Home / ಕಥೆ / ಸಣ್ಣ ಕಥೆ / ಕ್ಷಮೆ

ಕ್ಷಮೆ

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊಡುವದಿಲ್ಲವೆಂದು ಕೇಳಿದ್ದನಾದುದರಿಂದ ಹಿಂದೆ ಮುಂದೆ ನೋಡಿದ. ಹಸಿವೆಯೆಂದರೆ ಹಾಗೇ, ಎಲ್ಲಿಂದಲೋ ಶೇಖರನಿಗೆ ಧೈರ್ಯ ಬಂದಿತು. ಅಂದೇ ವಾರವೂ ಇಲ್ಲ. ಖಾನಾವಳಿಗೆ ಹೋಗಿ ಉಂಡುಬರಲು ಕಾಸೂ ಇತ್ತಿಲ್ಲ. ಬೆಳಗಿನಿಂದ ಹೊಟ್ಟೆಯಲ್ಲಿ ನೀರು, ಬರೇ ನೀರು.

ದಣಪೆಯನ್ನು ದಾಟಿ ಅಂಗಳಕ್ಕೆ ಕಾಲಿಡುವಾಗಲೇ ಹೆಬ್ಬಾರರ, ಗುಡುಗು ಕೇಳಿಬಂತು “ಯಾರದು?”

“ನಾನು” ಮೆಲ್ಲಗೆ ನುಡಿದ ಶೇಖರ. ಅವನ ಎದೆ ಟುಕುಟುಕು ಅನ್ನುತ್ತಿತ್ತು. ಕಾಲು ಸಾವಕಾಶವಾಗಿ ಹೊಳ್ಳಿಯನ್ನು ಸಮೀಪಿಸಿತು,

“ನಾನು ಅಂದರೆ?”
“ವಿದ್ಯಾರ್ಥಿ”
“ಇದು ಸಾಲೆಯಲ್ಲ”
“ಗೊತ್ತಿದೆ. ಆದರೆ ನನಗೆ ಒಂದು ದಿನ ವಾರ…….. ”

“ಓಹೋ! ಪಿತೃಗಳು ಮಾಡಿಟ್ಟು ಹೋದ ಆಸ್ತಿಯ ಹಕ್ಕೆಂದು ತೋರುತ್ತದೆ ವಾರ ಇವರಿಗೆ”

“ಒಂದೇ ದಿನ ಉಳಿದಿದೆ.”

“ಎಲ್ಲರಿಗೂ ಹಾಗೇ, ಇನ್ನೂರನ್ಸ ಏಜಂಟರಿಗೆ ಒಂದು ಲಕ್ಷ ಆಗಲು ಒಂದೇ ಸಾವಿರ ಕಡಿಮೆ! ವಾರದ ಮಕ್ಕಳಿಗೆ ಏಳೂ ದಿನ ಆಗಲಿಕ್ಕೆ ಒಂದೇ ದಿನ ಕಡಿಮೆ!!…….. ”

“ಸತ್ಯಕ್ಕೂ ಇದೊಂದೇ ದಿನ…….”

“ಸಾಧ್ಯವಿಲ್ಲವೆಂದು ಸ್ಪಷ್ಟ ಹೇಳಿದತನಕ ತಿಳಿಯುವದಿಲ್ಲವೇ?”

“ಹಳ್ಳಿಯವ ನಾನು. ಏನೋ ನಾಲ್ಕು ಅಕ್ಷರ ಕಲಿತು ಹೋಗುವ ಅಂತ ಬಂದಿದ್ದೇನೆ”

“ಎಲ್ಲರಿಗೂ ಈಗ ಇಂಗ್ಲೀಷು ಕಲಿಯುವದೊಂದು ಚಟ. ತಾವೇನು? ತಮ್ಮ ಯೋಗ್ಯತೆಯೇನು? ಇದಾವುದನ್ನೂ ನೋಡುವದೇ ಇಲ್ಲ. ಇಂಗ್ಲೀಷು ಅಂದರೆ ಅಷ್ಟು ಅಗ್ಗವೇ? ಬಂದು ನಮ್ಮಂಥವರಿಗೆ ಉಪದ್ರ ಕೊಡುವದು. ಇಂಗ್ಲೀಷು ಕಲಿಯದಿದ್ದರೆ ಸಾಯುತ್ತಾರೆಯೇ? ಅಲ್ಲೊ, ಏ……. ನಿನ್ನ ಹೆಸರೇನು?”

“ಶೇಖರ”

“ಹುಂ, ಶೇಖರ, ನಿನಗೆ ತಂದೆ, ತಾಯಿ ಮನೆ ಮಾರು ಏನೂ ಇಲ್ಲವೇ?”

“ತಂದೆ ತಾಯಿ ಇದ್ದಾರೆ. ಒಂದು ತುಂಡು ತೋಟವಿದೆ. ಬಹಳ ಬಡತನ.”

“ಬಡವರಿಗೆ ಇಂಗ್ಲೀಷು ಬರೆದದ್ದಲ್ಲೋ. ಅಲ್ಲ, ನಿನ್ನ ತಂದೆ ಅಷ್ಟಿದ್ದರೆ ಸಾಲಮಾಡಿ ಕಲಿಸಬಾರದೇ? ಕಲಿತು ನೀನು ಕಲೆಕ್ಟರನಾಗಲಿದ್ದೀಯಾ? ಹೋಗು ಸುಮ್ಮನೆ. ಮನೆಗೆ ಹೋಗಿ, ಇರುವ ನಾಲ್ಕು ಅಡಿಕೆ ಮರಕ್ಕೆ ಎಲೆಯ ಬಳ್ಳಿ ಹಾಕಿ, ಕೋಡನ ಹಾಗೆ ಹತ್ತಿ ಕೊಟ್ಟೆ ಕೊನೆ ಮಾಡು. ಹರ ಹರ ಹೇಳಿ, ಗಂಜೀ ಉಂಡು ಸುಖವಾಗಿ ಇರು. ಅದನ್ನು ಬಿಟ್ಟು ಈ ಊರಿಗೆ ಬಂದು “ನಾನು ಬಡವ; ಇಂಗ್ಲೀಷು ಕಲಿಯುತ್ತೇನೆ; ವಾರ ಕೊಡಿ” ಎಂದು ಸಿಕ್ಕ ಸಿಕ್ಕವರನ್ನೆಲ್ಲ ಕಾಡಿದರೆ ಹೇಗೆ?”

ಶೇಖರನು ಶಿಫಾರಸಿನ ಪತ್ರಗಳನ್ನು ಹೆಬ್ಬಾರರ ಮುಂದಿಟ್ಟನು.

“ಅಯ್ಯೋ, ಈಗಿನ ದಿನದಲ್ಲಿ ಸರ್ಟಿಫಿಕೇಟು ಕೊಡುವವರಿಗೇನು ಕಡಿಮೆ? ನಾನು ಬೇಕಾದರೂ ಬರೆದು ಕೊಡುತ್ತೇನೆ- ಸದ್ರೀ ವಿದ್ಯಾರ್ಥಿಯು ಅತ್ಯಂತ ಬಡವನೂ ಬುದ್ಧಿವಂತನೂ ಇರುತ್ತಾನೆ ಎಂದು!”

ಶೇಖರ ಚಕಾರ ಮಾತಾಡದೆ ನಿಂತ.

“ಹೋಗಬಹುದು”

“ಇದೊಂದು ದಿನವಾದರೂ……..”

“ಆಗುವದಿಲ್ಲ ಅಂದೆನಲ್ಲ”

“ಬಡವರ ಮಕ್ಕಳಿಗೆ ಕಲಿಯುವ ಅಧಿಕಾರವೇ ಇಲ್ಲವೆಂದು ನಿಮ್ಮ ಹೇಳಿಕೆಯೇ?” ಎಂದು ಕೇಳಬೇಕೆಂದಿದ್ದ. ಆದರೆ ಮಾತಾಡದೆ ಹೋದ ದಾರಿಯಲ್ಲೇ ಮರಳಿದನು. ಕೊಠಡಿಯನ್ನು ಸೇರುವಾಗ ಅವನ ಹೊಟ್ಟಿಯು ಹಸಿವೆಯಿಂದ ಚುಂಯ್ಯಗುಟ್ಟಿತು; ತಲೆ ಕಾದು ಕೆಂಡವಾಯಿತು. ಎರಡೂ ಶಾಂತವಾಗಲೆಂದು ಅವನು ಒಂದು ಬೊಡ್ಡೆ ನೀರು ಮೋರಿದ.
X X X

ಹಟದಿಂದ ಶೇಖರ ಗ್ರೇಜು ಏಶನ್ ಮುಗಿಸಿದ. ಆವೇಶದಿಂದ ಅವನು ಕೊನೆಯವರೆಗೂ ಹೋರಾಡಿದ. ಅವನಿಗೆ ಜಯವಾಯಿತು.

ಬಿ. ಎ. ಯಲ್ಲಿ ಹೆಚ್ಚಿನ ಸ್ಥಾನ ದೊರಕಿಸಿದ ಬಗ್ಗಾಗಿ ಅವನ ಸಾಲೆಯವರು ಅವನಿಗೊಂದು ಸತ್ಕಾರ ಕೂಟವನ್ನೇರ್ಪಡಿಸಿದರು. ಊರಿನವರೆಲ್ಲ ಶೇಖರನನ್ನು ಆನಂದದಿಂದ ಬರಮಾಡಿಕೊಂಡರು. ಬಹಳ ಬಡತನದಲ್ಲಿದ್ದು…. ಇಂಥವನಿಗೆ ನೆರವಾಗುವ ಪುಣ್ಯ ನಮಗೆ ದೇವರು ಕೊಟ್ಟ……..” ಎಂದು ಮುಂತಾದಾಗಿ ಆಡಿಕೊಂಡರು.

ಶಂಕರ ಶಾಸ್ತ್ರಿಗಳಲ್ಲಿ ಶೇಖರ ಇಳಿದುಕೊಂಡಿದ್ದ. ಶ್ರೀಮಾನ್ ಪದ್ಮನಾಭ ಹೆಬ್ಬಾರರು ಏನೋ ನೆವಮಾಡಿ ಅಲ್ಲಿಗೆ ಆಗಮಿಸಿದರು. ಮಾತಿಗೆ ಮಾತು ಹೊರಟು ಹೆಬ್ಬಾರರು ತಾವು ಬಂದ ಕಾರ್ಯದ ವಿಷಯವನ್ನು ಶಾಸ್ತ್ರಿಗಳ ಮುಖಾಂತರ ಎತ್ತಿಸಿದರು.

ಶೇಖರನಿಗೆ ಒಳಗೊಳಗೆ ನಗುಬಂತು. ಸೇಡು ತೀರಿಸಿಕೊಳ್ಳಬೇಕೆಂಬ ಚಪಲವೂ ಮೂಡಿತು. ಆದರೂ ಸುಮ್ಮನೆ ಕುಳಿತ.

ಹೆಬ್ಬಾರರೇ ಪ್ರಸ್ತಾಪವೆತ್ತಿದರು.

ಈಗ ಬಿಡಕೂಡದೆಂದು ಶೇಖರ ಧೈರ್ಯ ಮಾಡಿದ.

ಅವನು ಈ ವಿಷಯ ಮಾತಾಡುವದು ಮೊದಲನೆಯ ಸಲವಾಗಿತ್ತು; ಸ್ವಲ್ಪ ಸಂಕೋಚವಾಗುತ್ತಿತ್ತು. ಆದರೂ ಕೇಳಿದ.

“ಎಷ್ಟು ಶಿಕ್ಷಣ ಕೊಟ್ಟಿದ್ದೀರಿ?”

“ಓದು ಬರೆಯಲಿಕ್ಕೆ ಬರುತ್ತದೆ.”

“ಸರಿ, ಎಷ್ಟು ಓದಿಸಿದ್ದೀರಿ ಕಾಲೇಜಿನಲ್ಲಿ?”

“ಕಾಲೇಜಿನಲ್ಲಿ?”

“ಕಾಲೇಜಿಗೆ ಹಾಕಲೇ ಇಲ್ಲವೇ? ಇಷ್ಟು ಅನುಕೂಲಸ್ಥರಾಗಿ ಕಾಲೇಜಿಗೆ ಹಾಕಲಿಲ್ಲವೆಂದರೆ……..ಆಯಿತು. ಸಂಗೀತ, ನೃತ್ಯ- ಇವೇನಾದರೂ ಬರುತ್ತದೆಯೋ ? ”

“ಅಯ್ಯೋ! ಬ್ರಾಹ್ಮಣರ ಮನೆಯ ಹುಡುಗಿಯರು ಇದನ್ನೆಲ್ಲ ಕಲಿತರೆ ತೀರಿತು. ಏನೂ ಕಲಿಸದೆ ಇದ್ದರೂ ಇನ್ನೂ ಮದುವೆ ಮಾಡಲಾಗಲಿಲ್ಲ. ಕಲಿಸಿದರೆ ಆಯಿತು.”

“ಇನ್ನೂ ಮದುವೆ ಮಾಡಲಿಲ್ಲ ಅಂದರೆ…….. ಬಹಳ ವರ್ಷಗಳ ಹಿಂದೇ ಆಗಬೇಕಾಗಿತ್ತೇನು?”

“ಹೌದು, ಏನು ಮಾಡುವದು ಹೇಳಿ? ನಮ್ಮ ಜಾತಿಯಲ್ಲಿ ಒಂದು ಯೋಗ್ಯ ವರ ಸಿಗುವದು ಎಷ್ಟು ಕಠಿಣ ಅನ್ನುವದು ಹೆಣ್ಣು ಹೆತ್ತವರಿಗೇ ಗೊತ್ತು”

“ಎಷ್ಟು ವರುಷ ಈಗ ನಡೆಯುತ್ತಿರುವದು?”

“ಹದಿನೇಳು, ಹದಿನೆಂಟು. ನಿಮಗಿಂತ ಬಹಳ ಚಿಕ್ಕವಳಾಗುವದಿಲ್ಲ”

“ಬಣ್ಣ ರೂಪ ನಿಮ್ಮದೇಯೋ?….. ”

“ಥೇಟು ನನ್ನ ಹಾಗೆ! ನನ್ನದು ಗಂಡು ಮೊಕ; ಅವಳದು ಹೆಣ್ಣು. ಅಷ್ಟೆ. ನೀವೇ ನೋಡುವಿರಂತೆ, ಹೋಗೋಣ ”

ಶೇಖರ ಸಣ್ಣ ದನಿಯಲ್ಲಿ ಉಳಿದವರಿಗೆ ಕೇಳುವಂತೆ `ಶಿವ ಶಿವ ಶಿವ’ ಅಂದುಕೊಂಡ.

“ಹೆಸರು ಏನಿಟ್ಟಿದ್ದೀರಿ?”

“ಮಹಾಕಾಳಿ ಅಂತ. ಅವಳ ಅಜ್ಜಿ ನಮ್ಮ ಕುಲದೇವತೆಯ ಹೆಸರನ್ನೇ ಇಟ್ಟಳು.”

ಶೇಖರ ಹ! ಹ! ಹ!! ಎಂದು ಹುಸಿನಕ್ಕ.

“ಯಾವುದೇನೇ ಇದ್ದರೂ ಹೆಸರನ್ನಾದರೂ ಒಳ್ಳೆಯದಿಡಬಾರದೇ?”

“ಏನು ಮಾಡುವದು? ಆ ಮುದುಕಿಯ ಹಟ ಮಂಕಾಳಿ ಎಂದೇ ಹೆಸರಿಡಬೇಕೆಂದು. ಏಳಿ, ಸ್ವಲ್ಪ ನಮ್ಮ ಮನೆಯನ್ನು ನೋಡಿ ಬರುವ”

“ಅರೆ! ನಿಮ್ಮ ಮನೆ ನಾನು ನೋಡಲಿಲ್ಲವೇ?”

“ಯಾವಾಗ ನೋಡಿದ್ದೀರಿ?”

“ಇದೇ ಊರಿನಲ್ಲಿ ಸಾಲೆ ಕಲಿಯುತ್ತಿದ್ದಾಗ ವಾರ ಕೇಳಲು ನಿಮ್ಮ ಮನೆಗೂ ಬಂದಿದ್ದೆ.”

ಬಂದಿರಲಿಕ್ಕೆ ಸಾಕು. ಬಹಳ ವರ್ಷಗಳಾದವು. ಮುದುಕರಿಗೆ ನೆನಪಿನ ಶಕ್ತಿ ಕಡಿಮೆ. ಮತ್ತೆ ನಮ್ಮ ಮನೆಯನ್ನು ಹೊಸದಾಗಿ ಕಟ್ಟಿಸಿದ್ದೇನೆ. ನೀವು ನೋಡುವ ಕಾಲಕ್ಕೆ `ಶಿರಬಳೆ’ ಹಂಚು ಏನೂ ಇದ್ದಿರಲಿಕ್ಕಿಲ್ಲ.”

“ಛೇ. ಶಿರಬಳೆ, ಹಂಚು, ಗಚ್ಚು-ಗಾರೆನೆಲ ಎಲ್ಲ ಇತ್ತು”

“ಗಚ್ಚು ಗಾರೆ ಇನ್ನೂ ಆಗಿಲ್ಲ. ಬೇರೆ ಯಾರದೋ ಮನೆ ಇರಬೇಕು ನೀವು ನೋಡಿದ್ದು”

“ಇದ್ದಿರಬಹುದು. ಈಗ ನನಗೆ ಊರಿಗೆ ಹೋಗಬೇಕು”

“ಇನ್ನು ಯಾವಾಗ ಬರುವದು?”

“ಯಾವಾಗಲೋ”

“ಮುದ್ದಾಂ ಬನ್ನಿ ನಮ್ಮ ಮನೆಗೊಮ್ಮೆ. ಮತ್ತೆ ನಾನು ಹೇಳಿದ್ದು ನೆನಪಿರಲಿ”

“ಯಾವದು?”

“ನಮ್ಮ ಮಾಂಕಾಳಿಯ………….”

“ಓಹೋ, ಅದೋ? ಅಲ್ಲ, ನೋಡಿ ಇವರೇ…….. ನಿಮ್ಮ ಹೆಸರು…. ಹಂ……..ಹೆಬ್ಬಾರರೆ, ನನ್ನನ್ನು ಕೇಳಿದರೆ ಇಂಥ ಅಶಿಕ್ಷಿತ, ಕಲಾವಿಹೀನ, ಅಸಡ್ಡ ಹೆಸರಿನ…….. ಹುಡುಗಿಯರಿಗೆ ವರನನ್ನು ಹುಡುಕುವದರಕ್ಕಿಂತ
ಬಸವಿ ಬಿಟ್ಟು ಬಿಟ್ಟರೆ ಒಳಿತೆಂದು ತೋರುತ್ತದೆ! ” ಈ ಮಾತನ್ನು ಹೇಳುವಾಗ ಶೇಖರನ ಮೈ ಹೆದರಿಕೆ ಸಂಕೋಚ-ಸೇಡು-ಸಿಟ್ಟುಗಳಿಂದ ನಡುಗುತ್ತಿತ್ತು.

ಹೆಬ್ಬಾರರು ಚಕಾರ ಮಾತಾಡಲಿಲ್ಲ “ಹಾಗಾದರೆ ಇಂಥ ಹುಡುಗಿಯರಿಗೆ ಮದುವೆಯಾಗುವ ಅಧಿಕಾರವೇ ಇಲ್ಲವೇ?” ಎಂದು ಕೇಳಬೇಕೆಂದಿದ್ದರು. ಆದರೆ ನಾಲಿಗೆ ಏಳಲಿಲ್ಲ. ಸುಮ್ಮನೆ ಬಂದ ದಾರಿಯಲ್ಲಿ ಮರಳಿದರು.

ಅವರು ಹೋದ ಮೇಲೆ ಶಾಸ್ತ್ರಿಗಳು ಕೇಳಿದರು “ಏನಪ್ಪ, ಹೆಬ್ಬಾರರಿಗೆ ಇಂಥ ಮಾತು. ಮೇಲಿನ ನಂಬರು ಬಂದಿದ್ದೀಯೆಂದು ಬಹಳ ಸೊಕ್ಕಿದ ಹಾಗೆ ಕಾಣುತ್ತದೆ. ನಾನೇನೋ ಸುಮ್ಮನೆ ಕುಳಿತೆ. ಬಹಳ ಅಸಭ್ಯ” ಅಂದರು.

ಶೇಖರ ಹಿಂದಿನ ಕತೆ ಹೇಳಿದ.

“ಆದರೆ ನೀನು ಅದನ್ನು ನೆನಪಿಟ್ಟುಕೊಂಡು ಈಗ ಹೀಗೆ ಹಂಗಿಸುವದು ಸರಿಯಲ್ಲ. ಕ್ಷಮೆಯೇ ಮಾನವನ ದೊಡ್ಡ ಗುಣ.”

“ಅವರನ್ನು ನಾನು ತುಂಬಾ ಕ್ಷಮಿಸಿದ್ದೇನೆ ಶಾಸ್ತ್ರಿಗಶೇ. ಅಲ್ಲದಿದ್ದರೆ (ಜಾಮಾತಾ) ದಶಮ ಗ್ರಹ ಆಗಿ ಅವರ ಪಡಿಪಾಟು ಹಾರಿಸುತ್ತಿದ್ದೆ!” ಅಂದ ಶೇಖರ, ಅವನ ಮನಸ್ಸು ಹಗುರಾಯಿತು.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...