ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು.
“ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ ಅಮ್ಮ ಬೇಕಂತೆ” ಎಂದು ಪುಟ್ಟ ಸರಳ ತಂದೆಯ ಹತ್ತಿರ ಹೇಳಿದಳು.
“ಅಮ್ಮಾ! ನೀನು ನೋಡು ಬಾ, ಮುಂಗಸಿ ಮರಿಗಳು ಎಷ್ಟು ಪುಟಾಣಿಗಳಾಗಿವೆ” ಎಂದು ಕೂಗಿ ಕೂಗಿ ಸಿಂಚನ ಕರೆದಳು.
ಮಕ್ಕಳ ಕೂಗಿಗೆ ಓಡಿಬಂದರು ಶರ್ಮ ದಂಪತಿಗಳು. ಅವರ ಜೊತೆ ಒಳಗಿದ್ದ ನಾಯಿಯು ಬಂದು ಎಲ್ಲರೂ ಚೀರಾಡುತ್ತಿದ್ದ ಮುಂಗಸಿ ಮರಿಗಳಿಗೇನು ಮಾಡಬೇಕೆಂದು ಯೋಚಿಸುತ್ತಿದ್ದರು.
“ಅಮ್ಮಾ! ನಾನು ಬಿಸ್ಕಟ್ ತಂದು ಕೊಡುವೆ” ಅಂತ ಸರಳ ಒಳಗೆ ಓಡಿದಳು.
“ಅಮ್ಮಾ! ನಾನು ಬ್ರೆಡ್ ಕೊಡ್ಲಾ?” ಅಂತ ಸಿಂಚನ ಕುಣಿದು ಕುಣಿದು ಅಮ್ಮನ ಕೇಳಿದಳು. ೧೦, ೮ ವರ್ಷದ ಸರಳ ಸಿಂಚನಾರಿಗೆ ಮುಂಗಸಿ ಮರಿಗಳ ಗೋಳಾಟ ನೋಡಲಾಗಲಿಲ್ಲ.
ಶರ್ಮಾ ದಂಪತಿಗಳಿಗೂ ಕರುಳು ಚುರ್ ಅಂದಿತು. ಅಸಹಾಯಕ ಪುಟ್ಟ ಮರಿಗಳೂ ಅನಾಥವಾಗಿರುವುದು ನೋಡಿ ಹೇಗೆ ಸುಧಾರಿಸಬೇಕೆಂದು ತಿಳಿಯಲಿಲ್ಲ.
ಹುಮನಾಬಾದಿನ ಸಂತಪುರದ ಅವರ ಮನೆಯ ಮುಂದೆ ಒಂದು ಸಣ್ಣ ತೋಟವೂ ಇತ್ತು. ತೋಟದ ಕಾಂಪೌಂಡಿನಲ್ಲಿ ಬಿದ್ದಿದ್ದ ಮರಿಗಳನ್ನು ಮನೆ ಒಳಗೆ ಅಂಗಳಕ್ಕೆ ತಂದರು. ಅದಕ್ಕೆ ಹಾಲು ನೀರು ಬಿಸ್ಕತ್ ಬ್ರೆಡ್ ಎಲ್ಲಾ ಕೊಟ್ಟು ನೋಡಿದರು. ಮುಂಗಸಿಯ ಮಟ್ಟ ಕಂದಮ್ಮಗಳು ಯಾವುದನ್ನೂ ಮುಟ್ಟಲಿಲ್ಲ. ಒಂದೇ ಸಮನೆ ಚೀರಾಡಿ ಅಸಹಕಾಯತೆ ತೋರುತ್ತಿದ್ದವು.
ಶರ್ಮಾ ದಂಪತಿಗಳಿಗಾಗಲಿ ಮಕ್ಕಳ ಆರೈಕೆಯಿಂದಾಗಲಿ ಮುಂಗಸಿ ಮರಿಗಳು ಸುಮ್ಮನಾಗಲಿಲ್ಲ. ಏನು ಮಾಡಲು ತೋಚದೆ ಒದ್ದಾಡುತ್ತಿರುವಾಗ ಅವರ ಮನೆಯ ನಾಯಿ ತಾಯ್ತತನಕ್ಕೆ ಸಿದ್ಧವಾಗಿ ಮುಂದೆ ಬಂದಿತು.
ಎರಡು ಮುಂಗುಸಿ ಮರಿಗಳನ್ನು ಬಹಳ ನಾಜೂಕಾಗಿ ಮೆತ್ತಗೆ ಬಾಯಲ್ಲಿರಿಸಿಕೊಂಡು ಮನೆ ಒಳಗೆ ತಂದಿತು. ಶರ್ಮಾ ದಂಪತಿಗಳಿಗೆ ನಾಯಿರಾಣಿ ಮುಂಗಸಿ ಮರಿಗಳನ್ನು ಹಾನಿ ಮಾಡಿಬಿಡುವುದೋ ಎಂದು ಹೆದರುತ್ತಿದ್ದರು. ಆದರೆ ಅವರು ಕಂಡದ್ದೇ ಬೇರೆ ಪುಟ್ಟ ಮರಿಗಳಿಗೆಂದು ಒಂದು ಕಾರ್ಡು ಬೋರ್ಡ್ ಹಾಸಿ ಅದರ ಮೇಲೆ ಒಂದು ಹಳೆಯ ಬಟ್ಟೆ ಹಾಸಿ ಇಟ್ಟರು. ನಾಯಿ ರಾಣಿ ಮುಂಗಸಿ ಮರಿಗಳನ್ನು ಅದರ ಮೇಲೆ ಇಟ್ಟು ತಾವು ಅವುಗಳಿಗೆ ಹತ್ತಿರವಾಗಿ ಒರಗಿಕೊಂಡಿತು. ಮರಿಗಳಿಗೆ ತಾಯಿ ಸಿಕ್ಕಂತೆ ಅನಿಸಿತು. ರಾಣಿ ನಾಯಿಯ ಸ್ಪರ್ಶಕ್ಕೆ ಭದ್ರತೆ ಕೊಟ್ಟಿತು. ರಾಣಿ ನಾಯಿ ತನ್ನ ನಾಲಿಗೆಯಿಂದ ಮರಿಗಳನ್ನು ನೆಕ್ಕಿ ಸೇವರಿಸುವಾಗ ಶರ್ಮಾ ದಂಪತಿಗಳು ಹೆದರುತ್ತಿದ್ದರು. ನಾಯಿಯಲ್ಲಿ ತಾಯ್ತತನದ ಮಮತೆ ಜಾಗೃತವಾಗಿದ್ದು ಅದು ಮುಂಗಸಿ ಮರಿಗಳನ್ನು ಮರಿಗಳಂತೆ ಕಾಣತೊಡಗಿತು. ಅಂದು ರಾತ್ರಿ ಚೀರಾಟವಿಲ್ಲದೆ ಮುಂಗಸಿ ಮರಿಗಳು ರಾಣಿನಾಯಿಯ ಮಡಿಲಲ್ಲಿ ಶಾಂತವಾಗಿ ಮಲಗಿದವು.
ಸರಳ ಸಿಂಚನಾಗೆ ಬೆಳಗಾಗುತ್ತಲೇ ನಾಯಿ ಮುಂಗಸಿ ಮರಿಗಳನ್ನು ಮಲಗಿಸಿಕೊಂಡಿರುವುದನ್ನು ನೋಡಿ ಬಲು ಸಂತಸದಿಂದ ಕುಣಿದಾಡಿದರು. ಶರ್ಮಾ ದಂಪತಿಗಳಿಗಾದ ಮತ್ತೊಂದು ಆಶ್ಚರ್ಯವೆಂದರೆ ನಾಯಿ ಇನ್ನು ಮರಿಹಾಕದೇ ಇರುವಾಗ ಮುಂಗುಸಿ ಮರಿಗಳಿಗೆ ಅದು ನೆಮ್ಮದಿಯಿಂದ ಹಾಲುಣಿಸುತಿತ್ತು ಮುಂಗುಸಿ ಮೇಲೆ ರಾಣಿ ನಾಯಿ ತೋರುವ ಪ್ರೀತಿ ವಿಚಿತ್ರ ಅದ್ಭುತ ಅಪರೂಪ ಎನಿಸತೊಡಗಿತು.
ಏತನ್ಮಧ್ಯೆ ಈ ಅಪರೂಪದ ಬಾಂಧವ್ಯದ ಸುದ್ದಿ ಊರಲ್ಲೆಲ್ಲಾ ಹರಡಿತು. ಜನರು ಸಾಲುಗಟ್ಟಿ ಬಂದು “ಇದು ಹ್ಯಾಗೆ ಸಾಧ್ಯ?” ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತಿದ್ದರು.
ಬೀದಿಯಲ್ಲಿ ಅನಾಥರಾಗಿ ಬಿದ್ದ ಮುದುಕರನ್ನಾಗಲಿ, ಮಕ್ಕಳನ್ನಾಗಲಿ ಕಣ್ಣೆತ್ತಿ ನೋಡುವ ಮನುಷ್ಯತ್ವವಿಲ್ಲದೆ ಮಾನವ ಒಂದು ಕಡೆ, ತನ್ನ ಮಗುವಲ್ಲದ ಮುಂಗುಸಿಯನ್ನು ಮಮತೆಯಿಂದ ಹಾಲುಣಿಸಿವ ನಾಯಿ ಮತ್ತೊಂದು ಕಡೆ. ಮನುಷ್ಯತ್ವವನ್ನು ಹೊಂದಿದ ನಾಯಿ ಎಲ್ಲಿ? ಸ್ವಾರ್ಥಿಯಾಗಿ ಮನುಷ್ಯತ್ವ ತೊರೆದ ಮಾನವನೆಲ್ಲಿ? ಎಂದು ನೆರೆದ ಜನರು ಮಾತಾಡಿಕೊಂಡು ರಾಣಿ ನಾಯಿಯನ್ನು ಹೊಗಳಿ ಹಾಡಿದರು.
ಮಾರನೆಯ ದಿನ ಅದು ದೇಶದ ಎಲ್ಲಾ ಪತ್ರಿಕೆಗಳಲ್ಲಿ ಟಿ.ವಿ.ಗಳಲ್ಲಿ ರಾಣಿನಾಯಿ ಮುಂಗುಸಿ ಮರಿಗಳಿಗೆ ಹಾಲುಣಿಸುವ ಚಿತ್ರ ಮತ್ತು ಅದರ ದೈವಿ ಪ್ರೀತಿ ಕರುಣೆಯ ಬಗ್ಗೆ ದೊಡ್ಡ ಸುದ್ದಿಯಾಯಿತು.
ರಾಣನಾಯಿಯ ಕೀರ್ತಿ ತಾಯ್ತನದ ಪ್ರೀತಿಯಿಂದ ಶರ್ಮಾ ದಂಪತಿಗಳು ಅತ್ಯಂತ ಹರ್ಷಿತರಾದರು. ನೀವು ಸಾಕಿದ ನಾಯಿ ನಿಮ್ಮ ಸಾತ್ವಿಕತೆ ಮಮತೆಯನ್ನೇ ಪ್ರತಿಬಿಂಬಿಸಿದೆ ಎಂದು ಎಲ್ಲರೂ ಅವರನ್ನು ಅಭಿನಂದಿಸಿದರು.
*****