Home / ಕಥೆ / ಸಣ್ಣ ಕಥೆ / ವಿದಾಯ ಜೋಗುಳ

ವಿದಾಯ ಜೋಗುಳ

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ ಇದು ಅವರ ಪ್ರೇಮದ ಮೊದಲ ಕುಸುಮವಾಗಿತ್ತು. ಅವರ ನಾಲ್ಕು ವರ್‍ಷದ ಪ್ರೇಮ ಬಾಂಧವ್ಯದಲ್ಲಿ ಅವರು ಒಬ್ಬರನ್ನು ಒಬ್ಬರು ಗಾಢವಾಗಿ ಅರ್‍ಥಮಾಡಿಕೊಂಡು ಒಳ್ಳೆಯ ಸ್ನೇಹಿತರಾಗಿದ್ದರು. ಹೋಟಲಿನಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರ ಸ್ನೇಹದಲ್ಲಿ ಪ್ರೇಮ ಅಂಕುರಿಸಿ ಮದುವೆಯಲ್ಲಿ ಕೊನೆಗೊಂಡಿತ್ತು. ನಾಲ್ಕಾರು ವರ್‍ಷ ಮಗು ಆಗದಿದ್ದಾಗ, ಮಗುವಿನ ಬರುವಿಗಾಗಿ ಪರಿತಪಿಸುತ್ತಿದ್ದರು.

“ನಾವು ವೈದ್ಯರ ಸಲಹೆಗೆ ಹೋಗಿಬರೋಣ” ಎಂದಾಗ ಸ್ಮಿಥ್, ಮೇರಿ ಒಪ್ಪಿಕೊಂಡಿದ್ದಳು.

“ನಮ್ಮ ಬಾಳಲ್ಲಿ ಮಗು ಬೇಕೆಂದರೆ ಸಲಹೆ ಪಡೆಯಬೇಕಲ್ಲವೇ?”

ಇಬ್ಬರು ಬಿಗಿಯಾದ ಪ್ರೇಮದ ಅಪ್ಪುಗೆಯಲ್ಲಿ ಚುಂಬಿಸುತ್ತಾ ಯಾವುದೋ ಕನಸಿನ ಲೋಕಕ್ಕೆ ಹೋದರು. ಮೇರಿಯ ಮೃದು ಕೆಂಚು ಕೂದಲನ್ನು ಸವರುತ್ತಾ ಸ್ಮಿಥ್‌ಗೆ ತನ್ನ ಮಗುವನ್ನು ಎದೆಗೆ ತಬ್ಬಿ ಅವಚಿಕೊಂಡಂತೆ ಅಲೌಕಿಕ ಸುಖವನ್ನು ಅನುಭವಿಸುತ್ತಿದ್ದ. ಅವರ ಮನೋನಿಶ್ಚಯಕ್ಕೆ ದೈವ ಬೆಂಬಲವಿದೆ ಎಂಬಂತೆ ವೈದ್ಯರು ಯಾವ ದೋಷವು ಇಲ್ಲ ಎಂದಾಗ ಅವರ ಬಯಕೆ ತೀವ್ರವಾಯಿತು. ರಜೆ ತೆಗೆದುಕೊಂಡು ಎರಡನೆಯ ಮಧುಚಂದ್ರಕ್ಕೆ ಪ್ಯಾರಿಸ್‌ಗೆ ಹೋದರು. ಅಲ್ಲಿ ಮೂರು ದಿನ ತಂಗಿ ಪ್ಯಾರಿಸ್ ಬೈ ನೈಟನ್ನು ಅತಿ ಉತ್ಸಾಹದಲ್ಲಿ ಕಳೆದರು.

ಐಫೆಲ್ ಟವರ್ನಲ್ಲಿ ನಿಂತು ಅವರು ಕೂಸು ಹುಟ್ಟಿದಮೇಲೆ ಮತ್ತೆ ಈ ಕನಸಿನ ಗೋಪುರದಲ್ಲಿ ಮಗುವೊಂದಿಗೆ ಬಂದು ನಿಲ್ಲುವ ಕನಸನ್ನು ಹೊತ್ತು ಹಿಂತಿರುಗಿದರು. ಕನಸಿನಲ್ಲಿ ಕಂಡದ್ದು ನನಸಾಗಿ ಬರುವಂತೆ ಮೇರಿ ಗರ್ಭಿಣಿಯಾದಳು.

“ನಿನಗೆ ಮಗು ಹುಟ್ಟುವವರೆಗೆ ಕೆಲಸ ಮಾಡಬೇಡ” ಎಂದು ಸ್ಮಿಥ್ ತಾನೇ ಹೆಚ್ಚು ಗಂಟೆಗಳು ಕೆಲಸ ಮಾಡಿ ಹಣ ಸಂಪಾದಿಸಿಟ್ಟ.

ಏಳನೆಯ ತಿಂಗಳು ಬರುತ್ತಲೆ ಸ್ನೇಹಿತರು ಬೇಬಿ ಷವರ್ ಮಾಡಿ ಮಗುವಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಕೊಟ್ಟರು. ಮಗುವಿಗೆ ಮಲಗಲು ತೊಟ್ಟಿಲು, ಸೋಪು, ಟವಲ್, ಕಾರ್ ಸೀಟ್, ಪುಟ್ಟ ಬೆಡ್ಡಿಂಗ್, ಬ್ಲಾಂಕೆಟ್ ಮೊದಲಾದುವೆಲ್ಲಾ ಹೆರಿಗೆ ಹೊತ್ತಿಗೆ ರೆಡಿಯಾದವು. ನಿಗದಿತ ಸಮಯಕ್ಕೆ ಮೇರಿಗೆ ಹೆರಿಗೆಯು ಆಯಿತು. ಸುಖಪ್ರಸವವಾದುದರಿಂದ ಮೇರಿ ಮನೆಗೆ ಮೂರನೆಯ ದಿನವೇ ಬಂದುಬಿಟ್ಟಳು. ಸ್ಮಿಥ್‌ಗೆ ಈಗ ಎಲ್ಲಿಲ್ಲದ ಹುರುಪು. ಪುಟ್ಟ ಕಂದಮ್ಮನನ್ನು ನೋಡಿ ಇಬ್ಬರು ಸಂತೋಷದಲ್ಲಿ ಮುಳುಗಿ ತೇಲುತ್ತಿದ್ದರು. ಮಗು ತದ್ವತ್ ಮೇರಿಯಂತೆ ಇದ್ದು ಬಲು ಮುದ್ದಾಗಿ ಇತ್ತು. ಅದನ್ನು ಕೈಯಲ್ಲಿ ಇಟ್ಟುಕೊಂಡು ಸ್ಮಿಥ್ ಜೋಗುಳ ಹೇಳಿ ಮಲಗಿಸುತ್ತಿದ್ದ. ಮೇರಿ ಮೊಲೆಯೂಡುವಾಗ ಅವಳ ದೊಡ್ಡ ಸ್ತನಗಳು ಮಗುವಿನ ಮೂಗಿಗೆ ಉಸಿರು ಕಟ್ಟದಂತೆ ನೋಡಿಕೋ’ ಎಂದು ಎಚ್ಚರಿಸುತ್ತಿದ್ದ. ಎರಡು ತಿಂಗಳಲ್ಲಿ ಮಗು ಕೈಕಾಲು ಆಡಿಸಿ ಕಣ್ಣು ಪಿಳಿಪಿಳಿ ಬಿಡುತ್ತಾ ಕಾಲು ಆಡಿಸುತ್ತಿತ್ತು. ಅವರಿಗೆ ಅದನ್ನು ನೋಡುವುದು ಒಂದು ವೈಭವದ ಉತ್ಸವದಂತೆ ಅನಿಸುತ್ತಿತ್ತು.

ಸ್ಮಿಥ್ ಎಂದಿನಂತೆ ಹೋಟಲಿನ ಕೆಲಸಕ್ಕೆ ಹೋಗಿದ್ದ. ಮೇರಿ ತನ್ನ ಕೂಸಿಗೆ ಸ್ನಾನ ಮಾಡಿಸಿ ತೊಟ್ಟಿಲಲ್ಲಿ ತಲೆಗೆ, ಪಕ್ಕಕ್ಕೆ, ದಿಂಬುಗಳನ್ನು ಇಟ್ಟು ದೊಡ್ಡ ಬ್ಲಾಂಕೆಟನ್ನು ಹೊದ್ದಿಸಿ ತಾನು ಸ್ನಾನ ಮಾಡಲು ಹೋಗಿದ್ದಳು. ಅವಳು ಷವರ್‌ಬಾತ್ ತೆಗೆದುಕೊಳ್ಳುವ ಶಬ್ದದಲ್ಲಿ ಮಗು ಉಸಿರು ಕಟ್ಟಿ ಅಳುತ್ತಿರುವುದು ಅವಳಿಗೆ ಕಿಂಚಿತ್ತು ಕೇಳಿಸಿರಲಿಲ್ಲ. ಮಗುವಿನ ಮುಖದ ಮೇಲೆ ದಿಂಬು ಬ್ಲಾಂಕೆಟ್ ಬಿದ್ದು ಉಸಿರು ಆಡಲು ಆಗದೆ ಮಗುವಿನ ಪ್ರಾಣ ಹೋಗಿತ್ತು.

ಸ್ನಾನ ಮಾಡಿ ಬಂದ ಮೇರಿಗೆ ಮಗುವಿನ ಮುಖದ ಮೇಲೆ ಬಿದ್ದಿದ್ದ ದಿಂಬು, ಬ್ಲಾಂಕೆಟನ್ನು ಗಾಬರಿಯಿಂದ ತೆಗೆದಾಗ ನೀಲಿ ಕಟ್ಟಿದ ಮಗುವಿನ ಮುಖವನ್ನು ನೋಡಿ ಕಿರಿಚಿಕೊಂಡು ಕುಸಿದುಬಿದ್ದಳು. ಒಡನೆ ಸ್ಮಿಥ್ ಬಂದು ಆಸ್ಪತ್ರೆಗೆ ಕರೆದೊಯ್ಯಲು, ಅಲ್ಲಿ ಪ್ರಾಣ ಹೋಗಿ ಅರ್‍ಧ ಗಂಟೆ ಆಗಿರುವುದಾಗಿ ತಿಳಿಸಿದರು.

ತಾಯಿಯ ಪ್ರೀತಿಯ ತೋಳಿಂದ ಮಗು ವೈದ್ಯರ ಕೈಸೇರಿತು. ಹಲವಾರು ವೈದ್ಯರುಗಳು ಮಗು ಮಲಗಿಸಿದಲ್ಲಿ ಪ್ರಾಣ ಬಿಡಲು ಕಾರಣವೇನೆಂದು ಪಥಾಲೋಜಿಕಲ್ ಲಾಬೊರೇಟರಿಗೆ ಕಳಿಸಿದರು. ಅಂದು ರಾತ್ರಿವರೆಗೂ ಮೇರಿ ಮತ್ತು ಸ್ಮಿಥ್ ಕುಳಿತು ಮಗುವಿನ ಶವಕ್ಕಾಗಿ ಎದುರು ನೋಡುತ್ತ ಕಣ್ಣೀರು ಹಾಕಿಕೊಂಡು ಕುಳಿತಿದ್ದರು. “ನೀವು ಮನೆಗೆ ಹೋಗಿ, ಇಲ್ಲಿ ಎಲ್ಲಾ ಪರೀಕ್ಷೆಗಳು ಆಗಿ ಮಗುವಿನ ಮರಣಕ್ಕೆ ಕಾರಣ ತಿಳಿಯುವವರೆಗೂ ನಿಮಗೆ ಮಗುವಿನ ಶವವನ್ನು ಕೊಡುವುದಾಗುವುದಿಲ್ಲವೆಂದು ತಿಳಿಸಿ ಮನೆಗೆ ಹೋಗಲು ಹೇಳಿದರು. ಸ್ಮಿಥ್ ದಂಪತಿಗಳು ಭಾರವಾದ ಹೃದಯದಿಂದ ಮನೆ ಸೇರಿದರು.

ಅವರ ಬಾಳಲ್ಲಿ ಕತ್ತಲೆ ಕವಿದು ಶೂನ್ಯತೆ ಮೂಡಿತ್ತು. ಅವರ ಬಾಳಿಗೆ ಬೆಳಕಾಗಿದ್ದ ಮಗುವಿನ ಮುದ್ದು ಮುಖ ಅವರ ಕಣ್ಣೆದುರು ಬಂದು ಅವರ ಮನವನ್ನು ಕಾಡುತ್ತಿತ್ತು. ಮಗುವಿನ ಬರಿದಾದ ತೊಟ್ಟಿಲಂತೆ ಅವರ ಹೃದಯವೂ ಬರಿದಾಗಿತ್ತು. ಮಗುವಿನ ಆಟಿಕೆಗಳು ಮೌನವಾಗಿ ಮೂಕ ರೋದನ ಮಾಡುತ್ತಿದ್ದವು. ಮಗು ಕುಡಿಯುವ ಹಾಲಿನ ಸೀಸೆಯಲ್ಲಿ ಉಳಿದ ಅರ್ಧ ಹಾಲು ಹಾಗೇ ಉಳಿದಿತ್ತು. ಮಗುವಿಗಾಗಿ ತಂದಿದ್ದ ಟೆಡ್ಡಿಬೇರ್ ಬೋರಲು ಮಲಗಿ ರೋಧಿಸುತ್ತಿತ್ತು. ತೊಟ್ಟಿಲಿಗೆ ಕಟ್ಟಿದ್ದ ಪಕ್ಷಿಗಳ ಚಟ್ಟ ಅಳ್ಳಾಡದೆ ಸಗಿತವಾಗಿತ್ತು. ಬೆಳಕು ಹರಿಯುವ ಮುನ್ನ ಎದ್ದು ಮತ್ತೇ ಆಸ್ಪತ್ರೆ ಕಡೆ ಡ್ರೈವ್ ಮಾಡಿಕೊಂಡು ಹೊರಟರು. ಸಾಕಷ್ಟು ಕಾಯಿಸಿದ ಮೇಲೆ ಅವರಿಗೆ “ನಾವು ಎಲ್ಲಾ ಇನ್ವೆಸ್ಟಿಗೇಟ್ ಮಾಡಲು ಎಷ್ಟು ದಿನವಾಗುತ್ತೋ ತಿಳಿಯದು. ಅದು ಮುಗಿದ ಕೂಡಲೆ ನಿಮಗೆ ಪತ್ರ ಕಳಿಸಿ, ಫೋನೂ ಮಾಡುತ್ತೇವೆ” ಎಂದು ಹೇಳಿ ಕಳಿಸಿಬಿಟ್ಟರು. ಗ್ರೇಟ್ ಲಿನ್ಸರ್ಡ್, ಮಿಲ್ಟನ್ ಕೀನ್ಸ್, ಬಕಿಂಗ್ ಹ್ಯಾಮ್ ಷೈರ್ ಆಸ್ಪತ್ರೆಯಿಂದ ಅವರಿಗೆ ಮಗುವನ್ನು ಒಯ್ಯಲು ಕರೆ ಬರುವ ಹೊತ್ತಿಗೆ ಮೂರು ತಿಂಗಳಾಗಿತ್ತು.

ಶವ ಸಂಸ್ಕಾರವನ್ನು ಮಾಡುವುದಕ್ಕೆ ಸ್ಮಿಥ್ ದಂಪತಿಗಳು, ಬಂಧುಗಳು, ಸ್ನೇಹಿತರು ಸೇರಿದರು. ಸ್ಮಿಥ್ ದಂಪತಿಗಳು ಕಾಫಿನ್ ಒಳಗೆ ಮಗುವನ್ನು ಮಲಗಿಸುವ ಮೊದಲು ಅದನ್ನು ಹಿಡಿದುಕೊಂಡು ತಮ್ಮ ಕೊನೆಯ ವಿದಾಯ ಜೋಗುಳ ಕಣ್ಣೀರು ಸುರಿಸುತ್ತಾ ಹೇಳುತ್ತಿದ್ದರು. ಪಕ್ಕದಲ್ಲಿ ಇದ್ದವರ ಮನಗಳು ಶೋಕ ಸಾಗರದಲ್ಲಿ ಮುಳುಗಿ ಹೋಗಿತ್ತು.

“ಮಲಗು ಮಲಗೆನ್ನ ಮುದ್ದು ಮಗುವೆ ಜೋಜೋ….
ನಮ್ಮ ಎದೆಯ ತೊಟ್ಟಿಲಲಿ ತೊಗುವವು ನಾವು
ಚಿರ ನಿದ್ರೆಯ ಮುಗುಳು ನಗೆಯಲಿ
ಮಲಗಿರುವ ಮಗುವೆ,
ನಿನ್ನ, ನಮ್ಮ ಹೃದಯ ತೊಟ್ಟಿಲಲಿ ಇಟ್ಟು ತೂಗುವೆವು,
ನಿನ್ನ ಸೇಬಿನ ಗಲ್ಲದ ಮೇಲೆ
ನಮ್ಮ ಕಣ್ಣೀರಿನ ಮುತ್ತಿನ ಹನಿ,
ನಿನ್ನ ಮುಚ್ಚಿದ ಕಣ್ಣ ರೆಪ್ಪೆಯ
ಮೇಲೆ ಮತ್ತೆರಡು ಮುತ್ತಿನ ಹನಿ,
ನಿನ್ನ ಪುಟ್ಟ ಹಣೆಗೆ ನಮ್ಮ ಪ್ರೀತಿಯ ಮುತ್ತಿನಾ ಸುರಿಮಳೆ,
ನಮ್ಮ ಬಿಸಿ ಉಸಿರಲ್ಲಿ ಆಡುತಿದೆ ನಿನ್ನ ಮೃದುವಾದ ಕೇಶ
ನೀ ಎದ್ದು ಬರಿಬಾರಿದೆ ಮತ್ತೆ ಬರಿತೊಟ್ಟಿಲ ತುಂಬಲು,
ನಮ್ಮ ಕಣ್ಣಿಗೆ ನೀನು ಬೆಳಕಿನ ಬೊಂಬೆಯಾಗಿದ್ದೆ,
ನಮ್ಮ ಪ್ರೀತಿಗೆ ಅರಳಿದ ಸುಮನ ನೀನಾಗಿದ್ದೆ,
ನಮ್ಮನ್ನು ತೊರೆದು ಭೂಗರ್‍ಭ ಸೇರಿದರು,
ನಮ್ಮ ನೆನಪಿನ ಗರ್‍ಭದಲ್ಲಿ ನೀ ಜೀವಂತ ವೆಂದು,
ನಿನಗೆ ಇದೋ ಪ್ರೀತಿಯ ನಮ್ಮ ಹೃದಯ ವಿದಾಯ ಜೋಗುಳ
ಜೋಜೋಜೋ ಜೋ ಜೋ ಜೋ ಪ್ರೀತಿಯ ಕಂದ,
ನಮ್ಮ ಬಾಳ ಆನೆಂದ”

ಎಂದು ಹಾಡಿ ಮಗುವನ್ನು ಕಾಫಿನ್ನಿನ ಮೃದು ಹಾಸಿಗೆಯಲ್ಲಿಟ್ಟರು.

ಇಷ್ಟು ಹೊತ್ತಿಗೆ ಅವರಿಗೆ ಕೊಟ್ಟ ನಿಯಮಿತ ಸಮಯಕ್ಕಿಂತ ಹತ್ತು ನಿಮಿಷ ಹೆಚ್ಚಾದುದರಿಂದ ಅವರಿಗೆ ಕ್ರಿಮೇಟೋರಿಯಮ್‌ನಿಂದ ಬಿಲ್ ೩೨ ಪೌಂಡ್ ಆದರೆ ಅದರ ಜೊತೆ ಹತ್ತು ನಿಮಿಷದ ಹೆಚ್ಚಿನ ಸಮಯಕ್ಕಾಗಿ ೮೬ (೮.೬೦) ಪೌಂಡ್ ವಿಧಿಸಲ್ಪಟ್ಟಿತ್ತು. ಅವರು ಮಗುವಿಗೆ ವಿದಾಯ ಹೇಳುತ್ತಾ ಕಳೆದ ಒಂದೊಂದು ನಿಮಿಷಕ್ಕೂ ೮ ಪೌಂಡ್ ೬೦ ಪೆನ್ಸ್ ಎಂದರೆ ನಮ್ಮ ಭಾರತೀಯ ಹಣದ ಮೌಲ್ಯ ೭೦೦ಕ್ಕೆ ಹತ್ತಿರ. ಈ ದೇಶದಲ್ಲಿ ಮಾತೃ ಹೃದಯದ ಪ್ರೀತಿ ಸ್ತೋತ್ರಕ್ಕೆ ವಿಧಿಸುವ ದಂಡ. ಮಾನವೀಯತೆಯ ಭಾವಧಾರೆಗೆ ಬೇಲಿಹಾಕಿ ಶುಲ್ಕ ಹಾಕಿದಾಗ ಹೃದಯಕ್ಕೆ ಬರೆ ಕೊಟ್ಟು ಮಾನವ ಬದುಕಿನ ಸೀಮೆಗಳು ಕುಂಠಿತವಾದಾಗ ಮನುಷ್ಯ ಜೀವನದ ಬಾಳಿಗೆ ಅರ್‍ಥವೆಲ್ಲಿದೆ?

ಹಸುಳೆಯನ್ನು ಕಳೆದುಕೊಂಡು, ದುಃಖತಪ್ತರಾದ ದಂಪತಿಗಳಿಗೆ ಕ್ರಿಮೇಟೋರಿಯಮ್ ನಿಯಮ ಗಾಯದ ಮೇಲೆ ತುಪ್ಪ ಸುರಿದಂತೆ ಆಗಿತ್ತು. ಕ್ರಿಮೇಟೋರಿಯಮ್‌ನಲ್ಲಿ ಶವಗಳನ್ನು ಸಂಸ್ಕಾರ ಮಾಡಲು ಕಾಯುತ್ತಾ ಸರದಿಯಲ್ಲಿ ನಿಂತಿರುವಾಗ, ಇವರು ವಿದಾಯ ಜೋಗುಳ ಹಾಡಿ ಕೆಲವು ನಿಮಿಷ ಹೆಚ್ಚು ತೆಗೆದುಕೊಂಡಿದ್ದರಿಂದ, ಪ್ರತಿನಿಮಿಷಕ್ಕೂ ಶುಲ್ಕ ವಿಧಿಸಲ್ಪಟ್ಟಿತ್ತು. ಇಂದು ವೇಗದ ಬದುಕನ್ನು ಬಾಳುತ್ತಿರುವ ಮಾನವ ಸತ್ತ ಮೇಲೂ ತನ್ನ ಗೋರಿಗೆ ವೇಗವಾಗಿ ಸಾಗಬೇಕು. ಬದುಕಿರುವಾಗ ಬಾಂಧವ್ಯ, ಪ್ರೀತಿ, ಮಮತೆ ಹಂಚಿಕೊಳ್ಳಲು ಸಮಯವಿಲ್ಲದ ಮಾನವನಿಗೆ ಇನ್ನು ಸತ್ತ ಮೇಲೆ ಪ್ರೀತಿಯ ಜೀವಕ್ಕೆ ವಿದಾಯ ಹೇಳುವುದಕ್ಕೆ ಹೆಚ್ಚು ಸಮಯ ಸ್ಮಶಾನದಲ್ಲೂ ಇಲ್ಲ. ವೇಗದ ಸೂತ್ರದಲ್ಲಿ ಬಾಳಿ ಬದುಕುವಂತೆ, ಸಾವಿನಲ್ಲೂ ಮಣ್ಣಿನ ಗರ್‍ಭಕ್ಕೆ ವೇಗವಾಗಿ ಸಾಗಬೇಕು. ಇದು ಮಾನವ ಹೃದಯಕ್ಕೆ ಹಾಕುವ ಕಡಿವಾಣವೇ?
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...