ಭಾಷೆಗಳ ನಂದನವನ

ಭಾಷೆಗಳ ನಂದನವನ

ಈ ಜಗತ್ತಿನಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂದು ಲೆಕ್ಕ ಹಾಕಿದವರಿಲ್ಲ; ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಲೋಕಭಾಷೆಗಳ ಕುರಿತಾಗಿ ಕೆನೆತ್ ಕಟ್ಝ್ನರ್ ಬರೆದ The Languages of the World ಎಂಬ ಮಾಹಿತಿಪೂರ್ಣ ಪುಸ್ತಕವೊಂದಿದೆ. ಅದರ ಪ್ರಕಾರ ಸುಮಾರು ಮೂರು ಸಾವಿರಗಳಿಂದ ನಾಲ್ಕು ಸಾವಿರ ಭಾಷೆಗಳ ತನಕ ಇವೆ. ಇವೆಲ್ಲವನ್ನೂ ಯಾರೊಬ್ಬನಿಂದಲೂ ಕಲಿತುಕೊಳ್ಳುವುದು ಸಾಧ್ಯವಿಲ್ಲ; ಆದರೂ ಈ ಭಾಷಾವೈವಿಧ್ಯದ ಕುರಿತು ಆಸಕ್ತಿ ಮತ್ತು ಅರಿವು ಇದ್ದರೆ ಒಳ್ಳೆಯದು. ಇವುಗಳಲ್ಲಿ ಒಂದು ಭಾಷೆಯಂತೂ ಮನುಷ್ಯನಿಗೆ ಚಿಕ್ಕಂದಿನಿಂದಲೇ ಬರುತ್ತದೆ; ಅದೇ ಆಯಾ ವ್ಯಕ್ತಿಯ ಮಾತೃಭಾಷೆ. ಪರಿಸರದ ಭಾಷೆ ಕೂಡಾ ಮನುಷ್ಯನಿಗೆ ಮಾತೃಭಾಷೆಯಷ್ಟೇ ಮಹತ್ತವುಳ್ಳದ್ದಾಗಿರುತ್ತದೆ. ಚಿಕ್ಕಂದಿನಲ್ಲೇ ನಮಗೆ ದಕ್ಕಿದ ಈ ಮೊದಲ ಭಾಷೆಗಳನ್ನು ನಾವು ಪ್ರತ್ಯೇಕವಾಗಿ ಕಲಿಯಬೇಕಾಗಿಲ್ಲ. ಅವು ತಾವಾಗಿಯೇ ನಮಗೆ ಬಂದುಬಿಡುತ್ತವೆ. ಉಳಿದ ಭಾಷೆಗಳನ್ನಾದರೆ, ಅದೂ ವಯಸ್ಸಿಗೆ ಬಂದ ನಂತರ, ಪ್ರಯತ್ನಪಟ್ಟು ಕಲಿಯಬೇಕಾಗುತ್ತದೆ.

ಭಾಷೆಗಳು ಸಾವಿರಾರು ಇದ್ದರೂ ಅವುಗಳಿಗೆ ಸಂಬಂಧಿಸಿದ ಅಂಕೆ ಸಂಖ್ಯೆಗಳು ಮಾತ್ರ ಅಷ್ಟೊಂದು ಆಶಾದಾಯಕವಾಗಿಲ್ಲ. ಯಾಕೆಂದರೆ ಭಾಷೆಗಳ ಮಧ್ಯೆ ಪ್ರಜಾಪ್ರಭುತ್ವ ಹಾಗೂ ಸಮಾನತೆ ಎಂಬುದಿಲ್ಲ. ಕೆಲವೇ ಕೆಲವು ಭಾಷೆಗಳಿಗೆ ಲಿಪಿಗಳಿದ್ದು ಅವನ್ನು ಓದು ಬರಹ ವಿದ್ಯಾಭ್ಯಾಸಗಳಿಗೆ ಉಪಯೋಗಿಸಲಾಗುತ್ತಿದೆ; ಇಂಥ ಭಾಷೆಗಳು ನೂರಕ್ಕಿಂತ ಸ್ವಲ್ಪ ಜಾಸ್ತಿಯಿರಬಹುದು ಅಷ್ಟೆ. ಉಳಿದವಕ್ಕೆ ಲಿಪಿಗಳಿಲ್ಲ. ಅವು ಕೇವಲ ಆಡುಮಾತಿಗಷ್ಟೆ ಬರುತ್ತವೆ. ಲಿಪಿಗಳಿರುವ ಭಾಷೆಗಳಲ್ಲೂ ಅಂತರರಾಷ್ಟ್ರೀಯ ನೆಲೆಯಲ್ಲಿ ಇಂಗ್ಲಿಷ್, ಸ್ಪಾನಿಶ್, ಜರ್ಮನ್ನಂಥ ಕೆಲವಕ್ಕೆ ಹೆಚ್ಚು ಮಹತ್ವ; ಇನ್ನುಳಿದವಕ್ಕೆ ಮಹತ್ವವಿಲ್ಲ.

ಭಾಷೆಗಳ ಕುರಿತಾದ ಅಂಕೆ ಸಂಖ್ಯೆಗಳು ಇಂಥ ಅಸಮಾನತೆಯನ್ನು ಸಾರಿಹೇಳುತ್ತವೆ. ಕಾಟ್ಝ್ನರ್ ನೀಡಿರುವ ಈ ಮಾಹಿತಿಗಳನ್ನು ಗಮನಿಸಿ: ಲೋಕದ ಸಾವಿರಾರು ಭಾಷೆಗಳಲ್ಲಿ ಅಮೇರಿಕನ್ ಕೆಂಪು ಇಂಡಿಯನರ ಭಾಷೆಗಳೇ ಸುಮಾರು ೧೦೦೦ಕ್ಕಿಂತ ಜಾಸ್ತಿಯಿವೆ. ಆಫ್ರಿಕಾದ ಭಾಷೆಗಳು ೧೦೦೦ಕ್ಕೆ ಹತ್ತಿರ ಬರುತ್ತವೆ. ನ್ಯೂಗಿನಿ ದ್ವೀಪವೊಂದರಲ್ಲೇ ೭೦೦ ಭಾಷೆಗಳಿವೆ. ಭಾರತದಲ್ಲಿ ಸುಮಾರು ೧೫೦. ರಶಿಯಾದಲ್ಲಿ ೧೩೦. ಚೀನಾದಲ್ಲಿ ಹಲವು ಡಜನು. ಇನ್ನು ಬೇರೆಡೆಗಳಲ್ಲಿ ಬೇರೆ ಬೇರೆ ಸಂಖ್ಯೆಗಳು. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಐವತ್ತರಷ್ಟು ಕೆಂಪು ಇಂಡಿಯನ್ ಭಾಷೆಗಳಿವೆ. ಲೋಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ೯೫ರಷ್ಟು ಮಂದಿ ೧೦೦ಕ್ಕಿಂತ ಕಡಿಮೆ ಭಾಷೆಗಳನ್ನು ಆಡುತ್ತಾರೆ! ಇದರಲ್ಲಿ ಚೈನೀಸ್ ಒಂದೇ ಶೇಕಡಾ ೨ಂ ಆಗುತ್ತದೆ; ಇದಕ್ಕೆ ಇಂಗ್ಲಿಷ್, ಸ್ಪಾನಿಶ್, ರಶಿಯನ್ ಮತ್ತು ಹಿಂದಿ ಸೇರಿಸಿದರೆ ಸುಮಾರು ಶೇಕಡಾ ೪೫ ಆಗುವುದು. ಜರ್ಮನ್, ಜಪಾನಿಸ್, ಬೆಂಗಾಲಿ, ಅರೆಬಿಕ್, ಪೋರ್ಚುಗೀಸ್, ಫ್ರೆಂಚ್ ಮತ್ತು ಇಟಾಲಿಯನ್ ಸೇರಿಸಿದರೆ ಶೇಕಡಾ ೬ಂ. ಮುಂದಿನ ಒಂದು ಡಜನು ಪ್ರಮುಖ ಭಾಷೆಗಳನ್ನು ಸೇರಿಸಿದರೆ ಶೇಕಡಾ ೭೫. ಇಂಥ ಓಟ್ಟು ನೂರು ಭಾಷೆಗಳನ್ನುಳಿದು ಇತರ ಸಾವಿರಾರು ಭಾಷೆಗಳನ್ನಾಡುವವರು ಶೇಕಡಾ ಐದು ಜನ ಎಂದಾದರೆ, ಈ ಒಂದೊಂದೂ ಭಾಷೆಗಳನ್ನಾಡುವವರ ಸಂಖ್ಯೆ ಎಷ್ಟು ಕಡಿಮೆಯೆಂದು ಊಹಿಸಿಕೊಳ್ಳಬಹುದಾಗಿದೆ. ಕೆಲವು ಸಾವಿರಗಳು, ಕೆಲವು ನೂರುಗಳು ಮಾತ್ರ.

ಮನುಷ್ಯ ಭಾಷೆಗಳ ಉಗಮ ಹೇಗಾಯಿತು ಎನ್ನುವುದರ ಬಗ್ಗೆ ಯಾರಿಗೂ ಗೊತ್ತಿಲ್ಲ; ಯಾಕೆಂದರೆ ಇದು ಇತಿಹಾಸಪೂರ್ವದ ಪ್ರಶ್ನೆ. ಇತಿಹಾಸ ಸುರುವಾದಂದಿನಿಂದಲೂ ಭಾಷೆಯೆಂಬುದು ಇದ್ದೇ ಇತ್ತು. ವಾಸ್ತವದಲ್ಲಿ ಇತಿಹಾಸವೇ ಮೊದಲಾದ ನಾಗರಿಕ ಜ್ಞಾನಮೂಲಗಳಿಗೆ ಭಾಷೆಯೇ ಕಾರಣ. ಆದ್ದರಿಂದ ಭಾಷೆಯ ಕುರಿತಾಗಿ ಇತಿಹಾಸಕ್ಕೆ ಹೊರತಾದ ಕೆಲವು ನಂಬಿಕೆಗಳು ಇವೆ: ಆದಿಯಲ್ಲಿ ಒಂದೇ ಭಾಷೆಯಿತ್ತು, ಕ್ರಮೇಣ ಅದು ಒಡೆದು ಬೇರೆ ಬೇರೆ ಭಾಷೆಗಳು ಹುಟ್ಟಿದುವು ಎನ್ನುವುದು ಇಂಥ ಒಂದು ನಂಬಿಕೆ: ಇದನ್ನು ಆದಮೀಯ ನಂಬಿಕೆ ಎಂದು ಕರೆಯಬಹುದು; ಯಾಕೆಂದರೆ, ಎಲ್ಲಾ ಮನುಷ್ಯರೂ ಒಬ್ಬ ಮೂಲಪುರುಷ (ಆದಂ)ನಿಂದ ಹುಟ್ಟಿದವರು ಎಂಬ ನಂಬಿಕೆಗೆ ಸಂವಾದಿಯಾದ್ದು ಇದು. ಆದರೆ ವೈಚಾರಿಕವಾಗಿ ಹೇಳುವುದಾದರೆ, ಮನುಷ್ಯವರ್ಗವಾಗಲಿ ಭಾಷಾವರ್ಗವಾಗಲಿ ಬಹುಳತ್ವದಲ್ಲೇ ಅಸ್ತಿತ್ವಕ್ಕೆ ಬಂದಂಥವು. ಮನುಷ್ಯರ ಮೂಲರೂಪಗಳನ್ನು ಮರೆತಂತೆಯೇ ಭಾಷೆಗಳ ಮೂಲರೂಪಗಳನ್ನೂ ನಾವಿಂದು ಮರೆತಿದ್ದೇವೆ.

ಆದರೂ ಭಾಷಾವಿಜ್ಞಾನಿಗಳು ಭಾಷೆಗಳ ವಂಶಾವಳಿಗಳನ್ನು ಗುರುತಿಸುವುದರಲ್ಲಿ ಸ್ವಲಮಟ್ಟಿಗೆ ಯಶಸ್ವಿಯಾಗಿದ್ದಾರೆ. ಇಂಡೋ ಯುರೋಪಿಯನ್, ಸೆಮಿಟಿಕ್, ಎಸ್ಕಿಮೋ, ದ್ರವೀಡಿಯನ್, ಟಿಬೆಟೋ ಬರ್ಮನ್ ಮುಂತಾದ ಹಲವು ವಂಶಗಳು, ಈ ಒಂದೊಂದರಲ್ಲೂ ಬೇರೆ ಬೇರೆ ಶಾಖೆಗಳು, ಉಪಶಾಖೆಗಳು ಇರುವುದನ್ನು ಕಾಣಬಹುದು. ಇವುಗಳಲ್ಲಿ ಅತ್ಯಂತ ದೊಡ್ಡ ವಂಶ ಬಹುಶಃ ಇಂಡೋ ಯುರೋಪಿಯನ್; ಇದರಲ್ಲಿ ಜರ್ಮಾನಿಕ್, ಇಟಾಲಿಕ್, ರೊಮಾನ್ಸ್, ಸ್ಲಾವಿಕ್, ಬಾಲ್ಟಿಕ್ ಮತ್ತು ಇಂಡೋ ಇರೇನಿಯನ್ ಎಂಬ ಪ್ರಮುಖ ಓಳ ಪಂಗಡಗಳು; ಈ ಪ್ರತಿಯೊಂದರಲ್ಲೂ ಶಾಖೆಗಳಿದ್ದು ಒಂದೊಂದು ಶಾಖೆಯಲ್ಲೂ ಹಿರಿ ಕಿರಿಯ ಭಾಷೆಗಳಿವೆ. ಉದಾಹರಣೆಗೆ, ಇಂಡೋ ಇರೇನಿಯನ್ ಓಳಪಂಗಡದಲ್ಲಿ ಇರೇನಿಯನ್ ಮತ್ತು ಇಂಡಿಕ್ ಎಂಬ ಶಾಖೆಗಳು; ಇರೇನಿಯನ್ ಶಾಖೆಗೆ ಸೇರಿದ ಹಿರಿಯ ಭಾಷೆಗಳು ಪರ್ಶಿಯನ್, ಪಶ್ತೊ, ಕುರ್ಡಿಕ್, ಬಲೂಚಿ, ತಾಜ್ದಿಕ್ ಮತ್ತು ಒಸೇಟಿಯನ್. ಇಂಡಿಕ್ ಶಾಖೆಯ ಹಿರಿ ಭಾಷೆಗಳೆಂದರೆ ಸಂಸ್ಕೃತ, ಹಿಂದಿ, ಉರ್ದು, ಬೆಂಗಾಲಿ, ಪಂಜಾಬಿ, ಮರಾಠಿ, ಗುಜರಾತಿ, ಬಿಹಾರಿ, ರಾಜಸ್ತಾನಿ, ಓರಿಯಾ, ಅಸ್ಸಾಮಿ, ಕಾಶ್ಮೀರಿ, ನೇಪಾಲಿ, ಸಿಂಧಿ ಮತ್ತು ಸಿಂಹಳಿ. ಇಂಗ್ಲಿಷ್ನಲ್ಲಿ ತಾಯಿಗೆ ಮದರ್, ವೆಲ್ಶ್‌ನಲ್ಲಿ ಮಾಮ್, ಗೇಲಿಕ್‌ನಲ್ಲಿ ಮಾತೈರ್, ಫ್ರೆಂಚ್ನಲ್ಲಿ ಮೇರ್, ಸ್ಪಾನಿಶ್ ಮತ್ತು ಇಟಾಲಿಯನ್ನಲ್ಲಿ ಮಾದ್ರೆ, ಜರ್ಮನ್ನಲ್ಲಿ ಮುಟ್ಪರ್, ಪರ್ಶಿಯನ್ನಲ್ಲಿ ಮಾದರ್, ಹಿಂದಿಯಲ್ಲಿ ಮಾ, ಹಾಗೂ ಸಂಸ್ಕೃತದಲ್ಲಿ ಮಾತೃ ಎನ್ನುವುದನ್ನು ಗಮನಿಸಿದರೆ ಈ ಭಾಷೆಗಳ ಸಂಬಂಧ ಗೊತ್ತಾಗುತ್ತದೆ. ಆದರೆ ಇದರ ತಾತ್ಪರ್ಯ ಈ ಭಾಷೆಗಳು ಪರಸ್ಪರ ಅರ್ಥವಾಗುತ್ತವೆ ಎಂದಲ್ಲ; ಯಾಕೆಂದರೆ ಕಾಲಾಂತರದಲ್ಲಿ ಇವೆಲ್ಲ ವಿಭಿನ್ನ ಪರಿಸರಗಳಲ್ಲಿ ಬೆಳೆದು ಬೇರೆ ಬೇರೆ ಶಬ್ದಗಳನ್ನೂ ವ್ಯಾಕರಣಗಳನ್ನೂ ಹೊಂದಿದುವು. ಆದರೂ ರಶಿಯಾದ ಪೂರ್ವದ ಗಡಿಯಲ್ಲಿರುವ ಲಿತುವೇನಿಯಾ ಎಂಬ ಸಣ್ಣ ದೇಶದ ಲಿತುವೇನಿಯನ್ ಭಾಷೆ ಸಂಸ್ಕೃತಕ್ಕೆ ಎಷ್ಟೊಂದು ಹೋಲುತ್ತದೆಂದರೆ ಆ ಭಾಷೆಯಿನ್ನೂ ಬದಲಾಗಿಲ್ಲವೋ ಅನಿಸುತ್ತದೆ. ಇದಕ್ಕೆ ಪ್ರತಿಯಾದ ವಿದ್ಯಮಾನವೆಂದರೆ, ಹಂಗೇರಿಯನ್. ಏಶಿಯಾ ಮೂಲದ ಮಗ್ಯಾರ್ ಜನಾಂಗ ಹಂಗೇರಿಗೆ ಹೋಗಿ ಅಲ್ಲಿ ನೆಲಸಿ ರೂಢಿಸಿಕೊಂಡ ಹಂಗೇರಿಯನ್ ಈಗ ಏಶಿಯಾದ ಯಾವ ಭಾಷೆಗೂ ಅಷ್ಟು ಸುಲಭವಾಗಿ ಹೋಲದಂತೆ ಪ್ರತ್ಯೇಕವಾಗಿ ಬೆಳೆದಿದೆ.

ಮನುಷ್ಕ ಸಂಪರ್ಕಕ್ಕೆ ಅನುಸಾರವಾಗಿ ಭಾಷೆಗಳೂ ಪರಸ್ಪರ ಸಂಪರ್ಕಗೊಳ್ಳುತ್ತವೆ, ಹಾಗೂ ಒಂದು ಇನ್ನೊಂದನ್ನು ಪ್ರಭಾವಿಸುತ್ತವೆ. ಹೆಚ್ಚು ಅಧಿಕಾರಯುತವಾದ ವರ್ಗ ಕಡಿಮೆ ಅಧಿಕಾರದ ವರ್ಗದ ಮೇಲೆ ಪ್ರಭಾವ ಬೀರುವುದೇ ಲೋಕದ ವಿದ್ಯಮಾನವಾದ್ದರಿಂದ ರಾಜಕೀಯ, ಧಾರ್ಮಿಕ, ಆರ್ಥಿಕ, ಅಥವಾ ಸಾಂಸ್ಕೃತಿಕವಾಗಿ ಅಥವಾ ಇನ್ನು ಯಾವುದೇ ಕಾರಣಕ್ಕಾಗಿ ಹೆಚ್ಚು ಬಲಶಾಲಿಯಾದ ವರ್ಗದ ಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಒಂದು ಕಾಲದಲ್ಲಿ ಇಂಗ್ಲಿಷ್‌ನ ಮೇಲೆ ಗ್ರೀಕ್, ರೋಮನ್, ಸ್ಕಾಂಡಿನೇವಿಯನ್, ಫ್ರೆಂಚ್ ಮೊದಲಾದ ಭಾಷೆಗಳು ಪ್ರಭಾವ ಬೀರಿದುವು; ಇಂದು ಇಂಗ್ಲಿಷ್ ಆ ಕೆಲಸವನ್ನು ಲೋಕದ ಇತರ ಭಾಷೆಗಳ ಮೇಲೆ ಮಾಡುತ್ತಿದೆ. ಕೇವಲ ಅರೇಬಿಯಾದ ಉಪಖಂಡದಲ್ಲಿ ಮಾತ್ರ ಪ್ರಚಾರದಲ್ಲಿದ್ದ ಅರೇಬಿಕ್ ಇಸ್ಲಾಮ್ ಧರ್ಮದ ಪ್ರಾದುರ್ಭಾವದೊಂದಿಗೆ ಜಗತ್ತಿನ ಆದ್ಯಂತ ಹರಡಿತು. ಭಾರತದ ಉಪಖಂಡಕ್ಕೆ ಆರ್ಯನರ ಪ್ರವೇಶದೊಂದಿಗೆ ಇಲ್ಲಿನ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಸುರುವಾಯಿತು. ಇಂದು ಭಾರತದ ಯಾವುದೇ ಪ್ರಮುಖ ಭಾಷೆಯಲ್ಲೂ ಸಂಸ್ಕೃತದ ಪದಗಳು ಸಾಕಷ್ಟು ಪ್ರಮಾಣದಲ್ಲಿವೆ. ಮೊಘಲರ ರಾಜಕೀಯ ಮತ್ತು ಇಸ್ಲಾಮಿನ ಧಾರ್ಮಿಕ ಪ್ರವೇಶದೊಂದಿಗೆ ಭಾರತೀಯ ಭಾಷೆಗಳ ಮೇಲೆ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳ ಪ್ರಭಾವ ಮೊದಲಾಯಿತು. ಕನ್ಕಡವನ್ನೇ ನೋಡಿದರೆ, ಇಂಗ್ಲಿಷ್ ಪೂರ್ವದ ಆಡಳಿತ, ಕಾನೂನು ಮತ್ತು ಹಣಕಾಸಿನ ಪದಗಳೆಲ್ಲ ಅರೇಬಿಕ್ ಅಥವಾ ಪರ್ಶಿಯನ್ ಮೂಲದವೆನ್ನುವುದು ಸ್ಪಷ್ಟ. ಈಗಲಾದರೆ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಮೇಲೆ ಇಂಗ್ಲಿಷ್ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಮನುಷ್ಯ ಸಮಾಜದ ಬೆಳವಣಿಗೆಗೆ ಹೇಗೆ ಪರಸ್ಪರ ಸಂಪರ್ಕದ ಅಗತ್ಯವಿದೆಯೋ ಅದೇ ರೀತಿ ಭಾಷೆಗಳ ಬೆಳವಣಿಗೆಗೂ ಇಂಥ ಸಂಪರ್ಕ ಅತ್ಯಗತ್ಯ. ಹೊರಗಿನ ಸಂಪರ್ಕದಿಂದ ದೂರವುಳಿಯುವ ಮನುಷ್ಯರಾಗಲಿ ಅವರ ಭಾಷೆಯಾಗಲಿ ದುರ್ಬಲವಾಗುವುದರಲ್ಲಿ ಸಂದೇಹವಿಲ್ಲ. ಇಂದು ಅನೇಕ ಬುಡಕಟ್ಟು ಜನಾಂಗಗಳೂ ಅವುಗಳ ಭಾಷೆಗಳೂ ಕ್ಷೀಣಿಸುತ್ತಿರುವುದಕ್ಕೆ ಅವು ಹೊರ ಸಂಪರ್ಕಕ್ಕೆ ಬರದಿರುವುದು ಒಂದು ಮುಖ್ಯ ಕಾರಣ. ಆದ್ದರಿಂದ ಕೆಲವು ಪ್ರಭಾವಗಳನ್ನು ಸ್ವಾಗತಿಸುವುದು ಸ್ವಂತದ ದೃಷ್ಟಿಯಿಂದ ಅಗತ್ಯವನಿಸುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಪ್ರಭಾವ ಅತಿಯಾಗಿಬಿಟ್ಟರೆ ಸ್ವಂತಿಕೆಯೇ ಹೊರಟುಹೋಗಿ ನಾವು ಗುರುತು ಸಿಗದಂತೆ ಬದಲಾಗಬಹುದು. ಆಮೇಲೆ ಸ್ವಂತ ಭಾಷೆಯಾಗಲಿ ಸಂಸ್ಕೃತಿಯಾಗಲಿ ಇರುವುದಿಲ್ಲ. ಸಂಪರ್ಕವಿಧಾನಗಳು ತೀವ್ರವಾದ ಈ ನಮ್ಮ ಆಧುನಿಕ ಕಾಲದಲ್ಲಿ ಹಲವಾರು ಕಿರುಭಾಷೆಗಳು ಅಷ್ಟೇ ತೀವ್ರಗತಿಯಲ್ಲಿ ಉಪಯೋಗಹೀನವಾಗುತ್ತಿವೆ. ಯಾವುದೇ ಭಾಷಾಸಮಾಜದಲ್ಲಿ ಯಾವಾಗ ಹೊಸ ತಲೆಮಾರಿನವರು ಇನ್ನೊಂದು ಭಾಷೆಯನ್ನು ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚು ಹೆಚ್ಚಾಗಿ ಉಪಯೋಗಿಸಲು ಸುರುಮಾಡುತ್ತಾರೋ ಆಗ ಅವರ ಮಾತೃಭಾಷೆ ಸಾಯಲು ತೊಡಗುತ್ತದೆ. ಭಾಷೆಗಳ

ಅಮೇರಿಕದ ಭೂಖಂಡ, ಆಫ್ರಿಕಾ, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ಮುಂತಾದ ಪರದೇಶಗಳ ಅನೇಕ ಬುಡಕಟ್ಟು ಜನಾಂಗಗಳ ಭಾಷೆಗಳು ಇಂದು ವಿನಾಶದ ಅಂಚಿನಲ್ಲಿವೆ. ದಕ್ಷಿಣ ಮತ್ತು ಉತ್ತರ ಅಮೇರಿಕಗಳಲ್ಲಿ ಒಟ್ಟು ಸಾವಿರಕ್ಕಿಂತಲೂ ಹೆಚ್ಚು ಕೆಂಪು ಇಂಡಿಯನ್ ಭಾಷೆಗಳಿದ್ದರೂ ಇವು ಒಂದೊಂದನ್ನೂ ಮಾತಾಡುವವರ ಜನಸಂಖ್ಯೆ ಅತ್ಯಲ್ಪ. ಅಮೇರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡಾದಲ್ಲಿ ಒಟ್ಟು ೧೦೦ ಇಂಥ ಭಾಷೆಗಳಿವೆ; ಮೆಕ್ಸಿಕೋದಲ್ಲಿ ಸುಮಾರು ೩೦೦; ದಕ್ಷಿಣ ಅಮೇರಿಕದಲ್ಲಿ ಒಟ್ಟಾರೆಯಾಗಿ ೧೦೦೦. ಪಶ್ಚಿಮ ಭೂವಲಯದಲ್ಲಿ ಒಟ್ಟಾರೆಯಾಗಿ ಇರುವ ಅಮೇರಿಕನ್ ಇಂಡಿಯನರ ಸಂಖ್ಯೆ ಸುಮಾರು ಇಪ್ಪತ್ತು ಮಿಲಿಯ. ಈ ಭಾಷೆಗಳಲ್ಲೂ ‘ವಂಶಾವಳಿಗಳು’ ಇದ್ದರೂ, ಹೆಚ್ಚಾಗಿ ಇವೆಲ್ಲ ಪ್ರತ್ಯಪ್ರತ್ಯೇಕವೇ ಎನ್ನಬಹುದು; ಯಾಕೆಂದರೆ ಇವನ್ನು ಆಡುವ ಬುಡಕಟ್ಟುಗಳೆಲ್ಲವೂ ವಿಭಿನ್ನವಾದುವು. ಅತಬಾಸ್ಕನ್ ಭಾಷೆಗಳು ಕೆನಡಾದಲ್ಲಿ ಹೆಚ್ಚು ಕಾಣಿಸಿದರೆ, ಅಲ್ಗೊಂಕಿಯನ್ ಭಾಷೆಗಳು ಅಮೇರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಕಾಣಿಸುತ್ತವೆ. ಸುಮಾರು ಐವತ್ತರಷ್ಟು ಅಮೇರಿಕನ್ ಇಂಡಿಯನ್ ಭಾಷೆಗಳಿರುವ ಸಂಯುಕ್ತ ಸಂಸ್ಥಾನಗಳಲ್ಲಿ ಅಧಿಕ ಸಂಖ್ಯೆಯನ್ನು ಹೊಂದಿರುವುದು ನೊವಾಜೋ. ಈ ಸಣ್ಣ ಭಾಷೆಗಳಲ್ಲಿ ಹಲವಾರು ಈಗ ಮಾಯವಾಗಿದ್ದರೂ ಅವು ಸಂಯುಕ್ತ ಸಂಸ್ಥಾನಗಳ ಅರ್‍ಧದಷ್ಟೂ ಹೆಸರುಗಳಲ್ಲಿ ಇನ್ನೂ ಬದುಕಿ ಉಳಿದಿವೆ ಎನ್ನುವುದು ಆಶ್ಚರ್ಯಕರ! ಮಿಸ್ಸಿಸಿಪಿ ‘ಮಹಾನದಿ’ ಮಿನ್ನೆಸೋಟಾ ‘ಆಕಾಶನೀಲಿ ನೀರು’, ಒಕ್ಲಹೋಮಾ ‘ಕೆಂಪು ಜನ’.

ಅಲ್ಬೇನಿಯಾ, ಆಸ್ಟ್ರಿಯಾ, ಈಜಿಪ್ಟ್, ಅರೇಬಿಯಾದ ಕೆಲವು ದೇಶಗಳನ್ನು ಉಳಿದಂತೆ ಇಂದು ಏಕಭಾಷಾರಾಷ್ಟ್ರಗಳು ಬಹಳ ಕಡಿಮೆ. ಉದಾಹರಣೆಗೆ, ಅಫ್ಘಾನಿಸ್ತಾನದಲ್ಲಿ ಪರ್ಶಿಯನ್ ಐದು ಮಿಲಿಯನ್, ಪಶ್ತು ಹತ್ತು ಮಿಲಿಯನ್, ಉಜ್ಬೆಕ್ ಮತ್ತು ತುರ್ಕ್‌ಮನ್ ಇತರರು. ಚಿಲಿಯಲ್ಲಿ ಬಹುಜನ ಭಾಷೆ ಸ್ಪಾನಿಶ್, ಅಲ್ಪಸಂಖ್ಯಾತ ಭಾಷೆಗಳು ಜರ್ಮನ್ ಮತ್ತು ಅರೌಕಾನಿಯನ್ (ಕೆಂಪು ಇಂಡಿಯನ್). ಇರಾಕಿನಲ್ಲಿ ಅರೇಬಿಕ್ ಮುಖ್ಯ ಭಾಷೆ, ಕುರ್ಡಿಶ್, ಅರ್ಮೇನಿಯನ್ ಮತ್ತು ಅಸ್ಸೀರಿಯನ್ ಅಲ್ಪಸಂಖ್ಯಾತ ಭಾಷೆಗಳು. ಪಾಕಿಸ್ತಾನದಲ್ಲಿ ಸರಕಾರಿ ಭಾಷೆ ಉರ್ದು, ಆದರೆ ಇದು ಮಾತೃಭಾಷೆಯಾಗಿ ಉಳ್ಳವರು ಐದು ಮಿಲಿಯನ್ ಜನ; ಆದರೆ ಮೂರನೆಯ ಎರಡಂಶ ಜನಕ್ಕೆ ಉರ್ದು ಚೆನ್ನಾಗಿ ಮಾತಾಡಲು ಬರುತ್ತದೆ. ಪಂಜಾಬಿ ಐವತ್ತು ಮಿಲಿಯ ಜನರ ಭಾಷೆ; ಸಿಂಧಿ ಏಳು ಮಿಲಿಯ, ಪಶ್ತು ಆರು ಮಿಲಿಯ; ಬಲೂಚಿ, ಬ್ರಹ್ವಿ (ದ್ರಾವಿಡ) ಮೊದಲಾದ ಇನ್ನಿತರ ಅಲ್ಪಸಂಖ್ಯಾತ ಭಾಷೆಗಳೂ ಇವೆ. ಸಿಲೋನಿನಲ್ಲಿ ಶೇಕಡಾ ಎಪ್ಪತ್ತು ಜನರ ಭಾಷೆ ಸಿಂಹಳಿ; ಉಳಿದ ಮೂವತ್ತು ತಮಿಳು. ಹಲವು ಸಂದರ್ಭಗಳಲ್ಲಿ ಭಾಷೆಗಳು ಜನಾಂಗಗಳನ್ನೂ, ಭೂಪ್ರದೇಶಗಳನ್ನೂ ಗುರುತಿಸುವ ಕಾರಣ ಅವು ರಾಷ್ಟ್ರೀಯತೆಯ ಆಕಾಂಕ್ಷೆಗೆ ಮತ್ತು ಆ ಮೂಲಕ ಜನಾಂಗೀಯ ಘರ್ಷಣೆಗೆ ಕಾರಣವಾಗುತ್ತವೆ.

ಈ ಮಟ್ಟಿಗೆ ಭಾರತದಲ್ಲಿರುವಷ್ಟು ಭಾಷಾಭಿನ್ನತೆ ಲೋಕದ ಇನ್ನು ಯಾವುದೇ ದೇಶದಲ್ಲಿ ಇಲ್ಲವೆನ್ನುವುದು ಗಮನಾರ್ಹ. ಇಲ್ಲಿ ಸುಮಾರು ೧೫ಂಕ್ಕಿಂತಲೂ ಹೆಚ್ಚು ಭಾಷೆಗಳಿದ್ದು, ಅವುಗಳಲ್ಲಿ ಹಲವು ಲೋಕದ ಪ್ರಮುಖ ಭಾಷೆಗಳ ಸಾಲಲ್ಲಿ ನಿಲ್ತತ್ತವೆ. ಯಾವುದೇ ಒಂದು ಭಾಷೆಯನ್ನೂ ಶೇಕಡಾ ೩ಂಕ್ಕಿಂತ ಹೆಚ್ಚು ಜನ ಮಾತಾಡುವುದಿಲ್ಲ ಎನ್ನುವುದೂ ಮುಖ್ಯ ಸಂಗತಿ. ಇಲ್ಲೂ ಭಾಷೆಗಳ ಕಾರಣಕ್ಕೆ ಘರ್ಷಣೆಗಳು ನಡೆದಿವೆ, ನಡೆಯುತ್ತಲೂ ಇವೆ; ಆದರೆ ವಿಭಿನ್ನ ವರ್ಣಗಳು, ಮತಗಳು, ಸಂಸ್ಕೃತಿಗಳು, ಮತ್ತು ಭಾಷೆಗಳು ತುಂಬಿರುವ ನಮ್ಮ ದೇಶ ನಿಜಕ್ಕೂ ದೇವತೆಗಳ ಆಡುಂಬೊಲವಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೫
Next post ಕಿರೀಟೆಗಳು

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…