ಕನ್ನಡ-ಕರ್ನಾಟಕ : ಇಂದಿನ ಸವಾಲುಗಳು

ಕನ್ನಡ-ಕರ್ನಾಟಕ : ಇಂದಿನ ಸವಾಲುಗಳು

ಯಾವುದೇ ಜೀವಂತ ಸಂಸ್ಕೃತಿಗೆ ಎಲ್ಲಾ ಕಾಲದಲ್ಲಿಯೂ ಸವಾಲುಗಳು ಇದ್ದದ್ದೇ. ಅದು ಸಹಜ ಮತ್ತು ಸ್ವಾಭಾವಿಕ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕನ್ನಡಕ್ಕೂ ತನ್ನ ಎಲ್ಲಾ ಕಾಲಗಳಲ್ಲಿಯೂ ಸವಾಲುಗಳು ಇದ್ದವು ಮತ್ತು ಅವು ಇಂದಿಗೂ ಇವೆ. ಇಂತಹ ಸವಾಲುಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಇವು ಪ್ರಾಚೀನ ಕಾಲದಿಂದಲೂ ಪ್ರಕಟಿಸುತ್ತಾ ಬಂದಿವೆ. ಉದಾಹರಣೆಗೆ, ವಸಾಹತು ಪೂರ್ವ ಸಂದರ್ಭದಲ್ಲಿ ಸಂಸ್ಕೃತ ವಸಾಹತು ಶಾಹಿಯ ಎದುರಿನಲ್ಲಿ ಕನ್ನಡವು ತನ್ನ ಜೀರ್ಣ ಶಕ್ತಿಯನ್ನು ಪ್ರಕಟಗೊಳಿಸಿದೆ. ಅಂತೆಯೇ ಬ್ರಿಟಿಷ್ ವಸಾಹತು ಸಂದರ್ಭದಲ್ಲಿ ಇಂಗ್ಲೀಷ್ ಸಾಮ್ರಾಜ್ಯಶಾಹಿಗೆ ಮುಖಾಮುಖಿಯಾಗುತ್ತಲೇ ತನ್ನ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ ಬಂದಿವೆ.

ಹೀಗೆ ವಿವಿಧ ಕಾಲಮಾನಗಳಲ್ಲಿ ವಿಭಿನ್ನ ಮಾದರಿಯ ಸವಾಲುಗಳನ್ನು ಎದುರಿಸುತ್ತಾ ಬಂದ ಕರ್ನಾಟಕ-ಕನ್ನಡಗಳು ಇಂದು ಅನೇಕ ವಿಧವಾದ ಸವಾಲುಗಳನ್ನು ಎದುರಿಸುತ್ತಿವೆ. ಅವುಗಳನ್ನು ಮೊದಲಿಗೆ ಹೀಗೆ ಸ್ಥೂಲವಾಗಿ ಚರ್ಚಿಸುತ್ತಾ ಹೋಗಬಹುದು.

೧. ಇಂಗ್ಲೀಷ್ ಸಾಮ್ರಾಜ್ಯಶಾಹಿ -ಜಾಗತೀಕರಣ, ಉದಾರೀಕರಣ, ಖಾಸಗೀಕರಣ

ಇದರ ಮೂಲಕವಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆಯ ಪ್ರಜಾಸತ್ತೆಗೆ ಆತಂಕ ಒದಗುತ್ತಿದೆ. ಸಂವಿಧಾನದ ಆಶಯದ ಮೇರೆಗೆ ಕರ್ನಾಟಕದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಇದೆ. ಆದರೆ ಇದರ ಅಸ್ತಿತ್ವಕ್ಕೇ ಆತಂಕಕಾರಿಯಾಗಿ ಇಂಗ್ಲೀಷ್ ಮಾರ್ಪಡುತ್ತಿದೆ. ಕಾರಣ, ಕರ್ನಾಟಕದ ಸಾರ್ವಜನಿಕ ವಲಯದಲ್ಲಿ ಜಾಗತೀಕರಣದ ಪರಿಣಾಮವಾಗಿ ಅನೇಕ ಉದ್ದಿಮೆಗಳು ಖಾಸಗಿಯವರ ಪಾಲಾಗುತ್ತಿವೆ. ಇನ್ನೂ ಅನೇಕ ಸಂಸ್ಥೆಗಳು, ಕಂಪೆನಿಗಳು ವಿದೇಶಗಳಿಂದ ನೇರವಾಗಿ ಇಲ್ಲಿಗೆ ಆಗಮಿಸಿ, ನೆಲೆಯೂರುತ್ತಿವೆ. ಇಂತಹ ನಡೆಗಳಲ್ಲಿ ಇಂಗ್ಲೀಷಿಗೆ ಮೊದಲ ಸ್ಥಾನ ದಕ್ಕುತ್ತಿದೆ. ಇಂಗ್ಲೀಷ್ ಬಲ್ಲವರಿಗೆ ಆದ್ಯತೆಯಾನುಸಾರ ಇಲ್ಲಿ ಉದ್ಯೋಗವಕಾಶಗಳು ಲಭ್ಯವಾಗುತ್ತಿವೆ. ಹೀಗೆ ಈ ನೆಲೆಯಲ್ಲಿ ಇಂಗ್ಲೀಷಿಗೆ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗುತ್ತಿರುವುದರಿಂದ ಸಹಜವಾಗಿಯೇ ಅನೇಕರು ಇಂಗ್ಲೀಷಿನ ದಾಸರಾಗುತ್ತಿದ್ದಾರೆ. ಅಲ್ಲದೆ ಕನ್ನಡದ ಮೂಲಕ ಸಾಧಿಸುವಷ್ಟು ಬೌದ್ಧಿಕ ಸಾಧನೆ ಮಾಡದ ಸ್ಥಿತಿಯನ್ನು ಇವರು ಮುಟ್ಟುತ್ತಿದ್ದಾರೆ.

ಖಾಸಗಿ ನೆಲೆಯಲ್ಲಿ ಶ್ರಮದ ಮಾನವೀಕರಣ ಇಲ್ಲ. ಇಲ್ಲಿ ಮನುಷ್ಯರೆಲ್ಲರೂ ಮೂಲತಃ ಯಂತ್ರಗಳೇ. ಆದ್ದರಿಂದ ಯಾವುದೇ ಬಗೆಯ ಮನುಷ್ಯ ಸಂವೇದನೆಗಳಿಗೆ ಇಲ್ಲಿ ಜಾಗವಿಲ್ಲ. ಜೊತೆಗೆ ಉದ್ಯೋಗದ ಭದ್ರತೆ ಇಲ್ಲಿ ಇಲ್ಲವಾದ್ದರಿಂದ ಭವಿಷ್ಯದ ಬಗೆಗೂ ಕಳವಳಕಾರಿಯಾದ ನೋಟವೇ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಎನ್.ಜಿ.ಎಫ್., ಕಾಗದದ ಕಾರ್ಖಾನೆ, ಭಿನ್ನಿಮಿಲ್ ಮೊದಲಾದವು ಮುಚ್ಚುತ್ತಿದ್ದರೆ ಕೆಪಿಟಿಸಿ‌ಎಲ್ ಮೊದಲಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಖಾಸಗಿಯವರ ಪಾಲಾಗುತ್ತಿವೆ. ಹೀಗೆ ಕರ್ನಾಟಕದ ಬದುಕು ಪ್ರಜಾಸತ್ತೆಗೆ ವಿರುದ್ಧವಾದ ಬಂಡವಾಳ ಶಾಹಿ ಅಡಿಯಲ್ಲಿ ಬಾಳಬೇಕಾದ ಅವಸ್ಥೆ ಬಂದೊದಗುತ್ತದೆ. ಇದು ೭೦ರ ದಶಕದಲ್ಲಿ ಅನೇಕ ಸಂಸ್ಥೆಗಳು ರಾಷ್ಟ್ರೀಕರಣಕ್ಕೆ ಒಳಗಾದ ಅನೇಕ ಕ್ರಿಯೆಯ ವಿರುದ್ಧ ದಿಕ್ಕಿನಲ್ಲಿ ಇರುವಂಥದ್ದು. ಆದ್ದರಿಂದ ಇಂಗ್ಲೀಷ್ ಸಾಮ್ರಾಜ್ಯಶಾಹಿ ಇಂದು ಹಿಂದೆಂದಿಗಿಂತಲೂ ತನ್ನ ಕರಾಳ ಛೇಯೆಯನ್ನು ಮೂರು ನಾಲ್ಕು ‘ಕರಣ’ಗಳ (ಜಾಗತೀಕರಣ-ಉದಾರೀಕರಣ-ಖಾಸಗೀಕರಣ ವ್ಯಾಪಾರೀಕರಣ) ಮೂಲಕ ಕರ್ನಾಟಕದ ಮೇಲೆ ಚಾಚುತ್ತಿದೆ.

೨. ಜ್ಞೆನಮುಖಿ ಶಿಕ್ಷಣ ಅವಸಾನದತ್ತ

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜ್ಞೆನಮುಖಿಯಾದ ಶಿಕ್ಷಣವು ಅವಸಾನದತ್ತ ಚಲಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಂಪ್ಯೂಟರ್ ಮೊದಲಾದ ವೃತ್ತಿ ಶಿಕ್ಷಣವು ಪ್ರಧಾನ ಧಾರೆಗೆ ಏರುತ್ತಿದೆ. ಇದರ ಪರಿಣಾಮವಾಗಿ ಬಿ‌ಎ., ಬಿಸ್ಸಿ., ಬಿಕಾಂ ಮೊದಲಾದ ತರಗತಿಗಳು ಮುಚ್ಚುವ ಹಂತವನ್ನು ತಲುಪುತ್ತಿವೆ. ಇವು ಸಾಮಾನ್ಯ ಶಿಕ್ಷಣ ಪರಿಧಿಗೆ ಸೇರುತ್ತವೆ. ಇವು ಮೂಲಭೂತವಾಗಿ ಉದ್ಯೋಗಮುಖಿಯಾದ ಶಿಕ್ಷಣಕ್ಕೆ ಸೂಕ್ತವಾದ ಪೂರ್ವಭಾವಿ ವೇದಿಕೆಯನ್ನು ನಿರ್ಮಿಸಿಕೊಡುವ ಕೋರ್ಸುಗಳಾಗಿವೆ. ಆದರೆ ಇವುಗಳಿಗೆ ಇಂದಿನ ಖಾಸಗಿವಲಯದಲ್ಲಿ ಮಾರುಕಟ್ಟೆಯ ಮೌಲ್ಯ ಇಲ್ಲವಾದ್ದರಿಂದ ಮತ್ತು ಇದನ್ನು ಬಂಡವಾಳ ಪತಿಗಳು ನಿರ್ಧರಿಸುತ್ತಿರುವುದರಿಂದ ಜ್ಞೆನದ ಸಂವೇದನೆಗಳಿಗೆ ಬೆನ್ನು ತೋರಿದ ಯುವಜನತೆ ತಮ್ಮ ಕೌಶಲ್ಯತೆಯನ್ನು ವೃತ್ತಿಶಿಕ್ಷಣದಲ್ಲಿ ಪ್ರಕಟಪಡಿಸುತ್ತಿದೆ. ಇಂತಹ ವಾತಾವರಣ ಎಲ್ಲೆಡೆಯೂ ಮೂಡುತ್ತಿರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ರಂಗ, ಅದು ಎಲ್‌ಕೆಜಿ, ಯುಕೆಜಿಯಿಂದ ಉನ್ನತ ಶಿಕ್ಷಣದವರೆಗೂ ಮುಖ್ಯ ಪಾತ್ರವನ್ನು ನಿರ್ವಹಿಸತೊಡಗಿದೆ. ಇದರಿಂದ ಒಂದು ಬಗೆಯ ಬೌದ್ಧಿಕ ದಾರಿದ್ರ್ಯ ತಾಂಡವವಾಡಲು ಸಾಧ್ಯವಾಗುತ್ತಿದೆ. ಕಾರಣ, ಈ ಕೋರ್ಸುಗಳಲ್ಲಿ ಯಾವುದೇ ವಿಧವಾದ ಮನುಷ್ಯ ಸಂವೇದನೆಗಳಿಗೆ ಜಾಗವಿಲ್ಲ. ಮತ್ತು ಇಲ್ಲಿಯ ಶಿಕ್ಷಣದ ಭಾಷೆ ನಮಗೆ ದೂರ ಮತ್ತು ಕಷ್ಟ ಸಾಧ್ಯವಾದ ಇಂಗ್ಲೀಷ್ ಭಾಷೆ. ಇದರ ಯಜಮಾನರು ಖಾಸಗಿಯವರಾದ್ದರಿಂದ ಶಿಕ್ಷಣದ ಶುಲ್ಕವೂ ಅಧಿಕ. ಆದ್ದರಿಂದ ಬಡವರು ಬಡವರಾಗಿಯೇ ಉಳಿವ ದಿನಗಳಿವು ಅಥವಾ ಇವರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆಯುತ್ತಾ, ಅಲ್ಲಿ ತಮ್ಮ ಭಾಷಾ ಶಿಕ್ಷಣ ಮತ್ತು ಶಾಲೆಯ ಬಗೆಗೆ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾ, ಕೊನೆಗೆ ವೃತ್ತಿ ಶಿಕ್ಷಣದ ಪ್ರವೇಶದ ಹೊತ್ತಿಗೆ ಡೊನೇಶನ್ ಕೊಡಲು ಸಾಧ್ಯವಾಗದೆ ಹಿಂದುಳಿವ ಸ್ಥಿತಿ.

ಹೀಗೆ ಭಾಷಿಕವಾಗಿ, ಆರ್ಥಿಕವಾಗಿ ಶ್ರೇಣೀಕರಣವನ್ನು ಪೋಷಿಸಿಕೊಂಡು ಹೋಗುವ ಮತ್ತು ನಮ್ಮ ಪ್ರಜಾಸತ್ತೆಯ ಮೌಲ್ಯಗಳನ್ನು ಅಪ್ರಸ್ತುತಗೊಳಿಸುವ ಯತ್ನವನ್ನು ನಮ್ಮ ಆಳುವ ವರ್ಗ ಮತ್ತು ಉದ್ಯಮಪತಿಗಳು ಬಹಳ ನಾಜೂಕಾಗಿಯೇ ಮಾಡಿಕೊಂಡು ಬರುತ್ತಿದ್ದಾರೆ.

೩. ನಗರ ಕೇಂದ್ರಿತ ಅಭಿವೃದ್ಧಿ ಚಿಂತನೆಗಳು

ನಗರ ಕೇಂದ್ರಿತ ಅಭಿವೃದ್ಧಿ ಚಿಂತನೆಗಳಿಗೂ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣಕ್ಕೂ ನಿಕಟ ಸಂಬಂಧವಿದೆ. ಇದರ ಆದಿಯು ಪ್ರಧಾನಿ ನೆಹರೂ ಅವರ ಕಾಲದಲ್ಲಿದೆ. ಅಲ್ಲಿಂದಲೂ ಪ್ರಗತಿಯೆಂಬುದು ನಗರ, ಬೃಹತ್ ಕೈಗಾರಿಕೆಗಳ ರೂಪದಲ್ಲಿಯಲ್ಲಿ ಪ್ರಕಟವಾಗುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಜನತೆ ಬದುಕುತ್ತಿರುವ ಗ್ರಾಮೀಣ ಪ್ರದೇಶ ಅವಜ್ಞೆಗೆ ಈಡಾಗಿದೆ. ಆದ್ದರಿಂದ ಗ್ರಾಮಸ್ವರಾಜ್ಯ ಕಲ್ಪನೆಯು ಗಾಂಧಿಜಿಯ ಕನಸಿನ ಬುಟ್ಟಿಯಲ್ಲಿಯೇ ಉಳಿದು ಬಿಟ್ಟಿರುವಂತಿದೆ. ಹೀಗಾಗಿ ಸರ್ಕಾರಗಳು ಗ್ರಾಮ ಮತ್ತು ರೈತ ಹಾಗೂ ಅವರ ಭಾಷೆಯ ಪರವಾದ ನೀತಿಯನ್ನು ಪ್ರಕಟಗೊಳಿಸದೆ ನಡೆದು ಬಂದಿದೆ. ಈ ನಿಟ್ಟಿನಲ್ಲಿ ಹಳ್ಳಿಗಳು ಮತ್ತು ಅಲ್ಲಿಯ ಜನತೆ ತಮ್ಮ ಪ್ರಗತಿಗಾಗಿ ನಗರಗಳನ್ನು ಎದುರು ನೋಡುವಂತಾಗುತ್ತಿದೆ. ಉದಾಹರಣೆಗೆ (ಬರಗೂರರ ಹೇಳಿಕೆಯ ಮೇರೆಗೆ) ಕರ್ನಾಟಕ, ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಅಥಣಿ ತಾಲ್ಲೂಕಿನ ಕೆಲವು ಹಳ್ಳಿಯ ಮಂದಿ ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವ ಮನವಿ ಪತ್ರವನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ. ಕಾರಣ, ಈ ಹಳ್ಳಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಶಾಲೆ, ಆಸ್ಪತ್ರೆ ಮೊದಲಾದವನ್ನು ಕರ್ನಾಟಕ ಸರ್ಕಾರವು ಇಂದಿಗೂ ಒದಗಿಸಿಲ್ಲ, ಪರಿಣಾಮವಾಗಿ ಇವರು ಭಾಷೆ ಮತ್ತು ಬದುಕುಗಳ ಆಯ್ಕೆಯ ವಿಚಾರದಲ್ಲಿ ಸಹಜವಾಗಿಯೇ ಬದುಕನ್ನು ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುವುದರಿಂದ ಅಲ್ಲಿ ಕನ್ನಡ ಭಾಷೆ ಹಿಂದಕ್ಕೆ ಸರಿಯುತ್ತದೆ. ಇದು ಅವರ ಕನ್ನಡ ಪರವಾದ ನಿರಭಿಮಾನ ದ್ಯೋತಕ ಎಂದರೆ, ಅದು ಉಡಾಫೆಯ ಮಾತಾಗುತ್ತದೆ ಅಷ್ಟೆ.

ಹೀಗೆ ಕಳೆದು ಐವತ್ತು ವರ್ಷಗಳಿಂದ ನಮ್ಮ ಸರ್ಕಾರಗಳು ಪ್ರಕಟಿಸುತ್ತಾ ಬಂದ ನಗರ ಕೇಂದ್ರಿತ ಅಭಿವೃದ್ಧಿ ಚಿಂತನೆಗಳು ಇಂದಿನ ಜಾಗತೀಕರಣದ ಸನ್ನಿವೇಶದಲ್ಲಿ ಮತ್ತಷ್ಟು ಗರಿಗೆದರಿಕೊಂಡು ಕಂಪ್ಯೂಟರ್, ಐಟಿ, ಇಂಗ್ಲೀಷ್ ಮೊದಲಾದ ಕಲ್ಪನೆಗಳ ಮೂಲಕ ಅಮೆರಿಕೀಕರಣಕ್ಕೆ ಈಡಾಗುತ್ತಾ ರೈತರ ಆತ್ಮಹತ್ಯೆಗೂ ಕಾರಣವಾಗುತ್ತಿವೆ.

೪. ಕನ್ನಡಿಗರಿಂದಲೇ ಕನ್ನಡ ಮಾಧ್ಯಮ ಯಾಕೆ ಅನುಷ್ಠಾನವಾಗುತ್ತಿಲ್ಲ?

ಕನ್ನಿಡಿಗರೂ ಭಾರತೀಯರೂ ಬ್ರಿಟಿಷರ ಗುಲಾಮಗಿರಿಯಲ್ಲಿ ಇನ್ನೂರು ವರ್ಷಗಳ ಕಾಲ ಬದುಕು ನಡೆಸಿದ್ದಾರೆ. ಅದರ ಪ್ರಭಾವ ೧೯೪೭ ಆಗಸ್ಟ್ ೧೫ ಕ್ಕೆ ಕೊನೆಗೊಳ್ಳಬೇಕು ಎಂದರೆ ಅದು ಸಾಧ್ಯವೂ ಅಲ್ಲ. ಆದ್ದರಿಂದಲೇ ಭಾರತ ತನ್ನ ಸ್ವಾತಂತ್ರ್ಯೋತ್ತರ ಬದುಕಿನಲ್ಲಿಯೂ ಮತ್ತೊಂದು ವಿಧವಾದ(ನವ) ವಸಾಹತುಶಾಹಿಗೆ ಒಳಗಾಗಿರುವುದು. ಹೀಗಿರುವಾಗ ಇಂಗ್ಲೀಷ್ ವ್ಯಾಮೋಹ ಕನ್ನಡಿಗರಿಂದ ಬಿಡಿಸಲಾರದ ಅಂಟಾಗಿದೆ.

ಭಾರತವು ಸಾವಿರಾರು ವರ್ಷಗಳಿಂದ ಭಾಷಿಕವಾಗಿ, ಧಾರ್ಮಿಕವಾಗಿ ಸಾಮಾಜಿಕವಾಗಿ ಶ್ರೇಣೀಕೃತ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿದೆ. ಇದರ ಭಾಗವಾದ ಸಂಸ್ಕೃತಕ್ಕೆ ಅಲ್ಲಿ ಆರ್ಥಿಕ ಮೌಲ್ಯವೂ ದಕ್ಕಿದೆ. ಇದರೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಪ್ರತಿಷ್ಠೆಗಳೂ ಸೇರಿ ಅದರ ಎತ್ತರವೇ ಬೇರೆಯಾಗಿದೆ. ಇದರಿಂದ ವಂಚಿತರಾದ ಶ್ರಮ ಸಂಸ್ಕೃತಿಯ ಜನ ಸಹಜವಾಗಿಯೇ ಅದಕ್ಕೆ ಹಿಂಬಾಲಿಸಿ ಸೋತಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ಪ್ರಸ್ತಾಪವನ್ನು ಇಲ್ಲಿ ಮಾಡುವುದಿಲ್ಲ. ಒಟ್ಟಾರೆ ಅಂದಿನ ಸಂಸ್ಕೃತದ ಸ್ಥಾನವನ್ನು ಇಂದು ಇಂಗ್ಲೀಷ್ ಅಲಂಕರಿಸಿದೆ. ಆದರೆ ಇದರ ಕಲಿಕೆಗೆ ಸಾಮಾಜಿಕ ಹಾಗೂ ಧಾರ್ಮಿಕವಾದ ನಿರ್ಬಂಧಗಳು ಇಲ್ಲ. ಆದರೆ ಆರ್ಥಿಕವಾದ ಬಲ ಬೇಕು ಅಷ್ಟೆ. ಇದನ್ನು ಕಲಿತವರಿಗೂ ನಮ್ಮ ಸಮಾಜದಲ್ಲಿ ಹುಸಿ ಪ್ರತಿಷ್ಠೆ ದಕ್ಕುತ್ತದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣಗಳಿಗೆ ತೀವ್ರವಾಗಿ ಒಳಗಾಗುತ್ತಿರುವ ನಮ್ಮ ಉದ್ಯಮಗಳ ಕ್ಷೇತ್ರದಲ್ಲಿಯೂ ಇಂಗ್ಲೀಷಿಗೆ ಮೊದಲ ದರ್ಜೆಯ ಸ್ಥಾನ ಗಿಟ್ಟುತ್ತಿದೆ. ಆದ್ದರಿಂದ ಸಾಮಾಜಿಕವಾಗಿ ತುಳಿತಕ್ಕೊಳಗಾದ ಜನರು ಸಹ ಆರ್ಥಿಕ ಸಂಕಷ್ಟಗಳಿಗೊಳಗಾಗಿಯಾದರೂ ಇಂಗ್ಲೀಷನ್ನು ಅಪ್ಪಿಕೊಳ್ಳುವತ್ತ ಹೆಜ್ಜೆಗಳನ್ನು ಹಾಕುತ್ತಿದ್ದಾರೆ. ಇಲ್ಲಿ ಕನ್ನಡಭಿಮಾನವೆಂಬ ಮಾತುಗಳು ಕಿವಿಗೆ ಕೇಳಿಸಿದರೂ, ಅದು ಮನಸ್ಸಿಗೆ ತಟ್ಟುತ್ತಿಲ್ಲವಾಗಿದೆ.

ಹೀಗೆ ಸಾಮಾಜಿಕವಾಗಿ ಪಾರಂಪರಿಕವಾಗಿ ಚಲನೆಯನ್ನು ಕಾಣದ ಜನವರ್ಗವೇ ಇಲ್ಲಿ ದೊಡ್ಡಸಂಖ್ಯೆಯಲ್ಲಿರುವಾಗ ವೈಜ್ಞೆನಿಕ ಆವಿಷ್ಕಾರವಾದ ಕನ್ನಡ ಮಾಧ್ಯಮದ ಅನುಷ್ಠಾನದ ಪ್ರಶ್ನೆ ಕಷ್ಟ ಸಾಧ್ಯವಾಗುತ್ತಿದೆ.

೫. ಕನ್ನಡ ಭಾಷೆ ಸಾಹಿತ್ಯದ ವಲಯದಿಂದಾಚೆಗೆ ಬೆಳೆಯುತ್ತಿಲ್ಲ

ಕನ್ನಡವೆಂದರೆ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯ ಎಂಬ ಸೀಮಿತ ತಿಳುವಳಿಕೆ ಅನೇಕ ಪ್ರಜ್ಞೆವಂತರಲ್ಲಿಯೂ ಇದೆ. ಆದ್ದರಿಂದಲೇ ಕನ್ನಡ ಭಾಷೆ ಸಾಹಿತ್ಯದ ವಲಯದಲ್ಲಿ ಪಡೆಯುತ್ತಿರುವ ಬೆಳವಣಿಗೆಯ ತೀವ್ರತೆಯನ್ನು ಇತರೆ ಜ್ಞೆನ ಶಾಖೆಗಳ ವಲಯಗಳಲ್ಲಿ ಪಡೆಯಲಾಗುತ್ತಿಲ್ಲ. ಅಲ್ಲಿ ಜ್ಞೆನವೆಂದರೆ ಇಂಗ್ಲೀಷ್ ಎಂಬ ಭ್ರಮೆಯೂ ಗಾಢವಾಗಿಯೇ ಇದೆ. ಇದರೊಂದಿಗೆ ಉನ್ನತ ವಿಚಾರಗಳು ಇಂಗ್ಲೀಷಿನಲ್ಲಿ ಮಾತ್ರ ಲಭ್ಯವಿದ್ದು, ಅವುಗಳನ್ನು ಕನ್ನಡದಲ್ಲಿ ಹೇಳಲು ಸಾಧ್ಯವಿಲ್ಲವಾಗಿದೆ ಎಂಬ ಗಿಳಿ ಪಾಠಗಳೂ ಅನೇಕ ವಿದ್ವಾಂಸರಿಂದ ಕೇಳಿ ಬರುತ್ತಲೇ ಇವೆ. ಇದು ಆಂಶಿಕವಾಗಿ ಸತ್ಯವೂ ಇರಬಹುದು. ಆದರೆ ಇಡೀ ಜಗತ್ತಿನ ಬೇರೆ ಬೇರೆ ದೇಶಗಳ ಸಂದರ್ಭದಲ್ಲಿ ಜ್ಞೆನವೆಲ್ಲವೂ ಇಂಗ್ಲೀಷ್ ಭಾಷೆಯ ಮೂಲಕವೇ ಉತ್ಪನ್ನಗೊಳ್ಳುತ್ತಿದೆಯೇ? ಜಪಾನ್, ಜರ್ಮನಿ, ಚೈನಾ ಮೊದಲಾದ ದೇಶಗಳೂ ಇದರಿಂದ ಹೊರತಾಗಿಲ್ಲವೇ? ವಿದ್ವಾಂಸರೇ ಇದನ್ನು ವಿವೇಚಿಸಿಕೊಳ್ಳಬೇಕು.

ಇನ್ನೂ ಒಂದು ಮಾತು ನಮ್ಮ ನಡುವೆ ಪ್ರಚಲಿತದಲ್ಲಿದೆ. ಅದೆಂದರೆ, ಭೌತಶಾಸ್ತ್ರ, ಎಂಜಿನಿಯರಿಂಗ್, ವೈದ್ಯಕೀಯ ಮೊದಲಾದ ಶಾಸ್ತ್ರಗಳನ್ನು ಕನ್ನಡದಲ್ಲಿ ಹೇಳಲು ಸಹಾಯಕ ಮತ್ತು ಪೂರಕ ಸಾಮಗ್ರಿಗಳ ಕೊರತೆ ಬಹಳಷ್ಟು ಇದೆ ಎಂಬುದು. ಇದನ್ನು ಅನೇಕ ತಜ್ಞರು ಮತ್ತು ವಿಶ್ವವಿದ್ಯಾಲಯ, ಕಾಲೇಜುಗಳ ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ಇಂದಿಗೂ ಹೇಳುತ್ತಲೆ ಬಂದಿದ್ದಾರೆ. ಇದು ಸರಿ. ಆದರೆ ಈ ಕೊರತೆಯನ್ನು ಅಥವಾ ಇವರಿಗೆ ಬೇಕಾದ ಕನ್ನಡ ಪಠ್ಯಗಳನ್ನು ಯಾರು ರಚಿಸಿಕೊಡಬೇಕು?ಕಾರ್ಖಾನೆಯಲ್ಲಿರುವ ಕಾರ್ಮಿಕರೇ ಅಥವಾ ಕೆಸರಿನಲ್ಲಿ ದುಡಿಯುತ್ತಿರುವ ರೈತರೇ? ಯುಜಿಸಿ ಮೊದಲಾದ ವೇತನವನ್ನು ಪಡೆಯುತ್ತಿರುವ ಅಧ್ಯಾಪಕರೆ ಇದಕ್ಕೆ ಉತ್ತರಿಸಬೇಕು.

ಹೀಗೆ ವಿಭಿನ್ನ ಜ್ಞೆನ ಶಾಖೆಗಳಲ್ಲಿ ದುಡಿಯುತ್ತಿರುವ ಪ್ರಜ್ಞೆವಂತ ಜನತೆ ದೇಶ ಭಾಷೆಯನ್ನು ತಮ್ಮ ಜ್ಞೆನದ ಅಭಿವೃದ್ಧಿಗೆ ಸಜ್ಜುಗೊಳಿಸಿದ್ದೇ ಆದರೆ ಕನ್ನಡದ ಮೂಲಕ ಜಗತ್ತಿನ ಬೌದ್ಧಿಕತೆಯು ಕರ್ನಾಟಕಕ್ಕೆ ಇಳಿಯುತ್ತದೆ. ಆಗ ಕರ್ನಾಟಕವೇ ಮಾದರಿ ಕನ್ನಡಕ್ಕೆ ವೇದಿಕೆಯಾಗುತ್ತದೆ. ಅಲ್ಲಿ ಐದುಕೋಟಿ ಜನಸಂಖ್ಯೆಯೆಂಬುದು ಸಮಸ್ಯೆ ಎನ್ನಿಸುವುದಿಲ್ಲ; ಸಂಪನ್ಮೂಲ ಎನ್ನಿಸುತ್ತದೆ.

ಹೀಗೆ ಕನ್ನಡ-ಕರ್ನಾಟಕದ ಸಮಕಾಲೀನ ಸಮಸ್ಯೆಗಳು ಹಲವು. ಅವುಗಳ ಪಟ್ಟಿ ಪುಟಗಳನ್ನು ದಾಟುತ್ತದೆ; ಚರ್ಚೆ ಪುಸ್ತಕಗಳನ್ನು ಮೀರುತ್ತದೆ. ಆದರೂ ಆ ನಿಟ್ಟಿನಲ್ಲಿ ಒಂದು ಕ್ಷ ಕಿರಣವಷ್ಟೆ ಇಲ್ಲಿಯ ಮಾತುಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಂಭದ ಹುಂಜ
Next post ಮರಗಳು ಮಾತಾಡುತ್ತವೆ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…