ಕರಿಗಾಲಿನ ಗಿರಿರಾಯರು

ಕರಿಗಾಲಿನ ಗಿರಿರಾಯರು

ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ ಜನ ಕಾರ್‍ಯಧುರಂಧರರು ಇಂಗ್ಲಿಶ್ ಸರಕಾರಕ್ಕೆ ಕಾಯಾ ವಾಚಾ ಮನಸಾ ಸಾಹಾಯ ಮಾಡಿದ್ದರು. ಅವರಲ್ಲಿ ದಿವಾನ್ ಬಹಾದ್ದೂರ ವೀರನಾರಾಯಣರಾಯರು ಒಬ್ಬರಾಗಿದ್ದರು. ದಿವಾನರವರು ಮಾಡಿದ ಸಾಹಸದ ಸಹಾಯಕ್ಕೆ ಮೆಚ್ಚಿ ವಿಜಯಿಗಳಾದ ಆರ್ಥರ ವೆಲ್ಲಸ್ಲೆ ಪ್ರಭುಗಳು ಅವರನ್ನು ಬಹುಪರಿಯಾಗಿ ಸಂಭಾವಿಸಿ, ಅವರಿಗೆ ಚಿನ್ನೂರು ಎಂಬ ಗ್ರಾಮವನ್ನು ಉಂಬಳಿಯಾಗಿ ಹಾಕಿ ಕೊಟ್ಟಿದ್ದಲ್ಲದೆ ವೀರನಾರಾಯಣ ರಾಯರ ಮಗ ಮೊಮ್ಮಕ್ಕಳಿಗೆ ತಿಂಗಳಾ ಇನ್ನೂರು ರೂಪಾಯದ ಮಾಸಾಶನವು ಕೂಡ ಸಿಕ್ಕತಕ್ಕದ್ದೆಂದು ವ್ಯವಸ್ಥೆ ಮಾಡಿ ಕೊಟ್ಟಿದ್ದರು.

ವೀರನಾರಾಯಣರಾಯರು ಚಿಕ್ಕಂದಿನಿಂದಲೇ ದೊಡ್ಡ ಉದ್ಯೋಗಸ್ಥರಾಗಿದ್ದು ಮುಂದವರು ಅಭಿವೃದ್ಧಿಯನ್ನು ಹೊಂದುತ್ತೆ ತಿಂಗಳಾ ಒಂದು ಸಾವಿರ ರೂಪಾಯಿಯ ಸಂಬಳವುಳ್ಳ ದಿವಾನರಾದರು. ರಾಯರ ತಂದೆಯವರು ಗಳಿಸಿಟ್ಟ ಹೇರಳವಾದ ಹಣಕ್ಕೆ ವರ್ಷಾ ಐದಾರು ಸಾವಿರ ರೂಪಾಯಿ ಬಡ್ಡಿ ಬರುತ್ತಿತ್ತು. ಊರ ಉತ್ಪನ್ನವು ವರ್ಷ ಹತ್ತು ಸಾವಿರಕ್ಕೆ ಹೆಚ್ಚಾಗಿತ್ತು. ಮದರಾಸು ಬಳ್ಳಾರಿ ಪಟ್ಟಣಗಳಲ್ಲಿ ದಿವಾನರವರು ಕಟ್ಟಿಸಿದ ದಿವ್ಯವಾಗಿರುವ ಬಂಗಲೆಗಳಿಗೆ ವರ್ಷಾ ಐದು ಸಾವಿರ ರೂಪಾಯಿ ಬಾಡಿಗೆ ನಿರ್‍ವಿವಾದವಾಗಿ ಬರುತ್ತಿತ್ತು. ದಿವಾನರು ಸಂಬಳದಿಂದುಳಿಸಿದ ಹಣವಾದರೂ ವಿಪುಲವಾಗಿತ್ತು. ಹೆಣ್ಣು ಮಕ್ಕಳ ಮೈ ಮೇಲಿನ ಮುತ್ತು ರತ್ನಗಳ ಅಲಂಕಾರಗಳಿಗೆ ಬೆಲೆಯಿಲ್ಲ. ಮನೆಯಲ್ಲಿ ಕೊಡ, ಗಂಗಾಳ, ಪರಾತಗಳು ಕೂಡ ಬೆಳ್ಳಿಯವು. ಹೀಗೆ ಸಮೃದ್ಧಿಯಾಗಿರುವ ಸಂಪತ್ತಿನಿಂದ ಸಂತುಷ್ಟರಾದ ದಿವಾನ್ ಬಹಾದ್ದೂರರವರು ತಮ್ಮ ಸರಕಾರಿ ಉದ್ಯೋಗವನ್ನು ಬಿಟ್ಟು ಬೇಗನೆ ಪೆನ್ಶನ್ ತೆಗೆದುಕೊಂಡು ತಮ್ಮ ಉಂಬಳಿಯ ಗ್ರಾಮದಲ್ಲಿ ಸುಖದಿಂದ ಇರುವವರಾದರು.

ವೀರನಾರಾಯಣರಾಯರು ಸದಾಚರಣ ಸಂಪನ್ನರೂ, ಧರ್ಮಪರಾಯಣರೂ ದಾನಶೂರರೂ ಆಗಿರುವದರಿಂದ ಅವರು ಸರಕಾರದ ದಿವಾನಗಿರಿಯನ್ನು ಬಿಟ್ಟಿದ್ದರೂ ಅವರಿಗೆ ತುಂಗಭದ್ರೆಯ ಪ್ರಾಂತದಲ್ಲಿ ವಿಶೇಷವಾದ ಮರ್ಯಾದೆಯಿತ್ತು. ರಾಯರ ಪತ್ನಿಯವರಾದ ಕೋಪ್ರಮ್ಮನವರು ತಮಗಿಷ್ಟು ಸಂಪತ್ತು ಇದ್ದರೂ ಮಕ್ಕಳಾಗಿರಲಿಲ್ಲವೆಂದು ಚಿಂತಾಕುಲರಾಗಿ ಅನೇಕ ದೇವರಿಗೆ ಹರಕೆ ಹೊತ್ತರು. ಅಶ್ವತ್ಥನಿಗೆ ಪ್ರದಕ್ಷಿಣೆ ಹಾಕಿ ಹಾಕಿ ಬೇಸತ್ತರು, ಕಡೆಗೆ ಅಶ್ವತ್ಥನ ಪ್ರಸಾದದಿಂದಲೋ ಮತ್ತಾವ ಗ್ರಾಮ ದೇವತೆಯ ಅನುಗ್ರಹದಿಂದಲೋ ಕೊಪ್ರಮ್ಮನವರು ಗರ್ಭವನ್ನು ತಳೆದು ಸೂರ್ಯಗ್ರಹಣದ ಸಮುಹೂರ್ತದಲ್ಲಿ ಮಗನನ್ನು ಪಡೆದರು.

ಮಗನು ಹುಟ್ಟಿದ ದಿವಸವೇ ರಾಯರಿಗೆ ಅರ್ಧಾಂಗವಾಯುವಿನ ವಿಕಾರವಾದರೂ ಅವರು ಪುತ್ರೋತ್ಸವದ ಸಮಾರಂಭವನ್ನು ಒಳ್ಳೆ ಸಂತೋಷದಿಂದ ನೆರವೇರಿಸಿದರು. ಚಿರಂಜೀವರಿಗೆ ಗಿರಿರಾಯನೆಂಬ ನಾಮಕರಣವನ್ನು ಮಾಡಿಸಿದರು. ವ್ರುದ್ಧಾಪ್ಯದಲ್ಲಿ ಮಗನು ಹುಟ್ಟಿದ್ದರಿಂದ ತಂದೆ ತಾಯಿಗಳು ಅವನನ್ನು ಒಳ್ಳೆ ಪ್ರೀತಿಯಿಂದ ಬೆಳೆಸಿದರು. ಮಗುವು ದೊಡ್ಡದಾದ ಬಳಿಕ ಅದು ಕುಚೇಷ್ಟೆಗಳನ್ನು ಮಾಡಿದರೂ ಹಡೆದವರು ಹಿಗ್ಗುವರು; ಸೌಮ್ಯನಾಗಿದ್ದರೂ ಕಂಡು ಸಂತೋಷಬಡುವರು.

ಗಿರಿರಾಯನು ಮನೆಯಲ್ಲಿ ಎಂಥ ಕೆಟ್ಟ ಕೆಲಸ ಮಾಡಿದರೂ ಅವನನ್ನು ಯಾರೂ ತಡೆಯಕೂಡದೆಂದು ಕಟ್ಟಳೆಯಿತ್ತು. ರೊಕ್ಕ ರೂಪಾಯಿಗಳನ್ನು ಅವನು ಕೇಳಿ ತಕ್ಕೊಂಡರೂ ಚಿಂತೆಯಿಲ್ಲ; ಕದ್ದು ಕೊಂಡರೂ ಹೀಗೇಕೆಂದು ಯಾರೂ ಕೇಳುತ್ತಿದ್ದಿಲ್ಲ. ಚಿಕ್ಕರಾಯರು ಕದ್ದು ತಂದಿರುವ ಹಣವನ್ನು ಸೆಳೆದುಕೊಳ್ಳುವ ಸೇವಕರು ಅವನು ಬಡಿದರೂ ಬಡಿಸಿಕೊಳ್ಳುತ್ತಿದ್ದರು ; ಬೇಕಾದ ಹಾಗೆ ಬೈದರೂ ಬೈಸಿಕೊಳ್ಳುತ್ತಿದ್ದರು. ಓಣಿಯಲ್ಲಿ ಹೊರೆ ಹೊತ್ತು ಕೊಂಡು ಹೋಗುವವರನ್ನು ಅವನು ಧಕ್ಕನೆ ಹಾಯ್ದು ಕೆಡವುವನು, ಕಲ್ಲೊಗೆದು ಗೌಳಿಗಿತ್ತಿಯ ಮೊಸರುಗಡಿಗೆಯನ್ನೊಡೆದರೆ ಅದು ಕೃಷ್ಣ ಲೀಲೆಯೆಂದು ಹೇಳಿ ಗಿರಿರಾಯನ ತಾಯಿಯು ಯಥೇಷ್ಟವಾಗಿ ನಕ್ಕು, ಗೌಳಿಗಿತ್ತಿಗೆ ಮೊಸರುಗಡಿಗೆಗಳ ಹಾನಿಗಾಗಿ ಸಾಕಷ್ಟು ಹಣವನ್ನು ಕೋಡುವಳು. ವೀರನಾರಾಯಣರಾಯರಿಗೆ ಮಗನು ಮಾಡಿದ ಕುಚೇಷ್ಟೆಗಳು ಸರಿಬರುತ್ತಿಲ್ಲವಾದರೂ ಗಿರಿಯು ದೊಡ್ಡವನಾದ ಬಳಿಕಾದರೂ ಬುದ್ಧಿಗಲಿಯುವನೆಂದು ಸಮಾಧಾನವನ್ನು ಹಚ್ಚಿಕೊಳ್ಳುತ್ತಿದ್ದರು.

ರಾಜಕಾರಣಗಳಲ್ಲಿ ಕೂಡ ಒಳ್ಳೇ ದೂರದರ್ಶಿಗಳೆಂದು ಖ್ಯಾತಿಯನ್ನು ಹೊಂದಿದ ವೀರನಾರಾಯಣರ ದೃಷ್ಟಿಯು ಪುತ್ರ ವಾತ್ಸಲ್ಯವೆಂಬ ಆವರಣದಿಂದ ಅಂಧವಾಗಿ ಹೋಗಿತ್ತಾದ್ದರಿಂದ ವ್ರಾತ್ಯನಾದ ಗಿರಿರಾಯನ ಅವಸ್ಥೆ ಮುಂದೇನಾಗುವದೆಂಬ ಆಲೋಚನವು ಅವರಿಗೆ ತೋರಲಿಲ್ಲ. ಅಶಿಕ್ಷಿತನಾದ ಶಿಕ್ಷಕನೋರ್ವನು ನಿತ್ಯದಲ್ಲಿಯೂ ಮನೆಗೆ ಬರುತ್ತಿದ್ದರೂ ಗಿರಿರಾಯನ ಕಲಿಯುವ ಅಪೇಕ್ಷೆಯು ಒಮ್ಮೆಯಾದರೂ ತೋರಿಬರಲಿಲ್ಲಾದ್ದರಿಂದ ಅವನು ಸೇವಕರೊಡನೆಯೂ ಗಿರಿರಾಯನೊಡನೆಯೂ ಒಣಹರಟೆ ಕೊಚ್ಚಿ ಹೋಗುತ್ತಿದ್ದನು. ಈ ಮಾತು ರಾಯರ ಲಕ್ಷ್ಯಕ್ಕೆ ಬಂದಿದ್ದರೂ ಗರ್ಭಶ್ರೀಮಂತನಾದ ತನ್ನ ಮಗನಿಗೆ ವಿದ್ಯೆ ಬರದಿದ್ದರೆ ಬಿಡಲೊಲ್ಲದೇಕೆಂದು ಹೇಳುತ್ತಿದ್ದರು. ಮಂಗ, ಹೋತು, ನವಿಲು, ಪಾರಿವಾಳಗಳನ್ನು ಸಾಕುವ ಪ್ರೀತಿಯು ಗಿರಿ ರಾಯನಿಗೆ ಬಹಳಾಗಿತ್ತು. ಒಂದು ಮುಸುವನನ್ನು ಕೊಂಡು ಅದಕ್ಕೆ ಗೋವೆಯ ಕಿರಿಸ್ತಾನರಂಥ ಅಂಗಿ ಟೊಪ್ಪಿಗೆಗಳನ್ನು ಹಾಕಿ ಅವನು ಅದಕ್ಕೆ ಗೊನ್ಸಾಲ್ವಿಸನೆಂಬ ಹೆಸರನ್ನಿಟ್ಟನು; ಗಡ್ಡದ ಬಿಳಿ ಹೋತಿಗೆ ಅವನು ಕಾಜೀ ಮಸ್ತಾನಸಾಹೇಬರೆಂದು ಕರೆದನು. ಇದಕ್ಕೆಲ್ಲ ಚಾತುರ್ಯವೆಂದು ಹೇಳಿ ದಿವಾನರವರು ಮಗನನ್ನು ಕೊಂಡಾಡುತ್ತಿದ್ದರು.

ವೀರನಾರಾಯಣರಾಯರ ಪ್ರಕೃತಿಯು ದಿನವೊಂದಕ್ಕೆ ಕ್ಷೀಣವಾಗುತ್ತ ನಡೆದದ್ದರಿಂದ ತಾವು ಬದುಕಿರುವಾಗಲೇ ಮಗನ ವಿವಾಹ ಸಮಾರಂಭವನ್ನು ಮುಗಿಸಿಬಿಡಬೇಕೆಂದೆಣಿಸಿ ಅವರು ತಮ್ಮ ಹೆಂಡತಿಯ ತಮ್ಮನಾದ ಕೃಷ್ಣ ಮೂರ್ತಿರಾಯರ ಅತಿ ಚಲುವೆಯಾದ ಮಗಳನ್ನು ತೆಗೆದುಕೊಂಡು ಹದಿನೈದು ವರುಷದ ಅಲ್ಪ ವಯಸ್ಕನಾದ ಗಿರಿರಾಯನ ಮದುವೆಯನ್ನು ಮಾಡಿ ಬಿಟ್ಟರು. ಇನ್ನೇನು ಚಿಂತೆಯಿಲ್ಲ; ಮನೆಯಲ್ಲಿ ಅಖಂಡವಾದ ಸಂಪತ್ತು; ಸೊಸೆ ರೂಪವತಿಯು; ಶ್ಲಾಘ್ಯರಾದವರೊಡನೆ ಶರೀರಸಂಬಂಧವಾಗಿರುವದು; ತಮ್ಮ ಮಗನು ತಮ್ಮ ಪಾಶ್ಚಾತ್ ಸುಖಿಯಾಗಿರುವನೆಂಬ ಸಂತೋಷದಿಂದ ರಾಯರು ಪರಲೋಕಕ್ಕೆ ತೆರಳುವವರಾದರು. ಮುಂದೆ ಒಂದೆರಡು ವರುಷಗಳಲ್ಲಿ ಗಿರಿರಾಯರ ಹೆಂಡತಿಯಾದ ವಿಶಾಲಾಕ್ಷಿಯು ಮೈನೆರೆದು ಮನೆಗೆ ಬಂದಳು. ಸಕಲ ಸಂಪತ್ತುಗಳು ಗಿರಿರಾಯರ ಸ್ವಾಧೀನವಾದವು.

ಗಿರಿರಾಯರ ಪ್ರೀತಿ ಪಾತ್ರನಾದ ಕಾಜೀ ಮಸ್ತಾನಸಾಹೇಬನು (ಹೋತಿನ ಹೆಸರು) ಮನಬಲ್ಲಂತೆ ಮೇದು ಮದವೇರಿ ಊರಲ್ಲಿಯ ಅಜಯೋಷಿತೆಯರ ಮರ್ಯಾದೆಯನ್ನು ಅಸಹ್ಯವಾಗಿ ಭಂಗಿಸಲಾರಂಭಿಸಿದನು. ಅದನ್ನು ಕಂಡು ಗಿರಿರಾಯರು ತಮ್ಮ ಸ್ನೇಹಿತರಾದ ಪತ್ತಾರ ಮಾನಪ್ಪ, ಸುಂಕದ ವೆಂಕಣ್ಣ, ಶಾನುಭೋಗರ ಬಾಳಪ್ಪ ಮುಂತಾದವ ರೊಡನೆ ವಿಚಾರಗೈದು ಕಾಳೀ ಸಾಹೇಬರನ್ನು ಅಷ್ಟಪಾದರನ್ನಾಗಿ ಮಾಡಬೇಕೆಂದು ನಿಶ್ಚಯಿಸಿದರು. (ದ್ವಿಭುಜರಾದ ದಂಪತಿಗಳಿಗೆ ಚತುರ್ಭುಜರೆಂದು ಹೇಳುವ ರೂಢಿಯಂಟಷ್ಟೆ?) ಸಂಗಡಲೇ ಗಲಸತ್ನಿಯಾದ ಅಜಾಸುಂದರಿಯನ್ನು ವಧುವಾಗಿ ಗೊತ್ತು ಪಡಿಸಿ ಗಿರಿರಾಯರು ಕಾಜಿ ಮಸ್ತಾನ ಸಾಹೇಬರ ವಿವಾಹವಮಹೋತ್ಸವವನ್ನು ಒಳ್ಳೆ ವಿಜೃಂಭಣೆಯಿಂದ ಬೆಳೆಸಿದರು. ವರನ ಕೊಂಬುಗಳಿಗೆ ಬಂಗಾರದ ಅಣಸುಗಳನ್ನು ಹಾಕಿ ಅದರ ಮೈಗೆ ಬೆಲೆಯುಳ್ಳ ಕಲಾಬತ್ತಿನ ಜೂಲ ಹಾಕಿದರು. ವಧುವಿನ ಕೊರಳಲ್ಲಿ ಟಿಕ್ಕೆ ಸರಗಳನ್ನು ತೊಡಕಿಸಿ ಮೈ ಮೇಲೆ ಜರದ ಪೀತಾಂಬರವನ್ನು ಹೊದಿಸಿದರು, ಬೇಂಡಬಾಜಾ ಬಾಜಂತ್ರಿಗಳೊಂದಿಗೆ ವಧೂವರರ ಘನವಾದ ಮೆರವಣಿಗೆ ಹೊರಟಿತು. ತಾರಾಜೀ, ಪ್ಯಾರಾಜೀ, ಗುಲಾಬಜೀ ಮುಂತಾದ ವಾರಾಂಗನೆಯರ ಸೊಬಗಿನ ನೃತ್ಯಗಾಯನಗಳಾದವು. ಎಂಟಾನೆಂಟು ದಿವಸ ಬಂದು ಹೋದವರಿಗೆ ಪಕ್ವಾನ್ನದ ಭೋಜನಗಳು. ಈ ಗಲಸ್ತನೀ ಮಸ್ತಾನಸಾಹೇಬರ ಅಸದೃಶವಾದ ವಿವಾಹಮಹೋತ್ಸವಕ್ಕೆ ಐದಾರು ಸಾವಿರ ರೂಪಾಯಿಗಳ ವೆಚ್ಚವಾಯಿತು.

ಗಿರಿರಾಯರು ಒಳ್ಳೇ ರೂಪವಂತರೂ, ಹದಿನೆಂಟು ಹತ್ತೊಂಬತ್ತು ವರುಷದ ಪ್ರಾಯದವರೂ, ಮಿತಿಮೀರಿದ ಶ್ರೀಮಂತರೂ ಆಗಿರುವದರಿಂದ ಇಂಥ ವಸ್ತುವು ನ್ಯಾಯವಾಗಿ ತಮ್ಮದೇ ಎಂದು ಆ ಪ್ರಾಂತದ ವಾರಾಂಗನೆಯರ ಅಭಿಪ್ರಾಯವಾಯಿತು. ಅವರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಗಿರಿರಾಯರ ಸ್ನೇಹಿತರಾದ ಸುಂಕದ ವೆಂಕಣ್ಣ, ಶಾನುಭೋಗ ಮುಂತಾದವರ ಸಹಾನುಭೂತಿಯನ್ನು ಕೋರಿಕೊಳ್ಳಲಾರಂಭಿಸಿದರು. ಪ್ರಸಿದ್ಧರಾದ ವಾರಾಂಗನೆಯರು ತಮ್ಮ ಸಹಾಯವನ್ನು ಬಯಸುತ್ತಿರುವದನ್ನು ಕಂಡು ವೆಂಕಣ್ಣನವರಿಗೂ ಶಾನುಭೋಗರಿಗೂ ಒಳ್ಳೆ ಗೌರವ ಬಂದಂತಾಗಿ ಆ ಸ್ತ್ರೀ ಪಕ್ಷ ಪಾತಿಗಳು ವಾರಾಂಗನೆಯರಿಗೆ ಗಿರಿರಾಯರನ್ನು ಗೆದ್ದು ಕೊಡುವ ಹವಣಿಕೆಗೆ ಬಿದ್ದರು.

ಕಡೆಗೆ ವೆಂಕಣ್ಣನ ಪಾಲಿಗೆ ಕೀರ್ತಿ ಬಂದಿತು. ತಾರಾಜಿಯ ದೈವವು ಕೆರೆಯಿತು. ಗಿರಿರಾಯನು ಸೊಬಗಿನ ಉಡುಗೆತೊಡಿಗೆ ಮಾಡಿ ಕೊಂಡು ತನ್ನ ಮನೆಗೆ ಬಂದದ್ದು ಕಂಡು ತಾರಾಜಿಯು ಪರಮ ಸಂತುಷ್ಟಳಾಗಿ ವಿಲಾಸದಿಂದೆ ಮಂದಹಾಸಗೈದು ರಾಯರನ್ನು ಪ್ರೇಮದಿಂದ ಕೈ ಹಿಡಿದು ಮಂಚದ ಮೇಲೆ ಕುಳ್ಳಿರಿಸಿದಳು. ತಾರುಣ್ಯದ ಭರದಲ್ಲಿದ್ದ ಆ ವಾರಾಂಗನೆಯು ವೈಯ್ಯಾರದಿಂದ ಕೈ ಹಿಡಿದಾಕ್ಷಣವೇ ಗಿರಿರಾಯನ ಮೈಯೆಲ್ಲ ಚೋಂಪಿಸಿತು. ಅವನ ಚಿತ್ತವು ಬಹು ಪರಿಯಾಗಿ ಚಂಚಲವಾಯಿತು. ಭ್ರಮಿಷ್ಟನಂತೆ ಅವನ ಆ ವಿಶ್ವ ಯೋಷಿತೆಯ ಸುಂದರವಾದ ಮುಖವನ್ನು ನೋಡುತ್ತ ಕುಳಿತನು.

ತಾರಾಜಿಯು ಕುಲುಕುಲು ನಗುತ್ತೆ ಸುಗಂಧಮಯವಾದ ಅತ್ತರವನ್ನು ತನ್ನ ಅಂಗೈಯಲ್ಲಿ ಹಾಕಿಕೊಂಡು ಅದನ್ನು ಗಿರಿರಾಯನ ವಿಶಾಲವಾದ ಎದೆಗೂ ಪುಷ್ಟವಾಗಿರುವ ಆವನ ಮುಂಗೈಗೂ ಕಾಮಪರವಶಳಾಗಿ ತಿಕ್ಕಿದಳು. ಬಳಿಕ ಶಾನುಭೋಗರ ಬಾಳಪ್ಪನು “ತಾರಾಜೀ, ರಾಯರಂಥ ದೊಡವರು ನಿನ್ನ ಮನೆಗೆ ಬಂದಿದ್ದಾರೆ, ಸರಸವಾಗಿ ಗಾನ ಮಾಡ ಬೇಕಲ್ಲವೆ?” ಎಂದು ಕೇಳಿದನು. ವೀಣಾಮೃದಂಗಗಳ ಸಂಯೋಗವು ಸಿದ್ದವಾಗಿಯೇ ಇತ್ತು. ತಾರಾಜಿಯು “ಏನೀದಚ್ಚರಿ ಪ್ರಿಯ, ಏಣಾಂಕನದನಿಯ ನೀನಗಲಿರುವದು ಉಚಿತವೇನೋ” ಎಂಬ ಪದವನ್ನು ಅಭಿನಯದೊಂದಿಗೆ ಒಳ್ಳೆ ಮಂಜುಲವಾಗಿ ಹಾಡಿದಳು.

ಆಯಿತು, ತಾರಾಜಿಯ ಉದಯವಾಯಿತು. ಬಿದಿಗೆಯ ಚಂದ್ರ ರೇಖೆಯಂತಿರುವ ಮನೋಹರಳಾದ ವಿಶಾಲಾಕ್ಷಿಗೆ ಬೇಗನೆ ಅಸ್ತ ಸಮಯವೂ ಪ್ರಾಪ್ತವಾಯಿತು. ಕುಲಾಂಗನೆಯೂ, ವಿನಯವತಿಯೂ, ಮರ್ಯಾದೆ ಶೀಲಳೂ ಆಗಿರುವ ವಿಶಾಲಾಕ್ಷಿಯು ಕೇವಲ ಅರಸಿಕೆಯೆಂದೂ, ನಿಜವಾದ ಸ್ತ್ರೀಸುಖವು ಪ್ರಾಪ್ತವಾಗಬೇಕಾದರೆ ವಾರಾಂಗನೆಯರಿಂದಲೇ ಎಂದೂ ಗಿರಿರಾಯನ ದೃಢವಾದ ಅಭಿಪ್ರಾಯವಾಯಿತು. ತಾರಾಜಿಯು ಕೊಟ್ಟ ‘ಕಸ್ತೂರಿಕಾ ಕೇಶರ ಹೇಮಮಿಶ್ರ’ವಾದ ತಾಂಬೂಲವನ್ನು ಸ್ವೀಕರಿಸಿ ಉಳಿದವರೆಲ್ಲರೂ ಹೊರಟುಹೋದರು. ಗಿರಿರಾಯನೊಬ್ಬನೇ ತಾರಾಜಿಯ ಮೋಹಜಾಲದಲ್ಲಿ ಸಿಕ್ಕಿಕೊಂಡನು.

ಎಷ್ಟು ಸುವರ್ಣಲಾತಿಯನ್ನು ಸುರಿವಿದರೂ ವಾರಾಶಿಯ ಒಡಲೂ ವಾರಾಂಗನೆಯ ಒಡಲೂ ತುಂಬುವದುಂಟೇ? ದಿನವೊಂದಕ್ಕೊಂದರಂತೆ ಗಿರಿರಾಯನ ಮನೆಯ ಅನರ್ಘವಾದ ಅಲಂಕಾರಗಳು ತಾರಾಜಿಯ ಪಾಲಾಗುತ್ತ ನಡೆದವು. ಹಿಡಿ ಹೊನ್ನು ಅವಳ ನಿತ್ಯದ ವೆಚ್ಚಕ್ಕೆ ಸಾಲದಾಗಿತ್ತು. ರಾಯರು ಸ್ವತಃ ಮಾಡುವ ವ್ಯಯಕ್ಕಾದರೂ ಮಿತಿಯಿಲ್ಲ. ಇಂದು ಎರಡು ಸಾವಿರ ರೂಪಾಯಿಯ ಬೆಲೆಯುಳ್ಳ ಕುದುರೆಯ ಜೋಡು ತಂದಿದ್ದರೆ ಮುಂದಿನ ತಿಂಗಳಿಗೆ ಮತ್ತೊಂದು ಜೋಡು, ಇಂದಿನ ಬೆಲೆಯುಳ್ಳ ಪೋಷಾಕು ನಾಳೆ ಮುಜುರೆ ಮಾಡಿದವನ ಪಾಲು, ನೃತ್ಯಗಾಯನಗಳ ವೆಚ್ಚ; ಫಲಾಹಾರಗಳ ವೆಚ್ಚ; ಸುಗಂಧ ದ್ರವ್ಯಗಳ ವೆಚ್ಚ, ನೀರು ತೊಡಿಹಾಕಿದಂತೆ ರಾಯರ ಮನೆಯ ಧನಕನಕಾದಿಗಳೆ ಎರಡು ಮೂರು ವರ್ಷಗಳಲ್ಲಿ ಸವೆದುಹೋದವು.

ವಿಶಾಲಾಕ್ಷಿಯ ಕೊರಳಲ್ಲಿಯ ಚಂದ್ರಹಾರವು ತಾರಾಜಿಗೆ ಬೇಕಾಯಿತು. ಅದನ್ನು ತಂದುಕೊಡಲಿಕ್ಕೆ ಗಿರಿರಾಯನು ಒಪ್ಪಲಿಲ್ಲ. ಆ ಕ್ಷಣದಲ್ಲಿಯೇ ಗಿರಿರಾಯನು ಸಿಟ್ಟು ಬೆಂಕಿಯಾಗಿ ಆ ರಂಡೆಯ ಮನೆಯಿಂದ ಹೊರಬಿದ್ದದನ್ನು ಜನರು ಕಂಡರು. ಮರುದಿವಸ ಅವನು ಅವಳ ಮನೆಗೆ ಹೋಗಲಿಲ್ಲ. “ಏನು ಚಮತ್ಕಾರವಿದು?” ಎಂದು ವೆಂಕಣ್ಣನು ಬಾಳಪ್ಪನನ್ನು ಕೇಳಿದನು. “ಏನೋ ವಿಪರೀತವಾಗಿರಬಹುದು, ತಾರಾಜಿಯು ತನ್ನ ಮೆತ್ತಗಿನ ಪಾದರಕ್ಷದಿಂದ ಮೆಲ್ಲನೆ ಒಂದೇಟು ಹೊಡೆದರೂ ಹೊಡೆದಿರಬಹುದು! ಹಾ… ಹಾ… ಹಾ… !” ಎಂದು ಬಾಳಪ್ಪನು ನಕ್ಕನು.

ಪತಿಯು ನಾಲ್ಕು ದಿವಸ ಮನೆಯಲ್ಲಿಯೇ ಇರುವದನ್ನು ಕಂಡು ತಪಸ್ವಿನಿಯಾದ ವಿಶಾಲಾಕ್ಷಿಗೆ ಸಮಾಧಾನವಾಯಿತು. ಪತಿಯನ್ನು ಕಂಡು ಅಲಂಕಾರಗಳನ್ನು ಕಳಕೊಂಡ ವ್ಯಸನದ ವರಿಮಾರ್ಜನವಾದಂತಾಗಿ ಅವಳು ಒಳ್ಳೇ ಪ್ರೇಮದಿಂದ ಆತನ ಸೇವೆಯನ್ನು ಮಾಡತೊಡಗಿದಳು. ಪಾಪ, ಅವಳು ಉಬ್ಬಿನಿಂದ ಸತ್ಯನಾರಾಯಣನ ವ್ರತವನ್ನು ಮಾಡಿದಳು. ಆದರೆ ಸತ್ಯನಾರಾಯಣನಾದರೂ ಏನು? ನಾಳೆ ವಿಶಾಲಾಕ್ಷಿಯ ವೈರಿಯಾದ ಅನ್ಯಳೊರ್ವಳು ಅದೇ ವ್ರತವನ್ನು ಮಾಡಿದರೆ, ಆ ದೇವನು ಗಿರಿರಾಯನನ್ನೊಯ್ದು ಅನ್ಯಳ ಸ್ವಾಧೀನ ಮಾಡಿದನೇ! ‘ನಾ ಮಾಡಿದ ಕರ್ಮ ಬಲವಂತನಾದರೆ, ನೀ ಮಾಡುವದೇನೋ ಪರಿಯೇ’ ಎಂದು ಹರಿದಾಸರು ಹೇಳಿದ್ದು ಸಟೆಯೇ?

ಕರ್ಮಧರ್ಮ ಸಂಯೋಗದಿಂದೆ ಗಿರಿರಾಯನಿದ್ದ ಊರಿಗೆ ಡೊಂಬರಾಟ ಬಂದಿತು. ಅವರಲ್ಲಿದ ಓರ್ವ ಮೋಹನಾಂಗಿಯಾದ ಯುವತಿಯು ಬಹು ಚಮತ್ಕಾರವಾದ ಆಟಗಳನ್ನು ತೋರಿಸುತ್ತಿದ್ದಳಾದ್ದರಿಂದ ಆ ಡೊಂಬರಾಡಂಬರಕ್ಕೆ ಬಹುಜನರು ಮೋಹಿತರಾಗಿದ್ದರು. ಮಾನಪ್ಪನು ಗಿರಿರಾಯರ ಮನೆಗೆ ಬಂದು ರಾಯರೇ, ಆ ಡೊಂಬತಿಯ ಆಟವನ್ನು ತಾವು ನೋಡದಿದ್ದರೆ ಹುಟ್ಟಿದ್ದು ಅಸಾರ್ಥಕವಾದಂತಾಗುವದೆಂದು ಹೇಳಿದನು. ಕೇಳುವದೇನು? ಆಟಕ್ಕೆ ಪ್ರಾರಂಭವಾಯಿತು. ಹದಿನಾರು ವರುಷದ ಪ್ರಾಯದವಳಾದ ಆ ಡೊಂಬ ಸುಂದರಿಯು ಪಟ್ಟಿ, ಪೀತಾಂಬರವನ್ನುಟ್ಟು ತಲೆಗೆ ಚಿತ್ರಮಯವಾದ ಜರದ ಟೊಪ್ಪಿಗೆಯನ್ನಿಟ್ಟು, ಅಂತರದಲ್ಲಿ ಹಿಡಿದಿರುವ ಹಗ್ಗದ ಮೇಲೆ ಇಟ್ಟಿರುವ ಹರಿವಾಣದಲ್ಲಿ ತನ್ನ ಕಾಲುಗಳನ್ನಿಟ್ಟು, ಹರಿವಾಣವನ್ನು ಸರಿಸುತ್ತೆ ಹಗ್ಗದ ಈಚೆಯ ತುದಿಯಿಂದ ಆಚೆಯ ತುದಿಗೆ ಹೋಗುತ್ತಿರುವಾಗ ನಭಶ್ಚಾರಿಣಿಯಾದ ಊರ್ವಶಿಯಂತೆ ಕಂಡಳು. ಹಾಗೆ ನಡೆದಿರುವ ಆ ಒಯ್ಯಾರೆಯು ತನ್ನ ತೂಕವನ್ನು ಹಿಡಿದಿರುವದರಲ್ಲಿ ತದೇಕಧ್ಯಾನಳಾಗಿದ್ದರೂ ಆಗಾಗ ತನ್ನ ತೀವ್ರವಾದ ಕಟಾಕ್ಷದಿಂದ ಗಿರಿ ರಾಯನನ್ನು ನೋಡುತ್ತಿರಲು ಆ ಹುಚ್ಚನು ಅವಳ ಮೋಹಪಾಶದಲ್ಲಿ ಸಂಪೂರ್ಣವಾಗಿ ಸಿಕ್ಕನು.

ತಾರೆಯ ಪ್ರಾಯಶ್ಚಿತ್ತಕ್ಕಾಗಿಯೇ ತಾನು ಆ ಡೊಂಬರ ಮೋಹಕವಾದ ಬೊಂಬೆಯನ್ನು ವಶಮಾಡಿಕೊಳ್ಳವನೆಂದು ಹೇಳಿ ಗಿರಿರಾಯನು ಬಳ್ಳಾರಿಯಲ್ಲಿಯ ಬಂಗಲೆಗಳನ್ನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ತಂದು ಅವಳೊಡನೆ ದುರ್‍‍ವ್ಯಾಪಾರವನ್ನು ಮಾಡಲಾರಂಭಿಸಿದನು.

ಹರಕೆ ಹೊತ್ತು ಹಡೆದ ಮಗನು ಈ ರೀತಿ ದುರ್ಮಾರ್ಗಿಯಾಗಿ ಹಿರಿಯರ ಹೆಸರಿಗೆ ಕೇರಿನಂಥ ಕಲಂಕವನ್ನು ತಂದದ್ದಲ್ಲದೆ, ಮನೆಯ ಸಂಪತ್ತು ಈಡಾಡಿ ಸುಕುಮಾರಿಯಾದ ತನ್ನ ಸೊಸೆಯ ಸೌಖ್ಯಲತೆಗೆ ಬೆಂಕಿ ಹಾಕಿದನಲ್ಲಾ ಎಂಬ ವ್ಯಸನದಿಂದ ಗಿರಿರಾಯನ ತಾಯಿಯು ಹೃದ್ರೋಗವನ್ನು ತಗಲಿಸಿಕೊಂಡು ಸತ್ತು ಹೋದಳು. ಗಿರಿರಾಯನಿಗೆ ಇದೊಂದು ಹಿತವೇ ಆಯಿತು. ಆದರೆ ಪಾಪ, ವಿಶಾಲಾಕ್ಷಿಗೆ ಕಟ್ಟಡವಿಯಲ್ಲಿ ಕಣ್ಣು ಕಟ್ಟಿ ಬಿಟ್ಟಂತಾಯಿತು. ಡೊಂಬತಿಯು ಮನೆಯಲ್ಲಿಯೇ ಬಂದು ಕುಳಿತಳು. ಎಲ್ಲ ಕಾರಭಾರವೂ ಅವಳ ಕೈ ಸೇರಿಹೋಯಿತು.

ವಿಶಾಲಾಕ್ಷಿಗೆ ತೀವ್ರವಾದ ಮಾನಹಾನಿಯ ವೇದನೆಯಾಯಿತು. ತನ್ನ ದೇವತೆಯಾದ ಪತಿಯು ಕುಮಾರ್ಗಿಯಾಗಿ ಕೆಟ್ಟು ಹೋಗುತ್ತಿರುವದನ್ನು ಅವಳು ಕಣ್ಣಲಿ ನೋಡಲಾರಳು. ಸಂಸಾರದ ಸುಖವಂತೂ ಅವಳಿಗೆ ಚಿಕ್ಕಂದಿನಲ್ಲಿಯೇ ಇಲ್ಲದಂತಾಯಿತು. ಅಪ್ಸರೆಯರಿಗಿಂತಲೂ ಮಿಗಿಲಾಗಿರುವ ಆ ನವತರುಣಿಯು ವ್ಯಸನಾತಿರೇಕದಿಂದ ಸೊರಗಿ ಕಡ್ಡಿಯಾದಳು. ಶಶಿಬಿಂಬದಂತೆ ಮನೋಹರವಾಗಿರುವ ಅವಳ ಮುಖವು ಹುಚ್ಚಿಟ್ಟು ಸುರಿಯಿತು. ಪತಿವ್ರತೆಯೂ ಧರ್ಮಶೀಲಳೂ ಆಗಿರುವ ಆ ಸತಿಯು ನಿತ್ಯದಲ್ಲಿಯೂ ಬೊಗಸೆ ಬೊಗಸೆ ಕಣ್ಣೀರು ಸುರಿಸಿ ದೇವರಿಗೆ ಎಷ್ಟು ಸರಿಯಾಗಿ ಪ್ರಾರ್ಥಿಸಿದರೂ ಆ ನಿರ್ಗುಣನಾದ ಪರಮಾತ್ಮನಿಗೆ ಕರುಣೆ ಬರಲಿಲ್ಲ. ಆದರೂ ಆ ಕುಲಾಂಗನೆಯು ಪತಿಯ ಆಜ್ಞೆಯನ್ನು ಬೊಗಸೆಯೊಡ್ಡಿ ಅಂಗೀಕರಿಸಿ ಸಮಾಧಾನದಿಂದಲೂ, ವಿನಯದಿಂದಲೂ ಹೇಳಿದಷ್ಟು ಕೆಲಸ ಮಾಡಿಕೊಂಡು ಇದ್ದಳು. ಅಮ್ಮಾ, ವಿಶಾಲಾಕ್ಷಿ, ನಿನ್ನ ವಾರ್ತೆಯನ್ನು ಕೇಳಿಯೇ ದುಃಖದಿಂದ ನನ್ನ ಗಂಟಲು ಬಿಗಿದುಬರುತ್ತಿರಲು, ನೀನು ನಿನ್ನ ಪುಣ್ಯದ ಬಲದಿಂದಲೇ ಅದನ್ನೆಲ್ಲ ಸಹಿಸುತ್ತಿರುವಿಯಲ್ಲವೆ?

ಇರಲಿ, ಗಿರಿರಾಯನು ಕಡೆಗೆ ತನ್ನ ಉಂಬಳಿಯ ಚಿನ್ನೂರು ಗ್ರಾಮವನ್ನು ಮದರಾಸಿನಲ್ಲಿಯ ಓರ್ವ ವರ್ತಕನಿಗೆ ಮಾರಿಕೊಂಡು ಊರು ಬಿಟ್ಟು ಹೊರಟೆದ್ದು ನಡೆದನು. ಇಂದು ನಾಳೆ ಊರಿಗೆ ಮರಳಿ ಬರುವೆನೆಂದು ವಿಶಾಲಾಕ್ಷಿಗೆ ಸುಳ್ಳು ಹೇಳಿ ಹೋದ ಗಿರಿರಾಯನು ಮರಳಿ ಬರಲೇ ಇಲ್ಲ.

ವರುಷಾರು ತಿಂಗಳುಗಳಲ್ಲಿಯೇ ಮನೆ ಮಾರಿದ ಹಣವೆಲ್ಲ ಹಾರಿ ಹೋಯಿತು. ಸರಕಾರದಿಂದ ತಿಂಗಳಾ ಇನ್ನೂರು ರೂಪಾಯಿ ಬರುವದನ್ನು ಅವನು ಆ ಡೊಂಬತಿಯ ಸ್ವಾಧೀನ ಮಾಡುವನು. ಅವಳು ಅದರಲ್ಲಿ ಹತ್ತು ರೂಪಾಯಿಗಳನ್ನು ಓರ್ವ ಅಡುಗಲಜ್ಜಿಗೆ ಕೊಟ್ಟು ಗಿರಿರಾಯನಿಗೆ ಕೂಳು ಹಾಕಲು ಹೇಳಿ ಉಳಿದ ಹಣವನ್ನು ತನ್ನ ಸ್ಟೇಚ್ಛೆಯಿಂದ ವೆಚ್ಚ ಮಾಡುವಳು. ಧನಹೀನನೂ ಅರ್ಥಾತ್ ತೇಜೋಹೀನನೂ ಆಗಿರುವ ಗಿರಿರಾಯನನ್ನು ಆ ಜಾತಿಗಾರತಿಯು ಪ್ರೀತಿಸದಾದಳು. ಆದರೂ ಆ ಮೂಢನು ಆ ಪಾಪ ಕರ್ಮಿಣಿಯ ಬಾಗಿಲಲ್ಲಿ ನಾಯಿ ಬಿದ್ದಂತೆ ಕಾದುಕೊಂಡು ಬಿದ್ದಿರುವನು.

ಇಲ್ಲಿ ನೋಡ ಬನ್ನಿರಿ: ಗಿರಿರಾಯನು ಒಂದು ಧರ್ಮಶಾಲೆಯಲ್ಲಿ ಹರಕು ಚಾಪಿಯ ಮೇಲೆ ಮೇಹರೋಗದ ವೇದನೆಯಿಂದ ವ್ಯಥಿತನಾಗಿ ಹೊರಳಾಡುತ್ತಿರುವನು. ಅವನಿಗೆ ನೀರಡಿಕೆಯಾಗಿದೆ, ಬಾಯಿಯಲ್ಲಿ ನಾಲ್ಕು ಕಾಳು ನೀರು ಹಾಕುವವರಿಲ್ಲ. ತನ್ನ ಹೆಂಡತಿಯ ಸದ್ಗುಣಗಳನ್ನೂ ಅವಳ ಪತಿಸೇವಾ ತತ್ಪರತೆಯನ್ನೂ ನೆನೆದು “ವಿಶಾಲಾಕ್ಷಿ! ವಿಶಾಲಾಕ್ಷೀ!” ಎಂದು ಕೂಗಿ ಅತ್ತನು.

ಆ ಸಮಯದಲ್ಲಿ ವಿಶಾಲಾಕ್ಷಿ ತನ್ನ ಪತಿಗೆ ಹಿತವಾಗಲೆಂದು ನೆನಿಸಿ ತಿರುಪತಿಯ ವೆಂಕಟೇಶ್ವರನ ಮುಂದೆ ಇಳಿಯೊದಿಯನ್ನುಟ್ಟು ಕೊಂಡು ಪ್ರಾಣಾಚಾರಿಯಾಗಿ ಬಿದ್ದಿದ್ದಳು. ಮದರಾಸಿನಲ್ಲಿ ಕೂಗುತ್ತಿರುವ ಗಂಡನ ಸೊಲ್ಲು ಗಿರಿಯಲ್ಲಿ ಮಲಗಿದ ವಿಶಾಲಾಕ್ಷಿಯ ಕಿವಿದೆರೆಗೆ ಬಿದ್ದಿತು. ಭಯಗ್ರಸ್ತಳಾಗಿ ಆ ಮಹಾ ಸತಿಯು ಕಪ್ಪರಿಸಿಕೊಂಡೆದ್ದು ನೋಡುತ್ತಾಳೆ, ಜಗನ್ಮಾತೆಯಾದ ಲಕ್ಷ್ಮೀದೇವಿಯು ಧಾವಿಸಿ ಬಂದು ಅವಳನ್ನು ಗಟ್ಟಿಯಾಗಿ ಅಪ್ಪಿ ಕೊಂಡಳು. “ಮಗುವೆ, ಈ ಜನ್ಮದ ಸುಖವನ್ನು ನೀನು ಪರಮಾತ್ಮನಲ್ಲಿ ಬೇಡಿಕೊಂಡು ಬರಲಿಲ್ಲ, ಯತ್ನವೇನಿದೆ? ಮುಂದಿನ ಜನ್ಮದಲ್ಲಿ ನಿನಗೆ ಅಖಂಡವಾದ ಸೌಭಾಗ್ಯವನ್ನೂ ಸಂಪತ್ತನ್ನೂ ಕೊಟ್ಟ ಬಳಿಕ ನಿನಗೆ ಮೋಕ್ಷವನ್ನು ಕೊಡುವೆನು.” ಎಂದು ಹೇಳಿ ಲಕ್ಷ್ಮೀದೇವಿಯು ವಿಶಾಲಾಕ್ಷಿಯ ಪರಮ ಪವಿತ್ರವಾದ ಆತ್ಮವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಳು.

ಇತ್ತ ಗಿರಿರಾಯನು ನೀರು ನೀರೆಂದು ದೇಶಿಗನಂತೆ ಪ್ರಾಣಬಿಟ್ಟನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂರಣ
Next post ತಲೆಗಳು ಬೇಕು ತಲೆಗಳು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…