ಲೋಕೋಪಕಾರ!

ಲೋಕೋಪಕಾರ!

ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ ಬಂದು ಈಗ ಅವರ ಮನವೆಂಬ ಮನದಲ್ಲಿ ವಾಸಮಾಡಿತ್ತು!!! ಚಿಂತೆಯಿಂದ ಅವರಿಗೆ ಎರಡು-ಮೂರು ದಿನ ರಾತ್ರಿ ನಿದ್ರೆಯೆ ಆಗಿರಲಿಲ್ಲ.

ಸಾಥಿ ಶಿವರಾವ, ಅವರ ತಂದೆ ಅಷ್ಟು ಹಣಗಳಿಸದೆ ಇದ್ದರೆ, ಅವರಿಗೆ ಈ ಚಿಂತೆ ಬರುತ್ತಿರಲೆ ಇಲ್ಲ. ಜಿಪುಣರಲ್ಲಿ ಜಿಪುಣರಾಗಿ, ಪೈಗೆ ಪೈ ಲೆಕ್ಕ ಹಾಕಿ ಲೆಕ್ಕವಿಲ್ಲದಷ್ಟು ಧನ ಸಂಪಾದಿಸಿದ್ದರು. ಶಿವರಾವ ಅವರು ‘ಸಾಥಿ’ ಯಾದುದರಿಂದ ಅವರಿಗೆ ಇವರಿಗೆ ಇಷ್ಟು ಶ್ರೀಮಂತರಾಗುವುದು ಬೇಕಾಗಿರಲಿಲ್ಲ. ಅಂತೆಯೆ ಅವರ ಚಿಂತೆ ಬಹು ತೀವ್ರತರವಾದುದಾಗಿತ್ತು.

ಕತ್ತಲಂಥ ಕತ್ತಲವೆ ಹಾರಿಹೋಗಿ ಸೂರ್ಯೋದಯವಾಯಿತು. ಶಿವರಾವ ಅವರಿಗೂ ಆ ಬೆಳಗಿನಲ್ಲಿ ಒಂದು ಅಮೋಘ ವಿಚಾರ ಹೊಳೆಯಿತು. ಉತ್ಸಾಹದಿಂದ ಲಟಕಿ ಹೊಡೆಯುತ್ತ ಹಾಸಿಗೆಯಿಂದ ಎದ್ದರು. ಬೆಳಗಿನ ಎಲ್ಲ ನಿತ್ಯ ಕರ್ಮಗಳನ್ನು ತೀರಿಸುವಾಗಲೆಲ್ಲ ಅವರ ತಲೆಯಲ್ಲಿ ಅದೇ ವಿಚಾರವೇ ಸುಳಿಯುತ್ತಿತ್ತು. ನರ್ತಕಿ ಒಂದೇ ಕುಣಿತದಲ್ಲಿ ಅನೇಕ ಭಾವ- ಭಂಗಿಗಳನ್ನು ತೋರಿಸುವಂತೆ ಆ ವಿಚಾರ ಶಿವರಾವ ಅವರ ಮನದಲ್ಲಿತ್ತು.

ವೇಷ-ಭೂಷಣ ಮುಗಿಸಿ, ಸಜ್ಜಾಗಿ ಕುರ್ಚಿಯ ಮೇಲೆ ಸಿಂಹಾಸನಾ ರೂಢವಾಗಿ ಶಿವರಾವ ಅವರು “ಬುಡ್ಡಾ” ಎಂದು ಕರೆದರು.

“ಬುಡ್ಡಾ” ಅವರ ಮನೆಯ ಆಳುಮನುಷ್ಯ. ಬಹುದಿನಗಳಿಂದ ಅವನು ಶಿವರಾಯರ ಮನೆಯಲ್ಲಿದ್ದವನು. ಶಿವರಾಯರ ತಂದೆ, ತಂದೆಯ ತಂದೆ, ಎಲ್ಲರ ಸ್ವಭಾವವನ್ನು ಸಂಪೂರ್ಣ ಅಭ್ಯಾಸಮಾಡಿದ್ದನು. ಹೆಸರಿಗೆ, ಅನುಸರಿಸಿ ಈಗಾಗಲೆ ಅವನು ಬುಡ್ಡ ಆಗಿದ್ದನು.

ಶಿವರಾಯನು ಕೂಗಿದೊಡನೆ ಅವನು ಓಡಿಬಂದನು. ಬಹು ನಮ್ರವಾಗಿ ಹೊಸ ರಾಯರಿಗೆ ಬಾಗಿ ನಮಸ್ಕರಿಸಿದನು. ಇದೇ ರಾಯರನ್ನು ತನ್ನ ಕೈತೋಳುಗಳಲ್ಲಿ ಆಡಿಸಿ ಬೆಳೆಯಿಸಿದ್ದನು .

“ನೋಡು ಬುಡ್ಡಾ, ಈ ತಿಂಗಳಿಂದ ಅರ್ಥ ಬಾಡಿಗೆ ಕಡಿಮೆಯೆಂದು ಎಲ್ಲರಿಗೂ ತಿಳಿಸು.” ಶಿವರಾಯರ ಈ ಮಾತು ಕೇಳಿ ಅತಿಗಾಬರಿಯಾದನು. ಒಂದು ನಿಮಿಷ ಅವನ ತಲೆಯಲ್ಲಿ ಯಾವ ವಿಚಾರವೂ ಹೊಳೆಯಲಿಲ್ಲ. ತಾನು ಎಲ್ಲಿ ನಿಂತಿರುವನೆಂಬುದೂ ಗೊತ್ತಾಗಲಿಲ್ಲ. ಒಂದು ದೊಡ್ಡ ಚಕ್ರ ತಲೆಯಲ್ಲಿ ತಿರುಗಿದಂತಾಯಿತು. ಶಿವರಾಯರ ತಂದೆ- ಪ್ರತಿ ವರ್ಷ ಬಾಡಿಗೆ ಏರಿಸಬೇಕೆನ್ನುತ್ತಿದ್ದರು. ಅವರು ಸತ್ತು ಇನ್ನೂ ಒಂದು ತಿಂಗಳಾಗಿರಲಿಲ್ಲ. ಇವರು ಹೀಗೆ ಮಾತನಾಡಿದುದನ್ನು ಕೇಳಿದಕೂಡಲೇ ದಂಗುಬಡೆದಂತಾಯಿತು.

ಅರ್‍ಧ ನಿಮಿಷದಲ್ಲಿ ಎಚ್ಚರಾದಂತಾಗಿ “ಅಲ್ಲ ದೊಡ್ಡ ರಾಯರು ಇದ್ದರ?…….” ಎಂದು ಬುಡ್ಡಾ ಇನ್ನೂ ಏನೇನೋ ಹೇಳವವನಿದ್ದನು.

ಶಿವರಾವ ಅವರು ಅವನ ಮಾತುಗಳನ್ನು ಒಮ್ಮೆಲೆ ತಡೆದುಬಿಟ್ಟರು. “ಇದು ಹೀಗೆ ಆಗಲೇ ಬೇಕು.” ಎಂದು ಭೀಮ ಪ್ರತಿಜ್ಞೆ ಮಾಡಿದವರಂತೆ ಗರ್ಜಿಸಿದರು.

ಆ ಗರ್ಜನೆಯನ್ನು ಕೇಳಿ ಬುಡ್ಡಾ ಗಡ-ಗಡನೆ ನಡುಗಿದನು. ಛಡಿಯ ಸಪ್ಪಳವನ್ನು ಕೇಳಿದಾಗಲೂ, ವಿದ್ಯಾರ್ಥಿಗಳು ಅಷ್ಟು ನಡುಗಿರಲಿಕ್ಕಿಲ್ಲ.

ಅನುಮಾನಿಸುತ್ತ ನಿಂತ ಬುಡ್ಡಾನನ್ನು ನೋಡಿ “ಹೂ ಹೋಗು ಎಲ್ಲರಿಗೂ ಇದನ್ನು ತಿಳಿಸು” ಎಂದು ಒತ್ತಿ ಮತ್ತೊಮ್ಮೆ ಶಿವರಾವ ಕೂಗಿ ಕೊಂಡರು.

ಬುಡ್ಡನಿಗೆ ತಾನು ಯಾವ ರೀತಿ ನಡೆಯುತ್ತಿದ್ದೇನೆಂಬುದೇ ಗೊತ್ತಾಗಲಿಲ್ಲ. ತಲೆ ಕಲ್ಲಿನಷ್ಟು ಭಾರವಾಗಿತ್ತು. ಶಿವರಾಯರು ಹೇಳಿದ ಮಾತುಗಳು ಅವನನ್ನು ಭ್ರಮನಿರಸನ ಮಾಡಿದ್ದವು.

“ಹೋತು…. ೧೦೦ ಕ್ಕೆ ೫೦ ಹೋತು ೧೦೦ ಕ್ಕೆ ೫೦ ಅರ್ಧ ಹೋತು …….. ಹೋತು”

ಬುಡ್ಡಾ ತನ್ನ ಚಿಕ್ಕ ಮನೆಯ ಹೊರಬಾಗಿಲಿನ ಹತ್ತಿರ ನಿಂತು ಲೆಕ್ಕ ಹಾಕುತ್ತಿದ್ದನು: ಕೈ ಬೆರಳು ಅಂಕಿಗಳನ್ನು ಬರೆಯುತ್ತಿದ್ದವು; ಗಾಳಿಯಲ್ಲಿ ಒಮ್ಮೊಮ್ಮೆ ಜೋತಾಡುವ ತಲೆಯನ್ನು ಬಿಗಿಹಿಡಿದುಕೊಳ್ಳುತ್ತಿದ್ದವು.

ಒಗ್ಗರಣೆಯನ್ನು ಕೊಡುವಾಗ “ಚುಂಯ್” ಎನ್ನುವ ಸಪ್ಪಳವನ್ನು ಭೇದಿಸಿ ಈ ಮಾತುಗಳು ಬುಡ್ಡನ ಹೆಂಡತಿಗೆ ಕೇಳಿಸಿದವು. ಅವಳು ಸವುಟನ್ನು ಕೈಯಲ್ಲಿ ಹಿಡಿದುಕೊಂಡವಳು ಹಾಗೆಯೇ ಹೊರಗೆ ಹೋದಳು.

ಹೊರಗೆ ಅಭೂತ ಪೂರ್ವ ದೃಶ್ಯ! ಬುಡ್ಡಾ ಎಂದೂ ಹೀಗೆ ಮಾಡಿರಲಿಲ್ಲ! ಅವನ ತಲೆ ಎಂದಿಗೂ ಅಲುಗಾಡಿರಲಿಲ್ಲ! ಅವನು ಕೈ ಬೆರಳುಗಳನ್ನು ಈ ರೀತಿ ತಿರುವುತ್ತಿರಲಿಲ್ಲ!

“ಏನದು?” ಎಂದಳವಳು.

“ಹೋತು…… ಅರ್ಧ.”

“ಹೋತು ಎಂದಾದರೂ ಅರ್ಥ ಇರುವುದೇ?”

“ಅಲ್ಲ ಅರ್ಧ ಹೋತು.”

“ಏನದು? ಸ್ಪಷ್ಟವಾಗಿ ಹೇಳಿರಿ. ಹೋತನ್ನು ಕೊಂದಿರೋ ಹೇಗೆ? ಯಾವ ಹೋತು? ಏನು ಅನಾಹುತ?”

ಅವಳು ಚಿಟ್ಟನೆ ಚೀರಿ, ಸವುಟನ್ನು ಬಿಸುಟಿ, ನೆಲದ ಮೇಲೆ ಕುಕ್ಕರಿಸಿ ಅಳಲಾರಂಭಿಸಿದಳು!

ಸವುಟನ್ನು ಬಿಸುಟುವಾಗ, ಬುಡ್ಡಾನ ತಲೆಗೆ ಒಗ್ಗರಣೆಯ ರುಚಿ ಹತ್ತಿತು. ಅವನು ಕೂಡಲೇ ಎಚ್ಚತ್ತು, ಹೆಂಡತಿಯನ್ನು ಒಳಗೆ ಕರೆದುಕೊಂಡು ಹೋಗಿ ಅತ್ಯಂತ ಮೇಲು ದನಿಯಿಂದ ಹೇಳಿದ “ಈ ರಾಯರು ಮನೆಯ ಬಾಡಿಗೆ ಕಡಿಮೆ ಮಾಡಿದರು. ಅರ್ಧ ಹೋತು”

ಮುಖಬಾಡಿಸಿದವಳು ಒಮ್ಮೆಲೆ ನಕ್ಕಳು. ಬಿದ್ದು ಬಿದ್ದು ನಕ್ಕಳು. ಗಿರಿಕಂದರಗಳನ್ನು ಕೊರೆದು ಬರುವ ಧ್ವನಿಯಂತೆ ಅವಳ ನಗೆಯ ತೆರೆಗಳು ತೂರಿ ಬಂದವು.

ಅವಳು ಹೊರಗೆ ಓಡಿಬಂದಳು. ಬುಡ್ಡಾ ‘ಉಶ್’ ಎಂದು ಗೋಡೆಗೆ ಆತುಕೊಂಡು ಬಿಟ್ಟನು. ಇವರ ಚಿಕ್ಕ ಮನೆಯ ಎದುರಿಗೆ ಮೂರು ಮಜಲಿನ ಮನೆ, ಅಲ್ಲಿ ಅನೇಕ ಮನೆಗಳಿದ್ದವು. ಸುಮಾರು ನಾಲ್ವತ್ತು ಇರಬಹುದು.

ಅವಳು “ಏ ……..” ಎಂದು ಕೂಗಿದಳು. ಕೆಳಗಿನ ಮನೆಯ ಬಾಗಿಲಲ್ಲಿ ನಿಂತ ಕಮಲೂ ಇವಳ ಧ್ವನಿಯನ್ನು ಕೇಳಿ ಅಲ್ಲಿಗೆ ಧಾವಿಸಿ ಓಡಿಬಂದಳು.

“ಏನು ಅದು?” ಎಂದು ಕೇಳಿದಳು.
“ನಿಮ್ಮ ಬಾಡಿಗೆ ಎಷ್ಟು?”
“೪೦ ರೂಪಾಯಿ!!”
“ಈ ತಿಂಗಳಿಂದ ನೀವು ೨೦ ಕೊಡಿರಿ”

ಈ ಮಾತನ್ನು ಕಮಲು ಕೇಳಿ ಅಚ್ಚರಿಯಾದಳು. ತಾನು ಕನಸಿನಲ್ಲಿರುವೆನೇನೋ ಎನ್ನಿಸಿತು ಅವಳಿಗೆ. ಹುಚ್ಚಿಯಂತೆ ಅವಳು ಮಾತನಾಡುವುದನ್ನು ನೋಡಿ ನಗೆ ತಡೆಯಲಾರದೆ ಕಮಲು ನಕ್ಕಳು.

“ಕಮಲಾಬಾಯಿ, ನಿಜ…”
“ಯಾರು ಹೇಳಿದರು?”
“ಹೊಸ ಚಿಕ್ಕರಾಯರು ಈ ದಿನ ಸಂಜೆ ಎಲ್ಲರಿಗೂ ತಿಳಿಸುವರು”

ಕಮಲ ರಾಯ್ಟರ ಎಜೆನ್ಸಿಯ ಕೆಲಸ ಮಾಡಿದಳು. ಅವಳ ಧ್ವನಿಯ ಕುತೂಹಲತೆಯನ್ನು ಕಂಡು, ಮೈದೊಳೆದುಕೊಳ್ಳುವ ಹೆಂಗಳೆಯರು ಸಹ ಹಾಗೆಯೆ ತೊಯ್ದ ಬಟ್ಟೆಗಳಲ್ಲಿ ಪಡಸಾಲೆಯವರೆಗೆ ಓಡಿಬಂದಿದ್ದರು. ಗಾಳಿಯಲ್ಲಿ ಕಿಚ್ಚು ಹಬ್ಬುವಂತೆ ಈ ಅಚ್ಚರಿಯ ವಿಷಯ ಬಾಡಿಗೆಯ ಮನೆಗಳ ತುಂಬ ಪಸರಿಸಿತು. ಕೊನೆಗೆ ಯಾರೋ ಒಬ್ಬ ಗಂಡಸರು ಅಂದರು- “ಇದರಲ್ಲಿ ಏನಾದರೂ ಕುಟಿಲತನವಿರಬೇಕು!”

ಊರಲ್ಲಿ ಬಾಡಿಗೆಗಳು ಇನ್ನೂ ಏರಿಕೆಯಲ್ಲಿಯೇ ಇದ್ದವು. ಇನ್ನೂ ಎಷ್ಟೋ ಜನ ವಾಸಿಸಲು ಬಾಡಿಗೆಯ ಮನೆಗಳಿಲ್ಲದೆ ಗೋಳಾಡುತ್ತಿದ್ದರು. ಅಂಥ ವೇಳೆಯಲ್ಲಿ ಇವರು ಅರ್ಥದಷ್ಟು ಬಾಡಿಗೆಯ ಹಣವನ್ನು ಕಡಿಮೆ ಮಾಡಿದುದನ್ನು ಕೇಳಿ, ಜನರಿಗೆಲ್ಲ ಏನೋ ಸಂಶಯ ಬಂದಿತು. ಹಗಲು- ರಾತ್ರಿ ಜನರೆಲ್ಲ ಏನೇನೋ ಮಾತನಾಡತೊಡಗಿದರು.

೪-೫ ದಿನಗಳು ಹೊರಳಿದವು ಕಪ್ಪು ಬಣ್ಣದ ಸುಂದರಿ ಮತ್ತು ಅವಳ ಗಂಡ ಹೋಲ್ಡಾಲ್‌ ಹೊರಿಸಿಕೊಂಡು ಸಾಗಿದ್ದಾರು. ಕಮಲು ಇದನ್ನು ನೋಡಿ ತನ್ನ ಗಂಡನಿಗೆ ಇದರ ಕಾರಣ ಕೇಳಿದಳು.

“ಸುಂದರಮ್ಮ, ಹೊರಟೇ ಬಿಟ್ಟಳಲ್ಲಾ?”
“ಅಹುದು ಹೊರಟೇ ಬಿಟ್ಟುಬಿಟ್ಟರು.”
“ಏಕೆ?”
“ಮೊನ್ನೆ ಅಮಾವಾಸ್ಯೆಯ ರಾತ್ರಿ ಯಾರೋ ಹೆದರಿಸಿದಂತಾಯಿತಂತೆ! ಅವಳಿಗೆ ಮೈಮೇಲೆ ಪರಿವೆ ಇರಲಿಲ್ಲ”
“ಅಯ್ಯ, ಏನು ಭೂತ ಇದೆಯೋ ಇಲ್ಲಿ?”
“ಅಹುದು ಸ್ಮಶಾನದ ಜಾಗೆಯಲ್ಲಿಯೇ ಮನೆ ಕಟ್ಟಿಸಿದ್ದಾರಂತೆ! ಅಂತೆಯೆ ಬಾಡಿಗೆ ಕಡಿಮೆ ಮಾಡಿದ್ದಾರೆ! ”
“ಅವ್ವಯ್ಯ, ನಾನು ಇಲ್ಲಿ ಇರುವುದು ಸಾಧ್ಯವೇ ಇಲ್ಲ.”
“ಜನರು ಏನಾದರೂ ಅಂತಾರೆ. ನೀನ್ಯಾಕೆ ಹೆದರುವುದು ನಾನು ಇರಲಿಕ್ಕೆ?”
“ಭೂತ ಇದ್ದರೆ ಹೇಗೆ ಇರುವುದು?”
೫-೬ ದಿನಗಳಲ್ಲಿಯೆ ಕಮಲು ತನ್ನ ಗಂಡನನ್ನು ಕರೆದುಕೊಂಡು ಹೊರಟೇಬಿಟ್ಟಳು!!

ಶಂಕರಯ್ಯನವರು ಭೂತಗಳಲ್ಲಿ ನಂಬಿಗೆಯಿಲ್ಲದವರು. ಅಂಥವರೂ ಈ ಸುದ್ದಿ ಕೇಳಿ ಚಂಚಲಿತರಾದರು. ಅವರಿಗಿಂತ ಅವರ ಹೆಂಡತಿ ದಿನಾಲು ಏನಾದರೊಂದು ಮಾತನಾಡುವದು ಸಾಗಿತು.

“ಭೂತ ಇದೆಯೋ ಇಲ್ಲವೋ ಯಾರಿಗೆ ಗೊತ್ತು?”

“ಕಮಲೂನ ಮನೆಯಲ್ಲಿ ಇಲಿ ಬಿತ್ತಂತೆ. ಪ್ಲೇಗು ಹಬ್ಬುತ್ತಿರಬೇಕು. ಮಕ್ಕಳೆಲ್ಲ ಪ್ಲೇಗಿನಿಂದ ಸತ್ತರೆ?”

ಹೆಂಗಸರ ಬಾಯಲ್ಲಿ ಹೇಗೋ ಈ ಮಾತು ಹೊರಟಿತು. ಶಂಕರಯ್ಯನವರು ಬೇಸತ್ತು ಅಲ್ಲಿಯ ಬಿಡಾರವನ್ನು ಕಿತ್ತಿದರು.

ಗಟ್ಟಿಮುಟ್ಟಿಯಾಗಿ ಒಂದೆಡೆಗೇ ನಿಲ್ಲುವ ಶಂಕರಯ್ಯನವರು ಸಹ ಮನೆಬಿಟ್ಟು ಹೋದದ್ದನ್ನು ಕಂಡು ಅನೇಕ ಜನ ಬೆದರಿದರು. ಇಲ್ಲಿಯ ಮನೆಗಳ ಸುದ್ದಿ, ಊರಲ್ಲಿಯೂ ವಿಚಿತ್ರ ವಾತಾವರಣವನ್ನು ಹುಟ್ಟಿಸಿತು. ಸಾಥಿ ಶಿವರಾಯರ ಬಾಡಿಗೆಯ ಮನೆಗಳನ್ನು ಜನರು ಬಿಟ್ಟುಹೋದದ್ದನ್ನು ಕುರಿತು ಊರಲ್ಲಿಯೂ ತರ್ಕ-ವಿತರ್ಕಗಳು ಸಾಗಿದ್ದವು. ಊರಜನರೂ ಗಾಬರಿಯಾಗ ತೊಡಗಿದರು. ಹಲವೇ ಜನ ಈಗ ಶಿವರಾಯರ ಬಾಡಿಗೆಯ ಮನೆಗಳಲ್ಲಿ ವಾಸವಾಗಿದ್ದರು.

ಒಂದು ರಾತ್ರಿ ಮಿಣಿ-ಮಿಣಿ ದೀಪದ ಸುತ್ತಲೂ ಜನರು ದಂಗು ಬಡೆದು ಮಾತನಾಡುತ್ತಿದ್ದರು.

“ಶಂಕರಯ್ಯನವರು ಚಾಣಾಕ್ಷರು. ಮುಂದೆ ಹೀಗಾಗುವದೆಂದು ಅವರಿಗೆ ಗೊತ್ತು.”

“ಏನು? ಏನದು?”

“ರಜಾಕಾರರು ಜನರನ್ನೆಲ್ಲಾ ಕೊಲ್ಲುತ್ತಿದ್ದಾರಂತೆ, ಈ ಊರ ಸಮೀಪದಲ್ಲಿಯ ಹಳ್ಳಿಗಳನ್ನೆಲ್ಲಾ ಹಾಳು ಮಾಡಿದ್ದಾರಂತೆ. ಅವರು ಬಂಗಾರ-ಬೆಳ್ಳಿ ಎಲ್ಲ ದೋಚಿಕೊಂಡು ಹೋಗುವರಂತೆ!”

“ಹಾಗಾದರೆ ಈ ಊರಿಗೂ ಬರುವರೆ?”
“ಹೌದು. ಅಂತೆಯೆ ಶಂಕರಯ್ಯನವರು ಮುಂಜಾಗ್ರತೆ ವಹಿಸಿ ಪಾರಾಗಿದ್ದಾರೆ.”
“ನೋಡಿರಿ, ಅವರು ಬಂದರೆ, ಊರಹೊರಗಿರುವ ನಮ್ಮ ಮನೆಗಳೆ ಮೊದಲು ಆಹುತಿಯಾಗುವವು.”

“ಧಪ್! ಧಪ್!! ಸಪ್ಪಳವಾಯಿತು”

‘ಅಯ್ಯೋ’ ಎಂದು ಚೀರಿ ಎಲ್ಲರೂ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ದೀಪ ಉರುಳಿಬಿತ್ತು.

ದೀಪಹಚ್ಚಿ ನೋಡಿದಾಗ ಅಲ್ಲಿ ರಜಾಕಾರರು ಯಾರೂ ಇರಲಿಲ್ಲ. ಹಲವು ಇಲಿಗಳು ಮಾತ್ರ ಜಿಗಿಯುತಿದ್ದವು!

ತಿಂಗಳು ಮುಗಿಯಿತು. ಬುಡ್ಡಾ ಮಿಣಿ-ಮಿಣಿ ದೀಪವನ್ನು ಹಿಡಿದು ಕೊಂಡು ಎಲ್ಲ ಮನೆಗಳ ಮುಂದೆ ಹಾಯಬೇಕೆಂದು ಹೊರಟನು.

ಒಂದು ಮನೆಯಲ್ಲಿಯೂ ದೀಪಕಾಣಲಿಲ್ಲ. ಅರ್ಧದಾರಿಯಲ್ಲಿಯೇ ಹೆದರಿಕೊಂಡು ತಿರುಗಿ ಮನೆಗೆ ಓಡಿ ಬಂದನು. ಬುಡ್ಡಾ ಸಹ ಆ ಚಿಕ್ಕ ಮನೆಬಿಟ್ಟು ರಾಯರ ಮನೆಯ ಸಮೀಪದಲ್ಲಿಯೇ ವಾಸವಾಗತೊಡಗಿದನು. ರಜಾಕಾರರು ಬರುವರೆಂಬ ಸುದ್ದಿಕೇಳಿ ಊರ ಜನರು ಸಹ ಊರನ್ನು ಬಿಟ್ಟು ಹೋಗತೊಡಗಿದರು.

“ಮನೆ ಬಾಡಿಗೆಯಿಂದ ಕೊಡುತ್ತೇವೆ” ಎಂಬ ಬಹುದೊಡ್ಡ ಅಕ್ಷರಗಳಿಂದ ಬರೆದ ಫಳಿಯನ್ನು ಕಂಪೌಂಡಿನ ಗೋಡೆಯ ಹತ್ತಿರ ಹಚ್ಚಿಸಲಾಯಿತು.

ಎಷ್ಟೋ ದಿನಗಳಾದರೂ ಯಾರ ಸುದ್ದಿಯೂ ಇಲ್ಲ.

ಸಾಥಿ ಶಿವರಾಯರು ಮನೆಗಳನ್ನೆಲ್ಲ ನೋಡಿಕೊಂಡು ಆವಾರದಲ್ಲಿ ವಿರಾಮ ಕುರ್ಚಿಯ ಮೇಲೆ ಒರಗಿದರು. ಲೋಕೋಪಕಾರಕ್ಕಾಗಿ ಬಾಡಿಗೆ ಅರ್ಧ ಇಳಿಸಿದರೆ ಇದರ ಫಲ ಏನಾಯಿತಲ್ಲ? ಎಂದು ಚಿಂತಿಸಿದರು.

ಭವ್ಯವಾಗಿರುವ ಕಟ್ಟಡದ ಸುತ್ತುಮುತ್ತು ಸ್ಮಶಾನದ ಶಾಂತತೆ ಇತ್ತು. ಎಲ್ಲಿ ನೋಡಿದಲ್ಲಿ ಹುಲ್ಲು ಬೆಳೆದಿತ್ತು. ಕಸ ಗುಂಪುಗುಂಪಾಗಿ ಬಿದ್ದಿತ್ತು.

(ಒಂದು ರಶಿಯನ್ ಕತೆಯ ಪ್ರೇರಣೆಯಿಂದ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೊರಕೆ
Next post ಅಪಮೌಲ್ಯ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…