ತಲೆಗಳು ಬೇಕು ತಲೆಗಳು
ಖಾಲಿ ತಲೆಗಳು ಬೇಕು
ಬಿಕರಿಗಿರುವ
ತಲೆಗಳಲ್ಲದ ತಲೆಗಳು ಬೇಕು.
ಸರಕಾಗಿ
ಬಳಕೆಗೆ ಸಿದ್ಧವಿರುವ
ಬೇಕಾದುದ, ಬೇಗ, ಸುಲಭವಾಗಿ
ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು.
ತನ್ನ ಕಣ್ಣುಗಳಲಿ
ನಮ್ಮ ವಿನಃ
ತನ್ನನ್ನಾಗಲಿ ಯಾರನ್ನಾಗಲಿ
ಛಾಪಿಸಿಕೊಳ್ಳದಿರುವ ಸೇವಾವ್ರತಿ ತಲೆಗಳು ಬೇಕು.
ವಾಸನೆ ಗ್ರಹಿಸಿ
ಆಗುವುದು ಆಗದಿರುವುದು ವಿಂಗಡಿಸಿ
ಮೇಲ್ಮೆಗೈಯ್ಯುವ
ಅಪೂರ್ವ ಶಕ್ತಿಯುಕ್ತಿಯ ಚತುರ ನಾಯಿ ತಲೆಗಳು
ಬೇಕು.
ನಮ್ಮನ್ನು ಸಹಿಸದ ದನಿ
ಹತ್ತಿರದ ದೂರದ ಯಾವುದೇ ಆಗಲಿ
ಹೇಗೆ ಮೊರೆದರೂ ಮಣಿಯದ
ನಮ್ಮದಕ್ಕೆ ತಕ್ಷಣವೆ ಸ್ಪಂದಿಸುವ ಯಂತ್ರಮಾನವ
ತಲೆಗಳು ಬೇಕು.
ಸುತ್ತಲ ಆಗು ಹೋಗುಗಳ ಗಮನಿಸಿ
ವಿಶ್ಲೇಷಿಸಿ
ಮಾರ್ಗದರ್ಶನ ನೀಡುವ
ಸ್ವಯಂ ಕ್ರಿಯಾಶೀಲವಾಗಿ ರಕ್ಷಿಸುವ ಮುತ್ಸದ್ದಿ,
ಮಾರಿಗೆ ತಲೆಗಳು ಬೇಕು.
ಬೆಟ್ಟದಷ್ಟು ಆಮಿಷ ಒಡ್ಡಲಿ
ಹಿಡಿದು ಹಿಂಡಿ ಹಿಪ್ಪೆ ಮಾಡಲಿ
ಸಡಿಲದ ನಿಷ್ಠೆಯ
ನಾವೆಸೆದುದನೆ ಮಹಾ ಪ್ರಸಾದವೆನ್ನುವ ಚರಣದಾಸ
ತಲೆಗಳು ಬೇಕು.
ನಮ್ಮ ನಡೆ, ನುಡಿ ಏನೇ ಇರಲಿ
ತಮ್ಮದನು ಉನ್ನತವಾಗಿರಿಸಿ
ಮಾನಾಪಮಾನ, ನ್ಯಾಯಾನ್ಯಾಯ ಗೌಣಮಾಡಿ
ತಮ್ಮ ಅಸ್ಮಿತೆಯ ನಮ್ಮದರಲಿ ಗುರತಿಸಿಕೊಳ್ಳುವ
ಗೂಂಡಾ ತಲೆಗಳು ಬೇಕು.
ಹುಬ್ಬೇರಿಸದಿರಿ
ಮಾನವತಾವಾದ ಪಠ್ಯಪುಸ್ತಕದ ಸರಕು
*****