ಆವರ್ತನೆ

ಆವರ್ತನೆ

ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು. ಓದಿದ್ದರೂ ನೆನಪಿಲ್ಲ. ಆದರೆ ಅವರ ಹೆಸರು ಕೇಳಿ ಗೊತ್ತಿತ್ತು. ಅಲ್ಲದೆ ಆಗ ತುಂಬಾ ಜನಪ್ರಿಯ ರಾಗಿದ್ದ ಅ.ನ.ಕೃ., ತ.ರಾ.ಸು. ಮೊದಲಾದವರ ಕೃತಿಗಳನ್ನು ಸಾಕಷ್ಟು ಓದಿದ ನಮಗೆ ಸಾಹಿತಿಗಳ ಕುರಿತು ಬಹಳ ಅಭಿಮಾನವಿತ್ತು. ಪೇಪರ್ ಬ್ಯಾಕ್ ಕ್ರಾಂತಿಯ ಕಾಲ ಅದು. ಸ್ಕೂಲು ಹುಡುಗರು, ಬಸ್ ಕಂಡಕ್ಟರರಿಂದ ಮೊದಲಾಗಿ ಮುತ್ತೈದೆಯರ ತನಕ ಎಲ್ಲರೂ ಕಾದಂಬರಿ ಭಕ್ತರು. ಎಲ್ಲರ ಕೈಯಲ್ಲೂ ತ್ರಿವರ್ಣ ರಂಜಿತ ಮುಖಪುಟದ ಪುಸ್ತಕಗಳು. ನಾಲಿಗೆಯಲ್ಲಿ ಸಾಹಿತಿಗಳ ಅಚ್ಚಗನ್ನಡ ಹೆಸರುಗಳು. ಅಂದಿನ ಸಾಹಿತಿಗಳೆಲ್ಲ ತಂತಮ್ಮ ಹೆಸರಿನ ಮೊದಲಕ್ಷರಗಳಿಂದ ಖ್ಯಾತರು.

ನಾವು ಹೋದಾಗ ಸಭೆ ಆಗತಾನೆ ಆರಂಭವಾದದ್ದು. ಶಾಲೆಯ ಮುಖ್ಯೋಪಾಧ್ಯಾಯರು ತಮ್ಮದೇ ತಡವರಿಕೆಯ ಧಾಟಿಯಲ್ಲಿ ಪ್ರಧಾನ ಅತಿಥಿಯ ಪರಿಚಯ ಮಾಡಿಕೊಡುತ್ತಿದ್ದರು. ಅವರ ಮಾತಿನಿಂದ ನಮಗೆ ತಿಳಿದುದು ಇಷ್ಟು. ಅ.ರ.ಸು. ಬಗ್ಗೆ ಎಲ್ಲ ಅಧ್ಯಾಪಕರಿಗೂ ವಿಶೇಷ ಕಳಕಳಿ ಬೇಕು. ಯಾಕೆಂದರೆ ಅವರು ತಮ್ಮ ಬದುಕನ್ನು ಆರಂಭಿಸಿದುದು ಅಧ್ಯಾಪಕನಾಗಿ, ನಂತರ ಸಾಹಿತ್ಯದಲ್ಲಿ ಪ್ರಬಲವಾದ ಆಸಕ್ತಿ ಹುಟ್ಟಿ ಕೆಲಸಕ್ಕೆ ರಾಜಿನಾಮೆ ತೆತ್ತು ಪೂರ್ಣ ಪ್ರಮಾಣದ ಲೇಖಕರಾದರು. ಅ.ರ.ಸು. ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಿ ಮಾರಾಟ ಮಾಡುತ್ತಾರೆ _____ ಪಕ್ಕದ ಕೋಣೆಯಲ್ಲಿ ಅವರ ಕೃತಿಗಳ ಪ್ರದರ್ಶನದ ಏರ್ಪಾಟು ಮಾಡಿದೆ. ಮಾರಾಟದ ವ್ಯವಸ್ಥೆಯೂ ಇದೆ. ಅ.ರ.ಸು. ತಮ್ಮ ಪುಸ್ತಕಗಳನ್ನು ಆಟೋಗ್ರಾಫ಼್ ಮಾಡಿಕೊಡುತ್ತಾರೆ ಎಂದೆಲ್ಲ ಮುಖ್ಯೋಪಾಧ್ಯಾಯರು ಹೇಳಿದರು.

ಸಭೆಯಲ್ಲಿ ಹೆಚ್ಚೇನು ಜನರಿರಲಿಲ್ಲ. ಊರ ಸಣ್ಣ ಪುಟ್ಟ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು, ಇತರ ಗಣ್ಯರು, ಕೆಲವು ಗೃಹಿಣಿಯರು, ನಮ್ಮಂತೆ ಕುತೂಹಲದಿಂದ ಬಂದ ಹುಡುಗರು ____ಇಷ್ಟೆ. ಸಂಜೆಯ ನಾಲ್ಕು ನಾಲ್ಕೂವರೆಯ ಸಮಯ. ಕಿಟಿಕಿಯ ಮೂಲಕ ಬೇಸಿಗೆಯ ಪ್ರಶಸ್ತವಾದ ಇಳಿಬಿಸಿಲು ಕೋಣೆಯೊಳಕ್ಕೆ ಬೀಳುತ್ತಿತ್ತು.

ಪರಿಚಯ ಭಾಷಣವಾದ ಮೇಲೆ ಅ.ರ.ಸು. ಮಾತನಾಡಲು ಎದ್ದಾಗ ಸಭೆಯಿಂದ ಕರತಾಡನವಾಯಿತು. ಅ.ರ.ಸು.ಗೆ ಆಗ ಸುಮಾರು ಅರವತ್ತು ವರ್ಷ ವಯಸ್ಸು. ಅವರ ಅರುವತ್ತರ ಹುಟ್ಟುಹಬ್ಬವನ್ನು ಅಲ್ಲಲ್ಲಿ ಕೊಂಡಾಡಿದ ಸುದ್ದಿ ಪೇಪರಿನಲ್ಲಿ ಬರುತ್ತಿತ್ತು. ಎತ್ತರದ ವ್ಯಕ್ತಿತ್ವ, ಖದ್ದರಿನ ಬಿಳಿಯ ಜುಬ್ಬ ಪಾಯಿಜಾಮ ತೊಟ್ಟಿದ್ದರು. ಅಲ್ಲಲ್ಲಿ ಬೆವತು ಬಣ್ಣ ಮಾಸಿತ್ತು. ಅ.ರ.ಸು. ತಮ್ಮ ಗಂಭೀರವಾದ ಕಂಠದಲ್ಲಿ ಸುಮಾರು ಒಂದೂವರೆ ಗಂಟೇಯ ಕಾಲ ಮಾತನಾಡಿದರು. ಅವರೇನು ಹೇಳಿದರೋ ನಮಗೆ ಸರಿಯಾಗಿ ಅರ್ಥವಾಗದಿದ್ದರೂ ಸಾಮಾಜಿಕ ಕ್ರಾಂತಿ, ಸಾಹಿತ್ಯ ಧರ್ಮ, ಭಾರತೀಯ ಸಂಸ್ಕೃತಿ, ಸಾಹಿತ್ಯದಲ್ಲಿ ಅಶ್ಲೀಲತೆ ಮುಂತಾದ ಪದಗಳು ನಮ್ಮ ಗಮನದಿಂದ ತಪ್ಪಿಸಿಕೊಳ್ಳಲಿಲ್ಲ. ಇಂಥ ವಿಚಾರಗಳನ್ನು ತೆಗೆದುಕೊಳ್ಳುವುದಕ್ಕೆ ಇದಕ್ಕಿಂತ ದೊಡ್ಡ ಸಭೆಯಿರುತ್ತಿದ್ದರೆ ಚೆನ್ನಾಗಿತ್ತು ಎಂದು ನನಗೆ ಅನಿಸಿದ್ದರಿಂದ ಅವರ ಭಾಷಣ ಮುಗಿಯುವ ತನಕವೂ ನಾನು ಒಂದು ಬಗೆಯ ಆತಂಕವನ್ನು ಅನುಭವಿಸಿದೆ ಎಂದರೆ ಸರಿ.

ಸಭೆ ಮುಗಿದಮೇಲೆ ನಾವೆಲ್ಲ ಅವರ ಪುಸ್ತಕಗಳನ್ನು ನೋಡುವುದಕ್ಕೆ ಹೋದೆವು. ಕೆಲವರು ಪುಸ್ತಕಗಳನ್ನು ಕೊಂಡುಕೊಂಡರು. ನನಗೂ ಒಂದು ಕಾದಂಬರಿ ಯನ್ನು ಕೊಂಡುಕೊಳ್ಳೋಣವೆನಿಸಿತು. ನನ್ನ ಬಳಿ ಸಾಕಷ್ಟು ಹಣವಿಲ್ಲದುದರಿಂದ ಜತೆಯಲ್ಲಿ ಬಂದ ಗೆಳೆಯರಿಂದ ಸಾಲ ಪಡೆದು ಇದ್ದುದರಲ್ಲಿ ಆಕರ್ಷಕವಾದ ಮುಖಪುಟವಿದ್ದ ಪುಸ್ತಕವೊಂದನ್ನು ಖರೀದಿಸಿದೆ. ಅ.ರ.ಸು. ರವರ ಹಸ್ತಾಕ್ಷರ ಪಡೆಯಲು ಅವರ ಬಳಿ ಹೋದೆ. ಅ.ರ.ಸು. ಅಭಿಮಾನಿಗಳಿಂದ ಸುತ್ತುವರಿಯಲ್ಪಟ್ಟಿದ್ದರು. ಆದರೂ ನಾನು ಪುಸ್ತಕವನ್ನು ಮುಂದೆ ನೀಡಿದಾಗ ಸಂತೋಷದಿಂದ ಹಸ್ತಾಕ್ಷರ ಹಾಕಿ ನನ್ನನ್ನು ಮಾತಾಡಿಸಿದರು. ಹೆಸರು ಕೇಳಿದರು ಎಲ್ಲಿ ಓದುತ್ತಿದ್ದೀ ಎಂದು ವಿಚಾರಿಸಿದರು.

“ಸಾಹಿತ್ಯದಲ್ಲಿ ಆಸಕ್ತಿಯೆ?” ಎಂದು ಕೇಳಿದರು.

ಹೌದೆಂದು ಗೋಣಾಡಿಸಿದೆ.

“ನನ್ನ ಮಹಾತ್ಮಾ ಕಾದಂಬರಿಯನ್ನು ಓದಿದ್ದೀಯಾ?”

“ಹೂಂ” ಎಂದು ಸುಳ್ಳು ಹೇಳಿದೆ.

“ಹೇಗನಿಸಿತು?” ಏನು ಹೇಳಬೇಕೆಂದು ತೋಚದೆ ಕೊನೆಗೆ “ಚೆನ್ನಾಗಿದೆ.” ಅಂದೆ. ಅಷ್ಟರಲ್ಲಿ ಇನ್ನಾರೋ ಒಬ್ಬರು ಅ.ರ.ಸು. ರವರ ಹಸ್ತಾಕ್ಷರ ಪಡೆಯಲು ಪುಸ್ತಕವೊಂದನ್ನು ತಂದರು.

ತ್ರಿವರ್ಣರಂಜಿತ ಹೊತ್ತಗೆಯೊಂದಿಗೆ ಊರಿಗೆ ಮರಳುವಾಗ ನನಗೆ ಅದರ ಕರ್ತೃವನ್ನು ಭೇಟಿ ಮಾಡಿದ ಹುರುಪು. ದಾರಿಯಲ್ಲಿ ಸಿಕ್ಕಿದ ಹೋಟೆಲುಗಳಲ್ಲಿ ಕಾಫ಼ೀ ಕುಡಿಯುತ್ತ, ಬೀಡಿ ಸಿಗರೇಟು ಸೇದುತ್ತ, ಸಾಹಿತ್ಯದ ಬಗ್ಗೆ ಮಾತಾಡುತ್ತ ನಮ್ಮ ನಮ್ಮ ಊರು ಸೇರುವಾಗ ದಾರಿ ಕಾಣಿಸದಷ್ಟು ಕತ್ತಲಾಗಿತ್ತು.

ಆ ಕಾದಂಬರಿಯನ್ನು ನಾನು ಓದಿ ಮುಗಿಸಿದೆನೇ ಇಲ್ಲವೇ ಎಂಬುದು ಈಗ ನೆನಪಿಲ್ಲ. ಓದಿ ಮುಗಿಸಿರಲೂಬಹುದು. ಚಿಕ್ಕಂದಿನಲ್ಲಿ ಕೈಗೆತ್ತಿಕೊಂಡುದನ್ನು ಪೂರ್ತಿ ಮುಗಿಸುವ ಅಭ್ಯಾಸವಿತ್ತು. ಆದರೆ ಅ.ರ.ಸು. ಹಾಗೂ ಅವರ ಕೃತಿಗಳು ಎಂದಿನಿಂದ ನನ್ನ ಸ್ಮೃತಿಪಟಲದಿಂದ ತೋಯ್ದವು ಎಂದು ಹೇಳುವುದು ಕಷ್ಟ. ನಾನೇನೂ ಸಾಹಿತ್ಯದ ವಿದ್ಯಾರ್ಥಿಯಾಗಿರದಿದ್ದರೂ (ಮುಂದೆ ಓದಿದ್ದು, ಕಲಿಸತೊಡಗಿದ್ದು ಅರ್ಥಶಾಸ್ತ್ರ) ಸಾಹಿತ್ಯದ ಬಗೆಗಿನ ಆಸಕ್ತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಎಲ್ಲಿ ಏನಾಗುತ್ತದೆ ಎಂಬ ಅರಿವನ್ನು ಬೆಳಿಸಿಕೊಂಡಿದ್ದೆ ಎನ್ನಬಹುದು. ಏನೇನೋ ಚಳುವಳಿಗಳು, ಕ್ರಾಂತ್ರಿಗಳು, ಹೊಸ ವಿಚಾರಗಳು ಬಂದು ಹೋಗುತ್ತಿದ್ದುವು ಅದೇ ರೀತಿ ಹೊಸ ಲೇಖಕರು. ಹೊಸ ಕಾಲಕ್ಕೆ ಹೊಸ ಹೀರೋಗಳು, ಎಂಬ ಮಾತು ಸಾಹಿತ್ಯ ಕ್ಷೇತ್ರಕ್ಕೂ ಸರಿಯೆ. ಈ ಪ್ರವಾಹದಲ್ಲಿ ಕೊಚ್ಚಿಕೊಂಡುಹೋದ ಮಂದಿಗೆ ಲೆಕ್ಕವಿಲ್ಲ. ಅ.ರ.ಸು.ಹೆಸರನ್ನು ಆಮೇಲೆ ನಾನು ಎಲ್ಲೂ ಕೇಳಲಿಲ್ಲ. ಬಹುಶಃ ಯಾವ ಸಾಹಿತ್ಯ ವಿಮರ್ಶೆ ಯಲ್ಲೂ ಅವರ ಹೆಸರಿನ ಉಲ್ಲೇಖವಿರಲಾರದು.

ಬಹಳ ಕಾಲದ ನಂತರ ನನಗೆ ಅ.ರ.ಸು. ನೆನಪಿಗೆ ಬಂದುದು ಒಂದು ಆಕಸ್ಮಿಕವೇ ಸರಿ. ನಾನು ನೌಕರಿಯಲ್ಲಿದ್ದ ಕಾಲೇಜಿಗೆ ಒಮ್ಮೆ ಒಬ್ಬ ಇಂಗ್ಲೀಷ್ ಲೆಕ್ಚರರ್ ಹೊಸತಾಗಿ ಕೆಲಸಕ್ಕೆ ಸೇರಿಕೊಂಡ. ವಯಸ್ಸು ಕಿರಿದು. ಆದರೆ ತಲೆಗೂದಲಿನ ನರೆತ, ದೇಹದ ಬೆಳವಣಿಗೆ ವಯಸ್ಸು ಮೀರಿದಂತೆ ಅನಿಸುತ್ತಿದ್ದುವು. ಹೆಸರು ರಮಣಮೂರ್ತಿ.

ಆಗ ನಾನು ಕಾಲೇಜು ಹಾಸ್ಟಲ್ಲಿನಲ್ಲಿ ವಾಸಿಸುತ್ತಿದ್ದೆ. ರಮಣಮೂರ್ತಿಯೂ ಅಲ್ಲೇ ವಾಸಿಸಲು ಬಂದ. ಇದರಿಂದ ಹೆಚ್ಚಿನ ಪರಿಚಯವಾಯಿತು. ಮೆಸ್ಸಿನಲ್ಲಿ ಊಟಕ್ಕೆ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದ. ಮಾತಾಡಲು ಮನಸ್ಸಾದರೆ ಒಂದೇ ಸಮನೆ ಮಾತಾಡುತ್ತಿದ್ದ. ಮೌನ ಧರಿಸಿದರೆ ನನ್ನನ್ನು ಪರಿಚಯವೇ ಇಲ್ಲದವನಂತೆ ಕಾಣುತ್ತಿದ್ದ. ಕ್ಲಾಸಿನಲ್ಲಿ ಅವನಿಗೆ ಹುಡುಗರು ತೊಂದರೆ ಕೊಡುತ್ತಿದ್ದರು. ಆದರೆ ರಮಣಮೂರ್ತಿ ಯಾವುದರ ಕುರಿತೂ ಹಚ್ಚಿಕೊಳ್ಳದವನಂತೆ ಗಂಭೀರವಾಗಿರುತ್ತಿದ್ದ.

ರಮಣಮೂರ್ತಿ ಕವಿಯೆಂದು ಗೊತ್ತಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಆತ ಈಗ ಎಲ್ಲರಿಗೂ ತನ್ನ ಕೃತಿಗಳನ್ನು ಮಾರಲು ಶುರು ಮಾಡಿದ. ಒಂದು ದಿನ ರೂಮಿಗೆ ಬಂದು ನನ್ನ ಮುಂದೆ ಎರಡು ಪುಸ್ತಕಗಳನ್ನಿರಿಸಿ__
“ಕೊಂಡುಕೊಳ್ಳುತ್ತೀರಾ?” ಎಂದು ಕೇಳಿದ.

ಮೂರ್ತಿ ತನ್ನ ಪುಸ್ತಕಗಳನ್ನು ತಾನೇ ಪ್ರಕಟಿಸುತ್ತಿದ್ದಾನೆ ಎಂದು ತಿಳಿದ ಮೇಲೆ ಇಪ್ಪತ್ತು ರೂಪಾಯಿಗಳನ್ನು ಎಣಿಸಿಕೊಟ್ಟೆ.

“ನೀವು ಕೊಳ್ಳುವುದು ಮುಖ್ಯವಲ್ಲ.”

ನೋಟುಗಳನ್ನು ಜೇಬಿಗಿಳಿಸುತ್ತ ಮೂರ್ತಿ ಹೇಳಿದ.

ನಾನು ತುಸು ಚಕಿತನಾಗಿ ಅವನ ಮುಖ ನೋಡಿದೆ.

“ಓದುವುದು ಮುಖ್ಯ.”

“ಓದುತ್ತೇನೆ” ಎಂದೆ.

“ಯಾವಾಗ ಓದುತ್ತೀರಿ?”

“ಆದಷ್ಟು ಬೇಗನೆ.”

ರಮಣಮೂರ್ತಿ ಬರೆಯುತ್ತಿದ್ದುದು ಇಂಗ್ಲೀಷಿನಲ್ಲಿ. ಕನ್ನಡದಲ್ಲಿ ಬರೆಯಬಾರದೆ ಎಂದು ಕೇಳಿದರೆ ತನಗೆ ಆ ಭಾಷೆಯಲ್ಲಿ ಸಾಕಷ್ಟು ಪರಿಣತಿ ಇಲ್ಲವೆನ್ನುತ್ತಿದ್ದ. ಇಂಗ್ಲೀಷ್ ಭಾಷೆ, ಸಾಹಿತ್ಯ ಅಭ್ಯಾಸ ಮಾಡಿದ್ದಲ್ಲದೆ ರಮಣಮೂರ್ತಿ ಕೆಲವು ವರ್ಷ ಕೆನಡಾ ದೇಶದಲ್ಲಿ ಇದ್ದು ಬಂದಿದ್ದ. ತನ್ನ ಸಾಹಿತ್ಯದ ಬಗ್ಗೆಯೇ ಅವನು ಹೆಚ್ಚಾಗಿ ಮಾತನಾಡುತ್ತಿದ್ದುದು. ಕಾಲೇಜಿನಲ್ಲಿ ಅವನ ಇಂಗ್ಲೀಷ್ ಪದ್ಯಗಳ ವಾಚನ, ಭಾಷಣ ಇತ್ಯಾದಿಗಳನ್ನು ಇರಿಸಿದೆವು. ಅಲ್ಲದೆ ಅಕ್ಕಪಕ್ಕದ ಊರುಗಳಿಂದಲೂ ಅದು ಹೇಗೋ ಅವನಿಗೆ ಆಮಂತ್ರಣಗಳು ಬರುತ್ತಿದ್ದುವು.

ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದ. ಮೊದಲನೆಯದು ಸಾಂಗ್ಸ್ ಆಫ಼್ ಲವ್ ____ಪ್ರೇಮ ಗೀತೆಗಳು. ಎರಡನೆಯದು ಸಾಂಗ್ಸ್ ಆಫ಼್ ಫ಼್ಯಾಶನ್ ____ಪ್ರಣಯ ಗೀತೆಗಳು. ಈಗ ಮೂರನೆಯ ಪುಸ್ತಕದ ತಯಾರಿಯಲ್ಲಿದ್ದ. ಅದರ ಬಗ್ಗೆ ಹೇಳಿದ್ದ. ಹೆಸರು ಸಾಂಗ್ಸ್ ಆಫ಼್ ಡೆಸ್ಟೇರ್ _________ದುಃಖ ಗೀತೆಗಳು. ನಾಲ್ಕನೆಯದು ಸಾಂಗ್ಸ್ ಆಫ಼್ ರಿನನ್ಸಿಯೇಶನ್ ____ವೈರಾಗ್ಯ ಗೀತೆಗಳು. ನಂತರ ಸಾಂಗ್ಸ್ ಫ಼ಾರ್ ದ ಬುದ್ಧಾ ಬರೆಯಬೇಕೆಂದಿದ್ದ. ಇದೊಂದು ಮಹಾ ಕಾವ್ಯ. ಇಡೀ ಇಂಡಿಯಾದ ಹಿಸ್ಟರಿ, ಹಿಸ್ಟಾರಿಕಲ್ ಕಾಂಟೆಕ್ಸ್ಟ್ ನಲ್ಲೇ ಮೂಡಿಬರುವಂಥದು.

ನಾನು ಪುಸ್ತಕಗಳನ್ನು ಕೊಂಡುಕೊಂಡ ಮರುದಿನವೇ ರಮಣಮೂರ್ತಿ ವಿಚಾರಿಸಿದ _______”ಓದಿದಿರ?”

“ಇಲ್ಲ” ಎಂದೆ. ನನಗೆ ಪರೀಕ್ಷೆ ಪೇಪರುಗಳನ್ನು ತಿದ್ದುವುದಿತ್ತು. ರಮಣಮೂರ್ತಿಗೆ ಅಸಮಾಧಾನವಾಗಿತ್ತು. ಶಿಕ್ಷಣ ಪದ್ಧತಿಯನ್ನೂ, ಪರೀಕ್ಷೆಗಳನ್ನೂ ಟೀಕಿಸುವುದರೆ ಮೂಲಕ ತನ್ನ ಅಸಮಾಧಾನವನ್ನು ತೋರಿಸಿಕೊಂಡ.

ಸಿಕ್ಕ ಮೊದಲ ಸಂದರ್ಭದಲ್ಲೇ ಆ ಪುಸ್ತಕಗಳನ್ನೋದಿದೆ. ಅಲ್ಲಲ್ಲಿ ಕೆಲವು ಕವಿತೆಗಳಲ್ಲಿ ಕಾವ್ಯದ ಹೊಳವು ಇದ್ದರೂ ಒಟ್ಟಾರೆ ರಚನೆ ನನಗೆ ಹಿಡಿಸಲಿಲ್ಲ. ಭಾಷೆ ಕ್ಲೀಷೆಗಳಿಂದ ತುಂಬಿದ ಹಾಗೆ ನನಗೆ ಅನಿಸಿತು. ಹಾಗೆಂದು ಮೂರ್ತಿಗೆ ಹೇಳಿದಾಗ ಆತ ಒಂದೇ ಸವನೆ ನನಗೆ ಪ್ರಶ್ನೆಗಳನ್ನು ಹಾಕತೊಡಗಿದ. ಯಾವ ಕವಿತೆ ನಿಮಗೆ ಹಿಡಿಸಲಿಲ್ಲ, ಯಾಕೆ? ಅದು ಕ್ಲೀಷೆಯೆಂದು ಹೇಗೆ ಹೇಳುತ್ತೀರಿ? ನಾನಿಲ್ಲಿ ಹೊಸ ಅರ್ಥವನ್ನು ಧ್ವನಿಸಿದ್ದೇನೆಂದು ನೀವು ಒಪ್ಪುವುದಿಲ್ಲವೆ? ಯಾಕೆ? ಇತ್ಯಾದಿ, ಇತ್ಯಾದಿ.

ಮೂರ್ತಿಯ ಪರಿಚಯ, ಒಡನಾಟ ಹೆಚ್ಚುತ್ತ ಹೋದಂತೆ ಅವನಿಂದ ತಪ್ಪಿಸಿಕೊಳ್ಳುವುದು ಹೇಗೆಂಬುದೇ ನನಗೆ ಸಮಸ್ಯೆ ಯಾಗತೊಡಗಿತು. ಮೆಸ್ಸು, ಬಾತ್ ರೂಮು, ಕ್ಯಾಂಟೀನು _____ಎಲ್ಲೆಂದರಲ್ಲಿ ಮೂರ್ತಿ ಧುತ್ತೆಂದು ಬಂದು ಪ್ರಶ್ನೆಗಳನ್ನು ಕೇಳುತ್ತಿದ್ದ. ನನಗೆ ಸಾಹಿತ್ಯದಲ್ಲೇನೋ ಅಪಾರವಾದ ಆಸಕ್ತಿಯಿದೆ. ಒಳ್ಳೆಯ ಪುಸ್ತಕಗಳು ಸಿಕ್ಕಿದರೆ ಓದುತ್ತೇನೆ. ಆದರೆ ಸದಾ ಕಾಲ ಅದರ ಕುರಿತೇ ಮಾತಾಡುತ್ತಿರುವುದು ಸೇರುವುದಿಲ್ಲ. ಕಾರಣ ನನಗೆ ಬೇರೆ ಆಸಕ್ತಿಗಳೂ ಇವೆ.

ಒಂದು ಮಧ್ಯರಾತ್ರಿ ಮೂರ್ತಿ ಬಂದು ಕದ ತಟ್ಟಿದ. ಒಳಗೆ ಬಂದು ಕುಳಿತು ಯಾವ ಪೀಠಿಕೆಯೂ ಇಲ್ಲದೆ ಮಾತಿಗೆ ತೊಡಗಿದ. ನನ್ನನ್ನು ನಿದ್ದೆಯಿಂದ ಎಬ್ಬಿಸಿದಕ್ಕೆ ಅವನಿಗೆ ಯಾವ ಪಶ್ಚಾತ್ತಾಪವೂ ಇರಲಿಲ್ಲ. ಆ ಕ್ಷಣ ಅವನು ತನ್ನ ಬಗ್ಗೆಯೇ ಚಿಂತಿಸಿಕೊಳ್ಳುತ್ತಿದ್ದ.

“ಐ ಆಮ್ ಫುಲ್ ಆಫ಼್ ಫ಼ಾದರ್! “ಎಂದ.

“ಫುಲ್ ಆಫ಼್ ಫ಼ಾದರ್?”

“ಮೈ ಫ಼ಾದರ್”

“ಯಾಕೆ?”

“ಐ ಆಮ್ ಎ ವೆರಿ ಡಿಸ್ಟರ್ಬ್ಡ್ ಮ್ಯಾನ್…….ನಾನು ಎಲ್ಲವನ್ನೂ ಕೂಡಲೇ ಬರೆದಿಡಬೇಕಾಗಿದೆ”

“ಏನನ್ನು?”

“ನನ್ನ ಫ಼ಾದರ್ ನ ದರ್ಶನಗಳನ್ನು, ಅವರ ವಿಚಾರಗಳನ್ನು, ಆ ಬಗ್ಗೆ ನನಗೆ ಗೊತ್ತಿರುವಷ್ಟು ಇನ್ನಾರಿಗೂ ಗೊತ್ತಿಲ್ಲ. ಐ ಆಮ್ ಹಿಸ್ ಸನ್. ನನಗೆ ಕೆಲವೊಮ್ಮೆ ಫ಼ಾದರ್ ನ ಆತ್ಮದೊಂದಿಗೆ ಟೆಲಿಪತಿ ಸಂಪರ್ಕವುಂಟಾಗುತ್ತದೆ…..”

“ಯಾರು ನಿಮ್ಮ ಫ಼ಾದರ್”

“ಅವರು ಕನ್ನಡದ ಕಳೆದ ಜನರೇಶನ್ ನ ದೊಡ್ಡ ಸಾಹಿತಿಗಳಾಗಿದ್ದರು”

“ಹೌದೆ! ಏನು ಹೆಸರು?”

“ಅ.ರ.ಸು.”

“ಅ.ರ.ಸು.?”

“ಅ. ರ. ಸು.”

ಮೂರ್ತಿ ವಿರಳವಾಗಿ ಹೇಳಿದ.

ನನಗಿದರಿಂದ ಚೇತರಿಸಿಕೊಳ್ಳುವುದಕ್ಕೆ ಕೆಲವು ನಿಮಿಷಗಳೇ ಬೇಕಾದುವು.

“ಅವರ ಬುಕ್ಸ್ ಓದಿಲ್ಲವೇ ನೀವು?” ಮೂರ್ತಿ ಕೇಳಿದ.

“ಓದಿದ್ದೇನೆ.” ಎಂದೆ.

“ಹಿ ವಾಸ್ ಗ್ರೇಟ್”

“ಯಸ್”

ನಂತರ ಸ್ವಲ್ಪ ಹೊತ್ತು ಸುಮ್ಮನಿದ್ದು ಮೂರ್ತಿ ತಟ್ಟನೆ ಹೇಳಿದ :

“ಕೆಲಸಕ್ಕೆ ರಿಸೈನ್ ಮಾಡಲು ನಿಶ್ಚಯಿಸಿದ್ದೇನೆ.”

“ಯಾಕೆ?”

“ಫ಼ುಲ್ ಟೈಮ್ ರೈಟರ್ ಆಗುವುದಕ್ಕೆ…..ನನಗೆ ಹೆಚ್ಚು ಸಮಯವಿಲ್ಲ. ಸಾಂಗ್ಸ್ ಫ಼ಾರ್ ದ ಬುದ್ದಾ ಬರೆಯದೆ ನಾನೇ ಸತ್ತರೆ ನಾನೇ ನನ್ನನ್ನು ಕ್ಷಮಿಸುವಿದಿಲ್ಲ. ಐ ಮಸ್ಟ್ ಗೋ ನೌ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನ್ಮ
Next post ಅರೆ ಕಳೆದಿದೆ ರಾತ್ರಿ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…