“People are trying to work towards a good quality of life for tomorrow instead of living for today, for many tomorrow never really comes”. ತುತ್ತು ಅನ್ನಕ್ಕೆ ಅಂಗಲಾಚಿಕೊಂಡು, ಕೊನೆಗೂ ಅದು ದೊರಕಿದಾಗ ಗಬಗಬತಿಂದು ತೇಗುವ ಬಿಕ್ಷುಕರಂತೆ, ಆ ಮಹಿಳೆಯರು ತಮ್ಮ ಸುತ್ತ ಮುತ್ತಲೂ ಕುಳಿತ ಜನರ ಪರಿವೆಯಿಲ್ಲದೆ, ಬಿರಿಯಾನಿ, ಮಟನ್ ಮುಕ್ಕುತ್ತಿರುವುದನ್ನು ನೋಡಿ, ಆಶ್ಮಾಳಿಗೆ ನಗು ಬಂತು. ಅವಳು ಕೂಡಾ ಊಟಕ್ಕೆ ಕುಳಿತಿದ್ದರೂ, ಮನಸ್ಸು ಕಸಿವಿಸಿಗೊಂಡಿರುವುದರಿಂದ ಅವಳ ಹಸಿವು ಸತ್ತು ಹೋಗಿತ್ತು. ತೋರಿಕೆಗಾಗಿ ಅವಳು ಊಟ ಮಾಡುತ್ತಿದ್ದರೂ, ಅವಳ ಮನಸ್ಸೆಲ್ಲಾ ಆ ಮನೆಯ ಮೇಲೆ ಕೇಂದ್ರೀಕೃತವಾಗಿತ್ತು. ಟೇಬಲ್ ಮೇಲಿಟ್ಟ ಬಿರಿಯಾನಿ ತಟ್ಟೆ ಖಾಲಿಯಾಗುತ್ತಿದ್ದಂತೆ ಪುನಃ ಬಿರಿಯಾನಿ ತುಂಬಿದ ತಟ್ಟೆ ಹಾಜರಾಗುತ್ತಿತ್ತು. ಕುಡಿಯಲು ಕೋಲ್ಡ್‌ಡ್ರಿಂಕ್ಸ್ ಅಲ್ಲದೆ, ದುಬಾರಿ ಬೆಲೆಯ ಐಸ್‌ಕ್ರೀಂ, ಪ್ಲೇಟಿನ ಬದಿಯಲ್ಲೇ ಇಟ್ಟಿದ್ದರು. ತಿಂದವರೆಷ್ಟೋ? ಬಿಟ್ಟವರೆಷ್ಟೋ? ಕೆಲವು ಮಕ್ಕಳಂತೂ ಅರ್ಧ ತಿಂದು ಬಿಸಾಡಿದ ಚಿಕನ್ ಮಟನ್ ತುಂಡುಗಳು ಟೇಬಲ್ಲಿನ ಮೇಲೂ, ಕೆಳಗೂ ಬಿದ್ದಿದ್ದವು.
ಆಶ್ಮಾ ಯಾಂತ್ರಿಕವಾಗಿ ಊಟ ಮುಗಿಸಿ, ಚಪ್ಪರದಿಂದ ಹೊರಗೆ ಬಂದು ಆ ಹೊಸಮನೆಯ ಸುತ್ತಲೂ ತಿರುಗತೊಡಗಿದಳು. ಮಗುವನ್ನು ಗಂಡನ ಕೈಯಲ್ಲಿ ಕೊಟ್ಟಿದ್ದುದರಿಂದ ಅವಳಿಗೆ ಅರಾಮವಾಗಿತ್ತು. ಗಂಡನ ಗೆಳೆಯನ ಹೊಸಮನೆಯ ‘ಗೃಹ ಪ್ರವೇಶ’ ಕಾರ್ಯಕ್ರಮವಾಗಿದ್ದು ಗಂಡನ ಒತ್ತಾಯಕ್ಕಾಗಿ ಬಂದಿದ್ದಳು. ಅ ಹೊಸಮನೆಗೆ ಅವಳ ಲೆಕ್ಕಾಚಾರ ಪ್ರಕಾರ ಸುಮಾರು ೨೦ ಲಕ್ಷ ಮಿಕ್ಕಬಹುದು. ಒಂದಂತಸ್ತಿನ ಮನೆಯಾಗಿದ್ದು, ಒಟ್ಟು ೫ ಬೆಡ್‌ರೂಮ್‌ಗಳಿದ್ದವು. ಪ್ರತೀ ರೂಮಿನಲ್ಲೂ. ಬಾತ್‌ರೂಂ, ಟಾಯ್ಲೆಟ್‌ಗಳಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದವು.
ದುಬಾರಿ ಬೆಲೆಯ ರಾಜಸ್ತಾನದ ಮಾರ್ಬಲ್‌ಗಳು ನೆಲವನ್ನು ಅಲಂಕರಿಸಿದ್ದುವು. ‘ಇಂಟೀರಿಯರ್ ಡೆಕರ್ಸ್’ ಕಣ್ಣು ಕುಕ್ಕುವಂತಿತ್ತು. ಅಲ್ಲಿ ಸೇರಿದ ಹೆಚ್ಚಿನ ಮಹಿಳೆಯರು ಅಪರಿಚಿತರು ಆದುದರಿಂದ, ಅವಳಿಗೆ ಮನೆಯ ಮೂಲೆಮೂಲೆಯನ್ನು ಆರಾಮವಾಗಿ ನೋಡಿಕೊಂಡು ಬರಲು ಸಾಧ್ಯವಾಯಿತು. ಮನೆಗೆ ಹೊರಡಲು ಅಣಿಯಾದಂತೆ, ಮನೆಯೊಡತಿಯನ್ನು ಭೇಟಿಯಾಗಿ, ಅವಳಿಗೆ ಶುಭ ಕೋರಿದಳು. ತನ್ನ ಪರಿಚಯ ಹೇಳಿದರೂ ಮಾತಿಗಾಗಿ ಅವಳನ್ನು ತಮ್ಮ ಮನೆಗೆ ಬರಲು ಆಹ್ವಾನ ನೀಡಲು ನಾಚಿಕೆಯಾಯಿತು. ಯಾಕೆಂದರೆ ಅವಳಿರುವುದು, ಒಂದು ಬೆಡ್ರೂಮ್ನ ಒಂದು ಸಣ್ಣ ಹಂಚಿನ ಮನೆಯಲ್ಲಿ ಅದೂ ಬಾಡಿಗೆದಾರಳಾಗಿ.
ಗಂಡನೊಂದಿಗೆ ಮನೆಗೆ ಬಂದ ಆಶ್ಮಾಳಿಗೆ ಮನಸ್ಸು ಸೀಮಿತದಲ್ಲಿರಲಿಲ್ಲ. ತಾನು ಮದುವೆಯಾಗಿ ೪ ವರ್ಷವಾಯಿತು. ತನ್ನ ಗಂಡ ಬಿ. ಕಾಂ. ಗ್ರಾಜುವೇಟ್ ಆಗಿ, ಎಂ. ಬಿ. ಎ ಮಾಡಿರುತ್ತಾನೆ. ಅದರೆ ಸಂಬಳ ಮಾತ್ರ ೪,೫೦೦ ದಾಟಲಿಲ್ಲ. ಅದೂ ಬಂದರಿನ ಒಂದು ಹೋಲ್‌ಸೇಲ್‌ನ ದಿನಸಿ ಅಂಗಡಿಯಲ್ಲಿ ಲೆಕ್ಕಪತ್ರ ನೋಡಿಕೊಳ್ಳುವುದು. ತಿಂಗಳ ಬಾಡಿಗೆ, ಡಾಕ್ಟರ್ ಪೀಸು, ಬಟ್ಟೆ -ಬರೆ, ಬಸ್ಸಿನ ಖರ್ಚು ಹಾಗೂ ಮನೆ ಖರ್ಚು ಎಲ್ಲಾ ಸೇರಿ, ಎಷ್ಟೇ ಸೂಕ್ಷ್ಮ ಮಾಡಿದರೂ ಉಳಿತಾಯ ಮಾಡಲು ಏನೂ ಆಗುತ್ತಿರಲಿಲ್ಲ. ಇನ್ನು ಆಕಸ್ಮಿಕವಾಗಿ ನೆಂಟರು ಬೀಡುಬಿಟ್ಟರೆ, ಅ ತಿಂಗಳು ನಿಭಾಯಿಸುವುದು ಬಹಳ ಕಷ್ಟ, ಆದರೆ ಅವನ ಗೆಳೆಯ, ಬರೇ ಪಿಯುಸಿವರೆಗೆ ಓದಿದ್ದು, ಗಲ್ಫ್‌ಗೇ ಹೋಗಿ, ಬರೇ ೬ ವರ್ಷದಲ್ಲಿ ಲಕ್ಷಾನುಗಟ್ಟಲೆ ಮೌಲ್ಯದ ಅಸ್ತಿ, ಮನೆ, ಬಂಗಾರ ಮಾಡಿಕೊಂಡಿದ್ದಾನೆ.
ಅವನ ಹೆಂಡತಿ ಗೃಹಪ್ರವೇಶದ ದಿವಸ ಉಟ್ಟಿದ್ದ ಸೀರೆಯ ಬೆಲೆಯೇ ಸುಮಾರು ೧೦,೦೦೦ ರೂಪಾಯಿ ಇರಬಹುದು. ಇನ್ನು ಅವಳ ಮೈಮೇಲಿನ ಚಿನ್ನಾಭರಣವೋ? ಸುಮಾರು ೧ ಕೆ. ಜಿ. ಯಾಗಬಹುದು. ಬರೇ ಅವಳ ಸೊಂಟದ ಒಂದುವರೆ ಇಂಚು ಅಗಲದ ಚಿನ್ನದ ಪಟ್ಟಿಯೇ ಕಾಲು ಕೆ. ಜಿ. ಇರಬಹುದು. ವಿದ್ಯಾಭ್ಯಾಸ ಇಲ್ಲದ ಅವಳ ಗಂಡ ಇಷ್ಟೊಂದು ಗಳಿಕೆ ಮಾಡುವಾಗ, ತನ್ನ ಗಂಡ ಪೋಸ್ಟ್ ಗ್ರಾಜುವೇಟ್ ಅಗಿ ಮಾಡಿದ್ದೇನು?
ತನ್ನ ಗಂಡನನ್ನು ದೂರಿಕೊಳ್ಳಲು ಅವಳ ಮನಸ್ಸು ಕೇಳಲಿಲ್ಲ. ಬಹಳ ಮೃದು ಸ್ವಭಾವದ ಸರಳ ವೃಕ್ತಿ. ಯಾರ ತಂಟೆ ತಕರಾರಿಗೆ ಹೋಗುವ ವ್ಯಕ್ತಿಯಲ್ಲ. ತಾನಾಯಿತು ತನ್ನ ಕೆಲಸವಾಯಿತು. ಕೆಲಸ ಮುಗಿದ ಮೇಲೆ ಮನೆಗೆ ಬಂದು ಮ್ಯಾಗ್‌ಜಿನ್ ಹಿಡಿದು ಕೂತರೆ ಮತ್ತೆ ರಾತ್ರಿ ಊಟಕ್ಕೆ ಏಳುವುದು. ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡು, ಒಂದು ವರ್ಷ ತಿರುಗಾಡಿ ಕೆಲಸ ಸಿಕ್ಕದೆ, ಕೊನೆಗೆ ಊರಿಗೆ ಬಂದು ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಈ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿ, ಸುಮಾರು ೪ ವರ್ಷ ಆಯಿತು. ವರ್ಷಕ್ಕೊಮ್ಮೆ ೫೦೦ ರೂಪಾಯಿ ಏರಿಸುತ್ತಿದ್ದರು.
ರಾತ್ರಿ ಊಟ ಮಾಡಿ ಮಲಗಲು ಅಣಿಯಾಗುವಾಗ ಆಶ್ಮಾ ತನ್ನ ಗಂಡನಲ್ಲಿ ತನ್ನ ಬಯಕೆಯನ್ನು ಬಚ್ಬಿಟ್ಟಳು
‘ನೋಡಿ, ನಾನು ಹೇಳುತ್ತೇನೆ ಎಂದು ಬೇಸರ ಮಾಡಬೇಡಿ. ನಿಮ್ಮ ಗೆಳೆಯ ಖಾಲಿದ್‌ನ ಹೊಸ ಮನೆ ನೋಡಿದಿರಲ್ಲಾ. ಹೇಗಿದೆ? ಅವನು ಗಲ್ಫ್ ಹೋಗಿ ಬರೇ ೬ ವರ್ಷ ಆಯಿತು. ಇಷ್ಟೊಂದು ಲಕ್ಷ ರೂಪಾಯಿ ಗಳಿಕೆ ಹೇಗೆ ಮಾಡಿದ? ಅದೂ ಅವನಿಗೆ ಹೇಳಿಕೊಳ್ಳುವಷ್ಟು ವಿದ್ಯಾಭ್ಯಾಸ ಕೂಡ ಇಲ್ಲ’.
ಅಲ್ತಾಪ್‌ಗೆ ಹೆಂಡತಿಯ ಮಾತು ಕೇಳಿ ನಗು ಬಂತು. ‘ಈ ಪ್ರಶ್ನೆ ನೀನು ಕೇಳುತ್ತಿ ಎಂದು ನನಗೆ ಗೊತ್ತಿತ್ತು. ಅದಕ್ಕಾಗಿ ಅವನನ್ನು ಕರೆದು ಎಲ್ಲಾ ವಿಚಾರಿಸಿದೆ. ಅವನು ಅಬುದಾಬಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನಂತೆ. ಕೈ ತುಂಬಾ ಸಂಬಳವಿದೆ ಎಂದು ಹೇಳಿದ. ಹೆಚ್ಚಿಗೆ ಏನೂ ಹೇಳಲಿಲ್ಲ. ಅವನಿಗೆ ಜಾಸ್ತಿ ಮಾತನಾಡಲು ಪುರುಸೋತ್ತು ಕೂಡ ಇಲ್ಲ’.
ಗಂಡನ ಮುಗ್ಧತೆ ನೋಡಿ ಆಶ್ಮಾಳಿಗೆ ನಗುಬಂತು. ತನ್ನ ಗಂಡ ಯಾವಾಗಲೂ ಹೀಗೆ. ಯಾವುದನ್ನೂ ಅತಿಯಾಗಿ ಹಚ್ಬಿಕೊಳ್ಳಲಾರ. ಒಂದು ನಮೂನೆಯ ನಿರ್ಲಿಪ್ತ ಸ್ವಭಾವದವನು. ಸುಖ ಬಂದಾಗ ಜಂಬದಿಂದ ಕೊಚ್ಚಿಕೊಳ್ಳುವುದಿಲ್ಲ. ಕಷ್ಟ ಬಂದಾಗ ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಇಲ್ಲದಿದ್ದರೆ ತಾನು ಏನನ್ನು ಹೇಳಲು ಬಯಸುತ್ತೇನೆ ಎಂದು ಯಾಕೆ ಅರ್ಥಮಾಡಿಕೊಳ್ಳುವುದಿಲ್ಲ? ಇರಲಿ, ಇವರಿಗೆ ನೇರವಾಗಿ ಹೇಳಿದರೇನೇ ಅರ್ಥವಾಗುವುದು.
‘ಅಲ್ರೀ….. ನೀವು ಯಾಕೆ ಗಲ್ಫ್‌ಗೆ ಹೋಗಬಾರದು?’ ಆಶ್ಮಾಳ ಅನಿರೀಕ್ನಿತ ಪ್ರಶ್ನೆ ಅಲ್ತಾಫ್‌ನನ್ನು ಒಮ್ಮೆಲೆ ಗಾಬರಿಯಾಗುವಂತೆ ಮಾಡಿತು. ಕೆಲಸಕ್ಕಾಗಿ, ಬೆಂಗಳೂರು ತಿರುಗಾಡಿದ್ದು ಬಿಟ್ಟರೆ ಅವನು ಸರಿಯಾಗಿ ದ. ಕ. ಜಿಲ್ಲೆಯನ್ನು ತಿರುಗಾಡಿದವನಲ್ಲ. ಎಲ್ಲಿಗೆ ಹೋದರೂ ರಾತ್ರಿ ಹೊತ್ತು ಮನೆ ಸೇರಲೇಬೇಕು. ಹೆಚ್ಚೇಕೆ ರೈಲುಗಾಡಿ, ವಿಮಾನದಲ್ಲಿ ಪ್ರಯಾಣಿಸಿದ್ದೇ ಇಲ್ಲ. ಈಗ ವಿದೇಶಕ್ಕೆ ಹೋಗುವುದಂತೂ ಅವನು ಕನಸು ಮನಸ್ಸಿನಲ್ಲೂ ಅಲೋಚಿಸಿರಲಿಲ್ಲ. ಅಲ್ತಾಫ್ ಆಶ್ಮಾಳ ಮುಖ ನೋಡಿದ. ಅವಳು ನನಗೆ ತಮಾಷೆ ಮಾಡುತ್ತಿರಬಹುದೇ ಎಂದು ಅವನ ಭಾವನೆ. ಆದರೆ ಆಶ್ಮಾಳ ಮುಖದಲ್ಲಿ ನಗೆಯಿರಲಿಲ್ಲ. ವಿಷಯವನ್ನು ತುಂಬಾ ಸೀರಿಯಸ್ ಅಗಿ ತೆಗೆದುಕೊಂಡವಳಂತೆ ಕಾಣುತ್ತಿತ್ತು. ಅಲ್ತಾಘ್ ಒಮ್ಮೆ ಅಧೀರನಾದ.
‘ಏನು ಹೇಳುತ್ತೀ ಆಶ್ಮಾ. ಇಲ್ಲಿ ನಮಗೇನು ಕಡಿಮೆಯಾಗಿದೆ. ಎರಡು ಹೊತ್ತು ನೆಮ್ಮದಿಯಿಂದ ಊಟ ಮಾಡಬಹುದು. ಮೇಲಾಗಿ ಮುದ್ದಾದ ಅರೋಗ್ಯವಂತ ಮಗುವಿದೆ. ಸ್ವಂತ ಮನೆಯೊಂದು ಇಲ್ಲ ಅಷ್ಟೇತಾನೆ? ಈ ಭೂಮಿಗೆ ಬರುವಾಗ ನಾವು ಏನು ತಂದಿದ್ದೇವೆ ಹೇಳು. ಬರಿಗೈಯಲ್ಲಿ ಹೋಗುತ್ತೇವೆ. ಅಸ್ತಿ, ಒಡವೆ, ಮನೆ ಇದು ಯಾವುದೂ ನಮ್ಮದಲ್ಲ. ಕೊನೆಕಾಲದಲ್ಲಿ ನಮ್ಮ ಬೆನ್ನ ಹಿಂದೆ ಬರುವುದು ನಮ್ಮ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಮಾತ್ರ. ಆದುದರಿಂದ ಈ ಅಲೋಚನೆಯನ್ನು ಬಿಟ್ಟುಬಿಡು. ನಗು-ನಗುತ್ತಾ ಮುದ್ದು ಮಾಡುವ ಹೆಂಡತಿ, ಮನೆ ತುಂಬಾ ಓಡಾಡುವ ಈ ನಮ್ಮ ಯುವರಾಜ, ಇಷ್ಟಿದ್ದರೆ ನಮಗೆ ಕೋಟಿ ರೂಪಾಯಿಯ ಅಸ್ತಿಯಿದ್ದಷ್ಟೇ ಸಂತೋಷವಾಗುತ್ತದೆ. ಇದಕ್ಕಿಂತ ಜಾಸ್ತಿ ನಮಗೇನು ಬೇಕು?”
ಆಶ್ಮಾಳಿಗೆ ಗಂಡನ ಕಾವ್ಯಮಯ ಮಾತು ಹಿಡಿಸಲಿಲ್ಲ. ಅವಳ ಮನಸ್ಸಿನಲ್ಲಿ ಖಾಲಿದ್‌ನ ಮಳಿಗೆಯ ಅರಮನೆ, ಅವನ ಹೆಂಡತಿಯ ಬೆಲೆಬಾಳುವ ಉಡುಗೆ, ತೊಡುಗೆ ಮೈಮೇಲಿರುವ ರಾಶಿರಾಶಿ ಚಿನ್ನಗಳೇ ಕಣ್ಣೆದುರು ಕಾಣುತ್ತಿದ್ದುವು. ತನ್ನ ಎದುರು ಉಂಡಾಡಿ ಗುಂಡನ ಹಾಗೇ ತಿರುಗುತ್ತಿದ್ದ ಖಾಲೀದ್ ಈಗ ಎಷ್ಟು ದೊಡ್ಡ ವ್ಯಕ್ತಿಯಾಗಿದ್ದಾನೆ. ಅವನ ಹಿಂದೆ ಮುಂದೆ ಸಹಾಯ ಕೇಳಿಕೊಂಡು ಬರುವ ಜನರೆಷ್ಟು? ಮದ್ರಸ-ಮಸೀದಿಯ ಮೌಲವಿಗಳು ಕೂಡಾ ಅವನನ್ನು ಕಂಡ ಕೂಡಲೇ ಹಲ್ಲು ಕಿರಿಯುತ್ತಾರೆ. ಸಹಾಯ ಯಾಚಿಸುತ್ತಾರೆ. ಅವನ ಪರಲೋಕದ ಸೌಖ್ಯಕ್ಕಾಗಿ, ಪ್ರಾರ್ಥನೆ ಮಾಡುತ್ತಾರೆ. ಇವರ ಮಧ್ಯದಲ್ಲೇ ಇರುವ ನನ್ನ ಸಂಭಾವಿತ ಗಂಡ, ಒಬ್ಬ ಪೋಸ್ಟ್ ಗ್ರಾಜುವೇಟ್ ಆಗಿದ್ದರೂ, ಯಾರಿಗೂ ಕಾಣಲಾರ. ಅವನ ವಿದ್ಯೆಗೂ ಬೆಲೆಯಿಲ್ಲ. ಇದು ಯಾವರೀತಿಯ ಸಮಾಜ? ಇಲ್ಲ, ನನಗೆ ನ್ಯಾಯ ಸಿಗಲೇಬೇಕು. ನನ್ನ ಗಂಡ ಕೂಡಾ ಎಲ್ಲರೆದುರೂ ತಲೆಯೆತ್ತಿ ಮೆರೆಯಬೇಕು ಎಲ್ಲರೂ ಮರ್ಯಾದೆ ಕೊಡಬೇಕು. ಈ ಆಲೋಚನೆಯಲ್ಲಿ ಆಶ್ಮಾಳಿಗೆ ಎಷ್ಟೋ ರಾತ್ರಿಗಳು ನಿದ್ರೆಯಿಲ್ಲದೆ ಕಳೆದು ಹೋದವು. ಲವಲವಿಕೆ ಕಡಿಮೆಯಾದವು, ಮಗುವಿನ ಮೇಲೆ ಆರೈಕೆ, ಮಮತೆ ಕುಂದ ತೊಡಗಿತು. ಗಂಡನ ಮೇಲಿನ ಮೊದಲಿನ ಮಮತೆ, ಪ್ರೀತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ, ಜೀವನದಲ್ಲಿ ಜಿಗುಪ್ಸೆ ಬಂದ ರೀತಿಯಲ್ಲಿ ಇರತೊಡಗಿದಳು. ಅಲ್ತಾಫ್ ಕೆಲವು ವಾರಗಳಿಂದ, ತನ್ನ ಪತ್ನಿಯಲ್ಲಾದ ಬದಲಾವಣೆಯನ್ನು ಗಮನಿಸುತ್ತಿದ್ದ. ಖಾಲಿದನ ‘ಅರಮನೆ’ ಆಶ್ಮಾಳ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅವನಿಗೆ ತಿಳಿಯಿತು. ಅವಳನ್ನು ಸಂತೋಷದಲ್ಲಿಡಲು ಶತಪ್ರಯತ್ನ ಮಾಡಿದ. ಭಾನುವಾರ ಸಂಜೆ, ಸಿನಿಮಾ-ಪಾರ್ಕು ಎಂದು ತಿರುಗಾಡಿಸಿದ. ಯಾವುದೂ ಫಲ ನೀಡಲಿಲ್ಲ.
‘ಆಶ್ಮಾ, ನಾನು ಕೆಲವು ವಾರಗಳಿಂದ ನೋಡುತ್ತಿದ್ದೇನೆ. ನೀನು ಮೊದಲಿನ ಆಶ್ಮಾ ಅಲ್ಲ. ತುಂಬಾ ಬದಲಾಗಿರುವೆ. ಮಾತು ಕಡಿಮೆಯಾಗಿದೆ. ಏನಾಗಿದೆ ಹೇಳು. ನಿನ್ನ ಮನಸ್ಸಿನಲ್ಲಿದ್ದುದನ್ನು ಹೇಳು! ನಿನ್ನ ಸುಖದಲ್ಲಿ ಸಮಪಾಲು ಇದ್ದ ಹಾಗೇ ನಿನ್ನ ಕಷ್ಟದಲ್ಲೂ ನನಗೆ ಪಾಲಿದೆ. ಹೇಳು, ನಮ್ಮ ಜೀವನ ಮೊದಲಿನಂತಾಗಬೇಕು ಆಶ್ಮಾ ಒಮ್ಮೆ ತೀಕ್ಷ್ಣವಾಗಿ ತನ್ನ ಗಂಡನನ್ನು ನೋಡಿದಳು. ಅವಳ ಮುಖದಲ್ಲಿ ಒಂದು ನಮೂನೆಯ ತಿರಸ್ಕಾರ ಭಾವವಿತ್ತು.
‘ನಾನು ಏನು ಹೇಳಿದರೂ ನೀವು ಒಪ್ಪಲಾರಿರಿ. ಅಲ್ಲದೆ ನಿಮಗೆ ಅಂತಹ ಛಲವೂ ಇಲ್ಲ. ಅದುದರಿಂದ ನನ್ನನ್ನು ಸುಮ್ಮನೆ ರೇಗಿಸಬೇಡಿ’.
ಆಶ್ಮಾಳಿಂದ ಮೊದಲ ಬಾರಿಗೆ ಬಿದ್ದ ಕೊಂಕು ಮಾತಿದು ಅಲಘ್ ಸ್ವಲ್ಪ ಅಧೀರನಾದರೂ, ಅದನ್ನು ತನ್ನ ಮುಖದಲ್ಲಿ ತೋರಿಸಲಿಲ್ಲ.
‘ನಿನ್ನ ಮನದಲ್ಲಿ ಏನಿದೆ ಎಂದು ನನಗೆ ಗೊತ್ತಿದೆ. ನಾನು ಗಲ್ಫ್‌ಗೆ ಹೋಗಬೇಕು ಅಷ್ಟೇತಾನೇ…..?’
ಆಶ್ಮಾ ಉತ್ತರಿಸಲಿಲ್ಲ.
‘ಸರಿ ಬಿಡು. ನಾನು ಗಲ್ಫ್‌ಗೆ ಹೋಗುವುದರಿಂದ ನಿನಗೆ ಸುಖ ಸಿಗುವುದಾದರೆ ನಾನು ಅದಕ್ಕೂ ಸಿದ್ದ. ಆದರೆ ಒಂದು ನೆನಪಿಟ್ಟುಕೋ. ಸಂಸಾರದ ನೆಮ್ಮದಿಯನ್ನು ಹಾಳು ಮಾಡಿಕೊಂಡು ಗಳಿಸುವ ಸಂಪಾದನೆಯಿಂದ ಬದುಕು ಮುಂದೆ ಸಾಗುವುದಿಲ್ಲ. ಸುಖ ಹುಡುಕಿಕೊಂಡು ಹೋದರೆ ಖಂಡಿತ ಸಿಗಲಾರದು. ಅದು ನಮ್ಮ ಕಾಲ ಬುಡದಲ್ಲಿದೆ. ಅದನ್ನು ಕಂಡುಕೊಳ್ಳಬೇಕು. ಸುಖ ಜೀವನದ ಗುಟ್ಟು ತೃಪ್ತಿಯಲ್ಲಿ ಅಡಗಿದೆ.
ಆಶ್ಮಾ ಮಾತಾಡಲಿಲ್ಲ. ಅದರೆ ಅವಳಲ್ಲಿ ಹಿಂದಿನ ಲವಲವಿಕೆ ನಿಧಾನವಾಗಿ ಬರುತ್ತಿರುವುದನ್ನು ನೋಡಿ ಅಲ್ತಾಫ್‌ಗೆ ಸಂತೋಷವಾದರೂ, ಅದೂ ಪೂರ್ಣಪ್ರಮಾಣದ್ದಾಗಿರಲಿಲ್ಲ. ಯಾಕೆಂದರೆ ಹೆಂಡತಿ ಹಾಗೂ ಮಗುವನ್ನು ತೊರೆದು, ಪರದೇಶದಲ್ಲಿ ಇರುವುದೆಂದರೆ, ತನ್ನನ್ನು ಸರಕಾರ ಗಡಿಪಾರು ಮಾಡಿ, ಅಂಡಮಾನಕ್ಕೆ ಸೆರೆಮನೆಗೆ ಕಳುಹಿಸಿದಷ್ಟೇ ನೋವಾಗುತ್ತಿತ್ತು ಅಲ್ತಾಫ್‌ಗೆ.
ಅಲ್ತಾಫ್ ಗಲ್ಫ್‌ಗೆ ಹೋಗಲು ಕಾರ್ಯಪ್ರವೃತ್ತನಾದ. ಮೊದಲು ಪಾಸ್‌ಪೋರ್ಟ್ ಮಾಡಲು ಅರ್ಜಿ ಗುಜರಾಯಿಸಿದ. ಕಡಿಮೆ ಪಕ್ಷ ಅದಕ್ಕೆ ಎರಡು ತಿಂಗಳು ತಗಲಬಹುದು. ಇನ್ನು ವೀಸಾ ಬರಬೇಕು ‘ವಿಸಿಟ್‌ವೀಸಾ’ ದಲ್ಲಿ ಹೋಗಿ ಕೆಲಸ ಹುಡುಕುವುದು ಸುಲಭದ ಕೆಲಸ. ಈ ಬಗ್ಗೆ ಖಾಲಿದ್‌ನೊಡನೆ ಹೆಚ್ಚಿನ ಮಾಹಿತಿ ಪಡೆದುಕೊಂಡನು. ವೀಸಾ ಕಳುಹಿಸಲು ಗಲ್ಫ್‌ನಲ್ಲಿ ಸ್ಪಾನ್ಸರ್ ಬೇಕು. ಯಾರಾದರೂ ಅರಬಿಯನ್ನು ಸ್ಪಾನ್ಸರ್ ಮಾಡಬೇಕಾದರೆ ಅವನಿಗೆ ಒಂದಿಷ್ಟು ಹಣ ಕೊಡಬೇಕು. ವಿಮಾನ ಖರ್ಚು, ಉಳಕೊಳ್ಳುವ ಖರ್ಚು ಎಲ್ಲಾ ಸೇರಿ ಸುಮಾರು ಒಂದು ಲಕ್ಷ ಅಥವಾ ಒಂದು ಕಾಲು ಲಕ್ಷವಾದರೂ ಬೇಕು. ವೀಸಾ ಕಳುಹಿಸಲು ಖಾಲಿದ್‌ಗೆ ಸ್ವಲ್ಪ ಹಣವನ್ನು ಕೊಟ್ಟ. ಇನ್ನು ಉಳಕೊಳ್ಳಲು ನಾನು ವ್ಯವಸ್ಥೆ ಮಾಡುತ್ತೇನೆ, ಅದರೆ ಕೆಲಸದ ಗ್ಯಾರಂಟಿ ಕೊಡಲಾರೆ. ಅದಕ್ಕೆ ನೀನೇ ಪ್ರಯತ್ನ ಪಡಬೇಕು. ಆದರೆ ನನ್ನಿಂದ ಆಗುವಷ್ಟು ಸಹಾಯ ಮಾಡುತ್ತೇನೆ ಎಂದು ಕೂಡ ಖಾಲಿದ್ ಹೇಳಿದ. ಹೆಂಡತಿಯ ಅಳಿದುಳಿದ ಚಿನ್ನವನ್ನು ಮಾರಿದ. ಖಾಲಿದ್ ಅಬುದಾಬಿಗೆ ಹೋಗಿ ಒಂದು ತಿಂಗಳೊಳಗೆ ಅಲ್ತಾಘ್ ಹೋಗಿ ಬರುವ ವಿಮಾನದ ಟಿಕೇಟು ಕೂಡಾ ಮಾಡಿಸಿ ಆಯಿತು. ತನ್ನ ಡಿಗ್ರಿ ಸರ್ಟಿಫಿಕೆಟುಗಳನ್ನಲ್ಲಾ ಜೋಡಿಸಿ ರೆಡಿ ಮಾಡಿದ ಅಲ್ತಾಫ್. ಆದರೆ ಅವನ ಮನಸ್ಸು ಮಾತ್ರ ಒಳಗಿಂದಳೊಗೆ ಮರುಗುತ್ತಿತ್ತು.
ಅಬುದಾಬಿಗೆ ಹೊರಡುವ ದಿನ ಬಂತು. ಮಂಗಳೂರಿನಿಂದ ಅಬುದಾಬಿಗೆ ನೇರ ಮೂರು ಯಾ ಮುರುವರೆಗಂಟೆಯ ಪ್ರಯಾಣ. ಬೆಳಿಗ್ಗೆ ಒಂಭತ್ತು ಗಂಟೆಯ ವಿಮಾನ ಏರಬೇಕಾದರೆ ಸುಮಾರು ಆರು ಗಂಟೆಗೆ ಹಾಜರಿರಬೇಕು. ಹೊರಡುವ ಮೊದಲ ದಿನದ ರಾತ್ರಿ ಅವನಿಗೆ ನಿದ್ದೆ ಬರಲೇಇಲ್ಲ. ಇಡೀ ರಾತ್ರೀ ಅವನಿಗೆ ಹೆಂಡತಿ ಮಕ್ಕಳ ನೆನಪಾಗುತ್ತಿತ್ತು. ವಾರದ ಒಂದು ರಜೆಯಲ್ಲಿ ಅವನು ಮನೆಯಲ್ಲಿದ್ದುಕೊಂಡು ಮಗುವಿನೊರಿದಿಗೆ ಆಟವಾಡುತ್ತಿದ್ದ ಹಾಗೂ ಹೆಂಡತಿಯೊಂದಿಗೆ ಜೋಕ್ಸ್ ಹೇಳುತ್ತಾ, ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದ. ಸಂಜೆ ಹತ್ತಿರದ ಗುಡ್ಡಕ್ಕೆ ಕುಟುಂಬ ಸಮೇತ ವಾಕಿಂಗ್ ಹೋಗುತ್ತಿದ್ದ . ಇನ್ನು ಅದು ಬರೀ ಕನಸು ಮಾತ್ರ. ಸುಮಾರು ಎರಡು ಗಂಟೆ ರಾತ್ರಿಗೆ ಕಣ್ಣು ಸ್ವಲ್ಪ ಮಂಪರು ಬಂದಂತಾಗಿ ಅಲ್ತಾಫ್ ನಿದ್ರೆಗೆ ಜಾರಿದ. ಅಲ್ಲೊಂದು ದುಸ್ವಪ್ನ. ಇಬ್ಬರು ಪೋಲೀಸರು ಮನೆಗೆ ಬಂದು, ಅವನನ್ನು ಬಂದಿಸಿ ಕೈಗೆ ಕಾಲಿಗೆ ಸಂಕೋಲೆ ತೊಡಿಸಿ, ಮುಖಕ್ಕೆ ಕಪ್ಪು ಬಟ್ಟೆ ಸುತ್ತು ಹಾಕಿ ಕರೆದುಕೊಂಡು ಹೋಗುತ್ತಿದ್ಡರು. ಅಲ್ತಾಫ್ ಎಚ್ಚರವಾಗಿ ಭಯದಿಂದ ಚೀರಿದ.
ಮತ್ತೆ ನಿದ್ರೆ ಬರಲೇ ಇಲ್ಲ.
ಎಲ್ಲರೂ ವಿಮಾನ ನಿಲ್ದಾಣಕ್ಕೆ ಬಂದರು. ಅಲ್ತಾಫನನ್ನು ಬೀಳ್ಕೊಡಲು ಅವನ ಹೆಂಡತಿ ಮಗು ಅಲ್ಲದೆ, ಅವನ ಭಾವಂದಿರು ಕೂಡಾ ಬಂದಿದ್ದರು. ಎಲ್ಲರೂ ಶುಭವನ್ನು ಕೋರುವವರೇ. ಆದರೆ ಅವನಿಗೆ ಮಾತ್ರ ಅವರೆಲ್ಲಾ ಕಟುಕರಂತೆ ಕಂಡರು. ಬಕ್ರೀದ್ ಹಬ್ಬದ ದಿನ ಖುರ್ಬಾನಿ ಮಾಡಲು, ಕುರಿಯ ಸುತ್ತಲೂ ಜನರು ಜಮಾಯಿಸಿದಂತೆ ತೋರಿ ಬಂತು. ಅವನು ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದಂತೆ ಒಮ್ಮೆ ತಿರುಗಿ ನೋಡಿದ. ಅವನ ಒಂದು ವರ್ಷದ ಮಗು, ತನ್ನನ್ನು ನೋಡಿ ನಗಾಡುತ್ತಾ ಎತ್ತಿ ಕೊಳ್ಳಲು ಕೈಚಾಚುತ್ತಿತ್ತು.
ವಿಮಾನದಲ್ಲಿ ಅಲ್ತಾಫ್‌ಗೆ ಕಿಟಕಿಯ ಬದಿ ಸಿಕ್ಕಿತು. ಅವನೊಮ್ಮೆ ಹೊರಗೆ ನೋಡಿದ. ಹಚ್ಚಹಸಿರು ನೆಲ ಜಲ ಮಾಯವಾಗಿ, ಮೋಡಗಳ ಸರಮಾಲೆಯೇ ಕಂಡುಬರುತ್ತಿತ್ತು.
ಇದೊಂದು ಹೊಸ ಅನುಭವ. ತಾನೀಗ ಒಬ್ಬಂಟಿಗ. ತನಗೆ ಯಾರೂ ಇಲ್ಲ. ಅನಾಥ. ಎಲ್ಲರೂ ಇದ್ದು ಸತ್ತ ಹಾಗೆ. ಬಹುಶಃ ಅಬುದಾಬಿಯ ವಿಮಾನ ನಿಲ್ದಾಣದಲ್ಲಿ ಖಾಲಿದ್ ಇಲ್ಲದಿದ್ದರೆ ನನ್ನ ಗತಿಯೇನು? ಹಾಗಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡ. ಮತ್ತೊಮ್ಮೆ ಕಿಟಕಿಯ ಹೊರಗೆ ನೋಡಿದ. ಅರಬ್ಬೀ ಸಮುದ್ರದ ಛಾಯೆ ಮಾಯವಾಗುತ್ತಿದ್ದಂತೆ ಬೋರುಗುಡ್ಡೆಗಳಂತೆ ಕಾಣುವ ಮರಳ ರಾಶಿ ಅವನಿಗೆ ಭಯ ಹುಟ್ಟಿಸತೊಡಗಿತು. ‘ಸಸ್ಯಶ್ಯಾಮಲೆಯಾದ ನನ್ನ ಭಾರತ ದೇಶವೆಲ್ಲಿ?’ ಮರಳ ರಾಶಿಯಿಂದ ಕೂಡಿದ ಬೋರುಗುಡ್ಡದಂತಹ ಗಲ್ಫ್ ದೇಶವೆಲ್ಲಿ?
ಸಹಪ್ರಯಾಣಿಕ ನೋಡದಂತೆ ಟವಲಿನಿಂದ ತನ್ನ ಕಣ್ಣೀರನ್ನು ಒರೆಸಿಕೊಂಡ.
ವಿಮಾನ ಅಬುದಾಬಿ ವಿಮಾನ ನಿಲ್ದಾಣದಲ್ಲಿ ನಿಂತಿತು. ಅಲ್ತಾಘ್ ಎಲ್ಲಾ ವಿಚಾರಣೆ ಮುಗಿಸಿ ತನ್ನ ಲಗ್ಗೇಜಿನೊಂದಿಗೆ ಹೊರ ಬಂದಾಗ ಖಾಲೀದ್ ಕೈ ಬೀಸಿದ. ಖಾಲಿದ್‌ನ ನಿರೀಕ್ಷೆಯಲ್ಲಿದ್ದ ಅಲಾಫ್‌ಗೆ ಅವನನ್ನು ಕಂಡೊಡನೆ, ಮರುಭೂಮಿಯಲ್ಲಿ ಬಾಯಾರಿದವನಿಗೆ ನೀರು ಕಂಡಷ್ಟು ಸಂತೋಷವಾಯಿತು. ಇಬ್ಬರೂ ಟ್ಯಾಕ್ಸಿ ಮಾಡಿಕೊಂಡು ರೂಮಿಗೆ ತೆರಳಿದರು. ಅಲ್ತಾಘ್ ಅಬುದಾಬಿಯ ಸೌಂದರ್ಯವನ್ನು ನೋಡಿ ಮೂಖ ವಿಸ್ಮಿತನಾದನು. ಎಲ್ಲಾ ಕಡೆಯೂ ಓನ್‌ವೇಯಾಗಿದ್ದು, ಒಮ್ಮೆಲೇ ನಾಲ್ಕು ಟ್ಯಾಕ್ಸಿಗಳು ಒಂದೇ ರಸ್ತೆಯಲ್ಲಿ ಹೋಗುತ್ತಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಹಾಕಿದ ಪೂಟ್‌ಪಾತ್‌ಗಳು ಶುದ್ಧವಾಗಿದ್ದು ಯಾವುದೇ ಧೂಳು ಗಲೀಜಿನಿಂದ ಮುಕ್ತವಾಗಿದ್ದವು. ರಸ್ತೆಗಳಲ್ಲಿ ಹೊಂಡಗಳಿಲ್ಲ. ದನ, ನಾಯಿ, ಕರುಗಳು ಅಡ್ಡ ಬರುವುದು ಕಾಣಸಿಗಲೇ ಇಲ್ಲ. ರಸ್ತೆಯ ಇಕ್ಕೆಲಗಳಲ್ಲೂ ಗಗನ ಚುಂಬಿತ ಅತ್ಯಾಧುನಿಕ ಕಟ್ಟಡಗಳು, ಫ್ಲ್ಯಾಟ್‌ಗಳು ವಿದ್ಯುತ್ ಕಂಬದ ತಂತಿಗಳು, ಪೋನಿನ ಕೇಬಲ್ ವೈರ್‌ಗಳು ಎಲ್ಲಿಯೂ ನೋಡಸಿಗಲಿಲ್ಲ. ಎಲ್ಲವೂ ಅಂಡರ್‌ಗ್ರೌಂಡ್. ಇಂತಹ ಒಂದು ಸುಂದರ ನಗರವನ್ನು ಒಬ್ಬ ಶೇಕ್ ನಿಯಂತ್ರಿಸುವುದೆಂದರೆ ಎಷ್ಟೊಂದು ಸೋಜಿಗ! ಅಲ್ತಾಫ್‌ಗೆ ತಾನು ಸ್ವರ್ಗ ಲೋಕಕ್ಕೆ ಬಂದಿದ್ದೇನೆಯೋ ಎಂದು ಆಶ್ಚರ್ಯವಾಯಿತು. ಅವನ ಮೌನಕ್ಕೆ ಬ್ರೇಕ್ ಕೊಡಲು ಖಾಲಿದ್ ಹೇಳಿದ. ‘ನಿನ್ನ ವಾಚಿನ ಸಮಯವನ್ನು ಒಂದುವರೆ ಗಂಟೆ ಹಿಂದೆ ತಿರುಗಿಸು’.
ಮೊದಲು ಕಾರು ಒಂದು ದೊಡ್ಡ ಮನೆಯ ಎದುರು ನಿಂತಿತು. ಆ ಕಟ್ಟಡವು ಮೂರು ಅಂತಸ್ತಿನ ಮನೆಯಾಗಿದ್ದು, ನೋಡಲು ಚೆನ್ನಾಗಿತ್ತು. ‘ನೋಡು ಅಲ್ತಾಫ್, ಇದು ಒಂದು ದೊಡ್ಡ ವಿಲ್ಲಾ’. ಇಲ್ಲಿ ವಾಸಿಸುವ ಮನೆಗಳಿಗೆ ‘ವಿಲ್ಲಾ’ ಹೇಳುತ್ತಾರೆ. ಈ ಮನೆಗಳಲ್ಲಿ ದೊಡ್ಡ ದೊಡ್ಡ ಅರಬರು ತಮ್ಮ ಕುಟುಂಬ ಸಮೇತ ವಾಸಿಸುತ್ತಾರೆ. ಕೆಲವು ಅರಬಿಗಳಿಗೆ ಎರಡು ಮೂರು ಹೆಂಡತಿ ಇದ್ದು, ಬೇರೆ ಬೇರೆ ವಿಲ್ಲಾಗಳಲ್ಲಿ ಉಳಕೊಳ್ಳಲು ವ್ಯವಸ್ಥೆ ಮಾಡಿರುತ್ತಾರೆ. ಇವರು ತಮ್ಮ ಆದಾಯಕ್ಕಾಗಿ, ವಿಲ್ಲದ ಹಿಂಬದಿಯ ಶೆಡ್ಡ್, ಸ್ಟೋರ್‌ರೂಂ ಯಾ ಹಳೆಯ ಕಿಚನ್ ರೂಂಗಳನ್ನು ರಿಪೇರಿ ಮಾಡಿಸಿ, ನಮ್ಮಂತಹ ವಲಸೆ ಬಂದವರಿಗೆ ಬಾಡಿಗೆಗೆ ಕೊಡುತ್ತಾರೆ. ಇಲ್ಲಿ ಒಂದು ಸಣ್ಣ ಬೆಡ್‌ರೂಂ, ಕಿಚನ್‌ರೂಮ್ ಹಾಗೂ ಟಾಯ್ಲೆಟ್‌ಗೆ ಮೂರು ಸಾವಿರ ದಿರಂ ಬಾಡಿಗೆ ಇರುತ್ತದೆ. ಅಂದರೆ ನಮ್ಮ ದೇಶದ ಅಂದಾಜು ೩೩,೦೦೦ ರೂಪಾಯಿ ಆಗುತ್ತದೆ’.
‘ಹಾಗಾದರೆ ನಾವು ತಿಂಗಳಿಗೆ ಎಷ್ಟು ದುಡಿಯಬೇಕು?’
‘ಸಣ್ಣ ಸಂಬಳದಲ್ಲಿ ಇಲ್ಲಿ ಕುಟುಂಬ ತಂದು ಸಾಕಲು ಸಾಧ್ಯವಿಲ್ಲ. ಏನಿದ್ದರೂ ಏಳೆಂಟು ಮಂದಿ ಸೇರಿ ಒಂದು ಖಾಲಿ ಮನೆ ಪಡೆದು, ಬಾಡಿಗೆಯನ್ನು ಹಂಚಿಕೊಂಡು ಕೊಡಬೇಕು. ಇಲ್ಲದಿದ್ದರೆ ಬದುಕಲು ಕಷ್ಟಸಾಧ್ಯವಿದೆ. ನೀನೀಗ ನಮ್ಮ ರೂಮು ನೋಡಿದರೆ ಗೊತ್ತಾಗುತ್ತದೆ’.
ಖಾಲಿದ್ ಆ ದೊಡ್ಡ ವಿಲ್ಲಾದ ಹಿಂಬದಿಯ ಓಣಿಗೆ ಅಲ್ತಾಫ್‌ನನ್ನು ಕರೆದುಕೊಂಡು ಹೋದ. ಸುಮಾರು ೫೦ ಅಡಿ ದೂರ ನಡೆದು, ಒಂದು ಕಬ್ಬಿಣದ ಬಾಗಿಲನ್ನು ತೆರೆದು ಒಳ ಹೋದ. ಅಲ್ಲಿಯೇ ಸಣ್ಣ ಶೆಡ್ಡಿನ ಬಾಗಿಲು ತೆರೆದು ಇಬ್ಬರೂ ಒಳಗೆ ಹೋದರು. ಅದೊಂದು ಸುಮಾರು ೧೦,೧೨ ಸ್ಯೆಜಿನ ಸಣ್ಣ ರೂಮು. ಅದಕ್ಕೆ ತಾಗಿ ಒಂದು ೧೦,೧೦ ಸೈಜಿನ ಅಡುಗೆ ಕೋಣೆ. ಅಡುಗೆ ಕೋಣೆಗೆ ತಾಗಿ ಟಾಯ್ಲೆಟ್ ಬಾತ್‌ರೂಂ.
‘ನೋಡು ಅಲ್ತಾಫ್ ಈ ರೂಮಿನಲ್ಲಿ ಏಳು ಜನ ಮಲಗುತ್ತಾರೆ. ನೀನು ಸೇರಿ ಎಂಟು ಮಂದಿ. ಇಲ್ಲಿ ಎರಡು ಬೆಡ್‌ನ ಮೂರು ಮಂಚಗಳಿವೆ. ಒಂದು ಮಂಚದಲ್ಲಿ ಮೇಲೆ ಕೆಳಗೆ ಎರಡು ಬೆಡ್‌ಗಳಿವೆ. ಒಬ್ಬ ಕೆಳಗೆ ಮಲಗಿದರೆ ಇನ್ನೊಬ್ಬ ಮೇಲೆ ಮಲಗಬೇಕು. ಬೇರೆ ದಾರಿ ಇಲ್ಲ. ಇನ್ನೊಬ್ಬರು ಮಂಚ ಇಲ್ಲದೆ ಕಿಚನ್‌ರೂಂನಲ್ಲಿ ಬೆಡ್ ಹಾಕಿ ಮಲಗುತ್ತಾರೆ. ಒಟ್ಟು ಏಳು ಜನ ಇದ್ದಾರೆ. ನಾನು ಸೇರಿ. ಇದಕ್ಕೆ ತಿಂಗಳಿಗೆ ೩೨,೦೦೦ ದಿರಂ ಕೊಡುತ್ತೇವೆ ಒಬ್ಬೊಬ್ಬರಿಗೆ ಸುಮಾರು ೪೫೦ ದಿರಂ ಬಾಡಿಗೆ ಬೀಳುತ್ತದೆ. ನೀನೀಗ ಬಾಡಿಗೆ ಕೊಡುವ ಅಗತ್ಯ ಇಲ್ಲ. ಕೆಲಸ ಸಿಕ್ಕಿದ ಮೇಲೆ ಕೊಡು ಸಾಕು’.
ಅಲ್ತಾಫ್‌ನ ಕಣ್ಣು ಬೆಡ್‌ರೂಮಿನ ಗೋಡೆಗೆ ಅಂಟಿಸಿದ ಚೀಟಿಯ ಹತ್ತಿರ ಹೋಯಿತು.
‘ಇದೇನು ಖಾಲಿದ್ ಹೆಸರಿನ ಪಟ್ಟಿ?’
‘ಇಲ್ಲಿ ಒಂದೇ ಟಾಯ್ಲೆಟ್ ಇದೆ. ಏಳು ಮಂದಿ ಒಂದೇ ಸಮಯದಲ್ಲಿ ಟಾಯ್ಲೆಟ್‌ಗೆ ಹೋಗಲು ಸಾಧ್ಯವಿಲ್ಲ. ಎಲ್ಲರೂ ಬೆಳಿಗ್ಗೆ ಕೆಲಸಕ್ಕೆ ಹೋಗಬೇಕು. ಅದಕ್ಕಾಗಿ ಎಲ್ಲರಿಗೂ ಅವರ ಹೆಸರಿನ ಎದುರು ಸಮಯ ನಿಗದಿ ಪಡಿಸಿದ್ದೇವೆ. ಆ ಟೈಮಿಗೆ ಅವರು ಎದ್ದು, ಟಾಯ್ಲೆಟ್, ಬಾತ್ ರೂಂ ಉಪಯೋಗಿಸಿ, ನಿಗದಿತ ಸಮಯಕ್ಕೆ ಹೊರಗೆ ಬಂದು ಇನ್ನೊಬ್ಬನಿಗೆ ಅವಕಾಶ ಮಾಡಿಕೊಡಬೇಕು. ಈ ರೂಲು ನಿನಗೆ ಸದ್ಯ ಅನ್ವಯಿಸುವುದಿಲ್ಲ. ನೀನು ಎಲ್ಲರೂ ಕೆಲಸಕ್ಕೆ ಹೋದ ನಂತರ ಧಾರಾಳ ಉಪಯೋಗಿಸಿಕೊಳ್ಳಬಹುದು’.
ಅಲ್ತಾಫ್‌ಗೆ ನಗು ಬಂತು. ದೂರದ ಬೆಟ್ಟ ನುಣ್ಣಗೆ. ನಮಗೆ ಗಲ್ಫ್ ಕೆಲಸಗಾರರು ರಾಜರಂತ ಕಾಣುತ್ತಾರೆ. ಅವರ ನಿಜ ಸ್ಥಿತಿ ಅರಿಯಬೇಕಾದರೆ ಇಲ್ಲಿಗೆ ಬಂದು ನೋಡಬೇಕು.
ರಾತ್ರಿ ತನ್ನ ಸಹ ಮಿತ್ರರ ಪರಿಚಯವಾಯಿತು. ಎಲ್ಲರೂ ಸಣ್ಣ ಪುಟ್ಟ ಕೆಲಸದಲ್ಲಿದ್ದಾರೆ. ತಿಂಗಳಿಗೆ ಸುಮಾರು ೧,೮೦೦ ರಿಂದ ೨,೫೦೦ ದಿರಂ ಸಂಬಳದಲ್ಲಿ ಕೆಲಸ ಮಾಡುತ್ತಾರೆ. ಮನೆ ಬಾಡಿಗೆ, ಊಟದ ಖರ್ಚು, ಎಲ್ಲಾ ಮುಗಿಸಿ ಉಳಿದ ಅಲ್ಪ ಸ್ವಲ್ಪ ಹಣವನ್ನು ಜಾಗರೂಕತೆಯಿಂದ ಉಳಿಸಿ ಊರಿಗೆ ಕಳುಹಿಸುತ್ತಾರೆ. ಹೆಂಡತಿ ಮಕ್ಕಳಿಗೆ. ಆದರೆ ಅವರಿಗೆ ಏನು ಗೊತ್ತು ತಮ್ಮ ಗಂಡ, ಹೊಟ್ಟೆ ಬಾಯಿ ಕಟ್ಟಿಕೊಂಡು ಜೀವನ ನಿರ್ವಹಿಸುತ್ತಾನೆಂದು?
ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಆಶ್ಮಾಳಿಗೆ ಪೋನು ಮಾಡಿ ಮಾತಾಡಿದ. ಮಗುವಿನ ಬಗ್ಗೆ ವಿಚಾರಿಸಿದ. ರಾತ್ರಿ ಮನೆಯಲ್ಲಿ ಮಲಗಲು ಅವಳ ತಮ್ಮ ಬರುತ್ತಾನಂತೆ. ಅವನ ಖರ್ಚು ಬೇರೆ ನೋಡಿಕೊಳ್ಳಬೇಕು. ಅಲ್ತಾಫ್‌ಗೆ ದಿನ ನಿತ್ಯವೂ ಹೆಂಡತಿ ಮಕ್ಕಳ ಧ್ಯಾನವೇ ಅತಿಯಾಗತೊಡಗಿತು. ಇದನ್ನು ಮರೆಯಲು ಅವನು ಹತ್ತಿರದ ಮಸೀದಿಗೆ ಹೋಗಿ, ಪ್ರಾರ್ಥನೆಯಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸತೊಡಗಿದನು. ಖಾಲಿದ್ ಹೇಳಿದ ಕೆಲವು ಕಂಪನಿಗಳಿಗೆ ಸಿ. ವಿ. ಯನ್ನು ಕೊಟ್ಟು ಬಂದ.
ಕೆಲವು ಕಂಪನಿಗಳಿಂದ ಇಂಟರ್‌ವ್ಯೂವ್ ಬಂದರೂ ಆಯ್ಕೆಯಾಗಲಿಲ್ಲ. ಕಡಿಮೆ ಪಕ್ಷ ೨,೫೦೦ ದಿರಂನ ಕೆಲಸ ಸಿಕ್ಕಿದ್ದರೂ ಅವನಿಗೆ ಸಾಕಾಗುತ್ತಿತ್ತು. ಯಾಕೆಂದರೆ ಖರ್ಚಿಗೆ ತಂದ ಹಣ ಖಾಲಿಯಾಗತೊಡಗಿದವು. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ವಾರಗಳು ಉರುಳಿದವು. ಖಾಲಿದ್ ತನ್ನಯೋಗ್ಯತೆಗೆ ಅನುಸಾರವಾಗಿ ಪ್ರಯತ್ನವನ್ನು ಮಾಡುತ್ತಿದ್ದ. ಆದರೆ ‘ಗಾಡ್ ಫಾದರ್’ ಇಲ್ಲದಿದ್ದರೆ ಎಲ್ಲವೂ ನಿರರ್ಥಕ ಎಂಬ ಸತ್ಯವು ಅರಿವಾದಾಗ ತಡವಾಗಿತ್ತು. ಅಲ್ತಾಫ್‌ನ ಮುಖದಲ್ಲಿ ಚಿಂತೆಯ ಕರಾಳ ಛಾಯೆ ಮೂಡಿದ್ದು ಅರಿವಾಗಿ ಖಾಲಿದ್ ವಾರದ ರಜಾದಿನವಾದ ಶುಕ್ರವಾರ ಮಧ್ಯಾಹ್ನದ ನಮಾಜು ಮುಗಿದ ಮೇಲೆ, ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ತನ್ನ ಮಿತ್ರನನ್ನು ಅಬುದಾಬಿ, ದುಬೈ, ಶಾರ್ಜಾ, ಆಲ್- ಎಯಿನ್ ಮುಂತಾದ ಕಡೆ ತಿರುಗಾಡಿಸಿದ. ಆಲ್ ಎಯಿನ್ನಲ್ಲಿ ಝೂ, ದುಬೈಯಲ್ಲಿ ಮ್ಯೂಸಿಯಂ, ದುಬೈ ಫೆಸ್ಟಿವಲ್ ಸಮಯವಾದುದರಿಂದ ದುಬೈ ಮೇಳಕ್ಕೆ ಕರೆದುಕೊಂಡು ಹೋಗಿ, ಎಲ್ಲಾ ಸ್ಟಾಲ್‌ಗಳನ್ನು ತೋರಿಸಿದ. ಜಗತ್ತಿನ ಹೆಚ್ಚಿನ ದೇಶಗಳ ಪ್ರದರ್ಶನ ಸ್ಟಾಲ್‌ಗಳಿದ್ದವು. ವಿವಿಧ ದೇಶಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ದೇಶ ವಿದೇಶಗಳಿಂದ ಜನಸಾಗರವೇ ಹರಿದುಬರುತ್ತಿತ್ತು. ಇದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಯಾವುದೂ ಅಲ್ತಾಫ್‌ಗೆ ಸಂತೋಷ ಕೊಡಲಿಲ್ಲ. ಅವನ ಮನಸ್ಸೆಲ್ಲಾ ಕೆಲಸ ಕೆಲಸ ಎನ್ನುತ್ತಿತ್ತು. ಅಲ್ತಾಫ್ ಖಾಲಿದ್‌ನ ಎಲ್ಲಾ ವ್ಯವಹಾರವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ. ಖಾಲಿದ್ ಮಲಗಲು ರೂಮಿಗೆ ಶುಕ್ರವಾರ ಮಾತ್ರ ಬರುತ್ತಿದ್ದ. ಬಾಕಿ ಸಮಯ ಎಲ್ಲಿರುತ್ತಾನೆ? ಬರೇ ೨,೦೦೦ ದಿರಂ ಸಂಬಳದಲ್ಲಿ ಅವನು ಊರಲ್ಲಿ ಲಕ್ಷಗಳ ವ್ಯವಹಾರ ಹೇಗೆ ಮಾಡಿದ? ಎಲ್ಲವೂ ಕಗ್ಗಂಟಾಗಿ ಅಲ್ತಾಫ್‌ನ ತಲೆ ತಿನ್ನುತ್ತಿತ್ತು. ಒಂದು ದಿನ ತಡೆಯಲಾರದೆ ಅಲ್ತಾಫ್ ಖಾಲಿದ್‌ನನ್ನು ಕೇಳಿದ.
‘ಖಾಲಿದ್ ನಾನು ಕೇಳಿದೆ ಎಂದು ಬೇಸರಿಸಬೇಡ. ನೀನು ಶುಕ್ರವಾರ ಮಾತ್ರ ಮಲಗಲು ಬರುತ್ತೀ, ಬಾಕಿ ದಿನ ಎಲ್ಲಿರುತ್ತೀ? ಮತ್ತೆ ಈ ೨,೦೦೦ ದಿರಂ ಸಂಬಳದಲ್ಲಿ ಊರಲ್ಲಿ ಅಷ್ಟೊಂದು ವ್ಯವಹಾರ ಮಾಡಲು ಹೇಗೆ ಸಾಧ್ಯ? ನನಗೊಂದೂ ಅರ್ಥವಾಗುವುದಿಲ್ಲ ನೋಡು’ ಖಾಲಿದ್ ನಕ್ಕ. ಈ ಪ್ರಶ್ನೆಯನ್ನು ನೀನು ಕೇಳುವ ಮೊದಲು ನಾನು ಹೇಳಬೇಕೆಂದಿದ್ದೆ. ನೋಡು, ನನ್ನ ಈಗಿನ ಕಲಸ ಸೇಲ್ಸ್ ಮ್ಯಾನೇಜರ್. ಜರ್ಮನಿ, ಜಪಾನ್ ಮತ್ತು ಇನ್ನಿತರ ದೊಡ್ಡ ದೇಶದ ಹೆಸಾರಂತ ಕಂಪನಿಗಳ ‘ಇಲೆಕ್ಟ್ರಾನಿಕ್ಸ್’ ಸಾಮಾಗ್ರಿಗಳನ್ನು ನಮ್ಮ ಕಂಪೆನಿ ಖರೀದಿಸಿ, ಮಾರಾಟ ಮಾಡುತ್ತವೆ. ಇದು ಇಡೀ ದಿನದ ಕೆಲಸವಾದರೂ ನಾನು ಬೆಳಿಗ್ಗೆ ಬೇಗ ಶುರು ಮಾಡಿ ಮಧ್ಯಾಹ್ನ ಮುಗಿಸುತ್ತೇನೆ. ಸಂಬಳವಲ್ಲದೆ, ಒಳ್ಳೆಯ ಐಟಂಗಳು ಹೆಚ್ಚು ಮಾರಾಟವಾದರೆ, ಕಂಪನಿಯವರು ನಮಗೆ ಕಮಿಶನ್ ಕೊಡುತ್ತಾರೆ. ಇದಲ್ಲದೆ ಕೆಲವು ಐಟಂಗಳು ಸಣ್ಣ ಪುಟ್ಟ ಡ್ಯಾಮೇಜ್ ಆದರೂ ೫೦% ದರ ಕಡಿತ ಮಾಡುತ್ತಾರೆ. ನಾವು ಅವುಗಳನ್ನು ೨೫% ಕಡಿತಕ್ಕೆ ಕೊಟ್ಟು ಬಾಕಿ ಹಣ ನಾವು ಇಟ್ಟುಕೊಳ್ಳುತ್ತೇವೆ. ಇದೆಲ್ಲಾ ‘ಲೈನ್‌ಸೇಲ್’ನಲ್ಲಿ ನಮಗಾದ ಅನುಭವಗಳು. ಇದಲ್ಲದೆ ಮಧ್ಯಾಹ್ನದ ಮೇಲೆ ನಾನು ಇಲ್ಲೇ ಹತ್ತಿರದ ಸ್ಟಾರ್ ಹೋಟ್‌ಲ್‌ಗಳಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತೇನೆ. ಈ ಸ್ಟಾರ್ ಹೋಟೇಲ್ಗಳಲ್ಲಿ ಅರಬಿಗಳು ಕುಟುಂಬ ಸಮೇತ ಸಂಜೆಯ ನಂತರವೇ ಬರುವುದು. ಅವರ ಲಕ್ಸುರಿ ವಿದೇಶೀ ಕಾರುಗಳನ್ನು ಸರಿಯಾಗಿ ಪಾರ್ಕು ಮಾಡಿ ನಿಲ್ಲಿಸಬೇಕು. ಅವರು ಗೇಟಿನ ಹೊರಗೆ ಕಾರಿನ ಕೀಲಿ ಕೊಟ್ಟು ಹೋಟೇಲಿಗೆ ಹೋಗುತ್ತಾರೆ. ನಾನು ಸ್ಥಳ ಹುಡುಕಿ ಪಾರ್ಕು ಮಾಡಿ ನಂತರ ಸಾಧ್ಯವಾದರೆ ‘ಕಾರು ಕ್ಲೀನಿಂಗ್’ ಕೂಡಾ ಮಾಡುತ್ತೇನೆ. ಇಲ್ಲಿ ಹೋಟೇಲಿನವರು ಪಾರ್ಟ್‌ಟೈಂ ಸಂಬಳ ಕೊಡುವುದಲ್ಲದೆ, ಇಲ್ಲಿಯೇ ಪುಕ್ಕಟೆ ರಾತ್ರಿ ಊಟ, ಮಲಗಲು ರೂಮೂ ಕೂಡಾ ಇದೆ. ಅರಬಿಗಳು ಹೇರಳವಾಗಿ ಟಿಪ್ಸ್ ಕೊಡುತ್ತಾರೆ. ಅವರಿಗೆ ಹಣದ ಲೆಕ್ಕಯಿಲ್ಲ. ಆರಾಮದಲ್ಲಿ ಜೀವನ ಕಳೆಯಬೇಕು. ಇದು ನನ್ನ ಗಲ್ಫ್ ಜೀವನ. ಊರಲ್ಲಿ ದೊಡ ಕಂಪನಿಯಲ್ಲಿ ಕೆಲಸ ಎಂದು ಮರ್ಯಾದೆ ಉಳಿಸಿಕೊಳ್ಳಲು ಹೇಳುತ್ತೇನೆ. ನನ್ನ ನಿಜಕಥೆ ಈಗ ನಿನಗೆ ಅರ್ಥವಾಯಿತಲ್ಲಾ? ಮರ್ಯಾದೆ ಮರ್ಯಾದೆ ಎಂದು ಕುಳಿತರೆ ಜೀವನ ಸಾಗುವುದಿಲ್ಲ’ ಖಾಲಿದ್ ಮತ್ತೊಮ್ಮೆ ನಕ್ಕ.
‘ಹಾಗಾದರೆ ನನ್ನ ಗತಿ’
‘ನೀನು ಭಯ ಪಡಬೇಕಾಗಿಲ್ಲ. ನಿನಗೆ ವಿದ್ಯೆ ಇದೆ. ನೋಡುವಾ. ದೇವರಿದ್ದಾನೆ ಎಲ್ಲಾ ಸರಿಯಾಗಬಹುದು’.
ವೀಸಾದ ಅವಧಿ ಮುಗಿಯುತ್ತಾ ಬಂತು. ಕೆಲಸ ಸಿಗಲಿಲ್ಲ. ಇನ್ನೊಂದು ತಿಂಗಳು ವಿಸ್ತರಿಸಬೇಕಾದರೆ, ಅದಕ್ಕೆ ಒಂದಿಷ್ಟು ಧಿರಂ ಸರ್ಕಾರಕ್ಕೆ ಪಾವತಿ ಮಾಡಬೇಕು. ಆಶ್ಮಾಳಿಗೆ ಫೋನಿನಲ್ಲಿ ಸಮಾಧಾನ ಹೇಳಿ ಹೇಳಿ ಸಾಕಾಯಿತು. ಅವಳ ಅಣ್ಣನಿಂದ ಖರ್ಚಿ ಗೆ ಮತ್ತೆ ಸ್ವಲ್ಪ ಹಣ ತರಿಸಿ ಆಯಿತು. ಎರಡು ತಿಂಗಳ ಅವಧಿ ಮುಗಿದು, ವೀಸಾ ವಾಯಿದೆಯನ್ನು ಒಂದು ತಿಂಗಳು ವಿಸ್ತರಿಸಲಾಯಿತು.
ಖಾಲಿದ್‌ಗೆ ಈಗ ಗಾಬರಿಯಾಗತೊಡಗಿತು. ತನ್ನನ್ನು ನಂಬಿ ಬಂದ ಅಲ್ತಾಫ್‌ಗೆ ಸಹಾಯ ಮಾಡಲಾಗದೆ ಅವನು ಪರಿತಪಿಸಿದ. ಅಲ್ತಾಫ್ ಡಿಗ್ರಿ ಮತ್ತು ಎಂ. ಬಿ. ಎ. ಯನ್ನು ೪೩% ಮಾರ್ಕಿನೊಂದಿಗೆ ಪಾಸಾಗಿದ್ದ. ಒಂದು ದಿನ ಖಾಲಿದ್ ಹೇಳಿದ. “ನಾವು ತಪ್ಪು, ಮಾಡಿದವು ಅಲ್ತಾಫ್ ನಮ್ಮ ಸರ್ಟಿಫಿಕೇಟನ್ನು ಬದಲಾಯಿಸಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಮಾಡಿಸಬೇಕಾಗಿತ್ತು. ಸ್ವಲ್ಪ ಅವಸರ ಮಾಡಿಬಿಟ್ಟೆವು. ‘ಅದು ಹೇಗೆ?’ ಅಲ್ತಾಫ್‌ಗೆ ಗಾಬರಿಯೊಂದಿಗೆ ಆಶ್ಚರ್ಯವೂ ಆಯಿತು. “ಅಯ್ಯೋ ಅದಕ್ಕೇನು? ಹಣಕೊಟ್ಟರೆ ಎಲ್ಲಾ ಮಾಡಿಕೊಡುತ್ತಾರೆ. ನೋಟು ಪ್ರಿಂಟ್ ಮಾಡುವವರಿಗೆ ಇದೇನು ಕಷ್ಟದ ಕೆಲಸ. ನಿನಗೆ ಬಿ. ಇ., ಎಂ. ಬಿ. ಬಿ. ಎಸ್., ಎಂ. ಎಸ್. ಸಿ. ಹಾಗೂ ಟ್ರಾನ್ಸ್‍ಫರ್ ಸರ್ಟಿಫಿಕೇಟುಗಳು ಧಾರಾಳವಾಗಿ ಸಿಗುತ್ತವೆ.”
‘ಹೌದಾ…..?’
“ನೀನು ಬಹಳ ಹಿಂದೆ ಇದ್ದೀ. ಗಲ್ಫ್‌ಗಳಲ್ಲಿ ಒರಿಜಿನಲ್ ಸರ್ಟಿಫಿಕೇಟು ತೋರಿಸಿದರೆ, ಡುಪ್ಲಿಕೇಟ್ ಎಂದು ಹೇಳಿ ಬಿಸಾಡುತ್ತಾರೆ. ಯಾಕೆಂದರೆ ಇಲ್ಲಿ ಅಷ್ಟು ಡುಪ್ಲಿಕೇಟ್ ಸರ್ಟಿಫಿಕೇಟುಗಳು ತುಂಬಿ ಹೋಗಿವೆ.” ಅಲ್ತಾಫ್ ಹೈರಾಣ ಆಗಿಬಿಟ್ಪ. ಅವನ ಮುಖ ಕಳೆಗುಂದಿತು. ತನಗಿನ್ನು ದಾರಿಯಿಲ್ಲ. ಊರಿಗೆ ಯಾವ ಮುಖದಲ್ಲಿ ಹಿಂತಿರುಗಲಿ? ಅಲ್ಲಿ ಹೋಗಿ ಎಲ್ಲಿ ಕೆಲಸ ಹುಡುಕಲಿ. ಇದ್ದ ಕೆಲಸವನ್ನು ಕಳೆದುಕೊಂಡಾಯಿತು. ಜನ ನಗಾಡುತ್ತಾರೆ. ‘ಹೋದ ಪುಟ್ಟ – ಬಂದ ಪುಟ್ಟ’ ಎಂದು ತಮಾಷೆ ಮಾಡುತ್ತಾರೆ. ನನ್ನಿಂದ ಇನ್ನು ಮುಖ ತೋರಿಸಲು ಸಾಧ್ಯವಿಲ್ಲ. ಸಾಲ ತೀರಿಸುವುದು ಹೇಗೆ? ಇನ್ನು ಉಳಿದದ್ದು ಒಂದೇ ದಾರಿ ಆತ್ಮಹತ್ಯೆ. ದಿನಕಳೆದಂತೆ ಅಲ್ತಾಫ್ ಮೌನಿಯಾದ. ರಾತ್ರಿ ನಿದ್ರೆಯಲ್ಲಿ ಕನವರಿಸುತ್ತಿದ್ದ. ಆಸ್ಮಾ… ಆಸ್ಮಾ ಎಂದು ಕೂಗುತ್ತಿದ್ದ. ಖಾಲಿದ್‌ಗೆ ಗಾಬರಿಯಾಯಿತು. ಒಂದೆರಡು ದಿನ ಅವನು ಕೆಲಸಕ್ಕೆ ರಜೆ ಹಾಕಿ ಟ್ಯಾಕ್ಸಿ ಮಾಡಿಕೊಂಡು ಅಲ್ತಾಫ್ನನ್ನು ಗಲ್ಫ್ ಇಡೀ ತಿರುಗಾಡಿಸಿದ. ಬುರ್ಜುಲ್ ಅರಬ್, ಜುಮೇರಾ ಬೀಚ್, ಹೋಟೆಲ್ – ಅಲ್ಬುರ್ಜ್, ಜುಮೇರಾ – ಮಾಲ್, ಇಬ್ನು – ಬತೂತಮಾಲ್, ಅಲ್‌ವಹದ ಮಾಲ್, ಜಬಲ್ ಅಪೀತ್, (ಮೌಂಟೇಯಿನ್ ಹಿಲ್) ಮರೀನಾಮಾಲ್ – ಸಿಲಿಕಾನ್ ವಯಾಸಿಸ್ ಇತ್ಯಾದಿ….. ಇತ್ಯಾದಿ ಎಲ್ಲಾ ಕಡೆಯೂ ಅರಬ್‌ಗಳದ್ದೇ ಕಾರುಬಾರು. ಅವರ ಬೆಲೆಬಾಳುವ ವಿದೇಶಿ ಕಾರು, ಹೆಂಡಂದಿರು. ಅವರು ತಿನ್ನುವ ಅಹಾರ, ಮಾಲಿನಲ್ಲಿ ಅವರು ಖರೀದಿಸುವ ಬೆಲೆಬಾಳುವ ಸಾಮಾಗ್ರಿಗಳು, ಅವರ ಮಕ್ಕಳನ್ನು ಎತ್ತಿಕೊಳ್ಳಲು ಎರಡೆರಡು ಕೆಲಸದಾಳುಗಳು. ಒಂದೊಂದು ಮನೆಯಲ್ಲಿ ಎರಡೆರಡು ಕಾರುಗಳು. ಸ್ವರ್ಗ ಇದ್ದರೆ ಇದೇ ಇರಬೇಕು. ಬೇರೆ ಇರಲು ಸಾಧ್ಯವಿಲ್ಲ ಎಂದು ಅಲ್ತಾಫ್‌ಗೆ ಖಾತ್ರಿಯಾಗುವಷ್ಟು ಅವನಿಗೆ ಅನುಭವಗಳು ದೊರೆತವು.
“ಖಾಲಿದ್, ಈ ಅರಬ್ಗಳು ನಮ್ಮನ್ನಂತೂ ಕಣ್ಣೆತ್ತಿ ನೋಡುವುದಿಲ್ಲ. ಆದರೆ ಇಷ್ಟು ಆಡಂಬರದ ಜೀವನ ಹೇಗೆ ನಿರ್ವಹಿಸುತ್ತಾರೆ. ದೇವರು ಒಂದೇ ಕಡೆ ಯಾಕೆ ಸಂಪತ್ತನ್ನು ಸುರಿದಿದ್ದಾನೆ. ಖಾಲಿದ್ ನಕ್ಕು ಹೇಳಿದ ಅರಬ್ ದೊರೆಗೆ ಇಲ್ಲಿಯ ತೈಲವೇ ಆಸ್ತಿ. ಇದರ ಹಣದಿಂದ ದೊರೆಯು ತನ್ನ ಪ್ರಜೆಗಳಿಗೆ ಭೂಮಿ ಖರೀದಿಸಲು ಮನೆ ಕಟ್ಟಲು ಹಣದ ಸಹಾಯ ಮಾಡುತ್ತಾರೆ. ಮಕ್ಕಳಿಗೆ ಪುಕ್ಕಟೆ ವಿದ್ಯಾಭ್ಯಾಸ. ಪ್ರಾಯಕ್ಕೆ ಬಂದ ತರುಣರಿಗೆ ಮದುವೆ ಖರ್ಚು ಎಲ್ಲಾ ಮಾಡಲಾಗುತ್ತದೆ. ಹೊರದೇಶದಿಂದ ಬಂದ ವಿದ್ಯಾವಂತನಾಗಲೀ, ಅವಿದ್ಯಾವಂತನಾಗಲೀ ಅವರಿಗೆ ಲೇಬರ್ ಅಷ್ಟೇ.
‘ಖಾಲಿದ್, ಇನ್ನು ಒಂದು ತಿಂಗಳ ಒಳಗೆ ನಾನು ನನ್ನ ದೇಶಕ್ಕೆ ಹಿಂತಿರುಗಬೇಕಾಗಿದೆ. ಅಲ್ಲಿಯವರೆಗೆ ಖರ್ಚಿಗೆ ಹಣ ಬೇಕಾಗಿದೆ. ನನ್ನ ಹತ್ತಿರ ಈಗ ಏನೂ ಉಳಿದಿಲ್ಲ. ಸದ್ಯಕ್ಕೆ ನನಗೆ ಎಲ್ಲಿಯಾದರೂ ಹೋಟೇಲಿನಲ್ಲಿ ಗೇಟ್‌ಕೀಪರ್ ಕೆಲಸ ತಗೆಸಿಕೊಡು. ಊಟ ವಸತಿ ಎರಡೂ ಪುಕ್ಕಟೆಯಾಗುತ್ತದೆ’. ಅಲ್ತಾಫ್‌ನ ಮಾತು ಕೇಳಿ ಖಾಲಿದ್‌ಗೆ ಆಘಾತವಾಯಿತು. ಅವನ ಮುಖದಲ್ಲಿನ ದೈನ್ಮತೆ ಕಂಡು ಮರುಕ ಉಂಟಾಯಿತು. ಅವನ ಕಣ್ಣಾಲಿಗಳು ಹನಿಗೂಡಿದವು. ತನ್ನ ಮಿತ್ರನಿಗೆ ಸಹಾಯ ಮಾಡಲು ಆಗದ ಅವನ ನಿಸ್ಸಾಹಾಯಕತೆಗೆ ತನ್ನಲ್ಲೇ ಮರುಗಿಕೊಂಡನು. ‘ಇಲ್ಲ ಅಲ್ತಾಘ್, ಆ ಕೆಲಸ ನಿನ್ನಿಂದಾಗದು. ಅದಕ್ಕೆ ಡ್ರೈವಿಂಗ್ ಲೈಸನ್ಸ್ ಬೇಕು. ನಮ್ಮ ದೇಶದ ಲೈಸನ್ಸ್ ಇಲ್ಲಿ ನಡೆಯದು. ಇಲ್ಲಿ ಪ್ರತ್ಯೇಕ ಲೈಸನ್ಸ್ ಸಿಗುವುದಿಲ್ಲ. ಒಂದು ಕೆಲಸ ಮಾಡುವ. ಇಲ್ಲಿ ಕೇರಳದವರ ಗ್ರಾಸರಿ ಅಂಗಡಿ ತುಂಬಾ ಇವೆ. ಅಲ್ಲಿ ಎಲ್ಲಾದರೂ ತಾತ್ಕಾಲಿಕ ಒಂದು ತಿಂಗಳ ಮಟ್ಟಿಗೆ ಕೆಲಸ ಮಾಡಿಸಿಕೊಡುತ್ತೇನೆ’.
ಅಲ್ತಾಫ್‌ಗೆ ರೂಮಿನ ಪಕ್ಕದಲ್ಲಿ ಇರುವ ಕೇರಳದವರ ಗ್ರಾಸರಿ ಅಂಗಡಿಯಲ್ಲಿ ಕೆಲಸ ಸಿಕ್ಕಿತು. ಬೆಳಿಗ್ಗೆ ಎಂಟು ಗಂಟೆಗೆ ಹಾಜರಾದರೆ, ರಾತ್ರಿ ಒಂದು ಗಂಟೆಗೆ ಹಿಂತಿರುಗುವುದು. ತಿಂಗಳಿಗೆ ೧,೫೦೦ ದಿರಂ. ಶುಕ್ರವಾರ ವಾರದ ರಜೆ. ಮ್ಮೆಕೈ ಹುಡಿ ಮಾಡಿಕೊಂಡು ಕೆಲಸ ಮಾಡಿ ಗೊತ್ತಿಲ್ಲದ ಅಲ್ತಾಫ್‌ಗೆ ಈ ಕೆಲಸ ಕಷ್ಟವಾಯಿತು. ಗ್ರಾಸರಿ ಅಂಗಡಿಯಲ್ಲಿ ಇಡೀ ದಿನ ನಿಂತುಕೊಂಡು ಗ್ರಾಹಕರನ್ನು ಓಲೈಸಬೇಕು. ಇದಲ್ಲದೆ ಹತ್ತಿರದ ವಿಲ್ಲಾಗಳಿಗೆ ದಿನಿಸುಗಳನ್ನು ಕಳುಹಿಸಿಕೊಡಲು ಕರೆಗಳು ಬರುತ್ತಿದ್ದವು. ದಿನಸಿ ಸಾಮಾಗ್ರಿಗಳಲ್ಲದೇ ಗ್ಯಾಸ್, ಶುದ್ದ ನೀರಿನ ಡ್ರಮ್ಗಳನ್ನು ಸೈಕಲ್ನಲ್ಲಿ ಲೋಡ್ ಮಾಡಿ ವಿಲ್ಲಾಗಳಿಗೆ ಕಳುಹಿಸಬೇಕು. ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು ಸ್ವಲ್ಪ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹತ್ತು ಹದಿನೈದು ದಿನಗಳಲ್ಲಿ ಅವನು ವಿಲ್ಲಾಗಳಲ್ಲಿ ಚಿರಪರಿಚಿತವಾದ. ಯಾರಾದರೂ ಅರಬಿಯ ಪರಿಚವಾದರೆ ತನ್ನ ದುಃಖ ತೋಡಿಕೊಂಡು ಏನಾದರೂ ಒಳ್ಳೆಯ ಕೆಲಸ ಗಿಟ್ಟಿಸಬಹುದೆಂದು ಅವನ ಆಲೋಚನೆ. ಆದರೆ ಯಾವುದೇ ವಿಲ್ಲಾಗಳಲ್ಲಿ ಗೇಟಿನ ವರೆಗೆ ಹೋಗುವ ಅವಕಾಶ ಮಾತ್ರ ಅವನಿಗೆ ಸಿಗುತ್ತಿತ್ತು. ಒಮ್ಮೆಯಾದರೂ ಅವನಿಗೆ ಅರಬ್ಬೀಯಾಗಲೀ, ಅವನ ಪತ್ನಿಯರಾಗಲೀ ಕಾಣ ಸಿಗಲಿಲ್ಲ. ಕೆಲಸದ ಆಳುಗಳು ಮಾತ್ರ ಹೊರಗೆ ಬರುತ್ತಿದ್ದರು. ತನ್ನ ಕಣ್ಣುಗಳನ್ನು ಮನೆಯ ಒಳಗೆ ಹೊರಗೆ ಎಷ್ಟು ತಿರುಗಿಸಿದರೂ ಜನರ ಓಡಾಟ ಕಂಡುಬರಲಿಲ್ಲ. ಪ್ರತೀ ಮನೆಯ ಕಲ್ಲಿನ ಗೋಡೆ ನಿರ್ಮಾಣಕ್ಕೆ ಮಾಡಿದ ಖರ್ಚಿನಲ್ಲಿ ಊರಿನಲ್ಲಿ ಒಂದು ಸ್ವಂತ ಮನೆ ಕಟ್ಟಬಹುದಿತ್ತು. ಅವರ ಐಶಾರಾಮ ಜೀವನ ಅವನನ್ನು ಬೆಚ್ಚಿ ಬೀಳುವಂತೆ ಮಾಡಿತು.
ಅಲ್ತಾಫ್ ಹೆಂಡತಿಯಿಂದ ಫೋನು ಬಂದಾಗಲೆಲ್ಲಾ ಸುಳ್ಳು ಹೇಳ ತೊಡಗಿದ. ಹೆಚ್ಚಾಗಿ ವಿರಾಮ ದಿನವಾದ ಶುಕ್ರವಾರ ಅವನಿಗೆ ಹೆಂಡತಿಯಿಂದ ಫೋನ್ ಬರುತಿತ್ತು. ಅವಳು ತುಂಬಾ ಆತಂಕಗೊಂಡಂತೆ ಕಾಣುತಿತ್ತು. ತನಗೆ ಅಬುದಾಬಿಯ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿದೆ. ಆದರೆ ಸಂಬಳ ಸ್ವಲ್ಪ ಕಡಿಮೆ. ೨,೦೦೦ ದಿರಂ ಎಂದಿದ್ದ. ಊರಿಗೆ ಬಂದು ವಿವರವಾಗಿ ಹೇಳುತ್ತೇನೆ ಎಂದಿದ್ದ. ಇನ್ನು ಎರಡು ವಾರದೊಳಗೆ ಅವನಿಗೆ ಒಳ್ಳೆಯ ಕೆಲಸ ಸಿಗದಿದ್ದರೆ ಅವನು ಊರಿಗೆ ಹಿಂತಿರುಗಲೇ ಬೇಕಿತ್ತು. ಆಸ್ಮಾಳನ್ನು ಅವನು ಖುಷಿಯಲ್ಲಿಟ್ಟ. ಆದರೆ ಅವನ ಮನದ ಬೇಗುದಿಯನ್ನು ಅರಿಯುವವರು ಯಾರಿದ್ದಾರೆ? ಅವನ ಪಾಲಿಗೆ ಆ ಕಾಣದ ದೇವರು ಮಾತ್ರ.
ಅಲ್ತಾಫ್‌ಗೆ ಈ ಕಷ್ಟದ ಕೆಲಸ ತೊಂದರೆ ಕೊಡತೊಡಗಿತು ಅವನ ದೇಹ ಇಲ್ಲಿಯವರೆಗೆ ಮಾಡಿರದ ಈ ಕಲಸಕ್ಕೆ ಸ್ಪಂದಿಸಲಿಲ್ಲ. ಅದಲ್ಲದೆ ಬಿಡುವಿಲ್ಲದ ಬಂದ ನಾಲ್ಕು ದಿನದ ಮಳೆ ಇಡೀ ಅಬುದಾಬಿಯ ಹವಾಮಾನವನ್ನೇ ಹಾಳು ಮಾಡಿತು. ಹವಾಮಾನ ೯ ಡಿಗ್ರಿಗೆ ಇಳಿಯಿತು. ವಿಪರೀತ ಮೈ ಕೊರೆಯುವ ಚಳಿ. ಕಮ್ಮಿ ಕ್ರಯದ ಅವನ ಉಲ್ಲನ್ ಬಟ್ಟೆಗಳು ಚಳಿಯಿಂದ ದೇಹವನ್ನು ರಕ್ಷಿಸಲಿಲ್ಲ. ಅರಬ್ಬೀಗಳು ಚಳಿಗೆ ಹಾಕಿದ ದುಬಾರಿ ಬೆಲೆಯ ಜರ್ಕಿನ್‌ಗಳನ್ನು ಟೊಪ್ಪಿಗಳನ್ನು ನೋಡುವಾಗ ಅಲ್ತಾಫ್‌ಗೆ ತಾನೊಂದು ಖರೀದಸಬೇಕೆಂದು ಆಸೆಯಾಗುತ್ತಿತ್ತು. ಆದರೆ ಹಣವಿಲ್ಲದೆ ಅವನ ಆಸೆಗಳೆಲ್ಲಾ ಅಲ್ಲಿಗೇ ಕಮರಿ ಹೋಗುತ್ತಿತ್ತು. ಚಳಿಯ ಹೊಡೆತ, ವಿಶ್ರಾಂತಿ ಇಲ್ಲದ ಅಂಗಡಿ ಕೆಲಸ, ಇಷ್ಟವಿಲ್ಲದ ಆಹಾರದಿಂದ ಅವನ ಆರೋಗ್ಯ ಕೆಟ್ಟಿತು. ಮರುದಿನ ಜ್ವರದಲ್ಲಿ ಮಲಗಿದ. ಎದ್ದು ನಿಲ್ಲಲು ತ್ರಾಣವಿರಲಿಲ್ಲ. ಕೊನೆಗೆ ಕಫ, ಕೆಮ್ಮು ಜಾಸ್ತಿ ಯಾಗಿ ಸೀನಿದಾಗ ಮತ್ತು ಉಗುಳಿದಾಗ ಕಫದೊಂದಿಗೆ ರಕ್ತ ಬರತೊಡಗಿತು. ಅವನ ಗ್ರಹಚಾರಕ್ಕೆ ಸರಿಯಾಗಿ ಒಂದು ವಾರದಿಂದ ಖಾಲಿದ್ ಕೂಡಾ ರೂಮಿಗೆ ಬಂದಿರಲಿಲ್ಲ.
ಅಲ್ತಾಫ್ ಆಲೋಚಿಸಿದ. ತಾನು ಹೀಗೆ ಸುಮ್ಮನೆ ಮಲಗಿದರೆ ಖಂಡಿತ ಸತ್ತು ಹೋಗುತ್ತೇನೆ. ನನ್ನ ಹೆಂಡತಿ ಮಕ್ಕಳಿಗೆ ನನ್ನ ಹೆಣವೂ ಸಿಗಲಾರದು. ಅವನ ಕಣ್ಣ ಮುಂದೆ ಅವನ ಸುಂದರ ಹೆಂಡತಿ ಹಾಗೂ ಕಿಲಕಿಲ ನಗುತ್ತಾ ಕೈಚಾಚಿ ನಿಂತ ಮಗುವಿನ ಮುಖ ಕಾಣಿಸಿತು. ಅವನ ಕಣ್ಣಾಲಿಗಳು ತುಂಬಿ ಬಂದವು. ಇಲ್ಲ ಈ ತಿಂಗಳಾಂತ್ಯಕ್ಕೆ ತನ್ನ ವೀಸಾದ ಅವಧಿ ಮುಗಿಯುತ್ತದೆ. ಇನ್ನು ನನ್ನಿಂದ ಇಲ್ಲಿರಲು ಸಾಧ್ಯವಿಲ್ಲ. ಊರಿಗೆ ಹೋಗುತ್ತೇನೆ ಎಂದು ನಿರ್ಣಯ ಮಾಡಿದ. ಅಲ್ಲಿಯವರೆಗಾದರೂ ಬದುಕಬೇಕಲ್ಲ.
ಅಲ್ತಾಫ್ ಎದ್ದು ನಿಂತ. ಚಳಿಯಲ್ಲಿ ನಡುಗುತ್ತಿದ್ದ. ಎರಡುಮೂರು ಟೀಶರ್ಟ್ ಹಾಕಿಕೊಂಡು ಅದರ ಮೇಲೆ ತನ್ನ ಉಲ್ಲನ್ ಶರ್ಟ್ ಹಾಕಿದ. ಗೋಡೆಯಲ್ಲಿ ತೂಗುಹಾಕಿದ ಗೆಳೆಯನೊಬ್ಬನ ಮಂಕಿಕ್ಯಾಪ್ ತಲೆಗೆ ಸಿಕ್ಕಿಸಿದ. ನಡೆದುಕೊಂಡು ರಸ್ತೆಗೆ ಬಂದ. ದೇಹ ಸಮತೋಲನದಲ್ಲಿರಲಿಲ್ಲ. ವಾಲುತ್ತಿತ್ತು. ತನ್ನ ಗ್ರಾಸರಿ ಅಂಗಡಿಯ ಮಾಲಿಕನಲ್ಲಿ ಹೋಗಿ ೫೦೦ ದಿರಂ ಮುಂಗಡ ಸಂಬಳ ಪಡೆದ. ಅಲ್ಲಿಯೇ ಐದು ಆರು ಕಿ. ಮೀ. ದೂರದಲ್ಲಿ ತನ್ನ ಊರಿನ ತುಳು ಮಾತಾಡುವ ಡಾಕ್ಟರ್‌ರ ಆಸ್ಪತ್ರೆ ಇದೆ. ಟ್ಯಾಕ್ಸಿಯಲ್ಲಿ ಹೋಗಿ ಮದ್ದು ತರಬೇಕೆಂದು ನಿರ್ಣಯಿಸಿ, ಮುಖ್ಯ ರಸ್ತೆಗೆ ಬಂದ. ಮುಖ್ಯ ರಸ್ತೆಯ ಪುಟ್ಪಾತ್ಗೆ ಬಂದು ಟ್ಯಾಕ್ಸಿ ನಿಲ್ಲುವ ಜಾಗದಲ್ಲಿ ಟ್ಯಾಕ್ಸಿಗಾಗಿ ಕೈ ತೋರಿಸುತ್ತಾ ನಿಂತ.
ನಾಲ್ಕು ಲೈನಿನಲ್ಲಿ ಒಂದರ ಹಿಂದೆ ಒಂದರಂತೆ ಸುಮಾರು ೧೦೦-೨೦೦ ಕಿ. ಮೀ. ವೇಗದಲ್ಲಿ ವಾಹನಗಳು ಓಡುತ್ತಿದ್ದವು. ವಿವಿಧ ದೇಶಗಳ ಬೆಲೆಬಾಳುವ ಕಾರುಗಳು ನಿರಂತರವಾಗಿ ಓಡುತ್ತಿದ್ದವು. ಅಲ್ತಾಫ್ ಬಂದ ಸಮಯದಲ್ಲಿ ಆ ನೋಟವನ್ನು ನೋಡುವುದರಲ್ಲೇ ಖುಷಿಪಡುತ್ತಿದ್ದ. ಆದರೆ ಈಗ ಅವನಿಗೆ ವಾಹನಗಳ ಓಡಾಟ ನೋಡಲು ಅಸಾಧ್ಯವಾಗುತ್ತಿತ್ತು. ಮೈಯಲ್ಲಿ ತ್ರಾಣವಿಲ್ಲದೆ ನಿಲ್ಲಲು ಸಾಧ್ಯವಾಗದೆ, ಒಮ್ಮೆ ಟ್ಯಾಕ್ಸಿ ಸಿಕ್ಕರೆ ಸಾಕು, ಕೂತು ಬಿಡುತ್ತಿದ್ದೆ ಎಂದು ತವಕಿಸುತ್ತಿದ್ದ. ಮಧ್ಯೆ ಮಧ್ಯೆ ಒಂದೆರಡು ಟ್ಯಾಕ್ಸಿಗಳು ಓಡಾಡುತ್ತಿದ್ದರೂ ಅವುಗಳಲ್ಲಿ ಪ್ರಯಾಣಿಕರಿದ್ದುದರಿಂದ ನಿಲ್ಲಿಸುತ್ತಿರಲಿಲ್ಲ. ಅಲ್ತಾಫ್‌ಗೆ ಕೈ ತೋರಿಸಿ ಸುಸ್ತಾಗಿ ತಲೆ ತಿರುಗತೊಡಗಿತು. ಅಷ್ಟರಲ್ಲಿ ಅವನ ಮೊಬೈಲ್ ಗುಣುಗುಟ್ಟತೊಡಗಿತು.
ತನ್ನ ಅಂಗಿಯ ಕಿಸೆಗೆ ಕೈ ಹಾಕಿ ಮೊಬೈಲ್ ಹೊರತೆಗೆದ. ಅವನಿಗೆ ಯಾರಿಂದ ಕರೆ ಬಂದಿರಬಹುದು ಎಂದು ನೋಡುವ ತವಕ. ಗಲ್ಫ್‌ನಲ್ಲಿದ್ದವರಿಗೆ ಊರಿಂದ ಒಂದು ಕಾಲ್ ಬಂದರೂ ಲಕ್ಷ ರೂಪಾಯಿ ಗಳಿಸಿದ ಸಂತೋಷವಾಗುತ್ತದ. ಕಿಸಯಿಂದ ಹೊರತೆಗೆದ ಮೊಬೈಲ್ ಕೈ ಜಾರಿ ಕೆಳಗೆ ಬಿತ್ತು. ಬಾಗಿ ತೆಗೆಯುವ ಅವಸರದಲ್ಲಿ ಅವನ ದೇಹ ನಿಯಂತ್ರಣ ತಪ್ಪಿತು. ಅಲ್ತಾಫ್ ಪುಟ್‌ಪಾತ್‌ನಿಂದ ಕೆಳಗೆ ಬಿದ್ದ. ಕ್ಷಣಾರ್ಧದಲ್ಲಿ ಹಿಂದಿನಿಂದ ಸಾಲಾಗಿ ಬರುವ ಕಾರುಗಳು ಅವನ ದೇಹದ ಮೇಲೆಒಂದರ ಮೇಲೆ ಒಂದರಂತೆ ಹಾದುಹೋದವು. ಫುಟ್‌ಪಾತ್ ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಕರೆ ಬರುತ್ತಿರುವ ಮೊಬೈಲ್ ಎತ್ತಿ ಕೊಂಡ. ಅದರಲ್ಲಿ ‘ಆಸ್ಮಾ ಕಾಲಿಂಗ್….’ ಎಂದು ಬರೆದಿತ್ತು.
*****