ತಿಥಿ

ತಿಥಿ

“ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ ಕಸುಬುಗಾರಿಕೆಯನ್ನು ಪುನಃ ಶುರುಮಾಡಿದೆಯೋ, ನಿನ್ನ ಚರ್ಮ ಸುಲಿದು ಈ ಜೈಲಿನ ಕಂಬಿಗೆ ಅಂಟಿಸುತ್ತೇನೆ. ಹುಷಾರ್! ಬಟ್ಟೆಯ ಕಟ್ಟನ್ನು ಪುರಂದರನ ಮುಖಕ್ಕೆ ಜೋರಾಗಿ ಬಿಸಾಡಿ ಜೈಲಿನ ಹಂಚು ಬಿದ್ದು ಹೋಗುವ ಹಾಗೆ ಗುಡುಗಿದ ಜೈಲರ್. ನೆಲಕ್ಕೆ ಬಿದ್ದ ಬಟ್ಟೆಯ ಕಟ್ಟನ್ನು ಹೆಕ್ಕಿ ತನ್ನ ಎಡ ಕಂಕುಳಲ್ಲಿಟ್ಟುಕೊಂಡು ಪುರಂದರ ಒಮ್ಮೆ ಸುತ್ತಲೂ ನೋಡಿದ. ತನ್ನ ಸಹ ಅಪರಾಧಿಗಳು ಅಲ್ಲಲ್ಲಿ ಗುಂಪು ಗುಂಪಾಗಿ ನಿಂತು ತನ್ನನ್ನೇ ಅಣಕಿಸುವಂತೆ ಅವನಿಗೆ ಕಂಡಿತು. ಆದರೂ ಅವನ ಮುಖದಲ್ಲಿ ಅವಮಾನದ ಭಾವನೆಯಾಗಲೀ, ರೋಷವಾಗಲೀ ಇರಲಿಲ್ಲ. ತನ್ನ ಬಗ್ಗೆ ಅಸಹ್ಯ ಪಟ್ಬು ಕೊಳ್ಳಲು ಅವನಿಗೆ ಯಾರೂ ಇರಲಿಲ್ಲ. ಯಾರದೋ ಪಾಪದ ಫಲವಾಗಿ ಭೂಮಿಗೆ ಬಂದ ಅವನಿಗೆ “ಲೋಕವೇ ಅವನ ಮನೆ, ಮಾನವಕುಲವೇ ಅವನ ಕುಟುಂಬ” ವಾಗಿತ್ತು .

“ಲೋ ದರಿದ್ರ ನನ್ಮಗನೇ, ಬೇಗ ಹೋಗುತ್ತೀಯಾ ಇಲ್ಲಾ ಕುತ್ತಿಗೆ ಹಿಡಿದು ಹೊರದೂಡಲೋ” ಜೈಲರ್ ಎದ್ದು ನಿಂತದ್ದೇ ತಡ ಪುರಂದರ ಆಲೋಚನೆಯಿಂದ ಹೊರಬಂದು ವೇಗವಾಗಿ ಜೈಲಿನ ಹೊರನಡೆದ. ಜೈಲಿನಿಂದ ಹೊರಗೆ ಬಂದ ಅವನಿಗೆ ತಾನೆಲ್ಲಿಗೆ ಹೋಗುವುದು ಎಂಬುದು ಸಮಸ್ಯೆಯಾಯಿತು. ಏನೇ ಆಗಲಿ, ಇಲ್ಲಿ ನಿಲ್ಲುವುದು ಬೇಡ. ದೂರ ಹೋಗಿ ಬಿಡುವಾ, ಈ ಊರೇ ಬೇಡ. ಇಲ್ಲಿ ಹೆಚ್ಚಿನವರಿಗೆ ನನ್ನ ಪರಿಚಯವಿದೆ. ಆದರೆ ಯಾರೂ ನನ್ನನ್ನು ಮಾತನಾಡಿಸುವುದಿಲ್ಲ. ದೂರದಲ್ಲಿ ನೋಡಿದೊಡನೆ ಒಂಚೂರು ಬಲವಂತವಾಗಿ ನಕ್ಕು ಹೋಗಿ ಬಿಡುತ್ತಾರೆ. ಒಂದು ವೇಳೆ ನಾನಾಗಿಯೇ ಅವರನ್ನು ನಿಲ್ಲಿಸಿ ಮಾತಾಡಿಸಿದರೆ ಪುರುಸೊತ್ತು ಇಲ್ಲದವರ ಹಾಗೇ ಮಾಡಿ ಹೋಗಿ ಬಿಡುತ್ತಾರೆ. ಬಹುಶಃ ನನ್ನನ್ನು ಕಂಡರೆ ಅವರಿಗೆ ಒಂಥರಾ ಭಯ ಇರಬೇಕು. ಇಲ್ಲಾ ನಾನು ಅಸಹ್ಯವಾಗಿ ಕಾಣುತ್ತಿರಬೇಕು. ಆದರೆ ಅಷ್ಟೊಂದು ನನ್ನನ್ನು ನಿರ್ಲಕ್ಷಿಸಲು ನಾನೇನೂ ಕೊಲೆಗಡುಕನಲ್ಲ. ಒಂದೇ ಒಂದು ಕೊಲೆ ಮಾಡಿಲ್ಲ. ಬರೇ ಸಣ್ಣಪುಟ್ಟ ಪಿಕ್‌ಪಾಕೆಟ್ ಅಥವಾ ಕಳ್ಳತನ ಬಿಟ್ಟರೆ ಬೇರೇನೂ ಮಾಡಿಲ್ಲ. ಅದೂ ಹೊಟ್ಟೆಪಾಡಿಗಾಗಿ. ಕೆಲಸ ಹುಡುಕಿಕೊಂಡು ಹೋದರೆ ಎಲ್ಲರೂ ಸಂಶಯ ದೃಷ್ಟಿಯಿಂದಲೇ ನೋಡುವವರು. ನನ್ನ ಕುಲ, ಗೋತ್ರ, ಊರು, ತಂದೆ, ತಾಯಿ ಬಗ್ಗೆ ವಿಚಾರಿಸುವವರೇ ಎಲ್ಲರೂ. ನನ್ನ ಇತಿಹಾಸದ ಬಗ್ಗೆ ನನಗೇ ಗೊತ್ತಿಲ್ಲದಿದ್ದರೆ ನಾನೇನು ಉತ್ತರ ಕೊಡಲಿ ಅವರಿಗೆ? ಆಲೋಚನೆ ಲಹರಿಯಿಂದ ಹೊರ ಬಂದಾಗ ಪುರುಂದರ ಟೌನ್‌ಹಾಲ್ ಬಳಿ ಬಂದಾಗಿತ್ತು.

ನಿಧಾನವಾಗಿ ಕತ್ತಲೆ ಆವರಿಸುತ್ತಾ ಇತ್ತು. ಟೌನ್‌ಹಾಲ್‌ನಲ್ಲಿ ಯಾವುದೋ ಕಾರ್ಯಕ್ರಮ ಇರಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಟೌನ್‌ಹಾಲಿನ ಒಳಗೆ ಹೊರಗೂ ಜಮಾಯಿಸಿದ್ದರು. ಹತ್ತಿರದ ಪಾರ್ಕ್‌ ಕಡೆ ಗಮನ ಹರಿಸಿದ ಪುರಂದರ. ಕೆಲವು ವಯಸ್ಸಾದವರು ಬೆಂಚು ಕಲ್ಲಿನ ಮೇಲೆಕುಳಿತು ತೂಕಡಿಸುತ್ತಿದ್ದರೆ ಇನ್ನು ಕೆಲವು ಹೆಣ್ಮಕ್ಕಳು ತಮ್ಮ ಮಕ್ಕಳನ್ನು ಆಟ ಆಡಿಸುತ್ತಿದ್ದರು. ಕೈಯಲ್ಲಿ ಕೋಲು ಹಿಡಿದು ನಿಂತ ಬಾಪೂಜಿಯ ಮೂರ್ತಿಯನ್ನು ದೃಷ್ಟಿಸಿ ನೋಡಿದ ಪುರಂದರ. ಬಾಪೂಜಿಯ ಮೂರ್ತಿಯ ಕೆಳಗಿನ ಕಲ್ಲುಬೆಂಚೇ ಅವನ ಮನೆಯಾಗಿತ್ತು. ರಾತ್ರಿ ತನ್ನ ಕಸುಬು ಮುಗಿಸಿ, ಒಂದು ಕ್ವಾರ್ಟರ್ ಏರಿಸಿ ಬಂದು ಆ ಕಲ್ಲು ಬೆಂಚಿನ ಮೇಲೆಮಲಗಿದರೆ ಸೂರ್ಯನ ಬೆಳಕು ಮೈ ಮೇಲೆ ಬಿದ್ದಾಗಲೇ ಅವನಿಗೆ ಎಚ್ಚರವಾಗುತ್ತಿತ್ತು. ಕಲ್ಲುಬೆಂಚನ್ನು ಒಮ್ಮೆ ನೋಡಿದ ಪುರಂದರ. ಯಾರೋ ಮಲಗಿದ್ದು ಕಂಡು ಬಂತು. ಅವನಿಗೆ ನಗು ತಡೆಯಲಾಗಲಿಲ್ಲ. ಈ ದೇಶದಲ್ಲಿ ಯಾವುದೂ ಖಾಲಿಯಾಗಿ ಉಳಿಯುವುದಿಲ್ಲ. ಒಬ್ಬ ಹೋದರೆ ಮತ್ತೊಬ್ಬ ತಯಾರಾಗಿಯೇ ಇರುತ್ತಾನೆ.

ಯಾರೋ ತನ್ನ ಬೆನ್ನ ಮೇಲೆ ಕೈ ಇಟ್ಟೊಡನೆ ಹೆದರಿ ಬೆಚ್ಚಿಬಿದ್ದು ಪುರಂದರ ತಿರುಗಿ ನೋಡಿದ. ಮೂಸೆ!

“ಥೂ! ನೀನಾ? ಈಗ ನೆನಪಾಯಿತೇನೋ ನನ್ನ? ಒಂದು ತಿಂಗಳು ನಾನು ಜೈಲಿನಲ್ಲಿದ್ದೆ. ಒಂದು ದಿನವಾದರೂ ನೋಡಲು ಬಂದಿದ್ದೀಯಾ? ಥೂ..! ಹಲ್ಕಾ….ಏ” ಪುರಂದರ ಅವುಡು ಕಚ್ಟಿದ.

ಮೂಸೆ ಪುರಂದರನ ಸಹಪಾಠಿಯೆ. ಇಬ್ಬರ ಕಸುಬು ಒಂದೇ. ಪುರಂದರ ತಬ್ಬಲಿಯಾಗಿದ್ದರೆ, ಮೂಸೆಗೆ ದೂರದ ಕೇರಳದಲ್ಲಿ ಎಲ್ಲರೂ ಇದ್ದಾರೆ. ಆದರೆ ಬುದ್ದಿ ಹೇಳುವವರು ಯಾರೂ ಇಲ್ಲ. ಏಕೆಂದರೆ ಎಲ್ಲರಿಗೂ ಅವನು ದುಡಿದ ಹಣದಲ್ಲಿ ಪಾಲುಗಾರಿಕೆ ಮಾತ್ರ ಬೇಕಲ್ಲದೆ ಅವನ ಯೋಗಕ್ಷೇಮದ ಅಗತ್ಯವಿರಲಿಲ್ಲ.

“ಕೋಪಿಸಬೇಡ ಪುರಂದರ. ನೀನು ಜೈಲಿಗೆ ಹೋದ ಮರುದಿನ ನಾನು ರೈಲು ಹತ್ತಿ ಊರಿಗೆ ಹೋದವನು ನಿನ್ನೆ ಬಂದೆ. ಬಾ, ಒಂದು ಕ್ವಾರ್ಟರ್ ಹಾಕಿ ಮಾತನಾಡುವ.”

ಮೂಸೆ ಪುರಂದರನನ್ನು ಹತ್ತಿರದ ಬಾರಿಗೆ ಎಳೆದುಕೊಂಡು ಹೋದ. ಸ್ವಲ್ಪ ಭರ್ಜರಿಯಾಗಿಯೇ ‘ಸಮಾರಾಧನೆ’ಯಾದರೂ ಪುರಂದರನ ಮುಖದಲ್ಲಿ ಜೀವಕಳೆ ಇರಲಿಲ್ಲ.

“ಲೋ ಪುರಂದರ, ಇವತ್ತು ಟೌನ್‌ಹಾಲ್‌ನಲ್ಲಿ ತುಳು ನಾಟಕ ನಡೆಯುತ್ತಾ ಇದೆ. ಹೌಸ್‌ಫುಲ್ ಆಗಿದೆ. ಏನಾದರೂ ಕೈ ಚಳಕ ನಡೆಯುತ್ತೆದೆಯೋ ನೋಡಿ ಬರುವಾ, ಬಾ” ಬಹಳ ಉಲ್ಲಾಸದಿಂದ ಮೂಸೆ ಹೇಳುತ್ತಿದ್ದ. ಅವನ ತಲೆಯಲ್ಲಿ ‘ಪರಮಾತ್ಮ’ ಕೆಲಸ ಮಾಡುತ್ತಿತ್ತು. ಯಾಕೋ, ಪುರಂದರನಿಗೆ ತನ್ನ ಕಸುಬಿನ ಮೇಲೆಯೇ ತಿರಸ್ಕಾರ ಉಂಟಾಗಿತ್ತು. ಶ್ರಮವಿಲ್ಲದೆ ಹಣ ಏನೋ ಆಗುತ್ತಿತ್ತು. ಆದರೆ ಸಮಾಜದಲ್ಲಿ ಯಾರೂ ಮರ್ಯಾದೆ ಕೊಡುವುದಿಲ್ಲ. ಎಲ್ಲರೂ ಒಂದು ರೀತಿಯ ತಿರಸ್ಕಾರ ಭಾವನೆಯಿಂದಲೇ ನೋಡುತ್ತಾರೆ. ಈ ಬದುಕು ಯಾಕೆ ಬಾಳಬೇಕು? ನಾನು ಕೂಡಾ ಎಲ್ಲರಂತೆ ಮರ್ಯಾದೆಯಲ್ಲಿ ದುಡಿದು ಜೀವನ ಸಾಗಿಸಬಾರದೇಕೆ? ಒಂಟಿ ಜೀವ ಉಳಿಸಲು ಎಷ್ಟು ಹಣ ಬೇಕು? ಅದರಲ್ಲಿ ನೆಮ್ಮದಿ ಇದೆ, ತೃಪ್ತಿ ಇದೆ. ಇದು ನಾಯಿಬಾಳು! ಸಮಾಜದ ಕಣ್ಣಿನಲ್ಲಿ ಕಳ್ಳ, ನೀಚ. ಜೈಲರ್‌ನ ಮಾತುಗಳು ಅವನ ಎದೆಯನ್ನು ತಿವಿಯತೊಡಗಿತು. ಹೌದು, ಮೂರು ಸಾರಿ ಜೈಲು ಸೇರಿದ ನನ್ನನ್ನು ಇನ್ನೊಮ್ಮೆ ಸಿಕ್ಕಿ ಬಿದ್ದರೆ ಖಂಡಿತ ಜೀವ ಸಮೇತ ಅವರು ಉಳಿಸುವುದಿಲ್ಲ. ಮುಂದಿನ ಶಿಕ್ಷೆ ನೆನೆದು ಪುರಂದರನ ಮೈಯಲ್ಲಿ ಸಣ್ಣ ನಡುಕ ಉಂಟಾಯಿತು. ಮೂಸೆ ಪುರಂದರನ ಕೈ ಹಿಡಿದು ಅಲುಗಾಡಿಸಿದಾಗಲೇ ಅವನಿಗೆ ಎಚ್ಚರವಾಯಿತು.

‘ಯಾಕೋ ಏನೋ ನನಗೆ ನನ್ನ ಕಸುಬಿನಲ್ಲಿ ಹೇಸಿಗೆ ಬಂದಿದೆ ಮೂಸೆ. ಇಕೋ ನನ್ನ ಕೈ, ಕಾಲು, ಬೆನ್ನು, ಎದೆ ನೋಡು’ ತನ್ನ ಅಂಗಿ ಬಿಚ್ಚಿ ಇಡೀ ದೇಹವನ್ನು ಮೂಸೆಗೆ ತೋರಿಸಿದ ಪುರಂದರ. ಇಡೀ ದೇಹದಲ್ಲಿ ಪೋಲೀಸ್ ಇಲಾಖೆಯ ‘ಕರಾಮತ್’ ಎದ್ದು ಕಾಣುತ್ತಿತ್ತು. ಮೂಸೆಗೆ ಪುರಂದರ ಇವತ್ತು ಸರಿಯಿಲ್ಲವೆಂದು ತಿಳಿದು ಅಲ್ಲಿಂದ ಜಾಗ ಖಾಲಿ ಮಾಡಿ ತನ್ನ ಕಸುಬು ಚಾಲ್ತಿ ಮಾಡಲು ಟೌನ್‌ಹಾಲ್ ಕಡೆ ನಡೆದ. ಪುರಂದರ ಪಾರ್ಕಿನ ಖಾಲಿಯಾದ ಬೆಂಚು ಕಲ್ಲಿನ ಮೇಲೆಪವಡಿಸಿದ.

ಮರುದಿನ ಪುರಂದರ ಬಂದರಿನ ಹಲವು ಅಂಗಡಿಗಳಲ್ಲಿ ಕೆಲಸ ಕೇಳಿದ. ಅದರೆ ಪುರಂದರನನ್ನು ನೋಡಿದಾಕ್ಷಣ ಹಲವು ಅಂಗಡಿಯವರು ಕೆಲಸ ಕೊಡಲು ಹಿಂದೇಟು ಹಾಕುತ್ತಿದ್ದರು. ಈ ಊರಿನಲ್ಲಿ ಹೆಚ್ಚು ಜನರಿಗೆ ತನ್ನ ಮುಖ ಪರಿಚಯವಿರುವುದರಿಂದ ಈ ರೀತಿಯಾಗುತ್ತಿರಬಹುದೆಂದು ಪುರಂದರನಿಗೆ ಮನದಟ್ಟಾಯಿತು. ಕೆಲವು ದಿನ ಕಳೆದ ಮೇಲೆ ಪುರಂದರ ತನ್ನ ಹಲವು ವರ್ಷಗಳ ಕಾರ್ಯಸ್ಥಾನ ಬಿಟ್ಟು ಸುಮಾರು ೨೫-೩೦ ಕಿ.ಮೀ. ದೂರದ ಹೊಸ ಪಟ್ಟಣಕ್ಕೆ ಬಂದ. ಆ ಪಟ್ಟಣ ಸಣ್ಣಮಟ್ಟದ ಯಾತ್ರಾ ಸ್ಥಳವಾಗಿತ್ತು. ಹೊಸ ಪಟ್ಟಣ ಪುರಂದರನಿಗೆ ನೆಮ್ಮದಿ ತಂದರೂ ಕೆಲಸ ಸಿಗುವುದು ಕಷ್ಟವಾಗತೊಡಗಿತು. ಕೆಲವರು ಈಗ ಕೆಲಸ ಇಲ್ಲ, ಒಂದು ವಾರ ಬಿಟ್ಟು ಬಾ ಎಂದು ಹೇಳುತ್ತಿದ್ದರು. ಪಟ್ಟಣಕ್ಕೆ ತಾಗಿಯೇ ಒಂದು ಪ್ರಖ್ಯಾತ ದೇವಸ್ಥಾನವಿದ್ದು ಇಲ್ಲಿ ಪರವೂರುಗಳಿಂದ ಭಕ್ತಾದಿಗಳ ದಂಡೇ ಬರುತ್ತಿದ್ದುದರಿಂದ ಸಂಜೆಯಾದರೆ ಪಟ್ಟಣವಿಡೀ ಜನಸಂದಣಿಯಿಂದ ಗಿಜಿಗುಟ್ಟುತ್ತಿದ್ದವು. ಈ ಜನಜಂಗುಳಿಯನ್ನು ನೋಡುವಾಗ ಪುರಂದರನಿಗೆ ತನ್ನ ಹಿಂದಿನ ಕಸುಬಿನ ಕೈಚಳಕ ತೋರಿಸಲು ಮನಸ್ಸಾದರೂ ಅವನು ದೈವ ಸನ್ನಿಧಿಯಲ್ಲಿ ಅ ಕಸುಬಿಗೆ ಮತ್ತೆ ಕೈ ಹಾಕುವುದಿಲ್ಲವೆಂದು ಶಪಥ ಮಾಡಿರುವುದರಿಂದ ಉಯ್ಯಾಲೆಯಾಡುವ ಮನಸ್ಸಿಗೆ ಕಡಿವಾಣ ಹಾಕಿದ್ದನು. ಈ ಜಲಜಾಟವನ್ನು ತಪ್ಪಿಸಲೋಸುಗ ಅವನು ದಿನಾಲೂ ಪವಿತ್ರ ದೇವಸ್ಥಾನಕ್ಕೆ ಸಂದರ್ಶನ ನೀಡಿ ದೇವರಲ್ಲಿ ತನಗೆ ಸದ್ಗುಣ ತೋರು ಎಂದು ಬೇಡಿಕೊಳ್ಳುತ್ತಿದ್ದನು. ಅವನಲ್ಲಿದ್ದ ಅಳಿದುಳಿದ ಹಣ ನೀರಿನಂತೆ ಖರ್ಚಾಗುತ್ತಿತ್ತೇ ಹೊರತು ಅವನಿಗೆ ಕೆಲಸದೊರೆಯಲಿಲ್ಲ.

ಒಂದು ಸಂಜೆ ಎಂದಿನಂತೆ ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತು ಬಂದು ಹೋಗುತ್ತಿರುವ ಭಕ್ತಾದಿಗಳನ್ನು ನೋಡುತ್ತಿದ್ದನು ಪುರಂದರ. ಹೆಂಗಸರು, ಗಂಡಸರು, ಮುದುಕರು, ಮುದುಕಿಯರು, ಬಾಲಕರು, ರೋಗಿಗಳು, ಹಣವಂತರು, ಬಡವರು, ಅತೃಪ್ತರು, ಮಾನಸಿಕ ಸಮತೋಲನ ಕಳಕೊಂಡವರು, ಎಲ್ಲಾ ವಿವಿಧ ರೀತಿಯ ಜನಸ್ತೋಮ ಅಲ್ಲಿ ಸೇರುತ್ತಿತ್ತು. ತಮ್ಮ ತಾಕತ್ತಿಗೆ, ಅನುಗುಣವಾಗಿ ಹರಕೆಗಳನ್ನು ನೀಡಿ ಸಂತೃಪ್ತ ಭಾವದಿಂದ ತೆರಳುತ್ತಿದ್ದರು. ಪುರಂದರನಿಗೆ ತಾನು ಮದುವೆಯಾಗಿದ್ದರೆ ಹೆಂಡತಿ ಮಕ್ಕಳೊಂದಿಗೆ ಈ ಜನಜಂಗುಳಿಯಲ್ಲಿ ಎಲ್ಲರೊಡನೆ ತಾನೂ ಕೂಡ ಒಬ್ಬ ಗೃಹಸ್ಥನಾಗಿರುತ್ತಿದ್ದೆ ಎಂದು ಎನಿಸಿತು. ಆದರೆ ಆ ಭಾಗ್ಯ ಈ ಜನ್ಮದಲ್ಲಿ ಖಂಡಿತ ಸಾಧ್ಯವಿಲ್ಲವೆಂತಲೂ ಅವನಿಗೆ ತಿಳಿದಿತ್ತು. ಪುರಂದರ ದೂರದ ಸಭಾಂಗಣದತ್ತ ದೃಷ್ಟಿ ಹಾಯಿಸಿದ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಭಾಂಗಣದಲ್ಲಿ ಕುಳಿತದ್ದು ಕಂಡಿತು. ಬಹುಶಃ ಸ್ವಾಮಿಗಳು ಉಪದೇಶ ನೀಡುತ್ತಿದ್ದಾರೆ ಎಂದು ಅವನಿಗೆ ಗೊತ್ತಾಗಿ ಅತೃಪ್ತ ಮನಸ್ಸಿನಿಂದ ಸಭಾಂಗಣದತ್ತ ಸಾಗಿ ಸಭಾಂಗಣದ ಒಂದು ಮೂಲೆಯಲ್ಲಿ ಕುಳಿತನು. ಎಲ್ಲರೂ ತದೇಕ ಚಿತ್ತದಿಂದ ಸ್ವಾಮಿಗಳ ಪ್ರವಚನವನ್ನು ಆಲಿಸುತ್ತಿದ್ದರು.

“ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷಾನುದರ್ಶನಮ್.”

‘ಜೀವನದ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿದ್ದೇನೆ ಎಂದು ವ್ಯಕ್ತಿಯೊಬ್ಬನು ಭಾವಿಸಬಹುದು. ಆದರೆ ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿ ಎಂಬ ಈ ನಾಲ್ಕು ಸಮಸ್ಯೆಗಳಿಗೆ ಪರಿಹಾರ ಎಲ್ಲಿದೆ?’

“ಸತ್ಕರ್ಮ ಮತ್ತು ದುಷ್ಕರ್ಮ ಎಂಬ ಎರಡು ಬಗೆಯ ಕರ್ಮಗಳುಂಟು. ನೀವು ಸತ್ಕಾರ್ಯಗಳನ್ನು ಮಾಡಿದರೆ ಸತ್ಫಲ ದೊರೆಯುತ್ತದೆ. ಪಾಪ ಕಾರ್ಯಗಳನ್ನು ಮಾಡಿದರೆ ದುಃಖವನ್ನು ಅನುಭವಿಸಬೇಕಾಗುತ್ತದೆ. ನೀವು ಒಂದು ಪಾಪಕಾರ್ಯವನ್ನು ಮಾಡಿ ಬೇರೊಂದು ರೀತಿಯಲ್ಲಿ ಅದರ ಪರಿಮಾರ್ಜನೆ ಮಾಡಿಕೊಂಡರೆ ಅದೇ ಪ್ರಾಯಶ್ಚಿತ್ತ.”

ಸ್ವಾಮಿಗಳ ಪ್ರವಚನ ಸಾಗುತ್ತಲೇ ಇತ್ತು. ಅವರ ಪ್ರತಿಯೊಂದು ಮಾತು ಪುರಂದರನ ಹೃದಯಕ್ಕೆ ಈಟಿಯಂತೆ ತಿವಿಯುತ್ತಿತ್ತು. ಇಲ್ಲ, ಇನ್ನು ಮುಂದೆ ಪಾಪಾಕಾರ್ಯ ಮಾಡುವುದಿಲ್ಲ. ದುಡಿದು ತಿನ್ನುತ್ತೇನೆ. ಏನೇ ಕಷ್ಟ ಬಂದರೂ ನ್ಯಾಯ, ನೀತಿ, ಸತ್ಯವನ್ನು ಬಿಟ್ಟು ನಡೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡನು. ಪ್ರವಚನ ಮುಗಿಯಿತು. ಸೇರಿದ ಭಕ್ತಾದಿಗಳು ಗುಂಪು ಗುಂಪಾಗಿ ಹೊರಟು ಹೋದರು. ಇನ್ನೇನು! ಕೊನೆಯದಾಗಿ ಸ್ವಾಮಿಗಳು ಹೊರಡಲು ಅನುವಾದರು. ಪುರಂದರ ಮುಂದೆ ಬಂದವನೆ ಏಕಾ‌ಏಕಿ ಸ್ವಾಮಿಗಳ ಕಾಲಿಗೆ ಸಾಷ್ಟಾಂಗ ಅಡ್ದಬಿದ್ದನು.

“ಸ್ವಾಮಿಗಳೇ ನನಗೆ ದಾರಿ ತೋರಿಸಿ. ನಾನು ಅನಾಥ, ನನಗೆ ತಂದೆ, ತಾಯಿ, ಹೆಂಡತಿ, ಮಕ್ಕಳು ಯಾರೂ ಇಲ್ಲ. ಸದ್ಧರ್ಮದಲ್ಲಿ ಬದುಕಲು ಇಷ್ಟಪಡುತ್ತೇನೆ. ದಯವಿಟ್ಟು ನನಗೊಂದು ಕೆಲಸ ದಯಪಾಲಿಸಿ. ನಿಮ್ಮ ಹೆಸರು ಹೇಳಿಕೊಂಡು ಬದುಕುತ್ತೇನೆ. ದಯವಿಟ್ಟು ಇಲ್ಲ ಎನ್ನಬೇಡಿ………..”

ಸ್ವಾಮಿಗಳು ಪುರಂದರನನ್ನು ದೃಷ್ಟಿಸಿ ನೋಡಿದರು. ಕ್ಷಣ ಹೊತ್ತು ಆಲೋಚಿಸಿದರು. ಪುರಂದರ ಸ್ವಾಮಿಗಳ ಕಾಲು ಬಿಡಲೊಲ್ಲ. ಸ್ವಾಮಿಗಳಿಗೆ ಮುಂದೆ ಹೋಗಲಾಗಲಿಲ್ಲ.

‘ಬಾಲಕ ಏಳು, ಈ ಜಗತ್ತೇ ಅವನ ಸೃಷ್ಟಿ. ಸುರಿವ ಮಳೆ, ಉಣ್ಣುವ ಅನ್ನ, ಕುಡಿಯುವ ನೀರು, ಫಲಕೊಡುವ ನೆಲ, ಇವೆಲ್ಲದರಲ್ಲಿ ದೈವತ್ವವಿದೆ. ಅಗೋ! ಅಲ್ನೋಡು, ಆ ಭಕ್ತಾದಿಗಳು ಸೇರಿದ್ದಾರಲ್ಲಾ ಅವರ ಸೇವೆ ಮಾಡು. ಅಲ್ಲಿ ನಿನಗೊಂದು ನೆಲೆಯಿದೆ.”

ಪುರಂದರ ಕೈ ಮುಗಿಯುತ್ತಾ ಎದ್ದು ನಿಂತ. ಸ್ವಾಮಿಗಳು ನಸುನಗುತ್ತಾ ಹೊರಟು ಹೋದರು. ಪುರಂದರನಿಗೆ ಸ್ವಾಮಿಗಳ ಕೊನೆಯ ಮಾತು ತಲೆಯಲ್ಲಿ ತಿರುಗುತ್ತಿತ್ತು “ಭಕ್ತಾದಿಗಳ ಸೇವೆ ಮಾಡು, ಅಲ್ಲಿ ನಿನಗೊಂದು ನೆಲೆಯಿದೆ.”

ಪುರಂದರ ಮರುದಿನ ಬೇಗ ಎದ್ದು, ಸೀದಾ ಕೊಳಕ್ಕೆ ಹೋಗಿ ಸ್ನಾನ ಮಾಡಿದ. ದೇವಸ್ಥಾನಕ್ಕೆ ಬಂದವನೇ ನಿರ್ಮಲ ಮನಸ್ಸಿನಿಂದ ದೇವರಿಗೆ ಕೈ ಮುಗಿದ. ಎಷ್ಟು, ಹೊತ್ತು ಹಾಗೆಯೇ ಭಕ್ತಿಯಿಂದ ನಿಂತಿದ್ದನೋ ಏನೋ! ಜನರ ಓಡಾಟ ಶುರುವಾದಾಗ ಪುರಂದರ ನೈಜಸ್ಥಿತಿಗೆ ಬಂದ. ಅವನಿಗೆ ಒಂದು ಆಲೋಚನೆ ಹೊಳೆಯಿತು. ಸೀದಾ ದೇವಸ್ಥಾನದ ಪ್ರವೇಶದ್ವಾರಕ್ಕೆ ಬಂದ. ಭಕ್ತಾದಿಗಳು ಬರಲು ತೊಡಗಿದರು. ಅವರು ಮಹಾದ್ವಾರಕ್ಮೆ ಪ್ರವೇಶಿಸುತ್ತಿದ್ದಂತೆ ಪುರಂದರ ಎರಡೂ ಕೈ ಮುಗಿದು ಅವರನ್ನು ಸ್ವಾಗತಿಸಿದ. ಅವರ ಚಪ್ಪಲಿ, ಶೂಗಳನ್ನು ಪಕ್ಕದ ದೂರದ ಶಲ್ಫ್‌ಗಳಲ್ಲಿಟ್ಟು ಅವರಿಗೆ ರಟ್ಟಿನ ಟೋಕನ್ ಕೊಟ್ಟ. ಅವರು ಪೂಜೆ ಮುಗಿಸಿ ಹೊರಬಂದಾಗ ಟೋಕನ್ ಹಿಂದೆ ಪಡೆದು ಅವರ ವಸ್ತುಗಳನ್ನು ಹಿಂದೆ ಕೊಡುತ್ತಿದ್ದ. ಅವರೇನಾದರೆ ಪ್ರೀತಿಯಿಂದ ಹಣಕೊಟ್ಟರೆ ಸ್ವೀಕರಿಸುತ್ತಿದ್ದ. ಏನೂ ಕೊಡದವರಿಗೂ ಸಂತೋಪದಿಂದ ಕೈ ಮುಗಿದು ನಮಸ್ಕಾರ ಹೇಳುತ್ತಿದ್ದ. ಬೆಳಿಗ್ಗೆ ಶುರುವಾದರೆ ರಾತ್ರಿ ಬಹಳ ಹೊತ್ತಿನವರೆಗೂ ಈ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದ. ಎರಡು ಹೊತ್ತು ಅನ್ನ ದೇವಸ್ಥಾನದ ವತಿಯಿಂದ ಸಿಗುತ್ತಿತ್ತು. ತಂಗಲು ದೇವಸ್ಥಾನದ ವರಾಂಡ ಇತ್ತು. ಇತರ ಸಣ್ಣಪುಟ್ಟ ಖರ್ಚಿಗೆ ಪುಡಿಗಾಸು ಜಮೆಯಾಗುತ್ತಿತ್ತು. ಸಂಜೆ ಹೊತ್ತು ಮನಃಶಾಂತಿಗೆ ಸ್ವಾಮಿಗಳ ಪ್ರವಚನ ಕೇಳಿ ಬರುತ್ತಿತ್ತು. ಇನ್ನೇನು ಬೇಕು? ಪುರಂದರ ದೇವಸ್ಥಾನದ ಅವಿಭಾಜ್ಯ ಅಂಗವಾಗಿ ಹೋದ. ತನ್ನ ಹಿಂದಿನ ದುರ್ಗಣಗಳನ್ನೆಲ್ಲಾ ಬಿಟ್ಟು ಸಂಪೂರ್ಣ ಸಜ್ಜನನಾದ.

ತಿಂಗಳುಗಳು ಉರುಳಿದವು. ಒಂದು ದಿನ ಸಂಜೆಯ ಸಮಯ. ಭಾನುವಾರ ಭಕ್ತಾದಿಗಳು ಹೇರಳ ಸಂಖೈಯಲ್ಲಿ ಜಮಾಯಿಸಿದ್ದರು. ಪುರಂದರ ತನ್ನ ಕೆಲಸದಲ್ಲಿ ಸಂಪೂರ್ಣ ಮಗ್ನನಾಗಿದ್ದ. ಕೆಲವೇ ಗಜ ದೂರದಲ್ಲಿ ಪೊಲೀಸ್ ಜೀಪು ಬಂದು ನಿಂತಿತು. ಜನಜಂಗುಳಿಯನ್ನು ಬೇಧಿಸಿ ಇಬ್ಬರು ಪೋಲೀಸರು ಭರಭರನೆ ನಡೆದುಕೊಂಡು ಬಂದು ಪುರಂದರನ ಕುತ್ತಿಗೆಗೆ ಕೈ ಹಾಕಿ ಧರಧರ ಎಳದುಕೊಂಡು ಜೀಪಿಗೆ ಎತ್ತಿ ಹಾಕಿದರು. ಒಬ್ಬ ಪೂಲೀಸಿನವ ಪುರಂದರನ ತಲೆಯನ್ನು ಎತ್ತಿ ಜೀಪಿನ ಸರಳಿಗೆ ಬಲವಾಗಿ ಗುದ್ದಿದ.

“ಬೋಳೀಮಗನೇ, ಎಷ್ಟು ವಾರದಿಂದ ನಮ್ಮನ್ನು ಸತಾಯಿಸಿದ್ದೀ. ಕಳೆದ ತಿಂಗಳು ಆ ಊರಿನ ದೇವಸ್ಥಾನದ ಮೂರ್ತಿ ಕಳುವಾದಾಗಲೇ ನಮಗೆ ಗೊತ್ತಿತ್ತು. ಇದು ನಿನ್ನ ಕೆಲಸವೆಂದು. ಪುನಃ ಈ ಊರಿಗೆ ಬಂದು ಸ್ಕೆಚ್ ಹಾಕುತ್ತಿದ್ದೀಯಾ? ಎಲ್ಲಿ ಬಿಡುತ್ತೀಯಾ ನಿನ್ನ ಹಳೇ ಚಾಳಿ. ಬಾ ಮಗನೇ ಸ್ಪೇಷನ್ನಿಗೆ. ನಿನ್ನ ತಿಥಿ ಮಾಡುತ್ತೇವೆ”.
*****

One thought on “0

  1. ಒಳ್ಳೆಯ ಕಥೆ..
    ಹಮೀದ್ ಪಕ್ಕಲಡ್ಕ ಪಳಗಿದ ಕಥೆಗಾರರು..
    ಅವರ ಕಥೆ ಓದುವುದೆಂದರೆ ಖುಷಿ..
    – ಕಾ.ವೀ.ಕೃಷ್ಣದಾಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾಹ
Next post ಕಾಳ್ಗಿಚ್ಚು

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…