ಮತ್ತೊಂದು ಮೇ ದಿನ

ಮತ್ತೊಂದು ಮೇ ದಿನ

ಮತ್ತೊಂದು ಮೇ ದಿನಾಚರಣೆ ಆಗಿಹೋಯಿತು. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮೇದಿನ ಒಂದು ಆಚರಣೆಯಾಗಿ ವಿಜೃಂಭಿಸಿತು. ಆಚರಣೆ ಎನ್ನುವುದೇ ಒಂದು ಪುನರಭಿನಯದ ಪ್ರತಿಮಾ ವಿಧಾನ, ಹೀಗಾಗಿ ಪ್ರತಿವರ್ಷವೂ ಹೊಸದನ್ನು ಹುಡುಕಲು ಸಾಧ್ಯವಾಗದು. ಹಿಂದಿನ ವರ್ಷದ ಆಶಯವೇ ಮತ್ತೊಮ್ಮೆ ಮರವಣಿಗೆಯಾಗಿ, ಘೋಷಣೆಯಾಗಿ, ಕಡೆಗೆ ಬಹಿರಂಗ ಸಭೆಯ ಭಾಷಣವಾಗಿ ಪುನರಭಿವ್ಯಕ್ತಿಯಾಗಿ, ಪುನರಭಿನಯವಾಗಿ, ಪರ್‍ಯಾವಸಾನವಾಗುವುದೇ ಹೆಚ್ಚು. ಆಚರಣೆಯ ಯಾಂತ್ರಿಕತೆಯನ್ನು ಮೀರುವ ಪ್ರಯತ್ನದಲ್ಲಿ ಮಾತ್ರ ಚಲನಶೀಲ ನೆಲೆಯನ್ನು ಕಾಣಬಹುದು. ಹಾಗೆ ನೋಡಿದರೆ ಮೆರವಣಿಗೆಯೇ ಮೂಲತಃ ಚಲನಶೀಲವಾದದ್ದು. ಯಾಕೆಂದರೆ ಎಲೈಟ್ ಸಂಸ್ಕೃತಿಯ ಸಂಕೋಚ ಮತ್ತು ಬಿಗುಮಾನಗಳನ್ನು ಮೀರಿ ಜನಮುಖಿಯಾಗುವ ಮನೋಧರ್ಮಕ್ಕೆ ಮಾತ್ರ ಮೆರವಣಿಗೆಯ ಭಾಗವಹಿಸುವಿಕೆ ಸಂತೋಷ, ಸಂಭ್ರಮಗಳನ್ನು ತರಬಲ್ಲದು. ಆದರೆ ಮರವಣಿಗೆಯೂ ಅನಿವಾರ್ಯ ಆಚರಣೆಯ ಜಡತೆಯನ್ನು ಮೈಗೂಡಿಸಿಕೊಂಡರೆ, ಅದರ ಚಲನೆಯು ಯಾಂತ್ರಿಕ ಅನಿವಾರ್ಯತೆಯಾಗುವ ಅಪಾಯವಿರುತ್ತದೆ. ಆಗ ಮರವಣಿಗೆಯಲ್ಲಿ ಮುಂದೆ ಹೋಗುವ ಕಾಲುಗಳು ಕಾಲವನ್ನು ಮೀರುವುದಿಲ್ಲ; ಕಾಲಗಳನ್ನು ಸಾಮಾಜಿಕ-ಆರ್ಥಿಕ ನ್ಯಾಯದ ಮೌಲ್ಯ ಕಾಡುವುದಿಲ್ಲ. ಮೆರವಣಿಗೆ ಒಂದು ಮನೋಧರ್ಮವಾಗುವುದಿಲ್ಲ. ಯಾವಾಗ ಮರವಣಿಗೆಯೇ ಒಂದು ಮನೋಧರ್ಮ ಮತ್ತು ಮೌಲ್ಯವಾಗುತ್ತದೆಯೋ ಆಗ ಅದು ಸಾರ್ಥಕವಾಗುತ್ತದೆ. ಮೇ ದಿನದ ಮರವಣಿಗೆ ಒಂದು ಮನೋಧರ್ಮ ಮತ್ತು ಮೌಲ್ಯ ಎರಡೂ ಆಗಿರಬೇಕೆಂಬುದೇ ಆಶಯ ಮತ್ತು ಅಭಿವ್ಯಕ್ತಿ. ಹೀಗಾಗಿ ಉಳಿದ ಆಚರಣೆಗಳಿಗೂ ಮೇದಿನದ ಆಚರಣೆಗೂ ಅಂತರದ ಗೆರೆಯೊಂದು ಇರುತ್ತದೆ ಅಥವಾ ಇರಬೇಕು.

ಒಂದು ಶತಮಾನಕ್ಕೂ ಹಿಂದೆ ಕಾರ್ಮಿಕರ ದೈನಿಕ ದುಡಿಮೆಯ ಅವಧಿಯನ್ನು ಎಂಟುಗಂಟೆಗೆ ಇಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ನಡೆದ ಮುಷ್ಕರ ಮತ್ತು ಸಮಾವೇಶದ ದಿನವೇ ಇಂದು ಈ ದಿನವಾಗಿ ಆಚರಿಸಲ್ಪಡುತ್ತಿದೆ. ನಮಗೆಲ್ಲ ಗೊತ್ತಿರುವಂತೆ ಇದು ಕಾರ್ಮಿಕದಿನ; ದುಡಿಮೆಗಾರರ ಆಶೋತ್ತರಗಳನ್ನು ನೆನಪಿಸುವ ವಾರ್ಷಿಕದಿನ.

ಇಂದು ಕಾರ್ಮಿಕ ದಿನವಾಗಿ ನಗರ ಮತ್ತು ಪಟ್ಟಣಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಮೇದಿನವು ಎಲ್ಲ ದುಡಿಮೆಗಾರರ ದಿನವಾಗಿ, ಮಾರ್ಪಟ್ಟು ಹಳ್ಳಿ ಹಳ್ಳಿಯ ಆಚರಣೆಯಾದಾಗ ಅದರ ಆಶಯ ಸಾರ್ಥಕವಾಗುತ್ತದೆ. ಆದರೆ ಇಂಡಿಯಾದಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳಗಳನ್ನು ಬಿಟ್ಟರೆ ಬೇರಾವ ರಾಜ್ಯದಲ್ಲಿ ಕಾರ್ಮಿಕ ಚಳುವಳಿ ಗಮನಾರ್ಹವಾಗಿ ವಿಸ್ತರಣೆಗೊಳ್ಳಲಿಲ್ಲ. ಮಾರ್ಕ್ಸ್‍ವಾದಿ ಆಶಯಗಳು ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಇದು ಯಾಕೆ ಎಂದು ಉಳಿದವರು ಪ್ರಶ್ನಿಸಿಕೊಳ್ಳಬೇಕಾಗಿದೆ. ನಿಜ ಪ್ರತಿಗಾಮಿ ಸಂಗತಿಗಳು ಜನಮನದಲ್ಲಿ ಭಾವನಾತ್ಮಕವಾಗಿ ಬೇರೂರಲು ಸಾಧ್ಯವಾದಷ್ಟು ಸುಲಭವಾಗಿ ಪ್ರಗತಿಪರ ವಿಚಾರಗಳು ಪ್ರಬಲಗೊಳಿಸಲು ಸಾಧ್ಯವಿಲ್ಲ. ಹಳೆಯ ಕೊಳಕಿಗೆ ಕಿಚ್ಚಿಟ್ಟು ಹೊಸ ಬೆಳಕನ್ನು ಬೆಳೆಯುವುದು ಕಷ್ಟದ ಕೆಲಸ. ಆದರೆ ಒಂದು ಕಡೆ ಸಾಧ್ಯವಾದದ್ದು ಇನ್ನೊಂದು ಕಡೆ ಸಾಧ್ಯವಾಗದೆ ಇರುವುದರ ಹಿಂದೆ ಇರುವ ಕಾರಣಗಳನ್ನು ಕಂಡುಕೊಳ್ಳುವುದು ಕಾರ್ಮಿಕ ನಾಯಕರ ಕರ್ತವ್ಯವಾಗಬೇಕು.

ಈಗ ಕಾರ್ಮಿಕ ನಾಯಕರು ಕೇವಲ ಕಮ್ಯುನಿಸ್ಟ್ ನೆಲೆಯಿಂದ ಮಾತ್ರ ಮೂಡಿಬರುತ್ತಿಲ್ಲ. ಒಂದೊಂದು ರಾಜಕೀಯ ಪಕ್ಷವೂ ಕಾರ್ಮಿಕ ವಿಭಾಗವನ್ನು ಹೊಂದಿದ್ದು ಈ ವಿಭಾಗದ ಮುಖ್ಯಸ್ಥರೆಲ್ಲ ಕಾರ್ಮಿಕ ನಾಯಕರೆನ್ನಿಸಿ ಕೊಳ್ಳುತ್ತಿದ್ದಾರೆ. ಸಣ್ಣದೊ ದೊಡ್ಡದೊ ಒಟ್ಟಿನಲ್ಲಿ ಒಂದಾದರೂ ಕಾರ್ಖಾನೆಯ ಕಾರ್ಮಿಕ ಸಂಗವನ್ನು ತಮ್ಮ ಕೈವಶ ಮಾಡಿಕೊಂಡು ಅಲ್ಲಿ ವಿಜೃಂಭಿಸ ತೊಡಗುತ್ತಾರೆ. ಅಲ್ಲಿಗೆ ಕಾರ್ಮಿಕ ಚಳವಳಿಯ ಕೈಂಕರ್ಯ ಮುಗಿಯಿತೆಂದು ಭಾವಿಸುತ್ತಾರೆ. ಇದು ಇವತ್ತಿನ ಕಾರ್ಮಿಕ ಚಳುವಳಿಯು ಒಂದು ದುರಂತ. ಮಾರ್ಕ್ಸ್‍ವಾದಿಗಳು ಒಂದಿಷ್ಟು ಚೈತನ್ಯಶೀಲವಾಗಿರುವುದು ನಿಜವಾದರೂ ಮೂಲ ಆಶಯಗಳ ವಿಸ್ತರಣೆಗೆ ಒತ್ತಾಸೆಯಾಗುವ ಬದಲು ಅಂಥ ಆಸೆಯ ಬತ್ತಿಹೋಗುತ್ತಿರುವ ವಾತಾವರಣದಿಂದ ಆತಂಕ ಹುಟ್ಟುತ್ತದೆ. ಸಂಬಳ ಸಾರಿಗೆಗಳ ಸಂಘಟನೆಯಾಗಿ ಮಾತ್ರ ರೂಪುಗೊಳ್ಳುವ ಕಾರ್ಮಿಕ ಚಳವಳಿಯು ಕ್ರಾಂತಿಯ ಮೂಲ ಆಶಯಕ್ಕೆ ಪೂರಕವಾಗದೆ ಸವಲತ್ತುಗಳ ಸರದಾರನಾಗು ಇದೆ. ಹೀಗೆಂದ ಕೂಡಲೆ ಸವಲತ್ತುಗಳನ್ನು ಕೇಳಬಾರದೆಂದಲ್ಲ. ಕಾರ್ಮಿಕರಿಗೆ ಅಗತ್ಯವಾದ ಸವಲತ್ತುಗಳನ್ನು ಬೇಡಿಕೆಯಾಗಿ, ಹೋರಾಟವಾಗಿ ರೂಪಿಸುವದರಿಂದ ಮಾತ್ರವೇ ಪ್ರಾಥಮಿಕ ಸಂಘಟನೆ ಸಾಧ್ಯ. ಆದರೆ ಸಂಘಟನೆ ಬಲವಾಗುತ್ತ ಬೇಡಿಕೆಗಳು ಮಾತ್ರ ಬಲವಾಗುವ ಬದಲು, ಸಮಾಜ ಬದಲಾವಣೆಯ ಆಶಯವೂ ಬಲವಾಗಬೇಕು. ಹೀಗೆ ಆಗದಿದ್ದರೆ ಕಾರ್ಮಿಕ ಸಂಘಟನೆಗಳು ಶಕ್ತಿರಾಜಕೀಯದ ಸಂಕೇತಗಳಾಗಿ ನಿಂತುಬಿಡುತ್ತವೆ. ಇವು ನಡೆಸುವ ಮೇ ದಿನ ಒಂದು ಆಚರಣೆ ಮಾತ್ರವಾಗುತ್ತದೆ.

ಕಾರ್ಮಿಕ ಸಂಘಟನೆಗಳನ್ನು ಸಮಾಜ ಬದಲಾವಣೆಯ ಸಂಘಟನೆಗಳನ್ನಾಗಿ ರೂಪಿಸುವ ಕೆಲಸ ಬಾಯಿಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲವೆಂದು ನನಗೆ ಗೊತ್ತು. ಆದರೆ ಕಾರ್ಮಿಕ ಸಂಘನೆಗಳು ಕಡೇ ಪಕ್ಷ ಶಕ್ತಿರಾಜಕೀಯದ ಅಖಾಡಗಳಾಗಬಾರದು. ಬೇಡಿಕೆಗಳಿಗಾಗಿಯೇ ನಡೆಯುವ ಬಲಪ್ರದರ್ಶನದ ಬಲತ್ಕಾರ ಕೇಂದ್ರಗಳಾಗಬಾರದು, ಕಾರ್ಮಿಕ ಸಂಘಟನೆಗಳಿಗೆ ಸಮಾಜ ಬದಲಾವಣೆಯ ಸಾಂಸ್ಕೃತಿಕ ಸ್ಪರ್ಶ ಹೊಸ ರೋಮಾಂಚನಗಳನ್ನು ಹುಟ್ಟು ಹಾಕಬೇಕು; ಕನಸುಗಾರಿಕೆಯನ್ನು ಜೀವಂತವಾಗಿಡಬೇಕು. ತಮ್ಮ ಸವಲತ್ತುಗಳು ಮಾತ್ರ ಸಂಘಟನೆಯಾಗುವುದಷ್ಟೇ ಅಲ್ಲ, ಸಮಾಜವೇ ಸಂಘಟನೆಯ ಸವಲತ್ತಾಗಿ ರೂಪುಗೊಳ್ಳಬೇಕೆಂಬ ಹಂಬಲ ಹುಟ್ಟಬೇಕು. ಇಂಥ ಭಾವನೆ ಮತ್ತು ಚಿಂತನೆಗಳು ಮೊದಲು ಕಾರ್ಮಿಕ ನಾಯಕರಲ್ಲಿ ಚೈತನ್ಯಶೀಲವಾಗಿರಬೇಕು.

ತುಂಬಾ ಹಿಂದೆಯೇ ದಿ. ಬಿ.ಟಿ. ರಣದಿವೆಯವರು ಕಾರ್ಮಿಕ ಸಂಘಟನೆಗಳ ಮಿತಿಯನ್ನು ಕುರಿತು ನೇರವಾಗಿ ಹೇಳಿದ್ದರು. ಕೇವಲ ಸಂಬಳದ ಹೆಚ್ಚಳ, ತುಟ್ಟಿಭತ್ಯೆಗಳ ಬೇಡಿಕೆಯಲ್ಲಿ ನಮ್ಮ ಕಾರ್ಮಿಕ ಸಂಘಟನೆಗಳು ಸೊರಗುತ್ತಿವೆಯೆಂದು ಸ್ವತಃ ದೊಡ್ಡ ಕಾರ್ಮಿಕ ನಾಯಕರಾದ ರಣದಿವೆಯವರು ಕೊರಗಿದ್ದರು; ವಿಷಾದ ವ್ಯಕ್ತಪಡಿಸಿದ್ದರು. ಅವರ ವಿಷಾದ ಎಲ್ಲ ಕಾರ್ಮಿಕ ನಾಯಕರ ವಿಷಾದವಾಗಿ, ಪ್ರಾಮಾಣಿಕ ಪ್ರತೀಕವಾಗಿ ಬೆಳೆದಾಗ ಬದಲಾವಣೆಯ ಆಸೆ ಜೀವಂತವಾಗಿರಲು ಸಾಧ್ಯ. ಅದರ ಬದಲು ಕಾರ್ಮಿಕ ಸಂಘಟನೆಗಳು ಶಕ್ತಿ ರಾಜಕೀಯದ ಮಿತಿ ಮತ್ತು ಮಲಿನತೆಗಳನ್ನು ಮೈಗೂಡಿಸಿ ಕೊಂಡರೆ ಜನಮುಖ ಆಶಯವೇ ಒಂದು ಮುಖವಾಡವಾಗುವ ಅಪಾಯವಿರುತ್ತದೆ. ಇಂಥ ಅಪಾಯವನ್ನು ಈಗಾಗಲೇ ಕಾರ್ಮಿಕ ಸಂಘಟನೆಗಳು ಎದುರಿಸುತ್ತಿವೆ. ಖೋಟಾ ಕಾರ್ಮಿಕ ಸಂಘಟನೆಗಳಿಂದ ನೈಜ ಆಶಯಗಳಿಗೆ ಧಕ್ಕೆಯಾಗುತ್ತಿದೆ. ಅಷ್ಟಿಷ್ಟು ನೈಜ ಹಾಗೂ ಪ್ರಾಮಾಣಿಕ ಆಶಯಗಳನ್ನು ಹೊಂದಿದ ಕಾರ್ಮಿಕ ಸಂಘಟನೆಗಳಿಗೂ ಕಷ್ಟವಾಗುತ್ತಿದೆ.

ಕಾರ್ಮಿಕ ಹೋರಾಟದ ಅಂತಿಮ ಆಶಯ ಕಮ್ಯುನಿಸ್ಟ್ ಸರ್ಕಾರದ ರಚನೆ. ಒಟ್ಟಾರೆ ದುಡಿಮೆಗಾರರ ಒಗ್ಗಟ್ಟು ಮತ್ತು ಹೋರಾಟಗಳು ಈ ದಿಕ್ಕಿನಲ್ಲಿ ಚಲಿಸಲು ಒತ್ತಾಸೆಯಾಗಬಲ್ಲವು. ಆದರೆ ಈಗ ಕಾರ್ಮಿಕ ಸಂಘಟನೆಗಳು ‘ಸಂಘ’ ಮಾತ್ರವಾಗುತ್ತಿದ್ದು, ಕಮುನಿಷ್ಟೇತರ ರಾಜಕೀಯ ಪಕ್ಷಗಳ ಪ್ರವೇಶವೂ ಇರುವುದರಿಂದ ಕಡೇಪಕ್ಷ ಸಮಾಜ ಬದಲಾವಣೆಯ ಆಶಯವನ್ನು ಜೀವಂತವಾಗಿಡುವ ಕೆಲಸ ಮಾಡಿದರೆ ಸಾಕೆನ್ನಿಸುವ ಮಟ್ಟ ತಲುಪಿವೆ. ಯಾಕೆಂದರೆ ರಣದಿವೆಯವರು ಆತಂಕಿಸಿದಂತೆ ಈ ಕೆಲಸವೂ ಸರಿಯಾಗಿ ಆಗುತ್ತಿಲ್ಲ.

ಇನ್ನೊಂದು ಮಾತನ್ನು ಇಲ್ಲಿ ಹೇಳಬೇಕು. ಮಾರ್ಕ್ಸ್ ಸಿದ್ಧಾಂತದ ಆಧಾರದ ಮೇಲೆ ಕಾರ್ಮಿಕ ಸಂಘಟನೆ ಮಾಡುವ ಮಹನೀಯರೂ ಕೆಲವು ಮಿತಿಗಳಿಂದ ನರಳುತ್ತಿದ್ದಾರೆ. ಒಮ್ಮೊಮ್ಮೆ ಮಿತಿಗಳೇ ಮಿತಿಮೀರಿ ನರಳುವಂತಾಗುತ್ತದೆ. ನರಳುವಿಕೆಯನ್ನು ಮಾನಸಿಕವಾಗಿ ಅನುಭವಿಸುವ ಆತ್ಮ ವಿಮರ್ಶೆ ಇಲ್ಲದಾಗ ನರಳು, ಕೊರಳು ಮಾತ್ರವಾಗಿ ಮೇಲರಿಮೆಯ ಪ್ರದರ್ಶನವಾಗಿಬಿಡುತ್ತದೆ. ಆಗ ಎಂದೊ ಕಲಿತ ಬಾಯಿಪಾಠದ ಪುನರಾವರ್ತನೆಯು ಪುಂಖಾನುಪುಂಖವಾಗಿ ಶಂಖ ಊದುತ್ತದೆ. ಇದರಿಂದ ವಿಮೋಚನೆಗೊಳ್ಳುವ ಆತ್ಮವಿಮರ್ಶೆಗೆ ಇದು ಸಕಾಲವೆಂದು ನನ್ನ ಭಾವನೆ. ಯಾಕೆಂದರೆ ಇಂದು ಸಮತಾವಾದಿ ಆಶಯಗಳು ಹಿಂದೆಂದಿಗಿಂತ ಪ್ರಬಲವಾದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಾರ್ಕ್ಸ್‍ವಾದವನ್ನು ಉಲ್ಲಂಘಿಸಲಾಗದ ವೇದವೆಂದು ಭ್ರಮಿಸಿ, ಅದರ ಆಶಯಗಳನ್ನು ಅರ್ಥಮಾಡಿಕೊಳ್ಳದೆ, ವಾಕ್ಯಗಳ ಉದ್ದರಣೆಯಲ್ಲೇ ಉದ್ದಾರ ಮಾಡುವ ಮಿತಿಯನ್ನು ಮೀರುವುದು ತೀರಾ ಅವಶ್ಯಕ. ಮಾರ್ಕ್ಸ್‍ವಾದದ ಮೂಲ ಆಶಯವನ್ನು ಬಿಟ್ಟುಕೊಡದೆ ಬದಲಾವಣೆಯ ಆಶಯಕ್ಕೆ ಸೃಜನಶೀಲವಾಗಿ ಹೊಂದಿಸುವ ಹೊಸ ಹುರುಪೊಂದು ಇಂದು ಬೇಕಾಗಿದೆ. ಕಂಠಪಾಠ ಪ್ರವೀಣರಿಂದ ಮಾರ್ಕ್ಸ್‍ವಾದವನ್ನು ಪಾರುಮಾಡಬೇಕಾಗಿದೆ. ಹಾಗೆ ನೋಡಿದರೆ ಎಲ್ಲ ವಾದಗಳ ಕಂಠಪಾಠ ಪ್ರವೀಣರೂ ಆಯಾವಾದಕ್ಕೆ ಅಡ್ಡಗೋಡೆ ಕಟ್ಟುವವರೇ ಆಗಿದ್ದಾರೆ. ಲೋಹಿಯಾವಾದಿಗಳೂ, ಅಂಬೇಡ್ಕರ್ ವಾದಿಗಳೂ ಇದಕ್ಕೆ ಹೊರತಾಗಿಲ್ಲ. ಆದರೆ ಕಾರ್ಮಿಕದಿನದ ಸಂದರ್ಭದಲ್ಲಿ ಕಮ್ಯುನಿಸ್ಟ್-ಮಾರ್ಕ್ಸ್‍ವಾದಿಗಳು ತಂತಮ್ಮ ಮಿತಿಗಳನ್ನು ಮೀರುವ ಬಗ್ಗೆ ಚಿಂತನೆ ನಡೆಸಬೇಕೆಂದು ಬಯಸುವುದು ಮಾರ್ಕ್ಸ್‍ವಾದದ ಪ್ರಸ್ತುತತೆಗೆ ಸಂದ ಗೌರವವೆಂದೇ ಭಾವಿಸಬೇಕು. ಯಾಕೆಂದರೆ ಅವಾಸ್ತವಿಕ ಹಾಗೂ ಅಪ್ರಸ್ತುತ ಸಿದ್ಧಾಂತಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಲೋಹಿಯಾ ಮತ್ತು ಅಂಬೇಡ್ಕರ್ ವಿಚಾರಗಳು ಮಾರ್ಕ್ಸ್‍ವಾದದಂತೆ ರಾಜಕೀಯ ಶಕ್ತಿಯಾಗಿ ಮತ್ತು ರಾಜಕೀಯ ಪಕ್ಷವಾಗಿ ಈಗ ಪ್ರಬಲವಾಗಿಲ್ಲದಿದ್ದರೂ ಅವುಗಳನ್ನು ಅಪ್ರಸ್ತುತವೆಂದು ದೂರ ತಳ್ಳದೆ, ಮಾರ್ಕ್ಸ್‍ವಾದಿಗಳು ಸಮೀಪವರ್ತಿಗಳಾಗಬೇಕು. ಈ ಸಮೀಪ ಸ್ವೀಕರಣ ಕ್ರಿಯೆ ಪರಸ್ಪರ ನಡೆಯಬೇಕೇ ಹೊರತು ಏಕಮುಖವಾದುದಲ್ಲವೆಂಬುದು ನಿಜವಾದರೂ ಮಹದೋದ್ದೇಶದ ಮಾರ್ಕ್ಸ್‍ವಾದಿಗಳು ತಮ್ಮ ಮಿತಿಗಳನ್ನು ಮೀರುವ ಒಂದು ಸಾಧನವಾಗಿ ಇತರ ಪ್ರಗತಿಪರ ವಾದಗಳಿಂದಲೂ ಕಲಿಯ ಬೇಕಾದದ್ದು ಅಗತ್ಯ. ಇತರೆ ವಾದದವರು ಮಾರ್ಕ್ಸ್‍ವಾದದಿಂದ ಏನನ್ನೂ ಕಲಿಯದಿದ್ದರೆ ಅದು ಅವರ ಮಿತಿಯೆಂಬುದನ್ನು ಇತಿಹಾಸವೇ ತೋರಿಸುತ್ತದೆ; ಅಷ್ಟೇಕೆ ತೋರಿಸುತ್ತಿದೆ, ಆದರೆ ಇದೇ ಇತಿಹಾಸ ಈಗಾಗಲೇ ತೋರಿಸಿರುವ ತನ್ನ ಕೊರತೆಗಳನ್ನು ಮಾರ್ಕ್ಸ್‍ವಾದ ಮೀರಬೇಕು. ಇದು ಮಾರ್ಕ್ಸ್‍ವಾದಿ ಚಳವಳಿಗೆ ಮುಖ್ಯವಾಗಬೇಕು.

ಕಾರ್ಮಿಕ ಸಂಘಟನೆಯನ್ನು ಕುರಿತಂತೆ ಕ್ರಾಂತಿಕಾರಿ ಲಿನಿನ್ ಅಭಿಪ್ರಾಯದ ಸಾರವನ್ನು ಉಲ್ಲೇಖಿಸಿ ನನ್ನ ಮಾತುಗಳನ್ನು ಮುಗಿಸಬಯಸುತ್ತೇನೆ.

“ನಾವು ಅಮೂರ್ತ ಮನುಷ್ಯ ನೆಲೆಗಳಿಂದ ಸಮಾಜವಾದ ಕಟ್ಟುವ ಕೆಲಸವನ್ನು ಪ್ರಾರಂಭಿಸುತ್ತಿಲ್ಲ. ಅಥವಾ ನಮಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಮನುಷ್ಯನೆಲೆಗೂ ಇಲ್ಲ. ಬಂಡವಾಳಶಾಹಿ ಒದಗಿಸಿರುವ ಮನುಷ್ಯರೂಪಗಳಿಂದ ನಾವು ಸಮಾಜವಾದವನ್ನು ಕಟ್ಟಬೇಕಾದ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು… ಜನ ಸಮೂಹದ ಸಹಾನುಭೂತಿ ಗಳಿಸಬೇಕಾದರೆ ಮತ್ತು ಜನ ಸಮೂಹಕ್ಕಾಗಿ, ಕೆಲಸ ಮಾಡಬೇಕಾದರೆ ಪ್ರತಿಗಾಮಿಯೆಂದು ಕಾಣುವ ಕಾರ್ಮಿಕ ಸಂಘಟನೆಗಳ ಒಳಗೂ ಕ್ರಿಯಾಶೀಲರಾಗುವ ಕಷ್ಟವನ್ನು ಸಹಿಸಬೇಕು. ಸಮಾಜವಾದೀ ಆಶಯದ ಸುವ್ಯವಸ್ಥಿತ ಪ್ರತಿಪಾದನೆಗಾಗಿ ಜನಸಮೂಹ ಇರುವ ಕಡೆಯಲ್ಲೆಲ್ಲ ಗುರುತಿಸಿಕೊಳ್ಳಲೇಬೇಕು. ಜನರು ಇದ್ದಾರೆಂದರೆ-ಪ್ರತಿಗಾಮಿಯೆಂದು ದೂರಸರಿಯುವ ಪ್ರವೃತ್ತಿಯನ್ನು ಬಿಟ್ಟು ಜನರನ್ನೇ ಮುಖ್ಯವೆಂದು ಭಾವಿಸಬೇಕು.”
*****
೧೪-೫-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಲ್ಕು ಪುಟ್ಟ ಪದ್ಯಗಳು
Next post ಜಾನ್ ಮೆಕೆನ್ರೊ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…