ಕ್ಷಮೆ

ಕ್ಷಮೆ

ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ ಮಾತನಾಡಲು ಬರುತ್ತಿತ್ತು. ಆದರೆ ಮಲೆಯಾಳಂ ಭಾಷೆ ಸ್ವಲ್ಪವೂ ಬರುತ್ತಿರಲಿಲ್ಲ. ಕೆಲಸ ಮಾಡುತ್ತಿದ್ದ ಕಂಪನಿಯ ಶಾಖೆಗಳು ಭಾರತದಾದ್ಯಂತ ಇದ್ದುದ್ದರಿಂದ ಬೇರೆ ಬೇರೆ ನಗರಗಳಿಗೆ ಹೋಗಿ ಬರುವ ಅವಕಾಶ ಸಿಕ್ಕಿತ್ತು. ಹಾಗೆ ಬೇರೆ ಬೇರೆ ನಗರಗಳಿಗೆ ಹೋದಾಗ ಆಫೀಸಿನ ಕೆಲಸ ಮುಗಿದ ಮೇಲೆ ಆಯಾನಗರಗಳ ಪ್ರೇಕ್ಷಣೀಯ ಸ್ಥಳಗಳಿಗೆ ಮತ್ತು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದ. ಕೆಲವೊಮ್ಮೆ ಸಂಬಂಧಿಕರ ಮನೆಗಳಿಗೆ ಮತ್ತು ಗೆಳೆಯರ ಮನೆಗಳಿಗೆ ಹೋಗಿ ಬರುತ್ತಿದ್ದ. ಅದರಿಂದ ಅವನಿಗೆ ಬಹಳ ಸಂತೋಷ ಮತ್ತು ಸಮಾಧಾನ ಆಗುತ್ತಿತ್ತು.

ಇದೇ ಪ್ರಕಾರ ಒಮ್ಮೆ ಕೇರಳದ ತ್ರಿಚ್ಚೂರಿಗೆ ಹೋಗುವ ಅವಕಾಶ ಸಿಕ್ಕಿತು. ತ್ರಿಚ್ಚೂರಿಗೆ ಹೋದಾಗ ಕೇರಳದ ರಾಜಧಾನಿ ತಿರುವನಂತಪುರಂ ಅಥವಾ ತ್ರಿವೇಂಡ್ರಮ್‌ಗೆ ಹೋಗಿ ಬರಲು ಯೋಚಿಸಿದ. ಅದಕ್ಕೆ ಮುಖ್ಯ ಕಾರಣ ಇವನ ಬಾಲ್ಯ ಸ್ನೇಹಿತ ಮೋಹನ್ ತಿರುವನಂತಪುರಂನಲ್ಲಿದ್ದನು, ತಿರುವನಂತಪುರಕ್ಕೆ ಹೋದರೆ ಮೋಹನನ್ನು ನೋಡಿ ಬರಬಹುದು. ಹಾಗೆಯೇ ಸುಪ್ರಸಿದ್ದ ಅನಂತಪದ್ಮನಾಭ ಸ್ವಾಮಿ ದೇವಾಲಯವನ್ನು ನೋಡಿ ಬರಬಹುದೆಂದು ಯೋಚಿಸಿದ. ತ್ರಿಚ್ಚೂರ್‌ನಿಂದ ಮೋಹನ್‌ಗೆ ದೂರವಾಣಿ ಕರೆ ಮಾಡಿ ಮಾತನಾಡಿದ. ಬಾಲ್ಯ ಸ್ನೇಹಿತ ಸುಂದರರಾಜ ತನ್ನ ಮನೆಗೆ ಬರುವುದು ಮೋಹನನಿಗೂ ಬಹಳ ಸಂತೋಷವಾಗಿತ್ತು. ಮೋಹನ್ ಕೂಡಾ ಮೂಲತಃ ಬೆಂಗಳೂರಿನವನೇ, ತಿರುವನಂತಪುರದಲ್ಲಿ ನೌಕರಿ ಸಿಕ್ಕಿದ್ದರಿಂದ, ಅಲ್ಲಿಯೇ ಒಂದು ಬಾಡಿಗೆ ಮನೆ ತೆಗೆದುಕೊಂಡು ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ವಾಸಿಸುತ್ತಿದ್ದ. ಮಗ ರಾಜೇಶ್ ಅಲ್ಲಿಯೇ ಹತ್ತಿರದ ಶಾಲೆಯಲ್ಲಿ ಮೊದಲನೆ ತರಗತಿಯಲ್ಲಿ ಓದುತ್ತಿದ್ದ.

ಸುಂದರ್ ತಿರುವನಂತಪುರಕ್ಕೆ ಹೇಗೆ ಬರುವುದು ತ್ರಿಚ್ಚೂರ್‌ನಿಂದ ಎಷ್ಟು ಗಂಟೆಗಳ ಪ್ರಯಾಣ? ಬಸ್‌ ನಿಲ್ದಾಣದಿಂದ ಮೋಹನನ ಮನೆಗೆ ಹೇಗೆ ಬರುವುದು! ಎಲ್ಲಾ ವಿಷಯಗಳನ್ನು ಮೋಹನನಿಂದ ಕೇಳಿ ತಿಳಿದುಕೊಂಡ. ತ್ರಿಚ್ಚೂರಿನಿಂದ ಐದಾರು ಗಂಟೆಗಳ ಪ್ರಯಾಣವಾದುದರಿಂದ ರಾತ್ರಿ ಊಟ ಮಾಡಿ ಹತ್ತುಗಂಟೆಯ ಬಳಿಕ ತಿರುವನಂತಪುರಕ್ಕೆ ಹೊರಡುವುದಾಗಿ ನಿರ್ಧರಿಸಿದ. ಹೋಟೆಲಿನ ರೂಮು ಖಾಲಿ ಮಾಡಿ, ಬಸ್ ನಿಲ್ದಾಣಕ್ಕೆ ಹೋಗಿ ನೋಡಿದರೆ ನಾಲ್ಕಾರು ಬಸ್ಸುಗಳು ತಿರುವನಂತಪುರಕ್ಕೆ ಹೊರಡಲು ಸಿದ್ಧವಾಗಿ ನಿಂತಿದ್ದವು.

ಬಸ್ಸಿನ ಏಜೆಂಟರು ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರನ್ನು ಮಾತನಾಡಿಸಿ, ಎಲ್ಲಿಗೆ ಹೋಗಬೇಕು? ಎಷ್ಟು ಜನ ಇದ್ದೀರಿ? ಒಳ್ಳೆಯ ಪುಷ್ ಬ್ಯಾಕ್ ಸೀಟುಗಳಿರುವ ಒಳ್ಳೆಯ ಎ.ಸಿ. ಕೋಚ್‌ಗಳಿವೆ ಬನ್ನಿ ಬನ್ನಿ ಎಂದು ಕರೆಯುತ್ತಿದ್ದರು. ಸುಂದರ್ ಯೋಚಿಸಿದ. ಈಗಿನ್ನೂ ಒಂಭತ್ತು ಗಂಟೆಯಾಗಿದೆ. ಈಗಲೇ ಹೊರಟುಬಿಟ್ಟರೇ ಬೆಳಗಿನ ಜಾವ ಮೂರುಗಂಟೆಗೆಲ್ಲಾ ತಿರುವನಂತಪುರ ತಲುಪಬಹುದು. ಮನೆಗೆ ಹೋಗಿ ಎರಡು ಅಥವಾ ಮೂರು ಗಂಟೆಗಳ ಕಾಲ ವಿಶ್ರಾಂತಿ ಮಾಡಬಹುದು. ಆಮೇಲೆದ್ದು ನಿಧಾನವಾಗಿ ಸ್ನಾನ ಮಾಡಿ, ತಿಂಡಿ ತಿಂದು ತಿರುಗಾಡಲು ಹೊರಡಬಹುದು. ಅಷ್ಟರಲ್ಲಿ ಒಬ್ಬ ಮುದುಕ, ಬಸ್ ಏಜೆಂಟ್ ಬಂದು ತಿರುವನಂತಪುರಂ ಬಸ್ ರೆಡಿ ಇದೆ ಬನ್ನಿ ಎಂದು ಇವನ ಕೈ ಹಿಡಿದುಕೊಂಡು ಬಲವಂತವಾಗಿ ಒಂದು ಎ.ಸಿ. ಬಸ್ಸಿನ ಬಳಿ ಕರೆದುಕೊಂಡು ಹೋದ, ಸರಿ ಹೊರಟುಬಿಡೋಣ ಎಂದು ಸುಂದರ್ ಬಸ್ಸು ಹತ್ತಿದ. ಆಸನಗಳು ಬಹಳ ಚೆನ್ನಾಗಿದ್ದವು. ಬಸ್ಸಿನಲ್ಲಿ ಎ.ಸಿ ಇತ್ತು ವಿಡಿಯೋದಲ್ಲಿ ಒಂದು ಮಲೆಯಾಳಿ ಸಿನಿಮಾ ಹಾಕಿದ್ದರು. ಸುಂದರ್‌ ಆರಾಮವಾಗಿ ಕುಳಿತು ಸಿನಿಮಾ ನೋಡತೊಡಗಿದ. ಒಂದು ಗಂಟೆಯ ಕಾಲದಲ್ಲಿ ಸಿನಿಮಾ ಮುಗಿಯಿತು. ಎಲ್ಲರೂ ನಿದ್ರೆಗೆ ಜಾರಿದರು. ಸುಂದರ್‌ ಕೂಡಾ ನಿದ್ರೆ ಮಾಡಿದ. ಬೆಳಗಿನ ಜಾವ ಕಂಡಕ್ಟರ್ ಟ್ರಿವಾಡ್ರಂ ಟ್ರಿವಾಡ್ರಂ ಎಂದು ಕೂಗಿದಾಗ ಎಲ್ಲರಿಗೂ ಎಚ್ಚರವಾಯಿತು. ದಡಬಿಡಿಸಿ ಎದ್ದು ತನ್ನ ಚೀಲ ತೆಗೆದುಕೊಂಡು ಬಸ್ಸಿನಿಂದ ಇಳಿದು ಹೊರಬಂದ, ಕೈ ಗಡಿಯಾರ ನೋಡಿದರೆ ಗಂಟೆ ಇನ್ನೂ ಎರಡೂವರೆಯಾಗಿತ್ತು. ಆಟೋ ರಿಕ್ಷಾ ಡ್ರೈವರ್‌ಗಳು ಬಂದು ಆಟೋ ಸಾರ್, ಆಟೋ ಸಾರ್ ಎಂದು ಕೂಗ ತೊಡಗಿದರು. ಸುಂದರ್ ಒಂದು ಆಟೋ ಹತ್ತಿ ಕುಳಿತು ಮೋಹನನ ಮನೆಯ ವಿಳಾಸ ತಿಳಿಸಿದ. ಆಟೋದವನು ಹದಿನೈದು ನಿಮಿಷಗಳಲ್ಲಿ ಇವನು ಹೇಳಿದ ವಿಳಾಸ ತಲುಪಿಸಿದ. ಆಗಿನ ಕಾಲದಲ್ಲಿ ಬಹುಮಹಡಿ ಸಂಕೀರ್ಣಗಳು ಬಹಳ ಕಡಿಮೆ ಇದ್ದವು. ಮೋಹನ್ ಇದ್ದ ಮನೆ ವಿಶಾಲವಾದ ಕಾಂಪೌಂಡ್ ಇದ್ದ ಮನೆಯಾಗಿತ್ತು. ಮನೆಯ ಸುತ್ತಾ ಹೂದೋಟವಿತ್ತು. ಕೆಳಗೊಂದು ಮನೆ, ಮಹಡಿಯಲ್ಲೊಂದು ಮನೆ ಅಷ್ಟೇ. ಮೋಹನ್ ಮಹಡಿ ಮನೆಯಲ್ಲಿ ಬಾಡಿಗೆಗೆ ಇದ್ದ. ಕೆಳಗಿನ ಮನೆಯಲ್ಲಿ ಮನೆಯ ಮಾಲೀಕರಿದ್ದರು.

ಸುಂದರ್ ಆಟೋದಿಂದಿಳಿದು ಆಟೋದವರಿಗೆ ಹಣ ಕೊಟ್ಟು ಕಳಿಸಿದ. ಗೇಟು ತೆಗೆಯಲು ನೋಡಿದರೆ, ಗೇಟಿಗೆ ಬೀಗ ಹಾಕಿದೆ!’ ಗೇಟಿನ ಬಳಿ ಬೆಲ್ ಇಲ್ಲ. ಒಂದೆರಡು ಸಲ ಬೀಗ ಅಲ್ಲಾಡಿಸಿ ತಟ್ಟಿದ, ಯಾರೂ ಬರಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೆ ನಿಂತು ಯೋಚಿಸಿದ. ಮತ್ತೆ ಚಿಲಕ ಹಿಡಿದು ತಟ್ಟಿದ. ಮೋಹನ್ ಎಂದು ಕೂಗಿದ. ಹೀಗೆಯೇ ಎಷ್ಟೋ ಸಲ ಕೂಗಿದ ಸುಸ್ತಾಗಿ ಹೋಯಿತು. ಯಾರೂ ಬರಲಿಲ್ಲ. ಏನು ಮಾಡುವುದೆಂದು ತೋಚದೆ ಗೇಟಿನ ಮುಂದೆ ನೆಲದ ಮೇಲೆಯೇ ಕುಳಿತ. ಬೆಳಗಿನ ಜಾವ ಚಳಿ ತಡೆಯಲಾಗಲಿಲ್ಲ. ಒಂದು ಯೋಚನೆ ಬಂತು ಗೇಟು ಹತ್ತಿ ಒಳಕ್ಕೆ ಜಿಗಿದರೆ ಹೇಗೆ? ಎಂದು. ಅದೊಂದೇ ದಾರಿ ಉಳಿದಿರುವುದು ಎಂದು ತನ್ನ ಲೆದರ್ ಬ್ಯಾಗನ್ನು ಹೆಗಲಿಗೇರಿಸಿ ನಿಧಾನವಾಗಿ ಗೇಟನ್ನು ಹತ್ತಿ ಒಳಗೆ ಜಿಗಿದ.

ಸುಂದರ್, ಮೋಹನನ ಮನೆಗೆ ಇದೇ ಮೊದಲ ಸಲ ಬರುತ್ತಿರುವುದು. ಕೆಳಗಿನ ಮನೆಯೋ ಮೇಲಿನ ಮನೆಯೋ ತಿಳಿಯದು. ಯಾವುದಕ್ಕೂ ಕೆಳಗಿನ ಮನೆಯಲ್ಲಿ ಹೋಗಿ ಕೇಳೋಣ. ಬಹುಶಃ ಅದೇ ಇರಬಹುದು. ಅದಲ್ಲದಿದ್ದರೆ ಮೇಲಿನ ಮನೆ ಎಂದು ಅವರೇ ಹೇಳುತ್ತಾರೆ. ಕೆಳಗಿನ ಮನೆಗೆ ಹೋಗಿ ಕರೆಗಂಟೆ ಒತ್ತಿದ. ಡಬ ಡಬ, ಬಾಗಿಲು ಬಡಿದ. ಹೀಗೆಯೇ ಹತ್ತಾರು ಸಲ ಬಡಿದ ಮೇಲೆ ಮನೆಯ ಒಳಗಡೆ ದೀಪಗಳು ಹತ್ತಿದವು. ಒಳಗಡೆಯಿಂದಲೇ ಯಾರು? ಯಾರು? ಎಂದು ಮಲಯಾಳಿ ಭಾಷೆಯಲ್ಲಿ ಕೇಳಿದರು. ಇವನು ಮೋಹನ್ ಇದ್ದಾರೆಯೇ? ನಾನು ಮೋಹನ್ ಫ್ರೆಂಡು, ಬೆಂಗಳೂರಿನಿಂದ ಬಂದಿದ್ದೇನೆ ಎಂದ ತಮಿಳಿನಲ್ಲಿ. ಕಡೆಗೆ ಒಂದು ಕಿಟಕಿ ತೆರೆದು ಒಳಗಿನಿಂದಲೇ ಮಾತನಾಡಿದರು. ಸುಮಾರು ಐವತ್ತೈದು ವರ್ಷದ ಒಬ್ಬ ಮನುಷ್ಯ ಕನ್ನಡಕ ಏರಿಸಿ, ಅತ್ಯಂತ ಗಾಬರಿಯಿಂದ “ಯಾರು ನೀನು? ಗೇಟಿಗೆ ಬೀಗ ಹಾಕಿದೆ ನೀನು ಹೇಗೆ ಬಂದೆ?” ಎಂದು ಗಾಬರಿಯಿಂದ ಕೇಳಿದ.

“ನಾನು ಸುಂದರ್, ಮೋಹನ್‌ನ ಗೆಳೆಯ ಬೆಂಗಳೂರಿನಿಂದ ಬಂದಿದ್ದೇನೆ ಮೋಹನ್‌ನ ನೋಡಬೇಕಿತ್ತು” ತಮಿಳಿನಲ್ಲಿಯೇ ಉತ್ತರಿಸಿದ. ಆ ಮನುಷ್ಯ ಮತ್ತು ಅವನ ಪತ್ನಿ ಮಲೆಯಾಳಿಯಲ್ಲಿ ಏನೇನೋ ಬಡ ಬಡಿಸಿದರು. ನಂತರ ಇವನು ಇಂಗ್ಲೀಷಿನಲ್ಲಿ ಹೇಳತೊಡಗಿದ. ಆ ಮನುಷ್ಯ ಕೂಡಾ ಇಂಗ್ಲೀಷಿನಲ್ಲಿ ಉತ್ತರಿಸಿದ.

“ಮೋಹನ್ ಇಲ್ಲ. ಯಾರೂ ಇಲ್ಲ. ಅವರೆಲ್ಲಾ ಬೆಂಗಳೂರಿಗೆ ಹೋಗಿದ್ದಾರೆ.”

“ಇಲ್ಲ ಸ್ವಾಮಿ, ನಾನು ಇವತ್ತೇ ಅವರ ಜೊತೆ ಟೆಲಿಫೋನಿನಲ್ಲಿ ಮಾತನಾಡಿ, ಇಲ್ಲಿಗೆ ಬರುವುದಾಗಿ ಹೇಳಿದೆ. ಖಂಡಿತ ಬನ್ನಿರಿ ಎಂದು ಅವರೇ ಹೇಳಿದ್ದಾರೆ” ಎಂದ ಸುಂದರ್.

ಆ ಮನುಷ್ಯ ಮತ್ತಷ್ಟು ವ್ಯಗ್ರನಾಗಿ ಹೇಳಿದ.

“ಸುಳ್ಳಿನ ಮೇಲೆ ಸುಳ್ಳು ಹೇಳ್ತಾ ಇದ್ದೀಯ. ಈ ಹೊತ್ತಿನಲ್ಲಿ ಬೆಂಗಳೂರಿನಿಂದ ಯಾವ ಬಸ್ಸೂ ಬರುವುದಿಲ್ಲ. ಎಲ್ಲಾ ಬಸ್ಸುಗಳೂ, ರೈಲುಗಳೂ ಬೆಳಗ್ಗೆ ಆರು ಗಂಟೆಯ ನಂತರವೇ ಬರುತ್ತವೆ. ಮತ್ತು ನೀನು ಮೋಹನ್‌ ಜೊತೆ ಟೆಲಿಫೋನಿನಲ್ಲಿ ಮಾತನಾಡಿದೆ ಎಂದು ಹೇಳಿದೆ. ಅವರ ಮನೆಯಲ್ಲಿ ಫೋನು ಇಲ್ಲವೇ ಇಲ್ಲ. ಯಾರು ಫೋನು ಮಾಡಿದರೂ ನಮ್ಮ ಮನೆಗೆ ಬಂದು ಮಾತನಾಡುತ್ತಾರೆ. ನೀನು ಹಸಿ ಸುಳ್ಳು ಹೇಳುತ್ತಿದ್ದೀಯ. ಸುಮ್ಮನೆ ಹೋಗು” ಎಂದರು.

ಇಲ್ಲಿ ಒಂದು ಮುಖ್ಯವಾದ ವಿಷಯವೆಂದರೆ, ಆಗಿನ ಕಾಲದಲ್ಲಿ ಅಂದರೆ, ಎಂಭತ್ತರ ಮತ್ತು ತೊಂಭತ್ತರ ದಶಕಗಳಲ್ಲಿ ಈಗಿರುವಂತೆ ಸೆಲ್ ಫೋನ್‌ಗಳು ಅಥವಾ ಮೊಬೈಲ್ ಫೋನ್‌ಗಳಾಗಲಿ ಇರಲಿಲ್ಲ. ಪೊಲೀಸರು ಮತ್ತು ಸೈನ್ಯದವರು ವಾಕಿಟಾಕಿ ಎಂಬ ಒಂದು ರೀತಿಯ ಕಾರ್ಡ್‌ಲೆಸ್‌ ಟೆಲಿಫೋನ್‌ಗಳನ್ನು ಬಳಸುತ್ತಿದ್ದರು. ಆದರೆ ಜನಸಾಮಾನ್ಯರು ಬಳಸುವ ಸೆಲ್ ಫೋನ್‌ಗಳು ಆಗಿನ ಕಾಲದಲ್ಲಿ ಇರಲೇ ಇಲ್ಲ. ಸೆಲ್ ಫೋನ್ ಇದ್ದಿದ್ದರೆ ಸುಂದರ್‌ಗೆ ಈ ಸಮಸ್ಯೆಯೇ ಆಗುತ್ತಿರಲಿಲ್ಲ.

ಸುಂದರ್‌ಗೆ ಏನು ಹೇಳುವುದೆಂದು ತೋಚಲಿಲ್ಲ. ಸ್ವಲ್ಪ ತಡೆದು ಹೇಳಿದ “ಇಲ್ಲ ಸ್ವಾಮಿ ನಾನು ಮೋಹನ್‌ ಆಫೀಸ್‌ಗೆ ಫೋನ್ ಮಾಡಿದ್ದೆ. ಬೇಕಾದರೆ ಫೋನ್ ನಂಬರ್ ಹೇಳ್ತೀನಿ ಎಂದು ತನ್ನ ಲೆದರ್ ಬ್ಯಾಗ್‌ನ ಜಿಪ್ ತೆಗೆದ. ಅವನಲ್ಲಿ ಬಂದೂಕ ತೆಗೆಯುತ್ತಾನೋ ಎಂದು ಹೆದರಿದ ಮನೆ ಮಾಲೀಕರು, ಕಿಟಕಿಯನ್ನು ಮುಚ್ಚಿದರು. ಒಳಗಿನಿಂದಲೇ ಹೋಗು ಹೋಗು ಎಂದರು. ಇವನು ಲೆದರ್ ಬ್ಯಾಗಿನ ಜಿಪ್ ಹಾಕಿ, ಮಹಡಿಯ ಕಡೆ ತಿರುಗಿ ಮೋಹನ್ ಮೋಹನ್ ಎಂದು ಕೂಗತೊಡಗಿದ ಮಹಡಿಯ ಮನೆಯಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ. ಕೆಳಗಿನ ಮನೆಯ ಕಿಟಕಿ ತೆರೆಯಿತು. ಆ ಮನುಷ್ಯ ಮತ್ತೆ ಕೂಗಾಡಿದ. “ಬೆಂಗಳೂರಿನಿಂದ ಬಂದಿದ್ದೀನಿ ಅಂತೀಯ, ಬೆಂಗಳೂರಿನಿಂದ ಈ ಹೊತ್ತಿನಲ್ಲಿ ಯಾವ ಬಸ್ಸೂ ಬರುವುದಿಲ್ಲ. ಸುಮ್ಮನೆ ಸುಳ್ಳು ಹೇಳಬೇಡ ಸುಮ್ಮನೆ ಹೊರಟು ಹೋಗು” ಎಂದ.

ಸುಂದರ್ ಸಮಾಧಾನ ಚಿತ್ತನಾಗಿ ಹೇಳಿದ “ಇಲ್ಲ ಸ್ವಾಮಿ ನಾನು ತ್ರಿಚ್ಚೂರಿನಿಂದ ರಾತ್ರಿ ಒಂಭತ್ತು ಗಂಟೆಗೆ ಹೊರಟು ಇಲ್ಲಿಗೆ ಬಂದೆ. ಬೆಂಗಳೂರಿನಿಂದ ಆಫೀಸ್ ಕೆಲಸದ ಮೇಲೆ ತ್ರಿಚ್ಚೂರಿಗೆ ಬಂದಿದ್ದೆ. ಹಾಗೇ ಸ್ನೇಹಿತನನ್ನು ನೋಡಿಕೊಂಡು ಹೋಗೋಣ ಅಂತ ಬಂದೆ.”

ಮನೆಯ ಮಾಲೀಕನಿಗೆ ಈ ಹುಡುಗ ಸುಳ್ಳು ಹೇಳುತ್ತಿದ್ದಾನೆಂದು ಖಾತ್ರಿಯಾಯಿತು.

“ಮತ್ತೆ ಸುಳ್ಳು ಹೇಳುತ್ತಿದ್ದೀಯ. ಆಗಲೇ ಬೆಂಗಳೂರಿನಿಂದ ಬಂದೆ ಎಂದು ಹೇಳಿದೆ. ಈಗ ತ್ರಿಚ್ಚೂರಿನಿಂದ ಬಂದೆ ಎನ್ನುತ್ತಿದ್ದೀಯ, ಸುಮ್ಮನೆ ಹೋಗು ಸರಿ ರಾತ್ರಿಯಲ್ಲಿ ಬಂದು ತೊಂದರೆ ಕೊಡಬೇಡ. ಇನ್ನು ನೀನು ಹೋಗದಿದ್ದರೆ ಪೊಲೀಸ್ ಚೌಕಿಗೆ ಫೋನ್ ಮಾಡಿ ಯಾರೋ ಕಳ್ಳ ನುಸುಳಿದ್ದಾನೆ ಅಂತ ಕಂಪ್ಲೇಂಟ್ ಕೊಡ್ತೀನಿ ನೋಡು.” ಎಂದು ಹೇಳಿ ರಪ್ಪನೆ ಕಿಟಕಿಯ ಬಾಗಿಲು ಹಾಕಿದ.

ಸುಂದರ್ ಇನ್ನೇನು ಮಾಡುವುದೆಂದು ತಿಳಿಯದೆ, ಮತ್ತೆ ಗೇಟಿನ ಮೇಲೆ ಏರಿ ಹೊರಕ್ಕೆ ಜಿಗಿದು ರಸ್ತೆಯುದ್ದಕ್ಕೂ ನಡೆಯತೊಡಗಿದ. ಆ ರಸ್ತೆಯ ಕೊನೆಯಲ್ಲಿ ಒಂದು ಬೀದಿ ಕೊಳಾಯಿ ಇತ್ತು. ಅದರ ಅಕ್ಕಪಕ್ಕದಲ್ಲಿ ಅಂಗಡಿಗಳಿದ್ದವು. ಆ ಹೊತ್ತಿನಲ್ಲಿ ಯಾವ ಅಂಗಡಿಗಳೂ ತೆರೆದಿರಲಿಲ್ಲ. ಆದ್ದರಿಂದ ಅಂಗಡಿಗಳ ಮುಂದಿನ ಜಗುಲಿಯ ಮೇಲೆ ಕುಳಿತ. ಕುಳಿತಲ್ಲೇ ಸ್ವಲ್ಪ ಮಂಪರು ಹತ್ತಿ ನಿದ್ರೆ ಬಂದಂತಾಯ್ತು. ಕುಳಿತಲ್ಲೇ ನಿದ್ರೆ ಮಾಡಿದ. ಇದ್ದಕ್ಕಿದ್ದಂತೆಯೇ ಶಬ್ದವಾಗಿ ಎಚ್ಚರವಾಯ್ತು. ಆಗಲೇ ಅಲ್ಲೊಂದು ಇಲ್ಲೊಂದು ವಾಹನಗಳು ಓಡಾಡುತ್ತಿದ್ದವು. ಸ್ವಲ್ಪ ಹೊತ್ತಿಗೆ ಕೊಳಾಯಿಯಲ್ಲಿ ಶಬ್ದ ಬಂದಿತು. ಸ್ವಲ್ಪ ಸ್ವಲ್ಪವೇ ನೀರು ಬರತೊಡಗಿತು. ಇವನು ಎದ್ದು ಹೋಗಿ ನಲ್ಲಿಯನ್ನು ಸರಿಯಾಗಿ ನಿಲ್ಲಿಸಲು ಪ್ರಯತ್ನಿಸಿದ. ನಲ್ಲಿ ಸರಿಯಿಲ್ಲದೆ ನೀರು ಸೋರಿ ಹೋಗುತ್ತಿತ್ತು. ನಲ್ಲಿ ತಿರುಗಿಸಿದ, ಧಾರಾಳವಾಗಿ ನೀರು ಬಂದಿತು. ಸ್ವಲ್ಪ ನೀರು ಕುಡಿದ. ಆರಾಮವಾಯಿತು. ಹಿಂದೆ ಕುಳಿತ ಸ್ಥಳದಲ್ಲಿಯೇ ಹೋಗಿ ಕುಳಿತ. ಹದಿನೈದು ನಿಮಿಷಗಳ ಬಳಿಕ ಎದ್ದು, ತನ್ನ ಬ್ಯಾಗಿನಿಂದ ಹಲ್ಲುಜ್ಜುವ ಬ್ರಶ್ ಮತ್ತು ಪೇಸ್ಟ್ ತೆಗೆದು ನಲ್ಲಿಯ ಬಳಿ ಹೋಗಿ ಹಲ್ಲುಜ್ಜಿ ಮುಖ ತೊಳೆದ ಟವೆಲ್ಲಿನಿಂದ ಮುಖ ಒರೆಸಿಕೊಂಡು ಕುಳಿತ. ರಸ್ತೆಯ ಇಕ್ಕೆಲಗಳಲ್ಲಿಯೂ ಅಂಗಡಿಗಳನ್ನು ತೆಗೆಯತೊಡಗಿದರು. ಮನೆಯ ಹೆಂಗಸರು ಬಾಗಿಲು ತೆರೆದು ಹೊರಬಂದು ಮನೆಯ ಮುಂದಿನ ಜಗುಲಿಗೆ ನೀರು ಹಾಕಿ ತೊಳೆದು, ಸಾರಿಸಿ ರಂಗೋಲಿ ಹಾಕತೊಡಗಿದರು. ಸುಂದರ್ ಅದೇ ರಸ್ತೆಯಲ್ಲಿ ಮತ್ತಷ್ಟು ದೂರ ನಡೆದ, ಅಲ್ಲೊಂದು ಚಹಾದಂಗಡಿ ತೆಗೆದಿತ್ತು. ನಾಲ್ಕಾರು ಜನ ನಿಂತು ಚಹಾ ಕುಡಿಯುತ್ತಿದ್ದರು. ಇವನೂ ಕೂಡಾ ಅಲ್ಲಿಗೆ ಹೋಗಿ ಚಹಾ ಕುಡಿದ. ಹಣ ಕೊಟ್ಟು ಹೊರಬಂದ. ಈಗೇನು ಮಾಡುವುದು? ಆ ಮನುಷ್ಯ ಹೇಳಿದಂತೆ ಮೋಹನ್ ಏನಾದರೂ ಬೆಂಗಳೂರಿಗೆ ಹೋಗಿಬಿಟ್ಟನೇ ಇರಲಿಕ್ಕಿಲ್ಲ. ನೆನ್ನೆ ತಾನೆ ನನ್ನೊಂದಿಗೆ ಫೋನಿನಲ್ಲಿ ಮಾತಾಡಿದ್ದಾನೆ. ಖಂಡಿತ ಇರುತ್ತಾನೆ. ಹೋಗಿ ನೋಡೋಣ ಇದ್ದರೆ ಸರಿ, ಇಲ್ಲದಿದ್ದರೆ ಏನಾಯಿತು ಬಂದ ದಾರಿಗೆ ಸುಂಕವಿಲ್ಲ ಅಂತ ಹೊರಟು ಬಿಡೋದು. ಯಾವುದಾದರೂ ಹೋಟೆಲಿನಲ್ಲಿ ಒಂದು ರೂಮು ಮಾಡೋದು. ಸ್ನಾನ ಮಾಡಿ, ತಿಂಡಿ ತಿಂದು ತಿರುವನಂತಪುರದ ಪ್ರಸಿದ್ಧ ದೇವಾಲಯ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ನೋಡಿ ವಸತಿಗೃಹದಲ್ಲಿ ವಿಶ್ರಾಂತಿ ಮಾಡಿ, ಸಂಜೆ ಯಾವುದಾದರೂ ಬಸ್ ಹತ್ತಿ ಬೆಂಗಳೂರಿಗೆ ಹೊರಡುವುದು. ಛೇ, ರಾತ್ರಿಯೇ ಈ ಕೆಲಸ ಮಾಡಬಹುದಿತ್ತಲ್ಲಾ! ಸುಮ್ಮನೆ ಆ ಮನುಷ್ಯನ ಹತ್ತಿರ ಹೋಗು ಹೋಗು ಎಂದೆನಿಸಿಕೊಂಡು ನಾಯಿಯ ಹಾಗೆ ಬೀದಿ ಬೀದಿ ಅಲೆದದ್ದಾಯಿತು. ಮನಸ್ಸಿಗೆ ತುಂಬಾ ಬೇಸರವಾಯಿತು. ಇದಕ್ಕೆಲ್ಲಾ ಈ ಮೋಹನನೇ ಕಾರಣ. ನಾನೆಷ್ಟು ಸಲ ಕಿರುಚಿದರೂ ಇವನು ಎದ್ದು ಬಾಗಿಲು ತೆಗೆಯಲಿಲ್ಲ. ಆ ಮನುಷ್ಯ ಎದ್ದು ಬಂದು ನನ್ನನ್ನು ಅವಮಾನಿಸಿದ ಮತ್ತು ನಾನು ಈ ರೀತಿ ನಾಯಿಯಂತೆ ಬೀದಿ ಬೀದಿ ಅಲೆಯುವಂತಾಯ್ತು! ನಿಧಾನವಾಗಿ ಮೋಹನನ ಮನೆಯ ಕಡೆಗೆ ಹೆಜ್ಜೆ ಹಾಕಿದ. ಗೇಟಿನ ಬಳಿ ಹೋಗಿ ನೋಡಿದಾಗ ಗೇಟಿನ ಬೀಗ ತೆಗೆದಿತ್ತು. ಆದರೆ ಮನೆಯ ಮಾಲೀಕರ ಮನೆ ಬಾಗಿಲು ಹಾಕಿತ್ತು. ಸಧ್ಯ ಒಳ್ಳೆಯದೇ ಆಯಿತೆಂದು ಇವನು ಮಹಡಿಯ ಮೆಟ್ಟಿಲಿನ ಬಳಿ ನಡೆದ, ನೋಡಿದರೆ ಅಲ್ಲೊಂದು ಸಣ್ಣ ಗೇಟು, ಆ ಗೇಟಿಗೆ ಬೀಗ ಹಾಕಿದೆ! ಈಗೇನು ಮಾಡುವುದು?

ಸುಂದರ್‌ ಮತ್ತೆ ಮೋಹನ್… ಮೋಹನ್…. ಎಂದು ಕೂಗಿದ. ಮೋಹನ್ ಬರಲಿಲ್ಲ. ಮತ್ತೆ ಮನೆಯ ಮಾಲೀಕನೇ ಬಂದ, ಸುಂದರ್‌ನನ್ನು ನೋಡಿ ಗಾಬರಿಯಾದ!

“ಏಯ್ ನೀನು ಇಲ್ಲೇ ಇದ್ದೀಯಾ? ಹೋಗು ಅಂದರೆ ನಿನಗೆ ಅರ್ಥ ಆಗಲ್ವಾ? ಸುಮ್ಮನೆ ಹೋಗ್ತಿಯಾ ಇಲ್ಲ ಪೊಲೀಸರನ್ನು ಕರೆಸಿ ನಿನ್ನನ್ನು ಅರೆಸ್ಟ್ ಮಾಡಿಸಲಾ?” ಎಂದು ಜೋರು ಜೋರಾಗಿ ಕಿರುಚಾಡಿದ. ನಂತರ ಪಕ್ಕದ ಮನೆಯವರನ್ನು ಕರೆದ. ಅವರೂ ಬಂದರು. ರಸ್ತೆಯಲ್ಲಿ ಹೋಗುತ್ತಿದ್ದ ನಾಲ್ಕಾರು ಜನ ನಿಂತು ಇಲ್ಲೇನು ತಮಾಷೆ ನಡೆಯುತ್ತಿದೆ ಎಂದು ನೋಡ ತೊಡಗಿದರು. ಸುಂದರನಿಗೆ ಬಹಳ ಬೇಸರವಾಯಿತು. ಕೋಪವೂ ಬಂತು. ಪಕ್ಕದ ಮನೆಯವರ ಬಳಿ ಹೇಳಿದ.

“ನೋಡಿ ನಾನು ಮೋಹನ್‌ನ ಸ್ನೇಹಿತ, ಬೆಂಗಳೂರಿನಿಂದ ಬಂದಿದ್ದೇನೆ. ಬೆಳಗಿನ ಜಾವ ಮೂರು ಗಂಟೆಗೆ ಬಂದೆ. ಇವರು ನನ್ನನ್ನು ಮಹಡಿ ಮೇಲೆ ಹೋಗೋದಕ್ಕೇ ಬಿಡಲಿಲ್ಲ. ನಾನೊಬ್ಬ ಕಳ್ಳನೇನೋ ಅನ್ನುವಂತೆ ನೋಡ್ತಿದಾರೆ! ನಾನು ರಾತ್ರಿ ಎಲ್ಲಾ ಬೀದಿ ಬೀದಿ ಅಲೆಯೋ ಹಾಗೆ ಮಾಡಿದರು. ಒಮ್ಮೆ ಅವರೇ ಮಹಡಿ ಮೇಲೆ ಹೋಗಿ ನೋಡಲಿ. ಮೋಹನ್ ಇದ್ದರೆ ನೋಡಿ ನಾನು ಬಂದಿರುವ ವಿಷಯ ತಿಳಿಸಲಿ. ಮೋಹನ್ ಇಲ್ಲ ಅಂತ ಖಾತ್ರಿಯಾದರೆ ನಾನು ಒಂದು ಕ್ಷಣ ಇಲ್ಲಿರೋದಿಲ್ಲ. ನನ್ನ ದಾರಿ ನಾನು ನೋಡಿಕೊಂಡು ಹೊರಟು ಹೋಗ್ತಿನಿ” ಎಂದ. ಇವನ ಮಾತು ಮುಗಿಯುವುದರೊಳಗೆ ಮನೆಯ ಮಾಲೀಕ ಏರುದನಿಯಲ್ಲಿ ಹೇಳಿದ.

“ಸುಳ್ಳು ಬರಿಯ ಸುಳ್ಳು ರಾತ್ರಿ ಎರಡು ಗಂಟೆಗೆ ಬೆಂಗಳೂರಿನಿಂದ ಯಾವ ಬಸ್ಸು ಬರುತ್ತೆ! ಮೋಹನ್ ಬೆಂಗಳೂರಿಗೆ ಹೋಗಿದ್ದಾರೆ. ಸುಮ್ಮನೆ ಹೋಗು ಅಂದರೆ ಇವನು ಹೋಗುತ್ತಿಲ್ಲ. ಇವನನ್ನು ಹಿಡಿಯಿರಿ ಪೊಲೀಸರಿಗೆ ಕೊಡೋಣ” ಎಂದನು.

ಇವರೆಲ್ಲರ ಏರುದನಿಯ ಮಾತು ಕೇಳಿ ಎಚ್ಚರಗೊಂಡ ಮೋಹನ್, ಮಹಡಿ ಇಳಿದು ಬಂದ, ಅವನು ಮಹಡಿ ಮೆಟ್ಟಿಲು ಇಳಿಯುತ್ತಿರುವುದನ್ನು ನೋಡಿದ ಸುಂದರ್ “ಮೋಹನ್, ಮೋಹನ್” ಎಂದು ಜೋರಾಗಿ ಕೂಗಿದ ನೆರೆದಿದ್ದ ಜನರೆಲ್ಲರೂ ಅತ್ತ ಕಡೆ ನೋಡಿದರು. ಇವನನ್ನು ನೋಡಿದವನೇ ಮೋಹನ್ ಕೇಳಿದ.

“ಹಲೋ ಸುಂದರ್ ಯಾವಾಗ ಬಂದೆ? ಇಲ್ಲಿ ಏನು ನಡೀತಾ ಇದೆ? ಯಾಕೆ ಇಷ್ಟೆಲ್ಲಾ ಜನ ಸೇರಿದಾರೆ?” ಎಂದು ಕೇಳಿ ಮಹಡಿ ಮೆಟ್ಟಿಲಿನ ಗೇಟಿಗೆ ಹಾಕಿದ್ದ ಬೀಗ ತೆಗೆದು ಇವರುಗಳ ಬಳಿಗೆ ಬಂದ, ಸುಂದರ್ ತುಂಬಾ ಬೇಸರ ವ್ಯಕ್ತಪಡಿಸುತ್ತಾ ಹೇಳಿದ.

“ನಾನು ಬೆಳಗಿನ ಜಾವ ಎರಡೂವರೆಗೆಲ್ಲಾ ಬಂದುಬಿಟ್ಟೆ ಮಾರಾಯಾ. ಇವರು ಮೋಹನ್ ಇಲ್ಲ, ಬೆಂಗಳೂರಿಗೆ ಹೋಗಿದ್ದಾರೆ ಅಂತ ಹೇಳಿದರು. ನಾನು ಹೇಳಿದೆ ನಿನ್ನೆ ಮಧ್ಯಾಹ್ನ ತಾನೆ ಅವರ ಜೊತೆ ಫೋನಿನಲ್ಲಿ ಮಾತಾಡಿದ್ದೀನಿ, ನಾನು ಇವತ್ತು ರಾತ್ರಿ ನಿಮ್ಮ ಮನೆಗೆ ಬರೋ ವಿಷಯ ಹೇಳಿದೀನಿ ಅಂತ ಹೇಳಿದೆ. “ಮೋಹನ್ ಮನೆಯಲ್ಲಿ ಫೋನೇ ಇಲ್ಲ ನೀನು ಸುಳ್ಳು ಹೇಳ್ತಿದೀಯ, ಸುಮ್ಮನೆ ಹೊರಟು ಹೋಗು. ಇಲ್ಲದಿದ್ದರೆ ನಿನ್ನನ್ನು ಪೊಲೀಸರಿಗೆ ಹಿಡಿದು ಕೊಡ್ತೀನಿ” ಅಂತ ಹೆದರಿಸಿ ಕಿರುಚಾಡಿ ಹೊರಕ್ಕೆ ಕಳಿಸಿದರು. ರಾತ್ರಿ ಎರಡೂವರೆಯಿಂದ ಇಷ್ಟು ಹೊತ್ತು ನಾಯಿಯಂತೆ ಬೀದಿ ಬೀದಿ ಅಲೆದು ಸುಸ್ತಾಗಿ ಬಂದರೆ ಇವರು ಮತ್ತೆ ನನ್ನನ್ನು ಕಳ್ಳ, ಮೋಸಗಾರ ಅಂತೆಲ್ಲಾ ಬೈದು, ಪೊಲೀಸರಿಗೆ ಹಿಡಿದು ಕೊಡ್ತೀನಿ ಅಂತಿದ್ದಾರೆ. ಸತ್ಯ ಏನು ಅಂತ ನೀನೇ ಹೇಳು ಮಾರಾಯಾ. ಇನ್ನು ನಾನು ಒಂದು ಕ್ಷಣ ಇಲ್ಲಿರೋದಿಲ್ಲ, ಎಲ್ಲಾದರೂ ಹಾಳಾಗಿ ಹೋಗ್ತಿನಿ, ಯಾಕಾದರೂ ಇಲ್ಲಿಗೆ ಬಂದೆನೋ….”

ಮೋಹನ್ ಗೆಳೆಯನನ್ನು ಸಮಾಧಾನ ಪಡಿಸಿದ. “ನೀನೇನೂ ಬೇಜಾರು ಮಾಡಿಕೋಬೇಡ ಸುಂದರ್, ನಾನು ಅವರಿಗೆ ತಿಳಿಸಿ ಹೇಳ್ತೀನಿ. ನಡೆ ಮನೆಯೊಳಕ್ಕೆ ಹೋಗೋಣ” ಎಂದು ಹೇಳಿ ಸುಂದರನ ಬ್ಯಾಗನ್ನು ತನ್ನ ಕೈಲಿ ತೆಗೆದುಕೊಂಡು, ಸುಂದರನ ಬೆನ್ನು ತಟ್ಟಿ ಸಮಾಧಾನ ಮಾಡಿದ. ಮನೆಯ ಮಾಲೀಕನ ಕಡೆ ತಿರುಗಿ ಮಲೆಯಾಳದಲ್ಲಿ ಹೇಳಿದ.

“ಇವನು ನನ್ನ ಬಾಲ್ಯ ಸ್ನೇಹಿತ ಸುಂದರ ರಾಜ್. ಬೆಂಗಳೂರಿನಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಇಂಜಿನಿಯರ್, ಆಫೀಸ್ ಕೆಲಸದ ಮೇಲೆ ತ್ರಿಚ್ಚೂರಿಗೆ ಬಂದಿದ್ದ, ಹಾಗೇ ತಿರುವನಂತಪುರಕ್ಕೆ ಬಂದು ನನ್ನನ್ನು ನೋಡಿಕೊಂಡು ಹೋಗೋಣ ಅಂತ ಬಂದಿದ್ದಾನೆ. ನಾನೇ ಅವನಿಗೆ ಮನೆಯ ವಿಳಾಸ ಕೊಟ್ಟಿದ್ದು, ನಿನ್ನೆ ಬೆಳಗ್ಗೆಯೇ ನಮ್ಮ ಆಫೀಸಿಗೆ ಫೋನ್ ಮಾಡಿ ಇವತ್ತು ಮುಂಜಾನೆ ಇಲ್ಲಿಗೆ ಬರುವುದಾಗಿ ತಿಳಿಸಿದ್ದ. ನೀವೇನು ಭಯ ಪಡಬೇಡಿ, ಅವನು ಕಳ್ಳನೂ ಅಲ್ಲ, ಮೋಸಗಾರನೂ ಅಲ್ಲ.”

“ಸರಿ ನೀನು ನಡಿ ಸುಂದರ್‌ ಮನೆಗೆ ಹೋಗೋಣ” ಎಂದು ಹೇಳಿ ಮಹಡಿಯ ಮೆಟ್ಟಿಲಿನಡೆಗೆ ಹೆಜ್ಜೆ ಹಾಕಿದ. ಮನೆಯ ಮಾಲೀಕ ಕಕ್ಕಾಬಿಕ್ಕಿಯಾದ, ನಿಧಾನವಾಗಿ ಮೋಹನನನ್ನು ಕೇಳಿದ.

“ನೀನು ಹೆಂಡತಿ, ಮಕ್ಕಳನ್ನು ಕರೆದುಕೊಂಡು ನಿನ್ನೆ ರಾತ್ರೀನೇ ಬೆಂಗಳೂರಿಗೆ ಹೋದೆಯಲ್ಲಾ?”

ಮೋಹನ್ ಮುಗುಳು ನಕ್ಕು ಹೇಳಿದ.

“ನಾನು ಹೋಗಲಿಲ್ಲ. ನಂಬೂದರಿ ಸಾರ್, ನನ್ನ ಹೆಂಡತಿ ಮತ್ತು ಮಕ್ಕಳನ್ನು ಬೆಂಗಳೂರಿಗೆ ಕಳಿಸಲು ರೈಲ್ವೆ ಸ್ಟೇಷನ್‌ಗೆ ಹೋಗಿದ್ದೆ ಅಷ್ಟೇ. ಅವರನ್ನು ರೈಲು ಹತ್ತಿಸಿ, ನಾನು ರಾತ್ರಿಯೇ ಮನೆಗೆ ಬಂದೆ.” ಇಷ್ಟು ಹೇಳಿ ಸುಂದರನನ್ನು ಕರೆದುಕೊಂಡು ಮೋಹನ್ ಮಹಡಿ ಹತ್ತಿದ. ನೆರೆದಿದ್ದ ಸುತ್ತ ಮುತ್ತಲಿನ ಜನರು ನಾಟಕ ಮುಗಿದು ಅಂಕದ ಪರದೆ ಜಾರಿದ ಮೇಲೆ ನಮಗಿನ್ನೇನು ಕೆಲಸ ಎಂಬಂತೆ ತಮ್ಮ ತಮ್ಮ ಮನೆಗಳಿಗೆ ಹೊರಟರು. ಮನೆಯ ಮಾಲೀಕ ನಂಬೂದರಿ ಮಾತ್ರ ತನ್ನ ಸೋಡಾಗ್ಲಾಸ್ ಕನ್ನಡಕದ ಮೂಲಕ ಇವರಿಬ್ಬರನ್ನೂ ನೋಡುತ್ತಾ ಬಾಯಿ ಬಿಟ್ಟುಕೊಂಡು ಅಲ್ಲಿಯೇ ನಿಂತಿದ್ದ.

ಮನೆಯೊಳಕ್ಕೆ ಹೋದಮೇಲೂ ಸುಂದರ್ ಬೇಸರ ಮತ್ತು ಅವಮಾನದಿಂದ ದುಃಖಿಸುತ್ತಾ ಕುಳಿತಿದ್ದ. ಮೋಹನ್ ಚಹಾ ಮಾಡಿಕೊಂಡು ಬಂದು, ಒಂದು ಕಪ್ ಚಹಾವನ್ನು ಸುಂದರನಿಗೆ ಕೊಟ್ಟು, ಇನ್ನೊಂದು ಕಪ್ ಚಹಾವನ್ನು ತಾನು ಸವಿಯ ತೊಡಗಿದ, ಸುಂದರ್ ಬಹಳ ಬೇಸರದಿಂದ ಹೇಳಿದ.

“ಟೀ ಕುಡಿದ ಮೇಲೆ ನಾನು ಹೊರಡ್ತೀನಿ ಮಾರಾಯ, ಬೆಂಗಳೂರಿಗೆ ಯಾವುದಾದರೂ ಬಸ್ಸೋ, ರೈಲೋ ಸಿಕ್ಕೇ ಸಿಗುತ್ತದೆ. ಹೋಗಿ ಬೆಂಗಳೂರು ಸೇರುತ್ತೇನೆ.”

“ಆರೆ ಹಾಗೆ ಯಾಕೆ ಹೇಳ್ತೀಯ ಮಾರಾಯ? ಟೀ ಕುಡಿದು ಸ್ನಾನಕ್ಕೆ ಹೋಗು. ಸ್ನಾನ ಮಾಡಿದ ಮೇಲೆ ಬಿಸಿ ಬಿಸಿ ದೋಸೆ ಮಾಡಿ ಕೊಡ್ತೀನಿ, ದೋಸೆ ತಿಂದು ಬೇರೆ ಬಟ್ಟೆ ಧರಿಸಿ ಹೊರಗೆ ಹೋಗೋಣ. ಅನಂತಪದ್ಮನಾಭ ಸ್ವಾಮಿ ದೇವಾಲಯ, ತ್ರಿವಾಂಡ್ರಮ್‌ನ ಜೂ, ಪ್ಯಾಲೇಸ್, ಮ್ಯೂಜಿಯಂ ಎಲ್ಲಾ ನೋಡೋಣ, ಯಾವುದಾದರೂ ಒಳ್ಳೆಯ ಹೋಟೆಲ್‌ನಲ್ಲಿ ಊಟ ಮಾಡೋಣ. ರಾತ್ರಿ ಒಂಭತ್ತು ಗಂಟೆಯ ಸೂಪರ್ ಡಿಲಕ್ಸ್ ಬಸ್ಸಿನಲ್ಲಿ ಕಳಿಸಿ ಕೊಡ್ತೀನಿ” ಎಂದ. ಆದರೆ ಸುಂದರನಿಗೆ ಬಹಳ ಬೇಸರವಾಗಿತ್ತು. ಊರು ಸುತ್ತುವುದು, ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ಯಾವುದೂ ಬೇಕಿರಲಿಲ್ಲ.

“ನಂಗೆ ತುಂಬಾ ಬೇಜಾರಾಗಿದೆ ಮಾರಾಯಾ, ಸ್ನಾನ ಮಾಡಿ ಹೊರಟುಬಿಡೋಣ. ಈಗಲೇ ಯಾವುದಾದರೂ ಬಸ್ಸು ಸಿಕ್ಕಿದರೆ ಬೆಂಗಳೂರಿಗೆ ಹೊರಡ್ತೀನಿ” ಎಂದ ಇವನ ದುಃಖ, ದುಗುಡ ಮೋಹನನಿಗೆ ಅರ್ಥವಾಯಿತು. ಗೆಳೆಯನಿಗೆ ಸಮಾಧಾನ ಪಡಿಸಿದ.

“ಆ ನಂಬೂದರಿ ನಿನ್ನನ್ನ ಸಂದೇಹಪಟ್ಟಿದ್ದಕ್ಕೆ ನೀನೇನೂ ಬೇಜಾರು ಮಾಡ್ಕೊಬೇಡ ಸುಂದರ್‌, ಆ ಮನುಷ್ಯ ಮಹಾ ಪುಕ್ಕಲು. ನಮ್ಮ ಮನೆಯಲ್ಲಿ ಒಂದು ತಟ್ಟೆ ಬಿದ್ದರೆ, ತನ್ನ ಮನೆಯ ಮೇಲೆ ಬಾಂಬು ಬಿದ್ದಿತೇನೋ ಎನ್ನುವಂತೆ ಗಾಬರಿಯಾಗ್ತಾನೆ. ನಮ್ಮ ಮನೆಗೆ ಬಂದು ಕೂಗಾಡ್ತಾನೆ. ಅದಕ್ಕೆಲ್ಲಾ ನೀನೇನೂ ಬೇಜಾರು ಮಾಡ್ಕೊಬೇಡ ಸುಂದರ್, ಸ್ನಾನ ಮಾಡ್ಕೊಂಡು ಬಾ. ತಿಂಡಿ ತಿಂದು ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಹೋಗಿಬಿಡೋಣ” ಎಂದು ಹೇಳಿ ಗೆಳೆಯನನ್ನು ಮತ್ತೆ ಮತ್ತೆ ಸಮಾಧಾನ ಪಡಿಸಿದ. ತಿರುವನಂತಪುರ ಸುತ್ತಾಡಿ ಆ ರಾತ್ರಿ ಸುಂದರ್‌ ಬೆಂಗಳೂರಿಗೆ ಹೊರಟ. ಈ ಘಟನೆ ನಡೆದು ಐದಾರು ವರ್ಷಗಳೇ ಕಳೆದು ಹೋದವು, ಸುಂದರ್ ಈ ಕೆಟ್ಟ ಅನುಭವವನ್ನು ನಿಧಾನವಾಗಿ ಮರೆತ. ಎರಡು ವರ್ಷಗಳಲ್ಲಿ ಮೋಹನ್ ಕೂಡಾ ಬೆಂಗಳೂರಿಗೆ ವರ್ಗವಾಗಿ ಬಂದ ಗೆಳೆಯರಿಬ್ಬರೂ ಮೊದಲಿನಂತೆ ಅನ್ನೋನ್ಯರಾಗಿದ್ದಾರೆ.

ಒಂದು ದಿನ ಮಧ್ಯಾಹ್ನ ಊಟದ ಸಮಯದಲ್ಲಿ ಸುಂದರ್‌ನ ಸಹೋದ್ಯೋಗಿ ಯೊಬ್ಬರು ಒಬ್ಬ ಯುವಕನನ್ನು ಕರೆತಂದು ಎಲ್ಲರಿಗೂ ಪರಿಚಯ ಮಾಡಿಸಿದರು. “ಇವರು ಪದ್ಮನಾಭನ್ ಅಂತ, ನನ್ನ ಮಗನ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಾರೆ. ಇವರ ತಂದೆಯವರಿಗೆ ಓಪನ್ ಹಾರ್ಟ್ ಸರ್ಜರಿ ಆಗುವುದಿದೆ. ನಾಲ್ಕು ಜನ ರಕ್ತದಾನ ಮಾಡಬೇಕಾಗಿದೆ. ನಾನೇನೋ ರಕ್ತ ಕೊಡೋದಕ್ಕೆ ತಯಾರಿದ್ದೀನಿ. ಆದರೆ ನನಗೆ ಬಿ.ಪಿ. ಶುಗರು ಎಲ್ಲಾ ಇರೋದರಿಂದ ನಾನು ಕೊಡೋ ಹಾಗಿಲ್ಲ. ನೀವುಗಳು ಯಾರಾದರೂ ದೊಡ್ಡ ಮನಸ್ಸು ಮಾಡಿ ರಕ್ತ ಕೊಟ್ಟರೆ ತುಂಬಾ ಉಪಕಾರವಾಗುತ್ತೆ. ಅವರ ಪರವಾಗಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.” ಒಬ್ಬರು “ನನಗೂ ಬಿ.ಪಿ. ಶುಗರು ಎಲ್ಲಾ ಇದೆ. ನಾನು ಕೊಡಕ್ಕೆ ಆಗೋದಿಲ್ಲ” ಎಂದರು. ಮತ್ತೊಬ್ಬ ಸಹೋದ್ಯೋಗಿ ನಾನು ಇತ್ತೀಚೆಗೆ ರಕ್ತದಾನ ಮಾಡಿದ್ದೀನಿ. ಇನ್ನೂ ಒಂದು ವಾರ ಆಗಿದೆ. ಈಗ ಮತ್ತೆ ಕೊಡಕ್ಕಾಗಲ್ಲ ಸಾರಿ” ಎಂದರು. ಸುಂದರ್‌ ಮಾತ್ರ ರಕ್ತ ಕೊಡುವುದಕ್ಕೆ ಒಪ್ಪಿಕೊಂಡ. ಪದ್ಮನಾಭನ್‌ರವರು ಸುಂದರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಪದ್ಮನಾಭನ್‌ರವರ ತಂದೆಯವರನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರು ಹೇಳಿದರು. “ಕನಿಷ್ಟ ಆರು ಯೂನಿಟ್ ರಕ್ತ ಬೇಕಾಗುತ್ತದೆ. ನೀವಿಬ್ಬರೂ ಕೊಟ್ಟಿದ್ದಾಯಿತು. ಇನ್ನು ನಾಲ್ಕು ಜನರನ್ನು ಕರೆದುಕೊಂಡು ಬನ್ನಿ, ಸ್ವಲ್ಪ ಅರ್ಜೆಂಟು” ಎಂದರು. ಪದ್ಮನಾಭನ್‌ರ ಹಣೆಯ ಮೇಲೆ ಬೆವರೊಡೆಯಿತು. ಈಗೇನು ಮಾಡುವುದು ಎಂದು ಚಿಂತಿಸತೊಡಗಿದರು. ಸುಂದರನೇ ಅವರಿಗೆ ಸಮಾಧಾನ ಮಾಡಿದ.

“ನೀವೇನೂ ಯೋಚನೆ ಮಾಡಬೇಡಿರಿ, ನಾನು ನನ್ನ ಫ್ರೆಂಡ್ಸ್‌ನೆಲ್ಲಾ ಕೇಳ್ತೀನಿ. ಯಾರಾದರೂ ಇಬ್ಬರನ್ನಾದರೂ ಕರೆದುಕೊಂಡು ಬಂದು ರಕ್ತದಾನ ಮಾಡಿಸ್ತೀನಿ ಅಂದಹಾಗೆ ನೀವು ಕಾಲೇಜಿನಲ್ಲಿ ಲೆಕ್ಚರರ್ ಅಲ್ವಾ? ನಿಮ್ಮ ಸ್ಟೂಡೆಂಟ್ಸ್‌ನಲ್ಲಿ ಯಾರಾದ್ರೂ ಹದಿನೆಂಟು ವರ್ಷ ಆದವರಿದ್ದರೆ ಕೇಳಿ ಸಾರ್ ಖಂಡಿತ ಕೊಡ್ತಾರೆ. ಧೈರ್ಯವಾಗಿರಿ ಸಾರ್, ನಾನು ಈಗಲೇ ನನ್ನ ಫ್ರೆಂಡ್‌ಸನ್ನು ಕೇಳಿ ಏನಾದ್ರೂ ಅರೇಂಜ್ ಮಾಡ್ತೀನಿ” ಎಂದು ತನ್ನ ಸ್ಕೂಟರ್ ಏರಿ ಹೊರಟ, ನೇರವಾಗಿ ತನ್ನ ಗೆಳೆಯ ಮೋಹನ ಆಫೀಸಿಗೆ ಹೋದ. ಮೋಹನ್ ಮತ್ತು ಅವನ ಗೆಳೆಯ ರವಿಕುಮಾರ್ ರಕ್ತ ಕೊಡಲು ಒಪ್ಪಿದರು. ಕೂಡಲೇ ಸುಂದರ್ ಅವರಿಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋದ. ಪದ್ಮನಾಭನ್‌ರವರು ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಕಾಲೇಜಿಗೆ ಹೋಗಿದ್ದರು. ಪದ್ಮನಾಭನ್‌ರವರ ಹೆಸರು ಹೇಳಿ ಇವರೇ ರಕ್ತ ಕೊಟ್ಟು ತಮ್ಮ ತಮ್ಮ ಆಫೀಸುಗಳಿಗೆ ಹಿಂತಿರುಗಿದರು. ಮೋಹನ್ ಮತ್ತು ಸುಂದರ್ ಈಗಾಗಲೇ ಹತ್ತಾರು ಸಲ ರಕ್ತದಾನ ಮಾಡಿ ಅನುಭವವಿದ್ದುದರಿಂದ ಇದೇನು ದೊಡ್ಡ ವಿಷಯ ಅಂತ ಆ ವಿಷಯವನ್ನು ಮರೆತರು.

ಇದಾಗಿ ಒಂದು ತಿಂಗಳೇ ಕಳೆಯಿತು. ಒಂದು ದಿನ ಪದ್ಮನಾಭನ್‌ರವರು ಸುಂದರ್‌ನ ಆಫೀಸಿಗೆ ಬಂದರು. ಸುಂದರ್‌ನ ಕೈ ಕುಲುಕಿ “ನಿಮ್ಮ ಉಪಕಾರವನ್ನು ನಾನು ಎಂದೂ ಮರೆಯೋದಿಲ್ಲ. ನೀವು ಮತ್ತು ನಿಮ್ಮ ಗೆಳೆಯರು ರಕ್ತದಾನ ಮಾಡಿ ನಮ್ಮ ತಂದೆಯವರ ಜೀವ ಉಳಿಸಿದಿರಿ. ಈ ಭಾನುವಾರ ನಮ್ಮ ಮನೆಯಲ್ಲಿ ಒಂದು ಸಣ್ಣ ಔತಣ ಏರ್ಪಡಿಸಿದ್ದೀನಿ. ನೀವು ಮತ್ತು ನಿಮ್ಮ ಸ್ನೇಹಿತರು ದಯವಿಟ್ಟು ಬರಬೇಕು. ತಗೊಳ್ಳಿ ನನ್ನ ವಿಸಿಟಿಂಗ್ ಕಾರ್ಡು, ಇದರಲ್ಲಿ ನನ್ನ ಮನೆಯ ವಿಳಾಸ, ದೂರವಾಣಿ ಸಂಖ್ಯೆ ಇದೆ. ದಯವಿಟ್ಟು ಬನ್ನಿ. ನಿಮ್ಮ ಗೆಳೆಯರನ್ನು ಮರೀದೆ ಕರೆದುಕೊಂಡು ಬನ್ನಿ” ಎಂದರು. ಸುಂದರ್ ಮುಗುಳ್ನಕ್ಕ.

“ಅಯ್ಯೋ ಇರಲಿ ಬಿಡಿ ಸಾರ್. ನಾನು ಎಷ್ಟೋ ಸಲ ರಕ್ತ ಕೊಟ್ಟಿದ್ದೀನಿ. ರಕ್ತ ಕೊಡೋದು, ಬರೋದು ಅಷ್ಟೇ. ಯಾರಿಗೆ ರಕ್ತ ಕೊಡ್ತಿವಿ, ಅವರು ಹೇಗಿದ್ದಾರೆ ಅನ್ನೋದನ್ನು ನಾನೂ ಮರೀತೀನಿ ರಕ್ತ ತಗೊಂಡ ವ್ಯಕ್ತಿ ಮತ್ತು ಅವರ ಮನೆಯವರೂ ನಮ್ಮನ್ನ ಮರೀತಾರೆ.”

ಬಹಳ ಕೃತಜ್ಞತಾ ಭಾವದಿಂದ ಪದ್ಮನಾಭನ್ ಹೇಳಿದರು. “ಎಲ್ಲಾದರೂ ಉಂಟೇ. ಎಲ್ಲಾ ದಾನಗಳಿಗಿಂತಲೂ ದೊಡ್ಡದು ರಕ್ತದಾನ, ನೀವುಗಳು ರಕ್ತ ಕೊಟ್ಟು ನಮ್ಮ ತಂದೆ ಯವರ ಜೀವ ಉಳಿಸಿದ್ದೀರಾ. ದಯವಿಟ್ಟು ಬನ್ನಿ. ಇಲ್ಲ ಎನ್ನಬೇಡಿ” ಎಂದು ಕೈ ಮುಗಿದರು.

ಭಾನುವಾರ ಸಂಜೆ ಸುಂದರ್‌, ಮೋಹನ್ ಮತ್ತು ರವಿಕುಮಾರ್ ಪದ್ಮನಾಭನ್‌ರವರ ಮನೆಗೆ ಹೋದರು. ಪದ್ಮನಾಭನ್‌ರವರು ಬಾಗಿಲಲ್ಲೇ ನಿಂತಿದ್ದರು. ಇವರನ್ನು ಎದುರುಗೊಂಡು, ಕೈ ಮುಗಿದು ಸ್ವಾಗತಿಸಿದರು. ಆದರದಿಂದ ಮನೆಯೊಳಕ್ಕೆ ಕರೆದೊಯ್ದು ಸೋಫಾದ ಮೇಲೆ ಕುಳಿತುಕೊಳ್ಳಲು ಹೇಳಿದರು. ಈಗಾಗಲೇ ಅವರ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಮೂವರು ವಿದ್ಯಾರ್ಥಿಗಳು ಬಂದು ಆಸೀನರಾಗಿದ್ದರು. ಕೆಲವೇ ನಿಮಿಷಗಳಲ್ಲಿ ಪದ್ಮನಾಭನ್ ಮತ್ತು ಅವರ ಪತ್ನಿ ಸರಳಾರವರು ಎಲ್ಲರಿಗೂ ತಿಂಡಿ ತಂದುಕೊಟ್ಟರು. ಎಲ್ಲರೂ ಮಾತನಾಡುತ್ತಾ ತಿಂಡಿ ತಿನ್ನತೊಡಗಿದರು. ಆ ಸಮಯದಲ್ಲಿ ಪದ್ಮನಾಭನ್‌ರವರು ತಮ್ಮ ತಂದೆ-ತಾಯಿಯರನ್ನು ಹಾಲಿಗೆ ಕರೆದುಕೊಂಡು ಬಂದು ಪರಿಚಯ ಮಾಡಿಸಿದರು. ಅವರನ್ನು ಕಂಡು ಸುಂದರ್‌ ಮತ್ತು ಮೋಹನ್ ಸ್ಥಂಬೀಭೂತರಾದರು. ಅವರು ಬೇರಾರೂ ಆಗಿರಲಿಲ್ಲ. ಮೋಹನ್ ತಿರುವನಂತಪುರದಲ್ಲಿದ್ದಾಗ ಅವನ ಮನೆಯ ಮಾಲೀಕ ಕೃಷ್ಣನ್ ನಂಬೂದರಿಯವರೇ! ಒಂದು ಕ್ಷಣ ಸುಂದರನಿಗೆ ಭಯಂಕರ ಸಿಟ್ಟು ಬಂದಿತು. ಆದರೆ ಆ ಹಿರಿಯರ ಮುಖ ನೋಡಿದಾಗ ಅವರ ಮುಖದಲ್ಲಿದ್ದ ದೈನ್ಯತೆ ಮತ್ತು ಕೃತಜ್ಞತಾ ಭಾವನೆ ಕಂಡು ಸುಮ್ಮನಾದರು. ನಂಬೂದರಿಯವರೂ ಕೂಡಾ ಇವರಿಬ್ಬರನ್ನು ಗುರುತಿಸಿದರು. ನಾನು ನಿಮಗೆ ತೊಂದರೆ ಮಾಡಿದ್ದರೂ ನೀವು ನನಗೆ ರಕ್ತ ನೀಡಿ ನನ್ನ ಜೀವ ಉಳಿಸಿದಿರಿ. ದಯವಿಟ್ಟು ನನ್ನನ್ನು ಕ್ಷಮಿಸಿರಿ ಎಂಬಂತೆ ನೋಡಿದರು. ಇವರುಗಳೂ ಆದದ್ದಾಯಿತು. ಈಗೇಕೆ ಆ ಮಾತು ಎನ್ನುವಂತೆ ಮುಗುಳು ನಗುತ್ತಾ ಅವರಿಗೆ ಕೈ ಮುಗಿದು, ತಮ್ಮ ‘ಕ್ಷಮೆ’ಯನ್ನು ಮೌನವಾಗಿಯೇ ತೋರಿದರು. ಇದಾವ ವಿಷಯವನ್ನು ಅರಿಯದ ಪದ್ಮನಾಭನ್‌ರವರು ಬಂದವರಿಗೆ ಮತ್ತೆ ಮತ್ತೆ ವಂದನೆ ಹೇಳಿ ಕಳಿಸಿಕೊಟ್ಟರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಗನಾಮ
Next post ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…