ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸರಿಸಿದೆ. ಈಗ ತಾನೇ ಕಾಲೇಜಿನಿಂದ ಬಂದ ಮೀರಾಳಿಗೆ ಯಾಕೋ ಮನೆ ತುಂಬ ಹಿತ ಮತ್ತು ಬೆಚ್ಚಗೆ ಅನಿಸಿದೆ. ಕೆಂಪಾಗಿ ಹೊಳೆಯುವ ನೆಲದಲ್ಲಿ ಅವಳು ತಿರುಗಾಡಿದಾಗ ಅವಳ ನೆರಳು ನೆಲದಿಂದ ಪ್ರತಿಫಲಿಸುತ್ತದೆ. ಅಷ್ಟೊಂದು ತಳತಳ ನೆಲ ಅವಳು ಕಾಲೇಜಿಗೆ ಹೋಗುವ ಮುನ್ನ ಒರೆಸಿದ ನೆಲ ಒಂದೂ ಹೆಜ್ಜೆಯ ಗುರುತಿಲ್ಲದೇ ಹಾಗೆ ಉಳಿದಿದೆ. ಮನೆಯಲ್ಲಿ ಅಮ್ಮ ಮಗಳಿಬ್ಬರೇ ಮನೆಯಲ್ಲಿ ಇರೋದು. ಆಳು ಕಾಳುಗಳು ಹೊರಗಿನ ಕೆಲಸ ಮಾಡಿಕೊಂಡು ಹೋಗುತ್ತವೆ. ಮೀರಾ ಕಾಲೇಜಿನ ಕೊನೆ ವರ್‍ಷದಲ್ಲಿ ಪದವಿ ಓದುತ್ತಿದ್ದಾಳೆ. ಅಪ್ಪಯ್ಯ ಒಂದು ವರ್‍ಷದ ಕೆಳಗೆ ಅಡಿಕೆ ಮರದಿಂದ ಬಿದ್ದು ತಲೆಗೆ ಪೆಟ್ಟಾಗಿ ಮೃತರಾಗಿದ್ದರು. ತಾಯಿ ಮಗಳಿಗೆ ದಿಕ್ಕೇ ತೋಚಿರಲಿಲ್ಲ. ಅಮ್ಮ ಗಟ್ಟಿಯಾದಳು. ಅಡಿಕೆತೋಟ ಗದ್ದೆ ಆಳುಕಾಳುಗಳು ಅಂತ ಕೆಲಸದಲ್ಲಿ ಒಂದಾದಳು. ತಾಯಿ ಮಗನ ಬದುಕಿಗೆ ಆಗುವಷ್ಟು ಉತ್ಪನ್ನ ಬರುತ್ತಿತ್ತು. ಮೀರಾ ಕಾಲೇಜಿನ ವ್ಯಸಾಂಗದಲ್ಲಿ ಬಹಳ ಮುಂದಿದ್ದಳು. ಮಲೆನಾಡಿನ ಕೋಗಿಲೆ ಎಂಬ ಬಿರುದು ಅವಳಿಗಿತ್ತು. ಅಷ್ಟೊಂದು ಸುಮಧುರವಾಗಿ ಭಾವಗೀತೆ ಭಕ್ತಿಗೀತೆಗಳನ್ನು ಅವಳು ಹಾಡುತ್ತಿದ್ದಳು. ತಂಬೂರಿ ಕಲಿತಿದ್ದಳು. ಒಂದು ಸುಂದರ ಹೂವಿನಂತೆ ಅವಳು ಈ ಇಪ್ಪತ್ತರ ಹರೆಯದಲ್ಲಿ ಥಳಥಳಿಸುತ್ತಿದ್ದಳು.
ಅವರದು ಮಲೆನಾಡಿನ ಒಂದು ಪುಟ್ಟ ಹಳ್ಳಿ. ಸುತ್ತಲೂ ದಟ್ಟವಾದ ಮರಗಳ ಕಾಡು, ಮನೆ ತಲುಪಿದಾಗಲೇ ಗೊತ್ತಾಗುವುದು ಅಲ್ಲೊಂದು ಮನೆ ಇದೆ ಎಂದು. ಪಕ್ಕದಲ್ಲಿ ಅಡಿಕೆ ಬಾಳೆಯ ತೋಟ, ಎದುರಿಗೆ ಗದ್ದೆ ಬಯಲು, ಹಸಿರು ಹಾರಾಡುವ ಪಕ್ಷಿಗಳು ಎಲ್ಲವೂ ಖುಷಿಯ ಬಾಲ್ಯವನ್ನು ಹಿತದ ಯೌವನವನ್ನು ಸುಂದರ ರಾಗಗಳನ್ನು ಒದಗಿಸಿದ್ದವು. ಅವಳು ಹಕ್ಕಿಯಂತೆ ಹಾರಾಡಿ, ಮೀನಿನಂತೆ ಈಜಾಡಿ, ದುಂಬಿಯ ಝೇಂಕಾರದಂತೆ ಹಾಡಿ, ಮನೆ, ಹಾಡಿ, ಶಾಲೆ, ಕಾಲೇಜು ಎಲ್ಲದರಲ್ಲಿಯೂ ಬಹಳ ನಾಜೂಕಾಗಿ ಅನಾವರಣಗೊಂಡಳು. ಮನೆಯಲ್ಲಿ ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು, ಶ್ರಮಜೀವಿಗಳು ತಂದೆ ತಾಯಿ ಅವಳಮ್ಮ ಬದುಕಿನ ಎಲ್ಲಾ ಲಾಲಿತ್ಯವನ್ನು ಹೊಂದಿದವಳಾಗಿದ್ದಳು. ಅವಳು ಬಿರಿದ ಸೇವಂತಿಗೆ. ಮಗಳು ಒಂದು ದುಂಡು ಮಲ್ಲಿಗೆ ಅಷ್ಟೊಂದು ಪರಿಪೂರ್‍ಣವಾಗಿ ವ್ಯಕ್ತಿತ್ವ ತಾಯಿ ಮಗಳದು.
ಫೈನಲ್ ಇಯರಿನಲ್ಲಿ ಡಿಗ್ರಿ ಓದುತ್ತಿದ್ದಾಗ ತಂದೆಯನ್ನು ಹಠಾತ್ತಾನೆ ಕಳೆದುಕೊಂಡದ್ದು ತಾಯಿ ಮಗಳಿಬ್ಬರಿಗೂ ತುಂಬಲಾರದ ನಷ್ಟ. ಆದರೂ ಮೀರಾ ಹಾಗೂ ಅವಳ ತಾಯಿ ದೃತಿಗೆಡಲಿಲ್ಲ. ಈ ಹೋರಾಟದ ಬದುಕು ನಿಂತ ನೀರಾಗಬಾರದು. ಹರಿಯುವ ನದಿ ಆಗಬೇಕೆಂಬುದು ಜಾಣರಾದ ತಾಯಿ-ಮಗಳ ನಿರ್‍ಧಾರ ಮೀರಾ ಮೊದಲೇ ಪರಿಪೂರ್ಣ ವ್ಯಕ್ತಿತ್ವದವಳು. ಹೆಚ್ಚಾಗಿ ತನ್ನ ಓದಿನ ಕಡೆಗೆ, ಸಂಗೀತದ ಕಡೆಗೆ ಒಲವು ತೋರಿಸತೊಡಗಿದಳು. ಅವಳಮ್ಮ ಆಳುಕಾಳಿನೊಂದಿಗೆ ಸ್ನೇಹ ಸಂಬಂಧವಿರಿಸಿಕೊಂಡು, ತೋಟ, ಗದ್ದೆ ಮನೆಯ ಕೆಲಸಗಳನ್ನೆಲ್ಲಾ ನಿಭಾಯಿಸುತ್ತ ಆರ್ಥಿಕ ಸಫಲತೆಯನ್ನು ಕಂಡುಕೊಳ್ಳತೊಡಗಿದಳು. ಮನೆಯಲ್ಲಿ ತಾಯಿ-ಮಗಳಿಗೆ ಇಬ್ಬರಿಗೂ ಸಂಗೀತದ ಖಯಾಲಿ ಇದ್ದುದರಿಂದ ದಿನಾಲು ಸಂಜೆ ಒಂದೆರಡು ಗಂಟೆ, ದೇವರ ನಾಮಗಳು ಭಜನೆಯಲ್ಲಿ ಮೈ ಮರೆಯುತ್ತಿದ್ದರು. ಮೀರಾ ತಪ್ಪದೇ ಓದಿಕೊಳ್ಳುತ್ತಿದ್ದಳು. ಸಂಜೆಯ ಏಕಾಂತದಲ್ಲಿ ತಾಯಿ ಮಗಳಿಬ್ಬರೂ ಭವಿಷ್ಯದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಈ ನಡುವೆ ನಿಧಾನವಾಗಿ ಕಡೆಯ ಹಂತದ ಡಿಗ್ರಿ ಪರೀಕ್ಷೆ ಹತ್ತಿರ ಬಂತು. ಅವಳಮ್ಮ ಮೀರಾಳಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ಮೀರಾ ತುಂಬ ಆಳವಾಗಿ ಅಭ್ಯಾಸದಲ್ಲಿ ನಿರತಳಾದಳು.
ಪರೀಕ್ಷೆ ಮುಗಿದ ಬೇಸಿಗೆಯ ರಜೆ. ಅವಳು ಮೀರಾ ಲೆಬ್ರರಿಯಿಂದ ಕಥೆ ಕಾದಂಬರಿಗಳನ್ನು ತಂದು ಓದುತ್ತಿದ್ದಾಳೆ. ಪಕ್ಕದ ಊರಿನ ಹೆಗಡೆಯವರ ಮನೆಗೆ ಅವರ ಮೊಮ್ಮಗ ಬಾಂಬೆಯಿಂದ ಬಂದಿದ್ದಾನೆ. ಮೀರಾಳ ಮನೆಗೆ ಬಂದಾಗ ಪರಿಚಯವಾಯ್ತು. ಗೋಪಿ ಒಂದು ಕಂಪನಿಯಲ್ಲಿ ಈಗ ತಾನೇ ಕೆಲಸಕ್ಕೆ ಸೇರಿದ್ದ. ಒಂದು ವಾರದ ರಜೆಯ ಮೇಲೆ ಅಜ್ಜನ ಮನೆಗೆ ಬಂದಿದ್ದಾನೆ. ಎರಡು ಮೂರು ಬಾರಿ ಮೀರಾಳ ಮನೆಗೂ ಬಂದಿದ್ದಾನೆ. ಮೀರಾಳಿಗೆ ಅವನನ್ನು ಕಂಡೊಡನೆ ಏನೋ ಒಂದು ಆಕರ್‍ಷಣೆ ಆಗಿಬಿಟ್ಟಿದೆ. ಅವಳು ಕೂಡಾ ಏನೇನೋ ಕೆಲಸದ ನೆಪಹೇಳಿ ಹೆಗಡೆ ಅವರ ಮನೆಗೆ ಹೋಗಿ ಬಂದಿದ್ದಾಳೆ. ತನ್ನ ಎಲ್ಲಾ ಆದರ್ಶದ ಜೊತೆ ಇದೆಂತಹ ಸೆಳೆತ ನನ್ನನ್ನೂ ಆವರಿಸಿಕೊಂಡಿದೆ ಎಂಬುದು ಅವಳಿಗೆ ತಿಳಿಯಲಾಗದೇ ಅವಳು ಒಳಗೊಳಗೇ ಕಂಪಿಸಿದ್ದಾಳೆ. ಬದುಕಿನ ದಾರಿಯಲ್ಲಿ ಎಷ್ಟೊಂದು ಜನರು ಹಾಯ್ದು ಹೋಗುತ್ತಾರೆ. ಒಬ್ಬಬ್ಬರು ಒಂದೊಂದು ತರ ಪ್ರಭಾವ ಬೀರಿರುತ್ತಾರೆ. ಮೀರಾ ಸ್ವಲ್ಪ ಹೆಚ್ಚೆನಿಸುವ ಹಾಗೆ ಗೋಪಿಯ ಬಗ್ಗೆ ಅವಳಮ್ಮನ ಎದುರು ಪ್ರಸ್ತಾಪಿಸಿದ್ದಾಳೆ. ಅವಳಮ್ಮ ಸೂಕ್ಷ್ಮ, ಮಗಳಿಗೆ ಮದುವೆ ವಯಸ್ಸಾಗಿದೆ ಇದು ವಯೋ ಸಹಜವಾದ ಆಕರ್‍ಷಣೆ ಆದಷ್ಟು ಬೇಗ ಒಂದು ಒಳ್ಳೆಯ ನೆಂಟಸ್ತಿಕೆ ನೋಡಿ ಮಗಳ ಮದುವೆಮಾಡಬೇಕೆಂದು ಅವಳು ಮನದಲ್ಲಿ ಲೆಕ್ಕ ಹಾಕಿದ್ದಾಳೆ.
ಅವಳಮ್ಮ ಮೀರಾಳ ಮುಂದೆ ಒಂದು ಸಮಯ ನೋಡಿಕೊಂಡು ಮೆಲ್ಲಗೆ ಮದುವೆಯ ಪ್ರಸ್ತಾವ ತೆಗೆದಳು. ಮೀರಾ ಅವಳಮ್ಮನಿಗೆ ಶುರುವಾತು ಇಟ್ಟುಕೊಂಡಳು. ‘ನಾನು ಇಷ್ಟು ಬೇಗ ಮದುವೆ ಆದರೆ ಮನೆಯಲ್ಲಿ ನಿನ್ನ ಜೊತೆ ಯಾರಮ್ಮ? ನೀನು ತೋಟ ಗದ್ದೆ ಮನೆ ಬಿಟ್ಟು ನನ್ನ ಹಿಂದೆ ಬರಲಿಕ್ಕೆ ಆಗುತ್ತದೆ ಏನು? ಇನ್ನೊಂದೆರಡು ವರ್‍ಷ ಮದುವೆ ಬೇಡಮ್ಮ, ಅಪ್ಪ ಹೋಗಿ ಒಂದೇ ವರ್ಷವಾಯ್ತು ಈ ಹಳ್ಳಿ ಮನೇಲಿ ನಾನಿಲ್ಲದೇ ನೀನು ಒಬ್ಬಳೇ ಇಷ್ಟು ದೊಡ್ಡ ಮನೆಯಲ್ಲಿ ಹೇಗೆ ಇರುತ್ತಿ. ನನಗೆ ಪಿ.ಜಿ. ಮಾಡಲು ಮನಸ್ಸಿದೆ ಏನು ಮಾಡಲಿ ನೀನೇ ಹೇಳಮ್ಮ.” ಮುಂದೆ ಎರಡು ವರ್ಷಕ್ಕೆ ಆದರೂ ನೀನು ಮದುವೆ ಆಗಬೇಕು. ಒಳ್ಳೆಯ ನೆಂಟಸ್ತನ ಬಂದರೆ ಹೂಂ ಅನ್ನು ಇಲ್ಲವಾದರೆ ಪಿ.ಜಿ. ಮುಗಿಸು. ಮನೇಲಿ ಯಾರಿಲ್ಲ ಅಂತ ನಿನ್ನನ್ನು ಮನೇಲಿ ಇಟ್ಟುಕೊಂಡು ನಿನ್ನ ಜೀವನ ಹಾಳು ಮಾಡಬೇಕಾ. ನಿನಗೆ ಸಾಕಷ್ಟು ತಿಳುವಳಿಕೆ ಇದೆ ಮದುವೆ ಆದ ಮೇಲು ನೀನು ಓದಬಹುದು. ಜೋಯಿಸರ ಹತ್ತಿರ ನಿನ್ನ ಜಾತಕ ಫೋಟೋ ಕೊಟ್ಟು ಬರುತ್ತೇನೆ. ಮೀರಾ ಎಂದೂ ಅವಳಮ್ಮನ ಮಾತು ಮೀರಿದವಳಲ್ಲ. ರಿಜಲ್ಟ ಬರಲು ಇನ್ನೂ ಒಂದು ತಿಂಗಳಿತ್ತು. ಅವಳು ಪುಸ್ತಕಗಳನ್ನು ಓದುವದರೊಂದಿಗೆ ಸಂಗೀತ ಕ್ಲಾಸಿಗೂ ಹೋಗಿ ಬರತೊಡಗಿದಳು.
ಬೇಸಿಗೆಯ ಬೆಳದಿಂಗಳ ಸ್ವಚ್ಛ ತಿಳಿ. ಆ ಕಾನನದ ಮನೆಯಲ್ಲಿ ಬೇಸಿಗೆಯ ಬೆಳದಿಂಗಳು ಎಲ್ಲಾ ಗಿಡಮರಗಳ ಮೇಲೆ ಹಿತವಾಗಿ ಹರಡಿರುತ್ತಿತ್ತು. ರಾತ್ರಿ ಊಟದ ಮುಂಚೆ, ಅಂಗಳದಲ್ಲಿ ಪಸರಿಸಿದ ಬೆಳದಿಂಗಳಲ್ಲಿ ಮೀರಾ ಹಿತವಾಗಿ ತಂಬೂರಿ ಮೀಟುತ್ತಿದ್ದಳು. ಅವಳ ಇಂಪಾದ ಕಂಠದಿಂದ ಭಜನೆಗಳು ಸುಲಲಿತವಾಗಿ ಹೊರ ಹೊಮ್ಮುತ್ತಿದ್ದವು. ನೋವಿನಲ್ಲೂ ಬದುಕಿನ ಸುಂದರತೆ ಆ ಮನೆಯಲ್ಲಿ ಅರಳಿತ್ತು. ಅವಳ ಹಾಡನ್ನು ಕೇಳುತ್ತ ಅವಳಮ್ಮ ಆಶಾವಾದಿಯಾಗುತ್ತಿದ್ದಳು. ಇವಳಿಗೆ ಅನುರೂಪವಾದ ಸೂಕ್ಷ್ಮ ಮನಸ್ಸಿನ ಹುಡುಗ ಸಿಕ್ಕರೆ ಸಾಕು ದೇವರೇ ಎಂದು ಪ್ರಾರ್ಥಿಸುತ್ತಿದ್ದಳು. ಈ ಬದುಕಿನ ದಾರಿ ಹೀಗೆಯೇ ಸರಳವಾಗಿ ಸಾಗಿದರೆ ಸಾಕು. ಮಗಳು ಪುಟಿಯುವ ಉಲ್ಲಾಸದ ಬುಗ್ಗೆಯಾಗಿದ್ದಳು. ಜಾಣೆಯಾಗಿದ್ದಳು. ಒಳ್ಳೆ ಸಂಸ್ಕಾರ ಹೊಂದಿದ್ದಳು. ಮೇಲಾಗಿ ಬೆಳದಿಂಗಳಂತೆ ನಳನಳಿಸುತ್ತಿದ್ದಾಳೆ. ಅವಳಿಗೆ ಹಿತವಾದ ಮನೆತನ ಸಿಗಲಿ, ನನ್ನದೇನು ಒಂಟಿ ಬಾಳು ಹೇಗಾದರೂ ನೂಕಿದರಾಯ್ತು. ಅವರೊಂದು ದಡಸೇರಿ ಮನೆ ಮಕ್ಕಳು ಅಂತ ಬಾಳಬೇಕು. ಮೀರಾ ಹಾಡುವಾಗಲೆಲ್ಲ ಅವಳು ತಾಯಿಯ ಯೋಚನೆ ಅವಳ ಭವಿಷ್ಯವನ್ನೇ ಚಿಂತಿಸುತ್ತಿತ್ತು. ಮೀರಾ ಮೀರಾಳ ಭಜನೆಗಳನ್ನು ತುಂಬ ಸುಂದರವಾಗಿ ಭಾವತುಂಬಿ ಹಾಡುತ್ತಿದ್ದಳು. ಡಿಗ್ರಿಯ ಕೊನೆಯ ವರ್ಷದ ಫಲಿತಾಂಶ ಹೊರಬಂದಿತ್ತು. ಅತ್ಯುತ್ತಮ ಅಂಕಗಳೊಂದಿಗೆ ಮೀರಾ ಇಡೀ ಕಾಲೇಜಿಗೆ ಪ್ರಥಮ ಬಂದಿದ್ದಳು. ವಿದ್ಯಾಭ್ಯಾಸ ಮುಂದುವರಿಸುತ್ತೇನೆ ಅಂತ ಅವಳಮ್ಮನ ಮುಂದೆ ನಿಧಾನವಾಗಿ ಹೇಳಿದಳು. “ಅವರು ಜೋಯಿಸರು ಈಗಾಗಲೇ ಒಂದು ದೊಡ್ಡ ಪಾರ್ಟಿಯ ಜಾತಕ ಹೊಂದಿದೆ. ಮುಂದಿನವಾರ ಬೆಂಗಳೂರಿನಿಂದ ಗಂಡಿನ ಕಡೆಯವರು ನೋಡಲು ಬರುವುದಾಗಿ ತಿಳಿಸಿದ್ದರು. ಅವಳಮ್ಮ ಸೂಕ್ಷ್ಮವಾಗಿ ವಿಷಯ ಪ್ರಸ್ತಾಪ. ದೇಶಗಳನ್ನು ಸುತ್ತಿ ಬಂದಿದ್ದಾನಂತೆ. ದೊಡ್ಡ ಸಂಬಳವಿದೆಯಂತೆ. ನೋಡಲು ತುಂಬ ಸುಂದರವಾಗಿದ್ದಾನಂತೆ. ಡಿಗ್ರಿ ಮುಗಿದ ಹುಡುಗಿ ಸಾಕಂತೆ. ಏನೋ ನಿನ್ನ ಅದೃಷ್ಟ. ಇದ್ದಂತೆ ಆಗಲಿ, ಕಟ್ಟೆಯ ಕಲ್ಲು ಕಟ್ಟೆಗೆ ಸೇರಿದರೆ ಒಂದು ನೆಮ್ಮದಿ. ಮನಕೂಟ ಒಪ್ಪಿದರೆ ಮುಂದಿನ ವಿಚಾರ ಇದರಲ್ಲಿ ನೀನು ಆತಂಕಗೊಳ್ಳುವುದೇ ಬೇಡ, ನನಗೆ ನೀನೊಬ್ಬಳೇ ಆಸರೆ. ನಿನ್ನದೊಂದು ಕರ್ತವ್ಯ ಮುಗಿಸಿದರೆ ನನಗೆ ಎಷ್ಟೋ ಹಗುರು. ಅವರು ನಿನ್ನನ್ನು ಮುಂದಕ್ಕೆ ಓದಿಸಬಹುದು. ಎಲ್ಲವನ್ನೂ ಖುಷಿಯಾಗಿ ಅನುಭವಿಸೋಣ.” ಮೀರಾಳ ಅಮ್ಮಳ ಪ್ರೀತಿಯ ನುಡಿಗಳು ಮಗಳನ್ನು ವಧು ಪರೀಕ್ಷೆಗೆ ತಯ್ಯಾರಿ ಮಾಡುತ್ತಿದ್ದವು. ಮೀರಾ ಸುಮ್ಮನೆ ಹೂಂ ಗುಟ್ಟಿದಳು. ಅಂಗಳದಲ್ಲಿನ ಮಲ್ಲಿಗೆ, ಅಬ್ಬಲಿಗೆ, ಜಾಜಿ, ಸೇವಂತಿಗೆ, ಗುಲಾಬಿ ಖುಷಿಯಿಂದ ಮುಖ ಅರಳಿಸಿದವು. ಒಂದು ಶುಭದ ಆಲಾಪ ಅವಳೆದೆಯಲ್ಲಿ ಗುನುಗುಟ್ಟಲು ಪ್ರಾರಂಭಿಸಿತು.
ಜೂನ್ ತಿಂಗಳ ಮೊದಲ ವಾರ ಮಳೆ ಮೋಡಗಳು ಬೀಜ ಕಟ್ಟಿದ್ದವು. ಅಲ್ಲಲ್ಲಿ ಕರಿ ಮೋಡಗಳ ಗುಂಪು ತೇಲುತ್ತಿತ್ತು. ಮೀರಾ ಪಿ.ಜಿ. ಅಪ್ಲಿಕೇಶನ್ ಫಾರಂ ತಂದು ಇರಿಸಿದ್ದಳು. ಅವಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗೆಗೆ ಹೋಗಬೇಕಾಗಿತ್ತು. ಅವಳಮ್ಮನಿಗೆ ಬೆಂಗಳೂರಿನಿಂದ ಬರುವ ಹುಡುಗನ ಕಡೆಯವರ ತಾರೀಖಿನಂದು ಇನ್ನೋವಾ ಕಾರಿನಲ್ಲಿ ಆ ಪುಟ್ಟ ಹಳ್ಳಿಗೆ ಬಂದು ಇಳಿದರು. ಶ್ರೀಮಂತಿಗೆ ರಾರಾಜಿಸುತ್ತಿತ್ತು. ಹುಡುಗ ನೋಡಲು ತುಂಬ ಸುಂದರವಾಗಿದ್ದ. ಒಬ್ಬನೇ ಮಗ, ಒಬ್ಬಳು ತಂಗಿ. ಈಗಾಗಲೇ ಮದುವೆಯಾಗಿ ಅಮೇರಿಕಾದಲ್ಲಿ ಸೆಟಲ್ ಆಗಿದ್ದಾಳೆ. ಬಂದವರಿಗೆ ಹಳ್ಳಿಯ ಶಾಂತ ಮನೆ, ಸುಂದರ ಮನೆ, ಹಿತವಾಗಿ ಮಾತನಾಡುವ ಸುಸಂಸ್ಕೃತ ತಾಯಿ ಮಗಳು ಅವರ ಪ್ರೀತಿ ತುಂಬಿದ ಉಪಚಾರ ಎಲ್ಲವೂ ತುಂಬಾ ಮನಸ್ಸಿಗೆ ಹಿಡಿಸಿದವು. ಅವರು ಯಾವ ಶರತ್ತುಗಳಿಲ್ಲದೇ ಮೀರಾಳನ್ನು ಸೊಸೆಯಾಗಿ ಸ್ವೀಕರಿಸಲು ಸಮ್ಮತಿಸಿದರು. ಮೀರಾ ಮುಂದೆ ಓದಲು ಇಚಿತಳಾಗಿದ್ದಾಳೆ. ನೀವು ಅವಳಿಗೆ ಓದಲು ಅನುಮತಿ ಕೊಟ್ಟರೆ ನಮಗೆ ಮದುವೆಗೆ ಒಪ್ಪಲು ಅನಕೂಲವಾಗಬಹುದೆಂದು ಮೀರಾಳ ತಾಯಿ, ಮಗಳು ಓದುವ ಕನಸು ಭಗ್ನವಾಗಬಾರದೆಂದು ಒಂದು ಬೇಡಿಕೆಯನ್ನು ಇಟ್ಟರು. ಹುಡುಗನ ಕಡೆಯವರು ಧಾರಾಳವಾಗಿ ಓದು ಮುಂದುವರಿಸಲಿ, ಮಗ ಈಗಾಗಲೇ ವೈಭವದ ಪ್ಲಾಟ್ ಖರೀದಿಸಿ, ಅಮೇರಿಕನ್‌ರಂತೆ ಸ್ವತಂತ್ರವಾಗಿ ಇರುತ್ತಾನೆ. ಅವನು ಆಫೀಸಿಗೆ ಹೋದ ನಂತರ ಅವಳೂ ಖಾಲಿಯಾಗಿರುತ್ತಾಳೆ. ಮನೆಯಲ್ಲಿ ಓದನ್ನು ಧಾರಾಳವಾಗಿ ಮುಂದುವರಿಸಬಹುದು. ಬೆಂಗಳೂರಿನಲ್ಲಿಯೇ ಪಿ.ಜಿ.ಗೆ, ಅಡ್‌ಮಿಶನ್ ಮಾಡಿಸದರಾಯ್ತು. ಬೇಗ ವಿವಾಹ ಮುಗಿಸಿ ಕೊಟ್ಟರೆ ಸಾಕು ಎಂಬ ಮಾತನ್ನು ಹೇಳಿದಾಗ, ಮೀರಾಳ ಅಮ್ಮನಿಗೆ ಎಲ್ಲವೂ ಇಷ್ಟೊಂದು ಸುಸೂತ್ರವಾಗಿ ಬಗೆಹರಿಯುತ್ತಲ್ಲ ಎಂಬ ಆಶ್ಚರ್‍ಯ ಒಳಗೆ ಹುಟ್ಟಿಕೊಂಡಿತು. ನಮಗಂತೂ ಹುಡುಗಿ ತುಂಬ ಇಷ್ಟವಾದಳು. ಮದುವೆಯನ್ನು ಕೂಡಾ ನಾವು ಬೆಂಗಳೂರಿನಲ್ಲಿಯೇ ಮಾಡಿಕೊಳ್ಳುತ್ತೇವೆ. ನೀವು ಬಂಧು ಬಳಗದವರೊಂದಿಗೆ ಬಂದರೆ ಸಾಕು ಎಂಬ ಮಾತನ್ನು ಹಿರಿಯರು ಹೇಳಿದಾಗ ಮೀರಾಳಿಗೆ ಕೂಡಾ ಆಶ್ಚರ್‍ಯವಾಯಿತು. ಯಾವ ಡಿಮಾಂಡು ಇಲ್ಲದೇ ಅವರು ಮದುವೆಗೆ ಒಪ್ಪಿದಾಗ ತಾಯಿ ಮಗಳಿಬ್ಬರೂ ಚಕಿತಗೊಂಡರು. ನಮಗೆ ಸಾಕಷ್ಟು ಶ್ರೀಮಂತತನವಿದೆ ನಮಗೆ ಯಾವ ಆಸೆಯೂ ಇಲ್ಲ. ಹುಡುಗಿ ಸುಸಂಸ್ಕೃತಳಿದ್ದಾಳೆ ಅಷ್ಟೇ ಸಾಕು ಎಂದಾಗ ಮೀರಾಳ ತಾಯಿ ಗಂಡನನ್ನು ಕಳೆದುಕೊಂಡ ದುಃಖವನ್ನು ಮರೆತುಬಿಟ್ಟಳು.
ಅದೇ ತಿಂಗಳು ಮೀರಳ ಮದುವೆ ಶಶಾಂಕನೊಂದಿಗೆ ವೈಭವದಿಂದ ಬೆಂಗಳೂರಿನಲ್ಲಿ ನಡೆಯಿತು. ಮಿರಾ ಶಶಾಂಕನ ಮನೆ ವ್ಯವಸ್ಥೆ, ಅವನ ಕಾರು, ಶ್ರೀಮಂತಿಕೆ ಕಂಡು ಮೂಕ ವಿಸ್ಮಿತಳಾದಳು. ಮದುವೆಯ ಮರುದಿನವೇ ಶಶಾಂಕ ತನಗೆ ಪ್ರೊಜೆಕ್ಟ್ ಕೆಲಸವಿದೆಯೆಂದು ಕೆನಡಾಕ್ಕೆ ಹೊರಟು ಹೋದ. ಅವಳಿಗೆ ಕಾರಿನ ಡ್ರೈವರ್ ಜೊತೆ ಯುನಿವರ್ಸಿಟಿಗೆ ಹೋಗಿ ಅರ್ಜಿ ಹಾಕಲು ಹೇಳಿ ಹೋದ. ಅವಳಿಗೆ ಅವನ ಕಾಳಜಿ ಕಂಡು ಸ್ವರ್ಗಕ್ಕೆ ಮೂರೇ ಗೇಣು ಉಳಿದಂತೆ ಅನಿಸಿತು. ಅಮ್ಮನಿಗೆ ಪೋನ್ ಮಾಡಿ ತಾನು ಪಿ.ಜಿ. ಸೇರುವದಾಗಿ ಅತ್ಯಂತ ಹೆಮ್ಮೆಯಿಂದ ಹೇಳಿದಳು. ಒಂದು ವಾರದ ಮಟ್ಟಿಗೆ ಕೆನಡಾಕ್ಕೆ ಹೋದ ಶಶಾಂಕ ಮೀರಳಿಗೆ ದಿನಕ್ಕೊಮ್ಮೆ ಫೋನು ಮಾಡುತ್ತಿದ್ದ. ಅರ್ಜಿ ಗುಜಾರಾಯಿಸಿದ ಬಗ್ಗೆ ವಿಚಾರಿಸಿಕೊಂಡ. ಈ ಮಧ್ಯೆ ಸಿಲಿಕಾನ್ ಸಿಟಿಯಿಂದ ರಾಜಾಜಿನಗರದಲ್ಲಿರುವ ಅತ್ತೆ ಮನೆಗೆ ಮೀರಾ ಒಂದು ದಿವಸದ ಮಟ್ಟಿಗೆ ಕಾರಿನ ಡ್ರೈವರ್ ವರೆಗೆ ಮೂರು ಜನ ಆಳುಕಾಳುಗಳಿದ್ದರು. ಮನೆತುಂಬ ಆಧುನಿಕ ಸಲಕರಣೆಗಳು ಎಲ್ಲದಕ್ಕೂ ಮಾಡರ್ನ ಟಚ್, ಅವಳಿಗೆ ಮನೆಯ ಮುಂದಿನ ಪುಟ್ಟ ಕೈತೋಟ ಮನಸೆಳೆಯಿತು. ದಿನದ ಹೆಚ್ಚು ವೇಳೆಯನ್ನು ಅವಳು ಹಸಿರು ಹುಲ್ಲಿನ ಮೇಲೆ ನಡೆದು ಕಳೆದಳು. ಆದರೆ ಇಡೀ ದಿವಸ ತನ್ನ ಸಂಗೀತಕ್ಕೆ ಪೂರಕವಾದ ಹಕ್ಕಿಗಳ ಹಾಡುಗಳು ಅವಳ ಕಿವಿಗೆ ತಲುಪಲೇ ಇಲ್ಲ. ಬರೀ ಕಾರುಗಳ ಸಪ್ಪಳ ಹಾರ್ನ, ಈ ಎಂಟು ದಿವಸಗಳಲ್ಲಿ ಅರಮನೆಯಲ್ಲಿ ಇದ್ದರೂ ಎನೋ ಹೇಳಲಾಗದ ವಿಷಾದಭಾವ ಮೀರಾಳನ್ನು ಆವರಿಸಿತ್ತು. ತಂಬೂರಿ ಮೀಟಿದರೂ ಸ್ವರಗಳ ಆಲಾಪ ಅದಲು ಬದಲಾದಂತೆ ಅವಳಿಗೆ ಅನಿಸತೊಡಗಿತು.
ಶಶಾಂಕ ವಿದೇಶದಿಂದ ಎಂಟು ದಿವಸಕ್ಕೆ ಮರಳಿ ಬಂದ. ಇಷ್ಟೊಂದು ಶ್ರೀಮಂತಿಕೆ ಇರುವವನು ತನ್ನನ್ನು ಮಧುಚಂದ್ರಕೆ ಊಟಿಗೋ ಕೊಡೆಕೆನೈಲ್‌ಗೋ ಕರೆದುಕೊಂಡು ಹೋಗಬಹದು ಎಂಬುದು ಮೀರಾಳ ಎಣಿಕೆ ಆಗಿತ್ತು. ಅತ್ತೆ ದಿನಾವೂ ಯೋಗಕ್ಷೇಮವನ್ನು ಫೋನಿನಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಶಶಾಂಕ ಬಂದವನು ಒಂದು ದಿನ ಕೂಡಾ. ಮೀರಾಳ ಬಗಲಕ್ಕಿ ಮಲಗಲಿಲ್ಲ. ನನಗೆ ಕಂಪ್ಯೂಟರಿನಲ್ಲಿ ಕೆಲಸವಿದೆ ಎಂದು ಮಹಡಿಗೆ ಹೋಗಿ ರಾತ್ರಿಯೆಲ್ಲಾ ಕೆಲಸ ಮಾಡಿ ಅಲ್ಲಿರುವ ಬೆಡ್‌ರೂಮಿನಲ್ಲಿ ಮಲಗಿ ಬಿಡುತ್ತಿದ್ದ. ಮೀರಾ ಮೊದಲೇ ಸಂಕೋಚದ ಹುಡುಗಿ, ಮದುವೆ ಆದವರು ಒಟ್ಟಿಗೆ ದಾಂಪತ್ಯ ಶುರು ಮಾಡಬೇಕು ಎಂದು ಹೇಗೆ ಹೇಳಿಯಾಳು. ಇಡೀ ಮನೆ ತುಂಬ ಆಳುಕಾಳು. ಬೆಳಗ್ಗೆ ಎಂಟು ಗಂಟೆಗೆ ಉಪಹಾರ ಮುಗಿಸಿ ಮನೆ ಬಿಡುತ್ತಿದ್ದ ಶಶಾಂಕ ರಾತ್ರಿ ಎಂಟರ ಮೇಲೆಯೇ ಮನೆಗೆ ಬರುತ್ತಿದ್ದ. ಊಟ ಮಾಡಿ ಮಹಡಿ ಏರುತ್ತಿದ್ದ. ಮೀರಾಳಿಗೆ ಒಳಗೊಳಗೆ ದಿಗಿಲು ಶುರುವಾಯ್ತು. ಅಮ್ಮ ಅವಸರ ಮಾಡಿದಳೇ, ಇವರ ಶ್ರೀಮಂತತನಕ್ಕೆ ಮಾರು ಹೋದಳೇ ಇಲ್ಲಿ ಯಾವ ಶೃಂಗಾರ ಕಾವ್ಯದ ಪಲಕೂ ಇಲ್ಲ ಇದೆಂತಹ ಮದುವೆ, ಉಗುಳಲಾರಳು ನುಂಗಲಾರಳು ಅವಳು ಒಬ್ಬಳೆ ಒದ್ದಾಡಿದಳು.
ಶಶಾಂಕ ಸಹಜವಾಗಿ ಮಾತುಕತೆ ಆಡುತ್ತಿದ್ದ, ಒಟ್ಟಿಗೆ ತಿಂಡಿ ಊಟ ಮಾಡುತ್ತಿದ್ದ. ಪಿ.ಜಿ. ಕ್ಲಾಸು ಪ್ರಾರಂಭವಾಗಿವೆ. ತಪ್ಪದೇ ವಿಶ್ವವಿದ್ಯಾಲಯಕ್ಕೆ ಹೋಗು ಎಂಬ ಫರ್ಮಾನು ಹೊರಡಿಸಿಬಿಟ್ಟ. ಮೀರಾಳಿಗೆ ತನ್ನ ಓದು ಮುಂದುವರಿಸುವುದೇ ಸರಿ, ಒಂಟಿಯಾಗಿ ಸುಮ್ಮನೆ ಈ ದೊಡ್ಡ ಮನೆಯಲ್ಲಿ ಕೆಡಿಸಿಕೊಂಡು ಯಾಕೆ ನರಳಬೇಕು. ಓದಿನ ಕಡೆ ಗಮನ ಹರಿಸಿದರೆ ಆಯ್ತು ಎಂದುಕೊಂಡಳು. ಅಪ್ಪಿ ತಪ್ಪಿ ಅಮ್ಮನ ಮುಂದೆ ತನ್ನ ಒಂಟಿತನ ಶಶಾಂಕನ ವರ್ತನೆಗಳ ಬಗ್ಗೆ ಒಂದು ಶಬ್ದವನ್ನೂ ಉಚ್ಚರಿಸಲಿಲ್ಲ.
ಶಶಾಂಕನೊಂದಿಗೆ ಬೆಳಿಗ್ಗೆ ತಿಂಡಿ ತಿಂದು ಮೀರಾ ಕಾರಿನಲ್ಲಿ ವಿಶ್ವವಿದ್ಯಾಲಯಕ್ಕೆ ಹೋಗತೊಡಗಿದಳು. ಅತ್ತೆ ಅಮ್ಮ ಫೋನ್ ಮಾಡಿದಾಗಲೆಲ್ಲಾ ತಾನು ತುಂಬಾ ಚೆನ್ನಾಗಿದ್ದೇನೆ’ ಎಂದೂ, ಮತ್ತೆ ಓದು ಬರಹ ಮನೆಕಡೆ ಲಕ್ಷ್ಯ, ಹೀಗಾಗಿ ವೇಳೆ ಹೋದುದೇ ತಿಳಿಯುತ್ತಿಲ್ಲ ಅಂತ ಹೇಳುತ್ತಿದ್ದಳು. ಮೀರಾ ಭಾನುವಾರ ತಲೆಗೆ ಎಣ್ಣೆ ನೀರು ಹಾಕಿಕೊಂಡು ತಪ್ಪದೇ ತಂಬೂರಿ ಮೀಟುತ್ತಿದ್ದಳು. ಮೀರಾಳಿಗೆ ಅನಿಸುವುದನ್ನು ಒಮ್ಮೆಯೂ ಸಮಾಧಾನದಿಂದ ಕುಳಿತು ಕೇಳುತ್ತಿರಲಿಲ್ಲ. ಮೀರಾಳೀಗೆ ಅನಿಸುವುದು ಉಂಟು. ಎಲ್ಲೋ ಎಡವಟ್ಟು ಇದೆ ಎಂದು ಮದುವೆ ಆದ ಹೊಸದು, ಹೊಟ್ಟೆಗೆ ಬಟ್ಟೆಗೆ ಹಿಡಿಸಲಾರದಷ್ಟು ಶ್ರೀಮಂತಿಕೆ ಮನೆಯ ಎಲ್ಲಾ ಕೆಲಸಗಳಿಗೆ ಅಳುಕಾಳು ನಾನಾಗಿಯೇ ಇಲ್ಲದ ಅಪಸ್ವರ ಎತ್ತಿ ಅಮ್ಮ ಅತ್ತೆ ಮಾವರನ್ನು ಆತಂಕಗೊಳಿಸಬೇಕು. ತಾಳಿದವನು ಬಾಳಿಯಾನು. ಶಶಾಂಕ ಎಂದೂ ತಬ್ಬಲಿಲ್ಲ ಎದೆಯಾಳಕೆ ಇಳಿಯಲೇ ಇಲ್ಲ. ಇನ್ನೂ ಸ್ವಲ್ಪ ದಿವಸ ಕಾಯ್ದು ಅವನನ್ನು ಪ್ರಶ್ನಿಸಿದರಾಯ್ತು ಎಂದು ತನ್ನನೇ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಪಿ.ಜಿ.ಕೋರ್ಸಿನ ಅಭ್ಯಾಸ ಹೊರೆಯಷ್ಟು ಇತ್ತು. ಅವಳು ಸಂಪೂರ್ಣವಾಗಿ ಓದಿನಲ್ಲಿ ತೊಡಗಿಸಿಕೊಂಡು ಬಿಟ್ಟಳು.
ಮದುವೆ ಆಗಿ ಎಂಟು ತಿಂಗಳಾದರೂ ಶಶಾಂಕ ಅವಳ ಸಮೀಪ ಬಂದಿರಲಿಲ್ಲ. ಮೀರಾಳು ಒಳಗೊಳಗೆ ಹೈರಾಣ ಆದಳು. ಅವನು ಮನೆಯಲ್ಲಿದ್ದಾಗ ವ್ಯವಹಾರಿಕವಾಗಿ ಮಾತನಾಡುತ್ತಿದ್ದ. ಎಲ್ಲಾ ಬೇಕು ಬೇಡಗಳನ್ನು ಪೂರೈಸುತ್ತಿದ್ದ. ಆಗಾಗ ವಿದೇಶಕ್ಕೆ ಹೋಗಿ ಬರುತ್ತಿದ್ದ. ಬ್ಯಾಂಕಿನಿಂದ ದೊಡ್ಡ ಮೊತ್ತದ ಹಣ ತಂದು ಮನೆ ಖರ್‍ಚಿಗೆ ಇರಲಿ ಅಂತ ಅವಳ ಕೈಯಲ್ಲಿ ಇರಿಸುತ್ತಿದ್ದ. ಆಗಾಗ ಶಾಂಪಿಗಿಗೆ ಕರೆದುದೊಯ್ಯುತ್ತಿದ್ದ, ಮನೆಯಲ್ಲಿ ಹೋಮ್ ಸಿನಿಮಾ ಥೇಟರ್ ಇದ್ದು ಒಳೊಳ್ಳೆ ಸಿನೇಮಾಗಳ ಸಿ.ಡಿ, ತರುತ್ತಿದ್ದ ಅವಳೊಂದಿಗೆ ಸಹಜವಾಗಿ ಇರುತ್ತಿದ್ದ. ಮತ್ತೆ ಯಥಾ ಪ್ರಕಾರ ರಾತ್ರಿ ಮಹಡಿ ಮೇಲೆ ಹೋಗಿ ಮಲಗಿರುತ್ತಿದ್ದ. ಮೀರಾಳಿಗೆ ಶಶಾಂಕನ ನಡುವಳಿಕೆಗಳು ಒಗಟಾದವು. ಅಮ್ಮನಿಗೆ ಈ ವಿಷಯವನ್ನು ಹೇಳಬೇಕೆಂದುಕೊಂಡರು, ಅವಳ ಒಂಟಿತನ, ಅವಳ ಆಶೆ ಎಲ್ಲದಕ್ಕೂ ತಾನು ನೀರು ಹೊಯ್ಯುತ್ತೇನೆ ಅಂತ ಮಾತುಗಳು ಹೊರಬರಲಾರದೇ ಒದ್ದಾಡಿದಳು. ಒಮ್ಮೆ ಅವಳನ್ನು ಫೋನ್ ಮಾಡಿದಾಗ ಜೋರಾಗಿ ಅತ್ತಳು. ಯಾಕೆ ಅಂತ ಅವಳನ್ನು ಕೇಳಿದಾಗ ಬೆಂಗಳೂರಿನಲ್ಲಿ ಊರಿನಂತೆ ಹಕ್ಕಿಗಳ ಹಾಡುಗಳಿಲ್ಲ. ಈ ಕಾಂಕ್ರೀಟ್ ಕಾಡಿನಲ್ಲಿ ತುಂಬ ಬೇಸರ, ಹಸಿರು ನೋಡಬೇಕೆನಿಸಿದೆ ಎಂದು ಅವಲತ್ತುಗೊಂಡಳು. ಅವಳನ್ನು ಒಂದೆಂಟು ದಿವಸ ಊರಕಡೆ ಬಂದು ಹೋಗೆಂದಳು. ಮೀರಾ ಉಮ್ಮಳಿಸಿದಳು. ಬದುಕು ಒಂದೇ ಸಮನೆ ರೂಟೀನ್ ಆಯಿತು.
ಮೀರಾಳಿಗೆ ಯುನಿರ್ವಸಿಟಿಯ ತರಗತಿಯಲ್ಲಿ ಓದುವಾಗ ಪಾಠ ಕೇಳುವಾಗ, ಲೈಬ್ರರಿಯಲ್ಲಿ ಓದುವಾಗ ಅಪ್ಪಿ ತಪ್ಪಿ ಶಶಾಂಕನ ವಿಚಾರ ತಲೆಗೆ ಹೋಗುತ್ತಿರಲಿಲ್ಲ. ಯಾವಾಗ ಕ್ಲಾಸ್ ಮುಗಿಸಿ ಮನೆಗೆ ಮರಳಿದಳೋ ಏನೋ ಹೇಳಲಾಗದ ಚಡಪಡಿಕೆ. ಮತ್ತೆ ಅದೇ ಬೇಸರ ಸಂಜೆಗಳು. ಅಡಿಗೆ ಭಟ್ಟರು ರಾತ್ರಿ ಅಡುಗೆ ತಯಾರಿಸಿ ಮನೆಗೆ ಹೋಗುತ್ತಿದ್ದರು. ಆಳುಕಾಳುಗಳೆಲ್ಲಾ ಮನೆಗೆ ಹಿಂದುರಿಗಿದ ಮೇಲೆ ರಾತ್ರಿ ಡ್ಯೂಟಿಯ ವಾಚ್‌ಮನ್ ಬಂದು ಸುಮ್ಮನೆ ಗೇಟು ಮುಂದೆ ಕುಳಿತು ಬಿಡುತ್ತಿತ್ತು. ಶಶಾಂಕ ಒಮ್ಮೊಮ್ಮೆ ರಾತ್ರಿ ಹತ್ತು ಗಂಟೆಯ ಮೇಲೂ ಬಂದಿದ್ದು ಉಂಟು. ಇಡೀ ಬಂಗಲೆಯಲ್ಲಿ ಮೀರಾ ತೂಕಡಿಸುತ್ತ ದೆವ್ವದಂತೆ ಒಬ್ಬಳೇ ಕುಳಿತಿರುತ್ತಿದ್ದಳು. ಮನೆಗೆ ಬಂದು ಪ್ರೆಶ್ ಆಗಿ ‘ಊಟ ಮಾಡಿ ನೀನು ಮಲಗು ನನಗೆ ಸ್ವಲ್ಪ ವರ್ಕ್ ಇದೆ ಅಂತ ಶಶಾಂಕ ಮಹಡಿ ಏರುತ್ತಿದ್ದ. ಮೀರಾಳಿಗೆ ಇಡೀ ರಾತ್ರಿ ನಿದ್ರೆ ಇಲ್ಲದೇ ಹೋರಲಾಡುತ್ತಿದ್ದಳು. ಬೆಳಿಗ್ಗೆ ಏಳುವದರೊಳಗೆ ಎಲ್ಲಾ ಆಳುಕಾಳುಗಳು ಬಂದು ಕೆಲಸ ಪ್ರಾರಂಭಿಸಿ ಬಿಡುತ್ತಿದ್ದರು. ಅಡಿಗೆ ಮನೆಗೆ ಹೋದವಳು ಭಟ್ಟರಿಗೆ ಈ ದಿನದ ತಿಂಡಿ ಅಡುಗೆಯ ಬಗ್ಗೆ ಹೇಳಿದರೆ ಸಾಕು. ಮತ್ತೆ ಅವಳು ವಿಶ್ವವಿದ್ಯಾಲಯಕ್ಕೆ ಶಶಾಂಕ ಆಫೀಸಿನ ಕಡೆ ಮುಖ ಮಾಡುತ್ತಿದ್ದರು. ಮೀರಾಳಿಗೆ ಒಳಗೊಳಗೆ ಬಹಳ ದುಃಖ ಆಗುತ್ತಿತ್ತು. ಅತ್ತೆ ಬಂದಾಗಲೆಲ್ಲಾ ಹೇಳಬೇಕೆಂದು ಬಾಯಿ ತೆರೆದರೂ ಸಂಕೋಚ ಅಡ್ಡಿ ಬರುತ್ತಿತ್ತು. ಈ ಸಮಸ್ಯೆ ಇಂದಲ್ಲಾ ನಾಳೆ ಸರಿಹೋಗಬಹುದು. ಶಶಾಂಕ ಎಲ್ಲಾ ರೀತಿಯಲ್ಲೂ ಸರಿಯಾಗಿ ವರ್ತಿಸುತ್ತಿದ್ದಾನೆ. ಅವನ ಒತ್ತಡದ ಆಫೀಸಿನ ಕೆಲಸ ಅವನನ್ನು ಈ ತರಹ ವರ್ತಿಸುವಂತೆ ಮಾಡುತಿರಬೇಕೆಂದು ಅವಳು ತನ್ನಷ್ಟಕ್ಕೆ ತಾನೇ ಸಮಾಧಾನ ಹೊಂದುತ್ತಿದ್ದಳು.
ಈ ಮಧ್ಯೆ ಅವಳು ಓದುವ ಪಿ.ಜಿ. ಮೊದಲನೆಯ ಸೆಮೆಸ್ಟರ್ ಪರೀಕ್ಷೆ ಬಂತು. ಅವಳು ಪೂರ್ಣವಾಗಿ ಓದಿನಲ್ಲಿ ಮುಳುಗಿದಳು. ಶಶಾಂಕನಿಗೆ ಅವಳು ಯಾವ ಪ್ರಶ್ನೆಗಳನ್ನು ಕೇಳದೇ ಯಾವುದೇ ರಂಪಾಟವನ್ನು ಮಾಡದೇ ಹಾಯಾಗಿ ಓದು ಮತ್ತು ಮನೆ ಕೆಲಸದಲ್ಲಿ ಒಂದಾದದ್ದು ಒಂದೆಡೆಗೆ ಒಳಗೊಳಗೆ ಕಂಫರ್ಟ ಕೊಟ್ಟಿತ್ತು. ಅವಳು ಡೈನಿಂಗ್ ಟೇಬಲ್ ಮೇಲೆ ಕುಳಿತಾಗ ಊಟ ಬಡಿಸುತ್ತ ಒಂದೆರಡು ಮಾತು ತನ್ನ ಓದು, ಊರಿನ ಸುದ್ದಿ ಹೇಳುತ್ತಿದ್ದಳು.
ಶಶಾಂಕ ಸಹಜವಾಗಿ ಪ್ರತಿಕ್ರಿಯಿಸುತ್ತಿದ್ದ. ಹಗಲಲ್ಲಿ ತನ್ನ ಡ್ರೆಸ್, ಡಾಕ್ಯೂಮೆಂಟ್‌ಗಳನ್ನು ತೆಗೆದುಕೊಳ್ಳಲು ಬೆಡ್‌ರೂಮಿಗೆ ಬರುತ್ತಿದ್ದ. ನೀಟಾಗಿ ರೂಮ್ ಕಂಡು ದಂಗಾಗುತ್ತಿದ್ದ. ಮೀರಾ ಅವನು ಬೆಡ್‌ರೂಮಿನಲ್ಲಿದ್ದಾಗ ಬೇಕಂತಲೇ ಬೆಕ್ಕಿನ ತರಹ ಅವನ ಹಿಂದೆ ಮುಂದೆ ಸುಳಿಯುತ್ತಿದ್ದಳು. ಒಂದು ಬಾರಿ ಅವನು ತನ್ನನ್ನೂ ತಬ್ಬಬಾರದೇ ಎಂದು ಅಂದುಕೊಳ್ಳುತ್ತಿದ್ದಳು. ಅವನು ಕೂಲಾಗಿ ಹೊರಹೊಗುತ್ತಿದ್ದ.
ಮೀರಾ ತನ್ನ ಮೊದಲು ಸೆಮಿಸ್ಟರ್ ಮುಗಿದ ತಕ್ಷಣ ಅಮ್ಮನನ್ನು ನೋಡಿ ಬರುವ ಇಚ್ಚೆ ಶಶಾಂಕನ ಮುಂದೆ ವ್ಯಕ್ತಪಡಿಸಿದಳು. ಅವನು ಅತ್ಯಂತ ಕೂಲಾಗಿ ಕಾರು ತೆಗೆದುಕೊಂಡು ಹೋಗು, ಒಂದು ವಾರ ಇದ್ದು ಬಾ. ಎ.ಟಿ.ಎಂ.ದಲ್ಲಿ ಹಣ ಡ್ರಾ ಮಾಡಿಕೋ, ಏನು ಬೇಕಾದರೂ ಕೊಂಡು ತೆಗೆದುಕೊಂಡು ಹೋಗು ಎಂದಾಗ ಮೀರಾಳಿಗೆ ಅವನ ನಿರ್ಲಿಪ್ತತೆ ಅವನ ಅತಿಯಾದ ಓಚಾರ್ಯ ಕಂಡು ಒಳಗೊಳಗೆ ಕುದಿದಳು. ಹೊಸದಾಗಿ ಮದುವೆ ಆದ ಗಂಡ ತನ್ನ ಹೆಂಡತಿಯನ್ನು ಯಾವ ಕಾರಣಕ್ಕೂ ಇಷ್ಟು ಸಲೀಸಾಗಿ ತವರು ಮನೆಗೆ ಹೋಗಲು ಬಿಡುವುದಿಲ್ಲ. ಇವನಿಗೆ ಯಾವ ಬೇಸರವೂ, ಆತಂಕವೂ ಇಲ್ಲ. ಎಲ್ಲಾ ಆರಾಮವಾಗಿ ಇದ್ದಾನೆ. ನಾನು ಯಾವ ಮಾತು ಆಡಿ ಇವನನ್ನು ಅಲ್ಲಾಡಿದಲಿ ಎಂದು ಮೀರಾ ಸಾವಿರ ಬಾರಿ ಯೋಚಿಸಿದಳು. ಅವನು ಸರಳವಾಗಿ ಅವಳಿಗೆ ತಾಯಿಯ ಮನೆಗೆ ಹೋಗಲು ಅನುಮತಿ ಇತ್ತು ಆಫೀಸಿಗೆ ಹೊರಟು ಹೋದ. ಮೀರಾ ಅಮ್ಮನಿಗೆ ಬರುತ್ತೇನೆ ಎಂದು ಫೋನ್ ಮಾಡಿದಳು ಮತ್ತೆ ಹೇಳಲಾಗದ ವಿಷಯಕ್ಕೆ ಒಳಗೊಳಗೆ ತಲ್ಲಣಗೊ೦ಡಳು.
ಮಲೆನಾಡಿನ ಮನೆಗೆ ಬಂದ ಮೀರಾಳಿಗೆ ಕುದಿಯುವ ಬಾಣಲೆಯಿಂದ, ತಣ್ಣೀರಿನ ನದಿಯಲ್ಲಿ ಅದ್ದಿದಂತಯ್ತು. ಸ್ವಚ್ಛವಾದ ಮನೆ, ತಿಳಿಗಾಳಿ, ಹಕ್ಕಿಗಳ ಕಲರವ, ಹಂಡೇ ತುಂಬಿದ ಬಿಸಿನೀರಿನ ಸ್ನಾನ, ಅವಳು ಹಿತವಾಗಿ ಮಿಂದಳು. ಅಮ್ಮನ ಕೈಯ ರುಚಿಯಾದ ಊಟ ಉಂಡಳು. ಹಾಯಾಗಿ ಎರಡುದಿನ ನಿದ್ದೆ ತೆಗೆದಳು. ಅವಳಮ್ಮ ಅವಳನ್ನು ಏನೂ ಕೇಳಲಿಲ್ಲ. ಬಂದಾಗ ಅತಂಕದಲ್ಲಿದ್ದ ಮೀರಾ ಎರಡು ದಿವಸಗಳ ನಂತರ ಕಣ್ಣತುಂಬ ನಿದ್ದೆ ತೆಗೆದು ಶಾಂತಳಾದಳು. ಮನೆಯಲ್ಲಿದ್ದ ಎಲ್ಲಾ ಸವಲತ್ತು ಹಣಕಾಸಿನ ಸ್ವಾತಂತ್ರ, ತನ್ನ ಪಿ.ಜಿ. ಅಭ್ಯಾಸ, ಅತ್ತೆ ಮಾವ ಯಾರಿಗೂ ತೊಂದರೆ ಕೊಡಬಾರದೆಂದು ಬೇರೆ ಹಿತವಾಗಿ ಇರುವುದು, ವಾರಕ್ಕೊಮ್ಮೆ ಶಶಾಂಕ ತಾವೇ ನಿಭಾಯಿಸುವುದು. ಎಲ್ಲಾ ಐಸಿರಿಯ ಬಗ್ಗೆ ಅಮ್ಮನಿಗೆ ನೆಮ್ಮದಿ ಸಿಗುವ ಹಾಗೆ ತನ್ನ ಸಂಸಾರದ ಬಗ್ಗೆ ಹೇಳಿದಳು. ಮೀರಾಳ ಅಮ್ಮ ಮಗಳು ಮಹಾರಾಣಿಯ ಹಾಗೆ ಇದ್ದಾಳೆ ಎಂದು ಹಿರಿಹಿರಿ ಹಿಗ್ಗದಳು. ಯಾಕೋ ಮೀರಾ ಇರುವಷ್ಟು ದಿವಸ ಅಮ್ಮನ ಮುಂದೆ ಭಜನೆಗಳನ್ನು ಭಾವಗೀತೆಗಳನ್ನು ಹಾಡಿಯೇ ಹಾಡಿದಳು. ಬೆಂಗಳೂರಿನ ಮನೆಯಲ್ಲಿ ಅವಳ ಸೊಲ್ಲು ಸಂಪೂರ್ಣ ಅಡಗಿತ್ತು. ಒಡಲ ಉರಿಯನ್ನು ಶಾಂತಗೊಳಿಸಲು ಅವಳು ಮನಬಿಚ್ಚಿ ಹಾಡಿದಳು. ಒಂದೆರಡು ಸಲ ಹಾಡುವಾಗ ಕಣ್ಣೀರು ಉಕ್ಕಿ ಬಂದವು. ಅಮ್ಮ ಭಾವಪರವಶ ಅರಿತುಕೊಂಡಳು. ಮೀರಾ ಅಪ್ಪಿತಪ್ಪಿಯೂ ಗಂಡನ ಸ್ವಭಾವ ಹೇಳಲಿಲ್ಲ.
ತೌರು ಮನೆಯಿಂದ ವಾಪಸ್ಸು ಬಂದ ಮೇಲೆ ಮೀರಾ ಹೆಚ್ಚು ಹೆಚ್ಚಾಗಿ ಶಶಾಂಕನ ಹಿಂದೆ ತಿರುಗಾಡಹತ್ತಿದ್ದಳು. ಮೊದಲನೆಯ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿರಲಿಲ್ಲ. ವಿಶ್ವವಿದ್ಯಾಲಯದಲ್ಲಿ ತರಗತಿಗಳು ಇನ್ನೂ ಪ್ರಾರಂಭವಾಗಿರಲಿಲ್ಲ. ಮನೆಯಲ್ಲಿ ಸಾಕಷ್ಟು ವೇಳೆ ಸಿಗುತ್ತಿತ್ತು. ಆದರೆ ಶಶಾಂಕನದು ಮತ್ತದೇ ಧಾವಂತ. ಬೆಳಿಗ್ಗೆ ಮಹಡಿಯಿಂದ ಇಳಿದು ಬಂದು ಸ್ನಾನ ತಿಂಡಿ ಮುಗಿಸಿ ಮೀರಾಳಿಗೆ ಒಂದು ಬಾಯ್ ಎನ್ನುವ ಶಬ್ದ ಹೇಳಿ ಸೀದಾ ಕಾರನ್ನೇರುತ್ತಿದ್ದ. ಮರಳಿದಾಗ ರಾತ್ರಿ ಎಂಟು ಗಂಟೆ ಅವನಿಗೆ ತುಂಬಾ ದಣಿವಾಗಿದೆ ಅಂತ ಮೀರಾ ನಾಲಿಗೆಯ ತುದಿಗೆ ಬಂದ ತರ್ಕದ ಪ್ರಶ್ನೆಗಳನೆಲ್ಲಾ ತಿಳಿಯದ ಹಾಗೆ ನುಂಗಿ ಬಿಡುತ್ತಿದ್ದಳು. ಅವನಿಗೆ ಊಟ ಬಡಿಸಿ ತಾನು ಉಂಡು ಸುಮ್ಮನೆ. ಟಿ.ವಿ. ಮುಂದೆ ಕೂಡುತ್ತಿದ್ದಳು. ಅವನು ಆಫೀಸಿನ ಕೆಲಸಕ್ಕೆ ಮಹಡಿ ಏರಿ ಹೋಗುತ್ತಿದ್ದ. ರಾತ್ರಿ ಹನ್ನೊಂದು ಗಂಟೆಯಾದರೂ ಮೇಲೆ ರೂಮಿನಲ್ಲಿ ದೀಪ ಇರುತ್ತಿತ್ತು. ಅವಳು ಕಾಯುವುದು ಅಷ್ಟೆ ತನ್ನ ಕರ್ಮ ಅಂತ ತಿಳಿದು ರೂಮಿಗೆ ಬಂದು ಒಂಟಿಯಾಗಿ ಹಾಸಿಗೆಯ ಮೇಲೆ ಒರಗುತ್ತಿದ್ದಳು.
ಈ ವಾರ ಅತ್ತೆಯ ಮನೆಗೆ ಹೋದಾಗ, ಅತ್ತೆಯ ಮುಂದೆ ಅವಳ ಮಗನ ಸುದ್ದಿ ಬೇಕಂತಲೇ ಎತ್ತಿದ್ದಳು. “ನಿಮ್ಮ ಮಗನಿಗೆ ಕೆಲಸದ ಒತ್ತಡ ಬಹಳ. ನನಗೇನು ಮನೆಯಲ್ಲಿ ಕೊರತೆ ಇಲ್ಲ. ಆಳುಕಾಳುಗಳಿದ್ದಾರೆ ಮದುವೆ ಆಗಿ ವರ್ಷವಾಗುತ್ತ ಬಂದರೂ ಎಂದೂ ಒಂದು ದಿನ ಹಿತವಾಗಿ ಕುಳಿತು ನಕ್ಕು ಮಾತನಾಡಿಲ್ಲ. ನಾನಾಗಿಯೇ ಏನಾದರೂ ಸುದ್ದಿ ಹೇಳಲು ಹೊರಟರೆ ಆಫೀಸಿನಲ್ಲಿ ತುಂಬ ಕೆಲಸ ಆಮೇಲೆ ಮಾತನಾಡೋಣ ಅನ್ನುತ್ತಾರೆ. ಅತ್ತೆ ಈ ಒಂದು ವರ್ಷದಲ್ಲಿ ಏಳೆಂಟು ಬಾರಿ ಆಫೀಸಿನ ಕೆಲಸವಿದೆ ವಿದೇಶಗಳಿಗೆ ಹೋಗುತ್ತಾರೆ. ಮನೆಯಲ್ಲಿ ಒಬ್ಬಳಿಗೆ ತುಂಬಾ ಬೇಸರ. ನೀವಿಬ್ಬರೂ ಯಾಕೆ ನಮ್ಮೊಂದಿಗೆ ಬಂದು ಇರಬಾರದು”, ಮೀರಾ ಬೇಕಂತಲೇ ಗಂಡ ತನ್ನ ಸಮೀಪಕ್ಕೆ ಇನ್ನೂ ಬಂದಿಲ್ಲ ಅಂತ ಹೇಳಲಿಲ್ಲ. ಮೀರಾಳ ಮಾತಿಗೆ ಅವಳತ್ತೆ ಹೇಳಿದರು. ನಮಗೆ ಈ ಮನೇಲಿ ಇದ್ದು ಅಭ್ಯಾಸ. ಎಲ್ಲ ಅನುಕೂಲಗಳಿವೆ ಮೊದಲಿನಿಂದಲೂ ಇದೇ ಏರಿಯಾ ಇಲ್ಲಿಯ ಜನರ ಒಡನಾಟವಿದೆ. ಮೇಲಾಗಿ ಶಶಾಂಕನಿಗೆ ಕೆಲಸ ಸಿಕ್ಕ ಮೇಲೆ ಅವನು ಸ್ವತಂತ್ರವಾಗಿ ಇರಬಯಸಿದ. ಅವನಿಗೆ ಒಳ್ಳೆಯ ಕೆಲಸ, ಒಳ್ಳೆಯ ಸಂಬಳ ಹಾಯಾಗಿ ಇರಲಿ ಬಿಡು ಅಂತ ನಾವು ಅವನ ಪಾಡಿಗೆ ಅವನನ್ನು ಅಭಿವೃದ್ಧಿಯಾಗಲು ಬಿಟ್ಟಿದ್ದೇವೆ. ಈ ಮೂರು ನಾಲ್ಕು ವರ್ಷಗಳಿಂದ ಅವನಿಗೆ ಒಂಟಿಯಾಗಿ ಇದ್ದು ಅಭ್ಯಾಸವಾಗಿದೆ.
ಮೀರಾಳಿಗೆ ತನ್ನ ಮತ್ತು ಶಶಾಂಕನ ನಡುವಿನ ಅಂತರವನ್ನು ಹೇಗೆ ಹೋಗಲಾಡಿಸಬೇಕು ಎಂಬುದನ್ನು ಬಹಳ ವಿಚಾರ ಮಾಡಿದಳು. ಒಂದೆರಡು ಸಲ ಒತ್ತಾಯದಿಂದ ಅವನೊಂದಿಗೆ ಪೇಟೆ ಸುತ್ತಿ ಬಂದಳು. ಒಂದರಡು ವೀಕ್ ಎಂಡ್ ಸಂಗೀತ ಕಛೇರಿಗೆ ಅವನನ್ನು ಕರೆದುಕೊಂಡು ಹೋದಳು. ಕಚೇರಿಯ ಮಧ್ಯದಲ್ಲಿಯೇ ನನಗೆ ಕೆಲಸವಿದೆ ನೀನು ಡ್ರೈವರನೊಂದಿಗೆ ಮನೆಗೆ ವಾಪಸ್ಸಾಗು ಅಂತ ಹೇಳಿ ಎದ್ದು ಹೋಗುತ್ತಿದ್ದ. ಈ ಮಧ್ಯೆ ಅವಳ ಪಿ.ಜಿ. ಕ್ಲಾಸುಗಳು ಪ್ರಾರಂಭವಾಗಿದ್ದವು. ಶಶಾಂಕ ಕೈತುಂಬ ಖರ್ಚಿಗಾಗಿ ಹಣಕೊಡುತ್ತಿದ್ದ. ಎಲ್ಲಾ ಕೆಲಸಗಳನ್ನು ಆಳುಕಾಳುಗಳು ನಿಯತ್ತಿನಿಂದ ಮಾಡುತ್ತಿದ್ದರು. ಮದುವೆಯಾಗಿ ವರ್ಷವಾದರೂ ಗಂಡ ತನ್ನ ಹತ್ತಿರ ಸುಳಿದಿಲ್ಲ ಎಂಬ ಯೋಜನೆ ಮೀರಾಳಿಗೆ ಬಂದಾಗಲೆಲ್ಲಾ ಇಡೀ ದಿವಸ ಮೂಡು ಅಪ್‌ಸೆಟ್ ಆಗಿರುತ್ತಿತ್ತು. ದೇವರೇ ಎಂತಹ ಕಠಿಣ ಪರೀಕ್ಷೆಯನ್ನು ನಾನು ಈ ಮದುವೆಯಿಂದ ಎದುರಿಸಬೇಕಾಯ್ತು. ಇದಕ್ಕೆ ಪರಿಹಾರವೇನು, ಯಾರಲ್ಲಿ ನನ್ನ ಸಮಸ್ಯೆ ಹೇಳಿಕೊಳ್ಳಲಿ? ಒಮ್ಮೆ ವಿಷಯ ಬಹಿರಂಗವಾದರೆ ಸಾಕು, ಸ್ನೇಹಿತರು ಬಂಧುಗಳು ತಲೆಗೊಂದು ಮಾತು ಕಥೆ ಕಟ್ಟುತ್ತಾರೆ. ನನ್ನ ಮರ್ಯಾದೆ ಬೀದಿಗೆ ಹೋಗಿ ನಿಲ್ಲುತ್ತದೆ. ಅವಳು ಒಳಗೊಳಗೆ ತುಂಬಾ ಹೈರಾಣ ಆದಳು. ಓದಿನ ಕಡೆ ಕೂಡಾ ಸೀರಿಯಸ್ಸಾಗಿ ಗಮನ ಹರಿಸಲು ಸಾಧ್ಯಾವಗಲಿಲ್ಲ.
ಒಂದು ಭಾನುವಾರ ಅವರಿಬ್ಬರೂ ದಂಪತಿಗಳು ಊಟದ ಟೇಬಲ್ಲಿನ ಮೇಲೆ ಕುಳಿತಿದ್ದರು. ಭಟ್ಟರು ಬಡಿಸಿ ಒಳಗೆ ಹೋದರು. ಈ ದಿನ ಮೊದಲೇ ನಿಶ್ಚಯಿಸಿದಂತೆ ಮೀರಾ ಗಂಡನನ್ನು ತನ್ನ ಸಂಕೋಚ, ದಿವ್ಯತೆ, ನಾಚಿಕೆ ಎಲ್ಲವನ್ನೂ ಬದಿಗೆ ಸರಿಸಿ ಅನ್ನ ಕಲಿಸುತ್ತ ಕೇಳಿಯೇ ಬಿಟ್ಟಳೂ “ಶಶಾಂಕ ಒಂದು ಪ್ರಶ್ನೆ. ನೀವ್ಯಾಕೆ ಇನ್ನೂ ನನ್ನ ಸಮೀಪಿಸಿಲ್ಲ. ಮದುವೆ ಆಗಿ ಒಂದು ವರ್ಷವಾಯ್ತು. ನನಗೆ ಇದನ್ನು ಕೇಳಲು ತುಂಬಾ ಸಂಕೋಚವೆನಿಸುತ್ತದೆ. ಯಾಕೆ ನಾನು ನಿಮಗೆ ಇಷ್ಟವಿಲ್ಲದೇ ನಿಮ್ಮ ಜೀವನದಲ್ಲಿ ಬಂದವಳೇ? ಹಿಡಿ ಪ್ರೀತಿಗಾಗಿ ನನ್ನ ಜೀವ ಹಂಬಲಿಸುತ್ತಿವೆ. ಸಮಸ್ಯೆಗಳು ಏನೆಂದೂ ನನಗೆ ತಿಳಿಯುತ್ತಿಲ್ಲ. ಈವರೆಗೆ ಈ ವಿಷಯವನ್ನು ನಾನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಪ್ರೀತಿಯ ಝರಿ ತಾನಾಗಿಯೇ ಹುಟ್ಟಬೇಕು. ನನ್ನದೇನಾದರೂ ತಪ್ಪಿದ್ದರೆ ಹೇಳಿ ತಿದ್ದಿಕೊಳ್ಳುತ್ತೇನೆ. ಆದರೆ ನಾವಿಬ್ಬರೂ ಸಹಜ ದಾಂಪತ್ಯ ಜೀವನ ನಡೆಸೋದು ಯಾವಾಗ?” ಅವಳು ಸುದೀರ್ಘ ಪ್ರಶ್ನೆಗಳಿಂದ ಶಶಾಂಕ ಗಲಿಬಿಲಿಗೊಂಡ. ಮಾತನಾಡಲೂ ಅವನ ನಾಲಿಗೆ ಹೊರಳಲಿಲ್ಲ. ಅಷ್ಟಕ್ಕೇ ಊಟ ನಿಲ್ಲಿಸಿ ಅವನು ಪಾರ್ಕಿಂಗ್ನಲ್ಲಿದ್ದ ಕಾರು ಏರಿ ಏನೊಂದು ಹೇಳದೇ ಹೊರಗೆ ಹೊರಟು ಹೋದ. ಮೀರಾಳಿಗೆ ಅವಮಾನ ಆದಂತೆ ಅನಿಸಿತು. ಇದನ್ನು ನಾನು ಕೇಳಬಾರದಾಗಿತ್ತಲ್ಲ ಅಂತ ಅಂದುಕೊಂಡಳು. ಅವಳ ಕಣ್ಣುಗಳು ತುಂಬಿ ಬಂದವು. ಅರ್ದಕ್ಕೆ ಊಟನಿಲ್ಲಿಸಿ ಅವಳು ರೂಮಿಗೆ ಹೋಗಿ ಹಾಸಿಗೆ ಮೇಲೆ ಉರುಳಿಕೊಂಡಳು. ತಲೆಯಲ್ಲಿ ಕೆಂಜಿರುವೆ ಕಡಿದ ಉರಿ, ಏನಿದು? ಯಾರು ಬಗೆಹರಿಸುವರು? ಎಲ್ಲಿ ಮೂಲ ತಪ್ಪಿದೆ. ಇಷ್ಟೊಂದು ಸುಖ ಸಂಪತ್ತು, ಮನೆ ತುಂಬಿ ತುಳುಕಾಡಿದರೂ ನನ್ನನ್ನು ಪ್ರೀತಿಯಿಂದ ತಬ್ಬುವರೆ ಇಲ್ಲವಲ್ಲ. ಇದೆಂತಹ ಬರಡು ಜೀವನ, ಅಮ್ಮನಿಗೆ ಹೇಳಿದರೆ ಅಮ್ಮ ತಡೆದುಕೊಳ್ಳಬಲ್ಲಳಾ? ಅತ್ತೆಯಲ್ಲಿ ಹೇಗೆ ಹೇಳಿಕೊಳ್ಳುವುದು, ಮೀರಾಳಿಗೆ ಮೊದಲ ಸಲ ತನ್ನ ಬದುಕು ಸಂಪೂರ್ಣ ಆತಂತ್ರ ಅನಿಸತೊಡಗಿತು. ಮದುವೆ ಮಾಡಿಸಿದ ಹಿರಿಯರಲ್ಲಿ ಪ್ರಸ್ತಾಪಿಸಿದರೆ ಊರಿಗೆಲ್ಲಾ ಗೊತ್ತಾಗುತ್ತದೆ. ದೇವರೇ ಎಂತಹ ಪರೀಕ್ಷೆ. ಮೀರ ಇಡೀ ದಿವಸ ಕಂಪಿಸಿದಳು. ಹೈರಾಣ ಆಗಿ ನಿದ್ರೆಗೆ ಜಾರಿದಳು. ಎದ್ದಾಗ ಸಂಜೆ ಆರು ಗಂಟೆ. ಸಿಟ್ಟುಗೊಂಡು ಹೊರಗೆ ಹೋದ ಶಶಾಂಕ ಇನ್ನೂ ಮರಳಿ ಬಂದಿರಲಿಲ್ಲ. ಭಟ್ಟರು ಮಾಡಿ ಕೊಟ್ಟ ಬಿಸಿ ಕಾಫಿ ಕುಡಿದು ಸೋಫಾದ ಮೇಲೆ ಕುಳಿತ ಮೀರಾಳಿಗೆ ದಿಗ್ಗನೆ ಒಂದು ವಿಚಾರ ಹೊಳೆದು ಬರಬರ ಮಹಡಿ ಮೇಲಿನ ಶಶಾಂಕನ ಕೋಣೆಯನ್ನು ಪ್ರವೇಶಿಸಿದಳು. ಸೂರ್ಯ ಆಗಲೇ ಕಂತಿದ್ದ.
ಮೀರಾ ಶಶಾಂಕನ ಕಂಪ್ಯೂಟರ್ ಆನ್ ಮಾಡಿದಳು. ಮತ್ತೆ ಪಾಸ್‌ವರ್ಡ್ ಮಾಡಿಕೊಂಡು ಇಂಟರ್‌ನೆಟ್‌ನಲ್ಲಿ ಫೇಸ್‌ಬುಕ್ ಓಪನ್ ಮಾಡಿ ಲಾಗ್‌ಆನ್‌ನಲ್ಲಿ ಪೇಜ್ ಚೆಕ್ ಮಾಡಿದಳು. ಅವಳು ಅವನ ಫ್ರೆಂಡ್‍ಸ್ ಲಿಸ್ಟ್‌ನಲ್ಲಿ ಬಿಹೇವಿಯರ್ ಕಾಮನ್ ಮೇಸೇಜ್, ಕಾಮನ್ ಏರಿಯಾ ತಡಕಾಡಿದಳು ಅಲ್ಲಿ ಅವಳಿಗೆ ಒಂದೊಂದೇ ಫೋಟೋ, ವಿಡಿಯೋ ಕ್ಲಿಪ್‌ಗಳನ್ನು ನೋಡುತ್ತ ಹೋದ ಹಾಗೆ ಎದೆಯಲ್ಲಿ ಡೈನಾಮೊ ಇಟ್ಟು ಎದೆಯನ್ನು ಸೀಳುವಂತಹ ದೃಶ್ಯಗಳು ಗೋಚರವಾದವು. ಅವನು ಅಂದರೆ ಶಶಾಂಕನ ವಿದೇಶಿ ಸ್ನೇಹಿತರ ಜೊತೆಗೆ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ನೋಡಿ ಅವಳು ಗಡಗಡ ನಡುಗಿದಳು. ಅದಕ್ಕೆಂದೇ ಅವನು ಪ್ರತಿ ತಿಂಗಳು ತಪ್ಪದೇ ವಿದೇಶಿ ಪ್ರವಾಸ ಮಾಡುತ್ತಾನೆ. ಇಂತಹ ಆಳವಾದ ಚಟವಿದ್ದ ಮನುಷ್ಯ ಸುಮ್ಮ ಸುಮ್ಮನೆ ನನ್ನನ್ನೇಕೆ ಮದುವೆಯಾಗಿ ಗೋಳಾಡಿಸುತ್ತಿದ್ದಾನೆ. ಅವಳು ಸಂಪೂರ್‍ಣ ಕುಸಿದಳು. ಶಶಾಂಕ ತನ್ನ ಚಟಕ್ಕಾಗಿ ತನ್ನ ವಿದೇಶಿ ಗೆಳೆಯರೊಂದಿಗೆ ಚಾಟ್ ಮಾಡುತ್ತ ರಾತ್ರಿ ಕಳೆಯುತ್ತಿದ್ದ. ಶಶಾಂಕನ ಬಗ್ಗೆ ಅವಳಿಗೆ ಹೇಸಿಗೆ ಬಂತು. ಅವನು ಗೇ ಆಗಿದ್ದ. ಅವಳು ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಳು ಬಹಳ ಹೊತ್ತಿನವರೆಗೆ.
*****


















