ಹರಯ

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಅವಳು ವೇಗವನ್ನು ಹೆಚ್ಚಿಸ ತೊಡಗಿದಳು. ಭಯ ಮತ್ತು ಆತಂಕದಿಂದ ಅವಳ ಏದುಸಿರು ಜೋರಾಗಿ ಕೇಳಿ ಬರುತ್ತಿತ್ತು. ಕಾಲಿಗೆ ಸಿಕ್ಕಿಸಿದ ಚಪ್ಪಲಿಯು ಅವಳ ಹಿಮ್ಮಡಿಗೆ ತಾಗಿ ಪಟ-ಪಟ ಶಬ್ದ ಮಾಡುತ್ತಿತ್ತು. ಡಾಮರು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿಯೇ ಅವಳು ತಲೆ ತಗ್ಗಿಸಿಕೊಂಡು ನಡೆಯುತ್ತಿರುವುದರಿಂದ ನೆಲದ ಧೂಳು ಅವಳ ಪಾದವನ್ನು ಮೆತ್ತಿ ಕೊಂಡಿತ್ತು. ಮುಖದಲ್ಲಿ ಬೆವರ ಹನಿ ಮೂಡ ತೊಡಗಿತು. ಅವಳು ಬೆವರನ್ನು ಒರಸುವ ಪ್ರಯತ್ನ ಮಾಡಲಿಲ್ಲ. ತಮ್ಮ ದೈನಂದಿನ ಕೆಲಸ ಮುಗಿಸಿ ಮನೆ ಕಡೆ ಸಾಗುವ ಕೂಲಿಕಾರ್‍ಮಿಕರು ತನ್ನನ್ನು ನೋಡಿಯಾರೆಂಬ ಭಯ ಅವಳನ್ನು ಕಾಡುತ್ತಿತ್ತು. ಆದರೂ ಅವಳು ಧೈರ್‍ಯ ಗುಂದದೆ ತನ್ನ ವೇಗವನ್ನು ಇನ್ನೂ ಹೆಚ್ಚಿಸಿದಳು. ಕೊನೆಗೂ ತಾನು ನಿಶ್ಚಯ ಮಾಡಿದ ರಿಕ್ಷಾ ನಿಲ್ದಾಣಕ್ಕೆ ಬಂದು ಮುಟ್ಟಿದಾಗ ಅವಳಿಗೆ ನಿರಾಶೆ ಕಾಡಿತ್ತು. ಅಂದು ‘ಭಾರತ ಬಂದ್’, ಒಂದೇ ಒಂದು ರಿಕ್ಷಾ ಕೂಡಾ ನಿಲ್ದಾಣದಲ್ಲಿ ಕಂಡು ಬರಲಿಲ್ಲ. ಅವಳು ಆತಂಕಕ್ಕೆ ಒಳಪಟ್ಟಳು. ಅವಳ ಯೋಜನೆ ತಲೆಕೆಳಗಾಗುವ ಸಾಧ್ಯತೆ ನಿಶ್ಚಲವಾಗಿತ್ತು. ಅವಳ ಮುಖ ಕಪ್ಪಿಟ್ಟಿತು. ಎದೆಯ ಬಡಿತ ಜೋರಾಯಿತು. ಆದರೂ ಅವಳು ತನ್ನ ನಿರ್‍ಣಯದಿಂದ ಹಿಂದೆ ಸರಿಯುವ ಸಾಧ್ಯತೆಯಿರಲಿಲ್ಲ.

ರಿಕ್ಷಾ ನಿಲ್ದಾಣವು ನಾಲ್ಕು ರಾಜ್ಯ ರಸ್ತೆಯ ಕೂಡುದಾರಿಯಿಂದ ಆವೃತ್ತವಾಗಿತ್ತು. ಬೇರೆ ದಿನಗಳಲ್ಲಿ ಜನ-ಜಂಗುಳಿಯಿಂದ ತುಂಬಿರುತ್ತಿದ್ದ ಆ ವೃತ್ತವು ಇಂದು ಬಿಕೋ ಅನ್ನುತ್ತಿತ್ತು. ಒಬ್ಬರೋ-ಇಬ್ಬರೋ ಜನ ದೂರದಲ್ಲಿ ನಿಂತು ಮಾತಾಡುತ್ತಿದ್ದರು. ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿದ್ದುವು. ಹಿಂದಿನ ದಿನದ ಹಲಸಿದ ಅನ್ನ-ಸಾರನ್ನು ಯಾರೋ ಪಂಚಾಯತಿಯ ಕಸದ ತೊಟ್ಟಿಗೆ ಬಿಸಾಡಿದ್ದು ಹಸಿವಿನಿಂದ ಮುಕ್ತವಾಗಲು ಬೀದಿನಾಯಿಗಳು ತಮ್ಮ ತಮ್ಮ ಪಾಲಿಗೆ ಬರಲಿರುವ ಅನ್ನಕ್ಕಾಗಿ ಜಗಳವಾಡುತ್ತಿದ್ದುವು. ಏನೋ ಹರ ಸಾಹಸ ಮಾಡಿ ದಕ್ಕಿಸಿಕೊಂಡ ಕಳ್ಳ ಬಟ್ಟಿಯನ್ನು ಹೊಟ್ಟೆಗಿಳಿಸಿದ ಕೆಲವರು ತೂರಾಡಿಕೊಂಡು, ತಾವು ಏನೋ ಸಾಧನೆ ಮಾಡಿದವರಂತೆ ವಟಗುಟ್ಟುತ್ತಾ ದಾರಿಯನ್ನು ಸರ್ವೆ ಮಾಡುತ್ತಿದ್ದರು.

ಸೂರ್‍ಯ ತೆರೆಯ ಮರೆಗೆ ಸರಿಯುವ ತವಕದಲ್ಲಿದ್ದ. ಅವಳ ಆತಂಕ ಜಾಸ್ತಿಯಾಯಿತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅವಳಿಗೆ ತನ್ನ ಯೌವನದ ಬಗ್ಗೆ ಅರಿವು ಉಂಟಾಯಿತು. ಎಂತಹ ಗಂಡಾಂತರಕ್ಕೆ ಕೈ ಹಾಕಿದ್ದೇನೆ ಎಂದು ನೆನಸಿಕೊಂಡಾಗ ಅವಳ ಇಡೀ ಮೈಯಲ್ಲಿ ಕಂಪನ ಉಂಟಾಯಿತು. ಕೈಯ ರೋಮಗಳು ಸೆಟೆದು ನಿಂತುವು. ಆದರೂ ಅವಳು ಅನಿವಾರ್ಯತೆಯನ್ನು ಮೆಟ್ಟಿ ನಿಲ್ಲುವ ದೃಢ ಸಂಕಲ್ಪದೊಂದಿಗೆ ಯಾವುದಾದರೂ ಒಂದು ವಾಹನ ಸಿಗಬಹುದೇ ಎಂದು ದಾರಿಯುದ್ದಕ್ಕೂ ಕೊರಳನ್ನು ಎತ್ತರಿಸಿ ವೀಕ್ಷಿಸುತ್ತಿದ್ದಳು.

ಅದೇ ಸಮಯಕ್ಕೆ ಸರಿಯಾಗಿ ದುಬಾರಿ ಬೆಲೆಯ ದೊಡ್ಡ ಕಾರೊಂದು ನಿಧಾನವಾಗಿ ತಾನು ನಿಂತ ಕಡೆಗೆ ಬರುವುದನ್ನು ಅವಳು ಕಂಡಳು. ಅವಳಿಗೆ ಮರುಭೂಮಿಯಲ್ಲಿ ‘ಒಯಸಿಸ್’ ಕಂಡ ಹಾಗಾಯಿತು. ಹಿಂದೆ ಮುಂದೆ ಆಲೋಚಿಸದೆ ಅವಳು ಶಾಲಾ ನೋಟ್ಸ್ ಪುಸ್ತಕಗಳಿರುವ ತನ್ನ ಎಡಗೈಯನ್ನು ರಸ್ತೆಗೆ ಅಡ್ಡವಾಗಿ ಹಿಡಿದಳು. ಕಾರು ನಿಂತಿತು. ಕಾರಿನ ಗ್ಲಾಸು ನಿಧಾನವಾಗಿ ಕೆಳಗೆ ಸರಿಯ ತೊಡಗಿತು. ಅವಳು ಒಂದೇ ಉಸುರಿಗೆ ಬಾಗಿ ಅವನಲ್ಲಿ ದೈನ್ಯತೆಯಿಂದ ಬೇಡಿಕೊಂಡಳು. “ಪ್ಲೀಸ್…… ಪ್ಲೀಸ್…… ನನ್ನನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಬಿಡಿ. ಪ್ಲೀಸ್……” ಆ ವ್ಯಕ್ತಿ ಅವಳನ್ನು ದಿಟ್ಟಿಸಿ ನೋಡಿದ. ಆ ವ್ಯಕ್ತಿಯ ಮುಖದಲ್ಲಿ ಒಂದು ಸಣ್ಣ ನಗು ಕಂಡದ್ದು ಅವಳಿಗೆ ಗೋಚರವಾಗಲಿಲ್ಲ. ಸ್ವಲ್ಪ ಹೊತ್ತು ಮೌನ, ಅವನು ಬಾಗಿಲಿನ ಲಾಕ್ ತೆಗೆಯುವ ಬಟನ್ ಒತ್ತಿದ. ಒಂದೇ ಉಸುರಿಗೆ ಅವಳು ಬಾಗಿಲು ತೆರೆದು ಅವನ ಪಕ್ಕದ ಸೀಟಿನಲ್ಲಿ ಕುಳಿತು ಬಾಗಿಲು ಹಾಕಿಕೊಂಡಳು. ಆ ವ್ಯಕ್ತಿ ಒಮ್ಮೆ ತಬ್ಬಿಬ್ಬಾದ, ಆದರೂ ಸಾವರಿಸಿಕೊಂಡು ತದೇಕಚಿತ್ತದಿಂದ ಅವಳ ಮುಖ ನೋಡಿದ. ಅವಳು ಅವನ ಮುಖ ನೋಡಿದಳು. ಅವಳ ಮುಖ ಬಿಳುಚಿಕೊಂಡಿತು. ಆ ವ್ಯಕ್ತಿಯು ಸುಮಾರು ಎಪ್ಪತ್ತು ಎಪ್ಪತೈದರ ವಯಸ್ಸಿನ ಅಜಾನುಬಾಹುವಾಗಿದ್ದ. ಅಂದಾಜು ಆರು ಅಡಿ ಎತ್ತರದ ಕಟ್ಟು ಮಸ್ತಾದ ದೇಹ. ದುಂಡು ಮುಖಕ್ಕೆ ಒಪ್ಪುವಂತಹ ಬಿಳಿದಾಡಿ, ದುಬಾರಿ ಬೆಲೆಯ ಶುಭ್ರ ಬಿಳಿ ದೋತಿ ಹಾಗೂ ಬಿಳಿ ಅಂಗಿ, ಶಾಂತಚಿತ್ತದ ಗಾಂಭೀರ್ಯ ಮುಖ. ಅಳಿದುಳಿದ ತಲೆ ಕೂದಲುಗಳನ್ನು ನೀಟಾಗಿ ಬಾಚಿಕೊಂಡಿದ್ದರು. ಎಲ್ಲಕ್ಕಿಂತಲೂ ಮಿಗಿಲಾಗಿ ಮಲ್ಲಿಗೆಯ ಸುಗಂಧ ಇಡೀ ಕಾರನ್ನು ಆವರಿಸಿತ್ತು. ಅವಳು ಒಂದೇ ಕ್ಷಣದಲ್ಲಿ ಅವನೆದುರು ಕುಬ್ಬಳಾಗಿ ಮುದುಡಿ ಕುಳಿತಳು. ಅವನು ಸಾವರಿಸಿಕೊಂಡು ಆಲೋಚಿಸ ತೊಡಗಿದ. ಸೌಜನ್ಯಕ್ಕಾದರೂ ತಾನು ಕಾರೊಳಗೆ ಬರಬಹುದೇ ಎಂದು ಅವಳು ಕೇಳಲಿಲ್ಲ. ಮೇಲಾಗಿ ಅವಳ ಬೇಡಿಕೆಗೆ ಅವನು ಮೌಖಿಕವಾಗಿ ಕೂಡಾ ಉತ್ತರಿಸಿರುವುದಿಲ್ಲ. ಅವಳು ಮುಗ್ಧದಿಟ್ಟೆ ಎಂದು ಅವನಿಗೆ ವಿಧಿತವಾಯಿತು.

ಕಾರು ನಿಧಾನವಾಗಿ ಚಲಿಸ ತೊಡಗಿತು. ಇಡೀ ಕಾರಿನಲ್ಲಿ ಮೌನ ಆವರಿಸಿತ್ತು. ಆತುರದಲ್ಲಿ ಆಪತ್ತನ್ನು ಮೈಮೇಲೆ ಎಳೆದು ಕೊಂಡಿದ್ದೇನೆಯೇ ಎಂಬ ಸಾಮಾನ್ಯ ಜ್ಞಾನವೂ ಅವಳಲ್ಲಿರಲಿಲ್ಲ. ಅವಳ ಪ್ರಾಯ ಅಂತಹದು. ಕ್ಷಣಕಾಲ ಮೌನ. ಆ ವ್ಯಕ್ತಿ ಮೌನವನ್ನು ಮುರಿದ, ಡ್ರೈವಿಂಗ್‌ನಲ್ಲಿ ಮಗ್ನನಾಗಿ ರಸ್ತೆಯನ್ನು ನೋಡುತ್ತಾ ಅವನು ಕೇಳಿದ.

“ಮಗಳೇ, ಇದು ನನ್ನ ಅಧಿಕ ಪ್ರಸಂಗ, ನನಗೆ ಸಂಬಂಧಿಸದ ವಿಷಯ. ಆದರೂ ಒಬ್ಬ ಅನುಭವಿ ಹಿರಿಯನಾಗಿ ನಾನಿನ್ನಲ್ಲಿ ಒಂದು ಪ್ರಶ್ನೆಯನ್ನು ಕೇಳಬಹುದೇ?”

ಅವಳು ತಲೆಯೆತ್ತಿ ಅವನ ಮುಖ ನೋಡಿದಳು. ಅವನು ಅದೇ ಶಾಂತ ಮುಖಭಾವದಲ್ಲಿ ರಸ್ತೆಯನ್ನು ನೋಡುತ್ತಾ ಮಿತ ವೇಗದಲ್ಲಿ ಕಾರನ್ನು ಚಾಲನೆ ಮಾಡುತ್ತಿದ್ದ. ಅವಳಲ್ಲಿ ಅವನ ಮುಖವನ್ನು ಧೈರ್ಯವಾಗಿ ನೋಡುವ ಎದೆಗಾರಿಕೆ ಮಾಯವಾಗಿತ್ತು. ಆದರೂ ಅವಳು ಕ್ಷೀಣ ಸ್ವರದಲ್ಲಿ ಅಂದಳು “ಕೇಳಿ”

“ಮೂರು ವಸ್ತುಗಳನ್ನು ನೀನು ಹೆಚ್ಚು ಹೊತ್ತು ಮುಚ್ಚಿಡಲಾಗುವುದಿಲ್ಲ. ಅವುಗಳೆಂದರೆ ಸೂರ್ಯ, ಚಂದ್ರ ಮತ್ತು ಸತ್ಯ, ಬಹುಶಃ ನೀನು ಮನೆಯಿಂದ ತಪ್ಪಿಸಿಕೊಂಡು ನಿನ್ನ ಪ್ರೇಮಿಯನ್ನು ಸೇರಲು ತವಕಿಸುತ್ತಿದ್ದೀ ಅಲ್ಲವೇ?” ಅವನ ಪ್ರಶ್ನೆ ನೇರವಾಗಿತ್ತು. ಸುತ್ತು ಬಳಕೆಯ ಮಾತು ಅದರಲ್ಲಿ ಅಡಕವಾಗಿರಲಿಲ್ಲ. ಅವನ ನೇರ ಪ್ರಶ್ನೆ ಅವಳ ತಲೆಗೆ ಸುತ್ತಿಗೆಯಲ್ಲಿ ಹೊಡೆದಂತಾಯಿತು. ಆದರೂ ಅವಳು ತನ್ನ ಮುಖದಲ್ಲಿ ಆಘಾತವನ್ನು ತೋರಿಸಿಕೊಳ್ಳಲಿಲ್ಲ. ಅವನ ಪ್ರಶ್ನೆಗೆ ಅವಳು ಉತ್ತರಿಸಲಿಲ್ಲ. ತನ್ನ ವರ್ತನೆಯಲ್ಲಿಯೇ ನನ್ನ ಜಾತಕವನ್ನು ಹೊರ ಹಾಕಿದ ವ್ಯಕ್ತಿಯ ಬಗ್ಗೆ ಅವಳಿಗೆ ಆಶ್ಚರ್ಯ ಉಂಟಾಯಿತು. ಆದರೂ ಅದನ್ನು ಮುಖದಲ್ಲಿ ತೋರಗೊಡಲಿಲ್ಲ. ಅವನ ಪ್ರಶ್ನೆಗೆ ಹೌದೆಂದು ಅವಳು ಸಣ್ಣ ಮಕ್ಕಳಂತೆ ತಲೆಯಲ್ಲಾಡಿಸಿದಳು. ಅವನು ಮಾತು ಮುಂದುವರಿಸಿದ.

“ಇದು ಪ್ರೇಮ ಅಲ್ಲ. ಪ್ರೇಮದ ವೇಷ ಹಾಕಿರುವ ಕಾಮ, ಹದಿಹರೆಯದ ಕಾಮ. ಕಾಮದ ಕಳಂಕವಿಲ್ಲದೆ ಗಂಡು-ಹೆಣ್ಣು ಒಟ್ಟಾಗಿ ಜೀವಿಸಲು, ಪ್ರೀತಿಸಲು ಸಾಧ್ಯವಿದೆಯಾ ಖಂಡಿತ ಸಾಧ್ಯವಿಲ್ಲ. ಅಲ್ಪ ಪರಿಚಯದ ಒಬ್ಬ “ವಾಟ್ಸಾಪ್” ವ್ಯಕ್ತಿಯ ಮೇಲೆ ಇಷ್ಟೊಂದು ಭರವಸೆ, ನಂಬುಗೆ ಹಾಗೂ ಪ್ರೀತಿಯನ್ನು ನೀನು ಯಾವ ಆಧಾರದಲ್ಲಿ ಮತ್ತು ಧೈರ್ಯದಲ್ಲಿ ಇಟ್ಟುಕೊಂಡಿದ್ದೀ? ಒಂದು ವ್ಯಕ್ತಿಗಾಗಿ ನೀನು ನಿನ್ನ ಸಲಹಿದ ತಾಯಿತಂದೆ, ಅಣ್ಣ, ತಮ್ಮ, ತಂಗಿ ಅಜ್ಜ, ಅಜ್ಜಿಯವರ ಪ್ರೀತಿಯನ್ನು ಕಳೆದುಕೊಳ್ಳುತ್ತೀ. ಅವರಿಗೆ ಮಾನಸಿಕ ಆಘಾತ, ಅಪಮಾನ ಕೊಡುತ್ತಿದ್ದೀ. ಸಮಾಜದಲ್ಲಿ ಅವರು ತಲೆ‌ಎತ್ತಿ ಜೀವಿಸದಂತೆ ಮಾಡುತಿದ್ದೀ. ಇದು ಯಾವ ರೀತಿಯ ಮಾನವೀಯತೆ? ಯಾವ ರೀತಿಯ ಪ್ರೇಮ? ಹದಿನೆಂಟು ವರ್ಷ ನಿನ್ನನ್ನು ಸಾಕಿ-ಸಲಹಿದ ನಿನ್ನ ತಾಯಿ-ತಂದೆಯನ್ನು ಶಾಶ್ವತ ತೊರೆದು ಅವರಿಗೆ ಮಾನಸಿಕ ಹಿಂಸೆ ನೀಡುವ ನಿನ್ನ ನಿರ್ಧಾರವನ್ನು ಯಾವ ದೇವರೂ ಮೆಚ್ಚಲಿಕ್ಕಿಲ್ಲ. ವಾಸ್ತವವನ್ನು ಮರೆತು ಆದರ್ಶದ ಬೆನ್ನು ಹತ್ತುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರ್ಶಗಳು ಮಣ್ಣು ಪಾಲಾದಾಗ ದಿಕ್ಕು ತಪ್ಪಿದ ಮನಸ್ಸು ವಾಸ್ತವಕ್ಕೆ ಪ್ರೇರೇಪಿಸುತ್ತದೆ. ಅತಿಯಾಗಿ ಹಚ್ಚಿಕೊಂಡ ಪ್ರೀತಿ-ಪ್ರೇಮ ನೋವು ಕೊಡದೆ ಕಳಚುವುದಿಲ್ಲ. ಅವನು ಒಂದು ಕ್ಷಣ ಮಾತು ನಿಲ್ಲಿಸಿದ. ಆದರೂ ಅವನ ಮಾತಿನಲ್ಲಿ ಉದ್ವೇಗ ಇರಲಿಲ್ಲ. ಅವಳು ಮಾತ್ರ ತುಟಿ ಬಿಚ್ಚಲಿಲ್ಲ. ಅವನು ಮಾತು ಮುಂದುವರಿಸಿದ.

“ನೀನು ಮಾಡಲಿರುವ ತಪ್ಪನ್ನು ಅರುವತ್ತು ವರ್ಷದ ಹಿಂದೆ ನನ್ನ ಅಕ್ಕ ಮಾಡಿದ್ದಳು. ಆಗ ನನಗೆ ಸುಮಾರು ಹದಿನೈದು ವರ್ಷ. ಅನ್ಯ ಜಾತಿಯ ಹುಡುಗನೊಂದಿಗೆ ಕಾಲೇಜಿನಿಂದ ಓಡಿ ಹೋದವಳು ಇದುವರೆಗೂ ತಿರುಗಿ ಬಂದಿಲ್ಲ. ಈ ಆಘಾತವನ್ನು ತಾಳಲಾರದೆ ನನ್ನ ತಂದೆ ಹೃದಯಾಘಾತದಿಂದ ತೀರಿ ಹೋದರು. ನನ್ನ ತಾಯಿ ಮಾನಸಿಕ ರೋಗಿಯಾದಳು. ಮನೆಯ ಜವಾಬ್ದಾರಿ ನನ್ನ ತಲೆಯ ಮೇಲೆ ಬಿತ್ತು. ಶಾಲೆ ಬಿಟ್ಟು ದುಡಿಯ ತೊಡಗಿದೆ. ತಂಗಿಯಂದಿರಿಗೆ ಮದುವೆ ಮಾಡಿಸಿದೆ. ತಮ್ಮಂದಿರಿಗೆ ವಿದ್ಯಾಭ್ಯಾಸ ಕೊಡಿಸಿದೆ. ಹೇಳು, ಇಡೀ ಕುಟುಂಬಕ್ಕೆ ಮಾನಸಿಕ ಆಘಾತ, ಸಾವು-ನೋವು ಕೊಟ್ಟ ನನ್ನ ಅಕ್ಕ ಸಾಧಿಸಿದಾದರೂ ಏನು? ಇದೆಂತಹ ಪ್ರೀತಿ? ಒಬ್ಬನ ಪ್ರೀತಿಗಾಗಿ ಹತ್ತು ಮಂದಿಯ ಪ್ರೀತಿಯನ್ನು ಬಲಿಕೊಡುವುದು ಯಾವ ನ್ಯಾಯ? ಈಗ ನನ್ನಕ್ಕನಿಗೆ ತನ್ನ ತಪ್ಪಿನ ಅರಿವಾಗಿದೆ. ಆದರೆ ಕಾಲ ಮೀರಿ ಹೋಗಿದೆ. ಬಹುಶಃ ನೀನು ಕೂಡಾ ಅದೇ ದಾರಿಯಲ್ಲಿ ಸಾಗುತ್ತಿದ್ದೀ.” ಅವನು ಮಾತು ನಿಲ್ಲಿಸಿದ.

ರೈಲು ನಿಲ್ದಾಣ ಬಂತು. ಅವನು ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ. “ಬಾ ಮಗಳೇ ನಿನಗೆ ಒಪ್ಪಿಗೆಯಾದಲ್ಲಿ ರೈಲು ಟಿಕೇಟು ತೆಗೆಸಿಕೊಡುತ್ತೇನೆ.” ಅವನು ಅವಳ ಉತ್ತರವನ್ನು ಕಾಯದೆ ಕಾರಿನಿಂದಿಳಿದು ಟಿಕೆಟ್ ಕೌಂಟರಿನತ್ತ ಸಾಗಿದ. ಅವಳು ಕಾರಿನಿಂದಿಳಿದು ಅವನನ್ನು ನಿಧಾನವಾಗಿ ಅನುಸರಿಸಿದಳು. ಅವನು ಹಣಕ್ಕಾಗಿ ತನ್ನ ಕಿಸೆಗೆ ಕೈ ಹಾಕುತ್ತಿದ್ದಂತೆಯೇ ಅವಳು ಓಡಿ ಬಂದು ಅವನ ಕೈಯನ್ನು ಹಿಡಿದುಕೊಂಡಳು. ಅವನು ಮುಖ ನೋಡಿದ. ಅವಳು ತಗ್ಗಿಸಿದ ತಲೆಯನ್ನು ಮೇಲೆತ್ತಲಿಲ್ಲ. ಕತ್ತಲೆಯೊಂದಿಗೆ ಮೌನ ಆವರಿಸಿತ್ತು. ಸ್ವಲ್ಪ ಹೊತ್ತಿನ ನಂತರ ಅವಳು ಮುಖ ಮೇಲೆತ್ತಿದಳು. ಅಲ್ಲೊಂದು ದೃಢ ನಿರ್ಧಾರವಿತ್ತು. ಅವಳಂದಳು “ದಯವಿಟ್ಟು ನನ್ನನ್ನು ನನ್ನ ಮನೆತನಕ ಬಿಟ್ಟು ಬಿಡಿ, ಪ್ಲೀಸ್” ಅವಳು ಅವನಿಗೆ ಕೈ ಮುಗಿದಳು. ಅವನು ಅವಳ ಕೈಯನ್ನು ಹಿಡಿದುಕೊಂಡು ಕಾರಿನ ಕಡೆ ನಡೆದ. ಕಾರು ಅವಳ ಮನೆಯ ಕಡೆ ಹೊರಟಿತು. ಕ್ಷಣಕಾಲ ಮೌನ. ಕೊನೆಗೆ ಅವನು ಮೌನ ಮುರಿದ. “ಮಗಳೇ, ಇದು ಸರಿಯಾದ ನಿರ್ಧಾರ, ಉತ್ತಮ ನಿರ್ಧಾರಗಳು ಅನುಭವದಿಂದ ಬರುತ್ತವೆ. ಅನುಭವವು ಕೆಟ್ಟ ನಿರ್ಧಾರಗಳಿಂದ ಬರುತ್ತವೆ. ನೀನು ನಿನ್ನ ವ್ಯಕ್ತಿತ್ವವನ್ನು ಕಳೆದುಕೊಂಡು ಪ್ರಪಂಚವನ್ನು ಗೆಲ್ಲಬೇಕಿಲ್ಲ. ವ್ಯಕ್ತಿತ್ವ ಎಂಬುದು ಚಿನ್ನ ಮತ್ತು ಬೆಳ್ಳಿಗಿಂತ ಅಮೂಲ್ಯವಾದುದು. ಜೀವನ ಒಂದು ಸುಂದರ ಚಿತ್ರಕಲೆ ಬಿಡಿಸಿದಂತೆ. ಆದರೆ ಅಲ್ಲಿ ತಪ್ಪಾದರೆ, ಅಳಿಸಲು ಇರೇಝರ್ ಇರುವುದಿಲ್ಲ. ಅವಳ ಮನೆ ಸಮೀಪ ಕಾರನ್ನು ನಿಲ್ಲಿಸಿ ಅವನು ತನ್ನ ವಿಸಿಟಿಂಗ್ ಕಾರ್ಡನ್ನು ಕೊಡುತ್ತಾ ಅಂದ “ನಿನಗೆ ನನ್ನಿಂದ ಏನಾದರೂ ಸಹಾಯ ಬೇಕಿದ್ದಲ್ಲಿ ಫೋನು ಮಾಡು”
ಅವಳ ಉತ್ತರಕ್ಕೂ ಕಾಯದೆ ಅವನು ಕಾರು ಚಲಾಯಿಸಿ ಹೊರಟು ಹೋದ.

ಆತಂಕಗೊಂಡ ಮನೆಯವರಿಗೆ ಒಂದು ಸುಳ್ಳು ಕಾರಣ ಹೇಳಿ ಅವಳು ತನ್ನ ರೂಮು ಸೇರಿಕೊಂಡಳು. ತನ್ನನ್ನು ಒಂದು ದೊಡ್ಡ ಆಪತ್ತಿನಿಂದ ಪಾರು ಮಾಡಿದ ಆ ಮಹಾನುಭಾವನಿಗೆ ಕೃತಜ್ಞತೆ ಹೇಳಲು ಅವಳು ಮರೆತಿದ್ದಳು. ಇದೀಗ ಅವಳಿಗೆ ತನ್ನ ತಪ್ಪಿನ ಅರಿವಾಗಿ ಖೇದವಾಯಿತು. ವಿಸಿಟಿಂಗ್ ಕಾರ್ಡಿನ ನಂಬ್ರಕ್ಕೆ ಫೋನು ಮಾಡಿ ಕೃತಜ್ಞತೆ ಹೇಳುತ್ತಾ ಅವಳಂದಳು “ಮುಂದಿನ ಭಾನುವಾರ ನನ್ನ ಮದುವೆಯಿದೆ ತಾವು ದಯವಿಟ್ಟು ಬರಬೇಕು.” ಅವನು ನಗುತ್ತಾ ಉತ್ತರಿಸಿದ. “ನನ್ನ ಮಗನ ಮದುವೆಯೂ ಮುಂದಿನ ಭಾನುವಾರ ನಡೆಯಲಿದೆ. ಆದರೂ ನಾನು ನಿನ್ನ ಮದುವೆಗೆ ಖಂಡಿತ ಬರುವೆ.”

ಅವಳು ಸಂತೋಷದಿಂದ ಮೊಬೈಲ್ ಕೆಳಗಿಟ್ಟಳು. ಸ್ವಲ್ಪ ಸಮಯದ ನಂತರ ಅವಳಿಗೆ ಏನೋ ಒಂದು ಸಂಶಯ ಬರತೊಡಗಿತು. ತಾನು ನೋಡಿದ ವೃದ್ಧನನ್ನು ಎಲ್ಲಿಯೋ ನೋಡಿದ ನೆನಪು. ಅವಳು ದಿಗ್ಗನೆ ಎದ್ದು ತನ್ನ ಮೇಜಿನ ಡ್ರಾವರಿನಲ್ಲಿ ಕೈ ಹಾಕಿ ಹುಡುಕ ತೊಡಗಿದಳು. ಫೋಟೊ ನೋಡಿ ದಿಗ್ರಮೆಗೊಂಡಳು. ತಾನು ಮದುವೆಯಾಗುವ ಯುವಕನೊಂದಿಗೆ ಆ ಮಹಾನುಭಾವ ನಿಂತಿದ್ದ. ಅದೇ ಗಾಂಭೀರ್ಯ, ಅದೇ ನಿರ್ಲಿಪ್ತ ಮುಖ. ವಿದೇಶದಲ್ಲಿ ಕೆಲಸ ಮಾಡುವ ಅವರ ಮಗ ಬರೇ ಫೋಟೊ ವಿನಿಮಯ ಮಾಡಿಕೊಂಡು ಮದುವೆಗೆ ಒಪ್ಪಿದ್ದ. ಆದರೆ ಅವಳು ಹುಡುಗನನ್ನು ತಿರಸ್ಕರಿಸಿ, ಪೋಟೊವನ್ನು ಮೂಲೆಗೆಸೆದಿದ್ದಳು. ನೆಂಟಸ್ತಿಕೆಗೆ ಆ ಮಹಾನುಭಾವ ಮನೆಗೆ ಬಂದಿದ್ದರು. ಆದರೂ ತಂದೆ ಅವಳ ಮದುವೆಯನ್ನು ಆ ಹುಡುಗನೊಂದಿಗೆ ನಿಶ್ಚಯಿಸಿಯೇ ಬಿಟ್ಟಿದ್ದರು. ಅವಳು ನಡುಗುವ ಕೈಯಿಂದ ಮೊಬೈಲ್ ಎತ್ತಿಕೊಂಡು ಆ ವಯಸ್ಕನಿಗೆ ಫೋನು ಮಾಡಿದಳು.

“ನೀವು ನನ್ನ ನಡತೆಯನ್ನು ಅರಿತೂ ನನ್ನನ್ನು ಯಾಕೆ ನಿಮ್ಮ ಸೊಸೆಯಾಗಿ ಸ್ವೀಕರಿಸುತ್ತಿದ್ದೀರಿ?” ಅವಳ ನೇರ ಪ್ರಶ್ನೆಗೆ ಆ ಮಹಾನುಭಾವ ಸಾವಧಾನದಿಂದ ಉತ್ತರಿಸಿದ. “ಒಮ್ಮೊಮ್ಮೆ ತಿಳಿದೋ ತಿಳಿಯದೆಯೋ ಮಹಾತ್ಮರು ಕೂಡಾ ತಪ್ಪು ಮಾಡುತ್ತಾರೆ. ಆದರೆ ತಪ್ಪನ್ನು ಅರಿತು ತಿದ್ದುಕೊಳ್ಳುವುದು ದೊಡ್ಡ ಗುಣ. ನಿನ್ನಲ್ಲಿ ಆ ದೊಡ್ಡ ಗುಣವನ್ನು ಕಂಡುಕೊಂಡೆ. ಆದ್ದರಿಂದಲೇ ನಿನ್ನಿಂದ ನನ್ನ ಮಗನ ಜೀವನ ಸುಗಮವಾಗಿ ಸಾಗಬಹುದು ಎಂಬ ನಂಬಿಕೆಯಿಂದ ನಿನ್ನನ್ನು ನನ್ನ ಸೊಸೆಯಾಗಿ ಸ್ವೀಕರಿಸುತ್ತಿದ್ದೇನೆ. ಏನೇ ಇರಲಿ, ಇಂದು ನಡೆದ ಘಟನೆ ನನಗೆ, ನಿನಗೆ, ನಮ್ಮ ಜೀವನ ಪರಂತ ಗುಟ್ಟಾಗಿರಲಿ, ಮುಂದಿನ ಭಾನುವಾರ ಕಲ್ಯಾಣ ಮಂಟಪದಲ್ಲಿ ಭೇಟಿಯಾಗೋಣ. ಶುಭರಾತ್ರಿ”,
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...