ಭಾಗ ೧
ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನೆಗೆ ಬರುವುದು ಸಾಧ್ಯವಾಗುತ್ತಿದೆ-ಊಟ ಮುಗಿಸಿ ಚಿಕ್ಕದೊಂದು ನಿದ್ದೆಯನ್ನು ಮಾಡಿ ಮಧ್ಯಾಹ್ನದ ನಂತರವೂ ಬೇಕಿದ್ದರೆ ಆಫೀಸಿಗೆ ಮರಳಬಹುದು. ಕ್ಲಾಸುಗಳಿಲ್ಲದ ದಿನ ಆಫೀಸಿಗೆ ಹೋಗುವ ಅಗತ್ಯವೂ ಇರುವುದಿಲ್ಲ. ಹೀಗೆ ಮಧ್ಯಮ ತರಗತಿಯ ದೈನಂದಿನದಲ್ಲಿ ಮನುಷ್ಯ ಮರವಾಗಿ ಮಾರ್‍ಪಟ್ಟು ಮೈ ತುಂಬ ತೊಗಟೆಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆಯೂ ಇದೆ. ಇದರ ಅರಿವಿದ್ದೇ ನಾನು ಬಹುಶಃ ನನಗೆ ಅಗತ್ಯವಿರದಂಥ ವಿಷಯಗಳಲ್ಲಿ ತಲೆಹಾಕಿಕೊಂಡು ಇತರರ ಕ್ರೋಧವನ್ನು ಬೆಳೆಸಿ ಕೊಂಡಿದ್ದೇನೆ ಅನಿಸುತ್ತದೆ. ಎಲ್ಲಿ ಯಾರಾದರೂ ಮರವೊಂದನ್ನು ಕಡಿದರೆ ಅಲ್ಲಿಗೆ ಹೋಗಿ ರಂಪಾಟ ಆರಂಭಿಸುತ್ತೇನೆ; ಆಥವಾ ವಿಶ್ವವಿದ್ಯಾಲಯದ ಲೈಬ್ರರಿ ಹೊತ್ತಿಗೆ ಮೊದಲೆ ಮುಚ್ಚಿಬಿಟ್ಟಿರೆ ಏನು, ಯಾತಕ್ಕೆ ಎಂದು ಕೇಳುತ್ತೇನೆ. ಕ್ಯಾಂಟೀನಿನ ಕಿಚನ್ನಲ್ಲಿ ಒಳಗೆ ಪ್ರವೇಶವಿಲ್ಲವೆಂದು ಬೋರ್ಡ್ ಹಾಕಿದ್ದರೂ ಹೋಗಿ ಪಾತ್ರೆ ಪಗಡೆಗಳನ್ನು ಕ್ಲೀನಾಗಿ ಇಟ್ಟುಕೊಂಡಿದ್ದಾರೆಯೆ ಎಂದು ಪರಿಶೀಲಿಸುತ್ತೇನೆ.
“ಯಾಕೆ ಹೀಗೆಲ್ಲ ಬೇರೆ ಸಂಗತಿಗಳಲ್ಲಿ ತಲೆ ಹಾಕಿಕೊಳ್ಳುತ್ತೀರಿ. ಸುವೊ ಮೋಟೋ ಕೇಸುಗಳನ್ನು ತೆಗೆದುಕೊಳ್ಳುವುದಕ್ಕೆ ನೀವೇನು ಸುಪ್ರೀಂ ಕೋರ್ಟಿನ ನ್ಯಾಯಾಯಾಧೀಶರೆ? ಸುಮ್ಮನೆ ಬ್ಲಡ್ ಪ್ರೆಶರ್ ಜಾಸ್ತಿಯಾಗುತ್ತದೆ. ಈವತ್ತು ಆಫೀಸಿಗೆ ಹೋಗುತ್ತಿದ ಹಾಗೆ ಹೆಲ್ತ್ ಸೆಂಟರಿನಲ್ಲಿ ಬೀಪಿ ಚೆಕ್ ಮಾಡಿಸಿಕೊಳ್ಳಿ” ಎಂದು ನನ್ನ ಹೆಂಡತಿ ವಿನ್ಯಾಸ ಹೇಳುತ್ತಾಳೆ.
“ನೋಡಮ್ಮ ವಿನ್ಯಾಸ. ಮರ ಕಡಿದು ನಿಸರ್ಗಾನ ಹಾಳು ಮಾಡೋದು. ಕ್ಯಾಂಟೀನಿನಲ್ಲಿ ರೋಗಾಣುಗಳನ್ನು ಹಬ್ಬಿಸೋದು-ಇದೆಲ್ಲ ಬೇರೆ ಸಂಗತಿಗಳು ಹೇಗಾಗ್ತವೆ? ಥಿಯರಿ ಮತ್ತು ಪ್ರಾಕ್ಟೀಸಿನಲ್ಲಿ ವ್ಯತ್ಯಾಸವಿಲ್ಲ ಅಂತ ಮಾರ್ಕ್ ಹೇಳಿದ್ದಾನೆ ಗೊತ್ತೆ? ಇರೋದೊಂದೇ ಜಗತ್ತು ಅಂತ ಎನ್ವಿರಾನ್ಮೆಂಟಲಿಸ್ಟರು ಬೊಬ್ಬೆ ಹೊಡಕೊಳ್ತಾ ಇರ್‍ತಾರೆ. ಇದೆಲ್ಲ ಗೊತ್ತಿದ್ದೂ ಸುಮ್ಮಗಿರೋದು ಹೇಗೆ ಸಾಧ್ಯ?” ಎಂದು ನನ್ನ ವಾದ.
“ಆಯ್ತಾಯ್ತು. ಆದರೆ ಲೈಬ್ರರಿ ಅರ್ಧಗಂಟೆ ಬೇಗ ಮುಚ್ಚಿದರೂಂತ ಗಲಾಟೆ ಮಾಡೋ ಅಗತ್ಯ ಇತ್ತೇ? ಇದರಿಂದ ಏನಾಗುತ್ತೆ ಹೇಳಿ; ಅವರು ಮುಚ್ಚೋದೇನೂ ತಪ್ಪೋದಿಲ್ಲ. ನಿಮಗೆ ಸುಮ್ಮನೆ ವ್ಯೆರಿಗಳು ಜಾಸ್ತಿ ಆಗ್ತಾರೆ, ಆಷ್ಟೆ”
“ಲೈಬ್ರರಿ ಅಂದರೆ ಸೆಂಟರ್ ಆಫ್ ಲರ್ನಿಂಗ್. ಅಲ್ಲೇ ಅನ್ಯಾಯ ನಡೀತಾ ಇದ್ದರೆ ಸಹಿಸೋದು ಹೇಗೆ ಹೇಳು. ಸುಮ್ಮಗಿರಬೇಕೂಂತ ಹೇಳ್ತಾ ಇದ್ದೀ. ಹೀಗೆ ಸುಮ್ಮಗಿರೋರಿಗೋಸ್ಕರ ಡಾಂಟೆ ತನ್ನ ಡಿವೈನ್ ಕಾಮೆಡಿ ಎನ್ನುವ ಕಾವ್ಯದಲ್ಲಿ ಪ್ರತ್ಯೇಕ ನರಕಾನ ಸೃಷ್ಟಿ ಮಾಡಿದ್ದಾನೆ!”
“ಮಾತೆತ್ತಿದರೆ ನೀವು ಲಿಟರರಿ ಎಲ್ಯೂಶನ್ಸ್ ಕೊಡೋಕೆ ಶುರುಮಾಡ್ತೀರಿ! ನಿಜ ಜೀವನಾಂದರೆ ಸಾಹಿತ್ಯ ಅಲ್ಲಾಂತ ನಿಮಗಿನ್ನೂ ಗೊತ್ತಾಗಿಲ್ವಲ್ಲ!”
ಚರ್ಚೆ ಇಂಥದ್ದೇ ಯಾವುದಾದರೊಂದು ಘಟ್ಟದಲ್ಲಿ ನಿಲ್ಲುತ್ತದೆ. ನಾನು ಯಾವಾಗಲೂ ಕೊನೆಮಾತನ್ನು ವಿನ್ಯಾಸಳಿಗೇ ಬಿಟ್ಟಿಬಿಡುತ್ತೇನೆ. ಬೇರೆ ಯಾವುದರಲ್ಲಿ ಅಲ್ಲದಿದ್ದರೂ ಹೆಂಡತಿಯ ಜತೆಯ ವ್ಯವಹಾರದಲ್ಲಿ ಮಾತ್ರ ನಾನು ಬಹಳ ಪ್ರಾಗ್ಮಾಟಿಕ್ ಮನುಷ್ಯ. ಹೀಗಿರುತ್ತ ನಮ್ಮ ಸಂಬಂಧವನ್ನು ಬಲವಾಗಿ ಕಲಕುವಂಥ ಹಾಗೂ ನನ್ನ ಇಂಟಿಗ್ರಟೀನ ಪ್ರಶ್ನೆ ಮಾಡುವಂಥ ಒಂದು ಘಟನೆ ಒದಗಿ ಬಂತು. ಈ ಘಟನೆಯ ನಾಯಕಿ ಮೀನ ಎನ್ನುವವಳು. ನಾಯಕ ಯಾರೋ ನನಗಂತೂ ಇದುತನಕ ತಿಳಿಯದು.
ಮೊದಲು ಮೀನಳ ಕುರಿತು ಕೆಲವು ವಿವರಗಳನ್ನು ಕೊಡುವುದು ಅಗತ್ಯ. ಸುಮಾರು ಮೂವತ್ತರ ವಯಸ್ಸಿನ ಮೀನ ಎಣ್ಣೆಗಪ್ಪು ಬಣ್ಣದವಳು. ತೆಳ್ಳಗಿದ್ದಾಳೆ. ಆಕರ್ಷಕವಾದ ಕಣ್ಣು, ಮೂಗು, ತುಟಿ, ಸೊಂಪಾಗಿ ಬೆಳೆದ ತಲೆಗೂದಲು. ಇಂಗ್ಲಿಷಿನಲ್ಲಿ ಹಸ್ಕಿ ಎನ್ನಬಹುದಾದ ಸ್ವರ. ಹಸ್ಕಿ ಎಂದರೆ ಮಂಜುಳವಲ್ಲ; ಅದಕ್ಕೆ ವಿರುದ್ಧವಾದ್ದು, ಎಂದರೆ ಕರ್ಕಶವಲ್ಲ. ಒಂದು ಥರ ಗಂಟಲಾರಿದ ಸ್ವರ, ಇಂಥ ಸ್ವರ ಸೆಕ್ಸಿ ಎಂದು ಕೆಲವರ ಕಲ್ಪನೆ. ಅಂತೂ ಮೀನಳ ವಿಶೇಷಣಗಳಲ್ಲಿ ಈ ಪ್ರತ್ಯೇಕವಾದ ಸ್ವರವೂ ಒಂದು. ಮೀನ ಏನೂ ಅಲಂಕಾರಗಳನ್ನ ಮಾಡಿಕೊಳ್ಳುವುದಿಲ್ಲ, ಆದರೂ ಆಕೆ ತುರುಬನ್ನು ಕಟ್ಟುವ ರೀತಿ, ಸೀರೆ ಉಡುವ ಕ್ರಮ, ನಡೆಯುವ ಶೈಲಿ ಎಲ್ಲವೂ ಆಕರ್ಷಕವಾಗಿವೆ ಎನ್ನಬಹುದು. ನನ್ನ ಅನೇಕ ಸಹೋದ್ಯೋಗಿಯರ ಹೆಂಡತಿಯರಿಗಿಂತ ಮೀನ ಚೆನ್ನಾಗಿದ್ದಾಳೆ ಎನ್ನುವುದರಲ್ಲಿ ಸಂದೇಹವಿಲ್ಲ.
ಮೀನ ನಮ್ಮ ಮನೆಯ ಕೆಲಸದಾಕೆ. ಕ್ಯಾಂಪಸ್‌ನಲ್ಲಿ ಕೆಲಸದವರಿಗೆ ಬಹಳ ಖಾಯಸ್ಸು. ನಗರದಿಂದ ತುಸು ದೂರದಲ್ಲಿರೋದರಿಂದಲೋ ಏನೋ ದುಬಾರಿ ಸಂಬಳ, ಅಲ್ಲದೆ ಒಬ್ಬರ ಮನೆಯ ಕೆಲಸದಾಕೇನ ಇನ್ನೊಂದು ಮನೆಯವರು ಹೈಜಾಕ್ ಮಾಡೋ ಲಫಂಗತನಾನೂ ಸಾಕಷ್ಟಿದೆ. ಕೆಲಸದವರಿಗೂ, ಒಂದು ಮನೆಗಿಂತ ಇನ್ನೊಂದು ಮನೆಯೇ ಯಾವಾಗಲೂ ಚೆನ್ನಾಗಿ ತೋರುವುದು. ಬೇರೆಯವರ ಸಿಹಿಮಾತಿಗೆ ಮರುಳಾಗುತ್ತಾರೆ. ಇಲ್ಲಿ ಬಿಟ್ಟು ಅಲ್ಲಿ ಸೇರುತ್ತಾರೆ; ಮೊದಲ ವಾರ ಅವರಿಗೆ ಮದುಮಗಳ ಉಪಚಾರ ನಡೆಯುತ್ತದೆ. ನಂತರ ಎಲ್ಲ ಮಾಮೂಲಿ, ಹೀಗೆ ಎಷ್ಟೋ ಮಂದಿ ಕೆಲಸದವರು ಕೈತಪ್ಪಿದ ಮೇಲೆಯೇ ನಮಗೆ ಮೀನ ದೊರಕಿದುದು. ಅವಳೇನೂ ಇತರರಿಗಿಂತ ಜಾಸ್ತಿ ದುಡಿಯುತ್ತಿದ್ದಾಳೆ ಎನ್ನುವಂತಿರಲಿಲ್ಲ. ಹೇಳದೆ ಕೇಳದೆ ತಪ್ಪಿಸಿಕೊಳ್ಳುವ ರೋಗ ಅವಳಲ್ಲೂ ಇತ್ತು. ಏನೇ ಇದ್ದರೂ, ನಮಗೆ ಎದುರು ಮಾತು ಹೇಳದೆ ದಿನದ ಕೆಲಸ ಮಾಡಿ ಹೊರಟುಹೋಗುತ್ತಿದ್ದಳು. ಮನುಷ್ಯನ ಈಗೋ ಸಮಾಧಾನದಲ್ಲಿರೋದಕ್ಕೆ ಇದಕ್ಕಿಂತ ಹೆಚ್ಚೇನು?
ನನ್ನ ಮತ್ತು ಹೊರಜಗತ್ತಿನ ಸಂಬಂಧಕ್ಕೆ ವಿನ್ಯಾಸ ಒಂದು ಮಾಧ್ಯಮವಿದ್ದ ಹಾಗೆ. ಅವಳ ಮೂಲಕವೆ ನನಗೆ ಎಲ್ಲಾ ವಿವರಗಳೂ ದೊರಕಬೇಕು. ಯಾರ ಮನೆಯಲ್ಲಿ ಏನು ನಡೆಯಿತು. ಏನು ನಡೆಯಲಿದೆ, ಇವತ್ತು ಸೀತಾಫಲಮಂಡಿ, ಚಿಂತಲ್ ಬಸ್ತಿ, ಒಡ್ಡರ ಬಸ್ತಿಗಳಲ್ಲಿ ಏನೇನು ವಿಶೇಷ, ಸಕಲವೂ ಅದು ಯಾವುದೋ ಮಾಯಕದಲ್ಲಿ ವಿನ್ಯಾಸಳಿಗೆ ಗೊತ್ತಾಗಿ ಬಿಡುತ್ತದೆ! ಮನೆಗೆ ನಾನು ಬಂದೊಡನೆಯೆ ಸಕಲವನ್ನೂ ಅವಳು ನನಗೆ ಹೇಳುತ್ತಾಳೆ, ಅದೇ ರೀಶಿ, ಸ್ಕೂಲಿನಿಂದ ಮರಳಿದ ಮಕ್ಕಳೂ ಶಾಲೆಯಲ್ಲಿ ಏನೇನು ನಡೆಯಿತು ಎಂಬುದನ್ನೆಲ್ಲ ವರದಿಯೊಪ್ಪಿಸುತ್ತಾರೆ-ಯಾವ ಟೀಚರು ಏನು ಶಿಕ್ಷೆ ಕೊಟ್ಟಳು. ಯಾರು ಯಾರ ಕುಂದು ಕೊರತೆಗಳು ಏನೇನು ಇತ್ಯಾದಿ. ಎಲ್ಲವನ್ನೂ ನಾನು ಆಸಕ್ತಿಯಿಂದ ಕೇಳುತ್ತೇನೆ. ನಾನು ಯೂನಿವರ್ಸಿಟಿ ಅಧ್ಯಾಪಕನಾದ್ದರಿಂದ ಈ ಹೊರಜಗತ್ತಿನ ವಸ್ತುವಿವರಗಳು ಏನೇನೂ ಅಲ್ಲವೆನ್ನುವ ದಿವ್ಯನಿರ್ಲಕ್ಷ ನನಗಿಲ್ಲ. ಆದ್ದರಿಂದಲೇ ಬದುಕಿಗೆ ಹಲವು ಆಯಾಮಗಳು ಬರುವುದು. ಇರಲಿ. ಮೀನಳ ಹಿನ್ನೆಲೆಯೂ ನನಗೆ ಗೊತ್ತಾದುದು ವಿನ್ಯಾಸಳ ಮೂಲಕವೇ. ನಾನು ಆಫೀಸಿಗೆ ಹೋದ ಮೇಲೆ ಇಬ್ಬರೂ ಮಾತಾಡಿಕೊಳ್ಳುತ್ತಿರಬೇಕು. ಕೆಲವೇ ದಿನಗಳಲ್ಲಿ ಮೀನಳ ಕುರಿತು ಒಂದು ಗ್ರಂಥವನ್ನೇ ಬರೆಯುವಷ್ಟು ವಿವರಗಳನ್ನು ವಿನ್ಯಾಸ ಸಂಪಾದಿಸಿಬಿಟ್ಟಿದ್ದಳು. ಅವೆಲ್ಲವೂ ಇಲ್ಲಿ ಮುಖ್ಯವಾದ್ದಲ್ಲ. ಮುಖ್ಯವಾದ್ದನ್ನು ಮಾತ್ರವೆ ಕೊಡುತ್ತೇನೆ.
ಮೀನಳಿಗೆ ಇಬ್ಬರು ಮಕ್ಕಳು, ಒಂದು ಗಂಡು, ಒಂದು ಹೆಣ್ಣು. ಇಬ್ಬರೂ ಬಸ್ತಿಯಲ್ಲೇ ಇರುವ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಆ ಶಾಲೆ ಏನೇನೂ ಚೆನ್ನಾಗಿಲ್ಲದ್ದರಿಂದ ಅವುಗಳಿಗೆ ಇನ್ನೂ ಸರಿಯಾಗಿ ಅಕ್ಷರಾಭ್ಯಾಸಾನೇ ಆಗಿಲ್ಲ. ಮೀನಳಿಗೆ ಓದುಬರಹ ಹೆಚ್ಚೇನೂ ಇಲ್ಲ, ಮಕ್ಕಳಿಗೆ ಓದಿಸಬೇಕೆಂದು ಅವಳ ಆಕಾಂಕ್ಷೆ. ಮುಂದಿನ ವರ್ಷ ಒಳ್ಳೇ ಇನ್ನೊಂದು ಸ್ಕೂಲಿಗೆ ಮಕ್ಕಳನ್ನು ಸೇರಿಸುವ ಯೋಜನೆಯಲ್ಲಿದ್ದಳು. ವಿನ್ಯಾಸ ಅವಳಿಗೆ ನಮ್ಮ ಮಕ್ಕಳ ಹಳೆ ಬಟ್ಟೆಗಳನ್ನೂ ಬೂಟುಗಳನ್ನೂ ಪುಸ್ತಕಗಳನ್ನೂ ಕೊಟ್ಟಿದ್ದಾಳೆ. ಟೆಸ್ಟುಗಳಿರುವ ಸಂದರ್ಭಗಳಲ್ಲಿ ಅವು ಮನೆಗೆ ಬಂದು ವಿನ್ಯಾಸಳಿಂದ ಪಾಠ ಹೇಳಿಸಿಕೊಂಡಿವೆ. ಹುಡುಗಿ ತುಂಬ ಚುರುಕಿದಾಳೆಂದೂ ಚೆನ್ನಾಗಿ ಓದಿಸಿದರೆ ಮುಂದೆ ಬರುತ್ತಾಳೆಂದೂ ಅವಳ ಅಭಿಪ್ರಾಯ. ಆ ಹುಡುಗಿಯ ಫೀ ನಾನೇ ಕಟ್ಟಿದರೆ ಹೇಗೆಂಬ ಒಂದು ವಿಚಾರ ನನ್ನ ಮನಸ್ಸಿನಲ್ಲಿ ಮೂಡಿ, ಇಂಥ ಬೇರೆ ಅನೇಕ ವಿಚಾರಗಳ ಜತೆ ಸೇರಿ ಮಾಯವಾದುದಿದೆ.
ಮೀನಳ ಬಸ್ತಿ ಸುಮಾರು ಅರ್ಧ ಮೈಲಿ ದೂರದಲ್ಲಿದೆ. ಬಸ್ತಿ ತುಂಬ ಇಂಥ ದಿನಗೂಲಿಯವರೇ. ಅಲ್ಲಿ ಯಾವುದೋ ಒಂದು ಮನೆಯ ಔಟ್‌ಹೌಸಿನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದುಕೊಂಡು ವಾಸಮಾಡುತ್ತಿದ್ದಾಳೆ. ಇದಕ್ಕೆ ಮೊದಲು ಎಷ್ಟೋ ಬಾರಿ ವಸತಿ ಬದಲಿಸಿಕೊಳ್ಳಬೇಕಾಗಿ ಬಂದಿದೆ. ಕಾರಣ, ಪ್ರತಿಯೊಬ್ಬ ಮಾಲಿಕನೂ ಬಾಡಿಗೆ ಹೆಚ್ಚುಮಾಡುತ್ತ ಹೋಗುತ್ತಾನೆ. ಖಾಯಮಾಗಿ ವರ್ಷ, ಎರಡು ವರ್ಷಕ್ಕಿಂತ ಜಾಸ್ತಿ ಯಾರನ್ನೂ ಇರಗೊಡುವುದಿಲ್ಲ. ಮೀನಳ ಸದ್ಯದ ಮನೆ ಮಾಲಿಕರು ಪರವಾಯಿಲ್ಲವಂತೆ. ಆದರೆ ನೀರಿಗೆ ಮಾತ್ರ ಅನುಕೂಲತೆಯಿಲ್ಲ. ಬಹಳ ದೂರ ಹೋಗಿ ನೀರು ತರಬೇಕು ಇತ್ಯಾದಿ ಇತ್ಯಾದಿಳ ಗಂಡ ಬೋಬಯ್ಯ ಸತ್ತು ಎರಡು ವರ್ಷಗಳಾಗಿವೆ. ಬೋಬಯ್ಯ ಸತ್ತುದು ಬಹಳ ವಿಚಿತ್ರವಾದ ಪರಿಸ್ಥಿತಿಯಲ್ಲಿ.
ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟುವಲ್ಲಿ ಸಿಮೆಂಟಿನ ಸ್ಲಾಬ್ ಹಾಕುವುದು ಬೋಬಯ್ಯನ ಕೆಲಸವಾಗಿತ್ತು. ಸೆಮಿಸ್ಕಿಲ್ಡ್ ಕೆಲಸ ಇದು. ಹಾಗಾಗಿ ಇತರ ಕೂಲಿ ಕೆಲಸದವರಿಗಿಂತ ಒಂದೂವರೆಪಾಲು ಜಾಸ್ತಿ ಸಂಬಳ. ಬೋಬಯ್ಯ ಒಬ್ಬ ಮೇಸ್ತ್ರಿಯ ಕೈಕೆಳಗೆ ದುಡಿಯುವವನು. ಮೇಸ್ತ್ರಿಯವನು ಕಂಟ್ರಾಕ್ಟರನ ಕೈಕೆಳಗೆ, ಹೀಗೆ ಯಾವ ಕಡೆ ಕೆಲಸ ಒದಗಿತೋ ಅಲ್ಲಿಗೆ ಹೋಗಬೇಕಾಗುತ್ತಿತ್ತು. ಹತ್ತಿರ ಕೆಲಸವಿದ್ದರೆ ಮಾತ್ರ ಬೋಬಯ್ಯ ದಿನಾ ಮನೆಗೆ ಮರಳುವುದು. ಇಲ್ಲದಿದ್ದರೆ ಕೆಲಸ ನಡೆಯುವಲ್ಲೇ ಕ್ಯಾಂಪು. ದಿನಕ್ಕೆ ನಲವತ್ತು, ಐವತ್ತು ರೂಪಾಯಿಗಳಷ್ಟು ಸಂಪಾದಿಸುತ್ತಿದ್ದ ಬೋಬಯ್ಯ ಮನೆಗೆ ತರುತ್ತಿದ್ದ ಹಣ ಅತ್ಯಲ್ಪ. ಸಾಕಷ್ಟುಕುಡಿದು ಮುಗಿಸುತ್ತಿದ್ದ. ಅಷ್ಟೇ ಕೆಟ್ಟ ಹೆಣ್ಣುಗಳಿಗೂ ತಿನಿಸುತ್ತಿದ್ದ. ಮೀನ ಕೆಲಸಕ್ಕೆ ಹೋಗಲು ಸುರುಮಾಡಿದುದು ಈ ಕಾರಣಕ್ಕೇ. ಹೀಗಿದ್ದರೂ ಬೋಬಯ್ಯ ಮನಗೆ ಬಂದು ಅವಳನ್ನು ಹೊಡೆದು ಬಡಿದು ಮಾಡುತ್ತಿದ್ದ.
ಒಂದು ದಿನ ಆತ ತನ್ನ ಕುಡುಕ ಮಿತ್ರನ ಜತೆ ಆ ಮಿತ್ರನ ಊರಿಗೆ ಹೋದ- ಮೈಸಯ್ಯ ಎಂದೇನೋ ಆತನ ಹೆಸರು. ಇಬ್ಬರೂ ಗಳಸ್ಯ ಕಂಠಸ್ಯ, ಎಲ್ಜಿಗೆ ಹೋಗೋದಿದ್ದರೂ ಅವರು ಒಟ್ಟೊಟ್ಟಿಗೇ ಹೋಗುವುದು. ವಾರಕ್ಕೆರಡು ಸಿನಿಮಾ ಇಬ್ಬರೂ ಸೇರಿ ನೋಡಲೇಬೇಕು. ಕುಡಿತದ ಗಡಂಗಿಗೆ ಹೋಗಿ ಯಾರಾರ ಜತೆಗೆ ಜಗಳ ಮಾಡಿಕೊಂಡು ಬರುತ್ತಿದ್ದರು. ಅವಕಾಶ ಸಿಕ್ಕಿದಾಗ ವಿರೋಧಿಗಳೂ ಇವರನ್ನು ತದಕುತ್ತಿದ್ದರು. ಮೈಸಯ್ಯನ ಹೆಂಡತಿ ಗರ್‍ಭಿಣಿಯಾಗಿ ಊರಿಗೆ ಹೋಗಿದ್ದಳು. ಅವಳು ಗಂಡು ಮಗುವನ್ನು ಹಡೆದಿದ್ದಾಳೆಂಬ ಸುದ್ದಿ ಬಂದು, ತಕ್ಷಣ ಊರಿಗೆ ಹೋಗಿ ನೋಡಬೇಕೆಂಬ ಮನಸ್ಸಾಯಿತು. ಬೋಬಯ್ಯನನ್ನು ಕರಕೊಂಡು ಹೊರಟ. ಹೋಗುವಾಗಲೆ ಇಬ್ಬರೂ ಸಾಕಷ್ಟು ಕುಡಿದಿದ್ದರು. ಅಲ್ಲಿ ಮನೆಯಲ್ಲೂ ಸಾಕಷ್ಟು ಉಪಚಾರವಾಯಿತು. ಸಂಜೆ ವಾಪಸು ಬರಲು ಬಸ್ಸು ಹಿಡಿಯಲೆಂದು ಇಬ್ಬರೂ ಬಸ್‍ಸ್ಟಾಂಡಿನತ್ತ ಹೆಜ್ಜೆ ಹಾಕಿದರು. ದಾರಿಯಲ್ಹೊಂದು ಗಡಂಗಿತ್ತು. ಸರಿ, ಬಸ್ಸಿಗೆ ಇನ್ನೂ ಸಮಯವಿದೆ ಎಂದುಕೊಂಡು ಅಲ್ಲಿಗೆ ಹೋದರು. ಬಾಟಲಿ ಖಾಲಿ ಮಾಡುತ್ತ ಮೈಸಯ್ಯ ಏನೋ ಜೋಕು ಹೇಳಿದ. ಅದಕ್ಕೆ ಬೋಬಯ್ಯವಿಗೆ ಫಕ್ಕನೆ ನಗು ಬಂದು ಬಾಯಲ್ಲಿದ್ದುದೆಲ್ಲ ಎದುರು ಕೂತಿದ್ದವರ ಮೈಮೇಲೆ ಬಿತ್ತು. ಎದುರು ಕೂತಿದ್ದವರು ದಾದಾಗಳೆನ್ನುವುದು ನೋಡಿದರೇ ಗೊತ್ತಾಗುವಂತಿತ್ತು. ಅವರು ಎದ್ದ ತಕ್ಷಣ ಮೈಸಯ್ಯ ಮತ್ತು ಬೋಬಯ್ಯ ಓಡತೊಡಗಿದರು. ಬೋಬಯ್ಯನಿಗೆ ಹಿಂದಿನ ದಿನ ಕಾಲಿನ ಮೇಲೆ ಇಟ್ಟಿಗೆ ಬಿದ್ದಿದ್ದರಿಂದ ನೋಯುತ್ತಿತ್ತು. ಓಡುತ್ತ ಓಡುತ್ತ ಅವನು ಮಾರ್ಗದ ಬದಿಯಲ್ಲಿ ಬಿದ್ದುಬಿಟ್ಟ. ಪಕ್ಕದಲ್ಲೆ ಒಂದು ನಾಲ್ಕು ಚಕ್ರದ ಬಂಡಿಯ ಮೇಲೆ ಒಬ್ಬಾತ ಎಳನೀರು ಮಾರುತ್ತಿದ್ದ. ಅಟ್ಟಿಸಿಕೊಂಡು ಬಂದವರು ಎಳನೀರು ಕಡಿಯುವ ಕತ್ತಿಯನ್ನು ಎತ್ತಿಕೊಂಡು ಬೋಬಯ್ಯನ ಕುತ್ತಿಗೆಗೆ ಏಟು ಹಾಕಿದರು. ಈ ಗಲಾಟೆಯಲ್ಲಿ ಮೈಸಯ್ಯ ಮಾತ್ರ ತಪ್ಪಿಸಿಕೊಂಡ.
ಬೋಬಯ್ಯ ತೀರಿಕೊಂಡ ಮೇಲೆ ಮೀನಳ ಬದುಕಿನಲ್ಲಿ ಏನಾದರೂ ವ್ಯತ್ಯಾಸವಾಯಿತೆ? ವಿಧವೆಯಾದಳು ಎನ್ನೋ ಸಂಗತಿ ಬಿಟ್ಟರೆ ದೈನಂದಿನ ಹಾಗೆಯೇ ನಡೆಯುತ್ತಿತ್ತು. ದೂರ ಊರಿನ ಚಿಕ್ಕಪ್ಪನೊಬ್ಬ ತನ್ನಲ್ಲಿ ಬಂದು ಇರುವಂತೆ ಕರೆದ. ಆದೇ ರೀತಿ, ತಾಯಿಯ ತಂಗಿಯೊಬ್ಬಳೂ ಕರೆದಳು. ಆದರೆ, ಎಲ್ಲಿಗೂ ಹೋಗುವುದಕ್ಕೆ ಮೀನಳಿಗೆ ಇಷ್ಟವಿರಲಿಲ್ಲ. ತನ್ನ ಮನೆ, ತನ್ನ ಮಕ್ಕಳು, ತನ್ನ ಸ್ವಾತಂತ್ರ್ಯ ಇನ್ನೊಂದು ಕಡೆ ದೊರಕುವುದಿಲ್ಲವೆಂದು ಅವಳಿಗೆ ಗೊತ್ತಿತ್ತು. ಆದ್ದರಿಂದ ಬಸ್ತಿಯಲ್ಲಿ ಇದ್ದುಕೊಂಡೆ ಯಥಾ ಜೀವನ ಮುಂದುವರಿಸತೊಡಗಿದಳು.
ನಮ್ಮ ಮೊದಲಿನ ಕೆಲಸದಾಕೆ ಯಾವುದೋ ಕಾರಣಕ್ಕೆ ಜಗಳ ಕಾದು ಹೊರಟು ಹೋದಳು. ನಂತರ ತಿಳಿಯಿತು. ರೆಜಿಸ್ಟ್ರಾರ ಮನೆಯಲ್ಲಿ ಕೂಡಲೆ ಕೆಲಸಕ್ಕೆ ಸೇರಿದಳು ಎಂದು. ಬಹುಶಃ ಅಲ್ಲಿ ಸೇರುವುದಕ್ಕೆಂದೇ ನಮ್ಮಲ್ಲಿ ಜಗಳ ಕಾದಳೋ ಏನೋ. ರೆಜಿಸ್ಟ್ರಾರ ಮನೆಯಲ್ಲಿ ದುಡಿದರೆ ಎಂದಾದರೊಂದು ದಿನ ಯುನಿವರ್ಸಿಟೀನಲ್ಲಿ ಖಾಯಂ ಕೆಲಸ ದೊರಕೀತು ಎನ್ನುವ ಆಸೆ ಅವಳದು. ಪಾಪ, ಅವಳನ್ನು ಬಯ್ದು ಉಪಯೋಗವಿಲ್ಲ, ಇಂಥ ಸಂದರ್ಭದಲ್ಲೇ ಮೀನಾ ಕೆಲಸ ಹುಡುಕಿಕೊಂಡು ನಮ್ಮಲ್ಲಿಗೆ ಬಂದುದು. ಯಾರೋ ಹೇಳಿದ್ದರಂತೆ ನಮ್ಮಲ್ಲಿ ಕೆಲಸದಾಕೆಯಿಲ್ಲ ಎಂದು. ಅವಳೂ, ಬೇರೆಲ್ಲೋ ಕೆಲಸ ಮಾಡುತ್ತಿದ್ದವಳು ಕ್ಯಾಂಪಸ್ನೊಳಗೆ ಸಂಬಳ ಜಾಸ್ತಿ ಸಿಗತ್ತೆ ಎಂದು ತಿಳಿದು ಬಂದಿದ್ದಳು. ಅವಳನ್ನು ತೆಗೆದುಕೊಳ್ಳದೇ ಇರುವುದಕ್ಕೆ ನಮಗೆ ಯಾವ ಕಾರಣವೂ ಇರಲಿಲ್ಲ. ಆಮೇಲೆ ನೆರೆಮನೆಯ ಕೆಲಸದವಳೊಬ್ಬಳು ಮೀನಾ ಕುರಿತು ತುಸು ಕೆಟ್ಟದಾಗಿಯೇ ವಿನ್ಯಾಸಳಲ್ಲಿ ಹೇಳಿದಳಂತೆ. ತಾನು ಶಿಫಾರಸು ಮಾಡಿದವಳೊಬ್ಬಳನ್ನು ನಾವು ತೆಗೆದುಕೊಳ್ಳಬೇಕೆಂದು ಅವಳ ಮನಸ್ಸಿನಲ್ಲಿತ್ತು. ಆಸೂಯೆಯೆನ್ನುವುದು ಪ್ರತಿಯೊಂದು ಸ್ತರದಲ್ಲೂ ಪ್ರವರ್ತಿಸುತ್ತದೆ. ನೆರೆಮನೆಯ ಕೆಲಸದಾಕೆ ದಾರಿಯಲ್ಲಿ ಮೀನಾಳನ್ನು ಓಂದೆರಡು ಬಾರಿ ಬೆದರಿಸಿಯೂ ನೋಡಿದಳಂತೆ. ಆದರೆ ಮೀನ ಜಗ್ಗುವ ಹೆಣ್ಣಲ್ಲ.
ಕೆಲವು ವಾರಗಳ ತನಕ ಎಲ್ಲವೂ ಸುಗಮವಾಗಿಯೆ ನಡೆಯಿತು. ಬೆಳಗ್ಗೆ ಏಳು ಏಳೂವರೆಗೆಲ್ಲಾ ಮೀನಾ ಹಾಜರಾಗುತ್ತಿದ್ದಳು. ಪ್ರತಿಯೊಂದು ಕೆಲಸವನ್ನೂ ತಾನಾಗಿ ತಿಳಿದೇ ಮಾಡುವವಳು. ತರಕಾರಿ ಹಚ್ಚುವುದು, ಮಕ್ಕಳನ್ನು ಮೀಯಿಸುವುದು. ಅವರ ತಲೆಬಾಚುವುದು ಇವೊಂದೂ ಅವಳ ಕೆಲಸದಲ್ಲಿಲ್ಲದಿದ್ದರೂ ಮಾಡುತ್ತಿದ್ದಳು. ಒಂದು ದಿನ ಮಧ್ಯಾಹ್ನದೂಟಕ್ಕೆ ಅದೇನೋ ಅತ್ಯಂತ ರುಚಿಕರವಾದ ಚಟ್ಣಿಯಿತ್ತು. ತುಸು ಹೆಚ್ಚು ಅನ್ನ ಹಾಕಿಸಿ ಊಟ ಮಾಡಿದೆ. ಅದು ಮೀನಾ ತಯಾರಿಸಿದ ಚಟ್ಣಿಯೆಂದು ವಿನ್ಯಾಸ ಹೇಳಿದಳು. ಸ್ಚಲ್ಪ ಹೆಚ್ಚು ಸಂಬಳ ಕೊಟ್ಟು ಮೀನಳನ್ನು ಅಡುಗೆಗೂ ನೇಮಿಸಿದರೆ ಹೇಗೆ ಎನ್ನುವ ವಿಚಾರ ತಲೆಗೆ ಬಂತು. ವಿನ್ಯಾಸ ಖಾಸಗಿಯಾಗಿ ಎಂ.ಎ. ಪರೀಕ್ಷೆಗೆ ಓದುತ್ತಿದ್ದಾಳೆ. ಅವಳಿಗೂ ಬಿಡುವಾಗುತ್ತದೆ. ಆದರೆ ಈಗಾಗಲೇ ತಿಂಗಳ ಬಜೆಟನ್ನು ತೂಗಿಸಲಾರದೆ ಚಡಪಡಿಸುತ್ತಿರುವ ನಾನು ಅಂಥ ಯಾವ ಸಾಹಸವನ್ನೂ ಮಾಡಲಾರದ ಸ್ಥಿತಿಯಲ್ಲಿದ್ದೆ. ಹೀಗಿರುತ್ತ ಒಮ್ಮಿಂದೊಮ್ಮೆಲೆ ಮೀನ ಕೆಲಸಕ್ಕೆ ಬರುವುದು ತಡವಾಗತೊಡಗಿತು. ಎಂಟು, ಎಂಟೂವರೆ, ಯಾಕೆ ಹೀಗೆಂದು ಕೇಳಿದ್ದಕ್ಕೆ ಸರಿಯಾದ ಸಮಾಧಾನ ಬರಲಿಲ್ಲ. ನಂತರ ತಿಳಿಯಿತು. ಆಕೆ ಪ್ರೊಫೆಸರ್ ಶೆಣಾಯಿಯವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಾಳೆ ಎಂದು. ಈ ಸುದ್ದಿಯೊಂದಿಗೆ ವಿನ್ಯಾಸ ಅವಳನ್ನು ಎದುರಿಸಿದಾಗ, ಹೌದು, ಒಂದು ಮನೆಯ ಸಂಬಳ ಸಾಕಾಗುತ್ಯೆ ಎಂದು ಮೀನ ಲಾಜಿಕಲ್ ಪ್ರಶ್ನೆ ಹಾಕಿದಳು. ವಿನ್ಯಾಸಳ ಸಿಟ್ಟಿಗೆ ಎರಡು ಕಾರಣಗಳು. ಒಂದು, ತನ್ನಲ್ಲಿ ಕೇಳಿಲ್ಲ ಎಂದು. ಇನ್ನೊಂದು, ತನಗೆ ಪ್ರಯಾರಿಟಿ ಕೊಡದೆ ಬೆಳಿಗ್ಗೆಯೇ ಎರಡನೆ ಮನೆಗೆ ಹೋಗುತ್ತಿದ್ದಾಳೆ ಎಂದು. ನನಗೂ ಒಂದು ಥರದ ಮುಜುಗರ. ನನ್ನ ಮನೆಕೆಲಸದವಳು ಇನ್ನು ಯಾವ ಮನೆಗೂ ಹೋಗಕೂಡದು ಎಂದು. ಅಂತೂ ಎಲ್ಲರೂ ಸೇರಿ ಒಂದು ರಾಜಿಗೆ ಬಂದೆವು. ಅದೇನೆಂದರೆ, ಮೀನಾ ಎಂದಿನಂತೆ ಮುಂಜಾನೆ ನಮ್ಮಲ್ಲಿಗೆ ಬರಬೇಕು; ನಮ್ಮಲ್ಲಿ ಮುಗಿಸಿದ ನಂತರ ಪ್ರೊಫೆಸರ್ ಶೆಣಾಯಿಯವರಲ್ಲಿಗೆ ಹೋಗಬಹುದು. ಇದು ಮೀನಾಳಿಗೂ ಹಿಡಿಸಿತು. ಯಾಕೆಂದರೆ ಪ್ರೊಫೆಸರ ಮನೆಯಲ್ಲಿ ಮೀನಾಳಿಗೆ ಉಪಚಾರವೇನೂ ಸಿಗುತ್ತಿರಲಿಲ್ಲ. ನಮ್ಮಲ್ಲಾದರೆ, ಇಡ್ಲಿ, ದೋಸೆ, ಶಾವಿಗೆ-ನಾವೇನು ತಿನ್ನುತ್ತಿದ್ದೆವೋ ಅದು ಮೀನಾಳಿಗೂ ದೊರಕುತ್ತಿತ್ತು. ಒಮ್ಮೊಮ್ಮೆ ತಾನು ತಿನ್ನದೆ ಮಕ್ಕಳಿಗೋಸ್ಕರ ತೆಗೆದೊಯ್ಯುತ್ತಿದ್ದಳು.
ಹಣದುಬ್ಬರ ಜಾಸ್ತಿಯಾಗುತ್ತ ಪ್ರತಿಯೊಂದು ವಸ್ತುವೂ ದುಬಾರಿಯಾಗುವ ಕಾಲದಲ್ಲಿ ಎಲ್ಲರೂ ಜೇವಿಸುತ್ತಿದ್ದೇವೆ. ಈ ಎಲ್ಲರೂ ಎನ್ನವ ಶಬ್ದ ಯಾರನ್ನು ಒಳಗೊಂಡಿದೆ, ಯಾರನ್ನು ಬಿಟ್ಟಿದೆ? ಆರಂಭದಲ್ಲಿ ಯೂನಿವರ್ಸಿಟಿ ಅಧ್ಯಾಪಕರೆಲ್ಲ ಸೇರಿ ಸಂಬಳ ಹೆಚ್ಚು ಮಾಡಬೇಕೆಂದು ಗದ್ದಲ ಮಾಡಿದರು. ಸಂಬಳ ಹೆಚ್ಚಾಯಿತು. ನಂತರ ನಾನ್-ಟೀಚಿಂಗ್ ಕರ್ಮಚಾರಿಗಳೆಲ್ಲಿ ಸೇರಿ ಮುಷ್ಕರ ಹೂಡಿದರು. ಅವರಿಗೂ ಸಂಬಳ ಜಾಸ್ತಿಯಾಯಿತು. ಸಂಶೋಧಕ ವಿದ್ಯಾರ್ಥಿಗಳು ಮೆರವಣಿಗೆ ಹೊರಟರು. ವಿದ್ಯಾರ್ಥಿ ವೇತನ ವರ್ಧಿಸಿತು. ಯಾವುದೇ ತರಕಾರಿ ಪಾವು ಕಿಲೋಕ್ಕೆ ಒಂದು ರೂಪಾಯಿ, ಒಂದೂವರೆ ರೂಪಾಯಿ, ದಿನಸಿ, ಮಾಂಸ, ಮೀನು, ಹಾಲು ಸಕಲವೂ ಏರುತ್ತಲೇ ಇದೆ. ಹೀಗಿರುತ್ತ ಮೀನಾ ನಾವು ಕೊಡುವ ನೂರು ರೂಪಾಯಿ, ಶೆಣಾಯಿಯವರು ಕೊಡುವ ಅಷ್ಟೇ ಹಣ-ಇಷ್ಪರಲ್ಲಿ ಹೇಗೆ ಜೀವನ ಇಬ್ಬರು ಮಕ್ಕಳನ್ನು ಸ್ಕೂಲಿಗೆ ಕಳಿಸಬೇಕು. ಅವಕ್ಕೆ ಡ್ರೆಸ್ಸು, ತನಗೂ ಸೀರೆ, ಲಂಗ, ರವಿಕೆ, ಬಟ್ಟೆ ತೊಳೆಯಲು ಸೋಪು ಕನಿಷ್ಟ ಬೇಕಲ್ಲ? ಅನ್ನ, ಬೇಳೆ, ಉಪ್ಪು, ಮೆಣಸು, ಮೀನು, ಹುಳಿ, ಬೆಲ್ಲ, ಸ್ಟವ್ವಿಗೆ ಸೀಮೆಎಣ್ಣೆ, ಇಪತ್ತು ರೂಪಾಯಿ ಜಾಸ್ತಿ ಮಾಡುವುದೇ ಎಂದು ವಿನ್ಯಾಸಳ ಜತೆ ಒಂದು ದಿನ ಚರ್ಚಿಸಿದೆ. ವಿನ್ಯಾಸ ಇಂಥ ವಿಚಾರಗಳಲ್ಲಿ ಎಂದೂ ಜಿಪುಣಳಲ್ಲ. ಆದ್ದರಿಂದ ನನ್ನ ಸಲಹೆಯನ್ನು ಅವಳು ಅನುಮೋದಿಸಿದಳು ಮಾತ್ರವಲ್ಲ, ಅಂದೇ ಒಂದು ಸೀರೆಯನ್ನು ಮೀನಾಳಿಗೋಸ್ಕರ ಖರೀದಿಸಿ ತಂದಳು.
ಆದರೆ ಮತ್ತೆ ಮೀನಾ ನಮಗೆ ಹೇಳದೇನೇ ಇನ್ನೂ ಒಂದು ಮನೆಯಲ್ಲಿ ಕೆಲಸ ಹಿಡಿದಳು. ಮೇಜರ್ ನಾಯರ್ ಮನೆಯಲ್ಲಿ. ಈತ ಯಾವುದೋ ಒಂದು ವಿಷಯದಲ್ಲಿ ರೀಡರ್ ಇದ್ದ. ಕೆಲವು ವರ್ಷ ಆರ್ಮಿನಲ್ಲಿ ಏನೋ ಆಗಿದ್ದನೆಂದು ಕಾಣುತ್ತದೆ. ನಂತರ ಅಕಡೆಮಿಕ್ ಬದುಕಿಗೆ ಸೇರಿಕೊಂಡ. ಆದ್ದರಿಂದ ಮೇಜರ್ ಎನ್ನುವುದು ಈ ವ್ಯಕ್ತಿಗೆ ನಿಕ್‌ನೇಮಾಗಿ ಬಂದುದು. ಮತ್ತೆ ಕೆಲವು ದಿನಗಳಲ್ಲಿ ಮೀನಾ ತನ್ನ ನಾಲ್ಕನೆ ಮನೆ ದೊರಕಿಸಿಕೊಂಡಳು. ಇಲ್ಲಿಗೆ ಬಹುಶಃ ಆಕೆ ಸ್ಯಾಚುರೇಶನ್ ಪಾಯಿಂಟ್ ತಲುಪಿರಬೇಕು. ಯಾಕೆಂದರೆ ನಂತರ ಮೀನಾ ಐದನೆ ಮನೆ ಹಿಡಿಯಲಿಲ್ಲ. ಪ್ರತಿಯೊಂದು ಬಾರಿ ಅವಳು ಹೀಗೆ ಮಾಡಿದಾಗಲೂ ನಮಗೆ ಅದು ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗುತ್ತಿತ್ತು. ಒಮ್ಮೆ ಒಂದು ವಾರವಿಡೀ ವಿನ್ಯಾಸ ಅವಳ ಜತೆ ಮಾತೇ ಆಡಲಿಲ್ಲವೆಂದು ತಿಳಿಯಿತು. ಆದರೆ ಮೀನಾಳ ಅಗತ್ಯವನ್ನು ತಿಳಿದಿದ್ದ ವಿನ್ಯಾಸ ತಾನೇ ಆಮೇಲೆ ಮಿದುವಾದ್ದು ಮಾತ್ರವಲ್ಲ, ಒಂದು ವಾರ ಸಿಟ್ಟನ್ನು ಅದು ಹೇಗೋ ಕಾಂಪೆನ್ಸೇಟ್ ಮಾಡುವುದರಲ್ಲಿ ಯಶಸ್ವಿಯಾದಳು ಕೂಡ.
ಹೇಗಿದ್ದರೂ ನಾಲ್ಕು ಮನೆಯ ಕೆಲಸ-ಮೇಲೆ ತನ್ನದೇ ಮನೆಗೆಲಸ ಕೂಡ ಸೇರಿ- ಮೀನಾಳನ್ನು ಹಣ್ಣು ಹಣ್ಣು ಮಾಡತೊಡಗಿತು. ಆರಂಭದಲ್ಲಿ ನಾವು ಕಂಡಿದ್ದ ನಗು ಕ್ರಮೇಣ ಮಾಯವಾಯಿತು. ಆಗಾಗ ಜ್ವರ, ಕೆಮ್ಮು, ತಲೆನೋವು ಹೀಗೆ ಹೇಳ ತೊಡಗಿದಳು. ಈ ದೇಶದಲ್ಲಿ ಆರ್ಗನೈಸ್ಡ್ ಲೇಬರಿಗೆ ಇರುವಷ್ಟು ಅನುಕೂಲತೆ ಅನಾರ್ಗನೈಸ್ಡ್ ಲೇಬರಿಗೆ ಇಲ್ಲವಷ್ಟೆ. ನಮಗಾದರೆ ಪಿಎಫ್, ಮೆಡಿಕಲ್ ಲೀವ್, ಮೆಡಿಕಲ್ ರಿಇಂಬರ್ಸ್ಮೆಂಟ್, ಅರ್ನ್ಡ್ ಲೀವ್ ಇತ್ಯಾದಿ ಇತ್ಯಾದಿ ಹಲವಾರು ಅನುಕೂಲತೆಗಳಿವೆ. ಮೀನಾಳಂಥವರಿಗೆ ಇದೊಂದೂ ಇಲ್ಲ. ವಿನ್ಯಾಸಳೇ ಅವಳನ್ನು ನಮ್ಮ ಯುನಿವರ್ಸಿಟಿ ಡಾಕ್ಟರರಲ್ಲಿ ಗೆ ಹೋಗಿ ಔಷಧಿ ಕೊಡಿಸಿದಳು. ನಮ್ಮ ಮನೆಯಿಂದಲೆ ಆಗಾಗ್ಗೆ ಹಾಲು ಹಣ್ಣುಗಳನ್ನು ತೆಗೆದುಕೊಳ್ಳಲು ಹೇಳಿದಳು. ಮೀನಾ ಜಡ್ಡು ಬೀಳದಂತೆ ನೋಡಿಕೊಂಡೆವು.
ಮಾರ್ಚ್ ಕೊನೆಗೆ ಪರೀಕ್ಷೆ ಬರೆದ ವಿನ್ಯಾಸ ಮಕ್ಕಳ ಪರೀಕ್ಷೆಗಳೂ ಮುಗಿದ ಮೇಲೆ ಮಕ್ಕಳನ್ನು ಕರೆದುಕೊಂಡು ಊರಿಗೆ ಹೊರಟು ಹೋದಳು. ಪ್ರತಿವರ್ಷ ಊರಿಗೆ ಹೋಗುವ ನಾನು ಈ ಬೇಸಿಗೆಯಲ್ಲಿ ಹೋಗಲಿಲ್ಲ. ಹಲವಾರು ಕಾರಣಗಳಿದ್ದುವು. ನನ್ನ ರಿಸರ್ಚ್ ವಿದ್ಯಾರ್ಥಿಗಳಿಬ್ಬರು ಥೀಸಿಸ್ ಮುಗಿಸುವವರಿದ್ದುದರಿಂದ ನಾನು ಸ್ಥಳದಲ್ಲಿರುವುದು ಅಗತ್ಯವಾಗಿತ್ತು. ಅದೇ ರೀತಿ, ನಾನೂ ಒಂದೆರಡು ಸಂಶೋಧಕ ಪ್ರಬಂಧಗಳನ್ನು ಬರೆದುಕೊಡುತ್ತೇನೆಂದು ಕೆಲವು ಪತ್ರಿಕೆಗಳ ಸಂಪಾದಕರಲ್ಲಿ ಒಪ್ಪಿಕೊಂಡಿದ್ದೆ. ಹೀಗೆ ಬೇಸಿಗೆಯಲ್ಲಿ ನಾನು ಒಬ್ಬಂಟಿಯಾದೆ. ಹೋಗುವ ಮೊದಲು ವಿನ್ಯಾಸ ಎಲ್ಲ ಏರ್ಪಾಡುಗಳನ್ನೂ ಮಾಡಿದ್ದಳು. ಪ್ರತಿದಿನ ತಪ್ಪದೆ ಬಂದು ನನಗೆ ಅನ್ನ ಸಾರು ಚಪಾತಿ ಮಾಡಿಕೊಡುವಂತೆ ಮೀನಾಳಿಗೆ ತಾಕೀತು ಮಾಡಿ ಹೋಗಿದ್ದಳು. ವಿನ್ಯಾಸ ಮತ್ತು ಮಕ್ಕಳು ಊರಿಗೆ ಹೋದಮೇಲೆ ಮೀನಾ ಹೆಚ್ಚುಕಡಿಮೆ ಪ್ರತಿದಿನ ಮನೆಗೆಲಸಕ್ಕೆ ಬರುತ್ತಿದ್ದಳಾದರೂ, ಆಕೆ ಅಡುಗೆ ಮಾಡೋದೇನೂ ಬೇಡವೆಂದು ನಾನೇ ಹೇಳಿದೆ. ಹತ್ತಿರದಲ್ಲೇ ಇದ್ದ ಕ್ಯಾಂಟೀನಿನಲ್ಲಿ ನನ್ನ ಊಟ ತಿಂಡಿ ಸಾಗುತ್ತಿತ್ತು. ಕೆಲವೊಮ್ಮೆ, ನನ್ನ ಸಂಶೋಧಕ ವಿದ್ಯಾರ್ಥಿಗಳ ಜತೆ ನಾನು ಹೊರಗೆಲ್ಲಾದರೂ ಊಟ ಮಾಡಿ ಬರುತ್ತಿದ್ದೆ. ಈ ಬಗ್ಗೆ ವಿನ್ಯಾಸಳಿಗೆ ಕಾಗದ ಬರೆದಾಗ ಅವಳು, “ನಾನು, ಮಕ್ಕಳು ಇಲ್ಲದ್ದು ನಿಮಗೆ ಸ್ವಾತಂತ್ರ್ಯ ಬಂದ ಹಾಗಿದೆ” ಎಂದು ಛೇಡಿಸಿ ಬರೆದಿದ್ದಳು. ಆದರೆ ನಿಜಕ್ಕೂ ನಾನು ಈ ಬೇಸಿಗೆ ರಜದಲ್ಲಿ ದುಡಿದಷ್ಟು ಬೇರಾವ ಸಮಯದಲ್ಲೂ ದುಡಿದಿಲ್ಲವೆಂದು ಹೇಳಬಹುದು. ವಿದ್ಮಾರ್ಥಿಗಳ ಥೀಸಿಸ್ ಡ್ರಾಫ್ಟುಗಳನ್ನು ಪೂರ್ತಿಯಾಗಿ ನೋಡಿ ಹಿಂದಿರುಗಿಸಿದ್ದಲ್ಲದೆ, ನನ್ನದೇ ಸಂಶೋಧಕ ಪ್ರಬಂಧಗಳನ್ನೂ ಬರೆದು ಮುಗಿಸಿದೆ.
ಈ ಮಧ್ಯೆ ಮೀನ ಬೆಳಗ್ಗೆ ಮಾತ್ರ ಬಂದರೆ ಸಾಕು ಎಂದು ಹೇಳಿಬಿಟ್ಟಿದ್ದೆ. ಯಾಕೆಂದರೆ ಸಾಯಂಕಾಲದ ಹೊತ್ತು ನಾನು ಮನೆಯಲ್ಲಿರುತ್ತಿದ್ದು ಕಡಿಮೆ. ಬೆಳಿಗ್ಗೆ ಬಂದು ಮನೆಗೆಲಸ ಮುಗಿಸಿ ನನಗೆ ಸ್ವಲ್ಪ ಟೀ ಮಾಡಿಕೊಟ್ಟು ಹೋಗುತ್ತಿದ್ದಳು. ವಿನ್ಯಾಸಳ ಪತ್ರ ಬಂದರೆ ಸುದ್ದಿ ಹೇಳುತ್ತಿದ್ದೆ. ಈಗ ವಿನ್ಯಾಸ ಊರಿಗೆ ಹೋದ ಕಾರಣ ನನಗೆ ಜಗತ್ತಿನ ಸಂಪರ್ಕವೇ ಕಡಿದ ಹಾಗೆ ಅನ್ನಿಸುತ್ತಿತ್ತು. ಎಲ್ಲಿ, ಏನಾಯಿತು ಎಂದು ಹೇಳುವವರಿಲ್ಲ. ಕೆಲವು ಸಂಗತಿಗಳನ್ನು ಇತರ ಯಾರ ಜತೇನೂ ಚರ್ಚಿಸುವಂತಿಲ್ಲವಷ್ಟೆ. ಮೀನಾ ಕೂಡ ಈಗ ನನಗೆ ಅಪರಿಚಿತಳಂತೆ ಕಂಡುಬರತೊಡಗಿದಳು. ನಾನು ಹೆಚ್ಚಾಗಿ ಪುಸ್ತಕಗಳನ್ನೋದುತ್ತ ಅಂತರ್ಮಖಿಯಾಗತೊಡಗಿದೆ. ರಾತ್ರಿ ಟೀವಿ ಮುಂದೆ ಕೂಡುವುದು, ಬೆಳಿಗ್ಗೆ ಲೇಟಾಗಿ ಏಳುವುದು ಇತ್ಯಾದಿ ದುಶ್ಚಟಗಳು ಸುರುವಾದವು. ಆದರೆ ಎಲ್ಲ ಕೇವಲ ಎರಡು ತಿಂಗಳು ಮಾತ್ರ. ವಿನ್ಯಾಸ ಮಕ್ಕಳ ಜತೆ ಮರಳಿದೊಡನೆಯೆ ಎಲ್ಲವೂ ಮತ್ತೆ ಮೊದಲಿನಂತೆಯೇ ಆದುವು.
ಜೂನ್ ತಿಂಗಳೆಂದರೆ ಅತ್ಯಂತ ತುರ್ತಿನ ಕಾಲ. ಸ್ಕೂಲ್ ಹುಡುಗರಿಗೆ ಯೂನಿಫಾರ್ಮುಗಳು, ಬ್ಯಾಗುಗಳು, ಪುಸ್ತಕಗಳು ಇತ್ಯಾದಿಗಳನ್ನು ಕೊಂಡುಕೊಳ್ಳಬೇಕು. ಪುಸ್ತಕಗಳು ಎಂದೂ ಒಟ್ಟಾಗಿ ಸಿಗೋದೇ ಇಲ್ಲ. ಪ್ರತಿವರ್ಷವೂ ವಿದ್ಯಾಮಂತ್ರಿಗಳು ಮುಂದಿನ ವರ್ಷ ಸ್ಕೂಲ್ ಆರಂಭದಲ್ಲೇ ಪಠ್ಯಪುಸ್ತಕಗಳು ದೊರಕುವಂತೆ ಏರ್ಪಾಟು ಮಾಡುತ್ತೇನೆಂದು ಆಶ್ವಾಸನೆ ಕೊಟ್ಟರೂ ಇದು ಕಾರ್ಯರೂಪಕ್ಕೆ ಬರುವುದಿಲ್ಲ. ಇಂಥ ಆಶ್ವಾಸನೆಗಳು ಗಣಪತಿಯ ಮದುವೆಯಿದ್ದಂತೆ! ಎಂದಿನಂತೆ ಈ ವರ್ಷವೂ ವಿನ್ಯಾಸ ಮತ್ತು ನಾನು ಪುಸ್ತಕಗಳಿಗೋಸ್ಕರ ಪೇಟೆ ಅಲೆಯಬೇಕಾಯಿತು. ಮೀನಾ ಕೆಲವು ಹಳೆ ಪುಸ್ತಕಗಳನ್ನು ಕೇಳಿದಳು, ಸ್ಕೂಲು ಬದಲಾಯಿಸುವ ಅವಳ ಪ್ಲಾನು ಕ್ಕೆಗೂಡಲಿಲ್ಲ. ಅದೇನೋ ಮಕ್ಕಳ ಬರ್ತ್ ಸರ್ಟಿಫಿಕೇಟ್ ಇಲ್ಲ ಎಂದೇನೋ ಕಾರಣಗಳನ್ನು ಹೇಳಿದಳು. ನಾನು ಹೊಸ ಅಡ್ಮಿಶನ್ ಇತ್ಯಾದಿ ಕೆಲಸ ಕಾರ್ಯಗಳಲ್ಲಿ ಮಗ್ನನಾದೆ. ವಿನ್ಯಾಸ ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತ ಕೂತಳು.
ಹೀಗಿರುತ್ತ ಒಂದು ಬೆಳಿಗ್ಗೆ ಮೀನಾ ಮನೆಗೆ ಬಂದವಳು, ಬಟ್ಟೆ ತೊಳೆಯಲು ಹಿತ್ತಿಲಿಗೆ ಹೋಗಿ ತಲೆತಿರುಗಿ ಕೂತುಬಿಟ್ಟಳು. ಆವತ್ತು ಆಕೆ ಬ್ರೇಕ್ಫಾಸ್ಟ್ ಮಾಡಲೇ ಇಲ್ಲ. ವಾಪಸು ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ವಿನ್ಯಾಸ ಹೇಳಿದರೂ ಕೇಳದೆ ಎಲ್ಲ ಕೆಲಸವನ್ನೂ ಮುಗಿಸಿದ ನಂತರವೇ ಅವಳು ಹೋದುದು. ಹೆಲ್ತ್ ಸೆಂಟರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ವಿನ್ಯಾಸ ಹೇಳಿದರೆ, ನಿನ್ನೆ ರಾತ್ರಿ ನಿದ್ದೆ ಕೆಟ್ಟಿದ್ದರಿಂದ ಹೀಗಾಯಿತಲ್ಲದೆ ಬೇರೇನೂ ಕಾರಣವಿಲ್ಲ ಎಂದು ಹೇಳಿದಳು. ಆದರೆ ಮರುದಿನವೂ ಅವಳ ತಲೆಸುತ್ತು ಹೋಗಲಿಲ್ಲ. ಇವತ್ತು ಯುನಿವರ್ಸಿಟಿ ಡಾಕ್ಟರರಲ್ಲಿಗೆ ಕರಕೊಂಡು ಹೋಗುವಂತೆ ವಿನ್ಯಾಸಳಿಗೆ ಸೂಚನೆ ಕೊಟ್ಟೆ. ಸಂಜೆಯೆಲ್ಲಾ ನಾನು ಯಾವ ಯಾವುದೋ ಗೊಂದಲದಲ್ಲಿದ್ದೆ. ಡಿಪಾರ್ಟ್ಮೆಂಟ್‌ನ ಹೆಡ್ ಇತರರ ಮೇಲೆ ದಬ್ಬಾಳಿಕೆ ನಡೆಸೋದರ ವಿರುದ್ಧ ಒಂದು ಚಳವಳಿಯೇ ನಡೆದಿತ್ತು. ಖಾಯಂ ಹೆಡ್‌ಶಿಪ್ ಎಂಬುದನ್ನು ತಪ್ಪಿಸಿ, ಹೆಡ್‌ಶಿಪ್ ಎಲ್ಲರಿಗೂ ಕ್ರಮವಾಗಿ ಬರುವಂತೆ ಆಗಬೇಕು ಎಂದು ಒತ್ತಾಯಿಸಿ ನಾವು ಕೆಲವರು ಮೀಟಿಂಗ್‌ಗೆ ಕರೆದಿದ್ದೆವು. ದೇಶದ ಅನೇಕ ಯುನಿವರ್ಸಿಟಿಗಳಲ್ಲಿ ಈ ಥರ ರೊಟೇಶನ್ ಬಂದಿದ್ದರೂ ನಮ್ಮಲ್ಲಿನ ಕೆಲವು ಹಳೆ ಫ್ಯೂಡಲ್ ಎಲಿಮೆಂಟುಗಳು ಇದನ್ನು ವಿರೋಧಿಸುತ್ತಿದ್ದವು. ಹೀಗೆ ಮೀಟಿಂಗ್ ಮುಗಿಸಿ ಮನೆಗೆ ಬರುವಾಗ ರಾತ್ರಿ ಒಂಭತ್ತು ದಾಟಿತ್ತು. ಮಕ್ಕಳು ನಿದ್ದೆ ಹೋಗಿದ್ದವು.
ಊಟ ಮಾಡುತ್ತಿದ್ದಂತೆ ನಾನು ಮೀಟಿಂಗ್‌ನಲ್ಲಿ ನಡೆದ ಸಂಗತಿಗಳನ್ನು ವಿನ್ಯಾಸಳಿಗೆ ವಿವರಿಸಿದೆ. ಶರ್ಮ, ದಾಸ್ ಹಾಗೂ ಪರಶುರಾಮನ್ ಎನ್ನುವ ಲಫಂಗರು ಹೇಗೆ ತಮ್ಮ ಚೇಲಾಗಳನ್ನು ಸಭೆಗೆ ತಂದು ಗದ್ದಲ ಮಾಡಲು ಯತ್ನಿಸಿದರು, ಅವರನ್ನು ಯಾರು ಹೊರಕ್ಕೆ ದಬ್ಬಿದರು. ನಾಳೆ ಅಥವ ಈ ರಾತ್ರಿಯೇ ಅವರು ಹೂಡಬಹುದಾದ ಪೊಲೀಸು ಕೇಸು ಇತ್ಯಾದಿ ಇತ್ಯಾದಿ. ಪೊಲೀಸು ಕೇಸು ಎಂದೊಡನೆ ವಿನ್ಯಾಸ ತುಸು ಗಾಬರಿಯಾದಳು. ಆದರೆ ವೀಸೀ ಪರವಾನಗಿ ಇಲ್ಲದೆ ಪೊಲೀಸರು ಕ್ಯಾಂಪಸ್ ಪ್ರವೇಶಿಸುವ ಸಂಭವವಿಲ್ಲವೆಂದೂ, ವೀಸೀಗೆ ಈ ಲಫಂಗರ ಸಂಗತಿಯೆಲ್ಲಾ ಗೊತ್ತಿದೆಯೆಂದೂ ಅವಳಿಗೆ ಸಮಾಧಾನ ಹೇಳಿದೆ. ನಂತರ ವಿನ್ಯಾಸ ತಾನು ಮೀನಾಳನ್ನು ಡಾಕ್ಟರರಲ್ಲಿಗೆ ಕರೆದೊಯ್ದುದರ ಬಗ್ಗೆ ಹೇಳಿದಳು. ಡಾಕ್ಟರರು ಯೂರಿನ್ ಟೆಸ್ಟ್ ಮಾಡಿಸುವಂತೆ ಹೇಳಿದ್ದಾರೆ ಎಂದಳು.
“ಯೂರಿನ್ ಟೆಸ್ಟ್ ಯಾಕಂತೆ?”
“ಮೀನಾ ಗರ್‍ಭಿಣಿ ಅಂತ ಡಾಕ್ಟರರ ಸಂದೇಹ”
“ಓ” ಎಂದು ಕಾಶುವಲ್ಲಾಗಿ ಹೇಳಿದೆ.
ವಿನ್ಯಾಸ ಮಾತ್ರ ನನ್ನ ಪ್ರತಿಕ್ರಿಯೆಯನ್ನು ಒಪ್ಪುವಂತೆ ಕಾಣಿಸಲಿಲ್ಲ. ಆಶ್ಚರ್ಯದಿಂದ ನನ್ನ ಮುಖವನ್ನ ನೋಡತೊಡಗಿದಳು. ನನ್ನ ಮನಸ್ಸಿನೊಳಗೆ ಮಾತ್ರ ಸಂಜೆ ನಡೆದ ಗಲಾಟೆಯ ರೀಲು ಮತ್ತೆ ಮತೆ ಸುತ್ತುತ್ತ ಇತ್ತು. ಜಿಯಾಲಜಿ ಡಿಪಾರ್ಟ್ಮೆಂಟ್‌ನ ಗೋಪಾಲ ಶರ್ಮ ಬಹಳ ಚಿಕ್ಕವಯಸ್ಸಿನಲ್ಲೆ ಪ್ರೊಫೆಸರ್ ಆಗಿ ಬಿಟ್ಟಿದ್ದ, ಆತ ಪ್ರೊಫೆಸರ್ ಆದ್ದಕ್ಕೆ ಕರುಬುವವರು ಬಹಳ ಮಂದಿ ಇದ್ದಿರಬಹುದು. ಹಾಗೆ ಕರುಬುವವರಿಗೆ ಆತ ನೂರೆಂಟು ನೆಪಗಳನ್ನು, ಕಾರಣಗಳನ್ನು ತಾನಾಗಿಯೇ ಒದಗಿಸಿಕೊಡುತ್ತಿದ್ದ. ಹೆಡ್‌ಶಿಪ್ ತನ್ನ ಕೈಯ್ಯಲ್ಲಿದೆಯೆಂದು ಡಿಪಾರ್ಟ್ಮೆಂಟ್‌ನ ಸಹೋದ್ಯೋಗಿಗಳ ಮೇಲೆಲ್ಲ ದಬ್ಬಾಳಿಕೆ ಚಲಾಯಿಸುತ್ತಿದ್ದ. ಅವರ ಕ್ಲಾಸುಗಳಿಗೆ ಹೋಗಿ ಪರೀಕ್ಷಕನ ಹಾಗೆ ಕೂತುಕೊಳ್ಳುವವನು, ಯಾರಾದರೂ ಆಫೀಸಿಗೆ ಬರೋದು ತುಸು ತಡವಾದರೂ ಅವರಿಗೆ ಮೆಮೊ ಕಳಿಸುವವನು. ಇತರರಿಗೆ ರಿಸರ್ಚ್ ವಿದ್ಯಾರ್ಥಿಗಳು ಸಿಗದ ಹಾಗೆ ಅಡ್ಡಗಾಲು ಹಾಕುವವನು. ಡಿಪಾರ್ಟ್ಮೆಂಟ್‌ನ ಟ್ಯೆಪಿಸ್ಟ್ ಇತರರ ಪೇಪರುಗಳನ್ನು ಟ್ಯೆಪ್ ಮಾಡಬಾರದೆಂದು, ಅಟೆಂಡರ್ ಇವನ ಆಫೀಸಿನ ಮುಂದೆಯೇ ಇರಬೇಕೆಂದು-ಇತ್ಯಾದಿ ಇತ್ಯಾದಿ. ಶರ್ಮನ ತರದ ಹೆಡ್ಡುಗಳು ಇತರ ಕೆಲವು ಡಿಪಾರ್ಟ್ಮೆಂಟುಗಳಲ್ಲೂ ಇದ್ದಾರೆ. ಇವರೆಲ್ಲ ತಮ್ಮ ಬೆಂಬಲಿಗರನ್ನು ಕೂಡಿಕೊಂಡು ಒಂದು ಗದ್ದಲ ಎಬ್ಬಿಸಿದರು. ನಮ್ಮ ಕಡೆಗಿದ್ದ ಮಂದಿಯಲ್ಲಿ ಕೆಲವರು ರೊಚ್ಚಿಗೆದ್ದು ಕೆಲವರಿಗೆ ಚೆನ್ನಾಗಿ ತದಕಿದ್ದರು. ಹಾಗೆ ತದಕಲ್ಪಟ್ಟವರಲ್ಲಿ ಗೋಪಾಲ ಶರ್ಮ ಕೂಡ ಒಬ್ಬ. ನಂತರ ಹೋಗಿ ಸರಕಾರಿ ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಲು ಯತ್ನಿಸಿದನಂತೆ. ಆದರೆ ಮೈಮೇಲೆ _ ಗಾಯವೇನೂ ಇಲ್ಲವೆಂದು ಅಲ್ಲಿಂದಲೂ ಅವನನ್ನು ಹೊರಹಾಕಿದರಂತೆ. ಇದು ಹೀಗಾಗಬಾರದಿತ್ತು ಎಂದು ನಮಗೆಲ್ಲ ಅನಿಸಿದರೂ, ಗೂಂಡಾಗಿರಿಯನ್ನು ಇನ್ನು ಹೇಗೆ ಎದುರಿಸಬೇಕೋ ತಿಳಿಯದಾಗಿತು. ವಿದ್ಯಾರ್ಥಿಗಳೆದುರು ನಮ್ಮ ಇಮೇಜ್ (ಅದು ಇದ್ದರೆ!) ಹಾಳಾಗುತ್ತೆ. ನಾಳೆ ಲೋಕಲ್ ಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಸುದ್ದಿ ಬರುತ್ತೆ. ಹೇಗಿದ್ದರೂ ಇದೆಲ್ಲ ಇಲ್ಲಿಗೆ ಮುಗಿಯೋದಿಲ್ಲ ಎಂದು ನನಗೆ ಅನಿಸುತ್ತಿತ್ತು. ಅವರೆಲ್ಲ ವೀಸಿಯಲ್ಲಿ ಹೋಗಿ ದೂರು ಕೊಡುತ್ತಾರೆ. ನಂತರ ವಿಚಾರಣೆ, ಸಸ್ಪೆನ್ಶನ್ ಇದ್ದರೂ ಇದ್ದೀತು. ವಿನ್ಯಾಸಳಿಗೆ ನಾನು ಸಮಾಧಾನ ಹೇಳಿದ್ದರೂ ನನ್ನ ಮನಶ್ಯಾಂತಿ ಮಾತ್ರ ತೀರಾ ಕೆಟ್ಟುಹೋಗಿತ್ತು.
“ನಾ ಹೇಳ್ತ ಇರೋದು, ಮೀನಾ ಗರ್ಭಿಣಿಯಾಗಿದ್ದಾಳೆ ಅಂತ!”
ತಟ್ಟನೆ ನಾನು ಎಚ್ಚರಗೊಂಡೆ, ಅಥವಾ ನನ್ನ ಮಿಡಲ್ ಕ್ಲಾಸ್ ಗೃಹಸ್ತ ಪ್ರಜ್ಞೆ ಎಚ್ಚರಗೊಂಡಿತು ಎಂದರೂ ಸರಿಯೆ.
“ಮೀನಾ ಗರ್ಭಿಣಿಯೆ? ಅದು ಹೇಗೆ ಸಾಧ್ಯ?” ಎಂದು ಕೇಳಿದೆ.
“ಬಯಲಾಜಿಕಲ್ ಪ್ರಶ್ನೆಯಾದರೆ ಉತ್ತರ ನಿಮಗೆ ಗೊತ್ತೇ ಇದೆ. ಆದರೆ ನೀವು ಕೇಳ್ತಿರೋದು ಬಯಲಾಜಿಕಲ್ ಪ್ರಶ್ನೆ ಅಲ್ಲ. ನಿಜ, ಮೀನಾಳ ಗಂಡ ತೀರಿ ಹೋಗಿ ಎರಡು ವರ್ಷಗಳು ಕಳೆದಿವೆ. ಹೀಗೆಂದು ಆಕೇನೇ ಹಿಂದೊಮ್ಮೆ ನನಗೆ ಹೇಳಿದ್ದಳು”
“ಯಾರಾದರೂ ಲವರ್ ಇರಬಹುದು, ಅಥವಾ ಯಾರನ್ನಾದರೂ ಮತ್ತೆ ಮದುವೆ, ಕೂಡಿಕೆ-ಅದೇನೋ ಹೇಳ್ತಾರಲ್ಲ? ಹಾಗೇನಾದರೂ ಮಾಡಿಕೊಂಡಿದ್ದಾಳೆಯೆ?”
“ಅಂಥದೇನೂ ನಡೆದ ಹಾಗೆ ಕಾಣಿಸೋದಿಲ್ಲ. ಹಿಂದೊಮ್ಮೆ ನಾನೇ ಈ ಮಾತು ತೆಗೆದಾಗ ಒಮ್ಮೆ ಮದುವೆಯಾದ ಅನುಭವವೇ ಇಡಿಯ ಜೀವಮಾನಕ್ಕೆ ಸಾಕು ಎಂಬಂತೆ ಮಾತಾಡಿದ್ದಳು.”
“ಆಮೇಲೆ ಅವಳು ಮನಸ್ಸು ಬದಲಿಸಿರಬಹುದು.”
“ಅವಳು ಹಾಗೆಂದು ಹೆಚ್ಚು ಸಮಯವೇನೂ ಆಗಿಲ್ಲ. ಅಲ್ದೆ ಮರುಮದುವೆ ವಿಚಾರವಿದ್ದರೆ ನಮ್ಮಲ್ಲಿ ಹೇಳದೆ ಇರುತ್ತಿದ್ದಳೆ? ಯಾರಿಗೂ ಗೊತ್ತಾಗದೇನೇ ಮದುವೆ ನಡೆಯುತ್ತ?”
“ಅಂದರೆ ವಾಟ್ ಹ್ಯಾಪನ್ಸ್ ನೆಕ್ಸ್ಟ್?”
“ವಾಟ್ ಹ್ಯಾಪನ್ ನೆಕ್ಸ್ಟ್ ಅಂದ್ರೆ ಇನ್ನೊಂದು ಮಗುವಾಗುತ್ತೆ?”
“ವಿನ್ಯಾಸ! ಇದು ಜೋಕಿಗೆ ಸಮಯವಲ್ಲ! ಮೀನಾಳ ಈ ಸ್ಥಿತಿಯಿಂದ ಆಕೆಗೆ ಮಾತ್ರವಲ್ಲ, ಉಳಿದವರಿಗೂ ತೊಂದರೇನೇ.”
“ನಾನು ಜೋಕ್ ಮಾಡ್ತಿಲ್ಲ, ಫ್ಯಾಕ್ಟ್, ಬ್ರೂಟ್ ಫ್ಯಾಕ್ಟ್ ಆಫ್ ಲ್ಯಾಫನ್ನ ನಿಮ್ಮ ಮುಂದೆ ಇಡ್ತಾ ಇದ್ದೇನೆ ಅಷ್ಟೆ.”
“ಈಗೇನು ಮಾಡೋಣಾಂತೀಯ?”
“ನಾಳೆ ಕ್ಲಾಸಿದೆಯೆ?”
“ಇದೆ”-
“ಹಾಗಿದ್ರೆ ಈಗ ಬೇಗನೆ ನಿದ್ದೆ ಮಾಡಿ, ಬೆಳಿಗ್ಗೆ ಎದ್ದು ಕ್ಲಾಸಿಗೆ ತಯಾರಿ ನಡೆಸಬಹುದು”
ವಿನ್ಯಾಸಳ ಪ್ರಾಕ್ಟಿಕಲ್ ಸಲಹೆಯಂತೆ ನಾನು ಬೇಗನೆ ಮಲಕೊಂಡರೂ, ನಿದ್ದೆಯೇನೂ ಸರಿಯಾಗಿ ಬರಲಿಲ್ಲ. ಒಂದೆಡೆ ಸಂಜೆ ನಡೆದ ಗಲಭೆ, ಇನ್ನೊಂದೆಡೆ ಮೀನಾಳ ಸಮಾಚಾರ ತಲೆಯೊಳಗೆ ಹೊಕ್ಕು ತಾನು ಮುಂದೆ, ತಾನು ಮುಂದೆ ಎಂದು ನನ್ನ ಲಕ್ಷ್ಯ ಸೆಳೆಯಲು ಪೈಪೋಟಿ ನಡೆಸಿದ್ದುವು. ಹೇಗಿದ್ದರೂ ಬೆಳಿಗ್ಗೆ ಬೇಗನೆ ಎದ್ದು ಪುಸ್ತಕಗಳೆದುರು ಕೂತುಕೊಳ್ಳಲೇ ಬೇಕಾಯಿತು. ಹುಡುಗರ ಮುಂದೆ ಮಂಗನಾಗುವುದು ನನಗೆ ಸುತರಾಂ ಇಷ್ಟವಿಲ್ಲದ ಸಂಗತಿ. ಆದರೆ ಅವತ್ತು ಯಾವುದೂ ಸುಗಮವಾಗಿ ನಡೆಯುವ ಲಕ್ಷಣ ಕಂಡುಬರಲಿಲ್ಲ. ಟೀ ಮಾಡಲೆಂದು ಹಾಲು ಕುದಿಸಿದರೆ ಹಾಲು ಕೆಟ್ಟುಹೋಯಿತು. ಹಾಲಿಲ್ಲದೆ ಟೀ ಮಾಡಿ ಆತುರದಲ್ಲಿ ಕುಡಿಯುತ್ತ ನಾಲಿಗೆ ಸುಡಿಸಿಕೊಂಡೆ.
ನಂತರ ಸ್ನಾನದ ಮನೆಯಲ್ಲಿದ್ದಾಗ ಹೊರಗೆ ಯಾರೋ ಬೆಲ್ ಮಾಡಿದ ಸದ್ದು ಕೇಳಿಸಿತು. ಯಾರಿರಬಹುದು ಇಷ್ಟು ಬೆಳಗ್ಗೆಯೇ ಗೊತ್ತಾಗಲಿಲ್ಲ. ಸ್ನಾನ ಮುಗಿಸಿ ಹೊರಬರುತ್ತಲೇ ವಿನ್ಯಾಸ ಒಂದು ಸಂದೇಶ ಹೇಳಿದಳು. ವೀಸೀಯ ಆಟೆಂಡರ್ ಬಂದಿದ್ನಂತೆ. ಏನೇ ಕೆಲಸ ಕಾರ್ಯವಿದ್ದರೂ ತಟ್ಟನೆ ಬದಿಗಿರಿಸಿ ಬಂಗ್ಲೋನಲ್ಲಿ ವೀಸೀಯನ್ನು ಕಾಣಬೇಕು ಎಂಬುದು ಸಂದೇಶ. ವಿನ್ಯಾಸಳ ಮುಖದಲ್ಲಿ ಗಾಬರಿಯಿದ್ದ ಹಾಗೆ ಕಂಡಿತು. “ನಿನ್ನೆ ಗಲಭೆಯದ್ದೇ ಇರಬೇಕು” ಎಂದಳು.
“ಇರಬಹುದು” ಎಂದೆ ಶರ್ಟು ಹಾಕಿಕೊಳ್ಳುತ್ತ.
“ನೀವು ಎಷ್ಟರಮಟ್ಟಿಗೆ ಇನ್ವಾಲ್ವ್ ಆಗಿದ್ದೀರಿ?”
“ಸಭೆ ಕರೆದವನು ನಾನೇ”
“ಎಲ್ಲರನ್ನೂ ಆಮಂತ್ರಿಸಿದ್ದಿರ?”
“ಹೌದು-ಎಲ್ಜರನ್ನೂ ಅಂದರೆ ಯುನಿವರ್ಸಿಟಿ ಅಧ್ಯಾಪಕರೆಲ್ಲರನ್ನು, ವಿದ್ಯಾರ್ಥಿಗಳನ್ನು ಆಮಂತ್ರಿಸಿರಲಿಲ್ಲ. ಆದರೆ ಶರ್ಮ ಮುಂತಾದವರು ತಮ್ಮ ಸಂಶೋಧಕ ವಿದ್ಯಾರ್ಥಿಗಳನ್ನು ಕರಕೊಂಡು ಬಂದು ಗಲಾಟೆ ಮಾಡಿದರು. ಆಗಲೇ ಅವರನ್ನು ಹೊರಗೆ ಹಾಕಿದುದು”
“ಹೇಗೆ?”
“ಹೇಗೆಂದರೆ ಕುತ್ತಿಗೆ ಹಿಡಿದು ದಬ್ಬಿದೆವು”
“ವಿದ್ಮಾರ್ಥಿಗಳನ್ನು ನೀವು ಹೊರಗೆ ಕಳಿಸಬಹುದಿತ್ತು. ಆದರೆ ಮುಕ್ತ ಸಭೆ ಕರೆದ ಮೇಲೆ ನಿಮ್ಮ ಕಲೀಗ್ಸನ್ನ ಹೊರಗೆ ಕಳಿಸೋದು ಸರಿಯಾಗುತ್ಯೆ?” –
“ಗಲಭೆ ಮಾಡೋವರನ್ನು ಏನು ಮಾಡಬೇಕಿತ್ತು?”
“ಸಭೇನ ಮುಂದಕ್ಕೆ ಹಾಕಬಹುದಿತ್ತು”
ವಿನ್ಯಾಸ ನನ್ನನ್ನು ವೀಸೀ ಭೇಟಿಗೆ ಸಿದ್ದಗೊಳಿಸುವಂತೆ ತೋರಿತು. ಇಷ್ಟಕ್ಕೂ ವೀಸೀಯ ವಿಚಾರ ಲಹರಿ ಹೇಗೆ ಮುಂದುವರೆಯುತ್ತದೆಂದು ಕಣಿ ಹೇಳುವುದು ಹೇಗೆ? “ಕೋಪಿಸಿ ಏನೂ ಮಾತಾಡೋದಕ್ಕೆ ಹೋಗಬೇಡಿ” ಎಂದು ಸಲಹೆ ಕೊಟ್ಟಿಳು. ನಾನು ಸ್ಕೂಟರ್ ಹತ್ತಿ ವೀಸೀ ಮನೆಗೆ ಹೋದೆ. ವೀ.ಸೀ. ಅಬ್ದುಲ್ ಅಹಮ್ಮದ್ ಗಫೂರ್, ಡಬಲ್ ಪಿ.ಎಚ್.ಡಿ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವನ್‌ಟ್ಯಾಮ್ ಅಂಬಾಸಿಡರ್ ಟು ಈಜಿಪ್ಟ್ ದಿವಾನ ಖಾನೆಯಲ್ಲಿ ಪ್ಯಾಪು ಸೇದುತ್ತ ನನಗೋಸ್ಕರ ಕಾಯುತ್ತಿದ್ದರು. ಅರಬ್ಬೀ ಗಡ್ಡ, ಅದೇ ತರದ ನಿಲುವಂಗಿ ತೊಟ್ಟು ಬಹಳ ಸಿನಿಮೀಯವಾಗಿ ಕಾಣುತ್ತಿರುವ ಈ ವ್ಯಕ್ತಿ ಎಷ್ಟು ವಿದ್ವಾಂಸನೋ ಅಷ್ಟೇ ಶಾಣೆ ಮನುಷ್ಯ ಕೂಡ.
ಬಾಗಿಲ ತನಕ ಬಂದು ನನ್ನನ್ನು ಒಳಗೆ ಕರೆದು ಸೋಫಾದಲ್ಲಿ ಕೂಡ್ರಿಸಿ, ಎರಡು ಕಪ್ ಚಹಾ ತರುವಂತೆ ಅಟಿಂಡರಿಗೆ ಹೇಳಿದರು.
“ಸಾರಿ ಡಾ | ಕಪೂರ್, ಇಷ್ಟು ಮುಂಜಾನೆ ನಿಮ್ಮನ್ನ ಕರೆಸಿ ತೊಂದರೆಕೊಟ್ಟೆ. ಯು ಸ್ಮೋಕ್?” ಎಂದು ಟ್ರಿಪಲ್ ಫೈವ್‌ನ ಪ್ಯಾಕೊಂದನ್ನು ಮುಂದೆ ಮಾಡಿದರು, ಒಂದು ಸಿಗರೇಟನ್ನ ತಗೆದು ಬಾಯಲ್ಲಿಟ್ಟುಕೊಂಡ ತಕ್ಷಣ ಅವರಾಗಿಯೆ ಬೆಂಕಿಪೊಟ್ಟಣದಿಂದ ಕಡ್ಡಿಗೀರಿ ಹಚ್ಚಿದರು.
“ಸದ್ಯ ಏನು ಬರೀತಾ ಇದ್ದೀರಿ?”
“ಬೇಸಿಗೇನಲ್ಲಿ ಎರಡು ಆರ್ಟಿಕಲ್ಸ್ ಬರೆದೆ, ಈಗಿನ್ನು ಕ್ಲಾಸುಗಳು ಶುರುವಾಗಿ ಬಿಟ್ಟಿವೆ. ಬರೆಯೋದು ಕಪ್ಪವಾಗ್ತಿದೆ” ಎಂದೆ.
“ನೋ ನೋ! ಯು ಮಸ್ಟ್ ಮೇಕ್ ಟೈಮ್, ಕ್ಲಾಸುಗಳೇನು, ಯಾವಾಗಲೂ ಇದ್ದೇ ಇರ್ತವೆ.”
ವೀಸೀ ಮುಖ್ಯ ವಿಷಯಕ್ಕೆ ಬರಲು ಹೆಚ್ಚು ವೇಳೆಯೇನೂ ತಗುಲಲಿಲ್ಲ. ಶರ್ಮ ಅನ್ನೋ ಪ್ರಾಣಿ ನನ್ನ ಬಗ್ಗೆ ಸುಳ್ಳು ಕಂಪ್ಲೇಂಟ್ ಕೊಟ್ಟಿದೆಯೆಂದು ಗೊತ್ತಾಯಿತು. ತನ್ನ ಮೇಲೆ ಆಕ್ರಮಣ ನಡೆಯಿತು. ಇದರ ಹಿಂದೆ ಪೃಥ್ವಿ ಕಪೂರನ ಕೈವಾಡವಿದೆ ಇತ್ಯಾದಿ, ಇತ್ಯಾದಿ. ನಾನೇ ಅವನಿಗೆ ಹೊಡೆತ ಹಾಕಿದೆನೆಂದು ಹಸೀ ಸುಳ್ಳನ್ನೂ ಬೆರೆಸಿದ್ದ. ನಿನ್ನೆ ರಾತ್ರಿಯೇ ಬಂದು ಮೆಮೊರಾಂಡಮ್ ಕೊಟ್ಟು ಹೋದನಂತೆ. ಸಾಕ್ಷಿಯಾಗಿ ಜೊತೆಗೆ ತನ್ನ ಕೆಲವು ಸ್ನೇಹಿತರನ್ನೂ ಕರೆದುಕೊಂಡು ಬಂದಿದ್ದನಂತೆ. ವೀಸೀ ನನಗೆ ಕೇಳಿದ ವಿಷಯವೆಂದರೆ : ಬರಹ ಮೂಲಕ ಕೊಟ್ಟ ಈ ಕಂಪ್ಲೇಂಟಿನ ಮೇಲೆ ಡಿಪಾರ್ಟ್ಮೆಂಟಲ್ ಕ್ರಮ ತೆಗೆದುಕೊಳ್ಳದೆ ಸಾಧ್ಯವಿಲ್ಲ. ಆದರೆ ಇದು ಮಾಮೂಲಿ ಕ್ರಮ ಅಷ್ಟೆ, ಒಂದು ಕಮಿಟಿ ನೇಮಕ ಮಾಡಬೇಕಾಗುತ್ತದೆ. ಅದರಲ್ಲಿ ಹೊರಗಿನ ಪ್ರೊಫೆಸರರೊಬ್ಬರನ್ನೂ ಸೇರಿಸುತ್ತೇನೆ. ಈ ಕುರಿತು ಆಫೀಸು ಆರ್ಡರ್ ಬಂದಾಗ ಗಾಬರಿಯಾಗಬೇಡಿ-ಇತ್ಯಾದಿ.
“ನನ್ನನ್ನ ಸಸ್ಟೆಂಡ್ ಮಾಡ್ತೀರ?” ನಾನು ಕೇಳಿದೆ.
“ಇಲ್ಲ! ಇಲ್ಲ! ಅಂಥದೇನೂ ಆಗೋದಿಲ್ಲ, ಗಾಬರಿಯಾಗಬೇಡಿ” ಎಂದರು ವೀಸೀ.
“ನನಗೆ ಗಾಬರಿಯೇನೂ ಇಲ್ಲ ಸಾರ್. ನನ್ನನ್ನ ಸಸ್ಪೆಂಡ್ ಮಾಡಿದರೆ ಈ ಕೇಸಿಗೊಂದು ವೈಟ್ ಬರತ್ತೆ” ಎಂದೆ.
“ಕಪೂರ್, ನನಗೆಲ್ಲ ಗೊತ್ತು. ಆದರೆ ಇಮೋಶನಲಾಗಿ ಈ ಘಟಣೆಗಳನ್ನು ಎದುರಿಸುವ ಹಾಗಿಲ್ಲ, ನೀವು ಬಹಳ ಬೇಗ ಇಮೋಶನಲಾಗಿ ಬಿಡ್ತೀರಿ. ಅವಕ್ಕೆ ಅಂಥದೇನೂ ಇಲ್ಲ-ಆದ್ದರಿಂದ ತುಸು ತಪ್ಪಿದರೂ ಕಾನೂನನ್ನ ನಮ್ಮ ಮೇಲೆ ತಿರುಗಿಸಿಬಿಡ್ತವೆ. ಈಗ ನಾನು ಡಿಪಾರ್ಟ್ಮೆಂಟಲ್ ಎಂಕ್ವಯರಿ ನಡೆಸದೆ ಇದ್ರೆ ನನ್ನದು ತಪ್ಪಾಗತ್ತೆ. ಎಂಕ್ವಯರಿ ನಡೆಯಲಿ- ಆಗ್ ನಿಜ, ಸುಳ್ಳು ಹೊರಬೀಳತ್ತೆ, ಆದರೆ…”
ವೀಸೀ ಪ್ಯೆಪಿಗೆ ಹೊಸ ಹೊಗೆಸೊಪ್ಪು ತುಂಬಿಸಿ ಬೆಂಕಿಹಚ್ಚಿ ಒಂದೆರಡು ದಮ್ಮೆಳೆದು ಮುಂದುವರಿಸಿದರು;
“ನೀವು ಇಂಥ ಸಭೆಯೊಂದನ್ನು ಯಾವ ಅಧಿಕಾರದ ಮೇಲೆ ಕರೆದಿರಿ ಎಂಬ ಪ್ರಶ್ನೆ ಬರುತ್ತದೆ”
“ಸಭೆ ಕರೆಯೋದಕ್ಕೆ ಅಧಿಕಾರ ಬೇಕೆ? ಇದೇನು ಡೆಮೊಕ್ರಾಟಿಕ್ ಕಂಟ್ರೀನೇ ಅಥ್ವ,…”
“ಟೀಚರ್ಸ್ ಅಸೋಸಿಯೇಶನ್ ಇಲ್ವೆ? ಹೆಡ್ಶಿಪ್ ಬಗ್ಗೆ ಚರ್ಚಿಸೋದಿಕ್ಕೆ ಅದೇ ಸರಿಯಾದ ಫಾರಂ ಅಲ್ವೆ?”
“ಅಸೋಸಿಯೇಶನ್ ಬಗ್ಗೆ ನಿಮಗೆ ಗೊತ್ತೇ ಇದೆ ಸಾರ್, ಬುದ್ಧಿವಂತರನ್ನೆಲ್ಲ ಅದು ಏಲಿಯನೇಟ್ ಮಾಡಿದೆ. ಈಗ ದಡ್ಡರದೇ ಕಾರುಭಾರ”
“ರೊಟೇಶನ್ಶಿಪ್ ಬಂದೇ ಬರುತ್ತೆ, ಕಪೂರ್, ಸಿಂಡಿಕೇಟ್, ಸೆನೇಟ್ ಎಲ್ಲದರ ಅವಧೀನೂ ಮುಗಿದಿದೆ. ಇವೆಲ್ಲ ಹೊಸತಾಗಿ ರಚನೆಯಾಗಬೇಕು, ಅಷ್ಟರತನಕ ಸ್ವಲ್ಪ ತಾಳ್ಮೆಯಿಂದಿರಿ.”
ಮನೆಗೆ ಮರಳಿದೆ. ವಿನ್ಯಾಸಳು ಮಕ್ಕಳನ್ನು ಶಾಲೆಗೆ ಕಳಿಸಿ ನನಗೋಸ್ಕರ ಕಾಯ್ತ ಕುಳಿತಿದ್ದಳು. ಬ್ರೇಕ್ಫಾಸ್ಟ್ ಮಾಡ್ತಿರೋವಾಗ ವೀಸೀ ಜತೆ ನಡೆದ ಮಾತುಕತೆಯ ವಿವರಗಳನ್ನು ಆಕೆಗೆ ರಿಪೋರ್ಟ್ ಮಾಡಿದೆ. ಆಕೆ ಬೆಳಗ್ಗಿನ ಪೇಪರಿನಲ್ಲಿ ಬಂದಿದ್ದ ನ್ಯೂಸ್ ಐಟಮೊಂದನ್ನು ತೋರಿಸಿದಳು. ಸೀನಿಯರ್ ಪ್ರೊಫೆಸರರುಗಳ ಮೇಲೆ ಜೂನಿಯರ್ಗಳ ಆಕ್ರಮಣ ಎಂಬ ಶೀರ್ಷಿಕೆಯ ಕೆಳಗೆ ನಿನ್ನೆ ಸಂಜೆ ಕ್ಯಾಂಪಸ್ನಲ್ಲಿ ನಡೆದಿದೆ ಎನ್ನಲಾದ ಕಪೋಲಕಲ್ಬಿತ ಸುದ್ದಿ ಪ್ರಕಟವಾಗಿತ್ತು. ಪ್ಲಾಂಟೆಡ್ ನ್ಯೂಸ್, ಪರವಾಯಿಲ್ಲ, ಶರ್ಮನ ಕಡೆಯವರು ಬಹಳ ಫಾಸ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದುಕೊಂಡೆ.
ಹಿತ್ತಿಲಲ್ಲಿ ಯಾರೋ ಒಂದೇ ಸಮನೆ ವಾಂತಿ ಮಾಡುವುದು ಕೇಳಿಸಿತು.
“ಯಾರದು?” ಎಂದೆ.
“ಮೀನಾ” ಎಂದಳು ವಿನ್ಯಾಸ. –
ಭಾಗ ೨
ಶಾ ಕಮಿಶನ್ ರಿಪೋರ್ಟಿನ ಮೂರೂ ವಾಲ್ಮೂಮುಗಳು ನನ್ನ ಬಳಿ ಇದೆ. ಶೆಲ್ಫಿನಲ್ಲಿರುವ ಇತರ ದಪ್ಪ ಪುಸ್ತಕಗಳ ಜತೆಯಲ್ಲಿ ಇರಿಸಿದ್ದೇನೆ. ಆಗಾಗ್ಗೆ ಶೇಖರವಾಗುತ್ತಿರುವ ನನ್ನ ಗ್ರಂಥರಾಶಿಗೆ ಶೆಲ್ಫಿನಲ್ಲಿ ಜಾಗ ಸಾಕಾಗದೆ, ಈ ಶಾ ಕಮಿಶನ್ ವಾಲ್ಮೂಮುಗಳನ್ನ ರದ್ದಿ ಪೇಪರುಗಳ ಕೂಡೆ ಮಾರಿಬಿಟ್ಟರೆ ಹೇಗೆ ಎನ್ನುವ ತೀರ ಲೌಕಿಕ ವಿಚಾರ ನನ್ನ ತಲೆಯೊಳಗೆ ಬರುತ್ತದೆ. ಚಾರಿತ್ರಿಕ ದಾಖಲೆಯಾಗಿಯಾದರೂ, ಶಾ ಕಮಿಶನ್ ರಿಪೋರ್ಟಿಗೊಂದು ಸ್ಥಾನವಿದೆಯೆ? ಬಹಳ ಗಂಭೀರವಾದ ಸಂಗತಿಗಳನ್ನ ಗೇಲಿ ಮಾಡಿಬಿಟ್ಟಂಥ ರಾಜ್‌ನಾರಾಯಣ್ ಕಳೆಯಿಂದ ಇದು ಎಂದಿಗೂ ಮುಕ್ತವಾಗಲಾರದೆಂದು ತೋರುತ್ತದೆ. ಹಾಗೂ ರದ್ದಿ ಪೇಪರುಗಳ ಜತೆ ಸೇರಿ ತೀರ ಅನಿರೀಕ್ಷಿತವಾದ ಲ್ಯಾಂಡ್‌ಸ್ಕೇಪ್ ಗಾರ್ಡನ್, ಪಬ್ಲಿಕ್ ಟಾಯ್ಲೆಟ್, ದಿನಸಿ ಅಂಗಡಿ ಮುಂತಾದ ಸ್ಥಳಗಳಲ್ಲಿ ಇದು ಸದುಪಯೋಗಕ್ಕೆ ಬರಬಹುದು. ಚರಿತ್ರೆಯೆನ್ನುವುದು ಅಂತಿಮವಾಗಿ ಮನುಷ್ಯ ಸಮೂಹದ ಸೈಖಿಯೊಳಗೆ ನಿಲ್ಲಬೇಕೇ ವಿನಾ ಶೆಲ್ಫುಗಳಲ್ಲಿ ಅಲ್ಲ. ಆದಾಗ್ಯೂ ನಾನು ಈ ರಿಪೋರ್ಟುಗಳನ್ನ-ಇಂಟರಿಮ್ ರಿಪೋರ್ಟ್ ಒಂದು, ಇಂಟರಿಮ್ ರಿಪೋರ್ಟು ಎರಡು, ಹಾಗೂ ಮೂರನೆ ಮತ್ತು ಕೊನೇ ರಿಪೋರ್ಟು, ಹೀಗೆ ಐನೂರಕ್ಕೂ ಮಿಕ್ಕಿ ದೊಡ್ಡ ಸ್ಯೆಜಿನ ಪುಟಗಳಿರುವ ಈ ದಾಖಲೆಯನ್ನ ಇನ್ನೂ ರದ್ದಿಗೆ ಸೇರಿಸದೆ ಇಟ್ಟುಕೊಂಡಿದ್ದೇನೆ.
ಶರ್ಮ ವೀಸೀಗ ಸಮರ್ಪಿಸಿದ ಅರ್ಜಿಯಲ್ಲಿ ಆತನದೇ ಡಿಪಾರ್ಟ್ಮಂಟ್‌ನ ಯದುಗಿರಿ ಎಂಬ ಲೆಕ್ಚರರ್, ನಾನು ಸಮೇತ ಒಟ್ಟು ಒಂಭತ್ತು ಮಂದಿಯ ಮೇಲೆ ದ್ಯೆಹಿಕ ಆಕ್ರಮಣ ಹಾಗೂ ಮಾನಸಿಕ ಹಿಂಸೆಯ ದೋಷಾರೋಪಣೆ ಮಾಡಿದ್ದ. ಆರಂಭದಲ್ಲಿ ಕೊಟ್ಟ ಮೆಮೊರಾಂಡಮಿಗೆ ಅನೆಕ್ಸ್‌ಚರಾಗಿ ನಂತರ ದೀರ್ಘವಾದ ಎರಡು ಅರ್ಜಿಗಳನ್ನ ಸಮರ್ಪಿಸಿದ್ದ. ಈ ಅರ್ಜಿಗಳಲ್ಲಿ ಹಲವು ಅರ್ಧಸತ್ಯಗಳನ್ನು ಹಿನ್ನೆಲೆಯಾಗಿ ಬೆರೆಸಿ, ತಕರಾರಿಗೆ ವಸ್ತುನಿಷ್ಟುತೆಯ ಸೋಗು ಕೊಡಲು ಯತ್ನಿಸಿದ್ದ. ಹೆಚ್ಚು ವೇಳೆ ತೆಗೆದುಕೊಳ್ಳದೆ ವೀಸೀ ಮೂರು ಜನ ಪ್ರೊಫೆಸರರ ಒಂದು ವಿಚಾರಣೀ ಸಮಿತಿಯನ್ನು ಏರ್ಪಡಿಸಿಯೇ ಬಿಟ್ಟರು. ಹಾಗೂ ಈ ಸಮಿತಿ ಕೋರಿದಾಗ ನಾವು ಪ್ರತಿಯೊಬ್ಬರೂ ಅದರ ಮುಂದೆ ಹಾಜರಾಗಿ ವಿಚಾರಣೆಯಲ್ಲಿ ಸಹಕರಿಸತಕ್ಕದ್ದು ಎಂಬ ಆಜ್ಞೆಯನ್ನೂ ಹೊರಡಿಸಿದರು. ಈ ವಿಚಾರಣೆಯನ್ನ ನಾನು ಸ್ವಾಗತಿಸಿದಂತೆ ಇನ್ನು ಯಾರೂ ಸ್ಪಾಗತಿಸಲಿಲ್ಲ. ಇದರಿಂದ ವಾಸ್ತವಾಂಶ ಹೊರಬೀಳಬೇಕು, ಶರ್ಮ ಇತ್ಯಾದಿಗಳು ಸುಳ್ಳರೆಂದು ಸಾಬೀತಾಗಬೇಕು. ಇದೆಲ್ಲದರ ಹಿಂದಿನ ಹೆಡ್‌ಶಿಷ್ ಸಮಸ್ಯೆಗೆ ಇದರಿಂದ ಒಂದು ಪರಿಹಾರಸಿಗಬೇಕು ಎನ್ನುವುದು ನನ್ನ ಆಶಯವಾಗಿತ್ತು. ಆದ್ದರಿಂದಲೆ ನನಗೆ ಶೆಲ್ಫಿನಲ್ಲಿರುವ ಶಾ ಕಮಿಶನ್ ರಿಪೋರ್ಟ್ ದೊಡ್ಡದೊಂದು ಕರಗಲಾರದ ಬರ್‍ಫ಼ದ ಪರ್ವತದಂತೆ ಕಾಣಿಸಿದ್ದಿರಬಹುದು.
ಅದೇನೇ ಇದ್ದರೂ ದೋಷಾರೋಪಣೆಗೆ ಒಳಗಾದ ಇತರರು. ಯಾರೂ ಇದನ್ನು ಈ ರೀತಿ ತೆಗೆದುಕೊಳ್ಳಲಿಲ್ಲ. ಕೆಲವರು ಹೆದರಿ ತೀರ ಕಂಗಾಲಾದರು. ನಮ್ಮ ಅಕ್ಷರ ಸಂಸ್ಕೃತಿ ಎಷ್ಟು ಭಯಂಕರವಾದ್ದೆಂದು ನನಗೆ ಅಗಲೆ ಮನವರಿಕೆಯಾದ್ದು. ವೀಸೀ ಆಫೀಸಿನ ಮೊಹರು ಹೊತ್ತ ಕಾಗದದ ಮೇಲೆ ಇಲೆಕ್ಟ್ರಾನಿಕ್ ಟ್ಯಾಪ್‌ರ್ರಾಯ್ಟರಿನಲ್ಲಿ ಮುದ್ರಿತವಾದ ಆ ವಾಕ್ಯಗಳನ್ನು ಓದಿದ ತಕ್ಷಣ ಹಲವರು ಗಡಗಡನೆ ನಡುಗಿದರು. ಈಗ ನಾನಿಲ್ಲಿ ಭಾಗಸ್ತನಾದ್ದರಿಂದ ಏನು ಹೇಳಿದ್ದರೂ ತಪ್ಪು ಅರ್ಥಕ್ಕೆ ಕಾರಣವಾಗುತ್ತದೆ. ನಾನೇ ಧೈರ್ಯವಂತ, ಸತ್ಯಕ್ಕೋಸ್ಕರ, ನ್ಯಾಯಕ್ಕೋಸ್ಕರ ಹೋರಾಡುವವ, ಉಳಿದವರೆಲ್ಲ ಹೇಡಿಗಳು. ಸಮಯಸಾಧಕರು-ಎಂಬ ಅಭಿಪ್ರಾಯವನ್ನು ಓದುಗರಲ್ಲಿ ಹುಟ್ಟಿಸಲು ನಾನು ಬಯಸುವುದಿಲ್ಲ. ಆ ಸಂದರ್ಭದಲ್ಲಿ ಬೇರೆ ಬೇರೆ ಜನ ಹೇಗೆ ರಿಯಾಕ್ಟ್ ಮಾಡಿದರು ಎನ್ನುವುದನ್ನಷ್ಟೆ ಇಲ್ಲಿ ದಾಖಲಿಸುವುದು ನನ್ನ ಉದ್ದೇಶ. ವೀಸೀ ಹೊರಡಿಸಿದ ಆಜ್ಞೆ ತಮ್ಮ ಮೇಲೆ ಹೊರಡಿಸಿದ ಫಾಶಿ ಆರ್ಡರ್ ಎಂದೇ ಕೆಲವರು ತಿಳಿದುಕೊಂಡರು. ಕೆಲವರು ಯಾವ ಯಾವದೋ ಪ್ರೊಬೇಶನ್ನಲ್ಲಿದ್ದರು. ಇನ್ನು ಕೆಲವರು ಪ್ರೊಮೋಶನ್ಗೆ ಕಾಯುತ್ತಿದ್ದರು. ಒಬ್ಬಾತ ಬರ್ಲಿನ್ನಲ್ಲಿ ನಡೆಯಲಿರುವ ಒಂದು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹೋಗಬಯಸಿದ್ದ. ತೀರ ಕುಸಿದವನೆಂದರೆ ಯದುಗಿರಿ. ಒಂದೇ ಡಿಪಾರ್ಟ್‌ಮೆಂಟೆನಲ್ಲಿ ಕೆಲಸ ಮಾಡಬೇಕಾಗಿದ್ದ ಅವನಿಗೆ ಶರ್ಮನೆಂದರೆ ಸಿಂಹ ಸ್ವಪ್ನ. ಆದರೆ ಶರ್ಮನ ಹಿಂಸೆ ತಡೆಯಲಾರದೆ ನಮ್ಮ ಜತೆ ಸೇರಿದ್ದ. ಈಗ ವಿಚಾರಣೆ ಆಜ್ಞೆ ಹೊರಟದ್ದೇ ಆತ ನೇರ ಶರ್ಮನ ಮನೆಗೆ ಹೋಗಿ ಆತನ ಕಾಲಿಗೆ ಬಿದ್ದನೆಂದೂ, ಶರ್ಮ ಅವನಿಗೆ, “ಸೂಳೆ ಮಗನೆ! ಇನ್ನು ಮುಂದೆ ಬೇವರ್ಸಿಗಳ ಜತೆ ಸೇರಿದರೆ, ನಿನ್ನ ಹುಟ್ಟಿಲ್ಲ ಅಂತ ಮಾಡಿಬಿಡ್ತೇನೆ. ಬಿಹೇವ್ ಯುವರ್‌ಸೆಲ್ಫ್!” ಎಂದು ಛೀಮಾರಿ ಹಾಕಿದನೆಂದೂ ತಿಳಿಯಿತು.
ಇದೆಲ್ಲದರಿಂದ ನನಗೆ ಬೇಸರವಾದ್ದು ಮಾತ್ರವಲ್ಲ. ಸಾಧಾರಣವಾಗಿ ಇಂಥ ಸಂದರ್ಭಗಳಲ್ಲಿ ನಡೆಯುವಂತೆ ಹಲವರು ನನ್ನನ್ನೇ ದೂರತೊಡಗಿದರು. ಶರ್ಮೇತ್ಯಾದಿಗಳನ್ನ ಥಳಿಸುವುದಕ್ಕೆಂದೇ ನಾನು ಈ ಸಭೆಯನ್ನು ಕರೆಸಿದೆನೆಂದೂ, ಇನ್ನೂ ರೀಡರಾಗಿರುವ ನನಗೆ ಪ್ರೊಫೆಸರುಗಳನ್ನ ಕಂಡರೆ ಹೊಟ್ಟೆಯುರಿಯೆಂದೂ ವದಂತಿಗಳು ಹುಟ್ಟಿದುವು. ಒಂದಲ್ಲ ಒಂದು ಕಾರಣಕ್ಕೋಸ್ಕರ ಮಂದಿಯನ್ನು ಎದುರು ಹಾಕಿಕೊಂಡಿದ್ದ ನಾನು ಯಾರ ಸಹಾನುಭೂತಿಯನ್ನಾಗಲಿ, ಸಹಕಾರವನ್ನಾಗಲಿ ನಿರೀಕ್ಷಿಸುವಂತಿರಲಿಲ್ಲ. ಶರ್ಮ ದೂರುಕೊಟ್ಟಿದ್ದ ಜನರ ಒಂದು ಸಭೆಯನ್ನು ನಾನು ಕರೆದಾಗ ಬಂದವರು ಕೇವಲ ಮೂರು ಮಂದಿ. ಉಳಿದವರು ಈಗಾಗಲೆ ಶರ್ಮನಿಗೆ ಶರಣಾಗಿರಬೇಕು. ಆಥವಾ ಆಗಲಿರುವರು ಎಂದು ಕೊಂಡೆ. ಉಳಿದ ನಾವು ಕಾಂಟ್ರಡಿಕ್ಷನ್ ಇಲ್ಲದೆ ಗಟ್ಟಿಯಾಗಿ ನಿಂತರೂ ವಿರೋಧಿಗಳ ಸಂಚನ್ನು ಬಯಲಿಗೆಳೆಯುವುದು ಸಾಧ್ಯವೆಂದು ನನಗನಿಸಿತು. ಆದ್ದರಿಂದ ನಾವೆಲ್ಲ ವಿಚಾರಣೀ ಕಮಿಟಿಯ ಕರೆಯನ್ನು ನಿರೀಕ್ಷಿಸುತ್ತ ಕೈಚೆಲ್ಲಿ ಕುಳಿತೆವು.
ಆದರೆ ನಮ್ಮ ವಿರೋಧಿಗಳು ಮಾತ್ರ ಹಾಗೆ ಕುಳಿತುಕೊಳ್ಳಲಿಲ್ಲ. ಆವರು ನನ್ನನ್ನೆ ಮುಖ್ಯ ಟಾರ್ಗೆಟನ್ನಾಗಿ ಮಾಡಿರುವಂತೆ ತೋರಿತು. ಒಂದು ದಿನ ಕ್ಯಾಂಪಸ್‌ನ ತುಂಬ ಅನೇಕ ಕರಪತ್ರಗಳು ಚೆಲ್ಲಿದ್ದುವು. ಇಲ್ಲಿ ಮುಖ್ಯವಾಗಿ ನಮ್ಮ ವಿಶ್ವವಿದ್ಯಾಲಯದ ಭೂಗೋಳದ ಕೆಲವು ವಿವರಗಳನ್ನು ಕೊಡುವುದು ಅಗತ್ಯ. ನಗರದಿಂದ ಸುಮಾರು ಐದು ಕಿಲೋಮೀಟರು ದೂರದಲ್ಲಿ ರಚಿತವಾದ ವಿಶ್ವವಿದ್ಯಾಲಯ ಸ್ಥಳಾಭಾವದಿಂದಾಗಿ ಬಹಳ ಒತ್ತಿನಲ್ಲಿ ಬೆಳೆದಿದೆ. ಒಂದು ಡಿಪಾರ್ಟ್‌ಮೆಂಟರನಿಂದ ಇನ್ನೊಂದು ಕೇವಲ ಕೂಗಳತೆಯಲ್ಲಿದ್ದರೆ, ಅಧ್ಯಾಪಕರ ಮನೆಗಳಂತೂ ಒಂದು ಅಗ್ರಹಾರದ ತರ ಕಾಣಿಸುತ್ತವೆ. ಯಾರು ಯಾರಿಂದಲೂ ಮುಖಮರೆಸುವುದು ಸಾಧ್ಯವಿಲ್ಲ. ಆದ್ದರಿಂದ ಪ್ರೈವಸಿ ಅಥವಾ ಕುಟುಂಬ ಶಾಂಟಿಯೆನ್ನುವುದು ದೂರದ ಮಾತು. ಹಾಗೂ ಅಧ್ಯಾಪಕರ ವಸತಿಗಳಿಗೂ ವಿಶ್ವವಿದ್ಯಾಲಯದ ಡಿಪಾರ್ಟ್‌ಮೆಂಟುಗಳಿಗೂ ಹೆಚ್ಚಿನ ದೂರವಿರದ ಕಾರಣ, ವಸತಿಗಳಲ್ಲಿ ಡಿಪಾರ್ಟ್‌ಮೆಂಟಿನ ವಾತಾವರಣವೂ, ಡಿಪಾರ್ಟ್‌ಮೆಂಟ್ನಲ್ಲಿ ಮನೆಯ ವಾತಾವರಣವೂ ಏರ್ಪಟ್ಟಿದೆ. ಹೀಗಿರುತ್ತ ಕ್ಯಾಂಪಸ್‌ನ ಒಂದು ಮೂಲೆಯಲ್ಲಿ ಏನಾದರೂ ನಡೆದರೆ ಅದು ಇನ್ನೊಂದು ಮೂಲೆಗೆ ತಲುಪುವುದಕ್ಕೆ ಹೆಚ್ಚಿನ ಸಮಯವೇನೂ ಬೇಕಾಗುವುದಿಲ್ಲ.
ಕರಪತ್ರದ ಒಂದು ಪ್ರತಿಯನ್ನು ನಾನು ವಿನ್ಯಾಸಳಿಗೆ ತೋರಿಸುವುದಕ್ಕೆಂದು ಮನೆಗೆ ತಂದರೆ, ಆಕೆಗೆ ಅದು ಅಷ್ಟ ಹೊತ್ತಿಗೇ ದೊರಕಿಯಾಗಿತ್ತು. ಬಾಗಿಲ ಕೆಳಗಿನಿಂದ ಯಾರೋ ತೂರಿ ಹೋಗಿದ್ದರಂತೆ ಬಾಗಿಲು ತರೆದು ನೋಡಿದರೆ ಯಾರೂ ಕಂಡುಬರಲಿಲ್ಲವಂತೆ. ಇಂಗ್ಲೀಷಿನಲ್ಲಿ ಮುದ್ರಿತವಾಗಿದ್ದ ಆ ಕರಪತ್ರದ ಸಾರಾಂಶ ಹೀಗಿತ್ತು: ಸೋಶಿಯಾಲಜಿ ಡಿಪಾರ್ಟ್ಮೆಂಟ್ನೊಳಗೆ ಕಪೂರನೆಂಬ ಒಬ್ಬ ಭ್ರಷ್ಟನಿದ್ದಾನೆ. ಲೂಸ್‌ಮಾರಲ್ಸ್‌ನ ಈ ವ್ಯಕ್ತಿ ಯಾವ ಮಟ್ಟಕ್ಕೆ ಇಳಿಯುವುದಕ್ಕೂ ಹೇಸುವುದಿಲ್ಲ. ಇವನ ಕೈಕೆಳಗೆ ರಿಸರ್ಚಿಗೆ ಹೆಸರು ಹಚ್ಚಿಕೊಂಡಿರುವ ಹೆಣ್ಣು ಹುಡುಗಿಯರಿಗೆಲ್ಲಾ ಈತನ ಸ್ವಭಾವ ಚೆನ್ನಾಗಿ ಗೊತ್ತಿದೆ. ಕಸಮುಸುರೆ ಕೆಲಸದ ಬಡ ಹಣ್ಣುಗಳನ್ನೂ ಈತ ಬಿಟ್ಟಿಲ್ಲ. ಸದ್ಯ ಇವನ ಮನೆಯಲ್ಲಿ ಕೆಲಸಕ್ಕಿರುವ ವಿಧವೆ ಹೆಣ್ಲೊಬ್ಬಳು ಬಸುರಿಯಾಗಿದ್ದಾಳೆ. ಫೆಮಿನಿಸಂ ಬಗ್ಗೆ ದೊಡ್ಡ ಮಾತುಗಳನ್ನಾಡುವವರೆಲ್ಲ ಎಲ್ಲಿ ಹೋಗಿದ್ದಾರೆ ಈಗ? ಅಥವಾ ಈ ಭ್ರಷ್ಟನಿಗೆ ಹೆದರಿ ಸುಮ್ಮಗೆ ಕೂತಿದ್ದಾರೆಯೆ? ಇಂಥ ವ್ಯಕ್ತಿಯನ್ನು ವಿಶ್ವವಿದ್ಯಾನಿಲಯ ಇನ್ನೂ ಸಹಿಸುತಿರುವುದು ಇಡೀ ಅಧ್ಯಾಪಕ ವರ್ಗಕ್ಕೇ ಅವಮಾನ.
ಕರಪತ್ರ ಹೊರಡಿಸಿದವರ ಹೆಸರಿಲ್ಲ, ವಿಳಾಸವಿಲ್ಲ, ಎಲ್ಲಿ ಮುದ್ರಣಗೊಂಡಿತು ಎನ್ನುವುದೂ ಇಲ್ಲ, ಮುದ್ರಣ ಮತ್ತು ಪತ್ರಿಕಾ ಕಾಯಿದೆಯ ಪ್ರಕಾರ ಇದು ಅಪರಾಧ. ಆದ್ದರಿಂದಲೇ ಅಪರಾಧಿಗಳು ಕಲ್ಲೆಸೆದು ತಲೆಮರೆಸಿಕೊಂಡಿದ್ದಾರೆ. ಇವರು ತಲೆಮರೆಸಿ ಕೊಂಡಿದ್ದಾರೆನ್ನುವುದೇ ದೌರ್ಬಲ್ಯದ ಸಂಕೇತ. ವಿಚಾರವಂತನಾದ ಯಾವ ಮನುಷ್ಯನಿಗೂ ಇದು ಗೊತ್ತಾಗುವ ಸಂಗತಿ. ಆದರೆ ಚರಿತ್ರವಧೆಗೂ ವಿಚಾರವಂತಿಕೆಗೂ ಸಂಬಂಧವಿಲ್ಲ. ಈ ಕ್ಷಣ ಈ ಕರಪತ್ರವನ್ನೋದಿದ ಬಹಳಷ್ಟು ಮಂದಿಗೆ ಒಂದು ರೀತಿಯ ಸುಖದ ಅನುಭವವಾಗುತ್ತಿರಬೇಕು ಎನ್ನುವುದರಲ್ಲಿ ನನಗೆ ಯಾವ ಸಂದೇಹವೂ ಇರಲಿಲ್ಲ. ನನ್ನ ಮರ್ಮವನ್ನು ಹುಡುಕಿ ವಿರೋಧಿಗಳು ಹೊಡೆದಿದ್ದರು, ಈ ಕುರಿತು ವಿನ್ಯಾಸ ಮತ್ತು ನಾನು ಚರ್ಚೆಸುವುದಕ್ಕೇನೂ ಇರಲಿಲ್ಲ. ಆದ್ದರಿಂದ ಹೆಚ್ಚೇನೂ ಮಾತಾಡದೆ ನಮ್ಮ ದೈನಂದಿನದಲ್ಲಿ ತೊಡಗಿದೆವು. ಮನೆಯಿಂದ ಹೊರಬಿದ್ದರೆ ಜನ ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆಂದು ನಮಗೆ ಗೊತ್ತಿತ್ತು. ಈ ಮಧ್ಯೆ ಮೀನಳ ಗರ್ಭ ಸಕಲರಿಗೂ ಕಾಣಿಸುವಂತೆ ಬೆಳೆಯುತ್ತಲೂ ಇತ್ತು.
ವಿನ್ಯಾಸ ಒಬ್ಬಳೇ ಸಿಕ್ಕಿದಾಗ ಮೀನಾ ಅವಳೆದುರು ಅತ್ತಬಿಡುತ್ತಿದ್ದಳು. ಆದರೆ ತನ್ನ ಈ ಸ್ಥಿತಿಗೆ ಕಾರಣರು ಯಾರೆನ್ನುವ ಕುರಿತು ಆಕೆ ಎಂದೂ ಹೇಳಲಿಲ್ಲ. ವಿನ್ಯಾಸ ತಾನಾಗಿ ಎಂದೂ ಆ ಬಗ್ಗೆ ಮಾತೆತ್ತುವುದಕ್ಕೆ ಹೋಗಲೂ ಇಲ್ಲ. ಇದಕ್ಕೆ ಬದಲಾಗಿ ಮೀನಾಳ ಪೂರ್ತಿ ನೆರವಿಗೆ ಧಾವಿಸುವುದಕ್ಕೆ ಅವಳು ಮುಂದಾದಳು. ಪ್ರೆಗ್ನೆನ್ಸಿ ಟೆಸ್ಟ್‌ನ ಅಗತ್ಯವಿರಲಿಲ್ಲ. ಆದರೆ, ಗರ್ಭಿಣಿಗೆ ಕೊಡಿಸಬೇಕಾದ ಇಂಜೆಕ್ಷನ್, ಟಾನಿಕ್ ವಗ್ಯರೆಗಳ ಕಾಳಜಿ ವಿನ್ಯಾಸ ತಾನೇ ವಹಿಸಿದಳು. ಎಲ್ಲಕ್ಕಿಂತ ಮುಖ್ಯವಾಗಿ ಮೀನಾಳಿಗೆ ಬೇಕಿದ್ದ ಮಾನಸಿಕ ನೆರವನ್ನು ಅವಳು ನೀಡಿದಳು. ಇದರಿಂದ, ಇತರ ಮನೆಗೆಲಸದವರ ಹಾಗೂ ತನ್ನದೇ ನೆರೆಯವರ, ದೂರದ ಬಂಧುಗಳ ಅವಹೇಳನವನ್ನು ಸಹಿಸುವುದಕ್ಕೆ ಬಹುಶಃ ಮೀನಾಳಿಗೆ ಸಾಧ್ಯವಾಯಿತೆಂದು ತೋರುತ್ತದೆ. ವಿನ್ಯಾಸಳ ಈ ನೆರವು ಸಿಗದೇ ಇದ್ದರೆ ಅವಳು ಏನು ಮಾಡಿಕೊಳ್ಳುತ್ತಿದ್ದಳೋ ಹೇಳುವುದು ಕಷ್ಟ.
ವಿಚಾರಣೆ ಶರ್ಮ ನೆನೆಸಿದ ರೀತಿಯಲ್ಲಿ ಮುಂದುವರೆಯಲಿಲ್ಲ. ಡಿಪಾರ್ಟ್ ಮೆಂಟಲ್ ತನಿಖೆಯಲ್ಲಿ ಯಾರೂ ವಕೀಲರನ್ನು ನಿಯಮಿಸುವುದು ಸಾಧ್ಯವಿರಲಿಲ್ಲವಾದ್ದರಿಂದ ನಮ್ಮ ಪಾಟೀ ಸವಾಲುಗಳಿಗೆ ಆತ ಸ್ವಯಂ ವಿರೋಧೀ ಉತ್ತರಗಳನ್ನು ಕೊಡ ತೊಡಗಿದ್ದ. ಮಾತ್ರವಲ್ಲ, ಯದುಗಿರಿಯೇ ಮುಂತಾದ ಹೇಡಿಗಳನ್ನು ರಕ್ಷಿಸುವುದಕ್ಕೆಂದು ಆತ ತನ್ನ ಮೊದಲಿನ ಆರೋಪವನ್ನು ಪೂರ್ತಿಯಾಗಿ ಮುಂದಕ್ಕೆ ಒತ್ತದೆ. ಕೇವಲ ನನ್ನನ್ನು ಮಾತ್ರ ಪ್ರತ್ಯೇಕಿಸಿದ್ದು ಅವನ ವಂಚನೆಯನ್ನು ಕಮಿಟಿಗೆ ಸ್ಪಷ್ಟಗೊಳಿಸಿತು. ಪರಿಣಾಮವಾಗಿ, ಕಮಿಟಿಯ ಸಿಟ್ಟಿಂಗುಗಳು ಮುಂದುವರಿಯುತ್ತಿದ್ದಂತೆ ಶರ್ಮ ತನ್ನ ಬಲೆಯಲ್ಲಿ ತಾನೇ ಸಿಕ್ಕಿಬಿದ್ದು ಬೆವರತೊಡಗಿದ. ವೀಸೀಯ ಮುಂದೆ ಹೋಗಿ, ಕೇಸನ್ನು ವಾಪಸು ತೆಗೆದುಕೊಳ್ಳಲು ತಾನು ತಯಾರಿದ್ದೇನೆಂದೂ, ಕಪೂರ್ ಕೇವಲ ಕ್ಷಮಾಪಣೆ ಕೇಳಿದರೆ ಸಾಕೆಂದೂ ಹೇಳಿದ. ವೀಸೀ ನನ್ನನ್ನು ಕರೆಸಿ ಕೇಳಿದಾಗ, ನಾನ ಶರ್ಮನ ಕ್ಷಮಾಪಣೆ ಕೇಳುವುದಕ್ಕೆ ಯಾವ ಕಾರಣವಿಲ್ಲವೆಂದೂ, ವಿಚಾರಣೆಯ ಈ ಹಂತದಲ್ಲಿ ಕೇಸನ್ನು ಹಿಂತೆಗೆದುಕೊಳ್ಳುವುದು ಸಾಧ್ಮವಿಲ್ಲವೆಂದೂ ಶರ್ಮ ದುರುದ್ದೇಶದಿಂದ, ನನ್ನ ಮೇಲೆ ಆರೋಪ ಹೊರಿಸಿದ್ದಾನೆಂದು ನಾನು ಸಾಬೀತುಪಡಿಸಲಿದ್ದೇನೆಂದೂ ಹೇಳಿದೆ. ಮರುದಿನವೆ ವೀಸೀ ಹತ್ತು ದಿನಗಳ ರಜೆ ಮೇಲೆ ತಮ್ಮ ಹುಟ್ಟೂರಾದ ಅಹಮ್ಮದಾಬಾದಿಗೆ ಹೊರಟು ಹೋದರು.
ಈ ಮಧ್ಯೆ ಕಮಿಟಿಯ ಇನ್ನೊಂದು ವಿಚಾರಣೀ ಸಭೆ ನಡೆಯಿತು. ವಿಚಾರಣೆ ಇನ್ ಕ್ಯಾಮರಾ ನಡೆಯುತ್ತಿದ್ದುದರಿಂದ ಯಾರು ಯಾರು ಏನೇನು ಹೇಳಿದರು ಎನ್ನುವುದೆಲ್ಲ ಗುಪ್ತವಾಗಿತ್ತು. ಆದರೂ ಶರ್ಮ ಹಿಂದೇಟು ಹಾಕಲು ಶುರುಮಾಡಿದಂದಿನಿಂದ ಇತರರು ತುಸು ಧೈರ್ಯಗೊಂಡರೆಂದು ಕಾಣುತ್ತದೆ. ಯದುಗಿರಿ ಕೂಡ ತಾನು ವಚನ ಭ್ರಷ್ಟನಾದ್ದಕ್ಕೆ, ಒಳಗೊಳಗೇ ಪರಿತಪಿಸತೊಡಗಿದ. ರಾಜಕೀಯ ಎಷ್ಟು ವಿಚಿತ್ರವಾಗಿರುತ್ತದೆ! ಅದು ನಮ್ಮ ವೀಸೀ ತಮ್ಮ ಎರಡನೇ ಟರ್ಮಿಗೆ ಹಾತೊರೆಯುತ್ತಿದ್ದ ಸಂಧಿಕಾಲ. ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ದೆಸೆಯಿಂದಾಗಲಿ, ಅಧ್ಯಾಪಕರ ದೆಸೆಯಿಂದಾಗಲಿ ಯಾವುದೇ ತೊಂದರೆ ಯುಂಟಾಗುವುದು ಅವರಿಗೆ ಬೇಕಿರಲಿಲ್ಲ. ಊರಿಗೆ ಹೋಗುತ್ತೇನೆಂದು ಹೇಳಿ ಅವರು ನಿಜಕ್ಕೂ ಹೋದುದು ದೆಹಲಿಗೆಂದು ನಮಗೆ ಆಮೇಲೆ ಗೊತ್ತಾಯಿತು. ಹೋಗಿ ಅವರು ಕೇಂದ್ರದ ವಿದ್ಯಾಮಂತ್ರಿಗಳನ್ನು ಕಂಡು ಮರಳಿ ಬಂದರು. ಹಾಗೆ ಬಂದವರೇ ಶರ್ಮನನ್ನು ಕರೆಸಿ ಚೆನ್ನಾಗಿ ಛೀಮಾರಿ ಹಾಕಿ, ಕ್ಷಮೆ ಗಿಮೆಯ ಮಾತು ತೆಗೀಬೇಡ. ನೀನೇ ಕೋರಿ ಕೇಸು ಹಿಂತೆಗೆದುಕೊಳ್ಳದಿದ್ದರೆ ಪರಿಣಾಮ ನೆಟ್ಟಗಾಗುವುದಿಲ್ಲವೆಂದು ತಾಕೀತು ಮಾಡಿದರು. ಆಮೇಲೆ ನನ್ನನ್ನು ಕರೆಸಿ-
“ಕಪೂರ್, ಅಧ್ಯಾಪಕರ ಮಧ್ಯೆ ಹೀಗೆ ಜಗಳ ಮುಂದುವರೆಯೋದು ನನಗೆ ಇಷ್ಟವಿಲ್ಲ. ಶರ್ಮ ಅಪಾಲಜಿ ಕೇಳಲು ಸಿದ್ಧನಿದ್ದಾನೆ. ತಾನು ಒವರ್ ರಿಯಾಕ್ಟ್ ಮಾಡಿದೆ ಅಂತ ಒಪ್ಪಿಕೊಂಡಿದ್ದಾನೆ. ಈಗ ನೀವೇನು ಹೇಳುತ್ತೀರಿ?” ಎಂದು ಕೇಳಿದರು.
“ಶರ್ಮ ಹಲವು ಮಂದಿಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾನೆ. ಆತ ಇನ್ನು ಮುಂದೆಯೂ ಹಾಗೆ ಮಾಡೋದಿಲ್ಲವೆನ್ನೋದಕ್ಕೆ ಗ್ಮಾರಂಟಿಯೇನು?”
“ಗ್ಯಾರಂಟೆಯೇನೂ ಇಲ್ಲ. ಆದರೆ ಇದೆಲ್ಲದಕ್ಕೂ ಮೂಲ ಕಾರಣ ಹೆಡ್‌ಶಿಪ್ ರೊಟೇಶನ್ನ ಪ್ರಶ್ನೆ ತಾನೆ ? ಇದನ್ನು ಮುಂದಿನ ವರ್ಷ ಕಾರ್ಯಗತಗೊಳಿಸುತ್ತೇನೆ. ನೋಡಿ ಕಪೂರ್, ಸೋತವ ಯಾವಾಗಲೂ ಗೆಲ್ಲುತ್ತಾನೆ. ಬಿಲ್ಲನ್ನು ಮುರಿಯುವಷ್ಟು ಬಗ್ಗಿಸಬಾರದು. ಆದ್ದರಿಂದ ಈಗ ಶರ್ಮನನ್ನು ಕ್ಷಮಿಸುವುದರಿಂದ ನಿಮಗೇ ಒಳ್ಳೆಯದು. ನೀವು ಈಗಲೇ ನನಗೆ ಉತ್ತರ ಕೊಡಬೇಕಿಲ್ಲ. ಟೇಕ್ ಯುವರ್ ಓನ್ ಟ್ಯಾಮ್!” ಎಂದರು. ಹಾಗೇ ಆಗಲಿ ಎಂದು ನಾನು ಮರಳಿದೆ. ಆದರೆ ನಾನಿದಕ್ಕೆ ಒಪ್ಪುವ ತನಕ ನನ್ನನ್ನವರು ಬಿಡುವುದಿಲ್ಲವೆನ್ನುವುದು ನನಗೆ ಗೊತ್ತಿತ್ತು.
ಮೀನಳಿಗೋಸ್ಕರ ತಾನು ಹತ್ತಿರದ ಒಂದು ಮೆಟರ್ನಿಟಿ ವಾರ್ಡನ್ನು ಗೊತ್ತುಪಡಿಸಿ ಬಂದಿದ್ದೇನೆಂದು ವಿನ್ಯಾಸ ಹೇಳಿದಳು. ಅದಕ್ಕೆ ಸ್ಚಲ್ಪ ಹಣ ಖರ್ಚಾಗುತ್ತದೆ ಎಂದಳು. ನಮ್ಮ ಜಾಯಿಂಟ್ ಅಕೌಂಟಿನಿಂದ ಯಾವಾಗ ಬೇಕಾದರೂ ಹಣ ತೆಗೆದುಕೊಳ್ಳುವುದಕ್ಕೆ ಅವಳಿಗೆ ಪೂರ್ತಿ ಹಕ್ಕಿತ್ತು. ಮುಖ್ಯವಾಗಿ ಅಕೌಂಟಿನಲ್ಲಿ ಹಣ ಬೇಕು. ಯೋಗಾಯೋಗದಿಂದ ಆ ತಿಂಗಳು ನಾನು ಸೋಶಿಯಾಲಜಿ ಕೌನ್ಸಿಲ್ ನಡೆಸಿದ ವರ್ಕ್ಶಾಪ್ ಒಂದರಲ್ಲಿ ಕೆಲವು ಲೆಕ್ಚರುಗಳನ್ನು ಕೊಟ್ಟಿದ್ದಕ್ಕೆ ಸುಮಾರು ಒಂದು ಸಾವಿರದಷ್ಟು ಹಣ ಬಂದಿತ್ತು. ಅದನ್ನು ಹಾಗೆಯೇ ವಿನ್ಯಾಸಳ ಕೈಲಿತ್ತೆ. ವೀಸೀ ಹೀಗೆ ಹೀಗೆ ಹೇಳಿದ್ದಾರೆ. ಏನು ಮಾಡೋಣ ಎಂದು ಕೇಳಿದೆ.
“ಒಪ್ಪಿಕೊಳ್ಳಿ”, ಎಂದಳು ವಿನ್ಯಾಸ.
ಈ ತರದ ಜಗಳಗಳಿಂದ ನನ್ನ ಆರೋಗ್ಯ ಹಾಳಾಗುತ್ತದೆ ಎಂದು ಅವಳ ಗ್ರಹಿಕೆ ಮಾತ್ರವಲ್ಲ. ಈಚೆಗೆ ಓದುಬರೆಯೋದು ಒತ್ತಟ್ಟಗಿರಲಿ, ಮಕ್ಕಳ ಜತೆ ಕಳೆಯೋದಕ್ಕೂ ನನಗೆ ಸಮಯವಿರಲಿಲ್ಲ. ಸಮಯಕ್ಕಿಂತಲೂ ಮಾನಸಿಕ ವ್ಯವಧಾನವಿರಲಿಲ್ಲ. ನನ್ನ ಜತೆಗಿದ್ದ ಇತರ ಮೂರು ಮಂದಿಯಂತೂ, ಈ ಗೊಂದಲ ಹೇಗಾದರೂ ಒಮ್ಮೆ ಮುಗಿದರೆ ಸಾಕು ಎಂಬ ಹಂತಕ್ಕೆ ಬಂದಿದ್ದರು. ಆದ್ದರಿಂದ ವೀಸೀಯ ಸಲಹೆಯನ್ನು ಒಪ್ಪುವುದೆಂದೇ ತೀರ್ಮಾನಿಸಿದೆ.
ಕೆಲವು ದಿನಗಳ ನಂತರ ವೀಸೀಯವರ ಬಂಗಲೆಗೆ ಹೋಗಿ ನನ್ನ ತೀರ್ಮಾನವನ್ನು ಅವರಿಗೆ ತಿಳಿಸಿದೆ. ವೀಸೀ ಬಹಳ ಜಾಣ ಮನುಷ್ಯ ತನ್ನ ಸಂತೋಷವನ್ನು ತೋರಿಸಿ ಕೊಳ್ಳಲು ಇಷ್ಟಪಡಲಿಲ್ಲ. “ಗಡ್, ಗುಡ್, ವಿ ವಿಲ್ ಹ್ಯಾವ್ ಎ ಮೀಟಿಂಗ್-ಆಲ್ ಆಫ್ ಅಸ್” ಎಂದು ಆ ಮಾತನ್ನು ಅಲ್ಲಿಗೆ ನಿಲ್ಲಿಸಿ, ಸೋಶಿಯಾಲಜೀನಲ್ಲಿ ಈಚೆಗೆ ಏನೇನು ಬೆಳವಣಿಗೆಯಾಗುತ್ತಿದೆ ಎಂದು ಕುಶಲೋಪರಿ ಕೇಳಿದರು. ಅಲ್ಲಿಂದ ಬರುತ್ತ, ಈ ವ್ಯಕ್ತಿ ಹೆಡ್‌ಶಿಪ್‌ನ ಕುರಿತಾಗಿ ಇತ್ತ ವಚನವನ್ನು ನೆರವೇರಿಸುವನೇ ಇಲ್ಲವೇ ಎಂಬ ಸಂದೇಹ ನನ್ನನ್ನು ಕಾಡಕೊಡಗಿತು. ಇಲ್ಲದೇ ಇದ್ದರೆ, ಕೊನೆಗೂ ಇವನ ವಿರುದ್ಧವೇ ಹೋರಾಡ ಬೇಕಾಗುತ್ತದಲ್ಲ ಎಂಬ ಸತ್ಯವೂ ಹೊಳೆಯಿತು. ಕೊನೆಗೂ, ಈ ಸಮಾಜದ ಆಂತರಿಕ ಶಕ್ತಿಗಳನ್ನು ನಾನು ಎದುರಿಸಲಾರದೆ ಹೋಗುವೆನೆ? ಇವುಗಳ ವಿರುದ್ಧ ಆಗಾಗ ತೆಗೆಯುವ ಧ್ವನಿ ಮಾತ್ರದಿಂದಲೆ ನಾನು ತೃಪ್ತನಾಗಬೇಕೇ? ಹೀಗೆ ತಲೆಯೊಳಗೆ ರಣರಂಗವನ್ನಿಟ್ಟುಕೊಂಡು ಬರುತ್ತಿದ್ದವನು ಎದುರಿನ ಸೈಕಲ್ ಸವಾರನೊಬ್ಬನನ್ನು ರಕ್ಷಿಸಲು ಯತ್ನಿಸಿ ಪಲ್ಟಿಹೂಡೆದು ಬಿದ್ದು ಬಿಟ್ಟೆ. ಸ್ಕೂಟರ್ ಒಂದೆಡೆ, ನಾನು ಇನ್ನೊಂದೆಡೆ, ನಿಧಾನವಾಗಿ ಎದ್ದು, ಇನ್ನೂ ಚಾಲೂ ಇದ್ದ ಎಂಜಿನನ್ನು ನಿಲ್ಲಿಸಿದೆ. ಬಟ್ಟೆ ಬರೆಯೆಲ್ಲ ಹರಿದುಹೋಗಿತ್ತು. ಮೈಕೈ ಎಲ್ಲ ಜಖಂ. ತಲೆ? ತಲೆಗೆ ಗಾಯವಾಗಿದೆಯೆ ಎಂದು ತಡವಿ ನೋಡಿದೆ. ಗೊತ್ತಾಗಲಿಲ್ಲ. ಕೈಕಾಲು ಮುರಿದಿದೆಯೆ? ಅದೂ ಸರಿಯಾಗಿ ತಿಳಿಯದು. ಅಲ್ಲೇ ಕೂತೆ. ಸ್ಟಲ್ಪ ಸಮಯದಲ್ಲಿ ಆ ಕಡೆ ಬಂದ ಕೆಲವು ವಿದ್ಯಾರ್ಥಿಗಳು ನನ್ನ ಸ್ಥಿತಿಯನ್ನು ಕಂಡು ಮನೆಗೆ ಸಾಗಿಸಿದರು. ನನ್ನ ಸ್ಕೂಟರನ್ನು ತಂದು ಪಾರ್ಕ್ ಮಾಡಿದರು. ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಹೇಳಿ ಎಂದರು. ನಾನು ಅದರ ಅಗತ್ಯವೇನೂ ಇಲ್ಲವೆಂದು ಅವರ ಉಪಕಾರವನ್ನು ಸ್ಮರಿಸಿ ಕಳಿಸಿದೆ.
ಮನೆಯಲ್ಲಿ ಮಕ್ಕಳನ್ನು ಮಾತ್ರ ಬಿಟ್ಟು ವಿನ್ಯಾಸ ಎಲ್ಲಿಗೋ ಹೋಗಿದ್ದಳು. ಸಾಧಾರಣವಾಗಿ ಅವಳು ಹಾಗೆಲ್ಲೂ ಹೋಗುವವಳಲ್ಲ. ಮಮ್ಮಿ ನರ್ಸಿಂಗ್ ಹೋಮಿಗೆ ಹೋಗಿದ್ದಾಳೆ ಎಂದು ಮಕ್ಕಳು. ಯಾತಕ್ಕೆ, ಎಂದು ಕೇಳಿದೆ. ಗೊತ್ತಿಲ್ಲ. ಅಪ್ಪ ಬಂದ ತಕ್ಷಣ ಬರೋದಕ್ಕೆ ಹೇಳಿ ಅಂದಳು ಎಂದೂ ಹೇಳಿದರು. ನನ್ನ ಅವಸ್ಥೆಯನ್ನು ಕಂಡು ಮಕ್ಕಳಿಗೂ ತುಸು ಗಾಬರಿಯಾಯಿತೆಂದು ತೋರುತ್ತದೆ. ಏನಾಯಿತು. ಯಾರಾದರೂ ಹೊಡೆದರೆ ಎಂದೆಲ್ಲ ಕೇಳಿದರು. ನಂತರ ನಾನು ತುಸು ಬಿಸಿ ನೀರು ಕಾಯಿಸಿ ಸ್ನಾನ ಮಾಡಿದೆ. ಮ್ಯೆಯ ಗಾಯಗಳನ್ನು ಹಗುರವಾಗಿ ಒರೆಸಿ ತೆಗೆದೆ. ಬಟ್ಟೆ ಹಾಕಿಕೊಂಡು, ಮಕ್ಕಳಿಗೆ ಜಾಗರೂಕರಾಗಿರುವಂತೆ ಹೇಳಿ ನರ್ಸಿಂಗ್ ಹೋಮಿನ ಕಡೆ ನಡೆದೆ. ಸುಮಾರು ಮೂರು ಕಿಲೋಮೀಟರು ದಾರಿ. ಆಚೀಚೆ ಬೆಳೆದ ಸೊಂಪಾದ ಮರಗಳು. ಸಂಜೆ ಏಳುಗಂಟೆಯ ಸಮಯ. ತಣ್ಣನೆ ಗಾಳಿ ಬೀಸಿ ನನ್ನ ನೋಯುವ ಗಾಯಗಳನ್ನು ಉದ್ರೇಕಿಸುತ್ತಿತ್ತು. ವಿನ್ಯಾಸ ಯಾತಕ್ಕೆ ನರ್ಸಿಂಗ್ ಹೋಮಿಗೆ ಹೋಗಿದ್ದಾಳೆ ಎನ್ನುವುದರ ಕುರಿತು ನಾನು ಚಿಂತಿಸಲಾರದಾಗಿದ್ದೆ. ಎಂದರೆ, ಸ್ಕೂಟರ್ನಿಂದ ಬಿದ್ದು ಒಂದು ತರದ ಶಾಕಿನಲ್ಲಿದ್ದೆ-ಇನ್ನೂ ಸಾಕಷ್ಟು ದೂರ ನಡೆದು ಒಂದು ಕಲ್ವರ್ಟ್‌ನ ಚಿಟ್ಟೆಯ ಮೇಲೆ ಕೂತುಕೊಂಡೆ. ಆ ಕ್ಷಣದಲ್ಲಿ ವಿಶ್ವವಿದ್ಯಾಲಯ, ಅಲ್ಲಿನ ಜನರು, ಜಗಳಗಳು, ವೀಸೀ-ಎಲ್ಲ ಬಹಳ ಅವಾಸ್ತವವಾಗಿ ನನಗೆ ಗೋಚರಿಸಿದುವು.
ನಂತರ ನರ್ಸಿಂಗ್ ಹೋಮಿಗೆ ತಲುಪಿ ವಿನ್ಯಾಸಳನ್ನು ಪತ್ತೆಹಚ್ಚಿದೆ. ಆಕೆ ನನ್ನ ಕೈನ ಜಖಮನ್ನು ಕಂಡು ತುಸು ಗಾಬರಿಯಾದಳು. ಸ್ಕೂಟರಿನಿಂದ ಬಿದ್ದ ಸಂಗತಿಯನ್ನು ಹೇಳಿದೆ. ಕೂಡಲೆ ವಿನ್ಯಾಸ ನನ್ನನ್ನು ಡಾಕ್ಟರ ಬಳಿ ಕರೆದೊಯ್ದು ಅಂಟೆ-ಟೆಟಾನಸ್ ಚುಚ್ಚುಮದ್ದು ಕೊಡಿಸಿದಳು. ಗಾಬರಿಗೆ ಕಾರಣವಿಲ್ಲ ಎಂದರು ಡಾಕ್ಟರರು. ಆಗಲೂ ನನಗೆ ವಿನ್ಯಾಸ ಈ ನರ್ಸಿಂಗ್ ಹೋಮ್‌ನಲ್ಲೇನು ಮಾಡುತ್ತಿದ್ದಾಳೆ ಎಂದು ಗೊತ್ತಾಗಲಿಲ್ಲ. ಡಾಕ್ಟರರ ಕೋಣೆಯಿಂದ ಹೊರಬರುತ್ತ ವಿನ್ಯಾಸ ಹೇಳಿದಳು-
“ಮೀನಾ ಹೆತ್ತಿದ್ದಾಳೆ”
“ಹೌದೆ?” ಎಂದೆ.
“ಗಂಡು ಮಗು. ನೋಡ್ತೀರ?”
ಮೀನಾ ಮಲಗಿದ್ದ ವಾರ್ಡಿಗೆ ಹೋದೆವು. ಮಂಚದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದಳು. ಪಕ್ಕದ ತೊಟ್ಟಿಲಲ್ಲಿದ್ದ ಮಗೂನೂ ನಿದ್ದೆ ಹೋಗಿತ್ತು. ನೋಡುತ್ತಲೆ ನಾನು ಆಘಾತದ ಶಾಕ್‌ಗೆ ಸಿಕ್ಕವನಂತೆ ಹೊರಬಂದೆ.
“ಈಕೇನ ನೋಡಿಕೊಳ್ಳೋದಕ್ಕೆ ಯಾರಾದರೂ ಇದ್ದಾರೆಯೆ?” ಎಂದು ಕೇಳಿದೆ.
“ಒಂದಿಬ್ಬರು ನರ್ಸುಗಳಿಗೆ ಸಾಕಷ್ಟು ತಿನಿಸಿದ್ದೇನೆ. ಅವರು ನೋಡಿಕೊಳ್ಳೋದಕ್ಕೆ ಒಪ್ಪಿದ್ದಾರೆ. ಕೆಲವು ಆಯಾಗಳಿಗೂ ಹೇಳಿದ್ದೇನೆ.”
“ಈಕೆ ಮನೇನಲ್ಲಿ ಮಕ್ಕಳನ್ನು ಯಾರು ನೋಡಿಕೊಳ್ತಾರೆ?”
“ಪಕ್ಕದ ಮನೆಯವರು ಒಳ್ಳೆಯವರಂತೆ, ಇವಳಿಗೆ ಊಟ ಅವರೇ ಕಳಿಸಲು ಒಪ್ಪಿದ್ದಾರೆ” ಎಂದಳು.
ವಿನ್ಯಾಸಳ ಎಫೀಶಿಯೆನ್ಸಿ ಕಂಡು ನನಗೆ ಹೆಮ್ಮೆಯೆನಿಸಿತು. “ಬಾ ಹೋಗೋಣ. ನಮ್ಮ ಮನೆಯಲ್ಲೇನಾಗಿದೆ ನೋಡೋಣ” ಎಂದೆ, ಮನೆ ತಲುಪಿದಾಗ ಮಕ್ಕಳು ಟಿವಿ ಮುಂದೆ ಕೂತು ತಮ್ಮ ಫೇವರೇಟ್ ಸೀರಿಯಲೊಂದನ್ನು ನೋಡುತ್ತಿದ್ದವು.
“ಮೀನಾಗೆ ಒಂದು ಪಾಪ ಹುಟ್ಟಿದೆ”, ಎಂದಳು ವಿನ್ಯಾಸ.
“ಏನು ಹೆಸರು?”
“ಇನ್ನೂ ಹೆಸರಿಟ್ಟಿಲ್ಲ. ಇಡುತ್ತಾಳೆ”
ಕೆಲವು ವಾರಗಳಿಂದ ಎಲ್ಲ ಮನೆಗೆಲಸವನ್ನೂ ವಿನ್ಯಾಸ ತಾನೇ ಮಾಡುತ್ತಿದ್ದಳು. ಈಗಿನ್ನು ಒಂದೆರಡು ತಿಂಗಳಾದರೂ ಆಗದೆ ಮೀನಾ ಮನೆಗೆಲಸಕ್ಕೆ ಬರುವ ಪ್ರಶ್ನೆಯೇ ಇರಲಿಲ್ಲವಾದ್ದರಿಂದ ತಾತ್ಕಾಲಿಕವಾಗಿ ಯಾರಾದರೂ ಸಿಗುತ್ತಾರೆಯೇ ಎಂದು ಹುಡುಕತೊಡಗಿದೆವು. ಭಾಗಮ್ಮ ಎಂಬಾಕೆ ಒಬ್ಬಳು ಸಿಕ್ಕಿದಳು. ಮೀನಾ ಬಂದಾಗ ಕೆಲಸ ಬಿಡಬೇಕಾಗುತ್ತದೆ ಎಂದು ಆಕೆಯನ್ನು ಒಪ್ಪಿಸಿಯೇ ಸೇರಿಸಿದ್ದು, ಆದರೆ, ಮೀನಾ ಮಾತ್ರ ನಂತರ ಕ್ಯಾಂಪಸ್ ಕಡೆ ಬರಲೇ ಇಲ್ಲ. ಬರದೇ ಇರೋದಕ್ಕೆ ಅವಳದೇ ಕಾರಣಗಳಿರಬಹುದು ಎಂದು ಕೊಂಡು ಸುಮ್ಮನಾದೆವು.
ಮೂರು ನಾಲಕ್ಕು ತಿಂಗಳು ಕಳೆದುವು. ಒಂದು ಸಂಜೆ ನಾನು ಆಫೀಸಿನಿಂದ ಮರಳಿದಾಗ ವಿನ್ಯಾಸ ಚಹಾದ ಜತೆ ಸ್ವಲ್ಪ ಸಿಹಿ ತಿಂಡಿಯನ್ನೂ ತಂದಳು.
“ಇವತ್ತು ಮೀನಾ ತನ್ನ ಮಗೂನ ಕರಕೊಂಡು ಬಂದಿದ್ಲು. ಕ್ಯಾಂಪಸ್‌ಗೆ ಬರೋದು ಕಷ್ಟವಾಗುತ್ತದೆ. ಆದ್ದರಿಂದ ಪಕ್ಕದ ಕೆಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ನಿಮ್ಮನ್ನು ಬಹಳ ಕೇಳಿದಳು.”
“ಹೌದೇ?”
“ಈ ಸಿಹಿ ತಿಂಡಿ ಅಕೇನೇ ತಂದುದು.”
“ಏನಂತೆ ವಿಶೇಷ?”
“ಮಗುವಿನ ನಾಮಕರಣವಾಯಿತಂತೆ”.
“ಏನು ಹೆಸರಿಟ್ಟಿದ್ದಾಳಂತೆ?”
“ಕೇಳಿದೆ. ನಮ್ಮ ಅಯ್ಯನ ಹೆಸರೇ ಇಟ್ಟಿದ್ದೇನೆ ಎಂದಳು.”
“ನಮ್ಮ ಅಯ್ಯನ ಹೆಸರೆ? ಹಾಗಂದರೆ?”
“ಹಾಗೆಂದರೆ ನಿಮ್ಮ ಹೆಸರು-ಪೃಥ್ವಿ”
“ಚೆನ್ನಾಯಿತು!” ಎಂದೆ. ವಿನನ್ಯಾಸಳ ಮುಖ ನೋಡುತ್ತ.
ಆದರೆ ವಿನ್ಯಾಸ ಮಾತ್ರ ಕೆಲವು ನುರಿತ ಇಸ್ಫೀಟು ಆಟಗಾರರಂತೆ, ಮುಖದಲ್ಲಿ ಯಾವ ಭಾವನೆಯನ್ನೂ ತೋರಿಸದೆ ತಟ್ಟೆಗಳನ್ನು ತೆಗೆದುಕೊಂಡು ಒಳಕ್ಕೆ ನಡೆದಳು. ನನ್ನ ಜತೆ ಏಗಾಡಿ ಇವಳ ಮುಖದ ಮೇಲೂ ಗೆರೆಗಳು ಬಿದ್ದಿವೆ ಎನಿಸಿತು.
*****









