ನಮ್ಮ ನಾಗರಿಕತೆಯತ್ತ ನೋಡಿದರೆ ನಾವು ಮನುಷ್ಯ ಸಮೂಹವಾಗಿ ಸಂಪಾದಿಸಿಕೊಂಡಿರುವ ಜ್ಞಾನಸಂಪತ್ತು ಅಗಾಧವೂ ಅಪರಿಮಿತವೂ ಆದುದು ಎಂದು ನಮಗನಿಸಬಹುದು. ಆದರೂ ನಾವು ಅರಿಯುವುದಕ್ಕೆ ಇನ್ನಷ್ಟು ಇದೆ-ಅದೆಷ್ಟು ಎನ್ನುವ ಬಗ್ಗೆ ನಮಗೆ ಸರಿಯಾದ ಅರಿವಿಲ್ಲದಷ್ಟು. ಭೂಮಿಯೊಂದು ಉಪಗ್ರಹ ಎನ್ನುವುದನ್ನು ಅರಿತೆವು. ಭೂಮಿಯ ಸುತ್ತ ಸೂರ್ಯ ತಿರುಗುವುದಿಲ್ಲ, ಬದಲಿಗೆ ಸೂರ್ಯನ ಸುತ್ತ ಭೂಮಿಯೇ ತಿರುಗುತ್ತದೆ ಎನ್ನುವುದನ್ನು ತಿಳಿದೆವು. ಗ್ರಹಣವಾಗುವುದೆಂದರೆ ಸೂರ್ಯಚಂದರನ್ನು ರಾಹು ಕೇತುಗಳು ನುಂಗುವುದಲ್ಲ, ಗ್ರಹಗಳು ಒಂದು ಸಾಲಿನಲ್ಲಿ ಬಂದಾಗ ಉಂಟಾಗುವ ಪರಿಣಾಮ ಎನ್ನುವುದನ್ನು ಕಂಡುಕೊಂಡೆವು. ಇಂಥ ಹಲವಾರು ತರದ ಅರಿವುಗಳು ಮನುಷ್ಯನಿಗೆ ಹೇಗೆ ಸಾಧ್ಯವಾದುವು? ಎಲ್ಲ ಜ್ಞಾನವೂ ಇಂದ್ರಿಯ ಮೂಲವಾದುವು ಎಂಬ ನಂಬಿಕೆಯೊಂದು ಇತ್ತು. ಹೀಗೆ ನಂಬುವವರು ಈಗಲೂ ಇದ್ದಾರೆ. ನಮಗಿರುವುದು ದೃಷ್ಟಿ, ಶ್ರವಣ, ಘ್ರಾಣ, ಸ್ಪರ್ಶ, ಮತ್ತು ರುಚಿ ಎಂಬ ಐದು ಇಂದ್ರಿಯ ಶಕ್ತಿಗಳು. ಇವು ಕ್ರಮಾಗತವಾಗಿ ಕಣ್ಣು, ಕಿವಿ, ಮೂಗು, ಚರ್ಮ ಮತ್ತು ನಾಲಿಗೆ ಎಂಬ ಅಂಗಗಳ ಮೂಲಕ ಲಭ್ಯವಾಗುತ್ತವೆ. ಜ್ಞಾನಸಿದ್ಧಾಂತದ ಬೆಳವಣಿಗೆಯಲ್ಲಿ ಹದಿನೇಳನೆಯ ಶತಮಾನ ನೀಡಿದ ಕೊಡುಗೆ ಅಪಾರವಾದುದು. ಇಂಥ ಇಂದ್ರಿಯಮೂಲದ ಸಿದ್ಧಾಂತವೊಂದನ್ನು ಹದಿನೇಳನೆಯ ಶತಮಾನದಲ್ಲಿ ಇಂಗ್ಲಿಷ್ ತತ್ವಜ್ಞಾನಿ ಜಾನ್ ಲಾಕ್ ಪ್ರಚುರಪಡಿಸಿದ. ಆತ ಈ ಮೂಲಕ ವಿರೋಧಿಸಿದ್ದು ಫ್ರೆಂಚ್ ರೆನೆ ದೆಕಾರ್ತ್‌ನ ಪ್ರಜ್ಞಾವಾದವನ್ನು. ದೆಕಾರ್ತ್ ‘ಪ್ರಜ್ಞಾಪೂರ್ವಕ ಅನುಭವ’ ಎಂಬ ಪಣಾಳಿಕೆಯೊಂದನ್ನು ಮುಂದೊತ್ತಿದವನು ಹಾಗೂ ಆ ಮೂಲಕ ಮನಸ್ಸು ಎಂಬ ಘಟಕವೊಂದನ್ನು ಜ್ಞಾನಸಿದ್ಧಾಂತದ ಪ್ರಧಾನ ಭಾಗವಾಗಿ ಮಾಡಿದವನು. ಜಾನ್ ಲಾಕ್ ಹೇಳಿದ್ದು: ಇಂದ್ರಿಯಗಳಲ್ಲಿ ಈಗಾಗಲೇ ಇಲ್ಲದ್ದು ಮನಸ್ಸಿನಲ್ಲಿ ಇಲ್ಲ, ಎಂಬುದಾಗಿ. ಇದಕ್ಕೆ ಅದೇ ಕಾಲದ ಜರ್ಮನಿಯ ವಿಲ್ಹೆಲ್ಮ್ ಲೈಬ್ನಿಟ್ಸ್ ನೀಡಿದ ಉತ್ತರ ಸ್ವಾರಸ್ಯಕರವಾಗಿದೆ.
ಲೈಬ್ನಿಟ್ಸ್ ಅಂದುದು: ಇಂದ್ರಿಯಗಳಲ್ಲಿ ಈಗಾಗಲೇ ಇಲ್ಲದ್ದು ಮನಸ್ಸಿನಲ್ಲಿ ಇಲ್ಲ ನಿಜ, ಮನಸ್ಸೆಂಬುದು ಅಲ್ಲದೆ, ಎಂಬುದಾಗಿ. ಈ ಮೂಲಕ ಲೈಬ್ನಿಟ್ಸ್ ಮನಸ್ಸಿನ ಪ್ರಾಧಾನ್ಯತೆಯನ್ನು ಇನ್ನೊಮ್ಮೆ ಒತ್ತಿ ಹೇಳಿದಂತಾಯಿತು. ಈ ಚರ್ಚೆ ಸ್ವಾರಸ್ಯಕರವಾಗಿ ಮುಂದುವರಿಯುತ್ತ ಬಂದಿದೆ. ಆದರೆ ಇಂದಿನ ವಿಜ್ಞಾನ ಹೆಚ್ಚು ಹೆಚ್ಚು ನಂಬುವುದು ದೆಕಾರ್ತನ ಪ್ರಜ್ಞಾವಾದವನ್ನೇ. ಅರ್ಥಾತ್ ನಮ್ಮ ಜ್ಞಾನಾರ್ಜನೆಗೆ ಇಂದ್ರಿಯಗಳು ಅತ್ಯಗತ್ಯವಾದರೂ, ಅಷ್ಟೇ ಅಗತ್ಯ ಮನಸ್ಸು ಕೂಡಾ ಎಂಬ ತತ್ವವನ್ನು. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎನ್ನುವುದು ನಮ್ಮದೇ ಹಳೆಯ ಗಾದೆ. ಈ ತರದ ಪರಾಂಬರಿಕೆಗೆ ವೈಚಾರಿಕತೆಯ ಅಗತ್ಯವಿದೆ. ಪ್ರಜ್ಞೆಯೆಂದರೆ ಈ ವೈಚಾರಿಕತೆ. ವಾಸ್ತವದಲ್ಲಿ ಇದೇ ವಿಷಯವನ್ನು ‘ಸತ್ಯ’ವೆಂಬ ಪರಿಕಲ್ಪನೆಗೆ ಸಂಬಂಧಿಸಿ ಅರಿಸ್ಟಾಟಲ್ ಬಹಳ ಕಾಲ ಹಿಂದೆಯೇ ತನ್ನ ನಿಕೊಮಾಖಿಯನ್ ಎಥಿಕ್ಸ್ ಎಂಬ ನೀತಿಶಾಸ್ತ್ರದ ಕುರಿತಾದ ಪ್ರಬಂಧದಲ್ಲಿ ಹೇಳಿದ್ದಾನೆ. ಸತ್ಯವೆಂದರೆ ನಾವು ಗಮನಿಸಿದ್ದನ್ನು ವೈಚಾರಿಕತೆಯ ಒರೆಗೆ ಹಚ್ಚಿ ಸಿಕ್ಕಿದ್ದು ಎನ್ನುತ್ತಾನೆ ಅರಿಸ್ಟಾಟಲ್. ಆದರೆ ಲಾಕ್‌ನಂಥವರ ಅಭಿಪ್ರಾಯದಲ್ಲಿ ಈ ವೈಚಾರಿಕತೆಯೆಂದರೆ ನಾವು ಈಗಾಗಲೇ ಕಲೆಹಾಕಿದ ನಮ್ಮ ಹಿಂದಿನ ಐಂದ್ರಿಯ ಅನುಭವಗಳಲ್ಲದೆ ಇನ್ನೇನಲ್ಲ.
ಆದರೂ ಜ್ಞಾನವೆಂಬುದು ಕೇವಲ ಇಂದ್ರಿಯ ಮೂಲವಾದ್ದು ಎನ್ನುವುದನ್ನು ನಾವು ಹಲವಾರು ಉದಾಹರಣೆಗಳೊಂದಿಗೆ ವಿರೋಧಿಸಬಹುದು. ಕೇವಲ ಕಣ್ಣಿಗೆ ಕಂಡದ್ದು ನಿಜವಾಗುತ್ತಿದ್ದರೆ, ನಾವು ಚಂದ್ರನಲ್ಲಿಗೆ ಹೋಗುವುದಕ್ಕೆ ರಾಕೆಟನ್ನು ಯೋಚಿಸುತ್ತಿರಲಿಲ್ಲ, ದೊಡ್ಡದೊಂದು ಏಣಿಯನ್ನು ಹೊಸೆಯುತ್ತಿದ್ದೆವು ಎನ್ನುತ್ತಾನೆ ಒಬ್ಬ ವಿದ್ವಾಂಸ. ಯಾಕೆಂದರೆ, ನಮ್ಮ ಕಣ್ಣಿಗೆ ಚಂದ್ರ ಅಷ್ಟೇನೂ ದೂರವೆಂದು ತೋರುವುದಿಲ್ಲ, ಅದೂ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರ ಬಾಲ್ಕನಿಗೆ ಅತಿ ಹತ್ತಿರವಾಗಿ ಕಾಣಿಸುತ್ತಾನೆ! ಬೇಸಿಗೆಯ ಬಿಸಿಲಿಗೆ ಕಾಣಿಸುವ ಮರೀಚಿಕಾಜಲ ಜಲವೇ ಅಲ್ಲವಲ್ಲ. ಐಂದ್ರಜಾಲಕರು ನಮ್ಮ ಕಣ್ಣೆದುರಿಗೇ ನಡೆಸುವ ಹಲವು ಆಟಗಳು ಇಂಥ ದೃಷ್ಪಿಭ್ರಮೆಗೆ ಸಂಬಂಧಿಸಿದುವೇ. ದೃಷ್ಪಿ ಭ್ರಮೆಯನ್ನು ಸಾಧಿಸಿ ತೋರಿಸುವಂಥ ಹಲವು ತರದ ರೇಖಾಚಿತ್ರಗಳೂ ಇವೆ. ಭಾರತೀಯ ತತ್ವಮೀಮಾಂಸೆಯಲ್ಲಿ ಹಾವು ಮತ್ತು ಹಗ್ಗದ ಉದಾಹರಣೆ ಹಿಂದಿನಿಂದಲೂ ಚಾಲ್ತಿಯಲ್ಲಿರುವುದೇ. ನಾವು ಹಗ್ಗವನ್ನು ಕಂಡು ಹಾವೆಂದು ಭ್ರಮಿಸುತ್ತೇವೆ, ಅಥವಾ ಹಾವನ್ನು ಹಗ್ಗವೆಂದು ತಿಳಿದುಕೊಳ್ಳುತ್ತೇವೆ. ಇದರರ್ಥ ನಮ್ಮ ಕಣ್ಣುಗಳು ಕೆಲವು ಸಲವಾದರೂ ಮೋಸಹೋಗುತ್ತವೆ ಎಂದಲ್ಲವೇ? ಶ್ರವಣೇಂದ್ರಿಯವಾದರೂ ಯಾವಾಗಲೂ ನಮಗೆ ಸತ್ಯವನ್ನೇ ಹೇಳುತ್ತದೆಂದೇನೂ ಇಲ್ಲ. ಕೇವಲ ಕಾಲ ಸಪ್ಪಳದಿಂದ ಅಥವಾ ನುಡಿಯಿಂದ ನಾವು ಗುರುತಿನವರ ಪರಿಚಯ ಹಿಡಿಯುವುದಿದೆಯಾದರೂ ಇಲ್ಲಿ ಮೋಸಹೋಗುವ ಸಾಧ್ಯತೆ ಕಡಿಮೆಯೇನಲ್ಲ. ಅನುಕರಣ ಪಟುಗಳ ಯಾವ ಶಬ್ದ ಬೇಕಾದರೂ ಹೊರಗೆಡಹಬಲ್ಲರು. ನಾವು ಟೀವಿ, ಸಿನಿಮಾಗಳಲ್ಲಿ ಕೇಳುವ ವಿವಿಧ ಹಕ್ಕಿಗಳ ಸ್ವರಗಳಾಗಲಿ, ಕುದುರೆಗಳು ಖುರಪುಟಗಳಾಗಲಿ, ಗಾಳಿಯ ಬೀಸುವಿಕೆಯಾಗಲಿ ನೈಜವಲ್ಲ; ಇವನ್ನೆಲ್ಲ ಬೇರೆ ಬೇರೆ ರೀತಿಗಳಿಂದ, ಹೆಚ್ಚಾಗಿ ಅನುಕರಣ ಪಟುಗಳಿಂದ, ತಯಾರಿಸಿರುತ್ತಾರೆ. ಆದರೆ ಚಲಚ್ಚಿತ್ರ ನೋಡುತ್ತ ನಾವು ಇವೆಲ್ಲ ನೈಜಶಬ್ದಗಳೆಂದುಕೊಳ್ಳುತ್ತೇವೆ.
ನಮ್ಮ ಪಂಚೇಂದ್ರಿಯಗಳಲ್ಲೇ ಅತ್ಯುತ್ತಮವಾದ ಕಣ್ಣು ಮತ್ತು ಕಿವಿಯ ಕತೆ ಹೀಗಾದರೆ, ಇನ್ನುಳಿದವುಗಳ ಪಾಡೇನು? ನಿಜ, ನಾಲಿಗೆಯ ಮೂಲಕ ರುಚಿವ್ಯತ್ಯಾಸಗಳನ್ನೂ, ತ್ವಚೆಯ ಮೂಲಕ ಶಾಖ ಮತ್ತು ಸ್ಪರ್ಶವ್ಯೆವಿಧ್ಯಗಳನ್ನೂ, ನಾಸಿಕದ ಮೂಲಕ ವಾಸನಾಸೂಕ್ಷ್ಮಗಳನ್ನೂ ನಾವು ಅರಿತುಕೊಳ್ಳುತ್ತೇವೆ. ನಮ್ಮ ನಾಗರಿಕತೆಯ ಬೆಳವಣಿಗೆಗೆ ಇವೆಲ್ಲವೂ ತಂತಮ್ಮ ಕೊಡುಗೆಗಳನ್ನು ನೀಡಿರಬಹುದಾದರೂ ಇವೆಲ್ಲವೂ ಅತ್ಯಲ್ಪ. ಮುಖ್ಯವಾಗಿ ನಮ್ಮ ಐಂದ್ರಿಯ ಜ್ಞಾನಗಳು ವೈಯಕ್ತಿಕವಾಗಿರುವುದರಿಂದ ಇವನ್ನು ನಿಖರ ಭಾಷೆಗೆ ಅಳವಡಿಸುವುದಕ್ಕೆ ವಿಜ್ಞಾನದ ಮಾಪಕಗಳು ಬೇಕಾಗುತ್ತವೆ. ಉದಾಹರಣೆಗೆ, ನಮಗೆ ಸೆಕೆಯಾಗುತ್ತದೆ, ಚಳಿಯಾಗುತ್ತದೆ. ಆದರೆ ಸೆಕೆ ಮತ್ತು ಚಳಿ ಎಂಬ ಐಂದ್ರಿಯಾನುಭವಗಳು ನಿಜಕ್ಕೂ ಸಾಪೇಕ್ಷವಾದುವು. ಮಾತ್ರವಲ್ಲ, ವ್ಯಕ್ತಿಯಿಂದ ವ್ಯಕ್ತಿಗೆ ಅವು ಬದಲಾಗಿಯೂ ಇರಬಹುದು. ಅರ್ಥಾತ್, ನಿಮಗೆ ಸೆಕೆಯೆನಿಸಿದಾಗೆಲ್ಲ ನನಗೆ ಹಾಗನಿಸಬೇಕಾದ್ದಿಲ್ಲ. ಆದ್ದರಿಂದ ಉಷ್ಣತಾಮಾನವನ್ನು ಅಳೆದು ನೋಡುವುದಕ್ಕೆ ನಮ್ಮ ಐಂದ್ರಿಯಾನುಭವದ ಹಂಗಿಲ್ಲದ ಮಾಪಕ ಅಗತ್ಯವಾಗುತ್ತದೆ. ಇಂಥ ಮಾಪಕಗಳನ್ನು ವಿಜ್ಞಾನ ಈಗಾಗಲೇ ಆವಿಷ್ಕರಿಸಿಕೊಂಡಿದೆ. ಆದರೆ ರುಚಿಯನ್ನು ಹೀಗೆ ಅಳೆಯುವಂಥ ಮಾಪಕವೇ ಇಲ್ಲ! ರುಚಿಯ ಕುರಿತಾದ ಒಮ್ಮತ ತೋರಮಟ್ಟಿನದು. ಇಂದ್ರಿಯಗಳೇ ನಮ್ಮ ಜ್ಞಾನಮೂಲವಾಗಿದ್ದರೆ ನಮಗೂ ಇತರ ಪ್ರಾಣಿಗಳಿಗೂ ಹೆಚ್ಚಿನ ವ್ಯತ್ಯಾಸವೇ ಇರುತ್ತಿರಲಿಲ್ಲ. ಯಾಕೆಂದರೆ ನಮ್ಮಂಥವೇ ಪಂಚೇಂದ್ರಿಯಗಳು ಎಲ್ಲಾ ಪ್ರಾಣಿಗಳಿಗೂ ಇವೆ. ಉದಾಹರಣೆಗೆ, ನಾಯಿ ಬೆಕ್ಕುಗಳು ನೋಡಬಲ್ಲವು, ಕೇಳಬಲ್ಲವು, ಮೂಸಬಲ್ಲವು, ಸ್ಪರ್ಶಿಸಬಲ್ಲವು, ಹಾಗೂ ರುಚಿನೋಡಬಲ್ಲವು. ಕೆಳವರ್ಗದ ಜೀವಿಗಳಲ್ಲಿ ಮಾತ್ರವೇ ಕೆಲವಕ್ಕೆ ಕಿವಿಯಿಲ್ಲ (ಹಾವುಗಳು), ಕೆಲವಕ್ಕೆ ಕಣ್ಣಿಲ್ಲ (ಬಾವಲಿಗಳು). ಆದರೆ ಈ ಪಂಚೇಂದ್ರಿಯಗಳಿರುವ ಮೇಲ್ವರ್ಗದ ಪ್ರಾಣಿಗಳು ಯಾಕೆ ನಾಗರಿಕತೆಯನ್ನು ಬೆಳೆಸಿಕೊಂಡಿಲ್ಲ? ಅದರಲ್ಲೂ ಇವುಗಳಲ್ಲಿ ತೋಳ, ನಾಯಿ ಮುಂತಾದುವಕ್ಕೆ ಮನುಷ್ಯರಿಗಿಂತಲೂ ಸೂಕ್ಷ್ಮವಾದ ಶ್ರವಣ ಶಕ್ತಿಯೂ, ಹುಲಿ, ಬೆಕ್ಕು ಮುಂತಾದುವಕ್ಕೆ ಹೆಚ್ಚಿನ ದೃಷ್ಟಿ ಶಕ್ತಿಯೂ ಇರುತ್ತ?
ಇದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದಾದರೂ, ಮುಖ್ಯವಾದ ಕಾರಣವೆಂದರೆ ಮನುಷ್ಯನಿಗೆ ನಿಸರ್ಗದತ್ತವಾಗಿ ಒದಗಿದ ಭಾಷೆ. ಇದು ಹೊರರೂಪದಲ್ಲಿ ಸಾಮಾಜಿಕವೆಂದು ತೋರಿದರೂ, ಮೂಲತಃ ಮನುಷ್ಯವರ್ಗಕ್ಕೆ ಯಾವ ಭೇದಭಾವವೂ ಇಲ್ಲದೆ ಸಮಾನವಾದುದು. ಹಾಗೂ ಮನುಷ್ಯ ಬಾಷೆಯಷ್ಟು ಶಕ್ತವಾದ ಸಂಜ್ಞಾವಿಧಾನವೊಂದು ಈ ಲೋಕದಲ್ಲಿ ಬೇರೆ ಯಾವ ಜೀವಿಗಳಲ್ಲೂ ಇಲ್ಲ. ಇಂಥ ಭಾಷೆಯೊಂದು ಇಲ್ಲದಿರುತ್ತಿದ್ದರೆ ಮನುಷ್ಯರಿಗೂ ಇತರ ಪ್ರಾಣಿಗಳಿಗೂ ವ್ಯತ್ಯಾಸವೇ ಇರುತ್ತಿರಲಿಲ್ಲ-ಯಾಕೆಂದರೆ, ಆಗ ಯಾವ ಜ್ಞಾನವರ್ಧನೆಯಾಗಲಿ, ಆ ಮೂಲಕವಾದ ನಾಗರಿಕತೆಯಾಗಲಿ ಸಾಧ್ಯವಾಗುತ್ತಿರಲಿಲ್ಲ. ಭಾಷೆಯನ್ನಾಡುವುದಕ್ಕೆ ನಾವು ಕಿವಿ ಬಾಯಿ ಉಪಯೋಗಿಸುತ್ತಿದ್ದರೂ ಅದೇನೂ ಶ್ರವಣೇಂದ್ರಿಯದ್ದಾಗಲಿ, ನಾಲಿಗೆಯದ್ದಾಗಲಿ ಮುಖ್ಯ ಕೆಲಸವಲ್ಲ. ಭಾಷೆ ಈ ಅಂಗಗಳನ್ನು ಉಪಯೋಗಿಸಿಕೊಳ್ಳುತ್ತದೆ ಅಷ್ಟೆ. ಈ ನೈಸರ್ಗಿಕ ಭಾಷೆಯಿಂದಾಗಿಯೇ ಮನುಷ್ಯನ ಸಂಕೇತಗಳ ಮಹಾ ಆವಿಷ್ಕಾರಿಯಾಗಿ ಬೆಳೆಯುವುದೂ ಸಾಧ್ಯವಾಯಿತು. ಆದ್ದರಿಂದಲೇ ಹಲವು ಭಾಷೆಗಳಿಗೆ ಅಕ್ಷರ ಸಂಕೇತಗಳೂ ಸೃಷ್ಟಿಯಾದುವು. ಅಕ್ಷರಭಾಷೆಯನ್ನು ಓದಿ ಬರೆದು ಮಾಡುವುದಕ್ಕೆ ನಾವು ಮತ್ತೆ ಅದೇ ಬಾಯಿ ಕಣ್ಣು ಕಿವಿಗಳನ್ನು ಉಪಯೋಗಿಸುತ್ತೇವೆ. ಗಣಿತ, ಭೌತವಿಜ್ಞಾನ, ಸದ್ಯದ ಕಂಪ್ಯೂಟರ್ ಮುಂತಾದುವು ಕೂಡಾ ‘ಭಾಷೆ’ಗಳೇ; ಆದರೆ ಇವನ್ನು ನಾವು ನೈಸರ್ಗಿಕ ಭಾಷೆಗಳೆಂದು ಕರೆಯುವುದಿಲ್ಲ. ಇವೆಲ್ಲ ನಾವು ಸಂವರ್ಧಿಸಿಕೊಂಡಂಥ ಸಂಜ್ಞಾವಿಧಾನಗಳು. ನೈಸರ್ಗಿಕ ಭಾಷೆಗಳೆಂದರೆ ಮನುಷ್ಯರಿಗೆ ಹುಟ್ಟನಿಂದಲೂ ಬಂದಂಥ ಹಾಗೂ ಸರ್ವರಿಗೂ ಸಮನಾದಂಥ ಒಂದು ಸೃಜನಾತ್ಮಕ ಶಕ್ತಿ. ಆಧುನಿಕ ಭಾಷಾವಿಜ್ಞಾನದಲ್ಲಿ ಪ್ರಖ್ಯಾತನಾದ ನೋಮ್ ಚಾಮ್‌ಸ್ಕಿಯ ಪ್ರಕಾರ, ಭಾಷೆಗೆ ಕಾರಣ ಮನುಷ್ಯನಿಗೆ ಜನ್ಮತಃ ಒದಗುವ ಲೋಕವ್ಯಾಕರಣ ತತ್ವ ಎಂದರೆ, ಸಕಲ ಮಾನವ ಭಾಷೆಗಳಿಗೂ ಮೂಲವಾದ ಭಾಷಾತತ್ವ. ಹಾಗೂ ಇದು ಮನುಷ್ಯನ ಮನೋಮತ್ತಿಷ್ಕದ ಒಂದು ಭಾಗ ಎನ್ನುತ್ತಾನೆ ಚಾಮ್‌ಸ್ಕಿ.
ಕೇವಲ ‘ಅನುಭವ’ದ ಮೂಲಕ ನಾವು ನಮ್ಮ ಹಲವಾರು ಜ್ಞಾನಗಳನ್ನು ಗಳಿಸುವುದು ಸಾಧ್ಯವಿಲ್ಲದ ಸಂಗತಿ. ಹದಿನೈದನೆಯ ಶತಮಾನದಲ್ಲಿ ಕಾಪರ್ನಿಕಸ್ ಜಗತ್ತು ಭೂಕೇಂದ್ರಿತವಲ್ಲ, ಸೂರ್ಯಕೇಂದ್ರಿತ ಎಂದು ಪ್ರತಿಪಾದಿಸಿದ. ಅಂದಿನ ಕಾಲಕ್ಕೆ ಇದೊಂದು ಭಾರೀ ಕ್ರಾಂತಿಕಾರಿ ವಿಚಾರವಾಗಿದ್ದಿತು. ಆದ್ದರಿಂದಲೇ ಇದನ್ನು ನಾವು ಕಾಪರ್ನಿಕನ್ ಕ್ರಾಂತಿ ಎನ್ನುತ್ತೇವೆ. ಇಂಥದೊಂದು ವಿಚಾರ ಯಾವುದೇ ಮನುಷ್ಯನಿಗೆ ಸ್ವಾನುಭವದ ಮೂಲಕ ಬರುವುದು ಅಸಾಧ್ಯ. ಅದೇ ರೀತಿ ನ್ಯೂಟನ್ ಕಂಡುಹಿಡಿದ ಗುರುತ್ವಾಕರ್ಷಣ ಶಕ್ತಿ ಕೂಡಾ. ಪ್ರತಿಯೊಂದು ವಸ್ತುವಿಗೂ ಗುರುತ್ವಾಕರ್ಷಣವಿದೆ. ಅದರಲ್ಲೂ ಗ್ರಹ ಉಪಗ್ರಹಗಳಿಗೆ ಇದು ಜಾಸ್ತಿ. ಭೂಮಿಯ ಮೇಲೆ ಮರದಿಂದ ಸೇಬು ಕೆಳಗೆ ಬೀಳುವುದಕ್ಕೆ ಭೂಮಿಯ ಗುರುತ್ವಾಕರ್ಷಣ ಶಕ್ತಿ ಕಾರಣ ಎಂದ ನ್ಯೂಟನ್. ಭೂಮಿಯ ಮೇಲೆಯೇ ಇರುವ ನಾವು ಭೂಮಿಯ ಗುರುತ್ವಾಕರ್ಷಣೆಗೆ ಸದಾಕಾಲ ಒಳಗಾಗಿದ್ದರೂ, ನಮಗಿದು ‘ಸ್ವಾನುಭವ’ವೆಂದು ಹೇಳುವಂತಿಲ್ಲ. ನೀರಿನಲ್ಲಿರುವ ಮೀನಿಗೆ ನೀರು ಸ್ವಾನುಭವವೇ? ಇಲ್ಲ, ನೀರಿನಿಂದ ಹೊರಬಂದಾಗಲೇ ಅದಕ್ಕೆ ನೀರಿನ ಅರಿವಾಗುವುದು. ಅದೇ ರೀತಿ ಮನುಷ್ಯನಿಗೂ. ಆದ್ದರಿಂದ ನ್ಯೂಟನ್ ತನ್ನ ಸ್ವಾನುಭವದಿಂದ ಗುರುತ್ತಾಕರ್ಷಣೆಯ ಸಿದ್ಧಾಂತವನ್ನು ಕಂಡುಹಿಡಿದ ಎನ್ನುವಂತಿಲ್ಲ.
ಹಾಗಿದ್ದರೆ ವೈಜ್ಞಾನಿಕ ಸಂಶೋಧನೆಗಳು ಹೇಗಾಗುತ್ತವೆ ಎಂದು ಕೇಳಬಹುದು. ವಿಜ್ಞಾನಿಯ ಮನಸ್ಸಿನಲ್ಲೊಂದು ಆರಂಭಿಕ ಕಲ್ಪನೆ ಕುಡಿಯೊಡೆಯಬೇಕು. ಹೀಗೆ ಕುಡಿಯೊಡೆಯುವುದಕ್ಕೆ ಆತನ ಮನಸ್ಸನ್ನು ಸಮಸ್ಯೆಯೊಂದು ಕೆಣಕುತ್ತಿರಬೇಕು. ನ್ಯೂಟನಿಗೆ ಸೇಬು ಯಾಕೆ ಕೆಳಗೇ ಬೀಳುತ್ತದೆ, ಯಾಕೆ ಅದು ಮೇಲಕ್ಕೆ ಹೋಗುವುದಿಲ್ಲ ಎನ್ನುವುದು ಒಂದು ಸಮಸ್ಯೆಯಾಗಿದ್ದಿತು. ಇಂಥ ಸಮಸ್ಯೆಯನ್ನು ಬಿಡಿಸುವ ಹಾದಿಯಲ್ಲಿ ವಿಜ್ಞಾನಿ ಊಹಾಸಿದ್ಧಾಂತವನ್ನು (hypothesis) ಮಾಡಿಕೊಳ್ಳುತ್ತಾನೆ. ಆ ನಂತರದ ಕೆಲಸವೆಂದರೆ ಈ ಊಹಾಸಿದ್ಧಾಂತ ಗೊತ್ತಿರುವ ಇತರೆಲ್ಲ ಸಂಗತಿಗಳೊಂದಿಗೆ ಹೊಂದಿಕೊಳ್ಳುತ್ತದೋ ಇಲ್ಲವೋ ಎಂಬುದನ್ನು ಪರೀಕ್ಷೆಮಾಡಿ ನೋಡುವುದು. ಹೀಗೆ ಊಹಾಸಿದ್ಧಾಂತಗಳನ್ನು ಕಲ್ಪಿಸುವುದಕ್ಕಾಗಲಿ ಅವುಗಳನ್ನು ಓರೆ ಹಚ್ಚಿನೋಡುವುದಕ್ಕಾಗಲಿ ಭಾಷೆ ಅತ್ಯಗತ್ಯ. ಅರ್ಥಾತ್ ಭಾಷೆಯಿಲ್ಲದೆ ವೈಚಾರಿಕತೆಯಿಲ್ಲ. ಆದರೆ ವಿಜ್ಞಾನದಲ್ಲಿ ಯಾವುದೂ ಅಂತಿಮವಲ್ಲ. ಎಲ್ಲವೂ ತತ್ಕಾಲಕ್ಕೆ ಹೊಂದಿಕೊಳ್ಳುವ ಸತ್ಯ. ಆದ್ದರಿಂದ ನಾವು ನಮ್ಮ ಕಲ್ಪನಾಶಕ್ತಿಯನ್ನು ಸೃಜನಾತ್ಮಕವಾಗಿ ಇಟ್ಟುಕೊಳ್ಳುವುದು ಅಗತ್ಯ. ನಾವು ಕಟ್ಟುವ ಕತೆಗಳು, ಕಾಣುವ ಕನಸುಗಳು, ಬರೆಯುವ ಚಿತ್ರಗಳು, ಕಲ್ಪಿಸುವ ಅತೀಂದ್ರಿಯ ಲೋಕಗಳು, ಆಡುವ ಆಟಗಳು, ಕೆತ್ತುವ ಶಿಲ್ಪಗಳು, ಒಟ್ಟಾರೆ ಕಲೆಗಳು ಹಾಗೂ ಹೊಸೆಯುವ ಸುಳ್ಳುಗಳೂ ಕೂಡಾ ಇದಕ್ಕೆ ಸಹಾಯಕವೇ!
ಚಾಮ್‌ಸ್ಕಿ ಹೇಳುವ ಭಾಷೆಗೆ ಸಂಬಂಧಿಸಿ ದತ್ತವಾದ ಸೃಜನಶಕ್ತಿಗೂ ನಾವು ಸಾಮಾನ್ಯವಾಗಿ ಕಲೆಗೆ ಸಂಬಂಧಿಸಿ ಹೇಳುವ ಸೃಜನಶೀಲತೆಗೂ ವ್ಯತ್ಯಾಸವಿದೆ. ಲೋಕವ್ಯಾಕರಣ ಎಲ್ಲರಿಗೂ ಒದಗಿಸುವ ಸೃಜನಶಕ್ತಿ ಬಾಲ್ಯಕಾಲದ ಆರಂಭದಲ್ಲಿದ್ದು ನಾವು ಸಾಮಾಜಿಕ ಭಾಷೆ ಕಲಿಯುವುದಕ್ಕೆ ಸಹಕರಿಸಿ ನಂತರ ಹಿಂದಕ್ಕೆ ನಿಶ್ಚಲವಾಗಿಬಿಡುತ್ತದೆ. ಕಲೆ ಹಾಗೂ ವೈಜ್ಞಾನಿಕ ಸಂಶೋಧನೆ ಮುಂತಾದ ಸಂದರ್ಭದಲ್ಲಿ ನಾವು ಗುರುತಿಸುವ ಸೃಜನಶೀಲತೆ ಇನ್ನೊಂದು ರೀತಿಯದು. ಆದರೂ ಇದಕ್ಕೂ ಭಾಷೆಯ ಸಹಾಯ ಬೇಕೇಬೇಕು. ಭಾಷೆಯಿಲ್ಲದೆ ಸಾಹಿತ್ಯವಾಗಲಿ, ವಿಜ್ಞಾನವಾಗಲಿ, ಯಾವುದೇ ನಾಗರಿಕ ಅಭಿವೃದ್ದಿಯಾಗಲಿ ಅಸಾಧ್ಯ. ಯಾಕೆಂದರೆ ಇವೆಲ್ಲಕ್ಕೂ ಕಲ್ಪನಾಶಕ್ತಿಯನ್ನು ಪ್ರಚೋದಿಸುವಂಥ ಭಾಷೆ ಅತ್ಯಗತ್ಯ. ಭಾಷೆ ಬೇಡ, ಗಣಿತ ಸಾಕು ಎನ್ನುವುದು ಬರೀ ಮೂರ್ಖತನ.
ಕಲ್ಪನಾಶಕ್ತಿಯನ್ನೂ ಸೃಜನಶೀಲತೆಯನ್ನೂ ನಾಶಪಡಿಸುವಂಥ ಜಡಸ್ಥಿತಿಯೊಂದಿದೆ. ಅದೆಂದರೆ ಮೂಲಭೂತವಾದ; ಅಂತೆಯೇ ಬದ್ಧತೆಯ ಕುರಿತಾದ ಘೋಷಣೆ ಕೂಡಾ. ಇವು ಇರುವಲ್ಲೆಲ್ಲ ಭಯದ ವಾತಾವರಣವಿರುತ್ತದೆ. ಸ್ವೀಕೃತ ಸಿದ್ಧಾಂತಗಳ ವಿರುದ್ಧವಾಗಿ ಮಾತಾಡುವುದಕ್ಕಾಗಲಿ, ಯೋಚಿಸುವುದಕ್ಕಾಗಲಿ ಅಸಾಧ್ಯವೆನ್ನಿಸುವ ವಾತಾವರಣ ಇದು ಮತ್ತು ಒಂದಲ್ಲ ಒಂದು ರೀತಿಯಲ್ಲಿ ಇಂಥ ವಾತಾವರಣ ಇಲ್ಲದ ಜಾಗವೇ ಇಲ್ಲ ಎಂದು ಕೂಡಾ ಹೇಳಬಹುದು. ಆದ್ದರಿಂದಲೆ ಸೃಜನಕ್ರಿಯೆ ಸಾವಿರ ವರ್ಷಗಳ ಏಕಾಂತ, ಆದರೆ ಪ್ರತ್ಯೇಕತೆಯಲ್ಲ. ಇದನ್ನು ಜನ ಅರ್ಥಮಾಡಿಕೊಳ್ಳಬೇಕು.
*****