‘ಮನುಷ್ಯ ಸಮಾಜಕ್ಕೆ ಋಣಿಯಾಗಿಯೇ ಜನಿಸುತ್ತಾನೆ. ಸಮಾಜದ ಋಣ ತೀರಿಸಬೇಕಾದುದು ಅವನ ಕರ್ತವ್ಯ’. ಇದು ಡಾ. ಎಂ. ಶಿವರಾಂ ಅವರ ಮಾತು; ಮನುಷ್ಯತ್ವದ ಬಗ್ಗೆ ನಂಬಿಕೆಯುಳ್ಳ ಯಾರು ಬೇಕಾದರೂ ಆಡಬಹುದಾದ ಮಾತು. ವಿಪರ್ಯಾಸ ನೋಡಿ: ಮಾತನಾಡುವುದು ಯಾವಾಗಲೂ ಸುಲಭ: ಮಾತನ್ನು ಕ್ರಿಯೆಗೆ ತರುವುದರಲ್ಲೇ ಘನತೆ ಅಡಗಿರುವುದು. ಇಂಥ ಘನತೆ ಡಾ. ಶಿವರಾಂ ಅವರದಾಗಿತ್ತು.
ಡಾ.ಶಿವರಾಂ, ಅರ್ಥಾತ್ ನಗೆರಸಿಕರ ಪಾಲಿನ ‘ರಾಶಿ’ ಸಮಾಜದ ಋಣವನ್ನು ತೀರಿಸಲು ಎರಡು ರೀತಿಗಳಲ್ಲಿ ವೃತ್ತಿ ಹಾಗೂ ಪ್ರವೃತ್ತಿಯ ಮೂಲಕ. ವೃತ್ತಿಯಲ್ಲಿ ಶಿವರಾಂ ವೈದ್ಯರು; ಸಾಹಿತ್ಯ ಅವರ ಪ್ರವೃತ್ರಿ. ಈ ಪ್ರವೃತ್ತಿ ವೃತ್ತಿಯ ಮೇಲೆ ಪ್ರಭಾವ ಬೀರುವಷ್ಟು ಬಲವಾಗಿತ್ತು ಎನ್ನುವುದು ಶಿವರಾಂ ಬದುಕಿನ ವೈಶಿಷ್ಟ್ಯ.
ಒಳ್ಳೆಯ ವೈದ್ಯ ಹಾಗೂ ಒಳ್ಳೆಯ ವೈದ್ಯ ಸಾಹಿತಿ ಇಬ್ಬರನ್ನೂ ಕನ್ನಡದ ಪರಂಪರೆ ಸಾಕಷ್ಟು ಕಂಡಿದೆ. ಒಳ್ಳೆಯ ವೈದ್ಯನೇ ಲೇಖಕನೂ ಆಗಿರುವ ಉದಾಹರಣೆಗಳು ಇವೆ. ಆದರೆ ವಿಜ್ಞಾನದೊಂದಿಗೆ ಹಾಸ್ಯವನ್ನೂ ಸಿದ್ದಿಸಿಕೊಂಡ ನಗೆವೈದ್ಯರ ಸಂಖ್ಯೆ ಕಡಿಮೆ. ಇಂಥ ಅಪರೂಪದವರ ಸಾಲಿಗೆ ಸೇರಿದವರು ರಾಶಿ. ಡಾ. ಸ.ಜ.ನಾಗಲೋಟಿಮಠ ಅಂಥ ಮತ್ತೊಬ್ಬ ವೈದ್ಯ ಶಿರೋಮಣಿ.
ರಾಮಸ್ವಾಮಯ್ಯ- ಸೀತಮ್ಮ ದಂಪತಿಗಳ ಮುದ್ದಿನ ಕುವರ ಶಿವರಾಂ ಜನಿಸಿದ್ದು ೧೯೦೫ರ ನವೆಂಬರ್ ೧೦ರಂದು, ಬೆಂಗಳೂರಿನಲ್ಲಿ. ಪ್ರಾಥಮಿಕ ಶಿಕ್ಷಣ ಮಲೇಶ್ವರದಲ್ಲಿ ಚಾಮರಾಜ ಪೇಟೆಯ ಕೋಟೆ ಹೈಸ್ಕೂಲ್‌ನಲ್ಲಿ ಮೆಟ್ರಿಕ್, ಅನಂತರ ಸೆಂಟ್ರಲ್ ಕಾಲೇಜು ಪ್ರವೇಶ. ಚಿಕ್ಕಂದಿನಿಂದಲೇ ಅಂಟಿಸಿಕೊಂಡ ರಾಶಿಯವರ ಓದಿನ ಗೀಳಿಗೆ ವ್ಯಾಪಕ ವೇದಿಕೆ ಒದಗಿಸಿದ್ದು ಸೆಂಟ್ರಲ್ ಕಾಲೇಜು. ಮೋಜು ಮಾಡಲಿಕ್ಕೆ ದುಡ್ಡಿಲ್ಲದೆ ಹೋದ ರಾಶಿಯವರ ಹೆಚ್ಚಿನ ಸಮಯವೆಲ್ಲ ಕಾಲೇಜಿನ ಲೈಬ್ರರಿಯಲ್ಲೇ ಕರಗುತ್ತಿತ್ತು. ಆ ಸಮಯದಲ್ಲಿ ಶುರುವಾದುದು ‘ಪಂಚ್’ ಸಖ್ಯ. ಪ್ರಚಲಿತ ವಿದ್ಯಮಾನಗಳನ್ನು ಚಿಕಿತ್ಸಕ ನಗೆಲೇಪದೊಂದಿಗೆ ಚಿತ್ರಿಸುತ್ತಿದ್ದ ಇಂಗ್ಲಿಷ್‍ನ ‘ಪಂಚ್’ ಪತ್ರಿಕೆ ಲೇಖನಗಳು ರಾಶಿಗೆ ಸಖತ್ ಖುಷಿಕೊಟ್ಟವು. ಇಂಥದೊಂದು ಪತ್ರಿಕೆ ಕನ್ನಡದಲ್ಲಿ ಏಕೆ ಪ್ರಕಟಿಸಬಾರದು ಎನ್ನುವ ಯೋಚನೆ ಬೀಜವಾದುದು ಆಗಲೇ.
ರಾಶಿ ಅವರ ಪಾಲಿಗೆ ಬಿ.ಎಂ. ಶ್ರೀಕಂಠಯ್ಯ ಹಾಗೂ ಟಿ.ಪಿ. ಕೈಲಾಸಂ ಗುರು ಸಮಾನರು. ‘ನೀನು ವೈದ್ಯಕೀಯ ಓದು’ ಎಂದು ರಾಶಿಗೆ ಮಾರ್ಗದರ್ಶನ ಮಾಡಿದ್ದೇ ಬಿಎಂಶ್ರೀ. ‘ಮಾತಿನಲ್ಲೇ ಕಳೆದುಹೋದ್ರೆ ಉಪಯೋಗವಿಲ್ಲ; ಮಾತನಾಡಿದ್ದನ್ನು ಬರವಣಿಗೆಗೂ ಇಳಿಸು’ ಎಂದು ರಾಶಿ ಲೇಖನಿಗೆ ಮಸಿ ತುಂಬಿದವರು ಕೈಲಾಸಂ. ಹಿರಿಯರಿಬ್ಬರ ಮಾತನ್ನು ರಾಶಿ ಶಿರಾಸಾವಹಿಸಿದರು. ಪರಿಣಾಮವಾಗಿ ಕನ್ನಡದ ವೈದ್ಯಲೋಕಕ್ಕೆ ಒಳ್ಳೆಯ ವೈದ್ಯನ ಸೇರ್ಪಡೆ; ಸಾಹಿತ್ಯಕ್ಕೆ ನಗೆವೈದ್ಯನ ಪರಿಚಯ. ‘ಹಾಸ್ಯ ಶುಚೀಕರಣ ಶಕ್ತಿ ಉಳ್ಳದ್ದು’. ಒಳಗಿನದನ್ನು ನಿಚ್ಚಳವಾಗಿ ಅರಿಯಲು ಸಹಾಯ ಮಾಡುವಂತಹದ್ದು ಎನ್ನುವುದು ಅವರ ನಂಬಿಕೆಯಾಗಿತ್ತು.
೧೯೨೫ರಲ್ಲಿ ಎಂಬಿಬಿಎಸ್ ಮುಗಿಸಿದ ಶಿವರಾಂ ಬಳೇಪೇಟೆಯಲ್ಲಿ ದವಾಖಾನೆ ತೆರೆದರು. ಕೈಗುಣ ಚೆನ್ನಾಗಿತ್ತು. ಸ್ವಲ್ಪಕಾಲದಲ್ಲೇ ಅವರು ಜನಪ್ರಿಯ ವೈದ್ಯರ ಸಾಲಿಗೆ ಸೇರಿದರು. ರಾಶಿ ತಮ್ಮ ರೋಗಿಗಳಿಗೆ ವಿಜ್ಞಾನದ ಔಷಧಿಯೊಂದಿಗೆ ನಗೆಗುಳಿಗೆಗಳನ್ನೂ ನೀಡುತ್ತಿದ್ದರು. ಮಕ್ಕಳಿಗೆ ಕಥೆಗಳನ್ನು ಹೇಳುತ್ತಿದ್ದರು; ಜೊತೆಗೆ ಪೆಪ್ಪರ್‌ಮಿಂಟ್ ಕೊಡುತ್ತಿದ್ದರು. ಡಾ. ಶಿವರಾಂ, ನಾಡಿ ಪರೀಕ್ಷೆಯ ಜೊತೆಗೆ ರೋಗಿಯ ಮಾನಸ ಸರೋವರದಲ್ಲಿನ ಕಂಪನಗಳನ್ನು ಅರಿಯಲು ಪ್ರಯತ್ನ ನಡೆಸುತ್ತಿದ್ದರು. ‘ಅನೇಕ ದೈಹಿಕ ಸಮಸ್ಯೆಗಳ ಮೂಲ ಮಾನಸಿಕವಾದುದು’ ಎಂದು ನಂಬಿದ್ದ ಅವರು, ಮನಃಶಾಸ್ತ್ರ, ತತ್ವಶಾಸ್ತ್ರ ಹಾಗೂ ಭಗವದ್ಗೀತೆಯ ಅಧ್ಯಯನ ನಡೆಸಿದ್ದರು. ಇದೆಲ್ಲದರ ಫಲಿತವೇ ‘ಮನೋನಂದನ’ ಕೃತಿ. ರಾಶಿಯವರಿಗೆ ತುಂಬಾ ಇಷ್ಟವಾದ ಈ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
‘ನೀನು ಬರಿ’ ಎನ್ನುವ ಕೈಲಾಸಂ ಉಪದೇಶವೇ ‘ಕೊರವಂಜಿ’ ಯ ಜನನಕ್ಕೆ ಕಾರಣ. ಪಂಚಪ್ರಾಣದಂತೆ ಪ್ರೀತಿಸುತ್ತಿದ್ದ ‘ಪಂಚ್’ ಪತ್ರಿಕೆಯಂಥ ಪತ್ರಿಕೆಯನ್ನು ಮಾಡಬೇಕು ಎನ್ನುವ ಅಭಿಲಾಷೆಯೂ ರಾಶಿ ಅವರಿಗಿತ್ತು. ೧೯೪೨ರ ಜನವರಿಯಲ್ಲಿ ‘ಕೊರವಂಜಿ’ ಪ್ರಕಟವಾಯಿತು. ರಾಶಿ ಅವರ ರಾಶಿ ರಾಶಿ ಬರಹಗಳೊಂದಿಗೆ ಜಿ.ಪಿ.ರಾಜರತ್ನಂ, ನಾ.ಕಸ್ತೂರಿ, ತುಮಕೂರು ಸುನಂದಮ್ಮ ಮುಂತಾದ ಸಿದ್ಧ-ಪ್ರಸಿದ್ಧ ನಗೆಗಾರರು ‘ಕೊರವಂಜಿ’ಗೆ ಬರೆಯುತ್ತಿದ್ದರು.
ದಿನನಿತ್ಯದ ವಿದ್ಯಮಾನಗಳೇ ರಾಶಿಯವರ ಬರವಣಿಗೆಯ ಸಾಮಗ್ರಿಗಳು. ಸುತ್ತಲಿನ ಪರಿಸರದ ಕ್ಯಾಂಟೀನ್ ಹುಡುಗ, ಜೇಬುಗಳ್ಳ, ಪೋಲೀಸ್ ಪೇದೆ, ಕಚೇರಿ ಜವಾನ, ಸಾಮುದ್ರಿಕದವ, ಕಲ್ಪನೆಯಲ್ಲಿನ ದೆವ್ವ- ಇವೆಲ್ಲ ಅವರ ಬರವಣಿಗೆಯಲ್ಲಿನ ಇತರರನ್ನು ತಮಾಷೆ ಮಾಡುವುದಿರಲಿ, ತಮ್ಮನ್ನು ತಾವೇ ರಾಶಿ ಗೇಲಿ ಮಾಡಿಕೊಳ್ಳುತ್ತಿದ್ದರು. ಅವರ ಮುಖದ ರೇಖೆಗಳು ಕೊಂಚ ಪೆಡಸು. ಆ ಕಾರಣದಿಂದ ತಮ್ಮ ಮುಖವನ್ನು ಗೊರಿಲ್ಲಾ ಮುಖ ಎಂದು ಕರೆದುಕೊಳ್ಳುತ್ತಿದ್ದರು. ಮುಖದಲ್ಲಿ ಎದ್ದು ಕಾಣುತ್ತಿದ್ದ ಹುಬ್ಬುಗಳನ್ನು ‘ಕಂಬಳಿ ಹುಳುಗಳು’ ಎಂದು ಕರೆದು ನಗುತ್ತಿದ್ದರು. ರಾಶಿ ಅವರ ಪತ್ನಿ ನಾಗಮ್ಮ. ಆದುದರಿಂದ ರಾಶಿ ಅವರ ಮನೆ ‘ನಾಗಾಲ್ಯಾಂಡ್’!
ಬರವಣಿಗೆ ಫಸಲು ವಿಫುಲವಾದಂತೆ ರಾಶಿಯವರ ಅನೇಕ ಪುಸ್ತಕಗಳೂ ಪ್ರಕಟವಾದವು. ಕನ್ನಡದೊಂದಿಗೆ ಇಂಗ್ಲಿಷ್‌ನಲ್ಲೂ ಬರೆದರು. ‘ತುಟಿ ಮೀರಿದುದು’. ‘ಇಂದಾನೊಂದು ಕಾಲದಲ್ಲಿ’, ‘ಕೊರವಂಜಿಯ ಪಡುವಣ ಯಾತ್ರೆ’, ‘ನಗುಸರಸಿ ಆಪ್ಸರೆಯರು’, ‘ನಗೆಗೆರೆ ಚಿತ್ರಗಳು’, ‘ಜಗ್ಗೋಜಿ’, ‘ಬುದ್ದೋಜಿ’, ‘ಪೋಂತಿಯಾಗೋ’,
‘ಅಂಚೆಪೇದೆಯ ಅಂತರ್ ಹೆಂಡತಿ’, ‘ಮನೋನಂದನ’, ‘ಮನಮಂಥನ’, ‘ಪಂಪಾಪತಿಯ ಕೃಪೆ’, ‘ಸಾಕ್ಷಿ ಸಂಕಲಿಕೆ’ ಅವರ ಕೆಲವು ಕೃತಿಗಳು.
ಜನಪ್ರಿಯ ವೈದ್ಯ, ಲೇಖಕ- ಇವಿಷ್ಟೇ ರಾಶಿಯವರ ವೈಶಿಷ್ಟ್ಯವಾಗಿರಲಿಲ್ಲ. ಅವರೊಬ್ಬ ಸಮರ್ಥ ಆಡಳಿತಗಾರರೂ ಆಗಿದ್ದರು. ಕರ್ನಾಟಕ ಸಾಹಿತ್ಯ ಆಕಾಡೆಮಿಗೆ ಕೆಲಕಾಲ ಅಧ್ಯಕ್ಷರಾಗಿದ್ದ ಅವರು, ಎಂಐಪಿಎಲ್ ಕಂಪನಿಯ ಕಾರ್ಯ ನಿವಾರ್ಹಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಕಿರ್ಲೋಸ್ಕರ್ ಕಂಪನಿಯ ನಿರ್ದೇಶಕ ಮಂಡಳಿಯಲ್ಲೂ ಕಾರ್ಯ ನಿರ್ವಹಿಸಿದ್ದರು. ವಿವಿಧ ಜ್ಞಾನಶಾಖೆಗಳ ಕುರಿತು ಅವರಿಗೆ ಆಸಕ್ತಿಯಿತ್ತು. ಆ ಕಾರಣದಿಂದಲೇ ಅವರ ಗೆಳೆಯರ ಬಳಗದಲ್ಲಿ ಲೇಖಕರು, ವೈದ್ಯರು, ವಿಜ್ಞಾನಿಗಳು, ಚಿಂತಕರು ಇದ್ದರು.
ರಾಶಿ ಅಂಥವರನ್ನು ನೆನಪಿಸಿಕೊಳ್ಳುವುದು ಕೇವಲ ಸ್ಮರಣೆಯಷ್ಟೇ ಅಲ್ಲ ಅದು ಜಡ ದೈನಿಕವನ್ನು ಚೇತೋಹಾರಿಯಾಗಿ ಇರಿಸಿಕೊಳ್ಳುವ ಮಾರ್ಗವೂ ಹೌದು.
*****