ಯಾವುದೇ ಮರಣ ನನ್ನನ್ನು ಕ್ಷಯಗೊಳಿಸುತ್ತದೆ ಕುಂಠಿತಗೊಳಿಸುತ್ತದೆ ಎಂದು ಎಲಿಜಬೆತನ್ ಕವಿ ಜಾನ್ ಡನ್ ತನ್ನ ಡೈರಿಯೊಂದರಲ್ಲಿ ಬರೆದ. ಆದ್ದರಿಂದ ಘಂಟಾನಾದ ಯಾರ ಮರಣವನ್ನು ಸೂಚಿಸುತ್ತದೆ ಎಂದು ಕೇಳಬೇಡ; ಅದು ಸೂಚಿಸುವುದು ನಿನ್ನದೇ ಮರಣವನ್ನು ಎಂದ. ಇದು ವಸ್ತುನಿಷ್ಠ ಸತ್ಯದ ಕುರಿತು ಸಾರ್ವತ್ರಿಕತೆಯ ಮಾತಾಯಿತು. ಆದರೆ ನಾವು ಗಾಢವಾಗಿ ಹಚ್ಚಿಕೊ೦ಡವರ ಮರಣ ನಿಜಕ್ಕೂ ನಮ್ಮನ್ನು ನಿಶ್ಚೇಷ್ಟಿತರನ್ನಾಗಿ ಮಾಡಿಬಿಡುವುದು ವೈಯಕ್ತಿಕ ಅನುಭವ. ಇದೂ ಒಂದು ಸಾವೇ. ಇದೇ ಜುಲೈ ೨೩ರಂದು ಕಾಸರಗೋಡಿನಲ್ಲಿ ಗತಿಸಿದ ಕನ್ನಡದ ಕತೆಗಾರ ಎಂ. ವ್ಯಾಸರ ಮರಣ ನನ್ನ ಮಟ್ಟಿಗೆ ಇಂಥದೊಂದು ಘಟನೆ. ಯಾಕೆಂದರೆ ನನಗೆ ಭಾವನಾತ್ಮಕವಾಗಿ ತುಂಬಾ ಹತ್ತಿರವಾಗಿದ್ದ ಕೆಲವೇ ಮಂದಿಯಲ್ಲಿ ವ್ಯಾಸರು ಒಬ್ಬರಾಗಿದ್ದರು.
ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗ ನನಗೆ ವ್ಯಾಸರ ಪರಿಚಯವಾಯಿತು. ವ್ಯಾಸ ಅರ್ಥಶಾಸ್ತ್ರ ಓದುತ್ತಿದ್ದರೆ ನಾನು ಇಂಗ್ಲಿಷ್ ಸಾಹಿತ್ಯವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದೆ. ಆದರೆ ಎರಡೂ ಡಿಗ್ರಿಗಳಿಗೆ ಸಮನಾಗಿದ್ದ ಇಂಗ್ಲಿಷ್ ಮತ್ತು ಕನ್ನಡ ಭಾಷಾ ತರಗತಿಗಳಲ್ಲಿ ನಾವು ಒಂದೇ ತರಗತಿಯಲ್ಲಿ ಕೂತುಕೊಳ್ಳುತ್ತಿದ್ದೆವು. ೧೯೬೦ರ ಕಾಲದ ಮಧ್ಯಭಾಗದ ಬಗ್ಗೆ ನಾನು ಹೇಳುತ್ತಿರುವುದು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಮಗೆ ಸಮನಾದ ಆಸಕ್ತಿ ಇದ್ದುದರಿಂದ ನಾವು ಸಂಜೆ ಹಲವು ವೇಳೆ ಒಟ್ಟಿಗೆ ಕಳೆಯುತ್ತಿದ್ದೆವು; ಜತೆಯಲ್ಲಿ, ಈಗಿಲ್ಲದ, ಎಂ. ಗಂಗಾಧರ ಭಟ್ ಇರುತ್ತಿದ್ದರು. ವ್ಯಾಸರ ಪರಿಚಯ ನನಗೆ ಆದಾಗಲೇ ಅವರಿಗೊಂದು ಕಾರಿತ್ತು. ವಿದ್ಯಾರ್ಥಿಯಾಗಿ ಕಾರಿನಲ್ಲೇ ಅವರು ಕಾಲೇಜಿಗೆ ಬಂದು ಹೋಗುತ್ತಿದ್ದುದು. ಕಾಸರಗೋಡು ಪೇಟೆಗೆ ಸಮೀಪದ ಕೂಡ್ಳಿನವರಾದ ವ್ಯಾಸರನ್ನು ಹಳ್ಳಿಕೊಂಪೆ-ಯವನಾದ ನಾನು ಮೊದ ಮೊದಲು ಸ್ವಲ್ಪ ಗುಮಾನಿಯಿಂದಲೇ ನೋಡುತ್ತಿದ್ದುದು. ಆದರೆ ಅವರ ಗಾಢವಾದ ಸಾಹಿತ್ಯಾಸಕ್ತಿ ನನ್ನನ್ನು ಅವರತ್ತ ಸೆಳೆಯಿತು. ಅವರದೇ ಕಾರಿನಲ್ಲಿ ನಾವೆಲ್ಲಾದರೂ ಕೆಲವೊಮ್ಮೆ ಹೋಗಿ ಕುಳಿತುಕೊಳ್ಳುವುದಿತ್ತು, ಚಂದ್ರಗಿರಿ ನದಿಯ ತೀರದಲ್ಲಿ ಅಥವಾ ಪಿಲಿಕ್ಕುಂಜೆ ಗುಡ್ಡದ ಮೇಲೆ. ಆದರೆ ವ್ಯಾಸರಿಗೆ ಇಷ್ಟವಾದ ಜಾಗವೆಂದರೆ ಆಗಿನ ಕಾಸರಗೋಡು ಪೇಟೆಯ ಮಧ್ಯಭಾಗವಾಗಿದ್ದ ತಾಲೂಕಾಫೀಸು ಪಕ್ಕದ ಕೃಷ್ಣಾ ಮೆಡಿಕಲ್ಸ್‌ನ ಮುಂದಣ ಬೀದಿ ಬದಿ. ಇದು ಸಾಕಷ್ಟು ವಿಶಾಲವಾಗಿದ್ದ ಸ್ಥಳ. ಅಲ್ಲಿ ಪ್ರತಿ ಸಂಜೆ ವ್ಯಾಸರು ತಮ್ಮ ತಮ್ಮಂದಿರೊಂದಿಗೆ ಕಾರಿನಲ್ಲಿ ಬಂದು ಕಾರಿನೊಳಗೇ ಕುಳಿತು ಸಿಗರೇಟು ಸೇದುತ್ತ ಜನ ವೀಕ್ಷಣೆ ಮಾಡುವುದು ತೀರಾ ಈಚೆನವರೆಗೆ ನಡೆದುಕೊಂಡುಬಂದ ಹಾಗೂ ಊರಿಗೆ ಊರೇ ತಿಳಿದ ದಿನಚರಿಯಾಗಿತ್ತು. ಆದರೆ ಯಾರೂ ವ್ಯಾಸ ನೆಲದಲ್ಲಿ ನಡೆಯುವುದನ್ನು ನೋಡಿರಲಾರರು. ನೆಲದ ಮತ್ತು ಜನರ ನೇರ ಸಂಪರ್ಕ ವ್ಯಾಸರಿಗೆ ಸ೦ಕೋಚಕ್ಕೆ ಕಾರಣವಾಗುತ್ತಿತ್ತು. ಪೇಟೆ ಮಧ್ಯದ ಈ ಏಕಾಂತ ಇಡೀ ಒಂದು ವ್ಯಕ್ತಿತ್ವದ ಸಂಕೇತ.
ಮುಂದೆ ನಾನು ಎಂ.ಎ. ಮಾಡಲೆಂದು ತಿರುವನಂತಪುರಕ್ಕೆ ತೆರಳಿದೆ; ಅದಾದ ಮೇಲೆ ಕಾಸರಗೋಡೂ ಸೇರಿದಂತೆ ಕೇರಳದ ಹಲವೆಡೆ ಇಂಗ್ಲಿಷ್ ಅಧ್ಯಾಪಕನಾಗಿ ಕೆಲಸ ಮಾಡಿದೆ. ವ್ಯಾಸ ಬಿ.ಎ. ಮುಗಿಸಿಕೊಂಡು ತಮ್ಮ ಅಡಿಕೆ ತೋಟದ ಮನೆಯಲ್ಲಿ ಕೃಷಿಕರಾಗಿ ಉಳಿದುಕೊಂಡರು. ಕೆಲವು ವರ್ಷಗಳ ಮೊದಲೇ ಅವರ ತಂದೆ ಕಗ್ಗೊಲೆಗೆ ತುತ್ತಾಗಿದ್ದರಿ೦ದ ಕುಟುಂಬದ ಭಾರ ಅವರ ಮೇಲೆ ಬಂದಿತ್ತು. ತಂದೆಯ ದುರಂತ ಮರಣವೂ ವ್ಯಾಸರನ್ನು ಅಂತರ್ಮುಖಿಯನ್ನಾಗಿಸಲು ಒಂದು ಕಾರಣವಾಗಿರಬಹುದು. ಈ ಮಧ್ಯೆ ಅವರು ಕಾಸರಗೋಡು ಕರ್ನಾಟಕ ಏಕೀಕರಣ ಸಮಿತಿಯ ಪತ್ರಿಕೆಯಾಗಿದ್ದ ‘ನಾಡಪ್ರೇಮಿ’ಯ ಸಂಪಾದಕರಾಗಿ ಸ್ವಲ್ಪ ಸಮಯ ಕೆಲಸ ಮಾಡಿದರು. ನ೦ತರ ‘ಅಜಂತ’ ಎಂಬ ತಮ್ಮದೇ ಮಾಸಪತ್ರಿಕೆಯೊಂದನ್ನು ಒಂದು ವರ್ಷ ಕಾಲ ಹೊರತಂದರು. ‘ಅಜಂತ’ದ ಬಳಗದಲ್ಲಿ ನಾನೂ ಇದ್ದೆ; ಆಗತಾನೇ ಇಂಗ್ಲಿಷ್ ಎಂ.ಎ. ಮುಗಿಸಿದ ಹುಮ್ಮಸ್ಸಿನಲ್ಲಿ ನಾನು ಇಂಗ್ಲಿಷ್ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಲೇಖನಗಳನ್ನು ಈ ಪತ್ರಿಕೆಗಾಗಿ ಬರೆದೆ. ಈಗ್ಗೆ ಒಂದು ವರ್ಷದ ಹಿಂದೆ ವ್ಯಾಸರ ಮನೆಗೆ ಭೇಟಿಯಿತ್ತ ಸಂದರ್ಭದಲ್ಲಿ ಮತ್ತೆ ಈ ಪತ್ರಿಕೆಯ ಹಳೆಯ ಪ್ರತಿಗಳನ್ನು ಅಲ್ಲಿ ನೋಡಿ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುವ ಅವಕಾಶ ಒದಗಿತು. ೧೯೬೦ರ ಸಂದರ್ಭದಲ್ಲಿ ಕಾಸರಗೋಡಿನಂಥ ತಾಲೂಕು ಕೇಂದದಲ್ಲಿ ವ್ಯಾಸರು ನಡೆಸಿದ ಈ ಪ್ರಯೋಗ ಬಹಳ ಮುಖ್ಯವಾದ್ದು ಎನಿಸುತ್ತದೆ.
ಮುಂದಿನ ದಶಕದಲ್ಲಿ ನಾನು ಕಾಸರಗೋಡು ಬಿಟ್ಟು ಹೈದರಾಬಾದಿಗೆ ತೆರಳಿದೆ. ಆಮೇಲಿಂದ ಬೇಸಿಗೆ ರಜಾದಿನಗಳಲ್ಲಿ ಊರಿಗೆ ಭೇಟಿಯಿತ್ತಾಗಲೆಲ್ಲ ವ್ಯಾಸರು ಸಿಗುತ್ತಿದ್ದರು. ಊರು ಬಿಟ್ಟ ಮನುಷ್ಯ ಎಲ್ಲೇ ಹೋದರೂ, ಊರ ನೆನಪು ಸದಾ ಕಾಡುತ್ತಿರುತ್ತದೆ. ನನ್ನ ನೆನಪಿನಲ್ಲಿ ವ್ಯಾಸರಿಗೆ ಮುಖ್ಯ ಸ್ಥಾನವಿತ್ತೆಂದು ಬೇರೆ ಹೇಳಬೇಕಿಲ್ಲ. ಅವರೂ ನನ್ನನ್ನು ಬಹಳವಾಗಿ ಹಚ್ಜಿಕೊಂಡಿದ್ದರು ಎಂದು ನನ್ನ ನಂಬಿಕೆ. ಅವರೆಂದೂ ಮೈಸೂರು-ಬೆಂಗಳೂರಿನ ಆಚೆ ಹೋದವರಲ್ಲ. ಊರಲ್ಲೇ ಇದ್ದು ಇಡೀ ಜಗತ್ತನ್ನು ಚಿ೦ತಿಸಿದವರು. ಕೆಲವು ಆತ್ಮೀಯರ ಜತೆ ಪತ್ರ ಸಂಪರ್ಕ ಇರಿಸಿಕೊಂಡಿದ್ದರು; ದೂರವಾಣಿಯಲ್ಲೂ ಮಾತುಕತೆ ನಡೆಸುತ್ತಿದ್ದರು. ಆದರೆ ಸಭೆ ಸಮಾರಂಭಗಳಿಂದ, ಸಾಮಾಜಿಕ ಕಾರ್ಯಕಮಗಳಿ೦ದ ಅವರು ಯಾವಾಗಲೂ ದೂರ. ಒಂದು ರೀತಿಯ ಜನಮುಜುಗರ ಅವರನ್ನು ಕಾಡುತ್ತಿತ್ತೆಂದು ಅನಿಸುತ್ತದೆ. ತಮ್ಮ ಕತೆಗಳ ಮುಂದೆ ಕಾಣಿಸಿಕೊಳ್ಳಲು ಅವರು ಇಚ್ಛಿಸುತ್ತಿರಲಿಲ್ಲ. ಆದರೆ ಆತ್ಮೀಯರ ಜತೆ ಸಡಿಲಾಗುತ್ತಿದ್ದರು. ಆಗಲೆಲ್ಲಾ ಸಾಹಿತ್ಯದ ಕುರಿತಾದ ತಮ್ಮ ನಿರ್ಭಿಡೆಯ ಒಳನೋಟಗಳನ್ನು ಬಿಚ್ಚಿಡುತ್ತಿದ್ದರು. ವ್ಯಾಸ ಸಮಕಾಲೀನ ಸಾಹಿತ್ಯದ ಸೂಕ್ಷ್ಮ ವೀಕ್ಷಕರೂ ಯುವ ಬರಹಗಾರರಿಗೆ ಪ್ರೋತ್ಸಾಹಕರೂ ಕೂಡಾ ಅಗಿದ್ದರು. ನವ್ಯ, ಬಂಡಾಯ ಮುಂತಾದ ಬಂಧನಗಳಿಂದ ಮುಕ್ತವಾದ ಕವಿಗಳು ಕತೆಗಾರರು ಈಗ ಬರುತ್ತಿದ್ದಾರೆ ಎಂದು ನನ್ನಲ್ಲಿ ಅವರು ಬಹಳ ಖುಷಿಯಿಂದ ಹೇಳುತ್ತಿದ್ದರು.
ಆಮೇಲೆ ಅವರ ಕತೆಗಳು ‘ಮಲ್ಲಿಗೆ’ಯಂಥ ಆಗಿನ ಕಾಲದ ಮುಂಚೂಣಿಯ ಪತ್ರಿಕೆಗಳಲ್ಲಿ ಪ್ರಕಟವಾಗಲು ಸುರುವಾದಂತೆಯೇ ಆ ಕತೆಗಳ ವಿಶಿಷ್ಪ ಶೈಲಿಗೆ ಮನಸೋತ ಹಲವರಲ್ಲಿ ನಾನೂ ಒಬ್ಬನಾಗಿದ್ದೆ. ಅವರು ಬರೆಯುವ ಕಾಲಕ್ಕೆ ಕನ್ನಡದಲ್ಲಿ ನವ್ಯದ ಹೆಸರಲ್ಲಿ ಆಧುನಿಕತೆ ಕಾಲಿರಿಸಿತ್ತಾದರೂ, ಕನ್ನಡದ ನವ್ಯರಾಗಲಿ ಅದಕ್ಕೆ ಹಿ೦ದಿನ ಪ್ರಗತಿಶೀಲರಾಗಲಿ ಬರೆಯುವುದಕ್ಕಿಂತ ಭಿನ್ನರಾಗಿ ವ್ಯಾಸರು ಬರೆಯುತ್ತಿದ್ದರು. ಹೊಸತನದೊಂದಿಗೆ ಅವರು ತಮ್ಮನ್ನು ಗುರುತಿಸಿಕೊಂಡರೂ ಅವರೆಂದೂ ಯಾವುದೇ ಇಸಮಿಗೆ ಬದ್ಧರಾದವರಲ್ಲ; ಇಸಮುಗಳೆಂದರೆ ಅವರಿಗೆ ರೇಜಿಗೆಯಾಗುತ್ತಿತ್ತು. ನವ್ಯತೆಯ ಕೆಲವೊಂದು ಆಶಯಗಳನ್ನು ಅವರ ಕತೆಗಳು ಮತ್ತು ಕವಿತೆಗಳು ಒಳಗೊಂಡರೂ, ಅವನ್ನು ನವ್ಯವೆಂದು ಕರೆಯುವಂತಿಲ್ಲ; ನವ್ಯದ ವ್ಯಂಗ್ಯಕ್ಕಿಂತ ಹೆಚ್ಚಾಗಿ ರಮ್ಯದ ಆರ್ದ್ರತೆ ಮತ್ತು ಭಾವೋತ್ಕರ್ಷವನ್ನು ಅವುಗಳಲ್ಲಿ ಕಾಣಬಹುದಾಗಿದೆ. ವ್ಯಾಸರ ಮೊದಲ ಕವನ ಸಂಕಲನ ‘ಸುಳಿ’ಗೆ ಬರೆದ ಮುನ್ನುಡಿಯಲ್ಲಿ ನಾನಿದನ್ನು ಗುರುತಿಸಿದ್ದೆ ಹಾಗೂ ಅವರ ಶೈಲಿಯನ್ನು ರಶಿಯನ್ ಕಾದಂಬರಿಕಾರ ಫ್ಯೋಡೊರ್ ಡೋಸ್ಫೋವ್ಸ್ಕಿಗೆ ಹೋಲಿಸಿದ್ದೆ. ಇದರರ್ಥ ಅವರು ಡೋಸ್ಟೋವ್‌ಸ್ಕಿಯನ್ನು ಅನುಸರಿಸುತ್ತಿದ್ದರು ಎಂದಲ್ಲ. ‘ಸುಳಿ’ಯ ಕವಿತೆಗಳನ್ನು ಬರೆಯುವ ಕಾಲಕ್ಕೆ ಅಥವಾ ನಂತರವೂ ಅವರು ಬಹುಶಃ ಈ ರಶಿಯನ್ನನ್ನು ಓದಿಯೇ ಇರಲಾರರು.
ವ್ಯಾಸರು ಯಾರನ್ನೂ ಅನುಸರಿಸಲಿಲ್ಲ. ತಮ್ಮದೇ ಸಹಜವೆಂಬ ರೀತಿಯಲ್ಲಿ ಬರೆದರು. ಗಮನಿಸಬೇಕಾದ ಸಂಗತಿಯೆಂದರೆ ತಮ್ಮದೇ ಶೈಲಿಯೊಳಗೆ ಅವರು ಅದೆಷ್ಟೋ ಪ್ರಯೋಗಗಳನ್ನು ನಡೆಸಿದ್ದರೂ ಅವರ ಒಟ್ಟಾರೆ ಕಥನಕಲೆಯಲ್ಲಿ ಈ ಸುಮಾರು ಅರ್ಧಶತಮಾನದಷ್ಟೂ ಕಾಲ ಯಾವ ಬದಲಾವಣೆಯೂ ಆಗದಿರುವುದು. ಅವರ ಈ ಕಲೆ ಎಷ್ಟು ವೈಯಕ್ತಿಕವಾದ್ದೆಂದರೆ ವ್ಯಾಸರ ಕತೆಯೊಂದನ್ನು ನೋಡಿದರೆ ಇದು ಅವರದ್ದೇ ಎಂದು ಗುರುತಿಸಬಹುದಾಗಿದೆ. ಅವರ ಕಥನಕಲೆಗೆ ಸ್ಫೂರ್ತಿ ಯಾರೋ ಗೊತ್ತಿಲ್ಲ. ಅಂಥ ವಿನೂತನ ರಚನೆಗಳನ್ನು ನಾನು ಕನ್ನಡದಲ್ಲಾಗಲಿ ಇಂಗ್ಲೀಷ್‌ನಲ್ಲಾಗಲಿ ಇನ್ನೆಲ್ಲೂ ನೋಡಿದ ನೆನಪಿಲ್ಲ. ವ್ಯಾಸರಾದರೂ ಯಾರಿಂದಾದರೂ ಪ್ರಭಾವಿತರಾಗಿ ಇಂಥ ಹೊಸ ರೀತಿಯ ಕತೆಗಳನ್ನು ಬರೆದರು ಎಂದು ನನಗೆ ಅನಿಸುತ್ತಿಲ್ಲ. ಊರ್ಣನಾಭನಂತೆ ತಮ್ಮ ಬಲೆಯನ್ನು ಅವರು ತಮ್ಮದೇ ನೂಲಿನಿಂದ ನೇಯುತ್ತಿದ್ದರು.
ವ್ಯಾಸರ ಕತೆಗಳ ವೈಶಿಷ್ಠ್ಯಗಳನ್ನು ಹೇಳುವುದಾದರೆ, ಮೊದಲನೆಯದಾಗಿ ಅವರ ಕಥಾವಸ್ತು: ತಮ್ಮ ಕತೆಗಳಿಗೆ ವ್ಯಾಸ ಆರಿಸಿಕೊಳ್ಳುತ್ತಿದ್ದುದು ಮನುಷ್ಯನ ನಿಗೂಢವಾದ ಮನೋಲೋಕದ ವಿವಿಧ ಸೂಕ್ಷ್ಮಗಳನ್ನು. ಹಾಗೆಂದು ಅವನ್ನು ಫ್ರಾಯ್ಡಿಯನ್ ಮನೋವಿಶ್ಲೇಷಣಾತ್ಮಕ ಕತೆಗಳೆಂದೂ ಕರೆಯುವಂತಿಲ್ಲ. ಅಂಥ ಎಕಡೆಮಿಕ್ ಶಿಸ್ತುಗಳಿಗಾಗಲಿ, ಅವಕ್ಕೆ ಹೇಳಿಮಾಡಿಸಿದಂತೆ ಸಾಹಿತ್ಯ ರಚಿಸುವ ರೀತಿಗಾಗಲಿ ಅವರು ವಿರೋಧಿಗಳಾಗಿದ್ದರು. ಕಥಾಪಾತ್ರಗಳ ಅಂತರಂಗದ ಮಬ್ಬಿನ ಜಗತ್ತಿಗೆ ಓದುಗರನ್ನು ಒಯ್ದು ನೀವೇ ನೋಡಿಕೊಳ್ಳಿ ಎಂದು ಬಿಟ್ಟುಬಿಡುವುದು ಅವರ ರೀತಿ. ವ್ಯಾಸರು ದುರ್ಗಾಪುರವೆಂಬ ಒಂದು ಕಾಲ್ಪನಿಕ ಪದೇಶವೊಂದನ್ನು ಸೃಷ್ಟಿಸಿಕೊಂಡಿದ್ದರು, ಅದರಲ್ಲಿ ಅಂಥದೇ ಒಂದು ಕಾಲ್ಪನಿಕ ಶಂಕರೀ ನದಿ, ಒಂದು ದೇವಾಲಯ ಇತ್ಯಾದಿ. ಈ ಪ್ರದೇಶವನ್ನು ಅವರು ತಮ್ಮ ಕಥಾಪಾತ್ರಗಳಿಂದ ತುಂಬುತ್ತಿದ್ದರು. ಇದು ಯಾಕೆ ಹೀಗೆ? ಕಾಸರಗೋಡು, ಚಂದಗಿರಿ, ಮಧೂರು ಇತ್ಯಾದಿ ನಿಜವಾದ ಹೆಸರುಗಳನ್ನೇ ಉಪಯೋಗಿಸಬಹುದಿತ್ತಲ್ಲ ಎಂದು ಕೇಳಬಹುದು. ಇದರರ್ಥ ಅವರು ವಾಸ್ತವ ಜಗತ್ತಿಗೆ ವಿಮುಖರಾಗಿದ್ದರೆಂದೇ? ಅಲ್ಲ. ವಾಸ್ತವ ಜಗತ್ತು ಮನುಷ್ಯನಿಗೆ ಎಷ್ಟು ಹತ್ತಿರವಾಗಿದೆಯೆಂದರೆ, ಅದನ್ನು ವಾಸ್ತವವಾದೀ ಸಾಹಿತ್ಯದಿಂದ ಅರಿಯುವುದು ಸಾಧ್ಯವಿಲ್ಲ. ವಾಸ್ತವವಾದೀ ಸಾಹಿತ್ಯ ಈ ವಾಸ್ತವ ಜಗತ್ತಿಗೊಂದು ಕನ್ನಡಿ ಮಾತ್ರವೇ ಆಗುತ್ತದೆ, ಭೂತಗನ್ನಡಿಯಾಗುವುದಿಲ್ಲ; ಸಾಹಿತ್ಯ ವಾಸ್ತವವನ್ನು ದಾಟಿ ಅತಿವಾಸ್ತವದತ್ತ (surrealism)ಕೈಚಾಚಿದಾಗಲೇ ವಾಸ್ತವವನ್ನು ಸ್ವಲ್ಪವಾದರೂ ಅರಿಯುವುದು ಸಾಧ್ಯ. ಆದ್ದರಿಂದಲೇ ದುರ್ಗಾಪುರ, ಶಂಕರೀ ನದಿ, ಹಾಗೂ ಅಲ್ಲಿನ ವಿಕ್ಷಿಪ್ತ ಜೀವಗಳು. ನಿಜವನ್ನು ವಿವರಿಸುತ್ತ ಪ್ಲೇಟೋ ನೀಡುವ ಗುಹೆಯೊಳಗಣ ಛಾಯಾಚಿತ್ರಗಳ ನಿದರ್ಶನವನ್ನು ನೆನಪುಮಾಡಿಕೊಳ್ಳಿ: ಪ್ಲೇಟೋನ ಪ್ರಕಾರ, ನಿಜವನ್ನು ನಾವು ಕಣ್ಣಾರೆ ಕಾಣಲಾರೆವು; ಅದರ ಛಾಯೆಗಳನ್ನು ಮಾತ್ರವೇ ಕಾಣಬಲ್ಲವು. ಪ್ಲೇಟೋಗೆ ನಮ್ಮ ವಾಸ್ತವ ಲೋಕವೆಂದರೆ ನಿಜದ ಛಾಯಾಚಿತ್ರಗಳಲ್ಲದೆ ಅದೇ ನಿಜವಲ್ಲ. ನಿಜವನ್ನು ನಾವು ಡಯಲೆಕ್ಟಿಕಲ್ ಜಿಜ್ಞಾಸೆಯಿಂದ ಮಾತ್ರವೇ ತಿಳಿದುಕೊಳ್ಳಬಹುದು. ಆದ್ದರಿಂದಲೇ ಫಿಲಾಸಫಿಗೆ ಅಷ್ಟೊಂದು ಮಹತ್ವ ವ್ಯಾಸರ ಕತೆಗಳು ಫಿಲಾಸಫಿಯ ಜಾಗದಲ್ಲಿ ಅತಿವಾಸ್ತವ ಸಾಹಿತ್ಯವನ್ನು ನಿಲ್ಲಿಸುತ್ತವೆ. ಅವರು ಜನ ಮತ್ತು ನೆಲ ಸಂಬಂಧದಿಂದ ತಪ್ಪಿಸಿಕೊಳ್ಳುವುದಕ್ಕೆ ಹಾಗೂ ಎಲ್ಲ ಬಗೆಯ ಕಾರ್ಯತತ್ಪರತೆಯಿಂದ ದೂರವಿರುವುದಕ್ಕೆ ಪ್ರಾಯಶಃ ‘ನಿಜ’ ಜಗತ್ತಿನಿಂದ ಅವರು ಬಯಸುತ್ತಿದ್ದ ಸುದೂರವೇ ಕಾರಣವಿರಬಹುದು. ಗಾಳಿಯ ಮೇಲೆ ನಡೆದಂಥ ಜೀವ ವ್ಯಾಸರದು.
ಕತೆ ಹೇಳುವ ಅವರ ತೀವ್ರ ಶೈಲಿ ಅನನುಕರಣವಾದ್ದು. ಎರಡಕ್ಷರಗಳ ಶೀರ್ಷಿಕೆಯನ್ನೊಂದು ವ್ರತದಂತೆ ಅವರು ಪಾಲಿಸಿದರು; ಆದರೆ ಅದನ್ನು ಅಷ್ಟಕ್ಕೆ ನೋಡಿದರೆ ಅದೊಂದು ಚಟದಂತೆ ಕಾಣಬಹುದು. ವಾಸ್ತವದಲ್ಲಿ ವ್ಯಾಸ ಮಿತಭಾಷಿ, ಮಿತಾಕ್ಷರಿ. ಈ ಎರಡಕ್ಷರದ ಶೀರ್ಷಿಕ ಅವರ ಮಿತಾಕ್ಷರತೆಯ (minimalism) ಒ೦ದು ಕುರುಹು ಎಂದೇ ಹೇಳಬೇಕು. ಅವರ ಕಥನದಲ್ಲಿ ‘ಮ್,’ ‘ಹು೦”, ‘ಯೋ’ ಮುಂತಾದ ಉದ್ಗಾರಗಳಿಗೆ ಎಲ್ಲಿಲ್ಲದ ಭಾವತೀವ್ರತೆ ಬರುವುದನ್ನೂ ಗಮನಿಸಬೇಕು. ವ್ಯಾಸರು ಕತೆಗಳಲ್ಲಿ ಸಾಕಷ್ಟು ಎಡೆಗಳನ್ನು ಕೂಡಾ ಬಿಡುವುದರಿಂದ ಓದುಗರನ್ನು ಅವು ಹೊರಗಿರಿಸುವುದಿಲ್ಲ, ಒಳಗೊಳ್ಳುತ್ತವೆ-ಆದ್ದರಿಂದ ಕಥನವೊಂದು ಪ್ರವಚನವಾಗದೆ ಸೃಜನಕ್ರಿಯೆಯಾಗುತ್ತದೆ. ಕಥನದ ಕ್ರಮಾಗತ (linear) ಸರಳತೆಯನ್ನು ಬಿಟ್ಟುಕೊಟ್ಟು, ಕ್ರಮಾತೀತ (non-linear) ಸ೦ಕೀರ್ಣತೆಯನ್ನು ಅವರು ಮೊದಲಿನಿಂದಲೇ ಆರಿಸಿಕೊಂಡವರು. ಈ ಮಾತುಗಳನ್ನು ಕನ್ನಡದ ಎಷ್ಟು ಮಂದಿ ಸಮಕಾಲೀನ ಕತೆಗಾರರ ಬಗ್ಗೆ ಹೇಳುವುದು ಸಾಧ್ಯ? ವ್ಯಾಸರು ತಮ್ಮ ಕಾಲದೇಶಗಳಿಗಿ೦ತ ಮುಂದಿದ್ದ ಕತೆಗಾರರು.
ನಾನು ಊರಿಗೆ ಬಂದು ಇರಬೇಕು ಎನ್ನುವುದು ವ್ಯಾಸರ ಅಭಿಲಾಷೆಯಾಗಿತ್ತು. ನನಗೆ ಆಗಾಗ್ಗೆ ಆ ಕುರಿತು ಹೇಳುತ್ತಲೂ ಇದ್ದರು. ಈಚೆಗೆ ಕೆಲವು ವರ್ಷಗಳಿಂದ ಅವರು ಖಿನ್ನರಾಗಿದ್ದರು ಎನ್ನುವುದು ನನಗೆ ಗೊತ್ತಿತ್ತು. ಊರಿಗೆ ತೆರಳಿ ನಾವು ಕಳಕೊಂಡ ದಿನಗಳನ್ನು ಮರಳಿ ಪಡೆಯುವ ಒಂದು ಹುಚ್ಚು ನನ್ನಲ್ಲೂ ಇತ್ತು. ವ್ಯಾಸರನ್ನು ಕೇಳಿದರೆ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದು ಇಂಥ ಹುಚ್ಚು ಹಂಬಲಗಳೇ ಎನ್ನುತ್ತಿದ್ದರು. ವಿದೇಶದಿಂದ ಹೈದರಾಬಾದಿಗೆ ವಾಪಸಾದೊಡನೆಯೇ ದೂರವಾಣಿಯಲ್ಲಿ ನಾನು ಮೊದಲು ಮಾತಾಡಿಸಿದ ವ್ಯಕ್ತಿ ವ್ಯಾಸ. ನಂತರ ನಾಲ್ಕಾರು ದಿನ ಬಿಟ್ಟು ಇನ್ನೊಮ್ಮೆ-ಎಂದರೆ ಅವರು ಗತಿಸುವ ಮುನ್ನಾದಿನವಷ್ಟೇ-ಅವರ ಜತೆ ಮಾತಾಡಿದೆ. ಅವರು ಇನ್ನಷ್ಟು ಕುಗ್ಗಿ ಹೋಗಿರುವುದು ದನಿಯಿಂದಲೇ ಗೊತ್ತಾಯಿತು. ಅವರನ್ನು ನೋಡುವುದಕ್ಕಾದರೂ ಊರಿಗೆ ಹೋಗಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಬರುತ್ತೇನೆ ಎಂದು ಅವರಲ್ಲಿ ಹೇಳಿದೆ ಕೂಡಾ. ಈಗ ಅವರಿಲ್ಲದ ಊರು ನನಗೆ ಆಕರ್ಷಣೆಯನ್ನು ಕಳೆದುಕೊಂಡಿದೆ.
*****