Home / ಕಥೆ / ಸಣ್ಣ ಕಥೆ / ಯಾವ ಜನ್ಮದ ವೈರಿ ನೀನು?

ಯಾವ ಜನ್ಮದ ವೈರಿ ನೀನು?

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ.

“ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ

“ಅವನದ್ದು ಯಾವಾಗಲೂ ಗಲಾಟೇನೇ. ಹಸಿವೆಯಂತೆ. ಎದುರಲ್ಲೇ ಇದೆಯಲ್ಲ ಅವನ ಮಾವನ ಹೋಟೇಲು. ಏನಾದರೂ ತಿಂದು ಬರುತ್ತಾನಂತೆ. ಆ ಭಟ್ರು ಇಲ್ಲೊಂದು ಹೊಟೇಲು ಹಾಕಿ ನನ್ನ ಪರ್‍ಸಿಗೊಂದು ತೂತು ಕೊರೆದರು.”

“ಅವನಿಗೆ ಅಲ್ಲಿಯ ತಿಂಡಿ ಅಂದರೆ ಅಷ್ಟು ಇಷ್ಟಾನ?

“ಅವನಿಗೆ ಒಳ್ಳೆ ತಿಂಡಿ ಯಾರು ಕೊಟ್ಟರೂ ಇಷ್ಟವೇ. ಮನೆಯಲ್ಲೂ ಅಷ್ಟೇ ಅವನಿಗೆ ಏನು ತಿನ್ನಬೇಕೆಂದು ಅನಿಸುತ್ತದೋ ಅದನ್ನು ತಕ್ಷಣ ಮಾಡಿ ಕೊಡಬೇಕು. ಇಲ್ಲವಾದರೆ ನನ್ನ ಬೆನ್ನು ಬಿಡುವುದಿಲ್ಲ. ನಾನು ಕೆಲಸ ಮಾಡುತ್ತಿರುವಾಗಲೂ ನನ್ನ ಹಿಂದೆ ಹಿಂದೆ ತಿರುಗಿಕೊಂಡು, ಏನಾದರೂ ಮಾಡುತ್ತಿದ್ದರೆ ಅದನ್ನು ಅಲ್ಲಲ್ಲೇ ತಿಂದುಕೊಂಡು ಬಾಯಿ ಚಪ್ಪರಿಸಿಕೊಂಡು ಅದರ ರುಚಿಯನ್ನು ಆಸ್ವಾದಿಸುವುದನ್ನು ನೋಡುವಾಗ ನನ್ನ ಶ್ರಮ ಸಾರ್‍ಥಕವೆನಿಸುತ್ತದೆ. ಅವನು ಕೇಳಿದ್ದನ್ನೆಲ್ಲಾ ಮಾಡಿಕೊಡುವಾ ಎಂದೆನಿಸುತ್ತದೆ. ಅವನಿಗೆ ನಾನೆಂದರೆ ಆಯ್ತು. ಇಷ್ಟು ದೊಡ್ಡವನಾಗಿಯೂ ನಮ್ಮ ಜತೆಗೇ ಮಲಗುತ್ತಾನೆ. ನನ್ನನ್ನು ಬಿಟ್ಟು ಒಂದು ನಿಮಿಷ ಇರಲಾರ. ಶಾಲೆಗೆ ಹೋದಾಗ ಮಾತ್ರ ದೂರವಿರುತ್ತಾನೆ.”

ಸುಮಾ, ಕನಸಿನಲ್ಲಿದ್ದಂತೆ ನುಡಿದಾಗ ಅಲ್ಲೇ ಇದ್ದ ಗಿರಿಜಾ, “ನೀವು ಗಂಡು ಮಗನನ್ನು ಇಷ್ಟೊಂದು ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ನಾಳೆ ಅವನು ನಿಮ್ಮಿಂದ ದೂರವಾದರೆ ನಿಮಗೆ ತುಂಬಾ ಕಷ್ಟವಾಗುತ್ತದೆ. ಹೆಂಡತಿ ಬಂದಮೇಲೆ ಗಂಡು ಮಗ ಗಂಡುಮಗನೇ. ನಿಮ್ಮ ಸೆರಗುಬಿಟ್ಟು ಹೆಂಡತಿಯ ಸೆರಗು ಹಿಡಿದುಕೊಂಡು ತಿರುಗಾಡುತ್ತಾನೆ ಅಷ್ಟೆ”

“ಈಗಿನ ಹೆಣ್ಣು ಮಕ್ಕಳಿಗೆ ಸೆರಗೆಲ್ಲಿರುತ್ತದೆ? ಅವರ ಹಾಗೇ ಪ್ಯಾಂಟು ಶರ್‍ಟು.” ಆಗ ಅಮ್ಮನ ಸೆರಗೇ ಬೇಕು ಕೈ ಒರಸಲು”

ದಿನಕರ ನಗುತ್ತಾ ತಮಾಷೆ ಮಾಡಿದಾಗ ಸುಮಾ ಗಂಭೀರವಾಗಿ, “ನನ್ನ ಮಗ ಹಾಗೆ ಮಾಡಲಿಕ್ಕಿಲ್ಲ. ನಾನೆಂದರೆ ಜೀವ ಅವನಿಗೆ. ನಾನಿಲ್ಲದೆ ಅವನಿಗೆ ನಿದ್ದೆಯೂ ಬರುವುದಿಲ್ಲ.”

“ಹೌದು, ಹೌದು, ಎಲ್ಲ ಗಂಡು ಮಕ್ಕಳು ಹಾಗೇ, ಮೀಸೆ ಬರುವ ತನಕ ತಾಯಿಯೇ ಅವರ ಪ್ರಪಂಚ. ಆಮೇಲೆ ಎಲ್ಲ ಬದಲಾಗುತ್ತಾರೆ. ಸುಮಾ, ನೀವು ಮಗನ ಮೇಲೆ ಇಷ್ಟು ಆಸೆ ಇಟ್ಟುಕೊಂಡಿರೋದು ಒಳ್ಳೆಯದಲ್ಲ. ಆಮೇಲೆ ಮಗನಿಂದ ದೂರವಾಗುವ ಪ್ರಮೇಯ ಬಂದರೆ ನಿಮ್ಮಿಂದ ತಡೆಯಲಾಗಲಿಕ್ಕಿಲ್ಲ. ಈಗಿನಿಂದಲೇ ಸ್ವಲ್ಪ ಡಿಟ್ಯಾಚ್‌ಮೆಂಟ್‌ ಬೆಳೆಸಿಕೊಂಡರೆ ಒಳ್ಳೆಯದು.”

“ಅದು ಹೇಗಾಗುತ್ತದೆ ಗಿರಿಜಾ? ಬ್ಯಾಂಕು ಬಿಟ್ಟಮೇಲೆ ಅವನೇ ನನ್ನ ಪ್ರಪಂಚ. ನಮ್ಮ ಮನೆಯ ಜೀವಂತಿಕೆಯ ಸಂಕೇತ ಅವನೇ.”

“ಮಕ್ಕಳೆಂದರೆ ಎಲ್ಲರಿಗೂ ಹಾಗೇನೇ. ಆದರೆ ನೀವು ಸುತ್ತಲಿರುವ ಅವಸ್ಥೆ ನೋಡ್ತಿದ್ದೀರಲ್ಲ? ಮಕ್ಕಳು ದೊಡ್ಡವರಾದ ಮೇಲೆ ಕೈಗೆ ಸಿಗೋದು ಕೆಲವೇ ಪುಣ್ಯವಂತರಿಗೆ ನಿಮಗೆ ಹಾಗಾಗುವುದು ಬೇಡ. ಆದರೆ ಯಾವಾಗಲೂ ಒಳ್ಳೆಯದನ್ನೇ ನಿರೀಕ್ಷಿಸುತ್ತಾ ಕೆಟ್ಟದ್ದನ್ನು ಎದುರಿಸಲು ಸಿದ್ಧವಾಗಿರುವುದು ಮೇಲಲ್ಲವೇ?”

“ಹೌದು, ಆದರೆ ಹಾಗೇನೂ ಆಗದಿರಲಿ ಎಂದು ದೇವರೊಡನೆ ಬೇಡ್ತೇನೆ. ಹೇಗೂ ಈಗ ವಾರಕ್ಕೆ ಮೂರುದಿನ ಉಪವಾಸ ಮಾಡ್ತಿದ್ದೇನೆ. ಇನ್ನು ಈ ವರಪ್ರಾಪ್ತಿಗಾಗಿ ಇನ್ನೊಂದು ದಿನ ಮಾಡುತ್ತೇನೆ. ದೇವರೆಂದಿಗೂ ನನ್ನ ಕೈಬಿಡಲಾರ. ನನ್ನ ಮಗ ನಾನು ಸಾಯುವವರೆಗೂ ನನ್ನವನಾಗಿಯೇ ಉಳಿಯಬೇಕು.”

ಗಿರಿಜಾ ಹೆಚ್ಚಿಗೆ ಹೇಳಲಾಗದೇ ಮೌನವಾಗಿದ್ದಳು. ಸುಮಾಳಿಗೆ ದೇವರ ಮೇಲೆ ಅಪಾರ ಭಕ್ತಿ. ಸೋಮವಾರ ಈಶ್ವರ ದೇವಸ್ಥಾನ, ಮಂಗಳವಾರ ಮಂಗಳಗೌರಿ, ಗುರುವಾರ ರಾಘವೇಂದ್ರಸ್ವಾಮಿ, ಶುಕ್ರವಾರ ದೇವಿ, ಶನಿವಾರ ಆಂಜನೇಯ ಎಂದು ಯಾವಾಗ ನೋಡಿದರೂ ದೇವಸ್ಥಾನಗಳಿಗೆ ಹೋಗಿ ಬರುವ ನಿಯಮವನ್ನಿರಿಸಿಕೊಂಡಿದ್ದಳು. ಅವಳ ಜತೆಗೆ ಅವಳ ಪತಿ ಹೋಗುತ್ತಿರಲಿಲ್ಲ. ಮಗಳು ಒಮ್ಮೊಮ್ಮೆ ಹೋಗುತ್ತಿದ್ದಳು. ಆದರೆ ಪ್ರಹ್ಲಾದ ಸದಾ ಜತೆಗಿರುತ್ತಿದ್ದ.

ಸುಮಾ ತನ್ನ ಜತೆಗೆ ಮಗನನ್ನು ದೇವಸ್ಥಾನಗಳಿಗೆ ಸುತ್ತು ಹಾಕಿಸುವುದನ್ನು ತಿಳಿದಿದ್ದ ಗಿರಿಜಾ ಒಮ್ಮೆ.

“ನೀವು ದೇವಸ್ಥಾನ ಸುತ್ತುವುದು ಸರಿ. ಆ ಮಗುವನ್ನೇಕೆ ನಿಮ್ಮ ಜತೆ ಸುತ್ತಿಸುತ್ತೀರಿ? ದೇವಸ್ಥಾನ ಸುತ್ತಿಸಿ ಸುತ್ತಿಸಿ ಅವನನ್ನೂ ಸನ್ಯಾಸಿ ಮಾಡುವಿರಾ ಹೇಗೆ? ನಿಮ್ಮ ಜತೆ ವಾರದ ಐದು ದಿನ ಐದು ಸಂಜೆಗಳನ್ನು ಅವನು ದೇವಸ್ಥಾನಗಳಿಗೆ ಭೇಟಿಕೊಡುವುದರಲ್ಲೇ ಕಳೆಯುತ್ತಾನೆ. ಅವನು ಅವನ ಜತೆಯ ಮಕ್ಕಳೊಡನೆ ಆಡುವುದು ಯಾವಾಗ?”

“ಅಯ್ಯೋ ಬಿಡಿ, ಅವನಿಗೆ ಮಕ್ಕಳೊಡಗೂಡಿ ರಸ್ತೆಯಲ್ಲಿ ಆಡುವುದೆಂದರೆ ಆಗುವುದಿಲ್ಲ. ನೀವು ಹೀಗೆ ಹೇಳ್ತಿರಲ್ಲ? ನನಗಿಂತ ಅವನಿಗೇ ಭಕ್ತಿ ಜಾಸ್ತಿ. ತಿಂಗಳಿಗೆ ಮೂರು ದಿನ ದೇವಸ್ಥಾನಕ್ಕೆ ನನಗೆ ಹೋಗಲಾಗದಿದ್ದರೆ ಅವನು ಏನೋ ಕಳಕೊಂಡಂತೆ ಒದ್ದಾಡುತ್ತಿರುತ್ತಾನೆ. ಆಗ ತಂದೆಯನ್ನು ಒತ್ತಾಯದಿಂದ ಎಬ್ಬಿಸಿ ದೇವಸ್ಥಾನಕ್ಕೆ ಹೋಗಿ ಬರುತ್ತಾನೆ. ಏನು ಭಕ್ತಿಯೋ? ನಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಅಷ್ಟೇ. ಅವನು ಈಗಲೇ ವಿಷ್ಣು ಸಹಸ್ರ ನಾಮ ಓದುತ್ತಾನೆ. ೧೦೦೮ ನಾಮಗಳನ್ನು ಅವನು ಉಚ್ಚರಿಸುವುದನ್ನು ನೀವು ಕೇಳಬೇಕು. ಮೈ ಜುಂ ಅನ್ನಿಸುತ್ತದೆ.”

“ಪ್ರಹ್ಲಾದ ಎಂದು ಹೆಸರಿಟ್ಟುದ್ದಕ್ಕೆ ಸರಿಯಾಗಿದ್ದಾನೆ ಬಿಡಿ, ಅವನೂ ವಿಷ್ಣು ಭಕ್ತ. ಇವನೂ ವಿಷ್ಣು ಭಕ್ತ. ಕೆಲವೊಮ್ಮೆ ಹೆಸರುಗಳು ಹೇಗೆ ಹೊಂದಿಕೊಳ್ಳುತ್ತವೆ ನೋಡಿ. ಐಶ್ವರ್‍ಯ ಎಂದು ಹೆಸರಿಟ್ಟರೆ ಐಶ್ವರ್‍ಯದ ಹೊಳೆ ಹರಿದು ಬಂದಂತೆ. ನಾವು ಮಕ್ಕಳಿಗೆ ಹೆಸರಿಡುವಾಗ ಯೋಚಿಸಿಯೇ ಇಡಬೇಕೆನ್ನುವುದು ಇದಕ್ಕೇ ಇರಬೇಕು. ಈಗಿನವರು ಸುಮ್ಮನೇ ಎರಡು ಅಕ್ಷರಗಳನ್ನು ಸೇರಿಸಿ ಒಂದು ಹೆಸರು ಮಾಡುತ್ತಾರೆ. ಕೆಲವೊಮ್ಮೆ ಅರ್‍ಥವೇ ಇರೋದಿಲ್ಲ.”

“ಹಾಗನ್ನ ಬೇಡಿ, ಲಕ್ಷ್ಮೀಶನೆಂದು ಹೆಸರಿಟ್ಟುಕೊಂಡವನು ಸುಧಾಮನಾಗಿರುವುದೂ ಇದೆ. ಭೀಮಸೇನನೆಂದು ಹೆಸರಿಟ್ಟುಕೊಂಡವನು ನರಪೇತಲನಾಗಿರುವುದೂ ಇದೆ. ಈಗ ನೋಡಿ ನಮ್ಮ ಆಫೀಸರ್. ಹೆಸರು ಹರ್‍ಷ. ಯಾವಾಗ ನೋಡಿದರೂ ಸಿಡಿಗುಟ್ಟುತ್ತಲೇ ಇರುತ್ತಾರೆ.”

ದಿನಕರ ಮಧ್ಯೆ ಬಾಯಿ ಹಾಕಿದಾಗ ಎಲ್ಲರಿಗೂ ನಗುಬಂದಿತ್ತು. ಕೆಲಸದ ಮಧ್ಯೆ ಒಮ್ಮೊಮ್ಮೆ ಈ ರೀತಿಯ ಮಾತುಕತೆಗಳಿಗೆ ಅವಕಾಶ ಸಿಕ್ಕುತ್ತಿತ್ತು. ಇಲ್ಲವಾದರೆ ಎಲ್ಲರಿಗೂ ಸರಿಯಾಗಿ ಕೆಲಸವಿರುತ್ತಿತ್ತು. ಆ ಬ್ರಾಂಚಿನಲ್ಲಿ ಒಂದು ರೀತಿಯ ಆತ್ಮೀಯ ವಾತಾವರಣ ಇದ್ದುದರಿಂದ ಒಬ್ಬರಿಗೊಬ್ಬರು ಮನಬಿಚ್ಚಿ ಮಾತಾಡುತ್ತಿದ್ದರು.

ದಿನಾ ಎನ್ನುವಂತೆ ಪ್ರಹ್ಲಾದ ಶಾಲೆಯಿಂದ ಸೀದಾ ಅಮ್ಮನ ಬ್ಯಾಂಕಿಗೆ ಬರುತ್ತಿದ್ದ. ಒಮ್ಮೆ ಹೊಟ್ಟೆ ತುಂಬಿದರೆ ಅಮ್ಮನ ಕೆಲಸವಾಗುವ ತನಕ ಏನಾದರೂ ಓದುತ್ತಾ ಕುಳಿತ್ತಿರುತ್ತಿದ್ದ. ತುಂಬಾ ಚೆನ್ನಾಗಿ ಬೆಳೆದಿದ್ದ ಪ್ರಹ್ಲಾದನೆಂದರೆ ಬ್ಯಾಂಕಿನಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಒಂದು ದಿನ ಅವನು ಬಾರದಿದ್ದರೆ ಮೇನೇಜರ್ ಕೂಡಾ ಕೇಳುತ್ತಿದ್ದರು. “ಏನೂ ತಾಯಿಯ ಮಗ ಬಂದಿಲ್ಲ?”

ಅವನು ೩.೪೫ಕ್ಕೆ ಬರುವುದು ಕೌಂಟರ್‌ನಲ್ಲಿ ಚೀಲ ಬಿಸಾಡಿ, ತಾಯಿಯ ಪರ್ಸಿಗೆ ಕೈಹಾಕಿ ಹಣತೆಗೆದುಕೊಂಡು ಬಂದಷ್ಟೇ ಅವಸರದಿಂದ ಹೊರಗೋಡುವುದು ಇದನ್ನು ನೋಡುವಾಗ ಎಲ್ಲರಿಗೂ ಖುಷಿಯಾಗುತ್ತಿತ್ತು. ದಿನನಿತ್ಯದ ಒಂದೇ ರೀತಿಯ ಕೆಲಸದ ಮಧ್ಯೆ ಅವನ ಆಗಮನ ಒಂದು ಜೀವಂತಿಕೆಯ ಸಂಕೇತದಂತಿತ್ತು. ದಿನ ಮುಗಿದ ಸೂಚನೆ ಕೊಡುವಂತೆ ಅವನು ಬಂದಾಗಲೇ ಎಲ್ಲರ ಮನಸ್ಸು ಮನೆಯ ಕಡೆ ಎಳೆಯಲು ಶುರುವಾಗುತ್ತಿತ್ತು.

ಪ್ರಹ್ಲಾದ ತುಂಬಾ ಚುರುಕಾದ, ನೋಡಿದಾಗ ಮನಸ್ಸಿಗೆ ಖುಷಿಕೊಡುವ ಸುಂದರ ರೂಪಿನ ಹುಡುಗ! ಶಾಲೆಯಲ್ಲೂ ಹಾಗೇ ಯಾವಾಗಲೂ ಮೊದಲಿಗ. ನಾಟಕಗಳಲ್ಲಿ ರಾಜಕುಮಾರನ ಪಾಟೀನಾದರೂ ಇದ್ದರೆ ಪ್ರಹ್ಲಾದನೇ ಮೊದಲ ಆಯ್ಕೆ. ಶಾಲಾ ಉಪಾಧ್ಯಾಯರಿಗೆಲ್ಲಾ ಅವನೆಂದರೆ ಅಚ್ಚುಮೆಚ್ಚು. ಸುಮಾ ಮಗನ ಬಗ್ಗೆ ದಿನಕ್ಕೊಂದು ಕಥೆ ಹೇಳದಿರುತ್ತಿರಲಿಲ್ಲ. ಆಗ ಅವಳ ದನಿಯಲ್ಲಿ ಮಗನ ಮೇಲಿನ ಪ್ರೀತಿ, ಅಭಿಮಾನ ಉಕ್ಕುತ್ತಿರುತ್ತಿತ್ತು.

ಸುಮಾಳ ಮನೆಯ ಗೃಹಪ್ರವೇಶಕ್ಕೆ ಹೋದಾಗ ಎಲ್ಲರಿಗೂ ಮನೆ ತೋರಿಸಿದ್ದು ಅವನೇ. ಅವನ ಸಂಭ್ರಮ, ಅವನಿಗೆ ಮನೆಯ ಮೇಲಿರುವ ಪ್ರೀತಿ ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ಆ ಪ್ರಾಯದಲ್ಲಿ ಮಕ್ಕಳಿಗೆ ಮನೆಯೆಂದರೆ ಅಷ್ಟೊಂದು ವ್ಯಾಮೋಹ ಕಡಿಮೆ. ಏನಿದ್ದರೂ ಅವರ ಗಮನ ಆಟ, ಊಟ, ಪಾಠದ ಮೇಲೆ. ಆದರೆ ಪ್ರಹ್ಲಾದನಿಗೆ ಮನೆಯೆಂದರೆ ಎಷ್ಟು ಪ್ರೀತಿಯೆಂದು ಅವನ ಸಂಭ್ರಮದಲ್ಲಿ ಅರ್‍ಥವಾಗುತ್ತಿತ್ತು. ಸುಮಾಳ ಮಗಳು ಅಷ್ಟು ಸಂಭ್ರಮಿಸುತ್ತಿರಲಿಲ್ಲ.

ಸುಮಾಳ ಮೇನೇಜರ್ ನಗುತ್ತಾ ಹೇಳಿದ್ದರು. ನೀವು ಮನೆಕಟ್ಟಿದ್ದು ಸಾರ್ಥಕವಾಯಿತು. ನಿಮ್ಮ ಮಗನಿಗೆ ಮನೆಯೆಂದರೆ ಎಷ್ಟು ಪ್ರೀತಿ ಇದೆ. ತುಂಬಾ ಸಂತೋಷದಿಂದ ಈ ಮನೆಯಲ್ಲಿರುತ್ತಾನೆ ಅವನು”

“ಹೌದು ಅವನದ್ದೇ ಗಲಾಟೆಯಲ್ಲಿ ಇಷ್ಟು ದೊಡ್ಡ ಮನೆ ಕಟ್ಟಿದ್ದು. ಅವನಿಗೆ ಮನೆ ದೊಡ್ಡದಾಗಿರಬೇಕು. ದೊಡ್ಡ ದೊಡ್ಡ ಕೋಣೆ ಇರಬೇಕು. ಮಾಳಿಗೆಯಲ್ಲಿ ದೊಡ್ಡದೊಂದು ಹಾಲು ಇರಬೇಕೆಂದು ಅವನೇ ಇಂಜಿನಿಯರ್‌ಗೆ ಹೇಳಿದ್ದು. ಅವನಿಗೆ ಸ್ವಂತ ಮನೆ ಅಂದರೆ ಬಹಳ ಆಸೆ”

ಆಗ ಗಿರಿಜಾ, “ಹಾಗಾದರೆ ಈ ಮನೆಯ ಆಸೆಗಾದರೂ ಅವನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ ಬಿಡಿ” ಎಂದು ಸುಮಾಳನ್ನು ಛೇಡಿಸಿದಳು.

ಹೊಸ ಮನೆಗೆ ಹೋದ ಒಂದು ತಿಂಗಳಲ್ಲೇ ದೀಪಾವಳಿ, ಇಡೀ ಮನೆಗೆ ದೀಪ ಹಚ್ಚಬೇಕೆಂಬ ಮಗನ ಗಲಾಟೆಗೆ ಸುಮಾ ಡಜನುಗಟ್ಟಲೆಯಲ್ಲಿ ಕ್ಯಾಂಡಲ್ ತಗೊಂಡಿದ್ದಳು. ಬ್ಯಾಂಕಿನವರೆಲ್ಲಾ ಸೇರಿ ಪಟಾಕಿಯನ್ನು ನೇರವಾಗಿ ಕುಂಭಕೋಣದಿಂದಲೇ ತರಿಸಲು ಏರ್‍ಪಾಡು ಮಾಡಿದಾಗ ಸುಮಾ ಎಲ್ಲರಿಗಿಂತ ಹೆಚ್ಚು ಪಟಾಕಿ ಖರೀದಿಸಿದ್ದಳು. ಮಗನಿಗೆ ಮೂರು ದಿನಕ್ಕೂ ಕಡಿಮೆಯಾಗಬಾರದು; ಹೊಸ ಮನೆಯಲ್ಲಿ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ತವಕ ಅವಳಿಗೆ.

ಮಗನಿಗೆ ಅದು ಪ್ರೀತಿ, ಇದು ಪ್ರೀತಿ ಎಂದು ಒಂದು ವಾರದಿಂದಲೇ ಸುಮಾ ದೀಪಾವಳಿಗೆ ತಿಂಡಿಗಳನ್ನು ಮಾಡಿದ್ದಳು. ಮೈಸೂರುಪಾಕು, ಹೋಳಿಗೆ, ರವೆಲಡ್ಡು ಎಲ್ಲಾ ಮಾಡಿದ್ದಳು. ಮಗನಿಗೆ ಖುಷಿ ಕೊಡುವ ತಿಂಡಿಗಳನ್ನು ಮಾಡಲು ಅವಳಿಗೇನೂ ಬೇಸರವೆನಿಸುತ್ತಿರಲಿಲ್ಲ. ಅವರ ಮನೆಯಲ್ಲಿ ಪ್ರಹ್ಲಾದನನ್ನು ಬಿಟ್ಟರೆ ಬೇರೆಯವರಿಗೆ ಸಿಹಿ ಅಷ್ಟು ಇಷ್ಟವಿಲ್ಲದಿದ್ದರೂ, ಮಗನಿಗಾಗಿ ಎಲ್ಲಾ ಮಾಡುವ ಉಮೇದು ಸುಮಾಳಿಗೆ.

ದೀಪಾವಳಿಯ ಮರುದಿನ ಸುಮಾ ಬ್ಯಾಂಕಿಗೆ ಬಂದಿರಲಿಲ್ಲ. ಎಲ್ಲೋ ಸುಸ್ತಾಗಿರಬೇಕು ಎಂದು ಎಲ್ಲರೂ ಭಾವಿಸಿದ್ದರು. ಮರುದಿನವೂ ಬರಲಿಲ್ಲ. ಅವಳ ಪತಿ ಮೇನೇಜರ್‌ಗೆ ಫೋನುಮಾಡಿ ಪ್ರಹ್ಲಾದನಿಗೆ ಸ್ವಲ್ಪ ಹುಷಾರಿಲ್ಲ. ಸುಮಾ ನಾಲ್ಕು ದಿನ ರಜ. ಎಲ್ಲೋ ಫ್ಲೂ ಇರಬೇಕು ಅವನಿಗೆ ತಾಯಿ ಹತ್ತಿರಾನೇ ಬೇಕಲ್ಲ. ಹಾಗಾಗಿ ಅವನು ಹುಷಾರಾದ ಮೇಲೆ ಬರ್‍ತಾಳೆ” ಎಂದು ಹೇಳಿದ್ದಷ್ಟೇ ಸುದ್ದಿ.

ಐದನೇ ದಿನ ಸುಮಾ ಬ್ಯಾಂಕಿಗೆ ಬಂದಾಗ ಅವಳಿಗೇ ಜ್ವರ ಬಂದಿದ್ದಷ್ಟು ಸುಸ್ತಾಗಿತ್ತು ಮುಖ. ಮಗನಿಗೆ ಏನಾದರೂ ಆದರೆ ಸುಮಾಳಿಗೆ ಸಹಿಸಲಾಗುತ್ತಿರಲಿಲ್ಲ. ಅದು ಬ್ಯಾಂಕಿನಲ್ಲಿ ಎಲ್ಲರಿಗೂ ಗೊತ್ತು.

ಗಿರಿಜಾ ಸುಮಾಳನ್ನು ನೋಡುತ್ತಲೇ, “ಏನಾಗಿತ್ತು ಸುಮಾ?” “ಜ್ವರ. ದೀಪಾವಳಿ ದಿನ ಕುಣಿದಾಡಿದ್ದೇ ಕುಣಿದಾಡಿದ್ದು, ಬೆಳಿಗ್ಗೆ ಏಳುವಾಗ ಕೈಕಾಲು ನೋವು, ಮೈನೋವು, ಜ್ವರ, ಅವನಿಗೆ ಹುಷಾರಿಲ್ಲದಿದ್ದರೆ ನಾನವನ ಮಗ್ಗುಲಿನಿಂದ ಏಳಲಿಕ್ಕೇ ಬಿಡುವುದಿಲ್ಲ. ಇವತ್ತು ಜ್ವರ ಬಿಟ್ಟಿದೆ. ಎರಡು ದಿನ ಶಾಲೆಗೆ ಹೋಗಲಿಕ್ಕಾಗಲಿಕ್ಕಿಲ್ಲ. ತುಂಬಾ ಸುಸ್ತಾಗಿದ್ದಾನೆ. ಇವತ್ತು ಅವನ ತಂದೆ ಮನೆಯಲ್ಲಿದ್ದಾರೆ. ನಾನು ಬಂದೆ.”

ಒಂದು ವಾರದ ನಂತರ ಇನ್ನೊಮ್ಮೆ ಸುಮಾ ನಾಪತ್ತೆ. ಮಗನಿಗೆ ಪುನಃ ಜ್ವರ ಬರುತ್ತಿದೆಯೆಂದು ನಾಲ್ಕು ದಿನ ರಜೆಗೆ ಬರೆದು ಕಳುಹಿಸಿದ್ದಳು. ಐದನೇ ದಿನ ಬಂದವಳು ಗಿರಿಜಾಳೊಡನೆ ಯಾಕೋ ಅರ್ಥವಾಗ್ತಾ ಇಲ್ಲ. ಪ್ರಹ್ಲಾದನಿಗೆ ಪುನಃ ಫ್ಲೂ ಆಯಿತು. ಈಗ ಆಂಟಿಬಯೋಟಿಕ್ ಕೊಟ್ಟಿದ್ದಾರೆ. ನಿನ್ನೆಯಿಂದ ಜ್ವರ ಬಿಟ್ಟಿದೆ. ಆದರೆ ಮೇಲೆ ಮೇಲೆ ಜ್ವರಬಂದು ಬಹಳ ಸುಸ್ತಾಗಿದ್ದಾನೆ” ಎಂದು ಹೇಳಿ ಬಹಳ ನೊಂದುಕೊಂಡಿದ್ದಳು.

“ಯಾಕೆ ಹಾಗೆ ಬಿಟ್ಟು ಬಿಟ್ಟು ಜ್ವರ ಬರ್‍ತಿದೆ? ರಕ್ತ ಪರೀಕ್ಷೆ ಮಾಡಿಸಿ. ಟೈಫ್ಯಾಡ್, ಮಲೇರಿಯಾ ಏನಾದರೂ ಇದ್ದರೆ ತಿಳಿಯುತ್ತದೆ” ಬ್ಯಾಂಕಿನ ಮಿನಿ ಡಾಕ್ಟರೆಂದೇ ಹೆಸರು ಪಡೆದ ಜಾಹ್ನವಿ ಸಲಹೆ ಕೊಟ್ಟಿದ್ದಳು.

“ಹಾಗೇನೂ ಇರಲಿಕ್ಕಿಲ್ಲ. ಮೊನ್ನೆ ಜ್ವರ ಬಿಟ್ಟು ಎರಡು ದಿನದಲ್ಲೇ ಶಾಲೆಗೆ ಹೋಗಿದ್ದ. ಕಳುಹಿಸಿದ್ದು ತಪ್ಪಾಯಿತು. ಅವನು ಶಾಲೆಗೆ ಹೋದರೆ ಸುಮ್ಮನಿರುವುದಿಲ್ಲ. ಅಡ್ಡಾಡುತ್ತಲೇ ಇರುತ್ತಾನೆ. ಈ ಸಲ ಬೇಗ ಕಳುಹಿಸುವುದಿಲ್ಲ.”

ಹೀಗೆ ಸುಮಾ ಮಗನ ಜ್ವರದಿಂದಾಗಿ ಮಾನಸಿಕವಾಗಿ ದೈಹಿಕವಾಗಿ ಕುಸಿದಿದ್ದಳು. ಎರಡುವಾರ ಬಿಟ್ಟು ಮೂರನೇ ಬಾರಿ ಜ್ವರಬಂದಾಗ ಪ್ರಹ್ಲಾದನನ್ನು ರಕ್ತದ ತಪಾಸಣೆಗೆ ಕರೆದುಕೊಂಡು ಹೋಗಿದ್ದರು.

ರಕ್ತ ತಪಾಸಣೆ ಮಾಡಿದ ಡಾಕ್ಟರು ಟೈಪ್ಯಾಡ್, ಮಲೇರಿಯಾ ಎರಡೂ ಅಲ್ಲವೆಂದರೂ. ಸಂಪೂರ್‍ಣ ರಕ್ತ ತಪಾಸಣೆ ಮಾಡಿಸುವುದು ಒಳ್ಳೆಯದು ಎಂದಾಗ ಸುಮಾ ಹಾಗೂ ಅವಳ ಗಂಡನಿಗೆ ಏನೆಂದೂ ಅರ್ಥವಾಗಿರಲಿಲ್ಲ.

ಸುಮಾಳ ಪತಿ ಸುಧಾಕರ ಮಾತ್ರ ಡಾಕ್ಟರೊಡನೆ “ಯಾಕೆ ಈಗ ಮಾಡಿದ್ದು ಸರಿಯಾಗಿಲ್ಲವೇ?” ಎಂದು ಪ್ರಶ್ನಿಸಿದಾಗ ಅವರು. “ಹಾಗೇನಿಲ್ಲ. ನಿಮ್ಮ ಡಾಕ್ಟರ್ ಹತ್ತಿರ ನಾನೇ ಮಾತಾಡುತ್ತೇನೆ” ಎಂದಾಗ ಇವರಿಬ್ಬರ ಹೃದಯದ ತಾಳ ತಪ್ಪಿದಂತಾದರೂ ತೋರಿಸಿಕೊಳ್ಳದೇ “ಏನಾದರೂ ಇದ್ದರೆ ಹೇಳಿ ಡಾಕ್ಟರ್ ಇವತ್ತೇ ರಕ್ತ ತಗೊಂಡು ಬಿಡಿ. ಆದಷ್ಟು ಬೇಗ ಸರಿಯಾಗಿ ಟೆಸ್ಟ್ ಮಾಡಿದರೆ ನಮ್ಮ ಟೆನ್ಯನ್ ಆದರೂ ಹೋಗುವುದಲ್ಲ?”

ಅವರಿಗೂ ಏನನಿಸಿತೋ, ಅವರೇ ಪ್ರಹ್ಲಾದನಿಂದ ಸುಮಾರು ೫೦ಸಿ.ಸಿ. ರಕ್ತ ತೆಗೆದು “ನೀವು ಎರಡು ದಿನ ಬಿಟ್ಟು ರಿಪೋರ್ಟು ತೆಗೆದುಕೊಂಡು ಹೋಗಲು ಬನ್ನಿ. ಅದರ ಮೊದಲು ನಿಮ್ಮ ಡಾಕ್ಟರ್ ಹತ್ತಿರಾನೂ ಮಾತಾಡುತ್ತೇನೆ.”

ಸುಮಾಳ ತಲೆಯಲ್ಲಿ ಬೇಡದ ಯೋಚನೆಗಳೆಲ್ಲಾ ತುಂಬಿಕೊಂಡು ಆ ಎರಡು ದಿನವೂ ಅವಳು ಅವಳಾಗಿರಲಿಲ್ಲ. ಪ್ರಹ್ಲಾದ ಸುಸ್ತಾಗಿದ್ದರೂ ಶಾಲೆಗೆ ಹೋಗಿ ಬಂದಿದ್ದ. ಯಾಕೆ ಪುನಃ ರಕ್ತ ಪರೀಕ್ಷೆ ಮಾಡಬೇಕೆಂದರು ಎನ್ನುವ ಯೋಚನೆ ಸುಮಾ-ಸುಧಾಕರರನ್ನು ಕಂಗೆಡಿಸಿತ್ತು.

ಸುಧಾಕರ ಮಧ್ಯೆ ಪ್ರಹ್ಲಾದನಿಗೆ ಜ್ವರ ಬಂದಾಗ ನೋಡಿದ್ದ ಡಾಕ್ಟರ ಹತ್ತಿರ ಹೋಗಿ ಯಾಕೆ ಎರಡನೇ ಸಲ ರಕ್ತ ಪರೀಕ್ಷೆ ಮಾಡಬೇಕೆಂದರು ಎಂದು ಕೇಳಿದಾಗ ಅವರೂ, “ಏನೂ ಇಲ್ಲ. ಸರಿಯಾಗಿ ಪರೀಕ್ಷಿಸಿ ನೋಡೋಣವೆಂದರು” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದಾಗ ಸುಧಾಕರ, “ಡಾಕ್ಟರ್, ಏನಾದರೂ ಸೀರಿಯಸ್ ಇದೆಯಾ? ಏನಿದ್ದರೂ ಹೇಳಿ ಇವತ್ತಲ್ಲ ನಾಳೆ ಗೊತ್ತಾಗಲೇ ಬೇಕಲ್ಲ?”

“ಹಾಗೇನಿಲ್ಲ… ಅವರಿಗೆ ಸ್ವಲ್ಪ ಸಂಶಯ. ಅದರ ಪರಿಹಾರಕ್ಕೆ ಪುನಃ ಟೆಸ್ಟ್ ಮಾಡಿಸುವಾ ಎಂದರು. ನೀವು ಗಡಿಬಿಡಿಯಾಗೋದುಬೇಡ” “ಏನಂತ ಸಂಶಯ ಡಾಕ್ಟರ್?” ಸುಧಾಕರ ಹೃದಯವನ್ನೇ ಬಾಯಿಗೆ ತಂದು ಕೇಳಿದಾಗ ಡಾಕ್ಟರ್.

“ಈಗ ಯಾಕೆ? ಹಾಗೇನೂ ಇರಲಿಕ್ಕಿಲ್ಲ ಪ್ರಹ್ಲಾದ ಎಷ್ಟು ಚೆನ್ನಾಗಿ ಬೆಳೆದಿದ್ದಾನೆ. ನಾನು ಎಷ್ಟು ಸಮಯದಿಂದ ನೋಡುತ್ತಿದ್ದೇನೆ. ಅವನ ಆರೋಗ್ಯ ಚೆನ್ನಾಗಿಯೇ ಇದೆ.

ಸುಧಾಕರ ತಲೆಕೆಳಗೆ ಹಾಕಿ ಕುಳಿತವನು ತಲೆ ಮೇಲೆತ್ತದೇ “ಹೇಳಿ ಡಾಕ್ಟರೆ ಏನು ಸಂಶಯವೆಂದು ಹೇಳಿ…. ಹೇಳದಿದ್ದರೆ ನಾನಿಲ್ಲಿಂದ ಹೋಗುವುದಿಲ್ಲ”

“ಇದು ಬರೇ ಸಂಶಯ ಸುಧಾಕರ, ಅವನ ರಕ್ತ ತಪಾಸಣೆ ಮಾಡುವಾಗ ಲ್ಯೂಕೇಮಿಯಾ ಇರಬಹುದೇನೋ ಎನ್ನುವ ಸಂಶಯ ಬಂತಂತೆ. ಅದಕ್ಕೆ ಪುನಃ ಪರೀಕ್ಷಿಸಲು ಹೇಳಿದ್ದಾರೆ. ಆದರೆ ಇದನ್ನು ಈಗಲೇ ನಿಮ್ಮ ಪತ್ನಿಯ ಹತ್ತಿರ ಹೇಳಬೇಡಿ. ಬರೇ ಸಂಶಯ ಅಷ್ಟೇ…”

ಸುಧಾಕರ ತಲೆಯನ್ನು ಎರಡೂ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು… “ಡಾಕ್ಟರ್ ನೀವು ಹೇಳುತ್ತಿರುವುದು ನಿಜವಾದರೆ? ನಮ್ಮಿಂದ ಅದನ್ನು ತಡೆಯುವುದೇ ಸಾಧ್ಯವಿಲ್ಲ. ಸುಮಾ ಸತ್ತೇ ಹೋಗುತ್ತಾಳೆ. ಅವಳ ಪ್ರಾಣವೇ ಅವನು.” ಸುಧಾಕರ ಅಳುತ್ತಿದ್ದ.

“ಈಗಲೆ ಧೈರ್ಯ ಕಳಕೊಳ್ಳಬೇಡಿ. ಸ್ವಲ್ಪ ಸಂಶಯ ಬಂದಾಗ ಸರಿಯಾಗಿ ಟೆಸ್ಟ್ ಮಾಡುವುದು ಒಳ್ಳೆಯದಲ್ಲವೇ? ನೀವು ಇನ್ನೊಂದು ಲ್ಯಾಬೊರೇಟರಿಯಲ್ಲೂ ಅವನ ರಕ್ತ ಪರೀಕ್ಷೆ ಮಾಡಿಸಿ, ಒಬ್ಬರದ್ದೇ ರಿಪೋರ್ಟಿನ ಮೇಲೆ ಹೊಂದಿಕೊಳ್ಳಲಾಗುವುದಿಲ್ಲ. ಯಾವುದಕ್ಕೂ ಈಗಲೇ ಗಲಾಟೆಮಾಡಬೇಡಿ. ನಾಳದು ರಿಪೋರ್ಟು ಸಿಗುವುದಲ್ಲ? ಅದರ ಮೇಲೆ ಬೇರೆ ಕಡೆ ಟೆಸ್ಟ್ ಮಾಡಬೇಕೇ ಎಂದು ಡಿಸೈಡ್ ಮಾಡೋಣ. ಏನೂ ಆಗಿರಲಿಕ್ಕಿಲ್ಲ. ಬರೇ ಸಂಶಯ ಅಷ್ಟೇ. ಮನೆಯಲ್ಲಿ ಈ ವಿಚಾರ ತೆಗೆಯಲೇ ಬೇಡಿ.”

ಸುಧಾಕರ್ ಹೇಗೆ ಮನೆಗೆ ಬಂದನೋ ಅವನಿಗೇ ಗೊತ್ತಿಲ್ಲ. ಮನೆಗೆ ಬಂದವನೇ ಮಗಳನ್ನು ಕರೆದು ಧಾರಿಣಿ, ನನಗೆ ವಿಪರೀತ ತಲೆನೋವು. ಏನಾದರೂ ಮಾತ್ರೆ ಇದ್ದರೆ ಕೊಡಮ್ಮಾ, ನಾನು ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಮಲಗುತ್ತೇನೆ”

ಒಳಗಿದ್ದ ಸುಮಾಳಿಗೆ ಈ ಮಾತು ಕೇಳುತ್ತಲೇ, “ಯಾಕೆ ಏನಾಯ್ತು? ಎಲ್ಲಿಗೆ ಹೋಗಿದ್ದಿರಿ? ಹೋಗುವಾಗ ಸರಿಯಾಗಿಯೇ ಇದ್ದಿರಲ್ಲ?”

“ಏನಿಲ್ಲ ಸ್ವಲ್ಪ ತಲೆನೋವು ಅಷ್ಟೇ. ಹೋಗುವಾಗ ಸ್ವಲ್ಪವಿತ್ತು. ಈಗ ಜಾಸ್ತಿಯಾಗಿದೆ. ಸ್ವಲ್ಪ ಹೊತ್ತು ಮಲಗಿದರೆ ಸರಿಯಾಗುತ್ತದೆ” ಸುಧಾಕರ ತನ್ನ ಭಾವನೆಗಳನ್ನು ಹತ್ತಿಕ್ಕುತ್ತಾ ಅದಷ್ಟು ಸಮಾಧಾನದಿಂದ ಉತ್ತರಿಸಿದ್ದ.

ಅಷ್ಟರಲ್ಲಿ ಅಲ್ಲಿಗೋಡಿ ಬಂದ ಪ್ರಹ್ಲಾದ “ಪಪ್ಪ, ತಲೆನೋವಾ? ನಾನು ಟೈಗರ್ ಬಾಮ್ ಹಚ್ಚಲೇ?” ಎಂದು ಟೈಗರ್ ಬಾಮಿನ ಡಬ್ಬದೊಡನೆ ಹತ್ತಿರ ಬಂದು ಕುಳಿತಾಗ ಕಣ್ಣು ಬಿಟ್ಟು ಅವನನ್ನು ನೋಡುವ ಧೈರ್ಯವೂ ಬರಲಿಲ್ಲ. ನೋಡಿದರೆ ಕಣ್ಣಿನಿಂದ ಜಲಪಾತ ಉಕ್ಕುವ ಭಯವಿತ್ತು.

ದೇವರೇ ನಮ್ಮ ಪ್ರಹ್ಲಾದನಿಗೆ ಏನೂ ಆಗದಿರಲಿ. ಅವನಿಗಾಗಿಯೇ ಈ ಮನೆ ಇಷ್ಟು ದೊಡ್ಡದು ಮಾಡಿ, ಎಲ್ಲೆಲ್ಲೋ ಸಾಲಮಾಡಿ ಕಟ್ಟಿದೆವು. ಅವನಿಗೇನಾದರೂ ಆದರೆ ನಾವು ಸಹಿಸುವುದು ಸಾಧ್ಯವೇ? ನಾಳೆ ರಕ್ತ ಪರೀಕ್ಷೆಯ ರಿಸಲ್ಟ್ ಬರುವಾಗ ಅವನಿಗೇನೂ ಇಲ್ಲ ಎಂದು ಬಂದರೆ ಗಣ ಹೋಮ, ಸತ್ಯನಾರಾಯಣ ಪೂಜೆ, ಊರ ದೇವರಿಗೆ ಪಲ್ಲಕ್ಕಿ ಉತ್ಸವ, ತಿರುಪತಿ ಹುಂಡಿಗೆ ಸಾವಿರ ರೂಪಾಯಿ ಎಲ್ಲಾ ಮಾಡಿಸುತ್ತೇನೆ. ನಮ್ಮ ಮಗನನ್ನು ನಮಗೇ ಬಿಟ್ಟು ಬಿಡಪ್ಪ ಪರಮಾತ್ಮ ಎಂದು ಸುಧಾಕರ ಮನಸ್ಸಿನಲ್ಲೇ ಬೇಡಿಕೊಂಡಾಗ, ಪ್ರಹ್ಲಾದನ ಕೈ ಬೆರಳು ಹಣೆ ತುಂಬಾ ಓಡಾಡುವ ಅನುಭವವಾಗುತ್ತಿತ್ತು. ಕಣ್ಣಿನ ಕೊನೆಯಲ್ಲಿ ನಿಂತ ಹನಿ ಎಲ್ಲಿ ಕೆಳಗುದುರುವುದೋ ಎನ್ನುವ ಭಯದಿಂದ ಸುಧಾಕರ ಗಟ್ಟಿಯಾಗಿ ಕಣ್ಣು ಮುಚ್ಚಿದ್ದ. ಹಣೆಯ ಮೇಲೆ ಚಲಿಸುತ್ತಿರುವ ಅವನ ಕೈಯನ್ನು ಹಿಡಿದು ಮುದ್ದಿಡುವಾ ಅವನನ್ನು ಬಳಿಗೆಳೆದುಕೊಂಡು ಗಟ್ಟಿಯಾಗಿ ಹಿಡಿದುಕೊಳ್ಳುವಾ ಎಂದೆನಿಸುತ್ತಿತ್ತು. ಆದರೆ ಅವನು ಏನೂ ಮಾಡಲಾರದವನಾಗಿದ್ದ. ಹೃದಯಮಾತ್ರ ನಗಾರಿಯಂತೆ ಹೊಡೆದುಕೊಳ್ಳುತ್ತಿತ್ತು.

ಸುಮಾಳ ಹೃದಯದೊಳಗೆ ಏನೋ ಒದ್ದಾಟ. ಹೇಳಿಕೊಳ್ಳಲಾಗದ ನೋವು. ಏನೆಂದೂ ಅರ್ಥವಾಗದ ತಳಮಳ, ದೂರನಿಂತು ಪ್ರಹ್ಲಾದ ತಂದೆಯ ಹಣೆಗೆ ಮದ್ದು ಹಚ್ಚಿ ತಿಕ್ಕುವುದನ್ನೇ ನೋಡುತ್ತಿದ್ದಳು. ಯೋಚಿಸುತ್ತಿದ್ದಳು. ಪ್ರಹ್ಲಾದನ ಮುಖವೂ ಕಂದಿದೆ. ಬಿಳಿಚಿಕೊಂಡಂತಾಗಿದ್ದಾನೆ. ಎರಡೆರಡು ಸಲ ಫ್ಲೂ ಬಂದು ಜೀವ ಹಿಂಡಿದಂತಾಗಿರಬೇಕು. ಪಾಪ, ಅವನು ಅಷ್ಟು ಸುಸ್ತಾಗಿದ್ದರೂ ತಂದೆಗೆ ತಲೆನೋವೆಂದರೆ ಹೇಗೆ ಹಣೆ ತೀಡುತ್ತಿದ್ದಾನೆ. ನಾಳೆ ಅವನ ರಿಪೋರ್ಟ್ ನೋಡಿ ಅವನನ್ನು ಒಮ್ಮೆ ತಿರುಪತಿಗೆ ಕರೆದುಕೊಂಡು ಹೋಗಿ ಬರಬೇಕು. ಏನೋ ಗ್ರಹಚಾರ ಕೆಟ್ಟಿರಬೇಕು. ಮೆಟ್ಟಿಲು ಹತ್ತಿಕೊಂಡೇ ಬೆಟ್ಟ ಏರಬೇಕೆಂದು ಯಾವಾಗಲೂ ಹೇಳುತ್ತಿರುತ್ತಾನೆ. ಈಸಲ ಹಾಗೇ ಮಾಡಬೇಕು. ಅವನ ಜತೆಗೆ ನಾನೂ ಹತ್ತಿಯೇ ಹೋಗಬೇಕು… ಅವನ ಗ್ರಹಚಾರ ಏನಿದ್ದರೂ ಪರಿಹಾರವಾಗಲಿ.”

ಹೃದಯದಲ್ಲಿ ಆಗುತ್ತಿದ್ದ ಸಂಕಟ ಅವಳನ್ನು ಅನ್ಯ ಮನಸ್ಕಳಾಗಿ ಮಾಡಿತ್ತು.

ಮರುದಿನ ಸುಧಾಕರ ಮಾತ್ರ ರಿಪೋರ್ಟ್‌ತರಲು ಹೋಗಿದ್ದ. ಅವನನ್ನು ನೋಡಿದ ಕೂಡಲೇ ಡಾಕ್ಟರ್ ಹೊರಬಂದು ಅವನನ್ನು ತನ್ನ ಕೋಣೆಗೆ ಕರೆದೊಯ್ದು ಎದುರಿನ ಕುರ್ಚಿಯಲ್ಲಿ ಕುಳ್ಳಿರಿಸಿ “ಐ ಆಯಮ್ ರಿಯಲಿ ಸಾರಿ. ನನ್ನ ಸಂಶಯ ದಿಟವಾಗಿದೆ. ನಿಮ್ಮ ಮಗನಿಗೆ ಲ್ಯೂಕೇಮಿಯಾ. ನೀವು ನಿಮ್ಮ ಡಾಕ್ಟರಿಗೆ ಹೇಳಿ ಕೂಡಲೇ ಚಿಕಿತ್ಸೆ ಪ್ರಾರಂಭಿಸಬೇಕು” ಅಂದಾಗ ಸುಧಾಕರನಿಗೆ ಯಾರೋ ತನ್ನನ್ನು ಚೂರಿಯಿಂದ ತಿವಿಯುತ್ತಿರುವ ಅನುಭವವಾಗಿ ಅಲ್ಲೇ ಪ್ರಜ್ಞೆ ಕಳಕೊಳ್ಳುವಂತಾಗಿತ್ತು. ಕುರ್ಚಿಯಲ್ಲೇ ಕುಸಿಯುತ್ತಿರುವ ಅವನಿಗೆ ಡಾಕ್ಟರ್ ಕೂಡಲೇ ಪ್ರಥಮ ಚಿಕಿತ್ಸೆ ನೀಡಿದಾಗ ಎಚ್ಚರಿಕೆಯಾಗಿತ್ತು.

ಸುಧಾಕರನ ಕಣ್ಣಿನಿಂದ ಒಂದೇ ಸಮನೆ ಕಣ್ಣೀರು ಇಳಿಯುತ್ತಿತ್ತು. ನಿನ್ನೆಯಿಂದ ತಡೆಹಿಡಿದಿಟ್ಟಿದ್ದ ದುಃಖದ ಕಟ್ಟೆ ಒಡೆದಿತ್ತು. ಮಾತು ಹೊರಡುತ್ತಿರಲಿಲ್ಲ. ಕೈಯನ್ನು ಪದೇ ಪದೇ ತಿರುಗಿಸಿಕೊಂಡು, ತಲೆಗೆ ಚಚ್ಚಿಕೊಂಡು ಅಳುತ್ತಿದ್ದುದ್ದನ್ನು ನೋಡಿ ಡಾಕ್ಟರಿಗೆ ಅವನನ್ನು ಸಮಾಧಾನಿಸುವ ಬಗೆಯೇ ತಿಳಿಯದೆ ಒದ್ದಾಡುವಂತಾಗಿತ್ತು. ಅವನ ದುಃಖ ಕಡಿಮೆಯೇ ಆಗದಾಗ ಅವರು ತನ್ನ ಕಾರಿನಲ್ಲಿ ಅವನನ್ನು ಹಾಕಿಕೊಂಡು ಪ್ರಹ್ಲಾದನನ್ನು ನೋಡುತ್ತಿದ್ದ ಡಾಕ್ಟರಲ್ಲಿ ಕರೆದೊಯ್ದು ವಿಷಯ ತಿಳಿಸಿದಾಗ ಅವರೂ ಕುರ್ಚಿಯಲ್ಲಿ ಕುಸಿದಿದ್ದರು.

ಎಂಥಾ ಗಟ್ಟಿ ಮುಟ್ಟಾದ ಮಗು ! ಹುಟ್ಟಿನಿಂದಲೂ ಗುಂಡುಗುಂಡಗೆ ಮುದ್ದಾಗಿದ್ದ ಹುಡುಗನಿಗೆ ಹೇಳುವಂತಹ ಯಾವುದೇ ಖಾಯಿಲೆ ಬಂದಿರಲಿಲ್ಲ. ಈಗ ಒಮ್ಮೆಲೇ ಲ್ಯೂಕೇಮಿಯಾ ಅಂದರೆ? ಎಷ್ಟು ಹೊತ್ತಿಗೂ ಕುಣಿದಾಡುತ್ತಾ ಕೀಟಲೆ ಮಾಡುತ್ತಿದ್ದ ಹುಡುಗನ ಆಯುಷ್ಯ ಇನ್ನು ಒಮ್ಮೆಗೇ ಮುಗಿಯುತ್ತದೆ. ಅಂದರೆ ನಂಬಲಿಕ್ಕೇ ಸಾಧ್ಯವಿಲ್ಲ. ದೇವರಿಗೆ ಕಣ್ಣಿಲ್ಲ ಎನ್ನುವುದು ಇದಕ್ಕೇ ಇರಬೇಕು.

ಡಾಕ್ಟರ್‌ಗೆ ಅವರ ಕರ್‍ತವ್ಯವಿತ್ತು. ಹೇಗಾದರೂ ಅವನ ಆಯಸ್ಸನ್ನು ಹೆಚ್ಚಿಸಬೇಕು. ಎಷ್ಟು ದಿನ ಬದುಕುತ್ತಾನೋ ಅಷ್ಟು ದಿನ ಮಗು ಸುಖವಾಗಿರಬೇಕು. ಡಾಕ್ಟರು ಕರ್ತವ್ಯ ಪ್ರಜ್ಞೆಯಿಂದ.

“ಸುಧಾಕರ, ಈಗ ನೀವು ಮನಸ್ಸು ಗಟ್ಟಿಮಾಡಿಕೊಳ್ಳಲೇಬೇಕು. ನಿಮ್ಮ ಹೆಂಡತಿಗೆ ಇದನ್ನು ತಿಳಿಸಬೇಕು. ಪ್ರಹ್ಲಾದನ ಕಿವಿಗೆ ಮಾತ್ರ ಸುದ್ದಿ ಹಾಕಬೇಡಿ. ನಮ್ಮಿಂದ ಸಾಧ್ಯವಾದಷ್ಟು ನಾವು ಪ್ರಯತ್ನಿಸೋಣ. ನಾನು ನರ್ಸಿಂಗ್ ಹೋಮಿನಲ್ಲಿ ಮಾತಾಡಿ ನಾಳೆಯೇ ಟ್ರೀಟ್‌ಮೆಂಟ್ ಶುರುಮಾಡಲು ಹೇಳುತ್ತೇನೆ. ಹೆಚ್ಚಿನಂಶ ರಕ್ತ ಕೊಡಬೇಕಾದೀತು. ಅವನ ಗ್ರೂಪ್ ಒ ‌ಅಲ್ವಾ? ನಿಮಗೆ ಗೊತ್ತಿದ್ದವರು ಯಾರು ಆ ಗುಂಪಿನವರೆಂದು ತಿಳಿದು ಅವರನ್ನೆಲ್ಲಾ ಸಂಪರ್ಕಿಸಿ ಇಡಿ, ಅವನು ಯಾವ ಸ್ಟೇಜಿನಲ್ಲಿದ್ದಾನೆಂದು ತಿಳಿಯಲು ಇನ್ನೂ ಕೆಲವು ಟೆಸ್ಟ್ ಮಾಡಬೇಕಾದೀತು. ನೀವು ಅತ್ತರೆ ಏನು ಮಾಡಲಾಗುತ್ತದೆ ಸುಧಾಕರ್? ಈಗ ಕೈಕಾಲು ಬಿಡದೆ ಏನು ಮಾಡಬೇಕೆಂದು ನಾವು ಯೋಚಿಸಬೇಕು. ನಮ್ಮ ಪ್ರಯತ್ನ ನಾವು ಮಾಡಬೇಕಷ್ಟೇ, ಮತ್ತೆ ಎಲ್ಲಾ ಆ ಪರಮಾತ್ಮನ ಇಚ್ಛೆ”

ಸುಧಾಕರನ ಯಾವ ಅಂಗಾಂಗಗಳೂ ಕೆಲಸ ಮಾಡುತ್ತಿರಲಿಲ್ಲ. ಮನಸ್ಸು ಸಂಪೂರ್ಣ ಬರಿದಾಗಿತ್ತು. ಹೃದಯ ಮಾತ್ರ ನೋವಿನಿಂದ ವಿಲಿವಿಲಿ ಒದ್ದಾಡುತ್ತಿತ್ತು. ಎಷ್ಟೊಂದು ದೊಡ್ಡ ಶಿಕ್ಷೆ ಕೊಟ್ಟುಬಿಟ್ಟ ಆ ದೇವರು. ಇನ್ನೂ ಅವನ ಮೊರೆ ಹೋಗಬೇಕೇ? ದೇವರೂ ಇಲ್ಲ ಯಾರೂ ಇಲ್ಲ.

ಸುಧಾಕರ ಕುಳಿತಲ್ಲಿಂದ ಧಡಕ್ಕನೇ ಎದ್ದು ಡಾಕ್ಟರ ಕುರ್ಚಿಯ ಹತ್ತಿರಕ್ಕೆ ಹೋಗಿ ‘ಡಾಕ್ಟ್ರೆ, ನನ್ನ ಮಗ ಬದುಕುತ್ತಾನೆಯೇ!’ ಎಂದು ಆರ್ತನಾಗಿ, ದುಃಖತಪ್ತನಾಗಿ ಕೇಳಿದಾಗ ಡಾಕ್ಟರು.

“ಬದುಕಬೇಕೆಂದು ನಮ್ಮೆಲ್ಲರ ಇಚ್ಛೆ ಬದುಕುತ್ತಾನೋ ಇಲ್ಲವೋ ಅದೆಲ್ಲಾ ದೈವೇಚ್ಛೆ, ಕೂಡಲೇ ಟ್ರೇಟ್‌ಮೆಂಟ್ ಶುರುಮಾಡುವುದು ನಮ್ಮ ಕರ್ತವ್ಯ. ಈಗ ನಿಮಗೆ ಬೇಕು ಧೈರ್ಯ ಮತ್ತು ಸಹನೆ. ನಾನು ನಾಳೆ ಬೆಳಗ್ಗೆ ನಿಮ್ಮ ಮನೆಗೆ ಬರುತ್ತೇನೆ. ನಾವು ಅವನನ್ನು ನರ್ಸಿಂಗ್ ಹೋಮಿಗೆ ಕರೆದುಕೊಂಡು ಹೋಗೋಣ”

ಸುಧಾಕರ್ ಜೀವಂತ ಶವದಂತೆ ಮನೆ ತಲುಪಿ ಕರೆಗಂಟೆ ಒತ್ತಿದಾಗ ಪ್ರಹ್ಲಾದನೇ ಬಾಗಿಲು ತೆರೆದಿದ್ದ.

ತನ್ನೆತ್ತರಕ್ಕೆ ಬೆಳೆದು ನಿಂತ ಮಗನಿಗೆ ತನ್ನದೇ ಕಣ್ಣು ತಗುಲಿತೋ ಏನೋ ಎನ್ನುವಂತೆ ತನ್ನ ಕಣ್ಣನ್ನು ದ್ವೇಷಿಸುತ್ತಾ ಕಣ್ಣು ಮುಚ್ಚಿದ್ದ.

“ಯಾಕಪ್ಪಾ ಒಂಥರಾ ಇದ್ದೀರಿ? ಹುಶಾರಿಲ್ಲವೇ? ಪುನಃ ತಲೆನೋವೇ?” ಎನ್ನುತ್ತಾ ಕೈಹಿಡಿದುಕೊಂಡ ಮಗನನ್ನು ಬಳಸಿ ಹಿಡಿದುಕೊಂಡು ಬಂದು ಸೋಫಾದಲ್ಲಿ ಕುಸಿದಿದ್ದ.

ಇಲ್ಲ, ನಾನು ಧೈರ್ಯ ಕಳಕೊಳ್ಳಬಾರದು. ಈಗ ತನ್ನ ಒಂದು ಮಾತು, ಒಂದು ಹನಿ ಕಣ್ಣೀರು ಇಡೀ ಮನೆಯ ವಾತಾವರಣವನ್ನು ಕೆಡಿಸುತ್ತದೆ. ಸುಮಾ ಕಂಗೆಡುತ್ತಾಳೆ. ಎನ್ನುವ ಯೋಚನೆ ಬಂದಕೂಡಲೇ “ಏನಿಲ್ಲ ಯಾಕೋ ಇವತ್ತೂ ತಲೆ ನೋವು ಜಾಸ್ತಿಯಾಗಿದೆ.”

ಅಷ್ಟರಲ್ಲಿ ಅಲ್ಲಿಗೆ ಬಂದ ಸುಮಾ ಪತಿಯ ಮುಖ ನೋಡಿ “ರಿಫೋರ್ಟು ಸಿಕ್ಕಿತೇ” ಎಂದು ಕೇಳಲಿದ್ದ ಪ್ರಶ್ನೆಯನ್ನು ಅಲ್ಲಿಗೇ ತಡೆದಿದ್ದಳು. ಆ ಪ್ರಶ್ನೆಗೆ ಯಾವ ರೀತಿಯ ಉತ್ತರ ಬರುತ್ತದೆ ಎನ್ನುವ ಹೆದರಿಕೆ ಆಕೆಯನ್ನು ಕಾಡುತ್ತಿತ್ತು. ಎರಡು ದಿನದಿಂದ ಅವಳ ಮನಸ್ಸಿನಲ್ಲಿ ಎಲ್ಲಾ ರೋಗಗಳ ಹೆಸರುಗಳು ಹಾದು ಹೋಗಿದ್ದವು.

ಪ್ರಹ್ಲಾದ ಹತ್ತಿರವಿಲ್ಲದಾಗ ಏನೆಂದು ಕೇಳೋಣವೆಂದರೆ ಅವನು ಒಂದು ನಿಮಿಷವೂ ತಾಯಿಯಿಂದ ದೂರವಿರುತ್ತಿರಲಿಲ್ಲ. ರಾತ್ರಿಯೂ ಹತ್ತಿರವೇ ಮಲಗುತ್ತಿದ್ದುದರಿಂದ ಸುಮಾಳ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು. ಸುಮಾಳನ್ನು ಯೋಚನೆಗಳು ಕಾಡುತ್ತಿದ್ದವು. ಎಲ್ಲಾ ಸರಿಯಾಗಿದ್ದಿದ್ದರೆ ಸುಧಾಕರ ಹೇಳಿಬಿಡುತ್ತಿದ್ದ… ಈ ಮೌನಕ್ಕೆ ಏನರ್ಥ? ನಿದ್ರೆ ಇಲ್ಲದೆ ರಾತ್ರಿ ಸರಿದಿತ್ತು.

ಸುಮಾ ಬೆಳಿಗ್ಗೆ ಎದ್ದಾಗ ಸುಧಾಕರನೂ ಅವಳ ಹಿಂದೇ ಎದ್ದು ಬಂದಿದ್ದ. ಸುಮಾ ಮುಖ ತೊಳೆದು ದೇವರಿಗೆ ಕೈಮುಗಿದು ಹಿಂತಿರುಗುವಾಗ ತನ್ನ ಹಿಂದೆ ನಿಂತಿದ್ದ ಸುಧಾಕರನನ್ನು ಕಂಡು ಅವಳಿಗೆ ಅಚ್ಚರಿಯಾಗಿತ್ತು. ಅವನು ಯಾವತ್ತೂ ಹಾಗೆ ಮಾಡಿದವನಲ್ಲ.

“ಯಾಕೆ? ಏನೆಂದು ರಿಪೋರ್ಟು ಬಂದಿದೆ? ಸೀರಿಯಸ್ ಏನೂ ಇಲ್ಲತಾನೇ?” ಸುಮಾ ಹೃದಯವನ್ನು ಗಟ್ಟಿಮಾಡಿ ಪ್ರಶ್ನಿಸಿದ್ದಳು. “ಸುಮಾ, ನಿನ್ನ ದೇವರು ನಿನ್ನ ಕೈಬಿಟ್ಟ. ನೀನು ಮಾಡಿದ ಪೂಜೆ ಪುರಸ್ಕಾರಗಳೆಲ್ಲಾ ನೀರಮೇಲೆ ಮಾಡಿದ ಹೋಮದಂತಾಗಿದೆ. ನಾನು ಹೇಳುವುದನ್ನು ಕೇಳುವ ಶಕ್ತಿ ನಿನಗಿದೆಯೇ?”

“ಯಾಕೆ ಏನಾಗಿದೆ ಪ್ರಹ್ಲಾದನಿಗೆ?” ಏನೂ ಆಗದಿರಲಿ ಎನ್ನುವ ಆಸೆಯಿಂದ ಕೇಳಿದ್ದಳು.

“ಲ್ಯೂಕೇಮಿಯಾ; ರಕ್ತ ಕ್ಷಯ”

“ಏನು?” ಎನ್ನುತ್ತಾ ಅಲ್ಲೇ ಕುಸಿದು ಕುಳಿತ ಸುಮಾಳ ಹತ್ತಿರವೇ ಕುಳಿತ ಸುಧಾಕರ.

“ಹೌದು ನಮ್ಮ ಮಗುವಿಗೆ ಬ್ಲಡ್ ಕ್ಯಾನ್ಸರ್” ಎಂದವನೇ ಸುಮಾಳನ್ನು ಬಳಸಿ ಹಿಡಿದು ರಾತ್ರಿಯಿಂದ ಅದುಮಿ ಹಿಡಿದಿಟ್ಟಿದ್ದ ದುಃಖವನ್ನು ಹೊರ ಚೆಲ್ಲುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ. ಇಬ್ಬರೂ ಎಷ್ಟು ಹೊತ್ತು ಹಾಗೆ ಕುಳಿತ್ತಿದ್ದರೋ? ಇಬ್ಬರ ಕಣ್ಣಿನಿಂದಲೂ ಇಳಿಯುತ್ತಿದ್ದ ನೀರಿಗೆ ಕಟ್ಟೆಯೇ ಇರಲಿಲ್ಲ.

ಹೊರಗೆ ಹಾಲಿನವನ ಸೈಕಲ್ಲಿನ ಬೆಲ್ಲು ಕಿವಿಗಪ್ಪಳಿಸಿದಾಗ ಸುಧಾಕರ ಮೇಲೇಳುತ್ತಾ, “ಸುಮಾ, ಮಕ್ಕಳಿಗೆ ಏನೂ ತಿಳಿಯೋದು ಬೇಡ. ಪ್ರಹ್ಲಾದನಿಗಂತೂ ತಿಳಿಯಲೇ ಬಾರದು. ಡಾಕ್ಟರು ಬೆಳಿಗ್ಗೆ ಬರ್‍ತಾರೆ. ಅವನನ್ನು ನರ್ಸಿಂಗ್ ಹೋಮಿಗೆ ಕರೆದುಕೊಂಡು ಹೋಗಬೇಕು. ಕೂಡಲೇ ಟ್ರೇಟ್‌ಮೆಂಟ್‌ ಶುರುಮಾಡಬೇಕಂತೆ. ನೀನು ಧೈರ್ಯದಿಂದ ತಯಾರಾಗು. ಹುಟ್ಟನ್ನು ತಡೆಯಬಹುದು. ಸಾವನ್ನು ತಡೆಯಬಹುದೇ? ನಮ್ಮಿಂದ ಏನು ಮಾಡುವುದು ಸಾಧ್ಯವೋ ಅದನ್ನೆಲ್ಲಾ ಮಾಡೋಣ, ಮತ್ತೆ ನೀನು ಪೂಜಿಸಿದ ದೇವರ ಇಚ್ಛೆ”

ಸುಮಾ ಒಂದು ಕ್ಷಣ ಎದುರಿಗಿದ್ದ, ಇಷ್ಟು ದಿನ ಭಕ್ತಿಯಿಂದ ಕೈಮುಗಿಯುತ್ತಿದ್ದ ದೇವರ ಮೂರ್ತಿಯನ್ನೇ ನೋಡಿದ್ದಳು. ನೋವು ತುಂಬಿದ ಕೋಪ ಉಕ್ಕಿ ಬಂದಿತ್ತು. ಇಷ್ಟು ವರುಷಗಳಿಂದ ಒಂದೇ ಮನಸ್ಸಿನಿಂದ, ಭಕ್ತಿಯಿಂದ ಪೂಜಿಸಿಕೊಂಡು ಬಂದಿದ್ದ ದೇವರು ನನಗೆ ಕೊಟ್ಟ ಉಡುಗೊರೆ ಇದೇ ಏನು? ನನ್ನ ಮಗು ಬದುಕಿ ಉಳಿಯುವುದು ಸಾಧ್ಯವೇ ಇಲ್ಲವೇ? ಇನ್ನು ನಾನು ನನ್ನ ಮಗು ಹುಶಾರಾಗುವವರೆಗೆ ಎದ್ದು ನಿಲ್ಲುವ ಶಕ್ತಿಯೇ ಮಾಯವಾದಂತೆ ಭಾಸವಾಗಿತ್ತು. ಯಾವ ತಪ್ಪಿಗೆ ಈ ಶಿಕ್ಷೆ?

ಸುಮಾಳಿಗೆ ಏನು ಮಾಡಲೂ ಮನಸ್ಸು ಬರುತ್ತಿರಲಿಲ್ಲ. ಹಾಲು ತಂದು ಒಳಗಿಟ್ಟ ಸುಧಾಕರ. “ಸುಮಾ, ನಮ್ಮ ನೋವು ನಮ್ಮೊಳಗೇ ಇರಲಿ, ಅದು ನಮ್ಮನ್ನು ಸುಟ್ಟು ಬೂದಿ ಮಾಡಲಿ. ಮಕ್ಕಳಿಗೆ ಗೊತ್ತಾಗುವುದು ಬೇಡ. ಧಾರಿಣಿಗೆ ಎರಡನೇ ವರುಷದ ಪಿಯೂಸಿ ಪರೀಕ್ಷೆ ಹತ್ತಿರ ಬಂದಿದೆ. ಅವಳ ಮನಸ್ಸನ್ನೂ ಕೆಡಿಸುವುದು ಬೇಡ. ಅದ ಹಾಗೆ ಆಗಲಿ ಎಂದು ಮನಸ್ಸು ಗಟ್ಟಿಮಾಡಿಕೊಳ್ಳುವುದಷ್ಟೇ ನಮಗೆ ಉಳಿದಿರುವುದು.”

“ನಾವು ಹೇಳದಿದ್ದರೂ ಏನಂತ ಗ್ರಹಿಸಿಕೊಳ್ಳುವಷ್ಟು ನಮ್ಮ ಮಕ್ಕಳು ದೊಡ್ಡದಿದ್ದಾರಲ್ಲ? ಪ್ರಹ್ಲಾದ ಅವನ ಮೇಲೆ ನಡೆಯುವ ಟೆಸ್ಟುಗಳಿಂದ ಖಂಡಿತಾ ಎಲ್ಲಾ ತಿಳಿದುಕೊಳ್ಳುತ್ತಾನೆ” ದುಃಖ ಅವಳ ದನಿಯಲ್ಲಿ ಹೆಪ್ಪುಗಟ್ಟಿತ್ತು.

“ಆಗ ನೋಡೋಣ, ಈಗ ತಿಳಿಯೋದು ಬೇಡ”

“ಆಸ್ಪತ್ರೆಗೆ ಯಾಕೆ ಹೋಗುವುದೆಂದು ಕೇಳಿದರೆ ಏನನ್ನಲ್ಲಿ?”

“ಆಗಾಗ ಜ್ವರ ಬರುತ್ತಿರುವುದಕ್ಕೆ ಸರಿಯಾಗಿ ಟೆಸ್ಟ್ ಮಾಡಿಸಲೆಂದು ಹೇಳೋಣ.”

ಏನೂ ಮಾತಾಡದೇ ಸುಮಾ ಬಚ್ಚಲಿಗೆ ಹೋಗಿ ಸರಿಯಾಗಿ ಮುಖತೊಳೆದು ಮೂಗು ಕ್ಲೀನ್ ಮಾಡಿ ಬಂದು ಬೆಳಗ್ಗಿನ ಉಪಹಾರಕ್ಕೆ ಮಧ್ಯಾಹ್ನದ ಊಟಕ್ಕೆ ತಯಾರು ಮಾಡಿದ್ದಳು. ಮಗಳು ಎದ್ದು ಬಂದಾಗ ಅವಳ ಮುಖ ನೋಡುವ ಧೈರ್ಯ ಮಾಡಿರಲಿಲ್ಲ. ಎಲ್ಲಿ ಕಣ್ಣೀರಿನ ಕಟ್ಟೆ ಒಡೆಯುವುದೋ ಎನ್ನುವ ಭಯದಲ್ಲಿ ಮಕ್ಕಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದಳು. ಪ್ರಹ್ಲಾದ ಎದ್ದು ಬಂದಾಗ ಸ್ನಾನ ಮಾಡಲು ಹೋಗಿದ್ದಳು. ಅವನನ್ನು ನೋಡುವುದೇ ಅವಳಿಂದ ಸಾಧ್ಯವಿರಲಿಲ್ಲ. ವರುಷ ಮೀರಿ ಬೆಳೆದು ನಿಂತ ಮಗುವಿಗೆ ಎಂಥಾ ಸೀಕು. ಎಲ್ಲೂ ಏನೂ ಸೂಚನೆ ಕೊಡದೇ ಕಬಳಿಸಲು ಸಿದ್ಧನಾಗಿದ್ದಾನೆ ಯಮರಾಯ ! ಅವನ ಕೈಯಿಂದ ಮಗುವನ್ನು ರಕ್ಷಿಸುವುದು ಹೇಗೆ?

ಅವಳು ಸ್ನಾನಮಾಡಿ ಹೊರಬರುವಾಗ ಧಾರಿಣಿ ಎಲ್ಲರಿಗೂ ತಟ್ಟೆ ಇಟ್ಟಿದ್ದಳು. ಮೇಜಿನ ಮೇಲಿದ್ದ ಇಡ್ಲಿಯನ್ನು ನೋಡಿ ಪ್ರಹ್ಲಾದ, “ಅಮ್ಮಾ ದಿನಾ ಹೀಗೇ ಇಡ್ಲಿಯೇ ಮಾಡಿ. ನನಗೆ ಬಿಸಿ ಬಿಸಿ ಇಡ್ಲಿ ತುಪ್ಪ ಸಕ್ಕರೆಯಲ್ಲಿ ತಿನ್ನುವುದೆಂದರೆ ಬಾರೀ ಖುಷಿ”

ಮಗನ ಮಾತು ಕೇಳಿ ಸುಮಾ, ಸುಧಾಕರ ಇಬ್ಬರಿಗೂ ಕಣ್ಣು ತುಂಬಿ ಬಂದಿತ್ತು. ಇಡ್ಲಿ ಮಾಡಿದರೆ ೭-೮ ಇಡ್ಲಿ ತಿನ್ನುತ್ತಿದ್ದ. ಒಂದು ಚಟ್ಟಿಪುಡಿ ಮತ್ತು ತೆಂಗಿನ ಎಣ್ಣೆ ಹಾಕಿ, ಮತ್ತೊಂದು ಕಾಯಿಚಟ್ನಿಯಲ್ಲಿ, ಮತ್ತೊಂದು ಉಪ್ಪಿನಕಾಯಿಯಲ್ಲಿ ಮತ್ತು ಕೊನೆಗೆ ತುಪ್ಪ ಸಕ್ಕರೆಯಲ್ಲಿ ಸುಮಾಳಿಗೆ ಅವನು ತಿನ್ನುವುದನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಕೂಡಲೇ ಅಡುಗೆಮನೆಗೆ ಓಡಿದ್ದಳು- ಕಾಫಿ ಮಾಡಿತರುವ ನೆವದಲ್ಲಿ. ಅಲ್ಲಿ ಕಣ್ಮರಸಿಕೊಂಡು ದಪ್ಪಹಾಲಿಗೆ ಬ್ರೂ ಬೆರೆಸಿ ಸಕ್ಕರೆ ಹಾಕಿ ತಂದಾಗ ಪ್ರಹ್ಲಾದ, “ಅಮ್ಮನಿಗೆ ನನಗೆ ಎಂಥ ಕಾಫಿ ಬೇಕೆಂದು ಗೊತ್ತು. ಅವರು ಮಾಡಿದ ಕಾಫಿಯ ರುಚಿ ಬೇರಾರ ಕಾಫಿಗೂ ಇಲ್ಲ.”

ಯಾವಾಗಲೂ ಮಗ ಹೀಗನ್ನುವಾಗ ತಂದೆ ಹೇಳುವುದಿತ್ತು. “ನೀನೊಬ್ಬ ನಿನ್ನಮ್ಮನನ್ನು ಹೊಗಳಲು, ನಿನ್ನ ಹೊಗಳಿಕೆ ಕೇಳಿಯೇ ಅವಳು ಅಷ್ಟು ದಪ್ಪಕ್ಕಾಗಿರುವುದು.”

ತಂದೆಯಿಂದ ಯಾವ ಪ್ರತಿಕ್ರಿಯೆಯೂ ಬಾರದಾಗ, “ಯಾಕೆ ಪಪ್ಪಾ ತಲೆನೋವು ಕಡಿಮೆ ಆಗಿಲ್ಲವೇ? ಒಂದು ನೊವಾಲ್ಜಿನ್ ತಗೊಳ್ಳಿ ಎಲ್ಲ ಸರಿಯಾಗುತ್ತದೆ.”

“ಇವನೊಬ್ಬ ದೊಡ್ಡ ಡಾಕ್ಟರ್. ನೀನು ಹೀಗೆ ಎಲ್ಲರಿಗೂ ಮದ್ದು ಪ್ರಿಸ್ಕ್ರೈಬ್ ಮಾಡ್ತಾ ಹೋದರೆ ಬೇರೆ ಡಾಕ್ಟರುಗಳು ಶಾಪ್ ಮುಚ್ಚಬೇಕಷ್ಟೇ” ಧಾರಿಣಿ ಅಂದಾಗ ಪ್ರಹ್ಲಾದ “ಹೌದು, ನಾನು ಡಾಕ್ಟರ್ ಆಗುವವನೇ ಅಲ್ವೆ?”

ಹೆಚ್ಚು ಕೇಳಲಾಗದೇ ಸುಧಾಕರ ಅಲ್ಲಿಂದ ಎದ್ದು ಹೋಗಿದ್ದ.

ಮಕ್ಕಳಿಬ್ಬರೂ ಜಗಳವಾಡದೆ ದಿನವೇ ಶುರುವಾಗುತ್ತಿರಲಿಲ್ಲ. ಸುಮಾ ಇಬ್ಬರಿಗೂ ಹೇಳುತ್ತಿದ್ದಳು. “ಬೆಳಗ್ಗೆ ಎದ್ದ ಕೂಡಲೇ ಶುರುಮಾಡ್ತೀರಲ್ಲ? ಪ್ರೀತಿಯಿಂದ ಮಾತಾಡಿಕೊಂಡು ದಿನ ಶುರುಮಾಡಬಾರದೇ?”

ಆದರೆ ಇವತ್ತು ಬೆಳಗ್ಗಿನಿಂದ ಸುಮಾಳಿಗೆ ಮಾತೇ ಮರೆತಂತಾಗಿತ್ತು ಬಾಯಿಬಿಟ್ಟರೆ ಎಲ್ಲಿ ಸ್ವರದ ನಡುಕ ಮಕ್ಕಳಿಗೆ ಗೊತ್ತಾಗುವುದೋ ಎನ್ನುವ ಭಯಬೇರೆ.

ಸುಧಾಕರನೇ ಮಗನೊಡನೆ “ಬಾಬೂ, ಬೇಗ ಸ್ನಾನಮಾಡಿ ಹೊರಡು ಡಾಕ್ಟರ್ ಅಂಕಲ್ ಬರ್‍ತಾರೆ. ಆಸ್ಪತ್ರೆಗೆ ಹೋಗಬೇಕು. ನಿನಗೆ ಆಗಾಗ ಜ್ವರ ಬರುವುದಕ್ಕೆ ಸರಿಯಾದ ಟ್ರೇಟ್‌ಮೆಂಟ್ ಕೊಡಬೇಕಾದರೆ ಆಸ್ಪತ್ರೆಗೆ ಸೇರಬೇಕಂತೆ.”

ಪ್ರಹ್ಲಾದನ ಪ್ರಶ್ನೆ ಬರುವ ಮೊದಲೇ ಸುಧಾಕರ ಅಲ್ಲಿಂದ ಮರೆಯಾಗಿದ್ದ.

ಆಸ್ಪತ್ರೆಗೆ ಹೋಗಬೇಕೆಂದುದನ್ನು ಕೇಳಿದ ಧಾರಿಣಿ ತಾಯಿಯ ಹತ್ತಿರ ಯಾಕೆಂದು ಕೇಳಲು ಹೋದಾಗ ಸುಮಾ ಪೆಟ್ಟಿಗೆಗೆ ಬಟ್ಟೆ ತುಂಬಿಸುವುದನ್ನು ನೋಡಿ, “ಯಾಕಮ್ಮಾ? ಅವನು ಆಸ್ಪತ್ರೆಯಲ್ಲಿ ಎಷ್ಟು ದಿನ ನಿಲ್ಲಬೇಕು?”

ಸುಮಾ ಮಗಳ ಮುಖ ನೋಡದೇ, ತಲೆತಗ್ಗಿಸಿಕೊಂಡೇ, “ಒಂದು ನಾಲ್ಕು ದಿನ ನಿಲ್ಲಬೇಕಾಗಬಹುದು” ಸುಮಾಳ ಸ್ವರ ನಡುಗುತ್ತಿತ್ತು. ಧಾರಿಣಿ ಹತ್ತಿರ ಬಂದು ತಾಯಿಯ ಮುಖವನ್ನೇ ನೋಡ್ತಾ, “ಯಾಕಮ್ಮಾ? ಪ್ರಹ್ಲಾದನಿಗೆ ಏನಾಗಿದೆ?”

“ಏನಿಲ್ಲ ಆಗಾಗ ಜ್ವರ ಬರ್‍ತಿದೆಯಲ್ಲ? ಯಾಕೆಂದು ಸರಿಯಾಗಿ ಪರೀಕ್ಷಿಸಿ ನೋಡೋಣವೆಂದು ಡಾಕ್ಟರ್ ಹೇಳಿದ್ದಾರೆ.”

“ಅಷ್ಟಕ್ಕೆ ಅಳುವುದೇಕೆ? ಮದ್ದು ಮಾಡಿದರೆ ಹುಷಾರಾಗುತ್ತಾನೆ” ಸುಮಾ ಏನೆಂದು ಉತ್ತರಿಸಿಯಾಳು? ಮದ್ದು ಕೊಟ್ಟು ಗುಣ ಮಾಡುವುದು ಸಾಧ್ಯವಾದರೆ ಏನಾದರೂ ಮಾಡಿ ಗುಣಪಡಿಸುವುದಿಲ್ಲವೇ? ಏನೆಂದು ಹೇಳಲಿ ಮಗಳಿಗೆ? ಸುಮಾಳ ಮೌನ ಕಂಡ ಧಾರಿಣಿ ಹೆಚ್ಚು ಕೇಳಲು ಹೋಗಿರಲಿಲ್ಲ. ಪ್ರಹ್ಲಾದನಿಗೆ ಏನಾದರೂ ಆದರೆ ಅಮ್ಮನಿಂದ ಸಹಿಸಲು ಸಾಧ್ಯವಿಲ್ಲವೆಂದು ಅವಳಿಗೆ ಗೊತ್ತು.

ಡಾಕ್ಟರ್‌ ಬರುವಾಗ ಗಂಟೆ ಹತ್ತಾಗಿತ್ತು. ಅವರು ನರ್ಸಿಂಗ್ ಹೋಮಿಗೆ ಹೋಗಿ ಅಲ್ಲಿಯ ಡಾಕ್ಟರ ಹತ್ತಿರ ಮಾತಾಡಿ ರೂಮು ಬುಕ್ ಮಾಡಿ ಬಂದಿದ್ದರು.

ಪ್ರಹ್ಲಾದ ನೇರವಾಗಿ ಡಾಕ್ಟರರೊಡನೆ, “ಯಾಕೆ ಅಂಕಲ್ ನಾನು ಆಸ್ಪತ್ರೆಯಲ್ಲಿರಬೇಕು? ಪರೀಕ್ಷೆ ಮಾಡಿಸಿ ಮನೆಗೆ ಬರಲಾಗದೇ?”

“ಬರುವೆಯಂತೆ. ಒಂದೆರಡು ದಿನ ನಿಲ್ಲಬೇಕಾದೀತು. ನಿನ್ನ ದೇಹದಲ್ಲಿ ರಕ್ತ ಕಡಿಮೆ ಇದೆ. ಸ್ವಲ್ಪ ರಕ್ತಕೊಡಬೇಕಾದೀತು. ಇದನ್ನು ಕೇಳಿ ಸುಮಾಳ ಹೃದಯ ಚೀರಿತ್ತು. ೨-೩ ದಿನದಲ್ಲಿ ಮಗು ಹುಶಾರಾದರೆ ನಮ್ಮ ಪುಣ್ಯ. ಆದರೆ ಹಾಗೆ ಆಗುವುದೇ?

ತಾಯಿ, ತಂದೆ, ಡಾಕ್ಟರ ಮುಖದಲ್ಲಿದ್ದ ಕಳವಳ ನೋಡಿ ಧಾರಿಣಿಗೂ ಏನೋ ಸರಿಯಿಲ್ಲ ಎಂದು ಅನಿಸುತ್ತಿತ್ತು.

ಪ್ರಹ್ಲಾದ ನಗುತ್ತಾ “ಯಾರು ಹೇಳಿದ್ದು ನನ್ನಲ್ಲಿ ರಕ್ತ ಕಡಿಮೆಯಾಗಿದೆಯೆಂದು? ನಾನೇ ಬೇಕಾದರೆ ಬೇರೆಯವರಿಗೆ ರಕ್ತ ಕೊಡುತ್ತೇನೆ ಅಷ್ಟು ರಕ್ತ ನನ್ನಲ್ಲಿದೆ.”

ಪ್ರಹ್ಲಾದನ ಮಾತು ಕೇಳಿ ಡಾಕ್ಟರ್ ಕಣ್ಣು ಒದ್ದೆಯಾಗಿತ್ತು. ಇಷ್ಟು ದಿನ ತಾನೂ ಭಾವಿಸಿದ್ದೆ. ಪ್ರಹ್ಲಾದ ಗಟ್ಟಿಮುಟ್ಟಾದ ಮಗು, ವಯಸ್ಸು ಮೀರಿದ ಬೆಳವಣಿಗೆ: ಉಲ್ಲಾಸದ ಬುಗ್ಗೆ. ಯಾವಾಗ ನೋಡಿದರೂ ಕುಣಿಯುತ್ತಾ ಗಲಾಟೆ ಮಾಡುತ್ತಲೇ ಇರುತ್ತಿದ್ದ. ಆದರೆ ಈಗ ಎದುರಿಸಬೇಕಾಗಿರುವುದು ಬೇರೆಯೇ ರೀತಿಯ ಕಠೋರ ಸತ್ಯ.

ಮಗನ ಮಾತು ಕೇಳಿದ ಸುಮಾ ಮಲಗುವ ಕೋಣೆಗೆ ಓಡಿದರೆ ಸುಧಾಕರ ಬಚ್ಚಲು ಮನೆಗೆ ಹೋಗಿದ್ದ. ಅವರಿಂದ ದುಃಖ ತಡೆಯಲು ಸಾಧ್ಯವಾಗಿರಲಿಲ್ಲ. ತಾಯಿಯ ಹಿಂದೇ ಓಡಿದ ಧಾರಿಣಿ ತಾಯಿಯ ತೋಳು ಹಿಡಿದು, “ಅಮ್ಮಾ ಏನಾಗಿದೆ ಪ್ರಹ್ಲಾದನಿಗೆ? ಹೇಳಮ್ಮಾ ಏನಾಗಿದೆ ಪ್ರಹ್ಲಾದನಿಗೆ?”

ಅಳುವೇ ಸುಮಾಳ ಉತ್ತರವಾಗಿತ್ತು. ಡಾಕ್ಟರು ಹೋಗಲು ಅವಸರ ಮಾಡಿದಾಗ ಕಣ್ಮರಸಿಕೊಂಡು ಹೊರಬಂದಿದ್ದಳು. ಏನು ಹೇಳಲಿ? ಪ್ರಹ್ಲಾದ ಅಲ್ಪಾಯುಷಿ ಅನ್ನಲೇ?

ಮತ್ತೆ ಶುರುವಾಗಿತ್ತು ಆಸ್ಪತ್ರೆಯ ಓಡಾಟ, ರಕ್ತಕೊಡುವುದು ಕೀಮೋಥೆರಪಿ. ಸ್ವಲ್ಪ ಸುಧಾರಿಸಿದ ಹಾಗೆ ಕಂಡು ಮನೆಗೆ ಬಂದು ಒಂದು ತಿಂಗಳು ಪ್ರಹ್ಲಾದ ಆಚೀಚೆ ಅಡ್ಡಾಡುತ್ತಿದ್ದ. ಶಾಲೆಗೆ ಹೋಗುವುದಾಗಿ ಹಟ ಹಿಡಿಯುತ್ತಿದ್ದ. ಹೋಗಿ ಬಂದರೆ ಸುಸ್ತಾಗುತ್ತಿದ್ದ. ತಮ್ಮ ಕಣ್ಣಮುಂದೆ ದಿನ ದಿನಕ್ಕೆ ಕುಸಿಯುತ್ತಿರುವ ಮಗುವನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎನ್ನುವ ಕಾತರ ಅಪ್ಪ ಅಮ್ಮನಿಗೆ ಹೆಚ್ಚಾಗುತ್ತಿತ್ತು. ಧಾರಿಣಿಗೆ ಎಲ್ಲವೂ ಅರ್ಥವಾಗಿತ್ತು. ಜೀವನದ ಮೇಲೆ ಇಷ್ಟು ಪ್ರೀತಿ ಬೆಳೆಸಿಕೊಂಡಿದ್ದ ಹುಡುಗ ಹದಿನೈದು ವರುಷದ ಮೊದಲೇ ಜೀವನಕ್ಕೆ ವಿದಾಯ ಹೇಳಬೇಕೆಂದರೆ ಎಂಥಾ ಕ್ರೌರ್‍ಯ!

ಮಗನನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಬೇಕೆಂದು ಅವನನ್ನು ವೆಲ್ಲೂರಿಗೆ ಕರೆದುಕೊಂಡು ಹೋಗಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಮಾಡಸುವುದೆಂದು ಸುಮಾ ಸುಧಾಕರರು ನಿರ್ಧರಿಸಿದ್ದರು.

ಖರ್ಚಿಗೆ ಹಣ? ಲಕ್ಷ ಲಕ್ಷದ ಲೆಕ್ಕ. ಸುಮಾ ಪತಿಯೊಡನೆ, “ಈ ಮನೆಯನ್ನು ಮಾರುವ, ನನಗೆ ಮನೆ ಬೇಡ. ಪ್ರಹ್ಲಾದ ಬೇಕು. ಇಲ್ಲಿ ಅಲ್ಲದಿದ್ದರೆ ಅಮೇರಿಕಾಕ್ಕೆ ಹೋಗೋಣ. ನನಗೆ ಪ್ರಹ್ಲಾದ ಬೇಕು” ಎದೆಯೊಡೆಯುವಂತೆ ನುಡಿದಾಗ ಸುಧಾಕರ ಅದನ್ನೇ ಯೋಚಿಸುತ್ತಿದ್ದ. ಕೂಡಲೇ ಮನೆ ಮಾರುವ ತಯಾರಿ ನಡೆಸಿದ್ದರು.

ಅವಸರಕ್ಕೆ ಮಾರುವುದೆಂದರೆ ಎಲ್ಲರೂ ಕಡಿಮೆಗೇ ಕೇಳುತ್ತಾರೆ. ಕೊನೆಗೆ ಅವರ ಗುರುತಿನವರೇ ಒಬ್ಬರು ೩೦ ಲಕ್ಷಕ್ಕೆ ವ್ಯಾಪಾರ ಕುದುರಿಸಿದಾಗ, ಬ್ಯಾಂಕಿನ ಸಾಲ ತೀರಿಸಿ ಮನೆಯನ್ನು ಅವರ ಹೆಸರಿಗೆ ರಿಜಿಸ್ಟರ್ ಮಾಡಲು ಸ್ವಲ್ಪ ಸಮಯ ತಾಗುವುದೆಂದು ಹತ್ತು ಲಕ್ಷ ಅಡ್ವಾನ್ಸ್ ತಗೊಂಡು ಪ್ರಹ್ಲಾದನನ್ನು ಕರೆದುಕೊಂಡು ಸುಮಾ ಸುಧಾಕರರು ವೆಲ್ಲೂರಿಗೆ ಪ್ರಯಾಣಿಸಿದ್ದರು.

ಧಾರಿಣಿಯನ್ನು ಸುಧಾಕರನ ತಾಯಿಯನ್ನು ಮನೆಯಲ್ಲಿ ನಿಲ್ಲಿಸಿ ಅವರಿಬ್ಬರೇ ಪ್ರಹ್ಲಾದನ ಜತೆಗೆ ಹೋದಾಗ ಧಾರಿಣಿ ಬಿಕ್ಕಿ ಬಿಕ್ಕಿ ಅತ್ತಿದ್ದಳು.

ವೆಲ್ಲೂರಿನ ಆಸ್ಪತ್ರೆಯ ವಾತಾವರಣ ನೋಡಿ ಸುಮಾಳಿಗೆ, ಇಲ್ಲಿ ತನ್ನ ಮಗ ಹುಶಾರಾದರೂ ಆಗಬಹುದು ಎನ್ನುವ ಆಶಾಕಿರಣ ಮೂಡಿದಾಗ, ತಾವು ಮೊದಲೆ ಅವನನ್ನು ಇಲ್ಲಿಗೆ ಕರೆದುತಾರದೇ ತಪ್ಪು ಮಾಡಿದೆವೇನೋ ಎಂದು ಅನಿಸದಿರಲಿಲ್ಲ.

ವೆಲ್ಲೂರಿಗೆ ಹೋಗುವಾಗ ಪ್ರಹ್ಲಾದ ತನ್ನ ಗೆಳೆಯರೊಡನೆ “ನಾನು ಹುಶಾರಾಗಿ ಬರ್‍ತೇನೆ. ಅಲ್ಲಿ ಹುಶಾರಾಗದಿದ್ದರೆ ಅಮ್ಮ ನನ್ನನ್ನು ಅಮೇರಿಕಾಕ್ಕೆ ಆದರೂ ಕರೆದುಕೊಂಡು ಹೋಗಿ ಗುಣಪಡಿಸಿ ತರುತ್ತಾರೆ” ಎಂದು ಹೇಳಿದ್ದ.

ವೆಲ್ಲೂರಿನ ಡಾಕ್ಟರುಗಳು ಅವನ ಹಿಂದಿನ ರಿಮೋರ್ಟುಗಳನ್ನು, ಅವನ ದೈಹಿಕ ಪರಿಸ್ಥಿತಿಯನ್ನು ಪರೀಕ್ಷಿಸಿ ಎರಡು ದಿನ ಬಿಟ್ಟು Bone marrow ಟೆಸ್ಟ್ ಮಾಡಲು ದಿನ ನಿರ್‍ಧರಿಸಿದ್ದರು.

ಹತ್ತಿರದವರ Bone marrowವನ್ನೇ ಟ್ರಾನ್ಸ್‌ಪ್ಲಾಂಟ್ ಮಾಡಿದರೆ ಒಳ್ಳೆಯದು. ಪ್ರಹ್ಲಾದನ ಒಡಹುಟ್ಟಿದವರು ಯಾರಾದರೂ ಇದ್ದರೆ ಅವರನ್ನು ಕರೆಸಿ ಅವರ Bone marrow ಕೂಡಾ ಟೆಸ್ಟ್ ಮಾಡಬೇಕು ಎಂದಾಗ ಸುಧಾಕರ ಧಾರಿಣಿಯನ್ನು ಕೂಡಲೇ ಕರೆದು ತರಲು ಗೆಳೆಯನಿಗೆ ಫೋನುಮಾಡಿ ತಿಳಿಸಿದ್ದ.

ವೆಲ್ಲೂರಿನಲ್ಲಿ ಸುಮಾಳ ಚಿಕ್ಕಮ್ಮನ ಮನೆ ಇತ್ತು. ಅಲ್ಲಿಂದಲೇ ಊಟತಿಂಡಿ ತಂದು ಕೊಡುತ್ತಿದ್ದರು. ಆದಿನ ಸಂಜೆ ಪ್ರಹ್ಲಾದ. “ಅಮ್ಮ ನನಗೆ ಬಿಸಿ ಬಿಸಿ ಅನ್ನ ಮತ್ತು ನೀನು ಮಾಡಿದ ತಿಳಿಸಾರು ಬೇಕು’ ಎಂದಾಗ ಸುಮಾ, “ಆಯ್ತು ಮಗೂ ನಾನೇ ಮನೆಗೆ ಹೋಗಿ ಮಾಡಿ ತರುತ್ತೇನೆ. ನೀನು ಸ್ವಲ್ಪ ಮಲಗಿರು.”

“ನಾನು ಮಲಗುವುದಿಲ್ಲ. ಆ ವಿಷ್ಣು ಸಹಸ್ರನಾಮ ಪುಸ್ತಕ ಕೊಡು. ಒಮ್ಮೆ ಓದಿ ಮುಗಿಸುತ್ತೇನೆ.”

ಸುಮಾ, ಅವನ ಚೀಲದಿಂದ ಆ ಪುಸ್ತಕ ತೆಗೆದು ಕೊಟ್ಟಿದ್ದಳು. ಪ್ರಹ್ಲಾದ ಅದನ್ನೋದುತ್ತಾ, ಒಂದೆರಡು ಪುಟ ಮುಗಿಸುತ್ತಲೇ, “ಅಮ್ಮ ನನಗೆ ಕಣ್ಣು ಸರಿಯಾಗಿ ಕಾಣ್ತಿಲ್ಲ. ಓದಲಾಗೋದಿಲ್ಲ.”

ಸುಮಾ ಸಿಟ್ಟಿನಿಂದ ಅವನ ಕೈಯಿಂದ ಪುಸ್ತಕ ಕಿತ್ತುಕೊಂಡು ಅಲ್ಲೇ ಇದ್ದ ಮೇಜಿನ ಮೇಲೆ ಬಿಸಾಡಿ-

“ಬಾಬೂ ಈಗ ನೀನೇನೂ ಓದಬೇಡ. ಮಲಗು ಹುಷಾರಾದ ಮೇಲೆ ಓದುವೆಯಂತೆ.”

“ಅಮ್ಮಾ ಯಾಕೆ ಅಲ್ಲಿ ಬಿಸಾಡಿದ್ದು? ಕೊಡು. ನಾನು ಅದನ್ನು ಕೈಯಲ್ಲಿ ಹಿಡಿದುಕೊಂಡೇ ಮಲಗುತ್ತೇನೆ. ಹಾಗೆ ಬಿಸಾಡಬೇಡ” ಎಂದು ಕಣ್ಣು ತುಂಬಿ ನುಡಿದಾಗ ಸುಮಾಳಿಗೆ ತನ್ನ ತಪ್ಪಿನ ಅರಿವಾಗಿ, ಅದನ್ನು ಎತ್ತಿ ಪ್ರಹ್ಲಾದನಿಗೆ ಕೊಟ್ಟು ಅವನನ್ನು ಮುದ್ದಿಸುತ್ತಾ.

“ನನಗೆ ದೇವರ ಮೇಲೆ ಸಿಟ್ಟು ಬಂದಿದೆ. ಅದಕ್ಕೆ ಹಾಗೆ ಮಾಡಿದೆ. ಮೊದಲು ನೀನು ಹುಶಾರಾಗು. ನೀನು ಹುಶಾರಾಗುವವರೆಗೆ ನನಗೆ ದೇವರ ಮೇಲೆ ನಂಬಿಕೆ ಇಲ್ಲ.”

“ನೀನು ಹಾಗನ್ನಬೇಡಮ್ಮ, ನನಗೆ ದೇವರ ಮೇಲೆ ಭಕ್ತಿ ಇಡಲು ಕಲಿಸಿದ್ದೇ ನೀನು. ನನಗೇನಾದರೂ ದೇವರು ದೇವರೇ, ನನಗೆ ಈ ಪುಸ್ತಕ ಕೈಯಲ್ಲಿದ್ದರೆ ಏನೋ ಸಂತೋಷ, ನೀನು ಹೋಗಿ ಬಾ. ನಾನು ಹೀಗೇ ಮಲಗಿರುತ್ತೇನೆ.” ಎಂದು ಕಣ್ಣುಮುಚ್ಚಿ ಮಲಗಿದಾಗ ಸುಮಾಳಿಗೆ ಕಾಣದ ದೇವರ ಮೇಲೆ ಇನ್ನೂ ಸಿಟ್ಟು ಬಂದಿತ್ತು. ದೇವರ ಮೇಲೆ ಭಕ್ತಿ ಇಟ್ಟವರಿಗೆ ಕಷ್ಟವಲ್ಲದೆ ಸುಖ ಯಾವಾಗ ಕೊಟ್ಟಿದ್ದಾನೆ? ಪುರಾಣ ಕಾಲದಿಂದಲೂ ಕಷ್ಟವೆಲ್ಲಾ ದೈವ ಭಕ್ತರಿಗೇ. ಪ್ರಹ್ಲಾದ… ಸುಮಾಳಿಗೆ ದುಃಖ ತಡೆಯಲಾಗಲಿಲ್ಲ. ತಾಯಿಯ ಬಿಕ್ಕುವಿಕೆಯನ್ನು ಕೇಳಿದ ಪ್ರಹ್ಲಾದ.

“ಅಮ್ಮಾ, ನೀನು ಅಳಬಾರದು. ನನಗೇನೂ ಆಗೋದಿಲ್ಲ. ನಾನು ಬದುಕಬೇಕು. ನನಗೆ ಬದುಕಲೇ ಬೇಕು. ಇಲ್ಲಾಗದಿದ್ದರೆ ನನ್ನನ್ನು ಅಮೇರಿಕಾಕ್ಕೆ ಆದರೂ ಕರೆದುಕೊಂಡು ಹೋಗಿ ಮದ್ದು ಮಾಡಿಸಿ, ನಾನು ಬದುಕಬೇಕು; ನಾನು ಬದುಕುತ್ತೇನೆ. ನೀನು ಅಳಬೇಡ, ನನಗೆ ಬಿಸಿ ಬಿಸಿ ಅನ್ನ, ತಿಳಿಸಾರು, ಬದನೆಕಾಯಿ ಎಣ್ಣೆಗಾಯಿಬೇಕು. ಮಾಡಿ ತರ್‍ತೀಯಾ? ನೀನು ಊಟಮಾಡಿಯೇ ಬಾ. ರಾತ್ರಿ ನೀನಿಲ್ಲೇ ಮಲಗುತ್ತೀಯಲ್ಲಾ ಅಮ್ಮಾ?”

“ಹೌದು ಇಲ್ಲೇ ಇರ್‍ತೇನೆ. ಈಗ ಪಪ್ಪ ಇಲ್ಲಿರ್‍ತಾರೆ. ನಾನು ಬೇಗ ಹೋಗಿ ನಿನಗೆ ಬೇಕಾದ್ದು ಮಾಡಿ ತರ್‍ತೇನೆ. ಅಲ್ಲಿ ತನಕ ಕಣ್ಣುಮುಚ್ಚಿ ಮಲಗು. ನಿದ್ದೆ ಬಂದರೆ ನಿದ್ದೆ ಮಾಡು.”

ಸುಮಾ ಸುಧಾಕರನಿಗೆ ಮಗನ ಹತ್ತಿರವೇ ಕುಳಿತಿರಲು ಹೇಳಿ ಹೊರಗೆ ಧಾವಿಸಿದ್ದಳು. ಮಗ ಕೇಳಿದ ಕೂಡಲೇ ಮಾಡಿಕೊಡುವ ಅಭ್ಯಾಸ ಅವಳಿಗೆ. ಮನೆಗೆ ಹೋಗಿ ಬೇಕಾದ್ದನ್ನೆಲ್ಲಾ ಮಾಡಿ ಹಿಂದೆ ಹೋಗುವಾಗ ಅವಳ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ನಾವೂ ನಿನ್ನ ಜತೆಗೆ ಬರ್‍ತೇವೆ. ಮಗುವನ್ನು ನೋಡಿದ ಹಾಗೆ ಆಗ್ತದೆ ಎಂದು ಬಂದಾಗ ಸುಮಾಳಿಗೂ ಒಂದು ರೀತಿಯ ಧೈರ್ಯವಾಗಿತ್ತು.

ಆಸ್ಪತ್ರೆಗೆ ಬಂದು ಓಡುತ್ತಲೇ ಮಗನ ಕೋಣೆಗೆ ಹೋದಾಗ ಅಲ್ಲಿ ಪ್ರಹ್ಲಾದನಿರಲಿಲ್ಲ. ಅವಳನ್ನು ನೋಡಿ ಓಡಿಬಂದ ನರ್ಸ್, “ಮಗುವಿಗೆ ತುಂಬಾ ಉಸಿರಾಟದ ಪ್ರಾಬ್ಲಮ್ ಆಗಿ ಅವನನ್ನು ಐ.ಸಿ.ಯುಗೆ ಶಿಫ್ಟ್ ಮಾಡಿದ್ದೇವೆ.”

ಅವಳ ಮಾತು ಪೂರ್ತಿಯಾಗಬೇಕಾದರೆ ಸುಮಾ ಐ.ಸಿ.ಯುಗೆ ಓಡಿದ್ದಳು. ಅಲ್ಲಿ ನೋಡುವುದೇನು? ಪ್ರಹ್ಲಾದ ಕೊನೆಯುಸಿರೆಳೆಯುತ್ತಿದ್ದ. ಸುಧಾಕರ ಅವನ ಒಂದು ಕೈ ಹಿಡಿದು ಕುಳಿತಿದ್ದ. ಮುಖದ ತುಂಬಾ ಪ್ರೇತಕಳೆ.

ಸುಮಾ ಓಡಿ ಹೋಗಿ ಮಗನ ಇನ್ನೊಂದು ಕೈಹಿಡಿದುಕೊಂಡಿದ್ದಳು. ತನ್ನ ಕೈಯನ್ನು ಒತ್ತಿದಂತಹ ಅನುಭವವಾದಾಗ ತಲೆಯೆತ್ತಿ ಮಗನ ಮುಖ ನೋಡುವಾಗ ಅವನಾಗಲೇ ಚಿರ ನಿದ್ರೆಯೊಳಗೆ ಇಳಿದಿದ್ದ. ಅವಳ ಕೈಯನ್ನು ಒತ್ತಿದ್ದ ವಿಷ್ಣು ಸಹಸ್ರನಾಮ ಪುಸ್ತಕ ಮುದ್ದೆ ಮುದ್ದೆಯಾಗಿತ್ತು.

ಪ್ರಹ್ಲಾದ ಎಲ್ಲರನ್ನೂ ಬಿಟ್ಟು ತೆರಳಿದ. ಸುಮಾ ಸುಧಾಕರ ಮುಂದೆ ಪ್ರಹ್ಲಾದ ನಿಲ್ಲದ ಜೀವನ ಭೀಕರವಾಗಿ ಬಾಯ್ದೆರೆದು ಕುಳಿತಿತ್ತು. ನಾನು ಬದುಕಬೇಕು ಎಂದು ಒತ್ತಿ ಒತ್ತಿ ಹೇಳಿದ್ದ ಪ್ರಹ್ಲಾದ ಬದುಕಿನಿಂದ ದೂರ ಸರಿದಿದ್ದ…..

ವೈರಿಗಳು ಮಕ್ಕಳಾಗಿ ಹುಟ್ಟಿ ಸೇಡು ತೀರಿಸಿಕೊಳ್ಳುತ್ತಾರಂತೆ…?
*****
೧೯೯೯

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...