ಡಿ. ಸಿ. ಸಾಹೇಬ್ರು ಒಳಗೆ ಯಾವುದೋ ಮೀಟಿಂಗ್‌ನಲ್ಲಿದ್ದಾರೆ ಅಂತ ಗೊತ್ತಾದ ಮೇಲೆ, ತಾವು ಈಗ ಒಳಹೋಗುವುದು ಉಚಿತವೋ ಅಲ್ಲವೋ ಎಂದು ದ್ವಂದ್ವ ಮನದಿಂದ ದೇಸಾಯಿಯವರು ಚಡಪಡಿಸಹತ್ತಿದರು. ತಡವಾದಷ್ಟು ಅನರ್ಥವೆಂದು ಅರಿವಿದ್ದರೂ ಅಸಹಾಯಕರಾಗಿ ನಿಂತೇ ಇದ್ದರು. ಆಶ್ರಮದ ಪರಿಸ್ಥಿತಿ ಕಣ್ಣಿಗೆ ಕಟ್ಟಿದಂತಾಗಿ ಏನಾದರಾಗಲಿ ಎಂದು ಒಳನುಗ್ಗಿಯೇ ಬಿಟ್ಟರು.
ದೇಸಾಯಿಯವರನ್ನು ಕಂಡ ಡಿ. ಸಿ. ಸಾಹೇಬರು “ಬನ್ನಿ ಬನ್ನಿ, ಇಷ್ಟು ದೂರ ಬಂದುಬಿಟ್ಟಿರಲ್ಲ. ಆಶ್ರಮದಲ್ಲಿ ಏನಾದರೂ ಪ್ರಾಬ್ಲಂ? ನಿಮ್ಗೆ ಫೋನ್ ಮಾಡೋಣ
ಅಂತೆ ಇದ್ದೆ. ನಿಮ್ಮ ಆಶ್ರಮಕ್ಕೆ ಇನ್ನೂ ನಾಲ್ಕು ಕೊಠಡಿ ಕಟ್ಟಿಸೋಕೆ ಮುಖ್ಯಮಂತ್ರಿ ನಿಧಿಯಿಂದ ಹಣ ಸ್ಯಾಂಕ್ಷನ್ ಮಾಡಿದ್ದಾರೆ. ನಾನು ಕೇಳಿದ ಕೂಡಲೇ ಮುಖ್ಯಮಂತ್ರಿಗಳು ಒಪ್ಪಿಕೊಂಡು ಬಿಟ್ಟರು. ನಿಮ್ಮ ಕಾರ್ಯಕ್ಕೆ ತಮ್ಮದೊಂದು ಅಳಿಲು ಸೇವೆ ಇರಲಿ ಆಂತ” ದೇಸಾಯಿಯವರಿಗೆ ಮಾತಾಡೋಕು ಬಿಡದೆ ತಾವೇ ಮಾತಾಡಿಬಿಟ್ಟರು.
ಇವರಿಗೆ ಹ್ಯಾಗೆ ವಿಚಾರ ತಿಳಿಸಲಿ. ಅದೂ ಮೀಟಿಂಗ್ನಲ್ಲಿ ಇಷ್ಟೊಂದು ಜನ ಇದ್ದಾರೆ. ಅವರ ಮುಂದೆ ಏನಂತ ಹೇಳಲಿ. ಡಿ. ಸಿ ಸಾಹೇಬ್ರು ಎಷ್ಟೊಂದು ಒಳ್ಳೆಯವರು ಅಂದ್ಕೊಂಡಿದ್ದೆ. ಆದ್ರೆ ಯಾಕಿಂಥ ಕೆಲ್ಸ ಮಾಡಿಬಿಟ್ಟಿದ್ದಾರೆ… ಚಡಪಡಿಕೆ ಹೆಚ್ಚಾಯಿತು. ಅರೆ! ನಾನು ಸಂತೋಷ ಪಡುವ ವಿಚಾರ ಹೇಳಿದರೆ ಇವರ್ಯಾಕೆ ಪೆಚ್ಚಾಗಿ ನಿಂತಿದ್ದಾರೆ. ಅರ್ಥವಾಗದೆ…. “ದೇಸಾಯಿಯವರೇ, ಅದೇನು ಸಮಸ್ಯೆ ಹೇಳಿ, ಸಂಕೋಚ ಬೇಡ” ಒತ್ತಾಯಿಸಿದರು.
“ಅದು… ಅದು….” ಉಗುಳು ನುಂಗಿದರು. ಮತ್ತೆ ಸಾವರಿಸಿಕೊಂಡು “ಸ್ವಾಮಿ, ತುಂಬಾ ವೈಯಕ್ತಿಕವಾದ ವಿಷಯ, ನಿಮ್ಮೊಬ್ಬರಿಗೆ ಮಾತ್ರ ಹೇಳುವಂತಹದ್ದು”
ಒಂದೊಂದೇ ಪದವನ್ನು ಬಿಡಿಸಿ ಹೇಳಿದರು.
ಅಚ್ಚರಿಯಿಂದ ದೇಸಾಯಿಯವರನ್ನು ದಿಟ್ಟಿಸಿದ ಸಾಹೇಬರಿಗೆ ಏನೆನಿಸಿತೋ ಅಲ್ಲಿದ್ದವರತ್ತ ತಿರುಗಿ “ಇವತ್ತಿಗೆ ಈ ಚರ್ಚೆ ಸಾಕು, ನಾಳೆ ಮುಂದುವರಿಸೋಣ, ನೀವಿನ್ನು ಹೊರಡಿ” ಎಂದರು.
ಒಬ್ಬೊಬ್ಬರಾಗಿ ಎದ್ದು ಎಲ್ಲರೂ ಹೊರನಡೆದರು. ಈಗ ಛೇಂಬರಿನಲ್ಲಿ ಡಿ. ಸಿ. ಹಾಗೂ ದೇಸಾಯಿ ಇಬ್ಬರೇ. “ಸರಿ ಈಗ ಹೇಳಿ ಅದೇನು ವಿಷಯ ಅಂತ. ಕುತ್ಕೊಂಡು
ನಿಧಾನಕ್ಕೆ ಹೇಳಿ” ಎಂದರು ಗಂಭೀರವಾಗಿ.
ಅವರ ಆ ಗಾಂಭೀರ್ಯ ದೇಸಾಯಿಯವರನ್ನು ಅಧೈರ್ಯಗೊಳಿಸಿತು. ತಾನು ತಪ್ಪು ಮಾಡುತ್ತಿದ್ದೇನಾ, ಆಕೆಯ ಮಾತನ್ನು ನಂಬಿ ನಾನು ಬಂದಿರುವುದು ಅನರ್ಥವಾದರೆ?
ದೇವರೇ ಯಾಕಪ್ಪ ನನ್ನನ್ನು ಈ ಇಕ್ಕಟ್ಟಿಗೆ ಸಿಲುಕಿಸಿದೆ. ದೈವವನ್ನು ಶಪಿಸಿದರು. ಡಿ. ಸಿ. ಸಾಹೇಬರ ಬಗ್ಗೆ ಇದ್ದ ಗೌರವ, ವಿಶ್ವಾಸಗಳೆಲ್ಲ ಆಕೆಯ ಮಾತಿನಿಂದ ಗಾಳಿಗೆ ತೂರಿದಂತಾಗಿತ್ತು. ಆ ಜಾಗದಲ್ಲಿ ಈಗ ತಿರಸ್ಕಾರ ಮೂಡಿತ್ತು. ಆದರೆ ಅದನ್ನು ತೋರಿಸಿಕೊಳ್ಳುವಂತಿಲ್ಲ. ಮಾನ್ಯ ಜಿಲ್ಲಾಧಿಕಾರಿಗಳ ಹತ್ತಿರ ಮನದ ಭಾವಗಳನ್ನು ತೋರಿಸಿಕೊಳ್ಳಲಾದೀತೇ? ಹಾಗೆಂದೇ ಮಾತುಗಳಲ್ಲಿ ಗೌರವ ತುಂಬುತ್ತ ವಿಶ್ವಾಸದಿಂದ ಹೇಳತೊಡಗಿದರು.
“ಸ್ವಾಮಿ, ಇದನ್ನು ಹೇಗೆ ಹೇಳಬೇಕೋ ಅಂತ ಗೊತ್ತಾಗ್ತಾ ಇಲ್ಲ. ಆದರೆ ಹೇಳದೆ ವಿಧಿ ಇಲ್ಲ. ಹೇಳಲೇ ಬೇಕಾದ ಪ್ರಸಂಗ ಬಂದುಬಿಟ್ಟಿದೆ. ಈ ಆರು ತಿಂಗಳ ಕೆಳಗೆ ಒಬ್ಬ ಶ್ರೀಮಂತ ಮಹಿಳೆ ನಮ್ಮ ಆಶ್ರಮಕ್ಕೆ ನನಗೆ ಯಾರೂ ಇಲ್ಲ, ನಾನೊಬ್ಬ ಅನಾಥೆ ಅಂತ ಬಂದು ಸೇರಿಕೊಂಡಳು. ಆಶ್ರಮಕ್ಕೆ ಧಾರಾಳವಾಗಿ ಹಣ ಕೊಟ್ಟಿದ್ದಾಳೆ. ಬದುಕಿನಲ್ಲಿ ಆಸಕ್ತಿ ಕಳೆದುಕೊಂಡಿರೋ ಆ ಹೆಣ್ಣು ವಿರಾಗಿಣಿಯಂತೆ ಜೀವನ ಮಾಡ್ತಾ ಇದ್ದಾಳೆ. ಸದಾ ಒಳಗೇ ಇರೋ ಆಕೆ ಆಶ್ರಮದ ಹೊರಗೆ ಕಾಣಿಸಿಕೊಳ್ಳುವುದೇ ಅಪರೂಪ. ಹಾಗೆಂದೇ ನೀವು ಆಶ್ರಮಕ್ಕೆ ಬಂದಾಗಲೆಲ್ಲ ಆಕೆನಾ ನೋಡಿಯೇ ಇಲ್ಲ. ಒಂಟಿಯಾಗಿರೋದು ಆಕೆಯ ಸ್ವಭಾವ ಅಂತ ನಾವ್ಯಾರು ಅದಕ್ಕಾಗಿ
ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಪರಿಸ್ಥಿತಿ ಗಂಭೀರವಾಗಿದೆ. ಆಕೆಯ ಕೊನೆಗಾಲ ಹತ್ತಿರವಾಗಿದೆ. ಸಾವು ಬದುಕಿನ ನಡುವೆ ಹೋರಾಡ್ತಾ ಇದ್ದಾಳೆ. ಆಕೆಯ ಅಂತಿಮ ಬಯಕೆ ಅಂದ್ರೆ ಆಕೆ ತನ್ನ ಮಗನನ್ನು ನೋಡಬೇಕಂತೆ” ಮಾತು ನಿಲ್ಲಿಸಿದರು.
ಕುತೂಹಲದಿಂವ ಕೇಳುತ್ತಿದ್ದ ಸಾಹೇಬರು “ಅದಕ್ಕೇನಂತೆ ಕರೆಸಿ, ಆಕೆಯ ಮಗ ಬರಲ್ಲ ಅಂತ ಇದ್ದಾನಾ, ಅವನನ್ನು ಕರೆಸೋಕೆ ನಾನು ಸಹಾಯ ಮಾಡಬೇಕಾ? ನನ್ನಿಂದ ಏನಾಗಬೇಕು ಹೇಳಿ” ಕೇಳಿದರು. “ಆದ್ರೆ ಒಂದು ಸಮಸ್ಯೆ ಆಗಿಬಿಟ್ಟಿದೆ ಸ್ವಾಮಿ. ಆಕೆ ಯಾರನ್ನು ತನ್ನ ಮಗ ಅಂದಳೋ ಅವರತ್ರ ಈ ವಿಚಾರ ಹೇಳೋದೇ ಕಷ್ಟವಾಗಿ ಬಿಟ್ಟಿದೆ” ಪ್ರಯಾಸದಿಂದ ನುಡಿದರು.
“ಅಲ್ರಿ ದೇಸಾಯಿಯವರೇ, ಆಕೆ ಸಾವು-ನೋವಿನ ನಡುವೆ ಇದ್ದಾಳೆ. ಆಕೆ ಕೊನೆ ಆಸೆ ಈಡೇರಿಸಬೇಕು ಅಲ್ಲವೇ, ಆಕೆ ಕೇಳಬಾರದ್ದೇನು ಕೇಳ್ತಾ ಇದ್ದಾಳಾ. ಹೆತ್ತ ಮಗನನ್ನು ನೋಡಬೇಕು ಅಂತ ಇದ್ದಾಳೆ ಅಷ್ಟೇ ತಾನೇ, ಅದಕ್ಕೆ ಏರ್ಪಾಡು ಮಾಡಿ, ಈ ವಿಷಯದಲ್ಲಿ ಮೀನಾ ಮೇಷ ಏಕೆ?” ಅಸಮಾಧಾನಗೊಂಡರು. ಅವರ ಅಸಹನೆ ದೇಸಾಯಿಯವರನ್ನು ಕಂಗೆಡಿಸಿ….. “ಮೀನಾ ಮೇಷ ಅಲ್ಲಾ ಸ್ವಾಮಿ. ಆಕೆ ನಿಮ್ಮನ್ನು ನನ್ನ ಮಗ ಅಂತ ಇದ್ದಾಳೆ. ನಾನೇ ಅವರ ತಾಯಿ, ಸಾಯೋ ಮೊದಲು ನಿಮ್ಮನ್ನು ನೋಡಬೇಕು ಅಂತಿದ್ದಾಳೆ. ಅವಳೇ ನಿಮ್ಮ ತಾಯಿ ಆಗಿದ್ರೆ ಯಾಕೆ ಸ್ವಾಮಿ ಹೆತ್ತ ತಾಯಿನ ಬೀದಿಪಾಲು ಮಾಡಿಬಿಟ್ರಿ” ಎದೆಯೊಳಗಿದ್ದದ್ದನ್ನೆಲ್ಲ ಕಕ್ಕಿಬಿಟ್ಟರು. ಈಗ ಅವರೆದೆ ಹಗುರವಾಯಿತು.
ಇಡೀ ಕೋಣೇ ಸ್ತಬ್ಧವಾಗಿ ಬಿಟ್ಟಿತು. ಇವರಿಬ್ಬರ ಉಸಿರಾಟ ಬಿಟ್ಟರೇ ಬೇರೇನೂ ಕೇಳಿಸುತ್ತಿಲ್ಲ. ಆಘಾತ ಹೊಂದಿದವರಂತೆ ಸಾಹೇಬರು ಮೌನವಾಗಿದ್ದಾರೆ. ದೇಸಾಯಿಗಳ ಬಾಯಲ್ಲಿ ಇಂತಹ ಮಾತೇ! ಆ ಮಾತುಗಳಲ್ಲಿ ಮೊನಚು, ವಿಷಾದ, ವ್ಯಂಗ್ಯ ಎಲ್ಲವೂ ತುಂಬಿದಂತಿತ್ತು. ಈ ದೇಸಾಯಿಯವರೇನೋ ನೆನ್ನೆ ಮೊನ್ನೆ ಪರಿಚಯವಾದವರಲ್ಲ, ತನ್ನ ಬಗ್ಗೆ ಎಷ್ಟೊಂದು ಗೌರವ, ಆದರ ಇಟ್ಟುಕೊಂಡಿರುವ ಬಹಳ ತೂಕದ ವ್ಯಕ್ತಿ.
ಸಮಾಜದ ಸೇವೆಗಾಗಿ ತನ್ನದೆಲ್ಲವನ್ನು ಮುಡಿಪಾಗಿಟ್ಟು, ನೆಲೆ ತಪ್ಪಿದ ವೃದ್ಧರಿಗೆಲ್ಲ ನೆಲೆ ಒದಗಿಸಿದ ಕರುಣಾಮಯಿ. ಅಲ್ಲಿರುವರೆಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಹೃದಯವಂತ. ಯಾರೊಬ್ಬರ ಬಗ್ಗೆಯೂ ಹಗುರವಾಗಿ, ಧೋರಣೆಯಿಂದ ಮಾತನಾಡದ ವ್ಯಕ್ತಿ ಇಂದು ತನ್ನ ಬಗ್ಗೆ… ಛೇ ಛೇ ವಿಹ್ವಲರಾದರು. ತಟ್ಟನೆ ಏನನ್ನೋ ನಿರ್ಧರಿಸಿಕೊಂಡವರೇ.
“ದೇಸಾಯಿಯವರೇ, ಬನ್ನಿ ನನ್ನ ಜೊತೆ” ಎಂದವರೇ ಹೊರಗೆ ಬಂದು ಕಾರಿನಲ್ಲಿ ಕುಳಿತರು. ದೇಸಾಯಿಯವರು ಅವರನ್ನು ಹಿಂಬಾಲಿಸಿ ಬಂದು ಕಾರನ್ನು ಏರಿದರು.
ಕಾರು ಬರ್ರನೆ ಓಡಿ ಸಾಹೇಬರ ಮನೆಯ ಮುಂದೆ ನಿಂತಿತು. “ಬನ್ನಿ ದೇಸಾಯಿಯವರೇ, ಹೀಗೆ ಬನ್ನಿ” ಎಂದು ಒಳಗೆ ಕರೆದೊಯ್ದು ಕೋಣೆಯೊಂದರ ಒಳಗೆ ಹೋದರು. ಅಲ್ಲಿ ಮಂಚದ ಮೇಲೆ ಹಣ್ಣು ಹಣ್ಣಾದ ವೃದ್ಧೆ ಒಬ್ಬಾಕೆ ಮಲಗಿದ್ದರು. ಶ್ರೀಮಂತಿಕೆ ಆ ಕೋಣೆಯಲ್ಲಿ ಹಾಸು ಹೊಕ್ಕಿತ್ತು. ಬೆಲೆ ಬಾಳುವ ಮಂಚ, ಆ ಮಂಚಕ್ಕೆ ಮೇಲಿನಿಂದ ತೂಗುಬಿಟ್ಟಿರುವ ಸೊಳ್ಳೆ ಪರದೆ, ಅಲ್ಲಿಯೇ ಮೂಲೆಯಲ್ಲಿ ಬಣ್ಣದ ಟಿ. ವಿ., ಬಂದವರು ಕುಳಿತುಕೊಳ್ಳಲು ಸೋಫಾ, ಬೇಸರವಾದರೆ ತೂಗಿಕೊಳ್ಳುವ ಉಯ್ಯಾಲೆ, ಫ್ಲಾಸ್ಕಿನಲ್ಲಿ ಕಾಫಿಯೊ, ಹಾಲೋ… ಹಣ್ಣುಗಳು, ಬ್ರೆಡ್, ಬಿಸ್ಕತ್ತಿನ ಪೊಟ್ಟಣಗಳು, ಆಬ್ಬಾ! ಎನ್ನುತ್ತಾ ನಿಧಾನವಾಗಿ ಅವಲೋಕಿಸಿದರು.
ಅಷ್ಟರಲ್ಲಿ ಒಳ ಬಂದಾಕೆ ನರ್ಸ್ ಇರಬೇಕು “ಈಗ ತಾನೇ ಸ್ನಾನ ಮಾಡಿಸಿದ್ದೇನೆ ಸಾರ್, ಅವರು ಎದ್ದ ಮೇಲೆ ಬಿಸಿ ಅನ್ನ ತಿಳಿಸಾರು ಕೊಡುತ್ತೇನೆ” ಎಂದಳು.
“ನೋಡಿದ್ರಾ ದೇಸಾಯಿಯವರೇ, ನನ್ನ ತಾಯಿ ಈಕೆ. ನನ್ನ ತಾಯಿ ಇಲ್ಲಿರುವಾಗ ಬೇರೆ ಯಾರೋ ನನ್ನಮ್ಮ ಆಗೋಕೆ ಸಾಧ್ಯಾನಾ” ನಿಧಾನವಾಗಿ ಹೇಳಿದರು.
ಅವರ ಮಾತು ನಿಜ ಅಂತ ಅನ್ನಿಸಿ ಛೀ ತಾನು ಸುಮ್ಮನೆ ಸಾಹೇಬರ ಮೇಲೆ ಅಪಾರ್ಥ ಮಾಡಿಕೊಂಡೆನಲ್ಲ. ಯಾವ ಮಗ ಈ ವಿಚಾರದಲ್ಲಿ ಸುಳ್ಳು ಹೇಳಿಯಾನು?
ಯಾರಿಗೂ ಇಬ್ಬಿಬ್ಬರು ತಾಯಿಂದಿರು ಇರಲಾರರು. ಮತ್ತೆ ದ್ವಂದ್ವ ಕಾಡಿತು. ಹಾಗಾದರೆ ಆಕೆಯೇಕೆ ಹಾಗೆ ಹೇಳಿದಳು. ಸಾವಿನ ಸಮೀಪ ಇರುವ ಆಕೆ ಸುಳ್ಳು ಹೇಳುತ್ತಿರುವಳೇ. ಎಲ್ಲಾ ಗೋಜಲು ಗೋಜಲು ಎನಿಸಿತು.
“ದಯವಿಟ್ಟು ಕ್ಷಮಿಸಿ ಸ್ವಾಮಿ. ತಪ್ಪಾಗಿ ತಿಳಿದುಬಿಟ್ಟಿದ್ದೆ. ನಾನಿನ್ನು ಬರ್ತೀನಿ ಸ್ವಾಮಿ” ಹೊರಡಲು ಅನುವಾದರು ಏನೂ ತೋಚದೆ,
“ಕಾರಲ್ಲಿ ಬಿಡ್ತಿನಿ ಇರಿ” ಎಂದವರೇ ಡ್ರೈವರ್ ಕರೆದು ದೇಸಾಯಿಯವರನ್ನು ಆಶ್ರಮಕ್ಕೆ ತಲುಪಿಸಲು ಆದೇಶಿಸಿದರು.
ಸೀದಾ ಆಕೆಯ ಕೋಣೆಗೆ ಬಂದರು ದೇಸಾಯಿಗಳು. ಬಾಗಿಲ ಕಡೆಯೇ ಕಣ್ಣು ನೆಟ್ಟಿದ್ದ ಆಕೆಯ ಮುಖ ಅವರೊಬ್ಬರನ್ನೇ ನೋಡಿ ನಿರಾಶೆಯಿಂದ ಬಾಡಿತು.
“ಅಲ್ಲಾ ತಾಯಿ, ಸಾಹೇಬರ ತಾಯಿ ಅವರ ಮನೆಯಲ್ಲಿಯೇ ಇದ್ದಾರೆ. ನಾನೇ ನನ್ನ ಕಣ್ಣಾರೆ ನೋಡಿ ಬಂದೆ. ನೀವು ನೋಡಿದ್ರೆ ನಾನೇ ಅವರ ತಾಯಿ ಅಂತೀರಲ್ಲಾ?”
ಆಕ್ಷೇಪಣೆಯ ಸ್ವರದಲ್ಲಿ ಹೇಳಿದರು.
“ನಂಗೆ ಚೆನ್ನಾಗಿ ಗೊತ್ತಿತ್ತು. ಅವನು ಬರಲ್ಲ ಅಂತ. ಅವನ ಮನಸ್ಸು ಕಲ್ಲಾಗಿದೆ. ನಾನು ಹೆತ್ತ ತಾಯಿ ಮಾಡಬೇಕಾದ ಕರ್ತವ್ಯ ಮಾಡಿದ್ರೆ ತಾನೇ ಅವನು ಮಗ
ಮಾಡಬೇಕಾದ ಕರ್ತವ್ಯ ಮಾಡೋದು. ಒಟ್ಟಿನಲ್ಲಿ ನಾನು ಪಾಪಿ. ಹೆತ್ತ ಮಗನ್ನ ನೋಡದೆ ಹೊರಟು ಹೋಗ್ತಿನೇನೊ” ಕಣ್ಣೀರಿಟ್ಟಳು.
“ಅಲ್ಲಮ್ಮ, ಒಬ್ಬ ವೃಕ್ತಿಗೆ ಇಬ್ಬಿಬ್ಬರು ತಾಯಿ ಇರೋಕೆ ಸಾಧ್ಯಾನಾ, ಆತ ತಾಯಿನ ಸುಖದ ಸುಪ್ಪತ್ತಿಗೇಲಿ ಇಟ್ಟು ಸಾಕ್ತಾ ಇದ್ದಾರೆ. ನೋಡ್ತಾ ಇದ್ರೆ ಹೃದಯ ತುಂಬಿ ಬರುತ್ತೆ” ಅಭಿಮಾನಿಸಿದರು.
“ಅದೃಷ್ಟವಂತೆ ಅವಳು. ಅದು ಅವಳು ಪಡೆದು ಬಂದದ್ದು. ನಾನು ನನ್ನ ಕೈಯಾರೆ ಕಳೆದುಕೊಂಡದ್ದು” ನೋವಿನಿಂವ ನರಳಿದಳು. ಪಶ್ಚಾತ್ತಾಪ ಅಲ್ಲಿ ಗಾಢವಾಗಿತ್ತು.
ಆಕೆಯ ಮಾತು ಒಗಟಿನಂತಿತ್ತು. ಆಕೆಯ ನೋವು, ಕಣ್ಣೀರು, ಅಸಹಾಯಕತೆ, ಪಶ್ಚಾತ್ತಾಪದ ಮಾತುಗಳು ಎಲ್ಲವನ್ನು ನೋಡುತ್ತಿದ್ದರೆ, ಇದರೊಳಗೇನೋ ಮರ್ಮವಿದೆ
ಎನಿಸಿ ಕೆದಕುವ ಮನಸ್ಸಾಯಿತು. ಆದರೆ ಈಕೆ ಬಾಯಿ ಬಿಡುವ ಸ್ವಭಾವದವಳಲ್ಲ ಅಂತ ಗೊತ್ತಾದ ಮೇಲೆ ಮೂಲ ಎಲ್ಲಿ ಎಂದು ಹುಡುಕಲು ಅಣಿಯಾದರು. ರಾತ್ರಿಯೆಲ್ಲ ನಿದ್ರಿಸಲಾಗಲೇ ಇಲ್ಲ. ಬೆಳಗ್ಗೆಯೇ ಡಿ. ಸಿ. ಸಾಹೇಬರ ಮನೆ ಮುಂದೆ ಇದ್ದರು ದೇಸಾಯಿ ವಾಕ್ ಹೊರಟಿದ್ದ ಸಾಹೇಬರು ಜಾಗಿಂಗ್ ಡ್ರೆಸ್ಸಿನಲ್ಲಿದ್ದರು. ದೇಸಾಯಿಯವರನ್ನು ಕಂಡು ಅಚ್ಚರಿಗೊಳ್ಳದೆ “ಬನ್ನಿ ಬನ್ನಿ” ಎಂದು ಸ್ವಾಗತಿಸಿದರು. ಅವರ ಬರುವನ್ನು ನಿರೀಕ್ಷಿಸಿದಂತಿತ್ತು ಅವರ ಸ್ವರ.
“ಜಾಗಿಂಗ್ ಮುಗಿಸಿ ಬತೀನಿ, ಒಳಗಡೆ ಕುಳಿತಿರಿ” ಎಂದಾಗ “ಇಲ್ಲಾ ಇಲ್ಲಾ, ನಾನೂ ನಿಮ್ಮ ಜೊತೆನೆ ಬರ್ತೀನಿ, ಇವತ್ತೊಂದು ದಿನ ಓಡೋದು ಬಿಟ್ಟು ನನ್ನ ಜೊತೆ
ನಡ್ಕೊಂಡು ಬನ್ನಿ” ಎಂದು ದೇಸಾಯಿ ಡಿ. ಸಿ. ಯವರ ಜೊತೆ ನಡೆಯಲಾರಂಭಿಸಿದರು. ನಡೆಯುವುದೇನು ಕಷ್ಟವಲ್ಲ ದೇಸಾಯಿಯವರಿಗೆ. ಪ್ರತಿನಿತ್ಯ ಏಳೆಂಟು ಕಿಲೋಮೀಟರ್ ನಡೆದ ದೇಹವದು.
ಜೊತೆಜೊತೆಗೆ ಹೆಜ್ಜೆ ಹಾಕುತ್ತಿದ್ದರೂ, ಮನಸ್ಸು ಗೊಂದಲದ ಜೇನುಗೂಡಾಗಿತ್ತು. ಸ್ಪಷ್ಟೀಕರಿಸಿಕೊಳ್ಳುವ ತುಡಿತ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ತಾವೇ ಮೊದಲು ಮಾತನಾಡಲು ಶುರು ಹಚ್ಚಿದರು.
“ಸ್ವಾಮಿ, ನಿಮ್ಮ ಬಗ್ಗೆ ನಂಗೆ ಒಳ್ಳೆ ಅಭಿಪ್ರಾಯವಿದೆ, ಗೌರವವಿದೆ, ಆದರವಿದೆ. ಆದರೆ ಏನೋ ಸಂಶಯ ನನ್ನ ಕಾಡ್ತ ಇದೆ. ಹಾಗೆಂದ ಮಾತ್ರಕ್ಕೆ ನೀವು ಸುಳ್ಳಾಡುತ್ತಿದ್ದೀರಿ ಅಂತ ಅಲ್ಲ, ನಿಮ್ಮ ಮನೆಯಲ್ಲಿರುವವರೂ ನಿಮ್ಮ ತಾಯಿಯೇ. ಆದರೆ ಆಶ್ರಮದಲ್ಲಿರುವಾಕೆ ಯಾರು? ಆಕೆ ಯಾಕೆ ನಿಮ್ಮನ್ನೇ ನನ್ನ ಮಗ ಅಂತ ಇದ್ದಾಳೆ. ನೀವ್ಯಾಕೆ ಆಕೇನಾ ನನ್ನ ತಾಯಿ ಅಲ್ಲ ಅಂತ ಇದ್ದೀರಿ. ನಿಮ್ಮ ಆದರ್ಶ, ಸರಳತನ, ಅಸಹಾಯಕರ ಬಗ್ಗೆ ನಿಮಗಿರುವ ಕಾಳಜಿ ಈ ಎಲ್ಲ ಗುಣಗಳಿಂದ ನೀವೊಂದು ತೂಕದ ವ್ಯಕ್ತಿ ಆಗಿದ್ದೀರಿ. ಹಾಗೆಂದೇ ಅಲ್ಲವೇ ನಮ್ಮಾಶ್ರಮದ ಟ್ರಸ್ಬಿಗಳಲ್ಲಿ ನೀವೂ ಒಬ್ಬರಾಗಿರುವುದು. ನೀವು ಆಶ್ರಮಕ್ಕೆ ಬಂದಾಗಲೆಲ್ಲ ಆಕೆ ಕೋಣೆ ಬಿಟ್ಟು ಹೊರಬಾರದಿರುವುದು, ಯಾವುದೋ ಚಿಂತೆಯಲ್ಲಿ ಬಳಲುತ್ತಿರುವ ಆಕೆ ನಿರಾಶಳಾಗಿರುವುದು ಎಲ್ಲ ಯಾಕೆ? ಬೆಂಕಿ ಇಲ್ಲದೆ ಹೊಗೆ ಏಳಲಾರದು ಅನ್ನೋದು ನನ್ನ ಅಭಿಪ್ರಾಯ, ನೀವೇನು ಹೇಳ್ತೀರಿ”
“ನಂಗೆ ಗೊತ್ತಿತ್ತು. ನೀವು ಬಂದೇ ಬರ್ತೀರಿ, ಹೀಗೆ ಕೇಳಿಯೆ ಕೇಳ್ತೀರಿ ಅಂತ ಇಷ್ಟು ದಿನ ನಾನು ಮುಚ್ಚಿಟ್ಟಿದ್ದನ್ನೆಲ್ಲವನ್ನು ನಿಮ್ಮ ಮುಂದೆ ಹೇಳಿ ಬಿಡುತ್ತೇನೆ” ಎನ್ನುತ್ತಾ ಪಾರ್ಕಿನ ಮೂಲೆಯೊಂದರ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡು ದೇಸಾಯಿಯವರನ್ನು ಕೂರಲು ಸನ್ನೆ ಮಾಡಿದರು.
ತಂದೆ ತಾಯಿಗೆ ಒಬ್ಬನೆ ಮಗನಾಗಿ ಹುಟ್ಟಿದ ರಾಕೇಶ್ ಆಧುನಿಕ ವಿಚಾರವುಳ್ಳ ತಾಯಿಗೆ ಬೇಡದ ಮಗುವಾಗಿದ್ದ. ಈ ಮಗು ಹುಟ್ಟಿದ್ದೇ ತನ್ನ ಸ್ವತಂತ್ರ ಹರಣ ಮಾಡಲು, ಸಮಸ್ಯೆಗಳನ್ನು ಸೃಷ್ಟಿಸಲು ಎಂಬುದು ಅವಳ ಭಾವನೆಯಾಗಿತ್ತು. ಗಂಡ ಬಿಸ್‌ನೆಸ್, ಟೂರ್ ಅಂತ ಮನೆಯಲ್ಲಿಯೇ ಇರುವುದು ಕಡಿಮೆಯಾಗಿತ್ತು. ಟೈಂ ಪಾಸಿಗಾಗಿ ಸೇರಿದ ಉದ್ಯೋಗ, ಕೊನೆಗೆ ಅದೇ ಸರ್ವಸ್ವವಾಗಿತ್ತು. ಉದ್ಯೋಗವ ಮುಂದೆ ಮನೆ, ಗಂಡ, ಮಗು ಇದು ಯಾವುದೋ ಅವಳಿಗೆ ಮುಖ್ಯವೆನಿಸಲಿಲ್ಲ. ಇಡೀ ಕಂಪನಿಯ ಯಶಸ್ಸಿಗೆ ಕಾರಣಳಾಗುತ್ತ ಕಂಪನಿಯ ಉನ್ನತ ಸ್ಥಾನಕ್ಕೆ ಏರಿದ ಅವಳಿಗೆ ಬದುಕಿನಲ್ಲಿ ಮುಖ್ಯವಾದುದ್ದೇನೋ ಕಳೆದುಕೊಳ್ಳುತ್ತಿದ್ದೇನೆ ಎಂಬ ಅರಿವು ಇರಲಿಲ್ಲ.
ಪ್ರೀತಿಯಿಂದ ಅಮ್ಮ ಎಂದು ಅಪ್ಪಿಕೊಳ್ಳಲು ಬಂದ ಮಗುವನ್ನು ದೂರ ತಳ್ಳಿ ಆಯಾಳಿಗೆ ಒಪ್ಪಿಸುತ್ತಿದ್ದಳು. ಹೆತ್ತ ಕುಡಿಗಾಗಿ ಕೆಲವೇ ಕೆಲವು ಗಂಟೆ ಕೂಡ ಮೀಸಲಿಡದೆ ತಾಯಿ ಮಮತೆಯಿಂದ ವಂಚಿಸುತ್ತಿದ್ದಳು. ‘ಅಮ್ಮ ಬೇಕು’ ಎಂದು ಸದಾ ಅಳುವ ಮಗುವನ್ನು ಕಂಡು ಕೋಪಗೊಳ್ಳುತ್ತಿದ್ದಳು. ಅಮ್ಮನ ಒಂದೇ ಒಂದು ಪ್ರೀತಿಯ ಮಾತಿಗಾಗಿ, ಅಪ್ಪುಗೆಗಾಗಿ ಕಾಯುತ್ತಿದ್ದ. ಆಕೆಯಿಂದ ಒಂದೇ ಒಂದು ಮುತ್ತು ಬೇಕೆಂದು ಹಂಬಲಿಸುತ್ತಿದ್ದ. ಅಮ್ಮನೇ ಊಟ ಮಾಡಿಸಬೇಕು, ಅಮ್ಮ ಕಥೆ ಹೇಳಬೇಕು, ಹಾಡು ಹೇಳಿ ಮಲಗಿಸಬೇಕು, ನನ್ನೊಂದಿಗೆ ಅಮ್ಮ ಆನೆಯಾಟವಾಡಬೇಕು, ಅಮ್ಮ ಶಾಲೆಗೆ ಬಂದು ಬಹುಮಾನ ಪಡೆಯುವ ನನ್ನ ನೋಡಿ ಹೆಮ್ಮೆಯಿಂದ ಅಪ್ಪಿಕೊಳ್ಳಬೇಕು. ಅಮ್ಮನ ಕಾರಿನಲ್ಲಿ ಕುಳಿತು ಐಸ್ಕ್ರೀಂ ತಿನ್ನಬೇಕು, ಅಮ್ಮನ ಸೊಂಟ ಬಳಸಿ, ಶಾಲೆಗ್ಹೋಗಬೇಕು, ಅಮ್ಮನ ಮಡಿಲಲ್ಲಿ ತಲೆಯಿಟ್ಟು ನನ್ನೆಲ್ಲ ಕನಸುಗಳನ್ನು ಹೇಳಿಕೊಳ್ಳಬೇಕು-ಒಂದೇ ಎರಡೇ ರಾಕೇಶನ ಕನಸುಗಳು. ಆ ಕನಸುಗಳೆಲ್ಲವೂ ಕನಸುಗಳಾಗಿಯೇ ಉಳಿದುಬಿಟ್ಟವು.
ಆ ಆಸೆಗಳಲ್ಲಿ ಕೆಲವನ್ನಾದರೂ ಈಡೇರಿಸಿದ್ದು ರಾಕೇಶನನ್ನು ನೋಡಿಕೊಳ್ಳಲು ಬಂದ ಆಯಾ. ಆಕೆಯೇ ರಾಕೇಶನ ಪಾಲಿಗೆ ತಾಯಿಯಾದಳು. ಹಾಡಿ ಮಲಗಿಸುತ್ತಿದ್ದಳು.
ಕಥೆ ಹೇಳಿ ತುತ್ತು ತಿನ್ನಿಸುತ್ತಿದ್ದಳು. ಅವನೊಂದಿಗೆ ಮಗುವಾಗಿ ಆಡುತ್ತಿದ್ದಳು. ಪ್ರೀತಿ-ವಾತ್ಸಲ್ಯ ತುಂಬಿ ತಬ್ಬಿ ಮಲಗುತ್ತಿದ್ದಳು. ರಾಕೇಶನ ಮೈ ಸ್ವಲ್ಪ ಬೆಚ್ಚಗಾದರೂ ಕಂಗೆಟ್ಟು ಹೋಗುತ್ತಿದ್ದಳು. ಮನೆ ಸೇರುವುದು ಕೊಂಚ ತಡವಾದರೂ ತಲ್ಲಣಿಸಿ ಬಿಡುತ್ತಿದ್ದಳು. ಅವನ ಸುಖ, ಸಂತೋಷ, ದುಃಖ, ನೋವು, ಖುಷಿ ಎಲ್ಲವನ್ನು ಹಂಚಿಕೊಂಡು ಅವನ ಭಾವನೆಗಳಿಗೆ ಸ್ಪಂದಿಸುತ್ತಿದ್ದ ಆಯಾಳೇ ನಿಜವಾದ ಅಮ್ಮನಾಗಿ ಬಿಟ್ಟಳು. ಅವನ ನೋವು
ಅವಳಿಗೂ ನೋವೆನಿಸುತ್ತಿತ್ತು. ಅವನ ಸಂತೋಷ ಅವಳಿಗೂ ಸಂತೋಷ ತರುತ್ತಿತ್ತು. ಹೆತ್ತ ಮಾತ್ರಕ್ಕೆ ಯಾರೂ ತಾಯಿ ಎನಿಸಿಕೊಳ್ಳುವುದಿಲ್ಲ, ಹೆತ್ತ ತಾಯಿಯನ್ನು
ಮರೆಯಬೇಕೆಂದು ಹಟ ತೊಟ್ಟೆ.
ತಮ್ಮೆಲ್ಲ ಕಥೆಯನ್ನು ಪದರಪದರವಾಗಿ ತೆರೆದಿಟ್ಟ ಸಾಹೇಬರು “ಈಗ ಹೇಳಿ ದೇಸಾಯಿಯವರೇ, ಯಾರು ನನ್ನ ತಾಯಿ, ನಾನು ಓದಿ ಕೆಲಸಕ್ಕೆ ಸೇರಿದ ಮೇಲೆ
ವಯಸ್ಸಾದ ಆಯಾಳನ್ನು ನಮ್ಮೊಂದಿಗೆ ಕರೆತಂದೆ. ಅಷ್ಟರೊಳಗೆ ಅಪ್ಪನೋ ತೀರಿ ಹೋಗಿದ್ದ. ಅಮ್ಮ ಹೇಗಿದ್ದಾಳೆ, ಎಲ್ಲಿದ್ದಾಳೆ ಎಂಬ ಯಾವ ಕುತೂಹಲವೂ
ನನ್ನಲ್ಲಿರಲಿಲ್ಲ. ನನ್ನ ಸರ್ವಸ್ವ ಎಲ್ಲಾ ನನ್ನ ಆಯಾ ಅಮ್ಮನೇ ಆಗಿದ್ದಾಳೆ. ಈ ಕಥೆ ಯಾರಿಗೂ ಗೊತ್ತಿಲ್ಲ. ಎಲ್ಲರೂ ಅವಳನ್ನು ನನ್ನ ಹೆತ್ತ ತಾಯಿ ಎಂದು ಭಾವಿಸಿದ್ದಾರೆ” ಮಾತುಗಳು ಗಂಭೀರವಾಗಿತ್ತು.
“ನಿಮ್ಮ ಹೃದಯದೊಳಗೆ ಹೀಗೊಂದು ನೋವು ಹೆಪ್ಪುಗಟ್ಟಿದೆ ಎಂಬ ಕಲ್ಪನೆ ಕೂಡ ನನಗಿರಲಿಲ್ಲ. ನೀವು ನೋವುಂಡಿದ್ದೀರಾ ಸರಿ. ಆದರೆ ಹಿರಿಯವನಾಗಿ ನಾನೊಂದು ಮಾತು ಹೇಳಲಾ. ಪಶ್ಚಾತ್ತಾಪಕ್ಕಿಂತ ಬೇರೆ ಶಿಕ್ಷೆ ಇಲ್ಲ ಅಲ್ವೆ. ತಪ್ಪು ಎಲ್ಲರೂ ಮಾಡ್ತಾರೆ. ಈಗಾಗ್ಲೆ ಒಂಟಿತನದ ಶಿಕ್ಷೆ, ಮಗ ಕಣ್ಣಿದಿರೇ ಇದ್ದರೂ ಅವನೇ ನನ್ನ ಮಗ ಎಂದು ಹೇಳಿಕೊಳ್ಳಲಾರದೆ ವೇದನೆ ಅನುಭವಿಸುತ್ತಿರುವ ನಿಮ್ಮ ಹೆತ್ತ ತಾಯಿಗೆ ಈಗಲಾದರೂ
ನೆಮ್ಮದಿಕೊಡಿ. ಸಾಯುವ ಮುನ್ನ ತೃಪ್ತಿಯಿಂದ ಸಾಯುವ ಅವಕಾಶ ಮಾಡಿಕೊಡಿ. ಇದಿಷ್ಟೇ ನಾನು ನಿಮ್ಮಿಂದ ಕೇಳಿಕೊಳ್ಳುವುದು” ಬೇಡಿದರು.
ಆ ಮಾತು ಕೇಳಿಸಿಕೊಳ್ಳದವರಂತೆ ಸಾಹೇಬರು “ನಾನು ಬಲ, ಆಫೀಸಿನ ಕಡೆ ಬಿಡುವಾದಾಗ ಬನ್ನಿ” ಎಂದವರೇ ಓಡುತ್ತ ಹೋಗಿಯೇ ಬಿಟ್ಟಾಗ ಬೆಪ್ಪಾದರು. ಮನುಷ್ಯ ಇಷ್ಟೊಂದು ಕಠಿಣನಾಗಲು ಸಾಧ್ಯವೇ? ಅದೂ ಹೆತ್ತ ತಾಯಿಯ ಬಗ್ಗೆ ನಿಟ್ಟುಸಿರು ಬಿಟ್ಟರು.
ಸೋತ ಹೆಜ್ಜೆ ಇಡುತ್ತ ಆಶ್ರಮ ತಲುಪಿದರು. ಆಕೆಯ ಕೋಣೆಯ ಮುಂದೆ ಇತರ ಆಶ್ರಮವಾಸಿಗಳೆಲ್ಲ ಜಮಾಯಿಸಿದ್ದಾರೆ. ಓಹೋ, ಆಕೆ ಹೋಗಿಯೇ ಬಿಟ್ಟಳೇ
ಮಗನಿಂದ ಅಮ್ಮ ಅನ್ನಿಸಿಕೊಳ್ಳದೆ, ಆತನನ್ನು ನೋಡದೇ ಪ್ರಾಣಬಿಟ್ಟುಬಿಟ್ಟಳೇ? ವಿಷಾದಭರಿತರಾಗಿ ಕೋಣೆ ಸಮೀಪಿಸಿದರು.
“ಸಾರ್, ನೀವು ಬೆಳಗ್ಗೆ ವಾಕ್ ಹೊರಟು ಕೆಲವೇ ನಿಮಿಷದಲ್ಲಿ ಡಿ. ಸಿ. ಸಾಹೇಬರ ಕಾರು ಬಂದು, ಆಕೆಯನ್ನು ಸಾಹೇಬರು ಕರ್ಕೊಂಡು ಬರೋಕೆ ಹೇಳಿದ್ದಾರೆ ಅಂತ
ಕರ್ಕೊಂಡು ಹೋದ್ರು” ಅಂತ ಅಲ್ಲಿದ್ದ ಮ್ಯಾನೇಜರ್ ಹೇಳಿದ ಕೂಡಲೇ ಎದೆಯ ಮೇಲಿದ್ದ ಹೆಬ್ಬಂಡೆ ಮಂಜಿನಂತೆ ಕರಗಿ ಸಾಹೇಬರ ಬಗ್ಗೆ ಇದ್ದ ಅಭಿಮಾನ ಗೌರವ
ಹೆಚ್ಚಾಯಿತು.
*****
ಪುಸ್ತಕ: ದರ್ಪಣ