(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು ಸಿದ್ಧರೇ ಅಂಥ ವರ್ಗದವರಲ್ಲೊಬ್ಬರು ನಮ್ಮ ರಾಮ ರಾಯರು ಇಲೆಕ್ಶನ್ನಿನ ಮೊದಲನೇ ದಿವಸ ಅವರಿಗೆ ಬಿದ್ದ ಕನಸಿದು)
…” ವಿಠಲ್ಯಾ, ಆ ಸ್ವಯಂಸೇವಕ ಯಾಕ ಬಂದಾನ ಬಾಗಲದಾಗ? ಹೊರಗ ಹಾಕು ಅವನ್ನ. ನಿಶಾನಿ ಪಿಶಾನಿ ಕಿತಿಗೊಂಡು ಹೋಗನ್ನು ರಾವಬಹಾದ್ದೂರರು ಬರೋ ಹೊತ್ತಾಗೇದ ಅಗೋ ಅವರ ಪಟ್ಟಾವಾಲಾ ಬಂದ! ಏ…ಎಲ್ಲೆ ಇದ್ದಿಯೇ ಚಹಾಕ್ಕೆ ಎಸರಿಡು. ಅಗೋ ಬಂದೇ ಬಿಟ್ಟರು ಬಹದ್ದೂರರು (ಮೆಲ್ಲಗೆ) ವಿಠಲ್ಯಾ, ನೂರಾರು ಮಂದಿ ದಿನಾ ನಮ್ಮಲ್ಲಿ ಚಹಾಕ್ಕೆ ಬರತಾರ ಆಂತ ಹೇಳೋಣ! ಆ! ಓಹೋ ಬನ್ನಿ ಬಹದ್ದೂರರೇ. ಛೇ, ಛೇ, ಅಷ್ಟು ದೂರ ಏಕೆ? ಮೇಲೆ ಬನ್ನಿರಿ. ವಿಠಲ್ಯಾ. ಆ ಆರಾಮ ಖುರ್ಚಿ ತಗೋ! ರಾಯರೆ, ಇವನೇ ನಮ್ಮ ಮಗ ವಿಠಲ್ಯಾ ನಮ್ಮ ದುರ್ದೈವ, ಐದು ವರ್ಷ ಆಯ್ತು ಮ್ಯಾಟ್ರಿಕ್ಕು ನಪಾಸಾಗಲಿಕೆ ಹತ್ತಿ, ಸತ್ಯನಾರಾಯಣ ಮಾಡಸತೇವಿ ಅಂತ ಬೇಡಿಕೊಂಡು ಆಯ್ತು ವೆಂಕಟರಮಣನ ಪಲ್ಲಕ್ಕಿ ಹೊಂಡಸತೇವಿ ಅಂತೆ ಕೇಳಿಕೊಂಡು ಆಯ್ತು. ಆದರ ನಸೀಬ ಬೇಕಲ್ಲಾ…… ಏನಂದ್ರಿ! ಹೌದು! ಹೌದು! ನೀವು ಅಂದ್ಹಾಂಗ ಇದೊಂದು ಲಾಟರೀ ಇದ್ಹಾಂಗದ. ಮುಖ್ಯ ಏನು ನಸೀಬ ಬೇಕು ನೋಡ್ರಿ ನಿಮ್ಮಂಥವರ ಸಹಾಯ ಅದ ಅಂದಮ್ಯಾಲ ನಾವೇನು ಹೆದರೋ ಕಾರಣ ಇಲ್ಲ. ನಿಮ್ಮ ಪುಣ್ಯೇದಿಂದ ಎಲ್ಲೆರೆ ನೌಕರೀ ಸಿಕ್ಕೇ ಸಿಗತದ! ನೀವರ ಏನು? ಮಗನಹಾಂಗ ತಿಳಕೊಂಡೀರಿ. ಅಂದ ಮ್ಯಾಲೆ ನಮಗ್ಯಾಕ ನೌಕರೀ ಕಾಳಜೀ? ನಾನೂ ಅವಗ ಬಜಾಯಿಸಿಟ್ಟೀನಿ ಹ್ಯಾಂಗರ ಒದ್ದಾಡಿ ನಿಮ್ಮನ್ನ ಆರಿಸಿತರಲಿಕ್ಕೇಬೇಕಂತ ಪಾಪ! ಅವನೂ ಬಹಾದ್ದೂರ ಹುಡುಗ ನೋಡಿರಿ. ಊಟದ ಪರಿವೀನೇ ಇಲ್ಲ. ಫರಾಳಾ ಚಹಾ ಇದರ ಮ್ಯಾಲೆ ಇದ್ದಾನ. ನೂರಾರು ಜನರ್‍ನ ಕರಕೊಂಡು ಬರತಾನ, ಚಹಾಕುಡಸತಾನ ಬುರುಡೇ ಕೊಚ್ಚಿ ಅವರ ಮನಸ್ಸು ಒಲಸತಾನ, ನೀವು ನಮ್ಮ ಬಾಜೂದ ಹೋಟಿನ ಸಲುವಾಗಿ ಕಾಳಜೀನ ಮಾಡಬ್ಯಾಡ್ರಿ. ಇಲ್ಲೆ ನೀವು ಬರೋದೂ ಅವಶ್ಯ ಇದ್ದಿಲ್ಲ. ಇದೆಲ್ಲಾ ಹೇಳಲಿಕ್ಕೆ ವಿಠಲ್ಯಾನೇ ನಾಳೆ ಬರತಕ್ಕವ ಇದ್ದ. ಇನ್ನ ಮ್ಯಾಲೆ ಇವತ್ತ ನಾಳೆ ಎರಡೇ ದಿವಸ ಖರ್ಚಿಗೆ ಭಾಳ ಬೇಕಾಗತದ….ಆ ಎಷ್ಟು ಕೊಟ್ಟಿರಿ? ಐದನೂರು ರೂಪಾಯಿನ? ಸಾಕು! ಸಾಕು! ಮತ್ತೆ ಬೇಕಾದರೆ ನಾಳೆ ನೋಡೋಣಂತೀ ರಾಯರ. ಮತ್ತೂ ಒಂದು ಮಾತು ನೀವು ಕೇಳತಿದ್ದಿರಲ್ಲಾ ಹಾರೂರು ಪಕ್ಕಾ ಅಂತ ಶುದ್ಧ ಸನಾತನಿಗಳ ಹೋಟು ಸಿಗತಾವೋ ಇಲ್ಲೋ ಅಂತ. ಹಾಂಗೇನು ತಿಳಿಯಬ್ಯಾಡ್ರಿ ನಾ ಸಹೀಮಾಡಿ ಒಂದು ಪತ್ರಿಕೆ ಹೊರಡಿಸಿ ಬಿಡತೇನಿ ಬಿಳೇ ಟೊಪ್ಪಿಯವರಿಗೆ ಹೋಟು ಕೊಡಬ್ಯಾಡ್ರಿ ಅಂತ “ಸೆರೆ ಸಿಂದಿ ಅಂಗಡಿ ಬಹಳ ಆಗ್ಯಾವ, ಸಾಲಿಕಡಿಮೆ ಆಗ್ಯಾವ, ತಂಬೂಕದ ಮೇಲೆ ಕರ ಹೆಚ್ಚಾಗೇದ, ರೈತರಿಗೆ ತುಂಬಾ ಗೋಳಾಟ ಆಗಿ ಜೀವ ಬೇಸರಾಗೇದ” ಅಂತ ಹೇಳಿ ಕಾಂಗ್ರೆಸ್ಸಿನವರು ಬೊಬ್ಬೀ ಹೊಡೀಲೊಲ್ಲರೇಕೆ? “ಕಾಂಗ್ರೆಸ್ಸಿನವರು ಅಂದ್ರ ಧರ್‍ಮ ಲಂಡರು” ಅಂತ ನಾ ಶರಾ ಹೊಡದು ಬಿಟ್ಟರೆ ಅವರ ಆಟ ಯಾರು ನಡಸತಾರ? ಅಲ್ರೀ ನಿಮ್ಮಷ್ಟು ಭಕ್ತಿಯಾರಿಗದ? ನಮ್ಮ ಮಠಕ್ಕಿಷ್ಟು ದೊಡ್ಡ ನಿಧಿ ನಿಮ್ಮಿಂದ ಸಹಾಯ ಸಿಕ್ಕರೆ ಸಾಕು. ಸನಾತನಿಗಳ ಹೋಟು ದಿಂಡರಕೀ ಉಳ್ಳಿ ಕೋತ ಬರತಾವ ಆ… ಹೋಗಿ ಒರ್‍ತೀರಾ ಇನ್ನು ಕಾಳಜೀ ಬಿಟ್ಟು ಬಿಡಿರಿ! ಆ!…ಏನಂದ್ರೀ.. ಇನ್ನೊಂದು ಐದುನೂರು ರೂಪಾಯಿ ಇರ್‍ಲೀ ಅಂತಿರಾ? ಹೌದು! ಹೌದು! ನೀವು ಅಂಬೋದು ಖರೆ! ಇಂಥಾ ಹೊತ್ನ್ಯಾಗ ಶಹಣೇತನಮಾಡಿ ಉಪಯೋಗ ಇಲ್ಲ, (ರಾವಬಹದ್ದೂರರು ಹೊರಟು ಹೋದ ಹಾಗೆ ಆಗುವದು.) ಏ….ಈ ಎಂಟನೂರು ರೂಪಾಯಿ ನಿನ್ನ ಟ್ರಂಕಿನ್ಯಾಗ ತಗದಿಡು ಬಾಕೀ ಎರಡನೂರು ರೂಪಾಯದಾಗ ಎಲ್ಲಾ ಮುಗಿಸಿ ಬಿಡುವದು. ನಗತೊಡಗುವನು ಅಷ್ಟರಲ್ಲಿಯೇ ಜಂತಿಯ ಮೇಲಿಂದ ಒಂದು ಚೇಳು ಹಾಗು ಹಲ್ಲಿಯ ಕಡಿದಾಟದಲ್ಲಿ ಚೇಳು ದೊಪ್ಪನೆ ರಾಮರಾಯನ ಬಲಗೈ ಮೇಲೆ ಬೀಳುವದು. ಬಲವಾಗಿ ಕುಟುಕಿ ಬಿಡುವದರಿಂದ ರಾಯನು ಎಚ್ಚತ್ತು ಹಯ್ಯಯ್ಯೊ! ಎಂದು ಕೂಗ ತೊಡಗುವನು.
ಆಗ ನಸುಕು ಹರಿದಿತ್ತು. ಇಲೆಕ್ಶನ್ನ ಮೋಟಾರುಗಳ ಹಾರ್‍ನುಗಳ ವಾದ್ಯವು ಒಂದೆಡೆಗೆ ರಾಷ್ಟ್ರಧ್ವಜವನ್ನು ಕೈಯಲ್ಲಿ ತೆಗೆದುಕೊಂಡು “ಭಾರತ ಮಾತಾಕೀ ಜಯ” ಎಂದು ಉತ್ಸಾಹದಿಂದ ಜೈಕಾರದೊಂದಿಗೆ ಹೋಗುವ ಪ್ರಚಂಡ ಮೆರವಣಿಗೆ ಮತ್ತೊಂದೆಡೆಗೆ
ಚೇಳಿನ ಹೊಡತ ನಿಲ್ಲಿಸುವದಕ್ಕಾಗಿ ರಾಮರಾಯನು ಅನೇಕ ಉಪಾಯಗಳನ್ನು ಮಾಡಿಕೊಂಡನು. ಆದರೂ ಚೇಳು ಬಲವಾಗಿ ಕಡಿದದ್ದರಿಂದ ನಿರುಪಾಯನಾಗಿ ನರಳಾಡುತ್ತ ಬಿದ್ದುಕೊಂಡಿದ್ದನು. ಪೋಲಿಂಗ ಸ್ಟೇಶನ್ನಿನ ನದಾರಿಯು ಅವರ ಮನೆಯ ಮೇಲಿಂದಲೇ ಹಾದು ಹೋಗಿದ್ದಿತ್ತು. ಅವನಿಗೆ ಜನಸಮೂಹವೆಲ್ಲವೂ ಒಡೆದು ಕಾಣುವಂತಿತ್ತು ನೋಡುತ್ತಾ. ಖಿಸಕಿಯ ಮೇಲೆ ಕುಳಿತುಕೊಂಡಿದ್ದ. ಎತ್ತ ನೋಡಿದತ್ತ ರಾಷ್ಟ್ರ ಧ್ವಜಗಳೇ ಕಾಣುತ್ತಿದ್ದವು. ಕಾಂಗ್ರೆಸ್ಸ ಜನರೊಡನೆ ನಡೆದಂಥ ಜನರೇ ತುಂಬಾ ಇದ್ದರು. ಕಾಂಗ್ರೆಸ್ಸೇತರರ ಮೋಟಾರುಗಳು ಬರಿದಾಗಿಯೇ ಇದ್ದವು ರಾಯನಿಗನಿಸಿತು. ನನ್ನಂಥ ಸ್ವಾರ್ಥಿಗಳ ಮನಸ್ಸಿನಲ್ಲಿದ್ದ ಕಲ್ಪನೆಗಳೆಲ್ಲ ಬ್ರಾಂತಿ! ಕನಸು! ಜನರು ಮೊದಲಿನಂಕೆ ಪೊಳ್ಳಮಾತಿಗೆ ಮೋಸಹೋಗುವ ದಿವಸಗಳಿನ್ನು ಉಳಿದಿಲ್ಲ. ಕಾಂಗ್ರೆಸ್ಸಿನ ಮುಂದೆ ಯಾರ ಆಟನೂ ನಡೆಯುವದಿಲ್ಲ. ದೇಶಕ್ಕಾಗಿ ಅದು ಜೇಲು ಅನಿಭವಿಸಿದೆ, ಪ್ರಾಣ ಕೊಡಲು ಸಿದ್ಧವಿದೆ.
ಇವೇ ಮೊದಲಾದ ಯೋಚನೆಗಳಲ್ಲಿ ರಾಮರಾಯ ಮುಳುಗಿ ಹೋಗಿದ್ದ, ಮುಂದೆ ಅವನ ವಿಚಾರಗಳು ಮಾರ್‍ಪಾಟಾಗಿ ಅವನು ಕಾಂಗ್ರೆಸಿನವನಾದನೆಂದು ವದಂತಿಯೂ ಉಂಟು.
*****









