಗಲೀ, ಅಶಿಕ್ಷಿತರಾಗಲೀ ಅಥವಾ ಕಪ್ಪು ಬಣ್ಣದವಾಗಲೀ ಇರುತ್ತಿದ್ದವು. ಒಮ್ಮೆಯಂತೂ ಕೆಂಡದಲ್ಲಿ ತೊಳೆದ ಬಹಳ ಸುಂದರಿಯಾದ (ಏಕೆಂದರೆ – ‘ಸುಂದರಿ’ ಎಂದು ಅವಳ ಹೆಸರು) ಒಂದು ಹುಡುಗಿಯು ಮಾಲೆಯನ್ನು ಹಿಡಿದು ನಿಂತಿದ್ದಳು. ಆ ಸನ್ನಿವೇಶದಿಂದ ಪಾರಾಗಿ ಹೋಗಬೇಕಾದರೆ ಅವನಿಗೆ ಸಾಕು ಬೇಕಾಯಿತು. ಅಂದಿನಿಂದ ಅವನು ಮದುವೆಯ ಮಾತನ್ನೇ ಜನರೆದುರು ಎತ್ತುತ್ತಿರಲಿಲ್ಲ.

ಆದರೆ ತಂದೆ ತೀರಿಕೊಂಡು ಹೋಗಿ, ಮೂರ್ತಿಯೇ ಮನೆಯಲ್ಲಿ ಸಾಮ್ರಾಜ್ಯದ ಒಡೆಯನು. ವಿಧವೆಯಾದ ತಾಯಿಯೊಬ್ಬಳು ಮನೆಯಲ್ಲಿದ್ದಾಳೆ.

ಇವನ ಸಿಡಿನುಡಿಗಳಲ್ಲಿ ಅವಳ ಮಾತುಗಳು ಕುಗ್ಗಿ ಹೋಗುತ್ತಿದ್ದವು. ಮೂವತ್ತು ವರ್ಷಗಳಾಗಿವೆ. ಇನ್ನು ತನ್ನ ಮಗನು ಮುದುಕನಾದಂತೆ, ಯಾರೂ ತಮ್ಮ ಹುಡುಗಿಯರನ್ನು ತೋರಿಸಲು ಬರುವದಿಲ್ಲವೆಂಬ ನಿಶ್ಚಿತ ಅಭಿಪ್ರಾಯ ಅವನ ತಾಯಿಯದಾಗಿತ್ತು. ಆದರೆ ಮೂರ್ತಿಯು ಹಾಗೆಂದಾದರೂ ತಿಳಿದಾನೆ? ಪಶ್ಚಿಮದಲ್ಲಿಯ ಪಂಡಿತರ ಅಭಿಪ್ರಾಯದ ಮೇರೆಗೆ ತಾನಿನ್ನೂ ಬ್ರಹ್ಮಚಾರಿಯಾಗಿರಬೇಕೆಂದೇ ತಿಳಿದುಕೊಂಡಿದ್ದನು.

ಇಲ್ಲಿಯ ಮದುವೆಯ ಪದ್ಧತಿಯ ಬಗ್ಗೆಯಂತೂ ಮೂರ್ತಿಯು ಕೆಂಡ ಕಾರುತ್ತಿದ್ದ. ತಾಯಿತಂದೆಗಳ ಮಾತುಗಳನ್ನು ಕೇಳದಿರುವುದೂ, ಮದುವೆಯಾಗಬೇಕೆಂದು ಹೇಳಿದಾಗ ಆಗದಿರುವುದೂ, ಚಹಪಾನ ಧೂಮಪಾನಗಳಲ್ಲಿ ಆಸಕ್ತನಾಗಿರುವುದೂ, ಇವೇ ಅವನ ಕ್ರಾಂತಿಯ ಲಕ್ಷಣಗಳಾಗಿದ್ದುವು.

ಇಂಥ ಕ್ರಾಂತಿಕಾರಿ ಯುವಕನಿಗೆ ಸುಶಿಕ್ಷಿತ ಲಲನೆಯರು ಸಹಧರ್ಮಿಣಿಯರಾಗಲು ಬರಬಾರದೇಕೆ? ಇಂಟರ್ ಪರೀಕ್ಷೆಯ ವರೆಗೆ ಕಾಲೇಜದ ಶಿಕ್ಷಣವಾಗಿದೆ. ಮೇಲಾಗಿ ಬ್ಯಾಂಕಿನಲ್ಲಿ ದೊಡ್ಡ ಸಂಬಳದ ಕೆಲಸವಿದೆ…. ಇಂಥ ವರನನ್ನು ಒಬ್ಬ ಕಾಲೇಜಿನಲ್ಲಿ ಸ್ತ್ರೀಯು ಮದುವೆಯಾಗುವುದಾದರೆ ಅಚ್ಚರಿಯ ಮಾತೆ! ಅಂತೆಯೇ ಮೂರ್ತಿಯು ೨-೩ ಸಲ ಆ ಪತ್ರವನ್ನು ತಿರುವಿ ತಿರುವಿ ಓದಿದನು. ಮತ್ತೂ ಒಮ್ಮೆ ಓದಬೇಕೆನಿಸಿತು, ಬಾಗಿಲನ್ನು ಇಕ್ಕಿಕೊಂಡು ಬಂದು ಗಟ್ಟಿಯಾಗಿ ಮುಚ್ಚಿದ, ವಿದ್ಯುದ್ದೀಪವನ್ನು ತನ್ನ ಹಾಸಿಗೆಯ ಹತ್ತಿರವೇ ಎಳೆದುಕೊಂಡ. ಜೋಡು ತಲೆದಿಂಬುಗಳನ್ನು ತಲೆಗೆ ಇಂಬಾಗಿ ಇಟ್ಟುಕೊಂಡ. ಬಹಳ ಆಸ್ಥೆಯಿಂದ ಪತ್ರವನ್ನು ಓದಲು ಆರಂಭಿಸಿದ. ಅದು ಇಂಗ್ಲೀಷಿನಲ್ಲಿತ್ತು. ಅದನ್ನಿಲ್ಲಿ ಕನ್ನಡದಲ್ಲಿ ಕೊಡಲಾಗಿದೆ. –

ಪೂನಾ
೨೩ ಮಾರ್‍ಚ್, ೪೪

ಪ್ರಿಯ ಮೂರ್ತಿರಾವ್,

ನೀವೇನು ನನಗೆ ಅಪರಿಚತರೆಂದು ತೋರುವದಿಲ್ಲ. ನಿನ್ನೆ ನಿಮ್ಮ ಗೆಳೆಯರಾದ ನಾಗೇಶರಾಯರು ನನಗೆ ಭೆಟ್ಟಿಯಾಗಿದ್ದರು. ನಿಮ್ಮ ಬಗ್ಗೆ ಎಲ್ಲ ಸುದ್ದಿಗಳನ್ನೂ ಹೇಳಿದರು. ಇದಕ್ಕೂ ಮೊದಲೇ ನಿಮ್ಮ ಪ್ರಖ್ಯಾತಿಯ ಬಗ್ಗೆ ಎಷ್ಟೋ ಸುದ್ದಿಗಳನ್ನು ಅನೇಕರಿಂದ ಕೇಳಿರುವೆ. ಸ್ವಾತಂತ್ರ್ಯದ ರಕ್ತವು ನಿನ್ನ ನಾಳನಾಳಗಳಲ್ಲಿ ಹರಿಯುತ್ತಿದೆಯೆಂದು ನನಗೆ ಪೂರ್ಣ ವಿಶ್ವಾಸವಿದೆ. ಛೀ! ಹಿಂದೂಸ್ತಾನದ ಯುವಕರು ಮದುವೆಯ ಸಂಬಂಧದಲ್ಲಿ ಹಿರಿಯರ ಮಾತುಗಳಿಗೆ ಬಲಿಬೀಳುವದನ್ನು ಕಂಡು ನನಗೆ ಹೇಸಿಕೆಯಾಗಿದೆ. ಆಂಗ್ಲರಂತೆ ಮದುವೆಯಾಗುವದಕ್ಕಿಂತ ಮೊದಲು, ಭಾರತದಲ್ಲಿಯೂ ಯುವಕ ಯುವತಿಯರು ತಮ್ಮ ಪರಿಚಯವನ್ನು ಮಾಡಿಕೊಳ್ಳಬೇಕು. ಹಲವಾರು ದಿನ ಕೂಡಿ ಕಳೆಯಬೇಕು. ಒಬ್ಬರೊಬ್ಬರಲ್ಲಿ ವಿಶ್ವಾಸ ಹುಟ್ಟಿದ ಮೇಲೆ ಮದುವೆಯಾಗಬೇಕು. ನೀವೂ ಇದೇ ರೀತಿಯಾಗಿ ವಿಚಾರ ಮಾಡುತ್ತಿರುವುದನ್ನು ಕಂಡು ನನಗೆ ಬಹಳ ಸಂತೋಷವಾಗಿದೆ. ಈ ಹಿಗ್ಗು ನನ್ನೆದೆಯ ನಲ್ಗಡಲನ್ನು ತುಂಬಿ ತುಳುಕುತ್ತಿದೆ. ಪ್ರಿಯ ಮೂರ್ತಿರಾವ್, ಒಮ್ಮೆ ಅಗತ್ಯವಾಗಿ ಇಲ್ಲಿಗೆ ಬಂದುಹೋಗಿ, ಈ ಕಡಲಿಗೆ ಹುಣ್ಣಿವೆಯ ಚಂದ್ರನಾಗಿ ಬನ್ನಿ. ನಿಮ್ಮ ದಾರಿಯನ್ನು ಒಂದೇ ಸವನೆ ಪ್ರತೀಕ್ಷಿಸುತ್ತಿರುವೆ. ನಿಮ್ಮ ಭಾವಚಿತ್ರವು ನನ್ನ ಹಸ್ತಗತವಾಗಿದೆ. ಅದನ್ನು ಮೇಜಿನ ಮೇಲೆ ಇಟ್ಟಿದ್ದೇನೆ. ಈಗ, ನಾನು ಪತ್ರ ಬರೆಯುವ ವೇಳೆಗೆ ಅದು ನನ್ನೆದುರಿಗೇ ಇದೆ. ನೀವು ನನ್ನೆದುರಿಗೆ ಮಾತಾಡುವಂತೆ ಭಾಸವಾಗುತ್ತಿದೆ. ಭಾವ ಚಿತ್ರದ ಮೂರ್ತಿ ನನ್ನೆದುರಿಗೇ ಪ್ರತ್ಯಕ್ಷವಾಗಿ ಬಂದು ನಿಂತರೆ? ಅಯ್ಯೋ! ಈ ಚಕ್ರವಾಕಿಯ ವಿರಹವನ್ನು ನೀವು ಎಂದು ಶಾಂತಮಾಡುವಿರಿ! ಬೇಗನೇ ಬನ್ನಿ, ನಾವಿಬ್ಬರೂ ಕೂಡಿ ನಲಿಯೋಣ, ಬಾಳ ಜೇನನ್ನು ಸವಿಯೋಣ. ನನ್ನ ತಂದೆಯವರಿಗೆ ಹೆದರುವ ಕಾರಣವೇ ಇಲ್ಲ. ಅವರು ಹಾಗೇನಾದರೂ ಅಂದರೆ ನಾನು ಮನೆ ಬಿಟ್ಟು ಹೊರಹೊರಡಲು ಸ್ವತಂತ್ರಳಿದ್ದೇನೆ. ನೀವು ಬರುವ ದಿನವನ್ನು ತೀವ್ರವಾಗಿ ತಿಳಿಸಿ.

ನಿಮ್ಮ ಪ್ರೀತಿಯ
ಲಲಿತಾ

ಪತ್ರದಲ್ಲಿಯ ಪ್ರತಿಯೊಂದು ಅಕ್ಷರವೂ ಮೂರ್ತಿಯ ಲಕ್ಷ್ಯವನ್ನು ಎಳೆಯಿತು. ಹುಡುಗಿ ತಾನೇ ಬರೆದಿರುವಳು. ಎಂಥ ಪ್ರೀತಿ! ಜಗತ್ತಿನಲ್ಲಿ ಇದಕ್ಕೂ ಹೆಚ್ಚಿನ ಸಗ್ಗ ಸೊಗವು ಇರಲು ಸಾಧ್ಯವೇ ? ಮೂರ್ತಿಯು ತನ್ನ ಉತ್ತರವನ್ನು ಮನದಲ್ಲಿ ರಚಿಸಿಕೊಂಡನು. ‘ಲೆಟರ್ ಪ್ಯಾಡ’ನ್ನು ತೆಗೆದು ಪತ್ರವನ್ನು ಇಂಗ್ಲಿಷಿನಲ್ಲಿ ಬರೆಯಲು ಆರಂಭಿಸಿದ. ಲಲಿತೆಯಷ್ಟು ಕಾವ್ಯ ಶಕ್ತಿಯನ್ನು ತಾನೂ ತೋರಿಸಲು ಹವಣಿಸಿದ.
೨೫ ಮಾರ್ಚ, ೧೯೪೪

ಅತ್ಯಂತ ಪ್ರೀತಿಯ ಹಕ್ಕಿಯೇ, …………..

ನಿನ್ನ ೨೩-೦೩-೧೯೪೪ನೇ ಸಾಲಿನ ಪತ್ರವು ಮುಟ್ಟಿತು. ಈ ಪತ್ರದ ಪ್ರಕಾರ ಕೆಳಗೆ ಸಹಿ ಮಾಡಿದ ನಾನು ನಿನ್ನಲ್ಲಿ ಅತ್ಯಂತ ವಿನಯದಿಂದ ವಿಜ್ಞಾಪನೆ ಮಾಡಿಕೊಳ್ಳುವುದೇನೆಂದರೆ, ನಾನು ರಜೆ ಪಡೆದುಕೊಳ್ಳಬೇಕಾಗುತ್ತದೆ. ಅದಕ್ಕೆ ತಾರು ಬಿಡಲು ಅಲ್ಲಿಯೇ ಇದ್ದ ನಾಗೇಶನಿಗೆ ಜರೂರು ತಿಳಿಸು. ಯಾರಿಗಾದರೂ ಜಡ್ಡಾಗಿರುವುದೆಂದು ಹೇಳು. ಕೊನೆಯವಾರ ಕೆಲಸ ಬಹಳ; ಕೊನೆಯವಾರ ಕೊನೆಯ ದಿನ ಅವನ ತಾರು ಬರಲಿ. ನಾನು ಜರೂರ ಬರುವೆ. ನಿನ್ನನ್ನು ದಿನಾಲು ನೆನೆನೆನೆಸಿ ಜೀವಿಸುತ್ತಿದ್ದೇನೆ. ಇರಲಿ. ನಾನು ಹೇಳಿದಂತೆ ಮಾಡು.

ನಿನ್ನ ಆಜ್ಞಾಧಾರಕ,
ಮೂರ್ತಿ.

ಪತ್ರವನ್ನು ಬರೆದು ಮುಗಿಸಿದಮೇಲೆ ಅವನಿಗೆ ಎಷ್ಟೋ ಸಮಾಧಾನವಾಯಿತು. ದೀಪವನ್ನು ಆರಿಸಿ ಹಾಸಿಗೆಯಲ್ಲಿ ಹೊರಳಿದಾಗ ತಾಯಿಯ ಗಾಢ ನಿದ್ರೆಯ ಸ್ವರವು ಕೇಳಬರುತ್ತಿತ್ತು.

-೩-

ಪೇದೆಯು ತಾರನ್ನು ಮೂರ್ತಿಯ ಎದುರಿಗೆ ಇಟ್ಟು ಕೈ ಮುಂದೊಡ್ಡಿದ. ಅದರ ದಾರಿಯನ್ನೇ ಕಾಯುತ್ತಿದ್ದ ಮೂರ್ತಿಯು ಸ್ವಸಂತೋಷದಿಂದ ಬೆಳ್ಳಿಯ ನಾಣ್ಯಗಳನ್ನು ಕೈಯಲ್ಲಿ ತೂರಿದ. ಪೇದೆಯು ಕುಲುಕುಲು ನಗುತ್ತ ಹೋದ.

ಅವನ ಬಳಿ ಕುಳಿತ ಗೋಪಿ ಕೇಳಿದ ‘ಯಾವ ತಾರದು?’

‘ಬ್ಯಾಂಕಿನ ಸಂಬಂಧ ಏನಾದರೂ ತಾರು ಬಂದಿದ್ದೀತು ? ಏನಾದರೂ ಮೂರ್ತಿಗಳು ಕ್ಯಾಷಿರ್!’ ಎಂದು ಒಬ್ಬನು ನುಡಿದ.

‘ಯಾವ ಬ್ಯಾಂಕು? ಕಾಮರಾಜನ ಬ್ಯಾಂಕಿನದೇನು? ಎಂದು ಇನ್ನೊಬ್ಬ ಕಿಸಿಕಿಸಿ ನಕ್ಕನು.

ಮೂರ್ತಿ ಮುಖವನ್ನು ಸಪ್ಪಗೆ ಮಾಡಿ ಬಹಳ ದುಃಖಿತನಾದವನಂತೆ- ನಟಿಸಿದನು. ‘ಇದೆಲ್ಲ ಚೇಷ್ಟೆಯಲ್ಲ. ಅವರಿಗೆ ಜಡ್ಡು ಬಹಳವಾಗಿದೆ. ನಾನು ಊರಿಗೆ ಹೊರಡಲೆಬೇಕು’ ಎಂದ.

‘ಯಾರಿಗೆ? ಯಾರಿಗೆ?’ ಎನ್ನುವಷ್ಟರಲ್ಲಯೇ ಅವನು ಮಾಯವಾದ ಅಲ್ಲಿಂದ. ಆಟ್ಟವನ್ನು ಏರಿದ.

ಗೋಪಿ ಕಣ್ಣು ಹೊರಳಿಸಿ ನಕ್ಕ!
* * * *

ಬಹಳ ಗಂಭೀರವಾಗಿ ಕುಳಿತ ಮ್ಯಾನೇಜರರು ಮುಗುಳುನಗೆ ನಕ್ಕರು. ಮೂರ್ತಿಗೆ ಅದರ ಅರ್ಥವಾಗಲಿಲ್ಲ. ನಿಮ್ಮ ತಂದೆಗೆ ಬಹಳ ಜಡ್ಡಂತೆ. ನಾನು ಇಂದು ಹೋಗಲೇಬೇಕು!’

‘ಹೌದು, ನೀನೆನ್ನುವದು ನಿಜ. ಆದರೆ ತಾರನ್ನು ಚೆನ್ನಾಗಿ ಓದಿದೆಯಾ?’ ಮತ್ತೇನಾಯಿತೊ ಎಂಬ ಹೆದರಿಕೆಯಿಂದ ನಡಗುತ್ತ ತಾರನ್ನು ಎತ್ತಿ ಹಿಡಿದ. ಮತ್ತೊಮ್ಮೆ ನೋಡಿದ ತಾರಿನಲ್ಲಿ ಈ ರೀತಿಯಾಗಿ ಬರೆದಿತ್ತು. ‘ಪೂನಾ ಸೀರಿಯಸ್, ಫಾದರ್ ಸ್ಟಾರ್‍ಟ್’ (ಪುಣೆಗೆ ಜಡ್ಡು ಹೆಚ್ಚಾಗಿದೆ. ತಂದೆಗೆ ಬಾ.)

ಮೂರ್ತಿ ಮುಖ ಮೇಲೆತ್ತುವದರಲ್ಲಿದ್ದ.

‘ಆಗಲಿ, ಐದು ದಿನ ರಜೆ ಮಂಜೂರ ಮಾಡುವೆ. ನಿಮ್ಮ ತಂದೆಯ ಪ್ರಕೃತಿಯ ಬಗ್ಗೆ ತಿಳಿಸು.’ ಎಂದು ಹೇಳಿದರು ಮ್ಯಾನೇಜರರು.

-೪-

ಪುಣೆಯಲ್ಲಿ ನಾಗೇಶನು ಬಹು ವಿಜೃಂಭಣೆಯಿಂದ ಮೂರ್ತಿಯನ್ನು ಸ್ವಾಗತಿಸಿದನು. ಲಲಿತೆಯು ನಿಲ್ದಾಣಕ್ಕೆ ಬರುವಳೆಂದು ಮೂರ್ತಿ ಆಶಿಸಿದ್ದ. ಆದರೆ ನಾಗೇಶನು ತಾನು ಅಲ್ಲಿಗೆ ಕರೆದುಕೊಂಡು ಹೋಗಲು ಬಂದಿರುವುದಾಗಿ ಹೇಳಿದ.

ದಾರಿಯಲ್ಲಿ ಬಹಳ ಮಾತು ನಡೆದವು. ‘ಅಲ್ಲ ಮೂರ್ತಿ, ಅಂತೂ ಒಂದನೆಯ ತಾರೀಖಿಗೆ ರಜೆ ಸಿಕ್ಕಿತಲ್ಲಾ!’

’ನಿನ್ನ ಸಹಾಯವೇ ಹೆಚ್ಚಿನದು. ಇಲ್ಲವಾದರೆ ಬಹಳ ಕಷ್ಟ.’

’ಮೊದಲು ನಮ್ಮ ಮನೆಗೆ ಹೋಗೋಣ, ಆ ಮೇಲೆ ಮುಖ ತೊಳೆದು ಕೊಂಡು ಅವರಲ್ಲಿಗೆ ಹೋಗೋಣ.’ ಎಂದ ನಾಗೇಶ.

‘ಅಲ್ಲಾ……..’

‘ಈಗೆಲ್ಲಿ ಅಲ್ಲಾನ ಪ್ರಾರ್ಥನೆ’ ಎಂದವನೇ ಅವನನ್ನು ಜಗ್ಗಿ ಕೊಂಡು ಹೋದ.

ಒಂದು ತಾಸಿನಮೇಲೆ ಎಲ್ಲವನ್ನೂ ಮುಗಿಸಿ ಲಲಿತೆಯ ಮನೆಗೆ ಹೋಗಲು ಹೊರಬಿದ್ದರು. ಅಷ್ಟು ಹೊತ್ತಿನವರೆಗೂ ಮೂರ್ತಿಯ ಜೀವ ಹೇಗೊ ಆಗಿತ್ತು. ಅವಳನ್ನು ಕಾಣಲು ಒಂದೇ ಸಮನೆ ಡವಡವಿಸುತ್ತಿತ್ತು.

ಲಲಿತೆಯ ಮನೆಯಲ್ಲಿ ಕಾಲಿಟ್ಟೊಡನೆಯೇ ಒಬ್ಬ ಆಳು ಬಂದು ಕೂಡಲು ತಿಳಿಸಿಹೋದ. ಮೂರ್ತಿ ಸುತ್ತಲೂ ನೋಡಿದ. ಅಲ್ಲಿ ಅನೇಕ ನಟನಟಿಯರ ಚಿತ್ರಗಳಿದ್ದವು. ಹಲವೆಡೆ ನಿಲುಗನ್ನಡಿಗಳಿದ್ದವು. ಕೆಲವು ಸ್ವಚ್ಚವಾಗಿಯೂ ತಂಪಾಗಿಯೂ ಇತ್ತು. ಎರಡು ದುಂಡು ಮೇಜುಗಳನ್ನು ನಡುವೆ ಇಟ್ಟಿದ್ದರು. ಅವುಗಳ ಮೇಲೆ ಅದೇ ಹರಿದುತಂದ ಗುಲಾಬಿ, ಮಲ್ಲಿಗೆ ಹೂಗಳನ್ನು – ಹೂವಿನ ಪಾತ್ರೆಯಲ್ಲಿ ಹಾಕಿ ಇಟ್ಟಿದ್ದರು. ಅವುಗಳ ವಾಸನೆ ನೇರವಾಗಿ ಮೂರ್ತಿಯ ಮೂಗಿಗೆ ಬಂದು ತಾಗುತ್ತಿತ್ತು. ತನ್ನ ಜೀವನವು ಧನ್ಯವೆಂದು ಮೂರ್ತಿಗೆ ಅನಿಸಿತು.

ಅಷ್ಟರಲ್ಲಿ ಚಹವನ್ನು ತೆಗೆದುಕೊಂಡು ಆಳುಮನುಷ್ಯ ಬಂದ. ಅದರ ಸಂಗಡ ಬಿಸ್ಕಿಟು ಬ್ರೆಡ್ಡುಗಳೂ ಇದ್ದವು.

ನಾಗೇಶನು ಕಪ್ಪುಗಳಲ್ಲಿ ಚಹವನ್ನು ಹಾಕಲು ಪ್ರಾರಂಭಿಸಿದ. ಮೂರ್ತಿಗೆ ಸ್ವಲ್ಪ ಕಸಿವಿಸಿಯಾದಂತಾಯಿತು. ಆ ಚಹವನ್ನು ಅವಳೇ ತಂದು ಕೊಟ್ಟಿದ್ದರೆ! ಚಹವು ಅವಳ ಹಸ್ತದಿಂದ ಕಪ್ಪಿನಲ್ಲಿ ಬಂದಿದ್ದರೆ! ನಾಗೇಶನನ್ನು ಕೇಳಿಬಿಡೋಣವೆಂದು ಕೇಳಿದ. “ನಾಗೇಶ, ಇನ್ನೂ ಏನೂ ಸುದ್ದಿ ಇಲ್ಲವಲ್ಲ?”

“ಅದಕ್ಕೇಕೆ ಅಷ್ಟ ಆತುರ? ಅದೇ ಕೆಲಸದ ಸಲುವಾಗಿಯೇ ಅಲ್ಲವೇ ನೀನು ಇಲ್ಲಿಗೆ ಬಂದದ್ದು? ಅವಳಿಗೂ ಲಗ್ನವಾಗುವ ಮನಸ್ಸಿದೆ, ನಿನಗೊಬ್ಬನಿಗೇ ಅಲ್ಲ, ನನಗೆಲ್ಲ ಗೊತ್ತಿದೆ. ದಿನಾಲು ನಾನು ಇಲ್ಲಿಗೆ ಬರುತ್ತೇನೆ. ಏನಾದರೂ ಒಳಕೆಲಸ ಇರಬಹುದು. ಅಥವಾ ಮೈ ತೊಳಕೊಳ್ಳುತ್ತಿರಬಹುದು?”

ಮೂರ್ತಿ ಸುಮ್ಮನಾದ. ಹಾಗೊಮ್ಮೆ ಹೀಗೊಮ್ಮೆ ನೋಡಿದ. ಒಂದೆರಡು ಸಲ ಕೈ ಮುರಿದ. ಅಂತೂ ಚಹವನ್ನು ಕುಡಿಯಲು ಪ್ರಾರಂಭಿಸಿದ.

ನಾಗೇಶ ಹೇಳಿದ- “ನಾನೇ ಹೋಗಿ ಕರೆದುಕೊಂಡು ಬರುವೆ, ಏನಪ್ಪಾ ಮೂರ್ತಿ, ನೀನಿನ್ನು ಪುಣೆಯ ಹೆಣ್ಣು ಮಾಡಿಕೊಂಡು ಪುಣೇರಿ ಆಗುವಿ. ಆ ಮೇಲೆ ನನ್ನನ್ನು ಎಲ್ಲಿ ಮಾತಾಡಿಸುವಿ? ಈಗಽ ಆತಾಡುವುದನ್ನೆಲ್ಲಾ ತೀರಿಸಿಬಿಡೋಣ.” ಎನ್ನುತ್ತ ಒಳಬಾಗಿಲದ ವರೆಗೆ ಹೋದ. ನಂತರ “ಬೇಕಾದರೆ ಇಬ್ಬರೂ ಕೂಡಿಯೇ ಹೋಗೋಣ-ಅವಳ ಕೋಣೆಗೇ ನಡೆ” ಎಂದ.

ಈ ಮಾತು ಕೇಳುವುದೊಂದೇ ತಡ, ಮೂರ್ತಿಯು ಜಿಗಿದೆದ್ದು ನಿಂತ!

ಒಳಕೋಣೆಯಲ್ಲಿ ನೋಡುತ್ತಾನೆ. ಅಲ್ಲಿ ಗೋಪಿಯು ನಿಂತಿದ್ದ, “ಇದೇನು ಗೋಪಿ, ಇಲ್ಲಿ ಹೇಗೆ?” ಎಂದು ಮೂರ್ತಿ ಅಶ್ಚರ್ಯದಿಂದ ಕೇಳಿದ.

“ನನಗೂ ರಜೆ ಸಿಕ್ಕಿದೆ. ಬಂದಿದ್ದೇನೆ ಹೆಣ್ಣು ನೋಡಲಿಕ್ಕೆ.”

“ಹೆಣ್ಣು ಎಲ್ಲಿಯದು?”

“ಇಲ್ಲಿಯದೇ-ಎದುರಿನದೇ?” ಎಂದು ಒಂದು ಫೋಟೋ ಕೊಟ್ಟ. ಲಲಿತೆಯ ಚಿತ್ರದ ಹಿಂದೆ “ಎಪ್ರಿಲ್ ಫೂಲ್” ಎಂದು ಬರೆದಿತ್ತು;

ಗೋಪಿ ಮತ್ತು ನಾಗೇಶ ಗಹಗಹಿಸಿ ನಕ್ಕರು!

ಮೂರ್ತಿಯ ದೇಹವೆಲ್ಲಾ ನಡುಗುತ್ತಿತ್ತು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನುಡಿಮನವೆ
Next post ಮೂಡದ ಕವಿತೆ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…