ಮೇ ದಿನದ ಕನಸು

ಮೇ ದಿನದ ಕನಸು

ಮೇ ಒಂದನೇ ತಾರೀಕು ಬಂತೆಂದರೆ ಇಂಡಿಯಾದ ಕೆಲವು ನಗರಗಳಲ್ಲಾದರೂ ಕೆಂಪು ಬಾವುಟಗಳು ಉತ್ಸಾಹದಿಂದ ಮಾತನಾಡುತ್ತವೆ. ವ್ಯವಸ್ಥೆ ವಿರೋಧಿ ವಿವೇಕವನ್ನು ಉತ್ಸಾಹವಾಗಿ ಪರಿವರ್ತಿಸಿ ಪ್ರಚಂಡ ಮೆರವಣಿಗೆಯಲ್ಲಿ ಪ್ರತಿಫಲಿಸುತ್ತವೆ. ಆದರೆ ಕೆಂಪು ಬಾವುಟವನ್ನು ಭಾಷಣವನ್ನಾಗಿ ಮಾರ್ಪಡಿಸಿ ಮೈಮರೆಯದಂತೆ ಎಚ್ಚರ ವಹಿಸಬೇಕಾದ ಅಗತ್ಯ ಇಂದು ಎದುರಾಗುವುದನ್ನು ಎಡಪಕ್ಷಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ ಇಂದು, ಸಮತಾವಾದಿ ಸಿದ್ಧಾಂತ ಮಾತಿರಲಿ, ಕೆಲವು ಆಶಯಗಳೂ ಆತಂಕವನ್ನು ಎದುರಿಸುತ್ತಿವೆ. ಆಶಯಗಳು ಆಲೋಚನಾಕ್ರಮದ ಭಾಗವಾಗಿ, ಬದಲಾವಣೆಯ ಒಳ ಒತ್ತಡಗಳಾಗಿ, ಕ್ರಮಬದ್ಧ ಸಿದ್ಧಾಂತವಾಗಿ ವಿಸ್ತರಣೆ ಗೊಳ್ಳುವುದು ಕಷ್ಟವೆಂಬ ನಿರಾಶೆಯ ಭಾವನೆಯನ್ನು ಬಿತ್ತಲಾಗುತ್ತಿರುವ ಸಂದರ್ಭದಲ್ಲಿ ಮತ್ತೊಂದು ಮೇ ದಿನ ಆಗಮಿಸಿದೆ. ಕಪ್ಪು ಸಂಭ್ರಮದಲ್ಲಿ ಮುಳುಗಿ ಮತ್ತೆ ಮೇ ಎರಡನೇ ದಿನದ ಕತ್ತಲಿಗೆ ಹೋಗುತ್ತದೆ. ಮುನ್ನೂರ ಅರವತ್ತೈದು ದಿನಗಳೂ ಮೇ ದಿನವಾಗುವ ಕನಸಿನ ಬುತ್ತಿ ಕಟ್ಟಿಕೊಂಡು ದಾರಿ ಸವೆಸುತ್ತದೆ. ಹಸಿವಾದಾಗ ಅರ್ಧದಲ್ಲೇ ಬುತ್ತಿ ಬರಿದಾಗುತ್ತದೆ. ಇಂಥ ವಿಪರ್ಯಾಸದ ಸನ್ನಿವೇಶದಲ್ಲಿ ಎಡಪಕ್ಷಗಳು ಕೆಲಸ ಮಾಡಬೇಕಾಗಿದೆ; ಎಡಪಂಥೀಯತೆ ಬದುಕಬೇಕಾಗಿದೆ.

ಮೇ ದಿನದ ಆಚರಣೆಯು ಅಧಿಕೃತವಾಗಿ ಪ್ರಾರಂಭವಾದದ್ದು ೧೮೯೦ರಲ್ಲಾದರೂ ಮೇ ದಿನಕ್ಕೆ ಪೂರಕವಾದ ಬೃಹತ್ ಮುಷ್ಕರ ನಡೆದಿದ್ದು ೧೮೮೬ ರಲ್ಲಿ. ಚಿಕಾಗೊವಿನಲ್ಲಿ ಕಾರ್ಮಿಕರಿಗೆ ಎಂಟು ಗಂಟೆಗಳ ಮಿತಿಯುಳ್ಳ ದುಡಿಮೆಗಾಗಿ ಒತ್ತಾಯಿಸಿ ೧೮೮೬ರ ಮೇ ಒಂದರಂದು ನಡೆಸಿದ ಬೃಹತ್ ಮುಷ್ಕರ ಮುಂದೆ ಮೇ ದಿನಾಚರಣೆ ಮೂಲ ಸ್ಫೂರ್ತಿಯಾಯಿತು. ಅಂದಿನಿಂದ ಇಂದಿನವರೆಗೆ ಕಾರ್ಮಿಕರ ಹಕ್ಕುಗಳ ದಿನವಾಗಿ, ‘ಕೆಂಪು ಆಚರಣೆ’ಯಾಗಿ ಇದು ಮುಂದುವರಿಯುತ್ತ ಬಂದಿದೆ; ಎಡಪಕ್ಷ ಹಾಗೂ ಪಂಥದ ಅವಿಭಾಜ್ಯ ಅಂಗವಾಗಿದೆ.

ಇಂದು ಎಡಪಂಥ ಮತ್ತು ಎಡಪಕ್ಷಗಳು ಮುಖ್ಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಯಾವ ಬಿಕ್ಕಟ್ಟನ್ನೂ ಎದುರಿಸಿಲ್ಲವೆಂದು ಇವರೇನಾದರೂ ಬೀಗುತ್ತ ಬಂದರೆ ಬೀಗ ಹಾಕಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಎಡಪಕ್ಷ ಮತ್ತು ಪಂಥಗಳಿಗೆ ಬೇಗ ಬೀಗ ಹಾಕಿ ಭೋಜನಕೂಟ ಏರ್ಪಡಿಸಲು ಕಾಯುತ್ತಿರುವ ಕರುಣಾಳುಗಳು ಸೈಡ್‌ವಿಂಗ್ಸ್‌ಗಳಲ್ಲಿ ನಿಂತಿರುವಾಗ ಎಡಪಕ್ಷಗಳ ಎಚ್ಚರ ನೂರ್ಮಡಿಯಾದರೂ ಸಾಲದು. ಈ ಎಚ್ಚರವು ಭಾಷಣಗಳಲ್ಲಿ ಬನಾಯಿಸಬೇಕಾಗಿಲ್ಲ; ಆತ್ಮರತಿಯಲ್ಲಿ ಅಬ್ಬರಿಸಬೇಕಾಗಿಲ್ಲ. ಆತ್ಮವಂಚನೆಯಿಂದ ದೂರವಾಗುವ ಆತ್ಮ ವಿಮರ್ಶೆಯಲ್ಲಿ ಗಟ್ಟಿಯಾಗಬೇಕು.

ಸೋವಿಯತ್ ರಷ್ಯಾದ ವಿಘಟನೆಯಾದ ನಂತರ ಜಗತ್ತಿನ ರಾಜಕೀಯ ಶಕ್ತಿಯಲ್ಲಿ ಸಮತೋಲನ ತಪ್ಪಿ ಹೋಗಿ ಅಮೆರಿಕ ಪ್ರೇರಿತ ರಾಜಕೀಯವೇ ಅಂತಿಮ ನೆಲೆಯೆಂಬ ಭಾವನೆ ಬೆಳೆಯುತ್ತಿದೆ; ಇದರಿಂದ ಅನೇಕರ ಬೌದ್ಧಿಕ ಸಮತೋಲನವು ತಪ್ಪಿಹೋಗಿ ಇನ್ನು ಸಮತಾವಾದಿ ಆಶಯಗಳ ಕಾಲ ಮುಗಿಯಿತೆಂಬ ತೀರ್ಪು ಕೊಡುತ್ತ ಸ್ವಯಂತೃಪ್ತಿ ಪಡೆಯುತ್ತಿದ್ದಾರೆ. ಕಮ್ಯುನಿಸಂ ಸಿದ್ಧಾಂತಕ್ಕೆ ಮಣ್ಣು ಮುಕ್ಕಿಸಿ ಪ್ರಜಾಪ್ರಭುತ್ವ ತಲೆ ಎತ್ತುತ್ತಿದೆ ಎಂದು ಬೆಲೆವೆಣ್ಣಿನ ಮಾತು ಬಿತ್ತುತ್ತ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಎಡಪಕ್ಷಗಳು ಕೇವಲ ಬಾಯಿಪಾಠದ ಭಾಷಣ ಮಾಡುತ್ತಾ ನಿಂತರೆ, ಸ್ವಯಂ ಸಮಾಧಿಗೆ ಸನ್ನದ್ಧವಾದಂತೆ ಆಗುತ್ತದೆ. ಬಾಯಿಪಾಠದ ಬದಲು, ಬದ್ಧತತ್ವವನ್ನು ಸಮಕಾಲೀನ ಸಮಸ್ಯೆಗಳೆದುರು ಮುಖಾಮುಖಿ ಯಾಗಿಸಿ ಹೊಸಮಾತು ಹುಟ್ಟಿಸುವ ಕೆಲಸ ಮಾಡಬೇಕು; ಪುನರ್‌ನವೀಕರಣ ಗೊಳಿಸಬೇಕು. ಸಮಸ್ಯೆ, ಸವಾಲುಗಳಿಗೆ ತಕ್ಕುದಾದ ರೀತಿಯಲ್ಲಿ ಉತ್ತರ ಹುಡುಕಬೇಕು. ಆದರೆ ನಮ್ಮ ಎಡಪಕ್ಷಗಳು ಸಮತಾವಾದ ಮತ್ತು ಪ್ರಜಾಪ್ರಭುತ್ವಗಳು ಬೇರೆ ಬೇರೆಯಲ್ಲವೆಂಬ ಸಾಮಾನ್ಯ ತತ್ವ ವನ್ನಾದರೂ ಸಾರ್ವತ್ರಿಕವಾಗಿ ಸಾರುತ್ತಿವೆಯೆ? ಸಮತಾವಾದವೆನ್ನುವುದೇ ನಮ್ಮ ಪ್ರಜಾಪ್ರಭುತ್ವ ಎಂಬ ಬುದ್ಧಿ ಭಾವನೆಗಳನ್ನು ಬೆಳೆಸಿವೆ ? ಸೋವಿಯತ್ ರಷ್ಯಾದಲ್ಲಿ ಎಲ್ಸಿನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಪ್ರತೀಕವೆಂಬಂತೆ ಪ್ರಚಾರ ಪಡೆಯುತ್ತಿದ್ದಾಗ ಅದರ ಅಸತ್ಯವನ್ನು ಅನಾವರಣ ಮಾಡಿವೆಯೆ? ಇಂಥ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಗಲಾರದು. ಸಮತಾವಾದದ ಪ್ರಚಾರವನ್ನು ಮಾಡಿರಬಹುದಾದರೂ ಅದನ್ನು ನಮ್ಮ ಜನರ ಮನೋಧರ್ಮಕ್ಕನುಗುಣವಾದ ಪರಿಭಾಷೆಯಲ್ಲಿ ಪರಿಚಯಿಸುವ ಕೆಲಸವನ್ನು ಮಾಡಿಲ್ಲ. ಸಿದ್ಧ ಮಾದರಿಯ ಮಾತುಗಳನ್ನು ಮತ್ತೆ ಮತ್ತೆ ಆಡಬಾರದೆಂಬ ಸೈದ್ಧಾಂತಿಕ ಸೃಜನಶೀಲತೆಯ ಮಟ್ಟವನ್ನು ನಮ್ಮ ಎಡಪಕ್ಷಗಳು ಮುಟ್ಟಲಿಲ್ಲ.

ಹೀಗೆಂದ ಕೂಡಲೇ ನಾನು ಎಡಪಕ್ಷಗಳ ಕ್ರಿಯಾಶೀಲತೆಯನ್ನು ಕಡೆಗಣಿಸುತ್ತಿಲ್ಲ. ನಮ್ಮ ದೇಶದಲ್ಲಿ ಇವತ್ತು ಅಲ್ಪಸ್ವಲ್ಪ ಆಸೆ ಉಳಿಸಿರುವ ಪಕ್ಷಗಳೆಂದರೆ ಎಡಪಕ್ಷಗಳು ಎಂದು ಹೇಳಲು ನನಗಂತೂ ಯಾವ ಹಿಂಜರಿಕೆ ಇಲ್ಲ. ಕೋಮುದ್ವೇಷ, ವಿದೇಶಿ ಪಾಳೆಗಾರಿಕೆ, ಜನವಿರೋಧಿ ಆರ್ಥಿಕ ನೀತಿಗಳನ್ನು ಜನಸಂಘಟನೆಯ ಮೂಲಕ ಅತ್ಯಂತ ಶಕ್ತಿಯುತವಾಗಿ ಪ್ರತಿಭಟಿಸಿಸುತ್ತಿರುವ ಪಕ್ಷಗಳೆಂದರೆ ನಮ್ಮ ಎಡಪಕ್ಷಗಳೆಂದು ಹೇಳಲು ಸಾಕ್ಷಿ ಪುರಾವೆಗಳು ಬೇಕಾಗಿಲ್ಲ. ಶಕ್ತಿ ರಾಜಕೀಯ ಸೋಂಕು ಸ್ವಲ್ಪ ತಗುಲಿದರೂ ಇತರೆ ಪಕ್ಷಗಳ ಸೈದ್ಧಾಂತಿಕ ಅರಾಜಕತೆಯ ನಡುವೆ ನಮ್ಮ ಕನಸುಗಳು ಕಮರಿ ಹೋಗದಂತೆ ಕಾಯ್ದುಕೊಳ್ಳುವ ಕೆಲಸವನ್ನು ಎಡ ಪಕ್ಷಗಳು ಮಾಡಿವೆ. ಪಕ್ಷ ಬದ್ಧತೆಯಿಲ್ಲದೆಯೂ ಎಡಪಂಥ ಬದ್ಧತೆಯ ಅನೇಕ ಜನರು ಆಸೆ ಹೊತ್ತು ಬದುಕುವ ವಾತಾವರಣವನ್ನು ಎಲ್ಲಾ ಮಾದರಿಯ ಎಡಪಕ್ಷಗಳೂ ನಿರ್ಮಾಣ ಮಾಡಿವೆ.

ಆದರೆ ನನ್ನ ಪ್ರಶ್ನೆ ಇರುವುದು ಸೈದ್ಧಾಂತಿಕ ಬಿಕ್ಕಟ್ಟನ್ನು ಎದುರಿಸುವಾಗ ಎಡಪಕ್ಷಗಳು ಎಡಬಿಡಂಗಿಯಂತೆ ಕಾಣಿಸಿಬಿಡುತ್ತವೆಯಲ್ಲ ಯಾಕೆ? ನಿಜಕ್ಕೂ ಹಾಗೆ ಇರುತ್ತವೆಯೊ ನೋಡುವವರಿಗೆ ಹಾಗೆ ಕಾಣುತ್ತವೆಯೋ ಎಂಬ ಅನುಮಾನದ ನಡುವೆ ಕೆಲವು ಮುಖ್ಯ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಮತ್ತು ಜನಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಹಿಂದೆ ಬಿದ್ದಿವೆಯೆಂಬ ಭಾವನೆಯಂತೂ ಬೆಳೆಯುತ್ತದೆ. ಈಗ, ಎಲ್ಸಿನ್ ವಿಚಾರವನ್ನೇ ತೆಗೆದುಕೊಳ್ಳೋಣ. ಗೋರ್ಬಚೆವ್ ವಿರುದ್ಧ ಎಲ್ಸಿನ್ ನಡೆಸಿದ ಪ್ರತಿಭಟನೆಯನ್ನು ಪ್ರಜಾಪ್ರಭುತ್ವವಾದಿ ಚಳುವಳಿಯೆಂಬಂತೆ ಮಾಧ್ಯಮಗಳು ಪ್ರಚುರ ಪಡುತ್ತಿರುವಾಗ ಎಡಪಕ್ಷಗಳ ಪಾತ್ರ ಇನ್ನೂ ಪ್ರಬುದ್ಧವಾಗಿರಬೇಕಿತ್ತು. ಜಾರ್‌ದೊರೆಗಳನ್ನು ನೆನಪಿಸುವ ಬಾವುಟವನ್ನು ಮುಂದೆ ಮಾಡಿಕೊಂಡು ಮೆರವಣಿಗೆ ಮಾಡಿದ ಎಲ್ಸಿನ್ ಹೇಗೆ ಪ್ರಜಾಪ್ರಭುತ್ವವಾದಿ ಎಂಬ ಸರಳ ಪ್ರಶ್ನೆಯನ್ನು ಇವರಾರೂ ಎತ್ತಲಿಲ್ಲ. ಅದರ ಬದಲು ನಿಜವಾದರೂ ಕ್ಲೀಷೆಯಾಗಿರುವ ‘ಸಿ.ಐ.ಎ. ಸಂಚು, ಅಮೆರಿಕ ಕೈವಾಡ’ ಇತ್ಯಾದಿ ಮಾತುಗಳೇ ಮುಖ್ಯವಾದವು. ಎಡಪಕ್ಷ ಹಾಗೂ ಎಡಪಂಥೀಯ ವಿಚಾರ ಸರಣಿಗೆ ಮಾಧ್ಯಮಗಳಲ್ಲಿ ಸಿಗುವ ಪ್ರಾಶಸ್ತ್ಯ ಕಡಿಮೆ ಎಂಬುದನ್ನು ಒಪ್ಪಿಯೂ ಎಲ್ಸಿನ್ ಪ್ರತಿಭಟನೆಯು ಪ್ರಜಾಪ್ರಭುತ್ವವಾದಿಯಲ್ಲ ಮತ್ತು ಸೋವಿಯತ್ ರಷ್ಯಾದ ವಿಘಟನೆಯು ಸಮತಾವಾದದ ಸಮಾಧಿಯಲ್ಲ ಎಂಬ ವಿಚಾರವನ್ನು ಮನವರಿಕೆ ಮಾಡಿಕೊಡುವ ‘ಪ್ರಮುಖ ಪ್ರಯತ್ನಗಳು’ ನಡೆದಿಲ್ಲವೆಂಬುದನ್ನು ಎಡ ಪಕ್ಷಗಳು ಅರಿಯಬೇಕು. ಎಡ ಸರ್ಕಾರಗಳು ಉರುಳಿದ ಕೂಡಲೇ ಎಡಪಂಥೀಯತೆ ನಾಶವಾಯಿತೆಂದು ಸಂತೋಷಪಡಬೇಕಾಗಿಲ್ಲವೆಂಬುದನ್ನು ಇತರರೂ ತಿಳಿಯಬೇಕು.

ಇನ್ನೊಂದು ಅಂಶ: ಎಡಪಕ್ಷಗಳು ಬ್ರಾಹ್ಮಣ ಪ್ರಧಾನ-ಪಕ್ಷ-ಪಾತಿ ಗಳೆಂದು ಲೋಹಿಯಾವಾದಿಗಳು ಆರೋಪಿಸುತ್ತಾ ಬಂದಾಗ ಅದಕ್ಕೆ ಸೂಕ್ತ ಉತ್ತರ ಕೊಡುವ ಕ್ರಿಯಾತ್ಮಕ ಪ್ರಯತ್ನಗಳು ನಡೆಯಲಿಲ್ಲ. ಎಡಪಕ್ಷಗಳ ನಾಯಕತ್ವದಲ್ಲಿ ಬ್ರಾಹ್ಮಣರು ಹೆಚ್ಚು ಎದ್ದು ಕಾಣುತ್ತಿರುವುದು ನಿಜವಾದರೂ ಪಕ್ಷವಾಗಿ ಮತ್ತು ಪಂಥವಾಗಿ ಇಂಡಿಯಾ ಜಾತಿವ್ಯವಸ್ಥೆಯ ಬೇರುಗಳನ್ನು ಗುರುತಿಸಿ ಅಸ್ಪೃಶ್ಯರ ನೆಲೆಯಲ್ಲಿ ನಿಲುವು ತಾಳಿದ ಧೀಮಂತಿಕೆಯನ್ನು ಎಡಪಕ್ಷಗಳು ತೋರಿಸಬೇಕಾಗಿತ್ತು. ಸ್ವತಃ ಕಾರ್ಲ್ ಮಾರ್ಕ್ಸ್ ೧೮೫೩ ರ ಜುಲೈ ೨೨ ರಂದು ಪ್ರಕಟಗೊಂಡ ಬರಹದಲ್ಲಿ ಇಂಡಿಯಾದ ಜಾತಿ ಮತ್ತು ಧರ್ಮಗಳ ಸ್ವರೂಪವನ್ನು ಕುರಿತು ಬರೆಯುತ್ತಾ ಪುರೋಹಿತಶಾಹಿ ಪ್ರವೃತ್ತಿಯನ್ನು ಬಯಲು ಮಾಡಿದ್ದನ್ನು ಲೋಹಿಯಾವಾದಿಗಳಿಗಲ್ಲದಿದ್ದರೂ ಜನಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಅಂತಿಮ ನೆಲೆಯಲ್ಲಿ ವರ್ಗ ನೆಲೆಯ ನಿಲುವು ಖಂಡಿತ ಸಂಗತವಾದುದು. ಆದರೆ ಜಾತಿ ಮೂಲ ವ್ಯವಸ್ಥೆಯ ವಾಸ್ತವವನ್ನು ಗುರುತಿಸದೆ ವರ್ಗನೆಲೆಯ ನಿಲುವು ಅರ್ಥಪೂರ್ಣವಾಗುವುದಿಲ್ಲ. ಈ ಅಂಶವನ್ನು ಮುಂಚೆಯೇ ಮನಗಂಡಿದ್ದಾರೆ ಎಡಪಕ್ಷಗಳ ವಿಚಾರ-ವಿವೇಕಗಳು ವಿಸ್ತಾರ ಗೊಳ್ಳುತ್ತಿದ್ದವು. ಅಷ್ಟೇ ಅಲ್ಲ, ಈ ನಾಡಿನಲ್ಲಿ ಬ್ರಾಹ್ಮಣ ವರ್ಣದ ವಂಚನೆಯ ಇತಿಹಾಸವನ್ನು ಒಪ್ಪಿಯೂ ಕೇವಲ ಬ್ರಾಹ್ಮಣ ವಿರೋಧಕ್ಕೆ ಇರುವ ಮಿತಿಗಳನ್ನು ಮನವರಿಕೆ ಮಾಡಿಕೊಡುವ ಹೊಣೆಯೂ ಎಡಪಕ್ಷ ಮತ್ತು, ಎಡಪಂಥೀಯರ ಮೇಲಿದೆ. ಯಾಕೆಂದರೆ ಬ್ರಾಹ್ಮಣ ವಿರೋಧವೊಂದನ್ನೇ ಧ್ಯೇಯ ಮಾಡಿಕೊಂಡಿರುವ ಫ್ಯೊಡಲ್‌ವರ್ಗ ಲಕ್ಷಣವುಳ್ಳ ಕೆಲವು ಪ್ರಬಲ ಜಾತಿಗಳ ಹಿತಾಸಕ್ತರು, ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಅಪಾಯಕಾರಿಗಳಾಗಿರುವ ವಾಸ್ತವವನ್ನು ನಾವು ಮರೆಯುವಂತಿಲ್ಲ. ಜಾತಿವ್ಯವಸ್ಥೆಯ ವಿಷವರ್ತುಲದ ವಕ್ತಾರರನ್ನು – ಅವರು ಬ್ರಾಹ್ಮಣರೇ ಇರಲಿ, ಇತರೆ ಪ್ರಬಲ ಜಾತಿಗಳೇ ಇರಲಿ ನಾವು ಏಕಕಾಲಕ್ಕೆ ವಿರೋಧಿಸುವುದನ್ನು ಮನವರಿಕೆ ಮಾಡಿಕೊಳ್ಳದಿದ್ದರೆ ಸತ್ಯ ವಂಚನೆ ಮಾಡಿದಂತಾಗುತ್ತದೆ. ಶ್ರೇಣೀಕೃತ ಸಮಾಜದ ಇತಿಹಾಸದಲ್ಲಿ ಬ್ರಾಹ್ಮಣರ ಪಾತ್ರವನ್ನು ಖಂಡಿಸುವುದು ಎಷ್ಟು ನ್ಯಾಯವೊ, ಜಾತಿ ಕಾರಣಕ್ಕಾಗಿಯೇ ಇಂದು ದ್ವೇಷ ಬಿತ್ತುತ್ತ ಹೋಗುವುದು ಅಷ್ಟೇ ಅನ್ಯಾಯ. ಇಂಥ ಅರಿವಿನ ಹಿನ್ನಲೆಯಲ್ಲಿ ಎಡಪಕ್ಷಗಳು ತಮ್ಮ ಮೇಲಿರುವ ಬ್ರಾಹ್ಮಣ ಪ್ರಧಾನತೆಯ ಆರೋಪವನ್ನು ಪರಿಶೀಲಿಸಿ, ಜಾತಿ ಸತ್ಯವನ್ನು ಗುರುತಿಸಿ, ಹೊಸ ನಾಯಕತ್ವವನ್ನು ಬೆಳೆಸುವ ಮೂಲಕ ಉತ್ತರ ಕೊಡುವುದು ಇಂಡಿಯಾದಂಥ ದೇಶದಲ್ಲಿ ಅಗತ್ಯವಾಗಿದೆ. ಅದೇ ಸಂದರ್ಭದಲ್ಲಿ ಬ್ರಾಹ್ಮಣ ಪ್ರಾಬಲ್ಯ ಮತ್ತು ಕೇವಲ ಬ್ರಾಹ್ಮಣ ವಿರೋಧದ ಮಿತಿಗಳನ್ನು ಮುಚ್ಚುಮರೆಯಿಲ್ಲದೆ ಬಯಲು ಮಾಡುತ್ತ, ಇತರೆ ಪ್ಯೂಡಲ್ ಜಾತಿ-ವರ್ಗಗಳ ಒಟ್ಟು ವಿಷವರ್ತುಲವನ್ನು ವಿವರಿಸುವ ಕೆಲಸವೂ ಆಗಬೇಕಿತ್ತು. ಅಂದರೆ ಮಾರ್ಕ್ಸ್‌ವಾದಿ ಚಿಂತನೆಯ ಮೂಲ ಸಂವೇದನೆಯನ್ನು ಬಿಟ್ಟುಕೊಡದೆ ಅಸ್ಪೃಶ್ಯತೆ ಹಿಂದುಳಿದ ಜಾತಿ-ವರ್ಗ, ಮತ್ತು ಗ್ರಾಮೀಣ ನೆಲೆಯಿಂದ ಸೈದ್ಧಾಂತಿಕ ನೋಟವನ್ನು ದೃಢಪಡಿಸಿಕೊಳ್ಳಲು ದೃಷ್ಟಿ ಬೆಳೆಯಬೇಕಿತ್ತು. ಈ ನೆಲೆಯಲ್ಲಿ ಹೋರಾಟಗಳನ್ನು ವ್ಯಾಪಕವಾಗಿ ಕೈಗೊಂಡು ಕ್ರಿಯಾಶೀಲವಾಗಿದ್ದರೆ ಮೇ ದಿನಾಚರಣೆಯ ಕೆಂಪು, ನಗರಗಳಲ್ಲಿ ಮಾತ್ರ ಮಿಂಚುತ್ತಿರಲಿಲ್ಲ, ಹಳ್ಳಿಗಳಿಗೂ ವ್ಯಾಪಿಸಲು ಸಾಧ್ಯವಾಗುತ್ತಿತ್ತು ಎಂಬ ಆಸೆಯಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ನನ್ನ ಮಾತುಗಳು ಪಶ್ಚಿಮ ಬಂಗಾಳ, ತ್ರಿಪುರ, ಕೇರಳಕ್ಕಿಂತ ಹೆಚ್ಚಾಗಿ ಕರ್ನಾಟಕಕ್ಕೆ ಅನ್ವಯಿಸುತ್ತವೆ.

ಇಷ್ಟಾಗಿಯೂ ಅಚಲವಾದ ನಿಷ್ಠೆ, ಬಿಟ್ಟುಕೊಡದ ಬದ್ಧತೆ, ಸಂಘಟನೆ ಶಿಸ್ತುಗಳಿಂದ ಎಡಪಕ್ಷಗಳು ಇವತ್ತು ಪ್ರಸ್ತುತವಾಗಿವೆ; ಪ್ರಮುಖ ಪಾತ್ರವಹಿಸುತ್ತಿವೆ. ಈ ಸಂದರ್ಭದಲ್ಲಿ ಶಿಸ್ತಿಗೆ ಸಂಬಂಧಿಸಿದ ಒಂದು ಅಂಶವನ್ನು ನಾವು ಮರೆಯಬಾರದು. ಪಕ್ಷ ಮತ್ತು ಪಂಥಗಳ ದೃಷ್ಟಿಯಿಂದ ಶಿಸ್ತು ಬೇಕೇ ಬೇಕು. ಆದರೆ ಶಿಸ್ತನ್ನು ಮಿಲಿಟರಿ ಮನೋಧರ್ಮವನ್ನಾಗಿಸದಿದ್ದಾಗ ಮಾತ್ರ ಅದು ಸಂವೇದನಾಶೀಲವಾಗಿರುತ್ತದೆ. ಎಡಪಕ್ಷಗಳು ಇದನ್ನು ಅರ್ಥ ಮಾಡಿಕೊಂಡು ಸಿದ್ಧಾಂತಕ್ಕೆ ಸೃಜನಶೀಲತೆಯ ನೆಲೆ ಒದಗಿಸಲು ಪ್ರಯತ್ನಿಸುತ್ತಲೇ ಇರಬೇಕು. ಸಿದ್ಧಾಂತವು ಸದಾ ಸಂವೇದನಾಶೀಲವಾಗಿರಬೇಕು. ಎಡಪಂಥೀಯತೆ ಜಡಪಂಥೀಯತೆಯಾಗಬಾರದು. ಇದು ಮೇ ದಿನದ ನನ್ನ ಕನಸು.
*****
೦೮-೦೫-೧೯೮೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಸರಿಲ್ಲದ ಬಂಧ
Next post ಹೂದುಂಬಿ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…