Home / ಕಥೆ / ಸಣ್ಣ ಕಥೆ / ಸಿಂಹಗಡ

ಸಿಂಹಗಡ

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು.
ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು.
ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹೆಣ್ಣುಮಕ್ಕಳ ಮಾನ, ಮೊಗಲ ಬಿರುಗಾಳಿಯಲಿ ತೂರಿಹೋಗುವುದರಲಿದ್ದಾ ಕಾಲದಲಿ, ಮಹಾ ಚಲದಂತೆ ಎಡೆಗೊಟ್ಟು ಆ ಬಿರುಗಾಳಿಯ ಹುಟ್ಟಡಗಿಸಿದ ನರೋತ್ತಮನ ಪಾದರೇಣುವಿನಿಂದ ಧನ್ಯವಾದ ಪಾವನಕಾಯ ಸಿಂಹಗಡವೇ-ನಿನ್ನ ದರುಶನನೆನ್ನ ಕಂಗಳಿಗೆ ಗಂಗೆ!
ದಿನದಿನವು, ಉಷಾಂಗನೆಯ ಕಾಂತಿಮಯ ಮೃದುನಗೆಯ ಒಲವ ಕಾಣಿಕೆ ನಿನಗೆ ಸಲ್ಲುತಿದೆ ಮೊದಲು-ಸಹಜವಾಗಿ.
ದಿನದಿನವು ಬಾಲಾರ್‍ಕನ ಮಿಸುನಿದಿಟ್ಟಿಯ ಮೊದಲ ಪೂಜೆ ನಿನಗೆ ಸಲ್ಲುತಿದೆ ಮೊದಲು-ಉಚಿತವಾಗಿ.
ವೀರನಾಯಕ ಶಿವರಾಯನ ಧವಳಕೀರ್ತಿ ಕಾಲಚಕ್ರದುಪಟಳಕೆ ಸಿಲುಕದಂತೆ ಕಾಯುತಿಹ ನೆಚ್ಚಿನ ವೀರಭಟನಂತೆಸೆಯುತಿಹೆ! -ಓ, ದುರ್ಗರಾಜ!
ಆ ಸಮರವೀರನ ಸಾಹಸಕಥಾಲಹರಿ, ಆ ಧರ್ಮವೀರನ ಪುಣ್ಯ ಕಥಾಲಹರಿ ನಿನ್ನೆದೆಯ ಗೂಢಗುಹಾಂತರದಲುದ್ಭವಿಸಿ, ಕೂಡಿ ಹರಿಯುತಿಹ ದೃಶ್ಯ ಕುಣಿಯುತಿದೆಯೆನ್ನ ಚಿತ್ತನಯನದ ಮುಂದೆ!
ಆ ಸಂಕಟದ ಸಮಯದಲಿ ಧರ್‍ಮವನು ಹಿಡಿದೆತ್ತಿ ಆರ್ತರನು ರಕ್ಷಿಸಿ ಸಾಮ್ರಾಜ್ಯವನು ಕಟ್ಟಿದ ಛತ್ರಪತಿಗೆ ನೆರನಿತ್ತ ಸಾಮಂತನಲೆ ನೀನು!
ಜಯದಿಂದ ಜಯಕೆ ಹೆಜ್ಜೆ ಯಿಟ್ಟು ಮುಂದರಿದ ಜಗಜಟ್ಟಿಯ ಜಯಪತಾಕೆಯ ನೆಡಲು ನೆತ್ತಿಯ ಮೇಲೆ ತಾಣವನಿತ್ತ ಶೂರನಲೆ ನೀನು!
****
ಆದರಿಂದಾ ದೃಶ್ಯಗಳ- ಭಾವಗಳ ಹಿಂದೆ ಯಾವುದೋ ಖಿನ್ನತೆ ನಿನ್ನೊಡಲ ಬಿರಿಯುವಂತಿದೆ, ಎಲೆ ನಾಯಕದುರ್ಗ!
ಜೀವನದ ಸರ್‍ವಸ್ವವನೂ ಸೂರೆಗೊಂಡ ನಿರ್‍ಭಾಗ್ಯನ ದಾರುಣ ಮೋನದಂತಿಹುದು ನಿನ್ನ ನೀರವತೆ.
ಅಂದು ಲೀಲೆಯ ಮುಗಿಸಿ ಹೋದ ನಾಯಕನು ಮತ್ತೊಮ್ಮೆ ಬಂದೆಬರುವೆನೆಂಬೊಂದು ಅಚ್ಚಳಿಯದ ಭರವಸೆಯಲಿ ನಿರೀಕ್ಷಿಸುವಂತಿದೆ ಧರಣಿಯನು ಬಿಗಿದಪ್ಪಿ ನಿಶ್ಚಲದಿ ಮಲಗಿಹ ನಿನ್ನ ಪರಿಯ ನೋಡೆ.
ಅಂದಿನಾ ದಿನಗಳಲಿ ನಿನ್ನ ವೀರನಾಯಕನೊಡಗೂಡಿ ನೀನೆಸಗಿದ ಅತುಳ ಸಾಹಸಕಾರ್ಯಗಳ ನೆನಪು, ಇಂದಿನೀ ಮಂದಿಯ ಮನದಿಂದ ಮಾಯವಾದುದೇ!-ಎಂದು-
ಆ ಅಪ್ರತಿಮ ವೀರನಂದು ಸಾಧಿಸಿದ ರಾಷ್ಟ್ರದೈಕ್ಯತೆಯ ಬಂಧವನು ಇಂದು ಈ ಜನರು ಮೌಢ್ಯದಲಿ ಹರಿದೊಗೆದರೇ! ಎಂದು-
ಅಂದಿನಾ ಬಿರುಗಾಳಿಯಿಂದು ಅದಕು ಬಿರುಸಾಗಿ ಬೀಸುತ್ತ ನಾಡನು ದಿಕ್ಕೆಡಿಸುತಿಹುದೇ! ಎಂದು –
ಅಂದು ಸಾಮ್ರಾಜ್ಯವನು ಕಟ್ಟಿ ಧರ್‍ಮವನು ಹಿಡಿದೆತ್ತಿ, ಸ್ವಾತಂತ್ರ್ಯರಮಣಿಯಂಕದಲಿ ಮೆರೆದ ವೀರರ ವಂಶೋದ್ಭವರಿಂದು, ಧರ್ಮವನು ತುಳಿದು ದಾಸ್ಯದಾಸಿಯನಪ್ಪಿ ಹತವೀರ್‍ಯರಾದರೇ! ಎಂದು-
ಅಂದು ಜನ್ಮದಾತೆಯ ತುಂಬುಗೈಯಿಂದ ರಸಾನ್ನವನುಂಡ ಸುಖಿಗಳ ಕುಲಜಾತರಿಗಿಂದು ಹೆರವರೆಂಜಲ ಕೈ ಅಗುಳ ಕೂಳೆ ರುಚಿಯಾಯಿತೇ! ಎಂದು-
ಮರುಮರುಗಿ ಮಾತೆಯ ತೊಡೆಯಲಿ ಬಿದ್ದು ಗೋಳಿಡುವಂತಿದೆ, -ನಿನ್ನ ಪರಿಯ ನೋಡೆ!
  * * * *
ಪೂರ್‍ವೀಕರ ಶೌರ್‍ಯಸಾಹಸೋದ್ಯಮಗಳಿಗೆ ಚಿರಸಾಕ್ಷಿಯಾಗಿರುವ ಸಿಂಹಗಡವೇ ಮರುಗಿ ನೋಯದಿರು.
ಭಾರತಾಂಬೆಯ ವೀರಗರ್‍ಭಸುಧಾಂಬುಧಿಯು ಇಂಗಿಹೋಯ್ತೆಂದು ಕೊರಗಿ ಶಂಕಿಸದಿರು.
ಅದೋ ಕೇಳು!-ಆಲಿಸಿ ಕೇಳು!!
ಭರತವರ್ಷದ ಮೂಡಲಲಿ, ಸಡುವಲಲಿ, ತೆಂಕಣಲಿ, ಬಡಗಲಲಿ ತಂಡೋಪತಂಡ ಹುರಿಗೊಂಡ ನಾಡಮಕ್ಕಳ ಹರಿಗೊರಳ ಹುಂಕೃತಿಯ ನಾಲಿಸಿ ಕೇಳು!
ಸುಸಮಯ ಕೂಡಿಬರುತಿಹುದೆಂದು ತಾಳ್ಮೆದಾಳು!
ಲೋಕದಲಿ ಕುಗ್ಗಲು ಧರ್ಮ ಹಿಗ್ಗಲಧರ್ಮ ತಾನವತರಿಸಿ ತಿರೆಯ ಸಂಕಟವ ಅಳಿಪೆನೆಂದಭಯವಿತ್ತ ಅಸುರಾರಿ ತಾಯ ಬಸಿರಲಿ ಮತ್ತೊಮ್ಮೆ ಮೂಡದಿಹನೇ!
ಕಾಲದೌರ್‍ಭಾಗ್ಯದಿಂದೆ ಕಳೆಗುಂದಿದ ಜನ್ಮಭೂಮಿಯ ಅಮಲ ಕೀರ್ತಿ ನವತೇಜದಲಿ ದಿಗಂತಗಳ ದಾಂಟುತ ಮತ್ತೊಮ್ಮೆ ಬೆಳಗದಿಹುದೇ!
ಹೊಸತೊಂದು ಬೆಡಗಿನಲಿ-ಹೆಮ್ಮೆಯಲ್ಲಿ-ಗಾಂಭೀರ್‍ಯದಲಿ ಧರಣಿದೇವಿಯ ಸಿರಿಯಂಕರಂಗದೊಳು ಮತ್ತೊಮ್ಮೆ ಮೆರೆಯಳೇ ಭರತಭೂಮಾತೆ ಭುವಿಗಚ್ಚರಿಯ ಬೀರಿ!
ಎಲೆ ದುರ್ಗಶ್ರೇಷ್ಠ, ತಾ ಕಾಯುತಿಹ ಕಾಲ ಸನ್ನಿಹಿತವಾಗೆ, ಭಾರತಿಯ ಬಸಿರ ಪಾಲ್ಗಡಲಲಿ ಮತ್ತೊನ್ನೆ ರವಿಯಂತೆ ಮೂಡುವನು-ತಂದೆ.
ಆ ಕ್ಷಣದಿಂದ, ಅಮರರೂ ಕರುಬುವಂತೆ, ಬೆಳಗುವಳು- ಬೀರುವಳು- ಮೆರೆಯುವಳು-ನಲಿಯುವಳು, ನವತೇಜದಲಿ ರಾಜಿಪಳು- ತಾಯಿ ಭರತಾಂಬೆ.
ನಮೋ, ಅಚಲೇಂದ್ರ!
*****
Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...