ಯಾರು ಹೊಣೆ?

ಯಾರು ಹೊಣೆ?

“ಧಡ್……. ಧಡಲ್…….. ಧಡಕ್” ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ “ಸಿಳ್” ಎಂದು ಬೀಸುತ್ತಿತ್ತು. ನಾನು ಇಳಿಯಬೇಕಾದ ನಿಲ್ದಾಣವದು. ಹಳ್ಳಿಯ ಹೊಲದ ಕೆಲಸಕ್ಕಾಗಿ ಹೋಗ ಬೇಕಾದ ನಾನು ಕಚೇರಿಯ ಕೆಲಸ ತೀರಿಸಿಕೊಂಡು ರಾತ್ರಿಯ ಗಾಡಿಯನ್ನು ಹಿಡಿಯಬೇಕಾಗಿದ್ದಿತು. ಕೆಳಗಿಳಿದು ಸುತ್ತಲೂ ನೋಡಿದೆ ದೂರದಲ್ಲಿ ನಿಲ್ದಾಣದ ದೀಪ ಮಿನುಗುತ್ತಿತ್ತು. ಗಾಡಿ ‘ಕೊಂಯ್ಯ’ ಎಂದು ಕೂಗಿದ್ದೇ ತಡ ಹೊರಟುಬಿಟ್ಟಿತು. ನಾನು ನಿಲ್ದಾಣ ಸೇರುವಷ್ಟರಲ್ಲಿಯೇ ಪೋರ್‍ಟರ ದೀಪ ‘ಉಫ್’ ಮಾಡಿದ್ದ! ನಿದ್ದೆಗಣ್ಣಿನಲ್ಲಿದ್ದ ಸ್ಟೇಶನ್ ಮಾಸ್ತರ ಮತ್ತೆ ಹೋಗಿ ಹಾಸಿಗೆಯಲ್ಲಿ ಒರಗಿಬಿಟ್ಟ. ಅಲ್ಲಿ ಇಲ್ಲಿ ನೋಡಿದೆ. ಕೆಲಜನ ಗೊರಕೆ ಹೊಡೆಯುತ್ತಿದ್ದರು. ನಾನೂ ಒಂದು ಮೂಲೆಯಲ್ಲಿ ಚದ್ದರ ಹೊದ್ದು ಕೊಂಡು ಕುಳಿತೆ! ರಾತ್ರಿ ಹೇಗಾದರೂ ಕಳೆಯಬೇಕಾಗಿತ್ತು. ಕತ್ತಲುಗವಿಯಲ್ಲಿ ಯಾವನೋ ಒಬ್ಬ ಹುಡುಗ ಬಂದಂತೆ ಕಂಡಿತು. ಸ್ಟೇಶನ್ ಮಾಸ್ತರು ಅದೇ ಸೇದಿ ಒಗೆದ ಕೊರೆ ಬೀಡಿಯನ್ನು ಹುಡುಗ ಕೂಡಲೇ ಎತ್ತಿಕೊಂಡು ಸೇದುತ್ತ ನಿಂತ. ಕತ್ತಲೆಯಲ್ಲಿಯೂ ಕೂಡ ಹರಕ ಬಟ್ಟೆ ತೊಟ್ಟಿದ್ದಾನೆಂಬದು ತೋರುತ್ತಿದ್ದು, ಗದಗದ ನಡುಗುತ್ತಿದ್ದ. ಬೀಡಿ ಸೇದುತ್ತ ಒಳಗೆ ಬಂದು ನನ್ನ ಹತ್ತಿರವೇ ಕಟಾಂಜನದ ಹತ್ತರ ಅಪ್ಪುಗೈ ಹಚ್ಚಿಕೊಂಡು ನಿಂತುಕೊಂಡ. ನಾನು ಸಾವಕಾಶವಾಗಿ “ಯಾರೋ ನೀನು?” ಎಂದೆ.

ಅದಕ್ಕೆ ಆ ಹುಡುಗ ಮರುಮಾತಾಗಿ “ನಾನರೇ….. ನಾನರಿ” ಎಂದ. ನಾನು ಅವನ ಮಾತಿಗೆ ತುಸು ಸಿಟ್ಟಾಗಿ “ನಾ ಅಂದರುಽ………… ಯಾರು” ಅಂದೆ.

“ನಾನರೆ ಕರಿಯಾರಿ……. ಅಪ್ಪಾ ಅವರ” ಎಂದು ಗಕ್ಕನೆ ನೆಲಕ್ಕೆ ಹು… ಹು…ಹು ಎನ್ನುತ್ತ ಕುಳಿತಕೊಂಡ. ಕರಿಯ ಶಬ್ದವೂ ಕೂಡ ಅಜ್ಞಾನವನ್ನು ಸೂಚಿಸುವಂತಿದೆ ಎಂದು ಮನದಲ್ಲಿಯೇ ಅಂದುಕೊಂಡು ತುಸುಹೊತ್ತು ಸುಮ್ಮನೆ ಕುಳಿತು ಮತ್ತೆ ವಿಚಾರಕ್ಕೆ ಪ್ರಾರಂಭಮಾಡಿದೆ. ಹುಡುಗ ಬಡವನಿದ್ದದ್ದೆನೋ ಒಡೆದು ಕಾಣುತ್ತಿತ್ತು. ಆದರೆ ಅವನ ಲಕ್ಷ ತೆಗೆದುಕೊಳ್ಳುವವರು ಈ ಜಗತ್ತಿನಲ್ಲಿ ಯಾರಾದರೂ ಇದ್ದಾರೋ ಇಲ್ಲವೋ ತಿಳಿಯದಾಯಿತು. ಹುಡುಗ ‘ಕೊಸ್-ಕೊಸ್’ ಕೆಮ್ಮಹತ್ತಿದ. ನಾನು ಮತ್ತೆ ಮಾತು ಸುರುವುಮಾಡಿದೆ; “ಅಲ್ಲೋ, ಬೀಡಿ ಸೇದತೀ, ಇಷ್ಟು ಸಣ್ಣ ಹುಡಗ ನೀನು! ಕೆಮ್ಮು ಹತ್ತದೇನು ಮಾಡೀತು?”

“ತಂಡಿ ಹತ್ತತೈತರಿ, ಅದಕ್ಕೆ ಸೇದಿದೆ.” ಅವನ ಅಜ್ಞಾನಕ್ಕೆ ನನ್ನ ಮನಸ್ಸಿಗೆ ಬಹಳ ವ್ಯಥೆಯಾಯಿತು. “ನಿಮ್ಮ ಅಪ್ಪ ಅವ್ವಗ ಗೊತ್ತಾದರ ನಿನಗೆ ಪೆಟ್ಟು ಬೀಳಬಹುದಲ್ಲ?” ಎಂದೆ. ನನ್ನ ಮಾತು ಮುಗಿಯುವದೇ ತಡ ಹುಡುಗ “ನಮ್ಮಪ್ಪ ಅವ್ವ ಸತ್ತಾರಿ” ಎಂದ.

“ಅಯ್ಯೋ ಪಾಪ! ಅನಾಥ ಹುಡುಗ” ಎಂದು ಮನದಲ್ಲಿಯೇ ಅಂದು ಮತ್ತೆ ಯೋಚನೆ ಮಾಡುತ್ತ ಕುಳಿತುಕೊಂಡೆ. ವಿಚಾರಗಳು ಸುರುಳಿ ಸುರುಳಿಯಾಗಿ ಹೊರಡಹತ್ತಿದವು. ಇಂಗ್ಲಂಡ ರಶಿಯಾ ಮೊದಲಾದ ರಾಷ್ಟ್ರಗಳಲ್ಲಿ ಹೀಗೆ ಸಣ್ಣ ಹುಡುಗರನ್ನ ಸರಕಾರವು ಹೇಗೆ ಬಿಟ್ಟೀತು? ಮತ್ತು ವಿದ್ಯಾರ್ಥಿಗಳ ಶಿಕ್ಷಣ ಮೊದಲಾದವುಗಳನ್ನು ಸರಕಾರವು ದಕ್ಷತೆಯಿಂದ ನೋಡಿಕೊಳ್ಳುತ್ತಿದೆ. ಆದರೆ ನಮ್ಮ ದೇಶದಲ್ಲಿ……..! ಹೀಗೆ ಏನೇನೋ ವಿಚಾರ ನಡೆಯಿತು. ಅಲ್ಲಿ ಇದ್ದ ಜನರಲ್ಲಿ ಎಚ್ಚರಿದ್ದವರೆಂದರೆ ನಾನು ಹಾಗೂ ಕೆಮ್ಮುತ್ತ ಕುಳಿತ ಆ ಅನಾಥ ಬಾಲಕ. ನಮ್ಮ ಮಾತು ಯಾರೂ ಕೇಳುವದಕ್ಕೆ ಅವಕಾಶವಿರಲಿಲ್ಲ. ಪಾಪ ಅವರಿಗೆ ಕೇಳುವ ಪರಿಸ್ಥಿತಿ ಇರಲಿಕ್ಕಿಲ್ಲ!

“ಅಲ್ಲೋ ತಮ್ಮಾ, ನಿಮ್ಮ ಕಡೆಯವರು ಮತ್ತಾರೂ ಇಲ್ಲವೇನೋ?”
“ಅದಾರ್ರಿ ನಮ್ಮ ಮಾವ, ಅವರು ನನಗೆ ಬಹಳ ಹೊಡಿತಾರ್ರಿ.”
“ಮತ್ತ ನೀ ಹೀಂಗ ಬೀಡಿ ಸೇದಿದರ ಬಿಟ್ಟಾರ ಹೇಳು” ಅಂದೆ.
“ಮನ್ಯಾಗ ಕೆಲಸ ಬಹಳ ಹಚ್ಚಿದರಿ, ನನಗ ಬ್ಯಾಸರ ಬಂತ್ರಿ.”
“ಸಾಲಿಗೆ ಕಳಿಸಲಿಲ್ಲೇನೊ ನಿನ್ನ ಅವರು?”
“ಇಲ್ಲರಿ” ಎಂದ. ಗಾಳಿ ಮತ್ತೆ ಭರ್ ಎಂದು ಬೀಸಿತು.

ನಿಲ್ದಾಣದ ಮೇಲಿರುವ ಮರದ ಎಲೆಗಳು ಬಳಬಳ ಉದುರಿದುವು. ಮೈ ಜುಮ್ಮೆನ್ನಲು ಮತ್ತೂ ಗಟ್ಟಿಯಾಗಿ ಹೊದ್ದುಕೊಂಡು ಕುಳಿತೆ ಮೈಯಲ್ಲಿ ಉಣ್ಣೆಯ ಸ್ವೆಟರ ಇತ್ತು. ಹಾಗೂ ಮೇಲೊಂದು ಕೋಟು ಬೇರೆ!

ಆ ಹುಡುಗನ ಗತಿಯೇನು? ಹರಕಲು ಬಟ್ಟೆ, ಮೇಲೆ ಹೊದೆಯುವದಕ್ಕಂತೂ ಏನೂ ಇಲ್ಲವೇ ಇಲ್ಲ!

ಈ ವರೆಗೆ ವಿಚಾರ ಮಾಡಿದ ನನ್ನ ಹತ್ತರವೂ ಅವನಿಗೆ ಕೊಡುವದಕ್ಕೆ ಬಟ್ಟೆ ಇರಲಿಲ್ಲ. ಮನಸ್ಸು ನನ್ನ ಮನೆಯ ಕಡೆಗೆ ಎಳೆಯಿತು. ನನ್ನ ಪುಟ್ಟು ರಗ್ಗಿನ ಮುಸುಕಿನಲ್ಲಿ ಚೆನ್ನಾಗಿ ನಿದ್ದೆ ಹೊಡೆಯುತ್ತಿರಬಹುದು! ತಾಯಿ ಮಲಗುವಾಗ ಅವನಿಗೆ ಬಿಸಿ ಹಾಲು ಕುಡಿಸಿ ಮಲಗಿಸಿದ್ದಾಳೆ. ಅವನು ಮುಂಜಾನೆ ಏಳುವದೊಂದೇ ತಡ. ಮತ್ತೆ ಅವನಿಗೆ ಬಿಸಿ ತಿನಿಸು ಸಿದ್ದವಾಗಿರುತ್ತದೆ! ಮನೆಯ ವಿಚಾರ ಬಿಟ್ಟು ಕರಿಯನ ಕಡೆಗೆ ಹೊರಳಿ ನೋಡಿದೆ. ಏನು ಅಂತರ! ಮನವು ಮರುಗಿತು. ಅರಿಯದ ಆಳಲು ತೀವ್ರವಾಗಿ ಮನವನ್ನು ಭೇದಿಸುತ್ತಿರುವಾಗ ‘ಯಾಕೆ ಈ ಭೇದ ಜಗದಲ್ಲಿ’ ಎಂಬ ಒಳದನಿ ಹೊರಹೊಮ್ಮಿತು. ಹುಡಗ ಮಾತ್ರ ಗೋಡೆಗೊರಗಿ ತೆಪ್ಪಗೆ ಕುಳಿತಿದ್ದ. ಅವನನ್ನು ಮತ್ತೆ ನಾನೇ ಕೆಣಕಿದೆ.

“ನೀನು ಈಗ ಇರುವದಾದರೂ ಎಲ್ಲಿಯೋ?”
“ಶೆಟ್ಟರ ಮನಿಯಾಗರಿ”
“ನಿಮೂರ ಶೆಟ್ಟರ ಮನೆಯಲ್ಲಿಯೋ?”
“ಅಲ್ಲರೀ ರಾಯರ…….. ಈ ಊರ ಶೆಟ್ಟರ ಮನಿಯಾಗರಿ.”
“ನಿನಗ ಪಗಾರ ಕೊಡತಾರೇನು ಶೆಟ್ಟರು?”
“ಇಲ್ಲರಿ. ಊಟ ಅರವಿ ಈಟಽರಿ”

ಈ ಮಾತು ಕೇಳಿ ನನ್ನ ವಿಚಾರ ಇಮ್ಮಡಿಸಿತು. ಹರಕ ಅರವೆ, ಇವನ ಮೈ ಮುಚ್ಚಿಲ್ಲ, ಊಟವಂತೂ ಏನು ಕೊಡತ್ತಾರೋ ತಿಳಿಯದಾಯಿತು.

“ಶೆಟ್ಟರ ಮನಿಯಾಗ ಏನ ಕೆಲಸ ಮಾಡತೀಯಪಾ ನೀ?”
“ಮನಿಯಾಗಿನ ಕೆಲಸ ಹೇಳಿದ್ದರಿ. ಅಪ್ಪಾ ಅವರು ಹೇಳಿದ್ದು ಕೇಳಿ ಕೊಂಡು ಅಲ್ಲೇ ಅದೇನ್ರಿ.”
“ಶೆಟ್ಟರಿಗೆ ಮಕ್ಕಳಿದ್ದಾರೇನು?”
“ಅದಾರ್ರಿ, ಮೂವರು. ಎಲ್ಲರೂ ಸಾಲೆಗೆ ಹೋಕ್ತಾರ್ರಿ.”
“ನೀ ಯಾಕ ಹೋಗೂದಿಲ್ಲಪಾ?”
“ನಮಗೆದಕ ಬೇಕರಿ, ಸಾಲೀ- ಬಡವರಿಗೆ?”

ಬಡತನ ಎನ್ನುವದು ಎಂಥ ಭೀಕರ ರೋಗ! ಹುಟ್ಟಿನಿಂದ ಸಾಯುವವರೆಗೆ ಒಂದೇ ಸಮನೇ ಜೀವ ಹಿಂಡುವ ರೋಗ. ಅಜ್ಞಾನದ ಕೂಪದಲ್ಲಿ ಕೆಡಹುವ ವೈರಿ! ಬಡತನ ತಂದೊಡ್ಡುವವರಾರು? ಅದು ಜನ್ಮಸಿದ್ಧವಾದದ್ದೇ? ಹೀಗೆ ಜನ ತಿಳಿದಿದೆಯಲ್ಲ ‘ಅದರ ನಿವಾರಣೋಪಾಯ ಇಲ್ಲವೆ ಇಲ್ಲ. ಅನೇಕ ರೋಗಗಳಿಗೆ ಔಷಧಿ ಸಿದ್ಧವಾಗುತ್ತಿರುವಾಗ ಬಡತನ ರೋಗನಿವಾರಣೆ ಔಷಧಿ ಎಂದು ಸಿದ್ಧವಾದೀತು? ಅದು ಸಿದ್ಧವಾದಾಗ ಎಲ್ಲೆಲ್ಲಿಯೂ ಸುಖವಾಗಬಹುದಲ್ಲ! ಹೊಟ್ಟೆ ತುಂಬ ಅನ್ನ, ಮೈತುಂಬ ಬಟ್ಟೆ, ಬುದ್ಧಿಗೆ ಆಹಾರವಿದ್ದಲ್ಲಿ, ಇನ್ನು ಮುಂದೆ ಏನು ಬೇಕು ಜನಕ್ಕೆ?

ನಾನು ಸುಮ್ಮನೆ ಕುಳಿತದ್ದನ್ನು ಕಂಡು ಹುಡುಗ ಬೇಸತ್ತವನಂತೆ ಒಮ್ಮೆ ಆಕಳಿಸಿ ಹೊರಗೆ ಹೊರಟು ಹೋದ. ತುಸು ಹೊತ್ತಾಗಿರಬಹುದು. ಮರಳಿ ಬಂದು ಕುಳಿತುಕೊಂಡ. ರೇಲ್ವೆ ಗಡಿಯಾರ ‘ಢಣ್ ಢಣ್ ಢಣ್’ ಮೂರು ಬಾರಿಸಿತು. ನನ್ನ ಕಣ್ಣುಗಳು ಉರಿಯಹತ್ತಿದವು. ಆದರೆ ಮನೆಯಲ್ಲಿ ಮೆತ್ತಗೆ ಬೆಚ್ಚಗೆ ಒರಗುವ ನನಗೆ ಚಳಿಯಲ್ಲಿ ಹೇಗೆ ನಿದ್ದೆ ಬಂದೀತು? ಜಗತ್ತಿನಲ್ಲಿ ಬಡ ಜನ ಕಷ್ಟ ಪಡುತ್ತಾರೆಂಬ ಮಾತು ಸತ್ಯ. ಅವರ ಬಗ್ಗೆ ನಮ್ಮೆಲ್ಲರಿಗೂ ಕಳಕಳಿ ಇರುವದೇನೋ ನಿಜ, ಆದರೆ ಸತ್ಯ ಸಂಗತಿ ನಿರ್‍ಧಾರಕ್ಕೆ ಬಂದಲ್ಲಿ, ನಮ್ಮ ತತ್ವ ಹೊರಬೀಳುತ್ತದೆ. ಮಧ್ಯ ಮಧ್ಯ ಹುಡುಗನಿಗೆ ಕೆಮ್ಮು ಹೆಚ್ಚಾಗಿ ನನಗೆ ಬಹಳ ತೊಂದರೆ ಬರುತ್ತಿತ್ತು. ಅವನನ್ನು ಮತ್ತೆ ಪ್ರಶ್ನೆ ಕೇಳಹತ್ತಿದೆ.

“ನೀ ಯಾಕ ಇವತ್ತ ಸ್ಟೇಶನ್ನಿಗೆ ಬಂದಿದ್ದಿ?”
“ನಮ್ಮ ಶೆಟ್ಟರು ಊರಿಗೆ ಹೋದರ್ರಿ. ಅವರ ಗಂಟು ಹೊತ್ತಿಕೊಂಡು ಬಂದಿದ್ದಿನ್ರಿ.”
“ಊಟಮಾಡಿ ಬಂದಿಯಾ?”
“ಹೂನ್ನ್ರಿ. ಎರಡು ರೊಟ್ಟಿ ಕೊಟ್ಟಿದ್ರಿ.”
“ಬಹಳ ಕೆಮ್ಮತಿದಿ, ಸೆಟ್ಟಿಂಗೆ ಹೇಳಿ ಔಷಧ ಕುಡಿಯಲಾ ಮತ್ತೆ?”
“ತಾನ ಹೊಕ್ಕತ್ರಿ ಕೆಮ್ಮು, ಅಗಸುದ್ಯಾ ಬ್ಯಾಡರಿ.”
“ನೀ ಹೀಂಗ ಕೆಲಸ ಮಾಡಿಕೊಂತ ಇರಾವ ಏನಪ ತಮ್ಮಾ, ಶೆಟ್ಟರ ಮನಿಯಾಗ?”

ಹುಡುಗನಿಗೆ ಯಾವ ಉತ್ತರವನ್ನೀಯಬೇಕೆಂದು ಹೊಳೆಯಲಿಲ್ಲ. ಅವನಿಗೆ ತನ್ನಾಭವಿಷ್ಯತ್ತು ದೊಡ್ಡದಿದೆ ಎಂಬ ಅರಿವು ಹೇಗೆ ಬರಬೇಕು? ಅವನ ಜನ್ಮ ಈ ರೀತಿಯಾಗಿಯೇ ಸಾಗಬೇಕು. ಇಂದು ಸಣ್ಣ ಕೂಲಿ ಆಳಾಗಿ ದುಡಿಯುವ; ಮುಂದೆ ದೊಡ್ಡವನಾದಾಗ ದೊಡ್ಡ ಕೂಲಿಯಾಗುವ. ಇಷ್ಟೇ, ಈಗ-ಆಗಿನ ಅಂತರ! ಇದರ ಅರಿವು ಯಾರಿಗೆ ಬರಬೇಕು? ಸಮಾಜವು ಎಚ್ಚರಗೇಡಿಯಿರುವಾಗ, ಸಮಾಜದ ಏಳಿಗೆ ಹೇಗಾಗಬೇಕು! ಎಂಬ ಮೊದಲಾದ ವಿಚಾರಗಳು ತಲೆಯಲ್ಲಿ ಹೊಸೆಯುತ್ತಿರುವಾಗಲೇ ನಿದ್ದೆ ಹತ್ತಿತು. ‘ಕುಕೂಽ ಕೂಽಽ’ ಎಂದು ಪೋರ್ಟರನ ಮನೆಯ ಕೋಳಿ ಕೂಗಿತು. ಕಣ್ಣು ತೆರೆದು ನೋಡಿದೆ. ಮೂಡಲು ಕೆಂಪಗಾಗಿತ್ತು. ಕತ್ತಲು ಕರಗುತ್ತಿತ್ತು. ಗಾಳಿ ಮಂದವಾಗಿತ್ತು. ನನ್ನ ತಲೆ ಜಡವಾಗಿತ್ತು. ಸಾವರಿಸಿ ಕೂಂಡು ಎದ್ದು, ಅಲ್ಲಿಯೇ ನಲ್ಲಿಯಲ್ಲಿ ಮುಖ ತೊಳೆದುಕೊಂಡು ಹಳ್ಳಿಯ ದಾರಿ ಹಿಡಿದೆ. ಆ ಅನಾಥ ಹುಡುಗ ಇನ್ನೂ ಕಲ್ಲಿನಮೇಲೆ ಮುದುಡಿಕೊಂಡು
ನಿದ್ದೆಗೈಯುತ್ತಿದ್ದ! ಇದಕ್ಕೆ ಯಾರು ಹೊಣೆ? ಎಂಬ ವಿಚಾರ ಬಂದಾಗ….. ಹೃದಯ ಉತ್ತರವನ್ನೀಯಲಿಲ್ಲ. ಆದರೆ ದಡಬಡಿಸಿತು ಇಷ್ಟೆ ! ಅಜ್ಞಾನದ ಕತ್ತಲನ್ನು ಜ್ಞಾನ ರವಿ ಮೂಡಿ ಎಂದು ಕಳೆದಾನು-ಈ ಮುಂಜಾವಿನಂತೆ? ಎಂದು ಏನೋ ಒಟಗುಟ್ಟುತ್ತ ತ್ವರಿತವಾಗಿ ಹಾದಿ ನಡೆಯಹತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾಹ
Next post ಸಮ್ಮಿಲನ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…