ಸ್ವಪ್ನ ಮಂಟಪ – ೧

ಸ್ವಪ್ನ ಮಂಟಪ – ೧

ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು; ಮಿಂಚು ಗುಡುಗುಗಳ ಕಣ್ಣು ಮುಚ್ಚಾಲೆಯಲ್ಲಿ ಮೈಮರೆಯದೆ ಭಯ ಬಿತ್ತುವ ಕತ್ತಲು.

ಇಂಥ ಕತ್ತಲಲ್ಲಿ ಬಸ್ಸು ಬರುತ್ತಿತ್ತು. ಒಳಗೆಲ್ಲ ಕಿಕ್ಕಿರಿದ ಜನ. ಟಾಪಿನ ಮೇಲೂ ಕೂತ ಜನ; ಬಸ್ಸು ಒಮ್ಮೆ ಅತ್ತಿತ್ತ ತೂಗಾಡಿದರೆ ಓ ಎಂದು ಕೂಗುವ ಜನ. ಹೊಸದಾಗಿ ಈ ಬಸ್ಸು ಹತ್ತಿದವರಿಗೆ ನಿಜಕ್ಕೂ ವಿಚಿತ್ರ ಅನುಭವ; ನಿಂತವರಿಗಂತೂ ಅದೊಂದು ಯಾತನಾ ಶಿಬಿರ, ಬರಡು ಸಂದ್ರದ ಕಡೆಗೆ ಹೋಗುವ ಕೊನೇ ಬಸ್ಸಾದ್ದರಿಂದ ಇಷ್ಟೊಂದು ಭರ್ತಿಯಾಗಿದೆ ಎಂಬುದು ಒಂದು ಕಾರಣವಾದರೆ, ತಾಲ್ಲೂಕು ಕೇಂದ್ರದ ಸಂತೆ ಮುಗಿಸಿಕೊಂಡು ಹಳ್ಳಿಗಳಿಗೆ ಹೊರಟವರ ದಂಡು ಜಾಸ್ತಿ ಇದ್ದದ್ದು ಇನ್ನೊಂದು ಕಾರಣ.

ಅಂತೂ ತುಂಬು ತೇರಿನಂತೆ ನಿಧಾನವಾಗಿ ಬರುತ್ತ ಎರಡು ಮೈಲಿಗೊಮ್ಮೆ ನಿಲ್ಲಿಸಿ, ಅಕ್ಕಪಕ್ಕದ ಹಳ್ಳಿಯವರನ್ನು ಇಳಿಸಿ, ಮುಂದೆ ಸಾಗುತ್ತಿದ್ದ ಬಸ್ಸಿನಲ್ಲಿದ್ದವರಿಗೆ ಒಂದೇ ಆತಂಕ. ರಸ್ತೆ ಪಕ್ಕದಲ್ಲಿ ಇಳಿದು ತಂತಮ್ಮ ಹಳ್ಳಿ ಸೇರುವ ಮುಂಚೆ ಮಳೆ ಬಂದರೆ ಎಲ್ಲಿ ನಿಲ್ಲುವುದು? ಆದರೂ ಕೆಲವರು ಹೇಳುತ್ತಿದ್ದರು; ಅಂತಾದ್ರಾಗೆ ಇವತ್ತು ಮಳೆ ಬಂದ್ರೆ ಎಲ್ಲಾ ನೆಂದ್ಕಂಡೇ ಊರ್ ಸೇರಾನ? ಎಂದು ಅದೇನೋ ಸರಿ. ಆದರೆ ಒಬ್ಬೊಬ್ಬರೇ ಹೋಗಬೇಕಾಗಿ ಬಂದರೆ ಭಯವಾಗುತ್ತಲ್ಲ ಅಂತ ಕೆಲವರು ಒಳಗೊಳಗೇ ಆತಂಕಿಸುತ್ತಿದ್ದರು. ಆದರೆ ಹೊರಗೆ ಮಾತ್ರ ವೀರರಂತೆ ಹೇಳುತ್ತಿದ್ದರು; ‘ಹೌದೌದು. ಸದ್ಯ ಮಳೆ ಬಂದ್ರೆ ಸಾಕಾಗೈತೆ. ನಾವ್ ನೆನೀತೀವಿ ಅಂಬ್ತ ಭಯಪಟ್ಕಂಡ್ರೆ ಆಗ್ತೈತಾ? ಮದ್ಲು ಮಳೆ-ಬೆಳೆ, ಆಮ್ಯಾಲ್ ಉಳ್ದಿದ್ದು’.

ಹೀಗೆ ಮಾತು ಕತೆ ನಡೆಯುತ್ತಿದ್ದರೂ ಇನ್ನೂ ಮಳೆ ಬಂದಿರಲಿಲ್ಲ. ಬರುವ ಸೂಚನೆಯಂತೂ ದಟ್ಟವಾಗುತ್ತಿತ್ತು. ಆಗ ಯಾರೋ ಒಬ್ಬರು ಅಂದರು: “ಯಾರೋ ಪುಣ್ಯಾತ್ಮರು ಈ ಕಡೀಕ್ ಬಂದಿರ್‍ಬೇಕು ಅಂಬ್ತ ಕಾಣುಸ್ತೈತೆ ಇಲ್ಲಿದ್ರೆ ಮೋಡ ಮುಚ್ಕಮಾದು ಅಂದ್ರೇನು? ಮಳೆ ಬರಾದು ಅಂದ್ರೇನು?’

ಈ ಮಾತು ಕೇಳಿಸಿಕೊಂಡ ಶಿವಕುಮಾರ್ ಬಸ್ಸಲ್ಲಿ ಒಮ್ಮೆ ದೃಷ್ಟಿ ಹಾಯಿಸಿದ. ಮೇಲ್ನೋಟಕ್ಕೆ ಎಲ್ಲರೂ ಅದೇ ಹಳೆಯ ಮಂದಿ, ತಲೆಗೆ ಟವಲ್ಲು; ಕೆನ್ನೆ ಮೇಲೆ ಗರಿಕೆ ಹುಲ್ಲು; ಅಡಿಕೆಲೆ ಜಗಿಯುತ್ತಿರುವ ಹಲ್ಲು, ಎಲ್ಲಾ ಅದೇ ಹಳೆಯ ನಮೂನೆಗಳು.

ತನ್ನೂರಾದ ಬರಡುಸಂದ್ರಕ್ಕೆ ಹೋಗುವಾಗ, ಬರುವಾಗ ಬಹುಪಾಲು ಇದೇ ನಮೂನೆಯ ಜನರಿಂದ ತುಂಬಿದ ಬಸ್ಸುಗಳೇ. ಊರಲ್ಲಾದರೂ ಅಷ್ಟೆ ರೈತರೂ ಕೂಲಿಕಾರರೂ ತುಂಬಿದ ಹಳ್ಳಿ, ಬೆವರೇ ಬದುಕಾದ ಬರಡುಸಂದ್ರ.

ಶಿವಕುಮಾರ್ ಮತ್ತೊಮ್ಮೆ ಬಸ್ಸಿನ ಒಳಗೆಲ್ಲ ದಿಟ್ಟಿಸಿ ನೋಡಿದ. ಎರಡು ಮೂರು ಸೀಟುಗಳ ಆಕಡೆಗೆ ಹೊಸ ರೂಪೊಂದು ಕಾಣಿಸಿತು. ಇವನ ಕಣ್ಣಿಗೆ ಕಾಣಿಸುತ್ತ ಇದ್ದುದು ಅರ್ಧಂಬರ್ಧ ಆಕಾರ. ಹಳ್ಳಿ ಹೆಂಗಸರ ಪಕ್ಕದಲ್ಲೇ ಕೂತ ಹೊಸ ವ್ಯಕ್ತಿಯ ಸಾಕಾರ. ಆಧುನಿಕ ಕೇಶವಿನ್ಯಾಸ; ಕಿವಿಗೆ ರಿಂಗು; ಕೆನ್ನೆಯ ಮೇಲೆ ಹೊಳೆಯುವ ರಂಗು. ಯಾರೀ ರೂಪಸಿ ಎನ್ನಿಸಿತು. ಮರುಕ್ಷಣದಲ್ಲೇ ಪೂರ್ಣ ಮುಖ ನೋಡದೆ ರೂಪಸಿ ಎಂದು ಯಾಕೆ ತೀರ್ಮಾನಕ್ಕೆ ಬರಲಿ ಎಂದುಕೊಂಡ. ಆ ಯುವತಿ ಬೇರೆಲ್ಲೂ ನೋಡದೆ ಬಸ್ಸಿನ ಹೊರಗೆ ಹಬ್ಬಿದ್ದ ಕತ್ತಲನ್ನು ಕಣ್ಣಲ್ಲಿ ನುಂಗುತ್ತಿದ್ದಂತೆ ಕಾಣಿಸಿತು.

ಈಕೆ ಯಾರಿರಬಹುದು? ಎಲ್ಲಿಗೆ ಹೊರಟಿರಬಹುದು? ಎಂದು ಯೋಚಿಸುತ್ತ ಕೂತ ಶಿವಕುಮಾರ್ ಕತ್ತಲಲ್ಲಿ ಬೆಳ್ಳಿ ಬೆಳಕು ಕಂಡಂತೆ ಕ್ಷಣಕಾಲ ಪುಳಕಗೊಂಡ. ಆನಂತರ ಯಾರಾದರೆ ತನಗೇನು ಎಂದು ನಿರ್ಲಿಪ್ತ ನಟನೆಗೆ ಪ್ರಯತ್ನಿಸಿದ. ಮೆದುಳು ಕೇಳಿದರೂ ಮನಸ್ಸು ಕೇಳಲಿಲ್ಲ. ಆದ್ದರಿಂದ ಕಣ್ಣು ಅತ್ತಿತ್ತ ಹಾಯಲಿಲ್ಲ. ಒಂದೇ ಕಡೆ ನೆಟ್ಟ ನೋಟದಲ್ಲಿ ನಿಬ್ಬೆರಗಾಗಿದ್ದ ಆತನಿಗೆ ಬರಬರುತ್ತ ಬಸ್ಸು ಖಾಲಿಯಾದದ್ದೇ ಗೊತ್ತಾಗಲಿಲ್ಲ. ಅನೇಕ ಕಡೆ ಜನರನ್ನು ಇಳಿಸಿ ಸ್ವಲ್ಪ ಭಾರ ಕಳೆದುಕೊಂಡಿದ್ದ ಬಸ್ಸು ವೇಗವಾಗ ತೊಡಗಿತ್ತು. ಕಂಡಕ್ಟರ್ ಬೇರೆ ಹೇಳುತ್ತಿದ್ದ: ‘ಇನ್ನು ಉಳಿರೋದು ಎಂಟೇ ಕಿಲೋಮೀಟರು, ಜಲ್ದ್‌ನಡ್ಯಣ್ಣ’ ಅದಕ್ಕೆ ಡ್ರೈವರ್ ಹೇಳಿದ: ‘ಜಲ್ದ್ ಹೋಗಾನ ಅಂತ ಅಡ್ಡಾದಿಡ್ಡಿ ಹೊಡ್ಯಾಕಾಗ್ತೈತಾ? ಮದ್ಲೇ ಇದು ಡಕೋಟ ಬಸ್ಸು’ ಆದರೆ ಕಂಡಕ್ಟರ್‌ಗೆ ಈ ಬಸ್ಸಿನ ಬಗ್ಗೆ ಎಲ್ಲಿಲ್ಲದ ಗೌರವಾದರ ‘ಈ ಡಕೋಟ ಬಸ್ಸೇ ನಮ್ಗೆ ಅನ್ನ ಕೊಡ್ತಿರಾದು. ನೀನಾದ್ರೆ ನೆನ್ನೆ ಮನ್ನೆ ಬಂದಿದ್ದೀಯ. ನನ್ನ ಸರ್ವೀಸೆಲ್ಲ ಈ ಬಸ್ಸಾಗೇ ಕಟ್ಟಿದ್ದೀನಿ’ ಎಂದು ಹೆಮ್ಮೆಯಿಂದ ಹೇಳಿದ. ಆಗ ಯಾರೋ ಒಬ್ಬರು ಚಟಾಕಿ ಹಾರಿಸಿದರು: ‘ನಿನ್ ಮಲ್ಗೋ ಮನೇನೂ ಈ ಬಸ್ಸೇ ಇರ್‍ಬೇಕು’ ಕಂಡಕ್ಟರ್ ಜಗ್ಗಲಿಲ್ಲ. ‘ಇರ್‍ಬೇಕು ಅನ್‌ದೇನ್ಬಂತು. ಇದೇ ಮದ್ಲು ನನ್ನ ಮಲ್ಗಾಮನೆ. ಬರಡು ಸಂದ್ರದಾಗ ಬಸ್ ನಿಲ್ಸಿ ಇದ್ರಾಗೇ ಮಲಿಕೆಂತಿದ್ದೆ. ಇನ್ನೊಂದು ವಿಷ್ಯ ಗೊತ್ತಾ? ನಾನು ನನ್ನ ಹೆಂಡ್ತಿ ಆದೋಳ ಈ ಬಸ್ಸಾಗೇ ಹುಡಿಕ್ಕಂಡಿದ್ದು.’ ಎಂದು ಹೇಳಿದಾಗ ಚಟಾಕಿ ಹಾರಿಸಿದ್ದ ವ್ಯಕ್ತಿ ಮತ್ತೆ ಹೇಳಿದ: ‘ಹಂಗಾದ್ರೆ ಮದ್ವೆ- ಪ್ರಸ್ತ ಎಲ್ಲಾ ಈ ಬಸ್ಸಾಗೇ ಅನ್ನು.’

ಇಡೀ ಬಸ್ಸು ಫಕ್ಕನೆ ನಕ್ಕಿತು – ಆಕೆಯೊಬ್ಬಳನ್ನು ಬಿಟ್ಟು ನಗುವಿನ ಅಲೆಗೆ ಅಡ್ಡವಾಗುವಂತೆ ಅವಳು ತಿರುಗಿ ನೋಡಿದಳು. ಶಿವಕುಮಾರನನ್ನು ಬಿಟ್ಟು ಬೇರೆ ಯಾರೂ ಆಕೆಯ ಬಿರುನೋಟವನ್ನು ಗಮನಿಸಲಿಲ್ಲ. ಶಿವಕುಮಾರ್ ಆಕೆಯ ಮುಖದಲ್ಲಿ ಸಕಲ ಸೌಂದರ್ಯವನ್ನೂ ಕಂಡ. ಮತ್ತಷ್ಟೂ ನೋಡಬೇಕೆನ್ನುವಷ್ಟರಲ್ಲಿ ಆಕೆ ಮುಖವನ್ನು ಮೊದಲಿನಂತೆ ತಿರುಗಿಸಿ ಕೊಂಡು ಕೂತು ಕತ್ತಲ ಕಡೆ ನೋಡತೊಡಗಿದಳು.

ನಗೆ ಚೆಲ್ಲಾಟಗಳು ನಡೆಯುತ್ತಿದ್ದಂತೆ ನಾಗಾಲೋಟದಲ್ಲಿ ಓಡುತ್ತಿದ್ದ ಬಸ್ಸು ಇದ್ದಕ್ಕಿದ್ದಂತೆ ವಿಕಾರ ಸದ್ದಿನೊಂದಿಗೆ ಅತ್ತಿತ್ತ ಅಲ್ಲಾಡಿ, ಅಲ್ಲೋಲ ಕಲ್ಲೋಲ ಮಾಡಿ ನಿಂತುಬಿಟ್ಟಿತು.

ನಗೆ ನಿಂತು ದಂಗಾದ ವಾತಾವರಣ. ಡ್ರೈವರ್, ಕಂಡಕ್ಟರ್ ಇಳಿದರು. ಜೊತೆಗೆ ಕೆಲ ಪ್ರಯಾಣಿಕರೂ ಇಳಿದು ಏನಾಯಿತೊ ಏನೊ ಎಂದು ಆತಂಕ ಪಟ್ಟರು, ಡ್ರೈವರ್ ಟೈರುಗಳನ್ನು ನೋಡಿದ ಎಲ್ಲವೂ ಸರಿಯಾಗಿದೆ. ಬಸ್ಸಿನ ಕೆಳಗೆ ತೂರಿದ. ಜೊತೆಗೆ ಕಂಡಕ್ಟರೂ ಸಹಕರಿಸಿದ.

ಈ ಮಧ್ಯೆ ಶಿವಕುಮಾರ್ ಆಕೆಯನ್ನೇ ದಿಟ್ಟಿಸುತ್ತಿದ್ದ. ಆಕೆಯಲ್ಲಿ ಚಡಪಡಿಕೆ ಕಾಣಿಸುತ್ತಿತ್ತು. ಆಕೆ ಪಕ್ಕದಲ್ಲಿ ಇದ್ದವರನ್ನು ಕೇಳುತ್ತಿದ್ದಳು; ‘ಬರಡುಸಂದ್ರ ಇಲ್ಲಿಗೆ ಇನ್ನೂ ಎಷ್ಟು ದೂರ ಇದೆ?’

ಬೇರೆಯವರು ಉತ್ತರ ಕೊಡುವುದಕ್ಕೆ ಮುಂಚೆಯೇ ಶಿವಕುಮಾರ್ ‘ಐದು ಕಿಲೋಮೀಟರ್ ಇದೆ’ ಎಂದುಬಿಟ್ಟ. ಆಕೆ ತಿರುಗಿನೋಡಿದಳು. ಪ್ಯಾಂಟು, ಷರಟು ಹಾಕಿ, ಕ್ರಾಪನ್ನು ತಿದ್ದಿತೀಡಿ ಠಾಕು ಠೀಕಾಗಿ ಕಾಣಿಸುತ್ತಿದ್ದ ಸುಂದರ ಯುವಕ!

ಆಕೆ ಏನೂ ಮಾತಾಡಲಿಲ್ಲ. ಸುಮ್ಮನಾದಳು. ಅಷ್ಟರಲ್ಲಿ ಡ್ರೈವರ್ – ಕಂಡಕ್ಟರ್ ಬಂದು ಆಘಾತಕರ ಸುದ್ದಿ ಕೊಟ್ಟರು: ‘ಸದ್ಯಕ್ಕೆ ಬಸ್ ರಿಪೇರಿ ಆಗೋಲ್ಲ. ಸಣ್ಣಪುಟ್ಟದ್ದಾದ್ರೇ ಮಾಡ್ಬಹುದಿತ್ತು. ಏನಿದ್ರೂ ನಾಳೇನೇ ಬಸ್ಸು ಇಲ್ಲಿಂದ ಹೊರಡೋದು?’

ಆಕೆಗೆ ಎಲ್ಲಿಲ್ಲದ ಆತಂಕವಾಯಿತು. ‘ಹಾಗಾದ್ರೆ ನಮ್ಮ ಗತಿ ಏನು?’

ಕಂಡಕ್ಟರ್ ಸಲೀಸಾಗಿ ಹೇಳಿದ: ‘ಈ ರಸ್ತೇಲಿ ಇದೆಲ್ಲ ಇದ್ದದ್ದೇ ಅಮ್ಮ ನೀವು ಹೊಸಬ್ರು ಅಂಬ್ತ ಕಾಣುಸ್ತೈತೆ. ಎಲ್ಲಿಗೆ ಹೊರಟಿದ್ದೀರಾ?’

‘ಬರಡುಸಂದ್ರ ಅಂತ ಊರಿದ್ಯಂತಲ್ಲ ಅಲ್ಲಿಗೆ’- ಆಕೆ ಹೇಳಿದಳು.

‘ಯಾರಾದ್ರು ಜೊತೆಗೆ ಇರ್‍ತಾರೆ. ನಡ್ಕಂಡೋಗಿ’ ಎಂದು ಕಂಡಕ್ಟರ್ ಸಲಹೆ ಕೊಟ್ಟಿದ್ದೇ ತಡ ಶಿವಕುಮಾರ್ ಆಯಾಚಿತನಾಗಿ ‘ನಾನಿದ್ದೀನಿ’ ಎಂದ.

ಆಕೆ ಸುಮ್ಮನೆ ನೋಡಿದಳು. ಎಲ್ಲರೂ ಬಸ್ಸಿನಿಂದ ಇಳಿಯ ತೊಡಗಿದ್ದರಿಂದ ತಾನೂ ಇಳಿಯತೊಡಗಿದಳು. ಕೈಯ್ಯಲ್ಲಿ ಒಂದು ಸೂಟುಕೇಸ್ ಹಿಡಿದು ಇಳಿಯುತ್ತಿದ್ದ ಆಕೆಯನ್ನು ಶಿವಕುಮಾರ್ ಹಿಂಬಾಲಿಸಿದ.

ಬಸ್ಸಿನಿಂದ ಕೆಳಗೆ ಇಳಿದವರು ಯಾವ್ಯಾವ ಊರಿಗೆ ಹೋಗಬೇಕೆಂದು ಪರಸ್ಪರ ತಿಳಿದುಕೊಂಡರು. ಅಕ್ಕಪಕ್ಕದ ಹಳ್ಳಿಗಳಿಗೆ ತಲುಪಬೇಕಾದ ಹೆಂಗಸರು ಮಕ್ಕಳ ಬಗ್ಗೆ ಕಾಳಜಿ ವಹಿಸಿದರು. ತಂತಮ್ಮ ಊರ ಕಡೆಗೆ ಬರುತ್ತಿದ್ದವರನ್ನು ತಾವೇ ಮನೆ ತಲುಪಿಸುವ ಹೊಣೆ ಹೊತ್ತರು. ಎಲ್ಲರಲ್ಲೂ ಪರಸ್ಪರ ಮಾತುಕತೆ ನಡೆಯುತ್ತಿದ್ದಾಗ ಈಕೆ ಮೌನವಾಗಿ ನಿಂತಿದ್ದಳು. ಆಗ ಯಾರೋ ಕೇಳಿದರು: ‘ನೀವು ಈಕಡೀಕೆ ಹೊಸಬ್ರಿದ್ದಂಗ್ ಕಾಣುಸ್ತೈತೆ: ನೀವೆಲ್ಲಿಗೋಗ್ ಬೇಕು?’ ಕೂಡಲೆ ಶಿವಕುಮಾರ್ ಹೇಳಿದ: ‘ಪರವಾಗಿಲ್ಲ ನಾನ್ ಇದ್ದೀನಿ?’

‘ಅಂದ್ರೆ ನೀವು ಇವ್ರ ಜತ್ಯಾಗೇ ಬಂದಿದ್ದೀರೇನು?’

‘ಇಲ್ಲ, ಜೊತೆಯಾಗ್ ಹೋಗ್ತಿನಿ’

ಆಗ ಆಕೆ ತಾನೇ ಹೇಳಿದಳು: ‘ನಾನು ಬರಡುಸಂದ್ರ ಅನ್ನೊ ಊರಿಗೆ ಹೋಗೋಕು. ಯಾರಾದ್ರೂ ಸಹಾಯ ಮಾಡಿದ್ರೆ…?’

‘ನಾನಿದ್ದೀನಲ್ಲ. ನಾನೂ ಅದೇ ಊರವನು.’

‘ನೀವು ಯಾರ್ ಮಗ?’- ಯಾರೋ ಕೇಳಿದರು.

‘ಬರಡುಸಂದ್ರದ ಸಿದ್ದಣ್ಣ ಇದಾರಲ್ಲ ಅವ್ರ ಮಗ.’

’ಓ ನಮ್ ಸಿದ್ದಣ್ಣನ ಮಗಾನ? ಏನಪ್ಪ ಹಿಂಗ್ ಬೆಳದ್ ಬಿಟ್ಟಿದ್ದೀಯ? ಎಂದು ಆತ ಆಶ್ಚರ್ಯ ಸೂಚಿಸಿದ್ದಲ್ಲದೆ ಸಿದ್ದಣ್ಣನ ಮಗ ಅಂದ್ಮೇಲೆ ನೀವು ಧೈರ್ಯವಾಗಿ ಜತ್ಯಾಗ್ ಹೋಗ್‌ಬವ್ದಮ್ಮ’ ಎಂದು ಶಿಫಾರಸ್ ಮಾಡಿದ. ಶಿವಕುಮಾರ್ ನಿಟ್ಟುಸಿರುಬಿಟ್ಟ. ತನ್ನ ತಂದೆ ಮೊದಲಿಂದಲೂ ನಿಯತ್ತಿಗೆ ಹೆಸರಾದವರು, ಸುತ್ತೇಳು ಹಳ್ಳಿಯ ಆತ್ಮೀಯರು ಅವರನ್ನು ‘ನೀತಿ ನಿಯತ್ತು ಅಂದ್ರೆ ಸಿದ್ದಣ್ಣ’ ಎಂದು ಪ್ರಶಂಸೆ ಮಾಡುತ್ತಿದ್ದರು. ಅವರ ಹೆಸರಿಂದ ತನಗೂ ಪ್ರಮಾಣ ಪತ್ರ ಸಿಕ್ಕಿದಾಗ ಏನೋ ಒಂದು ರೀತಿಯ ಸಮಾಧಾನಗೊಂಡ ಶಿವಕುಮಾರ್ ‘ಮಳೆ ಬರೋ ಹಾಗೆ ಕಾಣುತ್ತೆ. ಹೊರಡೋಣ’ ಎಂದ. ‘ಅಲಿಖಿತ ಪ್ರಮಾಣ ಪತ್ರ ಕೊಟ್ಟ’ ವ್ಯಕ್ತಿ ‘ನಾವೂ ಎರಡು ಮೂರು ಕಿಲೋ ಮೀಟರು ನಿಮ್ ಜತೇನೆ ಬರ್‍ಬೇಕು. ನಮ್ಮೂರ್ ಕ್ರಾಸ್‌ವರ್‍ಗೂ ಬರ್‍ತೀವಿ. ಆಮೇಲೆ ನೀವೇ ಈಯಮ್ಮಾನ ಸರ್‍ಯಾಗ್ ಕರ್‍ಕೊಂಡೋಗ್ಬೇಕು’ ಎಂದ.

‘ಖಂಡಿತ ಕರ್‍ಕೊಂಡೋಗ್ತಿನಿ, ಬನ್ನಿ’ ಎಂದು ಶಿವಕುಮಾರ್ ಹೆಜ್ಜೆ ಹಾಕತೊಡಗಿದ.

ಎಲ್ಲರೂ ತಂತಮ್ಮ ಊರದಾರಿ ಹಿಡಿಯುತ್ತಿರುವುದನ್ನು ಕಂಡ ಕಂಡಕ್ಟರ್ ‘ಮೇಡಮ್ಮೋರೆ, ಹೊಸ್ದಾಗ್ ಬಂದಿದ್ದೀರಿ, ಬಯ್ಯಾಬ್ಯಾಡ್ರಿ, ನನ್ ಹೆಸ್ರು ಕೆಂಚಪ್ಪ ಅಂಬ್ತ, ಕಂಡಕ್ಟರ್ ಕೆಂಚಪ್ಪ ಅಂದ್ರೆ ಈ ರಸ್ತೆನಾಗೆ ಯಾರ್ ಕೇಳಿದ್ರೂ ಒಳ್ಳೇ ಮನುಷ್ಯ ಅಂಬ್ತಾರೆ. ನೀವೂ ಅಷ್ಟೇ ಮರೀಬ್ಯಾಡ್ರಿ’ ಎಂದು ಕೂಗಿ ಹೇಳಿದ.

ಆಕೆ ನಗುನಗುತ್ತ ತಿರುಗಿ ನೋಡಿದಳು. ಅನಂತರ ಹತ್ತಿರ ಬಂದಳು. ತನ್ನ ವ್ಯಾನಿಟಿ ಬ್ಯಾಗ್‌ನಿಂದ ಒಂದು ಬಿಸ್ಕಟ್ ಪ್ಯಾಕೆಟ್ ತೆಗೆದುಕೊಟ್ಟಳು. ಕೆಂಚಪ್ಪನಿಗೆ ಖುಷಿಯಾಯಿತು. ‘ನಿಮ್ಮಂತೋರ್ ಬೆಳ್ಸಿದ್ ಜೀವ ಕಣವ್ವ ಇದು’ ಎಂದ. ಆಗ ಆತನ ಕಣ್ಣಲ್ಲಿ ಹನಿ ತುಂಬುತ್ತಿರುವುದನ್ನು ಗಮನಿಸಿದ ಈಕೆ ‘ಬರ್‍ತೀನಿ ಕೆಂಚಪ್ಪ’ ಎಂದಳು. ‘ಬರಡುಸಂದ್ರಕ್ಕೆ ಯಾರ್ ಮನೇಗ್ ಹೊಲ್ಟಿವ್ರಿ’ ಎಂದು ಕೆಂಚಪ್ಪ ಕೇಳಿದಾಗ ಶಿವಕುಮಾರ್ ಗೆ ಕಿವಿ ನೆಟ್ಟಗಾಯಿತು.

‘ನಾನು ಹೈಸ್ಕೂಲ್ ಮೇಡಮ್ಮಾಗಿ ಹೊಸ್ದಾಗ್ ಬಂದಿದ್ದೀನಿ ಕೆಂಚಪ್ಪ’ ಎಂದಳು ಆಕೆ.

‘ನಾನೂ ಯಾವಾಗಾರ ಸಿಕ್ತಿನಿ ಮೇಡಮ್ಮಾರೆ’ ಎಂದು ಹೇಳಿದ ಕೆಂಚಪ್ಪ ಬಿಸ್ಕಟ್ ಪ್ಯಾಕೆಟ್ಟನ್ನು ಅರ್ಧಮಾಡಿ ಅದನ್ನು ಆಕೆಗೆ ಕೊಡುತ್ತ ‘ನೀವೂ ದಾರಿನಾಗೆ ತಿಂದ್ಕಂಡೋಗ್ರಿ’ ಎಂದ. ಆಕೆ ‘ಬೇಡ ನಂಗೇನೂ ಹಸಿವಿಲ್ಲ. ನೀವು ನಡುದಾರೀಲಿ ರಾತ್ರಿ ಕಳೀಬೇಕಲ್ಲ. ಇಟ್ಕೊಳ್ಳಿ’ ಎಂದಳು. ಅಷ್ಟರಲ್ಲಿ ಗುಂಪಿನಲ್ಲಿದ್ದ ಒಬ್ಬ ‘ನಾವು ಇವನ್ನ ಉಪಾಸ ಬಿಡಾಕಿಲ್ಲ ಕಣವ್ವ. ಪಕ್ಕದಳ್ಳಿನಾಗಿಂದ ಊಟ ತಂದ್ಕೋಡ್ತೀವಿ’ ಎಂದು ಹೇಳಿದಾಗ ಆಕೆಯ ಮುಖ-ಮನಸ್ಸು ಅರಳಿ ಹೂವಾಯಿತು. ಇದು ಕತ್ತಲಲ್ಲ. ಇಲ್ಲಿರೋರೆಲ್ಲ ಬೆಳಕಿನ್ ಮನುಷ್ಯರು’ ಎಂದು ತನಗೇ ಗೊತ್ತಿಲ್ಲದಂತೆ ಉದ್ಗರಿಸಿದಳು.

ಆಗ ಕಂಡಕ್ಟರ್ ಕೆಂಚಪ್ಪ ಹೇಳಿದ: ‘ಬರಡುಸಂದ್ರದ ಸಿದ್ದಣ್ಣನ ಮಗನೂ ಹಂಗೇ ಕಣ್ರವ್ವ.’ ಆಗ ಆಕೆ ವಾಸ್ತವಕ್ಕೆ ಬಂದಳು. ‘ಬರ್‍ತೀನಿ ಕೆಂಚಪ್ಪ’ ಎಂದು ಹೊರಟಳು.

ಒಂದೊಂದು ಗುಂಪು, ಒಂದೊಂದು ಕಡೆ ಹೊರಟಿತು. ಶಿವಕುಮಾರ್‌ ಮತ್ತು ಈಕೆ ಹೋಗುತ್ತಿದ್ದ ಮುಖ್ಯದಾರಿಯಲ್ಲಿ ಆರೇಳು ಜನರಿದ್ದರು. ಅದೂ ಇದೂ ಮಾತನಾಡುತ್ತ ಹೊರಟರು.

ದಾರಿಯಲ್ಲಿ ಒಂದು ವಿಷಯವೇ? ಬಸ್ಸು ಕೆಡುವುದರಿಂದ ಹಿಡಿದು ದೇಶ ಕೆಟ್ಟಿರುವುದರವರೆಗೆ ಮಾತುಗಳು ಹಾರಿ ಬಂದವು; ‘ದೇಶಾನೇ ಕೆಟ್ಟು ಹೋದ್ಮೇಲೆ ಬಸ್ಸು ಕೆಡೋದೇನ್ ಮಹಾ’ ಎಂದು ವೇದಾಂತದಂಥ ಮಾತು ಸಾಂತ್ವನಕ್ಕೆ ಸಾಕಾಯಿತು. ಇನ್ನು ದೇವರು-ದೆವ್ವಗಳ ಮಾತು. ಒಬ್ಬೊಬ್ಬರೂ ಒಂದೊಂದು ಹೇಳುವವರು. ಇದೇ ರಸ್ತೆಯಲ್ಲಿ ದೆವ್ವ ಕಾಣಿಸಿಕೊಂಡದ್ದು, ತಾನು ಓಡಿಸಿದ್ದು, ಮತ್ತೆ ಅದೇ ಹೆದರಿದ್ದು – ಇತ್ಯಾದಿ ಪುಂಖಾನುಪುಂಖವಾಗಿ ಬರುತ್ತಿದ್ದ ಕೆಲವರ ಮಾತನ್ನು ಈಕೆ ಕೇಳುತ್ತ ಸಾಗಿದ್ದಳು. ವಿದ್ಯಾವಂತೆಯಾದ ಹೊಸ ಹೆಂಗಸು ಜೊತೆಯಲ್ಲಿ ಇದ್ದುದರಿಂದ ಮಾತಿಗೆ ಮಿಂಚು ಬಂದಿತ್ತು. ಜೊತೆಗೆ ಮೋಡದ ಮಿಂಚೂ ಕಾಣಿಸುತ್ತಿತ್ತು.

ಒಬ್ಬೊಬ್ಬರೂ ತಂತಮ್ಮ ಸಾಹಸವನ್ನು ಹೇಳುವವರೇ. ಒಬ್ಬನಂತೂ ತಾನೂ ಇದೇ ಜಾಗದಲ್ಲಿ ದೆವ್ವದೊಂದಿಗೆ ಸೆಣಸಿದ ಸಾಹಸಗಾಥವನ್ನು ಬಣ್ಣಿಸಿದ. ‘ಒಂದಿನ ಹಿಂಗೇ ಬಸ್ ಕೆಟ್ಟೋಯ್ತು. ಇವತ್ತಾದ್ರೆ ಸಂತೆದಿನ; ಜನ ಜಾಸ್ತಿ. ಅವತ್ತು ನಡ್ಕಂಡ್ ಈ ಜಾಗಕ್ ಬರುವಾಗ ನಾನೊಬ್ನೆ ಆಗ್ಬಿಟ್ಟಿದ್ದೆ. ಅದೂ ಈ ಜಾಗ ಅಂದ್ರೆ ಕೇಳ್ಬೇಕಾ? ಸುತ್ತೇಳು ಹಳ್ಳಿನಾರೂ ಗಡಗಡ ನಡುಗ್ತಾರೆ. ನಾನು ಧೈರ್ಯ ಮಾಡಿ ಗಟ್ಟಿಗೆ ಹಾಡ್ ಹೇಳ್ಕೊಂಡ್ ಬರ್‍ತಾ ಇದ್ರೆ ಆ ನನ್ ಮಗುಂದು ಮೋಹಿನಿ ಥರಾ ತಾನೂ ಹಾಡ್ ಹೇಳಾಕ್ ಶುರು ಮಾಡ್ಬೇಕಾ? ನಾನ್ ಹೆದ್ರತೀನಾ? ಹಾಡ್ನಾಗೇ ಅಳ್ಳಾಡಿಸ್ಬಿಟ್ಟೆ. ಆದ್ರೆ ಅದು ಕಾಣುಸ್ತಾನೇ ಇಲ್ಲ. ಆಮೇಲೆ ಒಂದು ಸವಾಲ್ ಹಾಕ್ದೆ ನೋಡಿ. ನಿಂಗೇನಾರ ಧೈರ್ಯ ಇದ್ರೆ ಇದ್ರಿಗ್ ಬಂದ್ ನಿಂತ್ಕ ಅಂದಿದ್ದೇ ತಡಾ ಬಿಳೀಸೀರೇಲಿ ಎಷ್ಟು ಚೆನ್ನಾಗ್ ನಿಂತ್ಕಂಡ್ತು ಗೊತ್ತಾ? ಅದು ಕಾಣಿಸ್ಕಂಡಿದ್ದಿರ್‍ಲಿ ಯಾರೂ ನನ್ನೆದ್ರು ಧೈರ್ಯ ಮಾಡಿಲ್ಲ, ನಿನ್ನಂಥ ಧೈರ್ಯಶಾಲಿ ನಾನ್ ನೋಡ್ಲಿಲ್ಲ. ನೀನೇ ನನ್ನ ಮದ್ವೇ ಆಗ್ಬೇಕು ಅಂದ್ ಬಿಡಾದ? ಎಲ್ಲಾನ ಉಂಟಾ ನಂಗೀಗಾಗ್ಲೆ ಮದ್ವೆ ಆಗೈತೆ ಅಂದ್ರೆ ನಂಗೂ ಆಗೈತೆ, ಇಬ್ಬರೂ ಮದ್ವೆ ಆಗಿರೋರೆ, ಮತ್ತೆ ಮದ್ವೆ ಆದ್ರೆ ಆಯ್ತು ಅಂಬ್ತ ಕೈ ಹಿಡ್ಕಂಡ್ ಬಿಡಾದ. ನಾನೆಷ್ಟೋ ಹೇಳ್ದೆ. ಆ ದೆವ್ವ ಕೇಳಲೇ ಇಲ್ಲ. ಆಮೇಲ್ ನೋಡಿ ಕಾಲ್ನಾಗಿರೋ ಮೆಟ್ಟು ಕೈಯಿಗೆ ಬಂತು. ಆ ದೆವ್ವ ಫೇರಿ ಕಿತ್ಕಂಡೋತು.’

ಆಗ ಇನ್ನೊಬ್ಬ ಶುರುಮಾಡಿದ: ‘ನಿಂದೇನ್ ಮಹಾ. ನಂಗೊಂದ್ಸಾರಿ ಏನಾತು ಗೊತ್ತಾ?….’ ಎಂದು ಇನ್ನೂ ಮೊದಲ ವಾಕ್ಯ ಹೇಳಿದ ಕೂಡಲೆ ಶಿವಕುಮಾರ್ ‘ಬರೀ ದೆವ್ವದ ವಿಷ್ಯಾನೇ ಯಾಕಪ್ಪ ಹೇಳ್ತೀರಾ, ಸ್ವಲ್ಪ ದೇವರು ವಿಷ್ಯಾನೂ ಹೇಳ್ರಿ’ ಎಂದ. ಆಗ ಒಬ್ಬ ‘ದೇವರು-ದೆವ್ವ ಎರಡೂ ಒಂದೇ ಅಲ್ವ ಸಾಮೇರ. ನಂಬಿದ್ರೆ ಉಂಟು ನಂಬ್ದಿದ್ರೆ ಇಲ್ಲ’ ಎಂದುಬಿಟ್ಟ. ಕೂಡಲೇ ಆಕೆ ಆತನನ್ನು ಕೇಳಿದಳು:

‘ಹಾಗಾದ್ರೆ ದೇವರು-ದೆವ್ವ ಎರಡೂ ಒಂದೇನಾ?’

ನಂಬಿಕೆ ವಿಷಯದಾಗೆ ಎಲ್ಡೂ ಒಂದೇ ಅಂಬ್ತ ನಂಗನ್ಸುಸ್ತೈತೆ ಕಣ್ರವ್ವ. ನಾವು ಮೂಢಜನ, ತಪ್ಪಿದ್ರೆ ನೀವೇ ತಿದ್ಬೇಕು.’

‘ತಪ್ಪೇನೂ ಇಲ್ಲಪ್ಪ. ಅಷ್ಟೇ ಅಲ್ಲ ನೀವು ಮೂಢ ಜನ ಅಲ್ಲ, ವಿದ್ಯೆ ಕಲಿತೂ ಅವಿವೇಕಿಗಳಾಗಿರೋರು, ವಿದ್ಯೆ ಕಲಿದೆ ವಿವೇಕಿಗಳಾಗಿರೋರು ಎಷ್ಟೋ ಜನ ಇದಾರೆ. ನೀನು ನಿಜವಾಗೂ ವಿವೇಕಿ.’

‘ಹಂಗಾರೆ ನಾನು ವಿದ್ಯೆ ಕಲ್ಯಾದ್ ಬ್ಯಾಡ ಅಂಬ್ತೀರಾ? ಯಾಕೇಂದ್ರೆ ನಾನು ಈಗಾಗ್ಲೆ ವಿವೇಕಿ ಅಂದ್ರಲ್ಲ!’

‘ಹಾಗಲ್ಲಪ್ಪ. ನಮ್ಮಲ್ಲಿ ಎಷ್ಟೋ ವಿದ್ಯಾವಂತರು ಅವಿವೇಕಿಗಳಾಗಿರ್‍ತಾರೆ ಅನ್ನೋದ್ಕೆ ಇದನ್ನ ಹೇಳಿದೆ. ವಿದ್ಯೆ ಎಲ್ರಿಗೂ ಬೇಕೇಬೇಕು. ವಿದ್ಯೆ ಕಲ್ತು ವಿವೇಕ ಹೆಚ್ಚಿಸ್ಕೊಳ್ಬೇಕೇ ಹೊರ್‍ತು ಮತ್ತಷ್ಟು ಮೌಡ್ಯ ಬೆಳಿಸ್ಕೊಬಾರದು.’

ಮಿಂಚಿನ ಬೆಳಕಲ್ಲಿ ಹೊಳೆಯುವ ಆಕೆಯ ಮುಖವನ್ನು ಶಿವಕುಮಾರ್ ನೋಡಿದ. ಅವಳೆದುರು ತಾನೂ ವಾದ ಮಂದಿಸಬೇಕೆಂದುಕೊಂಡ. ‘ದೇವರು-ದೆವ್ವಗಳ ವಿಷಯದಲ್ಲಿ ಲಘುವಾಗಿ ಮಾತಾಡೋದು ನಂಗೇನೂ ಸರಿಯಲ್ಲ ಅನ್ಸುತ್ತೆ’ ಎಂದು ಪೀಠಿಕೆ ಹಾಕಿದ. ಆಕೆ ಮುಂದಕ್ಕೆ ಅವಕಾಶವನ್ನೇ ಕೊಡದೆ ‘ನಾನು ಹೇಳಿದ ಮಾತನ್ನ ತಪ್ಪಾಗಿ ಅರ್ಥ ಮಾಡ್ಕೊಳ್ಳೋದು ವಿದ್ಯಾವಂತರಿಗೆ ಸರಿಯಾದಲ್ಲ’ ಎಂದಳು. ಶಿವಕುಮಾರ್ ಹೆಚ್ಚಾಗಿ ಮುಂದೆ ಮಾತಾಡಲಿಲ್ಲ.

ಹಳ್ಳಿಯೊಂದರ ಗೇಟ್ ಬಂದಾಗ ಉಳಿದ ಜನರು ನಿಂತರು. ಒಬ್ಬ ಹೇಳಿದ: ‘ನಾವು ಈ ಕಡೆ ಹೋಗ್ತಿವಿ. ಬರಡುಸಂದ್ರ ಇಲ್ಲಿಗೆ ಹತ್ರದಾಗೇ ಐತೆ, ಹೆಚ್ಚು ಅಂದ್ರೆ ಒಂದು ಒಂದೂವರೆ ಮೈಲಿ. ಇವ್ರ್ ಜತ್ಯಾಗಿದ್ಮೇಲೆ ನಿಮ್ಮೇನೂ ಭಯವಿಲ್ಲ.’ ಆಕೆ ‘ನಂಗೇನೂ ಭಯ ಇಲ್ಲ. ಇವ್ರಿಗ್ ಭಯ ಆಗ್ದಿದ್ರೆ ಸಾಕು’ ಎಂದಳು. ಎಲ್ಲರೂ ನಕ್ಕರು. ನಗು ನಿಂತಾಗ ಮತ್ತೆ ಆಕೆ ಹೇಳಿದಳು. ‘ನಾನ್ ತಮಾಷೇಗ್ ಈ ಮಾತು ಹೇಳ್ತಿಲ್ಲ. ನನ್ ಹತ್ರ ಪಿಸ್ತೂಲ್ ಇದೆ. ಅದ್ರಿಂದ ಅವಿಗೆ ಭಯ ಆಗ್ತಿದ್ರೆ ಸಾಕು ಅಂದೆ’ ಎಂಬ ಅವಳ ಸಮಜಾಯಿಷಿಯಿಂದ ಎಲ್ಲರೂ ಮುಖ-ಮುಖ ನೋಡಿ ಕೊಂಡರು. ಶಿವಕುಮಾರ್‌ ಮಾತ್ರ ಸ್ವಲ್ಪ ಸಪ್ಪಗಾಗಿದ್ದ.

ಹಳ್ಳಿಯ ಜನರೆಲ್ಲ ಹೋದಮೇಲೆ ಈಕೆ ಮತ್ತು ಶಿವಕುಮಾರ್ ರಸ್ತೆಯಲ್ಲಿ ಹೆಜ್ಜೆ ಹಾಕತೊಡಗಿದರು. ಸ್ವಲ್ಪ ಹೊತ್ತು ಮೌನ. ಅನಂತರ ಆಕೆಯನ್ನು ಶಿವಕುಮಾರ್ ಕೇಳಿದ: ‘ನಿಮ್ ಸೂಟ್ ಕೇಸ್ ನಾನೇ ತರ್‍ತೀನಿ. ಕೊಡಿ.’

‘ಬೇಡ. ಅದು ನನ್‌ಕೈಯಲ್ಲೇ ಇರ್‍ಲಿ, ಯಾಕೇಂದ್ರೆ ಅದ್ರಲ್ಲಿ ಪಿಸ್ತೂಲಿದೆ’ ಎಂದಳು ಆಕೆ.

ಶಿವಕುಮಾರ್ ಇವಳದೊಳ್ಳೆ ಕಾಟವಾಯ್ತಲ್ಲ ಎಂದುಕೊಂಡ. ಸುಮ್ಮನಾದ. ಇಬ್ಬರ ನಡುವೆ ಮತ್ತೆ ಮೌನ, ಕತ್ತಲು, ನಡುನಡುವೆ ಮಿಂಚಿನ ಇಣುಕು ನೋಟ, ಗುಡುಗಿನ ಗದ್ದಲ.

ಸ್ವಲ್ಪ ಹೊತ್ತಾದ ಮೇಲೆ ಆಕೆಯೇ ಕೇಳಿದಳು: ‘ಸ್ವಲ್ಪ ಸೂಟ್ ಕೇಸ್ ಹಿಡ್ಕೊತೀರಾ?’

ಶಿವಕುಮಾರ್‌ಗೆ ಆಶ್ಚರ್ಯವಾಯಿತು. ಜೊತೆಗೆ ಆನಂದವೂ ಆಯಿತು. ಆದರೆ ತಕ್ಷಣ ಹೂಂಗುಟ್ಟುವುದು ಬೇಡವೆಂದು ‘ಆಗ್ಲೆ ಕೊಡ್ಲಿಲ್ಲ ನೀವು. ಅದ್ರಲ್ಲಿ ನಿಮ್ ಪಿಸ್ತೂಲ್ ಬೇರೆ ಇದೆ. ನಿಮ್ಮ ರಕ್ಷಣೆಗೆ ಬೇಕಲ್ವ?’ ಎಂದು ಛೇಡಿಸಿದ. ಆಕೆ ‘ಪಿಸ್ತೂಲ್ನ ಸೂಟ್‌ಕೇಸಲ್ಲಿಟ್ಟು ಯಾರಾದ್ರು ಕೈಬೀಸ್ಕೊಂಡ್ ಬಾರ್‍ತಾರ? ಅದು ನನ್ ವ್ಯಾನಿಟಿ ಬ್ಯಾಗಲ್ಲಿದೆ. ತೋರುಸ್ಲಾ?’ ಎಂದು ಕೇಳಿದಳು. ‘ತೋರುಸ್ದೆ ಇದ್ರೂ ಪರ್‍ವಾಗಿಲ್ಲ. ನೀವು ಹೇಳಿದ್ಮೇಲ್ ನಂಬ್ತೀನಿ’ ಎಂದ ಈತ.

‘ಹಾಗಾದ್ರೆ ನಾನ್ ಹೇಳಿದ್ದೆಲ್ಲ ನಂಬ್ತೀರಾ?’

‘ಯಾಕೊ ಏನೊ ನಂಬೋಣ ಅನ್ಸುತ್ತೆ.’

‘ಹಾಗಾದ್ರೆ ಒಂದು ಪ್ರಶ್ನೆ?’

‘ನೀವು ದೇವರು-ದೆವ್ವ ನಂಬ್ತೀರಾ?’

‘ನೀವು?’

‘ನಿಮ್ಮ ವಿಷಯ ಮೊದಲು ಹೇಳಿ.’

‘ಯಾಕ್ ನಂಬಬಾರದು ಅದನ್ನ ಹೇಳಿ.’

‘ನಂಬಬೇಡಿ ಅಂತ ನಾನೇನೂ ಹೇಳಿಲ್ವಲ್ಲ?’

‘ನಿಮ್ಮ ಮಾತಿನ ಧಾಟಿ ನೋಡಿದ್ರೆ ಹಾಗನ್ಸುತ್ತೆ.’

‘ನಿಮ್ಮ ಮಾತಿನ ಧಾಟಿ ನೋಡಿದ್ರೆ ನಂಗೂ ಒಂದು ಸತ್ಯ ಹೇಳ್ಬೇಕು ಅನ್ಸುತ್ತೆ.’

‘ಹೇಳಿ.’

‘ಹೇಳಲಾ?’

‘ಖಂಡಿತ ಹೇಳಿ’

‘ನೀವು ಹೆದರಬಾರದು.’

‘ನಾನ್ಯಾಕ್ ಹೆದರ್‍ಲಿ? ಪಿಸ್ತೂಲ್ ವಿಷ್ಯ ಹೇಳ್ದಾಗ್ಲೆ ಹೆದರ್‍ಲಿಲ್ಲ.’

‘ಸತ್ಯ ಏನ್ ಗೊತ್ತಾ? ನನ್ ಹತ್ರ ಪಿಸ್ತೂಲೇ ಇಲ್ಲ.’

ಶಿವಕುಮಾರ್ ನಿಂತು ನೋಡಿದ.

‘ಹಾಗಿದ್ಮೇಲೆ ಹೆದರೊ ಪ್ರಶ್ನೆ ಎಲ್ ಬಂತು’ ಎಂದು ಕೇಳಿದ.

ಅಂದಮೇಲೆ ನೀವು ಹೆದರಿದ್ರಿ ಅಂತ ಅರ್ಥವಾಯ್ತು.’

‘ನೀವು ಏನೇನೋ ಮಾತಾಡ್ ಬೇಡಿ.’

‘ಆಗ್ಲಿ, ನಾನು ಹೇಳ್ಬೇಕು ಅಂತಿದ್ದ ಸತ್ಯ ಪಿಸ್ತೂಲಿನ ವಿಷಯ ಅಲ್ಲ. ನನ್ನ ವಿಷಯ. ನಾನ್ ಯಾರ್ ಗೊತ್ತಾ?’

‘ಅದನ್ನೇ ಸರ್‍ಯಾಗ್ ತಿಳ್ಕೊಳ್ಳೋಣ ಅಂತಿದ್ದೆ.’

‘ಅದನ್ನೇ ಹೇಳ್ತೀನಿ. ಸತ್ಯ ಹೇಳ್ತೀನಿ. ಧೈರ್ಯಾನೆಲ್ಲ ಒಟ್ಟಿಗೇ ತಂದ್ಕೊಂಡು, ಗುಂಡಿಗೆ ಗಟ್ಟಿ ಮಾಡ್ಕೊಂಡು ಕೇಳಿ. ನಾನು…. ನಾನು…. ನಿಜವಾದ ಹೆಂಗ್ಸಲ್ಲ.’

‘ಅಂದ್ರೆ?’ – ಕುತೂಹಲದಿಂದ ಕೇಳಿದ.

‘ನಾನು… ನಾನು… ದೆವ್ವ!’

‘ಹಾ!’

ತನಗೇ ಗೊತ್ತಿಲ್ಲದಂತೆ ಶಿವಕುಮಾರ್ ಬೆಚ್ಚಿದ. ಮೋಡ ದೊಳಗಿಂದ ಗುಡುಗು ಕೇಳಿಸಿತು. ಮಿಂಚು ಹೊರಬಂದು ಥಳಥಳಿಸಿತು. ಆಕೆ ನಗತೊಡಗಿದಳು. ತನ್ನ ಮಾತಿನಿಂದ ತನಗೇ ಮುದವಾದಂತೆ ಮೈಯ್ಯಲ್ಲ ನಗುವಾದಳು. ಶಿವಕುಮಾರ್ ತಬ್ಬಿಬ್ಬಾದ. ಆಕಾಶದ ಕಡೆಗೆ ನೋಡಿದ. ಮಳೆಯ ಸೂಚನೆ ಕಂಡುಕೊಳ್ಳುವ ವೇಳೆಗೆ ಕಾಲಾವಕಾಶ ಕೊಡದೆ ಮಳೆ ಸುರಿಯತೊಡಗಿತು. ಮಾತು ಮಳೆಯಲ್ಲಿ ಬೆರೆತು, ಬೆವರು ಭಯ ಎಲ್ಲವೂ ಒಂದಾಗಿ ಹನಿಯಾಯಿತು.

ಶಿವಕುಮಾರ್ ಅತ್ತಿತ್ತ ನೋಡಿದ. ಊರಿನ ಸ್ಮಶಾನ ಕಾಣಿಸಿತು. ಅಲ್ಲೇ ಹತ್ತಿರದಲ್ಲಿ ಹಾಳು ಮಂಟಪವಿತ್ತು. ಮರುಮಾತಾಡದೆ ಸೂಟ್ ಕೇಸ್ ತೆಗೆದುಕೊಂಡು ಮಂಟಪದ ಕಡೆಗೆ ಓಡಿದ.

ಶಿವಕುಮಾರ್‌ ಮಂಟಪ ಸೇರಿದಾಗ ಈಕೆಯೂ ಅಲ್ಲಿಗೆ ಬಂದಳು. ಶಿವಕುಮಾರ್‌ ಮಾತಾಡಲಿಲ್ಲ. ಆತನ ಬಗಲುಚೀಲದಲ್ಲಿದ್ದ ಟವಲ್ ತೆಗೆದು ಮುಖ ಒರೆಸಿಕೊಂಡ. ಅನಂತರ ಆಕೆಗೆ ಕೊಡಲು ಹೋದ. ಆಕೆ ಸುಮ್ಮನೆ ಒಂದು ನೋಟ ಬೀರಿ, ಅನಂತರ ತನ್ನ ಸೂಟ್ ಕೇಸನ್ನು ತೆಗೆದುಕೊಂಡು ಅದರಿಂದ ಟವಲನ್ನು ಹೊರತೆಗೆದು, ಮುಖ ಒರೆಸಿಕೊಂಡು, ತಲೆಯ ಕೂದಲು ಬಿಚ್ಚಿ ಟವಲಿನಲ್ಲಿ ಒರೆಸಿದಳು. ಇದೆಲ್ಲವನ್ನು ಶಿವಕುಮಾರ್ ನೋಡುತ್ತ ನಿಂತಿದ್ದ ಸ್ವಲ್ಪ ಹೊತ್ತಾದ ಮೇಲೆ ಧೈರ್ಯ ಮಾಡಿ ಕೇಳಿದ.

‘ನಿಮ್ಮ ಹೆಸರು?’

‘ದೆವ್ವಕ್ಕೆ ಯಾವ ಹೆಸರಾದ್ರೇನು?’

– ಆಕೆ ತುಂಟ ನೋಟದಿಂದ ಹೇಳಿದಳು.

ಶಿವಕುಮಾರ್ ಸುಮ್ಮನಾದ. ಮೆಲ್ಲನೆ ಮೇಲಿಂದ ಕೆಳಗೆ ಆಕೆಯನ್ನು ನೋಡಿದ, ಕಾಲಿನ ಮೇಲೆ ನೋಟವನ್ನು ನೆಟ್ಟ. ಆತ ತನ್ನನ್ನು ನೋಡುತ್ತ ನಿಂತದ್ದನ್ನು ಗಮನಿಸಿದ ಆಕೆ ಹೇಳಿದಳು: ‘ವಿದ್ಯಾವಂತರು ಒಂಟಿ ಹೆಣ್ಣು ಸಿಕ್ಕಿದಾಗ ಹೀಗೆಲ್ಲ ನೋಡಬಾರದು.’

‘ನಾನ್ ನೋಡಿದ್ದನ್ನ ತಪ್ಪು ತಿಳ್ಕೊಬೇಡಿ. ನಿಮ್ಮ ಪಾದಗಳನ್ನ ಪರೀಕ್ಷೆ ಮಾಡ್ದೆ.’

‘ಯಾಕೆ?’

‘ದೆವ್ವ ಆಗಿದ್ರೆ ಪಾದಗಳು ಹಿಂದು ಮುಂದಾಗಿರುತ್ವೆ ಅಂತ ನಮ್ಮಮ್ಮ ಹೇಳಿದ್ರು.’

‘ನನ್ನ ಪಾದ ಹಿಂದುಮುಂದಾಗಿಲ್ವ?’

‘ಖಂಡಿತ ಇಲ್ಲ.’

‘ನಾನು ಮಾಯಾವಿ. ನಿಮಗೆ ಸರ್‍ಯಾಗ್ ಕಾಣ್ಸೋಥರಾ ಮಾಡಿದ್ದೀನಿ.’

‘ಇನ್ನು ಅವೆಲ್ಲ ಬೇಡ. ನಿಮ್ಮ ಹೆಸರೇನು ಹೇಳಿ.’

‘ಮಂಜುಳ?’

‘ತುಂಬಾ ಚೆನ್ನಾಗಿದೆ. ನೀವು ಓದಿರೋದು?’

‘ಕನ್ನಡ ಸಾಹಿತ್ಯದಲ್ಲಿ ಪದವಿ ಪಡ್ದಿದ್ದೀನಿ. ನಾಳೆಯಿಂದ ಹೈಸ್ಕೂಲ್ಗೆ ಕನ್ನಡ ಮೇಡಂ.’

‘ವಂಡರ್‌ಫುಲ್’

‘ಅದನ್ನೇ ಕನ್ನಡದಲ್ಲಿ ಹೇಳಿ.’

ಆಕೆಯ ನಗೆಮಾತಿನಿಂದ ವಾತಾವರಣದ ಬಿಗಿ ಕಡಿಮೆಯಾಗಿ ಇಬ್ಬರೂ ನಕ್ಕರು.

ಅನಂತರ ಶಿವಕುಮಾರ್ ಕೇಳಿದ.

‘ಅಲ್ಲ, ಕಾಣದೆ ಇರೊ ಊರಿಗೆ ರಾತ್ರಿ ಪ್ರಯಾಣ ಮಾಡಿದ್ದೀರಲ್ಲ, ನಿಮಗೆಷ್ಟು ಧೈರ್ಯ?’

‘ನಾನು ಹೊತ್ತು ಮುಳುಗೋದ್ರಲ್ಲಿ ಊರು ಸೇರ್‍ಬೇಕೂಂತಲೇ ಹೊರಟೆ. ಆದ್ರೆ ನಿಮ್ಮೂರಿಗೆ ಇರೋ ಬಸ್ಸುಗಳೇ ಕಡ್ಮೆ. ಮೂರ್‍ಗಂಟೆ ಬಸ್ ಮಿಸ್ಸಾಯ್ತು. ಈ ಬಸ್ ಕೆಟ್ಟೋಯ್ತು.’

‘ಹಳ್ಳಿ ಅಂದ್ರೆ ಹೀಗೇ ನೋಡಿ. ಎಲ್ಲ ಕಷ್ಟ.’

‘ಹಾಗೇನಿಲ್ಲ. ಈ ಕಷ್ಟದಲ್ಲೂ ಒಂಥರಾ ಸುಖ ಇದೆ.’

ಶಿವಕುಮಾರ್‌ ಏನೂ ಮಾತಾಡಲಿಲ್ಲ. ಮಳೆ ನಿಲ್ಲುವುದೊ ಇಲ್ಲವೊ ಎಂದು ನೋಡಿದ. ಆಕೆಯೇ ಕೇಳಿದಳು: ‘ಈಗ ನಾವ್ ನಿಂತಿರೊ ಮಂಟಪ ಯಾತಕ್ಕೆ ಪ್ರಸಿದ್ಧಿ?’

‘ದೆವ್ವಕ್ ಪ್ರಸಿದ್ಧಿ.’

‘ಹಾಗಾದ್ರೆ ನಿಮಗೆ ಹೆದ್ರಿಕೆ ಆಗೊಲ್ವ?’

‘ನೀವಿದ್ದೀರಲ್ಲ!’

‘ಮನುಷ್ಯರೇ ಹೀಗೆ, ಜೊತೇಲಿ ಒಬ್ರಿದ್ರೆ ಅವರಿದಾರಲ್ಲ ಅಂತ ಪರಸ್ಪರ ಧೈರ್ಯ ತಗೊಳ್ಳೋದೆ ಒಂದು ವಿಶೇಷ.’

‘ಮನುಷ್ಯರ ವಿಶೇಷ ಇಲ್ಲ. ಈ ಮಂಟಪದ ವಿಶೇಷ ಕೇಳಿ, ಇದರ ಪಕ್ಕದಲ್ಲೇ ಒಂದು ಸ್ಮಶಾನ ಇದೆ. ಈ ಸ್ಮಶಾನಕ್ಕೆ-ಈ ಮಂಟಪಕ್ಕೆ ಸಂಬಂಧಪಟ್ಟಂತೆ ಒಂದು ಐತಿಹ್ಯ ಇದೆ. ಈ ಊರಿನ ರಾಜ ದೊಡ್ಡ ಮಂಟಪ ಕಟ್ಟಿಸಿ ತಂಗುದಾಣ ಮಾಡ್ಬೇಕು ಅಂತಿದ್ನಂತೆ. ಇಷ್ಟು ಕಟ್ಟೋ ವೇಳೆಗೆ ದೆವ್ವಗಳ ಕಾಟ ಶುರುವಾಯ್ತಂತೆ. ಇದು ನಾವು ಓಡಾಡೊ ಜಾಗ. ಮನುಷ್ಯರಿಗೆ ಅಂತ ಮಂಟಪ ಕಟ್ಟುಸ್ಬೇಡ ಅಂದ್ವಂತೆ. ರಾಜ ಸುಮ್ಮನಾದ. ಪಕ್ಕದ ಜಾಗದಲ್ಲಿ ಊರೋರು ಸ್ಮಶಾನ ಮಾಡಿದ್ರು. ಅಲ್ಲಿ ಸ್ಮಶಾನ ಇಲ್ಲಿ ದೆವ್ವದ ಮಂಟಪ, ಸರಿಹೋಯ್ತಲ್ಲ.’

‘ಹಾಗಾದ್ರೆ ನಾವಿಬ್ರು ಈಗ ದೆವ್ವಗಳು!’ – ಮತ್ತೆ ಆಕೆ ನಗೆಮಾತು ಚಿಮ್ಮಿದಳು.

‘ಸುಮ್ಮೆ ತಮಾಷೆ ಮಾಡೋಡಿ. ಇನ್ನೇನ್ ಮಳೆ ನಿಲ್ಲುತ್ತೆ ಹೋಗ್ಬಿಡೋಣ’ ಎಂದ.

‘ಅಂದಹಾಗೆ ನೀವೇನ್ ಮಾಡ್ತಿದ್ದೀರಿ?’

‘ನಾನು ಎಂ.ಎ. ಮಾಡಿದ್ದೀನಿ. ಇತಿಹಾಸ ನನ್ನ ವಿಷಯ. ಈಗ ನಿರುದ್ಯೋಗಿ.’

ಮಂಜುಳ ಮೋಡಗಳ ಕಡೆ ನೋಡಿದಳು. ಕಡಿಮೆಯಾಯಿತು. ಇವರ ಮೌನವನ್ನು ಸಹಿಸಲಾಗದೆ ಸುಮ್ಮನಾದಂತೆ ಬರಬರುತ್ತ ನಿಂತಿತು. ಮಂಜುಳ ಸೂಟ್‌ಕೇಸ್‌ ಸಿದ್ಧಮಾಡಿ ಹೊರಟು ನಿಂತಳು.

‘ನೀವು ಹೆಡ್ ಮಾಸ್ಟರು ಮನೆ ತೋರಿ. ನಮ್ಮಣ್ಣ ಅವರಿಗೆ ಸ್ನೇಹಿತ ಒಂದು ಬಾಡಿಗೆ ಮನೆ ಮಾಡಿದ್ದೀನಿ ಅಂತ ಅವರು ಪತ್ರ ಬರೆದಿದ್ರು…’ ಎಂದು ಆಕೆ ಮಾತನಾಡುತ್ತಿದ್ದಾಗ ಶಿವಕುಮಾರ್ ಮಧ್ಯದಲ್ಲೇ ತಡೆದು ‘ಅದೆಲ್ಲ ಆಮೇಲೆ. ಮೊದ್ಲು ನಮ್ಮನೇಗೆ ಹೋಗೋಣ ಬನ್ನಿ.’ ಎಂದು ಮುಂದಡಿಯಿಟ್ಟ.

ಶಿವಕುಮಾರ್‌ ಮತ್ತು ಮಂಜುಳ ಊರೊಳಗೆ ಬಂದಾಗ ಊರಿಗೆ ಊರೇ ಮೌನವಾಗಿತ್ತು. ಸಣ್ಣ ಸಣ್ಣ ಸಂದಿಗೊಂದಿಗಳಲ್ಲಿ ಮಂಜುಳಾಳನ್ನು ಕರೆದುಕೊಂಡು ಶಿವಕುಮಾರ್ ಹೋಗುತ್ತಿದ್ದಾಗ ನಾಯಿಗಳು ಬೊಗಳಿದವು. ಹೊಸ ಮನುಷ್ಯರನ್ನು ಕಂಡ ನಾಯಿಗಳ ಸದ್ದು ನಿಲ್ಲಲಿಲ್ಲ. ಹೊರಗೆ ಮಲಗಿದ್ದ ಕೆಲವ್ರು ಮಳೆ ಬಂದಾಗ ಒಳಗೆ ಹೋಗಿದ್ದರು. ನಿದ್ದೆ ಬಾರದೆ ಹೊರಳಾಡುತ್ತಿದ್ದವರು ನಾಯ ಬೊಗಳುವಿಕೆಯಿಂದ ಎದ್ದು ಬಂದು ಮನೆಯ ಹಳೇ ಕಿಟಕಿಗಳಿಂದ ನೋಡಿದರು.

ಶಿವಕುಮಾರ್ ಜೊತೆ ಒಬ್ಬ ಹೆಣ್ಣು! ಅದೂ ಯುವತಿ! ನೋಡಿದವರೆಲ್ಲರ ಬುದ್ದಿ ಎಲ್ಲೆಲ್ಲೋ ಓಡಿತು.

‘ಈಗಿನ್ ಕಾಲದ ಹುಡುಗ್ರು ಹಿಂಗೇ ಅಂಬ್ತಾ ಯೇಳಾಕಾಗಲ್ಲ. ಯಾವಳ್ನೋ ಕಟ್ಕಂಡು ಹೊತ್ತಲ್ದ್ ಹೊತ್ನಾಗೆ ಊರೊಳೀಕ್ ಬಂದವ್ನೆ’ – ಎಂದು ಒಬ್ಬಾಕೆ ತನ್ನ ಗಂಡನಿಗೆ ಹೇಳಿದಾಗ ಆತನೂ ‘ಇರಬವ್ದು’ ಎಂದ.

ಮತ್ತೊಬ್ಬ ಮಂಜುಳಾ ನಡೆಯುವುದನ್ನೇ ನೋಡುತ್ತ ನಿಂತಾಗ ಹೆಂಡತಿಯಿಂದ ಬಯ್ಯಸಿಕೊಂಡ. ಒಟ್ಟಿನಲ್ಲಿ ನೋಡಿದ ಎಲ್ಲರಿಗೂ ಅನುಮಾನ. ಮುಂದೆ ಏನೋ ಆಗುತ್ತದೆಯೆಂಬ ಕೆಟ್ಟ ಕುತೂಹಲ.

ಶಿವಕುಮಾರ್ ತನ್ನ ಮನೆಯ ಬಳಿಗೆ ಬಂದು ತಾಯಿಯನ್ನು ಕೂಗಿದ. ತಾಯಿ ಕರಿಯಮ್ಮ ಎದ್ದು ಬಂದು ನೋಡಿ ಒಂದು ಕ್ಷಣ ದಂಗಾದಳು. ಆಕೆಯ ಮುಖಚರ್ಯೆಯನ್ನು ಗಮನಿಸಿದ ಶಿವಕುಮಾರ್ ಎಲ್ಲ ವಿಷಯವನ್ನೂ ಹೇಳಿದಾಗ ನಿಟ್ಟುಸಿರುಬಿಟ್ಟಳು. ಅಷ್ಟರಲ್ಲಿ ಸಿದ್ದಣ್ಣ ಎದ್ದು ಬಂದ. ವಿಷಯ ತಿಳಿದು ‘ಮೊದ್ದು ಕೈಕಾಲ್ ಮುಖ ತೊಳ್ಕೊಂಡು ಊಟ ಮಾಡ್ರಿ’ ಎಂದ.

ಊಟವಾದ ಮೇಲೆ ಪಡಸಾಲೆಗೆ ಬಂದರು. ಅಲ್ಲಿ ಶಿವಕುಮಾರನ ತಂಗಿ – ಹನ್ನೆರಡು ಹದಿಮೂರು ವರ್ಷದ ಲಕ್ಷ್ಮಿ – ಮಲಗಿದ್ದಳು. ಸಿದ್ದಣ್ಣ ಕೂತಿದ್ದ. ‘ಬಡವರ ಮನೆ. ಏನೂ ಬ್ಯಾಸ್ರ ಮಾಡ್ಕಬ್ಯಾಡ್ರಿ ಮ್ಯಾಡಮ್ನೋರೆ’ ಎಂದ.

‘ನಾನೂ ಇಂಥ ಮನೆಯಿಂದ್ಲೇ ಬಂದಿದ್ದೀನಿ. ಬೇಸರ ಯಾಕೆ’ ಎಂದಳು ಮಂಜುಳ.

‘ಹೆಡ್‌ಮಾಸ್ತರು ಹೊತ್ತಾರೆಯಿಂದ ನೀವ್ ಬರಾದ್ನ ಹೇಳ್ತಾನೇ ಇದ್ರು. ಇಲ್ಲೇ ನಮ್ಮನೆತಾವೇ ನಿಮ್ಗೊಂದು ಬಾಡ್ಗೆಮನೆ ಮಾಡವ್ರೆ. ಎಲ್ಲಾ ಹೊತ್ತಾರೆ ಮಾತಾಡಾನ. ಮಲೀಕಳ್ಳಿ’ ಎಂದು ಎದ್ದು ಹೊರಗೆ ಹೋದ.

ಒಳಗೆ ಮಂಜುಳ, ಕರಿಯಮ್ಮ ಮಲಗಿದರು. ಹೊರಗೆ ಹಜಾರದಲ್ಲಿ ಸಿದ್ದಣ್ಣ, ಶಿವಕುಮಾರ್‌ ಮಲಗಿದರು.

ಶಿವಕುಮಾರ್ ಗೆ ಎಷ್ಟು ಹೊತ್ತಾದರೂ ನಿದ್ದೆ ಬರಲಿಲ್ಲ. ಅಕ್ಕಪಕ್ಕದ ಮನೆಯವರಿಗೆ ಎಚ್ಚರವಾಗಿದ್ದು ಕುತೂಹಲ ಕಟ್ಟೆಕಟ್ಟತೊಡಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೂನ್ಯ
Next post ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…