ಬೆಳಗಿನ ಅಜಾನ್‌ದ ಕರೆ ಮಸೀದಿಯಿಂದ ಬರುತ್ತಿದ್ದಂತಯೇ ಮುತವಲ್ಲಿ ಉಸ್ಮಾನ್ ಸಾಹೇಬರು ಹಾಸಿಗೆಯಿಂದ ಎದ್ದು ಕುಳಿತರು. ಪಕ್ಕದಲ್ಲಿ ಮಡದಿ ಆರಿಫ ಇಲ್ಲದಿರುವುದನ್ನು ಗಮನಿಸುತ್ತಾ ಹೊರಗಡೆಯ ಹಜಾರಕ್ಕೆ ಕಾಲಿಟ್ಟರು. ಹಜಾರದ ಮ್ಯಾಟ್‌ನ ಮೇಲೆ ಆಕೆಯೂ ಅವರ ಮಗ ಅನ್ಸರ್ ಇಬ್ಬರೂ ಅಸ್ತವ್ಯಸ್ತ ಸ್ಥಿತಿಯಲ್ಲಿ ಗಾಢ ನಿದ್ರೆಯಲ್ಲಿ ಮುಳುಗಿದ್ದರು. ಮೂರು ವರ್ಷದ ಪುಟ್ಟ ಅನ್ಸರ್‌ನ ಉಸಿರಾಟದ ಗತಿ ಸರಿ ಇಲ್ಲವೆಂದು ಮೇಲು ನೋಟಕ್ಕೆ ಕಾಣುತ್ತಿತ್ತು. ಅವನ ಹಣೆಯ ಮೇಲಿದ್ದ ತಣ್ಣೀರಿನ ಬಟ್ಟೆ, ಪಕ್ಕದಲ್ಲಿ ಚದುರಿದ್ದ ಹಾಲಿನ ಪಾತ್ರೆ, ಲೋಟ, ಚಮಚ, ನೀರಿನ ಜಗ್, ಬಿಸಿ ನೀರಿಟ್ಟಿದ್ದ ಫ್ಲಾಸ್ ಎಲ್ಲವೂ ಅವರಿಗೆ ಅರ್ಥವಾಯಿತು. ರಾತ್ರಿಯಿಡೀ ಜಾಗರಣೆ ಮಾಡಿದ್ದ ಆರಿಫ ಮೈಮೇಲಿನ ಪ್ರಜ್ಞೆ ಇಲ್ಲದೆ ಮಲಗಿರುವುದು….. ಅದೂ ಹಾಲ್‌ನಲ್ಲಿ…… ಅವರಿಗೆ ಚುಚ್ಚಿದಂತಾಯಿತು. ಒಮ್ಮೆಲೇ ಜಾಗೃತವಾದ ಪ್ರಜ್ಞೆಯಲ್ಲಿ ಪಕ್ಕದ ಕೋಣೆಯಲ್ಲಿ ಅವರ ಕೊನೆಯ ತಂಗಿ ಜಮೀಲಾ ಮತ್ತು ಅವಳ ಪತಿ ಮಲಗಿರುವುದು ನೆನಪಾಗಿ ಆತಂಕವಾಯಿತು. ಒಂದು ಚಾದರವನ್ನು ತಂದು ಈಕಗೆ ಹೊದಿಸಲೇ ಎಂದುಕೊಂಡವರು ಜಮೀಲಾಳ ಗಂಡನನ್ನು ನೆನೆಸಿಕೊಂಡು ಮೈ ಮುಖವನ್ನೆಲ್ಲಾ ಗಂಟು ಹಾಕಿಕೊಂಡು ಒರಟಾಗಿ ಅವಳನ್ನು ಅಲುಗಿಸಿದರು. ಆ ಅಲುಗಾಟಕ್ಕೂ ಏಳದ ದಣಿವಿನ ನಿದ್ರೆ ಅವಳದ್ದು. ಸರ್ರನೆ ಅವರ ಕೋಪವೇರಿತು.
….ಅವರ ಮನದ ಮೂಲದಲ್ಲಿ ಫಕೀರನೊಬ್ಬ ಹಾಡುತ್ತಿದ್ದ ತತ್ವಪದ ಮೊಳೆಯಿತು.
ಹಂದಿಯಂದೇಕೆ ಹೀಗೆಳೆಯುವೆ
ಮನದಲ್ಲಿ ಹಂದಿ, ಮನೆಯಲ್ಲಿ ಹಂದಿ
ಮೈಯಲ್ಲಿ ಹಂದಿ ಹೊತ್ತವನೇ….
ಹಂದಿಯ ಮಾಂಸವು ಮುಸ್ಲಿಮರಿಗೆ ಹರಾಮ್. ಅದರಂತೆಯೇ ಕೋಪವೂ ಕೂಡ. ಹರಾಮ್ ಹಂದಿಯನ್ನು ಕಂಡ ಮಾತ್ರದಿಂದಲೇ ಅಪವಿತ್ರರಾದಂತೆ ಎಗರಾಡುವ ಮುಸ್ಲಿಮರ ಮನದಲ್ಲಿ, ಮೈಯಲ್ಲಿ ಮನೆಯಲ್ಲಿ ಸರಿದಾಡುವ ಕೋಪವನ್ನು ಹಂದಿಯೊಡನೆ ಸಮೀಕರಿಸುವ ಈ ತತ್ವಪದವನ್ನು ಅನೇಕ ಬಾರಿ ಅವರು ಕೂಡ ಹಾಡಿಕೊಂಡಿದ್ದುಂಟು. ಆದರೆ ಈವತ್ತು ಅವರಿಗೆ ವಿನಾಕಾರಣ ಬಂದ ಕೋಪದೆದುರು, ಆ ತತ್ವ ಪದವು ಮರೆಯಾಯಿತು. ತೊಣಚಿ ಹೊಕ್ಕಂತೆ ಒಂದೆರಡು ಬಾರಿ ಎಗರಾಡಿದ ಅವರು ಏನೋ ಹೊಳದಂತೆ ಆರಿಫಳ ಕಾಲುಗಳನ್ನು ಬಲವಾಗಿ, ಒರಟಾಗಿ ತುಳಿದರು….. ಆರಿಫಳ ನಿದ್ರೆ ಹರಿಯಿತು. ಅವಳು ಸಟಕ್ಕನೆ ಎದ್ದು ಕುಳಿತಳು.
‘ಒಳಗೆ ಮಲಗಿಕೊಳೋದಿಕ್ಕೇನು ನಿನಗೆ?’ ಎಂದು ಕರ್ಕಶವಾಗಿ, ಝಾಡಿಸಿ, ಅವಳ ಉತ್ತರಕ್ಕೂ ಕಾಯದೆ ಬೀದಿಗಿಳಿದರು.
ಅವರ ಮನೆಯಿಂದ ಮಸೀದಿ ಒಂದು ಫರ್ಲಾಂಗ್ ದೂರವಿದ್ದಿತು. ಬೆಳಗಿನ ಜಾವದ ಇಬ್ಬನಿಯ ತೆರೆಗಳನ್ನು ಬೇಧಿಸುತ್ತ ಅವರು ಮುಂದಡಿಯಿಟ್ಟರು. ಮಸೀದಿಯತ್ತ ದೇಹ ಚಲಿಸುತ್ತಿದ್ದರೂ ಮನಸ್ಸು ಮಾತ್ರ ಮನೆಯತ್ತಲೇ ಅದೂ ರಾತ್ರಿಯ ಘಟನೆಯತ್ತಲೇ ತೊಯ್ದಾಡುತ್ತಿತ್ತು.
ಅವರ ಅತ್ಯಂತ ಪ್ರೀತಿಯ ಕೊನೆ ತಂಗಿ……. ಯಾವಾಕೆಗೆ ಅವರು ಅತ್ಯಂತ ಪ್ರೀತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಓದಿಸಿದ್ದರೋ………. ಯಾವಾಕೆಗೆ ಹದಿನೆಂಟು ರೇಷ್ಮೆ ಮತ್ತು ಜರಿ ಸೀರೆ ನೀಡಿ, ಬಂಗಾರದ ಒಡವೆ ಇಟ್ಟು ಆಕೆಯ ಗಂಡನಿಗೆ ಮೋಟಾರ್ ಬೈಕ್ ಕೊಟ್ಟು ಈಗೆ, ಐದು ವರ್ಷದ ಹಿಂದೆ ಮದುವೆ ಮಾಡಿದ್ದರೋ ಆ ತಂಗಿ, ನೆನ್ನೆ ಬಂದುದಷ್ಟೇ ಅಲ್ಲದೆ ಬಿರ್ಯಾನಿ ಶಾವಿಗೆಯೆಲ್ಲಾ ಕಹಿಯಾಗುವಂತೆ ಆಸ್ತಿಪಾಲು ಕೇಳಿದ್ದಳಲ್ಲ………. ಆಂ………? ಇದೆಂಥ ನಡವಳಿಕೆ, ಅವರ ಮೈ ಮತ್ತೊಮ್ಮೆ ಕೋಪದಿಂದ ಉರಿದು ಹೋಯಿತು.
ಅದರ ಮೇಲೆ ಮಾತಿಗೆಂಥ ಮಾತು ಜೋಡಿಸಿದಳು…..! ‘ಅಣ್ಣ ……. ಇದು ಅಲ್ಲಾಹ್ ಮತ್ತು ಪ್ರವಾದಿಯವರ ಶರೀಯತ್‌ನಿಂದ ನನಗೆ ಬಂದಿರುವ ಹಕ್ಕು ನೀವು ದುಡಿದಿರುವ ಆಸ್ತಿಯಲ್ಲಿ ನಾನು ಪಾಲು ಕೇಳಿಲ್ಲ……’ ತಾನು ದುಡಿದಿರುವುದಾದರೂ ಏನು? ಅಪ್ಪ ಮಾಡಿದ ಆಸ್ತಿಯನ್ನು ಬರೀ ರೂಢಿಸುತ್ತಿರುವುದು ತಾನೇ?
‘ನಮ್ಮ ತಂದೆಯ ಆಸ್ತಿಯಲ್ಲಿ ಆರನೇ ಒಂದು ಭಾಗ ನನ್ನದಾಗುತ್ತದೆ.’
ಓಹೋ!……….. ಎಲ್ಲಾ ಲೆಕ್ಕಾಚಾರ ಹಾಕಿಕೊಂಡ ಬಂದಿದ್ದಾಳೆ, ‘ತಗೋ…… ನಿನ್ನ ಆರನೇ ಒಂದು ಭಾಗ’ ಎಂದು ಕಪಾಳಕ್ಕೆ ಬಿಗಿಯಬೇಕೆನ್ನಿಸಿತು. ಆದರೆ ದೇಹವಿಡೀ ವ್ಯಾಪಿಸಿ ಎಗರಾಡುತ್ತಿದ್ದ ಹಂದಿಯ ಆಟಾಟೋಪವನ್ನು ಅವರು ಪ್ರಯತ್ನಪಟ್ಟು ಬಿಗಿಯಾಗಿ ತಡೆದರು. ಇಲ್ಲವಾದಲ್ಲಿ ಇಷ್ಟೆಲ್ಲಾ ಹಚ್ಚಿಕೊಟ್ಟು ಅವಳ ಅಂಗರಕ್ಷಕನಾಗಿ ಆರಡಿ ಎತ್ತರದ ಬಲಿಷ್ಠನಾದ ಅವಳ ಗಂಡ ಪಕ್ಕದಲ್ಲಿಯೇ ಕುರ್ಚಿಯಲ್ಲಿ ಕುಳಿತಿದ್ದಾನಲ್ಲ…..
ನೀವು ಇಷ್ಟೆಲ್ಲಾ ಮೊಹಲ್ಲದ ಪಂಚಾಯ್ತಿ ತೀರ್ಮಾನಗಳನ್ನು ಮಾಡುವವರು. ನೀವೇ ನಮ್ಮನ್ನು ಕರೆದು…… ‘ತಗೋ ನಿನ್ನ ಪಾಲನ್ನು’ ಅಂತ ಅನ್ಬೇಕಾಗಿತ್ತು. ನನ್ನ ವಿಚಾರವಂತೂ ಹೋಗ್ಲಿ……. ಸಕೀನ ಅಕ್ಕನದ್ದೇಳಿ……… ಇತ್ತ ಗಂಡನೂ ಇಲ್ಲ…. ಅತ್ತ ದುಡಿಯುವ ಗಂಡು ಮಕ್ಕಳೂ ಇಲ್ಲ. ಬೆಳೆದು ನಿಂತಿರುವ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನಾದರೂ ಅವಳು ಹೇಗೆ ಮಾಡಬೇಕು?
ಮುತವಲ್ಲಿ ಸಾಹೇಬರು ನೆಲವನ್ನೇ ಗಮನವಿಟ್ಟು ನೋಡುತ್ತಿದ್ದರು. ಇದೇನಾಶ್ಚರ್ಯ ಜಮೀಲ ಇಷ್ಟೊಂದು ಮಾತಾಡುತ್ತಿದ್ದಾಳೆ. ತಾನು ಮಾತಾಡದೆ ಕುಳಿತದ್ದಾದರೂ ಹೇಗೆ……….? ಅವರ ಕಣ್ಣ ಮುಂದೆ ಮಾವಿನ ತೋಟ, ತೆಂಗಿನ ತೋಟ, ಗದ್ದೆ…….. ರೇಷ್ಮೆ ಬೆಳೆಸಿದ್ದ ಹೊಲಗಳು ನಗರದಲ್ಲಿ ರಾರಾಜಿಸುತ್ತಿದ್ದ ಮನೆಗಳು ಇವಿಷ್ಟು ಹಾದು ಹೋದುವು. ಇವುಗಳಲ್ಲಿ ಯಾವುದನ್ನು ತಮ್ಮ ನಾಲ್ವರು ತಂಗಿಯರೊಡನೆ ಹಂಚಿಕೊಳ್ಳುವುದು?
ಜಮೀಲ ಒಂದೇ ಸಮನೆ ಕಪ್ಪೆಯಂತೆ ಒಟಗುಟ್ಟುತ್ತಿದ್ದಳು. ‘ಅಣ್ಣಾ…. ನೀವು ನನ್ನ ಮದುವೆ ಒಳ್ಳೆ ಕಡೇನೇ ಮಾಡಿದೀರಿ……… ನಾನು ಇಲ್ಲಾ ಅನ್ನೋಲ್ಲಾ……. ಆದರೆ ನೀವೇ ಅಲೋಚಿಸಿ! ಅಪ್ಪ ಸತ್ತು ಹತ್ತು ವರ್ಷ ಆಗಿ ಹೋಯಿತಲ್ಲ……. ಆವಾಗಲೇ ನನ್ನ ಪಾಲನ್ನು ನೀಡಿದ್ದರೆ ಈ ವೇಳೆಗಾಗಲೇ ನನ್ನ ಮದುವೆಗೆ ಆದ ಖರ್ಚಿನ ಹತ್ತು ಪಾಲಿನಷ್ಟು ಸಂಪಾದನೆ ನನಗೆ ಆಗುತ್ತಿತ್ತು. ನಾನು ಅದೆಲ್ಲಾ ಲೆಕ್ಕ ಕೇಳುತ್ತಿಲ್ಲ. ಆದರೆ…..”
ಮುತವಲ್ಲಿ ಸಾಹೇಬರ ಸಹನೆಯ ಕಟ್ಟೆಯೊಡೆಯಿತು. ಆರಿಫ ಬಾಗಿಲ ಮರೆಯಲ್ಲಿ ನಿಂತು, ಆತಂಕದಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಳು. ಜಮೀಲಾಳ ಮಾತು, ಧ್ವನಿ, ವಾದ ಎಲ್ಲವು ಅವಳಿಗೂ ಕೆಟ್ಟದೆನಿಸುತ್ತಿತ್ತು. ಆದರೆ ಅವಳ ಬೇಡಿಕೆಯಲ್ಲಿ ನ್ಯಾಯವಿತ್ತಲ್ಲಾ……….. ಅದನ್ನು ಯಾರು ತಾನೇ ನಿರಾಕರಿಸಲು ಸಾಧ್ಯ? ಮುತವಲ್ಲಿ ಸಾಹೇಬರಿಗೆ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಬಾಡಿಗೆ ತರುವ ಮನೆ ಮತ್ತು ಕಾಫಿ ತೋಟವು ಅವಳ ತವರಿನವರು ಅವಳಿಗೆ ನೀಡಿದ ಪಾಲಿನಿಂದ ಬಂದದ್ದೇ ಅಲ್ಲವೇ? ಅದನ್ನು ಆರಿಫ ಬೇಡದೆ ಪಡೆದದ್ದು. ಅವಳ ತವರಿನವರು ಅವಳನ್ನೂ ಮುತವಲ್ಲಿ ಸಾಹೇಬರನ್ನೂ ಕರೆಸಿ ಒಳ್ಳೆಯ ಊಟಹಾಕಿ, ಅವಳಿಗೆ ಹೊಸ ಸೀರೆ ರವಿಕೆಯನ್ನು ಉಡಿಸಿ, ಆಸ್ತಿಯನ್ನು ಅವಳ ಹಸರಿಗೆ ನೋಂದಾಯಿಸಿದ ಪತ್ರವನ್ನು ನೀಡಿ ವಿಶ್ವಾಸದಿಂದ ಬೀಳ್ಕೊಂಡಿದ್ದರು. ಅದನ್ನೇ….. ಜಮೀಲಾ ಈಗ ಹೋರಾಡಿ ಪಡೆಯಬೇಕು.
ಮುತವಲ್ಲಿ ಸಾಹೇಬರು ಏನನ್ನೂ ಮಾತಾಡದೆ ಹೂಂಕರಿಸಿ ಎದ್ದು ನಿಂತರು, ಜಮೀಲಾಳನ್ನೊಮ್ಮೆ ದುರುಗುಟ್ಟಿ ನೋಡಿದರು. ಅಣ್ಣನ ಈ ಅವತಾರವನ್ನು ನೋಡಿ ಅವಳು ಕೂಡ ಸ್ವಲ್ಪ ಬೆದರಿದಳು. ಗಂಡನನ್ನೊಮ್ಮೆ ನೋಡಿ, ಅಲ್ಪಸ್ವಲ್ಪ ಧೈರ್ಯವನ್ನು ಕೂಡಿಸಿಕೊಂಡು, ಬಾಯಿಪಾಠ ಮಾಡಿದವಳಂತೆ, ‘ನೀವು ನನ್ನ ನ್ಯಾಯಬದ್ಧ ಪಾಲನ್ನು ನೀಡದಿದ್ದರೆ, ನಾನು ಕೋರ್ಟಿನ ಮೂಲಕ ಪಡೆದುಕೊಳ್ಳಬೇಕಾಗುತ್ತದೆ’ ಎಂದು ಕೊನೆಯದಾಗಿ ಒದರಿಬಿಟ್ಟಳು. ಅವಕ್ಕಾದರೂ ಒಂದೇ ಒಂದು ಮಾತನಾಡದೆ ಮುತವಲ್ಲಿ ಸಾಹೇಬರು ದಾಪುಗಾಲಿಡುತ್ತ ತಮ್ಮ ಮಲಗುವ ಕೋಣೆಯನ್ನು ಸೇರಿ ಬಿಟ್ಟರು. ಪರದೆಯ ಹಿಂದೆ ನಿಂತಿದ್ದ ಆರಿಫ ಅವರ ಆಘಾತದ ನಡಿಗೆಗೆ ಬೆದರಿ, ಕೂಡಲೇ ಸರಿದು ಜಾಗ ಮಾಡಿಕೊಟ್ಟಳು – ಮುತವಲ್ಲಿ ಸಾಹೇಬರು ಟೋಪಿಯನ್ನು ಕೂಡ ತಲೆಯಿಂದ ಸರಿಸದೆ ಮಂಚದ ಮೇಲೆ ವಿಗ್ರಹದಂತ ಕುಳಿತರು. ಹಣೆಯ ಮೇಲೆ ಬೆವರಹನಿಗಳು ಮೂಡಿದವು. ಅವಳು ಕೂಡಲೇ ಫ್ಯಾನಿನ ಸ್ವಿಚ್ಚನ್ನು ಒತ್ತಿದಳು.
…….ಈ ಘಟನೆಯ ಎಲ್ಲಾ ವಿವರಗಳು ಒಡನೆ ಅವರ ಮನದೆದುರು ಸುಳಿದು ಮಾಯವಾಯಿತು. ಚಳಿಗಾಲವಾಗಿದ್ದರಿಂದ ಮಸೀದಿಯ ಹಿಂದಿನ ಬಚ್ಚಲು ಮನೆಯಲ್ಲಿ ನೀರು ಕುದಿಯುತ್ತಿತ್ತು. ಅಭ್ಯಾಸ ಬಲದಿಂದ ಅವರು ಯಾಂತ್ರಿಕವಾಗಿ ಎಲ್ಲಾ ಕ್ರಿಯಗಳನ್ನೂ ಮುಗಿಸಿದರು. ಕೊನೆಗೆ ನಮಾಜ್ ಕೂಡ…….. ದೇಹಶುದ್ಧಿ ಮಾಡಿಕೊಂಡಿದ್ದರೂ ಮನಕ್ಲೇಶ ಮಾತ್ರ ಹಾಗೆಯೇ ಉಳಿದಿತ್ತು. ಜಮೀಲಾಳ ಉದ್ಧಟತನದ ಅತಿರೇಕ ಒಂದೆಡೆಯಾದರೆ ಆಸ್ತಿಯನ್ನು ಹಂಚಿಕೊಳ್ಳುವ ಖೇದ ಇನ್ನೊಂದೆಡೆ ಅವರನ್ನು ಕಾಡುತ್ತಿತ್ತು. ಅವಳನ್ನು ಶಿಕ್ಷಿಸಿ ಆಸ್ತಿಯನ್ನು ಇಡಿಯಾಗಿ ಹೇಗೆ ಉಳಿಸಿಕೊಳ್ಳಬೇಕೆಂಬುದೇ ಅವರ ಮುಖ್ಯ ಸಮಸ್ಯೆಯಾಗಿತ್ತು. ಮಸೀದಿ ವಿಶಾಲವಾಗಿತ್ತು. ಬೆಳಗಿನ ಜಾವದಲ್ಲಿ ನಮಾಜಿಗೆ ಬಂದಂತಹವರು ಬೆರಳೆಣಿಕೆಯಷ್ಟು ಜನ ಮಾತ್ರ ಅದರಲ್ಲಿ ಅವರ ಆಪ್ತ ವಲಯಕ್ಕೆ ಸೇರಿದವರು ಯಾರೂ ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮನೆಯತ್ತ ಹೊರಟರು.
ಆದರೂ ಯಾಕೋ ಮನೆಯತ್ತ ಹೆಜ್ಜೆ ಹಾಕಲು ಅವರಿಗೆ ಮನಸ್ಸು ಬರಲಿಲ್ಲ. ಬಲು ನಿಧಾನವಾಗಿ ನಡೆದು ಅವರು ಸರ್ಕಲ್ಲಿನ ಬಳಿಗೆ ಬರುವಷ್ಟು ಹೊತ್ತಿಗೆ ಮದೀನ ಹೋಟೆಲ್ಲು ಬಾಗಿಲು ತೆರೆದಿತ್ತು. ಒಳ ಹೊಕ್ಕು ಚಹ ಸೇವಿಸಿದರೂ ಅವರಿಗೆ ಹಾಯೆನಿಸಲಿಲ್ಲ. ಹೋಟೆಲಿನಿಂದ ಹೊರಬಿದ್ದ ಅವರು ಅತ್ಯಂತ ನಿರುತ್ಸಾಹಕ ಭಂಗಿಯಲ್ಲಿ ಸರ್ಕಲ್ಲಿನ ಮಧ್ಯಭಾಗಕ್ಕೆ ಬಂದು ಪೋಲೀಸಿನವನ ಸ್ಥಾನದಲ್ಲಿ ನಿಂತರು ಟ್ರಾಫಿಕ್ ನಿಯಂತ್ರಿಸಲು ಶೀಟಿ ಊದಿ ಬೆರಳು ತೋರಲಿಲ್ಲ. ಅಷ್ಟೇ! ಅಲ್ಲಿ ನಿಂತು ನಾಲ್ಕು ಕಡೆಯೂ ಒಮ್ಮ ದೃಷ್ಟಿ ಹಾಯಿಸಿದರು. ಯಾವ ದಿಕ್ಕಿಗೆ ಹೋಗಬೇಕೆಂದು ನಿಶ್ಚಯಿಸಲಾರದ ಅವರ ಭಂಗಿಯು ಕರುಣಾಜನಕವಾಗಿತ್ತು. ಅಷ್ಟರಲ್ಲಿ ಅಘಟಿತ ಘಟನೆಯೊಂದು ನಡೆದು ಹೋಯಿತು. ಢಬ್ ಎಂಬ ಶಬ್ದ ಕೇಳಿ ತಿಳಿಯುವಷ್ಟರಲ್ಲಿ……. ಅವರು ಬಂದ ಹಾದಿಯಲ್ಲಿದ್ದ ಎಲೆಕ್ಟ್ರಿಕ್ ತಂತಿಗಳ ಮೇಲಿನಿಂದ ಒಂದು ಕಾಗೆಯು ಮರದಿಂದ ಒಣ ಎಲೆ ಉದುರುವಂತೆ ಕೆಳಗೆ ಬಿದ್ದಿತು. ಕೆಲವೇ ಮಾರುಗಳ ದೂರದಲ್ಲಿ ನಡೆದ ಘಟನೆಯನ್ನು ನೋಡಿದ ಮುಖದಲ್ಲಿ ಸಾಹೇಬರು ಅಲ್ಲಿಂದ ಹೊರಡಲು ಸಿದ್ಧರಾಗುತ್ತಿದ್ದಂತೆಯೆ ಅದೆಲ್ಲಿಂದ ಬಂದಿತೋ ಒಂದು ಕಾಗೆಯು ‘ಕಾ….. ‘ಕಾ….. ಎಂದಿತು ಅಷ್ಟೇ! ಆ ದನಿ ಮಾರ್ದನಿಯಾಗತೊಡಗಿತು. ಅದ್ಯಾವ ಮಾಯೆಯಲ್ಲಿ ಅಷ್ಟೊಂದು ಕಾಗೆಗಳು ಕೂಡಿ ದವೋ…. ಕೆಲವೊಂದು ಧ್ವನಿಗಳು ಅತ್ಯಂತ ಕರುಣಾಜನಕವಾಗಿವೆಯೆಂದು ಅವರಿಗೆ ಅನ್ನಿಸತೊಡಗಿತು. ಕೆಲವೊಂದು ಆಕ್ರೋಶದಿಂದ ಕೂಡಿರುವಂತೆ ದೂರನಿಂತು….. ಉದಾಸೀನವಾಗಿ ಕರ್ತವ್ಯ ನಿರ್ವಹಿಸುತ್ತಿರುವಂತೆ ಇನ್ನೂ ಕೆಲವು ಶಾಪದ ನಿಟ್ಟುಸಿರಿನಂತೆ……. ಬಿಡುಗಡೆಯ ಕಹಳೆಯಂತೆ…… ಅದುಮಿಟ್ಟ ಸಂತಸದ ಉಲಿಯಂತೆ ಹೀಗೆ ಏನೇನೋ ಅನ್ನಿಸತೊಡಗಿ ಇಲ್ಲಿಂದ ಪಾರಾಗಬೇಕು ಎಂದು ಅವರು ನಿಶ್ಚಯಿಸುವಷ್ಟರಲ್ಲಿಯೇ ಇನ್ನೂ ಕೆಲವು ಕುಕ್ಕುವಂತೆ ಅವರ ಮೇಲಿನಿಂದ ಎರಗತೊಡಗಿದವು. ಗಾಬರಿಯಿಂದ ಅವರು ಮುಂದಡಿಯಿಟ್ಟರು. ಹಾಗೆಯೇ ಕಡೆಗಣ್ಣಿನಿಂದ ನೋಟವೊಂದು ಹರಿಸಿದಾಗ ನಿಶ್ಚೇಷ್ಟಿತವಾದ ಕಾಗೆ ….. ಅರೆ!……… ಕಡುಗಪ್ಪಿನಲ್ಲೂ ಇಷ್ಟೊಂದು ಕಾಮನಬಿಲ್ಲಿನ ಬಣ್ಣಗಳಿವೆಯೇ….
ಅನ್ಯಮನಸ್ಕರಾಗಿಯೇ ಮನ ತುಂಬಿದ ಮುತವಲ್ಲಿ ಸಾಹೇಬರು ಕೋಣೆಯನ್ನು ಸೇರಿದಾಕ್ಷಣ ಅವರಿಗೆ ನಿದ್ರೆಯಾವರಿಸಿತು. ಆರಿಫ ಮನಕೆಲಸದಲ್ಲಿ ನಿರತಳಾಗಿದ್ದಳು ಇತ್ತ. ಕಾಯಿಲೆಯ ಮಗನನ್ನೊಮ್ಮೆ ಉಪಚರಿಸಿದರೆ ಇನ್ನೊಂದೆಡೆ ಶಾಲೆಗೆ ಹೋಗುವ ಮಕ್ಕಳಿಗೆ ತಿಂಡಿ ಊಟ, ಸ್ಕೂಲ್ ಬ್ಯಾಗ್, ಶೂ ಸಾಕ್ಸ್ ಎಂದು ಹೋರಾಡುತ್ತ, ಮತ್ತೊಂದೆಡೆ ಜಮೀಲ ಮತ್ತವಳ ಗಂಡನಿಗಾಗಿಯೂ ವಿಶೇಷ ಅಡಿಗೆಗಾಗಿ ಸಿದ್ಧತೆಯನ್ನೂ ನಡೆಸುತ್ತಿದ್ದಳು. ಒಟ್ಟಿನಲ್ಲಿ ಮನೆಯ ಮಗಳು ಬೇಸರಪಟ್ಟುಕೊಂಡು ಶಪಿಸಿ ಹೋಗುವುದು ಅವಳಿಗೆ ಬೇಕಿರಲಿಲ್ಲ. ಅವಳಿಗೆ ತನ್ನ ತಾಯಿಯ ಮಾತು ನೆನಪಿಗೆ ಬಂದಿತು. ‘ಹಕ್ದಾರ್ ತರ್‌ಸೆತೂ ಅಂಗಾರ್ ಕಾ ನ್ಹೂ ಬರ್‌ಸೆ’ (ಹಕ್ಕುದಾರ ಮೊರೆ ಇಟ್ಟಲ್ಲಿ ಬೆಂಕಿ ಮಳೆ ಬಂದೀತು).
ಹಿಂದಿನ ರಾತ್ರಿ ಅವಳು ಅತ್ಯಂತ ಕೆಳದನಿಯಲ್ಲಿ ಮುತವಲ್ಲಿ ಸಾಹೇಬರಿಗೆ ತಿಳಿಸಿದ್ದಳು ಕೂಡ, ‘ರೀ……….. ಮನೆ ಮಗಳನ್ನು ನೋಯಿಸಬೇಡಿ ಕುರ್‌ಆನ್‌ನಲ್ಲಿ ಸ್ಪಷ್ಟವಾಗಿಯೇ ಹೆಣ್ಣು ಮಕ್ಕಳ ಪಾಲು ಇಂತಿಷ್ಟು ಕೊಡಬೇಕು ಅಂತ ಇದೆಯಲ್ಲಾ ನಿಮ್ಮ ನಾಲ್ವರು ತಂಗಿಯರನ್ನೂ ಕರೆಸಿಕೊಂಡು ಅದೇನು ಕೊಡಬೇಕೋ ಕೊಟ್ಟು ಕೈ ತೊಳೆದುಕೊಳ್ಳಿ ನಮಗೆ ಇರುವಷ್ಟರಲ್ಲಿ ಅಲ್ಲಾಹ್ ಬರಕತ್ ಕೊಡ್ತಾನೆ’. ಆರಿಫ ಸಾಮಾನ್ಯವಾಗಿ ಅವರಿಗೆ ಸಲಹೆ ನೀಡುತ್ತಿರಲಿಲ್ಲ. ಒಳಗೊಳಗೇ ಆಕೆಗೆ ಅಧೈರ್ಯವೆನಿಸಿದ್ದರೂ…. ಇಷ್ಟೊಂದು ಮಾತನಾಡಿ ಬಿಟ್ಟಿದ್ದಳು. ಮುತವಲ್ಲಿ ಸಾಹೇಬರು ನೂರಾರು ತೀರ್ಮಾನಗಳನ್ನು ಮಾಡಿದ್ದವರು ಅವರಿಗೆ ತಿಳಿಯದ ಹೊಸ ವಿಚಾರವನ್ನೇನಾದರೂ ಇವಳು ಹೇಳುತ್ತಿದ್ದಾಳೆಯೇ….? ಹಣ್ಣೆ ಹಂಗಸಿನ, ಬುರ್ಕಾದಲ್ಲಿರುವ ಯಕಶ್ಚಿತ್ ಹೆಣ್ಣಿನ ಮಾತು ಅವರಿಗೆ ಹೇಗೆ ತಾನೇ ರುಚಿಸೀತು? ‘ನೀನು ತೆಪ್ಪಗೆ ನಿನ್ನ ಕೆಲ್ಸ ನೋಡು’ ಎಂದು ಗುರುಗುಟ್ಟಿ ಅವರು ಗೊರಕೆ ಹೊಡೆದಿದ್ದರು.
ಚಪಾತಿ ಲಟ್ಟಿಸುತ್ತಿದ್ದ ಆರಿಫ ಅತ್ಯಂತ ಚಿಂತಾಕ್ರಾಂತಳಾಗಿದ್ದಳು. ಯಾ………. ಪರ್ವರ್ದಿಗಾರ್, ಇವರಿಗೆ ಸದ್ಭುದ್ಧಿಯನ್ನು ನೀಡು…….’ ಎಂಬ ಮೊರೆಯೊಂದು ಅವಳ ಹೃದಯದಿಂದ ಹೊರಟಿತು. ಅನ್ಸರ್‌ಗೆ ಅವಳು ಆಗ ತಾನೇ ಹಣೆಯ ಮೇಲೆ ಒದ್ದೆ ಬಟ್ಟೆಯನ್ನಿಟ್ಟು ಬಂದಿದ್ದಳು. ಆಕೆ ಯಾಂತ್ರಿಕವಾಗಿ ಚಪಾತಿ ಲಟ್ಟಿಸುತ್ತ, ಆಗಾಗ್ಗೆ ಕಾವಲಿಯ ಮೇಲಿದ್ದ ಚಪಾತಿಯನ್ನು ಹೊರಳಿಸುತ್ತಾ ಇದ್ದರೂ ಯಾಕೋ ಒಮ್ಮೆಲೆ ಅನ್ಸರ್ ನರಳಿದಂತೆನಿಸಿ ಅವಳು ದಿಗ್ಗನೆದ್ದು ಅವನನ್ನು ಮಲಗಿಸಿದ್ದ ಹಜಾರಕ್ಕೆ ಬಂದಳು.
ಆಗಲೇ ಆರಿಫರ ಕಣ್ಣಿಗೆ ಬಿದ್ದದ್ದು…….. ಆ ಹೆಂಗಸು. ಆಕೆ ಬುರ್ಕಾ ಹಾಕಿಕೊಂಡು ಮುಖದ ಮೇಲೆ ನಿಕಾಬ್ ಇಳಿಬಿಟ್ಟಿದ್ದರೂ ಆರಿಫಗೆ ಕೂಡಲೇ ಅವಳ ಗುರುತು ಸಿಕ್ಕಿತು. ಅಲ್ಲಲ್ಲೇ ತೂತುಗಳಿದ್ದ ಕಪ್ಪು ಬಣ್ಣ ಹೋಗಿ ಕಂದು ಬಣ್ಣಕ್ಕೆ ತಿರುಗಿದ್ದ ಬುರ್ಕಾ ದೊಳಗಿಂದ ಕೊಳೆಯಾದ ಸೀರೆಯೊಂದು ಇಣಕುತ್ತಿತ್ತು. ಒಡೆದ ಹಿಮ್ಮಡಿ, ಬಣ್ಣ ಕಳೆದುಕೊಂಡ ಚರ್ಮ ಸೇಫ್ಟಿಪಿನ್ ಚುಚ್ಚಿ ರಿಪೇರಿ ಮಾಡಿದ್ದ ಹವಾಯಿ ಚಪ್ಪಲಿ ಎಲ್ಲವನ್ನೂ ಒಂದೇ ನೋಟದಲ್ಲಿ ಗ್ರಹಿಸಿದ ಆರಿಫ ಆ ಹೆಂಗಸಿನ ದೈನ್ಯಾವಸ್ಥೆಯಿಂದ ಸ್ವತಃ ನಾಚಿ ಹೋದಳು. ಅಷ್ಟೇ ಅಲ್ಲದೇ……. ಬಂದಾಕೆ ಒಳಗೆ ಕೂಡಬಾರದೆ ವರಾಂಡದಲ್ಲಿಯೇ…… ಅದೂ ಮುತವಲ್ಲಿ ಸಾಹೇಬರನ್ನು ಕಾಣಲು ಬರುವ ಅನೇಕ ಗಂಡಸರ ನಡುವೆ ಮೂಲೆಯಲ್ಲಿ ನಿಂತದ್ದನ್ನು ಕಂಡು ಅವಳ ಗಂಟಲು ಉಬ್ಬಿ ಬಂದಿತು. ವರಾಂಡಕ್ಕೂ ಹಜಾರಕ್ಕೂ ನಡುವೆ ಇಳಿಬಿದ್ದ ಪರದೆಯ ಹಿಂದೆ ನಿಂತು, ಬಂದಾಕೆಗೆ ಮಾತ್ರ ಕೇಳಿಸುವಷ್ಟು ಕೆಳದನಿಯಲ್ಲಿ ಉಸುರಿದಳು ‘ಸಕೀನ ಅಕ್ಕ….. ನಿಮ್ಮ ದಮ್ಮಯ್ಯ! ಅಲ್ಲೇಕೆ ನಿಂತುಕೊಂಡಿದೀರಿ…. ಒಳಗೆ ಬನ್ನಿ’
ಅವಳಿಗೆ ಕೇಳಿಸಿತೋ….. ಇಲ್ಲವೋ ಬುರ್ಕಾದ ತೆರೆ ಅವಳ ಮೇಲಿದ್ದುದರಿಂದ ಮುಖದ ಭಾವ ಆರಿಫಗೆ ಗೊತ್ತಾಗಲಿಲ್ಲ. ಆದರೆ ಅವಳ ಪಕ್ಕದಲ್ಲಿದ್ದ ಯುವಕ ಮಾತ್ರ ‘ಪರವಾಗಿಲ್ಲ…… ಮಾಮಿ, ನಿಮ್ಮ ಕೆಲಸ ಮಾಡಿ ಹೋಗಿ ಮಾಮ ಬಂದರೆ ನಾವು ಮಾತಾಡಿ ಹೊಗ್ತೀವಿ……’ ಎಂದು ನಿರ್ಧಯವಾಗಿ ನುಡಿದ.
ಸಕೀನ………. ಅವರ ಹಿರಿಯ ನಾದಿನಿ, ಆತ್ಯಂತ ಸ್ವಾಭಿಮಾನಿ ವಿಧವೆಯಾದ ಮೇಲೆ ಕೂಡ ತನ್ನ ಮೂರು ಮಕ್ಕಳನ್ನು ಕಟ್ಟಿಕೊಂಡು ಟೈಲರಿಂಗ್ ಮಾಡುತ್ತ ಸಂಸಾರ ನಡೆಸಿದವಳು. ತವರು ಮನೆಯ ಒಂದು ಹನಿ ನೀರಿನ ಆಸೆಯನ್ನೂ ಇಟ್ಟವಳಲ್ಲ. ಯಾವಾಗಲಾದರೂ ಹಬ್ಬಕ್ಕೆ ಬಂದು ಅಣ್ಣನ ಕಾಲಿಗೆ ನಮಸ್ಕರಿಸಿ ಹೋಗುವವಳು. ಇಂದು…… ಇಷ್ಟೊಂದು ಪರಕೀಯಳಾಗಿ ನಾಲ್ಕು ಜನರಂತೆ ಅವರ ಸಾಲಿನಲ್ಲಿ ನಿಂತಿದ್ದಾಳೆ. ‘ಇವಳೂ ಕೂಡ ಜಮೀಲಾಳೊಡನೆ ಮಸಲತ್ತು ನಡೆಸಿ ಪಾಲು ಕೇಳಲು ಬಂದಿರುವಳೇ’ ಎಂದೆನಿಸಿದರೂ ಆರಿಫ ಕೂಡಲೇ ಆ ವಿಚಾರವನ್ನು ಬದಿಗೊತ್ತಿ, ಸಕೀನಳನ್ನು ಮತ್ತೊಮ್ಮೆ ಒಳಗೆ ಕರೆದಳು. ಹೇಗಾದರಾಗಲೀ…… ಗಂಡ ಎದ್ದು ಹೊರ ಬರುವ ವೇಳೆಗಾದರೂ ಸಕೀನಾಳನ್ನು ಹಜಾರದೊಳಗಾದರೂ ಕರೆದು ಕೂರಿಸಬೇಕೆಂಬ ಅವಳ ಸನ್ನಾಹ ವಿಫಲವಾಯಿತು.
ಮೈ ಸ್ವಲ್ಪ ಭಾರವೆನಿಸಿದರೂ ಸುಖನಿದ್ರೆ ತಿಳಿದೆದ್ದು ಬಂದ ಮುತವಲ್ಲಿ ಸಾಹೇಬರು, ಎಂದೂ ಇಲ್ಲದೆ ಇಂದು ಆರೀಫ ವರಾಂಡದಲ್ಲಿರುವ ಜನರನ್ನು ಇಣಿಕಿ ನೋಡಿ, ಸನ್ನೆ ಮಾಡುತ್ತಿರುವುದನ್ನು ಕಂಡು ಅಪ್ರತಿಭರಾದರು. ಅವರಿಗರಿವಿಲ್ಲದಂತೆಯೇ ಅವರ ದನಿ ಯೇರಿತು.
‘ಆರಿಫ……..?’
ಅವಳು ತಬ್ಬಿಬ್ಬಾಗಿ ಪರದೆ ಇಳಿಬಿಟ್ಟು ಸರಿದಳು. ತನ್ನಲ್ಲಿತಾನೇ ಎಂಬಂತೆ ಗೊಣಗಿಕೊಂಡಳು.
‘ಅಲ್ಲಿ ಗಂಡಸರ ಜೊತೇಲಿ ಸಕಿನ ಅಕ್ಕ ಹೊರಗಿನವರಂತೆ ನಿಂತ್ಕೊಂಡಿದ್ದಾರೆ. ಒಳಗೆ ಬನ್ನಿ ಅಂತ ಕರೀತಾ ಇದ್ದೆ.’
‘ಏನೂ………?’ ಎಂದು ಪ್ರಶ್ನಿಸಿದ ಮುತವಲ್ಲಿ ಸಾಹೇಬರು ಹೊರಗಡಿ ಇಟ್ಟು ಸಕೀನಾಳನ್ನು ಅವಳ ಮಗನನ್ನೂ ನೋಡಿದವರೇ ಕೆಂಪೇರಿ ಹೋದರು.
ಆದರೆ ಸಕೀನ ಮಾತ್ರ ಅತ್ಯಂತ ಅಪರಿಚಿತ ದನಿಯಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತ ನುಡಿದಳು. ‘ಬಾಯಿಸಾಬ್ ನನ್ನಂಥ ನಿರ್ಗತಿಕ ವಿಧವೆಗೆ ಸಹಾಯ ಮಾಡಿ ಅಲ್ಲಾಹ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖ ಸಮೃದ್ಧಿಯನ್ನು ನೀಡುತ್ತಾನೆ. ನನ್ನ ಮಗ ಈಗ ಬಿ.ಎ. ಮೊದಲನೆ ವರ್ಷದಲ್ಲಿದ್ದಾನೆ. ಇಂಜನಿಯರಿಂಗ್ ಕಾಲೇಜಿನಲ್ಲಿ ಅವನಿಗೆ ಈ ದಿನ ಅಟೆಂಡರ್ ಕೆಲಸದ ಇಂಟರ್‌ವ್ಯೂ ಇದೆ. ತಾವು ಕೂಡ ಆ ಕಮಿಟಿಯ ಸದಸ್ಯರು ಆಂತ ತಿಳೀತು. ನನ್ನ ಮಗನ ಹೆಸರು ಸಯ್ಯದ್ ಅಬ್ರಾರ್, ಅಂತ. ದಯವಿಟ್ಟು ತಾವು ನೆನಪಿನಿಂದ ಈ ಕೆಲಸ ಮಾಡಿಸಿಕೊಡಿ. ಅರ್ಜಿ…….. ಇಲ್ಲಿದೆ ನೋಡಿ ನನ್ನ ಮಗನಿಗೆ ಈ ಕೆಲಸ ಸಿಕ್ಕಿದರೆ…. ನನ್ನಂಥ ನತದೃಷ್ಟೆಯ ಮಗನಾಗಿದ್ದಕ್ಕೆ ನಮ್ಮ ಕುಟುಂಬಕ್ಕೆ ದಿಕ್ಕಾಗುತ್ತಾನೆ. ಎಲ್ಲರೂ ಹೇಳ್ತಾರೆ….. ತಾವೂಂದು ಮಾತು ಹೇಳಿದರೆ ಈ ಕಲಸ ಖಂಡಿತವಾಗಿಯೂ ಸಿಗುತ್ತೇಂತ. ತಾವು ಬಡವರ ಕಷ್ಟ ಸುಖವನ್ನು ಹಂಚಿಕೊಳ್ಳುವವರು. ನನ್ನ ಮೇಲೆ ತಾವು ಕೃಪೆ ಮಾಡಬೇಕು….’ ಎಂದು ಮುತವಲ್ಲಿ ಸಾಹೇಬರು ಸಾವರಿಸಿಕೊಳ್ಳುವುದಕ್ಕೆ ಮೊದಲೇ ಅವರ ಕೈಗೆ ಅರ್ಜಿಯನ್ನು ಕೊಟ್ಟು, ಅವರ ಕಾಲಿಗೆ ನಮಸ್ಕರಿಸಿ ಹೊರಟೇಬಿಟ್ಟಳು.
ಮುತವಲ್ಲಿ ಸಾಹೇಬರ ಮನಸ್ಸಿನಲ್ಲಿ ಕಾಗೆಗಳು ಅರಚಾಡತೊಡಗಿದವು. ಮೋರೆ ಇನ್ನಷ್ಟು ಕಂಪಾಯಿತು. ಚಳಿಯಲ್ಲೂ ಹಣೆಯ ಮೇಲೆ ಬೆವರಹನಿಗಳು ಮೂಡಿದವು. ದೊಪ್ಪನೆ ಕುರ್ಚಿಯೊಂದರ ಮೇಲೆ ಕುಸಿದು ಕುಳಿತರು. ಪರದೆಯ ಹಿಂದೆ ನಿಂತಿದ್ದ ಆರಿಫಳ ಕಣ್ಣುಗಳು ಹನಿಗೂಡಿದವು.
ಬಾಗಿಲ ಬಳಿ ನಿಂತಿದ್ದ ಹೆಣ್ಣು ಮಗಳೊಬ್ಬಳು, ಎಳೆಯ ಕೂಸನ್ನು ಎದೆಗವಚಿ ನಿಂತಿದ್ದಳು. ತಲೆಯ ಮೇಲೆ ಸೆರಗನ್ನು ಸರಿಪಡಿಸಿಕೊಂಡು ಅವರಿಂದ ಸ್ವಲ್ಪ ದೂರ ಸರಿದು ನಿಂತು ಹೇಳಿದಳು.
‘ಅಣ್ಣಾವ್ರೇ….. ಈ ಮಗುವಿನ ತಂದೆ…… ಎತ್ತಿನಗಾಡಿ ಇಟ್ಟಿದ್ದರು. ಹದಿನೈದು ದಿನಗಳ ಹಿಂದೆ ಆಪರೇಷನ್ ಆಯಿತು ಅವರಿಗೆ……… ಎತ್ತು ಗಾಡಿ ಎರಡನ್ನೂ ಮಾರಿ ಆಪರೇಷನ್ ಮಾಡಿಸಿದೆ. ಈಗ ಮತ್ತೊಂದು ಅರ್ಜೆಂಟ್ ಆಪರೇಷನ್ ಆಗಬೇಕಂತೆ! ಹಾಗಂತ ಡಾಕ್ಟ್ರು ಹೇಳಿದರು. ಈವಾಗ ನನ್ನ ಹತ್ತಿರ ಏನೂ ಇಲ್ಲ. ನೀವು…… ನೀವು’ ಅವಳ ಕಂಠ ಬಿಗಿಯಿತು. ಕಣ್ಣು ಮಂಜಾಯಿತು. ತಡೆದು ತಡೆದು ಬಿಕ್ಕಲಾರಂಭಿಸಿದಳು.
ಆಸ್ಪತ್ರೆಯ… ವೈದ್ಯರ… ಹೆಸರು ವಿವರಗಳನ್ನು ಕೇಳಿ ಪಡೆದ ಮುತವಲ್ಲಿ ಸಾಹೇಬರು ಆಕೆಯ ಗಂಡನ ಆಪರೇಷನ್ನಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿ ಸಾಗಹಾಕಿದರು. ಕೃತಜ್ಞತೆಯನ್ನು ಸೂಚಿಸುತ್ತಾ ಹೃದಯದಾಳದಿಂದ ಹರಸಿ ಹೋದಳು.
ಶಾಲೆಯ ಹುಡುಗನೊಬ್ಬ ನೋಟ್ ಬುಕ್ಕನ್ನು ಅವರೆದುರಿಗೆ ಚಾಚಿದ. ಹೈಯರ್ ಪ್ರೇಮರಿ ಶಾಲೆಯ ಮುಖ್ಯೋಪಾಧ್ಯಾಯಿನಿ ತಮ್ಮ ದುಂಡನೆಯ ಬರವಣಿಗೆಯಲ್ಲಿ ಆ ದಿನ ಮಧ್ಯಾಹ್ನ ಮೂರು ಗಂಟೆಗೆ ಶಾಲಾಭಿವೃದ್ಧಿ ಸಮಿತಿಯ ಸಭೆಗೆ ಅಧ್ಯಕ್ಷರಾದ ಮುತವಲ್ಲಿ ಸಾಹೇಬರು ಆಗಮಿಸಿ ಕೃತಾರ್ಥರನ್ನಾಗಿಸಬೇಕೆಂದು ಕೋರಿದ್ದರು. ಅದಕ್ಕೆ ಸಹಿ ಹಾಕಿ ಕಳುಹಿಸಿದ ಅವರು, ಇನ್ನೇನು ಅಲ್ಲಿದ್ದ ನಾಲ್ಕು ಗಂಡಸರತ್ತ ತಿರುಗಿ ಅವರ ಅಹವಾಲನ್ನು ಕೇಳಬೇಕೆನ್ನುವಷ್ಟರಲ್ಲಿಯೇ ಬಿರುಗಾಳಿಯಂತೆ ಬಂದೆರಗಿದ…. ದಾವೂದ್.
ದಾವೂದ್….. ಅವರ ಬಲಗೈ ಬಂಟ, ಅವರ ಉಸಿರಾಟದಷ್ಟೇ ಅಗತ್ಯವಾದ ಅವರ ದೇಹದ ಅನೈಚ್ಛಿಕ ಕ್ರಿಯೆಯಂತಾಗಿದ್ದ ಅವ. ಅವರಿಬ್ಬರ ಮನೋಲೋಕದ ತರಂಗಾಂತರಂಗಗಳು ಒಂದೇ ದಿಕ್ಕಿನತ್ತ ಓಡುತ್ತಿದ್ದುದು ಅವರ ಬೆಸುಗೆಗೆ ಸಾಕ್ಷಿ. ಮುತವಲ್ಲಿ ಸಾಹೇಬರ ಮುಖದ ಏರಿಳಿತ, ಅವರ ಹುಬ್ಬಿನ ರೇಖಾಂಶ, ಅಕ್ಷಾಂಶಗಳೂ, ಮೀಸೆಯ ಕೂದಲಿನ ನಿಮಿರುವಿಕೆ, ಮೂಗಿನ ಹೊಳ್ಳೆಗಳು, ತುಟಿಗಳ ಮೂಲೆಗಳ ಬಿರಿತ ಇವಿಷ್ಟರಿಂದಲೇ ಅವರ ಇಂಗಿತವನ್ನು ಅವರ ಮೂಲೋದ್ದೇಶವನ್ನು ಅರಿಯುವ ಪ್ರಾವಿಣ್ಯತೆ ಅವನಲ್ಲಿತ್ತು. ಅದಕ್ಕೆ ತಕ್ಕಂತ ಬೇಕಾದ ಮಾತು, ವಿನಯ, ನಡುಬಗ್ಗಿಸುವಿಕೆ, ಕಬಳಿಸುವಿಕೆ, ನಿರ್ಲಜ್ಜತನ, ಅಭಿಮಾನ ಶೂನ್ಯತೆ ಎಲ್ಲವೂ ಇದ್ದವು. ಎಂದ ಮೇಲೆ…..
‘ಬೆಳಗಿನ ನಮಾಜ್‌ಗೂ ಬಂದಿರಲಿಲ್ಲ, ಹಾಳಾದವ ಈಗ ಬಂದಿದ್ದಾನೆ. ಎಲ್ಲಿ ಸತ್ತು ಬಿದ್ದಿದ್ದನೋ….. ಎಂದು ಹಲ್ಲು ಕಡಿದರೂ ತೋರಿಕೆಯ ಶಾಂತತೆಯಿಂದ ಪ್ರಶ್ನಿಸಿದರು.
‘ಎಲ್ಲಿ ಹೋಗಿದ್ದಿರಿ ದಾವೂದ್ ಸಾಹೇಬರೇ……. ನಿಮ್ಮ ಪತ್ತೆಯೇ ಇರಲಿಲ್ಲವಲ್ಲ….!’
ದಾವೂದ್‌ಗೆ ಅವರ ಪ್ರಶ್ನೆ, ಭಾವ ಎರಡೂ ಅರ್ಥವಾಯಿತು. ಅವನು ಒಳಗೊಳಗೇ ನಗುತ್ತಾ ಮೇಲೆ ವಿನಯವನ್ನು ನಟಿಸುತ್ತ, ‘ಅಸ್ಸಲಾಮ್-ವ-ಅಲೈಕುಮ್ ಮುತವಲ್ಲಿ ಸಾಹೇಬರೇ….’ ಎಂದು ನಮಸ್ಕರಿಸಿ ಕುಳಿತ.
ಮುತವಲ್ಲಿ ಸಾಹೇಬರು ಮಸೀದಿ ಕಮೀಟಿಯ ಅಧ್ಯಕ್ಷರಾಗಿದ್ದರಷ್ಟೇ ಅಲ್ಲದೆ ರಾಜಕೀಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮುಸ್ಲಿಮರ ಓಟನ್ನು ಸಾರಾಸಗಟಾಗಿ ಕೂಡಿಸುವ ಸಾಮರ್ಥ್ಯ ಅವರಿಗಿದೆ ಎಂಬ ಭ್ರಮೆಯನ್ನು ಅವರು ಹೊಂದಿದ್ದು, ಆ ನಂಬಿಕೆಗೇ ಆತುಕೊಂಡಿದ್ದ ಅನೇಕ ಮತಾಕಾಂಕ್ಷಿಗಳು ಅವರ ಮನೆಯನ್ನು ತಪ್ಪದೆ ಭೇಟಿ ಮಾಡುತ್ತಿದ್ದರು. ಹೀಗಾಗಿ ಬೆಳಗಿನ ಹೊತ್ತು ಅನೇಕ ಜನರು ಅವರ ಮನೆಯ ಬಾಗಿಲಲ್ಲಿ ಹಾಜರಿರುತ್ತಿದ್ದರು. ಇಂದು ಸಕೀನಾ ಕೂಡಾ ಅವರನ್ನು ‘ಅಣ್ಣಾ’ ಎಂದು ಬಾಂಧವ್ಯ ಗುರುತಿಸುವ ಬದಲು, ರಾಜಕೀಯ ವ್ಯಕ್ತಿ ಎಂದು ಸಹಾಯ ಬೇಡಿದ್ದಳು; ಹಾಗೂ ಅಷ್ಟೇ ಪರಕೀಯಳಾಗಿ ವರ್ತಿಸಿ ಅವರ ಮನಸ್ಸನ್ನು ಘಾಸಿಗೊಳಿಸಿದ್ದಳು. ಮುತವಲ್ಲಿ ಸಾಹೇಬರು ಕುಳಿತಿದ್ದವರು ಒಂದು ನೋಟವನ್ನು ಹರಿಸಿದರು.
ಇನ್ನೂ ಅನೇಕ ಜನರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಆದರೆ ಮುತವಲ್ಲಿ ಸಾಹೇಬರಿಗೆ ದಾವೂದ್‌ನೊಂದಿಗೆ ತುರ್ತು ಕೆಲಸವಿದ್ದಿತು. ಹೀಗಾಗಿ ಅವರು ಚಡಪಡಿಕೆಯಿಂದ ಬೆಂಚಿನ ಮೇಲೆ ಕುಳಿತಿದ್ದ ನಾಲ್ಕಾರು ಜನರತ್ತ ನೋಡಿ ಏಳಲುದ್ಯಕ್ತರಾದರು. ವಯಸ್ಸಾಗಿದ್ದ ಸಾಬ್ಜಾನ್ ಬೆಳ್ಳಗಾಗಿದ್ದ ಹುಬ್ಬುಗಳಡಿಯಿಂದ ಹೊರ ಬಂದಿದ್ದ ಕಣ್ಣುಗಳ ಮಂದ ದೃಷ್ಟಿಯಿಂದ ಎಡತಾಕುತ್ತ ಮುಂದೆ ಬಂದ ‘ಸಾಬ್…. ಸಾಬ್…. ನನ್ನ ಕೊನೇ ಮಗಳಿಗೆ ಮದುವೆ….. ಮುಂದಿನ ವಾರವೇ ಇದೆ ನನ್ನಲ್ಲಿ ಕಾಸಿಲ್ಲ. ನೀವು ದೊಡ್ಡ ಮನಸ್ಸು ಮಾಡ್ಬೇಕು, ಅವಳ ಮದವೆಯೊಂದಾಗಿ ಬಿಟ್ರೆ ನಾನು ಸಮಾಧಾನದಿಂದ ಕಣ್ಮುಚ್ತೀನಿ… ಮಾಯಿ ಬಾಪ್!….. ನನ್ನಂಥ ಮುದುಕನಿಗೆ ನೀವೇ ದಯ ತೋರ್ಬೇಕು…” ಎಂದು ಮುತವಲ್ಲಿ ಸಾಹೇಬರ ಕಾಲಿಗೆ ಬೀಳಲು ಬಂದ.
‘ಆಹ! ಮಗನೆ…. ಅದೆಷ್ಟೊಂದು ಮಕ್ಕಳ ಹುಟ್ಟಿಸಿದೀಯ….. ಕೊನೇ ಮಗಳಂತೆ!….. ಏನು ಅರವತ್ತನೇ ವಯಸ್ಸಿಗೆ ಹುಟ್ಟಿಸಿದೀಯಾ!… ಅಂತೂ ಕೊನೆಗೆ ಬಂದೆ ನೀನು ದಾರಿಗೆ…’ ಎಂದು ಮನದ ಮೂಲೆಯ ಸೈತನ ಅಟ್ಟಹಾಸ ಬೀರಿದ. ಅವನ ಮನೋನೇತ್ರದೆದುರು ವಿಶಾಲವಾದ ಸೈಟು ಮತ್ತು ಅದರ ಮಧ್ಯದಲ್ಲಿದ್ದ ಮುರುಕಲು ಮನೆ ಗೋಚರಿಸಿದವು. ಅವರು ಆ ಸೈಟಿನ ಮುಂದೆ ಹಾದು ಹೋದಾಗಲೆಲ್ಲಾ ಅಲ್ಲಿ ಕಟ್ಟಬಹುದಾದ ಮಾಪಿಂಗ್ ಷಾಪಿಂಗ್ ಕಾಂಪ್ಲೆಕ್ಸಿನ ಯೋಜನೆಯೊಂದು ಅವರ ಮನಸ್ಸಿನಲ್ಲಿ ಹಾದು ಹೋಗುತ್ತಿತ್ತು.
‘ಈಗ ನನ್ನಿಂದ ಏನಾಗಬೇಕು ಸಾಬ್ಜಾನ್ ಚಿಕ್ಕಪ್ಪ….’ ಎಂದು ಅಮಾಯಕರಾಗಿ ಕೇಳಿದರು.
“ಏನೂ… ಇಲ್ಲ…” ಅನುಮಾನಿಸುತ್ತ ಒಂದು ಕ್ಷಣ ತಡೆದು ಸಾಬ್ಜಾನ್ ಮುಂದುವರೆಸಿದ.‘ಅಲ್ಲಾಹ್‍ನ ಅನುಗ್ರಹ ತಮ್ಮ ಮೇಲಿರಲಿ… ನನಗೆ… ನನಗ… ಈ ಮದುವೆಗೆ ಕಡಿಮೆ ಎಂದರೆ ನಲವತ್ತು ಸಾವಿರ ರೂಪಾಯಿ ಬೇಕು…”
ಮುತವಲ್ಲಿ ಸಾಹೇಬರು ಬೆಚ್ಚಿಬಿದ್ದಂತೆ ನಟಿಸಿದರು.
“ಆಂ… ನಲವತ್ತು ಸಾವಿರ ರೂಪಾಯಿ… ಎನು ಮಾಡೋದು… ಎಲ್ಲಿಂದ ತರೋದು”.
ಮುತುವಲ್ಲಿ ಸಾಹೇಬರು ಧೀರ್ಘಾಲೋಚನೆಯಲ್ಲಿ ತೊಡಗಿದರು. ದಾವೂದ್ ಮೆಲ್ಲನೆ ಕೆಮ್ಮಿದ.
“ಅಣ್ಣಾವ್ರ… ಒಂದ್ವಿಚಾರ… ನಿಮ್ಮ ಗಮನಕ್ಕೆ ತರೋಣಾಂತ… ನಿಮಗೆ ಸ್ವಲ್ಪ ಬಿಡುವಾದ್ರೆ… ಅಲ್ಲಾ, ಪ್ರಪಂಚ ಎಲ್ಲಿಗೆ ಬಂತು… ನ್ಯಾಯ ನೀತಿ, ಧರ್ಮ ಏನಾದರೂ ಉಳೀತಿದ್ಯಾ?…”
“ಆ… ಏನಾಯಿತು.. ಡವೂದ್…?”
“ನಿಮಗೆ ಗೊತ್ತೇ ಇಲ್ವ… ಈ ವಿಚಾರ … ಖಂಡಿತವಾಗಿಯೂ…?”
ಯಾರಿಂದಲೂ ಉತ್ತರ ಬಾರದೆ ಇದ್ದುದನ್ನು ಗಮನಿಸಿ ಅವನೇ ಮುಂದುವರಿಸಿದ.
“ಇಸ್ಲಾಮ್ ನಾಶ ಆಗಿ ಹೋಗ್ತಿದೆ ಅಣ್ಣಾವ್ರೆ… ಒಂಚೂರು ಕೂಡ ಮುಸಲ್ಮಾನರ ಗೌರವ ಉಳೀಲಿಲ್ಲ….”
ಅವನ ಪೀಠಿಕೆಯೇ ದೀರ್ಘವಾಗಿತ್ತು.
“ಅದೇನು ಹೇಳಬಾರ್‍ದೇ…?” ಎಂದರು ಮುತವಲ್ಲಿ ಸಾಹೇಬರು ಅಸಹನೆಯಿಂದ.
“ಅಣ್ಣಾವ್ರೇ… ಲಾಳ ಹೊಡೀತಾನಲ್ಲ ಉಮರ್… ಅವನ ಎರಡನೇ ಮಗಳನ್ನು ನೆಲಮಂಗಲಕ್ಕೆ ಕೊಟ್ಟಿದ್ದಾರಲ್ಲ… ಆ ಹುಡುಗ ಇನ್ನೊಬ್ಬಳನ್ನು ಮದುವೆಯಾಗಿದ್ದ ನೋಡಿ… ಅವಳ ಅಣ್ಣ…”
“ಯವನ್ಲೇ ಅವನು?” ಎಂದರು ಮುತವಲ್ಲಿ ಸಾಹೇಬರು ಅಸಹನೆಯಿಂದ… ಈ ಸಂಬಂಧಗಳ ಗೋಜನ್ನು ಬಿಡಿಸುವಷ್ಟು ತಾಳ್ಮೆ ಅವರಲ್ಲಿ ಉಳಿದಿರಲಿಲ್ಲ.
“ಅವನು ನಿಸಾರ್ ಅಂತ ಪೇಂಟರ್… ಮಸೀದಿಗೆ ಪೇಂಟ್ ಮಾಡ್ತೀನೀ ಅಂತ… ಇನ್ನೂರು ರೂಪಾಯಿ ಹೊಡ್ಕೊಂಡು ಹೋಗ್ತಿಟ್ಟಿದ್ದ ನೋಡಿ… ಕಳೆದ ರಮಜಾನಿನಲ್ಲಿ…”
‘ಹಾಂ!…ಹಾಂ…. ಗೊತ್ತಾಯ್ತುಬಿಡು…’
ಮುತವಲ್ಲಿ ಸಾಹೇಬರಿಗೆ ಎಲ್ಲಾ ನನಪಾಯ್ತು, ಮಸೀದಿಯ ದುಡ್ಡು ತಿಂದು ಹಾಕಿದ್ದಕ್ಕೆ ಅವನನ್ನು ಮರಕ್ಕೆ ಕಟ್ಟಿಸಿ ಬಾರಕೋಲಿನಿಂದ ಬಡಿದದ್ದು ನೆನಪಾಯಿತು.
‘ಅವ್ನು ಕೆರೇಲಿ ಬಿದ್ದು ಸತ್ತೋಗಿದ್ದ… ಆಗ್ಲೇ… ಒಂದೂವರೆ ತಿಂಗಳ ಹಿಂದೆ ಒಂದು ಶವ ಸಿಗ್ತು… ನೋಡಿ… ಪೋಲೀಸಿನವರು ತೆಗೆದ್ರು…’
“ಹಾಂ!… ಏನಾಯ್ತು ಅದರ ವಿಷಯ?…”
ಆಗೋದೇನು ಸರ್ವನಾಶವಾಗಿ ಹೋಯಿತು.
‘ನಿಸಾರ್‌ನ ಶವವನ್ನು ಪೋಲೀಸಿನವರು ತಗೊಂಡೋಗಿ ಹಿಂದೂ ಸ್ಮಶಾನದಲ್ಲಿ ಹೂತು ಹಾಕಿದ್ದಾರೆ…”
ಎದೆಗೆ ಗುಂಡು ಬಡಿದಂತೆ ದಾವೂದ್ ಮೆಲ್ಲನ ಉಸುರಿದ. ಎಲ್ಲಿಯಾದರೂ ಉಂಟೆ… ಇದುವರೆಗೆ ಯಾದರೂ ಈ ತರದ ಘಟನೆ ಕೇಳಿದ್ದುಂಟೆ… ಮುತುವಲ್ಲಿ ಸಾಹೇಬರ ಎದೆ ಬಡಿತ ಒಂದು ಕ್ಷಣ ನಿಂತಂತಾಯಿತು. ಹಣೆಯ ಮೇಲೆ ನಿರಿಗೆಗಳು ಮೂಡಿದವು. ಅವರು ಬೆವರಲಾರಂಭಿಸಿದರು. ಬಂದಿದ್ದವರೆಲ್ಲಾ ತಮ್ಮ ತಮ್ಮ ಕೆಲಸಗಳನ್ನು ಮರೆತರು. ಸ್ವತಃ ಸಾಬ್ಜಾನ್ ಕೂಡ… ಎದೆಯಾಳದಲ್ಲಿ ಎಷ್ಟೇ ಕೊರೆಯುತ್ತಿದ್ದರೂ ಮಗಳ ಮದುವೆಯ ವಿಷಯದ ಪ್ರಸ್ತಾಪವನ್ನೇ ಮಾಡಲಿಲ್ಲ. ಹಾಠಾತ್ತಾಗಿ ಬಂದೆರಗಿದ ಈ ಸುದ್ದಿ ಎಲ್ಲರನ್ನೂ ತತ್ತರಿಸುವಂತೆ ಮಾಡಿತ್ತು.
ಒಬ್ಬ ಮುಸ್ಲಿಮನ ಹೆಣ… ಕಥನ್ ಇಲ್ಲದೆ ಗುಸುಲ್ ಇಲ್ಲದೆ ಜನಾಜೆ ಕೀ ನಮಾಜ್ (ಹಣಕ್ಕೆ ಸದ್ಗತಿಯನ್ನು ಕೋರಿ ನಡೆಸುವ ಪ್ರಾರ್ಥನೆ) ಇಲ್ಲದಂತೆ ಖಬರಸ್ತಾನ್ ಬಿಟ್ಟು ಸ್ಮಶಾನದಲ್ಲಿ ಅತಂತ್ರವಾಗಿ ಹೂಳಲ್ಪಟ್ಟಿದೆಯೆಂದರೆ… ಮುತವಲ್ಲಿ ಸಾಹೇಬರ ಬುದ್ದಿಗೂ ಒಂದು ಪ್ರಶ್ನೆ ಹೂಳೆಯಿತು.
“ಏನೋ… ದಾವೂದ್… ನಿಸಾರ್‌ಗೆ ಖತ್ನ ಆಗಿರಲಿಲ್ವ…?
ಸ್ವಲ್ಪ ಟೆಕ್ನಿಕಲ್ ಆಗಿ ಬಂದ ಈ ಪ್ರಶ್ನೆಗೆ ದಾವೂದ್ ಬಳಿ ಉತ್ತರ ಇರಲಿಲ್ಲ.
“ಛೇ… ಛೇ… ಆಗದೇ ಇರುತ್ತದೆಯೇ…. ಈ ಪೋಲೀಸಿನವರಿಗೆ ಅಷ್ಟೆಲ್ಲಾ ತಲೆ ಭಾರ ಯಾಕೆ ಬೇಕು? ಏನೋ ಒಂದು ಮುಗಿಸಿಬಿಟ್ಟು… ಕೈತೊಳೆದುಕೊಂಡರು… ಅಷ್ಟೇ.”
ಈಗ ಇನ್ನಷ್ಟು ಪ್ರಶ್ನೆಗಳು… ಕುತೂಹಲಗಳು… ‘ಅದು ನಿಸಾರ್‌ದೇ ಹೆಣ ಎಂದು ಹೇಗೆ ಗೊತ್ತಾಯಿತು…’
‘ಸುಮಾರು ದಿನಗಳವರೆಗೆ ಅವನು ನಾಪತ್ತೆಯಾದ ಮೇಲೆ ಅವನ ಹೆಂಡತಿ ಕಂಪ್ಲೇಂಟ್ ಕೊಡೋದಿಕ್ಕೆ ಹೋದಳು ಆವಾಗ ಪೋಲಿಸ್ ಸ್ಟೇಷನ್ನಿನಲ್ಲಿ ಪೋಲೀಸ್ನೋರು ಬಟ್ಟೆ ತೋರಿಸಿದರು. ಅದನ್ನ ಅವಳು ಗುರುತಿಸಿದಳು. ಆ ಮೇಲೆ ಪೋಟೋ ತೋರಿಸಿದರು… ಶವದ್ದು… ಅದು ಊದಿಕೊಂಡಿತ್ತು. ಆದರೂ ಅದೂ ಕೂಡ ನಿಸಾರ್‌ದೇ…”
“ಅಥವಾ…?”
“ಪೋಲೀಸ್ನೋರು ಬೇಕೂಂತ್ಲೇ ಮಾಡಿರಬಹುದು. ಅವರ್‌ಗೇನ್ ಗೊತ್ತಿಲ್ವ… ಈ ನಮ್ ಮಸೀದಿಗೆ ಬಂದು… ನಿಮ್ದೊಂದು ಹೆಣ ಬಿದ್ದೈತೆ ಅಂದ್ರೆ ಒಂದ್ ಕ್ಷಣದಲ್ಲೇ ಎತ್ಕಂಡ್ ಬಂದು ನಾವೇ ದಫನ್ ಮಾಡ್ಬೋದಾಗಿತ್ತು…”
ಅನುಮಾನಿಸುತ್ತಾ ದಾವೂದ್ ನುಡಿದ.
“ನನ್ಗೆ ಗೊತ್ತಾಗಿರೋ ಹಂಗೆ… ಆ ಶಂಕ್ರ ಖುದ್ದು ನಿಂತ್ಕಂಡು ಪೋಲೀಸ್ನೋರಿಗೆ ಹೇಳಿ ಮಶಾಣದಲ್ಲಿ ದಫನ್ ಮಾಡ್ಸೌನಂತೆ …”
ಅಲ್ಲಿದ್ದವರಿಗೆಲ್ಲಾ ಆಘಾತವಾದಂತಾಯಿತು. “ಛೇ! ಇದಂತಹ ಕೇಡುಗಾಲ… ಕೆಲವರು ಸತ್ತಾಗ ಸಾವಿರಾರು ಮಂದಿ ಹೆಗಲು ಕೊಡೋಕೆ ತಯಾರಾಗಿರುತ್ತಾರೆ. ಅಂಥದ್ರಲ್ಲಿ… ಈ ನತದೃಷ್ಟ ಸತ್ತ ಮೇಲೆ ಕೂಡಾ ಒಂದು ಸರಿಯಾದ ಕಫನ್-ಧಪನ್ ಕೂಡಾ ಇಲ್ಲವೆಂದ್ರೆ…”
ವರ್ಷಕ್ಕೆರಡು ಬಾರಿ ರಂಜಾನ್ ಮತ್ತು ಬಕ್ರೀದ್ ಹಬ್ಬದ ನಮಾಜ್‌ಗಳನ್ನು ಬಿಟ್ಟರೆ… ಇನ್ನೂ ಯಾವತ್ತೂ ಮಸೀದಿಗೆ ಕಾಲಿಡದ… ಮನೆಗಳಿಗೆ ಪೇಂಟ್ ಮಾಡ್ತೀನಿ ಎಂದು ಅಡ್ವಾನ್ಸ್ ಹಣ ಪಡೆದು ನೂರಾರು ಜನರಿಗೆ ವಂಚಿಸುತ್ತಿದ್ದ. ಸಿಕ್ಕಷ್ಟು ಹಣದಲ್ಲಿ ಸದಾ ಕುಡಿದು ತೂರಾಡುತ್ತಿದ್ದ… ಒಮ್ಮೆಯಂತೂ ಮಸೀದಿಗೆ ಪೇಂಟ್ ಮಾಡ್ತೀನಿ ಎಂದು ಜಮಾತಿನ ಹಣವನ್ನು ತಿಂದಿದ್ದ ನಿಸಾರ್‌ನ ಹೆಣದ ವಿಧಿಬದ್ಧ ಅಂತ್ಯಕ್ರಿಯ ಈಗ ಅವರಿಗೆ ಅತ್ಯಂತ ಪವಿತ್ರ ಕರ್ತವ್ಯವಾಗಿ ಕಾಣತೊಡಗಿತು. ಅವನ ಹೆಣ ಹುತಾತ್ಮನಂತಹ ಮೆರಗು ಪಡೆಯಲಾರಂಭಿಸಿತು. ಆದರೆ… ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮುತವಲ್ಲಿ ಸಾಹೇಬರಿಗೆ ನಿಸಾರ್‌ನ ಹಣದ ಅಂತ್ಯಕ್ರಿಯೆ ತಮ್ಮ ಸರ್ವ ಸಮಸ್ಯೆಗಳ ನಿವಾರಣೋಪಾಯವಾಗಿ ಕಂಡುಬಂದಿತು. ಆದರೂ ವಿಷಣ್ಣವದನರಾಗಿ….
“ಏನ್ಮಾಡೋಕಾಗುತ್ತಪ್ಪಾ… ಅವರವರು ಮಾಡಿದ್ದನ್ನ ಅವರವರು ಅನುಭವಿಸಲೇಬೇಕು…” ಎಂದರು. ದಾವೂದ್ ಆದಿಯಾಗಿ ಸೇರಿದ್ದ ಎಲ್ಲಾ ಜನರೂ ಕೂಡ ಆಗಿ ಹೋಗಿರುವ ದುರಂತವನ್ನು ನೆನೆದು ತಲ್ಲಣಿಸುತ್ತ ಕಂಗೆಟ್ಟರು.
“ತೌಬಾ.. ತೌಬಾ..” ಕೆನ್ನಗೆ ಬಡಿದುಕೊಳ್ಳುತ್ತಾ ಸಾಬ್ಜಾನ್ ಸಾಹೇಬರು ಹೇಳಿದರು. “ಸಾವು… ಎಲ್ಲರಿಗೂ ನಿಶ್ಚಿತ. ಆದರೆ ಯಾರಿಗೂ ಈ ರೀತಿಯ ಕೆಟ್ಟ ಸಾವು ಬರಬಾರದು. ಒಂದು ದರೂದ್ ಇಲ್ಲ…. ಸಲಾಮ್ ಇಲ್ಲ…. ನಾಳೆ ನಮ್ಮ ಹೆಣಾನೂ ಹೀಗನೇ ಯಾರು ಎಲ್ಲಿ ಬೇಕೋ ಅಲ್ಲಿ… ಅವರ ಮನಸ್ಸಿಗೆ ಬಂದ ಹಾಗೆ ಎಸೀಬಹುದಲ್ಲಾ…”
ದಾವೂದ್ ಕೂಡಾ ತನ್ನ ಪಾಲಿನದನ್ನು ಸೇರಿಸಲು ಮರೆಯಲಿಲ್ಲ. ‘ಮುತವಲ್ಲಿ ಸಾಹೇಬರೇ… ಏನೋ… ನೀವು ನಮಗೆ ದಿಕ್ಕು ದೆಸೆಯಾಗಿದ್ದೀರಿ ಅಂತ ನಾವೂ ಮನುಷ್ಯರಾಗಿ ಉಳ್ಕೊಂಡಿದೀವಿ… ಒಂದು ದಿನ ಬೆಳಗೆದ್ದರೆ ಕುರಾನ್ ಬಗ್ಗೆ ಕೋರ್ಟಿಗೆ ಹೋಗ್ತಾರೆ… ಆಯಮ್ಮ… ಶಾಬಾನು ವಿಚಾರನೇ ದೊಡ್ಡದಾಗಿ ಮಾಡಿ ನಮ್ಮನ್ನು ಕುಕ್ಕಿ… ಕುಕ್ಕಿ ಇಟ್ಟರು. ಈಗ ನೋಡಿದ್ರೆ… ಸಾಬರ್ ಹೆಣಾನಲ್ಲ ತಗೊಂಡ್ ಹೋಗಿ ಮಶಾಣದಲ್ಲಿ ಹೂಳ್ತಾರೆ… ಇದ್ಕಿಂತ ಇನ್ಯಾವ ಅನ್ಯಾಯ ಬೇಕು…?
ದಾವೂದ್‌ನ ನೋಟಕ್ಕಂತೂ ಇದೊಂದು ದೊಡ್ಡ ಮಸಲತ್ತಾಗಿಯೇ ಕಾಣತೊಡಗಿತು!
ಎಲ್ಲರೂ ದುಃಖಿತರಾದರು. ಮುತವಲ್ಲಿ ಸಾಹೇಬರು ಕೂಡ.. ಗಡ್ಡದ ಕೂದಲನ್ನು ಒಂದೊಂದಾಗಿ ಕೀಳುತ್ತಾ… ಆಗಾಗ್ಗೆ ಮೂಗಿನಲ್ಲಿ ಬೆರಳು ತೂರಿಸುತ್ತಾ ದೀರ್ಘಾಲೋಚನೆಯಲ್ಲಿ ತೊಡಗಿದ್ದು ಒಮ್ಮೇಲೇ ಎಚ್ಚೆತ್ತವರಂತೆ ಜನಗಳತ್ತ ನೋಡಿದರು. ತೀವ್ರ ದುಃಖದಿಂದ ಕೂಡಿರುವಂತೆ ಮುಖವನ್ನು ಕಿವಿಚಿಕೊಂಡು, ಅರೆಗಣ್ಣು ತೆರೆದು ಒಮ್ಮೆ ಕಮ್ಮಿ ಗಂಟಲನ್ನು ಸರಿಪಡಿಸಿಕೊಂಡರು.
ವಿಷಯದ ಗಹನತೆ ಎಷ್ಟು ತೀವ್ರವಾಗಿತ್ತೆಂದರೆ……. ಆರಿಫಾ ಕೂಡ ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸುವುದನ್ನು ಬಿಟ್ಟು ಪಡಸಾಲೆಯ ಪರದೆಯ ಹಿಂದೆ ಬಂದು ನಿಂತಿದ್ದಳು. ಸ್ವಲ್ಪ ತಡವಾಗಿ ಎದ್ದಿದ್ದ ಜಮೀಲಾ ಕೂಡ ಆರಿಫಳಿಂದ ಪಿಸುಮಾತಿನಲ್ಲಿಯೇ ವಿಷಯವನ್ನು ತಿಳಿದುಕೊಂಡು, ಅವಳೂ ಕೂಡ ಪಡಸಾಲೆಯತ್ತ ಕಿವಿಯಾನಿಸಿ ಪರದೆಯ ಹಿಂದೆ ಸೇರಿಕೊಂಡಿದ್ದಳು. ಅವರಿಬ್ಬರ ಹೆಣ್ಣು ಹೃದಯಗಳು ಕೂಡ ಮಿಟುಕುತ್ತಿದ್ದವು.
“ಯಾ ಅಲ್ಲಾ!…ಯಾರೇ ಆಗಿರಲಿ… ಆ ಬಡವನಿಗೆ ಸದ್ಗತಿಯನ್ನು ನೀಡಪ್ಪಾ… ಒಬ್ಬ ಮುಸಲ್ಮಾನನ ಹಣಕ್ಕೆ ಸಲ್ಲಬೇಕಾದ ಸಕಲ ಸಂಸ್ಕಾರದೊಡನೆ… ಅವನಿಗೆ ಖಬರಸ್ತಾನ್‌ನಲ್ಲಿ ಮೂರು ಗಜ ನೆಲ ದೊರಕಲಿ… ದೇವರೇ!”
ಜಮೀಲಾಳ ಗಂಡ ಕೂಡಾ ಎದ್ದು ಬಂದವನೇ ವಿಷಯ ತಿಳಿದು ಪಡಸಾಲೆಗೆ ಬಂದು ನಿಂತಿದ್ದ. ಎಲ್ಲರಲ್ಲೂ ವಿಚಿತ್ರ ಉದ್ವೇಗ… ಕಾತುರ … ಇಸ್ಲಾಮ್‌ನ ಉಳಿವಿಗಾಗಿ ನಡೆಸುವ ಧರ್ಮ ಯುದ್ಧದ ಹುಮ್ಮಸ್ಸು ಕೂಡಿತ್ತು. ಕೊನೆಗೂ ಮುತವಲ್ಲಿ ಸಾಹೇಬರು ಬಾಯ್ದೆರದರು.
“ಈಗ ನಾವು ನಮ್ಮ ಎಲ್ಲಾ ರೀತಿಯ ಪ್ರಯತ್ನಗಳಿಂದಲೂ ನಿಸಾರ್ ಹೆಣವನ್ನು ಅಲ್ಲಿಂದ ತೆಗೆಸಿ ಇಲ್ಲಿ ಮಣ್ಣು ಮಾಡಬೇಕು. ಏನೇ ಅಡ್ಡಿ ಆತಂಕ ಬಂದ್ರೂ ಸಹ ಎದುರಿಸೋಕ್ಕೆ ಸಿದ್ದವಾಗಿರಬೇಕು… ತಿಳೀತಾ…?” ಎಂದರು.
“ದಾವೂದ್… ಹಾಗೇನೇ… ನಮ್ ಯುವಕರ ಕಮೀಟಿಗೆ ಒಂದ್ ಸೊಲ್ಪ ತಿಳಿಸಿ ಬಿಡಪ್ಪಾ… ಅವರೂ ಬಂದ್ಮೇಲೆ ಎಲ್ಲಾ ಸೇರ್ಕೊಂಡು ಸ್ವಲ್ಪ ಡಿ.ಸಿ. ಸಾಹೇಬ್ರನ್ನೂ… ಎಸ್ಪಿಯವರನ್ನೂ ನೋಡಿ… ಅದೇನಿದೆಯೋ ಇವತ್ನಿಂದನೇ ಕೆಲ್ಸ ಶುರು ಮಾಡ್ಬಿಡೋಣ…” ಎಂದವರೇ “ಬಾಕಿದೇನೂ ಯೋಚಿಸ್ಬೇಡೀಂತ ಹೇಳ್ಬಿಡು… ಜಮಾತ್‌ನಲ್ಲೇನೂ ಸದ್ಯಕ್ಕೆ ದುಡ್ಡಿಲ್ಲ… ಅದೆಷ್ಟು ಖರ್ಚಾದ್ರೂ ನಾನೇ ಹಾಕ್ಕೋತೀನಿ ಅಂತಾನೂ ಹೇಳ್ಬಿಡು ಎಂದರು.
ಈ ಪ್ರಕರಣದಿಂದ ತಮಗೆ ಸಿಗಬಹುದಾದ ಜನಪ್ರಿಯತೆ ಮತ್ತು ಬೆಂಬಲದ ಮುಂದೆ… ಹಣವೇನೂ ದೊಡ್ಡದಲ್ಲಾ… ಅಲ್ಲದೆ ಮುತುವಲ್ಲಿಯಾಗಿ ಹಾಗೆ ಹೇಳುವುದೇ ಘನತೆ… ಅಂದಾಗೆ ದುಡ್ಡು ಕೂಡ ಎಲ್ಲಿ ಹೋಗುತ್ತೆ… ಈ ವಿಚಾರಕ್ಕೆ ಜನ ಮೇಲೆ ಬಿದ್ದು ಹಣ ಕೊಡ್ತಾರೆ ಎನ್ನುವುದು ಅವರ ಅನುಭವ. ಈಗಂತೂ ತಮ್ಮ ಬಗ್ಗೆ ಇಲ್ಲದ ಆಪಾದನೆ ಹೊರಿಸಿಕೊಂಡು ದೂರ ಸರಿದಿರುವ ಯುವಕರ ಕಮೀಟಿಯನ್ನು ಹತ್ತಿರ ಬರಮಾಡಿಕೊಳ್ಳಲು ಒಂದು ಸುಸಂದರ್ಭ.
ಅವರು ಅಂದುಕೊಂಡತೆಯೇ ಆಯಿತು. ಅವರು ಇನ್ನೂ ತಮ್ಮ ಯೋಚನಾ ಲಹರಿಯಿಂದ ಹೊರಬರುವ ಮುಂಚೆಯೇ… ಜಮೀಲಾಳ ಗಂಡ ಕಿಸೆಯಿಂದ ಇನ್ನೂರೈವತ್ತು ರೂಪಾಯಿಗಳನ್ನು ತೆಗೆದವನೇ ಮುತುವಲ್ಲಿ ಸಾಹೇಬರ ಎದುರಿನ ಟೇಬಲ್ಲಿನ ಮೇಲೆ ಇಟ್ಟ.
‘ಭಯ್ಯ…. ಇದನ್ನು ನಿಮ್ಮ ಕೆಲ್ಸಕ್ಕೆ ಬಳಸಿಕೊಂಡ್ರೆ ನನ್ಗೂ ಸ್ವಲ್ಪ ಪುಣ್ಯ ಬರುತ್ತೆ. ನಿಮ್ಮಂತವ್ರಿಗೆ ಅಲ್ಲಾ ಹೆಚ್ಚಿನ ಶಕ್ತಿ, ಆರೋಗ್ಯ, ಹಣ ಎಲ್ಲಾ ದಯಪಾಲಿಸಬೇಕು.’ ಎಂದು ಹೃದಯ ತುಂಬಿ ನುಡಿದ. ಸದ್ಯಕ್ಕೆ ಇಂತಹ ಮಹತ್ವವಾದ ಕೆಲಸದೆದುರು ಪಾಲು ಕೇಳುವಂತೆ ಹೆಂಡತಿಯನ್ನು ಒತ್ತಾಯಿಸುವುದು ಸಲ್ಲದು ಎಂದು ಅವನಿಗೇ ಅನಿಸಿತು. ಪರದೆಯ ಹಿಂದಿನಿಂದಲೇ ಗಂಡನ ಈ ಚರ್ಚೆಯನ್ನೂ ಮುಖಭಾವವನ್ನು ಗ್ರಹಿಸಿದ ಜಮೀಲಾ ಬಿಡುಗಡೆಯ ನಿಟ್ಟುಸಿರನ್ನು ಬಿಟ್ಟಳು.
ಗಂಡನ ಬಲವಂತಕ್ಕೆ ಮಾತ್ರ ಅವನು ಹೇಳಿದಂತೆ ಅಣ್ಣನ ಬಳಿ ಪಾಲಿನ ಬಗ್ಗೆ ಪ್ರಸ್ತಾಪಿಸಿದ್ದಳೇ ಹೊರತು ಅವಳು ಮನಃ ಪೂರ್ವಕವಾಗಿ ಅಣ್ಣನೆದುರಿಗೆ ಪಾಲು ಕೇಳಲು ಸಿದ್ಧಳಿರಲಿಲ್ಲ. ‘ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು’ ಎಂಬಂತೆ ಅವಳಿಗೆ ನಿರಾಳವಾಯಿತು. ಆರಿಫಗೆ ಕೂಡ ಗಂಡನ ಬಗ್ಗೆ ತುಂಬಾ ಅಭಿಮಾನ ಉಕ್ಕಿ ಬಂದಿತು. ಹಿಮಾಲಯದಂತಹ ಕೆಲಸವನ್ನು ಅವನೊಬ್ಬನೇ ನಿಭಾಯಿಸಬೇಕಾಗಿರುವುದರಿಂದ ತಿಂಡಿ ಮಾಡದೆ ಎಲ್ಲಿ ಹೊರ ಹೋಗುವನೋ ಎಂಬ ಆತಂಕದಿಂದ ಅವನಿಗಾಗಿ ಹೂವಿನಷ್ಟು ಹಗುರವಾದ ಪರೋಟ ಮಾಡಲು ಅವಳು ಒಳಗೆ ಓಡಿದಳು. ತಂಗಿಯ ಮತ್ತವಳ ಗಂಡನ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ ಮುತವಲ್ಲಿ ಸಾಹೇಬರು ಒಮ್ಮೆಲೇ ಗೆಲುವಾದರೂ ತೋರಿಸಿಕೊಳ್ಳದೆ ಘನತೆವೆತ್ತವರಂತೆ ಮೆಲುವಾಗಿ ಹೆಜ್ಜೆಗಳನ್ನಿಡುತ್ತಾ ಒಳ ಬಂದರು.
… ಮೊದಲು ಅವರು ಭೇಟಿ ಮಾಡಿದ್ದು ಜಿಲ್ಲಾಧಿಕಾರಿಯನ್ನು, ಸಾಕಷ್ಟು ಯುವಕರ ಗುಂಪಿನೊಡನೆ ಹೋಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವುದು ಅವರಿಗೆ ಆನಂದದಾಯಕವಾದ ವಿಷಯವಾಗಿತ್ತು. ಜಿಲ್ಲಾಧಿಕಾರಿ ಯುವಕ; ಬಂಗಾಲಿ ಬ್ರಾಹ್ಮಣ ಜವಹರಲಾಲ್ ವಿಶ್ವವಿದ್ಯಾಲಯದ ಪದವೀಧರ. ಸಾಮಾಜಿಕ ಸಂಬಂಧಗಳ ಗೋಜಲುಗಳನ್ನು ಅವುಗಳ ಭಾವನಾತ್ಮಕ ಆಸ್ಫೋಟಗಳನ್ನೂ ಬಲ್ಲವನಾಗಿದ್ದ. ಮುತವಲ್ಲಿ ಸಾಹೇಬರು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಆತನಿಗೆ ಪ್ರಕರಣದ ಹಿನ್ನೆಲೆಯ ಅರಿವಾಯಿತು. ಮನದಾಳದಲ್ಲಿ ನಗೆಯುಕ್ಕಿ ಬಂದರೂ ಆತ ಗಂಭೀರ ಮುಖ ಮುದ್ರೆಯಲ್ಲೇ ಕುಳಿತಿದ್ದ. ಮುತವಲ್ಲಿ ಸಾಹೇಬರ ದುಃಖಪೂರ್ಣ ಆವೇದನೆಯನ್ನು ಆಲಿಸಿ ಆ ಬಗ್ಗೆ ಚಕಾರವೆತ್ತದೆ ಉರ್ದುವಿನಲ್ಲಿಯೇ ಪ್ರಶ್ನಿಸಿದ.
“ಮತ್ತೇನೂ ವಿಷಯ ಮುತವಲ್ಲಿ ಸಾಹೇಬರೆ… ನಿಮ್ಮ ಏರಿಯಾಗೆ ಬೇಕಾದ ಬೋರ್‌ವೆಲ್‌ಗಳ ಬಗ್ಗೆಯಾಗಲೀ, ಶಾಲೆ ರೀಪೇರಿ ಬಗ್ಗೆಯಾಗಲೀ ಅಥವಾ ಇನ್ನು ಬೇರೆ ಯಾವುದೇ ಕೆಲಸಗಳ ಬಗ್ಗೆಯಾಗಲೀ ನೀವು ಒಮ್ಮೆಯಾದರೂ ನನ್ನ ಬಳಿ ಬಂದಿಲ್ಲ…”
ಮುತವಲ್ಲಿ ಸಾಹೇಬರು ಮಧ್ಯದಲ್ಲಿಯೇ ತಡೆದು ವೇಗವಾಗಿ ನುಡಿದರು.
“ಅದೆಲ್ಲಾ ಒಂದು ಲಿಸ್ಟ್ ಮಾಡಿಕೊಂಡು ಮುಂದಿನ ಸಾರಿ ಬರ್ತಿವಿ ಸ್ವಾಮಿ; ಈಗ ಸಧ್ಯಕ್ಕೆ ಇದೊಂದು ವಿಷಯದ ಬಗ್ಗೆ ತಾವು ಅಪ್ಪಣೆ ಮಾಡಿಬಿಟ್ಟರೆ ಸಾಕು…” ಎಂದು ನುಡಿದರು.
“ಆದರೂ ಮುತುವಲ್ಲಿ ಸಾಹೇಬರೇ… ಮಣ್ಣು ಎಲ್ಲೆಡೆಯೂ ಒಂದೇ ಅಲ್ಲವೆ.. ಮಣ್ಣಿನಲ್ಲಿ ಭೇದವೇನಿದೆ…” ಎಂದು ತೀರ ಕ್ಯಾಷುಯಲ್ ಆಗಿ ಪ್ರಶ್ನಿಸಿದರು.
ಮುತವಲ್ಲಿ ಸಾಹೇಬರ ಬಳಿ ಅದಕ್ಕೆ ಅಪ್ರಸ್ತುತವಾದ ಹಲವಾರು ಉತ್ತರಗಳು ತಯಾರಿದ್ದವು. ಹೆಚ್ಚು ಮಾತು ಬೆಳೆಸದೆ ಜಿಲ್ಲಾಧಿಕಾರಿಯು ಒಂದು ಕ್ಷಣ ಆಲೋಚಿಸಿ ಅಸಿಸ್ಟೆಂಟ್ ಕಮೀಷನರ್‌ಗೆ ಒಂದು ಆದೇಶ ಹೊರಡಿಸಿದರು.
…ಹದಿನೈದು ದಿನಗಳು ಕಳೆದು ಹೋದವು ಅಧಿಕಾರಿಯಿಂದ ಅಧಿಕಾರಿಗೆ, ಇಲಾಖೆಯಿಂದ ಇಲಾಖೆಗೆ ಸುತ್ತಿದರೂ ಮುತುವಲ್ಲಿ ಸಾಹೇಬರು ಬೇಸರಪಡಲಿಲ್ಲ. ಜನರಿದ್ದಲ್ಲಿ ಜೊತೆಯಲ್ಲಿ… ಸಂಗಡಿಗರಿಗೆ ಆಗಾಗ್ಗೆ ಒಂದಿಷ್ಟು ಕಾಫಿ ತಿಂಡಿ ಕೊಡಿಸಲು ಕೂಡಾ ಅವರು ಹಿಂಜರಿಯಲಿಲ್ಲ. ಶಂಕರನ ಕಡೆಯಿಂದ ಈ ಪ್ರಕರಣದಲ್ಲಿ ಅಂತಹ ತೀವ್ರ ವಿರೋಧವೇನೂ ಕಂಡುಬರಲಿಲ್ಲವೆಂಬುದು ಅವರಿಗೆ ನಿರಾಸೆಯಾಯಿತಷ್ಟೇ… ಆದಾಗ್ಯೂ… ಅಧಿಕಾರಿಗಳ ಮತ್ತು ಪೋಲೀಸಿನವರ ಕೊಕ್ಕೆಗಳೇ ಧಾರಾಳವಾಗಿದ್ದವಲ್ಲ…
ಮುತವಲ್ಲಿ ಸಾಹೇಬರು ಹಗಲೆಲ್ಲಾ ಆಫೀಸುಗಳಿಗೆ ಅಲೆದರು. ಸರಿರಾತ್ರಿಯವರೆಗೂ ಮಸೀದಿಯ ಅಂಗಳದಲ್ಲಿ ಅಥವಾ ಮದೀನ ಹೋಟೆಲ್‌ನ ವಿಶಾಲವಾದ ಹಜಾರದಲ್ಲಿ ಇಲ್ಲವೇ ತಮ್ಮ ಮನೆಯ ಪಡಸಾಲೆಯಲ್ಲಿ ಚರ್ಚೆ ನಡೆಸುತ್ತಿದ್ದರು. ತಾವು ಪಡುತ್ತಿರುವ ಪರಿಶ್ರಮದ ವರ್ಣನೆಯನ್ನು ಮಾಡುತ್ತಿದ್ದರು. ಯಾವ ಯಾವ ಅಧಿಕಾರಿಯ ಬಾಲವನ್ನು ಎಲ್ಲೆಲ್ಲಿ ಕತ್ತರಿಸಬೇಕೆಂಬ ಯೋಜನೆಯನ್ನು ಹಾಕುತ್ತಿದ್ದರು. ಇಸ್ಲಾಮಿಗೆ ಎಲ್ಲೆಲ್ಲಿಂದ ಗಂಡಾತರವೊದಗುತ್ತಿದೆ ಮತ್ತು ಅವುಗಳನ್ನು ಹೇಗೆ ಯುಕ್ತಿಯಿಂದ ಪರಿಹರಿಸಿಕೊಳ್ಳಬೇಕೆಂಬುದರ ಬಗ್ಗೆ ಯುವಕರಿಗೆ ಬೋಧಿಸುತ್ತಿದ್ದರು. ಹೇಗೂ ಹದಿನೈದು ದಿನ ಜಾರಿದ್ದೇ ಅವರಿಗೆ ಗೊತ್ತಾಗಲಿಲ್ಲ. ಇಡೀ ಜಮಾತಿನ ನಡುವೆ ಚರ್ಚೆಗೆ ಗ್ರಾಸವಾಗಿದ್ದ ವಿಷಯವೆಂದರೆ ನಿಸಾರ್‌ನ ಹೆಣ ಮತ್ತು ಮುತುವಲ್ಲಿ ಸಾಹೇಬರ ಪರಿಶ್ರಮ. ಬಹಳಷ್ಟು ಹೆಂಗಸರು ತಲೆತುಂಬಾ ಮೇಲುವಸ್ತ್ರವನ್ನು ಹೊದ್ದು ನಮಾಜ್ ಮಾಡಿದ ನಂತರ ನಿಸಾರ್‌ನ ಹೆಣಕ್ಕೆ ಮುಸ್ಲಿಮರ ಸ್ಮಶಾನದಲ್ಲೇ ದಫನ್ ಆಗುವ ಯೋಗ ಸಿಗಲಿ ಎಂತಲೂ, ಅವನಿಗೆ ಸದ್ಗತಿ ದೊರಕಲಿ ಎಂತಲೂ ಮನದುಂಬಿ ಪ್ರಾರ್ಥಿಸಿದರು.
ಈ ಪವಿತ್ರ ಕಾರ್ಯಕ್ಕೆ ಸಾಕಾದಷ್ಟು ಹಣ ಕೂಡಾ ಶೇಖರವಾಗಿತ್ತು. ಅಂತೂ ಇಂತೂ ಕೊನೆಗೆ ನಿಸಾರ್‌ನ ಹೂತ ಶವವನ್ನು ಮತ್ತೆ ತೆಗೆಯಲಾಯಿತು. ಮುತುವಲ್ಲಿ ಸಾಹೇಬರು ಮತ್ತು ಅವರ ಹಿಂಬಾಲಕರ ಪಡೆ ತಾವು ತಂದಿದ್ದ ಹೊಚ್ಚಹೊಸ ಗಂಜಿ ಹಾಕಿದ ಕಫನ್ನಿನಲ್ಲಿ ಕೊಳೆತ ಶವವನ್ನು ವಿಧಿ ಬದ್ದವಾಗಿ ಸುತ್ತಿದರು. ಸ್ನಾನ ಮಾಡಿಸಲು ಸಾಧ್ಯವಿಲ್ಲದಷ್ಟು ಆ ಶವ ಕೊಳೆತು ಹೋದದ್ದರಿಂದ ಪವಿತ್ರ ಸ್ತೋತ್ರದ ನೀರಿನ ಪ್ರೋಕ್ಷಣೆ ಮಾತ್ರ ಮಾಡಲಾಯಿತು. ದುರ್ವಾಸನೆಗೆ ಹೊಟ್ಟೆ ತೊಳೆಸುವಂತಾದರೂ ಯಾರೊಬ್ಬರೂ ತೋರಗೊಡಲಿಲ್ಲ. ಹಾಜರಿದ್ದ ಪೋಲೀಸಿನವರು ಕರವಸ್ತ್ರದಿಂದ ಮೂಗನ್ನು ಮುಚ್ಚಿಕೊಂಡರು. ಅಂತೂ ಇಂತೂ ನಿಸಾರ್‌ನ ಶವಯಾತ್ರೆ ಮುತುವಲ್ಲಿ ಸಾಹೇಬರು ಮತ್ತು ಅವರ ಸಂಗಡಿಗರ ಹೆಗಲೇರಿ ಹೊರಟಿತು. ಹೆಣದ ದುರ್ವಾಸನೆ ಸಹ್ಯವಾಗಲು ಸಾಕಷ್ಟು ಸೆಂಟ್ ಸುರಿದಿದ್ದು ಶವವಾಹಕದ ಮೇಲ್ಭಾಗದಲ್ಲಿ ಮಲ್ಲಿಗೆ ಹೂವಿನ ಲಡಿಗಳಿಂದ ಮಾಡಿದ್ದ ಚಾದರದಿಂದ ಆವೃತವಾಗಿತ್ತು. ಆ ಮಲ್ಲಿಗೆ ಹೂವುಗಳೆಲ್ಲಾ ಬಿರಿಯದೆ ಮುಗುಮ್ಮಾಗಿದ್ದವು. ಬಹುಶಃ ‘ಹರ್ ಪೂಲ್ ಕ ಕಿಸ್ಮತ್ ಮೇ ಕಹಾಂ ನಾಜೆ ಉರುಸಾಂ, ಚಂದ್ ಪೂಲ್ ತೋ ಖಿಲ್‌ತೇ ಹೈಂ ಮಜಾರೋಂಕೆ ಲಿಯೆ.”
“ಬಿರಿದ ಎಲ್ಲಾ ಹೂವುಗಳ ಅದೃಷ್ಟದಲ್ಲಿ ವಧುವಿನ ಮುಡಿಯೇರುವ ಸೌಭಾಗ್ಯ ಎಲ್ಲಿದೆ… ಕೆಲವು ಸುಮಗಳು ಅರಳುವುದೇ ಗೋರಿಗಳಿಗಾಗಿ.”
ಶವದ ಮೆರವಣಿಗೆ ಬಹುದೂರ ಕ್ರಮಿಸಬೇಕಿತ್ತು. ಆದರೆ ಜನರೂ ಕೂಡಾ ಸಾಕಷ್ಟು ಸಂಖ್ಯೆಯಲ್ಲಿದ್ದರಲ್ಲ. ಶವವಾಹಕವು ಒಂದೆರಡು ನಿಮಿಷಗಳಿಗಿಂತ ಹೆಚ್ಚಾಗಿ ಒಬ್ಬನ ಹೆಗಲ ಮೇಲಿರದೆ ಸ್ಥಳಾಂತರವಾಗುತ್ತಿತ್ತು. ನಗರ ಪ್ರದೇಶವನ್ನು ದಾಟಿ ಶವದ ಮೆರವಣಿಗೆ ಮುಂದುವರಿಯುತ್ತಲೇ ಇತ್ತು. ಇನ್ನೇನು ಆಗೋ ಆ ತಿರುವಿನಿಂದ ಮುಂದಕ್ಕೆ ಹೋದರೆ ಖಬರಸ್ಥಾನ್, ಹತ್ತು ಹೆಜ್ಜೆಯಷ್ಟೇ… ಅಷ್ಟರಲ್ಲಿ ಆ ಸನ್ನಿವೇಶದ ಗಾಂಭೀರ್ಯವನ್ನು, ದುಃಖವನ್ನು ಒಮ್ಮೆಲೇ ಚದುರಿಸುವಂತಹ ವಿಚಿತ್ರವಾದ ಅಸಭ್ಯವಾದ ಏರಿದ ಧ್ವನಿಯ ಬೈಗುಳೊಡನೆ ತೂರಾಡುತ್ತಾ ಬಂದ ವ್ಯಕ್ತಿಯನ್ನು ನೋಡಿದೊಡನೆಯೇ ಶವವಾಹಕದ ಮುಂಭಾಗದಲ್ಲಿ ಹೆಗಲು ಕೊಟ್ಟಿದ್ದ ಮುತುವಲ್ಲಿ ಸಾಹೇಬರು ಸ್ಥಂಭೀ ಭೂತರಾಗಿಬಿಟ್ಟರು. ಅವರ ಮೋರೆ ಬಿಳಿಪೇರಿತು. ಅಷ್ಟೇ ಅಲ್ಲ, ಆ ಶವದ ಮೆರವಣಿಗೆಯಲ್ಲಿದ್ದ ಬಹುತೇಕ ಜನರ ಅವಸ್ಥೆ ಅದೇ ರೀತಿಯದಾಗಿತ್ತು. ಯಾರೊಬ್ಬರೂ ಕೂಡಾ ಮುಂದಡಿ ಇಡಲಿಲ್ಲ. ಎಲ್ಲರ ಗಂಟಲ ದ್ರವ ಆರಿತು. ಆ ವ್ಯಕ್ತಿ ಅಸಭ್ಯವಾಗಿ ಇನ್ನಷ್ಟು ಬೈಗಳವನ್ನು ಉದುರಿಸಿ ಹಾಗೆಯೇ ಸಣ್ಣ ಓಣಿಯೊಂದರಲ್ಲಿ ತೂರಾಡುತ್ತಾ ಮರೆಯಾದ.
ಬಹುಬೇಗ ಚೇತರಿಸಿಕೊಂಡವರೇ ಮುತವಲ್ಲಿ ಸಾಹೇಬರು ಶವವನ್ನು ಕೊಂಡೊಯ್ಯುವಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಜೊತೆಗಿದ್ದ ಪೋಲೀಸನವರನ್ನು ಈ ಸಂದರ್ಭದಲ್ಲಿ ಕಂಡು ಮುತುವಲ್ಲಿ ಸಾಹೇಬರು ಬಹುಬೇಗ ಜಾಗೃತರಾದರು. ಕುಡುಕನನ್ನು ನೋಡಿ ಶವದ ಜೊತೆಗಿದ್ದವರು ನಿಂತುದನ್ನು ಕಂಡು ಒಬ್ಬ ಪೋಲೀಸೀನವ ಮುಂದೆ ಹೋಗಿ ಕುಡುಕನತ್ತ ಲಾಠಿ ಆಡಿಸಿ ಅವನನ್ನು ಬೆದರಿಸಿದ.
ಮುತುವಲ್ಲಿ ಸಾಹೇಬರು ಮೆಲ್ಲನೆ ಮುಂದಡಿ ಇಟ್ಟರು. ಜಮಾತ್ ಕೂಡಾ ಅವರೊಡನೆ ಚಲಿಸಿತು. ಈಗ ಮಾತ್ರ ಮುತುವಲ್ಲಿ ಸಾಹೇಬರ ಕಾಲುಗಳು ಕಂಪಿಸತೊಡಗಿದವು ಯಾರೋ ಬಂದು ಅವರ ಹೆಗಲಿನಿಂದ ಬದಲಾಯಿಸಿ ತಾನು ಹೆಗಲು ನೀಡಿದ. ಮುತುವಲ್ಲಿ ಸಾಹೇಬರು ಕರವಸ್ತ್ರ ತೆಗೆದು ಧಾರಾಕಾರವಾಗಿ ಬರುತ್ತಿದ್ದ ಬೆವರನ್ನು ಒರೆಸಿಕೊಂಡರು. ಜನರ ನಡುವೆ ದಾವೂದನತ್ತ ಕೆಂಗಣ್ಣು ಬೀರಿದರು. ಅವನು ನೋಟವನ್ನು ಕೆಳಗೆ ಹರಿಸಿದ ಬಹುತೇಕ ಜನರು ಕಣ್ಣುಗಳಲ್ಲಿಯೇ ಮಾತಾಡಿಕೊಂಡರು ಒಬ್ಬರೂ ಉತ್ತರಿಸಲಿಲ್ಲ. ಆದರೂ ದಾಪುಗಾಲು ಹಾಕುತ್ತಾ ಖಬರಸ್ಥಾನ್ ಕಡೆ ಮುಂದುವರೆಸಿದರು.
ಪೋಲೀಸಿನವರು ಖಬರಸ್ಥಾನ ಹೊರಗಡೆಯೇ ನಿಂತರು. ಅಂತೂ ಶವದ ದಫನ್ ಆಯಿತು. ಅದೂ ಮುಸ್ಲಿಮರ ಖಬರ್‌ಸ್ಥಾನ್‌ನಲ್ಲಿ ಮುತುವಲ್ಲಿ ಸಾಹೇಬರ ತಲೆಯ ನರಗಳು ಸಿಡಿದುಹೋಗುತ್ತಿದ್ದವು. ಇದು ಯಾರ ಶವ?…
ಆ ಕುಡುಕ ಪೇಂಟರ್ ನಿಸಾರ್ ಎನ್ನುವುದರಲ್ಲಿ ಅವರಿಗೆ ಯಾವ ಸಂಶಯವೂ ಇರಲಿಲ್ಲ. ದಾವೂದ್ ಮೇಲೆ, ನಿಸಾರ್‌ನ ಹೆಂಡತಿಯ ಮೇಲೆ ಅವರಿಗೆ ಕೊಚ್ಚಿ ಹಾಕುವಷ್ಟು ಕೋಪ ಬಂದಿತ್ತು. ಆದರೂ ಅವರಿಗೊಂದೇ ಸಮಾಧಾನ, ಜಮಾತಿನ ಬಹುತೇಕ ಮಂದಿ ನಿಸಾರ್‌ನನ್ನು ಗುರುತಿಸಿದ್ದರೂ ಒಬ್ಬರಾದರೂ ಪೋಲೀಸಿನವರ ಮುಂದೆ ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ಅವರ ಮರ್ಯಾದೆಯನ್ನು ಕಾಪಾಡಿದ್ದರು. ಒಂದು ಕ್ಷಣ ಸಮಾಧಾನ ಕೂಡಲೇ ಮಾಯವಾಯಿತು. ಸಾವಿರಾರು ಕಾಗೆಗಳು ಕಾ… ಕಾ. ಎನ್ನುತ್ತಾ ಅವರ ಮೆದುಳನ್ನು ಕಿತ್ತು ತಿನ್ನತೊಡಗಿದವು ಇದು ಹಿಂದುವಿನ ಹೆಣವೋ… ಮುಸ್ಲಿಮನ ಹೆಣವೋ… ಗುರುತಿಸಲಸಾಧ್ಯವಾದಷ್ಟು ಕೊಳೆತುಹೋಗಿದ್ದ ಆ ಶವ… ಇಲ್ಲೇ ಕೊಳೆಯಬೇಕೋ… ಅಲ್ಲಿ ಕೊಳೆಯಬೇಕೋ…
‘ಜನರು ಆ ಶವದ ಮೇಲೆ ಸರಸರನೆ ಮಣ್ಣೆಳೆಯುತ್ತಿದ್ದರು. ಪೂರ್ತಾ ಮಣ್ಣೆಳೆಯುವುದನ್ನು ಕಾಯದೆ ಅವರು ವೇಗವಾದ ಹೆಜ್ಜೆಗಳನ್ನಿಡುತ್ತಾ ಮನೆಯ ಕಡೆ ದಾಪುಗಾಲಿಕ್ಕಿದರು. ಈ ದಿನ ಅವರ ಜೊತೆಯಲ್ಲಿ ಯಾರೂ ಇರಲಿಲ್ಲ. ಅವರನ್ನು ಜೀವಂತವಾಗಿ ಕುಕ್ಕಿ ಕೊಲ್ಲುತ್ತಿದ್ದ ಕಾಗೆಗಳ ವಿನಹ…
ತೀರಾ ಬಳಲಿಕೆಯಿಂದ ಮನೆಯ ಪಡಸಾಲೆಯಲ್ಲಿ ಬಂದು ಕುಳಿತು ಕೆಲಕ್ಷಣಗಳಾದ ನಂತರವೂ ಆರಿಫಳನ್ನು ಕಾಣದೇ ಇದ್ದಾಗ ಅವರಿಗೆ ಚಡಪಡಿಕೆ ಎನಿಸಿ “ಆರಿಫ … ಒಂದು ಲೋಟ ನೀರು ತಾ…” ಎಂದು ಕೂಗಿ ಕರೆದರು.
ಆರಿಫಳ ಬದಲಿಗೆ ಬಂದ ಮಗಳನ್ನು ನೋಡಿ “ಏಕೆ … ನೀನಿವತ್ತು ಸ್ಕೂಲಿಗೆ ಹೋಗಿಲ್ಲ” ಎಂದು ಕೇಳಿದರು.
“ಅಮ್ಮಾ ಮನೇಲಿಲ್ಲ. ಅದಕ್ಕೆ ನಾನು ಮನೇಲಿ ಉಳ್ಕೊಂಡ” ಎಂದಳು.
“ಮನೇಲಿದ್ದೆ…. ಎಲ್ಲಿಗೋದಳು?”
ತಂದೆಯ ಪ್ರಶ್ನೆಗೆ ಅತ್ತೂ ಅತ್ತೂ ಕೆಂಪಾಗಿದ್ದ ಕಣ್ಣುಗಳ ಮೇಲೆ ಆವೃತವಾಗಿದ್ದ ರೆಪ್ಪೆಗಳನ್ನು ಮೇಲೆಕೆತ್ತುತ್ತಾ ಹುಡುಗಿ ಹೇಳಿದಳು.
“ಅನ್ಸರ್‌ಗೆ ತುಂಬಾ ಖಾಯಿಲೆಯಾಗಿದೆಯಲ್ಲಪ್ಪಾ, ಅಮ್ಮಾ ಅವನ ಜೊತೆ ಆಸ್ಪತ್ರೆಲಿದ್ದಾರೆ…”
“ಆಂ… ಏನಂದೆ?… ಯಾರ್ಗ ಖಾಯಿಲೆ… ಯಾವಾಗ್ನಿಂದ, ಏನ್ ಖಾಯಿಲೆ ಒಟ್ಟೋಟ್ಟಿಗೆ ಬಂದ ಪ್ರಶ್ನೆಗಳಿಗೆ ಹುಡುಗಿಯ ಕಂಗಳಿಂದ ಭಾರವಾದ ಹನಿಗಳು ಉದುರಿದವು.
“ಆಗ್ಲೆ ಹದಿನೈದು ಇಪ್ಪತ್ತು ದಿನದಿಂದಾನೆ ಅನ್ಸರ್‌ಗೆ ತುಂಬಾ ಜ್ವರ ಇತ್ತಲ್ಲಾ… ಡಾಕ್ಟರ್ ಅದೇನೋ ಮೆದುಳಿನ ಖಾಯಿಲೆ ಅಂತ ಹೇಳಿದ್ದಾರಪ್ಪ…? ಮೆನಿನ್ ಜೈಂಟೀಸ್ ಅಂತಾ… ಖಾಯಿಲೆ ಅಂತೆ…” ಎಂದು ಹೇಳಿದವಳೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.
ಮುತುವಲ್ಲಿ ಸಾಹೇಬರ ಕೈಯಿಂದ ಲೋಟ ಜಾರಿ ಕೆಳಗೆ ಬಿದ್ದಿತು.
ಮತ್ತ ಬಹು ನಿಧಾನವಾಗಿ ಅವರ ಕಿವಿಗಳಲ್ಲಿ ಮೊಳಗತೊಡಗಿತು. ಅಣ್ಣಾ… ನನ್ನ ಪಾಲಿಗೆ ಆಸ್ತಿ… ಅಣ್ಣಾ… ಈ ಬಡ ವಿಧವೆಗೆ ಸಹಾಯ ಮಾಡಿ… ಮಾಯಿ ಬಾಪ್… ನನ್ನ ಮಗಳ ಮದುವೆಗೆ ಸಾಲ ಕೊಡಿ… ಹಕ್ ದಾರ್ ತರ್‌ಸೆ ತೋ ಅಂಗಾರ್ ಕಾ ನ್ಹೂ ಬರ್‌ಸೆ… ಕಾಗೆಗಳು… ಕಪ್ಪು… ಬೂದು… ಅವುಗಳೊಳಗಿನ ಕಾಮನಬಿಲ್ಲು…
*****