ಆಲೀ…….. ಏ ಆಲೀ……..
ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ ಮುಟ್ಟಿಸದಿದ್ದರೆ, ಚಕ್ಕರ್ ಉಸ್ಮಾನ್ ಬೆಂಕಿಯಾಗುತ್ತಿದ್ದ. ಕೋಪದಲ್ಲಿ ಹಲವಾರು ಬೀಡಿ ಕಟ್ಟುಗಳನ್ನು ಹೊಸಕಿ ಹಾಕಿ ಹಿಂದೆ ಕಳುಹಿಸುವುದು ಮಾಮೂಲಿಯಾಗಿತ್ತು. ಬೀಡಿ ಕಟ್ಟುಗಳನ್ನು ಪಾಸು ಪುಸ್ತಕದೊಂದಿಗೆ ಚೀಲಕ್ಕೆ ತುಂಬಿಸಿ, ಐಸಮ್ಮ ಮತ್ತೊಮ್ಮೆ ಜೋರಾಗಿ ಕರೆದಳು.
‘ಆಲೀ……………….ಆಲೀ…………’
ಉತ್ತರ ಬರಲಿಲ್ಲ. ಬಹುಶಃ ಆಲಿ ಕೋಳಿಗೂಡಿನ ಬಳಿ ಇರಬೇಕು. ಕೋಳಿ ಗೂಡೇ ಅವನಿಗೆ ಮನೆ-ಮದ್ರಸ ಎಲ್ಲವೂ ಆಗಿದೆ. ಸಿಡುಕಿನಿಂದ ಐಸಮ್ಮ ಬೆತ್ತ ಹಿಡಿದು ಹೊರ ಬರುವಾಗ ಮಗಳು ರಹಮತ್ ತಡೆದಳು.
‘ಇಲ್ಲಿ ಕೊಡಮ್ಮ, ನಾನು ಆಲಿಯನ್ನು ಹುಡುಕಿಕೊಂಡು ಬರುತ್ತೇನೆ’ ರೆಹಮತ್‌ಗೆ ಗೊತ್ತು ಆಲಿಯ ಕಾರ್ಯಸ್ಥಾನ. ಗುಡ್ಡದ ಬದಿಯ ಕಾಲು ಎಕರೆ ಜಾಗದಲ್ಲಿ ಒಂದು ಸಣ್ಣ ಗುಡಿಸಲು ವಿಧವೆ ಐಸಮ್ಮನದು, ಎರಡು ಮಕ್ಕಳೊಂದಿಗೆ ಸಂಸಾರ, ಮಕ್ಕಳು ಸಣ್ಣವರಿರುವಾಗಲೇ ಪತಿಯನ್ನು ಕಳಕೊಂಡವಳು. ತಾಯಿ-ಮಗಳು ಬೀಡಿ ಕಟ್ಟಿ ಜೀವನ ನಿರ್ವಹಣೆ, ಪ್ರಾಯಕ್ಕೆ ಬಂದ ಮಗಳು ಒಂದು ತಲೆ-ನೋವಾದರೆ, ಲಂಗುಲಗಾಮಿಲ್ಲದೆ ಬೆಳೆಯುವ ಮಗ ಆಲಿಯು ಇನ್ನೊಂದು ತಲೆನೋವು, ಮೂರನೇ ತರಗತಿಯಲ್ಲಿ ಕಲಿಯುವ ಆಲಿಗೆ ಶಾಲೆ ಹೆಸರಿಗೆ ಮಾತ್ರ. ಬೆಳಿಗ್ಗೆ ಮತ್ತು ರಾತ್ರಿ ಮದ್ರಸ. ಸಂಜೆ ಬಿಸಾಡಿದ ಪುಸ್ತಕದ ಚೀಲವನ್ನು ಮರುದಿನ ಶಾಲೆಗೆ ಹೋಗುವಾಗಲೇ ಹುಡುಕಾಡುವುದು, ಪೋಲಿ ಹುಡುಗರ ಸಹವಾಸ, ಆಡದ ಆಟವಿಲ್ಲ, ಲಗೋರಿ, ಕಬಡ್ಡಿ ಕುಟ್ಟಿ-ದೊನ್ನೆ, ಗೋಲಿಯಾಟ ಮತ್ತು ಗೇರುಬೀಜದ ಆಟ ಇವುಗಳಲ್ಲಿ ಪ್ರವೀಣ. ಮದ್ರಸಕ್ಕೆ ಹೋಗುವಾಗ ಹಾಗೂ ಶಾಲೆಗೆ ಹೋಗುವಾಗ ತನ್ನ ಚಡ್ಡಿಯ ಎರಡೂ ಕಿಸೆಯಲ್ಲಿ ಗೋಲಿ ಹಾಗೂ ಗೇರುಬೀಜ ತುಂಬಿಕೊಂಡಿಲ್ಲದಿದ್ದರೆ ಅವನಿಗೆ ತೃಪ್ತಿ ಇಲ್ಲ. ಮಳೆಗಾಲದಲ್ಲಿ ಮೀನಿಗೆ ಗಾಳ ಹಾಕುವುದರಲ್ಲಿ ನಿಸ್ಸೀಮ.
ರಹಮತ್ ನಿಧಾನವಾಗಿ ಗುಡಿಸಲಿನ ಹಿಂಬದಿಗೆ ಬಂದಳು. ಹೌದು, ಅವಳ ಆಲೋಚನೆ ಸರಿಯಾಗಿಯೇ ಇತ್ತು. ಆಲಿ ತನ್ನ ಹುಂಜವನ್ನು ಹಿಡಿದುಕೊಂಡು ಏನೋ ಮಾತಾಡಿಸುತ್ತಿದ್ದ. ಇದು ಅವನ ದೈನಂದಿನ ಕಾರ್ಯಕ್ರಮ. ಬೇರೆ ಕೋಳಿಗಳ ಬಗ್ಗೆ ಅವನು ಗಮನಹರಿಸುತ್ತಿರಲಿಲ್ಲ. ಅವನ ಹುಂಜಕ್ಕೆ ವಿಶೇಷ ಸವಲತ್ತು. ಕತ್ತಲೆಯಾದೊಡನೆ ಮೆಲ್ಲ ಅಡುಗೆ ಕೋಣೆಗೆ ಬಂದು ತಾಯಿಯ ಕಣ್ಣು ತಪ್ಪಿಸಿ ಒಂದು ಹಿಡಿ ಅಕ್ಕಿ ತೆಗೆದುಕೊಂಡು ಗೂಡಿನ ಹತ್ತಿರ ಬಂದು ತಾನೇ ಕಟ್ಟಿದ ತನ್ನ ಹುಂಜಕ್ಕೆ ಅಕ್ಕಿ ತಿನ್ನಿಸುತ್ತಿದ್ದ. ಅದು ಅಕ್ಕಿ ತಿನ್ನುವಾಗ ಅದರ ಮೈದಡವಿ ಮಾತಾಡಿಸುತ್ತಿದ್ದ. ನಂತರ ನೀರು ಕುಡಿಸಿ, ಗೂಡಿನ ಒಳಗೆ ದೂಡಿ, ಮರದ ಹಲಗೆಯನ್ನು ಅಡ್ಡ ಇಡುತ್ತಿದ್ದ. ಒಮ್ಮೊಮ್ಮೆ ಇಷ್ಟರಲ್ಲಿ ಅವನು ತೃಪ್ತಿಗೊಳ್ಳುತ್ತಿರಲಿಲ್ಲ. ಪುನಃ ಹಲಗೆಯನ್ನು ಸರಿಸಿ ತನ್ನ ಹುಂಜದ ಮೈತಟ್ಟಿ ‘ಮಲಗು ಬೆಳಿಗ್ಗೆ ಬರುತ್ತೇನೆ’ ಅಂತ ಹೇಳಿ, ಮತ್ತೆ ಹಲಗೆಯನ್ನು ಅಡ್ಡ ಇಟ್ಟು ಮನೆಗೆ ಬರುತ್ತಿದ್ದ.
ರೆಹಮತ್ ನಿಧಾನವಾಗಿ ಕೋಳಿಗೂಡಿನ ಬಳಿ ಬಂದಳು. ಆಲಿಯ ಹಿಂದೆ ನಿಂತು ‘ಬಕ್’ ಎಂದು ಜೋರಾಗಿ ಶಬ್ದ ಮಾಡಿದಳು. ಆಲಿ ಒಮ್ಮೆ ನೆಗೆದು ಬಿದ್ದರೂ, ಕೈಯಿಂದ ಹುಂಜವನ್ನು ಮಾತ್ರ ಬಿಡಲಿಲ್ಲ. ‘ಎಷ್ಟು ಕರೆಯುವುದು ನಿನ್ನನ್ನು. ತಾಯಿ ಬೆತ್ತ ರೆಡಿ ಮಾಡಿದ್ದಾರೆ. ಬೇಗ ಈ ಬೀಡಿ ಕಟ್ಟುಗಳನ್ನು ಚಕ್ಕರ್ ಉಸ್ಮಾನ್‌ಕಾಕನಿಗೆ ಕೊಟ್ಟು ಎಲೆ ತಂಬಾಕು ತೆಗೆದುಕೊಂಡು ಬಾ. ಇವತ್ತು ಶನಿವಾರ ಮಜೂರಿ ಕೊಡುತ್ತಾರೆ. ಜಾಗ್ರತೆಯಲ್ಲಿ ತೆಗೆದುಕೋ. ದಾರಿಯಲ್ಲಿ ಹಣ ಲೆಕ್ಕ ಮಾಡಬೇಡ, ಬರುವಾಗ ಎರಡು ಕೆ.ಜಿ. ಅಕ್ಕಿಯನ್ನು ಬಾಬಣ್ಣನ ಅಂಗಡಿಯಿಂದ ತೆಗೆದುಕೊಂಡು ಬಾ, ಜಾಗ್ರತೆ, ಬೇಗ ಹೋಗು.’
ಆಲಿ ಹುಂಜವನ್ನು ಮೈದಡವಿ ಗೂಡಿಗೆ ಹಾಕಿ ಹಲಗೆಯನ್ನು ಅಡ್ಡಲಾಗಿ ಇಟ್ಟ. ಹುಂಜ ಒಮ್ಮೆ ಕ್ಕೊ…… ಕ್ಕೊ….. ಅಂತ ಸಣ್ಣದಾಗಿ ಕೂಗಿತು. ಆಲಿ ಖುಷಿಯಾಗಿ ಹೆಮ್ಮೆಯಿಂದ ಅಕ್ಕನನ್ನು ನೋಡಿದ.
‘ಸಾಕು ಸಾಕು ನಿನ್ನ ಕೋಳಿ ಪ್ರೀತಿ, ಒಂದಲ್ಲ ಒಂದು ದಿವಸ ಅದನ್ನು ‘ಕತಂ’ ಮಾಡುವುದೇ ತಿಳಿಯಿತಾ?
‘ನಾನು ಬಿಡುವುದಿಲ್ಲ. ಇದು ನನ್ನ ಹುಂಜ. ಇದನ್ನು ಏನಾದರೂ ಮಾಡಿದರೆ ನಾನು ಸೈಯದ್‌ಕಾಕನೊಂದಿಗೆ ಬೊಂಬಾಯಿಗೆ ಓಡುತ್ತೇನೆ ನೋಡು.’ ಆಲಿ ತನಗಿರುವ ಒಂದೇ ಒಂದು ಮಾರಕಾಸ್ತ್ರವನ್ನು ಸ್ಫೋಟಿಸಿದ. ಅವನಿಗೆ ಗೊತ್ತು ತಾಯಿ ಮತ್ತು ಅಕ್ಕ ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು.
‘ಇಲ್ಲ ಮಾರಾಯಾ ತಮಾಷೆಗೆ ಹೇಳಿದೆ. ನಿನ್ನ ಹುಂಜ ನಿನಗೇ ಇರಲಿ. ಈಗ ಹೊರಡು ಬೇಗ
ಬೀಡಿ ಕಟ್ಟಿನ ಚೀಲ ತೆಗೆದುಕೊಂಡು ಆಲಿ ನಾಲ್ಕು ಹೆಜ್ಜೆ ಮುಂದೆ ಹೋಗಿ ತಿರುಗಿ ಬಂದ.
‘ಏನೋ’?
‘……….’
ಆಲೀ ಸಣ್ಣ ಮುಖ ಮಾಡಿಕೊಂಡು ಒಂದು ಕಿರುನಗೆ ನಕ್ಕ. ಆ ನಗುವಿನಲ್ಲಿ ಒಂದು ದೊಡ್ಡ ಬೇಡಿಕೆಯಿತ್ತು.
‘ಹೇಳು ಬೇಗ, ಹೊತ್ತಾಯಿತು. ತಾಯಿ ಕೂಗುತ್ತಾ ಇದ್ದಾರೆ’.
‘ಅಕ್ಕಾ…… ಇವತ್ತು ವಾರದ ಮಜೂರಿ ತಾನೆ? ನನಗೆ ಒಂದು ಹತ್ತು ರೂಪಾಯಿ ಕೊಡಕ್ಕಾ….’
‘ಯಾಕೋ….’
‘ನಿನಗೆ ನಾನು ರಜಾ ದಿನ ಬೀಡಿಗೆ ನೂಲು ಹಾಕುತ್ತೇನೆ ಮತ್ತು ಎಲೆ ಕತ್ತರಿಸಿ ಕೊಡುತ್ತೇನೆ’.
‘ಸರಿ ತೆಗೆದುಕೋ ಆದರೆ ಹಣವನ್ನು ಏನು ಮಾಡುತ್ತಿಯೋ?’
‘ನನಗೆ ಎರಡು ಈರುಳ್ಳಿಗಡ್ಡೆ ಹಾಗೂ ಒಂದು ಅರ್ಧ ಕೆ.ಜಿ. ಭತ್ತ ತೆಗೆದುಕೊಳ್ಳಬೇಕು. ನನ್ನ ಹುಂಜಕ್ಕೆ ತಿನ್ನಿಸಲು, ತಾಯಿಗೆ ಮಾತ್ರ ಹೇಳಬೇಡ.
ಅಕ್ಕನ ಉತ್ತರವನ್ನು ಕಾಯದೆ ತನ್ನ ಬಲ ಕಾಲಿನಿಂದ ಒಮ್ಮೆ ನೆಲಕ್ಕೆ ಒದ್ದು ಸ್ಕೂಟರ್ ಸ್ಟಾರ್ಟ್ ಮಾಡಿ ಎರಡೂ ಕೈಯನ್ನು ಮುಂದೆ ಹಿಡಿದು ನೇರವಾಗಿ ಸಾಗಿದ.
ಚಕ್ಕರ್ ಉಸ್ಮಾನ್‌ಕಾಕನ ಅಂಗಡಿಗೆ.
ಹೌದು ಎಂಟು ಕೋಳಿ ಮರಿಗಳಲ್ಲಿ ಕಾಗೆ, ಮುಂಗುಸಿ, ಬೆಕ್ಕುಗಳು ತಿಂದು ಉಳಿದದ್ದು ಇದು ಒಂದು ಹುಂಜ ಮಾತ್ರ. ಪ್ರತೀ ಮರಿಗಳು ಮಾಯವಾದಾಗಲೂ
ಆಲಿ ಕಣ್ಣೀರು ಹಾಕಿ ತಿಂದ ಪ್ರಾಣಿ-ಪಕ್ಷಿಗಳಿಗೆ ಶಾಪ ಹಾಕುತ್ತಿದ್ದ. ಈ ಮರಿಯನ್ನು ಹೇಗಾದರೂ ಮಾಡಿ ಕಾಪಾಡಿದ. ಮರಿ ಬೆಳೆಯುತ್ತಿದ್ದಂತೆ ನವಿರಾದ ಬಣ್ಣ-ಬಣ್ಣದ ಗರಿಗಳು ಮೂಡ ತೊಡಗಿದವು. ಕೆಂಪು ಗರಿಗಳು ಕುತ್ತಿಗೆಯ ಸುತ್ತಲೂ ತುಂಬಿ ನಿಂತರೆ ಬೆನ್ನಿನಲ್ಲಿ ಬಂಗಾರದ ಬಣ್ಣದ ಗರಿಗಳು ಲಕ-ಲಕ ಹೊಳೆಯುತ್ತಿದ್ದವು. ತಲೆಯಲ್ಲಿ ಕಂದು ಬಣ್ಣದ ಕತ್ತಿ ಜುಟ್ಟು, ಪುಷ್ಟಿಯಾದ ಎರಡು ತೊಡೆಗಳು, ಬಾಗಿನಿಂತ ಕಪ್ಪು ಮಿಶ್ರಿತ ಕೆಂಪು ಗರಿ-ಗರಿಯಾದ ಬಾಲಗಳ ರಾಶಿಗಳು ಹುಂಜಕ್ಕೆ ಇನ್ನೊಂದು ಮೆರಗನ್ನು ಕೊಡುತ್ತಿತ್ತು. ಒಂದಷ್ಟು ವಿಶೇಷ ಎತ್ತರಕ್ಕೆ ಬೆಳೆದ ಹುಂಜ ಒಮ್ಮೆ ಸೆಟೆದು ನಿಂತು ಕೂಗಿದರೆ ಆ ಚಂದವನ್ನು ನೋಡಿ ಆಲಿ ಹುಚ್ಚನಾಗುತ್ತಿದ್ದ.
ಆಲಿಯ ಸ್ಕೂಟರ್ ವೇಗವಾಗಿ ಗದ್ದೆಯ ದಾರಿಯಲ್ಲಿ ಹೋಗುತ್ತಿತ್ತು. ಮಸುಕು ಮಸುಕಾದ ಕತ್ತಲು. ಎದುರಿಗೆ ತೂರಾಡಿಕೊಂಡು ಲಕ್ಷ್ಮಣ ಬರುತ್ತಿದ್ದ. ನೆರೆಮನೆಯ ಕೂಲಿಯಾಳು ಲಕ್ಷ್ಮಣ ಆಲಿಯ ಗುರು. ವಾರಕ್ಕೆ ಮೂರು ದಿನ ಕೂಲಿ ಕೆಲಸ ಮಾಡಿದರೆ ನಾಲ್ಕು ದಿನ ರಜೆ. ಲಕ್ಷ್ಮಣನ ಮನೆಗೆ ಹೋಗಬೇಕಾದರೆ ಆಲಿಯ ಅಂಗಳ ದಾಟಿಯೇ ಹೋಗಬೇಕು. ಹಿಂದಿನ ಸಾರಿ ಲಕ್ಷ್ಮಣ ಆಲಿಯ ಹುಂಜ ನೋಡಿ ಖುಷಿಯಾಗಿದ್ದ.
ಮತ್ತು ಅದನ್ನು ಸಾಕುವ ಬಗ್ಗೆ ಕೆಲವು ನಿರ್ದೇಶನ ಕೊಟ್ಟಿದ್ದ.
‘ಲಕ್ಷ್ಮಣಣ್ಣ, ಲಕ್ಷ್ಮಣಣ್ಣ’
ಓ….ಆಲಿ…. ಏನು ಮಾರಾಯಾ ನಿನ್ನ ಹುಂಜ ಹೇಗಿದೆ?
‘ಚೆನ್ನಾಗಿದೆ ಲಕ್ಷ್ಮಣಣ್ಣ. ನೀನು ಹೇಳಿದ ಹಾಗೇ ಬಾಬಣ್ಣನ ಅಂಗಡಿಯಿಂದ ಹುಂಜ ಕಟ್ಟಿ ಹಾಕುವ ಬಣ್ಣ ಬಣ್ಣದ ಹಗ್ಗ ತಂದಿದ್ದೇನೆ. ಮೂರು ರೂಪಾಯಿ ನೋಡು, ಈಗ ಹೇಂಟೆಗಳ ಹಿಂದೆ ಹೋಗಲು ಬಿಡುವುದಿಲ್ಲ ನಾನು. ದೇಹದಲ್ಲಿ ಚೆನ್ನಾಗಿದೆ. ಕತ್ತಿ ಜುಟ್ಟು ಎಷ್ಟು ಚೆನ್ನಾಗಿ ಬೆಳೆದಿದೆ ನೋಡು. ಭಾನುವಾರ ಬಾ ಲಕ್ಷ್ಮಣಣ್ಣ, ನಿನಗೆ ನನ್ನ ಹುಂಜ ತೋರಿಸುತ್ತೇನೆ.
‘ಬರುತ್ತೇನೆ ಇನ್ನೊಂದು ಕೆಲಸ ಮಾಡುವಾ. ಅದರ ಜುಟ್ಟು ತುಂಬಾ ದೊಡ್ಡದಾದರೆ ಕಣ್ಣಿಗೆ ಅಡ್ಡ ಬೀಳುತ್ತದೆ. ಆಗ ಅದನ್ನು ತುಂಡು ಮಾಡಿ ತೆಗೆಯಬೇಕು. ಇಲ್ಲದಿದ್ದರೆ ಕೋಳಿ ಅಂಕದ ಸಮಯದಲ್ಲಿ ಎದುರು ಕಡೆಯ ಹುಂಜದ ಮುಖ ಸರಿಯಾಗಿ ಕಾಣುವುದಿಲ್ಲ. ಆಗ ನಮ್ಮ ಹುಂಜದ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ.’
‘ಲಕ್ಷ್ಮಣಣ್ಣ ನನ್ನ ಹುಂಜ ಸೋಲಬಾರದು. ಬಂಗಾರದ ಪದಕ ನನ್ನ ಹುಂಜಕ್ಕೆ ಸಿಗಬೇಕು. ನೀನೇ ಬಂದು ಸರಿ ಮಾಡು. ನೀನು ನನ್ನ ಗುರು ಅಲ್ಲವೇ?’
ಹುಂಜಕ್ಕೆ ನೀರುಳ್ಳಿ, ಭತ್ತ ಇತ್ಯಾದಿ ತಿನಸುಗಳನ್ನು ಕಟ್ಟಿ ಹಾಕಿ ತಿನ್ನಿಸಲು ಲಕ್ಷ್ಮಣನೇ ಆಲಿಗೆ ತಿಳಿಸಿದ್ದ ಮತ್ತು ನಿನ್ನ ಕೋಳಿಗೆ ಒಂದು ಸಾವಿರ ರೂಪಾಯಿವರೆಗೂ ಡಿಮಾಂಡ್ ಇದೆ. ಕೊಡಬೇಡ. ಈ ಸಾರಿಯ ದಸರಾ ಕೋಳಿ ಅಂಕದಲ್ಲಿ ಅಂಗಡಿ ಬಾಬಣ್ಣನ ಕಟ್ಟೆ ಬಣ್ಣದ ಹುಂಜವನ್ನು ಸೋಲಿಸಿ ಬಂಗಾರದ ಪದಕ ಪಡೆಯಬೇಕು ಎಂದು ಕೂಡಾ ಆಸೆ ಹುಟ್ಟಿಸಿದ್ದ. ಕೋಳಿ ಅಂಕಕ್ಕೆ ನಿನ್ನನ್ನು ಕರಕೊಂಡು ಹೋಗುತ್ತೇನೆ. ಎಲ್ಲರಿಗೂ ನಿನ್ನ ಕೋಳಿ ತೋರಿಸುತ್ತೇನೆ. ಗೆದ್ದರೆ ನಿನಗೆ ಬಂಗಾರದ ಪದಕ, ಎದುರು ಪಾರ್ಟಿಯ ಸತ್ತ ಕೋಳಿಯನ್ನು ಮಾತ್ರ ನನಗೆ ಕೊಡಬೇಕು ಎಂದು ಶರ್ತ ಹಾಕಿದ್ದ ಲಕ್ಷ್ಮಣಣ್ಣ.
‘ನೀನು ಹೆದರಬೇಡ ಆಲಿ, ಭಾನುವಾರ ಬರುತ್ತೇನೆ. ಹುಂಜವನ್ನು ಚೆನ್ನಾಗಿ ಸಾಕು. ಮರಿಬೇಡ, ಹಗ್ಗ ಬಿಚ್ಚಿ ಓಡದಂತೆ ಮಾತ್ರ ನೋಡಿಕೋ’ ತೂರಾಡುತ್ತಾ ಲಕ್ಷ್ಮಣ ಮುಂದೆ ಹೋದ.
ಆಲಿಗೆ ಮತ್ತಷ್ಟು ಸಂತೋಷವಾಯಿತು. ಕೋಳಿ ಅಂಕದ ದೃಶ್ಯ ಅವನ ಕಣ್ಣೆದುರು ಕಟ್ಟಿತು. ಲಕ್ಷ್ಮಣ ಕೆಂಪು ಮುಂಡಾಸು ತಲೆಗೆ ಕಟ್ಟಿಕೊಂಡು ಎಡಕೈಯಲ್ಲಿ ಹುಂಜ ಹಿಡಿದುಕೊಂಡು ಕೋಳಿ ಅಂಕಣದಲ್ಲಿ ತಿರುಗುವುದು, ತಾನು ಅವನ ಹಿಂದೆಯೇ ಗತ್ತಿನಲ್ಲಿ ನಡೆಯುವುದು. ಜನರು ನನ್ನ ಹುಂಜ ನೋಡಿ ‘ಶಹಭಾಶ್’ ಎನ್ನುವುದು ಎಲ್ಲಾ ನೆನಸಿಕೊಂಡು ಆಲಿಯ ಮೈ ಪುಳುಕಿತವಾಯಿತು. ಬಂಗಾರದ ಪದಕ ಕೊರಳಿಗೆ ಹಾಕಿಕೊಂಡು ಮನೆಗೆ ಬಂದು ತಾಯಿ, ಅಕ್ಕನಿಗೆ ತೋರಿಸಿ ಕುಣಿಯಬೇಕು ಎಂದೆಲ್ಲಾ ನೆನಸಿಕೊಂಡು ಓಡುತ್ತಾ ಆಲಿ ಚಕ್ಕರ್ ಉಸ್ಮಾನ್ ಅಂಗಡಿ ಹತ್ತಿರ ಬ್ರೇಕ್ ಹಾಕಿದ. ಎಲ್ಲಾ ಕೆಲಸ ಮುಗಿಸಿದ ಆಲಿ ನೀರುಳ್ಳಿ ಹಾಗೂ ಭತ್ತ ತರಲು ಮರೆಯಲಿಲ್ಲ. ಮನೆಯೊಳಗೆ ಹೊಕ್ಕುವ ಮೊದಲು ಹುಂಜದ ಆಹಾರವನ್ನು ಮನೆಯ ಹೊರಗೆ ಅಡಗಿಸಿಟ್ಟ. ಭಾನುವಾರ ಬಂದ ಲಕ್ಷ್ಮಣನಿಗೆ ಆಲಿಯ ಹುಂಜ ನೋಡಿ ಆಶ್ಚರ್ಯವಾಯಿತು. ಅವನು ನೆನಸಿದಕ್ಕಿಂತಲೂ ಹುಂಜ ಬೆಳೆದು ನಿಂತಿತ್ತು. ಉದ್ದವಾದ ಕಾಲುಗಳು, ಎತ್ತರದ ನಿಲುವು, ವಿಶಾಲವಾದ ಎದೆ, ಬಂಗಾರದ ಬಣ್ಣದ ಕೆಂಪು ಮಿಶ್ರಿತ ಗರಿಗಳು, ನೀಳವಾದ ಕಪ್ಪು ಬಿಳಿ ಮಿಶ್ರಿತ ಬಾಲದ ರಾಶಿ, ಕೆಂಪು ಕತ್ತಿ ಜುಟ್ಟು, ಕುತ್ತಿಗೆಯ ತುಂಬಾ ಕೆಂಪು-ಹಳದಿ ಮಿಶ್ರಿತ ಕೂದಲಿನ ರಾಶಿ-ರಾಶಿ. ಒಮ್ಮೆ ರೆಕ್ಕೆಯನ್ನು ಹರಡಿ ಎರಡುಮೂರು ಬಾರಿ ಬಡಿದುಕೊಂಡು ಜೋರಾಗಿ ಕೂಗಿದರೆ ಯಾರಾದರೂ ಒಮ್ಮೆ ತಿರುಗಿ ನೋಡಬೇಕು. ಲಕ್ಷ್ಮಣನಿಗೆ ಎದೆ ತುಂಬಿ ಬಂತು. ತನ್ನ ನಿರ್ದೇಶನ ಫಲಕಾರಿಯಾದ
ಹುಮ್ಮಸ್ಸು.
‘ಆಲಿ ಸರಿಯಾಗಿ ಸಾಕಿದ್ದಿ ನೀನು. ದಸರಾಕ್ಕೆ ಇನ್ನು ಒಂದು ತಿಂಗಳಿದೆ. ಕೋಳಿ ಅಂಕದಲ್ಲಿ ಬಾಬಣ್ಣನ ಕಡ್ಡಿ ಬಣ್ಣದ ಹುಂಜನಿಗೆ ನೀರು ಕುಡಿಸಲೇ ಬೇಕು ನೋಡು.’
ಲಕ್ಷ್ಮಣ ಹುಂಜದ ಜುಟ್ಟು ನೋಡಿದ. ಕಣ್ಣಿಗೆ, ಜುಟ್ಟು ಅಡ್ಡ ಬಂದಿಲ್ಲವಾದುದರಿಂದ ಕಸಿ ಮಾಡುವ ಕಾರ್ಯ ಮುಂದೂಡಿದ. ಮತ್ತೆ ಬರುತ್ತೇನೆ ಎಂದು ಲಕ್ಷ್ಮಣ ಹೊರಟ. ಹೊರಡುವಾಗ ‘ಹಸಿ ಕಡಲೆ’ ನೆನಸಿ ಹಾಕಿ ಹುಂಜಕ್ಕೆ ತಿನ್ನಿಸಲು ಹೇಳಲು ಮರೆಯಲಿಲ್ಲ.
ರಾತ್ರಿಯಿಡೀ ಆಲಿಗೆ ಸುಂದರ ಕನಸುಗಳ ಸರಮಾಲೆ. ದಸರಾ ಶುರುವಾಗಿತ್ತು. ಬಾಬಣ್ಣ ತನ್ನ ಇಡೀ ಅಂಗಡಿಗೆ ರಂಗು ರಂಗಿನ ಪೈಂಟು ಮಾಡಿಸಿದ್ದ. ಹೊರಗಿನ ಅಂಗಳಕ್ಕೆ ತೆಂಗಿನ ಸೋಗೆಯಿಂದ ಹೆಣೆದ ಚಪ್ಪರ ಹಾಕಿ ಕಲರ್ ಲೈಟುಗಳನ್ನು ಹಾಕಿಸಿದ್ದ. ತರ-ತರಹದ ಬಣ್ಣದ ಕಾಗದಗಳನ್ನು ಚಪ್ಪರಕ್ಕೆ ತೂಗ ಹಾಕಿಸಿ, ಚಪ್ಪರದ ಕಂಬಗಳಿಗೆ ಪೈಂಟ್ ಬಳಸಿದ್ದ. ಭಾನುವಾರ ಪಂದ್ಯಾಟದ ದಿನ ಮೈಕ್ ಅರಚುತ್ತಾ ಇತ್ತು. ಜನ ಸಂದಣಿ ಏರುತ್ತಿತ್ತು. ದೂರದ ಊರಿನಿಂದಲೂ ಜನರು ತಮ್ಮ ತಮ್ಮ ಹುಂಜಗಳನ್ನು ಹಿಡಿದುಕೊಂಡು ರಣಾಂಗಣಕ್ಕೆ ಬರುತ್ತಿದ್ದರು. ಸ್ಪರ್ಧೆಗೆ ನಿಲ್ಲುವ ಹುಂಜಗಳನ್ನು ಚಪ್ಪರಕ್ಕೆ ಕಟ್ಟಿ ಹಾಕಿದ್ದರು. ಅದರಲ್ಲಿ ಆಲಿಯ ಹುಂಜವೂ ಒಂದು. ಬಾಬಣ್ಣನ ಚಾಂಪಿಯನ್ ಹುಂಜವನ್ನು ಪ್ರತ್ಯೇಕವಾಗಿ ಕಟ್ಟಿ ಹಾಕಿ ಅದರ ಮೇಲೆ ಬಹುಮಾನದ ವಿವರ ಪಟ್ಟಿ ತೂಗ ಹಾಕಿದ್ದರು. ಲಕ್ಷ್ಮಣಣ್ಣ ಕೆಂಪು ಮುಂಡಾಸು ಕಟ್ಟಿ ತಿರುಗುತ್ತಿದ್ದರೆ ಅವನ ಬೆನ್ನು ಬಿಡದ ಆಲಿ ಅವನೊಂದಿಗೆ ಹೆಜ್ಜೆ ಹಾಕುತ್ತಿದ್ದ. ಆಲಿಯ ಕೋಳಿಯ ಕಾಲಿಗೆ ಕತ್ತಿ ಕಟ್ಟಲು ಹತ್ತಿರದ ಊರಿನಿಂದ ವಿಶೇಷ ಪರಿಣತಿ ಹೊಂದಿದ ಅವನ ಸಂಬಂಧಿಕರೊಬ್ಬರನ್ನು ವಿಶೇಷವಾಗಿ ಲಕ್ಷ್ಮಣಣ್ಣ ಆಹ್ವಾನಿಸಿದ. ಸಂಜೆಯಾಯಿತು. ಕೋಳಿ ಅಂಕದ ಅಂತಿಮ ಹಣಾಹಣಿ, ಬಾಬಣ್ಣನ ಕಡ್ಡಿ ಬಣ್ಣದ ಹುಂಜಕ್ಕೂ ಆಲಿಯ ಕೆಂಪು ಬಣ್ಣದ ಹುಂಜಕ್ಕೂ ಫೈನಲ್ ಪಂದ್ಯ. ಎರಡೂ ಕಡೆ ಜೂಜು ಕಟ್ಟಿದವರ ಪರಾಕು, ಬೊಬ್ಬೆ ಹುರಿದುಂಬಿಸುವಿಕೆ. ಫೈನಲ್ ಕಾದಾಟದ ಜಟ್ಟಿಗೆ ಗಾಳಿ ಹಾಕಲು ಎರಡೂ ಕಡೆ ಟವಲ್ ಹಿಡಿದು ನಿಂತ ತರುಣರ ಉಚಿತ ಸೇವೆ. ಆಲಿಯ ಕೈಯಲ್ಲಿ ನೀರಿನ ಬಾಟಲಿ, ಎದೆಯಲ್ಲಿ ಡೋಲು ಕುಣಿತ, ಗರಿ ಕೆದರಿ ಎದುರು ಬದುರಾಗಿ ನಿಂತಜಟ್ಟಿಗಳು, ಕಾಲಿನಲ್ಲಿ ಹರಿತವಾದ ಚೂರಿ. ನೋಡುತ್ತಿರುವಂತೆಯೇ ಒಂದೆ ನೆಗೆತಕ್ಕೆ ಆಲಿಯ ಹುಂಜ ಬಾಬಣ್ಣನ ಹುಂಜವನ್ನು ನೆಲಕ್ಕುರುಳಿಸಿತ್ತು. ಜನರ ಜಯಕಾರ ಮುಗಿಲು ಮುಟ್ಟಿತು. ಆಲಿಯನ್ನು ಎತ್ತಿ ಹೆಗಲ ಮೇಲೆ ಕುಳ್ಳಿರಿಸಿ ಮೆರವಣಿಗೆ.
ದಡಾರನೆ ಬಿದ್ದ ಬೆತ್ತದ ಪೆಟ್ಟಿಗೆ ಆಲಿಯ ಕನಸು ನಿರ್ನಾಮವಾಗಿ ಎಚ್ಚರವಾಯಿತು. ತಾಯಿ ಬೆತ್ತ ಹಿಡಿದು ಎದುರು ನಿಂತಿದ್ದಳು.
‘ಸೂರ್ಯ ಉದಯಿಸಿ ಎಷ್ಟು ಹೊತ್ತಾಯಿತು! ಇನ್ನೂ ಏಳಲಿಲ್ಲ ನೀನು! ಹೋಗು ಹಲ್ಲುಜ್ಜಿ, ಬೆಳಗ್ಗಿನ ನಮಾಜು ಮಾಡಿ ಮದರಸಕ್ಕೆ ಹೊರಡು.’
ತನ್ನ ಸುಂದರ ಕನಸು ಭಗ್ನವಾದುದಕ್ಕೆ ಮನದಲ್ಲೇ ಕಿಡಿಕಾರುತ್ತಾ ಆಲಿ ಮಸೀದಿಯ ಕಡೆ ಓಟಕ್ಕಿತ್ತ. ಅವನಿಗೆ ತನ್ನ ಕನಸನ್ನು ಲಕ್ಷ್ಮಣನಿಗೆ ಹೇಳುವ ತವಕ. ಆಗಾಗ್ಗೆ ಶಾಲೆಯಲ್ಲೂ ಅವನಿಗೆ ಕನಸು ಮರುಕಳಿಸುತ್ತಿತ್ತು.
ಮರುದಿನ ತಾಯಿ ತುಂಬಾ ಗಡಿಬಿಡಿಯಲ್ಲಿದ್ದಂತೆ ಆಲಿಗೆ ಕಂಡು ಬಂತು. ಹೌದು, ಮಗಳು ರೆಹಮತ್‌ಳಿಗೆ ಗಂಡು ಹುಡುಕಿ ಸೋತ ಐಸಮ್ಮ ದೂರದ ಸಂಬಂಧಿ ಇಸ್ಮಾಲಿಕಾಕನ ಮಗ ಮೆಹಬೂಬನ ನೆಂಟಸ್ಥಿಕೆ ಖುಷಿ ಕೊಟ್ಟಿತು. ಮೆಹಬೂಬ್ ಸೈಕಲ್‌ನಲ್ಲಿ ಮನೆ ಮನೆಗೆ ಮೀನು ಮಾರುತ್ತಿರುವಾಗ ರೆಹಮಾನ್‌ಳನ್ನು ಕಂಡು ಮಾರು ಹೋಗಿದ್ದ. ಇಂದು ರೆಹಮಾನ್‌ಳನ್ನು ಕಾಣಲು ಮದುಮಗ, ಅವನ ತಾಯಿ, ಅಕ್ಕಂದಿರು ಬರುತ್ತಾರೆ. ಆಲಿಗೆ ತನ್ನ ಭಾವೀ ಭಾವನನ್ನು ನೋಡುವ ಆಸೆ. ಅವರು ಕೊಡುವ ಉಡುಗೊರೆ ನೋಡುವ ಆಸೆ. ಆದರೆ ಶಾಲೆ ಇದೆಯಲ್ಲ! ಒಲ್ಲದ ಮನಸ್ಸಿನಿಂದ ಶಾಲೆಗೆ ಹೋಗಲೇ ಬೇಕಾಯಿತು. ಶಾಲೆ ದೂರವಿರುವುದರಿಂದ ಬೆಳಗ್ಗೆಯೇ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದ.
ಸಂಜೆ ಮನೆಗೆ ಎಂದಿನಂತೆ ಬಂದವನು ಚೀಲವನ್ನು ಬಿಸಾಡಿ ತನ್ನ ‘ಹೀರೋ’ ಹತ್ತಿರ ಓಡಿದ. ಅಲ್ಲಿ ಹುಂಜದ ಹಗ್ಗ ಮಾತ್ರ ಇತ್ತು. ಆಲಿಗೆ ಏನೋ ಸಂಶಯ ಬಂದು ಒಂದೇ ಉಸುರಿಗೆ ‘ಉಮ್ಮಾ’ ಎಂದು ಅರಚುತ್ತಾ ತಾಯಿ ಬಳಿ ಬಂದ.
‘ಏನು ಮಾಡುವುದು ಮಗಾ! ಎಲ್ಲಾ ಅರ್ಜೆಂಟ್. ಬೇರೆ ಉಪಾಯವಿಲ್ಲದೆ ನಿನ್ನ ಹುಂಜವನ್ನು ಹಲಾಲ್ ಮಾಡಿದೆವು ನೋಡು! ಅದಿರಲಿ, ನಿನ್ನ ಅಕ್ಕನಿಗೆ ಏನು ಉಡುಗೊರೆ ಕೊಟ್ಟಿದ್ದಾರೆ ಗೊತ್ತಾ!’
ಆಲಿಯ ತಾಯಿ ಸಂತೋಷದಿಂದ ಬೀಗುತ್ತಾ ಬಂಗಾರದ ನೆಕ್ಲೆಸನ್ನು ಆಲಿಗೆ ತೋರಿಸಿದಳು. ಆಲಿಗೆ ಎದುರುಗಡೆ ಏನೂ ಕಾಣಲಿಲ್ಲ. ಜೋರಾಗಿ ಮನೆಯ ಹಂಚು ಹಾರಿ ಹೋಗುವಂತೆ ಅರಚಿದ, ನೆಲಕ್ಕೆ ಬಿದ್ದು ಹೊರಳಾಡಿದ.
‘ಆಲಿ! ನೋಡು! ನಿನಗೆ ಲಕ್ಷ್ಮಣಣ್ಣನ ಹತ್ತಿರ ಹೇಳಿ ಒಳ್ಳೆಯ ಹುಂಜ ತರಿಸಿಕೊಡುತ್ತೇನೆ. ಈಗ ಬಾ! ನಾಸ್ಟಾ ಮಾಡು ಅಳಬೇಡ.’
ಆಲಿಯ ಉತ್ತರಕ್ಕೂ ಕಾಯದೆ ಐಸಮ್ಮ ಬಿಸಿ ಬಿಸಿ ಕೋಳಿ ಪದಾರ್ಥ ಹಾಗೂ ಪರೋಟ ತಂದು ಆಲಿಯ ಎದುರು ಇಟ್ಟು ಸಮಾಧಾನ ಮಾಡಿದಳು. ಕೋಳಿ ಪದಾರ್ಥದ ಕಡೆಗೆ ದಿಟ್ಟಿಸಿದ ಆಲಿ ತುಂಡುಗಳನ್ನು ನೋಡಿದ. ಅವನ ಹುಂಜದ ಒಂದು ಇಡೀ ತೊಡೆಯ ತುಂಡು ಪಿಂಗಾಣಿಯಲ್ಲಿ ಎದ್ದು ಕಾಣುತ್ತಿತ್ತು. ಆಲಿಗೆ ತನ್ನ ಕಾಲೇ ನೇತಾಡುತ್ತಿರುವಂತೆ ಕಂಡಿತು. ಜೋರಾಗಿ ಅಳುತ್ತಾ ಆಲಿ ಮನೆಯ ಹೊರಗೆ ಬಂದು ಗುಡ್ಡದತ್ತ ಓಡಿದ.
‘ಗುಡ್ಡದ ಕಣಿವೆಗೆ ಬಂದ ಆಲಿ ಇಣುಕಿ ನೋಡಿದ. ಗುಡ್ಡದ ಬದಿಯ ಕಣಿವೆಯಲ್ಲಿ ಅವನ ಪ್ರೀತಿಯ ಹುಂಜದ ತಲೆ, ಎರಡು ಕಾಲುಗಳು, ಬಾಲಗಳ ರಾಶಿ, ರೆಕ್ಕೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆಲಿಯ ಕೂಗು ಮತ್ತೂ ತಾರಕಕ್ಕೆ ಏರಿತು. ಅಳುತ್ತಲೇ ಕಣಿವೆಗೆ ನಿಧಾನವಾಗಿ ಇಳಿದ. ಕೋಳಿಯ ತಲೆಯನ್ನು ತನ್ನ ಕೈಯಲ್ಲಿ ಎತ್ತಿ ನಿಧಾನವಾಗಿ ಮುತ್ತಿಕ್ಕಿದ. ಅದರ ರೆಕ್ಕೆಯ ಮೇಲಿನ ಬಂಗಾರ ಬಣ್ಣದ ಕಂಪು ಮಿಶ್ರಿತ ಎರಡು ಸುಂದರ ಗರಿಗಳನ್ನು ಎತ್ತಿಕೊಂಡು ಕಣಿವೆ ಹತ್ತಿ ಮನೆಯ ಕಡೆ ರೋದಿಸುತ್ತಾ ಓಟಕ್ಕಿತ್ತ.
*****