ಸಿಹಿಸುದ್ದಿ

ಸಿಹಿಸುದ್ದಿ

ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ “ಕಲ್ಯಾಣಿ,” ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು. ಕಲ್ಯಾಣಿಯನ್ನು ನೋಡಿ ಮುಗುಳು ನಕ್ಕರು. “ಏನ್ರಿ ಚೆನ್ನಾಗಿದ್ದೀರಾ? ನನ್ನ ಗುರುತು ಸಿಕ್ತಾ? ನಾನು ಸುಲೋಚನಾ, ಜ್ಞಾಪಕ ಬಂತಾ?” ಎಂದರು ವೆಂಕಟೇಶ್ವರ ಸುಪ್ರಭಾತ ಹೇಳಿಕೊಳ್ಳುತ್ತಾ ಪ್ರದಕ್ಷಿಣೆ ಹಾಕುತ್ತಿದ್ದ ಕಲ್ಯಾಣಿಗೆ ಈ ಸುಲೋಚನಾ ಯಾರೆಂದು ತಕ್ಷಣ ನೆನಪಾಗಲಿಲ್ಲ. ಅದಕ್ಕಿಂತ ಮುಖ್ಯವಾಗಿ, ನಾನು ಏಕಾಗ್ರತೆಯಿಂದ, ಭಕ್ತಿಯಿಂದ ಸುಪ್ರಭಾತ ಹೇಳುತ್ತಾ ಪ್ರದಕ್ಷಿಣೆ ಹಾಕುತ್ತಿರುವಾಗ ಈ ಸುಲೋಚನಾ ಬಂದು ಸುಮ್ಮನೆ ತೊಂದರೆ ಮಾಡಿದಳೆಂದು ಬೇಸರವಾಯಿತು. ಆದರೇನು ಮಾಡುವುದು? ಬೇಸರ ವ್ಯಕ್ತ ಪಡಿಸುವಂತಿರಲಿಲ್ಲ. ಸ್ವಲ್ಪವೇ ಮುಗುಳು ನಕ್ಕು “ಚೆನ್ನಾಗಿದ್ದೀನಿ. ನೀವು ಚೆನ್ನಾಗಿದ್ದೀರಾ? ಎಂದಷ್ಟೇ ಹೇಳಿ ಮುಂದೆ ಹೆಜ್ಜೆ ಹಾಕಿದರು. ಆದರೆ ಸುಲೋಚನಾ ಬಿಡಲಿಲ್ಲ. ಓಡಿ ಬಂದು ಕಲ್ಯಾಣಿಯವರ ಕೈಹಿಡಿದು ಮಾತಿಗೆಳೆದರು. ಕಲ್ಯಾಣಿ ಸ್ವಲ್ಪ ಬೇಸರ ತೋರಿಸಿ, “ಒಂದೈದು ನಿಮಿಷಾರಿ ಸುಲೋಚನಾ, ಸುಪ್ರಭಾತ ಹೇಳ್ತಾ ಇದ್ದೀನಿ. ಮುಗಿಸಿ ಬರ್‍ತೀನಿ” ಎಂದು ಹೇಳಿ ಮುಂದಕ್ಕೆ ಹೆಜ್ಜೆ ಹಾಕಿದರು.

ಸುಲೋಚನಾ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ, ದೇವಾಲಯದ ಪರಿಸರದಲ್ಲಿಯೇ ಇದ್ದ ಸಿಮೆಂಟಿನ ಬೆಂಚಿನ ಮೇಲೆ ಕುಳಿತರು. ತಮಗೆ ತಿಳಿದ ದೇವರ ನಾಮ ಗುಣಗುಣಿಸತೊಡಗಿದರು. ಕಲ್ಯಾಣಿ ಇನ್ನೂ ಮೂರು ಪ್ರದಕ್ಷಿಣೆ ಹಾಕಿದರು. ಅಷ್ಟು ಹೊತ್ತಿಗೆ ವೆಂಕಟೇಶ್ವರ ಸುಪ್ರಭಾತ ಹೇಳಿ ಮುಗಿಸಿದ್ದರು. ನಿಧಾನವಾಗಿ ಬಂದು ಸುಲೋಚನಾ ಪಕ್ಕದಲ್ಲಿ ಕುಳಿತರು.

“ಏನು ಕಲ್ಯಾಣಿ ಹೇಗಿದ್ದೀರಿ? ಯಜಮಾನರು ಹೇಗಿದ್ದಾರೆ? ಮಕ್ಕಳು ಹೇಗಿದ್ದಾರೆ? ನಿಮ್ಮನ್ನೆಲ್ಲಾ ನೋಡಿ ಏಳೆಂಟು ವರ್ಷಗಳೇ ಆಯ್ತು” ಎಂದರು. ಕಲ್ಯಾಣಿ ನಿಟ್ಟುಸಿರು ಬಿಟ್ಟು ನಿಧಾನವಾಗಿ ಹೇಳಿದರು.

“ಯಜಮಾನರು ಹೋಗಿಬಿಟ್ಟರು. ಐದು ವರ್ಷ ಆಗೋಯ್ತು ಅವರು ತೀರಿ ಹೋಗಿ, ಮಗಳಿಗೆ ಮದುವೆ ಆಗಿದೆ. ಒಂದು ಹೆಣ್ಣು ಮಗುನೂ ಇದೆ. ಅವಳು ಗಂಡನ ಜೊತೆ ಆಸ್ಟ್ರೇಲಿಯಾದಲ್ಲಿದ್ದಾಳೆ. ಮಗ ಶ್ರೀಧರ ಇಲ್ಲೆ ಬೆಂಗಳೂರಿನಲ್ಲಿ ಒಂದು ಕೊರಿಯರ್ ಕಂಪನೀಲಿ ಕೆಲಸದಲ್ಲಿದ್ದಾನೆ. ಅವನಿಗಿನ್ನೂ ಮದುವೆ ಆಗಿಲ್ಲ. ಹೀಗೆ ನಡೀತಿದೆ ನಮ್ಮ ಜೀವನ, ಅಂದ ಹಾಗೆ ನೀವು ಹೇಗಿದ್ದೀರಾ?”

“ಅಯ್ಯೋ ನಮ್ಮದೇನಿರುತ್ತೆ ಹೇಳಿ ಸಮಾಚಾರ? ನಾನು ನಮ್ಮೆಜಮಾನರು ಅಷ್ಟೆ. ನಮಗೆ ಮಕ್ಕಳಿಲ್ಲ. ನಿಮಗೊತ್ತೇ ಇದೆ. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ ಅಂತಾರಲ್ಲಾ ಹಾಗಿದೆ ನಮ್ಮ ಜೀವನ, ನಮ್ಮೆಜಮಾನರು, ರಿಟೈರ್‍ಡ್ ಆಗಿ ಇಪ್ಪತ್ತು ವರ್ಷಗಳೇ ಆಯ್ತು. ಇಬ್ಬರಿಗೂ ಬಿ.ಪಿ. ಶುಗರು, ಹಾರ್ಟ್ ಪ್ರಾಬ್ಲಮ್ಮು ಎಲ್ಲಾ ಇದೆ. ಅವರಿಗೆ ಪೆನ್‌ಷನ್ ಬರುತ್ತೆ. ಹೇಗೂ ಸ್ವಂತ ಮನೆ ಇದೆ. ಹೇಗೋ ಕಾಲ ತಳ್ಳುತ್ತಾ ಇದ್ದೀವಿ.

“ಸರಿ ಹೊರಡೋಣ” ಎಂದು ಕಲ್ಯಾಣಿ ಎದ್ದರು.

“ಅಯ್ಯೋ ಕೂತ್ಕಳೀ ಹೋಗೀವಂತೆ. ಬಹಳ ದಿನಗಳ ಮೇಲೆ ಸಿಕ್ಕಿದ್ದೀರಾ. ಸ್ವಲ್ಪ ಹೊತ್ತು ಮಾತಾಡೋಣ” ಎಂದರು ಸುಲೋಚನಾ ಮನೆಗೆ ಹೋಗಿ ಮಾಡುವುದಾದರೂ ಏನು? ಸರಿ ಸ್ವಲ್ಪ ಹೊತ್ತು ಕುಳಿತು ಮಾತನಾಡೋಣ ಎಂದುಕೊಂಡು ಆರಾಮಾಗಿ ಕುಳಿತರು. ಹಾಗೆಯೇ ಅದೂ ಇದೂ ಮಾತನಾಡುತ್ತಾ ಮಗನ ಮದುವೆಯ ವಿಷಯ ಕೇಳಿದರು.

“ಅದೇ ದೊಡ್ಡ ಯೋಚನೆ ಆಗಿದೇರಿ ಸುಲೋಚನಾ, ನನ್ನ ಮಗನಿಗೆ ಮೂವತ್ತೆರಡು ವರ್ಷ ವಯಸ್ಸು ಹೇಳಿಕೊಳ್ಳುವಂತಹ ಒಳ್ಳೆಯ ಕೆಲಸ ಇಲ್ಲ. ಸಾಧಾರಣ ಸಂಬಳ ಬರುತ್ತೆ. ಹೇಗೋ ನಮ್ಮಿಬ್ಬರ ಜೀವನ ನಡೀತಿದೆ. ಮದುವೆಗೆ ಅಂತ ಯಾರನ್ನ ಕೇಳೀದ್ರೂ ಮಗ ‘ಇಂಜಿನಿಯರಾ? ಡಾಕ್ಟರಾ? ಚಾರ್‍ಟಡ್ ಅಕೌಂಟೆಂಟಾ? ಹಾಗೆ ಹೀಗೆ ಅಂತ ಕೇಳ್ತಾರೆ. ಇನ್ನು ಈಗಿನ ಕಾಲದಲ್ಲಿ ಹುಡುಗೀರೆಲ್ಲಾ ಬಿ.ಇ. ಓದಿ ಸಾಫ್ಟ್‌ವೇರ್ ಇಂಜಿನಿಯರಾಗಿ ಕೆಲಸ ಮಾಡ್ತಾರೆ. ಇನ್ನು ಬಿ.ಕಾಂ. ಓದಿರೋ ಹುಡುಗನ್ನ ಮದುವೆ ಆಗ್ತಾರ್‍ಯೇ? ನಾನೂ ಬೇಕಾದಷ್ಟು ಹುಡುಗೀರ ಮನೆಗಳಿಗೆ ಹೋಗಿ ಬಂದೆ. ಅದಕ್ಕಿಂತ ಮೇಲೆ, ಈಗಿನ ಕಾಲದಲ್ಲಿ ಹುಡುಗೀರ ಸಂಖ್ಯೆನೆ ಕಡಿಮೆ ಆಗಿ ಹೋಗಿದೆ. ಯಾರ ಮನೇಲಿ ನೋಡಲಿ ಒಂದೋ ಎರಡೋ ಮಕ್ಕಳು. ಎಲ್ಲಾ ಹುಡುಗೀರೂ ಹೋಗಿ ಅಮೇರಿಕಾನೋ, ಆಸ್ಟ್ರೇಲಿಯನೋ, ಜರ್‍ಮನಿನೋ ಸೇರಿಕೊಳ್ತಾ ಇದ್ದಾರೆ. ಈಗ ನನ್ನ ಮಗಳೇ ನೋಡಿ, ಆಸ್ಟ್ರೇಲಿಯಾದಲ್ಲಿದ್ದಾಳೆ. ಯಾವಾಗಲೋ ವರ್ಷಕ್ಕೋ, ಎರಡು ವರ್ಷಕ್ಕೋ ಒಂದು ಸಲ ಬರ್‍ತಾಳೆ, ಬಂದಾಗ ಬೆಂಗಳೂರು, ಮುಂಬಯಿ, ಡೆಲ್ಲಿ ಅಂತ ಸುತ್ತಾಡಿ ವಾಪಸ್ ಆಸ್ಟ್ರೇಲಿಯಾ ಸೇರ್‍ಕೋತಾಳೆ.

ಅದಿರಲಿಬಿಡಿ, ಈಗ ನಮ್ಮ ಶ್ರೀಧರನಿಗೆ ಯಾವುದಾದರೂ ಹುಡುಗಿ ಇದ್ದರೆ ಹೇಳಿ, ಅವನಿಗೊಂದು ಮದುವೆ ಮಾಡಿ ನನ್ನ ಜವಾಬ್ದಾರಿ ಕಳಕೋತೀನಿ, ಆಮೇಲೆ ರಾಮಾ ಕೃಷ್ಣಾಂತ ದೇವರ ಧ್ಯಾನ ಮಾಡಿಕೊಂಡಿದ್ದು, ಆ ಭಗವಂತನ ಪಾದ ಸೇರಿಕೊಡ್ತೀನಿ.” ಎಂದು ನಿಟ್ಟುಸಿರುಬಿಟ್ಟರು.

ಸುಲೋಚನಾರವರು ಕಲ್ಯಾಣಿಯವರ ಭುಜದ ಮೇಲೆ ಕೈಯಿಟ್ಟು ಸಮಾಧಾನ ಪಡಿಸತೊಡಗಿದರು.

“ನೀವೇನೂ ಯೋಚನೆ ಮಾಡಬೇಡಿ ಕಲ್ಯಾಣಿ. ಇವತ್ತಲ್ಲಾ ನಾಳೆ ನಿಮ್ಮ ಮಗನಿಗೆ ತಕ್ಕಂತಹ ಹುಡುಗಿ ಸಿಕ್ಕೇ ಸಿಗತಾಳೆ, ಖಂಡಿತ ನಿಮ್ಮ ಮಗನಿಗೆ ಮದುವೆ ಆಗುತ್ತೆ. ಆ ದೇವರು ನಿಮಗೆ ಒಳ್ಳೆಯದು ಮಾಡಲಿ, ನಡೀರಿ ಹೊರಡೋಣ ಎಂದು ಇಬ್ಬರೂ ದೇವಾಲಯದ ಪರಿಸರದಿಂದ ಹೊರಬಂದರು.

“ಆಂದ ಹಾಗೆ ನಿಮ್ಮ ಮನೆ ಎಲ್ಲಿ ಕಲ್ಯಾಣಿ?” ಎಂದರು.

“ಇಲ್ಲೇ ಹೆಚ್.ಬಿ. ಸಮಾಜ ರೋಡು, ಬಸವನಗುಡಿ” ಎಂದರು ಕಲ್ಯಾಣಿ.

“ನಮ್ಮನೇನೂ ಅಲ್ಲೇರೀ ರಂಗರಾವ್ ರಸ್ತೆ, ಗೊತ್ತಲ್ಲ?” ಎಂದರು ಸುಲೋಚನಾ.

“ಅಯ್ಯೋ! ರಂಗರಾವ್ ರೋಡ್ ಗೊತ್ತಿಲ್ಲದೆ ಏನು? ಚೆನ್ನಾಗಿಯೇ ಗೊತ್ತಿದೆ.

ಅಂದ ಹಾಗೆ ನಮ್ಮ ಶ್ರೀಧರನಿಗೆ ಸರಿಹೊಂದೋ ಯಾವುದಾದರೂ ಹುಡುಗಿ ನಿಮ್ಮ ಗಮನಕ್ಕೆ ಬಂದರೆ ತಿಳಿಸ್ರಿ

“ಆಗಲಿ ಕಲ್ಯಾಣಿ ಖಂಡಿತ ಹೇಳ್ತೀನಿ, ಮನೆಗೆ ಬನ್ನೀ ಕಲ್ಯಾಣಿ,” ಎಂದು ಕರೆದರು.

“ಇಲ್ಲಾ ರೀ ಈಗ ಬರಕ್ಕಾಗಲ್ಲಾ ಇನ್ನೊಮ್ಮೆ ಖಂಡಿತಾ ಬರ್‍ತೀನಿ. ನಾನು ಹೇಳಿದ ವಿಷಯ ಜ್ಞಾಪಕ ಇರಲಿ, ನಿಮ್ಮ ಯಜಮಾನರಿಗೂ ಹೇಳಿ, ಅವರು ವಾಕಿಂಗ್ ಹೋದಾಗ ಯಾರಾದರೂ ಅವರ ಸ್ನೇಹಿತರ ಮಕ್ಕಳು ಇದ್ದರೆ, ಅಥವಾ ಅವರಿಗೆ ತಿಳಿದವರು ಯಾರಾದರೂ ಇದ್ದರೆ ತಿಳಿಸಲಿ, ಇನ್ನು ನಾನು ಬರ್‍ತೀನ್ರಿ” ಎಂದು ನಡೆದರು. ಸುಲೋಚನಾ ಕೂಡಾ ತಡವಾಯಿತೆಂದು ಬೇಗ ಬೇಗ ಹೆಜ್ಜೆ ಹಾಕಿದರು.
* * *

ಕಲ್ಯಾಣಿಯವರ ಮಗ ಶ್ರೀಧರ ತನ್ನ ಕೊರಿಯರ್ ಕೆಲಸದ ಪ್ರಯುಕ್ತ ದಿನವಿಡೀ ಬೈಕಿನಲ್ಲಿ ಸುತ್ತಾಡುತ್ತಿದ್ದ. ಸಮಯ ಸಿಕ್ಕರೆ ಮನೆಗೆ ಬಂದು ಊಟ ಮಾಡುತ್ತಿದ್ದ. ಹೆಚ್ಚಿನ ದಿನಗಳಲ್ಲಿ ಮಧ್ಯಾಹ್ನ ಹೊರಗೇ ಊಟ ಮಾಡುತ್ತಿದ್ದ. ರಾತ್ರಿ ಮಾತ್ರ ಮನೆಯಲ್ಲಿ ಊಟ ಮಾಡುತ್ತಿದ್ದ. ಊಟ ಬಡಿಸುವಾಗ ಅಮ್ಮ ಮದುವೆಯ ವಿಷಯ ತೆಗೆಯುತ್ತಿದ್ದಳು. ಯಾವುದಾದರೂ ಒಂದು ಹುಡುಗಿಯ ವಿಷಯ ತೆಗೆದು ಅವಳು ಬಿಕಾಂ ಓದಿದ್ದಾಳೆ, ಬ್ಯಾಂಕಿನಲ್ಲಿ ಕೆಲಸದಲ್ಲಿದ್ದಾಳೆ. ಜಾತಕ ಚೆನ್ನಾಗಿದೆ. ಭಾನುವಾರ ಬರಲು ಹೇಳಲಾ? ಎಂದೆಲ್ಲಾ ಕೇಳುತ್ತಿದ್ದರು. ಶ್ರೀಧರ ಯಾವುದೇ ಪ್ರೋತ್ಸಾಹದಾಯಕವಾದ ಪ್ರತಿಕ್ರಿಯೆ ಕೊಡುತ್ತಿರಲಿಲ್ಲ. ತನ್ನ ಬಿಡುವಿಲ್ಲದ ಕೆಲಸದಿಂದ ದಣಿದಿರುತ್ತಿದ್ದ. ತನ್ನ ಸಂಬಳ ತನ್ನ ಮತ್ತು ತನ್ನ ತಾಯಿಯ ಜೀವನಕ್ಕೆ ಸಾಲದು. ಇನ್ನು ಮದುವೆ, ಮಕ್ಕಳು ಎಂದೆಲ್ಲಾ ಆದರೆ ಕೊನೆಮೊದಲಿಲ್ಲದ ಖರ್ಚು ವೆಚ್ಚಗಳಿಗೆ ಏನು ಮಾಡುವುದು? ಇನ್ನು ಕೆಲಸದಲ್ಲಿರುವ ಹುಡುಗಿಯನ್ನು ಮದುವೆಯಾದರೆ ನನ್ನ ಅಮ್ಮನೇ ಹಗಲಿರುಳು ಅವಳ ಸೇವೆ ಮಾಡಬೇಕು. ಸದ್ಯಕ್ಕಂತು ಮದುವೆಯ ವಿಷಯ ಬೇಡ ಎನ್ನುತ್ತಿದ್ದ. ಹಾಗೆಯೇ ವಯಸ್ಸು ಮುವತ್ತೆರಡು ದಾಟಿತು. ಇನ್ನು ತಡ ಮಾಡಿದರೆ ಮುಂದೆ ಮದುವೆಯೇ ಆಗದೇ ಉಳಿಯಬೇಕಾದೀತು. ಅಮ್ಮ ಇರುವ ತನಕ ಹೇಗೋ ಆಗುತ್ತದೆ. ಅಮ್ಮ ಮನೆಯ ಕೆಲಸ ಎಲ್ಲಾ ನೋಡಿಕೊಳ್ಳುತ್ತಾಳೆ. ಒಳ್ಳೆಯ ರುಚಿ ರುಚಿಯಾಗಿ ತಿಂಡಿ, ಅಡುಗೆ ಎಲ್ಲಾ ಮಾಡಿ ಸಮಯಕ್ಕೆ ಸರಿಯಾಗಿ ಬಡಿಸುತ್ತಾಳೆ. ಒಂದು ವೇಳೆ ಅಮ್ಮನಿಗೇನಾದರೂ ಆದರೆ ನನ್ನ ಗತಿಯೇನು? ಈ ಬಿಡುವಿಲ್ಲದ ಜೀವನದ ಜಂಜಾಟದಲ್ಲಿ ತನಗೆ ಏನಾದರೂ ಆದರೆ ತಾಯಿಯ ಗತಿಯೇನು? ಆದ್ದರಿಂದ ಇನ್ನು ತಡ ಮಾಡದೆ ಶೀಘ್ರದಲ್ಲಿಯೇ ಮದುವೆ ಮಾಡಿಕೊಳ್ಳುವುದೇ ಒಳ್ಳೆಯದು ಎಂಬ ಅರಿವು ಶ್ರೀಧರನಿಗೂ ಬಂದಿದೆ. ಆದರೆ… ತನಗೆ ಸರಿಹೊಂದುವಂತಹ ಹುಡುಗಿ ಸಿಗುತ್ತಿಲ್ಲ. ಅದೇ ಯೋಚನೆ ಮಾಡುತ್ತಾ ಮಲಗಿದ. ಅಮ್ಮ ಈ ದಿನ ಸಜ್ಜನರಾವ್ ವೃತ್ತದ ಬಳಿಯಿರುವ ಶ್ರೀನಿವಾಸ ದೇವಾಲಯಕ್ಕೆ ಹೋದದ್ದು, ಅಲ್ಲಿ ತಮ್ಮ ಹಳೆಯ ಗೆಳತಿ ಸುಲೋಚನ ಸಿಕ್ಕಿದ್ದು ಅವರು ಇವನ ಮದುವೆಯ ವಿಷಯ ಮಾತನಾಡಿದ್ದು ಎಲ್ಲಾ ಹೇಳಿದರು. ಅವರ ಮಾತುಗಳನ್ನು ಇವನು ಮೌನವಾಗಿ ಕೇಳುತ್ತಾ ಊಟ ಮುಗಿಸಿ ಎದ್ದ. ಶೀಘ್ರದಲ್ಲಿಯೇ ತನಗೆ ಒಂದು ಅನುರೂಪಳಾದ ಹುಡುಗಿ ಸಿಕ್ಕಿ ತನ್ನ ಮದುವೆಯಾಗಲಿ ದೇವರೇ ಎಂದು ಪ್ರಾರ್ಥಿಸುತ್ತಾ ಮಲಗಿದ.

ದಿನಗಳು, ವಾರಗಳು, ತಿಂಗಳುಗಳು ಉರುಳತೊಡಗಿದವು. ಮದುವೆಯ ವಿಷಯದಲ್ಲಿ ಯಾವುದೇ ಬೆಳವಣಿಗೆ ಇಲ್ಲವಾಯಿತು. ಈ ಮಧ್ಯೆ ನಾಲ್ಕಾರು ಪ್ರಸ್ತಾಪಗಳೇನೋ ಬಂದವು, ಆದರೆ ಯಾವ ಪ್ರಸ್ತಾಪವೂ ಸರಿಹೊಂದಲಿಲ್ಲ. ಈ ಮಧ್ಯೆ ಮತ್ತೊಮ್ಮೆ ಕಲ್ಯಾಣಿಯವರು ಮತ್ತು ಸುಲೋಚನಾರವರು ಶ್ರೀನಿವಾಸ ದೇವಾಲಯದಲ್ಲಿ ಭೇಟಿಯಾದರು. ಕಲ್ಯಾಣಿಯವರನ್ನು ಕಂಡ ಕೂಡಲೇ ಸುಲೋಚನಾರವರು ಓಡೋಡಿ ಬಂದು, ಒಂದು ಹುಡುಗಿಯ ಬಗ್ಗೆ ಹೇಳತೊಡಗಿದರು. ಕಲ್ಯಾಣಿಯವರು ಪ್ರದಕ್ಷಿಣೆ ಮುಗಿಸಿ ಒಂದು ಸಿಮೆಂಟ್ ಬೆಂಚಿನ ಮೇಲೆ ಕುಳಿತು ಸುಲೋಚನಾರವರೊಂದಿಗೆ ಮಾತನಾಡಲು ಆರಂಬಿಸಿದರು. ಆರಂಭದಲ್ಲೇ ಒಂದು ಎಚ್ಚರಿಕೆ ಕೊಟ್ಟರು. “ನೋಡಿ ಕಲ್ಯಾಣಿ ನಾನು ಹೇಳುವ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಮಧ್ಯ ಮಧ್ಯೆ ಏನೂ ಪ್ರಶ್ನೆಗಳನ್ನು ಕೇಳಬೇಡಿ. ನಾನು ಎಲ್ಲಾ ವಿಷಯ ಹೇಳಿದ ಮೇಲೆ ನಿಮಗೆ ಏನೇನು ಸಂದೇಹವಿದೆಯೋ ಕೇಳಿ, ಸರೀನಾ? ಈಗ ಕೇಳಿ. ನಮ್ಮ ಯಜಮಾನರ ಜೊತೆ ಕೆಲಸ ಮಾಡುತ್ತಿದ್ದ ರಾಧಾಕೃಷ್ಣ ಅನ್ನುವವರು ಈಗ ಎರಡು ವರ್ಷಗಳ ಹಿಂದೆ ತೀರಿಹೋದರು. ಅವರ ಹೆಂಡತಿಗೆ ಫ್ಯಾಮಿಲಿ ಪೆನ್‌ಷನ್ ಬರುತ್ತೆ. ಅವರ ಮಗಳು ಶ್ರೀಪ್ರಿಯಾ ಅಂತ. ಅವಳು ಬಿ.ಇ. ಓದಿ ಒಂದು ದೊಡ್ಡ ಕಂಪ್ಯೂಟರ್ ಕಂಪನೀಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಾ ಇದ್ದಾಳೆ. ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಬರುತ್ತೆ.”

ಈ ಮಾತನ್ನು ಕೇಳಿದ ಕೂಡಲೇ ಕಲ್ಯಾಣಿಯವರು ಮಧ್ಯ ಬಾಯಿ ಹಾಕಿ ತಮ್ಮ ಪ್ರತಿಕ್ರಿಯೆ ನೀಡತೊಡಗಿದರು.

“ಅಲ್ರೀ ಸುಲೋಚನಾ, ಹುಡುಗಿ ಬಿ.ಇ. ಓದಿದಾಳೆ ಅಂತೀರ, ಒಂದು ಲಕ್ಷ ರೂಪಾಯಿ ಸಂಬಳ ತಗೋತಾಳೆ ಅಂತೀರಾ, ನನ್ನ ಮಗ ಬರೀ ಬಿ.ಕಾಂ. ಓದಿದ್ದಾನೆ. ಹದಿನೆಂಟೋ ಇಪ್ಪತ್ತೋ ಸಾವಿರ ಸಂಬಳ ಬರುತ್ತೆ ಅಂತದ್ದದ್ದರಲ್ಲಿ ಈ ಬಿ.ಇ. ಓದಿರೋ ಹುಡುಗಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ತರೋ ಹುಡುಗಿ ನಮ್ಮ ಶ್ರೀಧರನನ್ನು ಮದುವೆ ಆಗೋದಕ್ಕೆ ಒಪ್ತಾಳೋ?”

ಇದೆಲ್ಲಾ ಆಗದ ಹೋಗದ ಮಾತು ಎಂಬಂತೆ ನಿಟ್ಟುಸಿರುಬಿಟ್ಟರು. ಸುಲೋಚನಾರವರು ಮುಗುಳುನಗುತ್ತಾ ಹೇಳಿದರು.

“ನಾನು ಮೊದಲೇ ನಿಮಗೆ ಒಂದು ಮಾತು ಹೇಳಿದೆ. ನಾನು ಹೇಳುವ ಮಾತುಗಳನ್ನು ಸಂಪೂರ್‍ಣವಾಗಿ ಕೇಳಿಸಿಕೊಳ್ಳಿ. ಮಧ್ಯೆ ಮಾತಾಡಬೇಡಿ ಅಂತ. ಮುಂದಕ್ಕೆ ಕೇಳಿ, ಆ ಹುಡುಗಿ ಶ್ರೀಪ್ರಿಯಾಗೆ ಈಗಾಗಲೇ ಇಪ್ಪತ್ತೊಂಭತ್ತೋ ಮೂವತ್ತೋ ಆಗಿದೆ. ತಂದೆ ಇಲ್ಲದ ಹುಡುಗಿ. ಮನೆಯಲ್ಲಿ ತಾಯಿಯನ್ನು ಬಿಟ್ಟರೆ, ಬೇರೆ ಯಾರೂ ಇಲ್ಲ, ವರ ನೋಡಿ ಮದುವೆ ಮಾಡೋದಕ್ಕೆ. ಅಂದ ಹಾಗೆ ಅವಳಿಗೆ ಒಬ್ಬ ಅಕ್ಕ ಇದಾಳೆ ಅವಳ ಹೆಸರು ರಜನಿ ಅಂತ, ಅವಳು ಮದುವೆ ಆಗಿ ಅಮೇರಿಕಾದಲ್ಲಿದ್ದಾಳೆ. ಅವಳಿಗೆ ಮುವತ್ತೈದು ವರ್ಷ, ಒಂದು ಗಂಡು ಮಗು ಇದೆ. ಈಕೆ ಶಾರದಮ್ಮ ಮಗಳ ಬಾಣಂತನಕ್ಕೇಂತ ಅಮೇರಿಕಾಗೆ ಹೋಗಿ ಬಂದರು. ಶ್ರೀಪ್ರಿಯಾ ಮನೆಯಲ್ಲಿ ಒಬ್ಬಳೇ ಇದ್ದು ತುಂಬಾ ಬೇಜಾರು ಮಾಡ್ಕೊಂಡಿದ್ದಾಳೆ. ಮದುವೆಗೆ ವರಗಳೇನೋ ಬೇಕಾದಷ್ಟು ಬಂದವಂತೆ. ಜಾತಕ ಸರಿ ಇಲ್ಲಾ ಅಂತಾನೋ, ಹುಡುಗಿ ಕಪ್ಪು ಅಂತಾನೋ ಜಾಸ್ತಿ ಓದಿದಾಳೆ ಅಂತಾನೋ ಒಂದೂ ವರ ಸರಿ ಹೊಂದಲಿಲ್ಲ. ಓಡಿ ಆಡಿ ಮದುವೆ ಮಾಡೋದಕ್ಕೆ ಮನೇಲಿ ಯಾರೂ ಇಲ್ಲ. ಮದುವೆಗೇ, ಅಂತ ಬೇಕಾದಷ್ಟು ದುಡ್ಡು, ಒಡವೆ, ಸೀರೆ ಎಲ್ಲಾ ತಯಾರಾಗಿಟ್ಟಿದ್ದಾರೆ. ಆದರೆ ಸರಿಯಾದ ವರಾನೇ ಸಿಕ್ತಾ ಇಲ್ಲ. ಅದಕ್ಕೇ ಅವರುಗಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಜಾತಕ, ಗೋತ್ರ, ನಕ್ಷತ್ರ ಅದೂ ಇದೂ ನೋಡೋದು ಬೇಡ, ಹುಡುಗ ಇವಳಿಗಿಂತಾ ಕಡಿಮೆ ಓದಿದ್ರೂ ಪರವಾಗಿಲ್ಲ. ಇವಳಿಗಿಂತಾ ಕಡಿಮೆ ಸಂಪಾದಿಸಿದ್ರೂ ಪರವಾಗಿಲ್ಲ. ಒಳ್ಳೆಯ ಹುಡುಗ, ಒಳ್ಳೆಯ ಮನೆ ಸಿಕ್ಕಿದರೆ ಸಾಕು. ಮದುವೆ ಆಗೋದೂಂತ ಹುಡುಗಿ ನಿರ್ಧರಿಸಿದ್ದಾಳೆ. ನನಗನ್ನಿಸುತ್ತೆ ಈ ಪ್ರಸ್ತಾಪ ನಿಮ್ಮ ಶ್ರೀಧರನಿಗೆ ಸರಿಯಾಗುತ್ತೆ ಅಂತ ಯೋಚನೆ ಮಾಡಿ ಬಂದಿರೋ ಒಳ್ಳೆಯ ಅವಕಾಶವನ್ನ ಕಳಕೋಬೇಡಿ.”

ಕಲ್ಯಾಣಿಯವರು ಮತ್ತೊಮ್ಮೆ ದೀರ್ಘವಾದ ನಿಟ್ಟುಸಿರುಬಿಟ್ಟು ಎದ್ದರು. “ನೀವು ಹೇಳೋದೆಲ್ಲಾ ಚೆನ್ನಾಗಿದೆ. ಆದರೆ ಇದೆಲ್ಲಾ ಸಾಧ್ಯನಾ? ಯಾವುದಕ್ಕೂ ನಾನು ಯೋಚನೆ ಮಾಡಿ, ನನ್ನ ಮಗನ ಜೊತೆ, ನನ್ನ ಮಗಳ ಜೊತೆ ಮಾತನಾಡಿ ನಿಮಗೆ ಸೋಮವಾರ ತಿಳಿಸ್ತೀನಿ. ಅಂದಹಾಗೆ ನಿಮ್ಮ ಸೆಲ್ ನಂಬರ್ ಕೊಡಿ ಸುಲೋಚನಾ. ನನ್ನ ಸೆಲ್ ನಂಬರೂ ನೀವು ಸೇವ್ ಮಾಡ್ಕೊಳ್ಳಿ. ನನ್ನ ಬಗ್ಗೆ ನನ್ನ ಮಗನ ಬಗ್ಗೆ ಇಷ್ಟೊಂದು ಕಾಳಜಿ ತಗೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ರೀ. ಏನೋ ದೇವ್ರಿಚ್ಚೆ ಇದ್ದರೆ ಎಲ್ಲಾ ಒಳ್ಳೆದಾಗುತ್ತೆ. ನಡೀರಿ ಹೊರಡೋಣ.”

ಇಬ್ಬರೂ ಅಲ್ಲಿಂದ ಹೊರಟು ನಿಧಾನವಾಗಿ ನಡೆಯುತ್ತಾ ತಮ್ಮ ತಮ್ಮ ಮನೆಯ ದಾರಿ ಹಿಡಿದರು.

ರಾತ್ರಿ ಶ್ರೀಧರನಿಗೆ ಊಟ ಬಡಿಸುವಾಗ ಕಲ್ಯಾಣಿಯವರು ಈ ದಿನ ದೇವಸ್ಥಾನದಲ್ಲಿ ಸುಲೋಚನಾರವರು ಹೇಳಿದ “ಶ್ರೀಪ್ರಿಯಾ” ವಿಷಯ ಹೇಳತೊಡಗಿದರು. ಇವರ ಮಾತುಗಳನ್ನು ಕೇಳಿ ಶ್ರೀಧರ ನಕ್ಕುಬಿಟ್ಟ, “ಅಲ್ಲಮ್ಮಾ ನಾನು ಆಗಲೇ ಹೇಳಿದ್ದೇನೆ. ನನಗೆ ಒಳ್ಳೆಯ ಕೆಲಸ, ಒಳ್ಳೆಯ ಸಂಬಳ ಸಿಗೋವರೆಗೂ ಮದುವೆ ವಿಷಯ ಮಾತಾಡಬೇಡ ಅಂತ. ಅದೂ ಅಲ್ಲದೆ ಈ ಹುಡುಗಿ ಇಂಜಿನಿಯರಂತೆ, ಲಕ್ಷರೂಪಾಯಿ ಸಂಬಳ ಬರುತ್ತಂತೆ, ಅವಳೆಲ್ಲಾದರೂ ನನ್ನನ್ನು ಮದುವೆ ಆಗೋದಕ್ಕೆ ಒಪ್ಪಿಕೊಳ್ತಾಳೇನಮ್ಮ? ಸುಮ್ಮನೆ ನಿನಗೆಲ್ಲೋ ಬ್ರಾಂತು. ಸರಿ ಸರಿ, ಆ ವಿಷಯ ಬಿಡು. ನನಗೆ ಸ್ವಲ್ಪ ಪಲ್ಯ ಬಡಿಸು” ಎಂದ.

ಆ ಕ್ಷಣದಲ್ಲಿ ಶ್ರೀಧರ ಹೇಳೋದೂ ಸರಿ ಎಂದು ಕಂಡಿತು. ರಾತ್ರಿ ಮಲಗಿದಾಗ ನಿಧಾನವಾಗಿ ಯೋಚಿಸಿದರು. ಹುಡುಗಿಗೆ ತಂದೆಯಿಲ್ಲ. ಅಣ್ಣ-ತಮ್ಮ ಇಲ್ಲ. ಇರೋ ಒಬ್ಬ ಅಕ್ಕ ಮದುವೆ ಆಗಿ ಅಮೇರಿಕದಲ್ಲಿದ್ದಾಳೆ. ಅವಳಿಗೆ ಮಗು ಬೇರೆ ಆಗಿದೆ. ಇನ್ನೂ ಈ ಹುಡುಗಿಯ ಮದುವೆಗೆಂದು ಓಡಾಡುವವರು ಯಾರಿದ್ದಾರೆ? ಬಹುಷಃ ಅವಳು ನಮ್ಮ ಶ್ರೀಧರನನ್ನು ನೋಡಿದರೆ ಒಪ್ಪಿದರೂ ಒಪ್ಪಿಯಾಳು. ಅವಳ ಅಮ್ಮನಂತೂ ಖಂಡಿತವಾಗಿಯೂ ಒಪ್ಪುತ್ತಾರೆ. ಎರಡು ದಿನ ಕಳೆಯಲಿ, ಮತ್ತೆ ಶ್ರೀಧರನ ಹತ್ತಿರ ಈ ವಿಷಯ ಮಾತನಾಡೋಣ. ಹಾಗೆಯೇ ನಾಳೆ ನಾಳಿದ್ದು ತಮ್ಮ ಮಗಳು ಶ್ರೀದೇವಿಗೆ ಫೋನ್ ಮಾಡಿ ಆ ವಿಷಯ ಮಾತನಾಡೋಣ ಎಂದುಕೊಂಡರು.

ಇತ್ತ ಸುಲೋಚನಾರವರು, ಒಂದು ದಿನ ಜಯನಗರಕ್ಕೆ ಹೋಗಿ ಶ್ರೀಪ್ರಿಯಾ ಮತ್ತು ಅವಳ ತಾಯಿ ಶಾರದಮ್ಮನವರ ಬಳಿ, ಶ್ರೀಧರನ ವಿಷಯ ಪ್ರಸ್ತಾಪ ಮಾಡಿದರು. ತಮ್ಮ ಗೆಳತಿ ಕಲ್ಯಾಣಿಯ ಬಗ್ಗೆ ಮತ್ತು ಶ್ರೀಧರನ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸಿದರು. ಶ್ರೀಪ್ರಿಯ ಮತ್ತು ಅವಳ ತಾಯಿಗೆ ಕೂಡಾ ಮೇಲ್ನೋಟಕ್ಕೆ ಈ ಪ್ರಸ್ತಾಪ ತಮ್ಮ ಅಂತಸ್ತಿಗೆ ಸರಿಯಾದುದಲ್ಲ ಎನಿಸಿತು. ಆದರೆ ತಮ್ಮ ಅಸಹಾಯಕ ಪರಿಸ್ಥಿತಿ ನೆನದು, ನೋಡೋಣ ಹುಡುಗ ಒಳ್ಳೆಯವನಾಗಿದ್ದರೆ, ಜಾತಕ-ಗೋತ್ರ ಜಾತಿ ಇತ್ಯಾದಿ ಸರಿ ಹೊಂದಿದರೆ ಮದುವೆ ಮಾಡಿಬಿಡೋಣ ಎಂದುಕೊಂಡರು. ಸುಲೋಚನಾ ಅವರೇ ಇವರಿಗೆ ಧೈರ್ಯ ತುಂಬಿದರು. “ನೋಡಿ ಜಾತಕ, ಗೋತ್ರ, ಜಾತಿ ಅಂತೆಲ್ಲಾ ನೋಡಿಕೊಂಡು ನೀವು ಎಷ್ಟೋ ವರ್ಷಗಳನ್ನು ಕಳೆದುಬಿಟ್ಟಿದ್ದೀರ. ಅವರೂ ಬ್ರಾಹ್ಮಣರೇ ನೀವೂ ಬ್ರಾಹ್ಮಣರೇ ಅಷ್ಟು ಸಾಕು. ನೀವು ವೈಷ್ಣವರು ಅವರು ಶ್ರೀವೈಷ್ಣವರು ಅಂತಹ ಏನೂ ವ್ಯತ್ಯಾಸವಿಲ್ಲಬಿಡಿ, ಇನ್ನು ಜಾತಕ ನೋಡೋದೇಬೇಡ. ನಾನು ಈಗಾಗಲೇ ಕಲ್ಯಾಣಿಯವರಿಗೆ ಸೂಕ್ಷ್ಮವಾಗಿ ಹೇಳಿದೀನಿ. ಅವರ ಪರಿಸ್ಥಿತಿನೂ ನಿಮ್ಮ ಹಾಗೇ ಇದೆ. ಅವರ ಮಗಳು ಆಸ್ಟ್ರೇಲಿಯಾದಲ್ಲಿದ್ದಾಳೆ. ನಿಮ್ಮ ಮಗಳು ಅಮೇರಿಕಾದಲ್ಲಿದಾಳೆ. ಇನ್ನು ನಿಮಗೆ ಉಳಿದಿರೋಳು ಇವಳೊಬ್ಬಳು. ಅವರ ಮನೆಯಲ್ಲಿಯೂ ತಾಯಿ ಮಗ ಇಬ್ಬರೇ ಇರೋದು. ಶ್ರೀಪ್ರಿಯಾಳನ್ನು ಶ್ರೀಧರನಿಗೆ ಕೊಟ್ಟು ಮದುವೆ ಮಾಡಿ ನಿಶ್ಚಿಂತೆಯಿಂದಿರಿ. ಎಲ್ಲಾ ಒಳ್ಳೇದಾಗುತ್ತೆ ನೀವಿನ್ನೂ ಕೂತು ಚರ್ಚೆ ಮಾಡಿ, ನಿಮ್ಮ ದೊಡ್ಮಗಳು ರಜನಿ ಹತ್ರಾನೂ ಮಾತಾಡಿ. ನಿಮಗೆ ಸರಿ ಅನ್ನಿಸಿದರೆ ನನಗೆ ಫೋನ್ ಮಾಡಿ ಹೇಳಿ, ನಾನೂ ನಮ್ಮೆಜಮಾನರೂ, ಕಲ್ಯಾಣಿ ಮನೆಗೆ ಹೋಗಿ ಮಾತಾಡಿ ಬರ್‍ತೀವಿ, ಋಣಾನುಬಂಧ ಇದ್ದರೆ ಆಗುತ್ತೆ ಎಲ್ಲಾ ಒಳ್ಳೇದಾಗ್ಲಿ.”

ಸುಲೋಚನಾರವರು ಹೇಳಿದಂತೆಯೇ ಕಲ್ಯಾಣಿ ಮತ್ತು ಶ್ರೀಧರ ಯೋಚಿಸತೊಡಗಿದರು. ಅದೇ ರೀತಿ ಶಾರದಮ್ಮ ಮತ್ತು ಶ್ರೀಪ್ರಿಯಾ ಕೂಡ ಯೋಚಿಸತೊಡಗಿದರು. ವಿದೇಶಗಳಲ್ಲಿರುವ ತಮ್ಮ ತಮ್ಮ ಮಕ್ಕಳ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರು. ಹೀಗೆಯೇ ಒಂದು ತಿಂಗಳೇ ಕಳೆದು ಹೋಯಿತು. ಕೊನೆಗೆ ಕಲ್ಯಾಣಿಯವರೇ ಒಂದು ತೀರ್ಮಾನ ತೆಗೆದುಕೊಂಡು ಮಗನಿಗೆ ಹೇಳಿದರು. “ನೋಡು, ಶ್ರೀಧರ್ ಕೆಲಸ-ಸಂಬಳ ಗೋತ್ರ-ನಕ್ಷತ್ರ ಜಾತಿ ಅದೂ ಇದೂ ಅಂತ ನೋಡ್ತಾ ಕೂತ್ರೆ ಸುಮ್ಮನೆ ಕಾಲ ವ್ಯರ್ಥವಾಗಿ ಕಳೀತಾ ಹೋಗುತ್ತದೆಯೇ ವಿನಹ ಏನೂ ಪ್ರಯೋಜನವಾಗಲ್ಲ, ಸುಲೋಚನಾರವರು ಹೇಳಿದ ಹುಡುಗಿ ಮನೆಗೆ ಹೋಗಿ ಒಂದು ಸಲ ನೋಡಿ ಬರೋಣ, ಇರೋ ವಿಷಯ ನೇರವಾಗಿ ಮಾತಾಡೋಣ. ಎಲ್ಲರಿಗೂ ಒಪ್ಪಿಗೆ ಆದರೆ ಮದುವೆ ಮಾಡಿಬಿಡೋಣ. ನೋಡಪ್ಪಾ ನೀನೂ ಎರಡು ದಿನ ಯೋಚನೆ ಮಾಡಿ ಹೇಳು, ಬೇಕಾದರೆ ನಿನ್ನ ಸ್ನೇಹಿತರಾರಾದರೂ ಇದ್ದರೆ ಅವರ ಹತ್ತಿರಾನೂ ಚರ್ಚೆ ಮಾಡು, ಅಕ್ಕನ ಹತ್ತಿರಾನೂ ಚರ್ಚೆ ಮಾಡು, ನಾನು ಡೆಲ್ಲಿಗೆ ಫೋನ್ ಮಾಡಿ ರಂಗ ಮಾಮನ ಹತ್ತಿರಾನೂ ಒಂದು ಸಲ ಮಾತಾಡ್ತೀನಿ, ಆಮೇಲೆ ಮುಂದಿನ ವಿಷಯ ನಿರ್ಧರಿಸೋಣ” ಎಂದರು. ಶ್ರೀಧರ ಒಲ್ಲದ ಮನಸ್ಸಿನಿಂದಲೇ ಸರಿ ಯೋಚನೆ ಮಾಡಿ ಹೇಳ್ತಿನಿ” ಎಂದ.

ಮರು ದಿನ ತನ್ನ ಗೆಳೆಯರ ಜೊತೆ ಈ ವಿಷಯ ಚರ್ಚೆ ಮಾಡಿದ. ಅವರೆಲ್ಲರೂ ಪ್ರೋತ್ಸಾಹದಾಯಕವಾದ ಉತ್ತರವನ್ನೇ ಕೊಟ್ಟರು. ಆಕ್ಕ ಶ್ರೀದೇವಿಗೆ ಫೋನ್ ಮಾಡಿ ವಿವರವಾಗಿ ಚರ್ಚಿಸಿದ. ಅವಳೂ ಕೂಡಾ ಖಂಡಿತ ಮದುವೆಯಾಗು ಎಂದೇ ಹೇಳಿದಳು. ಕೊನೆಗೆ ತಾಯಿಯ ಬಳಿ ಸಂಕೋಚದಿಂದಲೇ ಹೇಳಿದ

“ನೋಡಮ್ಮಾ ಅವಳು ಬಿ.ಇ. ಓದಿದಾಳೆ, ತಿಂಗಳಿಗೆ ಲಕ್ಷ ರೂಪಾಯಿ ಸಂಪಾದಿಸ್ತಾಳೆ, ನಾನು ಅಷ್ಟು ಓದಿಲ್ಲ. ಸಂಬಳ ತುಂಬಾ ಕಮ್ಮಿ ಅನ್ನೋ ವಿಷಯ ತಿಳಿದೂ ತಿಳಿದೂ ಮದುವೆ ಆಗಕ್ಕೆ ಅವಳು ಒಪ್ಪಿಕೊಂಡರೆ, ನಾನು ಇಂಜಿನಿಯರು, ಲಕ್ಷ ರೂಪಾಯಿ ಸಂಪಾದಿಸ್ತೀನಿ ಅಂತ ಜಂಭ ಇಲ್ಲದೇ ಇದ್ದರೆ, ನಮ್ಮ ಮನೆಗೆ ಅಂದರೆ ನನಗೆ ನಿನಗೆ ಹೊಂದಿಕೊಂಡು ಸಂಸಾರ ಮಾಡೋದಕ್ಕೆ ತಯಾರಾಗಿದ್ದರೆ, ನಾನು ಈ ಹುಡುಗೀನ ಮದುವೆ ಆಗೋದಕ್ಕೆ ತಯಾರಿದ್ದೀನಿ. ನಿನ್ನ ಫ್ರೆಂಡ್ ಸುಲೋಚನಾರವರಿಗೆ ಹೇಳಿ ಮುಂದಿನ ಮಾತುಕತೆಗೆ ಏರ್ಪಾಡು ಮಾಡು” ಎಂದ.

ಕಲ್ಯಾಣಿಯವರಿಗೆ ಆತೀವ ಆನಂದವಾಯಿತು. ಎಲ್ಲಾ ಏರುಪೇರುಗಳಿಗೆ ಆ ಹುಡುಗಿ ಮತ್ತು ಅವಳ ತಾಯಿ ಒಪ್ಪಿಕೊಂಡರೆ ಈ ಮದುವೆ ನಡೆದು ನಮ್ಮ ಶ್ರೀಧರನ ಬಾಳಿಗೆ ಒಂದು ನೆಲೆ ಸಿಗಲಪ್ಪಾ ದೇವರೇ ಎಂದುಕೊಳ್ಳುತ್ತಾ ಸುಲೋಚನಾರವರಿಗೆ ಫೋನ್ ಮಾಡಿದರು.
* * *

ಕಲ್ಯಾಣಿಯವರ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಸುಲೋಚನಾರವರಿಗೂ ಬಹಳ ಸಂತೋಷವಾಯಿತು. ನಾನೀಗಲೇ ಶಾರದಮನವರಿಗೆ ಫೋನ್ ಮಾಡಿ ಮಾತನಾಡಿ ನಂತರ ನಿಮಗೆ ಮತ್ತೆ ಫೋನ್ ಮಾಡ್ತೀನಿ ಎಂದು ಹೇಳಿದರು. ಆದರಂತೆ ಶಾರದಮ್ಮನವರಿಗೆ ಫೋನ್ ಮಾಡಿ ಶ್ರೀಧರನ ವಿಷಯ ಮಾತನಾಡಿ, ನಂತರ ಕಲ್ಯಾಣಿಯವರಿಗೆ ಫೋನ್ ಮಾಡಿ, ನಾಳೆ ಹತ್ತು ಗಂಟೆಯ ವೇಳೆಗೆ ವಿಶ್ವೇಶ್ವರಪುರದ ಶ್ರೀನಿವಾಸ ದೇವಸ್ಥಾನಕ್ಕೆ ಬರಲು ತಿಳಿಸಿದರು. ಶ್ರೀದೇವಿಯ ತಾಯಿ ಶಾರದಮ್ಮನವರನ್ನು ಅಲ್ಲಿಗೇ ಬರಲು ಹೇಳಿರುವುದಾಗಿ ತಿಳಿಸಿದರು.

ಮರುದಿನ ಹತ್ತು ಗಂಟೆಗೆ ಸರಿಯಾಗಿ ಕಲ್ಯಾಣಿ, ಸುಲೋಚನಾ ಮತ್ತು ಶಾರದಮ್ಮನವರು ಶ್ರೀನಿವಾಸ ದೇವಸ್ಥಾನದಲ್ಲಿ ಭೇಟಿಯಾದರು. ದೇವರಿಗೆ ಅರ್ಚನೆ ಮಾಡಿಸಿ, ತೀರ್ಥ ಪ್ರಸಾದ ತೆಗೆದುಕೊಂಡು ಬಂದು ದೇವಾಲಯದ ಆವರಣದಲ್ಲಿದ್ದ ಸಿಮೆಂಟ್ ಬೆಂಚಿನ ಮೇಲೆ ಕುಳಿತರು. ಪರಸ್ಪರ ಪರಿಚಯವಾದ ಬಳಿಕ, ಸುಲೋಚನಾರವರೇ ಇಬ್ಬರ ವಿಷಯಗಳನ್ನು ವಿವರವಾಗಿ ತಿಳಿಸಿದರು. ನಿಮ್ಮಿಬ್ಬರಿಗೆ ಏನೇನು ಕೇಳಬೇಕೆಂದಿದೆಯೋ ಕೇಳಿಕೊಳ್ಳಿ ಎಂದರು. ಇಲ್ಲಿ ಚರ್ಚೆಗೆ ಎರಡೇ ಪ್ರಮುಖ ವಿಷಯಗಳು. ಬಹಳ ಮುಖ್ಯವಾದುದು ಹುಡುಗ ಮತ್ತು ಹುಡುಗಿಯ ವಿದ್ಯಾರ್ಹತೆ ಮತ್ತು ಸಂಬಳದಲ್ಲಿರುವ ವ್ಯತ್ಯಾಸದ ಪ್ರಶ್ನೆ, ಆ ವಿಷಯವನ್ನು ಕಲ್ಯಾಣಿಯವರು ತೀರಾ ಸಂಕೋಚದಿಂದ ಹೇಳಿದರು. ಈ ಪ್ರಶ್ನೆಯನ್ನು ಶಾರದಮ್ಮನವರು ಸಂದರ್ಭೋಚಿತವಾಗಿ ವಿಶ್ಲೇಷಿಸಿ, ನಮಗೆ ಅದು ಒಂದು ಸಮಸ್ಯೆಯೇ ಅಲ್ಲ. ಒಂದು ವೇಳೆ ಹುಡುಗನೇ ಹೆಚ್ಚು ಓದಿದ್ದು, ಜಾಸ್ತಿ ಸಂಬಳ ತರುವ ಸ್ಥಿತಿಯಲ್ಲಿದ್ದಿದ್ದರೆ ಅದಕ್ಕೆ ನಾವು ಬೇಜಾರು ಪಟ್ಟುಕೊಳ್ಳುತ್ತಿದ್ದೆವೆಯೇ? ಖಂಡಿತ ಇಲ್ಲ. ಅದಕ್ಕೆ ಬದಲು ನಮ್ಮ ಅಳಿಯ ಇಷ್ಟು ಓದಿದ್ದಾರೆ. ಇಷ್ಟೊಂದು ಸಂಬಳ ತಾರೆ ಅಂತ ಸಂತೋಷ ಪಡ್ತಾ ಇದ್ವಿ, ಅಲ್ಲವಾ! ನೀವೂ ಹಾಗೇ ತಿಳ್ಕೊಳ್ಳಿ, ಸಂತೋಷಪಡಿ ಎಂದು ನಕ್ಕರು.

ಇನ್ನು ಎರಡನೆಯ ಪ್ರಶ್ನೆಯೆಂದರೆ ಜಾತಿ-ಉಪಜಾತಿಯ ವ್ಯತ್ಯಾಸ. ಅದಕ್ಕೂ ಶಾರದಮ್ಮನವರಿಂದೇನೂ ಅಭ್ಯಂತವಿರಲಿಲ್ಲ. ಶ್ರೀಪ್ರಿಯ ಕೂಡಾ ಯಾವ ಜಾತಿಯವರಾದರೇನು ಒಳ್ಳೆಯವರಾಗಿರಬೇಕು ಅಷ್ಟೇ ಎನ್ನುತ್ತಿದ್ದಳು. ಯಾವುದಕ್ಕೂ ದೇವಸ್ಥಾನದ ಅರ್ಚಕರನ್ನೇ ಒಂದು ಮಾತು ಕೇಳಿಬಿಡೋಣ ನಡೆಯಿರಿ ಎಂದು ಒಳ ನಡೆದರು. ದೇವಸ್ಥಾನದ ಅರ್ಚಕರು ಶ್ರೀನಿವಾಸ ಅಯ್ಯಾಂಗಾರ್ ಎಂದು ಅವರ ಹೆಸರು. ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ನಿವೃತ್ತಿಯಾದ ಮೇಲೆ ಈ ದೇವಾಲಯದಲ್ಲಿ ಸೇವೆ ಮಾಡುತ್ತಿದ್ದಾರೆ. ಕಲ್ಯಾಣಿ ಮತ್ತು ಸುಲೋಚನಾರವರಿಗೆ ಬಹಳ ಪರಿಚಿತರು. ಅವರಿಬ್ಬರ ಜಾತಿ, ಉಪಜಾತಿಗಳ ಬಗ್ಗೆ ಕೇಳಿ ತಮ್ಮ ಅಭಿಪ್ರಾಯ ಕೊಟ್ಟರು.

ಮಾಧ್ವರಾದರೇನು? ಶ್ರೀವೈಷ್ಣವರಾದರೇನು? ಎಲ್ಲರೂ ಬ್ರಾಹ್ಮಣರೇ ತಾನೇ? ಆಚಾರ, ವಿಚಾರ, ಶಿಸ್ತು, ಸಂಯಮ ಎಲ್ಲಾ ಒಂದೇ ಇರುತ್ತದೆ. ಖಂಡಿತವಾಗಿ ಈ ಮದುವೆ ಆಗುತ್ತದೆ. ಯಾವುದಕ್ಕೂ ನಿಮ್ಮ ನಿಮ್ಮ ಗೋತ್ರ, ಹುಡುಗ ಹುಡುಗಿಯ ನಕ್ಷತ್ರ, ಹುಟ್ಟಿದ ದಿನಾಂಕ ಹೇಳಿ ಎಂದರು. ಗೋತ್ರಗಳು ಬೇರೆ ಬೇರೆಯಾಗಿದ್ದರಿಂದ “ಗೋತ್ರ” ವಿವಾಹದ ಸಮಸ್ಯೆ ಇಲ್ಲ. ಇನ್ನು ನಕ್ಷತ್ರ ಮತ್ತು ಹುಟ್ಟಿದ ದಿನಾಂಕಗಳನ್ನು ಕೇಳಿ ಲೆಕ್ಕ ಹಾಕಿ, ಏನೂ ಸಮಸ್ಯೆ ಇಲ್ಲ. ಖಂಡಿತ ಮಾಡಬಹುದು. ಶುಭಮಸ್ತು ಎಂದುಬಿಟ್ಟರು. ಮೂವರು ಮಹಿಳೆಯರಿಗೂ ನಿರಾಳವಾಯಿತು. ಇನ್ನು ಈ ಮದುವೆಯ ವಿಷಯವನ್ನು ತಮ್ಮ ಆತ್ಮೀಯರೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ ಹುಡುಗ ಹುಡುಗಿ ಭೇಟಿಯಾಗಲಿ ಎಂದು ನಿರ್ಧರಿಸಿ ಸಂತೋಷವಾಗಿ ಮನೆಗೆ ಹೊರಟರು.

ಮನೆಗೆ ಹೋದ ಕೂಡಲೇ ಕಲ್ಯಾಣಿಯವರು ತಮ್ಮ ಮಗ ಶ್ರೀಧರನಿಗೆ ಫೋನ್ ಮಾಡಿ ಇಂದಿನ ಚರ್ಚೆಯ ಬಗ್ಗೆ ತಿಳಿಸಿದರು. ನಂತರ ದೆಹಲಿಗೆ ಫೋನ್ ಮಾಡಿ ಆಣ್ಣ ರಂಗರಾಜನ್‌ರವರಿಗೆ ವಿಷಯ ತಿಳಿಸಿ ಚರ್ಚಿಸಿದರು. ರಾತ್ರಿ ಶ್ರೀಧರ ಮನೆಗೆ ಬಂದ ಬಳಿಕ ಆಸ್ಟ್ರೇಲಿಯಾದಲ್ಲಿದ್ದ ತಮ್ಮ ಮಗಳು ಶ್ರೀದೇವಿಗೆ ಇ-ಮೇಲ್ ಮಾಡಿಸಿದರು. ಮೇಲ್ ನೋಡಿ ಅವಳು ಫೋನ್ ಮಾಡಿ ಎಲ್ಲಾ ವಿವರಗಳನ್ನು ಚರ್ಚಿಸಿದಳು. ಖಂಡಿತ ಆಗಲಿ ಮದುವೆ ನಿಶ್ಚಯ ಮಾಡಿ ತಿಳಿಸಿ, ನಾನು, ನಮ್ಮೆಜಮಾನರು ಬೆಂಗಳೂರಿಗೆ ಬಂದು ಮದುವೆ ನಡೆಸಿಕೊಡುತ್ತೇವೆ. ಆಲ್ ದಿ ಬೆಸ್ಟ್ ಎಂದಳು.

ಅದೇ ರೀತಿ ಶಾರದಮ್ಮನವರು ತಮ್ಮ ಮಗಳು ಶ್ರೀಪ್ರಿಯಾಳ ಜೊತೆಗೆ ವಿವರವಾಗಿ ಚರ್ಚಿಸಿದರು. ನಂತರ ಅಮೇರಿಕದಲ್ಲಿರುವ ತಮ್ಮ ಮಗಳು ರಜನಿಯ ಜೊತೆ ಮಾತನಾಡಿದರು. ಅವಳೂ ಕೂಡಾ ಖಂಡಿತ ಮುಂದುವರೆಸಿ ಎಂದಳು.

ಒಂದು ಭಾನುವಾರ ಸಂಜೆ ಕಲ್ಯಾಣಿ ಮತ್ತು ಶ್ರೀಧರ ಒಂದು ಟ್ಯಾಕ್ಸಿ ಮಾಡಿಕೊಂಡು ಸುಲೋಚನಾರವರ ಮನೆಗೆ ಹೋದರು. ಸುಲೋಚನಾ ಮತ್ತು ಅವರ ಪತಿ ಶೇಷಾದ್ರಿಯವರೂ ಹೊರಟು ನಿಂತಿದ್ದರು. ನಾಲ್ವರೂ ಟ್ಯಾಕ್ಸಿಯಲ್ಲಿ ಜಯನಗರ ಟಿ-ಬ್ಲಾಕ್‌ನಲ್ಲಿದ್ದ ಶಾರದಮ್ಮನವರ ಮನೆಗೆ ಹೊರಟರು. ಇವರಾರೂ ಮನೆ ನೋಡಿರಲಿಲ್ಲ. ಹಾಗಾಗಿ ವಿಳಾಸ ಹುಡುಕಿಕೊಂಡು ಹೋಗಿ ಮನೆ ತಲುಪಿದರು. ಅದೊಂದು ಅಪಾರ್ಟ್‌ಮೆಂಟ್, ಇವರ ಮನೆ ಆರನೇ ಅಂತಸ್ಮಿನಲ್ಲಿದ್ದಿತು. ಕೆಳಗೆ ಸೆಕ್ಯೂರಿಟಿಯವನಿಗೆ ಹೇಳಿ ಇಂಟರ್‌ಕಾಮ್ಸ್‌ನಲ್ಲಿ ವಿಚಾರಿಸಿದರು. ಅವರು ಆರನೆಯ ಮಹಡಿಗೆ ಬನ್ನಿ, ನಾನು ಲಿಫ್ಟ್‌ನ ಹತ್ತಿರನೇ ನಿಂತಿರುತ್ತೇನೆ ಎಂದರು. ಅವರ ದನಿಯಲ್ಲಿ ಏನೋ ಆತಂಕವಿತ್ತು.

ಅದೇ ಸಮಯದಲ್ಲಿ ಒಬ್ಬ ಯುವತಿ ಸ್ಕೂಟರಿನಲ್ಲಿ ಬಂದು ಸ್ಕೂಟರ್ ನಿಲ್ಲಿಸಿ ಓಡೋಡಿ ಬಂದಳು. ಲಿಫ್ಟ್ ನಿಲಿಸಿ, ತನ್ನ ಹೆಲ್ಮೆಟ್ ತೆಗೆದು ಸೊಂಪಾಗಿ ಹರಡಿದ್ದ ತನ್ನ ಕೇಶರಾಶಿಯನ್ನು ಸರಿಮಾಡಿಕೊಳ್ಳುತ್ತಾ ಇವರುಗಳನ್ನು ಕಂಡು ಮುಗುಳು ನಕ್ಕು, ಲಿಫ್ಟ್‌ನ ಒಳಗೆ ಹೋಗಿ ಬಾಗಿಲು ಹಿಡಿದುಕೊಂಡು ಇವರೆಲ್ಲರನ್ನೂ ಲಿಫ್ಟ್‌ನೊಳಕ್ಕೆ ಬರಮಾಡಿಕೊಂಡಳು. ಯಾವ ಫ್ಲೋರ್ ಎಂದು ಕೇಳಿದಳು. ಶ್ರೀಧರ ಆರನೇ ಫ್ಲೋರ್ ಎಂದ.

“ಆರನೇ ಫ್ಲೋರ್‌ನಲ್ಲಿ ಯಾವ ಪ್ಲಾಟಿಗೆ ಹೋಗಬೇಕು?” ಎಂದು ಬಹಳ ಮಾಮೂಲಾಗಿ ಕೇಳಿದಳು. ಶ್ರೀಧರ ಹೇಳಿದ.

“ನಂ. ೬೦೪ ನೇ ಫ್ಲಾಟ್, ಶ್ರೀಪ್ರಿಯಾ ಅಂತ…”

ಅವಳು ಆಶ್ಚರ್ಯದಿಂದ ನೋಡಿದಳು. ಕೂಡಲೇ ಮುಗುಳು ನಕ್ಕಳು.

“ಹಾಯ್, ನಾನೇ ಶ್ರೀಪ್ರಿಯಾ, ಬನ್ನಿ ಬನ್ನಿ, ಸಾರಿ ನಾನು ಬರೋದು ಸ್ವಲ್ಪ ಲೇಟಾಯ್ತು” ಎಂದು ಶ್ರೀಧರ್‌ನನ್ನು ನೋಡಿ ಮೋಹಕವಾಗಿ ನಕ್ಕಳು. ಕ್ಷಣಾರ್ಧದಲ್ಲಿ ಕಲ್ಯಾಣಿಯವರಿಗೆ, ಸುಲೋಚನಾರವರಿಗೆ ಮತ್ತು ಶೇಷಾದ್ರಿಯವರಿಗೆ ಕಾಲುಮುಟ್ಟಿ ನಮಸ್ಕರಿಸಿದಳು. ಅವಳ ಸನ್ನಡತೆಯನ್ನು ಕಂಡು ಎಲ್ಲರೂ ಮೂಕ ವಿಸ್ಮಿತರಾದರು. ಅಷ್ಟರಲ್ಲಿ ಲಿಫ್ಟ್ ಮೇಲಕ್ಕೆ ಚಿಮ್ಮಿತು.

ಶ್ರೀ ಪ್ರಿಯಾಳೇ ಓಡಿಹೋಗಿ ಮನೆಯ ಬಾಗಿಲು ತಟ್ಟಿದಳು. ಅವಳ ತಾಯಿ ಶಾರದಮ್ಮನವರು ಬಂದು ಬಾಗಿಲು ತೆರೆದರು. ಮದುವೆಗೆ ವಧುವನ್ನು ನೋಡಲು ಬಂದ ಭಾವಿ ಬೀಗರ ಜೊತೆ ಮಗಳು ಶ್ರೀಪ್ರಿಯಾ ಕೂಡಾ ಇದ್ದಾಳೆ, ಅದೂ ಈ ಜೀನ್ಸ್ ಡ್ರೆಸ್ಸಿನಲ್ಲಿ, ಒಂದು ಕ್ಷಣ ಅವರು ಖಿನ್ನರಾದರು. ಮರುಕ್ಷಣ ಮುಗುಳು ನಗುತ್ತಾ ಬಂದವರನ್ನು ಸ್ವಾಗತಿಸಿದರು.

ಎಲ್ಲರೂ ಒಳಬಂದು ಸೋಫಾದ ಮೇಲೆ ಕುರ್ಚಿಗಳ ಮೇಲೆ ಅಲ್ಲಲ್ಲಿ ಆಸೀನರಾದರು. ಶ್ರೀಪ್ರಿಯಾ ಕಲ್ಯಾಣಿಯವರನ್ನು ನೋಡಿ ಹೇಳಿದಳು.

“ಒಂದೇ ನಿಮಿಷ, ಒಳಗೆ ಹೋಗಿ ಸೀರೆ ಉಟ್ಟುಕೊಂಡು, ಹೂ ಮುಡಿದುಕೊಂಡು ಬರ್‍ತೀನಿ.”

ಕಲ್ಯಾಣಿಯವರು ಮುಗುಳು ನಗುತ್ತಾ ಹೇಳಿದರು. “ಇರಲಿ ಕೂತುಕೋಮ್ಮಾ ಈ ಡ್ರೆಸ್ಸಲ್ಲೇ ನೀನು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀಯಾ.”

“ರೇಷ್ಮೆ ಸೀರೆ ಉಟ್ಕಂಡು ಬಂದರೆ ಇನ್ನೂ ಚೆನ್ನಾಗಿ ಕಾಣ್ತೀನಿ” ಎಂದು ಹೇಳಿ, ಶ್ರೀಧರನನ್ನೊಮ್ಮೆ ಮೆಚ್ಚುಗೆಯಿಂದ ನೋಡಿ, ಒಳಗೋಡಿದಳು. ಶಾರದಮ್ಮನವರು ಬೇಸರ ವ್ಯಕ್ತಪಡಿಸುತ್ತಾ ಹೇಳಿದರು. “ದಯವಿಟ್ಟು ಏನೂ ತಿಳ್ಕೊಬೇಡಿ. ನೀವುಗಳು ಬರೋ ಹೊತ್ತಿಗೆ ಅವಳು ಸೀರೆ ಉಟ್ಕೊಂಡು ತಯಾರಾಗಿರಬೇಕಿತ್ತು. ಈಗ ಹೋಗಿ ಹೂವು ಹಣ್ಣು ತಂದಿದಾಳೆ. ಬೇಗ ರೆಡಿಯಾಗಿ ಬರ್‍ತಾಳೆ” ಎಂದರು. ಶೇಷಾದ್ರಿಯವರು ಸಮಾಧಾನಪಡಿಸಿದರು.

“ಇರಲಿ ಬಿಡಿ, ಈ ಶಿಷ್ಟಾಚಾರ ಎಲ್ಲಾ ಏಕೆ?” ನಮ್ಮ ರಾಧಾಕೃಷ್ಣನ ಮಗಳು, ನಮಗೂ ಮಗಳಿದ್ದಂತೆ ತಾನೆ. ದೇವರ ದಯದಿಂದ ಎಲ್ಲಾ ಸರಿಹೊಂದಿದರೆ, ನಾನು ಮತ್ತು ಸುಲೋಚನಾನೇ ಅವಳಿಗೆ ತಾಯಿ ತಂದೆ ಆಗಿ ಮಣೇ ಮೇಲೆ ಕುಳಿತು, ಇವಳನ್ನು ಧಾರೆ ಎರೆದು ಕೊಡ್ತೀವಿ.” ಶಾರದಮ್ಮನವರು ಧನ್ಯತಾ ಭಾವದಿಂದ ಹೇಳಿದರು.

“ಹಾಗೆಯೇ ಆಗಲಿ ಅಣ್ಣಾವ್ರೇ. ನಿಮ್ಮ ಆಶೀರ್ವಾದದಿಂದ ಇವಳಿಗೆ ಮದುವೆ ಆಗಿ ಇವಳು ಗಂಡನ ಮನೆ ಸೇರಿದರೆ ಸಾಕು” ಎಂದು ಹೇಳಿ ನಿಧಾನವಾಗಿ ಶ್ರೀಧರನ ಕಡೆ ನೋಡಿದರು.

ಕಲ್ಯಾಣಿಯವರು ಹೇಳಿದರು.

“ಸುಲೋಚನಾ ನನಗೆ ಗೆಳತಿ ಮಾತ್ರ ಅಲ್ಲ. ನನ್ನ ಅಕ್ಕ ಇದ್ದಂಗೆ, ಅವರೂ, ಅವರೆಜಮಾನರ ದಯದಿಂದ ಈ ಮದುವೆ ಆಗಿ ಪ್ರಿಯಾ ನಮ್ಮ ಮನೆ ಸೇರಿದರೆ ನಮಗೆ ನಿಮಗೆ ಎಲ್ಲರಿಗೂ ಒಳ್ಳೆಯದಾಗುತ್ತೆ.”

ಅದೇ ಸಮಯಕ್ಕೆ ಶ್ರೀಪ್ರಿಯಾ ಪ್ರತ್ಯಕ್ಷಳಾದಳು. ಹಸಿರು ರೇಷ್ಮೆ ಸೀರೆ ಉಟ್ಟಿದ್ದಳು. ಸುಂದರವಾಗಿ ಜಡೆ ಹೆಣೆದುಕೊಂಡು ಮಲ್ಲಿಗೆಯ ಹೂ ಮುಡಿದಿದ್ದಳು. ಮುಖಕ್ಕೆ ಸಾಧಾರಣವಾದ ಮೇಕಪ್ಪು, ಅವಳ ಮೋಹಕ ಮುಗುಳು ನಗೆಯೇ ಅವಳ ಸೌಂದರ್ಯವನ್ನು ಹೆಚ್ಚಿಸುತ್ತಾ ಎಲ್ಲರ ಕಣ್ಮನ ಸೆಳೆದಿತ್ತು.

“ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರ, ತಡವಾದುದಕ್ಕೆ ಕ್ಷಮಿಸಿ” ಎಂದಳು. ಅವಳ ನಾಟಕೀಯ ಮಾತು ಕೇಳಿ ಎಲ್ಲರೂ ನಕ್ಕರು. ಎರಡು ನಿಮಿಷ ಕುಳಿತು ಎದ್ದು ನಿಂತಳು ಶೇಷಾದ್ರಿಯವರ ಬಳಿ ಹೋಗಿ “ಚೆನ್ನಾಗಿದ್ದೀರಾ ಅಂಕಲ್” ಎಂದಳು. ಸುಲೋಚನ ಅವರನ್ನು ಕಲ್ಯಾಣಿಯವರನ್ನು ಮಾತನಾಡಿಸಿ “ಚೆನ್ನಾಗಿದ್ದೀರಾ ಆಂಟಿ” ಎಂದು ಕಲ್ಯಾಣಿಯವರ ಪಕ್ಕದಲ್ಲಿ ಸೋಫಾದ ಮೇಲೆ ಕುಳಿತಳು.

ಶ್ರೀಧರ ತಮಾಷೆಯಾಗಿ ಕೇಳಿದ “ನನ್ನನ್ನು ಕೇಳಲೇ ಇಲ್ಲ?”

“ಓ ಸಾರಿ, ನೀವು ಚೆನ್ನಾಗಿದ್ದೀರಾ…. ಶ್ರೀಧರ್‌ರವರೇ?” ಎಂದಳು. ಎಲ್ಲರೂ ಹೃದಯ ತುಂಬಿ ನಕ್ಕರು. ಶ್ರೀಧರ ನಕ್ಕು ಉತ್ತರಿಸಿದ.

“ನಾನು ಚೆನ್ನಾಗಿದ್ದೀನಿ…. ನೀವೂ ತುಂಬಾ ಚೆನ್ನಾಗಿದ್ದೀರ.”

“ಓ ಥ್ಯಾಂಕ್ಯೂ ಥ್ಯಾಂಕ್ಯೂ… ಅಂದರೆ ನಾನು ಪರೀಕ್ಷೆಯಲ್ಲಿ ಪಾಸಾಗಿದ್ದೀನಿ ಅಂತ ಆಯ್ತು.”

“ನೀನು ಆಗಲೇ ಲಿಫ್ಟ್‌ನಲ್ಲೇ ಪಾಸಾಗಿ ಹೋದ್ಯಮ್ಮ, ಇನ್ನು ನೀನು ನಮ್ಮ ಶ್ರೀಧರನನ್ನು ಪಾಸ್ ಮಾಡಿದರೆ ಮುಂದಿನ ವಿಷಯ ಮಾತನಾಡೋಣ” ಎಂದರು ಕಲ್ಯಾಣಿಯವರು.

ಶ್ರೀಪ್ರಿಯಾ ಎದ್ದು ಒಳಗೆ ಹೋದಳು. ಎಲ್ಲರಿಗೂ ಸಿಹಿ ತಿಂಡಿ, ಮಿಕ್ಸಚರ್, ಬಾಳೆಯ ಹಣ್ಣು ತಂದುಕೊಟ್ಟಳು. ನಂತರ ಎಲ್ಲರಿಗೂ ಕಾಫಿ ಕೊಟ್ಟಳು, ಕಾಫಿ ಆದ ಮೇಲೆ ಶ್ರೀಧರ ಸಂಕೋಚದಿಂದ ಕೇಳಿದ.

“ನಾನು ಒಂದು ನಿಮಿಷ ಮಾತನಾಡಬೇಕು.”

ಶೇಷಾದ್ರಿಯವರು ನಕ್ಕು ನುಡಿದರು.

“ಹೂ ನೋಡಪ್ಪಾ ಈ ಹೆಂಗಸರು ಮಾತಿಗೆ ಇಳಿದರೆ, ಗಂಡಸರಿಗೆ ಮಾತನಾಡೋದಕ್ಕೆ ಅವಕಾಶನೇ ಕೋಡೋದಿಲ್ಲ. ದಯವಿಟ್ಟು ಎಲ್ಲರೂ ಸ್ವಲ್ಪ ಸುಮ್ಮನಿರಿ. ಈಗ ಶ್ರೀಧರರವರು ಮಾತನಾಡ್ತಾರೆ.”

ಶ್ರೀಧರ್ ಗಾಬರಿಯಾಗಿ ಹೇಳಿದ.

“ಇಲ್ಲ. ಇಲ್ಲ ನಾನು ಎಲ್ಲರ ಮುಂದೆ ಪಬ್ಲಿಕ್ಕಾಗಿ ಮಾತನಾಡಬೇಕಿಲ್ಲ. ಪ್ರೈವೇಟಾಗಿ ಸ್ವಲ್ಪ ಮಾತನಾಡಬೇಕಿತ್ತು.”

ಶೇಷಾದ್ರಿಯವರು ಮತ್ತೂ ತಮಾಷೆ ಮಾಡಿದರು.

“ಸರಿ ನಡಿಯಪ್ಪ ನಾವಿಬ್ಬರೂ ಬಾಲ್ಕನಿಯಲ್ಲಿ ಹೋಗಿ ಮಾತನಾಡೋಣ.” ಮತ್ತೆ ಎಲ್ಲರೂ ನಕ್ಕರು.

ಸುಲೋಚನರವರು ಹುಸಿ ಕೋಪ ತೋರಿಸಿ ಗಂಡನನ್ನು ಗದರಿಕೊಂಡರು. “ನೀವು ಸುಮ್ಮಿರಿ, ತಮಾಷೆ ಸಾಕು. ನೀನು ಹೋಗಮ್ಮಾ ಅವನನ್ನು ಒಳಗೆ ಕರೆದುಕೊಂಡು ಹೋಗಿ ಮಾತಾಡು.”

ಪ್ರಿಯಾ ತಾಯಿಯ ಮುಖ ನೋಡಿದಳು, ಅವರು ಹೂಂ ಕರೆದುಕೊಂಡು ಹೋಗಿ ಮಾತನಾಡು ಎನ್ನುವಂತೆ ಸಮ್ಮತಿ ಸೂಚಿಸಿ ತಲೆ ಅಲ್ಲಾಡಿಸಿದರು. ಪ್ರಿಯಾ ಶ್ರೀಧರನ ಕಡೆ ತಿರುಗಿ “ಬನ್ನಿ” ಎಂದಳು, ಶ್ರೀಧರನ ಪ್ರಶ್ನೆಗಳೇನು ಎಂದು ಶ್ರೀಪ್ರಿಯಾಗೆ ಚೆನ್ನಾಗಿ ತಿಳಿದಿತ್ತು. ಅವನ ಪ್ರಶ್ನೆಗಳಿಗೆ ಮತ್ತು ನಿರೀಕ್ಷೆಗಳಿಗೆ ಅವಳು ಒಪ್ಪಿ ತಾನು ಯಾವುದೇ ರೀತಿಯ ಮೇಲರಿಮೆ, ಜಂಭ ತೋರುವುದಿಲ್ಲ. ನಿಮಗೆ ಸರಿಯಾದ ಬಾಳ ಸಂಗಾತಿಯಾಗಿ ಬಾಳುತ್ತೇನೆ ಎಂದು ಹೃದಯ ಪೂರ್ವಕವಾಗಿ ಆಶ್ವಾಸನೆ ಕೊಟ್ಟಳು.
* * *

ಶ್ರೀಪ್ರಿಯಾ ಮತ್ತು ಶ್ರೀಧರನ ಮದುವೆ ಸರಳ ಹಾಗೂ ಸಂಭ್ರಮದ ಸಮಾರಂಭವಾಗಿ ನೆರವೇರಿತು. ಕೆಲವೇ ಮಂದಿ ಬಳಗದವರು ಮತ್ತು ಗೆಳೆಯರು ಬಂದಿದ್ದರು. ಶ್ರೀಪ್ರಿಯಾಳಿಗೆ ತಂದೆ ಇಲ್ಲದಿದ್ದುದರಿಂದ ಸುಲೋಚನಾರವರು ಮತ್ತು ಶೇಷಾದ್ರಿಯವರೇ ಮಣೆಯ ಮೇಲೆ ಕುಳಿತು ಕನ್ಯಾದಾನ ಮಾಡಿಕೊಟ್ಟರು. ದೆಹಲಿಯಿಂದ ಕಲ್ಯಾಣಿಯವರ ಅಣ್ಣ ರಂಗರಾಜು ಮಾಮಾ ಮತ್ತು ಅವರ ಪತ್ನಿ ತ್ರಿಪುರ ಸುಂದರಿ ಅಮ್ಮಾಳ್‌ರವರು ಬಂದಿದ್ದರು. ಹುಡುಗನ ತಂದೆ-ತಾಯಿಯರಾಗಿ ಅವರೇ ಮಣೆಯ ಮೇಲೆ ಕುಳಿತಿದ್ದರು.

ಅಮೇರಿಕಾದಿಂದ ಶ್ರೀಪ್ರಿಯಾಳ ಅಕ್ಕ ರಜನಿ ಮತ್ತು ಅವಳ ಗಂಡ ರವಿಕುಮಾರ್ ಬಂದಿದ್ದರು. ಆಸ್ಟ್ರೇಲಿಯಾದಿಂದ ಶ್ರೀಧರನ ಅಕ್ಕ ಶ್ರೀದೇವಿ ಮತ್ತು ಅವಳ ಗಂಡ ವೇಣುಗೋಪಾಲ್ ಬಂದಿದ್ದರು. ಮಿಕ್ಕೆಲ್ಲ ಬಂಧುಗಳು, ಆಪ್ತ ಮಿತ್ರರು, ಮನೆಯ ಆಕ್ಕಪಕ್ಕದವರು ಎಲ್ಲರೂ ಬಂದು ವಧೂ-ವರರನ್ನು ಹರಸಿ, ಹೊಟ್ಟೆತುಂಬಾ ಊಟ ಮಾಡಿಕೊಂಡು ಹೋದರು.

ಶ್ರೀಪ್ರಿಯಾ ಶ್ರೀಧರನ ಮನೆಯನ್ನು ಮನಸ್ಸನ್ನು ತುಂಬಿದಳು. ವಿದೇಶಗಳಿಂದ ಬಂದ ಅಕ್ಕ, ಭಾವ, ದೆಹಲಿಯಿಂದ ಬಂದಿದ್ದ ಮಾವ-ಅತ್ತೆ ಎಲ್ಲರೂ ಹಿಂತಿರುಗಿದರು. ಇವರ ವೈವಹಿಕ ಜೀವನ ಆರಂಭವಾಯಿತು.

ಶ್ರೀಪ್ರಿಯಾ ಶ್ರೀಧರ ಮಧುಚಂದ್ರಕ್ಕೆಂದು ಊಟಿ ಮತ್ತು ಕೊಡೈಕೆನಾಲ್‌ಗೆ ಹೋಗಿ ಬಂದರು. ನಾಲ್ಕು ದಿನ ಬೆಂಗಳೂರಿನ ಮಾಲ್‌ಗಳಲ್ಲಿ ಸುತ್ತಾಡಿ ಬಂದರು. ಇಬ್ಬರಿಗೂ ರಜೆ ಮುಗಿಯಿತು. ಇಬ್ಬರೂ ಕೆಲಸಕ್ಕೆ ಹೋಗಲು ಆರಂಭಿಸಿದರು. ಮಗ ಮದುವೆಯಾದದ್ದು, ಮಹಾಲಕ್ಷ್ಮಿಯಂತಹ ಸೊಸೆ ಮನೆಗೆ ಬಂದದ್ದು, ಕಲ್ಯಾಣಿಯವರಿಗೆ ಆತೀವ ಸಂತಸ ತಂದಿತ್ತು. ಅವರಿಬ್ಬರೂ ಜೊತೆ ಜೊತೆಯಾಗಿ ತಿರುಗಾಡುವುದನ್ನು ಕಂಡು ಹೃದಯ ತುಂಬಿ ಬಂದಿತು. ದೇವರೇ ಈ ದಿನಕ್ಕಾಗಿ ನಾನು ಎಷ್ಟು ಪರಿತಪಿಸಿದ್ದೆ. ನಿನ್ನಲ್ಲಿ ಎಷ್ಟೊಂದು ಪ್ರಾರ್ಥನೆ ಮಾಡಿದ್ದೆ. ಕೊನೆಗೂ ನನ್ನ ಪೂಜಾಫಲ ಫಲಿಸಿತು ಎಂದು ದೇವರಿಗೆ ವಂದಿಸಿದರು.

ಪ್ರಿಯಾಳ ತಾಯಿಯ ಮನೆ ಹತ್ತಿರದಲ್ಲಿಯೇ ಇದ್ದುದ್ದರಿಂದ ಆಗಾಗ್ಗೆ ಹೋಗಿ ಬರುತ್ತಿದ್ದಳು. ಕೆಲವೊಮ್ಮೆ ಅವಳ ಸ್ಕೂಟರಿನಲ್ಲಿ ಅವಳೊಬ್ಬಳೇ ಹೋಗಿ ಬರುತ್ತಿದ್ದಳು. ಕೆಲವೊಮ್ಮೆ ಶ್ರೀಧರನ ಬೈಕಿನಲ್ಲಿ ಇಬ್ಬರೂ ಹೋಗಿ ಬರುತ್ತಿದ್ದರು. ತೀರಾ ಅಪರೂಪಕ್ಕೆ ಪ್ರಿಯಾಳ ತಾಯಿ ಇವರ ಮನೆಗೆ ಬಂದು ಹೋಗುತ್ತಿದ್ದರು. ಇವರ ಮನೆಯಲ್ಲಿ ಕೆಲಸದವರಿರಲಿಲ್ಲ. ಅಡುಗೆ ಕೆಲಸ, ಮನೆ ಸಾರಿಸಿ, ಗುಡಿಸಿ ಸ್ವಚ್ಛಗೊಳಿಸುವುದು ಎಲ್ಲಾ ಕೆಲಸವನ್ನು ಕಲ್ಯಾಣಿಯವರೇ ಮಾಡುತ್ತಿದ್ದರು. ಶ್ರೀಧರ ತನ್ನ ಬಟ್ಟೆಗಳನ್ನು ತಾನೇ ಒಗೆದು ಇಸ್ತ್ರೀ ಮಾಡಿಕೊಳ್ಳುತ್ತಿದ್ದ. ಯಾವಾಗಲಾದರೊಮ್ಮೆ ತಾಯಿ-ಮಗ ಗಾಂಧಿಬಜಾರಿಗೆ ಹೋಗಿ ಮನೆಗೆ ಬೇಕಾದ ದಿನಸಿ ಸಾಮಾನು, ತೆಂಗಿನ ಕಾಯಿ ಇತ್ಯಾದಿ ಎಲ್ಲಾ ಸಾಮಾನುಗಳನ್ನು ತರುತ್ತಿದ್ದರು. ಶ್ರೀಧರನಿಗೆ ಮದುವೆ ಆದ ಮೇಲೆಯೂ ಕಲ್ಯಾಣಿಯವರೇ ಅಡಿಗೆ ಮಾಡುತ್ತಿದ್ದರು, ಪಾತ್ರೆ ತೊಳೆಯುತ್ತಿದ್ದರು. ಮನೆ ಗುಡಿಸುವುದು, ಸಾರಿಸುವುದೂ ಎಲ್ಲಾ ಕೆಲಸ ಮಾಡಿಕೊಳ್ಳುತ್ತಿದ್ದರು. ಸೊಸೆಯ ಬಟ್ಟೆಗಳನ್ನು ಕೂಡಾ ಇವರೇ ವಾಷಿಂಗ್ ಮೆಷನ್ನಿಗೆ ಹಾಕಿ ಒಗೆದು, ಒಣಗಿಸಿ ಇಡುತ್ತಿದ್ದರು. ಅವರು ಬೆಳಿಗ್ಗೆ ಬೇಗ ಎದ್ದು ಅವಸರ ಅವಸರವಾಗಿ ಸ್ನಾನ ಮಾಡಿ, ತಿಂಡಿ ತಿಂದು ಡ್ರೆಸ್ ಮಾಡಿಕೊಳ್ಳುತ್ತಿದ್ದಳು. ಅಷ್ಟರ ವೇಳೆಗೆ ಮನೆಯ ಮುಂದೆ ಕ್ಯಾಬ್ ಬರುತ್ತಿತ್ತು. ಕ್ಯಾಬ್ ಡ್ರೈವರ್ ಹಾರ್ನ್ ಮಾಡಿ ಮಾಡಿ ಅವಸರಪಡಿಸುತ್ತಿದ್ದ. ಇವಳು ಸರಿಯಾಗಿ ತಲೆ ಕೂಡಾ ಬಾಚಿಕೊಳ್ಳದೆಯೇ ಓಡಿ ಹೋಗಿ ಕ್ಯಾಬ್ ಏರುತ್ತಿದ್ದಳು. ಕೆಲವೊಮ್ಮೆ ತಿಂಡಿ ತಿನ್ನಲೂ ಸಮಯ ಸಾಲದೆ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಬ್ರೆಡ್ ಟೋಸ್ಟ್ ತೆಗೆದುಕೊಂಡು ಓಡಿಹೋಗಿ ಕ್ಯಾಬ್ ಹತ್ತಿ ಕ್ಯಾಬಿನಲ್ಲಿಯೇ ಕುಳಿತು ತಿಂಡಿ ತಿಂದ ಶಾಸ್ತ್ರ ಮಾಡುತ್ತಿದ್ದಳು.

ಒಮ್ಮೊಮ್ಮೆ ರಾತ್ರಿ ಡ್ಯೂಟಿ ಇರುತ್ತಿತ್ತು. ಆಗ ದಿನವಿಡೀ ನಿದ್ರೆ ಮಾಡುವುದು ಸಂಜೆ ಐದು ಗಂಟೆಗೆ ಎದ್ದು ಬಿಗಿಯಾದ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿ ಓಡುತ್ತಿದ್ದಳು. ಶನಿವಾರ-ಭಾನುವಾರ ರಜೆ. ಆಗ ತಪ್ಪದೇ ತಾಯಿ ಮನೆಗೆ ಹೋಗುವುದು, ಇಲ್ಲವೇ ಶ್ರೀಧರನ ಜೊತೆ ಮಾಲ್‌ಗಳಿಗೆ ಹೋಗುವುದು ಹೋಟೆಲ್‌ನಲ್ಲಿ ತಿನ್ನುವುದು ಮನೆಗೆ ಬಂದು ಸುಸ್ತಾಗಿ ಮಲಗುವುದು ಮನೆಯ ಕೆಲಸಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಇರುತ್ತಿದ್ದಳು. ಕಲ್ಯಾಣಿಯವರೇ ಮನೆಕೆಲಸ, ಇವಳ ಬಟ್ಟೆ ಒಗೆದು ಒಣಗಿಸಿ ತೆಗೆದಿಡುವುದು ಎಲ್ಲಾ ಮಾಡುತ್ತಿದ್ದರು.

ಒಮ್ಮೆ ಶ್ರೀಪ್ರಿಯಾಳ ತಾಯಿ ಶಾರದಮ್ಮನವರಿಗೆ ಆರೋಗ್ಯ ಸರಿಯಿಲ್ಲ ಎಂದು ದೂರವಾಣಿ ಕರೆ ಮಾಡಿ ತಿಳಿಸಿದರು. ಶ್ರೀಪ್ರಿಯಾ ಮತ್ತು ಶ್ರೀಧರ ಕೂಡಲೇ ಅವರ ಮನೆಗೆ ಹೋಗಿ ಅವರನ್ನು ನೋಡಿ, ಅವರ ಆರೋಗ್ಯ ವಿಚಾರಿಸಿಕೊಂಡು ಬಂದರು. ಎರಡು ದಿನ ಬಿಟ್ಟು ಅವರನ್ನು ಒಂದು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾಸ್ಟರ್‌ ಮೆಡಿಕಲ್‌ ಚೆಕ್‌ಅಪ್ ಮಾಡಿಸಿದರು. ಅಂತಹ ಗಂಭೀರವಾದ ಕಾಯಿಲೆಯೇನು ಇರಲಿಲ್ಲ. ಆದರೆ ವಯಸ್ಸಿಗೆ ಅನುಗುಣವಾಗಿ ಬಿ.ಪಿ, ಶುಗರ್, ಕೊಲೆಸ್ಟ್ರಾಲ್ ಇತ್ಯಾದಿ ಸಮಸ್ಯೆಗಳಿದ್ದವು. ಅದಕ್ಕೆಲ್ಲಾ ಮಾತ್ರೆಗಳನ್ನು ಬರೆದುಕೊಟ್ಟು, ಊಟ ಹೇಗಿರಬೇಕು, ಏನೇನು ಹಣ್ಣು ತರಕಾರಿ ತಿನ್ನಬೇಕು, ಏನೇನು ತಿನ್ನಬಾರದು ಎಂದೆಲ್ಲಾ ತಿಳಿಸಿ ಹೇಳಿ ಕಳಿಸಿದರು. ಕೆಲವು ದಿನಗಳ ಬಳಿಕ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಸ್ತ್ರೀರೋಗ ತಜ್ಞರಿಗೆ ತೋರಿಸಿ ಅದಕ್ಕೂ ಔಷಧೋಪಚಾರಗಳು ಆರಂಭವಾದವು. ಮತ್ತೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ ಎಂದು ತಿಳಿಸಿದರು. ಸರಿ ನೇತ್ರ ತಜ್ಞರ ಬಳಿ ಕರೆದೊಯ್ದು ಕಣ್ಣು ಪರೀಕ್ಷೆ ಮಾಡಿಸಿ ಹೊಸ ಕನ್ನಡಕ ಕೊಡಿಸಿದರು. ಹೀಗೆಯೇ ಅವರ ಸಮಸ್ಯೆಗಳು ಬೆಳೆಯುತ್ತಲೇ ಇದ್ದವು. ಇವರಿಬ್ಬರೂ ಅವರ ಮನೆಗೆ ಹೋಗುವುದು ಅವರ ಸಮಸ್ಯೆಗಳನ್ನು ಪರಿಹರಿಸುವುದು, ಅವರನ್ನು ವೈದ್ಯರ ಬಳಿ ಕರೆದೊಯ್ಯುವುದು, ಅವರಿಗೆ ಔಷಧಿ ತಂದು ಕೊಡುವುದು, ಮನೆಗೆ ಬೇಕಾದ ದಿನಸಿ ತರಕಾರಿ ತಂದುಕೊಡುವುದು, ಹೀಗೆಯೇ ಅವರ ಸೇವೆ ನಿರಂತರವಾಗಿ ನಡೆಯತೊಡಗಿತು. ಕೆಲವೊಮ್ಮೆ ಶುಕ್ರುವಾರ ಆಫೀಸಿನಿಂದ ನೇರವಾಗಿ ಅಲ್ಲಿಗೇ ಹೋಗಿ, ಶನಿವಾರ, ಭಾನುವಾರ ಅಲ್ಲಿಯೇ ಇದ್ದು ಸೋಮವಾರ ಅಲ್ಲಿಂದಲೇ ನೇರವಾಗಿ ಕೆಲಸಕ್ಕೆ ಹೋಗಿ, ಸೋಮವಾರ ರಾತ್ರಿ ಆಫೀಸಿನಿಂದ ಇಲ್ಲಿಗೆ ಬರುತ್ತಿದ್ದಳು. ಶ್ರೀಧರ ಕೂಡಾ ಅವಳ ಜೊತೆ ಅವರ ತಾಯಿಯ ಮನೆಗೆ ಹೋಗಿ ಗಂಟೆಗಟ್ಟಲೆ ಇದ್ದು ಬರುತ್ತಿದ್ದ. ಮನೆ ಖರ್ಚಿಗೆ ಸಾಕಷ್ಟು ಹಣ ಕೊಡುತ್ತಿದ್ದ. ಆದರೆ ಇವನಿಗೆ ಎಷ್ಟು ಸಂಬಳ ಬರುತ್ತದೆ, ಅವಳಿಗೆ ಎಷ್ಟು ಸಂಬಳ ಬರುತ್ತದೆ ಅವರಿಬ್ಬರ ಸಂಬಳದ ಹಣ ಏನು ಮಾಡುತ್ತಾರೆ ಎಂದು ಇವರು ಎಂದೂ ಕೇಳಿದವರಲ್ಲ. ಆದರೆ ಶ್ರೀಧರ ಮಾತ್ರ ಮನೆಯ ಖರ್ಚಿಗೆ ಧಾರಾಳವಾಗಿ ಹಣ ಕೊಡುತ್ತಿದ್ದ. ಇವರು ಎಂದಿನಂತೆ ಮನೆಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಸಮಯ ಸಿಕ್ಕಾಗ ದೇವಸ್ಥಾನಗಳಿಗೆ ಹೋಗಿ ಬರುತ್ತಿದ್ದರು. ಮಗಳು ಶ್ರೀದೇವಿ ವಾರಕ್ಕೊಮ್ಮೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದಳು.

ಶ್ರೀಪ್ರಿಯಾ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಒಂದು ಹೊಸ ಕಾರು ತೆಗೆದುಕೊಂಡಳು. ಶ್ರೀಧರ ಶ್ರೀಪ್ರಿಯಾ ಇಬ್ಬರೂ ಡ್ರೈವಿಂಗ್ ಸ್ಕೂಲಿಗೆ ಸೇರಿಕೊಂಡು ಡ್ರೈವಿಂಗ್ ಕಲಿತರು. ಕಲ್ಯಾಣಿಯವರನ್ನು ಆಗಾಗ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಯಾವುದಾದರೂ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಸುಲೋಚನಾ-ಶೇಷಾದ್ರಿಯವರ ಮನೆಗೆ ಮೂವರೂ ಕಾರಿನಲ್ಲಿ ಹೋಗಿ ಬಂದರು. ಒಮ್ಮೆ ಶ್ರೀ ಪ್ರಿಯಾಳ ತಾಯಿ ಶಾರದಮ್ಮನವರನ್ನು, ಕಲ್ಯಾಣಿಯವರನ್ನು ಕಾರಿನಲ್ಲಿ ತಲಕಾಡು, ಶ್ರೀರಂಗರಾಜಪುರ, ಸೋಮನಾಥಪುರ, ಶ್ರೀರಂಗಪಟ್ಟಣ ಮುಂತಾದ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿಬಂದರು. ಇವರೆಲ್ಲರ ಜೀವನ ಏರುಪೇರಿಲ್ಲದೆ ನಿಧಾನವಾಗಿ ಸರಾಗವಾಗಿ ಸಾಗುತ್ತಿತ್ತು.
* * *

ಒಂದು ರಾತ್ರಿ ಶ್ರೀ ಪ್ರಿಯಾ ‘ರಾತ್ರಿ ಪಾಳಿಯ’ ಡ್ಯೂಟಿಗಾಗಿ ಕೆಲಸಕ್ಕೆ ಹೋಗಿದ್ದಳು. ರಾತ್ರಿ ಹನ್ನೆರಡು ಗಂಟೆಗೆ ಫೋನ್ ಬಂತು ಶ್ರೀ ಪ್ರಿಯಾಳ ತಾಯಿಯವರಿಗೆ ವಿಪರೀತ ಎದೆ ನೋವು ಕಾಣಿಸಿಕೊಂಡು ತುಂಬಾ ಕಷ್ಟಪಡುತ್ತಿದ್ದಾರೆಂದು ಅವರೇ ಫೋನು ಮಾಡಿದರು. ಶ್ರೀಧರ ಅವರಿಗೆ ಧೈರ್ಯ ಹೇಳಿ ಕೂಡಲೇ ಬರುವುದಾಗಿ ತಿಳಿಸಿದ. ಪ್ರಿಯಾಳಿಗೂ ಫೋನು ಮಾಡಿ ಕೂಡಲೇ ಜಯನಗರದ ಮನೆಗೆ ಬಂದುಬಿಡು ಎಂದು ಹೇಳಿದ. ಕಲ್ಯಾಣಿಯವರು ಮತ್ತು ಶ್ರೀಧರ ಕಾರು ತೆಗೆದುಕೊಂಡು ಅವರ ಮನೆಗೆ ಹೋದರು. ಮನೆಯ ಬಳಿ ನಾಲ್ಕಾರು ಜನ ಅಕ್ಕ ಪಕ್ಕದ ಮನೆಯವರು ಸೇರಿದ್ದರು ಗಾಬರಿಗೊಂಡು ಇವರುಗಳು ಒಳಗೆ ಹೋಗಿ ನೋಡಿದರು. ಶಾರದಮ್ಮನವರು ಎದೆನೋವಿನಿಂದ ಒದ್ದಾಡುತ್ತಿದ್ದರು. ಶ್ರೀಧರ ತಡಮಾಡದೆ ಅವರನ್ನು ಸಾಗರ್ ಅಪೋಲೋ ಆಸ್ಪತ್ರೆಗೆ ಕರೆದೊಯ್ದು ಡಾಕ್ಟರಿಗೆ ತೋರಿಸಿದ. ಶಾರದಮ್ಮನವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಆಪರೇಷನ್‌ಗಾಗಿ ಕರೆದೊಯ್ದರು. ಶಾರದಮ್ಮನವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿ ಸ್ಟಂಟ್ ಹಾಕಿದರು. ಪ್ರಿಯಾ ಆಸ್ಪತ್ರೆ ತಲುಪುವ ವೇಳೆಗೆ ಅವಳ ತಾಯಿಗೆ ಆಪರೇಶನ್ ಆಗಿ ಈಗ ಹುಷಾರಾಗಿದ್ದಾರೆಂಬ ಸುದ್ದಿ ಬಂದಿತು.

ಆದರೂ ಪ್ರಿಯಾ ಗಾಬರಿಯಿಂದ ಅಳುತ್ತಾ ಆಸ್ಪತ್ರೆಗೆ ಬಂದಳು. ಶ್ರೀಧರ ಮತ್ತು ಅವನ ತಾಯಿ ಪ್ರಿಯಾಳಿಗೆ ಪರಿ ಪರಿಯಾಗಿ ಸಮಾಧಾನ ಮಾಡಿದರು. ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆಗೆ ಶಾರದಮ್ಮನವರನ್ನು ಐ.ಸಿಯೂ.ಗೆ ಕರೆದು ತಂದರು. ಸ್ವಲ್ಪ ಸಮಯದ ಬಳಿಕ ಅವರನ್ನು ನೋಡಬಹುದು ಎಂದು ಅನುಮತಿ ಕೊಟ್ಟರು. ಮೊದಲು ಪ್ರಿಯಾ ಓಡೋಡಿ ಹೋಗಿ ನೋಡಿದಳು. ಅವರು ಸುಸ್ತಾಗಿ ಮಲಗಿದ್ದರು. ಪ್ರಿಯಾ ಓಡಿ ಹೋಗಿ ಅಮ್ಮನ ಕೈ ಹಿಡಿದು ಅಳತೊಡಗಿದರು. ಪಕ್ಕದಲ್ಲಿದ್ದ ನರ್ಸ್ ಇವಳನ್ನು ನೋಡಿ ಗದರಿದಳು.

“ಹಾಗೆಲ್ಲಾ ಪೇಷೆಂಟ್ ಮುಂದೆ ಅಳಬಾರದಮ್ಮಾ, ನೀವು ಅಳೋದು ನೋಡಿ ಅವರಿಗೂ ಅಳುಬರುತ್ತೆ. ಅವರ ಬಿ.ಪಿ, ಜಾಸ್ತಿ ಆಗುತ್ತೆ. ಇನ್ನೂ ಪ್ರೊಸೀಜರ್ ಆಗಿ ಒಂದು ಗಂಟೆ ಕಾಲನೂ ಆಗಿಲ್ಲ. ದಯವಿಟ್ಟು ಸುಮ್ಮನೆ ನೋಡಿ ಹೊರಗಡೆ ವೈಟ್ ಮಾಡಿ.”

ಪ್ರಿಯಾ ದುಃಖ ತಡೆದುಕೊಂಡು ಹೊರಗೆ ಬಂದಳು. ಅತ್ತೆಯವರನ್ನು ತಬ್ಬಿಕೊಂಡು ಗೊಳೋ ಎಂದು ಅಳತೊಡಗಿದಳು. ಶ್ರೀಧರ ಮತ್ತು ಕಲ್ಯಾಣಿಯವರು ಪ್ರಿಯಾಳ ಬೆನ್ನು ನೇವರಿಸಿ ಅವಳಿಗೆ ಪರಿ ಪರಿಯಾಗಿ ಸಮಾಧಾನ ಮಾಡಿದರು.

ಪ್ರಿಯಾ ಸ್ವಲ್ಪ ಸಮಾಧಾನ ಮಾಡಿಕೊಂಡು ಶ್ರೀಧರನ ಕೈಹಿಡಿದು ಹೃದಯ ತುಂಬಿ ಬಂದು ತನ್ನ ತಾಯಿಯ ಜೀವ ಉಳಿಸಿದ್ದಕ್ಕೆ ಥ್ಯಾಂಕ್ಸ್ ಎಂದಳು. ಅತ್ತೆಯವರಿಗೂ ವಂದನೆಗಳನ್ನು ತಿಳಿಸಿದಳು. ಬೆಳಗಿನ ಜಾವ ಆರು ಗಂಟೆಗೆ ಮತ್ತೊಮ್ಮೆ ಮೂವರೂ ಹೋಗಿ ಶಾರದಮ್ಮನವರನ್ನು ನೋಡಿಕೊಂಡು ಬಂದರು. ನಂತರ ವೈದ್ಯರನ್ನು ನರ್ಸ್‌ಗಳನ್ನು ನೋಡಿ ಇವರ ಬಗ್ಗೆ ಚರ್ಚಿಸಿದರು. ಅವರಿಗೆ ಏನೂ ಅಪಾಯವಿಲ್ಲ. ಪ್ರೊಸೀಜರ್ ಚೆನ್ನಾಗಿ ಆಯಿತು. ಅವರು ಹುಷಾರಾಗಿದ್ದಾರೆ. ನೀವುಗಳು ಮನೆಗೆ ಹೋಗಿ ಊಟ ಮಾಡಿ, ವಿಶ್ರಾಂತಿ ಮಾಡಿ ಸಂಜೆ ಆರುಗಂಟೆಗೆ ಬನ್ನಿರಿ ಎಂದರು. ಐ.ಸಿ.ಯೂ ಆದುದರಿಂದ ಹಗಲಿರುಳೂ ಅವರನ್ನು ನೋಡಿಕೊಳ್ಳಲು ನರ್ಸ್‌ಗಳು ಇರುತ್ತಾರೆ. ಆದುದರಿಂದ ಇವರುಗಳು ನಿಶ್ಚಿಂತೆಯಿಂದ ಮನೆಗೆ ಹೊರಟರು. ರಾತ್ರಿಯಿಡೀ ಮೂವರಿಗೂ ನಿದ್ರೆಯಿಲ್ಲ. ಮನೆ ತಲುಪಿದ ಕೂಡಲೇ ಹಲ್ಲುಜ್ಜಿ ಮುಖ ತೊಳೆದು, ಕಾಫಿ ಮಾಡಿ ಕುಡಿದು ಸ್ವಲ್ಪ ಹೊತ್ತು ಮಾತನಾಡಿದರು. ಸ್ವಲ್ಪ ಹೊತ್ತು ಮಲಗಿ ನಿದ್ರಿಸಿದರು. ಕಲ್ಯಾಣಿಯವರು ಮೊದಲು ಎದ್ದು ಸ್ನಾನ ಮಾಡಿ, ಪೂಜೆ ಮಾಡಿ ಸಿದ್ಧರಾದರು. ನಂತರ ಬಿಸಿ ಬಿಸಿ ಉಪ್ಪಿಟ್ಟು – ಕಾಫಿ ರೆಡಿ ಮಾಡಿ, ಶ್ರೀಧರನನ್ನು ಪ್ರಿಯಾಳನ್ನು ಎಚ್ಚರಿಸಿದರು. ತಿಂಡಿ ತಿಂದು ಸ್ವಲ್ಪ ಆರಾಮವಾದ ಮೇಲೆ ಪ್ರಿಯಾ ಅಮೇರಿಕಾದಲ್ಲಿರುವ ತನ್ನ ಅಕ್ಕ ರಜನಿಗೆ ಫೋನ್ ಮಾಡಿ ಅಮ್ಮನ ವಿಷಯ ತಿಳಿಸಿದಳು. ಇಂತಹ ಸಮಯದಲ್ಲಿ ತಕ್ಷಣ ಬರಲು ಸಾಧ್ಯವಾಗದಿದ್ದುದಕ್ಕೆ ಅವಳೂ ಬೇಸರಪಟ್ಟುಕೊಂಡಳು. ಸಮಯವಾದಾಗ ಆದಷ್ಟು ಬೇಗ ಬೆಂಗಳೂರಿಗೆ ಬಂದು ಅಮ್ಮನನ್ನು ಭೇಟಿ ಮಾಡುವುದಾಗಿ ಹೇಳಿದಳು.

ಸಂಜೆ ಆರು ಗಂಟೆಗೆ ಇವರು ಮೂವರೂ ಆಸ್ಪತ್ರೆಗೆ ಹೋಗಿ ಶಾರದಮ್ಮನವರನ್ನು ನೋಡಿಕೊಂಡು, ಮಾತನಾಡಿಸಿ ಬಂದರು. ಮರುದಿನ ಅವರು ಬೇಗನೇ ಚೇತರಿಸಿಕೊಂಡರು. ಅವರನ್ನು ವಾರ್ಡಿಗೆ ಬಿಟ್ಟರು.

ಮೂರು ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿ ಮನೆಗೆ ಕಳಿಸಿದರು. ಅವರ ಮನೆಯಲ್ಲಿ ಯಾರಿದ್ದಾರೆ? ಹಾಗಾಗಿ ಅವರನ್ನು ಕಲ್ಯಾಣಿಯವರ ಮನೆಗೆ ಕರೆದುಕೊಂಡು ಹೋಗುವುದಾಗಿ ನಿರ್ಧರಿಸಿದರು. ಶ್ರೀಪ್ರಿಯಾ ತನಗೆ ಮತ್ತು ತಾಯಿಗೆ ಹೆಲ್ತ್ ಇನ್ಸೂರೆನ್ಸ್ ಮಾಡಿಸಿದ್ದಳು. ಹಾಗಾಗಿ ಆಸ್ಪತ್ರೆಯ ಬಿಲ್‌ನ ಬಹುಭಾಗ ಇನ್ಸ್ಶೂರೆನ್ಸ್ ಕಂಪನಿಯಿಂದ ಬಂದಿತು.

ಪ್ರಿಯಾ ಹತ್ತು ದಿನಗಳ ರಜೆ ಪಡೆದು ತಾಯಿಯ ಆರೋಗ್ಯ ನೋಡಿಕೊಂಡಳು. ಧಾರಾಳವಾಗಿ ಹಣ ಖರ್ಚು ಮಾಡಿದರು. ಆದರೆ ಕಲ್ಯಾಣಿಯವರಿಗೆ ಕೆಲಸ ದುಪ್ಪಟ್ಟಾಯಿತು. ತಮ್ಮೆಲ್ಲರ ಬಟ್ಟೆ ಒಗೆಯುವುದರ ಜೊತೆಗೆ ಬೀಗಿತ್ತಿಯ ಬಟ್ಟೆಗಳನ್ನೂ ಒಗೆಯಬೇಕಾಯಿತು. ಆಗಾಗ ಅವರಿಗೆ ಕಾಫಿ, ಹಾಲು, ಬಿಸಿ ನೀರು ರೆಡಿ ಮಾಡಿ ಕೊಡುತ್ತಿದ್ದರು. ಮನೆಯಲ್ಲಿ ಒಬ್ಬ ರೋಗಿ ಇದ್ದರೆ ಕೆಲಸ ಕಡಿಮೆ ಇರುತ್ತದೆಯೇ? ದಿನ ರಾತ್ರಿ ಕೆಲಸವಾಗುತ್ತಿತ್ತು.

ಶ್ರೀಧರ ಮತ್ತು ಶ್ರೀಪ್ರಿಯಾ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದರು. ಅಲ್ಲಿಯವರೆಗೆ ಮನೆಯ ಕೆಲಸ, ಶಾರದಮ್ಮನವರನ್ನು ನೋಡಿಕೊಳ್ಳುವ ಕೆಲಸ ಎಲ್ಲಾ ಸಾಕು ಸಾಕಾಗಿ ಹೋಗುತ್ತಿತ್ತು. ಆದರೂ ತಮ್ಮ ಕಷ್ಟ ಯಾರೊಂದಿಗೂ ಹೇಳಿಕೊಳ್ಳದೆ ಮೌನವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಶಾರದಮ್ಮನವರನ್ನು ನೋಡಿ ಹೋಗಲು ಒಂದು ದಿನ ಸುಲೋಚನಾ ಮತ್ತು ಶೇಷಾದ್ರಿಯವರು ಬಂದರು. ಶಾರದಮ್ಮನವರ ಅಪಾರ್ಟ್‌ಮೆಂಟಿನಿಂದ ಹತ್ತಾರು ಜನ ಬಂದು ಇವರ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಕಲ್ಯಾಣಿಯವರಿಗೆ ಸಾಕು ಸಾಕಾಗಿ ಹೋಯಿತು.

ಒಂದು ದಿನ ಅಮೇರಿಕಾದಿಂದ ರಜನಿ ಫೋನ್ ಮಾಡಿ ತಾನು ಅಮ್ಮನನ್ನು ನೋಡಲು ಭಾರತಕ್ಕೆ ಬರುತ್ತಿರುವುದಾಗಿ ತಿಳಿಸಿದಳು. ಶ್ರೀಪ್ರಿಯಾ ಬಹಳ ಸಂತೋಷದಿಂದ ತನ್ನ ಅಮ್ಮನಿಗೆ ಗಂಡನಿಗೆ ಮತ್ತು ಅತ್ತೆಯವರಿಗೆ ತಿಳಿಸಿದಳು. ಶಾರದಮ್ಮನವರು ಮಗಳು ಬರುವ ಸುದ್ದಿ ಕೇಳಿ ಬಹಳ ಸಂತೋಷಪಟ್ಟರು, ಪ್ರತಿ ದಿನ ರಾತ್ರಿ ಹಗಲು ಇವರೆಲ್ಲಾ ರಜನಿಯ ಆಗಮನದ ವಿಷಯವನ್ನೇ ಮಾತನಾಡುತ್ತಿದ್ದರು. ಒಂದು ದಿನ ಎಲ್ಲರೂ ಡೈನಿಂಗ್ ಟೇಬಲ್‌ನ ಮುಂದೆ ಕುಳಿತು ಊಟ ಮಾಡುತ್ತಿದ್ದ ಸಮಯದಲ್ಲಿ ಕಲ್ಯಾಣಿಯವರು ಪ್ರಿಯಾಳನ್ನು ಕೇಳಿದರು.

“ಅಮೇರಿಕಾದಿಂದ ನಿನ್ನಕ್ಕ ಒಬ್ಬಳೇ ಬರ್‍ತಾಳೋ ಅಥವಾ….” ಅವರ ಮಾತು ಮುಗಿಯುವುದರಲ್ಲಿ ಶಾರದಮ್ಮನವರೇ ಹೇಳಿದರು “ಒಬ್ಬಳೇ ಹೇಗೆ ಬರ್‍ತಾಳೆ ನನ್ನನ್ನು ನೋಡೋದಕ್ಕೇ ಅಂತ ರಜನಿ, ಅವಳ ಗಂಡ, ಮೊಮ್ಮೊಗ ಎಲ್ಲರೂ ಬರ್‍ತಾರೆ.”

ಕಲ್ಯಾಣಿಯವರ ಎದೆ ಧಸಕ್ಕೆಂದಿತು. ತಾನು ಇವರುಗಳ ಸೇವೆ ಮಾಡೋದು ಸಾಲದು ಅಂತ ಅವರುಗಳ ಸೇವೇನೂ ಮಾಡಬೇಕೇ? ನಿಧಾನವಾಗಿ ಕೇಳಿದರು. “ಅವರುಗಳು ಬಂದರೆ ಎಲ್ಲಿರ್‍ತಾರೆ?”

ಶಾರದಮ್ಮನವರೇ ಉತ್ತರಿಸಿದರು.

“ಇನ್ನೆಲ್ಲಿರ್‍ತಾರೆ? ಇಲ್ಲೇ ಇರ್‍ತಾರೆ ನಮ್ಮಗಳ ಜೊತೆ.” ಕಲ್ಯಾಣಿಯವರು ಶ್ರೀಧರನ ಮುಖ ನೋಡಿ ಹೇಳಿದರು.

“ಅಷ್ಟೊಂದು ಜನ ಇದ್ರೆ ಎಲ್ಲರಿಗೂ ಅಡಿಗೆ ಮಾಡೋದು, ಮನೆ ಕೆಲಸ ಮಾಡೋದು, ಎಲ್ಲರ ಬಟ್ಟೆ ಒಗೆದು ಹಾಕೋದು ಎಲ್ಲಾ ಕೆಲಸ ನನ್ನಿಂದಾಗಲ್ಲಪ್ಪಾ.” ಶ್ರೀಧರನಿಗೂ ಅದು ಸರಿ ಎನಿಸಿತು. ಏನು ಮಾಡುವುದೆಂದು ಪ್ರಿಯಾಳ ಮುಖ ನೋಡಿದ. ಅವಳು ತನ್ನ ತಾಯಿಯ ಮುಖ ನೋಡಿದಳು. ಅವರು ಕಲ್ಯಾಣಿಯವರ ಮುಖ ನೋಡಿ ಹೇಳಿದರು.

“ಅಯ್ಯೋ ಬೀಗರು ಅಂದ ಮೇಲೆ ಬಾರ್‍ತಾರೆ ಹೋಗ್ತಾರೆ. ಅದಕ್ಕೇನು ಮಾಡಕ್ಕಾಗುತ್ತೆ? ನಿಮ್ಮ ಕೈಲಾಗದೇ ಇದ್ರೆ ಕೆಲಸದವರನ್ನಿಟ್ಟುಕೊಳ್ಳಿ. ನೀವೇ ಎಲ್ಲಾ ಕೆಲಸ ಮಾಡಿ ಅಂತ ನಾನು ಹೇಳಿದ್ನಾ?” ಎಂದು ಕೆಕ್ಕರಿಸಿ ನೋಡಿ ಊಟ ಬಿಟ್ಟು ಎದ್ದು ಹೋದರು. ಅವರ ಮಾತು ಕೇಳಿ ಕಲ್ಯಾಣಿಯವರಿಗೆ ದುಃಖವಾಯಿತು. ಅಳು ಬಂತು ಆಕೆಗೆ ಹಾರ್ಟ್ ಅಟ್ಯಾಕ್ ಆದಾಗ ನಾನು ನನ್ನ ಮಗ ಮಧ್ಯರಾತ್ರಿ ಇವರ ಮನೆಗೆ ಹೋಗಿ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇವರ ಜೀವ ಉಳಿಸಿದೆವು. ಆಸ್ಪತ್ರೆಯಿಂದ ಬಂದಾಗಿನಿಂದ ನಾನು ರಾತ್ರಿ ಹಗಲು ಅನ್ನದೆ ಇವರ ಸೇವೆ ಮಾಡ್ತಾ ಇದ್ದೀನಿ. ಇವರು ಕೃತಜ್ಞತೆ ತೋರದಿದ್ದರೆ ಏನೂ ಪರವಾಗಿಲ್ಲ. ಅದಕ್ಕೆ ಬದಲಿಗೆ ಇಂತಹ ಮಾತುಗಳನ್ನಾಡ್ತಾರೆ.

ಕಲ್ಯಾಣಿ ದುಃಖದಿಂದ ಕಣ್ಣೀರು ಹಾಕಿಕೊಂಡು ಏನೂ ಮಾತನಾಡದೇ ಎದ್ದು ಹೋದರು. ಶ್ರೀಧರ ಬಂದು ಅಮ್ಮನಿಗೆ ಸಮಾಧಾನ ಹೇಳಿದ. ನಂತರ ತನ್ನ ಕೋಣೆಗೆ ಹೋಗಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತ. ನಂತರ ನಿಧಾನವಾಗಿ ಶ್ರೀಪ್ರಿಯಾಳ ಬಳಿ ಈ ವಿಷಯ ತೆಗೆದು ಮಾತನಾಡಿದ. ಅವಳು ತನ್ನ ತಾಯಿ ಹಾಗೆ ಮಾಡಿದ್ದು ತಪ್ಪು ಎಂದು ಸ್ವಲ್ಪವೂ ಭಾವಿಸಲಿಲ್ಲ. ಅದಕ್ಕೆ ಬದಲು ಅವರು ಹೇಳಿದ್ದೇ ಸರಿ ಎಂಬಂತೆ ಮಾತನಾಡಿದಳು.

“ಹೌದು ರೀ ಅಮ್ಮ ಹೇಳಿದಂತೆ ಒಂದು ಕೆಲಸದವಳನ್ನೋ, ಅಡುಗೆಮಾಮೀನೋ ಇಟ್ಕೊಳ್ಳೋದೇ ಒಳ್ಳೇದು ಅನ್ಸುತ್ತೆ” ಎಂದು ಹೇಳಿ ಮಲಗಿ ನಿದ್ರಿಸಿದಳು. ಶ್ರೀಧರ ನಿದ್ರೆ ಬಾರದೆ ಬಹಳ ಹೊತ್ತು ಒದ್ದಾಡುತ್ತಾ ಇದ್ದು, ಮಧ್ಯ ರಾತ್ರಿಯ ಮೇಲೆ ನಿದ್ರೆ ಮಾಡಿದ.

ಮರುದಿನ ಕಲ್ಯಾಣಿಯವರೇ ಅಕ್ಕಪಕ್ಕದವರ ಹತ್ತಿರ ಮಾತನಾಡಿ ಒಬ್ಬ ಕೆಲಸದವಳನ್ನು ಗೊತ್ತು ಮಾಡಿದರು. ಅವಳು ಬೆಳಗ್ಗೆ ಆರೂವರೆಗೆ ಬಂದು ಮನೆ ಗುಡಿಸಿ, ಒರೆಸಿ, ಪಾತ್ರೆಗಳನ್ನು ತೊಳೆದಿಟ್ಟು ಬಟ್ಟೆಗಳನ್ನು ಒಗೆದು ಹಿತ್ತಲಿನಲ್ಲಿ ಒಣಗಲು ಹಾಕಿ ಹೋಗುತ್ತಿದ್ದಳು. ತಿಂಗಳಿಗೆ ಎರಡು ಸಾವಿರ ರೂಪಾಯಿ ಸಂಬಳ ಎಂದು ತೀರ್ಮಾನವಾಯಿತು. ಶ್ರೀಧರ, ಪ್ರಿಯಾ ಹತ್ತಿರ ಹೇಳಿದ. ಅವಳು ಸರಿ ಎಂದಳು. ಕೆಲಸದವಳು ಬಂದು ಎಲ್ಲಾ ಕೆಲಸ ಮಾಡಿ ಹೋಗುತ್ತಿದ್ದಳು. ಆದರೆ ಅಂದಿನಿಂದ ಕಲ್ಯಾಣಿಯವರ ಮತ್ತು ಶಾರದಮ್ಮನವರ ನಡುವೆ ಇದ್ದ ಆತ್ಮೀಯತೆ ಮಾಯವಾಯಿತು. ಅದಕ್ಕೆ ಬದಲು ಒಂದು ರೀತಿಯ ದ್ವೇಷದ ಭಾವನೆ ಮನೆ ಮಾಡಿತು.
* * *

ಶಾರದಮ್ಮನವರಿಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ಒಂದು ತಿಂಗಳಿನ ಬಳಿಕ ಅಮೇರಿಕಾದಿಂದ ರಜನಿ, ಅವಳ ಗಂಡ ರವಿಕುಮಾರ್ ಮತ್ತು ಮಗು ಚಿನ್ಮಯ್ ಭಾರತಕ್ಕೆ ಬಂದರು. ಶ್ರೀಧರ, ಶ್ರೀಪ್ರಿಯಾ ಕಾರು ತೆಗೆದುಕೊಂಡು ಏರ್‌ಪೋರ್ಟ್‌ಗೆ ಹೋಗಿ ಅವರನ್ನು ಸ್ವಾಗತಿಸಿ ಮನೆಗೆ ಕರೆದುಕೊಂಡು ಬಂದರು. ಅವರುಗಳು ಇಪ್ಪತ್ನಾಲ್ಕು ಗಂಟೆಗಳ ಕಾಲ ಪ್ರಯಾಣ ಮಾಡಿ ಬಂದಿದ್ದರಿಂದ ಎರಡು ದಿನ, ಹಗಲು ರಾತ್ರಿ ನಿದ್ರೆ ಮಾಡಿದರು. ನಂತರ ಇವರೆಲ್ಲರೂ ಕೂಡಿ ಶಾರದಮ್ಮನವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್‌ಅಪ್‌ ಮಾಡಿಸಿಕೊಂಡು ಬಂದರು. ಮತ್ತೆ ಎರಡು ದಿನ ವಿಶ್ರಾಂತಿ ತೆಗೆದುಕೊಂಡು ಜಯನಗರದ ತಮ್ಮ ಫ್ಲಾಟ್‌ಗೆ ಹೋಗಿ ಆ ಮನೆಯನ್ನು ಶುಚಿ ಮಾಡಿಸಿ ತಾಯಿ ಮಕ್ಕಳು ಅಳಿಯ ಮೊಮ್ಮಗ ಎಲ್ಲರೂ ಅಲ್ಲಿಯೇ ಉಳಿದರು. ಹಾಲು, ಮೊಸರು, ತರಕಾರಿ, ದಿನಸಿ ಎಲ್ಲಾ ತಂದು ಅಲ್ಲಿಯೇ ಅಡುಗೆ ಮಾಡತೊಡಗಿದರು. ಕಲ್ಯಾಣಿಯವರು ದೊಡ್ಡ ನಿಟ್ಟುಸಿರುಬಿಟ್ಟು ದೇವರಿಗೆ ಕೈ ಮುಗಿದರು.

ರಜನಿ, ಅವಳ ಗಂಡ ಮತ್ತು ಮಗು ಅಮ್ಮನ ಮನೆಯಲ್ಲಿ ಎರಡು ದಿನವಿದ್ದು ನಂತರ ತನ್ನ ಅತ್ತೆ-ಮಾವ ಮತ್ತಿತರ ಸಂಬಂಧಿಕರನ್ನು ನೋಡಿಬರಲು ಹೈದರಾಬಾದಿಗೆ ಹೋದಳು. ಅಲ್ಲಿ ನಾಲ್ಕು ದಿನಗಳಿದ್ದು ಬೆಂಗಳೂರಿಗೆ ಹಿಂತಿರುಗಿದಳು. ಅವಳು ತನ್ನ ಸಂಸಾರ ಸಮೇತ ಅಮೇರಿಕಾಗೆ ಹಿಂತಿರುಗುವ ವೇಳೆಗೆ ಒಂದು ಭಯಂಕರವಾದ ಕಿಚ್ಚಿಟ್ಟು ಹೋದಳು!

ರಜನಿ, ರವಿ, ಶ್ರೀಪ್ರಿಯಾ, ಅವಳ ತಾಯಿ ಎಲ್ಲರೂ ಸೇರಿ ಅವರ ಮನೆಯಲ್ಲಿ ಕುಳಿತು ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ರಜನಿ ಅಮೇರಿಕಾಗೆ ಹಿಂತಿರುಗಿದ ಮೇಲೆ ಅಮ್ಮ ಒಬ್ಬರೇ ಆ ಮನೆಯಲ್ಲಿರುವುದು ಅಪಾಯಕರ. ಮತ್ತೇನಾದರೂ ಹೃದಯಾಘಾತವಾದರೆ ಅಥವಾ ಇನ್ಯಾವುದಾದರೂ ದೈಹಿಕ ಸಮಸ್ಯೆಯಾದರೆ, ಅವರನ್ನು ನೋಡಿಕೊಳ್ಳುವವರು ಯಾರು? ಮತ್ತೆ ಅವರೊಬ್ಬರೇ ಏಕೆ ಆ ಮನೆಯಲ್ಲಿರಬೇಕು. ಆದುದರಿಂದ ಆ ಮನೆಯನ್ನು ಖಾಲಿ ಮಾಡಿ ಈ ಮನೆಗೇ ಬಂದು ಇದ್ದುಬಿಡುವುದು. ಆ ಮನೆಯನ್ನು ಬಾಡಿಗೆಗೆ ಕೊಟ್ಟರೆ ಕನಿಷ್ಠ ಇಪ್ಪತ್ತು ಸಾವಿರ ರೂಪಾಯಿ ತಿಂಗಳಿಗೆ ಬಾಡಿಗೆ ಬರುತ್ತದೆ. ಅವರು ಈ ಮನೆಯಲ್ಲಿದ್ದರೆ ಶ್ರೀಪ್ರಿಯಾ, ಶ್ರೀಧರ ಹಾಗೂ ಅವನ ತಾಯಿ ಎಲ್ಲರೂ ಇವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ನಿರ್ಧಾರವನ್ನು ಅಕ್ಕ ತಂಗಿ ಇಬ್ಬರೂ ಸೇರಿ ಬಹಳ ಸಂತೋಷದಿಂದ ಒಪ್ಪಿ ಕೂಡಲೇ ಕಾರ್ಯಗತಗೊಳಿಸಿದರು. ಶ್ರೀಧರನಿಗೆ ಈ ವ್ಯವಸ್ಥೆ ಅಷ್ಟೇನೂ ಇಷ್ಟವಿರಲಿಲ್ಲ. ಆದರೆ ಸಾಧಕ ಬಾಧಕಗಳನ್ನು ತರ್ಕ ಮಾಡಿ ನೋಡಿದಾಗ ಅದೂ ಸರಿ ಎನಿಸಿತು. ರಜನಿಯ ಗಂಡ ರಮೇಶ ಈ ವಿಷಯ ತನಗೆ ಏನೂ ಸಂಬಂಧವಿಲ್ಲದ ವಿಚಾರವೆಂದು ನಿರ್ಲಿಪ್ತನಾಗಿ ಇದ್ದುಬಿಟ್ಟ. ಕಲ್ಯಾಣಿಯವರನ್ನು ಶಿಷ್ಟಾಚಾರಕ್ಕಾದರೂ ಒಂದು ಮಾತೂ ಕೇಳಲಿಲ್ಲ.

ರಜನಿ ಅಮೇರಿಕಾಗೆ ಹೊರಡುವ ಮುನ್ನವೇ ಶಾರದಮ್ಮನವರು ತಮ್ಮ ಮನೆಯ ಸಮಸ್ತ ವಸ್ತುಗಳೊಂದಿಗೆ ಬೀಗರ ಮನೆಗೆ ಬಂದು ಝಂಡಾ ಹೂಡಿದರು.

ಈಗ ಶಾರದಮ್ಮನವರು ಆರೋಗ್ಯವಾಗಿಯೇ ಇದ್ದರು. ಆದರೂ ಮನೆಯ ಯಾವ ಕೆಲಸವನ್ನೂ ಮಾಡುವ ಗೋಜಿಗೆ ಹೋಗಲಿಲ್ಲ. ಅವೆಲ್ಲಾ ತಮ್ಮ ಬೀಗಿತ್ತಿಯ ಕೆಲಸವೆಂದು ಆರಾಮವಾಗಿ ದಿನವಿಡೀ ಟಿ.ವಿ. ನೋಡಿಕೊಂಡು ಹಾಯಾಗಿ ಇರುತ್ತಿದ್ದರು. ಅವರ ಬಟ್ಟೆ ಒಗೆಯುವುದು, ಅವರಿಗೆ ಸಮಯ ಸಮಯಕ್ಕೆ ಕಾಫಿ, ತಿಂಡಿ, ಊಟ, ಔಷಧಿ ಕೊಡುವುದು ಎಲ್ಲಾ ಜವಾಬ್ದಾರಿ ಕಲ್ಯಾಣಿಯವರ ಭುಜದ ಮೇಲೆ ಏರಿತು. ಈ ವಿಷಯ ಒಂದೆರಡು ಸಲ ಶ್ರೀಧರನ ಮುಂದೆ ಹೇಳಿದರು. ಅಮ್ಮ ಹೇಳುವ ಮಾತು ಸರಿ ಎನಿಸಿದರೂ ಅವನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಸದ್ಯಕ್ಕೆ ಅನುಸರಿಸಿಕೊಂಡು ಹೋಗು ದೇವರೇ ಏನಾದರೂ ದಾರಿ ತೋರಿಸುತ್ತಾನೆ. ಎಂದು ಹೇಳಿ ನಿಟ್ಟುಸಿರುಬಿಟ್ಟ.

ದೇವಸ್ಥಾನಕ್ಕೆ ಹೋದಾಗ ಒಂದು ದಿನ ಈ ವಿಷಯವನ್ನು ಸುಲೋಚನಾರವರ ಮುಂದೆ ಹೇಳಿದರು. ಇವರ ಕಷ್ಟಗಳು ಸುಲೋಚನಾರವರಿಗೆ ಅರ್ಥವಾಯಿತು. ಆದರೆ, ತಾವೇ ಮುಂದು ನಿಂತು ಮಾಡಿಸಿದ ಮದುವೆ ಆದ್ದರಿಂದ ಅವರ ಒಲವು ಕಲ್ಯಾಣಿಯವರಿಗಿಂತ ಶಾರದಮ್ಮನವರ ಕಡೆಗೇ ಸ್ವಲ್ಪ ಹೆಚ್ಚಾಗಿತ್ತು. ಅವರು ಸ್ವಲ್ಪ ಯೋಚಿಸಿ ಹೇಳಿದರು.

“ಒಳ್ಳೆಯದೇ ಆಯಿತು ಬಿಡಿ. ಅವರು ಒಬ್ಬರೇ ಅಷ್ಟು ದೊಡ್ಡ ಮನೆ ಇಟ್ಟುಕೊಂಡು ಏನು ಮಾಡಬೇಕು ಹೇಳಿ, ನಿಮಗೂ ಒಂದು ಜೊತೆ ಅಂತ ಆಗತ್ತೆ. ಶ್ರೀಧರ ಶ್ರೀಪ್ರಿಯಾ ಇಬ್ಬರೂ ಕೆಲಸಕ್ಕೆ ಹೋದ ಮೇಲೆ ನೀವು ಮನೆಯಲ್ಲಿ ಒಬ್ಬರೇ ಇರಬೇಕು. ಅವರೂ ನಿಮ್ಮ ಜೊತೆಗೆ ಇದ್ದರೆ ನಿಮಗೂ ಒಳ್ಳೆಯದು, ಅವರಿಗೂ ಒಳ್ಳೆಯದು. ಒಬ್ಬರಿಗೊಬ್ಬರು ಸಹಾಯವಾಗುತ್ತೆ. ಸರಿ ನಾನಿನ್ನು ಬರ್‍ತೀನಿ” ಎಂದು ಹೊರಟೇಬಿಟ್ಟರು. ಅಂದರೆ ಶಾರದಮ್ಮನವರು ಮಾಡಿದ್ದು ಸರಿ ಎಂದು ಇವರ ಅಭಿಪ್ರಾಯ, ಇರಲಿ ನೋಡೋಣ ಎಂದು ಮನೆಗೆ ಹೋದರು. ಈಗಾಗಲೇ ಮನೆಯ ಒಂದು ಕೋಣೆಯನ್ನು ಬೀಗಿತ್ತಿಯವರಿಗೆ ಬಿಟ್ಟುಕೊಡಲಾಗಿತ್ತು. ಈಗ ಮನೆಯ ತುಂಬಾ ಎಲ್ಲೆಂದರಲ್ಲಿ ಅವರ ಮನೆಯ ವಸ್ತುಗಳೇ ತುಂಬಿ ಹೋಗಿದ್ದವು. ಇನ್ನು ಶಾರದಮ್ಮನವರ ಸೇವೆ ಕಲ್ಯಾಣಿಯವರಿಗೆ ಅನಿವಾರ್ಯವಾಯಿತು. ನನಗಿದೆಂತಹ ಕರ್ಮ ಎಂದು ಹಲವು ಬಾರಿ ಯೋಚಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದರು.

ಮರುದಿನ ದೇವಸ್ಥಾನಕ್ಕೆ ಹೋಗಿ ಬರುವಾಗ ತನ್ನ ಅಣ್ಣ ರಂಗರಾಜುರವರಿಗೆ ಫೋನ್ ಮಾಡಿ ಈ ವಿಷಯ ಮಾತನಾಡಿದರು. ಅವರೂ ಮನನೊಂದು “ನಿನಗೇನಮ್ಮ ಕರ್ಮ ಅವರ ಸೇವೆ ಮಾಡಿಕೊಂಡಿರೋದಕ್ಕೇ, ಏನೋ ಹಾರ್ಟ್ ಅಟ್ಯಾಕ್ ಆದಾಗ ನೀನು, ಶ್ರೀಧರ ಹೋಗಿ ಸಹಾಯ ಮಾಡಿದಿರಿ. ಅವರಿಗೂ ಪ್ರಿಯಾನ ಬಿಟ್ಟರೆ ಯಾರೂ ದಿಕ್ಕಿಲ್ಲ. ಕಷ್ಟ ಸುಖ ಅಂದ್ರೆ ಸಹಾಯ ಮಾಡಬೇಕಾದ್ದೇ. ಆದರೆ ತನ್ನ ಮನೇನ ಬಾಡಿಗೆಗೆ ಕೊಟ್ಟು, ಇಲ್ಲಿ ಬಂದು ಕೂತ್ಕಂಡು, ತಾನೇನೂ ಕೆಲಸ ಮಾಡದೆ, ನಿನ್ನ ಕೈಲಿ ಹಗಲೂ ಇರಳೂ ಸೇವೆ ಮಾಡಿಸಿಕೊಂಡು ದರ್ಬಾರು ಮಾಡಿಕೊಂಡಿದಾರೆ ಅಂದ್ರೆ ಇದು ತುಂಬಾ ಗಂಭೀರವಾದ ಪ್ರಶ್ನೆನೇ ನೀನೇನೂ ಯೋಚನೆ ಮಾಡಬೇಡ ಕಲ್ಯಾಣಿ. ನಾನೇನಾದರೂ ಯೋಚನೆ ಮಾಡಿ ಇದಕ್ಕೊಂದು ಪರಿಹಾರ ಹುಡುಕುತ್ತೀನಿ” ಎಂದು ಧೈರ್ಯ ಹೇಳಿದರು.

ಅದೇ ರೀತಿ ಒಮ್ಮೆ ಶ್ರೀದೇವಿಗೂ ಫೋನ್ ಮಾಡಿ ಈ ವಿಷಯ ಹೇಳಿದರು. ಅವಳಿಗೂ ತಾಯಿಯ ಕಷ್ಟ ಕೇಳಿ ಬಹಳ ದುಃಖವಾಯಿತು. ತಾನೂ ಏನಾದರೂ ಪರಿಹಾರ ಸೂಚಿಸುವುದಾಗಿ ಹೇಳಿದಳು.

ಒಂದು ದಿನ ರಂಗರಾಜುರವರು ಕಲ್ಯಾಣಿಗೆ ಫೋನ್ ಮಾಡಿ ಮುಂದಿನ ಬುಧವಾರ ತಾನು ಮತ್ತು ತನ್ನ ಪತ್ನಿ ತ್ರಿಪುರ ಬೆಂಗಳೂರಿಗೆ ಬರುವುದಾಗಿ ತಿಳಿಸಿದರು. ರಾತ್ರಿ ಊಟದ ಸಮಯದಲ್ಲಿ ಕಲ್ಯಾಣಿಯವರು ಶ್ರೀಧರ, ಶ್ರೀಪ್ರಿಯಾ ಮತ್ತು ಶಾರದಮ್ಮನವರಿಗೆ ಈ ವಿಷಯ ತಿಳಿಸಿದರು. ಊಟ ಮಾಡಿ ಮಲಗಿದಾಗ ಶ್ರೀಪ್ರಿಯಾ, “ಮಾವ ಯಾಕೆ ಬಾರ್‍ತಾರಂತೆ” ಎಂದು ಶ್ರೀಧರನ ಬಳಿ ವಿಚಾರಿಸಿದಳು. ಅವನು “ಯಾಕೆ ಅಂದ್ರೆ? ಸುಮ್ಮನೆ ಬರ್‍ತಾರೆ? ಅವರ ಮನೆಗೆ ಅವರು ಬರೋದಕ್ಕೆ ಕಾರಣ ಬೇಕಾ? ನಮ್ಮ ಮದುವೆಗೆ ಬಂದಿದ್ದು. ಆಮೇಲೆ ಅವರು ಬೆಂಗಳೂರಿಗೆ ಬರಲೇ ಇಲ್ಲ. ಆರು ತಿಂಗಳ ಮೇಲಾಯ್ತು. ಬರಲಿ ಬಿಡು ನಮಗೂ ಸಂತೋಷಾನೇ” ಎಂದು ಮಲಗಿ ನಿದ್ರಿಸಿದ. ಆದರೆ ಶ್ರೀಪ್ರಿಯಾಗೆ ನಿದ್ರೆ ಬರಲಿಲ್ಲ.

ತಾನು, ತನ್ನ ಗಂಡ, ನನ್ನಮ್ಮ ಅವರಮ್ಮ ಹಾಯಾಗಿ ಇದ್ದೀವಿ. ಈಗ ಇದ್ದಕ್ಕಿದ್ದಂತೆ ಇವರೇಕೆ ಬರ್‍ತಿದಾರೆ? ಹೀಗೆಯೇ ಯೋಚಿಸುತ್ತಾ ನಿಧಾನವಾಗಿ ನಿದ್ರೆ ಮಾಡಿದಳು.

ಮುಂದಿನ ಬುಧವಾರ ಶ್ರೀಧರ ಮತ್ತು ಶ್ರೀಪ್ರಿಯಾ ಕೆಲಸಕ್ಕೆ ರಜೆ ಹಾಕಿ ಕಾರು ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಹೋಗಿ ಅತ್ತೆ-ಮಾವರನ್ನು ಸ್ವಾಗತಿಸಿ ಮನೆಗೆ ಕರೆದುಕೊಂಡು ಬಂದರು. ದೆಹಲಿಯಿಂದ ನಾಲ್ಕಾರು ಬಗೆಯ ಸಿಹಿ ತಿಂಡಿಗಳನ್ನೂ ಕಚೋರಿ, ಸಮೋಸ, ಇತ್ಯಾದಿ ಕರಿದ ತಿಂಡಿಗಳನ್ನು ತಂದಿದ್ದರು. ಎಲ್ಲರೂ ಕುಳಿತು ಈ ಮೇಲೆ ಹೇಳಿದ ತಿಂಡಿ ತಿನ್ನುತ್ತಾ ಕಾಫಿ ಕುಡಿದರು. ವಿಮಾನದಲ್ಲಿ ಬಂದಿದ್ದರಿಂದ ಸ್ವಲ್ಪವೂ ಸುಸ್ತಾಗಿರಲಿಲ್ಲ. ಆದ್ದರಿಂದ ರಂಗರಾಜುರವರು ಶ್ರೀಧರ, ಶ್ರೀಪ್ರಿಯಾರವರು ಆರಾಮವಾಗಿ ಅದೂ ಇದೂ ಮಾತಾಡುತ್ತಾ ಕುಳಿತರು. ಅತ್ತಿಗೆ ನಾದಿನಿಯವರು ಅಡುಗೆ ಮನೆಗೆ ಹೋಗಿ ಅಡುಗೆ ಕೆಲಸ ಆರಂಭಿಸಿದರು. ಒಂದು ಗಂಟೆಯ ಕಾಲದಲ್ಲಿ ರುಚಿ ರುಚಿಯಾದ ಊಟ ತಯಾರಾಯಿತು. ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದರು. ಊಟವಾದ ಮೇಲೆ ಎಲ್ಲರೂ ಒಟ್ಟಿಗೆ ಕುಳಿತು ಬಾಳೆಹಣ್ಣು ತಿನ್ನುತ್ತಾ ತಮಾಷೆಯಾಗಿ ಮಾತನಾಡುತ್ತಾ ಕುಳಿತಿದ್ದರು. ಇದೇ ಸರಿಯಾದ ಸಮಯವೆಂದು ರಂಗರಾಜುರವರು ವಿಷಯಕ್ಕೆ ಬಂದರು.

“ನಾನು ನಿಮಗೆಲ್ಲ ಒಂದು ಸಿಹಿಸುದ್ದಿ ತಂದಿದ್ದೀನಿ. ನಾನು ಈ ಮನೇನ ಮಾರಿ ಬಿಡಬೇಕೊಂತೀದೀನಿ!”

ಈ ಸಿಹಿಸುದ್ದಿ ಕೇಳಿ ಎಲ್ಲರೂ ಗಾಬರಿಯಾದರು. ಮುಖ್ಯವಾಗಿ ಶಾರದಮ್ಮನವರು ಹೌಹಾರಿದರು. ತನ್ನ ಮನೆಯನ್ನು ಖಾಲಿಮಾಡಿ ಬಾಡಿಗೆಗೆ ಕೊಟ್ಟು ಮಗಳ ಮನೆಯಲ್ಲಿ ಹಾಯಾಗಿ ತಿಂದುಕೊಂಡು ಆರಾಮ ಮಾಡುತ್ತಿದ್ದೇನೆ. ಇವರು ಮನೆ ಮಾರಿಬಿಟ್ಟರೆ ನಾವೆಲ್ಲಿ ಹೋಗುವುದು? ಕಲ್ಯಾಣಿಯವರು ಮದುವೆಗೆ ಮುಂಚೆ ಈ ಮನೆ ತನ್ನ ಅಣ್ಣನ ಮನೆ ಎಂದು ಹೇಳಲೇ ಇಲ್ಲ! ಮೋಸ ಮಾಡಿ, ಲಕ್ಷ ರೂಪಾಯಿ ಸಂಬಳ ತರುವ ತನ್ನ ಮಗಳನ್ನು ಮದುವೆ ಮಾಡಿಕೊಂಡುಬಿಟ್ಟರು. ಹಿಂದು ಮುಂದು ನೋಡದೇ ಕೇಳಿಯೇಬಿಟ್ಟರು.

“ಏನೀ ಕಲ್ಯಾಣಿ, ಈ ಮನೆ ನಿಮ್ಮದಲ್ಲ ನಿಮ್ಮ ಅಣ್ಣಂದು ಅಂತ ನೀವು ಯಾಕ್ರೀ ಹೇಳಲಿಲ್ಲ. ನಾವು ನಿಮ್ಮದೇ ಸ್ವಂತ ಮನೆ ಅನ್ಕೊಂಡು ಮದುವೆ ಮಾಡಿ ಕೊಟ್ಟೆವು. ಈಗ ನೋಡಿದರೆ ಈ ಮನೆ ನಿಮ್ಮದು ಅಲ್ಲವೇ ಅಲ್ಲ, ನಿಮ್ಮ ಅಣ್ಣಂದು ಅಂತ ಹೇಳ್ತಿದ್ದಾರೆ.”

ಇವರ ಮಾತನ್ನು ಕೇಳಿ ರಂಗರಾಜು ಮಾಮಾರವರು ಗಹಗಹಿಸಿ ನಕ್ಕರು.

ಅವರು ಬಿಟ್ಟ ಬಾಣ ಸರಿಯಾದ ಗುರಿ ತಲುಪಿತ್ತು. “ಇದು ನನ್ನ ಮನೆಯೋ, ನನ್ನ ತಂಗಿಯ ಮನೆಯೋ ನೀವು ಕೇಳಿ ಮದುವೆ ಮಾಡಿದಿರಾ? ಇದು ನಮ್ಮ ಮನೆಯ ಆಂತರಿಕ ವಿಚಾರ, ನೀವು ಒಳಗೆ ಹೋಗಿ” ಎಂದರು.

ಶಾರದಮ್ಮನವರು ಬಹಳ ಗಾಬರಿಗೊಂಡರು. ಈವರೆಗೆ ಜೀವನದಲ್ಲಿ ಏನನ್ನೂ ಯಾರೂ ಹೀಗೆ ಗಡುಸಾಗಿ ಮಾತನಾಡಿರಲಿಲ್ಲ. ತನ್ನ ಗಂಡನಾಗಲಿ, ಮಕ್ಕಳಾಗಲಿ, ಅಳಿಯಂದಿರಾಗಲಿ, ತಾನು ಹೇಳಿದಂತೆ ಕೇಳುತ್ತಾರೆ. ಯಾರು ತನಗೆ ಎದಿರು ಮಾತನಾಡುವುದಿಲ್ಲ, ಈ ಮನುಷ್ಯ ಏನು ಹೀಗೆ ಮಾತನಾಡುತ್ತಾನೆ!

ರಂಗರಾಜುರವರು ಸ್ವಲ್ಪ ಗಂಭೀರವಾಗಿ ಹೇಳಿದರು.

“ಏನು, ಹೇಳಿದ್ದು ಕೇಳಿಸಲಿಲ್ಲವಾ? ನೀವು ಎದ್ದು ಒಳಗೆ ಹೋಗಿ.”

ಶ್ರೀಪ್ರಿಯಾ ಎದ್ದು “ನಡೆಯಮ್ಮ ಒಳಗೆ” ಎಂದು ತಾಯಿಯನ್ನು ಕೈಹಿಡಿದು ಒಳಕ್ಕೆ ಕರೆದುಕೊಂಡು ಹೋದಳು.

ರಂಗರಾಜುರವರು ಅವಳನ್ನು ಕರೆದರು.

“ನೀನು ಬಾಮ್ಮಾ ನೀನು ಈ ಮನೆಯ ಸೊಸೆ, ಈ ಮನೆಯ ಬೆಳಕು, ಈ ಮನೆಯನ್ನು ಬೆಳಗ ಬೇಕಾದವಳು. ಬಾ ಇಲ್ಲಿ” ಎಂದು ಅವಳ ಕೈ ಹಿಡಿದು ತಮ್ಮ ಪಕ್ಕದಲ್ಲಿ ಸೋಫಾದ ಮೇಲೆ ಕೂರಿಸಿಕೊಂಡರು. “ಹುಂ ಈಗ ಕೇಳಿ. ಈಗ ಬೆಂಗಳೂರಿನಲ್ಲಿ ಎಲ್ಲಾ ಕಡೆ ಅಪಾರ್ಟ್‌ಮೆಂಟ್‌ಗಳು ಆಗ್ತಾ ಇವೆ. ಅವಕ್ಕೆ ಕೋಟಿ ಕೋಟಿ ಬೆಲೆ ಬಾರ್‍ತಾ ಇದೆ. ಅದಕ್ಕೇ ನಾನೇನು ಯೋಚನೆ ಮಾಡ್ದೆ ಅಂದರೆ, ಈ ಹಳೆಯ ಮನೇನ ಕೆಡವಿ ಒಂದು ಹದಿನೈದು ಮಹಡಿ ಅಪಾರ್ಟ್‌ಮೆಂಟ್ ಕಟ್ಟಿಕೊಂಡು, ಕೆಳಗಡೆ ಬೇಸ್‌ಮೆಂಟ್‌ನಲ್ಲಿ ಮತ್ತು ಗ್ರೌಂಡ್ ಫ್ಲೋರ್‌ನಲ್ಲಿ ಕಾರ್ ಪಾರ್ಕಿಂಗ್‌ಗೆ ಜಾಗ, ದೊಡ್ಡ ದೊಡ್ಡ ಸಂಪ್ ಟ್ಯಾಂಕ್ ಗಳು, ಜನರೇಟರ್ ರೂಮುಗಳು, ಸೆಕ್ಯೂರಿಟಿಯವರಿಗೆ ಕ್ವಾರ್‍ಟಸ್ಸು ಎಲ್ಲಾ ಕಟ್ಟಿಸೋದು. ಫಸ್ಟ್‌ಫೂರ್‌ನಲ್ಲಿ ಮೂರು ಬೆಡ್‌ರೂಂ, ಫ್ಲಾಟುಗಳು, ಮಿಕ್ಕಿದ್ದೆಲ್ಲಾ ಎರಡು ಬೆಡ್‌ರೂಂ ಫ್ಲಾಟುಗಳು, ಮೂರು ಬೆಡ್‌ರೂಂ ಫ್ಲಾಟುಗಳಲ್ಲಿ ನಿಮಗೆ ಒಂದು ಮನೆ ಕೊಡ್ತೀನಿ. ನನಗೆ ಎರಡು ಮನೆ ಇಟ್ಕೋತೀನಿ, ಶ್ರೀದೇವಿಗೆ ಒಂದು ಫ್ಲಾಟ್ ಕಮ್ಮಿ ರೇಟಲ್ಲಿ ಕೊಡ್ತೀನಿ. ಏನಮ್ಮಾ ಪ್ರಿಯಾ ಈ ಮನೆ ಅಂದರೆ ನಾನು ಕೊಡೋ ಫ್ಲಾಟು ನನ್ನ ತಂಗಿ ಹೆಸರಲ್ಲಿರುತ್ತೆ. ನಿನಗೆ ಬೇರೋಂದು ಫ್ಲಾಟು ಬೇಕಾದ್ರೆ ಕಡಿಮೆ ರೇಟಲ್ಲಿ ಕೊಡ್ತೀನಿ. ನಿನ್ನ ಅಕ್ಕನಿಗೆ ಬೇಕಾದ್ರೂ ಹೇಳು ಕಡಿಮೆ ರೇಟಲ್ಲಿ ಕೊಡ್ತೀನಿ. ಇನ್ನು ನನ್ನ ಸಂಬಂಧಿಕರು, ನನ್ನ ಸ್ನೇಹಿತರು ನಿಮ್ಮ ಸ್ನೇಹಿತರು ಯಾರಿಗಾದ್ರೂ ಬೇಕಾದ್ರೆ ಹೇಳಿ ಕಡಿಮೆ ರೇಟಲ್ಲಿ ಹಾಕಿ ಕೊಡ್ತೀನಿ. ಇನ್ನು ನಾಲ್ಕು ತಿಂಗಳಲ್ಲಿ ಪ್ರಾಜೆಕ್ಟ್ ಶುರು ಮಾಡ್ತೀವಿ. ನಾನೂ ಬ್ಯಾಂಕ್ ಲೋನ್ ತಗೊಂಡೇ ಪ್ರಾಜೆಕ್ಟ್ ಮಾಡ್ತೀನಿ. ಫ್ಲಾಟ್ ತಗೋಳೋ ಎಲ್ಲರಿಗೂ ನಾವೇ ಅದೇ ಬ್ಯಾಂಕ್‌ನಿಂದ ಸಾಲ ಕೊಡಿಸ್ತೀವಿ, ಸರಿ ಏನಪ್ಪಾ ಶ್ರೀಧರ.

ಇನ್ನು ನೀನು, ಕಲ್ಯಾಣಿ, ಪ್ರಿಯಾ ಎಲ್ಲರೂ ಒಪ್ಪಿಕೊಂಡರೆ, ಈ ಬಹುಕೋಟಿ ಪ್ರಾಜೆಕ್ಟ್‌ಗೆ ನೀನೇ ಎಂ.ಡಿ. ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಕೊಡ್ತೀನಿ. ಇನ್ನು ಮಾರಿಸಿಕೊಟ್ಟ ಪ್ರತಿ ಫ್ಲಾಟ್‌ಗೆ ಎರಡು ಪರ್ಸೆಂಟ್ ಕಮೀಷನ್ನು ಕೊಡ್ತೀನಿ. ಇದೇ ನೋಡಪ್ಪಾ ಸಿಹಿಸುದ್ದಿ.

ಈ ಸಿಹಿಸುದ್ದಿ ಕೇಳಿ ಎಲ್ಲರಿಗೂ ಆನಂದವೋ… ಆನಂದ ಶ್ರೀಧರನಿಗಂತೂ ತುಂಬಲಾಗದ ಸಂತಸ. ತಾನು ಕನಸಿನಲ್ಲಿಯೂ ಎಣಿಸದಂತಹ ಸುಖ, ಸಂಪತ್ತು, ಆಸ್ತಿ, ಲಕ್ಷರೂಪಾಯಿ ಸಂಬಳ, ಹತ್ತಾರು ಲಕ್ಷರೂಪಾಯಿ ಕಮೀಷನ್ಸ್ ಆಹಾ ದೇವರು ಕೊಟ್ಟಾಗ ಹಣದ ಹೊಳೆಯೇ ಹರಿಯುತ್ತದೆ.

ಇನ್ನೂ ಹಲವು ಹತ್ತು ಸೂಕ್ಷ್ಮ ವಿವರಗಳನ್ನು ಚರ್ಚೆ ಮಾಡಿದರು. ಎಲ್ಲಾ ಚರ್ಚೆ ಮುಗಿಯುವ ವೇಳೆಗೆ ಸಂಜೆ ಐದು ಗಂಟೆಯಾಗಿತ್ತು. ರಂಗರಾಜು ಮಾಮ ಶ್ರೀಧರನಿಗೆ ಹೇಳಿದರು. “ನಾವೆಲ್ಲಾ ಚಿಕ್ಕಂದಿನಲ್ಲಿ ಯಾವಾಗಲಾದರೂ ಗಾಂಧಿ ಬಜಾರಿನ ವಿದ್ಯಾರ್ಥಿ ಭವನ ಹೋಟೆಲ್ಲಿಗೆ ಹೋಗಿ ಮಸಾಲೆದೋಸೆ ತಿನ್ನುತ್ತಿದ್ದೆವು. ಇವತ್ತು ಸಂಜೆ ಎಲ್ಲರೂ ವಿದ್ಯಾರ್ಥಿ ಭವನ್ ಹೋಟೆಲಿಗೆ ಹೋಗಿ ಮಸಾಲೆ ದೋಸೆ ತಿಂದು ಬರೋಣ” ಎಂದರು.

ಈ ಹೌಸಿಂಗ್ ಪ್ರಾಜೆಕ್ಟ್ ಕೇಳಿ ಆನಂದದ ಕಡಲಲ್ಲಿ ತೇಲಾಡುತ್ತಿದ್ದ ಶ್ರೀಧರ “ಆಗಲಿ ಮಾಮ ಖಂಡಿತ ಹೋಗೋಣ” ಎಂದನು.

ರಂಗರಾಜು ಮಾಮ ಪ್ರಿಯಾಳ ಕಡೆ ನೋಡಿ “ನಿಮ್ಮ ತಾಯಿಯವರನ್ನೂ ಕರೆದುಕೊಂಡು ಬಾಮ್ಮಾ, ನನಗೇನು ಅವರ ಮೇಲೆ ದ್ವೇಷವಿಲ್ಲ” ಎಂದು ಅವಳ ಬೆನ್ನು ತಟ್ಟಿದರು. ಅವಳು ಸಂತೋಷದಿಂದ “ಆಗಲಿ ಮಾಮಾ” ಎಂದು ಒಳಗೋಡಿದಳು.

ರಂಗರಾಜು ಮಾಮಾ ಮತ್ತು ಅವರ ಪತ್ನಿ ಎರಡು ದಿನ ಇದ್ದು ದೆಹಲಿಗೆ ಹೊರಟರು, ಹೋಗುವಾಗ ಬಲವಂತ ಮಾಡಿ, “ನಾಲ್ಕು ದಿನ ಇದ್ದು ಬರುವೆಯಂತೆ ಬಾ” ಎಂದು ತಮ್ಮ ತಂಗಿ ಕಲ್ಯಾಣಿಯನ್ನು ಕರೆದುಕೊಂಡು ಹೋದರು. ಅವರು ಹೊರಟ ಬಳಿಕ ಶಾರದಮ್ಮನವರಿಗೆ ಒಳ್ಳೆಯ ಪೀಕಲಾಟವಾಯಿತು. ಬೀಗಿತ್ತಿ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದರು. ಇವರು ತಿಂದುಕೊಂಡು, ಎಲ್ಲರ ಮೇಲೆ ಅಧಿಕಾರ ಮಾಡಿಕೊಂಡು ಇದ್ದರು. ಈಗ ಇಡೀ ಮನೆಯ ಜವಾಬ್ದಾರಿ ಇವರ ಮೇಲೆ ಬಿದ್ದಿತು.

ವಿಮಾನ ಹತ್ತಿ ಕುಳಿತ ಕೂಡಲೇ ರಂಗರಾಜುರವರು ತಂಗಿಯನ್ನು ನೋಡಿ ಮುಗುಳು ನಕ್ಕು ಹೇಳಿದರು.

“ಏನು ತಂಗ್ಯವ್ವಾ ಹೇಗಿತ್ತು ನಾನು ನಿನ್ನ ಬೀಗಿತ್ತಿಗೆ ಕೊಟ್ಟ ಶಾಕ್?”

ಕಲ್ಯಾಣಿಯವರು ಗಾಬರಿಯಾಗಿ ಕೇಳಿದರು. “ಅಲ್ಲಣ್ಣಾ ಈ ಹೌಸಿಂಗ್ ಪ್ರಾಜೆಕ್ಟ್ ಅದೂ ಇದೂ ಎಲ್ಲಾ ನಿಜಾನಾ ಅಥವಾ ಬೀಗಿತ್ತೀನ ಹೆದರಿಸೋದಕ್ಕೆ ಮಾಡಿದ ನಾಟಕನಾ?”

“ನಾಟಕ ಏನೂ ಅಲ್ಲ. ನಿಜವಾಗಲೂ ಹೌಸಿಂಗ್ ಪ್ರಾಜೆಕ್ಟ್ ಮಾಡ್ತೀನಿ. ಅದರ ಬಗ್ಗೆ ನೀನೇನೂ ಸಂದೇಹ ಇಟ್ಟುಕೋಬೇಡ. ಒಂದು ದೊಡ್ಡ ಕಂಪನಿಯವರು ನನ್ನನ್ನು ಕೇಳ್ತಾ ಇದ್ರು ಬೆಂಗಳೂರಿನಲ್ಲಿ ಒಳ್ಳೆಯ ಜಾಗ ಕೊಡಿಸಿ ಅಪಾರ್ಟ್‌ಮೆಂಟ್ ಕಟ್ಟಿ ಮಾರೋಣ ಅಂತ. ಕನಕಪುರ ರಸ್ತೆಯಲ್ಲಿ ಹನ್ನೆರಡು ಎಕರೆ ಭೂಮಿ ಸಿಗೋದಿದೆ. ಅಲ್ಲಿ ಒಂದು ಹೌಸಿಂಗ್ ಪ್ರಾಜೆಕ್ಟ್ ಮಾಡೋಣಾಂತಿದೀನಿ. ಆದರೆ ಅಲ್ಲೆಲ್ಲಾ ರೇಟು ಕಡಿಮೆ ಇರುತ್ತೆ. ಜನಾನೂ ಬೇಗ ಸಿಗೋದಿಲ್ಲ. ಬಸವನಗುಡಿ ಏರಿಯಾಲಂದ್ರೆ ಒಳ್ಳೆಯ ಡಿಮ್ಯಾಂಡ್ ಇದೆ. ನಾನು ತಾನು ಅಂತ ಓಡಿ ಬಂದು ಕಾಂಪಿಟೇಶನ್ ಮೇಲೆ ತಗೋತಾರೆ. ಇನ್ನು ನಮ್ಮ ಮನೆಯ ವಿಷಯ. ನಿನ್ನ ಸೊಸೆಗೆ ಮತ್ತು ಬೀಗಿತ್ತಿಗೆ ಹೇಳಿ ಅವರ ಮನೆ ಖಾಲಿ ಮಾಡಿಸಿಕೊಂಡು ನೀವು ಅಲ್ಲಿಗೆ ಶಿಫ್ಟ್ ಮಾಡಿ. ಅಲ್ಲಿಗೆ ಹೋದ ಮೇಲೆ ನೀನು ಅಡಿಗೆ ಮಾಡೋದಕ್ಕೆ ಹೋಗಬೇಡ, ಅವಳೇ ಮಾಡಲಿ, ಆಯಮ್ಮ ಇಲ್ಲಿ ಧಿಮಾಕು ಮಾಡಿಕೊಂಡಿರೋ ಹಾಗೆ, ಅಲ್ಲಿಗೆ ಹೋದ ಮೇಲೆ ನೀನು ತೆಪ್ಪಗೆ ಕೂತಿರು, ಅಡಿಗೆ ಮಾಡೋದು, ಮನೆ ಗುಡಿಸೋದು, ಒರೆಸೋದು, ಬಟ್ಟೆ ಒಗೆಯೋದು ಎಲ್ಲಾ ಕೆಲಸ ಅವಳೇ ಮಾಡಲಿ, ಮಗಳ ಮದುವೆಗೆ ಮುಂಚೆ ಮಾಡ್ತಿರ್ಲಿಲ್ವಾ ಹಾಗೇ ಈಗಲೂ ತನ್ನ ಮನೆ ಕೆಲಸಗಳನ್ನೆಲ್ಲಾ ತಾನೇ ಮಾಡಲಿ, ನೀನು ಸುಮ್ಮನೆ ಇದ್ದುಬಿಡು.”

ಹೀಗೆಯೇ ಮಾತನಾಡುತ್ತಾ ವಿಮಾನದಲ್ಲಿ ದೆಹಲಿ ತಲುಪಿದರು. ದೆಹಲಿಯ ಬಿಸಿಲಿಗೆ ಹೊಂದಿಕೊಳ್ಳಲು ಕಲ್ಯಾಣಿಗೆ ಸ್ವಲ್ಪ ಕಷ್ಟವಾಯಿತು. ಮೂರ್‍ನಾಲ್ಕು ದಿನ ಕಳೆದ ಮೇಲೆ ಅತ್ತಿಗೆ ನಾದಿನಿ ಇಬ್ಬರೂ ಕೂಡಿ ಕರೋಲ್‌ಬಾಗ್, ಆರ್.ಕೆ. ಪುರಮ್, ಲೋಧಿ ರೋಡ್ ಎಲ್ಲಾ ಕಡೆ ಸುತ್ತಾಡಿ ದೇವಾಲಯಗಳನ್ನು ನೋಡಿ ಬಂದರು. ಒಂದು ದಿನ ಆಗ್ರಾ, ಮಥುರಾ, ಮತ್ತು ಬೃಂದಾವನಕ್ಕೆ ಹೋಗಿ ಬಂದರು. ಮತ್ತೊಂದು ದಿನ ಕುರುಕ್ಷೇತ್ರಕ್ಕೆ ಹೋಗಿ ಬಂದರು. ಹೀಗೆಯೇ ನೋಡ ನೋಡುತ್ತಿದ್ದಂತೆಯೇ ಹದಿನೈದು ದಿನಗಳು ಕಳೆದು ಹೋದವು. ಒಂದು ದಿನ ಊಟದ ಸಮಯದಲ್ಲಿ ಕಲ್ಯಾಣಿ ಅಣ್ಣನನ್ನು ಕೇಳಿದರು. “ನಾಳೆಗೋ, ನಾಳಿದ್ದಿಗೋ ಏರ್ ಟಿಕೆಟ್ ಬುಕ್ ಮಾಡಣ್ಣಾ ನಾನು ಬೆಂಗಳೂರಿಗೆ ಹೊರಡ್ತೀನಿ.”

ರಂಗರಾಜು ಬಿಲ್‌ಕುಲ್ ಒಪ್ಪಲಿಲ್ಲ.

“ಈಗಲೇ ಏನು ಅವಸರ, ಇನ್ನು ಹತ್ತು ದಿನ ಇದ್ದು ಹೋಗು. ಹೇಗೂ ನಿನ್ನ ಬೀಗಿತ್ತಿ ಇದ್ದಾರಲ್ಲಾ, ಮಗಳು-ಅಳಿಯನಿಗೆ ಅಡುಗೆ ಮಾಡಿ ಬಡಿಸಲಿ.”

ಆದರೂ ಕಲ್ಯಾಣಿಯವರಿಗೆ ತನ್ನ ಮನೆಗೆ ತಾನು ಹೋಗಿ ಸೇರಬೇಕು ಎಂದು ಬಹಳವಾಗಿ ಅನಿಸತೊಡಗಿತು. ಕೊನೆಗೆ, ಒಂದು ವಾರವಾದರೂ ಇದ್ದು ಹೋಗು ಎಂದು ಹೇಳಿದರು. ಕೊನೆಗೊಮ್ಮೆ ವಿಮಾನ ಏರಿ ಬೆಂಗಳೂರಿಗೆ ಹೊರಟರು.

ಇತ್ತ ಬೆಂಗಳೂರಿನಲ್ಲಿ ಶಾರದಮ್ಮನವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸೊರಗಿ ಹೋಗಿದ್ದರು. ಶ್ರೀಧರ ಶ್ರೀಪ್ರಿಯಾ ಗೆಲುವಾಗಿಯೇ ಇದ್ದರು. ಕಲ್ಯಾಣಿಯವರು ಮನೆಗೆ ಬಂದ ದಿನ ಏನೂ ಕೆಲಸ ಮಾಡದೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ಮರುದಿನ ದೇವಸ್ಥಾನಕ್ಕೆ ಹೋಗಿ ಬಂದರು. ಅದೃಷ್ಟವಶಾತ್ ಸುಲೋಚನಾರವರು ದೇವಸ್ಥಾನಕ್ಕೆ ಬಂದಿದ್ದರು. ಇಬ್ಬರೂ ಕುಳಿತು ಕಷ್ಟಸುಖ ಹೇಳಿಕೊಂಡರು. ಕಲ್ಯಾಣಿ ತನ್ನ ದೆಹಲಿ ಪ್ರವಾಸದ ವಿಷಯ, ತನ್ನ ಅಣ್ಣ ಕಟ್ಟಿಸುತ್ತಿರುವ ಅಪಾರ್ಟ್‌ಮೆಂಟ್‌ನ ವಿಷಯ ಹೇಳಿ ಹೆಮ್ಮೆಪಟ್ಟರು.

ಕಲ್ಯಾಣಿಯವರು ದೆಹಲಿಯಿಂದ ಬೆಂಗಳೂರಿಗೆ ಹಿಂತಿರುಗಿದ ಹತ್ತು ದಿನಗಳೊಳಗೆ ರಂಗರಾಜು ಮಾಮ ಮತ್ತೆ ಬೆಂಗಳೂರಿಗೆ ಬಂದರು. ಬಂದವರೇ ಎಲ್ಲರನ್ನೂ ಕೂರಿಸಿಕೊಂಡು ಹೇಳಿದರು. “ನಾನು ಹೇಳಿದ ಹೌಸಿಂಗ್ ಪ್ರಾಜೆಕ್ಟ್‌ಗೆ ಒಂದು ಬಿಲ್ಡರ್ ಕಂಪೆನಿಯವರು ಮುಂದೆ ಬಂದಿದ್ದಾರೆ. ಆದಷ್ಟು ಬೇಗ ಸ್ಥಳದ ಇನ್ಸ್‌ಪೆಕ್ಷನ್ ಮಾಡಿ ಪ್ಲಾನ್ ರೆಡಿ ಮಾಡುತ್ತಾರೆ. ನೀನು, ನಾನು ಅಮ್ಮ ಎಲ್ಲರೂ ಕೂಡಿ ಅಡ್ವಕೇಟ್ ಹತ್ತಿರ ಹೋಗಿ, ಈ ಬಿಲ್ಡರ್ ಕಂಪನಿಯವರ ಜೊತೆ ಅಗ್ರಿಮೆಂಟ್ ಮಾಡಿಕೊಳ್ಳೋದರ ಬಗ್ಗೆ ಮಾತನಾಡೋಣ. ಈ ಮನೆಯ ಡಿಮಾಲಿಷನ್ ಮಾಡೋದಕ್ಕೆ ಮತ್ತು ಅಪಾರ್ಟ್‌ಮೆಂಟ್ ಕಟ್ಟೋದಕ್ಕೆ ಬಿ.ಬಿ.ಎಂ.ಪಿ.ಯಿಂದ ಲೈಸೆನ್ಸ್ ತಗೋಬೇಕು. ಅಲ್ಲಿಯವರೆಗೆ ನೀವು ಈ ಮನೇಲಿ ಇರಬಹುದು. ಒಂದು ಸಲ ಲೈಸೆನ್ಸ್ ಸಿಕ್ಕಿತೋ ಕೂಡಲೇ ನೀವು ಮನೆ ಬದಲಾಯಿಸಬೇಕು. ಒಂದು ಕೆಲಸ ಮಾಡಿ. ಹೇಗೂ ಜಯನಗರದಲ್ಲಿ ಪ್ರಿಯಾದು ಫ್ಲಾಟ್ ಇದೆಯಲ್ಲಾ ಅದನ್ನೇ ಖಾಲಿ ಮಾಡಿಸಿ ಆ ಮನೆಗೇ ಶಿಫ್ಟ್ ಮಾಡಿಬಿಡಿ” ಎಂದು ಪ್ರಿಯಾಳ ಮುಖ ನೋಡಿದರು. ಪ್ರಿಯಾ ಸರಿ ಮಾಮ ಎಂದು ತಲೆಯಲ್ಲಾಡಿಸಿದಳು. ಅವಳ ತಾಯಿ ಕೆರಳಿದ ಸರ್ಪದಂತೆ ಹರಿ ಹಾಯ್ದರು.

“ಅಲ್ಲಿ ಯಾಕಿರಬೇಕು. ಅದು ನನ್ನ ಮನೆ, ನನ್ನ ಗಂಡನ ಮನೆ, ಆ ಮನೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ.”

ರಂಗರಾಜು ಮಾಮಾ ಗಹಗಹಿಸಿ ನಕ್ಕರು.

“ಹೌದು ತಾಯಿ, ನಿಮ್ಮ ಗಂಡಂದೇ. ಆದರೆ ಈಗ ಅವರು ಇಲ್ಲವಲ್ಲಾ. ಅದು ಎಂದಿದ್ದರೂ ನಿಮ್ಮ ಮಕ್ಕಳಿಗೆ ತಾನೇ. ಅದು ಅಲ್ಲದೆ ಇವರು ಏನೂ ಶಾಶ್ವತವಾಗಿ ಅಲ್ಲಿಯೇ ಇರುತ್ತಾರೆಯೇ? ಈ ಅಪಾರ್ಟ್‌ಮೆಂಟ್‌ನ ಕನ್ಸ್‌ಟ್ರಕ್ಷನ್ ಕೆಲಸ ಮುಗಿಯುವ ತನಕ ಇರ್‍ತಾರೆ. ಅದು ಮುಗಿದ ಮೇಲೆ ಇಲ್ಲಿಗೆ ಬಂದು ಬಿಡ್ತಾರೆ. ಈಗ ನೀವು ಇಲ್ಲಿದ್ದೀರಲ್ಲಾ ಹಾಗೆಯೇ ಅವರು ಸ್ವಲ್ಪ ದಿನ ಅಲ್ಲಿ ಇರ್‍ತಾರೆ ಅಷ್ಟೇ. ನೀನೇನಂತೀಯ ಮಗು!” ಎಂದು ಪ್ರಿಯಾಳನ್ನು ಕೇಳಿದರು. ಅವಳು “ಸರಿ ಮಾಮಾ” ಎಂದಳು.
* * *

ಕಲ್ಯಾಣಿಯವರ ಬಸವನಗುಡಿ ಮನೆಯನ್ನು ಖಾಲಿ ಮಾಡಿ ಜಯನಗರದ ಶ್ರೀಪ್ರಿಯಾ ಮನೆಗೆ ಮನೆಯ ಸಾಮಾನು ಸರಂಜಾಮುಗಳನ್ನು ಸಾಗಿಸಿದರು. ಮುಂದಿನ ದಿನಗಳಲ್ಲಿ ಕೆಲಸ ಕಾರ್ಯಗಳು ಬಹಳ ಬಿರುಸಾಗಿ ನಡೆಯತೊಡಗಿದವು. ಬಸವನಗುಡಿಯ ಹೆಚ್.ಬಿ. ಸಮಾಜ ರಸ್ತೆಯಲ್ಲಿಯೇ ಒಂದು ಆಫೀಸ್ ಓಪನ್ ಮಾಡಿದರು. ಅಪಾರ್ಟ್‌ಮೆಂಟ್ ಬಿಲ್ಡರ್ ಗಾಂಧಿಬಜಾರಿನ ಒಂದು ಬ್ಯಾಂಕಿನಲ್ಲಿ ಖಾತೆ ತೆರೆದರು. ಶ್ರೀಧರ ತನ್ನ ಕೊರಿಯರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಈ ಬಿಲ್ಡರ್ ಕಂಪನಿಯ ಜವಾಬ್ದಾರಿ ವಹಿಸಿಕೊಂಡ. ಕೆಲಸಗಳು ಭರದಿಂದ ಸಾಗಿದವು. ಅಪಾರ್ಟ್‌ಮೆಂಟ್ ಕೊಳ್ಳಲು ಜನ ನಾನು-ತಾನು ಎಂದು ಮುಗಿಬಿದ್ದರು. ಬ್ಯಾಂಕಿನವರೂ ಕಟ್ಟಡ ನಿರ್ಮಾಣಕ್ಕೆ ಧಾರಾಳವಾಗಿ ಸಾಲ ಕೊಟ್ಟರು. ಶ್ರೀಧರನಿಗೆ ಈಗ ಕೈತುಂಬಾ ಕೆಲಸ, ಹಾಗೆಯೇ ಲೆಕ್ಕವಿಲ್ಲದಷ್ಟು ಹಣ! ಹಣ ಖರ್ಚು ಮಾಡಲು ಸಮಯವೇ ಇಲ್ಲ. ಅವನ ಕೈಕೆಳಗೆ ನೂರಾರು ಜನ ಇಂಜಿನಿಯರುಗಳೂ, ಮೇಸ್ತ್ರಿಗಳೂ, ಸೂಫರ್‌ವೈಸರ್‌ಗಳೂ, ಕೆಲಸ ಮಾಡುತ್ತಿದ್ದರು. ಈ ಪ್ರಾಜೆಕ್ಟ್‌ನ ಕೆಲಸ ವಿಪರೀತ ಹೆಚ್ಚಾಗಿ ಶ್ರೀಪ್ರಿಯಾ ಕೂಡಾ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಈ ಕಂಪನಿಯ ಡೈರೆಕ್ಟರ್ ಆಗಿ ಕೆಲಸ ಮಾಡತೊಡಗಿದಳು.

ಒಂದು ದಿನ ಶ್ರೀಧರನ ಅಕ್ಕ ತನ್ನ ಗಂಡ ಮತ್ತು ಮಗಳ ಜೊತೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಳು. ನಾಲ್ಕು ದಿನ ತಾಯಿಯ ಜೊತೆಗೆ, ತಮ್ಮನ ಜೊತೆಗೆ ಇದ್ದು, ಮಾವ ಮತ್ತು ತಮ್ಮ ಕಟ್ಟಿಸುತ್ತಿರುವ ಅಪಾರ್ಟ್‌ಮೆಂಟ್ ನೋಡಿ ಬಂದಳು. ಮಾವ ತನಗಾಗಿ ಕೊಡಲು ಮುಂದೆ ಬಂದಿರುವ ಫ್ಲಾಟ್ ನೋಡಿದಳು. ಅವಳು ಮತ್ತು ಅವಳ ಗಂಡ ಆ ಫ್ಲಾಟ್ ಕೊಳ್ಳಲು ಮುಂಗಡ ಹಣ ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡರು. ನಂತರ ಎರಡು ದಿನವಿದ್ದು ಶ್ರೀದೇವಿ ಮತ್ತು ವೇಣುಗೋಪಾಲ್ ತಮ್ಮ ಮಗುವಿನೊಂದಿಗೆ ಹಾಸನಕ್ಕೆ ಹೊರಟರು. ಹಾಸನದಲ್ಲಿ ವೇಣುಗೋಪಾಲ್ ತಂದೆ ಬೇಕರಿ ಇಟ್ಟಿದ್ದರು. ಜೊತೆಗೆ ಮಗ್ಗೆಯಲ್ಲಿ ಅಡಿಕೆ, ತೆಂಗು ಬೆಳೆಯುವ ಐದು ಎಕರೆ ತೋಟ ಕೂಡಾ ಇಟ್ಟಿದ್ದರು. ಶ್ರೀದೇವಿ ವೇಣುಗೋಪಾಲ್ ಹಾಸನಕ್ಕೆ ಹೋಗಿ ಅವರ ಮನೆಯಲ್ಲಿ ನಾಲ್ಕು ದಿನ ಇದ್ದು ತಮ್ಮ ಬಂಧು ಬಾಂಧವರನ್ನು ದೇವಾಲಯಗಳನ್ನು ನೋಡಿ ಬೆಂಗಳೂರಿಗೆ ಹಿಂತಿರುಗಿದರು. ಮತ್ತೆ ಎರಡು ದಿನ ಬೆಂಗಳೂರಿನಲ್ಲಿದ್ದು ಆಸ್ಟ್ರೇಲಿಯಾಕ್ಕೆ ಹಿಂತಿರುಗಿದರು. ಅವರುಗಳು ಹಿಂತಿರುಗಿದ ಮೇಲೆ ಶ್ರೀಧರ ಮತ್ತು ಶ್ರೀಪ್ರಿಯಾ ತಮ್ಮ ಹೌಸಿಂಗ್ ಪ್ರಾಜೆಕ್ಟ್‌ನ ಕೆಲಸದಲ್ಲಿ ಮಗ್ನರಾದರು. ಶಾರದಮ್ಮನವರು ತಮ್ಮ ಮನೆಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಶಾಂತವಾಗಿದ್ದರು. ಒಂದು ದಿನ ಅಮೇರಿಕಾದಿಂದ ಅವರ ಮಗಳು ರಜನಿ ಫೋನ್ ಮಾಡಿ ತಾಯಿಗೆ ಒಂದು ಸಿಹಿಸುದ್ದಿ ಕೊಟ್ಟಳು. ಅವಳು ಎರಡನೇ ಸಲ ಗರ್ಭಿಣಿಯಾಗಿದ್ದಳು. ಅವಳ ಮಗ ಅಭಿಷೇಕ್‌ಗೆ ಈಗ ಆರು ವರ್ಷ ವಯಸ್ಸು, ಹಾಗಾಗಿ ಇನ್ನೊಂದು ಮಗು ಆಗಲಿ ಎಂದು ರಜನಿ ಮತ್ತು ರವಿ ನಿರ್ಧರಿಸಿದ್ದರು. ಮಗಳ ಸಿಹಿಸುದ್ದಿ ಕೇಳಿ ಶಾರದಮ್ಮನವರಿಗೆ ಬಹಳ ಆನಂದವಾಯಿತು. ಈ ಸಿಹಿಸುದ್ದಿಯನ್ನು ಶ್ರೀ ಪ್ರಿಯಾಳಿಗೂ ನೀನೇ ಹೇಳಿಬಿಡು ಎಂದು ರಜಿನಿಗೆ ಹೇಳಿ ಪ್ರಿಯಾಳ ಕೈಲಿ ಫೋನು ಕೊಟ್ಟರು. ಅಕ್ಕನ ಸಿಹಿಸುದ್ದಿ ಕೇಳಿ ಪ್ರಿಯಾಳಿಗೂ ಬಹಳ ಸಂತೋಷವಾಯಿತು. ಅಕ್ಕನಿಗೆ ಮನಃಪೂರ್ವಕ ಅಭಿನಂದನೆಗಳನ್ನು ತಿಳಿಸಿದಳು.

ಇನ್ನು ಮುಂದಿನ ಪ್ರಶ್ನೆ ಶಾರದಮ್ಮನವರು ಮಗಳ ಬಾಣಂತನ ಮಾಡಲು ಅಮೇರಿಕಾಗೆ ಹೋಗಬೇಕು. ಇಲ್ಲಿ ಅಪಾರ್ಟ್‌ಮೆಂಟ್‌ನ ನಿರ್ಮಾಣವಾಗುತ್ತಿರುವ ಕಾರಣ ಎಲ್ಲರೂ ಈಗ ಶಾರದಮ್ಮನವರ ಮನೆಯಲ್ಲಿಯೇ ಇದ್ದಾರೆ. ರಂಗರಾಜು ಮಾವ ಬಂದಾಗಲೆಲ್ಲಾ ಅಲ್ಲಿಯೇ ಇರುತ್ತಾರೆ. ಮನೆಯ ಯಜಮಾನಿ, ಮನೆಯ ಏಕೈಕ ಸದಸ್ಯೆ ಅಮೇರಿಕಾಗೆ ಹೋದರೆ ಇಲ್ಲಿ ನಾವೆಲ್ಲಾ ಇರುವುದು ಸರಿಯೇ? ಎಂದು ಕಲ್ಯಾಣಿ ಹತ್ತಾರು ಸಲ ಯೋಚಿಸಿದರು. ಈ ವಿಷಯವನ್ನು ಶ್ರೀಧರ ಮತ್ತು ಶ್ರೀಪ್ರಿಯಾರ ಮುಂದೆ ಹೇಳಿದರು. ಅವರು ತಾಯಿಯ ಬಳಿ ಮಾತನಾಡೋಣ ಎಂದರು. ಒಂದೆರಡು ದಿನಗಳ ಬಳಿಕ ಎಲ್ಲರೂ ಕುಳಿತು ಊಟ ಮಾಡುತ್ತಿದ್ದಾಗ ಶ್ರೀಪ್ರಿಯಾ ಈ ವಿಷಯ ಕೈಗೆತ್ತಿಕೊಂಡಳು. ತಾಯಿಯನ್ನು ನೇರವಾಗಿ ಕೇಳಿದಳು.

“ಅಮ್ಮ ಅಕ್ಕನಿಗೆ ಮಗು ಹುಟ್ಟಿದಾಗ ನೀನು ಬಾಣಂತನ ಮಾಡೋದಕ್ಕೆ ಆಮೇರಿಕಾಗೆ ಹೋಗ್ತಿಯಾ?”

ಅವರು ನಿಃಸಂದೇಹವಾಗಿ ಹೇಳಿದರು.

“ಹೌದು ಖಂಡಿತ ಹೋಗ್ತೇನೆ. ಅವಳಿಗಾದರೂ ಯಾರಿದಾರೆ? ಅವಳ ಅತ್ತೆ ಖಂಡಿತ ಬರಲ್ಲ. ಅಭಿಷೇಕನನ್ನು ನೋಡ್ಕೊಂಡು, ಅಳಿಯಂದಿರಿಗೆ ಅಡುಗೆ ಮಾಡಿ ಬಡಿಸಿ, ರಜ್ಜುನ ಬಾಣಂತನ ಮುಗಿಸಿ ಬರ್‍ತೀನಿ” ಎಂದರು.

ಶ್ರೀಪ್ರಿಯಾ ಕೇಳಿದಳು. “ಹಾಗಿದ್ರೆ ಇಲ್ಲಿ ಮನೆ ನೋಡಿಕೊಳ್ಳೋವ್ರು ಯಾರು?”

“ನಿಮ್ಮತ್ತೇವ್ರು ಇದ್ದಾರಲ್ಲ! ಹೇಗೂ ಅಡುಗೆ ಮಾಮಿ ಬರ್‍ತಾರೆ, ತಿಂಡಿ ಊಟ ಎಲ್ಲಾ ರೆಡಿ ಮಾಡಿ ಕೊಟ್ಟು ಹೋಗ್ತಾರೆ, ಇನ್ನು ಕೆಲಸದವರಿದ್ದಾರೆ. ಮನೆ ಕೆಲಸ ಎಲ್ಲಾ ಮಾಡ್ಕೊಂಡು ಹೋಗ್ತಾರೆ. ಇನ್ನು ಮನೇಗೆ ಸಾಮಾನು ತರೋದಕ್ಕೆ ನೀನು, ಶ್ರೀಧರ ಇದ್ದೇ ಇದ್ದೀರ. ನಾನಂತೂ ಹೋಗೋದೇ.”

“ಏನಂತೀರಾ ಕಲ್ಯಾಣಿ?”

ಕಲ್ಯಾಣಿಯವರು ಮುಗುಳು ನಗುತ್ತಾ ಹೇಳಿದರು.

“ಧಾರಾಳವಾಗಿ ಹೋಗಿಬನ್ನಿ, ನಾನು ಮನೇನ, ಮನೆ ಮಂದೀನ, ಕೆಲಸದವರನ್ನ ಎಲ್ಲಾ ನೋಡ್ಕೋತೀನಿ. ನೀವು ನಿಶ್ಚಿಂತೆಯಾಗಿ ಹೋಗಿಬನ್ನಿ.”

ಶಾರದಮ್ಮನವರಿಗೆ ಈಗ ನಿರಾಳವಾಯಿತು. ಕಲ್ಯಾಣಿಯವರ ಪಕ್ಕದಲ್ಲಿ ಬಂದು ಕುಳಿತು, ಅವರ ಕೈಹಿಡಿದುಕೊಂಡು ಹೇಳಿದರು.

“ತುಂಬಾ ಥ್ಯಾಂಕ್ಸ್ ಕಲ್ಯಾಣಿ ಈಗ ನಾನು ನಿಶ್ಚಿಂತೆಯಿಂದ ಅಮೇರಿಕಾಗೆ ಹೋಗಿ ನನ್ನ ಮಗಳ ಬಾಣಂತನ ಮಾಡಿ ಬರ್‍ತೀನಿ. ಈ ಸಿಹಿಸುದ್ದಿನ ಈಗಲೇ ನಾನು ರಜ್ಜುಗೆ ಫೋನ್ ಮಾಡಿ ಹೇಳ್ತೀನಿ” ಎಂದು ಎದ್ದು ಒಳಗೆ ಹೋದರು. ಶ್ರೀಪ್ರಿಯಾಳೂ ನಿರಾಳವಾಗಿ ನಿಟ್ಟುಸಿರುಬಿಟ್ಟಳು.
* * *

ಅಪಾರ್ಟ್‌ಮೆಂಟಿನ ಕೆಲಸ ಪರಿಶೀಲಿಸಲು ರಂಗರಾಜು ಮಾಮಾ ಮತ್ತು ಅವರ ಇಬ್ಬರು ಪಾಲುದಾರರು ದೆಹಲಿಯಿಂದ ಬಂದರು. ಅವರುಗಳು ಇಳಿದುಕೊಳ್ಳಲು ಶ್ರೀಧರ ಒಂದು ಪಂಚತಾರಾ ಹೋಟೆಲಿನಲ್ಲಿ ಕೋಣೆಗಳನ್ನು ಗೊತ್ತು ಮಾಡಿದ. ವಿಮಾನ ನಿಲ್ದಾಣಕ್ಕೆ ಹೋಗಿ ಅವರುಗಳನ್ನು ಕರೆದುಕೊಂಡು ಬಂದ. ಅಪಾರ್ಟ್‌ಮೆಂಟಿನ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ದೆಹಲಿಯಿಂದ ಬಂದವರು ದಿನವಿಡೀ ನಿರ್ಮಾಣದ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು. ನಂತರ ಹೋಟೆಲಿನಲ್ಲಿ ಕುಳಿತು ಲೆಕ್ಕಪತ್ರಗಳನ್ನು ಪರಿಶೀಲಿಸಿದರು. ಈವರೆಗೆ ಎಷ್ಟು ಫ್ಲಾಟುಗಳು ಬುಕ್ಕಾಗಿವೆ. ಎಷ್ಟು ಮುಂಗಡ ಬಂದಿದೆ ಎಂಬ ವಿವರಗಳನ್ನು ನೋಡಿದರು. ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುತ್ತಿದ್ದ ಬಿಲ್ಡರ್‌ಗಳನ್ನು ಇಂಜಿನಿಯರ್‌ಗಳನ್ನು ಎ.ಸಿ ಕಂಪನಿಯವರನ್ನು, ಎಲಿವೇಟರ್ ಕಂಪನಿಯವರನ್ನು, ಬ್ಯಾಂಕಿನ ಅಧಿಕಾರಿಗಳನ್ನು ಕರೆಸಿ ಮಾತನಾಡಿದರು.

ಹೀಗೆಯೇ ಮಾತನಾಡುತ್ತಿದ್ದಾಗ ರಂಗರಾಜುರವರನ್ನು ಕೇಳಿದರು. ಅಪಾರ್ಟ್‌ಮೆಂಟಿಗೆ ಒಂದು ಒಳ್ಳೆಯ ಹೆಸರನ್ನು ಆರಿಸಿರಿ. ಆ ಹೆಸರಿನಿಂದ ಸಾಕಷ್ಟು ಪ್ರಚಾರ ಕಾರ್ಯ ಆರಂಭಿಸಿರಿ ಎಂದರು. ಅಲ್ಲೇ ಇದ್ದ ಶ್ರೀಧರ ಹೇಳಿದ. ಈ ಅಪಾರ್ಟ್‌ಮೆಂಟ್ ಕಟ್ಟುತ್ತಿರುವುದು ಒಂದು ದೊಡ್ಡ ಸಿಹಿಸುದ್ದಿ, ಅಪಾರ್ಟ್‌ಮೆಂಟ್ ತೆಗೆದುಕೊಳ್ಳುವವರು ಈ ಸಿಹಿಸುದ್ದಿಯನ್ನು ತಮ್ಮ ಮನೆಯವರಿಗೆ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಹೇಳುತ್ತಾರೆ, ಆನಂದ ಪಡುತ್ತಾರೆ. ಆದುದರಿಂದ ಈ ಅಪಾರ್ಟ್‌ಮೆಂಟಿಗೆ ಸಿಹಿಸುದ್ದಿ ಅಪಾರ್ಟ್ ಮೆಂಟ್’ ಎಂದೇ ಹೆಸರಿಡೋಣ ಎಂದನು.

ದೆಹಲಿಯಿಂದ ಬಂದಿದ್ದ ಆ ಪಾಲುದಾರರಿಗೆ ಸರಿಯಾಗಿ ಅರ್ಥವಾಗಲಿಲ್ಲ. ಶ್ರೀಧರ ಅದನ್ನು ಇಂಗ್ಲೀಷಿನಲ್ಲಿ “ಗುಡ್‌ನ್ಯೂಸ್ ಅಪಾರ್ಟ್‌ಮೆಂಟ್ಸ್” ಎಂದು ಹೇಳಿದ. ಆ ಪಾಲುದಾರರಿಗೆ ಮತ್ತು ಸಭೆಗೆ ಬಂದಿದ್ದ ಇಂಜಿನಿಯರ್‌ಗಳಿಗೆ ಬ್ಯಾಂಕ್ ಅಧಿಕಾರಿಗಳಿಗೆ ಎಲ್ಲರಿಗೂ ಈ ಹೆಸರು ಇಷ್ಟವಾಯಿತು. ಈ ಗೃಹಸಂಕೀರ್ಣಕ್ಕೆ ಗುಡ್‌ನ್ಯೂಸ್ ಅಪಾರ್ಟ್‌ಮೆಂಟ್ ಎಂದೇ ಹೆಸರಿಡಲು ನಿರ್ಧರಿಸಲಾಯಿತು. ಅಪಾರ್ಟ್‌ಮೆಂಟಿನ ನಿರ್ಮಾಣದ ಕೆಲಸ, ಅಪಾರ್ಟ್‌ಮೆಂಟುಗಳ ಮಾರಾಟದ ಕೆಲಸ ಮತ್ತು ಜಾಹಿರಾತಿನ ಕೆಲಸ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ನಡೆಯತೊಡಗಿದವು.

ಶಾರದಮ್ಮನವರು ಮಗಳು ರಜನಿಯ ಬಾಣಂತನ ಮಾಡಲು ಅಮೇರಿಕಾಗೆ ಹೋದರು. ಸುಖವಾಗಿ ಹೋಗಿ ಸೇರಿದುದರ ಸುದ್ದಿ ಬಂದ ಮೇಲೆ, ಎಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾದರು. ಕಲ್ಯಾಣಿಯವರು ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು. ರಜನಿಗೆ ಹೆಣ್ಣು ಮಗು ಜನಿಸಿತು. ಈ ಸಿಹಿಸುದ್ದಿಯನ್ನು ಸ್ವತಃ ರಜನಿಯೇ ಫೋನ್ ಮಾಡಿ ಎಲ್ಲರಿಗೂ ತಿಳಿಸಿದಳು. ಅದೇ ದಿನ ಸಂಜೆಯ ವೇಳೆಗೆ ಮಗು ಮತ್ತು ಬಾಣಂತಿಯ ವಿಡಿಯೋ ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿದಳು. ಎಲ್ಲರೂ ಮಗುವನ್ನು ರಜನಿಯನ್ನು ನೋಡಿ ಆನಂದಪಟ್ಟರು, ಶ್ರೀಪ್ರಿಯಾ ಸಂತೋಷದಿಂದ ಅಪಾರ್ಟ್‌ಮೆಂಟ್‌ನ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಎಲ್ಲಾ ಕೆಲಸಗಾರರಿಗೂ ಈ ಸಿಹಿಸುದ್ದಿ ಹೇಳಿ ಸಿಹಿ ಹಂಚಿದಳು.

ಶಾರದಮ್ಮನವರು ಒಟ್ಟು ಆರು ತಿಂಗಳು ಅಮೇರಿಕದಲ್ಲಿದ್ದು ಭಾರತಕ್ಕೆ ಹಿಂತಿರುಗಿದರು. ನಾಲ್ಕಾರು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡು ನಿಧಾನವಾಗಿ ಮನೆಯ ಕೆಲಸ ಕಾರ್ಯಗಳನ್ನು ನೋಡಿಕೊಳ್ಳತೊಡಗಿದರು. ಹೀಗಿರುವಾಗ ಒಂದು ದಿನ ಕಲ್ಯಾಣಿಯವರಿಗೆ ಆಸ್ಟ್ರೇಲಿಯಾದಿಂದ ಮಗಳ ದೂರವಾಣಿ ಕರೆ ಬಂದಿತು. ಅವಳು ಸಿಹಿಸುದ್ದಿ ಕೊಟ್ಟಳು. ಅವಳು ಈಗ ಮೂರು ತಿಂಗಳ ಗರ್ಭೀಣಿಯಾಗಿದ್ದಳು. ಕಲ್ಯಾಣಿ ಬಹಳ ಆನಂದದಿಂದ ಮಗಳನ್ನು ಅಭಿನಂದಿಸಿದರು. ನಂತರ ಈ ಸಿಹಿಸುದ್ದಿಯನ್ನು ಬೀಗಿತ್ತಿಯವರಿಗೆ ಶ್ರೀಧರನಿಗೆ ಮತ್ತು ಶ್ರೀಪ್ರಿಯಾಗೆ ತಿಳಿಸಿ ಆನಂದಪಟ್ಟರು. ನಂತರ ದೆಹಲಿಗೆ ಫೋನ್ ಮಾಡಿ ತನ್ನ ಅಣ್ಣ ಅತ್ತಿಗೆಯವರಿಗೆ ಸಿಹಿಸುದ್ದಿ ತಿಳಿಸಿದರು. ಇನ್ನು ಅವರು ಮಗಳ ಬಾಣಂತನಕ್ಕೆ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧತೆಗಳಾದವು. ಇವರ ವೀಸಾ ದೊರಕಿತು. ಇವರ ಬಟ್ಟೆಬರೆ ಸಾಮಾನು ಸರಂಜಾಮು ಸಿದ್ಧ ಮಾಡಿಕೊಳ್ಳತೊಡಗಿದರು. ಆಸ್ಟ್ರೇಲಿಯಾಗೆ ಹೋಗುವುದಕ್ಕೆ ಮೊದಲು ಒಂದು ಭಾನುವಾರ ಸಜ್ಜನರಾವ್ ಸರ್ಕಲ್‌ನಲ್ಲಿರುವ ಶ್ರೀನಿವಾಸ ದೇವಾಲಯದಲ್ಲಿ ಕಲ್ಯಾಣೋತ್ಸವ ಮಾಡಿಸಿದರು. ಮಣೆಯ ಮೇಲೆ ಕುಳಿತುಕೊಳ್ಳಲು ಮನೆಗೆ ಹಿರಿಯರಾದ ರಂಗರಾಜು ಮತ್ತು ಅತ್ತಿಗೆಯವರನ್ನು ಕರೆಸಿದರು. ಮನೆಯವರೂ ಶ್ರೀಧರ ಮತ್ತು ಶ್ರೀಪ್ರಿಯಾ ಇದ್ದರು. ಬೀಗಿತ್ತಿ ಶಾರದಮ್ಮನವರಂತೂ ಇದ್ದೇ ಇದ್ದಾರೆ. ತಮ್ಮ ಆಪ್ತ ಗೆಳತಿಯಾದ ಸುಲೋಚನಾರವರನ್ನು ಅವರ ಪತಿ ಶೇಷಾದ್ರಿಯವರನ್ನು ಕರೆದಿದ್ದರು. ಕಲ್ಯಾಣೋತ್ಸವ ಸಾಂಗವಾಗಿ ಮುಗಿಯಿತು. ಎಲ್ಲರೂ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪ್ರಸಾದ ಸ್ವೀಕರಿಸಿದರು. ದೇವಾಲಯಕ್ಕೆ ಬಂದಿದ್ದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವಿನಿಯೋಗವಾಯಿತು. ಕಲ್ಯಾಣಿಯವರು ತಮ್ಮ ಗೆಳತಿ ಸುಲೋಚನಾರವರ ಕೈಹಿಡಿದು ಹೃತೂರ್ವಕವಾಗಿ ತಮ್ಮ ಕೃತಜ್ಞತೆಗಳನ್ನು ಹೇಳಿದರು.

“ಸುಲೋಚನಾರವರೇ ಆದಿನ ನಾವಿಬ್ಬರೂ ಇಲ್ಲೇ ಕೂತು ಮಾತಾಡ್ತಾ ಇದ್ದಾಗ ನಾನು ನಿಮ್ಮ ಹತ್ತಿರ ನನ್ನ ಕಷ್ಟ ತೋಡಿಕೊಂಡು, ನಮ್ಮ ಶ್ರೀಧರನಿಗೆ ಒಳ್ಳೆಯ ಕೆಲಸ ಇಲ್ಲ, ಸಾಕಷ್ಟು ಸಂಪಾದನೆಯಿಲ್ಲ, ವಯಸ್ಸು ಮೀರ್‍ತಾ ಇದೆ. ಇನ್ನೂ ಮದುವೆ ಆಗಿಲ್ಲ ಅಂತ ಎಲ್ಲಾ ಹೇಳಿಕೊಂಡು ಅತ್ತಿದ್ದೆ. ಆದಿನ ನೀವು ನನಗೆ ಸಮಾಧಾನ ಮಾಡಿದ್ರಿ, ಆಮೇಲೆ ಶ್ರೀಪ್ರಿಯಾಳ ವಿಷಯ ಹೇಳಿ, ನೀವೇ ನಿಂತು ಮದುವೇನೂ ಮಾಡಿಸಿದ್ರಿ, ತಂದೆ ಇಲ್ಲದ ಈ ಹುಡುಗೀಗೆ ನೀವೇ ತಂದೆ-ತಾಯಿಯರಾಗಿ ಮದುವೇಲಿ ಧಾರೆ ಎರೆದು ಕೊಟ್ಟಿರಿ. ಮಹಾಲಕ್ಷ್ಮಿಯಂತಹ ಸೊಸೆ ಮನೆಗೆ ಕಾಲಿಟ್ಟ ಘಳಿಗೆ ನಮಗೆ ಎಲ್ಲಾ ಒಳ್ಳೆಯದೇ ಆಗುತ್ತಾ ಬಂತು. ಎಲ್ಲಾ ನಿಮ್ಮ ಸಹಾಯದಿಂದ ಆದದ್ದು ಸುಲೋಚನಾ, ಆ ದೇವು ನಿಮ್ಮಿಬ್ಬರನ್ನು ಚೆನ್ನಾಗಿಟ್ಟಿರಲಿ.” ಮುಂದೆ ಅಣ್ಣನ ಕಡೆ ತಿರುಗಿ ಹೇಳಿದರು.

ತಂದೆ ತಾಯಿ ಇಲ್ಲದ ನನಗೆ ತಾನೇ ಅಣ್ಣನಾಗಿ, ತಾನೇ ತಂದೆ-ತಾಯಿ ಆಗಿ ಎಲ್ಲಾ ಸಹಾಯ ಮಾಡ್ತೀರೋ ನನ್ನ ಅಣ್ಣ ಈ ಅಪಾರ್ಟ್‌ಮೆಂಟ್ ಪ್ರಾಜೆಕ್ಟ್ ಕೈಗೆತ್ತಿಕೊಂಡು ನಮ್ಮಗಳ ಜೀವನದಲ್ಲಿ ಸುಖ, ಸಂತೋಷ, ಶ್ರೀಮಂತಿಕೆ ಎಲ್ಲಾ ತಂದುಕೊಟ್ಟ. ದೇವರು ನಿಮ್ಮಿಬ್ಬರನ್ನು ಚೆನ್ನಾಗಿ ಇಟ್ಟಿರಲಿ ಅಣ್ಣ ಎಂದು ರಂಗರಾಜು ಮತ್ತು ಅತ್ತಿಗೆಯವರ ಕಾಲಿಗೆರಗಿ ನಮಸ್ಕರಿಸಿದರು. ಶ್ರೀಧರ ಮತ್ತು ಶ್ರೀಪ್ರಿಯಾ ಕೂಡಾ ಮಾವ ಮತ್ತು ಅತ್ತೆಯವರ ಕಾಲಿಗೆ ನಮಸ್ಕರಿಸಿದರು.

ಕಲ್ಯಾಣಿಯವರು ಸೊಸೆ ಶ್ರೀಪ್ರಿಯಾಳನ್ನು ಪಕ್ಕದಲ್ಲಿ ಕೂರಿಸಿಕೊಂಡು, ಅವಳ ತಲೆ ನೇವರಿಸುತ್ತಾ ಒಂದು ಮಾತು ಹೇಳಿದರು.

“ನೋಡಮ್ಮಾ ಪ್ರಿಯಾ ನೀನು ನಮ್ಮ ಮನೆಗೆ ಕಾಲಿಟ್ಟಾಗಲಿಂದ ನಮಗೆ ಎಲ್ಲಾ ಒಳ್ಳೆಯದೇ ಆಗ್ತಾ ಇದೆ. ನನ್ನ ಅಣ್ಣ ಅಪಾರ್ಟ್‌ಮೆಂಟ್ ಕಟ್ಟಿಸುವ ಸಿಹಿಸುದ್ದಿ ಕೊಟ್ಟರು. ನಿನ್ನ ಅಕ್ಕ ಸಿಹಿಸುದ್ದಿ ಕೊಟ್ಟಳು. ನನ್ನ ಮಗಳು ಶ್ರೀದೇವಿ ಸಿಹಿಸುದ್ದಿ ಕೊಟ್ಟಳು. ಇನ್ನು ಸಿಹಿಸುದ್ದಿ ಕೊಡುವ ಸರದಿ ನಿನ್ನದು, ನಮ್ಮ ವಂಶಕ್ಕೆ ಒಂದು ಮಗುವನ್ನು ಹೆತ್ತುಕೊಟ್ಟು ನಮಗೆಲ್ಲಾ ಸಿಹಿಸುದ್ದಿ ಕೊಡಬೇಕು” ಎಂದರು.

ಶ್ರೀಪ್ರಿಯಾ ನಸುನಗುತ್ತಾ ಹೇಳಿದಳು.

“ಖಂಡಿತ ಕೊಡ್ತೀನಿ ಅತ್ತೆ. ನೀವು ನಿಶ್ಚಿಂತರಾಗಿ ಆಸ್ಟ್ರೇಲಿಯಾಗೆ ಹೋಗಿ ಬನ್ನಿ. ನಮ್ಮ ಅಪಾರ್ಟ್‌ಮೆಂಟಿನ ಪ್ರಾಜೆಕ್ಟ್ ಮುಗಿದ ಕೂಡಲೇ ನಮ್ಮ ಮುಂದಿನ ಪ್ರಾಜೆಕ್ಟ್ ಅದೇನೇ! ಎಂದಳು.

ಎಲ್ಲರೂ ಸಂತೋಷದಿಂದ ನಸುನಕ್ಕರು,
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಛಿದ್ರ
Next post ಎಲ್ಲಿಂದ ಎಲ್ಲಿಗೆ?

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…