೧
ನಡು ಹಗಲಲ್ಲಿ ಹಚ್ಚಿಟ್ಟ ದೀಪ-
ಬೆಳಕಿನಲ್ಲಿ ಕಳೆದುಹೋದ ಬೆಳಕು.
ಬೆಳಕಿನ ಸಿದ್ಧಾಂತ ಮುರಿದು ಬಿತ್ತು :
ದೊಡ್ಡ ಬೆಳಕು ಹಿಮ್ಮೆಟ್ಟಿದೆ
ಹಣ್ಣಿನಿಂದ ಮರ ಬಿದ್ದ ಹಾಗೆ.
೨
ಗಂಟೆಯ ತುಂಬ ಗಾಳಿ,
ಬಾರಿಸದಿದ್ದರೂ.
ಹಕ್ಕಿಯ ಮೈಯ ತುಂಬ ಹಾರಾಟ,
ನಿಶ್ಚಲವಾಗಿದ್ದರೂ.
ಆಕಾಶದ ತುಂಬ ಮೋಡ,
ಒಂಟಿಯಾಗಿದ್ದರೂ,
ಶಬ್ದದ ತುಂಬ ಧ್ವನಿ,
ಯಾರೂ ಮಾತಾಡದಿದ್ದರೂ.
ಎಲ್ಲರ ಎಲ್ಲದರ ತುಂಬ ಓಟ,
ರಸ್ತೆಗಳಿಲ್ಲದಿದ್ದರೂ.
ಎಲ್ಲ ಧಾವಿಸುತ್ತಿವೆ
ಆಗುವುದಕ್ಕೆ.
೩
ನನ್ನ ನೆರಳು ನನಗೆ ವಿಧೇಯತೆ ಕಲಿಸಿದೆ.
ರೈಲಿನ ಮುರುಕು ಸೀಟು
ಸ್ಮಶಾನದ ಗೋಡೆ
ನಗರದ ಕಳ್ಳ ಗಲ್ಲಿ ಎಲ್ಲೆಡೆ
ನನ್ನ ಬೆಂಬಿಡದೆ ಬಂದಿದೆ.
ಮೈ ಹೇಗೇ ಇದ್ದರೂ
ನರಳು ಹೆಜ್ಜೆ ಹೆಜ್ಜೆ ಅನುಕರಿಸಿದೆ.
ಮೂಲೆ ಮುಡುಕುಗಳಿಗೆ ನಡೆದಿದೆ.
ಪ್ರಶ್ನೆಗಳಿಗೆ ಉತ್ತರಿಸದೆ ಸುಮ್ಮನಿದೆ.
ನನ್ನ ನೆರಳು ಇತರ ನೆರಳುಗಳನ್ನು
ಅಳವಡಿಸಿಕೊಳ್ಳಲು ಕಲಿಸಿದೆ.
ನನ್ನ ಮಟ್ಟ ನನಗೆ ತೋರಿಸಿದೆ.
೪
ಪ್ರತಿ ಪದವೂ ಒಂದೊಂದು ಅನುಮಾನ
ಪ್ರತಿ ಮೌನವೂ ಒಂದೊಂದು ಸಂಶಯ.
ಆದರೂ ಇವುಗಳ ಹೆಣಿಗೆಯಲ್ಲಿ ಉಸಿರಾಡೋಣ.
ನಿದ್ದೆಯೆಂದರೆ ಮುಳುಗುವುದು.
ಎಚ್ಚರವೆಂದರೆ ಮತ್ತೆ ಮುಳುಗುವುದು.
ಆದರೂ ಇವುಗಳ ಹೆಣಿಗೆಯಲ್ಲಿ ಎಚ್ಚರಾಗೋಣ.
ಬದುಕೆಂದರೆ ಮಾಯವಾಗುವುದು
ಸಾವೆಂದರೆ ರೂಪಾಂತರವಾಗುವುದು
ಆದರೂ ಇವುಗಳ ಹೆಣಿಗೆಯಲ್ಲಿ
ಶೂನ್ಯದಲ್ಲೊಂದು ರುಜು ಹಾಕೋಣ.
*****
ಮೂಲ: ರಾಬರ್ಟೋ ಜುಅರೋಝ್