“ವಸಂತಣ್ಣ ಒಂದು ಬಿಸಿ ಚಾ” ವಸಂತಣ್ಣನ ಹೋಟೇಲಿನಲ್ಲಿ ಕುಳಿತೊಡನೆ ಅಂದೆ. ಐದೇ ನಿಮಿಷದಲ್ಲಿ ವಸಂತಣ್ಣ ಬಿಸಿಬಿಸಿ ಚಾ ತಂದು ನನ್ನ ಎದುರಿಟ್ಟ. ವಸಂತಣ್ಣ ನನಗೆ ಹದಿನೈದು ವರ್‍ಷಗಳಿಂದ ಪರಿಚಿತ. ಪರಿಚಿತ ಎನ್ನುವುದಕ್ಕಿಂತಲೂ ಸ್ನೇಹಿತ ಎಂದರೇ ಹೆಚ್ಚು ಸೂಕ್ತವಾಗಬಹುದೇನೋ. ವಸಂತಣ್ಣ ನನಗೆ ಪರಿಚಯವಾದದ್ದು ಅವನ ಹೋಟೆಲಿಗೆ ನಾನು ಮೊದಲ ಬಾರಿ ಹೋದಾಗಲೇ. ತುಂಬಾ ತಮಾಷೆಯ ವ್ಯಕ್ತಿ. ತನ್ನ ಮಾತಿನ ಮೂಲಕ ಯಾರನ್ನಾದರೂ ಸೆಳೆಯಬಲ್ಲ ವ್ಯಕ್ತಿತ್ವ ಅವನದ್ದು. ಅವನ ಈ ಗುಣದಿಂದಲೇ ನನಗೆ ಆತ ಹೆಚ್ಚು ಇಷ್ಟವಾದದ್ದು. ದಿನಕ್ಕೊಮ್ಮೆಯಾದರೂ ನಾನು ಆತನ ಹೋಟೆಲಿಗೆ ಹೋಗಿ ಚಾ ಕುಡಿದರೆ ನನಗೆ ನೆಮ್ಮದಿ. ಆತ ಮಾಡಿಕೊಡುವ ಚಾಕ್ಕಿಂತಲೂ ನನ್ನನ್ನು ಹೆಚ್ಚು ಸೆಳೆಯುತ್ತಿದ್ದದ್ದು ಆತನ ಮಾತುಗಳೇ. ಅವನ ಹೋಟೆಲ್ ದೊಡ್ಡ ಮಟ್ಟದ್ದಲ್ಲ. ಮೂರು ಟೇಬಲ್ ಮತ್ತು ಮೂರು ಚೆಂಚು ಮಾತ್ರ ಆತನ ಹೋಟೆಲ್‌ನ ಬಂಡವಾಳ.
ವಸಂತಣ್ಣ ಕೊಟ್ಟ ಚಾದ ಲೋಟವನ್ನು ಒಂದು ಬಾರಿ ಬಾಯಿಗಿಟ್ಟಾದ ಮೇಲೆಯೇ ನಾನು ವಸಂತಣ್ಣನ ಮುಖವನ್ನು ನೋಡಿದ್ದು. ಇಲ್ಲ; ವಸಂತಣ್ಣನ ಮುಖ ಯಾವತ್ತಿನಂತಿಲ್ಲ. ನನ್ನಲ್ಲಿ ಏನಾದರೂ ತಮಾಷೆಯ ಮಾತನಾಡದೆ ಚಾ ಕೊಡುವವನೇ ಅಲ್ಲ ನಮ್ಮ ವಸಂತಣ್ಣ. ಯಾಕೋ ಚಿಂತೆಯಿಂದ ಇದ್ದಾನೆ. “ಏನು ವಸಂತಣ್ಣ ತುಂಬಾ ಡಲ್ಲಾಗಿದ್ದೀಯಾ? ಇವತ್ತು ವ್ಯಾಪಾರ ಕಡಿಮೆಯಾ?” ಅಂದೆ. ಆತ ಏನೂ ಮಾತನಾಡಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು “ನಿನ್ನಿಂದ ಒಂದು ಉಪಕಾರ ಆಗಬೇಕಿತ್ತಲ್ಲ, ರಮೇಶಣ್ಣ” ಅಂದ. “ಸರಿ, ನನ್ನ ಕೈಲಾದರೆ ಮಾಡುತ್ತೇನೆ. ಏನು ಹೇಳು” ಅಂದೆ.
“ನಿನ್ನೆ ನನ್ನ ಮಗಳನ್ನು ನೋಡುವುದಕ್ಕೆ ಗಂಡಿನ ಮನೆಯವರು ಬಂದಿದ್ದರು. ಮಗಳನ್ನು ಒಪ್ಪಿಕೊಂಡಿದ್ದಾರೆ ಕೂಡಾ” ಅಂದ.
“ಒಳ್ಳೆಯದಾಯಿತು, ನಮಗೆ ಸದ್ಯದಲ್ಲೆ ಒಂದು ಮದುವೆಯೂಟ ಹಾಕಿಸುತ್ತೀಯಾ ಬಿಡು” ನಗುತ್ತಾ ಅಂದೆ ನಾನು.
“ಸುಮ್ಮನಿರು ರಮೇಶಣ್ಣ, ಒಳ್ಳೆಯ ಸಂಬಂಧವೇನೋ ಹೌದು. ಆದರೆ ಹುಡುಗನ ಮನೆಯವರು ಮೂರು ಲಕ್ಷ ವರದಕ್ಷಿಣೆ ಕೇಳಿದ್ದಾರೆ. ದಿನಕ್ಕೆ ಅಬ್ಬಬ್ಬಾ ಅಂದರೆ ಮುನ್ನೂರು ರೂಪಾಯಿ ಸಂಪಾದಿಸುವ ನಾನು ಮೂರು ಲಕ್ಷ ವರದಕ್ಷಿಣೆ ಕೊಡುವುದೆಲ್ಲಿಂದ? ನಿನ್ನಿಂದ ಒಂದು ಉಪಕಾರವಾಗಬೇಕಿತ್ತು ರಮೇಶಣ್ಣ. ನನ್ನ ಮಗಳ ಮದುವೆಗೆ ಒಂದು ಲಕ್ಷ ರೂಪಾಯಿ ಸಾಲ ಕೊಡುತ್ತೀಯಾ?” ಕೈಮುಗಿಯುತ್ತಾ ನುಡಿದಿದ್ದ ವಸಂತಣ್ಣ.
ನನಗೀಗ ಯೋಚನೆ ಶುರುವಾಗಿತ್ತು. “ನನ್ನ ಕೈಲಾದರೆ ಉಪಕಾರ ಮಾಡುತ್ತೇನೆ” ಎಂದು ನಾನು ಹೇಳಿಯಾಗಿದೆ. ಒಂದು ಲಕ್ಷ ರೂಪಾಯಿ ಕೊಡುವುದು ನನ್ನ ಕೈಲಾಗದ ಕೆಲಸವೇನಲ್ಲ. ಅಪ್ಪ ಮಾಡಿಟ್ಟ ಆಸ್ತಿಯೇ ಬೇಕಾದಷ್ಟಿತ್ತು. ಜೊತೆಗೆ ಸರ್ಕಾರಿ ಕೆಲಸವಿದೆ. ಆದರೆ ವಸಂತಣ್ಣನಿಗೆ ಸಾಲ ಕೊಟ್ಟರೆ ವಾಪಸ್ಸು ಬರಬಹುದೆಂಬ ಗ್ಯಾರಂಟಿ ನನಗಿರಲಿಲ್ಲ. ಆದರೂ ವಸಂತಣ್ಣನಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಲ್ಲ. ಅದಕ್ಕಾಗಿ “ಆಯಿತು ವಸಂತಣ್ಣ. ಇನ್ನು ಒಂದು ವಾರದಲ್ಲಿ ಹೊಂದಿಸಿಕೊಡುತ್ತೇನೆ” ಅಂದೆ. ವಸಂತಣ್ಣನ ಮುಖದಲ್ಲಿ ಆಶಾವಾದದ ನಗು ಮೂಡಿತ್ತು. ಅಲ್ಲಿಂದ ಹೊರಟು ಮನೆಗೆ ಬಂದೆ.
ರಾತ್ರಿ ಹಾಸಿಗೆಯಲ್ಲಿ ಮಲಗಿದ್ದೇನೆ. ನಿದ್ದೆ ಬಳಿಗೆ ಸುಳಿಯುತ್ತಿಲ್ಲ. ಒಮ್ಮೆ ಆ ಬದಿಗೆ ಇನ್ನೊಮ್ಮೆ ಈ ಬದಿಗೆ ಹೊರಳಾಡುತ್ತಿದ್ದೇನೆ. ಹತ್ತಿಪ್ಪತ್ತು ಸಾವಿರವಾಗಿದ್ದರೆ ನಾನಿಷ್ಟು ಚಿಂತೆ ಮಾಡುತ್ತಿರಲಿಲ್ಲ. ಆದರೆ ಇದು ಲಕ್ಷದ ಪ್ರಶ್ನೆ. ವಸಂತಣ್ಣನನ್ನು ನಂಬಿ ಒಂದು ಲಕ್ಷ ಕೊಡುವುದಾದರೂ ಹೇಗೆ? ಆತ ವಾಪಸ್ಸು ಕೊಡಲಾರ ಎಂದಲ್ಲ. ಆದರೆ ಕೊಡುವ ಸಾಮರ್‍ಥ್ಯ ಅವನಿಗಿಲ್ಲ. ಆತನಿಗೆ ಮೂರು ಹೆಣ್ಣುಮಕ್ಕಳು. ಈಗ ಮೊದಲನೇ ಮಗಳು ರಂಜಿತಾಳನ್ನು ಮದುವೆ ಮಾಡಿಕೊಡುವ ಸಿದ್ಧತೆಯಲ್ಲಿದ್ದಾನೆ. ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆತ ಹಣ ವಾಪಸ್ಸು ಕೊಡಬಹುದೆಂಬ ಗ್ಯಾರಂಟಿ ನನಗಿಲ್ಲ. ಏನಾದರಾಗಲಿ ಎಂದು ಮನಸ್ಸಿನಲ್ಲಿ ಅಂದುಕೊಂಡು ವಸಂತಣ್ಣನಿಗೆ ಹಣ ಕೊಡುವ ನಿರ್‍ಧಾರ ಮಾಡಿದೆ. ಮೆಲ್ಲಗೆ ನಿದ್ರಾದೇವಿಯ ವಶಕ್ಕೆ ಒಳಗಾದೆ.
ಮರುದಿನವೇ ಬ್ಯಾಂಕಿಗೆ ಹೋದೆ. ಒಂದು ಲಕ್ಷ ಹಣ ಬಿಡಿಸಿಕೊಂಡು ಸೀದಾ ವಸಂತಣ್ಣನ ಹೊಟೇಲಿಗೆ ಹೋದೆ. ವಸಂತಣ್ಣನಿಗೆ ಹಣಕೊಟ್ಟು “ಈಗ ಖುಷಿಯಾಯ್ತಾ ವಸಂತಣ್ಣ?” ಅಂದೆ. “ತುಂಬಾ ಉಪಕಾರ ಆಯ್ತು ರಮೇಶಣ್ಣ. ನಿನ್ನ ಈ ಋಣವನ್ನು ನನ್ನ ಪ್ರಾಣ ಕೊಟ್ಟಾದರೂ ತೀರಿಸುತ್ತೇನೆ” ಅಂದ ವಸಂತಣ್ಣ. “ಅಯ್ಯೋ ಅಷ್ಟೆಲ್ಲಾ ದೊಡ್ಡ ಮಾತಾಡಬೇಡ ವಸಂತಣ್ಣ. ನೀನೇನು ನನಗೆ ಹೊರಗಿನವನಾ?” ಎಂದು ಹೇಳಿದ ನಾನು ಯಾವತ್ತಿನಂತೆ ಚಾ ಕುಡಿದು ಹೋಟೆಲಿನಿಂದ ಮನೆಗೆ ಬಂದೆ.
ಇದಾಗಿ ಮೂರು ತಿಂಗಳ ನಂತರ ವಸಂತಣ್ಣನ ಮಗಳು ರಂಜಿತಾಳ ವಿವಾಹ ನಡೆದುಹೋಗಿತ್ತು. ನಾನೂ ಮದುವೆಗೆ ಹೋಗಿದ್ದೆ. ಹುಡುಗ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕ. ಈ ವಿಷಯವನ್ನು ಕೇಳಿ, ಇಷ್ಟು ವಿದ್ಯಾವಂತನಾಗಿದ್ದರೂ ಕೂಡಾ ಈತ ವರದಕ್ಷಿಣೆ ತೆಗೆದುಕೊಂಡು ಮದುವೆಯಾಗುತ್ತಿದ್ದಾನಲ್ಲ ಎಂದು ನನಗೆ ಅನಿಸಿತ್ತು. ಪ್ರಪಂಚ ಎಷ್ಟೇ ಮುಂದುವರಿದ್ದರೂ ಈ ವರದಕ್ಷಿಣೆ ಎಂಬ ಪೆಡಂಭೂತವನ್ನು ನಾಶ ಮಾಡಲು ಯಾವ ಅಸ್ತ್ರವೂ ಇಲ್ಲವಲ್ಲ ಅನಿಸಿತ್ತು ನನಗೆ.
ವಸಂತಣ್ಣ ಚೆನ್ನಾಗಿಯೇ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾನೆ. ಅವನ ಕಣ್ಣುಗಳಲ್ಲಿ ನೂರು ನಕ್ಷತ್ರಗಳು ಹೊಳೆಯುವಂತೆ ಕಾಣುತ್ತಿದೆ. ಮಗಳ ಮದುವೆ ಸುಸೂತ್ರವಾಗಿ ನಡೆದು ತನ್ನ ಭಾರ ಕಡಿಮೆಯಾಯಿತಲ್ಲ ಎಂಬ ಸಂತೋಷ ವಸಂತಣ್ಣನಿಗೆ. ಅವನ ಸಂತೋಷ ಕಂಡು ನನಗೂ ಸಂತೋಷವಾಗಿ ಹೋಗಿತ್ತು.
ಮೂರು ತಿಂಗಳ ನಂತರ-
ಬ್ಯಾಂಕ್ ಕೆಲಸ ಮುಗಿಸಿಕೊಂಡು ಮನೆಗೆ ಬಂದೆ. ಹೆಂಡತಿ ಯಾಕೋ ಮಂಕಾಗಿದ್ದಾಳೆ. “ಏನಾಯಿತೇ? ಯಾಕೆ ಒಂಥರಾ ಇದ್ದೀಯಾ?” ಅಂದೆ. “ರೀ ವಸಂತಣ್ಣನ ಮಗಳು ರಂಜಿತಾ ಇದ್ದಾಳಲ್ಲಾ, ಅವಳ ಗಂಡ ತೀರಿಕೊಂಡನಂತೆ” ಎಂದಳು.
ನನಗೆ ನಂಬಲಾಗಲಿಲ್ಲ. ಒಮ್ಮೆಲೇ ಸಿಡಿಲೆರಗಿದಂತಾಗಿತ್ತು. “ಏನಾಗಿತ್ತಂತೆ?” ಅಂದೆ. “ಮೊದಲೇ ಅವನಿಗೆ ಹೃದಯದ ಸಮಸ್ಯೆ ಇತ್ತಂತೆ. ಆದರೆ ಈ ವಿಷಯವನ್ನು ಮುಚ್ಚಿಟ್ಟು ಮದುವೆಯಾಗಿದ್ದಾರೆ” ಅಂದಳು.
“ಸರಿ, ನಾನು ಅವರ ಮನೆಗೆ ಹೋಗಿ ಬರುತ್ತೇನೆ” ಅಂದ ನಾನು, ಆತುರಾತುರವಾಗಿ ಹೊರಟು ರಂಜಿತಾಳ ಗಂಡನ ಮನೆಗೆ ಬಂದೆ.
ಸಂಬಂಧಿಕರೆಲ್ಲಾ ಅಳುತ್ತಿದ್ದಾರೆ. ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಇನ್ನೂ ಕೆಲವರು “ಸೊಸೆ ಕಾಲಿಟ್ಟದ್ದೇ ಗಂಡನನ್ನು ಬಲಿ ತೆಗೆದುಕೊಂಡಳು” ಎಂದು ಮಾತನಾಡಿಕೊಳ್ಳುತ್ತಿದ್ದರು. ಮೊದಲೇ ಹೃದಯದ ಸಮಸ್ಯೆ ಇದ್ದವನು ಸಾಯುವುದಕ್ಕೂ, ಸೊಸೆ ಮನೆ ಪ್ರವೇಶಿಸಿದಕ್ಕೂ ಏನು ಸಂಬಂಧ ಎಂದು ನನಗೆ ಅರ್‍ಥವಾಗಲಿಲ್ಲ. ವಸಂತಣ್ಣನಿಗೆ ಸಮಾಧಾನ ಹೇಳಿ ಬೇಸರ ತುಂಬಿದ ಮನಸ್ಸಿನಿಂದಲೇ ಮನೆಗೆ ಮರಳಿದೆ.
ಇದಾಗಿ ಸುಮಾರು ಎಂಟು ತಿಂಗಳುಗಳೇ ಕಳೆದಿತ್ತು. ವಸಂತಣ್ಣನಿಗೆ ಮೊದಲ ಉತ್ಸಾಹ ಇರಲಿಲ್ಲ. ಅವನ ಕಳೆಗುಂದಿದ ಮುಖ ಕಂಡು ಸಾಲವನ್ನು ವಾಪಸ್ಸು ಕೇಳುವ ಮನಸ್ಸು ನನಗಾಗಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ವಸಂತಣ್ಣನೇ “ರಮೇಶಣ್ಣ ನಿನ್ನಿಂದ ತೆಗೆದುಕೊಂಡ ಸಾಲವನ್ನು ಸದ್ಯದಲ್ಲೇ ತೀರಿಸುತ್ತೇನೆ.” ಅಂದ. “ಪರವಾಗಿಲ್ಲ ವಸಂತಣ್ಣ, ನಿನಗಾದಾಗ ತೀರಿಸುವಿಯಂತೆ” ಅಂದೆ.
ಒಂದು ತಿಂಗಳ ನಂತರ,
ಬ್ಯಾಂಕು ಮುಗಿಸಿಕೊಂಡು ಮನೆಗೆ ಹೊರಟಿದ್ದೇನೆ. ದಾರಿಯಲ್ಲಿ ಅಂಗಡಿ ಪ್ರಶಾಂತ ಸಿಕ್ಕಿದ. “ರಮೇಶಣ್ಣ, ನಿನಗೆ ವಿಷಯ ಗೊತ್ತಾಗಲಿಲ್ಲವಾ? ಹೋಟೆಲ್ ವಸಂತಣ್ಣ ಕಿಡ್ನಿ ಪ್ರಾಲ್ಲಂ ಆಗಿ ತೀರ್‍ಕೊಂಡ್ನಂತೆ” ಅಂದ.
ನನಗೆ ನೆಲವೇ ಕುಸಿದಂತಾಯಿತು. “ಯಾ…ರು? ಯಾ……ವ ವಸ…..ಂತಣ್ಣ? ನಿನಗೆ ಸ…ರಿ….ಯಾಗಿ ಗೊತ್ತಿದೆಯಾ?” ನನ್ನ ನಾಲಿಗೆ ನನಗರಿವಿಲ್ಲದೆಯೇ ತಡವರಿಸತೊಡಗಿತ್ತು.
“ಹೇ! ಹೌದು ರಮೇಶಣ್ಣ. ನಾನು ಅಲ್ಲಿಗೇ ಹೋಗ್ತಿದ್ದೇನೆ” ಅಂದ ಪ್ರಶಾಂತ. ನಾನೂ ಅವನೊಂದಿಗೆ ವಸಂತಣ್ಣನ ಮನೆಗೆ ಹೊರಟೆ. ವಸಂತಣ್ಣನಿಗೆ ಕುಡಿತದ ಚಟ ಇರಲಿಲ್ಲ. ಬೇರೆ ಯಾವ ದುರಭ್ಯಾಸಗಳೂ ಇಲ್ಲ. ಹಾಗಿದ್ದರೂ ಕೂಡಾ ಕಿಡ್ನಿ ಪ್ರಾಬ್ಲಂನಿಂದಾಗಿ ತೀರಿಕೊಂಡನೆಂದರೆ ಏನರ್‍ಥ? ಈ ಪ್ರಶ್ನೆ ನನ್ನ ತಲೆ ಕೊರೆಯುತ್ತಿತ್ತು.
ನಾನು ಮತ್ತು ಪ್ರಶಾಂತ ವಸಂತಣ್ಣನ ಮನೆಗೆ ತಲುಪಿದೆವು. ಊರಿನವರೆಲ್ಲ ಬಂದು ಸೇರಿದ್ದಾರೆ. ವಸಂತಣ್ಣನ ಹೆಂಡತಿ ಮಕ್ಕಳ ಅಳು ಮೇರೆ ಮೀರಿತ್ತು. ಅವರೆಲ್ಲಾ ಈಗ ಅನಾಥರಾಗಿ ಹೋಗಿದ್ದಾರೆ. ವಸಂತಣ್ಣನ ಹೆಣವನ್ನು ಸಾಗಿಸುವಾಗ ನಾನೂ ಕೂಡಾ ಚಟ್ಟಕ್ಕೆ ಹೆಗಲು ಕೊಟ್ಟೆ. ಆತನ ಅಂತ್ಯಸಂಸ್ಕಾರವನ್ನೆಲ್ಲಾ ಮುಗಿಸಿ ಮನೆಗೆ ಬಂದೆ.
ಇದಾಗ ಒಂದು ವಾರವಿಡೀ ನನಗೆ ನೆಮ್ಮದಿ ಎಂಬುವುದೇ ಇಲ್ಲ. ವಸಂತಣ್ಣ ಆವಾಗಾವಾಗ ನೆನಪಾಗುತ್ತಿದ್ದ. ಅವನ ಮಾತು, ನಗು, ಅವನು ಮಾಡಿಕೊಡುತ್ತಿದ್ದ ಚಹಾದ ರುಚಿ ಇದೆಲ್ಲಾ ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಕೆಲವೊಮ್ಮೆ ನನಗರಿವಿಲ್ಲದೆ ಕಣ್ಣೀರು ಹರಿಯುತ್ತಿತ್ತು.
ಇದಾಗಿ ಒಂದು ವಾರ ಕಳೆದಿತ್ತು. ಭಾನುವಾರವಾದ್ದರಿಂದ ನಾನು ಮನೆಯಲ್ಲೇ ಇದ್ದೆ. ವಸಂತಣ್ಣನ ಹೆಂಡತಿ ಮನೆಗೆ ಬಂದಿದ್ದಳು. ಅವಳ ಮುಖದಲ್ಲಿ ಇನ್ನೂ ದುಃಖದ ಛಾಯೆ ಹಾಗೇ ಉಳಿದಿತ್ತು.
“ನಮ್ಮ ಯಜಮಾನರು ನಿಮಗೆ ಒಂದು ಲಕ್ಷ ರೂಪಾಯಿ ಸಾಲ ಕೊಡಬೇಕಿತ್ತಲ್ಲ. ಅದನ್ನು ಕೊಡುವುದಕ್ಕೆ ನಾನು ಬಂದದ್ದು ರಮೇಶಣ್ಣ” ನಾನು ಮಾತನಾಡುವುದಕ್ಕೂ ಮೊದಲು ಅವಳೇ ಆತುರಾತುರವಾಗಿ ನುಡಿದಳು.
“ಅಲ್ಲಮ್ಮ, ಅಷ್ಟೊಂದು ಹಣ ನಿನ್ನಲ್ಲಿ ಎಲ್ಲಿಂದ ಬಂತು?” ಅಂದೆ.
“ನಿಮ್ಮ ಸಾಲವನ್ನು ತೀರಿಸುವುದಕ್ಕಾಗಿ ಅವರು ಕಿಡ್ನಿಯನ್ನು ದಾನ ಮಾಡಿ ೧ ಲಕ್ಷ ಹಣವನ್ನು ಪಡೆದುಕೊಂಡು ಅದನ್ನು ಕಪಾಟಲ್ಲಿರಿಸಿದ್ದರು. ಜೊತೆಗೆ ಈ ಹಣವನ್ನು ನಿಮಗೆ ಕೊಡಬೇಕೆಂದು ಚೀಟಿಯನ್ನೂ ಬರೆದಿಟ್ಟಿದ್ದರು” ಅಂದಳು. ಅಷ್ಟು ಹೇಳುವಷ್ಟರಲ್ಲಿ ಅವಳ ಕಣ್ಣು ತೇವವಾಗಿತ್ತು. ಹಣವನ್ನು ನನ್ನ ಕೈಯಲ್ಲಿಟ್ಟು ಅವಳು ತೆರಳಿದ್ದಳು.
ನಾನು ದಿಕ್ಕುತೋಚದವನಂತೆ ಕುಳಿತಿದ್ದೆ. ಸಾಲ ತೆಗೆದುಕೊಳ್ಳುವಾಗ ವಸಂತಣ್ಣ ಹೇಳಿದ ಮಾತು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. “ರಮೇಶಣ್ಣ, ನಿನ್ನ ಈ ಋಣವನ್ನು ನನ್ನ ಪ್ರಾಣ ಕೊಟ್ಟಾದರೂ ತೀರಿಸುತ್ತೇನೆ….”
*****