ಜನವರಿ ೧೨ ವಿವೇಕಾನಂದರ ಜನ್ಮದಿನ; ೨೦೧೩ಕ್ಕೆ ೧೫೦ ವರ್ಷಗಳು ತುಂಬಿದ ಕಾಲ ಘಟ್ಟ. ಹೀಗಾಗಿಯೇ ಈ ವರ್ಷದ ಜನ್ಮದಿನಕ್ಕೆ ವಿಶೇಷ ಮಹತ್ವ. ಇಷ್ಟು ವರ್ಷಗಳ ಅವಧಿಯಲ್ಲಿ ವಿವೇಕಾನಂದರು ಯಾರಾರಿಗೆ ಹೇಗೆ ಕಂಡರು ಹೇಗೆ ಉಳಿದರು, ಹೇಗೆ ಬೆಳಕಾದರು, ಹೇಗೆ ಬಳಕೆಯಾದರು ಎಂಬ ಪ್ರಶ್ನೆಗಳಿಗೂ ಅಷ್ಟೇ ಮಹತ್ವವಿದೆಯೆಂದು ನಾನು ಭಾವಿಸುತ್ತೇನೆ.
ನನ್ನ ವಿದ್ಯಾರ್ಥಿ ದಿನಗಳಲ್ಲಿ ವಿವೇಕಾನಂದರ ಹೆಸರೇ ಒಂದು ರೋಮಾಂಚನವಾಗಿತ್ತು; ಯಾಕೆಂದರೆ ರೋಮಾಂಚನಕ್ಕಾಗಿಯೇ ಅವರ ಹೆಸರು ಹೆಚ್ಚು ಬಳಕೆಯಾಗುತ್ತಿತ್ತು. ವೇದಿಕೆ ಮೇಲಿನ ಭಾಷಣಗಳಲ್ಲಿ ವಿವೇಕಾನಂದರ ವಿಚಾರಗಳಿಗಿಂತ ಹೆಚ್ಚಾಗಿ ಅವರನ್ನು ಹಿಂದೂಧರ್ಮದ ಧೀರ ಎಂದು ಮಾತ್ರ ಹೇಳಲಾಗುತ್ತಿತ್ತು. ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ‘ಸೋದರ ಸೋದರಿಯರೇ’ ಎಂದು ಸಂಬೋಧಿಸಿ ಭಾಷಣವನ್ನು ಆರಂಭಮಾಡಿದ ರೀತಿಯನ್ನು ರೋಮಾಂಚಕಾರಿಯಾಗಿ ನಿರೂಪಿಸಲಾಗುತ್ತಿತ್ತು. ಅಷ್ಟೇ ಆಗಿದ್ದರೆ ಪರವಾಗಿಲ್ಲ. ‘ಸೋದರ ಸೋದರಿಯರೇ’ ಎಂಬ ಸಂಬೋಧವಾಚಕವು ಹಿಂದೂಧರ್ಮದ್ದು ಮಾತ್ರವೆಂದೂ ಪಾಶ್ಚಾತ್ಯರಿಗೆ ಈ ರೀತಿಯ ವಾಚಕಗಳ ಸಂಬಂಧವೇ ಇಲ್ಲವೆಂದೂ ಹೀಗಾಗಿ ಹಿಂದೂ ಧರ್ಮ ಶ್ರೇಷ್ಠವೆಂದೂ ಪ್ರತಿಷ್ಠಾಪಿಸಲಾಗುತ್ತಿತ್ತು. ವಿದ್ಯಾರ್ಥಿ ದೆಸೆಯಲ್ಲಿದ್ದ ನಾನು ಅದನ್ನಷ್ಟೇ ನಂಬಿದ್ದು ಸಹಜವಾಗಿತ್ತು. ವಿವೇಕಾನಂದರನ್ನು ಹಿಂದೂ ಧರ್ಮದ ಅಧಿಕೃತ ಪ್ರತಿನಿಧಿಯಾಗಿ ಕಳಿಸಲಾಗಿದೆಯೆಂದೇ ಆಗ ನಾನು ಭಾವಿಸಿದ್ದೆ. ನನ್ನಂಥವರಲ್ಲಿ ಮೂಡಿಸಿದ ಅಭಿಪ್ರಾಯವೂ ಅದೇ ರೀತಿಯಲ್ಲಿತ್ತು. ಆದರೆ ಆನಂತರ ನನಗೆ ಗೊತ್ತಾಯಿತು, ವಿವೇಕಾನಂದರು ಹಿಂದೂಧರ್ಮದ ಅಧಿಕೃತ ಪ್ರತಿನಿಧಿಯಾಗಿ ಹೋಗಿರಲಿಲ್ಲ ಎಂದು ಅಧಿಕೃತ ಪ್ರತಿನಿಧಿಗಳು ಬೇರೆ ಇದ್ದರು. ಅವರಾರೂ ‘ಸೋದರ ಸೋದರಿಯರೇ’ ಎಂದು ಸಂಬೋಧಿಸಲಿಲ್ಲ! ಹೀಗಾಗಿ ‘ಸೋದರ ಸೋದರಿಯರೇ’ ಎಂಬ ಸಂಬೋಧವಾಚಕವು ಧಾರ್ಮಿಕ ಪ್ರಾತಿನಿಧ್ಯದ್ದಲ್ಲ ಇದು ವಿವೇಕಾನಂದರ ವಿಶಿಷ್ಟ ಪ್ರತೀಕ.
‘ಸೋದರ ಸೋದರಿಯರೆ’ ಎಂದು ವಿವೇಕಾನಂದರು ಸಂಬೋಧಿಸಿದ್ದನ್ನು ಪ್ರಚುರಪಡಿಸಿ ದಂತೆಯೇ ‘ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂದು ಹೇಳಿದ್ದನ್ನೂ ಸಾಕಷ್ಟು ಪ್ರಸಿದ್ಧಗೊಳಿಸಲಾಗಿತ್ತು. ವಿದ್ಯಾರ್ಥಿದೆಸೆಯಲ್ಲಿದ್ದಾಗ ಕಂಠಪಾಠ ಮಾಡಿ ವಿವೇಕಾನಂದರನ್ನು ಮೈದುಂಬಿಸಿಕೊಂಡು ನಾನು ಈ ವಾಕ್ಯವನ್ನು ಉದ್ಘೋಷಿಸುತ್ತ ಬಂದದ್ದುಂಟು. ಆಗ ಅದರ ಹಿಂದೆ ಮುಂದೆ ಏನೂ ಗೊತ್ತಿರಲಿಲ್ಲ. ದೇಶದ ಯುವಕರಿಗೆ ಹೇಳಿದ ಮಾತು ಎಂದು ಅವರಿವರು ಹೇಳಿದ್ದು ಮಾತ್ರ ಗೊತ್ತಿತ್ತು. ಅನಂತರದ ಅಧ್ಯಯನಗಳಿಂದ ಗೊತ್ತಾಯಿತು, ಈ ಮಾತು ನವದೀಕ್ಷಿತ ಸನ್ಯಾಸಿಗಳಿಗೆ ಸನ್ಯಾಸ ಧರ್ಮವನ್ನು ವಿವರಿಸುವ ವ್ಯಾಖ್ಯಾನದ ಭಾಗವಾಗಿತ್ತು ಎಂದು. ವಿವೇಕಾನಂದರು ಹೊಸ ಸನ್ಯಾಸಿಮಿತ್ರರಿಗೆ ಹೀಗೆ ಹೇಳುತ್ತಾರೆ: “ಬಹು ಜನರ ಹಿತಕ್ಕೆ ಬಹುಜನರ ಸುಖಕ್ಕೆ ಸನ್ಯಾಸಿಯ ಜನ್ಮ, ಹೆರವರಿಗಾಗಿ ಬಾಳನ್ನು ಬಾಳಬೇಕು. ನರಳುವ ಲಕ್ಷಾಂತರ ದುಃಖಿಗಳನ್ನು ಸಂತೈಸಬೇಕು. ಗೋಳಿಡುವ ಮಾತೆಯರ ಕಂಬನಿಗಳನ್ನು ತೊಡೆಯ ಬೇಕು. ಪತಿತರಾದವರನ್ನು ಮೇಲೆತ್ತಬೇಕು. ಅಜ್ಞಾನಿಗಳಿಗೆ ಜ್ಞಾನದಾನ ಮಾಡಬೇಕು. ಜೀವದ ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಯೋಗಕ್ಷೇಮಗಳಿಗಾಗಿ ಜ್ಞಾನಜ್ಯೋತಿಯನ್ನು ಪಸರಿಸುವುದಕ್ಕಾಗಿಯೇ ಜನ್ಮವವೆತ್ತುವನು ಸನ್ಯಾಸಿ! ನೀವು ಎಚ್ಚರಗೊಳ್ಳಿ! ಇತರರನ್ನೂ ಎಚ್ಚರಗೊಳಿಸಿ! ಏಳಿ! ಎದ್ದೇಳಿ! ಗುರಿ ಮುಟ್ಟುವವರೆಗೂ ನಿಲ್ಲಬೇಡಿ! ಉತ್ತಿಷ್ಠತ ಜಾಗ್ರತ, ಪ್ರಾಪ್ಯ ವರಾನ್ ನಿಬೋಧತ” – ವಿವೇಕಾನಂದರ ಈ ಮಾತುಗಳನ್ನು ಕುವೆಂಪು ಅವರು ತಮ್ಮ ‘ಸ್ವಾಮಿ ವಿವೇಕಾನಂದ’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ (ಪುಟ – ೨೧೪-೧೫) ಸನ್ಯಾಸತ್ವದ ಆದ್ಯತೆಯು ಜನಮುಖಿಯಾಗಿರಬೇಕೆಂದು ಹೇಳುವ ವಿವೇಕಾನಂದರು ಸನ್ಯಾಸ ಧರ್ಮಕ್ಕೆ ಜೀವಪರ ನೆಲೆ ಒದಗಿಸಿದ್ದಾರೆ. ಹಾಗೆ ನೋಡಿದರೆ, ಅವರು ವಿದೇಶಕ್ಕೆ – ವಿಶೇಷವಾಗಿ ಚಿಕಾಗೊ ಸರ್ವಧರ್ಮ ಸಮ್ಮೇಳನಕ್ಕೆ – ಹೋದದ್ದು ಸಹ ಜನಹಿತ ಕಾರ್ಯಕ್ಕಾಗಿ – ತಮ್ಮ ವೇದಾಂತ ವಿವೇಕದ, ವೇದಾಂತದ, ಅರಿವನ್ನು ಪ್ರಚುರಗೊಳಿಸಿ, ವಿದೇಶೀಯರಿಂದ ಧನ ಸಂಗ್ರಹಮಾಡಿ ಭಾರತದ ಬಡವರಿಗೆ ಒಳಿತು ಮಾಡುವ ಉದ್ದೇಶ ಅವರದಾಗಿತ್ತು. ಮೊದಲೇ ಹೇಳಿದಂತೆ ಅವರು ಹಿಂದೂಧರ್ಮದ ಅಧಿಕೃತ ಪ್ರತಿನಿಧಿಯಾಗಿ ಹೋದವರಲ್ಲ. ಅಧಿಕೃತ ಪ್ರತಿನಿಧಿಯಾಗಿ ಬ್ರಹ್ಮ ಸಮಾಜವನ್ನೂ ಒಳಗೊಂಡಂತೆ ಕೆಲವರು ಹೋಗಿದ್ದರು.
ವಿವೇಕಾನಂದರು ವಿದೇಶಕ್ಕೆ ಹೋಗುವ ತೀರ್ಮಾನ ತೆಗೆದುಕೊಂಡ ಸಂದರ್ಭವನ್ನು ಕುವೆಂಪು ಅವರು ತಮ್ಮ ‘ಸ್ವಾಮಿ ವಿವೇಕಾನಂದ’ ಪುಸ್ತಕದಲ್ಲಿ ವಿವರಿಸಿದ್ದಾರೆ. ೧೮೯೩ರ ಜನವರಿಯಲ್ಲಿ ಕನ್ಯಾಕುಮಾರಿಗೆ ಬಂದ ವಿವೇಕಾನಂದರು ಸಮುದ್ರದಲ್ಲಿ ಈಜಿಕೊಂಡು ಒಂದು ಬಂಡೆಯನ್ನು ತಲುಪಿ, ಅಲ್ಲಿ ಧ್ಯಾನಸ್ಥರಾಗುತ್ತಾರೆ. ಆನಂತರ ಅಲ್ಲಿಂದಲೇ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಬಡತನಕ್ಕೆ ಸಿಕ್ಕಿ ಸೊರಗುತ್ತಿರುವ ಜನಸಾಮಾನ್ಯರ ಸ್ಥಿತಿ
ಯನ್ನು ನೆನೆದು ಸಂಕಟಪಡುತ್ತಾರೆ. “ಅರಸರ ಅರಮನೆಗಳಲ್ಲಿ ಸೆಜ್ಜೆಗಳ ಮೇಲೆ ಪವಡಿಸಿದ್ದೇನೆ. ತಿರುಕರ ಗುಡಿಸಲುಗಳಲ್ಲಿ ನೆಲದ ಮೇಲೆ ಮಲಗಿದ್ದೇನೆ. ಭಾರತ ಮಾತೆಯನ್ನು ಆಪಾದ ಮಸ್ತಕ ಅರಿತಿದ್ದೇನೆ. ಐಶ್ವರ್ಯದಲ್ಲಿ ಓಲಾಡುತ್ತಿರುವ ಪಶ್ಚಿಮ ದೇಶಗಳಿಗೆ ಹೋಗುವೆನು. ನನ್ನ ಮೇಧಾಶಕ್ತಿಯಿಂದ ಧನಾರ್ಜನೆ ಮಾಡುವೆನು. ಸನ್ಯಾಸಿ ಧರ್ಮಕ್ಕೆ ವಿರುದ್ಧವಾಗಿ ಧನ ಸಂಪಾದನೆ ಮಾಡುವೆನು. ದರಿದ್ರ ನಾರಾಯಣರ ಸೇವೆ ಮಾಡುವೆನು (ಪು. ೧೬)” – ಭಾರತದ ಬಡವರ ಸೇವೆಗೆ ಪಶ್ಚಿಮದ ಶ್ರೀಮಂತರಿಂದ ಧನಸಂಗ್ರಹ ಮಾಡಲು ಮತ್ತು ಆ ಉದ್ದೇಶಕ್ಕಾಗಿ ತಮ್ಮ ವೇದಾಂತ ಜ್ಞಾನವನ್ನು ಧಾರೆಯೆರೆಯಲು ಸಂಕಲ್ಪಿಸಿ ವಿವೇಕಾನಂದರು ವಿದೇಶಕ್ಕೆ ಹೊರಟರು; ಸರ್ವಧರ್ಮ ಸಮ್ಮೇಳನದಲ್ಲಿ ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಅವರಿಗೆ ಮೇತ್ರಿ ಮಹಾರಾಜರು ವಿದೇಶ ಪ್ರವಾಸಕ್ಕೆ ಧನಸಹಾಯ ಮಾಡಿದರು. ಹಿಂದೂಧರ್ಮದ ಯಾವ ಅಧಿಕೃತ ಸಂಸ್ಥೆಯೂ ಧನಸಹಾಯ ಮಾಡಲಿಲ್ಲ. (ಡಾ. ಅಂಬೇಡ್ಕರ್ ಮತ್ತು ವಿವೇಕಾನಂದ ಇಬ್ಬರಿಗೂ ಬೇರೆ ಬೇರೆ ಮಹಾರಾಜರೇ ವಿದೇಶ ಪ್ರಯಾಣಕ್ಕೆ ಸಹಕರಿಸಿದ್ದನ್ನು ಮತ್ತು ಇವರಿಬ್ಬರೂ ಹಿಂದೂಧರ್ಮವನ್ನು ವಿಮರ್ಶೆಗೊಡ್ಡಿದ ರೀತಿಯನ್ನು ಡಾ. ವೈ.ಬಿ. ಹಿಮ್ಮಡಿ ಅವರು ತಮ್ಮ ‘ವಿವೇಕಾನಂದ ಅಂಬೇಡ್ಕರ್ ಧಾರ್ಮಿಕ ವಿಚಾರಧಾರೆ’ ಕೃತಿಯಲ್ಲಿ ವಿಶ್ಲೇಷಿಸಿರುವುದನ್ನು ಗಮನಿಸಬಹುದು).
ಅಮೇರಿಕ ತಲುಪಿದ ಮೇಲೆ ವಿವೇಕಾನಂದರಿಗೆ ಗೊತ್ತಾಗುತ್ತದೆ – ಸರ್ವಧರ್ಮ ಸಮ್ಮೇಳನವು ಮೂರು ತಿಂಗಳು ಮುಂದಕ್ಕೆ ಹೋಗಿದೆ ಎಂದು. ಇದ್ದ ದುಡ್ಡು ಖರ್ಚಾಗಿ ವಿವೇಕಾನಂದರು ಅಕ್ಷರಶಃ ಬೀದಿಗೆ ಬೀಳುತ್ತಾರೆ. ಬಾಸ್ಟನ್ನಿಗೆ ಹೋಗುವಾಗ ಮಿಸ್ ಕಾಟೆ ಸಾನ್‌ಬಾರ್ನ್ ಎಂಬ ಶ್ರೀಮಂತ ಮಹಿಳೆಯ ಪರಿಚಯವಾಗುತ್ತದೆ. ಆಕೆ ವಿವೇಕಾನಂದರಿಗೆ ಆಶ್ರಯ ನೀಡಿದ್ದಲ್ಲದೆ ಪಾಶ್ಚಾತ್ಯ ಉಡುಪು ಧರಿಸುವಂತೆ ಮಾಡುತ್ತಾಳೆ. ಇಷ್ಟವಿಲ್ಲದ ಉಡುಪಿನಲ್ಲಿ ಸ್ವಲ್ಪ ಕಾಲ ಕಳೆದ ವಿವೇಕಾನಂದರಿಗೆ ಜೆ.ಹೆಚ್. ರೈಟ್ ಎಂಬ ವಿದ್ವಾಂಸರ ಪರಿಚಯವಾಗಿ ಅವರು ಚಿಕಾಗೊ ಸರ್ವಧರ್ಮ ಸಮ್ಮೇಳನದ ಮುಖ್ಯ ಸಂಘಟರಿಗೆ ಪರಿಚಯಪತ್ರ ಬರೆದು ವಿವೇಕಾನಂದರನ್ನು ಕಳಿಸುತ್ತಾರೆ. ಆದರೆ ಅಲ್ಲಿಗೆ ಹೋಗುವ ವೇಳೆಗೆ ವಿವೇಕಾನಂದರು ಪರಿಚಯ ಪತ್ರವನ್ನು ಕಳೆದುಕೊಳ್ಳುತ್ತಾರೆ. ಸಮ್ಮೇಳನದ ಜಾಗವೂ ಗೊತ್ತಿಲ್ಲ. ಕೈಯಲ್ಲಿ ಹಣವೂ ಇಲ್ಲ. ಇಂಥ ಸನ್ನಿವೇಶದಲ್ಲಿ “ಧರ್ಮಸಮ್ಮೇಳನಕ್ಕೆ ದಾರಿ ಯಾವುದೆಂದು ಕೇಳುತ್ತಾ ಸ್ವಾಮೀಜಿ ನಡೆದರು. ಅವರಿಗೆ ಸಿಕ್ಕಿದ್ದೆಲ್ಲಾ ಉಪೇಕ್ಷೆಯ ಉತ್ತರವೇ. ಹಸಿವು ಬಳಲಿಕೆ. ಕೆಲವು ಮನೆಗಳ ಬಾಗಿಲು ತಟ್ಟಿದರು ಆಹಾರಕ್ಕಾಗಿ, ಕೊಳೆಯಾದ ಬಟ್ಟೆಗಳನ್ನು ನೋಡಿ ಇವನಾರೋ ಭಿಕಾರಿ ಯೆಂದು ಅವರು ಹೊರಗಟ್ಟಿದರು. ಸ್ವಾಮೀಜಿ ಬಳಲಿ ರಸ್ತೆಯ ಪಕ್ಕದಲ್ಲಿ ಕುಳಿತುಬಿಟ್ಟರು, ಸ್ವಲ್ಪ ಹೊತ್ತಿನಲ್ಲೇ ಅವರು ಕುಳಿತಿದ್ದ ಭಾಗಕ್ಕೆ ಎದುರಾಗಿ ದೊಡ್ಡ ಸೌಧದ ಕಿಟಿಕಿ ತೆರೆಯಿತು. ಒಬ್ಬ ಮಹಿಳೆ ಇವರನ್ನು ನೋಡಿದಳು. ಮನೆಯೊಳಕ್ಕೆ ಕರೆಸಿಕೊಂಡು – ನೀವು ಧರ್ಮ ಸಮ್ಮೇಳನಕ್ಕೆ ಬಂದವರೆ ? ಎಂದು ಕೇಳಿದಳು. ಇವರ ಉಡುಪಿನಿಂದ ಅವಳು ಹಾಗೆ ಊಹಿಸಿರ ಬೇಕು, ಆಕೆಯ ಹೆಸರು ಶ್ರೀಮತಿ ಜಾರ್ಜ್ ಡಬ್ಲ್ಯೂ ಹೇಲ್. ಆಕೆ ತಿಳುವಳಿಕಸ್ಥೆ. ಸ್ವಾಮೀಜಿ ತಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡರು. ಆಕೆ ಸ್ವಾಮೀಜಿಗೆ ಉಪಾಹಾರ ಕೊಟ್ಟು ವಿಶ್ರಮಸಿಕೊಳ್ಳಲು ಹೇಳಿದಳು. ಸರ್ವಧರ್ಮ ಸಮ್ಮೇಳನಕ್ಕೆ ತಾನೇ ಕರೆದುಕೊಂಡು ಹೋಗುವುದಾಗಿಯೂ ಹೇಳಿದಳು” (ಸ್ವಾಮಿ ವಿವೇಕಾನಂದ – ಡಾ. ಪ್ರಭುಶಂಕರ ಪುಟ ೬೩) ಹೀಗೆ ಹರಸಾಹಸಪಟ್ಟು – ಸರ್ವಧರ್ಮ ಸಮ್ಮೇಳನಕ್ಕೆ ಪ್ರವೇಶ ಪಡೆದು ಆನಂತರ ಭಾಷಣ ಮಾಡುತ್ತಾರೆ. ಇದು ವಿವೇಕಾನಂದರು ಚಿಕಾಗೊ ಸಮ್ಮೇಳನದಲ್ಲಿ ಭಾಗವಹಿಸಿದ ವಿವರ. ಆನಂತರ ಅವರ ಹಾದಿಯೇನೂ ಸುಗಮವಾಗಿರಲಿಲ್ಲ. ಹಿಂದೂಧರ್ಮದವರಿಂದಲೂ ಅವರಿಗೆ ಅಧಿಕೃತ ಸಹಾಯ ಸಿಗಲಿಲ್ಲ. ಆದರೆ ಹಿಂದೂ ಧಾರ್ಮಿಕತೆಯಲ್ಲಿ ವಿಮರ್ಶಾತ್ಮಕ ನಂಬಿಕೆಯಿಟ್ಟಿದ್ದ ವಿವೇಕಾನಂದರು ಬಡವರ ಉದ್ಧಾರಕ್ಕಾಗಿ ವೇದಾಂತ ಪ್ರಜ್ಞೆಯನ್ನು ಪ್ರಖರವಾಗಿ ಪ್ರತಿಪಾದಿಸಿದರು. ಧಾರ್ಮಿಕತೆಗೊಂದು ಸಾಮಾಜಿಕ ಜವಾಬ್ದಾರಿ ತಂದುಕೊಟ್ಟರು. ಚಿಕಾಗೊ ಸಮ್ಮೇಳನವನ್ನೂ ಒಳಗೊಂಡಂತೆ ತಮ್ಮ ಬಹುಪಾಲು ಭಾಷಣಗಳಲ್ಲಿ ಸರ್ವಧರ್ಮ ಸಮನ್ವಯ ಹಾಗೂ ಸಾಮರಸ್ಯವನ್ನು ಪ್ರತಿ ಪಾದಿಸಿದರು.
ಸದಾ ಸರ್ವಧರ್ಮ ಸಾಮರಸ್ಯದ ಸಂಕೇತವಾಗಿಯೇ ಬೆಳೆದ, ಬೆಳಗಿದ ವಿವೇಕಾನಂದರನ್ನು ಹಿಂದೂಧರ್ಮದ ಪ್ರಬಲ ಪ್ರತಿನಿಧಿಯೆಂದು ಬಳಸಿದ್ದು, ಬಿಂಬಿಸಿದ್ದು ಆಶ್ಚರ್ಯಕರ ಬೆಳವಣಿಗೆಯಾದರೂ ಸತ್ಯ ಸಂಗತಿಯಾಗಿದೆ. ನಿಜ, ವಿವೇಕಾನಂದರಿಗೆ ಹಿಂದೂಧರ್ಮದ ಬಗ್ಗೆ ಅಚಲ ನಂಬಿಕೆಯಿತ್ತು. ಹೆಮ್ಮೆಯೂ ಇತ್ತು. ಆದರೆ ಅಷ್ಟೇ ಕಟು ಟೀಕೆಯೂ ಇತ್ತು. ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮವನ್ನು ಅವರಷ್ಟು ಕಟು ಟೀಕೆಗೆ ಒಳಪಡಿಸಿದವರು ವಿರಳ; ಅದರ ಪ್ರಗತಿಪರ ವಿಚಾರಧಾರೆಯನ್ನು ಮುನ್ನೆಲೆಗೆ ತರದೆ, ಕೇವಲ ಹಿಂದೂಧರ್ಮದ ಕೇಂದ್ರಕ್ಕೆ ಕಟ್ಟಿಹಾಕಿದ್ದು ವಿವೇಕಾನಂದರಿಗೆ ಮಾಡಿದ ಅನ್ಯಾಯವೇ ಸರಿ.
ನಿಜ; ಧರ್ಮಗಳು, ಜಾತಿಗಳು, ವರ್ಣಗಳು ವಿವಿಧ ಚಾರಿತ್ರಿಕ ಕಾರಣಗಳಿಗಾಗಿ ಮಹಾನ್ ವ್ಯಕ್ತಿತ್ವಗಳನ್ನು ತಮ್ಮವರೆಂದು ಹೇಳಿಕೊಂಡು ಹೆಮ್ಮೆ ಪಡುತ್ತವೆ. ಇದು ಕೆಲವರಿಗೆ ಅಸ್ಮಿತೆಯ ಸಮಸ್ಯೆ: ಇನ್ನು ಕೆಲವರಿಗೆ ವಿಶ್ವಾಸಾರ್ಹತೆಯ ಸಮಸ್ಯೆ. ಕೆಳ ಹಾಗೂ ಹಿಂದುಳಿದ ಜಾತಿ-ವರ್ಗ ಗಳಿಗೆ ಕಾಡುತ್ತ ಬಂದ ಅಸ್ಮಿತೆಯ ಸಮಸ್ಯೆಯಿಂದಾಗಿ ಇವರು ತಮ್ಮ ಜಾತಿಯಲ್ಲಿ ಹುಟ್ಟಿದ ಮಹಾನ್ ವ್ಯಕ್ತಿತ್ವಗಳನ್ನು ಸಾಮಾಜಿಕ ನಾಯಕರೆಂದು ಸ್ವೀಕರಿಸಿ ಹೆಮ್ಮೆಪಡುತ್ತಾರೆ. ಉದಾಹರಣೆಗೆ ವಾಲ್ಮೀಕಿ, ಕನಕದಾಸ, ಅಂಬೇಡ್ಕರ್, ನಾರಾಯಣ ಗುರು – ಮುಂತಾದವರನ್ನು ಹೆಸರಿಸಬಹುದು. ತಮ್ಮಲ್ಲೂ ಮಹಾನ್ ಸಾಧಕರಿದ್ದಾರೆಂದು ತೋರಿಸುವ ಸಾಮಾಜಿಕ ಅಸ್ಮಿತೆಯ ಸಮಸ್ಯೆಯಿಂದ ಇಂಥವರ ಹೆಸರುಗಳು ಬಳಕೆಯಾಗುತ್ತವೆ. ಆದರೆ ಮೇಲ್ಜಾತಿ-ಮೇಲ್ವರ್ಗಗಳಿಗೆ ಇಂಥ ಸಾಮಾಜಿಕ ಅಸ್ಮಿತೆಯ ಸಮಸ್ಯೆಯಿರುವುದಿಲ್ಲ. ತಮ್ಮ ವಿಶ್ವಾಸಾರ್ಹತೆಯ ಸಮಸ್ಯೆಯನ್ನು ನೀಗಿಕೊಳ್ಳಲೂ ಎಂಬಂತೆ ಮಹಾನ್ ವ್ಯಕ್ತಿಗಳನ್ನು ಮುಂದುಮಾಡುತ್ತಾರೆ. ಅಥವಾ ಅಸ್ಮಿತೆಯ ಸಮಸ್ಯೆಯನ್ನು ಸಾಮಾಜಿಕ ಮನ್ನಣೆಯಿಂದ ನೀಗಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತ ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಲು ಮಹಾನ್ ವ್ಯಕ್ತಿತ್ವಗಳನ್ನು ಬಳಸಿಕೊಳ್ಳುತ್ತಾರೆ. ಹೀಗೆ ಬಳಕೆಯಾದವರಲ್ಲಿ ವಿವೇಕಾನಂದರೂ ಒಬ್ಬರು. ಇವರನ್ನು ಒಂದು ಜಾತಿಯವರು ಬಳಸಿ ಕೊಂಡರು ಎನ್ನುವುದಕ್ಕಿಂತ ಒಂದು ಧರ್ಮದವರು ಬಳಸಿಕೊಂಡರು ಎನ್ನುವುದೇ ಸರಿಯಾದೀತು. ಯಾವುದೇ ಧರ್ಮದವರು ತಮ್ಮವರೆಂದು ಮಹಾನ್ ವ್ಯಕ್ತಿಗಳನ್ನು ಪ್ರತೀಕಾತ್ಮಕವಾಗಿ ಬಳಸಿ ಕೊಳ್ಳುವುದಕ್ಕೆ ಸ್ವಲ್ಪ ರಿಯಾಯಿತಿ ಕೊಡಬಹುದಾದರೂ ಪಕ್ಷರಾಜಕೀಯಕ್ಕೆ ಬಳಸುವುದನ್ನು ಒಪ್ಪಲಾಗದು. ಅದರಲ್ಲೂ ವಿವೇಕಾನಂದರಂತಹ ವ್ಯಕ್ತಿತ್ವವನ್ನು ಗುಜರಾತಿನ ನರೇಂದ್ರಮೋದಿ ಯವರು ಬಳಸಿಕೊಂಡದ್ದು ಕ್ಷಮಾರ್ಹ ಎನ್ನಿಸುವುದಿಲ್ಲ. ೨೦೦೨ರಲ್ಲಿ ಹಿಂದೂ ಮುಸ್ಲಿಂ ದ್ವೇಷಕ್ಕೆ ತುಪ್ಪ ಸುರಿದು ಸಾವಿರಾರು ಜನರ ಸಾವಿಗೆ ಕಾರಣರಾದವರು ವಿವೇಕಾನಂದರ ಭಾವಚಿತ್ರವನ್ನು ‘ಬಿಜೆಪಿ’ಯ ‘ವಿಕಾಸಯಾತ್ರೆ’ಗೆ ಬಳಸಿದ್ದು, ಅವರಿಗೆ ಸರಿಸಮನಾಗಿ ತಮ್ಮ ಭಾವಚಿತ್ರವನ್ನು ಹಾಕಿಸಿಕೊಂಡು ವಿಜೃಂಭಿಸಿದ್ದು ನಮ್ಮ ಕಾಲದ ದೊಡ್ಡ ವಿಪರ್ಯಾಸ.
ವಿವೇಕಾನಂದರು ಯಾವತ್ತೂ ಪರಧರ್ಮದ್ವೇಷವನ್ನು ಇಷ್ಟಪಟ್ಟವರಲ್ಲ. ಬದಲಾಗಿ ಪರಧರ್ಮ ಸಹಿಷ್ಣುತೆಯನ್ನು ಪ್ರತಿಪಾದಿಸಿದವರು: “ಪರರ ಧಾರ್ಮಿಕ ನಂಬಿಕೆಗಳನ್ನು ಸಹಾನು ಭೂತಿಯಿಂದ ನೋಡುವುದೇ ಈಗ ಅತ್ಯಾವಶ್ಯಕವಾಗಿ ಬೇಕಾಗಿರುವ ಪರಮತ ಸಹಿಷ್ಣುತೆಯ ಪ್ರಥಮ ಹೆಜ್ಜೆ… ಭಾರತದಲ್ಲಿ ಕ್ರೈಸ್ತರಿಗೆ ಇಗರ್ಜಿಗಳನ್ನೂ ಮಹಮ್ಮದೀಯರಿಗೆ ಮಸೀದಿಗಳನ್ನೂ ಕಟ್ಟಿದ್ದೇವೆ, ಕಟ್ಟುತ್ತಲೂ ಇದ್ದೇವೆ. ನಾವು ಹಾಗೆಯೇ ಮಾಡಬೇಕು…….. ಕ್ರೈಸ್ತ ಮತ್ತು ಮಹಮ್ಮದೀ ಯರ ದುರಭ್ಯಾಸ ಮುಂತಾದವುಗಳು ಏನಿದ್ದರೂ ಅವರನ್ನು ಪ್ರೇಮದಿಂದ ಗೆಲ್ಲುವವರೆಗೆ; ನಾವು ಕ್ರೈಸ್ತರಿಗೆ ಇಗರ್ಜಿಗಳನ್ನು, ಮಹಮದೀಯರಿಗೆ ಮಸೀದಿಗಳನ್ನು ಕಟ್ಟುತ್ತಲೇ ಹೋಗಬೇಕು. ಬಾಳಲು ಯೋಗ್ಯವಾದುದು ಪ್ರೇಮ, ದ್ವೇಷವಲ್ಲ” -ಇವು ವಿವೇಕಾನಂದರ ಮಾತುಗಳು. (‘ಕಡಲತಡಿಯಿಂದ ಹೈಮಾಚಲದಡಿಗೆ’ ಕೋ. ಚೆನ್ನಬಸಪ್ಪ, ಪುಟ- ೮೪) ವಿವೇಕಾನಂದರು ಕ್ರೈಸ್ತ ಹಾಗೂ ಮಹಮದೀಯರನ್ನು ವಿಮರ್ಶೆಗೆ ಒಳಪಡಿಸುತ್ತ ಹಿಂದೂಗಳಿಗೆ ಹೇಳಿದ ಮಾತುಗಳನ್ನು ಸಂಘ ಪರಿವಾರದವರೂ ನರೇಂದ್ರಮೋದಿಯವರೂ ಪರಿಪಾಲಿಸಿದ್ದಾರೆಯೆ? ನಂಬಿದ್ದಾರೆಯೆ? ನಂಬಿದ್ದರೆ ಬಾಬರಿ ಮಸೀದಿಯ ಧ್ವಂಸದಲ್ಲಿ ಸಂಭ್ರಮಪಡಲು ಸಾಧ್ಯವಿತ್ತೆ? ಗುಜರಾತಿನಲ್ಲಿ ಮನುಷ್ಯರ ಮಾರಣಹೋಮಕ್ಕೆ ಅವಕಾಶವಾಗುತ್ತಿತ್ತೆ? ವಾಸ್ತವ ಹೀಗಿರುವಾಗ ವಿವೇಕಾನಂದರನ್ನು ತಮ್ಮ ಪಕ್ಷರಾಜಕೀಯಕ್ಕೆ ಬಳಸಿಕೊಳ್ಳಲು ನರೇಂದ್ರ ಮೋದಿಯವರಿಗೆ ನೈತಿಕ ಹಕ್ಕು ಇಲ್ಲವೆಂದೇ ಹೇಳಬೇಕಾಗುತ್ತದೆ. ಜೊತೆಗೆ ಬಿ.ಜೆ.ಪಿ. ಮತ್ತು ಸಂಘ ಪರಿವಾರವು ವಿವೇಕಾನಂದರ ಆದರ್ಶಕ್ಕೆ ಬದ್ಧವಾಗದೆ ಬಳಕೆಯ ರೂಪಕವಾಗಿಸಿಕೊಳ್ಳುವುದನ್ನು ಪ್ರಶ್ನಿಸಿಕೊಳ್ಳ ಬೇಕಾಗುತ್ತದೆ. (ಗಾಂಧೀಜಿಯ ರೂಪಕವನ್ನು ಬಳಸಿಕೊಂಡು ಅವರಿಗೆ ವಿರುದ್ಧವಾಗಿ ವರ್ತಿಸುವ ಕಾಂಗ್ರೆಸ್ ಪಕ್ಷ ಮತ್ತು ಜಯಪ್ರಕಾಶ ನಾರಾಯಣರ ಭಾವಚಿತ್ರ ಬಳಕೆ ಮಾಡುತ್ತ ಬಂದ ಜನತಾಪರಿವಾರಕ್ಕೂ ಇಂಥದೇ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಅದು ಬೇರೆಯೇ ಚರ್ಚೆ ಯಾಗಲಿದೆ.)
ಧಾರ್ಮಿಕ ಸಾಮರಸ್ಯವನ್ನು ಕುರಿತಂತೆ ವಿವೇಕಾನಂದರಿಗೆ ಎಂಥ ಬದ್ಧತೆ ಮತ್ತು ಪ್ರಖರತೆ ಇತ್ತು ಎನ್ನುವುದಕ್ಕೆ ಅವರ ಮಾತುಗಳನ್ನೇ ಉಲ್ಲೇಖಿಸಬಹುದು: “ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು. ಆದರೂ ಕೂಡ ವೇದ, ಬೈಬಲ್, ಕುರಾನ್‌ಗಳ ಐಕ್ಯತೆಯಿಂದ ಇದನ್ನು ಸಾಧಿಸಬೇಕಾಗಿದೆ………. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. “ವೇದಾಂತದ ಮಿದುಳು, ಇಸ್ಲಾಮಿನ ದೇಹ-ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ” ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ – ಸಂಪುಟ – ೭ – ಪುಟ – ೨೩೮).
ಹಾಗಾದರೆ ಹಿಂದೂಧರ್ಮಗಳ ಬಗ್ಗೆ ವಿವೇಕಾನಂದರ ನಿಲುವೇನು? ವಿವೇಕಾನಂದರ ವಿಚಾರಗಳನ್ನು ಅವಲೋಕಿಸಿದಾಗ ಅವರು ಹಿಂದೂಧರ್ಮದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಒಟ್ಟಿಗೇ ಗ್ರಹಿಸಿರುವುದು ಕಂಡುಬರುತ್ತದೆ: “ಪ್ರಪಂಚದ ಯಾವ ಧರ್ಮವೂ ಹಿಂದೂಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ. ಪ್ರಪಂಚದ ಯಾವ ಧರ್ಮವೂ ದೀನ ದಲಿತರ ಕುತ್ತಿಗೆಯನ್ನು ಹಿಂದೂಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ, ತಪ್ಪ ಹಿಂದೂಧರ್ಮದ್ದಲ್ಲ, ಅಲ್ಲಿರುವ ಸಂಪ್ರದಾಯ ಶರಣರದು; ಪುರೋಹಿತ ರದು; ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ರೀತಿಯ ಕ್ರೂರವಿಧಾನಗಳನ್ನು ಸೃಷ್ಟಿಸುವ ಠಕ್ಕರದು” (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ – ಸಂಪುಟ – ೬, ಪುಟ – ೮೬).
ಸ್ಕೂಲವಾಗಿ ಹೇಳುವುದಾದರೆ ಸಂಪ್ರದಾಯಶರಣ ಪುರೋಹಿತಶಾಹಿಯೇ ಹಿಂದೂ ಧರ್ಮದೊಳಗಿನ ಕೆಡಕುಗಳಿಗೆ ಕಾರಣವೆಂದು ವಿವೇಕಾನಂದರು ಭಾವಿಸಿದಂತಿದೆ. ಧರ್ಮವೆನ್ನುವುದು ಮೂಲತಃ ಮಾನವೀಯವೇ ಆಗಿದ್ದು ಅದನ್ನು ಆಚರಿಸುವರು ಅಮಾನವೀಯ ಸ್ವರೂಪ ಕೊಡುತ್ತಾರೆಂದು ಅವರು ಗ್ರಹಿಸಿದಂತೆ ಕಾಣುತ್ತದೆ. ಆದರೆ ಧರ್ಮವು ಅಮೂರ್ತಭಾವಕೋಶದಲ್ಲಿ ಏನನ್ನೇ ಅಡಗಿಸಿಕೊಂಡಿರಲಿ, ಅದು ಪ್ರಕಟಗೊಳ್ಳುವುದು ಮೂರ್ತ ಸ್ವರೂಪದ ಕ್ರಿಯೆಗಳಲ್ಲಿ ಎಂದು ನನ್ನ ಅನಿಸಿಕೆ. ಹೀಗಾಗಿ ಧರ್ಮಾಚರಣೆಯ ವಕ್ತಾರರೇ ಆಯಾ ಧರ್ಮದ ಒಳಿತು-ಕೆಡಕು ಗಳನ್ನು ನಿರ್ಣಯಿಸುವ, ನಿರೂಪಿಸುವ ಸ್ಥಾನದಲ್ಲಿರುತ್ತಾರೆ. ಹಾಗೆ ನೋಡಿದರೆ, ವಿವೇಕಾನಂದರು ರೂಢಮೂಲ ಆಚರಣೆಗಳ ಮೂಲಕ ‘ಧರ್ಮ’ವನ್ನು ಕಂಡುಕೊಳ್ಳಲಿಲ್ಲ, ನಾವು ಅಮೂರ್ತ ವೆಂದು ಭಾವಿಸಿದ ‘ಆತ್ಮ’ವು ಅವರು ನಂಬಿದ ಧರ್ಮದ ಕೇಂದ್ರವಾಗಿದೆ; ವೇದಾಂತವೇ ವೈಚಾರಿಕತೆಯಾಗಿದೆ.
೧೮೯೩ ಸೆಪ್ಟೆಂಬರ್‌ನಲ್ಲಿ ವಿವೇಕಾನಂದರು ವಿದೇಶದಲ್ಲಿ ‘ಹಿಂದೂಧರ್ಮ’ ಎಂಬ ವಿಷಯದ ಬಗ್ಗೆ ಮಾತನಾಡುತ್ತ ಆತ್ಮವನ್ನು ಅನಾದಿ, ಅನಂತ ನಿತ್ಯ ಶುದ್ಧ ನಿತ್ಯ ಮುಕ್ತ ಎಂದು ನಿರ್ವಚಿಸುತ್ತಾರೆ. ಆತ್ಮವು ವಿಶ್ವದ ಸರ್ವಜೀವಿಗಳಲ್ಲೂ ನೆಲೆಸಿರುವುದಾಗಿ ಹೇಳುತ್ತಾರೆ. ಅಂದರೆ ಸಾರ್ವತ್ರೀಕರಿಸುತ್ತಾರೆ. (‘ಸ್ವಾಮಿ ವಿವೇಕಾನಂದ’ – ಕುವೆಂಪು – ಪುಟ – ೧೪೯) ಇನ್ನೊಂದು ಕಡೆ “ಧರ್ಮವೆಂದರೆ ಕೇವಲ ಸುಂದರ ಪದಯೋಜನೆಯ ಮತ ಸಿದ್ಧಾಂತವೆಂದು ತಿಳಿದಿರುವ ಮಾತಿನಮಲ್ಲರಿಂದ ಬಹುದೂರ ಹೋಗಬೇಕು” ಎಂದು ಹೇಳುವ ವಿವೇಕಾನಂದರು “ಧರ್ಮವು ದೇವಸ್ಥಾನ ಕಟ್ಟುವುದರಲ್ಲಿ ಇಲ್ಲ ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ. ಅದು ಗ್ರಂಥದಲ್ಲಿಲ್ಲ. ಮಾತಿನಲ್ಲಿಯೂ ಇಲ್ಲ, ಉಪವಾಸದಲ್ಲಿಯೂ ಇಲ್ಲ ಧರ್ಮವೆಂದರೆ ಸಾಕ್ಷಾತ್ಕಾರ” (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ – ಸಂಪುಟ – ೫ – ಪುಟ – ೪೪೬).
‘ಧರ್ಮ ದೇವಸ್ಥಾನ ಕಟ್ಟುವುದರಲ್ಲಿಲ್ಲ’ ಎಂಬ ಮಾತನ್ನು ಬಾಬರಿ ಮಸೀದಿ ಜಾಗದಲ್ಲಿ ಶ್ರೀ ರಾಮ ದೇವಾಲಯ ಕಟ್ಟಬೇಕೆನ್ನುವವರನ್ನೂ ಒಳಗೊಂಡಂತೆ ದೇವಾಲಯಗಳೇ ಸರ್ವಸ್ವ ವೆಂದು ಭಾವಿಸಿ ಭಕ್ತಿಯನ್ನು ಮರೆತವರೆಲ್ಲ ಯೋಚಿಸಬೇಕು. ವಚನ ಚಳವಳಿಯು ದೇವಾಲಯವನ್ನು ಧಿಕ್ಕರಿಸಿದ ದಿಟ್ಟ ನಿಲುವನ್ನು ಇಲ್ಲಿ ನೆನೆಯಬೇಕು. ಇನ್ನು ಪೂಜೆ ಪುನಸ್ಕಾರಗಳಲ್ಲಿ, ಹೋಮ ಹವನಗಳಲ್ಲಿ ‘ಪುಣ್ಯ ಗಳಿಸಲು ಹಾತೊರೆಯುವ ಕೆಲವು ರಾಜಕಾರಣಿಗಳು ವಿವೇಕಾ ನಂದರ ಧರ್ಮದ ಪರಿಕಲ್ಪನೆಯಿಂದ ಪ್ರಭಾವಿತರಾದರೆ ಒಳ್ಳೆಯದು. ಮುಖ್ಯವಾಗಿ, ವಿವೇಕಾ ನಂದರು ಧರ್ಮವು ‘ಸಂಸ್ಥೆಯಲಿಲ್ಲ’ ಎಂದು ಹೇಳುವುದರ ಮೂಲಕ ಸಾಂಸ್ಥಿಕ ಧರ್ಮದ ಜಡತ್ವಕ್ಕೆ ಚಾಟಿ ಬೀಸಿರುವುದನ್ನು ಗಮನಿಸಬೇಕು. ಯಾವುದೇ ಧರ್ಮ ‘ಸಂಸ್ಥೆ’ಯಾದರೆ ‘ಬೈಲಾ’ಕ್ಕೆ ಬದ್ಧವಾಗಿರುತ್ತದೆ, ಭಕ್ತಿಗಲ್ಲ. ಆದಾಯಕ್ಕೆ ಬದ್ಧವಾಗಿರುತ್ತದೆ, ಆತ್ಮಕ್ಕಲ್ಲ.
ವಿವೇಕಾನಂದರು ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳನ್ನೂ ವಿಮರ್ಶೆಗೆ ಒಡ್ಡುತ್ತಾರೆ. ಇಸ್ಲಾಂ ಧರ್ಮಿಯರು ತಮ್ಮ ಧರ್ಮ ಸ್ಥಾಪನೆಗಾಗಿ ನಡೆಸಿದ ಅಡ್ಡ ಕೃತ್ಯಗಳನ್ನು ಸಂಶಯಕ್ಕೆಡೆ ಯಿಲ್ಲದಂತೆ ಖಂಡಿಸುತ್ತಾರೆ. ಹೊರದೇಶಗಳಲ್ಲಿ ಇಸ್ಲಾಂ ಧರ್ಮಿಯರು ಅಸಹನೆಯಿಂದ ಸೌಹಾರ್ದ ವಿರೋಧಿಯಾದರೆಂದು ಟೀಕಿಸುತ್ತಾರೆ; ಆದರೆ ಇಂಡಿಯಾ ದೇಶದ ಮಹಮ್ಮದೀಯ ಧರ್ಮ, ಇತರ ದೇಶದ ಇಸ್ಲಾಂ ಧರ್ಮದಂತೆ ಅಲ್ಲ- ಎಂದೂ ಹೇಳುತ್ತಾರೆ. ಕ್ರೈಸ್ತರು ಹಿಂದೂ ಗಳ ಬಗ್ಗೆ ತುಚ್ಛ ಅಭಿಪ್ರಾಯ ಮೂಡಿಸುತ್ತಿದ್ದಾರೆಂದು ಕಟುವಾಗಿ ಟೀಕಿಸುತ್ತಾರೆ. ಕ್ರೈಸ್ತಧರ್ಮ ಹರಡಿದ್ದು ಖಡ್ಗದ ಮೂಲಕ ಎಂದು ಹೇಳುವ ಮೂಲಕ ವಸಾಹತುಶಾಹಿ ಪ್ರವೃತ್ತಿಯತ್ತ ಬೊಟ್ಟು ಮಾಡುತ್ತಾರೆ ಅರ್ಥಾತ್ ಬ್ರಿಟಿಷರೇ ಮುಂತಾದ ವಸಾಹತುಶಾಹಿಯು ತನ್ನ ಅಧಿಕಾರವನ್ನು ಬಳಸಿ ಕ್ರೈಸ್ತ ಧರ್ಮವನ್ನು ಹರಡಿತು ಎಂಬುದು ಇವರ ಅಭಿಪ್ರಾಯವಾಗಿದೆ. ಆದರೆ ಕ್ರೈಸ್ತರ ಸಕಾರಾತ್ಮಕ ಅಂಶಗಳನ್ನೂ ಗಮನಿಸಿ, ಏಸುಕ್ರಿಸ್ತನು ಮೂಢ ನಂಬಿಕೆಯನ್ನು ವಿರೋಧಿಸಿ ಪೌರೋಹಿತ್ಯ ಎಂಬ ಘಟಸರ್ಪವನ್ನು ನಾಶಮಾಡಿದ ಎಂದೂ ಶ್ಲಾಘಿಸುತ್ತಾರೆ. (ಜ.ಹೊ. ನಾರಾಯಣಸ್ವಾಮಿ ಅವರ ‘ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು’ ಕೃತಿಯಲ್ಲಿ ಈ ಉಲ್ಲೇಖವಿದೆ).
ಬುದ್ಧನ ಬಗ್ಗೆ ವಿವೇಕಾನಂದರಿಗೆ ಅಪಾರ ಗೌರವ, ಬುದ್ಧಗಯಾಕ್ಕೆ ಹೋಗಿ ಬೋಧಿ ವೃಕ್ಷದ ಜಾಗದಲ್ಲಿ ಧ್ಯಾನಸ್ಥರಾಗಿ ಸಮಾಧಾನ ಹೊಂದಿದ ವಿವೇಕಾನಂದರು ಬುದ್ಧನ ವಿಚಾರಗಳನ್ನು ಮುಕ್ತವಾಗಿ ಹೊಗಳುತ್ತಾರೆ. “ಬುದ್ದ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ, ಆಚಾರಕ್ಕಾಗಲಿ ಬಾಗಲಿಲ್ಲ…… ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜನರ ಮೇಲೆ ಪ್ರೀತಿ ಇದ್ದಂತಹ ಇನ್ನೊಬ್ಬ ವ್ಯಕ್ತಿಯನ್ನು ಪ್ರಪಂಚ ಮತ್ತೆಂದೂ ಕಂಡಿಲ್ಲ” (ಸ್ವಾಮಿ ವಿವೇಕಾನಂದ ಕೃತಿ ಶ್ರೇಣಿ – ಸಂ-೮) ಎಂದು ಹೇಳುವ ವಿವೇಕಾನಂದರು ಹಿಂದೂಧರ್ಮವೊಂದೇ ಶ್ರೇಷ್ಠ ಎಂದು ಯಾವತ್ತು ಭಾವಿಸಲಿಲ್ಲ. ಹಾಗೆ ಪ್ರತಿಪಾದಿಸಲೂ ಇಲ್ಲ. ಎಲ್ಲ ಧರ್ಮಗಳ ಜೊತೆ ಅನುಸಂಧಾನಿಸಿ ತನ್ನದೇ ನಿಲುವುಗಳಿಗೆ ತಲುಪಿದ ವಿವೇಕಾನಂದರು ಯಾವತ್ತೂ ಅನ್ಯಧರ್ಮ ದ್ವೇಷಕ್ಕೆ ಎಡೆ ಮಾಡಲಿಲ್ಲ. ಬದಲಾಗಿ ಧಾರ್ಮಿಕ ಸಾಮರಸ್ಯಕ್ಕೆ ಆದ್ಯತೆ ನೀಡಿದರು. ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವ ಕೋಮುಘರ್ಷಣೆಯ ಸನ್ನಿವೇಶಕ್ಕೆ ವಿವೇಕಾನಂದರ ಈ ವಿಚಾರಧಾರೆ ಅತ್ಯಂತ ಪ್ರಸ್ತುತವೂ ಉಪಯುಕ್ತವೂ ಮಾನವೀಯವೂ ಆಗಿದೆ. ಧಾರ್ಮಿಕ ಸಾಮರಸ್ಯದ ವಿಷಯವಷ್ಟೇ ಅಲ್ಲದೆ ಮತಾಂತರಕ್ಕೆ ಸಂಬಂಧಿಸಿದಂತೆ ವಿವೇಕಾನಂದರು ತಳೆದ ನಿಲುವು ಸಹ ವಿಶಿಷ್ಟವಾಗಿದೆ. ಚಿಕಾಗೋದ ಸರ್ವಧರ್ಮ ಸಮ್ಮೇಳನ ದಲ್ಲಿ ಮಾತನಾಡುತ್ತ ವಿವೇಕಾನಂದರು ಮತಾಂತರಕ್ಕಾಗಿ ನಮ್ಮ ದೇಶಕ್ಕೆ ಪಾದ್ರಿಗಳನ್ನು ಕಳಿಸುವ ಕ್ರೈಸ್ತ ಮಿಷನರಿಗಳನ್ನು ಟೀಕಿಸುತ್ತಾರೆ. ಈ ಟೀಕೆ ಹಿಂದೂಧರ್ಮದ ಸಮರ್ಥನೆಗಾಗಿ ಮಾಡಿದ್ದಲ್ಲ. ಭಾರತದಲ್ಲಿ ಹಸಿವಿನಿಂದ ಸಾಯುತ್ತಿರುವ ಜನರ ಜೀವ ಉಳಿಸುವುದು ಆದ್ಯತೆಯಾಗ ಬೇಕೇ ಹೊರತು ಧರ್ಮವಲ್ಲ ಎಂಬ ಕಾರಣಕ್ಕಾಗಿ ಟೀಕೆ ಮಾಡುತ್ತಾರೆ. “ನೀವು ಕ್ರೈಸ್ತರು, ಭಾರತೀಯರ ಆತ್ಮ ಸಂರಕ್ಷಣೆಯ ಸಲುವಾಗಿ ಪಾದ್ರಿಗಳನ್ನು ಕಳುಹಿಸುತ್ತೀರಿ, ಹೊಟ್ಟೆಗಿಲ್ಲದೆ ಸಾಯುವವರ ದೇಹ ಸಂರಕ್ಷಣೆಯನ್ನೇಕೆ ಮಾಡಲು ಪ್ರಯತ್ನಿಸುವುದಿಲ್ಲ? ……. ಇಂಡಿಯಾ ದೇಶಕ್ಕೆ ಬೇಕಾಗಿರುವುದು ನಿಮ್ಮ ಧರ್ಮೋಪದೇಶವಲ್ಲ….. ಹಸಿವೆಯಿಂದ ನರಳುತ್ತಿರುವ ಜನಾಂಗಕ್ಕೆ ಧರ್ಮೋಪದೇಶ ಮಾಡುವುದು ಒಂದು ಮಹಾ ನೀಚ ಕಾರ್ಯ. ಹಸಿದವನಿಗೆ ವೇದಾಂತ ಬೋಧಿಸುವುದು ಒಂದು ಅಧಮಾಧಮ ಪಾಪ…” (ಸ್ವಾಮಿ ವಿವೇಕಾನಂದ – ಕುವೆಂಪು – ಪುಟ – ೧೫೩).
ವಿವೇಕಾನಂದರ ಈ ಸಂಕಟಮಯ ಮಾತುಗಳಲ್ಲಿ ಕ್ರೈಸ್ತ ಪಾದ್ರಿಗಳ ಮೇಲಿನ ಕೋಪವಷ್ಟೇ ಇಲ್ಲ, ಆತ್ಮ ವಿಮರ್ಶೆಯೂ ಇದೆ. ಆತ್ಮ ಮತ್ತು ವೇದಾಂತಗಳ ಮಹತ್ವವನ್ನು ಪ್ರತಿಪಾದಿಸುತ್ತ ಬಂದಿದ್ದ ವಿವೇಕಾನಂದರು ಕ್ರೈಸ್ತ ಪಾದ್ರಿಗಳನ್ನು ಟೀಕಿಸುತ್ತಲೇ ಹಸಿದವರಿಗೆ ಬೇಕಾಗಿರುವುದು ಧರ್ಮೋಪದೇಶವಲ್ಲ, ಆತ್ಮಸಂರಕ್ಷಣೆಯಲ್ಲ, ವೇದಾಂತವಲ್ಲ ಎಂದು ಹೇಳುವ ಮೂಲಕ ಹಸಿದವರ ಆದ್ಯತೆಗಳನ್ನು ತಮ್ಮ ಆದ್ಯತೆಗಳಾಗಿ ಪರಿಭಾವಿಸುತ್ತಾರೆ ಮತ್ತು ಈ ಆದ್ಯತೆಗಳನ್ನು ಎಲ್ಲ ಧರ್ಮಗಳಿಗೂ ಅನ್ವಯಿಸುವಂತೆ ಸಾರ್ವತ್ರೀಕರಿಸುತ್ತಾರೆ, ಅಂದರೆ, ಈ ಮಾತು ಕ್ರೈಸ್ತ ಧರ್ಮಗುರುಗಳಿಗಷ್ಟೇ ಅಲ್ಲ, ಹಿಂದೂಧರ್ಮದ ಧುರೀಣರಿಗೂ ಹೇಳಿದ ಮಾತಾಗಿದೆ. ಇನ್ನೊಂದು ಕಡೆ ಮತಾಂತರ ಯಾಕೆ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾರೆ. ಇಸ್ಲಾಂಗೆ ಮತಾಂತರಗೊಳ್ಳುವುದರ ಬಗ್ಗೆ ಹೇಳುತ್ತಾ “ಭಾರತದಲ್ಲಿ ಮಹಮ್ಮದೀಯರ ವಿಜಯ, ದೀನರಿಗೆ ದುರ್ಬಲರಿಗೆ ಮುಕ್ತಿಯಂತೆ ಬಂತು…. ಬಲ ಪ್ರಯೋಗದಿಂದ ಅವರನ್ನು ಮುಸಲ್ಮಾನ ಮತಕ್ಕೆ ಸೇರಿಸಿದರು ಎನ್ನುವುದು ಶುದ್ಧ ತಪ್ಪು, ಜಮೀನ್ದಾರರ ಉಪಟಳದಿಂದ, ಪುರೋಹಿತರ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕೆಂದು ಮುಸಲ್ಮಾನರಾದರು. …. ಬ್ರಾಹ್ಮಣರ ಬಂಧನದಿಂದ ಪಾರಾಗಲು ಯತ್ನಿಸಿದ ಜನ ಸಾಮಾನ್ಯರು ಕ್ರೈಸ್ತಧರ್ಮ ಮುಂತಾದ ದೇಶದ ಒಳಗೆ ಇರುವ ವಿರೋಧಿ ಧಾರ್ಮಿಕ ಹಾವಳಿಗೆ ಸಿಕ್ಕಿದರು” (ವಿವೇಕಾನಂದರ ಕೃತಿಶ್ರೇಣಿಯಿಂದ ಆಯ್ದುಕೊಂಡ ಉಲ್ಲೇಖ ‘ಜಹೂನಾ’ ಕೃತಿಯಲ್ಲಿ.
ಮತಾಂತರದ ಕಾರಣಗಳನ್ನು ಹುಡುಕದೆ ಮತಾಂತರವನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲವೆನ್ನುವುದು ವಿವೇಕಾನಂದರ ಅಭಿಪ್ರಾಯವಾಗಿದೆ. ಆದ್ದರಿಂದಲೇ ಅವರು ಧರ್ಮ ಬೋಧನೆಗಿಂತ ಹಸಿವಿನ ವಿರುದ್ಧದ ಹೋರಾಟಕ್ಕೆ ಮೊದಲ ಆದ್ಯತೆ ನೀಡಿದರು. ಜಾತಿ, ವರ್ಣ ಮತ್ತು ವರ್ಗ ವ್ಯವಸ್ಥೆಯಲ್ಲಿನ ಅಸಮಾನತೆ ಮತ್ತು ಅಮಾನವೀಯತೆಗಳನ್ನು ಉಗ್ರವಾಗಿ ಹೊರ ಹಾಕಿದರು. “ಯಾವ ದಿನ ಮ್ಲೇಚ್ಛ ಎಂಬ ಶಬ್ದವನ್ನು ಭಾರತೀಯರು ಕಲಿತರೋ ಆ ದಿನವೇ ಅವರ ಅಧೋಗತಿಗೆ ಪೀಠಿಕೆಯಾಯಿತು” ಎಂದರು. (ಕುವೆಂಪು ಕೃತಿ – ಪು-೧೯೭) “ಇಂದಿನ ಹಿಂದೂ ಧರ್ಮವು ಜ್ಞಾನ ಮಾರ್ಗವೂ ಅಲ್ಲ: ಭಕ್ತಿ ಮಾರ್ಗವೂ ಅಲ್ಲ. ಆದರ ಧರ್ಮವೇ ಅಸ್ಪೃಶ್ಯತೆ” ಎಂದು ಟೀಕಿಸಿದರು (ಕೃತಿ ಶ್ರೇಣಿ – ಸಂ – ೬) “ಹೇ ಬ್ರಾಹ್ಮಣರೇ, ವಂಶ ಪಾರಂಪರ್‍ಯದ ಕಾರಣದಿಂದ ಬ್ರಾಹ್ಮಣರಿಗೆ ಅಸ್ಪೃಶ್ಯರಿಗಿಂತ ಹೆಚ್ಚು ಶೈಕ್ಷಣಿಕ ಯೋಗ್ಯತೆ ಯಿದ್ದರೆ ಅಸ್ಪೃಶ್ಯರ ಶಿಕ್ಷಣಕ್ಕೆ ನಿಮ್ಮೆಲ್ಲ ಹಣವನ್ನೂ ಖರ್ಚು ಮಾಡಿ, ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು-ಜಾತಿ, ಕುಲ-ಗೋತ್ರಗಳ ಭೇದವಿಲ್ಲದೆ, ದುರ್ಬಲ-ಸಬಲ ಎಂಬ ವ್ಯತ್ಯಾಸವಿಲ್ಲದೆ, ಉಚ್ಚ-ನೀಚ ಎಂದು ನೋಡದೆ ಪ್ರತಿಯೊಬ್ಬರಲ್ಲೂ ಅನಂತಾತ್ಮನಿದ್ದಾನೆಂದು ಅರಿಯಿರಿ” (ಸಂಪುಟ – ೫) ಎಂದು ಕರೆ ನೀಡಿದರು. ಹಾಗೆಂದು ಮೇಲ್ಜಾತಿಯವರನ್ನು ವಿರೋಧಿಸುವುದೇ ಪರಿಹಾರವೆಂದು ವಿವೇಕಾನಂದರು ಹೇಳಲಿಲ್ಲ. “ಉಚ್ಚಜಾತಿಯವರನ್ನು ತುಚೀಕರಿಸುವುದು ಪರಿಹಾರವಲ್ಲ. ಬ್ರಾಹ್ಮಣರನ್ನು ತುಳಿದುಹಾಕುವುದು ಮಾರ್ಗವಲ್ಲ … ಬದಲಾಗಿ ಕೆಳವರ್ಗದವರನ್ನು ಉಚ್ಚವರ್ಗದವರ ಮಟ್ಟಕ್ಕೆ ಮೇಲೆತ್ತುವುದರಲ್ಲಿ ನಿಜವಾದ ಪರಿಹಾರವಿದೆ” ಎಂದು ಪ್ರತಿಪಾದಿಸಿದರು. ಜಾತೀಯತೆಯ ಅಳಿವಿನಲ್ಲಿ ಈ ದೇಶದ ಉಳಿವು ಇದೆ ಎಂದು ನಂಬಿದ್ದರು. (‘ಕಡಲ ತಡಿಯಿಂದ ಹಿಮಾಚಲದಡಿಗೆ’ – ಕೋ. ಚೆನ್ನಬಸಪ್ಪ – ಪುಟ – ೧೮೬-೧೮೭).
ಹೀಗೆ ಧರ್ಮ, ಜಾತಿ, ವರ್ಣ, ವರ್ಗ, ಮತಾಂತರ – ಮುಂತಾದ ಸಾಮಾಜಿಕ ವಿಭಾಗಗಳ ಬಗ್ಗೆ ಸ್ಪಷ್ಟ ನಿಲುವಿನ ಶೋಧದಲ್ಲಿ “ನಿಕಷ ರೂಪಕ”ವಾಗಿ ಬೆಳೆಯುತ್ತ, ಬೆಳಗುತ್ತ ಬಂದ ವಿವೇಕಾನಂದರು ‘ಗೋ ಸಂರಕ್ಷಣೆ’ಯ ಬಗ್ಗೆ ತಳದ ನಿಲುವು ಸಹ ಅವರದೇ ವಿಶಿಷ್ಟ ಛಾಪನ್ನು ಪಡೆದುಕೊಂಡಿದೆ. ಕುವೆಂಪು ಅವರು ಈ ಸಂಬಂಧಿಯಾದ ಒಂದು ಪ್ರಸಂಗವನ್ನು ತಮ್ಮ ಕೃತಿಯಲ್ಲಿ (ಸ್ವಾಮಿ ವಿವೇಕಾನಂದ) ಉಲ್ಲೇಖಿಸಿದ್ದಾರೆ (ಪು – ೨೦೯-೨೧೧), ಗೋ ಸಂರಕ್ಷಣಾ ಸಂಘದ ಮುಖಂಡರೊಬ್ಬರು ಮುಪ್ಪಾದ ಗೋವುಗಳ ಸಂರಕ್ಷಣಾ ಕಾರ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಾಗ ‘ಕ್ಷಾಮದಿಂದ ನರಳುತ್ತಿರುವ, ಸಾಯುತ್ತಿರುವ ಜನರನ್ನು ಉಳಿಸುವ ಕೆಲಸ ಮಾಡಿ’ ಎಂದು ವಿವೇಕಾನಂದರು ಹೇಳುತ್ತಾರೆ. ಗೋ ಸಂರಕ್ಷಣೆಗಿಂತ ಜನರ ಜೀವ ಉಳಿಸುವುದು ಆದ್ಯತೆ ಎನ್ನುವುದು ಅವರ ಅಭಿಪ್ರಾಯ. ಆದರೆ ಗೋಸಂರಕ್ಷಣಾ ಸಂಘದ ಮುಖ್ಯಸ್ಥ ಇವರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ‘ಅದು ಜನಗಳ ಕರ್ಮ’ ಎನ್ನುತ್ತಾರೆ. ಆಗ ವಿವೇಕಾನಂದರು ಯಾರು ನರಳುವ ಸೋದರರಿಗಾಗಿ ಮರುಗಲಾರರೂ, ಯಾರು ತಮ್ಮ ಕಣ್ಣಿದುರಲ್ಲೆ ಕೂಳಿಲ್ಲದೆ ಸಾಯುವವರನ್ನು ಕಂಡರೂ ಒಂದು ತುತ್ತನ್ನಾದರೂ ದಾನ ಮಾಡದೆ ವೃದ್ಧ ಮೃಗ ಪಕ್ಷಿಗಳಿಗಾಗಿ ಲಕ್ಷ ಲಕ್ಷ ಧನವ್ಯಯ ಮಾಡುವರೋ ಅಂಥವರನ್ನು ನಾನು ಮನ್ನಿಸಲಾರೆ…. ಅವರು ಮನುಷ್ಯರೆ, ಮನುಷ್ಯರಿಗಾಗಿ ಮರುಗದವರು ?” ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಜಾತಿ ಮತ್ತು ಅಸ್ಪೃಶ್ಯತೆಯ ಆಚರಣೆ ಮಾಡುವವರ ಬಗ್ಗೆಯೂ ಇದೇ ರೀತಿಯ ಉಗ್ರ ಟೀಕೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು: “ನಮ್ಮ ದೇಶದಲ್ಲಿ ಯಾರಾದರೂ ಕೆಳಜಾತಿಯಲ್ಲಿ ಹುಟ್ಟಿದರೆ ಆಯಿತು. ಅವರಿಗೆ ಉಳಿಗಾಲವಿಲ್ಲ… ನಾವು ಅವರನ್ನು ಮುಟ್ಟುವುದಿಲ್ಲ. ಅವರ ಸಂಗವನ್ನು ನಿರಾಕರಿಸುತ್ತೇವೆ…. ಎಂತಹ ದಬ್ಬಾಳಿಕೆಯಿದು: ನಮ್ಮ ಸನಾತನ ಧರ್ಮ ಕೊಳಕಾಗಿದೆ. ನಾವು ಮನುಷ್ಯರೆ?” (ಕೃತಿ ಶ್ರೇಣಿ – ಸಂ-೧೩) “ನಾನೇ ಶುದ್ಧ ಉಳಿದವರೆಲ್ಲ ಅಶುದ್ಧ” ಎಂದು ಭಾವಿಸುವುದು “ಮೃಗೀಯ ರಾಕ್ಷಸೀ ಧರ್ಮ; ನರಕ ಸದೃಶ ಧರ್ಮ” (ಕೃತಿ ಶ್ರೇಣಿ – ಸಂ-೬) ಎಂದು ಸಂಕಟದಿಂದ ಸ್ಫೋಟಿಸಿದ್ದಾರೆ.
ವಿವೇಕಾನಂದರು ವಿದೇಶ ಪ್ರವಾಸ ಮುಗಿಸಿ ಮದ್ರಾಸ್‌ಗೆ ಬಂದಾಗ ಪತ್ರಕರ್ತರೊಬ್ಬರು “ಇಂಡಿಯಾ ದೇಶದ ಪುನರುದ್ಧಾರಕ್ಕೆ ನೀವೇನು ಮಾಡಬೇಕೆಂದಿದ್ದೀರಿ?” ಎಂದು ಕೇಳುತ್ತಾರೆ. ಆಗ ಅವರು “ನಮ್ಮ ಜನಾಂಗದ ಮಹಾಪಾತಕವೆಂದರೆ ಜನಸಾಮಾನ್ಯರನ್ನು ನಿರ್ಲಕ್ಷಿಸಿದ್ದು. ಇದೇ ನಮ್ಮ ಅವನತಿಗೆ ಮುಖ್ಯಕಾರಣ, ಜನಸಾಮಾನ್ಯರು ವಿದ್ಯಾವಂತರಾಗಿ ಅವರಿಗೆ ಊಟಕ್ಕೆ, ಬಟ್ಟೆಗೆ ಸಾಕಷ್ಟು ಸಿಕ್ಕುವವರೆಗೆ ಯಾವ ರಾಜಕೀಯದಿಂದಲೂ ಪ್ರಯೋಜನವಿಲ್ಲ. ಜನ ಸಾಮಾನ್ಯರು ತೆರಿಗೆ ಕಟ್ಟುತ್ತಾರೆ: ನಮ್ಮ ದೇವಸ್ಥಾನಗಳನ್ನು ಕಟ್ಟುತ್ತಾರೆ; ಅದಕ್ಕೆ ಪ್ರತಿಯಾಗಿ ನಿಮ್ಮಿಂದ ಅವರಿಗೆ ದೊರಕುವುದು ನಿಂದೆ. ನಿಜವಾಗಿ ಅವರು ನಮ್ಮ ಗುಲಾಮರಾಗಿರುವರು. ನಾವು ಭರತ ಖಂಡವನ್ನು ಉದ್ಧಾರ ಮಾಡಬೇಕಾದರೆ ಅವರಿಗಾಗಿ ಕೆಲಸ ಮಾಡಬೇಕು …. ಜನಸಾಮಾನ್ಯರಿಗೆ ಅವರ ಹಕ್ಕನ್ನು ಕೊಡಬೇಕು” ಎಂದು ಹೇಳಿದರು (ಸ್ವಾಮಿ ವಿವೇಕಾನಂದ ಕೃತಿ ಶ್ರೇಣಿ – ಸಂಪುಟ-೪, ಪುಟ ೪೦೨).
ಇನ್ನೊಂದು ಕಡೆ ವಿವೇಕಾನಂದರು ಹೇಳುತ್ತಾರೆ : ‘ನಮ್ಮ ದೇಶ ಬದುಕಿರುವುದೇ ದೀನರ ಜೋಪಡಿಗಳಲ್ಲಿ ಎಂಬುದನ್ನು ನೆನಪಿನಲ್ಲಿಡಿ. ಆದರೆ ಅವರಿಗೆ ಯಾರೂ ಸಹಾಯ ಮಾಡುತ್ತಿಲ್ಲ. ಪ್ರಾಣ ಹೋದರೂ ಸರಿ, ದೀನದಲಿತರಿಗೆ ದಯೆ ತೋರುವುದು ನಮ್ಮ ಗುರಿ. ದೀನ ದಲಿತರ ಮನೆಯ ಬಾಗಿಲಿಗೆ ನೆಮ್ಮದಿ, ನೀತಿ, ಧರ್ಮ ಬರುವಂತೆ ಮಾಡುವೆನು. ಹೀಗೆ ನಾನು ಮಾಡುತ್ತೇನೆ, ಇಲ್ಲ ಮಡಿಯುತ್ತೇನೆ” (ಕೃತಿ ಶ್ರೇಣಿ ಸಂ-೬).
ವಿವೇಕಾನಂದರ ಸಾಮಾಜಿಕ ಕಾಳಜಿಯ ತೀವ್ರತೆಗೆ ಈ ವಿಚಾರ ಸರಣಿ ಸಮರ್ಥ ಸಾಕ್ಷಿಯಾಗಿದೆ.
ವಿವೇಕಾನಂದರೆಂದರೆ ಸಾಮಾಜಿಕ ಸಂಕಟ, ಸಿಟ್ಟು, ಸ್ಫೋಟ, ಸ್ಪಷ್ಟತೆಗಳ ರೂಪಕ. ಅವರು ಶಿಖರ ಚಿಂತಕ. ಅವರ ಆಲೋಚನೆಯಲ್ಲಿ ಗೊಂದಲಗಳಿಲ್ಲ. ಕೆಲವೊಮ್ಮೆ ವೈರುಧ್ಯದಂತೆ ಕಂಡರೂ ಅದು ಸಾಂದರ್ಭಿಕ ಪ್ರತಿಕ್ರಿಯೆಗಳ ಫಲ. ಅವರ ಎಲ್ಲ ವಿಚಾರಗಳನ್ನು ಒಟ್ಟಿಗೇ ಇಟ್ಟು ನೋಡಿದಾಗ ಸ್ಪಷ್ಟ ನೋಟ ಕಾಣಿಸುತ್ತದೆ.
ಜನರ ದೈಹಿಕ ಹಸಿವನ್ನು ಹಿಂಗಿಸುವುದು ಅವರ ಮೊದಲ ಆದ್ಯತೆ; ಆನಂತರ ಆತ್ಮದ ಹಸಿವು, ವೇದಾಂತದ ಹಸಿವು; ಸಾಂಸ್ಥಿಕವಾಗದ ಧರ್ಮದ ಹಸಿವು. ಈ ಕಾರಣದಿಂದಾಗಿಯೇ ವಿವೇಕಾನಂದರು ಯಾವತ್ತೂ ಧಾರ್ಮಿಕ ಮೂಲಭೂತವಾದಿಯಾಗಲಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಕ್ಕೆ ಉಗ್ರ ವಿರೋಧಿಯಾಗಿದ್ದರು. ಜಾತಿವಾದ ಮತ್ತು ಕೋಮುವಾದಕ್ಕೆ ಪ್ರತಿರೋಧವೊಡ್ಡಿದರು. ಹಿಂದೂಧರ್ಮದೊಳಗಿದ್ದೂ ಅದನ್ನು ಮೀರಿದ ಸಾಮಾಜಿಕ ಶಕ್ತಿ ಯಾದರು. ಆದ್ದರಿಂದ ಇಂದಿನ ಸನ್ನಿವೇಶದಲ್ಲಿ ಅವರು ಹೆಚ್ಚು ಪ್ರಸ್ತುತರು. ಈ ಅಂಶವನ್ನು ಮುಂದಿನಂತೆ ಮತ್ತಷ್ಟು ವಿವರಿಸಬಹುದು: ಇಂದು ಜಾತಿವಾದ ಮತ್ತು ಕೋಮುವಾದಗಳು ಮುನ್ನೆಲೆಗೆ ಬಂದು ಮಾನವೀಯ ಮೌಲ್ಯಗಳನ್ನು ನುಂಗಿ ನೊಣೆಯುತ್ತಿವೆ. ಸಮಾನತೆಯ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ. ಬಡಜನರ ಪರವಾದ ಆದ್ಯತೆಗಳು ಪಲ್ಲಟಗೊಳ್ಳುತ್ತಿವೆ. ವಿವೇಕಾನಂದರಿಗೆ ಬಡಜನರ ಹೊಟ್ಟೆ ಹಸಿವು ಹಿಂಗಿಸುವುದು ಮೊದಲ ಆದ್ಯತೆಯಾಗಿತ್ತು. ಅನಂತರ ಧರ್ಮ, ಜಾತಿವಾದದ ವಿಷಯಕ್ಕೆ ಬಂದರೆ ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ ಅವರಿಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು. ಹೀಗಾಗಿಯೇ ಅವರು ಸಂಶಯಕ್ಕೆಡೆಯಿಲ್ಲದಂತೆ ಜಾತಿ ಮತ್ತು ವರ್ಗ ವ್ಯವಸ್ಥೆ ಯನ್ನು ವಿರೋಧಿಸಿದರು. ಅವರು ಹೇಳಿದರು: “ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ.” (ಕೃತಿ ಶ್ರೇಣಿ ಸಂ-೬) ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿ ಶೂದ್ರರು, ಅಸ್ಪೃಶ್ಯರು ಸ್ವಾತಂತ್ರ್ಯಹೀನರಾಗಿ ಗುಲಾಮತನ ಅನುಭವಿಸುವುದನ್ನು ಟೀಕಿಸುವ ವಿವೇಕಾನಂದರು ಶೂದ್ರವರ್ಗ ತನ್ನ ‘ಊಳಿಗ ಸ್ವಭಾವ’ವನ್ನು ಬಿಟ್ಟು ಹೊರಬರಬೇಕೆಂದು ಕರೆಕೊಡುತ್ತಾರೆ. ಮುಂದೊಮ್ಮೆ ಶೂದ್ರರು ತಮ್ಮ ಶೂದ್ರತ್ವದ ಶಕ್ತಿಯಿಂದಲೇ ಮೇಲೇಳುವ ಕಾಲ ಬರುತ್ತದೆಯೆಂದು ನಿರೀಕ್ಷಿಸುತ್ತಾರೆ. ಪ್ರತಿ ಸಮಾಜವೂ ಇಂತಹ ಶಕ್ತಿಯಿಂದ ಬದಲಾವಣೆ ಕಾಣುವುದೆಂದು ಭಾವಿಸುತ್ತಾರೆ ಮತ್ತು ವಿಶೇಷವೆಂದರೆ, ಮುಂದೆ ಬರುವುದು “ಸಮತಾವಾದ, ಅರಾಜಕವಾದ, ಶೂನ್ಯವಾದಗಳು ಮುಂದಾಗಲಿರುವ ಸಮಾಜ ಕ್ರಾಂತಿಯ ಅರುಣೋದಯ” ಎಂದು ಘೋಷಿಸುತ್ತಾರೆ. (ಕೃತಿ ಶ್ರೇಣಿ – ಸಂ-೨) ‘ಜಹೊನಾ’ ಅವರ ಕೃತಿಯಲ್ಲಿ ಉಲ್ಲೇಖ).
ಕೋಮುವಾದದ ವಿಷಯಕ್ಕೆ ಬಂದರೆ, ವಿವೇಕಾನಂದರೆಂದೂ ಏಕ ಸಂಸ್ಕೃತಿ ಮತ್ತು ಏಕ ಧರ್ಮ ವಿಸ್ತರಣೆಗಳ ಪರವಾಗಿರಲಿಲ್ಲ. ಅದು ಹಿಂದೂಧರ್ಮವಿರಲಿ, ಕ್ರೈಸ್ತ ಧರ್ಮವಿರಲಿ, ಇಸ್ಲಾಂ ಧರ್ಮವಿರಲಿ, ಏಕಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆಯು ಜೀವವಿರೋಧಿಯೆಂದು ಅವರು ಭಾವಿಸಿದ್ದರು: ೧೧-೯-೧೮೯೩ ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಅವರು ಹೇಳಿದ ಮಾತುಗಳು ನನ್ನ ಅಭಿಪ್ರಾಯವನ್ನು ಸಮರ್ಥಿಸುತ್ತವೆ. ಅವರು ಹೇಳಿದರು: “ಸ್ವಮತಾಭಿಮಾನ, ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ…. ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು.” ಇನ್ನೊಮ್ಮೆ ಅವರು ಹೀಗೆ ಹೇಳಿದರು: “ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ಆಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ…. ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ತೋರಬೇಕು.”
ವಿವೇಕಾನಂದರ ಧಾರ್ಮಿಕ ಚಿಂತನೆಗಳನ್ನು ಅವಲೋಕಿಸಿದಾಗ ಅವರು ಸ್ಪಷ್ಟವಾಗಿ ಕೋಮುವಾದ ವಿರೋಧಿಯಾಗಿದ್ದರೆಂದು ತಿಳಿದುಬರುತ್ತದೆ. ಕೋಮುವಾದವು ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಠವೆಂದೂ ಅದೇ ಅಂತಿಮವೆಂದೂ ನಂಬುತ್ತ, ನಂಬಿಸುತ್ತ, ಪರಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ. ಇಂತಹ ಪ್ರವೃತ್ತಿಗೆ ವಿವೇಕಾನಂದರು ಕಟ್ಟಾ ವಿರೋಧಿಯಾಗಿದ್ದರು. ಕುವೆಂಪು ಅವರು ಹೇಳುವಂತೆ ಅವರು ‘ಮಾವನ ಮಿತ್ರ’ರಾಗಿದ್ದರು. ‘ಮನುಷ್ಯತ್ವದ ಮಹಿಮೆಯನ್ನು ಎಂದೆಂದಿಗೂ ಮರೆಯಬೇಡಿ. ನಮಗಿಂತಲೂ ಬೇರೆಯಾದ ದೇವರು ಹಿಂದೆ ಇರಲಿಲ್ಲ. ಮುಂದೆ ಬರುವುದಿಲ್ಲ. ಕ್ರಿಸ್ತ, ಬುದ್ಧ, ಕೃಷ್ಣ, ರಾಮರೆಲ್ಲ ಅಹಮಸ್ಮಿ ಎಂಬ ಮಹಾವಾರಧಿಯ ತರಂಗಗಳು ಮಾತ್ರ’ ಎಂದು ಘೋಷಿಸಿದರು.
ತಮ್ಮ ಪ್ರಗತಿಪರ ವಿಚಾರಧಾರೆಯಿಂದ ಸಾಮಾಜಿಕ ಚಲನಶೀಲತೆಗೆ ಪೂರಕವಾದ, ಕೋಮುವಾದಿ ವಿರೋಧಿ ವ್ಯಕ್ತಿತ್ವದ, ವಿವೇಕಾನಂದರು ಕೆಲವು ದೌರ್ಬಲ್ಯಗಳಿಗೆ ದಾಸರಾಗಿದ್ದರೆಂಬ ದೋಷಾರೋಪಣೆಯನ್ನೂ ಎದುರಿಸಿದರು. “ಸ್ವಾಮೀಜಿ ನೀತಿಗೆಟ್ಟವರು, ತಿನ್ನಬಾರದ್ದನ್ನು ತಿನ್ನುತ್ತಾರೆ” ಸ್ತ್ರೀಸಂಗ ಮಾಡುತ್ತಾರೆ ಎಂದು ಪ್ರಚಾರ ಮಾಡಿದರು. ಭಾರತ ಖಂಡದ ರಾಷ್ಟ್ರೀಯ ಗುಣವಾದ ಅಸೂಯೆಯನ್ನು ಹರಿದು ಹಂಚಿಕೊಂಡಿದ್ದ ಭಾರತೀಯ ಪ್ರತಿನಿಧಿಗಳು ಈ ಪ್ರಚಾರದ ಬೆಂಕಿಗೆ ಗಾಳಿಯಾದರು. ಒಂದು ಸಂಸ್ಥೆಯಾಗಿ ಥಿಯಾಸಫಿ ಈ ಪ್ರಚಾರಕ್ಕೆ ಬೆಂಬಲ ನೀಡಿತು” (ಸ್ವಾಮಿ ವಿವೇಕಾನಂದ – ಡಾ. ಪ್ರಭುಶಂಕರ – ಪುಟ-೬೬) ಇದೇ ರೀತಿಯ ಪ್ರಚಾರವನ್ನು “ಕೆಲವು ಜನ ಪ್ರಾಚೀನ ಸಂಪ್ರದಾಯಕ್ಕೆ ಸೇರಿದ್ದ ಕ್ಷುದ್ರ ದೃಷ್ಟಿಯ ಪಾದ್ರಿಗಳೂ, ಇಂಡಿಯಾದಿಂದ ಪ್ರತಿನಿಧಿಗಳಾಗಿ ಅಲ್ಲಿಗೆ ಹೋಗಿದ್ದ ಕೆಲಮಂದಿ ಥಿಯಾಸಫಿ ಬ್ರಾಹ್ಮಸಮಾಜದ ದೊಡ್ಡಮನುಷ್ಯರು ಮುಕ್ತ ಕಂಠದಿಂದ ಸಾರತೊಡಗಿದರು” (ಸ್ವಾಮಿ ವಿವೇಕಾನಂದ – ಕುವೆಂಪು – ಪುಟ ೧೫೨).
ಈ ಪ್ರಚಾರದ ಸತ್ಯಾಸತ್ಯತೆ ಏನೇ ಇರಲಿ, ಪೂರ್ವಾಶ್ರಮದ ದೌರ್ಬಲ್ಯ ವ್ಯಸನಗಳನ್ನು ಮುಂದುಮಾಡಿ ನಾವು ವ್ಯಕ್ತಿತ್ವ ಭಂಜಕತೆಗೆ ಆದ್ಯತೆ ಕೊಡಬೇಕೊ ಅಥವಾ ಒಂದು ವೇಳೆ ‘ದೌರ್ಬಲ್ಯ’ಗಳಿದ್ದರೆ ಅವುಗಳನ್ನು ಮೀರಿ ಬೆಳೆದ ಸಾಧಕವ್ಯಕ್ತಿತ್ವಕ್ಕೆ ಆದ್ಯತೆ ಕೊಡಬೇಕೊ ಎನ್ನುವುದು ನನ್ನ ಮುಖ್ಯ ಪ್ರಶ್ನೆ. ನನ್ನ ಪ್ರಶ್ನೆಗೆ ನನ್ನ ಉತ್ತರ – ಮೀರಿ ಬೆಳೆದ ಸಾಧಕ ವ್ಯಕ್ತಿತ್ವಕ್ಕೆ ಆದ್ಯತೆ ಕೊಟ್ಟು ನಿರ್ಣಯಕ್ಕೆ ಬರಬೇಕು: ಮುಂಚಿನ ದೌರ್ಬಲ್ಯಗಳು (ಒಂದು ವೇಳೆ ಇದ್ದಲ್ಲಿ) ಸಾಂದರ್ಭಿಕ ದಾಖಲೀಕರಣ ಮಾತ್ರಕ್ಕೆ ಸೀಮಿತಗೊಳ್ಳಬೇಕು. ಅನ್ಯರಿಗೆ ಅನ್ಯಾಯವಾಗಿಲ್ಲದಿದ್ದರೆ ಮರೆತು ಮುಂದೆ ಹೋಗಬೇಕು.
ಈ ವಿಷಯ ಕುರಿತು ಸ್ವತಃ ವಿವೇಕಾನಂದರೇ ಶಿಷ್ಯರೊಬ್ಬರಿಗೆ ಪತ್ರ ಬರೆದು ಉತ್ತರಿಸಿ ದ್ದಾರೆ: “ನನ್ನ ಬ್ರಹ್ಮಚರ್ಯ ಮತ್ತು ತ್ಯಾಗಗಳಿಗೆ ಭಂಗವಾಗಿದೆಯೆಂದು ಮಿಷನರಿಗಳು ಹೇಳಿದರೆ ಅವರೆಲ್ಲ ಸುಳ್ಳುಗಾರರೆಂದು ಧೈರ್ಯವಾಗಿ ಹೇಳಿಬಿಡು. ಭಾರತೀಯರು ನಾನು ಇಲ್ಲಿಯೂ ಅವರ ಆಹಾರವನ್ನೇ ತಿನ್ನಬೇಕೆಂದು ಬಯಸಿದ ಪಕ್ಷದಲ್ಲಿ ಒಬ್ಬ ಅಡಿಗೆಯವನನ್ನೂ ಸಾಕಾಗುವಷ್ಟು ಹಣವನ್ನೂ ಕಳಿಸುವಂತೆ ಹೇಳು…. ನಾನು ಯಾರ ಗುಲಾಮನೂ ಅಲ್ಲ. ನಾನು ಎಷ್ಟರ ಮಟ್ಟಿಗೆ ಭಾರತವರ್ಷಕ್ಕೆ ಸೇರಿದವನೊ ಅಷ್ಟರಮಟ್ಟಿಗೆ ಪ್ರಪಂಚಕ್ಕೆ ಸೇರಿದವನೂ ಆಗಿದ್ದೇನೆ…. ಹಿಂದೂಗಳಲ್ಲಿ ಮಾತ್ರವೇ ಲಭಿಸುವ ಜಾತಿಭ್ರಾಂತರೂ ಮೂರ್ಖರೂ ದಯಾಹೀನರೂ ಕೃತ್ರಿಮ ಜೀವಿಗಳೂ ನಾಸ್ತಿಕ ಕ್ರಿಮಿಗಳೂ ಆದ ಹೇಡಿಗಳಂತೆ ನಾನು ಬಾಳಿ ಬದುಕಿ ಸಾಯಬೇಕಿದೆ ಯೇನು? ಆ ಹೇಡಿತನ ನನಗೆ ಸೇರದು” (ಸ್ವಾಮಿ ವಿವೇಕಾನಂದ – ಕುವೆಂಪು – ಪುಟ – ೧೭೫-೧೭೬).
ವಿವೇಕಾನಂದರ ‘ಧೀರೋದಾತ್ತ’ ನಿಲುವುಗಳು ವೈಯಕ್ತಿಕ ಮಾತ್ರವಾಗದೆ ಸಾಮಾಜಿಕವಾಗಿ ರೂಪಾಂತರಗೊಂಡು ಗಟ್ಟಿಯಾದದ್ದೇ ಅವರ ವ್ಯಕ್ತಿತ್ವದ ವಿಶೇಷ; ಅವರದು ಪ್ರಖರ ಸಾಮಾಜಿಕ ವ್ಯಕ್ತಿತ್ವ. ದೀನ ದಲಿತರ ಉದ್ಧಾರವೇ ಅವರ ಧರ್ಮದ ಮೊದಲ ತತ್ವ; ಅದೇ ಅವರ ವೈಚಾರಿಕ ಸತ್ವ. ಆದ್ದರಿಂದ ವಿವೇಕಾನಂದರು ಇಂದಿಗೂ ಸತ್ಯ.
*****