ಕಳಕೊಂಡವನು

ಕಳಕೊಂಡವನು

ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ ಮೇಲೆತ್ತಿ ಆ ಊರಿನ ಮೇಲೆ ಕಣ್ಣಾಡಿಸಿದ, ಅವನಿಗೆ ಆಶ್ಚರ್ಯ ಕಾದಿತ್ತು. ಇದು ನನ್ನ ಹುಟ್ಟೂರೇ ಎಂಬ ಸಂಶಯ ಅವನನ್ನು ಕಾಡತೊಡಗಿತು. ಸುಮಾರು ಐವತ್ತು ವರ್ಷದ ನಂತರ ಅವನು ತನ್ನ ಜನ್ಮ ಭೂಮಿಗೆ ಮರಳಿ ಬಂದಿದ್ದಾನೆ. ಸಾವಿರಾರು ನೆನಪುಗಳನ್ನು, ಕನಸುಗಳನ್ನು ಸಂತೋಷವನ್ನು ಹೊತ್ತು ಕೊಂಡು ತನ್ನೂರಿಗೆ ಬಂದ ಅವನಿಗೆ ಬಹಳ ದೊಡ್ಡ ನಿರಾಶೆಯಾಯಿತು. ಇಲ್ಲ, ಇದು ನನ್ನೂರು ಅಲ್ಲ. ಈ ಕಾಂಕ್ರಿಟ್ ನಗರ ನನ್ನೂರು ಅಲ್ಲವೇ ಅಲ್ಲ. ಇದು ನನ್ನೂರು ಆಗಲು ಸಾಧ್ಯವೇ ಇಲ್ಲ. ಅವನ ಮುಖ ಬಾಡಿತು. ಬರುವಾಗಿನ ಉಲ್ಲಾಸ ಮಾಯವಾಯಿತು. ತನ್ನ ಬಗಲಿಗೆ ಹಾಕಿ ಕೊಂಡ ಚೀಲದಿಂದ ನೀರಿನ ಬಾಟಲಿಯನ್ನು ಹೊರ ತೆಗೆದು ಅದರ ಮುಚ್ಚಳ ತೆರೆದು ಬಾಟಲಿಯನ್ನು ಬಾಯಿಗೆ ಒತ್ತಿಕೊಂಡ ಗಳಗಳನೆ ನೀರು ಕುಡಿದ. ಬಾಟಲಿಯನ್ನು ಮುಚ್ಚಿ ಚೀಲದಲ್ಲಿ ತುರುಕಿದ. ತನ್ನ ಜುಬ್ಬಾದಲ್ಲಿ ಅಡಗಿದ ಕರ್ಚಿಪನ್ನು ಹೊರ ತೆಗೆದು ಮುಖ ಒರಸಿಕೊಂಡ.

ಅವನು ರಸ್ತೆಯನ್ನು ಗಮನಿಸಿದ. ಸುಮಾರು ಹದಿನೈದು ಅಡಿ ಅಗಲಕ್ಕೆ ಹಾಕಿದ ಡಾಮರು ರಸ್ತೆ ಉದ್ದಕ್ಕೆ ಚಾಚಿಕೊಂಡಿತ್ತು. ರಸ್ತೆಯ ಇಕ್ಕೆಲಗಳಲ್ಲೂ ಬಾರ್‌ಗಳು, ಹೋಟೆಲ್‌ಗಳು, ಬೇಕರಿಗಳು, ಫಾಸ್ಟ್ ಫುಡ್ ಅಂಗಡಿಗಳು, ಬಟ್ಟೆ ಬರೆಯ ಅಂಗಡಿಗಳು, ಹಾರ್ಡ್‌ವೇರ್ ಅಂಗಡಿಗಳು, ದಿನಸಿನ ಹಾಗೂ ಡ್ರೈಕ್ಲೀನರ್ ಶಾಪ್‌ಗಳು ತೆರೆದು ಕೊಂಡಿದ್ದುವು. ಅವನು ಸ್ವಲ್ಪ ಮುಂದೆ ನಡೆದ. ಹಣ ತೆಗೆಯುವ ಎಟಿಯಂ ಕಟ್ಟಡ, ಬ್ಯಾಂಕ್ ಹಾಗೂ ಫೈನಾನ್ಸ್ ಅಂಗಡಿಗಳು ಕಂಡು ಬಂದುವು. ತನ್ನ ದೃಷ್ಟಿಯನ್ನು ಸ್ವಲ್ಪ ದೂರಕ್ಕೆ ಹಾಯಿಸಿದ ಹಲವು ಮಳಿಗೆಗಳ ಐಷಾರಾಮಿ ಮನೆಗಳು ಅವನ ಕಣ್ಣಿಗೆ ಬಿದ್ದುವು. ಒಂದು ಮಳಿಗೆಯ, ಎರಡು ಮಳಿಗೆಯ ಬಂಗ್ಲೆಗಳು. ಅವುಗಳಿಗೆ ಅಂಗ ರಕ್ಷಕನೆಂಬಂತೆ ಕಾಣುವ ಕಲ್ಲಿನ ಕಾಂಪೌಂಡುಗಳು ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದ್ದುವು. ಮಣ್ಣಿನ ನೆಲವನ್ನು ಚುಂಬಿಸುವ ಹಸಿರು ಲಾನ್ಸ್‍ಗಳು, ಮನೆಗೆ ಶೋಭೆಯಂತೆ ಕಾಣುವ ಬೃಹದಾಕಾರದ ಗೇಟುಗಳು, ನಾಯಿಗಳು ಇಲ್ಲದಿದ್ದರೂ ಬಡವರನ್ನು, ಬಿಕ್ಷುಕರನ್ನು, ಬೇಡುವವರನ್ನು ಹೆದರಿಸಲು ಹಾಕಿದ ನಾಯಿ ಚಿತ್ರದ ಎಚ್ಚರಿಕೆಯ ಫಲಕಗಳು, ಮನೆಯ ಗೇಟನ್ನು ಆತುಕೊಂಡು, ಬಲಬದಿಯ ಕಂಬದಲ್ಲಿ ಸಂಪತ್ತನ್ನು ನೀಡಿದ ದೇವರ ನಾಮವನ್ನು ಚಂದ್ರಕಾಂತ ಶಿಲೆಯಲ್ಲಿ ಕೆತ್ತಿದ ಅಕ್ಷರಗಳು ಎಡ ಕಂಬದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಬರೆದ ಮನೆಯ ವಾರಸುದಾರನ ಹೆಸರುಗಳು.

ತೀಕ್ಷಣವಾದ ಉರಿಬಿಸಿಲು ಅವನನ್ನು ತಿವಿಯುತ್ತಿದ್ದರೂ ಅವನು ದಿಕ್ಕು ಕಾಣದವನಂತೆ ಮತ್ತು ಕಿವಿಗೆ ಗಾಳಿ ಹೊಕ್ಕಿದ ಕರುವಿನಂತೆ ರಸ್ತೆಯ ಉದ್ದಕ್ಕೂ ಹಿಂದೆ ಮುಂದೆ ನಡೆಯುತ್ತಿದ್ದ. ಜನ ಜಂಗುಳಿಯಿಂದ ರಸ್ತೆ ತುಂಬಿ ಹೋಗಿತ್ತು. ಪಕ್ಕದಲ್ಲಿ “ರಿಕ್ಷಾ ತಂಗುದಾಣ” ಎಂದು ಬೋರ್ಡು ಹಾಕಿಕೊಂಡು ಲೈನಾಗಿ ನಿಂತ ರಿಕ್ಷಾಗಳು, ಪ್ರತೀ ರಿಕ್ಷಾದ ಹೊರಗೆ, ರಿಕ್ಷಾಕ್ಕೆ ತಾಗಿ ಗಿರಾಕಿಗಳ ಅನ್ವೇಶಣೆಯಲ್ಲಿ ನಿಂತ ಖಾಕಿ ಡ್ರೆಸ್ಸಿನ ಡ್ರೈವರ್‌ಗಳು. ಪಕ್ಕದಲ್ಲೇ ರಸ್ತೆಯ ಬದಿಗೆ ತಾಗಿ, ನೆಲದಲ್ಲಿ ಕುಳಿತು ಹಸಿರು ಪ್ಲಾಸ್ಟಿಕ್ ಶೀಟಿನಲ್ಲಿ ಮೀನುಗಳನ್ನು ರಾಶಿ ಹಾಕಿ ತಮ್ಮ ಬಲಗೈಯಿಂದ ನೊಣಗಳನ್ನು ಓಡಿಸುತ್ತಾ, ಆಗಾಗ್ಗೆ ಮೀನುಗಳ ಮೇಲೆ ನೀರನ್ನು ಸಿಂಪಡಿಸುತ್ತಾ, ತಮ್ಮ ತೊಡೆಗಳನ್ನು ವಿವಿಧ ಭಂಗಿಗಳಲ್ಲಿ ಅನಾವರಣಗೊಳಿಸಿಕೊಂಡು ಕುಳಿತ ಮೀನು ಮಾರಾಟದವರು, ಮೀನುಗಳ ಖರೀದಿಗೆ ಮುಗಿ ಬಿದ್ದ ಬಡವರು, ಬಲ್ಲಿದರು. ಅಲ್ಲಿಯೇ ಚೆಲ್ಲಿದ ಮೀನಿನ ನೀರಿಗೆ ಮುಗಿಬಿದ್ದ ನೊಣಗಳು, ಮೀನಿನ ಕೊಳೆತ ಅವಶೇಷಗಳಿಗೆ ಮುಗಿ ಬಿದ್ದ ನಾಯಿಗಳು, ಹಂದಿಗಳು, ಕೋಳಿಗಳು, ಅಲ್ಲಲ್ಲಿ ಸಾಮಾಗ್ರಿಗಳನ್ನು ಅನ್‌ಲೋಡು ಮಾಡಲು ನಿಂತ ಲೋರಿಗಳು, ವ್ಯಾನ್‌ಗಳು. ಇವರ ಮಧ್ಯೆ ದಾರಿ ಮಾಡಿಕೊಂಡು ಓಡಾಡುತ್ತಿರುವ ಕೂಲಿ ಕಾರ್ಮಿಕರು, ರೈತರು, ವ್ಯಾಪಾರಸ್ಥರು, ಹುಡುಗ ಹುಡುಗಿಯರು, ವಯೋವೃದ್ದರು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು. ಬಿಳಿ ಕೋಟು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಎದೆಯ ಮೇಲೆ ಸ್ಟೆತಾ ಸ್ಕೋಪು ಧರಿಸಿ, ಅರ್ಧಧ್ರ ಇಂಗ್ಲೀಷ್, ಕನ್ನಡ, ಮಲೆಯಾಳಂ ಭಾಷೆ ಸೇರಿಸಿ ಮಾತಾಡುವ ವೈದ್ಯಕೀಯ ಕೋರ್ಸು ಕಲಿಯುವ ನರ್ಸುಗಳು, ಡಾಕ್ಟರುಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ವಾಹನಗಳು, ಅವುಗಳ ಕರ್ಕಶ ಹಾರ್‍ನು ಶಬ್ದಗಳು, ಎದೆ ಮಟ್ಟಕ್ಕೆ ಹಾರಿ ಬರುವ ಧೂಳು, ಗಾಳಿ, ಮೀನಿನ ದುರ್ನಾತ. ರಾಜಕೀಯ ಹಾಗೂ ಧಾರ್ಮಿಕ ಸಭೆಗಳ ಕಾರ್ಯಕ್ರಮಗಳನ್ನು ಮೈಖದಲ್ಲಿ ಜೋರಾಗಿ ಬಿತ್ತರಿಸುವ ಒಂದೆರಡು ರಿಕ್ಷಾಗಳು. ಏನೋ ಕಳಕೊಂಡಂತೆ ಅವನು ಗಾಬರಿಯಾಗಿ ಹೋದ. ಮತ್ತೆ ಯಥಾ ಸ್ಥಾನಕ್ಕೆ ಬಂದ. ಮುಂದಿನ ಅವನ ಗುರಿ ಅಸ್ಪಷ್ಟವಾಗಿತ್ತು. ಅವನು ಮತ್ತೊಮ್ಮೆ ತನ್ನ ಊರನ್ನು ನೋಡಿದ. ಹೌದು. ಅದೇ ಆಕಾಶ, ಅದೇ ಭೂಮಿ, ಆದರೆ ಸುತ್ತಲಿನ ಮರ, ಗಿಡ, ಬೆಟ್ಟ, ತೊರೆ, ಕಾಲುವೆ, ಗದ್ದೆಗಳು, ತೋಟಗಳು ಎಲ್ಲಿ ಮಾಯಾವಾದುವು? ಐವತ್ತು ವರ್ಷದ ಹಿಂದೆ ಮನುಷ್ಯ ನಡೆದು ಕೊಂಡು ಹೋಗಲು ಮೂರು ಅಡಿ ಅಗಲದ ಮಣ್ಣಿನ ಕಾಲುದಾರಿ ಮಾತ್ರ ಇಲ್ಲಿ ಇತ್ತು. ಆ ಕಾಲುದಾರಿಯ ಇಕ್ಕೆಲಗಳಲ್ಲಿ ಮಣ್ಣಿನ ಗೋಡೆಯಿಂದ ಅಲಂಕೃತವಾದ ವಿಸ್ತಾರವಾದ ತೋಟಗಳು, ಆ ತೋಟಗಳಲ್ಲಿ ಫಲಬರುವ ಕಸಿಯ ಚುಕ್ಕು, ನೇರಳೆ, ಮಾವು, ಪೇರಳೆ, ಲಿಂಬೆ ಹಾಗೂ ಗೇರು ಮರ ಗಿಡಗಳು, ಅವುಗಳಿಗೆ ರಕ್ಷಣೆಗೆ ನಿಂತ ಯೋಧರಂತೆ ಸುತ್ತಲೂ ಕಾಣುವ ಮರಗಳು, ಸೂರ್ಯ ತನ್ನ ಕಿರಣವನ್ನು ತೋಟದ ಒಳ ಹೊಕ್ಕಿಸಲು ಆಗದೆ ವಿಫಲನಾಗಿ ಮೇಲಿಂದಲೇ ತನ್ನ ಕಾರ್ಯವನ್ನು ಮಾಡಿ ಮುಗಿಸುತ್ತಿದ್ದ. ಅಂತಹ ಮರಗಿಡಗಳಿಂದ ತುಂಬಿದ ತೋಟಗಳು, ಗದ್ದೆಗಳು, ತೊರೆಗಳು ಎಲ್ಲಿ ಹೋದವು? ಎರಡು ಮೂರು ಫರ್ಲಾಂಗಿಗೆ ಒಂದರಂತೆ ಇದ್ದ ಬೆರಳೆಣಿಕೆಯ ಹಂಚಿನ ಹಾಗೂ ಮುಳಿ ಹುಲ್ಲಿನ ಮನೆಗಳು ಎಲ್ಲಿಗೆ ವಲಸೆ ಹೋದುವು? ಹಣಬೆಯಂತೆ ರಾಶಿ ಬಿದ್ದ ಈ ಕಾಂಕ್ರಿಟ್ ಮನೆಗಳೆಲ್ಲಿ? ಆ ತೋಟಗಳೆಲ್ಲಿ? ಅವನು ಮಂಜಾದ ತನ್ನ ಕಣ್ಣುಗಳನ್ನು ಒರಸಿಕೊಂಡ. ತಾನು ಊರಿಗೆ ಬರಬಾರದಿತ್ತು. ಈ ಚಿತ್ರಣ ಅವನ ಕಣ್ಣಿಂದ ನೋಡಲಾಗಲಿಲ್ಲ. ಏಕೋ ತಲೆ ತಿರುಗಿದಂತಾಗಿ ಅಲ್ಲಿಯೇ ಹತ್ತಿರದಲ್ಲಿದ್ದ ಕ್ಯಾಸೆಟ್ ಅಂಗಡಿಯ ಮುಂದೆ ಗೋಡೆಗೆ ಆತು ನಿಂತು ಬಿಟ್ಟ.

ಚಿಗುರು ಮೀಸೆ ಪುಟಿಯುತ್ತಿರುವ ಯುವಕನೊಬ್ಬ ಕ್ಯಾಸೆಟ್ ಅಂಗಡಿಯ ಒಳಗಿನಿಂದ ಹೊರಗೆ ಬಂದ. ತನ್ನ ಎದುರು ಸುಸ್ತಾಗಿ ನಿಂತ ವ್ಯಕ್ತಿಯನ್ನು ಒಮ್ಮೆ ದೃಷ್ಟಿಸಿದ. ಅಚ್ಚ ಬಿಳಿ ಧೋತಿ, ಕೇಸರಿ ಬಣ್ಣದ ಉದ್ದ ಕೈಯ ನಿಲುವಂಗಿ, ಕಪ್ಪು ಬಿಳಿ ಮಿಶ್ರಿತ ಗಡ್ಡ, ಮೀಸೆ, ಅಲ್ಪ ಸ್ವಲ್ಪ ಉಳಿದಿರುವ ಕೆದರಿಂದ ತಲೆ ಕೂದಲು, ಓಬಿರಾಯನ ಕಾಲದ ಕನ್ನಡಕ, ಹೆಗಲಿಗೆ ಸಾಹಿತಿಯ ನಿಶಾನಿಯಂತೆ ಹಾಕಿಕೊಂಡ ಉದ್ದನೆಯ ಚೀಲ, ಈ ವ್ಯಕ್ತಿಯನ್ನು ಯಾವ ಪಂಗಡಕ್ಕೆ ಸೇರಿಸುವುದು ಎಂಬ ನಿರ್ಣಯಕ್ಕೆ ಬರಲಾರದೆ ಯುವಕ ಚಡಪಡಿಸಿದ. ಒಳಗಿಂದ ಒಂದು ಹರಕು ಮುರುಕು ಸ್ಟೂಲನ್ನು ತಂದು ಹೊರಗಿಟ್ಟು “ಕುಳಿತು ಕೊಳ್ಳಿ ಸಾರ್” ಅಂದ. ಸಭ್ಯತೆ, ಸಂಸ್ಕಾರ ಇನ್ನೂ ಉಳಿದಿದೆ ಈ ಊರಲ್ಲಿ ಎಂದು ಮನದಲ್ಲೇ ನೆನೆದು ಕೊಂಡು ಹುಡುಗನ ಮುಖ ನೋಡಿ ನಕ್ಕು ಅವನು ಕುಳಿತುಕೊಂಡ. ಅವನ ಭಾರಕ್ಕೆ ಸ್ಕೂಲು “ಚರಕ್ – ಚುರುಕ್” ಅಂದಿತು. ಸ್ವಲ್ಪ ಆರಾಮವೆನಿಸಿತು ಅವನಿಗೆ.

“ಎಲ್ಲಿಗೆ ಹೋಗಬೇಕಾಗಿತ್ತು ಸಾರ್” ಯುವಕ ತನ್ನ ಕಾತರವನ್ನು ತಡೆಯಲಾರದೆ ಕೇಳಿದ. ಈ ವ್ಯಕ್ತಿ ಈ ಊರಿನವನಲ್ಲ ಎಂದು ಅವನಿಗೆ ಮೊದಲೇ ಖಾತ್ರಿಯಾಗಿತ್ತು. ಅವನು ಕನ್ನಡಕವನ್ನು ತೆಗೆದು ಕೈಯಲ್ಲಿ ಹಿಡಿದು ಕೊಂಡ ಜುಬ್ಬಾದ ಕಿಸೆಯಿಂದ ಕರ್ಚಿಪು ತೆಗೆದು ಮುಖವನ್ನು ಮತ್ತೊಮ್ಮೆ ವರೆಸಿಕೊಂಡ. ಯುವಕ ಅವನ ಉತ್ತರಕ್ಕಾಗಿ ಕಾಯುತಿದ್ದ. ತನ್ನ ಊರಲ್ಲಿ ತಾನೇ ಪರಕೀಯನಾದನೇ? ಇಲ್ಲದಿದ್ದರೆ ಈ ಹುಡುಗ ನನ್ನ ಊರಿನ ಬಗ್ಗೆ ನನಗೇ ಪ್ರಶ್ನೆ ಹಾಕುತಿದ್ದಾನೆ.

“ನನಗೆ ಪಕ್ಕಲಡ್ಕಕ್ಕೆ ಹೋಗಬೇಕಾಗಿತ್ತು. ಸ್ವಲ್ಪ ದಾರಿ ಹೇಳಬಹುದಾ?” ಹುಡುಗ ಗಾಬರಿಯಾದ.

“ಪಕ್ಕ… ಪಕ್ಕ…” ಇಲ್ಲಿ ಅಂತಹ ಹೆಸರಿನ ಊರಿಲ್ಲವಲ್ಲಾ? ಈ ಊರು ಸಂತೋಷ ನಗರ. ಇದರ ಪಕ್ಕದ ಊರು ಫೈಸಲ್ ನಗರ. ಅದರಾಚೆ ಶಕ್ತಿನಗರ, ಉಲ್ಲಾಸನಗರ, ನೀವು ದಾರಿ ತಪ್ಪಿ ಬಂದಿರುವಿರಿ.”

ಅವನಿಗೆ ಗಾಬರಿಯಾಯಿತು. ಅವನು ಮತ್ತೊಮ್ಮೆ ಎದ್ದು ನಿಂತು ದೂರಕ್ಕೆ ದೃಷ್ಟಿಸಿದ. ತನ್ನ ಬಾಲ್ಯ ಹಾಗೂ ಯೌವನವನ್ನು ಕಳೆದ ಆ ಊರಿನ ಅವಶೇಷ ಇನ್ನೂ ಸ್ವಲ್ಪ ಉಳಿದಿತ್ತು.

“ಇದು ಕಂಕನಾಡಿ ಗ್ರಾಮ ಹೌದಾದರೆ ಇಲ್ಲಿ ಪಕ್ಕಲಡ್ಕ ಇರಲೇಬೇಕು”. ಅವನು ತನ್ನ ವಾದವನ್ನು ಬಲವಾಗಿ ಸಮರ್ಥಿಸಿಕೊಂಡ. ಅಲ್ಲಿಯೇ ಪಕ್ಕದಲ್ಲಿ ನಿಂತುಕೊಂಡು ಪೇಪರ್ ಓದುತ್ತಾ ಬೀಡಿ ಸೇದುತ್ತಾ ನಿಂತ, ಸುಮಾರು ಎಂಭತ್ತು ವರ್ಷ ಪ್ರಾಯದ ಮುದುಕರೊಬ್ಬರು ಇವರ ಸಂಭಾಷಣೆಯನ್ನು ಆಲಿಸುತ್ತಿದ್ದರು. ಅವರು ಆತನ ಬಳಿಗೆ ಬಂದು ಅಂದರು. “ಅವನು ಹುಡುಗ. ಅವನಿಗೇನು ಗೊತ್ತು ಈ ಊರಿನ ಪುರಾತನ ವಿಷಯಗಳು ಇದು ಪಕ್ಕಲಡ್ಕ. ಇದನ್ನು ಪಕ್ಕಲಪಡ್ಪು ಎಂತಲೂ ಕರೆಯುತ್ತಾರೆ. ಈಗ ಇದು ಸಂತೋಷ ನಗರವಾಗಿದೆ. ಆದರೆ ಸಂತೋಷ ಮಾತ್ರ ಮಾಯವಾಗಿದೆ. ಅಂದ ಹಾಗೆ ನಿಮಗೆ ಎಲ್ಲಿಗೆ ಹೋಗಬೇಕಿತ್ತು?” ಅವನು ಮುದುಕನನ್ನು ದೃಷ್ಟಿಸಿ ನೋಡಿದ. ಮತ್ತು ತನ್ನ ಐವತ್ತು ವರ್ಷದ ಹಿಂದಿನ ಪರಿಚಯ ಹೇಳಿದ, ಮುದಕನಿಗೆ ಸಂತೋಷವಾಯಿತು. “ನೀವೆಲ್ಲಾ ಕುಟುಂಬ ಸಮೇತ ಈ ಊರು ಬಿಟ್ಟು ಹೋದ ಮೇಲೆ ಇಲ್ಲಿ ತುಂಬಾ ಬದಲಾವಣೆಯಾಗಿದೆ. ನಿಮ್ಮ ಪರಿಚಯದವರು ಸಿಗುವುದು ಬಹಳ ಕಷ್ಟ, ಎಲ್ಲಾ ಬದಲಾಗಿದೆ. ಬಸ್ಸಿನ ವ್ಯವಸ್ಥೆ, ದಾರಿಯ ಸವಲತ್ತು ಆದದ್ದೇ ತಡ, ನಮ್ಮ ಹಳ್ಳಿ ಮಾಯವಾಗಿ ಪಟ್ಟಣವಾಗಿದೆ. ಇಲ್ಲೀಗ ಹೆಚ್ಚಿನವರು ಹೊರ ಊರಿಂದ ಬಂದವರು. ನಿಮ್ಮ ಕಾಲದವರು ನಿಮ್ಮ ಹಾಗೆ ಆಸ್ತಿ ಮಾರಿ ಬೇರೆ ಕಡೆ ನೆಲೆಸಿದ್ದಾರೆ, ಕೆಲವರು ತೀರಿ ಹೋಗಿದ್ದಾರೆ. ಸುಮ್ಮನೆ ಬೇಕಾದರೆ ನಿಮ್ಮ ಪಕ್ಕಲಡ್ಕಕ್ಕೆ ಒಂದು ಸುತ್ತು ಹೋಗಿ ಬನ್ನಿ, ಆದರೆ ನಿಮಗೆ ಹಿಂದಿನ ಚಿತ್ರಣ ಖಂಡಿತ ಸಿಗಲಾರದು. ಮುದುಕ ಆತನಿಗೆ ಮತ್ತಷ್ಟು ನಿರಾಶೆ ಮೂಡಿಸಿದ. ಅವನು ಎದ್ದು ನಿಂತ. ಅವರಿಬ್ಬರಿಂದ ಬೀಳ್ಕೊಟ್ಟು ಮುಂದಕ್ಕೆ ಹೆಜ್ಜೆ ಹಾಕಿದ.

ಅವನಿಗೆ ಪ್ರತೀ ಹೆಜ್ಜೆಯೂ ಭಾರವಾಗುತ್ತಿತ್ತು. ನಾಶವಾಗಿ ಹೋದ ತನ್ನ ಹಳ್ಳಿಯ ಕುರಿತು ಅವನಿಗೆ ದುಃಖವಿತ್ತು. ಬೇಸರವಿತ್ತು. ಆ ಬೇಸರ, ದುಃಖ ಅವನ ಮುಖದಲ್ಲಿ ಮಡುಗಟ್ಟಿತ್ತು. ಅವನು ಬಾಲ್ಯದಿಂದ ಯೌವನದವರೆಗೆ ಓಡಿಯಾಡಿದ ಸ್ಥಳಗಳು ಈಗ ಕಾಂಕ್ರೀಟೀಕರಣವಾಗಿದೆ. ಅವನು ಸ್ವಲ್ಪ ದೂರ ನಡೆದು ಒಂದು ತಿರುವಿನಲ್ಲಿ ನಿಂತು ಕೊಂಡನು. ಒಮ್ಮೆ ತಿರುಗಿ ಸುತ್ತಲೂ ನೋಡಿದ. ಹೌದು. ಬಾಲ್ಯದಲ್ಲಿ ಎಲ್ಲಾ ಪಡ್ಡೆ ಹುಡುಗರು ಆ ತಿರುವಿನಲ್ಲಿಯೇ ಸಂಧಿಸುತ್ತಿದ್ದರು. ಆ ಸಂಧಿಯಲ್ಲಿಯೇ ಅವರ ಕಾರ್ಯಕ್ರಮಗಳು ಕಾರ್ಯಗತ ಗೊಳ್ಳುತ್ತಿದ್ದುವು. ಎಡ ಬದಿಯಲ್ಲಿ ಜಲ್ಲಿ ಕಂಟ್ರಾಕ್ಟರ್ ಪೂವಪ್ಪ ಸಾಲಿಯಾನರ ತೋಟ, ಬಲಬದಿಯಲ್ಲಿ ಮಾಮು ಬ್ಯಾರಿಯವರ ತೋಟ, ಹಿಂದಿನ ಹಿತ್ತಿಲು ಲಿಯಾಂ ಪೊರ್ಬುಗಳದ್ದು. ಈ ಹಿತ್ತಿಲಲ್ಲಿ ಸೇರಿಕೊಂಡು ನಾವು ಕದ್ದ ಹಣ್ಣು ಹಂಪಲುಗಳೆಷ್ಟು? ಕುಡಿದ ಎಳೆ ನೀರುಗಳೆಷ್ಟು? ಎಲ್ಲಾ ಮಾಯವಾಗಿದೆ. ಆಧುನೀಕರಣದ ಭರಾಟೆಯಲ್ಲಿ ಕೃಷಿ, ತೋಟಗಳು ಮಾಯವಾಗಿ ಕಾಂಕ್ರೀಟು ಕಟ್ಟಡಗಳು ಸುತ್ತಲೂ ತಲೆಯೆತ್ತಿವೆ. ಅವನ ಕಣ್ಣುಗಳು ಮಂಜಾದುವು. ಆದರೂ ಅವನು ಮುಂದೆ ನಡೆದ. ಸುಮಾರು ಒಂದು ಫರ್ಲಾಂಗು ಡಾಮರಿನ ಮಾರ್ಗದಲ್ಲಿ ಮುಂದುವರಿದ ಮೇಲೆ ಅವನು ಗಕ್ಕನೆ ನಿಂತ, ಎಡಕ್ಕೆ ತಿರುಗಿ ನೋಡಿದ. ಇದು ಕುಂಠಾಲಗುಡ್ಡ, ಬೇಸಿಗೆ ಸಮಯದಲ್ಲಿ ಕುಂಠಾಲ (ಕಪ್ಪು ಬಣ್ಣದ ಸಣ್ಣ ನೇರಳೆ ಹಣ್ಣುಗಳು) ಹಣ್ಣುಗಳು ಹೇರಳವಾಗಿ ಬೆಳೆಯುತ್ತಿದ್ದುವು. ಉಪ್ಪಿನೊಂದಿಗೆ ತಿಂದರೆ ಅದರ ರುಚಿಯೇ ಬೇರೆ. ಬಾಯಿ, ನಾಲಗೆ ನೀಲಿಯಾಗುತ್ತಿದ್ದುವು. ಸಂಜೆ ಹೊತ್ತಿನಲ್ಲಿ ಗುಡ್ಡ ಹತ್ತಿ ತೋಟದಿಂದ ಕದ್ದು ತಂದ ಹಣ್ಣು ಹಂಪಲುಗಳನ್ನು ತಿಂದು ಕೊಂಡು ಸೂರ್ಯಾಸ್ತಮಾನವನ್ನು ನೋಡುತ್ತಿದ್ದೆವು. ಒಂದು ನರಹುಳಗಳೂ ಆ ಗುಡ್ಡಕ್ಕೆ ಸಂಜೆ ಆದ ಮೇಲೆ ಕಾಲಿಡುತ್ತಿರಲಿಲ್ಲ. ಯಾಕೆಂದರೆ ಅಲ್ಲಿ ಶವ ಸಂಸ್ಕಾರ ಮಾತ್ರ ಮಾಡುತ್ತಿದ್ದರು. ಅತೃಪ್ತ ಆತ್ಮಗಳು ಸುತ್ತುತ್ತಿರುತ್ತವೆ ಎಂಬ ಪ್ರತೀತಿ ಇತ್ತು. ಆದರೆ ನಮ್ಮ ವಯಸ್ಸಿಗೆ ಅದು ಯಾವುದೂ ಅನ್ವಯಿಸುತ್ತಿರಲಿಲ್ಲ. ಅವನು ಒಮ್ಮೆ ನಕ್ಕು ಆ ಗುಡ್ಡವನ್ನು ನೋಡಿದ. ಗಾಳಿ ಮರಗಳಿಂದ ತುಂಬಿದ್ದ ಆ ಗುಡ್ಡದಲ್ಲಿ ಸಂಜೆ ಹೊತ್ತು ಕುಳಿತು ಬೀಸುತ್ತಿರುವ ಗಾಳಿಯಲ್ಲಿ ಗಾಳಿಮರವು ಬಾಗುವಾಗ ಉಂಟಾಗುವ ನಿನಾದವನ್ನು ಆಲಿಸುತ್ತಿದ್ದ ಅಂದಿನ ರಸ ಘಳಿಗೆ ಅವನ ಮನದಾಳದಲ್ಲಿ ಮತ್ತೆ ಮೂಡಿ ಬಂತು. ಆದರೆ ಗಾಳಿ ಮರಗಳು, ಕುಂಠಾಲ ಗಿಡಗಳು ಈಗ ನಾಶವಾಗಿ ಗುಡ್ಡ ಬೋಳಾಗಿದೆ. ಅಲ್ಲಿ ಅಣಬೆಯಂತೆ ಐದು ಸೆಂಟ್ಸಿನ ಮನೆಗಳು ರಾರಾಜಿಸುತ್ತಿದೆ. ಗುಡ್ಡದ ತುದಿಯವರೆಗೆ ರಸ್ತೆಯಾಗಿದೆ. ವಿದ್ಯುತ್ ಬಂದಿದೆ. ಭೂತ – ಪ್ರೇತಗಳು ಓಡಿ ಹೋಗಿವೆ. ಗುಡಿ, ಮದ್ರಸ, ಚರ್ಚುಗಳು ತಲೆಯತ್ತಿವೆ. ಮೈಕಾಸುರನ ಅರ್ಭಟ ಕೇಳಿ ಬರುತ್ತದೆ. ಇನ್ನೊಂದು ಕಡೆ ಹುಡುಗರು ರಸ್ತೆ ಅಗೆದು ಶ್ರಮದಾನ ಮಾಡುತ್ತಿದ್ದರೆ ಮತ್ತೊಂದು ಕಡೆ ರಾಜಕಾರಿಣಿಗಳ ಸಭೆ ನಡೆಯುತ್ತದೆ. ಅವನ ಕಣ್ಣುಗಳು ಹನಿಗೂಡಿದುವು. ದುಃಖವನ್ನು ಹಂಚಿಕೊಳ್ಳೋಣ ಎಂದರೆ ಒಂದು ನರ ಹುಳವೂ ಅವನಿಗೆ ಪರಿಚಿತರಾಗಿ ಕಂಡು ಬರಲಿಲ್ಲ.

ಸಾಕು, ಇನ್ನು ಹಿಂತಿರುಗೋಣವೆಂದು ಅವನು ನಿರ್ಧರಿಸಿದ. ಕೂಡಲೇ ಅವನಿಗೆ ತನ್ನ ಪ್ರೀತಿಯ ನೇತ್ರಾವತಿ ಹೊಳೆಯ ನೆನಪಾಯಿತು. ಇಲ್ಲಿಂದ ಸುಮಾರು ಎರಡು ಫರ್ಲಾಂಗು ನಡೆದು ಹೋದರೆ ಬಯಲು ಪ್ರದೇಶ ಸಿಗುತ್ತದೆ. ಅದು ಮೈರೆಗುತ್ತು ಪಟೇಲ ವಸಂತ ಶೆಟ್ಟಿಯವರ ಮನೆ, ಗುತ್ತಿನ ಮನೆ. ಅವರ ಹೊಲ, ಗದ್ದೆ, ತೋಟ, ವರ್ಷಂಪ್ರತಿ ಅವರ ಗುತ್ತಿನ ಮನೆಯದುರು ನಡೆಯುವ ಹರಕೆಯ “ದೇವಿ ಮಹಾತ್ಮೆ” ಆಟ, ನೇತ್ರಾವತಿ ಹೊಳೆಯ ಬದಿಯ ತೊರೆಯಲ್ಲಿ ಈಜಾಟ, ಲೂಯಿಸರ ಮನೆಯಿಂದ ಮೀನಿನ ಬಲೆ ಕದ್ದು ತಂದು ಮೀನು ಹಿಡಿಯುವುದು, ಎಲ್ಲಾ ನೆನಪಾಗಿ ಒಮ್ಮೆ ಹೊಳೆ ಬದಿಗೆ ಹೋಗೋಣವೆಂದು ಮನಸ್ಸಾಗಿ ಅವನು ವೇಗವಾಗಿ ಮುಂದೆ ನಡೆದ, ಹಿಂದಿನಿಂದ ವೇಗವಾಗಿ ನುಗ್ಗಿ ಬಂದ ರಿಕ್ಷಾ ಒಂದು ಗಕ್ಕನೆ ನಿಂತುಕೊಂಡಿತು. “ಸೀ-ಶೋರ್, ಸೀ-ಶೋರ್” ಎನ್ನುತ್ತಾ ರಿಕ್ಷಾ ಡ್ರೈವರ್ ಕೂಗುತ್ತಿದ್ದ. ಅವನು ಬೇಡ ಎಂದು ತಲೆಯಲ್ಲಾಡಿಸಿದ. ತಾನು ನಡೆದು ಕೊಂಡೇ ಹೋಗುತ್ತೇನೆ. ನಡೆದು ಕೊಂಡೇ ಈ ಊರಿನಲ್ಲಿ ಬಾಲ್ಯ, ಯೌವನ ಕಳೆದಿದ್ದೇನೆ.

ಅವನು ಡಾಮರು ರಸ್ತೆಯಲ್ಲಿ ನಡೆದು ಕೊಂಡು ಹೋದ. ಎಷ್ಟು ನಡೆದರೂ ಅವನಿಗೆ ಪಟೇಲರ ಗುತ್ತಿನ ಹಂಚಿನ ಮನೆಯಾಗಲೀ, ಹೊಲ, ಗದ್ದೆ, ತೋಟಗಳಾಗಲೀ ಕಂಡು ಬರಲಿಲ್ಲ. ರಸ್ತೆಯ ಇಕ್ಕೆಲಗಳಲ್ಲೂ ಒಂದು ಮಹಡಿ, ಎರಡು ಮಹಡಿಯ ಬೃಹದಾಕಾರದ ಕಾಂಕ್ರಿಟ್ ಬಂಗಲೆಗಳು, ಕಲ್ಲಿನ ಕಾಂಪೌಂಡುಗಳು ಒಂದಕ್ಕೊಂದು ಪೈಪೋಟಿಯಾಗಿ ನಿಂತಿದ್ದುವು. ಅವನು ಮನೆಯ ಹೆಸರುಗಳನ್ನು ಓದುತ್ತಾ ಹೋದ. ಶಾಂತಿ ಸದನ, ದೇವಿ ಸದನ, ಮೇರಿ ವಿಲ್ಲಾ, ರಹ್ಮತ್ ಮಂಜಿಲ್, ಟ್ವಿಂಕ್ಲ್, ಮಾಶಾ ಅಲ್ಲ…. ಇನ್ನು ಏನೇನೋ. ಅವನು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿಕೊಂಡು ವೇಗವಾಗಿ ನಡೆಯುತ್ತಿದ್ದ. ಹೊಟ್ಟೆ ಚುರುಗುಟ್ಟುತಿತ್ತು. ತನ್ನ ಬಾಲ್ಯದ ನೇತ್ರಾವತಿ ಹೊಳೆ ಅನತಿ ದೂರದಲ್ಲಿ ಕಂಡಾಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಅವನ ಸಂತೋಷ ಕ್ಷಣ ಮಾತ್ರದಲ್ಲಿ ಮಾಯವಾಯಿತು. ಅವನು ಹೊಳೆ ಬದಿಯಲ್ಲಿ ನಿಂತು ಆ ಜನ ಸಂದಣಿಯನ್ನು ನೋಡಿದ. ಜನ ಜಾತ್ರೆಯಂತೆ ಸೇರಿತ್ತು. ರಿಕ್ಷಾಗಳು, ಕಾರುಗಳು, ಐಸ್‌ಕ್ಯಾಂಡಿ ಗಾಡಿಗಳು, ಅಲ್ಲಲ್ಲಿ ನಿಂತಿದ್ದುವು. ಪಾಸ್ಟ್‌ಫುಡ್ ಅಂಗಡಿ, ಬೇಲ್‌ಪುರಿ, ಪಾನಿಪುರಿ ಅಂಗಡಿಗಳು, ಕಬ್ಬಿನ ಹಾಲಿನ ಅಂಗಡಿಗಳು, ಗೂಡಂಗಡಿಗಳು ರಾಶಿ ರಾಶಿಯಾಗಿ ಠಿಕಾಣಿ ಹೂಡಿದ್ದುವು. ಮತ್ತೊಂದು ಕಡೆ ಮಾಂಸಾಹಾರಿ ಹೋಟೆಲ್‌ಗಳು, ಬಾರ್‌ಗಳು, ಅಲ್ಲಿಂದ ಬರುವ ಮೀನಿನ, ಮಾಂಸದ ಹುರಿದ ವಾಸನೆ, ತೂರಾಡಿಕೊಂಡು ಸಿಗರೇಟು ಸೇದುತ್ತಾ ಬರುವ ಯುವಕರು. ಕಿಕ್ಕಿರಿದ ಜನಸ್ತೋಮದ ಮಧ್ಯೆ ಅವನು ಏನೋ ಕಳಕೊಂಡವನಂತೆ ನದಿಯ ತೀರದಲ್ಲಿ ಮೇಲೆ ಕೆಳಗೆ ಅಲೆಯುತ್ತಿದ್ದ. ಮಧ್ಯಾಹ್ನದ ಊಟದ ಸಮಯ ಮೀರಿ ಸಂಜೆ ಆವರಿಸ ತೊಡಗಿತು. ಅವನು ತಾನು ಬಾಲ್ಯದಲ್ಲಿ ಯೌವನದಲ್ಲಿ ಆಟವಾಡಿದ, ಬಲೆ ಬೀಸಿದ, ಈಜಾಡಿದ ಸ್ಥಳವನ್ನು ಅರಸುತಿದ್ದ. ಆ ಸ್ಥಳವೇನೋ ಸಿಕ್ಕಿತು. ಆದರೆ ಅಲ್ಲಿಯ ದ್ರಶ್ಯ ಅವನಿಗೆ ಅಸಹ್ಯವಾಗಿ ಕಂಡಿತು. ಬಂಡೆ ಕಲ್ಲಿನ ಮರೆಯಲ್ಲಿ ಜೋಡಿ ಹಕ್ಕಿಗಳು ಅರೆ ನಗ್ನ ಪೋಷಾಕಿನಲ್ಲಿ ಹತ್ತಿರದವರ ಪರಿವೆಯೇ ಇಲ್ಲದೆ ಮೈಗೆ ಮೈ ತಾಗಿಸಿ ಬಿದ್ದು ಕೊಂಡಿದ್ದರು. ಕೆಲವರು ಏನೇನೋ ತಿನ್ನುತ್ತಿದ್ದರು, ಕುಡಿಯುತ್ತಿದ್ದರು. ಮತ್ತೆ ಕೆಲವರು ಸಿಗರೇಟು ಸೇದುತ್ತಿದ್ದರು. ಅವನು ತಿರುಗಿ ಹಿಂದಕ್ಕೆ ಬಂದ. ಏನೋ ತಿನ್ನೋಣ ಅನಿಸಿತು. ಏನು ತಿನ್ನಲಿ? ಎಲ್ಲಾ ಪ್ಯಾಕೆಟ್ ಫುಡ್‌ಗಳು, ಹಿಂದೆ ಮನೆಯಿಂದ ಅವಲಕ್ಕಿ ಕದ್ದು ತಂದು, ಹತ್ತಿರದ ಬೆಲ್ಲ ಮಾಡುವ ಲೂಯಿಸ್ ಪೊರ್ಬುಗಳ ಮನೆಯಿಂದ ಬೆಲ್ಲ ಕೇಳಿ ತಂದು ಇದೇ ಬಂಡೆ ಕಲ್ಲಿನ ಮೇಲೆ ಕುಳಿತು ನದಿಯ ಏರಿಳಿತವನ್ನು ನೋಡುತ್ತಾ, ಗೆಳೆಯರೊಂದಿಗೆ ಹರಟೆ ಕೊಚ್ಚುತ್ತಾ ಹೊಟ್ಟೆ ತುಂಬಿಸುತ್ತಿದ್ದೆವು. ಈಗ ಎಲ್ಲಿಯ ಬೆಲ್ಲ ? ಎಲ್ಲಿಯ ಅವಲಕ್ಕಿ?

ಅವನು ನದಿಯ ದಡವನ್ನು ಮತ್ತೊಮ್ಮೆ ನೋಡಿದ. ಅಲ್ಲಲ್ಲಿ ತಿಂದು ಬಿಸಾಡಿದ ಖಾಲಿ ಪೊಟ್ಟಣಗಳು, ಪ್ಲಾಸ್ಟಿಕ್ ಚೀಲಗಳು, ಶರಾಬಿನ ಖಾಲಿ ಬಾಟಲಿಗಳು, ಸಿಗರೇಟಿನ ಖಾಲಿ ಪ್ಯಾಕ್‌ಗಳು, ಕಾಂಡೋಮ್‌ನ ಖಾಲಿ ಪ್ಯಾಕೆಟ್‌ಗಳು, ಎಳನೀರಿನ ಕಾಯಿಯ ಅವಶೇಷಗಳು ರಾಶಿ ರಾಶಿಯಾಗಿ ಬಿದ್ದಿದ್ದುವು. ಐವತ್ತು ವರ್ಷದ ಹಿಂದೆ, ಈ ಹೊಳೆಯ ಹತ್ತಿರದ ವಸಂತ ಶೆಟ್ಟರ ಗದ್ದೆಯಲ್ಲಿ ಒಂದಿಬ್ಬರು ಗದ್ದೆ ಉಳುತಿದ್ದರೆ ಪಕ್ಕದ ಮನೆಯ ಲೂಯಿಸ್ ಪೊರ್ಬುಗಳ ಮನೆಯ ಹೆಂಗಸರು ತರಕಾರಿ ಬೆಳೆಸುತ್ತಿದ್ದರು. ಈಗ ಎಲ್ಲಿದೆ ಲೂಯಿಸ್ ಪೊರ್ಬುಗಳ ಮನೆ? ಎಲ್ಲಿದೆ ವಸಂತ ಶೆಟ್ಟರ ಗುತ್ತಿನ ಮನೆ? ಪ್ರತೀ ಗದ್ದೆಯಲ್ಲಿ ವಿವಿಧ ತಳಿಯ ಭತ್ತ ಬೆಳೆಸಿ ಅದಕ್ಕೆ ‘ಜಯಾ, ‘ಐ.ಆರ್.೮’ ಇತ್ಯಾದಿ ಇತ್ಯಾದಿ ಹೆಸರಿನ ಬೋರ್ಡು ತಗಲಿಸಿ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಕೃಷಿಕ ಎಂದು ಹೆಸರು ಪಡೆದ ಗುತ್ತಿನ ಶೆಟ್ಟರ ಗದ್ದೆ, ತೋಟಗಳು ಎಲ್ಲಿ ಅಳಿದು ಹೋದುವು?

ಅವನು ದುಃಖ ತಡೆಯಲಾರದೆ, ಏನೂ ತಿನ್ನದೆ ಬಿರ ಬಿರನೆ ಹಿಂದಕ್ಕೆ ತಿರುಗಿ ಓಡ ತೊಡಗಿದ. ಉಸಿರು ಒಂದು ಬಿಟ್ಟು, ಎಲ್ಲವನ್ನೂ ಕಳೆದು ಕೊಂಡಿದ್ದೇನೆ ಎಂದೆನಿಸಿ, ಅವನು ಡಾಮರಿನ ರಸ್ತೆ ಬಿಟ್ಟು ಯಾವುದೋ ಕಾಲುದಾರಿಯಲ್ಲಿ ಭಯ ಬೀತರಾದವರಂತೆ ಓಡ ತೊಡಗಿದ. ಸುಮಾರು ಫರ್ಲಾಂಗು ಓಡಿದ ಮೇಲೆ ಅವನು ತಿರುಗಿ ನೋಡಿದ. ಜನ ಸಂಚಾರ ಅಲ್ಲಿ ಇರಲಿಲ್ಲ. ವಾಹನಗಳು ಅವನನ್ನು ಹಿಂಬಾಲಿಸಲಿಲ್ಲ. ಕಾಂಕ್ರಿಟಿನ ಕಟ್ಟಡಗಳಿರಲಿಲ್ಲ. ಬರೇ ಕೆಲವು ಪೊದರು ಗಿಡಗಳು ಮತ್ತು ಸಣ್ಣ ತೊರೆಯೊಂದು ಹತ್ತಿರದಲ್ಲಿ ಹರಿದು ಹೋಗುತ್ತಿತ್ತು. ಅವನಿಗೆ ಒಂಟಿಯಾಗ ಬೇಕಾಗಿತ್ತು. ಈ ಜಂಜಾಟದಿಂದ ಬಿಡುವು ದೊರೆಯ ಬೇಕಿತ್ತು. ಅವನು ಆ ತೊರೆಯಲ್ಲಿ ತನ್ನ ಕೈಕಾಲು ಮುಖ ತೊಳೆದು ಕೊಂಡ, ಬೊಗಸೆಯಲ್ಲಿ ನೀರೆತ್ತಿ ಗಳಗಳನೆ ಕುಡಿದ. ನೆತ್ತಿಗೆ ನೀರನ್ನು ಹಾಕಿಕೊಂಡು ಸ್ವಲ್ಪ ಹಾಯೆನಿಸಿತು. ಅವನು ಕಣ್ಣೆತ್ತಿ ದೂರ ದೃಷ್ಟಿಸಿದ. ಅನತಿ ದೂರದಲ್ಲಿ ಅವಳು ನಿಂತಿದ್ದಳು. ಒಂಟಿಯಾಗಿ, ಅವನಂತೆ.

ಅವನು ಅವಳನ್ನು ಸಮೀಪಿಸಿದ. ಮತ್ತೊಮ್ಮೆ ಅವಳನ್ನು ತನ್ನ ಕಣ್ಣುಗಳಿಂದ ತುಂಬಿ ಕೊಂಡ. ಮುತೈದೆಯಂತೆ ತುರುಬು ತುಂಬಾ ಹೂ ಮುಡಿದಿದ್ದಳು. ಮೈ ತುಂಬಿ ನಿಂತ ಯೌವನೆ. ಅವನು ಅವಳನ್ನು ಸಮೀಪಿಸುತ್ತಿದ್ದಂತೆ ಸುವಾಸನೆಯ ಗಾಳಿ ಅವನ ಮೂಗಿಗೆ ಬಡಿಯ ತೊಡಗಿತು. ಹೌದು. ಈ ಮಧುರ ಪರಿಮಳವನ್ನು ತಾನು ಬಾಲ್ಯದಲ್ಲಿ, ಯೌವನದಲ್ಲಿ ಪಡೆದಿದ್ದೆ. ಅವನು ಮತ್ತೆ ಮಗುವಾದ ಹುಡುಗನಾದ, ಯುವಕನಾದ. ಅವಳ ಸನಿಹದಲ್ಲಿ ಕುಳಿತುಕೊಂಡ. ತಂಪಾದ ಗಾಳಿ ಬೀಸ ತೊಡಗಿತು.

“ಹಸಿವಾಗುತ್ತಿದೆಯೇ?” ಅವಳು ನಕ್ಕು ಕೇಳಿದಳು. ಅವನು ಹೌದೆಂದು ತಲೆಯಲ್ಲಾಡಿಸಿದ. ಅವಳು ಹಣ್ಣು ನೀಡಿದಳು. ಸಿಹಿ ಸಿಹಿಯಾದ ಹಣ್ಣು. ಅವನು ಹೊಟ್ಟೆ ತುಂಬಾ ತಿಂದ. ತಾನು ಕಳಕೊಂಡದ್ದನ್ನು ಅವಳಲ್ಲಿ ಹುಡುಕ ತೊಡಗಿದ. ಅವನಿಗೆ ಇನ್ನು ತಾನು ಒಂಟಿಯಲ್ಲ ಎಂದೆನಿಸಿತು. ತನ್ನ ಅಹವಾಲನ್ನು ಅವಳಲ್ಲಿ ಅರುಹಿದ. ತಾನಿಲ್ಲಿ ಕಳೆದ ಬಾಲ್ಯ, ಯೌವನ, ಪ್ರಕೃತಿಯೊಂದಿಗೆ ಆಡಿದ ಆಟ, ವಿನೋದ ಎಲ್ಲವನ್ನೂ ನೆನಪಿಸಿ ಅತ್ತ. ತನ್ನ ಕಳೆದು ಹೋದ ಗೆಳೆಯರು, ನೇತ್ರಾವತಿ ಹೊಳೆ, ಗದ್ದೆಗಳು, ತೋಟಗಳು, ತೊರೆಗಳು, ಗಾಳಿ ಮರದ ಕುಂಡಲ ಗುಡ್ಡ, ದೇವಿ ಮಹಾತ್ಮ ಆಟ…. ಹೌದು, ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಹೇಳುತ್ತಾ ಹೃದಯ ತಣಿಯುವವರೆಗೂ ಅತ್ತ. ಅವನು ಮುಖಯೆತ್ತಿ ಅವಳನ್ನು ನೋಡಿದ. ಅವಳು ನಕ್ಕಳು. ನಿನ್ನ ಒಂಟಿತನಕ್ಕೆ ನಾನಿದ್ದೇನೆ ಎಂದ ಅವಳು ಅವನಿಗೆ ಗಾಳಿ ಬೀಸಿದಳು. ಅವನಿಗೆ ಹಿತವೆನಿಸಿತು. “ನಿನ್ನಂತಹ ಸಹೃದಯರು ಇನ್ನೂ ಈ ಭೂಮಿಯಲ್ಲಿ ಇದ್ದಾರಲ್ಲಾ? ಆದುದರಿಂದಲೇ ಈ ಭೂಮಿಯಲ್ಲಿ ಮಳೆ – ಬೆಳೆ ಆಗುತ್ತಾ ಇದೆ” ಅವನಂದ. ತಂಪಗಿನ ಗಾಳಿಯಿಂದ ಅವನು ಅವಳ ಬಳಿ ನಿದ್ದೆ ಹೋದ. ಎಚ್ಚರವಾದಾಗ ಕತ್ತಲು ನಿಧಾನವಾಗಿ ತನ್ನ ಛಾಪನ್ನು ಊರುತ್ತಿತ್ತು. ಅವನು ಎದ್ದು ನಿಂತು ನಕ್ಕ. ಕೃತಜ್ಞತೆ ಅರ್ಪಿಸಿ ನಾಳೆ ಬರುವನೆಂದ. ಅವಳು ತಲೆಯಲ್ಲಾಡಿಸುತ್ತಾ ಒಪ್ಪಿಗೆ ಸೂಚಿಸಿದಳು.

ಮರುದಿನ ಸಂಜೆ ಅವನು ಎಂದಿನಂತೆ ಹುರುಪಿನಿಂದ ಬಂದಾಗ ಅವಳು ಅಲ್ಲಿರಲಿಲ್ಲ. ಅವಳ ರಕ್ತ ಸಿಕ್ತವಾದ ಪಾದದ ನರನಾಡಿಗಳು ಭೂಮಿ ತಾಯಿಯನ್ನು ಬಲವಾಗಿ ಅಪ್ಪಿಕೊಂಡಿತ್ತು. ರುಂಡ – ಮುಂಡಗಳು ಕಾಣೆಯಾಗಿದ್ದುವು. ತುರುಬಲ್ಲಿ ಮುಡಿದ ಹೂಗಳು, ನೆಲವನ್ನು ಅಪ್ಪಿಕೊಂಡಿತ್ತು. ಕೈ ಬೆರಳುಗಳು ಅಲ್ಲಲ್ಲಿ ತುಂಡರಿಸಿ ಬಿದ್ದಿದ್ದುವು, ಹಣ್ಣುಗಳು ನೆಲ ಕಚ್ಚಿದ್ದವು. ಎಂದಿನ ಸುವಾಸನೆಯ ಗಾಳಿ ಮತ್ತೆ ಬೀಸಿ ಬರಲೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯದ ಮಾಲೆ
Next post ಮುಖಾ ಮುಖಿ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…