(ಮದುಮಗನ ಗೀತೆ)
ಒಂಟೆತ್ತಿನ ಗಾಡಿ – ನಾನು
ಈವರೆಗೆ
ಜೋಡೆತ್ತಿನ ಬಂಡಿ – ನಾಳೆ
ತೆರೆವ ದಾರಿಗೆ
ಹೊತ್ತೊಯ್ಯುವೆನು ನಿಮ್ಮ
ಎಲ್ಲಾ ಹರಕೆ
ಬೆನ್ನಿಗಿರಲಿ ಮಾತ್ರ – ನಿಮ್ಮ
ಪ್ರೀತಿಯ ಹಾರೈಕೆ //ಪ//
ಇಂದೇಕೋ ಏನೋ – ನೆನ-
ಪಾಗುತಿದೆ ಬಾಲ್ಯ
ಹೊತ್ತು ಹೆತ್ತಂತ ತಾಯಿ
ತಂದೆ ವಾತ್ಸಲ್ಯ
ಜೊತೆಗೆ ಅಣ್ಣ ತಂಗಿ
ಹಂಚಿ ಉಂಡದ್ದು
ಅಜ್ಜಂದಿರ ತೊಡೆ ಜಗಲಿ
ಹತ್ತಿ ಇಳಿದದ್ದು
ಇಂದೇಕೋ ಈ ನೆನಪು
ನರನಾಡಿಗಳಲ್ಲಿ
ಹೀಗಿದ್ದರೆ ನಾಳೆ – ಏನು
ತಿಳಿಸುವಿರಾ ಇಲ್ಲಿ?
ಸಂಗಾತಿಯ ಕೈ ಹಿಡಿವ
ನನ್ನೀ ಸುದಿನದಲಿ
ತುಂಬಿತು ಹೃದಯ ತಣಿಯಿತು
ನಿಮ್ಮಾಗಮನದಲಿ
ಜೊತೆ ಆಡಿ ಬೆಳೆದ
ಗೆಳೆಯ ಗೆಳತಿಯರು
ಜೊತೆಗೆ ಅಕ್ಷರ ಕಲಿಸಿ
ಪೊರೆದ ಶಿಕ್ಷಕರು
ಇನ್ನು ನೀವೆಲ್ಲ – ನೆರ-
ಳಂತೆ ಕಾದವರು
ದಾರಿ ತೋರಬೇಕು – ದಾರಿಗೆ
ಹರಸಿ ಹಾಡಬೇಕು
*****