ಭ್ರಮಣ – ೧

ಭ್ರಮಣ – ೧

ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ ಚೆನ್ನಾಗಿರುವುದು ಓಟದಿಂದ ಸ್ಪಷ್ಟವಾಗುತ್ತಿದೆ. ಇಳಿಜಾರಾದ ದಾರಿ ಚಿಕ್ಕ ಬಂಡೆಯೊಂದಕ್ಕೆ ಎಡವಿದ ಅವನು ತೂರಾಡಿ ಗಿಡ ಒಂದನ್ನು ಹಿಡಿದು ನಿಲ್ಲುತ್ತಾನೆ. ಮೌನದಲ್ಲಿ ಅವನ ಏದುಸಿರಿನ ಸದ್ದು ಕಾಡಿನಲ್ಲಿ ಬಹುದೂರದವರೆಗೆ ಹರಡುತ್ತಿರುವಂತೆ ಧ್ವನಿಸುತ್ತಿದೆ. ಮುಖದಲ್ಲಿ ತುಂಬಿದ ಬೆವರನ್ನು ಮೊಣ ಕೈಯಿಂದಲೇ ಒರೆಸುತ್ತಾನೆ. ಮೇಲಕ್ಕೆ ಹರಿಯುತ್ತದೆ ನೋಟ, ಬೆಟ್ಟ ಕಾಣದಂತೆ ತುಂಬಿಕೊಂಡಿದ ಗಿಡಗಂಟೆಗಳು. ಗುರಿ ಸಮೀಪಿಸಿದಂತೆ ಸಾಯಿಯ ಕಣ್ಣುಗಳಲ್ಲಿ ಹೊಳಪು ತುಂಬಿಬರುತ್ತದೆ. ಏದುಸಿರು ಕಡಿಮೆಯಾಗುತ್ತಿರುವಂತೆ ಮತ್ತೆ ಓಟ ಆರಂಭಿಸುತ್ತಾನೆ.

ಮಿಲಟರಿ ತರಹದಂತಹ ಪೋಷಾಕದಲ್ಲಿದ್ದ ಕಲ್ಯಾಣಿಯ ಕಾಲಿಗೆ ದಪ್ಪನೆಯ ಬೂಟುಗಳು. ತಲೆಗೆ ಕ್ಯಾಪಿಲ್ಲ. ದಟ್ಟವಾದ ಕೂದಲನ್ನು ಹಿಂದೆ ಗಂಟುಕಟ್ಟಿದ್ದಾಳೆ. ಅವು ಬಹುದಿನದಿಂದ ಸಂಸ್ಕಾರ ಕಂಡ ಲಕ್ಷಣ ಕಾಣುತ್ತಿಲ್ಲ. ಬಂಡೆಯೊಂದರ ಮೇಲೆ ಕುಳಿತ ಅವಳು ಹಿಂದಿದ್ದ ಬಂಡೆಗೆ ಆನಿಕೊಂಡಿದ್ದಾಳೆ. ಯಾವುದೋ ಯೋಚನೆಯಲ್ಲಿ ತೊಡಗಿದಂತಿದೆ ಅವಳ ಮುಖ ಭಾವ. ಅವಳ ಮುಖದಲ್ಲಿ ವಯಸ್ಸಿಗಿಂತ ಹೆಚ್ಚಿನ ನೋವನ್ನು ಅನುಭವಿಸಿರುವಂತಹ ಲಕ್ಷಣಗಳು ಕಂಡು ಬರುತ್ತಿವೆ.

ಎದುರಿಗೆ ನಾಗೇಶ, ಮಲ್ಲಪ್ಪ, ಶಂಕರ ಮತ್ತು ಹರಿನಾಥ ನಿಂತಿದ್ದಾರೆ. ಮಿಲಿಟರಿಯಂತಹದೇ ಪೋಶಾಕದಲ್ಲಿರುವ ಅವರುಗಳ ತಲೆಗೆ ಕ್ಯಾಪೊಂದು ಅಲಂಕರಿಸಿದೆ. ಅವರಲ್ಲಿ ಎಲ್ಲರಿಗಿಂತ ದೊಡ್ಡವನು ಹರಿನಾಥ. ಅವನ ವಯಸ್ಸು ಎಪ್ಪತ್ತೆರಡು, ಅವರೆಲ್ಲರ ಮುಖದಲ್ಲಿ ವ್ಯಾಕುಲತೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಅವರು ನಿಂತ ಭಂಗಿ ಮತ್ತು ಕಲ್ಯಾಣಿ ಕುಳಿತ ಭಂಗಿಯಿಂದ ಆಕೆ ಅವರ ನಾಯಕಿ ಎಂಬುವುದು ಸ್ಪಷ್ಟ.

“ಸಾಯಿ ಇನ್ನೂ ಬಂದಿಲ್ಲ. ಅವನಿಗೇನಾದರೂ ಆಗಿರಬಹುದೆ?” ವ್ಯಾಕುಲತೆಯನ್ನು ಇನ್ನು ಹತ್ತಿಕ್ಕಿಕೊಳ್ಳಲಾರದವನಂತೆ ಕೇಳಿದ ನಾಗೇಶ. ಅವನು ಅಲ್ಲಿದ್ದವರಲ್ಲಿ ಎಲ್ಲರಿಗಿಂತ ಚಿಕ್ಕವನು. ಅವನಿಗೆ ಹತ್ತೊಂಭತ್ತು ವರ್ಷ. ಕಾಡಿನ ಗಿಡಗಂಟೆಗಳಿಂದ ಎದುರಿಗೆ ನಿಂತವರ ಕಡೆ ಕಲ್ಯಾಣಿ ತನ್ನ ನೋಟವನ್ನು ಹರಿಸಿದಳು. ಯಾರ ಮುಖದಲ್ಲೂ ಯಾವ ತರಹದ ಭಯಾಂದೋಳನವೂ ಕಾಣಲಿಲ್ಲ. ನಾಗೇಶನ ಮುಖದಲ್ಲಿ ವ್ಯಾಕುಲತೆ ಮಿಕ್ಕವರಿಗಿಂತ ಹೆಚ್ಚಾಗಿರುವಂತೆ ಕಂಡಿತು. ಅವನ ಮೇಲಿಂದ ನೋಟ ಸರಿಸದೆ ನಿರ್ಭಾವ ದನಿಯಲ್ಲಿ ಹೇಳಿದಳು,

“ಅವನಿಗೇನೂ ಆಗುವುದಿಲ್ಲ. ಬರುತ್ತಾನೆ.”

ಬರೀ ಆ ಮಾತಿನಿಂದಲೇ ಅವನಲ್ಲಿ ವ್ಯಾಕುಲತೆ ಕಡಿಮೆಯಾದಂತೆ ಕಂಡಿತ್ತು. ಮಿಕ್ಕ ಮೂವರಲ್ಲಿ ಅ ಮಾತು ಸಮಾಧಾನ ತಂದಿರಬೇಕು. ಅದನ್ನೇ ಗಮನಿಸಿ ಮತ್ತೆ ತಾನೆ ಮಾತಾಡಿದಳು ಕಲ್ಯಾಣಿ.

“ಅವರು ಮೂವರಿದ್ದಾರೆಂದಿರಲ್ಲ.”

“ಹೌದಕ್ಕ” ಎಂದ ಮಲ್ಲಪ್ಪ.

“ಅವರುಗಳು ರಾಮಯ್ಯನ ದಳದವರೆಂದು ಹೇಳಿಕೊಂಡರೂ ಅದು ಸುಳ್ಳಾಗಿರಬಹುದು. ಅವರುಗಳು ಯಾವ ದಳದವರೂ ಅಲ್ಲ ದರೋಡೆಕೋರರೇ ಸರಿ, ಪೊಲೀಸಿನವರಿಗಿಂತ ಇಂತಹವರು ನಮ್ಮ ಚಳುವಳಿಗೆ ಬಹಳ ಅಪಾಯಕಾರಿ. ಇವರುಗಳ ಕೆಲಸ ಮೊದಲು ಮುಗಿಸಬೇಕು. ಅದೇ ನಿರ್ಭಾವ ದನಿಯಲ್ಲಿ ಹೇಳಿದಳು ಕಲ್ಯಾಣಿ, ಆಜ್ಞೆಗಾಗಿ ಕಾದ ಶಿಸ್ತು ಸೈನಿಕರಂತೆ ನಿಂತಿದ್ದರು ಅವರೆದುರು ನಿಂತ ಯುವಕರು. ಅವರೆಲ್ಲರ ಮೇಲೆ ಒಮ್ಮೆ ನೋಟ ಹಾಯಿಸಿ ನಾಗೇಶನನ್ನು ನೋಡುತ್ತಾ ಕೇಳಿದಳು.

“ನೀನೊಬ್ಬನೇ ಆ ಕೆಲಸ ಮಾಡಬಲ್ಲೆಯಾ ನಾಗೇಶ?”

“ಖಂಡಿತ ಮಾಡುತ್ತೀನಿ. ನಾನು ಆಯುಧವನ್ನು ಉಪಯೋಗಿಸಿ ಬಹಳ ದಿನಗಳಾದವು” ಕೂಡಲೇ ಉತ್ಸಾಹದ ದನಿಯಲ್ಲಿ ಉತ್ತರಿಸಿದ ನಾಗೇಶ. ಅವನ ಎರಡೂ ಕಾಲುಗಳು ಹತ್ತಿರವಾಗಿ ಎದೆ ಸೆಟೆದು ಮುಂದೆ ಬಂದಿತ್ತು. ಬಂಡೆಯ ಮೇಲಿಂದ ಎದ್ದು ಹೇಳಿದಳು ಕಲ್ಯಾಣಿ.

“ನಾ ಹೇಳಿ ಕೊಟ್ಟದ್ದನ್ನು ಇನ್ನು ನೀನು ಸರಿಯಾಗಿ ಕಲೆತಿಲ್ಲ’

ಅವಳ ಮುಖದ ಮೇಲೆ ನೆಟ್ಟಿದ ಅವನ ನೋಟ ಮಾತುಗಳಿಗೆ ನಿಲುಕದಂತಹ ಭಾವವನ್ನು ಹೊರಗೆಡಹುತ್ತಿತ್ತು. ಮಲ್ಲಪ್ಪನ ಕಡೆ ತಿರುಗಿ ಮಾತಾಡಿದಳು ಕಲ್ಯಾಣಿ.

“ಅವನೇನು ತಪ್ಪು ಮಾಡಿದ.”

“ಭಾವುಕತೆಯಿಂದ ಮಾತಾಡಿದ” ಕೂಡಲೇ ಉತ್ತರಿಸಿದ ಮಲ್ಲಪ್ಪ.

“ಅದು ತಪ್ಪೆ?” ಎಂದ ಕಲ್ಯಾಣಿ ಹಿಂತಿರುಗಿ ತಾ ಕುಳಿತ ಬಂಡೆಯ ಬಳಿ ಇದ್ದ ಎ.ಕೆ. ೪೭ ನನ್ನು ಎತ್ತಿಕೊಂಡಳು.

ತಪ್ಪು, ನಾವು ಎಲ್ಲಾ ಭಾವಾವೇಶದಿಂದ ಮುಕ್ತರಾಗಬೇಕು. ಆಗಲೇ ನಮ್ಮ ಗುರಿ ತಲುಪಲು ಸಾದ್ಯ ಪಾಠವೊಂದನ್ನು ಒಪ್ಪಿಸುವಂತೆ ಕೂಡಲೇ ಹೇಳಿದ ಮಲ್ಲಪ್ಪ. ಹೆಗಲಿಗೆ ಅಯುಧವನ್ನು ಏರಿಸಿಕೊಂಡು ತನ್ನ ಸಂಗಡಿಗರ ಕಡೆ ತಿರುಗಿ ಕೇಳಿದಳು ಕಲ್ಯಾಣಿ.

‘ನಾಗೇಶ ನಮ್ಮ ತಂಡದಲ್ಲಿ ಸೇರಿ ಎಷ್ಟು ದಿನಗಳಾದವು?’

“ತೊಂಬತ್ತನಾಲ್ಕು ದಿನ” ಕೂಡಲೇ ಉತ್ತರಿಸಿದ ಹರಿನಾಥ.

“ಇಷ್ಟು ದಿನಗಳಲ್ಲಿ ಇದೊಂದು ಚಿಕ್ಕ ವಿಷಯ ಕಲಿತಿಲ್ಲ. ಈಗ ಕಲಿ ನಾಗೇಶ್” ಹೇಳಿದಳು ಕಲ್ಯಾಣಿ.

ಅದಕ್ಕೆ ಉತ್ತರಸಲಿಲ್ಲ ನಾಗೇಶ. ಹಿಂತಿರುಗಿ ಬಂದು ಬಂಡೆಯ ಮೇಲೆ ಕುಳಿತುಕೊಂಡು ಆಯುಧವನ್ನು ತೊಡೆಯಲ್ಲಿಟ್ಟುಕೊಂಡು ಹೇಳಿದಳವಳು.

“ಈಗ ಕಲಿ ನಾಗೇಶ. ಮಲ್ಲಪ್ಪ, ನಿನ್ನ ಹೊಡೆಯುತ್ತಾನೆ. ನೀನು ಭಾವಪರವಶನಾಗಬಾರದು. ನೋವು ತೃಣಮಾತ್ರವು ನಿನ್ನ ಮುಖದ ಮೇಲೆ ಕಾಣಿಸಿಕೊಳ್ಳಬಾರದು. ಸಾಧ್ಯವಾದಷ್ಟು ನೋವಿನ ಭಾವವನ್ನೂ ಮುಖದಲ್ಲಿ ಕಾಣದ ಹಾಗೆ ತಡೆ ಹಿಡಿ”

ಆದಕ್ಕೂ ನಾಗೇಶ ಏನೂ ಹೇಳಲಿಲ್ಲ. ಹಸುಗೂಸಿನಂತಹ ಅವನ ಮುಖ ಭಾವರಹಿತ ಕಲ್ಲು ಬಂಡೆಯಂತೆ ಕಾಣುತ್ತಿತ್ತು.

‘ಮಲ್ಲಪ್ಪ! ಅವನಿನ್ನೂ ಮೊದಲ ಪಾಠವನ್ನೇ ಕಲೆತಿಲ್ಲ. ಅದನ್ನು ಕಲಿಸು.’

ತಕ್ಷಣ ನಾಗೇಶನೆದುರು ಬಂದ ಮಲ್ಲಪ್ಪ ಅವನಿಗೆ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಹೊಡೆಯಲಾರಂಭಿಸಿದ. ಕೇವಲ ಒಂದು ನಿಮಿಷದ ಹೊಡೆತವನ್ನು ಎದುರಿಸುವಲ್ಲಿ ನೋವಿನ ಚೀತ್ಕಾರ ಹೊರಳಿತು. ನಾಗೇಶನ ಬಾಯಿಯಿಂದ. ಅದು ಇಡೀ ಕಾಡನ್ನೇ ನಡುಗಿಸುವಂತಿತ್ತು.

“ಸಾಕು ನಿಲ್ಲಿಸು” ನಿರ್ಭಾವ ದನಿಯಲ್ಲಿ ಹೇಳಿದಳು ಕಲ್ಯಾಣಿ. ಅದೊಂದು ಆಜ್ಞೆ ಎಂಬಂತೆ ಹೊಡೆಯುವುದನ್ನು ನಿಲ್ಲಿಸಿ ಅಲ್ಲೇ ನಿಂತ ಮಲ್ಲಪ್ಪ.

“ನಿನ್ನ ಸ್ಥಾನಕ್ಕೆ ನೀ ಹೋಗು.”

ಕಲ್ಯಾಣಿಯ ಬಾಯಿಂದ ಮಾತು ಬರುತ್ತಲೆ ತನ್ನ ಸ್ಥಾನಕ್ಕೆ ಹೋದ ಮಲ್ಲಪ್ಪ. ಸರಿಯಾಗಿ ನಿಂತ ನಾಗೇಶನನ್ನು ನೋಡುತ್ತಾ ಹೇಳಿದಳವಳು.

“ಶಭಾಷ್! ಕೊಡವನ್ನು ನುಂಗುವುದನ್ನು ಕಲಿಯುತಿರುವಿ, ನೋವನ್ನು ಸಹಿಸುವುದು ಇನ್ನೂ ಕಲಿಯಬೇಕು ಅದು ಸುಲಭದ ಕೆಲಸವಲ್ಲ. ಸಾವನ್ನು ಎದುರಿಸುವುದು ಸುಲಭ. ಸಮಯ ಸರಿದ ಹಾಗೇ ಅದನ್ನೂ ಕಲಿಯುತ್ತಿ” ಈ ಮಾತಾಡುವಾಗಲೂ ಅವಳ ದನಿ ನಿರ್ಭಾವವಾಗಿತ್ತು. ಅವರನ್ನು ಮರೆತಂತೆ ಆಪ್ಯಾಯತೆಯಿಂದ ಕಲ್ಯಾಣಿ ತನ್ನ ಆಯುಧದ ಮೇಲೆ ಕೈಯಾಡುತ್ತಿದ್ದಾಗ ಕಾಡಿನ ಮೌನದಲ್ಲಿ ಅಸ್ಪಷ್ಟ ಹೆಜ್ಜೆಯ ಸಪ್ಪಳ ಕೇಳಿಬರತೊಡಗಿತು. ಆಯುಧದಿಂದ ನೋಟವನ್ನು ಹರಿನಾಥನ ಕಡೆ ತಿರುಗಿಸಿದಳು. ಅವನು ಬಾಯಿಂದ ವಿಚಿತ್ರ ಶಬ್ದವನ್ನು ಹೊರಡಿಸಿದ. ಅವನಿಂದ ಹೊರಟ ಆ ಸದ್ದು ಕಾಡೆಲ್ಲಾ ಹರಡತೊಡಗಿತು. ಒಂದು ನಿಮಿಷ ಕಳೆದರೂ ಅಂತಹ ಇನ್ನೊಂದು ಸದ್ದು ಕೇಳಿಸದಾಗ ನಿಂತ ನಾಲ್ವರೂ ಓಡಿ ತಮ್ಮ ಆಯುಧಗಳನ್ನು ತಂದುಕೊಂಡು ಆಜ್ಞೆಗಾಗಿ ಎಂಬಂತೆ ಕಲ್ಯಾಣಿಯ ಕಡೆ ನೋಡಿದರು. ಆಗ ತೇಲಿಬಂತು ಅಂತಹದೇ ಕೂಗು. ಅದರ ಸದ್ದು ಕಾಡಿನಲ್ಲಿ ಅಡಗುತ್ತಿದ್ದಂತೆ ಹೇಳಿದಳು ಕಲ್ಯಾಣಿ-

“ಅವನು ಓಡಿ ಬರುತ್ತಿದ್ದಾನೆ ಬಹಳ ದಣಿದಿರಬಹುದು.”

ಆಕೆಯ ಮಾತನ್ನು ಕೇಳಿಯೂ ಯಾರೂ ಆಯುಧಗಳನ್ನು ಕೆಳಗಿಡಲಿಲ್ಲ. ಒಬ್ಬೊಬ್ಬರು ಒಂದೊಂದು ದಿಕ್ಕಿನಿಂದ ಬೆಟ್ಟದ ಕೆಳಗಿನ ದೃಶ್ಯವನ್ನು ನೋಡತೊಡಗಿದರು. ಹೆಜ್ಜೆಯ ಸದ್ದು ಹತ್ತಿರವಾಗುತ್ತಾ ಬರುತ್ತಿತ್ತು. ಕೆಲನಿಮಿಷಗಳ ಬಳಿಕ ಆ ನಾಲ್ವರೂ ಮತ್ತೆ ಕಲ್ಯಾಣಿ ಎದುರು ಬಂದು ನಿಂತರು, ಹೇಳಿದ ಹರಿನಾಥ

“ಸಾಯಿನೇ ಬರುತ್ತಿದ್ದಾನೆ.”

“ನೀವೆಲ್ಲಾ ಕೂಡಿ ಅವನು ವಿಶೇಷ ಸುದ್ದಿ ತಂದಿರಬಹುದು” ಹೇಳಿದಳು ಕಲ್ಯಾಣಿ.

ನಾಲ್ವರೂ ತಮ್ಮ ತಮ್ಮ ಆಯುಧಗಳನ್ನು ಬದಿಗಿಟ್ಟುಕೊಂಡು ಅವಳೆದುರು ಬಂದು ಕುಳಿತರು. ಗಿಡಗಳ ಮರೆಯಿಂದ ಹೊರ ಬಂದ ಸಾಯಿ ಅವರನ್ನು ಕಾಣುತ್ತಲೇ ಏದುಸಿರುಬಿಡುತ್ತಾ ನಡೆಯುತ್ತಾ ಬಂದ. ಅವನ ಬಟ್ಟೆಗಳೆಲ್ಲಾ ಬೆವರಿನಿಂದ ತೊಯ್ದುಹೋಗಿತ್ತು. ಅವನು ಕಲ್ಯಾಣಿ ಎದುರು ಬಂದಾಗ ಇನ್ನೂ ಏದುಸಿರು ಕಡಿಮೆಯಾಗಿರಲಿಲ್ಲ.

“ಹೋಗು! ಮುಖ ತೊಳೆದು, ಸುಧಾರಿಸಿಕೊಂಡು ಬಾ” ಅವನನ್ನೇ ನೋಡುತ್ತಿದ್ದ ಕಲ್ಯಾಣಿ ಹೇಳಿದಳು.

“ಬಹು ಮುಖ್ಯ…”

ಸಾಯಿ ಮಾತು ಆರಂಭಿಸುತ್ತಿದ್ದಂತೆ ಕಟುವಾದ ನೋಟ ಅವನ ಕಡೆ ಬೀರಿದಳು ಕಲ್ಯಾಣಿ. ಮಾತನ್ನು ಅಲ್ಲಿಗೇ ನಿಲ್ಲಿಸಿದ ಸಾಯಿ, ಮುಖ ತೊಳೆಯಲು, ತನ್ನ ತಾ ಸುಧಾರಿಸಿಕೊಳ್ಳಲು ಹೋದ. ತನ್ನೆದುರು ಕುಳಿತವರನ್ನು ನೋಡುತ್ತಾ ಹೇಳಿದಳು ಕಲ್ಯಾಣಿ.

“ನಮಗೆ ಬೇಕಾದ ಮೂವರೂ ಇಲ್ಲೇ ಎಲ್ಲೊ ಇದ್ದಾರೆ. ಶಂಕರ, ಹರಿ ನೀವಿಬ್ಬರೂ ಅವರ ಕೆಲಸ ಮುಗಿಸಬೇಕು. ಮಲ್ಲಪ್ಪ ನೀನವರಿಗೆ ರಕ್ಷಕನಂತೆ ಕೆಲಸ ಮಾಡಬೇಕು. ಬರೀ ಚಾಕು, ಭರ್ಜಿಗಳಿಂದ ಈ ಕೆಲಸವಾಗಬೇಕು. ಯಾವ ಮಾರಕ ಆಯುಧವನ್ನು ಉಪಯೋಗಿಸಬಾರದು.”

“ಸರಿಯಕ್ಕ” ಎಂದ ಹರಿ. ಅವನು ಮೂವರ ಪರವಾಗಿ ಮಾತಾಡಿದಂತಿತ್ತು. ದಣಿವಿನಿಂದ ಸುಧಾರಿಸಿಕೊಂಡು ಬಂದ ಸಾಯಿ ಅವಳೆದುರು ಕೂಡುತ್ತಾ ಹೇಳಿದ.

“ಅವರು ಹಳ್ಳಿಯಲ್ಲೇ ಇದ್ದಾರಕ್ಕ, ಇವತ್ತು ರಾತ್ರಿಯೂ ಇಲ್ಲೇ ಇರಬಹುದು.”

“ಜಮೀನ್ದಾರರಿಂದ ನಮ್ಮ ಹೆಸರು ಹೇಳಿ ದೋಚಿ ತಂದ ಹಣವೂ ಅವರ ಬಳಿ ಇರಬಹುದೇ?” ಕೇಳಿದಳು ಕಲ್ಯಾಣಿ.

“ಇರಬಹುದು, ಅವರುಗಳು ಮಜಾ ಮಾಡುತ್ತಿರುವ ಲಕ್ಷಣಗಳು ಕಾಣುತ್ತಿವೆ” ಹೇಳಿದ ಸಾಯಿ.

“ಈ ರಾತ್ರಿ ಅವರ ಕೆಲಸ ಮುಗಿಯುತ್ತದೆ. ಸಾಯಿ ನೀನು ಬಹಳ ದಣಿದಿದ್ದಿ, ಆ ಜಮೀನ್‌ದಾರರಿಗೆ ಅವರ ಬಳಿಯಿಂದ ಹಣ ದೋಚಿದವರು ನಾವಲ್ಲ. ಆ ಕೆಲಸ ಮಾಡಿದವರ ಕಥೆ ಮುಗಿದಿದೆ ಎಂದು ಅವರುಗಳ ಶವಸಂಸ್ಕಾರವಾಗುವ ಮುನ್ನ ಆ ಜಮೀನುದಾರರಿಗೆ ಆ ವಿಷಯ ತಿಳಿಸಬೇಕು. ಅದು ಸಾಧ್ಯವೇ?” ಕೇಳಿದಳು ಕಲ್ಯಾಣಿ.

“ಅದು ದೊಡ್ಡ ಕೆಲಸವಲ್ಲ ಅಕ್ಕ. ಬೆಳಗಾಗುವದರೊಳಗೆ ಆ ವಿಷಯ ಅವರಿಗೆ ತಿಳಿಯುತ್ತದೆ. ಅದಕ್ಕೆ ನಾವೇ ಹೋಗಬೇಕಾಗಿಲ್ಲ” ಆಕೆಯ ಮಾತು ಮುಗಿದ ಕೂಡಲೇ ಹೇಳಿದ ಸಾಯಿ.

“ಅದಕ್ಕೆ ನಂಬಿಕಸ್ಥರು ಬೇಕು” ಮುಂದಿನ ಯೋಜನೆಯಲ್ಲಿ ತೊಡಗಿರುವಂತೆ ಮಾತಾಡಿದಳು ಕಲ್ಯಾಣಿ. ಅದಕ್ಕೆ ಹರಿನಾಥ ವಿವರಣೆ ನೀಡಿದ.

“ನಿಮ್ಮನ್ನು ಎಷ್ಟು ಜನ ಆರಾಧಿಸುತ್ತಾರೆಂಬ ಅರಿವು ನಿಮಗಿಲ್ಲ ಅಕ್ಕ! ನಿಮಗಾಗಿ ತಮ್ಮ ಪ್ರಾಣ ಕೊಡಲೂ ಎಷ್ಟೋ ಜನ ಸಿದ್ಧರಿದ್ದಾರೆ. ನಿಮಗದರ ಅರಿವು ಸರಿಯಾಗಿ ಇರಲಿಕ್ಕಿಲ್ಲ. ಬೆಳಗಾಗುವದರೊಳಗೆ ಜಮೀನ್‌ದಾರರಿಗೆ ಸುದ್ದಿ ತಲುಪುತ್ತದೆ.”

ಅವನ ದನಿಯಲ್ಲಿ ಆತ್ಮವಿಶ್ವಾಸವಿತ್ತು. ತನ್ನದೇ ನಿರ್ವಿಕಾರ ದನಿಯಲ್ಲಿ ಹೇಳಿದಳು ಕಲ್ಯಾಣಿ.

“ಈ ಪೋಲೀಸಿನವರು ಯಾವಾಗ ಹೇಗೆ ಬರುತ್ತಾರೋ ಹೇಳುವ ಹಾಗಿಲ್ಲ. ನಮ್ಮ ಜಾಗ್ರತೆಯಲ್ಲಿ ನಾವಿರಬೇಕು.”

“ಸಾಯಿ ಹಳ್ಳಿಯಲ್ಲಿ ಪೋಲೀಸಿನವರ ಚಟುವಟಿಕೆ ಏನಾದರೂ ಹೆಚ್ಚು ಕಂಡುಬಂತೇ?” ಕೇಳಿದ ಶಂಕರ.

“ಇಲ್ಲ, ನಾವು ಇಲ್ಲಿರುವುದು ಅವರುಗಳು ಇನ್ನೂ ಊಹಿಸಿದಂತಿಲ್ಲ. ಇದ್ದರೂ ಅವರು ಕಲ್ಲಕ್ಕನ ಹೆಸರು ಕೇಳೇ ಭಯದಿಂದ ಸಾಯುತ್ತಾರೆ” ಹೇಳಿದ ಸಾಯಿ.

ಕಲ್ಯಾಣಿ ತನ್ನ ಸಂಗಡಿಗರೊಡನೆ ಮುಂದಿನ ಯೋಜನೆ ರೂಪಿಸುವದರಲ್ಲಿ ತೊಡಗಿದಳು.
* * *

ಬಂಡೇರ ಹಳ್ಳಿ ಕುಗ್ರಾಮ, ಬಹು ದೊಡ್ಡದಲ್ಲದ ಆ ಹಳ್ಳಿಯಲ್ಲಿ ಬಡತನ ತಾನೇತಾನಾಗಿ ತಾಂಡವವಾಡುತ್ತಿತ್ತು. ಅಲ್ಲಿನ ಒಬ್ಬ ಜಮೀನುದಾರ ಅ ಹಳ್ಳಿಗರ ಅಲ್ಪ ಸ್ವಲ್ಪ ಸುಖವನ್ನೂ ಅವರಿಂದ ಕಸಿದುಕೊಳ್ಳುತ್ತಾ ತಾನು ಇನ್ನೂ ದೊಡ್ಡ ಜಮೀನ್ದಾರನಾಗಲು ಯತ್ನಿಸುತ್ತಿದ್ದ. ಆರು ತಿಂಗಳ ಹಿಂದೆ ಕಲ್ಯಾಣಿಯ ತಂಡದವರು ಆ ಬಡ ಹಳ್ಳಿಗರನ್ನು ಅವನ ಹಿಂಸೆಯಿಂದ ಪಾರು ಮಾಡಿದ್ದರು. ಕ್ರಾಂತಿಕಾರಿಯರ ಮಾತು ಕೇಳದಿದ್ದರೆ ತನ್ನ ನಾಮರೂಪವಿಲ್ಲದಂತೆ ಹೋಗಬಹುದೆಂದು ಅರಿತುಕೊಂಡ ಜಮೀನ್ದಾರನು ಬಡರೈತರಿಂದ ಕಸಿದುಕೊಂಡ ಜಮೀನನ್ನು ಯಾವ ಶರತ್ತೂ ಇಲ್ಲದೆ ಅವರಿಗೆ ಹಿಂತಿರುಗಿಸಿದ್ದ. ಅದಕ್ಕಾಗೇ ಅಲ್ಲಿನ ಬಡವರ ಜೀವನ ಮೊದಲಿಗಿಂತ ಸುಖಕರವಾಗಿತ್ತು. ತಮ್ಮ ಬದಲಾದ ಜೀವನಗತಿಗೆಲ್ಲಾ ಕಾರಣ ಕಲ್ಲಕ್ಕನೇ ಎಂದು ಆ ಹಳ್ಳಿಯವರಿಗೆಲ್ಲಾ ಗೊತ್ತಿತ್ತು. ಅಲ್ಲಿಯ ಬಡವರು ಅವಳನ್ನು ಕಲ್ಲಕ್ಕ, ಕಾಳಿ, ನ್ಯಾಯವನ್ನು ಒದಗಿಸಲು ಅವತಾರ ತಾಳಿದ ಜಗದಾಂಭೆಯೇ ಎಂದು ಗೌರವದಿಂದ, ಆತ್ಮೀಯತೆಯಿಂದ ಕರೆಯುತ್ತಿದ್ದರು.

ಬಂಡೇರಹಳ್ಳಿಯ ಬಡವರ ವಾಸಸ್ಥಾನದ ನಡುವೆ ಆ ರಾತ್ರಿ ಕಲ್ಲಕ್ಕ ಬರುವಳೆಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿತ್ತು. ಅಲ್ಲೇ ಇದ್ದ ಮೈದಾನ ಒಂದರಲ್ಲಿ ಬಡರೈತರು ಅವರ ಕುಟುಂಬದವರು ಕತ್ತಲಾಗುತ್ತಲೇ ಅಲ್ಲಿ ನೆರೆಯತೊಡಗಿದ್ದರು. ಸರಿಯಾಗಿ ಎಂಟು ಗಂಟೆಗೆ ಕಲ್ಯಾಣಿ, ನಾಗೇಶ ಸಾಯಿಯರೊಡನೆ ಅಲ್ಲಿ ಬಂದಾಗ ಅವಳ ಹೆಸರಿನ ಜಯಘೋಷಗಳು ಆರಂಭವಾದವು. ಎಲ್ಲರಿಗೂ ಸುಮ್ಮನಿರುವಂತೆ ಕೈಮಾಡಿದಾಗ ಮೌನವಹಿಸಿತು ಬಡವರ ಸಮೂಹ. ಪುಟ್ಟ ಭಾಷಣ ಮಾಡಿದಳು ಕಲ್ಯಾಣಿ, ಅವರ ಹಕ್ಕುಗಳ ಕುರಿತಾಗಿ, ಅವರಿಗೆ ಆಗುತ್ತಿರುವ ಅನ್ಯಾಯದ ಕುರಿತಾಗಿ, ಮನುಷ್ಯರಿಗೆ ದೊರೆಯಬೇಕಾದಂತಹ ಗೌರವ ಅವರಿಗೆ ಹೇಗೆ, ಯಾಕೆ ದೊರೆಯುತ್ತಿಲ್ಲವೆಂಬ ಕುರಿತಾಗಿ, ಅಲ್ಲಿ ನೆರೆದ ಜನಸಮೂಹ ಅವಳ ಮಾತುಗಳನ್ನು ಬಹಳ ಗಮನವಿಟ್ಟು ಕೇಳಿತು. ತನ್ನ ಪುಟ್ಟ ಭಾಷಣದಲ್ಲಿ ಪ್ರತಿ ಮಾತೂ ಅವರ ಮನಸ್ಸಿಗೆ ತಟ್ಟುವ ಹಾಗೆ ಹೇಳಿದಳು.

ಭಾಷಣ ಮುಗಿದನಂತರ ಗುಂಪು ಒಡೆದು ಜನರು ವೃತ್ತಾಕಾರದಲ್ಲಿ ಕುಳಿತಿದ್ದರು. ಎಲ್ಲಿಂದಲೋ ಡೋಲು ಡಪ್ಪು ಬಂದವು. ಜನರ ನಡುವಿನಿಂದ ಎದ್ದ ಇಬ್ಬರು ಗಂಡಸರು, ಇಬ್ಬರು ಹೆಂಗಸರು ಕ್ರಾಂತಿಕಾರಿ ಗೀತೆಗಳನ್ನು ಜಾನಪದಶೈಲಿಯಲ್ಲಿ ಹಾಡತೊಡಗಿದರು. ಧನವಂತರ ದಬ್ಬಾಳಿಕೆ ಮುಗಿದು ತಮ್ಮ ಕಾಲ ಹೇಗೆ ಬರುವದೆಂಬ ಸಾರಾಂಶದ ಹಾಡು. ಒಂದೊಂದು ಸಲ ಹಾಡಿನ ಸಾಲುಗಳಿಗೆ ಇಡೀ ಜನಸಮೂಹವೇ ತಮ್ಮ ದನಿಯನ್ನು ಸೇರಿಸುತ್ತಿತ್ತು.

ಬಸ್‌ಸ್ಟಾಂಡಿನಿಂದ ಸ್ವಲ್ಪ ದೂರದಲ್ಲೇ ಸಾರಾಯಿ ಖಾನೆ, ಹೊಲಸು ಪಂಚೆ ಸುತ್ತಿದ್ದ ಮಲ್ಲಪ್ಪ ತಲೆ ತುಂಬಾ ಕಂಬಳಿ ಹೊದ್ದು ಬಂದು ಮೂಲಗೆ ತನ್ನದೇ ಗತಿಯಲ್ಲಿ ಸಾರಾಯಿ ಕುಡಿಯುತ್ತಿದ್ದ. ಅವನ ನೋಟ ಅಲ್ಲಿ ಕುಳಿತವರ ಮೇಲೆಲ್ಲಾ ಹರಿದಾಡಿ ಮೂವರ ಮೇಲೆ ಕೇಂದ್ರಿಕೃತವಾಗಿತ್ತು. ಬಹು ಖುಶಿಯಲ್ಲಿದ್ದಂತೆ ಕಾಣುತ್ತಿದ್ದ ಆ ಮೂವರೂ ಅವರಿಗೆ ಬೇಕಾದವರು. ಕಲಕ್ಕನ ಹೆಸರು ಹೇಳಿ ಪಕ್ಕದ ಹಳ್ಳಿಯ ಜಮೀನ್ದಾರನಿಂದ ಹಣ ಸುಲಿದವರು. ಆ ಜಮೀನ್‌ದಾರ ಮೊದಲೇ ಕಲಕ್ಕನೊಡನೆ ಸಂಧಾನಕ್ಕೆ ಬಂದವ. ಆಕೆ ಹೇಳಿದ ಎಲ್ಲಾ ಮಾತುಗಳನ್ನು ಕೇಳಲು ಒಪ್ಪಿಕೊಂಡವ. ಕಲಕ್ಕೆ ಮತ್ತೆ ತನ್ನವರನ್ನು ಕಳಿಸಿದ್ದಾಳೆಂದರೆ ಆಶ್ಚರ್ಯವಾಗಿತ್ತು. ಅವರ ಬೆದರಿಕೆಯ ಮಾತುಗಳಿಗೆ ಆಗ ತನ್ನಲ್ಲಿದ್ದ ಹಣ ಮತ್ತು ವಡವೆಗಳನ್ನು ಕೊಟ್ಟುಬಿಟ್ಟಿದ್ದ. ಮರುದಿನ ಅದು ತಿಳಿದು ಹುಡುಕಿಸುವ ಕೆಲಸ ಆರಂಭಿಸಿದ್ದಳವಳು. ಎರಡು ದಿನಗಳ ಬಳಿಕ ಆ ದಿನ ಬಂಡೇರಹಳ್ಳಿಯಲ್ಲಿ ಕಾಣಿಸಿಕೊಂಡಿದ್ದರವರು. ಅದೇ ಕೆಲಸದಲ್ಲಿ ತೊಡಗಿದ್ದ ಸಾಯಿಗೆ ಹಳ್ಳಿಗರ ಸಹಾಯದಿಂದ ಅವರನ್ನು ಗುರುತಿಸುವುದು ಕಷ್ಟವಾಗಿರಲಿಲ್ಲ. ಮಲ್ಲಪ್ಪನಿಗೆ ಅವರನ್ನು ತೋರಿಸಿ ಕಲ್ಯಾಣಿಯನ್ನು ಸೇರಿಕೊಂಡಿದ್ದ ಸಾಯಿ.

ಎಂಟೂವರೆ ಸುಮಾರಿಗೆ ಆ ಮೂವರೂ ಸರಾಯಿ ಖಾನೆಯಿಂದ ಹೊರಬಿದ್ದರು. ದೂರ ಕತ್ತಲಲ್ಲಿ ನಿಂತಿದ್ದರು ಹರಿ ಮತ್ತು ಶಂಕರ. ಆ ಮೂವರ ಹಿಂದೆಯೆ ಕಂಬಳಿ ಹೊದ್ದು ಹೊರಬಂದ ಮಲ್ಲಪ್ಪನನ್ನು ಗಮನಿಸಿದರವರು. ಮಲ್ಲಪ್ಪ ಹಿಂದಾಗುತ್ತಾ ಬಂದ, ಶಂಕರ ಮತ್ತು ಹರಿ ಆ ಮೂವರನ್ನೂ ಗಮನಿಸುವದರಲ್ಲಿ ನಿರತರಾದರು.

ಸರಾಯಿಖಾನೆಯಿಂದ ಸ್ವಲ್ಪ ದೂರದಲ್ಲಿ ದೇಹ ಮಾರಿಕೊಂಡು ಬದುಕುವವರ ಗುಡಿಸಲುಗಳು. ಅಲ್ಲಿ ಬಂದ ಆ ಮೂವರೂ ಕೆಲ ಹೆಂಗಸರು ಹುಡುಗಿಯರೊಡನೆ ಮಾತಾಡಿದರು. ಅವರನ್ನು ತಮ್ಮ ಬಳಿ ಸೆಳೆಯಲು ಪೈಪೋಟಿ ನಡೆದಂತೆ ಕಂಡಿತು ಹುಡುಗಿಯರಲ್ಲಿ. ಅದಕ್ಕೆ ಕಾರಣ ಅವರು ಕೈಯಲ್ಲಿ ಆಡಿಸುತ್ತಿದ್ದ ಹಣ, ಎತ್ತರದ ದನಿಯಲ್ಲಿ ಮಾತುಗಳು, ನಗೆಯ ಬಳಿಕ ಮೂವರೂ ಒಬ್ಬೊಬ್ಬ ಹುಡುಗಿಯೊಡನೆ ಒಂದೊಂದು ಗುಡಿಸಿಲನ್ನು ಹೊಕ್ಕರು.

ಕಂಬಳಿ ಹೊದ್ದು ರಸ್ತೆಯ ಆಚೆ ಇದ್ದ ಶಂಕರ ಮತ್ತು ಹರಿ ನಿಧಾನವಾಗಿ ಆ ಗುಡಿಸಲುಗಳ ಕಡೆ ಹೆಜ್ಜೆ ಹಾಕತೊಡಗಿದರು. ನಿಧಾನವಾಗಿ ನಡೆಯುತ್ತಾ ಬಂದ ಮಲ್ಲಪ್ಪ ಅವರ ಸ್ಥಾನವನ್ನು ಆಕ್ರಮಿಸಿದ.

ಹರಿ ಮತ್ತು ಶಂಕರ ಗುಡಿಸಲುಗಳ ಸಮೀಪ ಬರುತ್ತಿದ್ದಂತೆ ಅವರನ್ನು ಮೂವರು ಹುಡುಗಿಯರು ಸುತ್ತುವರಿದರು. ಅವರ ಪರವಾಗಿ ಚೌಕಾಸಿ ಮಾಡಲು ಒಬ್ಬ ಗಂಡು ಬಂದ. ಆ ಗಂಡನ್ನು ಸ್ವಲ್ಪ ದೂರ ಕರೆದೊಯ್ದು ಹೇಳಿದ ಹರಿ.

“ನಾವು ಕಲ್ಲಕ್ಕನ ತಂಡದವರು. ನೀವೆಲ್ಲಾ ಬಾಯಿ ಮುಚ್ಚಿಕೊಂಡು ನಿಂತಿರಿ. ಇಲ್ಲದಿದ್ದರೆ ನಿಮ್ಮನ್ನೂ ಮುಗಿಸಿಬಿಡಬೇಕಾಗುತ್ತದೆ.”

ಅದನ್ನು ಕೇಳಿದ ಅವನ ನರನರದಲ್ಲೂ ಭಯ ತುಂಬಿ ಬಂತು. ಕೈಮಾಡಿ ಹುಡುಗಿಯರನ್ನು ತನ್ನ ಕಡೆ ಕರೆದ. ಅವರು ದೂರ ಸರಿಯುತ್ತಿದಂತೆ ಮುಂದೆ ಹೋದ ಶಂಕರ ಬಂದು ಗುಡಿಸಲಿನ ಬಾಗಿಲನ್ನು ನೂಕಿದ. ಕಂದೀಲಿನ ಬೆಳಕಿನಲ್ಲಿ ನಗ್ನ ಜೋಡಿ ಕಾಮಕೇಳಿಯಲ್ಲಿ ತೊಡಗಿತ್ತು. ಹೆಣ್ಣಿನ ನೋಟ ಅವನ ಮೇಲೆ ಬಿದ್ದಾಗ ಹೇಳಿದ ಶಂಕರ

“ನಾನು ಕಲ್ಲಕ್ಕನ ತಂಡದವ. ಬಾಯಿ ಮಾಡಿದರೆ ಕೊಂದುಬಿಡುತ್ತೇನೆ. ನೀ ಹೊರಹೋಗು”

ಅವನ ಮಾತು ಮುಗಿಯುತ್ತಿದ್ದಂತೆ ಬತ್ತಲೇ ಆ ಹೆಣ್ಣು ಗುಡಿಸಿಲಿನಿಂದ ಹೊರಗೋಡಿದಳು. ಬತ್ತಲಾದ ಗಂಡು ಅವರಸದಲ್ಲಿ ತನ್ನ ಆಯುಧ ಹುಡುಕುತ್ತಿದ್ದಾಗ ಅವನ ಮೇಲೆ ಬಿದ್ದ ಶಂಕರ ಅವನ ಕೈಯಲ್ಲಿ ಭರ್ಜಿ ಸಿದ್ಧವಾಗಿತ್ತು. ಬತ್ತಲಾದ ವ್ಯಕ್ತಿ ಇನ್ನೂ ತನ್ನ ಆಯುಧ ಹುಡುಕುತ್ತಿರುವಾಗಲೇ ಪೂರ್ತಿ ಬಲದಿಂದ ಅವನ ಎದೆಗೆ ಇರಿದು ಪೂರ್ತಿ ಒಳಹೋದ ಆಯುಧವನ್ನು ಎರಡು ಸಲ ತಿರುವಿ ಹೊರಗೆಳೆದ. ಕೆಲಕ್ಷಣಗಳು ಅತ್ತಿತ್ತ ಹೊಡೆದುಕೊಂಡ ಅವನ ದೇಹ ನಿಸ್ತೇಜವಾಯಿತು. ಅವನ ದೇಹಕ್ಕೆ ಚೂರಿಯನ್ನು ಒರಿಸಿ ಏನೂ ಆಗದವನಂತೆ ಗುಡಿಸಲಿನಿಂದ ಹೊರಬಿದ್ದ ಶಂಕರ.

ಹರಿ ಮತ್ತೊಂದು ಗಡಿಸಲನ್ನು ಪ್ರವೇಶಿಸುತ್ತಿದ್ದುದನ್ನು ನೋಡಿ ಅಲ್ಲಿದ್ದ ಹೆಂಗಸರು, ಹುಡುಗಿಯರಿಗೆ ಅಭಯ ನೀಡುವಂತೆ ಹೇಳಿದ.

“ನಿಮಗೇನೂ ಆಗುವುದಿಲ್ಲ. ನೀವು ಹಾಗೇ ಸುಮ್ಮನೆ ನಿಂತಿರಿ. ನಾವೀಗ ಹೊರಟು ಹೋಗುತ್ತೇವೆ”

ಭಯದಿಂದ ನಡುಗುತ್ತಿದ್ದ ಅವರು ಅದಕ್ಕೇನೂ ಹೇಳಲಿಲ್ಲ.

ಹರಿ ಮತ್ತೊಂದು ಗುಡಿಸಲನ್ನು ಹೊಕ್ಕು ತಾನ್ಯಾರೆಂದು ಹೇಳಿದಾಕ್ಷಣ ಭಯದಿಂದ ಆ ಗುಡಿಸಲಿನಲ್ಲಿದ್ದ ಹುಡುಗಿಯೂ ಬತ್ತಲೆಯೇ ಹೊರಗೋಡಿದಳು. ಕುಡಿದ ಗಂಡು ಏನಾಗುತ್ತಿದೆ ಎಂದು ಯೋಚಿಸುವ ಮುನ್ನ ಅವನ ಮೇಲೆ ಬಿದ್ದ ಹರಿ ಹೊಟ್ಟೆಗೆ ಚೂರಿ ಅದುಮಿ ಹಿಡಿದು ಕೇಳಿದ.

“ಜಮೀನ್‌ದಾರನ ಬಳಿಯಿಂದ ಲೂಟಿ ಮಾಡಿದ ಹಣ, ವಡವೆ ಎಲ್ಲಿದೆ ಹೇಳು ನಿನ್ನ ಈ ಒಂದುಸಲ ಕ್ಷಮಿಸಿಬಿಡುತ್ತೇನೆ”

ಕಲಕ್ಕನ ಹೆಸರು ಕೇಳೇ ಅವನ ನಿಶೆಯೆಲ್ಲಾ ಇಳಿದು ಹೋಗಿತ್ತು. ಭಯಾತಿರೇಕದ ದನಿಯಲ್ಲಿ ಹೇಳಿದ.

“ಎಲ್ಲಾ… ಎಲ್ಲಾ ಹೇಳುತ್ತೇನೆ. ನನ್ನ ಕೊಲ್ಲಬೇಡಿ”

“ಒಂದು ಸಲ ಹೇಳಿದೆನಲ್ಲಾ! ಎರಡೆರಡು ಸಲ ಹೇಳುವವರಲ್ಲ ನಾವು ಎಲ್ಲಿದೆ ಹಣ, ವಡವೆ” ಕಟುವಾಗಿ ಬಂತು ಹರಿಯ ಮಾತು. ತಕ್ಷಣ ಅವನು ಜಮೀನ್‌ದಾರನಿಂದ ಪಡೆದ ಹಣವೆಷ್ಟು ಅದರಲ್ಲಿ ಮಿಕ್ಕಿದೆ, ವಡವೆಗಳನ್ನು ಎಲ್ಲಿಟ್ಟಿದ್ದೇವೆಂಬ ವಿವರ ಕೊಟ್ಟ. ಅವನ ಮಾತು ಮುಗಿಯುತ್ತಿದ್ದಂತೆ ಚೂರಿ ಹೊಟ್ಟೆಯಲ್ಲಿ ಇಳಿದು ಮೂರು ಸಲ ತಿರುಗಿ ಅವನ ಕರುಳನ್ನು ಕಿತ್ತು ಹೊರಬಂತು. ಅವನ ದೇಹಕ್ಕೆ ಚೂರಿಗಂಟಿದ ರಕ್ತವನ್ನು ವರೆಸಿ ಹೊರಬಂದ ಹರಿ.

ಶಂಕರನೂ ತನ್ನ ಅಂದಿನ ಎರಡನೆಯ ಬಲಿಯನ್ನು ತೆಗೆದುಕೊಂಡು ಗುಡಿಸಲಿನಿಂದ ಹೊರಬಿದ್ದ. ಅವನೂ ಆ ವ್ಯಕ್ತಿಯಿಂದ ಹಣ ವಡವೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ. ಅದನ್ನೇ ಇಬ್ಬರೂ ಮಾತಾಡಿಕೊಂಡು ಆ ಮೂರೂ ಗುಡಿಸಲುಗಳಲ್ಲಿ ಮತ್ತೆ ಪ್ರವೇಶಿಸಿ ಅವರ ಬಳಿ ಇದ್ದ ನೋಟಿನ ಕಂತೆಗಳನ್ನೆಲ್ಲಾ ಶೇಖರಿಸಿ ಹೊರಬಂದರು.

ಭಯಾತಿರೇಕದಿಂದ ನಡುಗುತ್ತಾ ಕುಳಿತಿದ್ದ ಹೆಂಗಸರು, ಹುಡುಗಿಯರನ್ನು ಉದ್ದೇಶಿಸಿ ಹೇಳಿದ ಹರಿ.

“ಪೊಲೀಸಿನವರು ನಿಮ್ಮನ್ನು ಗೋಳುಹೊಯ್ದುಕೊಂಡರೆ ಅವರದೂ ಇದೇ ಗತಿಯಾಗುತ್ತದೆಯೆಂದು ಹೇಳಿ. ನೀವು ಭಯಪಡಬೇಕಾಗಿಲ್ಲ. ನಾವು ನಿಮ್ಮವರೇ ಅದನ್ನು ಮರೆಯಬೇಡಿ.”

ಅದಕ್ಕೆ ಅವರಿಂದ ಏನೂ ಉತ್ತರ ಬರಲಿಲ್ಲ. ಯಾವ ಅವಸರವೂ ಇಲ್ಲದಂತೆ ಮುಂದೆ ನಡೆದರು ಶಂಕರ ಮತ್ತು ಹರಿ, ದೂರದಿಂದ ಅವರನ್ನು ಗಮನಿಸುತ್ತಾ ಬರುತ್ತಿದ್ದ ಮಲ್ಲಪ್ಪ.

ಆ ಮೂವರೂ ಬಡರೈತರ ವಾಸಸ್ಥಾನದ ಬಳಿ ಬಂದಾಗ ಅಲ್ಲಿನ್ನೂ ಕ್ರಾಂತಿಕಾರಿ ಹಾಡುಗಳು ಸಾಗೇ ಇದ್ದವು. ಬಡವರು ತಮ್ಮ ಬಡತನವೆಲ್ಲಾ ದೂರವಾದಂತೆ ಅದರಲ್ಲಿ ತನ್ಮಯರಾಗಿದ್ದರು. ಅವರ ನಡುವೆ ಒಬ್ಬರಂತೆ ಕುಳಿತ ಕಲ್ಯಾಣಿ ಅವರನ್ನು ನೋಡಿ ಎದ್ದು ಹತ್ತಿರ ಬಂದಳು. ಸಾಯಿ ಮತ್ತು ನಾಗೇಶ ನೆರಳಿನಂತೆ ಅವಳ ಅಕ್ಕಪಕ್ಕದಲ್ಲೇ ಇದ್ದರು.

“ಕೆಲಸ ಮುಗಿಯಿತು” ಹೇಳಿದ ಹರಿ, ಕ್ರಾಂತಿಕಾರಿ ಹಾಡಿನಲ್ಲಿ ತನ್ಮಯರಾದ ಯಾರೂ ಆ ಮಾತನ್ನು ಕೇಳಿಸಿಕೊಳ್ಳುವ ಹಾಗಿರಲಿಲ್ಲ. ಶಂಕರ ತನ್ನಲಿಂದ ನೋಟಿನ ಕಂತೆ ತೆಗೆದು ಹೇಳಿದ.

“ಅವರ ಬಳಿಯಿಂದ ಐವತ್ತು ಸಾವಿರದವರೆಗೆ ಹಣ ಸಿಕ್ಕಿದೆ. ವಡವೆಗಳನ್ನು ಎಲ್ಲಿಟ್ಟಿದ್ದಾರೆಂಬುವುದು ಹೇಳಿದ್ದಾರವರು”

“ಸಾಯಿ ನಮ್ಮ ಸಂದೇಶದೊಡನೆ ಆ ಜಮೀನ್ದಾರನಿಗೆ ಈ ಹಣವನ್ನು ತಲುಪಿಸುವ ಏರ್ಪಾಟು ಮಾಡು, ವಡವೆಗಳನ್ನು ಇಟ್ಟುಕೊಂಡವರು ತಕ್ಷಣ ಅದನ್ನು ಅವರಿಗೆ ಹಿಂತಿರುಗಿಸಬೇಕಾಗಿ ಸಂದೇಶ ಕಳುಹಿಸು”

“ಸರಿ ಅಕ್ಕ ಇದೇ ರಾತ್ರಿ ಆ ಕೆಲಸವೆಲ್ಲಾ ಆಗುತ್ತದೆ”

“ಸಮಯ ವ್ಯರ್ಥ ಮಾಡಬೇಡ ನೀ ಹೋಗು” ಎಂದ ಕಲ್ಯಾಣಿ ಹಾಡುವವರ ಹತ್ತಿರ ಬಂದು ಕೈಮೇಲೆ ಮಾಡಿದಳು. ಒಮ್ಮೆಲೆ ವೀರಾವೇಶದಲ್ಲಿ ಸಾಗುತ್ತಿದ್ದ ಹಾಡು ನಿಂತಿತು. ಹೇಳಿದಳು ಕಲ್ಯಾಣಿ

“ನೀವು ಹಾಡನ್ನು ಮುಂದುವರೆಸಿ, ಅಕ್ಕಪಕ್ಕದ ಹಳ್ಳಿಯವರಿಗೂ ಈ ಹಾಡುಗಳನ್ನು ಕಲೆಸಿ, ನಾ ಮತ್ತೆ ಬರುತ್ತೇನೆ… ಹಾಡು ನಡುವೆಯೇ ನಿಲ್ಲಬಾರದು”

ಅವಳ ಮಾತು ಮುಗಿಯುತ್ತಲೇ ಬಿಟ್ಟ ಕಡೆಯಿಂದ ಹಾಡನ್ನು ಎತ್ತಿಕೊಂಡು ಹಾಡತೊಡಗಿದರವರು. ಕಲ್ಯಾಣಿ ತನ್ನ ಸಂಗಡಿಗರೊಡನೆ ಕಾಡಿನ ಕತ್ತಲಲ್ಲಿ ಮರೆಯಾದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಗವಂತನ ಆಗಮನ
Next post ದೊಡ್ಡ ಮರ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…