ಏಡಿರಾಜ

ಏಡಿರಾಜ

ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ ಸಮೀಪಕೇಯ್ ನಾಕ್ ಮಾರ್ ಹೆರ್‍ಗೆ ಹಳ್ಳದೆ. ಅಲ್ಲಿ ವಂದ್ ಹೊಂಡ ಮಾಡ್ಕೊಂಡರೆ ಅವರು; ನೀರು ಗೀರು ತೆಕ್ಕಂಡ್ ಹೋಗೂಕೆ.

ಅಲ್ಲೇನಾಗದೆ? ವಂದು ಯೆಸಡು ಅದೆ. ಕುಳಿ ತೆಕ್ಕಂಡಿ ಆ ನೀರ್‍ನಲ್ ಆಡ್ತಾ ಇರ್‍ತದೆ. ಯೇಡಿ, ಏಡಿ ಹೇಳ್ತ್ರು ಅದಕ್ಕೆ. ಇದು “ಅಬ್ಬಾ!” ಅಂತು. ಮನ್ಸಿಗೆ ಆಲಚ್ನಿ ಹಾಕ್ತು ನೋಡ್ಕಂಡಿ. ತಮ್ಮಂತಾ ಶಿರಿಮಂತರಿಗೇ ಅರಸ್ತಾನ್ದಲ್ಲಿ ಮಕ್ಕಳು ಮರಿ ಹುಡ್ಗರುಯೆಲ್ಲ. ಇದು ಇಟ್ಟೊಡ್ ಯೆಸಡು! ಅಡ್ಗನ ನೀರು ಕಪ್ಪಾಗುವರಿಗೆ ಇಟ್ಟೆಲ್ಲ ಮರಿ ಹಾಕ್ತು ಹೇಳಿ ಮೇನಿದ್ ಕಲ್ ನೆಗ್ದ್ ಹೊತಾಕ್ತು ಕೊಲ್ಲುಕೆ. ಚೆಂದ ಕಂಡ್ತು ಅದ್ಕೆ. ಅಷ್ಟರಲ್ಲಿ ಇದ್ ಮಾಡ್ದ ಪಾಪದ ಕೆಲ್ಸ.

ಮತ್ ಯೆಯಡನೆ ವಂದ್ ಪಾಪ ಉತ್ಪನ್ನಾಗೊಯ್ತು. ವಂದ್ ಹೆಚ್ ಕಡಾಮ್ಯಾಗೆ ಬದಿಕಂಡ್ತು ಅದರಲ್ಲಿ, ಬದಿಕೊಂಡಿ, ಆ ಯೆಸಡು ತಾನ್ ಪ್ರಾಯಕ್ ಬಂದಾ ಹೇಳಾಯ್ತು. ಅದ್ರ ಲೆಕ್ಕ ರಾತ್ರಿಗೆ ಅರಸಗೊಳ್ ಮನಿಕಂಡ್ ಯಾಳಿದಲ್ಲಿ ಸಪ್ನದಲ್ ಬಂದ್ ಕಾಣ್ಸಿಕೊಂಡ್ತು.

“ಮತ್ತೆ ತನ್ನ ಹೇಳ್ಕೆಯಂತೆ ನೀನು ತನ್ಗೆ ವಂದ ದೊಡ್ ಬಾವಿ ಕಡಸಿ ಬಾವಿಲ್ ತಕಂಡ್ ಹೋಗೆ ಹಾಕ್ಬೇಕು. ಇಲ್ ತನ್ಗೆ ಆಡ್ಲಿಕ್ ಆಗೋದೆಲ್ಲ” ಅವ, “ಅಬ್ಬ! ಇದ್ದೇನ್ ಕಷ್ಟ ಬಂತಪ್ಪ” ಅಂದ ಅರಸು.

“ತಾ ಇಂತಾ ಕಡ್ಗೆ ಅವನೆ” ಹೇಳಿತ್ತು. ಜನ್ರ ತಂದಿ ಬಾವಿ ಕಡಿಸ್ಡ. ಆ ಜನ್ರ ಕಲಿ, “ಇಂತಾ ಕಡೆಗೆ ಯೇಡಿ ಅದೆ. ಆ ಯೇಡಿ ತಕಂಡ್ ಹೋಗಿ ಅದರೊಳ್ಗೆ ಬಿಡ್ರಪ್ಪ” ಅಂದ. ಆಗ ಅವರು ಬಾವಿ ಕಡದ್ರು ಅವ್ರೆ ಹೊತ್ಕಂಡ್ ಹೋದ್ರು. ನಾಕ್ಜನರ ಹೊರಿ, ಅಟ್ ದೊಡ್ಡ ಬಾವೀಲ್ ಹಾಕದ್ರು. ‘ಇನ್ ತನ್ಗೆ ತ್ರಾಸೆಲ್ಲ ಅಂಬುದ್ ಮಾಡೆದ್ರು’ ಸಾಮಾನ್ಯ ಉಳ್ಕಂಡ.

ವಂದ್ ವರ್‍ಷಾಯ್ತು. ಅಷ್ಟಾತನಕ ಸಪ್ನದಲ್ ಹೇಳ್ತು. ‘ತನ್ಗ ಇಂತಾ ಬಾವಿ ಕಡ್ಡ್ ಹೀಗೆ ಮಾಡಿದ್ದೇನಿದ್ದೂ ಈಗೆ ಇದ್ರಲ್ಲಿ ತನ್ಗೆ ಸುತ್ತಿರಗೂಕೆ ಆಡೂಕೆ ತಾಮ್ ಸಾಕಾಗುದೆಲ್ಲ. ದೊಡ್ ಮದ್ಗ ತೋಡ್ಬೇಕು. ತೊಡ್ ನೀರಾದ ಕೂಡ್ಲೆ ಇಂತಾ ಕಡ್ಗೆ ಬಾವಿವಳಗೆ ಈ ಯೇಡಿ ಅದೆ. ಆ ಯೇಡಿ ನೀವು ಯೆಂಟ್ ಜನ ಬೇಕಾತದೆ. ಯೆಟ್ ಸಾಮಾನ ಬೇಕಾತದೆ ಅಂದ್ಕಂಡಿ ಮುಂಡಿ ಬಳ್ಳಿ ತಕಂಡಿ, ಆ ಮದ್ಗ್‌ಕ್ ಹೊತ್ಕಂಡಿ ಹೋಗಬೇಕು. ಮದಗದಲ್ ಹಾಕಬೇಕು.’

ಯೆಂಟ್ ದಿವಸ ಮದ್ಗಕ್ಕೆ ನೂರಾರ್ ಜನ ವಟ್ಟಾಗಿ ಕೆಲ್ಸ ಮಾಡೆದ್ರು. ಆ ಮದ್ಗದಲ್ಲಿ ನೀರು ಸಂಪಾಯ್ತು. ಇಲ್ ಬಂದ್ರು. ಈ ಬಾವಿ ವಳ್ಗನ್ದ ಯೇಡಿ ಹೊತ್ ಮೇಲ್ ಹಾಕಂಡ್ರು. ಬಳ್ಳಿ ಮುಂಡಿಲ್ ಕಟ್ಕಂಡಿ ಹತ್ ಹದ್ನೈದ್ ಜನ ಹೊತ್ರು ಅದ್ನ. ಆಗ ತಕಂಡ್ ಹೋಗ್ ಮದಗದಲ್ ಬಿಟ್ರು. ಅದ್ ಆ ಮದಗದಲ್ಲಿ ಆ ನೀರ್‍ನಲ್ ಆಡ್ಕಂಡ್ ಉಳಿತು. ಉಳ್ವಟ್ರಲ್ಲಿ ಆಗ ಮತ್ ಯೆಯ್ಡ್ ವರ್ಸಾಯ್ತು. ಯೆಯ್ಡ್ ವರ್‍ಸ ಆದ್ ನಂತ್ರ ಮತ್ ಬಂತು. ಬಂದಿ ಅರಸೂಗೆ ಸಪ್ನದಲ್ಲಿ, ‘ತಂಗೆ ಸುಕಪಡ್ಸಿದ್ಯಲ್ವೋ ಮದಗ ತೋಡ್ಸ್ ಹಾಕು ಅಂದೆ. ತೋಡ್ಸಹಾಕ್ದೆ. ಈಗ ಈ ಕಟ್ಟ್ ನಿಮ್ಗ ಬೇಡ. ನನ್ಗೂ ಬೇಡ. ತನ್ನ ವಂದು ಕುದ್ಲ ರೋಮಕ್ ಪೆಟ್ಟಾಗ್ದೆಗಿದ್ದಂತೆ ವಳಿತೆ. ಸಮುದ್ರದಲ್ ಹಾಕಬೇಕು, ಸಮುದ್ರದಲ್ ಹಾಕ್ಬಿಟ್ರೆ ತಾನ್ ಆನಂದದಲ್ ಉಳಿತ್ನಪ್ಪಾ. ಪದೇ ಪದೇ ಲಾಕಲ್ಲಾ ಇದು’ ಅಂತು.

ಆವಾಗೆ ಮದ್ಗದನ್ ತೆಗ್ದ್ ಮೇನ್ ಹಾಕೂದು ಬಾಳ ಕಟ್ಟಬಂತು. ಅಂತೂ ಮದ್ಗದಲಿನ್ ಯೇಳ್ಸಿ ಹೊತ್ರು ಸಮುದ್ರಕೇ ನೂರ್ ಜನ ಹಿಡ್ಕಂಡಿ ಗುಂಪಲ್ ಹಾಕದ್ರು, ಆಗ ಅದ್ಕೆ ಪ್ರಾಯ ಬಂತು ಹೇಳಾಯ್ತು. ಪ್ರಾಯ ಬಂದ ನಂತ್ರ ಅರಸೂಮನಿಗೆ ಸಪ್ನದಲ್ ಬಂತು.

ಬಂದಿ ತನ್ಗೆ, ‘ಲಗ್ನಾಗಬೇಕು. ಮತ್ ನನ್ಗ್ ವಂದ್ ಹೆಣ್ ತಕಂಡ್ ಹೋಗಿ ಇಂತಾ ಕಡ್ಗೆ ಚಪ್ಪರ ಹಾಕಿ ಆ ಹುಡ್ಗಿ ತಕಂಡೋಗಿ ಯೆಯ್ಡ ಬದಿ ಬಲ್ಕೆ ಯೆಡಕೆ ದೀಪ ಹಚ್ಚಿ ಚಪ್ಪರದಲಿ ಇರಸಬೇಕು. ಅಷ್ಟ ಚೆನ್ನ ಯೇನದೆ ಹಾಕೂದ್ ಹಾಕಿ ಕುಳ್ಸ್ ಬಂದ್ ಬಿಡಬೇಕು’ ಅಂತು.

“ಯೇ ದೇವರೆ” ಅಂದ ಅವನಿಗೆ ಕಮ್ಮಿಲ್ಲ. ವಂದ ಮಾಭಾಗ್ಯ ರಾಜ್ಯಕ ಕರಿ ಕೊಟ್ ಕರ್‍ಸದ. ಮತ್ತೆ ಇಂತಾ ಕಡ್ಗನ ಏಡಿ ಅದ್ಕೆ ಲಗ್ನ ಮಾಡಬೇಕು, “ತನಗೆ ಹೆಣ್ ತಕಂಡ್ ಹೋಗ್ ಕುಳ್ಸಿ ಯೇನ ಲಗ್ನದಲಿ ಮಾಡು ಉಚ್ಚವ ಮಾಡೋದದೆ, ಮಾಡಿ ತಕಂಡ್ ಹೋಗ್ ಕುಳ್ಸಬಿಡ್ಬೇಕು ಅಂತ ಮಾಡ್ಲಿಕ್ಕೇ ಬೇಕು” ಹೇಳ್ದ.

“ಬೇರೆ ರಾಜಕ್ ಅರಸು ತಾನೇ ಹೋಗ್ತನೆ. ನೀನೇ ಹೋಬೇಕು” ಹೇಳದೆ. ಸತ್ತಿವಂತನಾದ್ದರಿಂದ ಕಷ್ಟ ಪಾರಾತದೆ. ಅವನ್ಗೇ ಆವಾಗ್ ಅಲ್ಲಿ ಯೇಳ್ ಜನ ಹೆಣ್ ಹುಡಗೀರು, ಚಿಕ್ಕಪ್ಪದೇ ಅಧಿಕಾರ. ತಂದೆ-ತಾಯಿ ಸತ್ಹೋಗ್ಬಿಟ್ಟರೆ ಇವನ್ದೇ ಅಧಿಕಾರ, ಮಾಡಿದ್ದೇ ಕರೆ ಅಲ್ಲವೋ?

“ಯೇನ ಬಂದ್ರಿ? ಯೇನತಾನ?” “ಮತ್ಯೇನೆಲ್ಲ ವಂದ್ ಹೆಣ್ ತನ್ ಮಗನಿಗೇ ಬೇಕು” ಹೇಳ್ತನೆ.

ಇವ, “ವಂದ್ ಹುಡ್ಗಿ ಕೊಡುಕಡ್ಡಿಲ್ಲ, ವಂದ್ ಲಕ್ಸ ರೂಪೈ ಕೊಡ್ಬೇಕು.” ಅವನೂ ವಂದ ಅರಸುವೇಯ. ಅವಂಗೆ ಇವಗೆ ವಡನಾಟ ಸುರುವಾಯ್ತು ಹೇಳಾಯ್ತು. ಮತ್ ಹೋಗ್ಲಿಲ್ಲಾ ಅಟದೂರೆ. ಕಡಿಗೆ ಹೆಣ್ ತಂದ. ಲಕ್ಷ ರೂಪೈ ಕೊಟ್‌ತಂದ.

ಸಮುದ್ರದ ತಟ್ಗೇಯ ಚಪ್ರಹಾಕಿ, ಅಂತೂ ಮಂಚಗಿಂಚ್ ಇರ್‍ಸಿ ಹೆಣ್ ತಕಂಡ್ ಹೋಗಿ ಕುಳ್ಸಿ ಯೆಯ್ಡ್ ಬದಿಗೂ ನಂದಾದೀಪ ಹಚ್ಚಿ ರಾತ್ರಿ ಮೂರಸಂಜೀಲ ಇಟ್‌ಬಂದರು.

ಬಂದ ನಂತ್ರ ಬೆಳಗ್ಗೆಗೆ ಹೋಗ ನೋಡುವಾಗ ಯೆಂತದೂ ಇಲ್ಲ. ನುಂಕಂಡ ನಡ್ದೆಬಿಟ್ತು. ಅದು ಮದ್ದಾತ್ರಿ ವೇಳಿದಲ್ ಬರಬೇಕಾದ್ರೆ ಸಮುದ್ರದ ನೀರ ಬಕ್ಕಂಡ್ ಬತ್ತದೆ. ನುಂಕಂಡತ್ತು ನಡ್ದೆಬಿಟ್ತು. ಅಲ್ಯೆನೂ ಇಲ್ಲ. ಬೆಳ್ಗಾಮುಂಚೆ ಚಪ್ರ ವಂದದೆ, ದೇಪ ಇಟ್‌ದ್ರು, ದೀಪ ಕತ್ತ್ ಅದೆ. ಬೆಳ್ಗಾಗೆ ಪೋಲೀಸ್ರ ಸೂರ್‍ಯ ಉದ್ಯಾದ ಮೇಲೆ ಕಳ್ಸ್‌ದ, ನೋಡ್ಕಂಡ್ ಬಂದ್ ಹೇಳ್ರು.

ಯೆಂಟ್ಹತ್ ಕೋವಿ, ಕತ್ತಿ, ಈಟಿ, ಬಾಚಿ… ಅವ್ರೆ ಆಯುದ ತಕಂಡ್ ನಡ್ದೆಬಿಟ್ರು ಆ ಹೆಣ್ಣಿಲ್ಲ. ದೀಪ ಕತ್ತ ಅದೆ. ಚಪ್ರವೊಂದೆ ಅದೆ.

ಬಂದ್ ತಾಪ್ಡತೋಪ್ಡ ಅರಸೂಗ್ ತೆಳಿಸಿದ್ರು. ಅಟ್ಟೂ ಅದೇ, ಹೆಣ್ಣಿಲ್ಲ. ಯೇನ್ ಮಾಡ್ದೆ? ಕೇಳ್ವೋರೆಲ್ಲ ಅಂದ್ ಸೂಮ್ಗ ಉಳ್ಕಬಿಟ್ರು.

ನಂತ್ರ ಮತ್ತೆ. ಯೆಯ್ಡನೆ ವರ್‍ಸ ಬಂತು. ಸಪ್ನದಲ್ಲಿ ಹೇಳ್ತು, ‘ಹಿಂದ್ ಯಾವ ರೀತಿ ಮಾಡಿದ್ದೆ ಅದ್ರಂತೆ ಮತ್ ಮದ್ಯಾಗಬೇಕು. ಅದೇ ರೀತಿಂದ ಮತ್ತೆ. ಹೆಣ್ ತಕಬಂದಿ ಅಲ್ ತಕಂಡ್ ಹೋಗ ಕುಳ್ಸಬೇಕು. ಜಾಗ್ರತೀಲ್ ಆಗಬೇಕು. ಯಲ್ಲಾದ್ರೆ ನಿನ ರಾಜ್ಯಕ್ಕೆ ಕೇಡ ಬರೊದು’ ಅಂದ.

‘ಯೆಲ್ಲಾ ಕಾಲ್ವೆ ನಾನು ಇಟ್ಟೆಲ್ಲಾ ಮಾಡ್ಕಂಡ್ ಬಂದ್ರೂ ಸುಕವೇ ಇಲ್ಲಾಯ್ತಲಾ? ಈಗ ಮತೆ ಯಾರ ಕೊಡತ್ರು?‘ ಮಾರ್‍ನೆ ದಿವಸ ಹೋಗಿ ಅಲ್ಲೇ ಹೋದ ಯೇಳ ಜನ ಹೆಣ್ ಹುಡ್ಗಿರು ಕೇಳ್ ಬಂದಿದ್ದ. ಯೇಳೂ ಜನ ಲಗ್ನ ಮಾಡಬೇಕು ಹೇಳಿದ್ದ. ಆ ಅವನು ಮತ್ತೆ ಅಲ್ಗೇ ಹೋದ್ನ, “ತಾನ್ ಮತೆ ಬಂದ್ ಬಿಟ್ಟೆ ಗಂಡ್ ಹುಡ್ಗರು ಬಾಳ ಜನ ಅವರೆ ಹೆಣ್ಣೇ ಕಮ್ಮಿ ನಮ್ಮ ರಾಜ್ಯದಲ್ಲಿ” ಅಂದ.

“ಅಡ್ಡಿಲ್ಲಪ್ಪಾ, ಮತ್ ಯೆಯ್ಡ ಲಕ್ಸ್ ರೂಪೈ ಕೊಡಬೇಕು”, “ಅಡ್ಡಿಲ್ಲ. ಕೊಡ್ತೆ.” ಅವರ್‍ಗೆ ಇವರ್‍ಗೆ ಒಪ್ಪಂದಾಗಿ ಮಾತಾಡ್ರು. ಆರ್ ಜನ ಉಳ್ದರೆ ಪ್ರಾಯಕ್ ಬಂದರೆ.

ಮತ್ತೊಂದ್ ಹೆಣ್ ಕೊಟ್ಟ. ಇದೇ ನಮನ್ಯಾಯ್ತು. ಆರು ಕಿರಿದೊಂದ್ ಉಳಿತದೆ. ಹುಡ್ಗಿ ತಕಂಡ ಹೋದೋರು, “ಚಲೋದಾಗವರೋ? ಹುಡ್ಗಿರೆಲ್ಲ?” ಕೇಳ್ರು “ಚಲೋ ಸಂಪಾಗವ್ರೆ” ಕಣ್ ಕಟ್ ಮಾಡ್ತ.

ಮತ್ ಹೋದ ಮಂದಿಗ್ಯೆಲ್ಲಾ ಚಪ್ರ ಹಾಕಿ, ಕುರ್‍ಚಿ, ಮೇಜು, ಬೆಂಡು ಯೆಲ್ಲಾ ತಕಂಡ್ ಹೋಗ್ ಹೊಂಗ್ನಮಾಲಿ ಕೈಲ್ ತೊಟ್ ಕುಳ್ಸಿ, ‘ನಿನ ಗಂಡ ಬತ್ತ’ ಅಂದ್ ಹೇಳ್ಕಿ ‘ಇಟ್ ಬನಿ’ ಅಂದ ಬಂದ್ರು.

ಆವಾಗೆ ಅಲ್ಲಿ ಪರಮಾತ್ಮನ ಜಾನ ಮಾಡ್ತದೆ ಕಿರೀದು. ‘ತನ್ನ ತಂದಿಗೆ ಯೇಳ ಜನ ಹೆಣ್ ಮಕ್ಳು. ನಾವ್ ಹುಟ್ಟಿ ತಾಯಿ-ತಂದೆ ತೀರ ಹೋಗಿರು. ರಾಮ ರಾಮ…. ಶಿವ ಶಂಕರ ಶಂಬೋ… ತನ್ ಗತಿಯೇನ್. ಆರ್ ಜನ ಅಕ್ಕದಿರ ತಂದಿ, ವಬ್ರೂ ಕಾಂಬೋದೆಲ್ಲ. ಯೇನಾಯ್ತು? ಯೇನ್ ಹೋಯ್ತು ವಂದೂ ತೆಳೂದಿಲ್ಲ. ನೀನೇ ಕಾಪಾಡ್ಬೇಕು’ ಅಂದಿ ಗೋಳ್ ಗುಡಿತದೆ, ತೀಡ್ತದೆ.

ಆವಾಗೆ ಆಕಾಶವಾಹಿನಿ ಆಯ್ತು; ಪರಮಾತ್ಮ ದೃಷ್ಟಿ ಇಟ್ಟ. ವಂದ ಸನ್ಯಾಸಿ ರೂಪದಲ್ ಬಂದ ಕೂತ ಪರಮಾತ್ಮ, ಭಗವಂತ, “ಯೇನಾಯ್ತು ತಂಗಿ? ನಿನ್ಗೆ ಯಾವುರಾಯ್ತು? ಯಾವ ದೇಸಾಯ್ತು? ಇಲ್ ಬಂದ್ ಕುಳ್ಳೊ ಕಾರಣಯೇನು?” ಕೇಳ್ದ. “ತೀಡಬೇಡ” ಅಂದ. “ನಿನ್ಗೆ ಯೇನ್ ಕಟ್ಟ ಬಂದ್ರೂ ಪಾರ್ ಮಾಡಕೊಡ್ತೆ. ನೀನು ಸಾಂತ ರೀತಿಂದ ಉಳಿ” ಚಂದಾಗ್ ಹೇಳ್ದ. ಹೋಗ್ ಸಪೋಟ್ ಕಾಲ್ಗೆ ಬಿದ್ದಬಿಡ್ತು. “ಯೆದ್ದೇಳು, ಯೆದ್ದೇಳು ಹೆದ್ರಬೇಡ” ಅಂದ.

ಆವಾಗ್ ಯೆದ್ ಕುಂತಕೊಂಡ್ತು. ದುಕ್ಕ ಅಂತ್ರಸ್ಕಂಡಿ ಹೇಳ್ತು. ಈ ರಾಜದಲ್ಲಿ ತಾನು ಬೇರೆ ರಾಜದ್ದು, ಈ ರಾಜದ ಅರಸ ಹೋಗಿ ತನ್ನ ಚಿಕ್ಕಪ್ಗೆ ಹೇಳಿ ಮತ್ತು ನಿ ವಂದ್ ಯೇಳ ಲಕ್ಸ ರೂಪಾಯಿ ತಕಂಡಿ ವನಂದ್ ಲಕ್ಸದಂತೆ ಯೆರ್‍ಸ್ ಕಂಡ್ ಬಂದಿದ್ದ. ಆಟ್ ತಕಂಡಿ ಅವ ಅಕ್ಕದಿರ ತೆಕ ಬಂದಿದ್ದ. ವಬ್ರೂ ಕಾಂಬೊದೆಲ್ಲ. ತನ್ಗೆ ಇಂತಾ ಪರಿಸ್ಥಿತಿ ಬಂತು. ಈ ಕಟ್ಟ ಪಾರಗಬೇಕು. “ಯೇ ತಂದೇ! ನಿನ್ನಿಂದ ಕಟ್ಟ ಪಾರಗಬೇಕು ಹೊರ್‍ತು ಬೇರೆಯಲ್ಲ” ಅಂತು ಮತ್ ಸಪೋಟ್ ಪಾದ್ಕ ಬಿತ್ತು.

ಆವಾಗೆ, “ಹೆದ್ರಬೇಡ. ನೀನು ತನ್ನ ಹೆಳ್ಕೆಯಂತೆ ಕೇಳಬೇಕು, ದುಕ್ಕ ಮಾಡುಕಿಲ್ಲ. ನಿನ್ಗೆ ಧೈರ್‍ಯಾಗ್ಲಿ” ಹೇಳಿ. ಶಬ್ದದಲ್ ಹೇಳಿ ದೈರಿ ಮಾಡ್ದ ಅದ್ಕೆ. ಮಂತ್ರಿಸಿ ಮೂರ ಹಳ್ ಕೊಟ್ಟ ನೋಡಿ ಅದ್ರಕಲ್. ಹಳ್ಳು ಕೈಮುಟ್ಟಿಲಿಟ್ಟ. “ನೋಡು, ನೀನು ಹಿಂಗೆ ಕುಂತಲ್ಲಿ ನಿನ್ ಮೊಕಸಾರೆ ಸಮುದ್ರ ನೀರ್ ಬಕ್ಕಂಡ್ ಬತ್ತದೆ. ನೀ ಹೆದ್ರೂಕಾಗ, ಗೋರ್ ಕಪ್ಪಾಗೂದು, ಆದಕೂಡ್ಲೆ ನೀ ಹೆದ್ರೂಕಾಗ, ಈಗ್ ಅದು ನೀರ್‍ನಲ್ಲದೆ. ನೀರ್ ತಪ್ಪಿ ದೆಡ ಹತ್ದಕೂಡ್ಲೆ ಬಿಂಬಿ ಆಕಾರ್‍ದಲ್ ಬರೂದು. ಬೋರ್‍ಗುಡಿತದೆ. ಹೆದ್ರೂಕಾಗ. ದೆಡ ಹತ್ತೆತು ಅಂದ ಕೂಡ್ಲೆ ನೀನು ಮೂರ್ ಹಳ್ಳ ಮಂತ್ರಿಸಿ ಹೊಡ್ದ ಬಿಡ್ಬೇಕು. ತನ್ ಕಟ್ ಪಾರಾಗ್ಲಂದ್ ವಂದ್ ಹೊಡೆ. ಬಿಂಬಿ ಆಕಾರದ್ದಲ್ ಬಂದಾಗ ಬೋರ್‍ಗುಡತದೆ. ದಿಡಹತ್ತೆತೂ ಅಂದ್ ಕೂಡ್ಲೆ ವಂದ್ ಹಳ್ಳ ಹೊಡೆ. ವೋಡ್ ಕಳ್ಚಿ ಸಾಪ್ ನಿಜರೂಪಾಗಬೇಕು” ಅಂತ, “ಇದ್ದಿ ಬುದ್ದಿ ಕಲ್ತಂತ ಮನ್ಸಿನಾಗೆ ಬರಬೇಕು” ಅಂತ ಹೊಡೆ ಯೆಯ್ದನೆಹಳ್ಳ. ‘ಕಪ್ ವರ್‍ಣಾಗಿತ್ತು ಕೆಂಪ ವರ್‍ಣಾಗಬೇಕು” ಅಂತ ಮೂರನೇದ ಹೊಡೆ.

“ಮೂರೂ ಹಳ್ ಹೊಡಿತಲ್ವೊ? ಸಾಪ ಸಮುದ್ರದಲ್ಲಿ ಸಂತೋಸ್ನಲ್ಲಿ ಬರಬೇಕಾಯ್ತು. ಹಾಲಹರ್‍ದಂತೆ ನೀರ ಹರೀತದೆ” ಹೇಳಿ ಪರಮಾತ್ಮ ಅಲ್ಲೆಲ್ಲ.

ಪರಮಾತ್ಮ ಹೇಳಿದ ಹಾಗೆ ಮೂರು ಕಲ್ ಹಳ್ಳ ಮಂತ್ರಿಸಿ ಹೊಡಿತು. ಮುಂದೆ ಬಂದಿ ಮಂಚದ ಮೇನ್ ಕುಂತ. “ಮಾಲಿ ಹಾಕು ಹೇಳನೆ ಪರಮಾತ್ಮ” ಮಾಲಿ ಹಾಕ್ಬಿಟ್ತು. ಅವನೂ ತೆಗ್ದೆ ಹಾಕ್ದ. ಅವ್ರು ಕುಂತ್ಕಂಡ ಚಂದದಲ್ ಉಳದ್ರು. ಕತ್ತು ದೇಪತತಾ ಉಳೀತು. ಬೆಳಗಾದ ಕೂಡ್ಲೆ ಅರಸು ಸಿಪಾಯಿಯರ ಕರದು, ‘ಹೋಗ್ ಬರ್ರಪ್ಪಾ, ಯೇನಾಯ್ತು ನೋಡ್ಕ ಬನಿ’ ಹೇಳ ಕಳ್ಗಸ್ದ. ಹೋದ್ರು. ತಾಪಡತೋಪ್ ಹೋಗಿ ನೋಡದ್ರು. ಜ್ಯೋತಿ ಉರಿತದೆ. ಸಕಲ ಸಂಪನ್ನ ಮೇಲ್ ಕುಂತರೆ ಅವರು… ಅವ ಸೂರಿ ಪ್ರಕಾಶವ್ನೆ.

ಬಂದ ಅರಸೂಗೆ ತಾಪ್ಡತೋಪ್ ಹೇಳದ್ರು. ಅವನ ಮನಿಂದ ಅದ ಕುಂತಲ್ಲಿವರಿಗೆ ಮೆಟ ಮಟ್ಗೆ ತೋರಣ ಅಲ್ಲಿದ್ದಿಲ್ಲೂ ಹಾಕ್ಸ್‍ದ. ಮಂದಿ ಮಾರ್‍ಬಲ ಆವಾಗೆ ರಾಜದವರೆಲ್ಲ ಕೂಡ್ಸಕಂಡಿ, ಸಂಗ್ರಯ ಸಮ ಮಾಡ್ಕಂಡ ಮಂಚಾಲ ತಕ್ಕ ಹೋಗಿ ಹತ್ತಕೊಂಡಿ, ಉಚ್ಚಯದ ಮೇನೆ ಬಂದು ಇವ್ರ ಮನೆಗೆ ತಂದಿ, ಆರತಿ ಗೀರತಿ ಯೆಲ್ಲಾ ಮಾಡಿ ವಳ್ಗ್ ತಕೊಂಡ. ವಳ್ಗ್ ತಕೊಂಡಿ ಆ ರಾಜ್ಯ ಅವಗೆ ಅದಕೆ ಕೊಟ್ ಮನೀಲ ಇಟ್ಕಂಡ. ಸುಕಸಂತೋಸದಲ್ ಉಳಕಂಡ್ರು, ಪಾಪದ ಕೆಲಸ ಮಾಡ್ದ ಹಿಂಡ್ತಿ ಹೆರ್‍ಗೆ ಹಾಕಬಿಟ್ಟ. ಅದಕ್ಕೂ ಸಂತೋಸದಲ್ ಇರ್‍ಸದ.
*****
ಕೆಲವು ಪದಗಳ ವಿವರಣೆ

ಧೈರಿ = ಧೈರ್‍ಯ (ಇಲ್ಲಿ ಧೈರ್‍ಯಕೊಟ್ಟ)
ಕೈಮುತ್ತಿ = ಕೈಮುಷ್ಟಿ-ಹಿಡಿ
ಬೋರ್‍ಗುಡಿತದೆ = ಬೋರ್ ಎಂಬ ಶಬ್ದ ಮಾಡುತ್ತದೆ.
ತಾಪಡತೋಪಡ = ಕೂಡಲೇ
ಚಪ್ರ = ಚಪ್ಪರ
ಬಕ್ಕಂದ್ = ಆಚೆ ಈಚೆ ಮಾಡಿಕೊಂಡು
ಕತ್ತ = ಉರಿಯುತ್ತ
ಕಣ್ಕಟ್ = ಮೋಸ, ಸುಳ್ಳು
ಆಕಾಶವಾಹಿನಿ = ಆಕಾಶವಾಣಿ (ಮಾತು ಏನೆಂದು ತಿಳಿಸಲಿಲ್ಲ; ಆಕಾಶದಿಂದ ಬಂದು ಸಹಾಯ ಮಾಡುವ ಆಶ್ನಾಸನ ಇರಬಹುದು.)

ಹೇಳಿದವರು : ದಿ. ಮಾಸ್ತಿ ನಾಗಪ್ಪ ನಾಯ್ಕ, ಹೆಗಡೆ ಊರು, ದಿನಾಂಕ :- ೧೩-೦೨-೧೯೭೩

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯಲ್ಲಿ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಭ್ಯುದಯ
Next post ಮೆಲ್ಲಗಡಿಯಿಡು ಒಲವೆ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…