ನೀವು ವಿಕ್ಟೋರಿಯನ್ ಕಾಲದ (ಅಂದರೆ ಹತ್ತೊಂಬತ್ತನೇ ಶತಮಾನದ) ಕಾಲೇಜುಗಳಲ್ಲಿನ ತರಗತಿಯ ಕೋಣೆಗಳನ್ನು ನೋಡಿದರೆ ಅವುಗಳ ರಚನೆ ಒಂದು ರೀತಿಯ ಇಗರ್ಜಿ ವೇದಿಕೆ ಹಾಗೂ ಅದರ ಮುಂದಿನ ಸಭಾಂಗಣದ ತರ ಇರುವುದು ನಿಮ್ಮ ಗಮನ ಸೆಳೆಯಬಹುದು. ಹೆಚ್ಚಾಗಿ ಇಂಥ ಶೈಲಿಯಲ್ಲಿ ವೇದಿಗೆ ಸಾಕಷ್ಟು ಎತ್ತರದಲ್ಲಿದ್ದು, ಎದುರಿನ ಸಭಾಂಗಣ ಅಂಕಣ ಅಂಕಣವಾಗಿ ಮೇಲೇರುತ್ತ ಹೋಗುತ್ತದೆ. ಈ ಅಂಕಣಗಳಲ್ಲೇ ವಿದ್ಯಾರ್ಥಿಗಳಿಗೆ ಬೆಂಚು ಮೇಜುಗಳು. ಇವು ಹೆಚ್ಚಾಗಿ, ಎರಕದ ಕಬ್ಬಿಣದಿಂದ ಮಾಡಿದ್ದು, ಆಚೀಚೆ ತೆಗೆದೊಯ್ಯಲು ಅಸಾಧ್ಯವಾಗಿರುವಂತೆ ಜೋಡಿಸಲ್ಪಟ್ಟಿರುತ್ತವೆ. ಈ ಲೇಖನ ಓದುತ್ತಿರುವ ನಿಮ್ಮಲ್ಲಿ ಹಲವರು ಇಂಥವೇ ತರಗತಿಗಳಲ್ಲಿ ಕೂತು ಪಾಠ ಕೇಳಿದವರಾಗಿರಬಹುದು. ಇಂಥ ವಿಕ್ಟೋರಿಯನ್ ಮಾದರಿಯ ತರಗತಿಗಳನ್ನು ಆಮೇಲೆ ಅಸ್ತಿತ್ವಕ್ಕೆ ಬಂದಂಥ ಕೆಲವು ಯೂನಿವರ್ಸಿಟಿಗಳಲ್ಲೂ ಕಾಣುತ್ತೇವೆ, ಹಾಗೂ ಈ ಮಾದರಿಯೇ ಓಂದು ಆದರ್ಶ ತರಗತಿ ಎಂಬ ಭಾವನೆ ಹಲವರ ಮನಸ್ಸಿನಲ್ಲಿ ಈಗಲೂ ಇದೆ. ಈ ಮಾದರಿ ಕೇವಲ ಇಗರ್ಜಿಯ ಸಭಾಂಗಣದ್ದು ಮಾತ್ರವೂ ಅಲ್ಲ; ಪರಂಪರಾಗತ ನಾಟಕ ಗೃಹಗಳದ್ದೂ ಹೌದು. ರಂಗಭಾಷೆಯಲ್ಲಿ ಇದಕ್ಕೆ ‘ಪ್ರೊಸೀನಿಯಂ ರಂಗಭೂಮಿ’ ಎಂದು ಕರೆಯುತ್ತಾರೆ. ಇಲ್ಲಿಯೂ ವೇದಿಕೆ ಎತ್ತರದಲ್ಲಿದ್ದು ಪ್ರೇಕ್ಷಕರು ಕೆಳಗಡೆ ಕೂತುಕೊಳ್ಳುತ್ತಾರೆ. ಅದೇ ರೀತಿ ಸಾಧಾರಣವಾಗಿ ನಾವು ಕಾಣುವ ಸಭಾಗೃಹಗಳದ್ದೂ ಇದೇ ಶೈಲಿ. ಇಲ್ಲೆಲ್ಲಾ ಮಾತಾಡುವವರು ಎತ್ತರದ ವೇದಿಕೆಯ ಮೇಲೆ ಇದ್ದರೆ, ಕೇಳುವವರು ಕೆಳಗಡೆ ಕೂತುಕೊಂಡಿರುತ್ತಾರೆ. ಹಾಗೂ ವೇದಿಕೆಯ ಮೇಲೆ ಮಾತಾಡುವವರಿಗೋಸ್ಕರವೇ ಓಂದು ಎದೆಯೆತ್ತರದ ಮೇಜು ಕೂಡಾ ಇರುತ್ತದೆ. ಮೈಕನ್ನು ಜೋಡಿಸಿರುವುದು ಈ ಮೇಜಿಗೇ. ಈ ‘ರಂಗಭೂಮಿ’ಯ ಹಿಂದಕ್ಕೆ ಒಂದು ಗೋಡೆಯಿಂದ ಗೋಡೆ ತನಕದ ಕರಿಹಲಗೆಯನ್ನು ಜೋಡಿಸಿದರೆ ‘ಆದರ್ಶ ತರಗತಿ’ ಸಿದ್ಧಂತೆಯೇ ಸರಿ! ಅಧ್ಯಾಪಕರು ಇಲ್ಲಿ ನಿಂತು ಪಾಠ ಮಾಡುತ್ತಾರೆ; ತೆಳಗೆ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುತ್ತಾರೆ, ಟಿಪ್ಪಣಿ ಬರೆದುಕೊಳ್ಳುತ್ತಾರೆ; ಗಂಟೆಯಾದ ನಂತರ ಅಧ್ಯಾಪಕರು ಎದ್ದು ಅವರಷ್ಟಕ್ಕೇ ಹೊರಟುಹೋಗುತ್ತಾರೆ, ವಿದ್ಯಾರ್ಥಿಗಳು ಬಹುಶಃ ಇನ್ನೊಂದು ಪಾಠಕ್ಕೆ ಕಾಯುತ್ತಾರೆ, ಇಲ್ಲವೇ ಅವರೂ ಎದ್ದು ಹೋಗುತ್ತಾರೆ.
ಈ ತರಗತಿ ರಚನೆಯನ್ನು ಕೇವಲ ವಾಸ್ತುಶಿಲ್ಪದ ದೃಷ್ಟಿಯಿಂದ ಮಾತ್ರವೇ ನೋಡಿದರೆ ನಮಗೆ ಅದರ ಹಿಂದಿನ ತತ್ವ ಗೊತ್ತಾಗುವುದಿಲ್ಲ. ನಮ್ಮ ಪ್ರತಿಯೊಂದು ಕಟ್ಟಡದ ಹಿಂದೆಯೂ ಓಂದು ಫಿಲಾಸಫಿ ಅಡಗಿರುವಂತೆ ಈ ವಿಕ್ಟೋರಿಯನ್ ತರಗತಿಯ ಹಿಂದೆಯೂ ಒಂದು ಶೈಕ್ಷಣಿಕ ಸಿದ್ಧಾಂತ ಅಡಗಿದೆ. ಅದನ್ನು ಬಹುಶಃ ಈ ಕೆಳಗಣ ರೀತಿಯ ಗ್ರಹಿಕೆಗಳಿಂದ ವಿವರಿಸಬಹುದು:
೧. ಪಾಠ ಮಾಡುವುದೆಂದರೆ, ಅಧ್ಯಾಪಕರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ‘ಸಂವಹನ’ ಮಾಡುವುದು.
೨. ಜ್ಞಾನವಿರುವುದು ಅಧ್ಯಾಪಕರಲ್ಲಿ, ವಿದ್ಯಾರ್ಥಿಗಳಿಗೆ ಏನೂ ಗೊತ್ತಿರುವುದಿಲ್ಲ.
೩. ಅಧ್ಯಾಪಕರು ಹೊಸತಾಗಿ ಕಲಿಯುವುದಕ್ಕೇನೂ ಇರುವುದಿಲ್ಲ; ಕ್ಲಾಸಿಗೆ ತಯಾರಿ ನಡೆಸಿದರೆ ಸಾಕು.
೪. ವಿದ್ಯಾರ್ಥಿಗಳು ಅಧ್ಯಾಪಕರಿಂದ ಕಲಿಯುತ್ತಾರಲ್ಲದೆ, ಅಧ್ಯಾಪಕರು ವಿದ್ಯಾರ್ಥಿಗಳಿಂದ ಕಲಿಯುವಂಥದು ಏನೂ ಇರುವುದಿಲ್ಲ.
೫. ಅಧ್ಯಾಪಕರು ಎತ್ತರದಲ್ಲಿಯೂ ವಿದ್ಯಾರ್ಥಿಗಳು ಕೆಳಗೆಯೂ ಇದ್ದಾಗ ಈ ಜ್ಞಾನ ಸಂವಹನ ಹರಿಯುವುದಕ್ಕೆ ಸುಲಭವಾಗುತ್ತದೆ.
೬. ಮಾತಾಡುವುದು ಅಧ್ಯಾಪಕರ ಕೆಲಸ, ಆಲಿಸುವುದು ವಿದ್ಯಾರ್ಥಿಗಳ ಕೆಲಸ.
೭. ತರಗತಿಯಲ್ಲಿ ಅಧ್ಯಾಪಕರಿಗೆ ಎಲ್ಲ ವಿದ್ಯಾರ್ಥಿಗಳೂ ಒಟ್ಟಿಗೇ ಕಾಣಿಸಬೇಕು, ಅದೇ ರೀತಿ ಎಲ್ಲ ವಿದ್ಯಾರ್ಥಿಗಳಿಗೂ ಅಧ್ಯಾಪಕರು ಕಾಣಿಸಬೇಕು; ಆದರೆ ವಿದ್ಯಾರ್ಥಿಗಳಿಗೆ ಪರಸ್ಪರರು ಕಾಣಿಸುವ ಅಗತ್ಯವಿಲ್ಲ.
೮. ತರಗತಿಯಲ್ಲಿ ವೇದಿಕೆ ಅಧ್ಯಾಪಕರ ಕಾರ್‍ಯಕ್ಷೇತ್ರ; ಸಭಾಂಗಣ ವಿದ್ಯಾರ್ಥಿಗಳ ಕಾರ್ಯಕ್ಷೇತ್ರ. ಒಬ್ಬರು ಇನ್ನೊಬ್ಬರ ಕ್ಷೇತ್ರವನ್ನು ಪ್ರವೇಶಿಸಬಾರದು.
೯. ವಿದ್ಯಾರ್ಥಿಗಳು ತಾವು ಇದ್ದಲ್ಲೇ ಇರಬೇಕು. (ಕರಿಹಲಗೆ, ಮಾತಿನ ಮೇಜು ಇತ್ಯಾದಿ ಸೌಲಭ್ಯಗಳಿರುವುದು ಅಧ್ಯಾಪಕರಿಗಲ್ಲದೆ ವಿದ್ಯಾರ್ಥಿಗಳಿಗಲ್ಲ.)
೧ಂ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆದಷ್ಟೂ ಪರಸ್ಪರರಿಂದ ದೂರ ಇರಕತಕ್ಕದ್ದು.
ಆಶ್ಚರ್ಯವೆನಿಸುತ್ತದೆ ಅಲ್ಲವೇ? ಆದರೆ ಇದು ಸತ್ಯ. ಇಂಥ ತತ್ವಗಳನ್ನು ಯಾರೊಬ್ಬರೂ ಬೇಕೆಂದೇ ಹೇರಿದರೆಂದು ಈ ಮಾತಿನ ಅರ್ಥವಲ್ಲ. ಹಲವು ಸಲ ನಮ್ಮ ಅಂತರ್ಗತ ವಿಶ್ವಾಸಗಳ ಬಗ್ಗೆ ನಮಗೇ ಅರಿವಿರುವುದಿಲ್ಲ. ಇದನ್ನೇ ಐಡಿಯಾಲಜಿ ಎನ್ನುವುದು. ಹಾಗೂ ಈ ಐಡಿಯಾಲಜಿ ಇಡೀ ಹತ್ತೊಂಬತ್ತು ಮತ್ತು ಬಹುಪಾಲು ಇಪತ್ತನೇ ಶತಮಾನಗಳಲ್ಲಿ ಪ್ರಚಲಿತವಿದ್ದುದು. ಈಗ ಈ ಶೈಕ್ಷಣಿಕ ತತ್ವಕ್ಕೂ ಸಾರ್ವಜನಿಕ ಭಾಷಣ ಮತ್ತು ಪ್ರೊಸೀನಿಯಂ ರಂಗಭೂಮಿಗಳಿಗಿರುವ ಸಾಮ್ಯ ಗೊತ್ತಾಗುತ್ತದೆ. ಇವೆಲ್ಲದರಲ್ಲೂ ಕ್ರಿಯೆ ಕೆಲವೇ ಮಂದಿಗೆ ಸೀಮಿತವಾಗಿದ್ದು ಇದಕ್ಕೆ ಒಂದು ಪದರ್ಶನದ ಕಳೆ ಬರುತ್ತದೆ. ಈವತ್ತು ಮೇಷ್ಟ್ರ ಪಾಠ ಚೆನ್ನಾಗಿತ್ತು ಎಂದರೆ, ಮೇಷ್ಟ್ರು ರಾಜಕೀಯ ಧುರೀಣನಂತೆ ಕೈ ಮೈ ಕುಣಿಸಿ ಭಾಷಣ ಮಾಡಿದರು ಎಂದು ಅರ್ಥ. ಅಥವಾ ಅವರ ಪಾಠ ಪಾದ್ರಿಯ ಮತಪ್ರಸಂಗದ ಹಾಗಿತ್ತು ಎಂದು, ಇಲ್ಲವೇ ದುರಂತ ನಾಟಕವೊಂದರಲ್ಲಿ ನಾಯಕನ ಅಭಿನಯದಂತಿತ್ತು ಎಂದು. ಆದರೆ ದುರದೃಷ್ಟವಶಾತ್ ತರಗತಿಯಲ್ಲಿ ಪಾಠ ಮಾಡುವುದೆಂದರೆ ಇದೊಂದೂ ಅಲ್ಲ! ಯಾಕೆಂದರೆ ಪಾಠ ಮಾಡುವುದೊಂದು ಪ್ರದರ್ಶನ ಕಲೆಯಲ್ಲ.
ಇದೆಲ್ಲಾ ಈಗ, ನಮ್ಮ ಬದಲಾದ ತಿಳುವಳಿಕೆಗೆ, ಸ್ವಲ್ಪ ಹಳತಾಯಿತೆಂದು ಅನಿಸಬಹುದಾದರೂ, ಆಗಾಗ್ಗೆ ಇದನ್ನು ನೆನಪು ಮಾಡಿಕೊಳ್ಳುವುದು ಒಳಿತು. ಯಾಕೆಂದರೆ, ಇಂಥ ಗತಕಾಲದ ಮನೋಧರ್ಮ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳಲ್ಲೂ ಅಲ್ಲಿನ ಅಧ್ಯಾಪಕರಲ್ಲೂ ಇದ್ದರೆ ಆಶ್ಚರ್ಯವಿಲ್ಲ. ಕೆಲವೊಮ್ಮೆ ನಾವು ಪತ್ರಿಕೆಗಳಲ್ಲಿ ಓದುತ್ತೇವೆ: ಯಾರೋ ಅದೆಷ್ಟೋ ಗಂಟೆಗಳ ಕಾಲ ಸತತವಾಗಿ ಪಾಠಮಾಡಿ ಗಿನ್ನಿಸ್ ದಾಖಲೆ ಸ್ಥಾಪಿಸಲು ಪ್ರಯತ್ನಿಸಿದರು ಮುಂತಾಗಿ. ಇಂಥದೊಂದು ಕಲ್ಪನೆಯೇ ಗತಕಾಲದ ಮನೋಧರ್ಮಕ್ಕೆ ಸೇರಿದುದು; ಯಾಕೆಂದರೆ, ಅರ್ಥ ಗಂಟೆಗಿಂತ ಜಾಸ್ತಿ ಯಾರದೇ ಗಮನ ಒಂದೇ ವಿಷಯದ ಮೇಲೆ ಕೇಂದ್ರೀಕೃತವಾಗುವುದು ಸಾಧ್ಯವಿಲ್ಲ ಎನ್ನುತ್ತದೆ ಮನಶ್ಶಾಸ್ತ್ರ. ಹೀಗಿರುತ್ತ ವಿದ್ಯಾರ್ಥಿಗಳನ್ನು ಕೂಡಿಹಾಕಿ ಎಷ್ಟೋ ಗಂಟೆಗಳ ಕಾಲ ಎಡೆಬಿಡದೆ ಅವರ ಮುಂದೆ ಭಾಷಣ ಮಾಡುವುದು ನಿಜವಾದ ಪಾಠವಾಗುವುದಿಲ್ಲ.
ಇಂದಿನ ನಮ್ಮ ಬದಲಾದ ಶಿಕ್ಷಣ ಸಿದ್ಧಾಂತ ಮೇಲೆ ಕೊಟ್ಟ ಗ್ರಹಿಕೆಗಳನ್ನೆಲ್ಲ ಪ್ರಶ್ನಿಸುತ್ತದೆ ಹಾಗೂ ತಿರಸ್ಕರಿಸುತ್ತದೆ. ಆದ್ದರಿಂದ ಪಾಠ ಮಾಡುವುದೆಂದರೆ ಜ್ಞಾನದ ಸಂವಹನವಲ್ಲ; ಕೇವಲ ಮಾಹಿತಿಗಳನ್ನಷ್ಪೇ ಒಬ್ಬರಿಂದೊಬ್ಬರಿಗೆ ನೀಡಬಹುದಷ್ಟೆ ಅಲ್ಲದೆ ಜ್ಞಾನವನ್ನಲ್ಲ. ಮಾಹಿತಿಗಳನ್ನು ಕೇವಲ ಅಧ್ಯಾಪಕರು ಮಾತ್ರವೇ ಅಲ್ಲ, ಪುಸ್ತಕ, ಪತ್ರಿಕೆ ಹಾಗೂ ಇತರ ಮಾಧ್ಯಮಗಳು, ಸಹವಿದ್ಯಾರ್ಥಿಗಳು, ಸದ್ಯ ಅಂತರ್ಜಾಲ ಮೊದಲಾದ ಮೂಲಗಳು ಒದಗಿಸುತ್ತವೆ. ಜ್ಞಾನವೆನ್ನುವುದು ಪ್ರತಿಯೊಬ್ಬನಲ್ಲೂ ಮೂಡಿಬರಬೇಕಾದ ಸಂಗತಿ. ಇದು ಕೇವಲ ಪಾಠ ಕೇಳುವುದರಿಂದಲೋ, ಪುಸ್ತಕ ಓದುವುದರಿಂದಲೋ ಬರುವಂಥದೂ ಅಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಂತ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅರಿವಿನ ಅನ್ವೇಷಣೆ ನಡೆಸಬೇಕಾಗುತ್ತದೆ. ಯಾರು ಪ್ರಶ್ನೆ ಕೇಳಬಲ್ಲರೋ ಅವರು ಅರಿವಿಗೆ ತಯಾರಾಗಿರುತ್ತಾರೆ ಎಂದು ಅರ್ಥ. ಗ್ರೀಕ್ ತತ್ವಜ್ಞಾನಿ ಸಾಕ್ರೆಟೀಸ್ನ ಮೂಲತತ್ವ ಹಾಗೂ ಪದ್ಧತಿ ಇದೇ ಆಗಿತ್ತು -ಎಂದರೆ ಪಶ್ನೋತ್ತರ ನಡೆಸುವುದು. ಪ್ಲೇಟೋ ದಾಖಲಿಸಿದ ಸಾಕ್ರೆಟೀಸನ ಮಾತುಗಳು ಸಂಬಾಷಣೆಯ ರೂಪದಲ್ಲಿರುವುದು ಗಮನಾರ್ಹ. ಇದೇ ಇಂದು ನಾವು ಸ್ವೀಕರಿಸಿಕೊಂಡಿರುವ ಶೈಕ್ಷಣಿಕ ಪದ್ಧತಿ ಕೂಡಾ. ಇದರಲ್ಲಿ ಅಧ್ಯಾಪಕನ ಸ್ಧಾನವೇನು? ಸಾಕ್ರೆಟೀಸ್ ತನ್ನನ್ನು ತಾನು ಒಬ್ಬ ಸೂಲಗಿತ್ತಿಗೆ ಹೋಲಿಸಿಕೊಂಡದ್ದುಂಟು. ಎಂದರೆ ಜ್ಞಾನಸೃಷ್ಟಿಯಲ್ಲಿ ಒಬ್ಬ ಪ್ರಸೂತಿಗಾತಿಯ ಪಾತ್ರ.
ಈ ಪದ್ಧತಿ ಜಯಪದವಾಗಬೇಕಾದರೆ, ನಾವು ಮೇಲಿನ ಎಲ್ಲಾ ಗರಹಿಕೆಗಳನ್ನೂ ಬಿಟ್ಟುಕೊಡುವುದು ಅಗತ್ಯ. ವಿದ್ಯಾರ್ಥಿಗಳು ಅಧ್ಯಾಪಕರಿಂದ ಕಲಿತುಕೊಳ್ಳುವಂತೆ, ಅಧ್ಯಾಪಕರೂ ವಿದ್ಯಾರ್ಥಿಗಳಿಂದ ‘ಕಲಿತುಕೊಳ್ಳುವುದು’ ಬಹಳಷ್ಟು ಇರುತ್ತದೆ. ಇಂಥ ಸಂವೇದನೆಯಿಲ್ಲದ ಅಧ್ಯಾಪಕರು ಒಳ್ಳೆಯ ಪಾಠವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಮಾತ್ರವೂ ಅಲ್ಲ, ನಿರಂತರ ಅಧ್ಯಯನಶೀಲರಾದವರು ಮಾತ್ರವೇ ಉತ್ತಮ ಅಧ್ಯಾಪಕರೂ ಆಗಬಲ್ಲರು. ಅರ್ಥಾತ್ ಅಧ್ಯಾಪಕರು ಯಾವತ್ತೂ ವಿದ್ಯಾರ್ಥಿಗಳಾಗಿ ಇರಲೇಬೇಕು. ಇದು ಸಾಧ್ಯವಾಗುವುದು ಅವರಿಗೆ ತಾವು ಕಲಿಸುವ ವಿಷಯದಲ್ಲಿ ಆಸಕ್ತಿಯಿದ್ದಾಗ ಮಾತ್ರ. ಅದಲ್ಲವೆಂದಾದರೆ, ಅಧ್ಯಾಪಕರು ದನಿಯೆತ್ತರಿಸಿ ಭಾಷಣ ಮಾಡಬಹುದಾದರೂ, ವಿದ್ಯಾರ್ಥಿಗಳ ಜತೆ ಜೀವಂತವಾದ ಸಂಭಾಷಣೆ ನಡೆಸಲಾರರು. ವಿದ್ಯಾರ್ಥಿಗಳನ್ನು ದೂರೀಕರಿಸುವ ಯಾವ ಹೆಜ್ಜೆಗಳನ್ನೂ ಅಧ್ಯಾಪಕರು ತೆಗೆದುಕೊಳ್ಳಬಾರದು. ಎತ್ತರದ ದನಿಯಲ್ಲಿ ಭಾಷಣ ಮಾಡುವುದು ಇಂಥ ದೂರೀಕರಣದ ಓಂದು ವಿಧಾನವಾದರೆ, ಸೂಟು ಬೂಟುಗಳನ್ನು ಹಾಕಿಕೊಂಡು ತರಗತಿಗೆ ಬರುವುದು ಇನ್ನೊಂದು!
ಹೀಗೆ ದನಿಯೆತ್ತರಿಸಿ ಭಾಷಣ ಮಾಡುವುದರಿಂದ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ನಡುವೆ ಈ ಭಾಷಣದ ಧಾಟಿಯೇ ಒಂದು ತಡೆಯಾಗುತ್ತದೆ ಎನ್ನುವುದನ್ನೂ ಮನಗಾಣಬೇಕು. ಅಧ್ಯಾಪಕರು ವಿದ್ಯಾರ್ಥಿಗಳ ಜತೆ ಮಾತಾಡಬೇಕೇ ವಿನಾ ಅವರಿಗೆ ಭಾಷಣ ಕೊಡಬಾರದು. ಹಾಗೂ ಹೊಸ ಶೈಕ್ಷಣಿಕ ಪದ್ಧತಿಯ ಪ್ರಕಾರ, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮಾಡುವುದಕ್ಕೆ ಬೇರೆ ಬೇರೆ ತರದ ಸಾಕಷ್ಟು ಚಟುವಟಿಕೆಗಳಿರಬೇಕು. ಇದರಲ್ಲಿ ಕೆಲವನ್ನಾದರೂ ಗುಂಪುಗಳಲ್ಲಿ ಮಾಡುವುದು ಒಳ್ಳೆಯದು. ಇದನ್ನೆಲ್ಲ ನಾನಿಲ್ಲಿ ವಿವರಿಸುವುದಕ್ಕೆ ಹೋಗಲಾರೆ. ಆದರೆ ಇಲ್ಲಿ ಮುಖ್ಯವಾದ ಸಂಗತಿಯೆಂದರೆ, ಈ ಹೊಸ ಪದ್ಧತಿ ಕಾರ್ಯಗತವಾಗಬೇಕಾದರೆ ಹೇಗೆ ನಮ್ಮ ತರಗತಿಗಳ ವಿನ್ಯಾಸ ಕೂಡಾ ಬದಲಾಗುವುದು ಅಗತ್ಯ ಎನ್ನುವುದು.
ಹಳೆಯ ವಿಕ್ಟೋರಿಯನ್ ತರಗತಿಗಳಲ್ಲಿ ನೀವು ಇದೊಂದನ್ನೂ ಮಾಡಲಾರಿರಿ. ವೇದಿಕೆಯ ಮೇಲಿದ್ದ ಅಧ್ಯಾಪಕ ಯಾವತ್ತೂ ವಿದ್ಯಾರ್ಥಿಗಳಿಂದ ದೂರವಾಗಿರುತ್ತಾನೆ, ಹಾಗೂ ವೇದಿಕೆಯೆನ್ನುವುದೇ ಅವನಿಗೆ ದನಿಯೆತ್ತರಿಸಿ ಭಾಷಣ ಮಾಡುವುದಕ್ಕೆ ಪ್ರೇರೇಪಿಸುತ್ತದೆ. ಆತ ವಿದ್ಯಾರ್ಥಿಗಳಿಗೆ ಗುಂಪು ಕೆಲಸ ಕೊಡಲಾರ. ಅವರೊಂದಿಗೆ ದೃಷ್ಟಿ ಸಂಪರ್ಕವೂ ಸಾಧ್ಯವಾಗಲಾರದು. ವಿದ್ಯಾರ್ಥಿಗಳೂ ತಾವು ಕೂತಲ್ಲಿಂದ ಏಳುವುದಕ್ಕೆ ಹಿಂಜರಿಯುತ್ತಾರೆ. ಇನ್ನು ಇಂಥ ಕಡೆ ಅವರು ಕರಿಹಲಗೆಯನ್ನು ಉಪಯೋಗಿಸುವುದು ದೂರದ ಮಾತಾಯಿತು.
ಇಂಥ ಪಳೆಯುಳಿಕೆಯ ಕೋಣೆಗಳನ್ನು ಪೂರ್ತಿ ಪುನರ್ವಿನ್ಯಾಸಗೊಳಿಸುವುದು ಜರೂರು ಅಗತ್ಯವಾಗಿದೆ. ಒಂದು ತರಗತಿ ಕೋಣೆಯೆಂದರೆ ಅಲ್ಲಿ ಯಾವ ವೇದಿಕೆಯೂ ಇರಬಾರದು. ಕರಿಹಲಗೆಯು ನಾಲ್ಕೂ ಗೋಡೆಗಳ ಮೇಲೆ ಇದ್ದರೆ ಒಳ್ಳೆಯದು. ಇಂಥ ತರಗತಿಯಲ್ಲಿ ಹಿಂದಿನ ಬೆಂಚು ಮುಂದಿನ ಬೆಂಚು ಎಂಬುದೇ ಇರುವುದಿಲ್ಲ. ಪೀಠೋಪಕರಣಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಅಗತ್ಯ. ನಾಲ್ಕೋ ಆರೋ ಮಂದಿ ಸುತ್ತ ಕೂತುಕೊಳ್ಳಲು ಸಾಧ್ಯವಾಗುವ ಚಪ್ಪಟೆ ಮೇಲ್ಮೈಯ ಮೇಜುಗಳು ಸಾಕಷ್ಟು ಇರಬೇಕು. ಮೇಜು ಕುರ್ಚಿಗಳು ಆಚೀಚೆ ತೆಗೆದುಕೊಂಡು ಹೋಗಲು ಸಾಕಷ್ಟು ಹಗುರವಾಗಿರಬೇಕು. ಹಾಗಿದ್ದರೆ, ಇವುಗಳನ್ನೆಲ್ಲ ಆಯಾ ಚಟುವಟಿಕೆಗಳಿಗೆ ತಕ್ಕಂತೆ ಜೋಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೇವಲ ಓಂದು ಭಾಗದಲ್ಲಿ ಬರೆಯುವ ಹಲಗೆ ಜೋಡಿಸಿರುವ ಕುರ್ಚಿಗಳೂ ಈಗ ದೊರಕುತ್ತವೆ. ಇವುಗಳಿದ್ದರೆ ಮೇಜುಗಳು ಕಡಿಮೆ ಸಾಕು. ಇಂಥ ವಾತಾವರಣದಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳ ಜತೆ ಬೆರೆಯಲು ಸಾಧ್ಯವಾಗುತ್ತದೆ. ಅವರ ಜತೆ ಕೂತು ಅವರ ಸಮಸ್ಯೆಗಳನ್ನು ಚರ್ಚಿಸಬಹುದು. ವಿದ್ಯಾರ್ಥಿಗಳಿಂದಲೇ ಕೆಲವು ತುಣುಕು ಪಾಠಗಳನ್ನು ಕ್ಲಾಸಿಗೆ ಹೇಳಿಸಬಹುದು. ವಿದ್ಯಾರ್ಥಿಗಳ ಜತೆ ಹೀಗೆ ಅಂತರ ಕಡಿಮೆ ಮಾಡಿಕೊಡುವುದರಿಂದ ಅಧ್ಯಾಪಕರ ಗೌರವ ಇಳಿಯುತ್ತದೆ ಎಂದುಕೊಳ್ಳುವುದು ಬೇಡ; ವಾಸ್ತವದಲ್ಲಿ, ಚೆನ್ನಾಗಿ ಕಲಿಸುವ ಅಧ್ಯಾಪಕರ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವ ಯಾವಾಗಲೂ ಇರುತ್ತದೆ. ಇಂಥ ತರಗತಿಗಳಲ್ಲಿ ಚಟುವಟಿಕೆಗಳು, ಮಾತುಕತೆಗಳು, ಸಂಭಾಷಣೆಗಳು ಸಾಧ್ಯ. ಇಲ್ಲಿ ವಿದ್ಯಾರ್ಥಿಗಳು ಯಾವಾಗಲೂ ಅಧ್ಯಾಪಕರ ಮುಖವನ್ನೇ ನೋಡುತ್ತ ಕೂತಿರಬೇಕಾದ್ದಿಲ್ಲ; ಅವರು ತಮ್ಮ ತಮ್ಮಲ್ಲೇ ಚರ್ಚಿಸಿ ಗುಂಪು ಕೆಲಸದಲ್ಲಿ ತೊಡಗಿರುವುದಕ್ಕೆ ಸಾಧ್ಯವಾಗುತ್ತದೆ. ಅಂತೆಯೇ ಕಲಿಸುವುದು ಅಧ್ಯಾಪಕರಿಗೆ ಓಂದು ಹೊರೆಯಾಗದೆ ಸಂತೋಷದ ಸಂಗತಿಯಾಗುತ್ತದೆ. ಬದಲಿಗೆ ಹಿಂದಣ ಸಭಾಂಗಣದ ತರಗತಿಯಲ್ಲಿ ಒಬ್ಬ ಅಧ್ಯಾಪಕ ಎಪ್ಪೇ ಪ್ರಯತ್ನಿಸಿದರೂ ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವುದು ಕಷ್ಟ.
*****