ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? “ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು” ಅಂತ. “ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ ಬೇಡ” ಅಂತು. ಆದ್ರೂ ಕೇಳದಿದ್ದೆ ಅಜ್ಜವಿಕೈಲ್ ಮೂರ್ ರೊಟ್ಟಿ ಸುಡ್ಸಕಂಡಿ ಹೋದ., ಹೋಗ ಸುಮಾರ್ ರಾತ್ರೆಯಾಗೆಬಿಟ್ತು. ರಾತ್ರಿ ಯೇನ್ ಮಾಡೋಕೆ ಬತ್ತದೆ?
ಗೌಡ-ಗೌಡತಿ ಮಾಳ ಕಾಯ್ತ ಇದ್ರು. ಮೂರ ರಾಗಿರೊಟ್ಟಿ ತಂದ್ಕಂಡು, “ನಂಗೆ ಹೆಚ್ಚು…” “ನಂಗೆ ಹೆಚ್ಚು…” ಅಂದಿ ಜಗಳ ಮಾಡ್ತ ಕೂತಿದ್ರು. ಇವನ ರೊಟ್ಟಿ ದಾರೀಲಿ ಕರ್ಚಾಗ ಬಿಡ್ತದೆ. ಇವ ಹೋದ.
“ನಮಗೆ ಯೆರಡೆರಡ್ ಬೇಡ. ಅವನಿಗೆ ವಂದ ಕೊಟ್ಕಂಡಿ ತಿಂಬನಿ” ಅಂತ. ಹಿಂಡ್ತಿ ಬೇಡ ಅಂತದೆ, ಆದ್ರೂ ಕೊಟ್ಕಂಡ್ ತಿಂದ.
ಬೆಳಗಾಗ, “ಯೆಲ್ಲ್ ಹೋಗ್ವವ? ಯೆಲ್ಲಿದ್ ಬಂದವ?” ಕೇಳತ್ರು. “ತಾ ಕಾಶಿಗೆ ಹೋಗ ಬತ್ತೆ. ಅಜ್ಜವಿ ಮೊಮ್ಮಗ”, “ತಾ ವಂದ್ ಸುದ್ದಿ ಕೇಳ್ಗೆ. ಕೆಳಕ್ಕಂಬಾ ಕಾಶೀಲಿ. ತಾ ಮಾಳಕಾಯ್ತೆ,. ಮಾಳದಾಗ ಹಂದಿ ರಾಶಿ ಬತ್ತದೆ. ಬರ್ವದ ಕಮ್ಮಿಯಾಗೂದೋ ಕೇಳ್ಳ ಬಾ” ಅಂತ. ಮುಂದೆ ಹೋದ ಕೂಡ್ಲೆಯ ಅವಗೆ ವಂದ ನರಿ ಶಿಕ್ತದೆ. “ಯಲ್ಲ್ ಹೋಗ್ವವ?” ಕೇಳ್ತದೆ. “ತಾನು ಕಾಶಿಗೆ ಹೋತೆ” ಅಂತ. “ನಂಗ್ ಹೋದ್ ಹೋದಲ್ಲಿ ಮಾಂಸ ಶಿಕ್ಕೂದೋ ಶಿಕ್ಕೂದಿಲ್ವೊ? ಕೇಳು” ಅಂತದೆ. “ಆಗೂದು” ಅಂತ.
ಮುಂದೆ ಹೋತಾ ಇರಬೇಕಾರೆ, ವಂದ ಮಾಯಿನ ಮರದ ಅಡಿ ಕೂತ್ಕಂತ. ಮಾಯಿನ ಹಣ್ಣು ಪುಟಿ ಪುಟಿ ಪುಟಿ ಬೀಳ್ತದೆ. ಇವಗೆ ಯೇನ ಹಸವಾಗಿ ಮರದ ಅಡಿ ಕುಳ್ಳುತನ ವಂದೇ ಹಣ್ ಹೆಕ್ಕಂಡಿ ತಿಂಬೂಕೆ ಹೋದ- ಹುಳವಾಗ ಹೋತದೆ.
ಹಸ್ವಾಗಿ ಮಾತೆಲ್ಲ. ಅಂದಿ ಚಿಂತಿ ಮೇನೆ ಅಲ್ಲೆ ಕೂತ್ ಬಿಡ್ತ. ತೀಡ್ತ ಕುಂತ ಕೂಡ್ಲೆ ಪಾರ್ವತಿ-ಪರಮೇಶ್ವರ ವನವಾಸ್ಕ ಹೋಗ್ ಬರವರು. ಗಂಡನ ಕೈಲಿ, “ಯಾರು ತೀಡ್ವರು. ನೋಡ್ ಬರವ” ಅಂತು. “ನರಮನಸರ ಈ ಕಾಡಲ್ ಯೆಲ್ಲವ್ರೆ?” ಕೇಳ್ತ. ಆದ್ರೂ ಕೇಳ್ಗದೆ ಕರಕ ಬತ್ತದೆ. ಮಾಯಿನ ಮರದ ಅಡಿಗೆ ಬತ್ತರೆ, “ಯೇನ್ ತಾನ? ಯಲ್ಲ್ ಹೋಗ್ವವ?” ಕೇಳತ್ರು. ಕೇಳೂತನವ, “ಅಜ್ಜವಿ ಮೊಮ್ಮಗ್ನಾಗಿತ್ತು. ದಿನಾ ಬೇಡ್ಕಂಬಂದ ತಿಂಬವ್ನಾಗಿತ್ತು. `ಕಾಶೀಗೆ ಹೋತೆ` ಅಂದ ಹೇಳ್ ಮೂರ್ ರೊಟ್ಟಿ ಸುಡ್ಸಕಂಡ ಬಂದೆ ತಾನು. ಆಸ್ರ ಬಾಯಿಗೆ ಆಸ್ರಿಲ್ಲ. ಉಂಬೂಕಿ ಕೂತನೆ. ಆಯಾರಿಲ್ಹೆ ಬಿದ್ದನೆ.”
“ಕಾಶಿಗೆ ನೆಡ್ದ ಹೋಕ್ಕೆ ಸಾದ್ದಿಲ್ಲ… ಹಿಂದೆ ಹೋಕ್ಕೆ ಸಾದ್ದಿಲ್ಲ. ನನ್ ಜೀವ ಇಲ್ಲೇ ಹಾನಿ” ಅಂದ ಹೇಳ್ಳ ತೀಡ್ತ. ಮೂರ ಹಳ್ ಮಂತ್ರಸ ಕೊಟ್ರು. “ನೀನು ತಿರಗಿ ಕಾಶಿಗೆ ಹೋಬೇಡ. ಮನಿಗೂ ಹೋಬೇಂಡ. ಬೆಳಿಗ್ಗೆ ಯೆದ್ದವ, `ಹನ್ನಯ್ಡು ಅಂಕಣ ಮನ್ಯಾಲಿ ಕನ್ನಡಿ ಕಡಕಟ್ಟಾಲಿ, ಈಳ್ಯಾಲಿ ಬಾಳ್ಯಾಲಿ` ಅಂದ್ ಹೇಳಿ ಮಂತ್ರಸ ಹೊಡಿ” ಅಂದ್ ಹೇಳಿ ಹೇಳತ್ರು.
ಆವಾಗ್ ಅವ ಹಾಗೆ ಹೇಳಿ ಹೊಡಿತ. ಊರೊರ್ಗೆಲ್ಲ ದಂಗ್ಲ ಸಾರ್ತ. “ಬೇಡ್ ಬೇಡ್ ಬೇಡ್ ಕಾಶಿಗ ಹೋಗುಕೆ ಬಂದನೆ. ಮುಂದೆ ಹೋಗುಕೆ ಅಂಥ್ ಪುಣ್ಯ ಸಿಕ್ಲೆಲ್ಲ. ಮನಿಕಟ್ ಮನೆವಳಗೆ ಗ್ರಾಪ್ರವೇಸ ಮಾಡ್ತೆ” ಅಂದಿ ದಂಗ್ಲ ಸಾರ್ದ. ಸಾರಿ, ಅಲ್ಲಿ ಜನ ಕೂಡತ್ರು ಆವಗೆ.
ಅವ ಯೇನ ಹೇಳ್? “ಕಾಶಿಗೆ ಹೋಗ್ಗೆ ಹೇಳಿ ಅಜ್ಜವಿ ಕಲಿ ಮೂರ್ ರೊಟ್ಟಿ ಸುಡ್ಸಕಂಡ ಬಂದಿದೆ. ರೊಟ್ಯೆಲ್ಲಾ ತೀರ್ತು.” ಗೌಡ-ಗೌಡತಿ ರೊಟ್ಟಿ ಕೊಟ ಇಟ್ಕಂಡ್ರು.
“ಕೊಯ್ಡ್ ಕುತ್ರಿ ಹಾಕುತನ, ಇದೆ ನಮನಿ ಹಂದ್ ಬತ್ತದ್ಯೋ” ಕೇಳಿರು. ಮುಂದೆ ಕಾಶಿಗೆ ಹೋಕ್ ಮುಂದ್ ಬಂದೆ, ಬರುತನ ಮಾಯ್ನ್ ಮರದ ಅಡಿ ಕೂತೆ,. ನಂಗೆ ಊಟಯೆಲೆ ಆಯಾರ ಯೆಲ್ಡೆ ಕುಂತ್ಕಂಡ್ ತೀಡ್ತಾ ಇರಬೇಕಾರೆ ಪಾರ್ವತಿ-ಪರಮೇಶ್ವರ ಬಂದ. ಮೂರ ಹಳ್ ಮಂತ್ರಸ ಕೊಟ್ಟ. `ಕಾಶಿಗೆ ಹೋಗೋದೆ ಬೇಡ, ಮನಿಗೆ ಹೋಗೂದು ಬೇಡ. ಹನ್ನೆಯ್ಡ್ ಅಂಕಣದ ಮನ್ಯಾಲಿ ಹೇಳಿ ಕಲ್ ಹಳ್ ಹೊಡಿ` ಅಂದ್ರು. `ಸಣ್ಣಕ್ಕಿ ದೊಡ್ದಕ್ಕಿ ಯೆಲ್ಲಾ ಆಲಿ. ಊರೂರ್ಯೆಲ್ಲಾ ಕರ್ದ್ ಬಡ್ಸ್ಟಟ್ಟು ಜಾತಿ ಅಡ್ಲಿ ಆಗ್ಲಿ` ಅಂದಿ ಬೇಡಕಂಡಿದ್ದೆ. ಊರೂರ್ಗೆ ಯೆಲ್ಲಾ ಊಟ ಹಾಕ್ಷೆ ಅಂದಿ” ಅಂತ ಊಟ ಹಾಕ್ತ. ಗೌಡ-ಗೌಡತಿ ಇಟ್ಕಂಡಿ ಉಳಿತ. `ಹೋಗಿರ್ ಕೇಳಿತಿದ್ದೆ ತಾನು`. ಯೆಲ್ಲದಿರೆ ಯೆಂತ ಕೇಳೆ? ಅಜ್ಜವಿನು ತನ್ ತಾವ ಕರ್ಸಕಂಡ. ಸುಖ ಸಂತೋಸದಾಗ್ ವಳ್ಣ.
*****
ಕೆಲವು ಪದಗಳ ವಿವರಣೆ
ಅಡ್ಗಿ = ಅಡಿಗೆ ಬಡ್ಸ್ಟಟ್ಟು = ಬಡಿಸುವಷ್ಟು
ಹೇಳಿದವರು : ಪಾರ್ವತಿ ಶಿವು ನಾಯ್ಕ, ಬಾಡ, ಕುಮಟಾ ತಾಲೂಕು
ದಿನಾಂಕ: ೪-೫-೭೨
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯಲ್ಲಿ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.