ಮಣ್ಣಿನಲ್ಲೊಂದು ಅಣುವಾಗಿದ್ದೆ
ಆಶೆಯ ಕುಲುಮೆ, ಆಗಸದೊಲುಮೆ
ಹೊಮ್ಮಿದೆ ನಾ….
ಹೊರ ಹೊಮ್ಮಿದೆ ನಾ…. ಬೀಜವಾಗಿ.
ಅಡವಿಯಲ್ಲೊಂದು ಗಿಡವಾಗಿದ್ದೆ
ಗಾಳಿಯ ಗರಿಮೆ ವರುಣನ ಬಲುಮೆ
ನೋಡಿದ ನಾ…
ಜಗ ನೋಡಿದೆ ನಾ…. ಕುಸುಮವಾಗಿ.
ಹಳ್ಳದಲ್ಲೊಂದು ಹನಿಯಾಗಿದ್ದೆ
ಸೂರ್ಯನ ಕರುಣೆ ಹಿಂದಣ ಸ್ಮರಣೆ
ಸೇರಿದೆ ನಾ….
ನಭ ಸೇರಿದೆ ನಾ…. ಆವಿಯಾಗಿ.
ಕಾಯದಲ್ಲೊಂದು ಕಿಡಿಯಾಗಿದ್ದೆ
ಗುರುವಿನ ಮಹಿಮ ಅರಿವಿನ ಹಿರಿಮೆ
ಅಪ್ಪಿದೆ ನಾ…
ಶಿವನಪ್ಪಿದೆ ನಾ…. ಬೂದಿಯಾಗಿ.
*****