ಮಲ್ಲಿ – ೨೦

ಮಲ್ಲಿ – ೨೦

ಬರೆದವರು: Thomas Hardy / Tess of the d’Urbervilles

ನಂಜಪ್ಪನು ಬಂಗಲೆಯಲ್ಲಿ ಖಾವಂದರ ಆಗಮನಕ್ಕೆ ಏನೇನು ಬೇಕೋ ಎಲ್ಲವನ್ನೂ ಸಿದ್ಧ ಮಾಡಿದನು. ಹತ್ತು ಗಂಟೆಗೆ ಅಡುಗೆಯೆಲ್ಲ ಆಗಿ ಬಡಿಸುವುದಕ್ಕೆ ಸಿದ್ದವಾಗಿತ್ತು.

ಸುಮಾರು ಹತ್ತೂವರೆಯಿರಬಹುದು. ಖಾವಂದರ ಸವಾರಿ ಸಾರೋಟನಲ್ಲಿ ದಯಮಾಡಿಸಿತು. ಅತ್ತಕಡೆ ಸುಂದರಮ್ಮಣ್ಣಿ. ಇತ್ತ ಕಡೆ ಮಲ್ಲಮ್ಮಣ್ಣಿ, ನಡುವೆ ನಾಯಕ. ಕರೀ ಕುದುರೆಗಳನ್ನು ಗಾಡಿಗೆ ಕಟ್ಟಿದೆ. ಹಿಂದೆ ಹಕೀಂ, ಅವನ ಆಳು, ಸುಲ್ತಾನ್ ರಾಣಿಯರನ್ನು ಏರಿಕೊಂಡು ಬಂದಿದ್ದಾರೆ.

ಮಲ್ಲಣ್ಣನು ಬಂದು ಕಾಣಿಸಿಕೊಂಡು “ಪಾದಕ್ಕೆ ಅಡ್ಡ ಬಿದ್ದೆ ” ಎಂದನು. ನಾಯಕನು ನಗುತ್ತಾ “ವರಸೇಲಿ ನೀವು ದೊಡ್ಡವರಾ ದರಿ?” ಎಂದನು. ಮಲ್ಲಣ್ಣ “ಉಂಟಾ ನಿಮ್ಮ ಪಾದ, ಆಡು ಬೆಳೆ ದರೆ ಆನೆ ಆದೀತಾ? ಎಂದಿದ್ದರೂ ತಾವು ದಣಿಗೊಳು, ನಾವು ತಾಬೇ ದಾರ್ರು ” ಎಂದನು. ನಾಯಕನು ಬಲಕ್ಕೆ ತಿರುಗಿ ದಿವಾನ್ಖಾನೆಗೆ ಹೋಗಿ ಕುಳಿತುಕೊಂಡು, ಪೇಟಾ ತೆಗೆದು ಬೆವರು ಒರೆಸಿಕೊಳ್ಳುತ್ತಾ “ಏನು ವಿಶೇಷ, ಮಲ್ಲಣ್ಣಾ ?” ಎಂದನು.

“ಏನು ಹೇಳಲಿ, ಬುದ್ದಿ. ರಾಜ್ಯ ಆಳೋ ಮಹಾರಾಜರು, ದಿವಾನರು, ಎಲ್ಲರಿಗೂ ಬೇಕಾದವರು ತಾವು. ಆದರೂ ಏನೋ ಬಂತು ಬುದ್ದಿ. ಲಕ್ಷಾಂತರ ಎಕರೆಗೆ ನೀರು-ಕೊಡೋ ಭಾರೀಕೆರೆ ಕಟ್ಟುತಾ ಅವರೆ; ಆದರೂ ಬುದ್ಧಿ, ರೂಪಾಯಿಗೆ ಎಂಟು ಒಂಭತ್ತು ಸೇರು ಅಕ್ಕಿ ಆಗೋಯ್ತು. ರಾಗಿ ಪಲ್ಲ ನಾಕುವರೆ ಐದು ಆಯ್ತು. ಇನ್ನು ಬಡವರು ಬದುಕೋದೂ ಉಂಟಾ? ಅಂತ ದಿಗಿಲಾಯ್ತದೆ ಬುದ್ದಿ.”

” ಅಂದರೆ, ನಿನಗಿನ್ನೂ ಒಂದು ಹತ್ತು ರೂಪಾಯಿ ಬೇಕೂಂತ ಲೇನಪ್ಪಾ ಈ ಆವಟಾ ಎಲ್ಲ?”

“ನನ್ನಾಣೆಗೂ ಇಲ್ಲ, ನಿಮ್ಮ ಪಾದ. ಲೋಕಕ್ಕೆ ಲೋಕವೇ ಕನ್ನಂಬಾಡಿ ಕಟ್ಟೊಕೆ ಎಲ್ಲೆಲ್ಲಿಂದಲೋ ಜನ ಬಂದುಬಿಟ್ಟವರೆ, ಧಾರಣೆ ಎಚ್ಚೊಯಿತು ಅಂತ ಗುಸುಗುಂಪಲು, ಏನೋ ದೊಡ್ಡವರಿಗೆ ಹೇಳ್ತೀ ರೇನೋ ಅಂದೆ.”

“ಅಲ್ಲೋ ನಿಮ್ಮಗಳ ಸುದ್ದೀಕೇಳ್ನಿಲ್ಲ. ನಮ್ಮ ಸುಖಸಮಾ ಚಾರ ಕೇಲ್ಲಿಲ್ಲ ಮಳೆಬಳೆ ಕೇಳ್ನಿಲ್ಲ. ಎಲ್ಲಾ ಬುಟ್ಟು ಧಾರಣೆವಾಸಿ ಹೇಳುತಿದ್ದಿಯಲ್ಲ. ಇದೇನು ಸೋಜಿಗ ?”

” ಬುದ್ಧಿ, ಇಲ್ಲಿ ಒಬ್ಬರು ಅಯ್ಯನೋರು ಬಂದವ್ರೆ. ನಮಗೂ ಅವರ್ಗೂ ಬಾಳ ನೇಸ್ತಾ ಬೆಳೆದಿದೆ. ಖಾನಂದ್ರೂ ಅವರ್ನ ನೋಡ ಬೇಕು. ಅವರು ಪೇಪರು ಗೀಪರು ಓದುತ, ಇದನ್ನೆಲ್ಲ ಹೇಳ್ತಾರೆ. ನಿನ್ನೆ ಸಂಜೆ ಧಾರಣೇದೇನೋ ಮೀಟಿಂಗಾಯ್ತು ಅಂತ ಓದಿದರು. ನಿನ್ನೆಯಿಂದ ಅದೇ ಗುಂಗು ಇತ್ತು. ಖಾವಂದ್ರ ಹತ್ರ ಹೇಳೋದು ಅಂದುಕೊಂಡೆ. ಬಾಯಲ್ಲಿ ಬಂದು ಬುಡುತು. ಅಷ್ಟೇ ಬುದ್ಧಿ ”

“ಇರಲಿ. ವಿಚಾರಿಸೋವಾ ! ನೀನೂ ನಿನ್ನ ಹೆಂಡತಿ ಎಲ್ರೂ ಚೆನ್ನಾಗಿದ್ದೀರೋ ?”

“ಏನೋ ನಿಮ್ಮ ಪಾದ! ತಮ್ಮ ಹೆಸ್ರು ಹೇಳಿಕೊಂಡು ದೀಪ ಹಚ್ಚಿಕೊಂಡು, ತಾವು ಕೊಟ್ಟ ಅನ್ನ ಉಂಡುಕೊಂಡು, ತಾವು ಕೊಟ್ಟ ಬಟ್ಟೆ ಉಟ್ಟು ಕೊಂಡು, ಸುಖವಾಗಿದ್ದೀವಿ.”

“ಅದೇನೋ ಮಕ್ಕಳು ಮಾಡಿಕೊಂಡಿದ್ದೀರಂತೆ. ಹೋದ ಸಲ ಬಂದಾಗ ನಂಜಪ್ಪ ಏನೋ ಹೇಳಿದ ಪುರಸೊತ್ತು ಇರಲಿಲ್ಲ. ಪೂರ್ತಿ ಕೇಳಲಿಲ್ಲ.”

“ಅಂಯ್ ! ಅದೇನು ಬುಡೀ ತಮ್ಮ ಪಾದ. ಹೊಟ್ಟಿಗಿಲ್ಲದ ಸಂಕಟಕ್ಕೆ ಕ್ಯಾರೇಹಾವು ಆಡಿಸದ್ರು ಅಂದ ಹಾಗೆ. ಆ ನಮ್ಮ ಮುಕ್ಕ ಅವಳಲ್ಲ, ಅವಳು ಆ ಎಣ್ಣು ಮೊಗೀಗೆ ಚಿಕ್ಕಮಲ್ಲಿ ಅಂತ ಹೆಸರಿಟ್ಟುಕೊಂಡು ಏನೋ ಬೊಂಬೆಗೊಂಡು ಗಿಂಬೆ ಅಂದಹಂಗೆ ಹೊತ್ತು ಕಳೀತವಳೆ. ಅಷ್ಟೇ ಬುದ್ದಿ.”

” ನಿಮ್ಮ ಅಯ್ಯನೋರು ಯಾರು?”

“ಹತ್ತು ವರುಷದ ಹಿಂದೆ ಅತ್ತ ಕೊಳ್ಳೇಗಾಲದ ಸುತ್ತ ಒಬ್ಬ ಅಯ್ಯ ಇದ್ದ ಬುದ್ದಿ ಏನೋ ಅಷ್ಟು ಔಸ್ತಿ ಗಿವ್ಸ್ತಿ ಮಾಡಿಕೊಂಡು. ನೋಡೋಕೇನೋ ಹಂಗೇ ಅವ್ನೆ. ಆ ಅಯ್ಯನಿಗೆ ಮಾತು ಅಷ್ಟು ಇರಲಿಲ್ಲ. ಇವ ಪೂರಾಮಾತು. ಮಾತಿನಭರದಲ್ಲಿ ” ಏನ್ರಿ, ನಿಮ್ಮ ಮೈಸೂರು, ಒಂದು ದೊಡ್ಡ ಹಳ್ಳಿ ಅಷ್ಟೇಕಣ್ರಿ, ಅಂತ ಷಹರ್ ಕೆಟ್ಟು ಹೋಯಿತೋ? ಅಂದುಬಿಟ್ಟ. ಮಾತಾಡಿದರೆ, ಮದರಾಸು ಬೊಂಬಾಯಿ, ಪೂನಾ, ಕಲ್ಕತ್ತ ಅಂತಾನೆ. ಅಂತೂ ಪೂರಾಸುತ್ತವ್ನೆ.?

“ಹೂಂ ಹಂಗಾ! ಇರಲಿ. ಕರೆಸಿ ನೋಡೋವಾ.”

“ಖಾವಂದ್ರು ಬರುತಲೂ ಕರೀತೀನಿ ಅಂದಿವ್ನಿ. ಇವೊತ್ತು ಪಾದ ಆಗಬೋದು ಅಂದರೆ ಕನ್ನಂಬಾಡೀಗೆ ಅವರೂ ಬರುತಾರೆ.”

“ಬರಲೇಳಿ ಅದಕೇನು? ಆದಕ್ಕೆ ಎಲ್ಲರಿಗೂ ಸಾರೋಟನಲ್ಲಿ ಆಗೋಕಿಲ್ಲಾ. ಜಟಕಾ ಮಾಡಿಕೊಂಡು ನೀವೂ ಅವರೂ ಬನ್ನಿ. ಕೆಂಪಮ್ಮ ಜನಾನಾ ಜೊತೇಲಿ ಬರಲಿ. ನಾನು ಮಲ್ಲೀ ಕುದುರೆ ಮೇಲೆ ಬರುತೀವಿ.”

“ಅವರ ಅಮ್ಮನೋರು ಬಂದಾರೇನೋ? ಕೆಂಪಿ ಕರಕೊಂಡು ಹೋಯ್ತೀನಿ ಅಂದಿದ್ದಳು.”

“ಆಗಲೇಳಿ-ಅಕೋ ನಿಮ್ಮ ಮಲ್ಲೀ ಬಂದಳು. ಏನ್ರೀ ಆರೋ ಗಣೇಗೆ ಏಳೋಣೇನ್ರಿ ?”

“ನಾನು ನಮ್ಮಪ್ಪಾಜಿ ನೋಡೋಕೇಬೇಡವಾ? ಅಪ್ಪಾಜೀ ಕಂಡು, ಆಮೇಲೆ ತಮ್ಮ ಪಾದಕ್ಕೆ ನೀರುಚೌಕ ತರುತೀನಿ.”

“ನೋಡಿ, ನೋಡಿ, ಮಾತಿಲ್ಲ ಮುಗೀಲಿ. ಆಮೇಲೇ ನಮ್ಮ ಕಡೆ ತಿರುಗೋರಂತೆ.?

ಮಲ್ಲಿಯು ನಾಯಕನ ಮೊಕನೋಡಿ ನಕ್ಕು “ಏನಪ್ಪಾಜೀ, ಚೆನ್ನಗಿದ್ದಿರಾ?” ಎಂದು ಮಗ್ಗುಲಲ್ಲಿ ಬಂದುನಿಂತು ಕಾಲುಮುಟ್ಟಿ ಕಣ್ಣಿಗೊತ್ತಿಕೊಂಡಳು, ಮಲಣ್ಣನು ಯಾರೋ ದೊಡ್ಡವವರನ್ನು ಕಂಡು ಸಂಭ್ರಮ ಪಡುವಂತೆ ಸಂಭ್ರಮಪಡುತ್ತಾ “ನೋಡವ್ವಾ ಏನೋ ಹಿಂಗವ್ನಿ” ಎಂದು ಅವಳನ್ನು ತಬ್ಬಿಕೊಂಡು ಸಂಭ್ರಮ ಪಟ್ಟನು.

ಮಲ್ಲಣ್ಣ ಕೆಂಪಿಯರಿಗೂ ಖಾನ್ ಬಿಡದಿಯಲ್ಲೇ ಅವರ ಜೊತೆ ಯಲ್ಲಯೇ ಊಟವಾಯಿತು.

ನಾಯಕನು ವಿಶ್ರಾಂತಿಗೆಂದು ಒಳಕ್ಕೆ ಹೋದಾಗ ಮಲ್ಲಣ್ಣ ಹೋಗಿ ಶಂಭುರಾಮಯ್ಯನನ್ನು ಕರೆತಂದನು : ಕೆಂಪಿಯು ಆನಂದಮ್ಮ ನನ್ನು ಕರೆದುಕೊಂಡು ಹೋಗಿ ರಾಣಿಯವರ ದರ್ಶನಮಾಡಿಸಿದಳು. ಮಲ್ಲಿಯು ನೋಡುತ್ತ ನಿಂತಿದ್ದಳು. ಆನಂದಮ್ಮನವರ ಪುರಾಣಾದಿಗಳ ಕಥೆಯನ್ನು ಕೇಳಿದ ಸುಂದರಮ್ಮಣ್ಣಿಯು ” ಮಲ್ಲಮ್ಮಣ್ಣಿ ” ಅಮ್ಮನೋರಿಗೆ ನಮಸ್ಕಾರ ಮಾಡಿ.” ಎಂದಳು.

ಮಲ್ಲಿಯು ನಮಸ್ಕಾರ ಮಾಡಿದಳು. ಆನಂದಮ್ಮನು ಅವಳನ್ನು ಹಿಡಿದೆತ್ತಿ ಮಗ್ಗುಲಲ್ಲಿ ಕೂರಿಸಿಕೊಂಡಾಗ ಹೊಟ್ಟೆಯಲ್ಲಿ ಎದೆಯಲ್ಲಿ ಹೇಗೆಹೇಗೋ ಆಯಿತು. ಹಿಂದಿನದಿನ ಕೆಂಪಿಯಾಡಿದ್ದ ಮಾತುಗಳು ಏನೇನೋ ರೀತಿಯಲ್ಲಿ ಹೆಣೆದುಕೊಂಡು, ಏನೇನೋ ಸಂಬಂಧವನ್ನು ಕಲ್ಪಿಸಿಕೊಂಡು ಹತ್ತುವರ್ಷದ ನೆನೆಪನ್ನು ಎಳತಂದು ಚುಚ್ಚಿದಂತೆ ಆಯಿತು. ಆದರೂ ಅವಳು ಅದೊಂದನ್ನೂ ಗಮನಿಸದೆ, ಮಲ್ಲಿಗೆ ಆಶೀರ್ವಾದ ಮಾಡಿದಳು.

ಕೆಂಪಿಗೆ ತಿಳಿಯದಿದ್ದ ಒಂದಂಶ ಸುಂದರಮ್ಮಣ್ಣಿ ಕಣ್ಣಿಗೆ ಬಿತ್ತು. ಬಾಯಿ, ಕನ್ನೆ ಕಣ್ಣು, ದುಬ್ಬು, ಹೆಣೆ, ಎಲ್ಲವೂ ಆನಂದಮ್ಮನ ತದ್ರೂಪು ಮಲ್ಲೀಗೆ. ರಾಣಿಗೆ ಆಶ್ಚರ್ಯವಾಯಿತು. ಆದರೂ ಒಬ್ಬರಂತೆ ಒಬ್ಬರು ಇರುವುದಿಲ್ಲವೆ ಎಂದು ಆಕೆ ಸುಮ್ಮನಾದಳು.

ಮಧ್ಯಾಹ್ನ ಮೂರು ಗಂಟೆಗೆ ಕನ್ನಂಬಾಡಿಗೆ ಎಲ್ಲರೂ ಹೊರಟರು. ಮಲ್ಲಿಯು ಕುದುರೆ ಸವಾರನ ಪೋಷಾಕು ಧರಿಸಿದ್ದಾಳೆ. ಮೊಗದ ಮೇಲೆ ಗಂಡು ಕಳೆಯು ಕುಣಿದಾಡುತ್ತಿದೆ. ನಾಯಕನೂ ಅದೇ ಜಾತಿಯ ಪೋಷಾಕು ಧರಿಸಿದ್ದು ಇಬ್ಬರೂ ಹ್ಯಾಟ್ ಹಾಕಿಕೊಂಡಿ ದ್ದಾರೆ. ಈಚೆಗೆ ಬಂದರು. ಕೆಂಪಿ ಮಲ್ಲಣ್ಣ, ಮಗಳು ಹಾಗೆ ಗಂಡುದಿರಸು ಹಾಕಿಕೊಂಡಿದ್ದನ್ನು ನೋಡಿರಲಿಲ್ಲ. ಇಬ್ಬರಿಗೂ ಆಶ್ಚರ್ಯವಾಯಿತು.

ಕೆಂಪಿಯು ಮೂಕಳಾಗಿ ರಾಣಿಯ ಮೊಕ ನೋಡಿದಳು: ” ಹೌದು ಈಗ ಅವರು ಹಾಗೆ; ಇಬ್ಬರೂ ಹೀಗೆ ಕುದುರೆಯ ಮೇಲೆ ತಿರುಗಿದ್ದೇ ತಿರುಗಿದ್ದು. ಹೋಗಲೇಳು ಕೆಂಪಮ್ಮಣ್ಣಿ, ನಮಗೆ ಆ ಭಾಗ್ಯ ಇಲ್ಲ, ಅವಳಿಗಾದರೂ ಅದೆಯಲ್ಲ. ಇನ್ನೊಂದು ಬಲ್ಲೆಯಾ ? ನಿನ್ನ ಮಗಳು, ಅಬ್ಬಾ, ಬೋ ಚಾಲೋಕಿನ ಹೆಣ್ಣು. ಬಂದೂಕು ಹಿಡಿದು ಗುಂಡು ಹೊಡೆದು ಒಂದು ಜಿಂಕೆ ಹೊಡೆದುಬಿಟ್ಟಳು. ಇನ್ನು ಕತ್ತಿ ವರಸೆಕೂಡ ಬುದ್ಧಿಯೋರೆ ಕಲುಸತಾರಂತೆ. ಏನೋ ಈ ಗಂಡುಬೀರಿ ಆಟಾನೇ ಏನೋ ಅಂದರೆ, ನನ್ನ ಹತ್ತಿರವೇ ವೀಣೇ ಕಲೀತಾ ಅವಳೆ.

ಇನ್ನೊಂದು ವರ್ಷ ಆದರೆ ಆಯಿತು. ನಾನೂ ಕಲಿತು ಕಲಿಸಬೇಕು. ಅಂತೂ ಸಾವಿರ ಹೇಳು. ನಿನ್ನಪುಣ್ಯ ಅಷ್ಟಲ್ಲ; ಇಷ್ಟಲ್ಲ.”

ಕೆಂಪೀಗೆ ಆಮಾತು ಕೇಳಿ ಎಲ್ಲೂ ಹಿಡಿಸಲಾರದನ್ನು ಆನಂದವಾಗಿ ಹೋಯಿತು. ಮಗ್ಗುಲಲ್ಲಿದ್ದ ಆನಂದಮ್ಮನಿಗೂ ಅದುಕೇಳಿ ಆನಂದವೇ ಆಯಿತು. ಆದರೂ ಏನೋ ದೂರದ ನೋವು. ಏನೋ ತನ್ನದೇನೋ ಹೋದಂತೆ ಒಂದು ಸಣ್ಣ ಸಂಕಟ.

“ಆದೆಕೆ ಇಷ್ಟೆಲ್ಲಾ ಆಯಿತಲ್ಲಾ ! ಒಂದು ಮಾತ್ರ ವಿಚಿತ್ರ. ದಿನಾ ಒಂದುಸಲ ಹೋಗೋದು, ಹುಲ್ಲಿನ ಮೆದೆಹತ್ರ ಕುಂತು ನಮ್ಮಮ್ಮ ನಿಗೆ ನಾಹಿಂಗೆ ಕುಂತುಕೊಂಡರೆ ಬೋ ಚೆನ್ನ ಅಂದು ಒಂದು ಕಡ್ಡೀ ಕಡಿಯೋಷ್ಟು ಹೊತ್ತು ಅಲ್ಲಿದ್ದು ಬರೋದು. ಒಂದುದಿನ ತಪ್ಪಿಸೋದಿಲ್ಲ ವಲ್ಲ. ಅವರಪ್ಪನ್ನಾದರೂ ಮರೆತಾಳು. ಅಮ್ಮನ್ನ ಮರೆಯೋದೇ ಇಲ್ಲ.”

ಕೆಂಪಿಗೆ ಆನಂದದಲ್ಲಿ ಮೈಮರೆತು ಹೋಗಿತ್ತು. ಅರ್ಧ ಜ್ಞಾನದಲ್ಲಿದ್ದಂತೆ ಆ ಮಾತು ಕೇಳಿದಳು. ಆ ವೇಳೆಗೆ ಮಲ್ಲಿಯು ಒಳಗೆ ಬಂದಳು, ಕೈಯಲ್ಲಿದ್ದ ವಿಪ್ ತಿರುಗಿಸುತ್ತಾ “ಅವ್ವಾ! ನಾ ಹೆಂಗಿದೀನಿ !” ಎಂದಳು.

“ಅಂಯ್ ! ನನ್ನ ಚಿನ್ನಾ!” ಎಂದು ತಬ್ಬಿ ಮುತ್ತಿಟ್ಟುಕೊಂ ಡಳು. ಕೆಂಪಿಯ ತುಟಿಯಲ್ಲಿದ್ದ ತಾಂಬೂಲದ ಕೆಂಪು ಮಲ್ಲಿಯ ಕೆನ್ನೆ ಯನ್ನು ಅಲಂಕರಿಸಿತು. ಮಲ್ಲಿಯು ಎದುರಿನ ನಿಲುಗನ್ನಡಿಯಲ್ಲಿ ಅದನ್ನು ತೋರಿಸುತ್ತಾ “ನಮ್ಮವ್ವ ಕೊಟ್ಟ ವರ! ಆದರೆ ಅವ್ವ, ಖಾವಂದರ ಜೊತೆಯಲ್ಲಿ ಕುದುರೆ ಹತ್ತಬೇಕಲ್ಲಾ !” ಎಂದಳು.

ಕೆಂಪಿಯು ಏನೋ ಅಪರಾಧಮಾಡಿದವಳಂತೆ ಬೆಚ್ಚಿದಳು. ಆನಂದಮ್ಮನು ಥಟ್ಟನೆ. ಬಂದು ಕೆನ್ನೆಯಮೇಲಿದ್ದ ಕೆಂಪನ್ನು ನಾಜೋ ಕಾಗಿ ಸೆರಗಿನಿಂದ ವರಿಸಿ, ಆದೂ ಒಂದು ಸೊಗಸಾಗುವಂತೆ ಮಾಡಿದಳು.

ರಾಣಿಗೆ ಆನಂದಮ್ಮನ ಚಾತುರ್ಯ ನಾಜೋಕುತನ ಬಲು ಸೊಗ ಸಿತು. ಆಕೆಯ ಕಣ್ಣು ಈಕೆಯ ಕಣ್ಣನ್ನು ಸಂಧಿಸಿದಾಗ ಭಲೇ ಎಂದು ಮೆಚ್ಚುಗಾಣಿಕೆಯನ್ನು ಒಪ್ಪಿಸಿದುವು.

ಇತ್ತ ನಾಯಕನು ದಿವಾನ್ಖಾನೆಗೆ ಬಂದು ಶಂಭುರಾಮಯ್ಯ ನನ್ನು ಕಂಡನು. ನಾಯಕನ ಸೂಕ್ಷ್ಮದೃಷ್ಟಿ ಇವನು ಇಂಥವನೇ ಎಂಬುದನ್ನು ಥಟ್ಟನೆ ಕಂಡುಕೊಂಡಿತು. ಇಸ್ಪೆಕ್ಟರ್ ರಜಾಕ್ ಹೇಳಿದ್ದ ಮನುಷ್ಯ ಈತನೇ ಇರಬಹುದೋ ಎನ್ನಿಸಿತು. ಆದರೂ ‘ವಚ್ಚ’ ಕೊಡದೆ ಮಾತನಾಡಿದನು. ಆದರೂ ಏನೂ ತಿಳಿಯದವ ನಂತೆ “ನಮ್ಮ ಹಿರಿಯರು ತಮ್ಮನ್ನು ಬಹಳ ಕೊಂಡಾಡುತ್ತಿದ್ದಾರೆ. ಒಂದು ಸಲ ನಮ್ಮೂರಿಗೂ ಬನ್ನಿ. ” ಎಂದನು.

ಶಂಭುರಾಮಯ್ಯನು ತನ್ನೊಳಗೆ ಆದ ಗಡಿಬಿಡಿಯನ್ನೆಲ್ಲಾ ಒಳಗೇ ಇಟ್ಟುಕೊಂಡು, “ತಮ್ಮಂತ ಲಕ್ಷ್ಮೀಪುತ್ರರ ಪರಿಚಯ ಲಭಿಸಿದುದು ನಮ್ಮ ಅದೃಷ್ಟ ! ಆಗಲಿ, ಬರುತ್ತೇನೆ ಎಂದನು.

ನಿಯತಕಾಲದಲ್ಲಿ ಹೊರಟು ಎಲ್ಲರೂ ಕನ್ನಂಬಾಡಿಯನ್ನು ಸೇರಿದರು. ದಿವಾನರು ಬಂದಿದ್ದಾರೆ. ನಾಯಕನನ್ನು ಕಂಡು ಅವರಿಗೆ ಬಹು ಸಂತೋಷವಾಯಿತು: “ವೆರಿಗುಡ್, ರಾವ್ ಬಹದ್ದೂರ್. ಬನ್ನಿ. ಈತ ಯಾರು?” ಎಂದು ಮಲ್ಲಿಯನ್ನು ತೋರಿಸಿ ಕೇಳಿದರು.

ನಾಯಕನು ಏನು ಹೇಳಬೇಕೆಂದು ಯೋಚಿಸುತ್ತಿರುವಾಗ, ಅವರೇ, “ಪರ್ಹ್ಯಾಪ್ಸ್ ಯುವರ್ಸನ್, ಏನು ಓದುತ್ತಾನೆ? ಇಂಗ್ಲೀಷ್ ಓದಿಸಬೇಕು.” ಎಂದು ಚೇಕ್ ಹ್ಯಾಂಡಿಗೆ ಕೈನೀಡಿದರು.

ಮಲ್ಲಿಯು ನಾಚಿ ನಾಯಕನ ಮೊಕವನ್ನು ನೋಡಿದಳು.

ದಿವಾನರು “ಓ! ಷೈ? ಡಸೆಂಟ್ ಮಾಟರ್. ಎ ಗರ್ಲ್! ಐಸೀ, ವೆರಿಗುಡ್,” ಎಂದು ಕಟ್ಟೆಯಕಡೆ ತಿರುಗಿದರು.

ಅಷ್ಟು ಹೊತ್ತು ಕಟ್ಟಡದವಲೆಲ್ಲಾ ತಿರುಗಿದರು. ಅವರ ಜೊತೆಯಲ್ಲಿ ನಾಯಕನೂ ಹೋದನು. ನಾಯಕನ ಜೊತೆಯಲ್ಲಿ ಮಲ್ಲಿಯೂ ಹೋದಳು.

ಎಲ್ಲವನ್ನೂ ಸುತ್ತಿಕೊಂಡು ಹಿಂತಿರುಗುವಾಗ ದಿವಾನರು “ಏನು. ರಾವ್ ಬಹದ್ದೂರರೆ ಹೇಗಿದೆ ?” ಎಂದರು.

” ಏನು” ಮಹಾಸ್ವಾಮಿ, ಈ ನೀರು ನಮ್ಮವರಿಗೆ ಬಂದಕ್ಕೆ ಚಿನ್ನ ಹಾಕಿ ಚಿನ್ನಬೆಳೆದೆೇವು.”

“ಬರುತ್ತದೆ ಬರುತ್ತದೆ, ಕಾವೇರಮ್ಮ ಮೈಸೂರನ್ನು ನಂದನ ವನ ಮಾಡುತ್ತಾಳೆ. ಮೈಸೂರಲ್ಲಿ ತಂಜಾವೂರಿನಹಾಗೆ ಭತ್ತದ ಖಣಜ ಆಗುತ್ತದೆ.”

” ಬುದ್ದಿ, ಕಾವೇರಮ್ಮ ನಮ್ಮಕಡೆ ಯಾವಾಗ ಬಂದಾಳೋ ? ಎಂತೋ? ತಾವನಕ ಬಠಬೋದಲ್ಲ ?”

ದಿವಾನರು ಹಾಗೇ ನಿಂತು “ಮಿ

ಸೆಕ್ರೆಟರಿ, ನೋಟ್ಇಟ್ ಡೌನ್. ವಿ ಆರ್ ಗೋಯಿಂಗ್ ಟು ರಾವ್ಬಹದೂರ್ ನೆಕ್ಸ್ಟ್ ವೀಕ್” ಎಂದರು. ನಾಯಕನು ಸಮ್ಮತಿಸಿ ಕೈಮುಗಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಮಾತ್ಮ
Next post ಈ ಹೂವಿನ ಕೋಲೇ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…